ಸಂಗೀತೋದ್ಧಾರಕ ಪಂ. ವಿಷ್ಣು ದಿಗಂಬರ ಪಲುಸ್ಕರ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದು ಉತ್ತಮ ಭಾರತದ ಹಿಂದೂಸ್ಥಾನಿ ಸಂಗೀತವನ್ನು ಬೆಂಗಳೂರು ಮಹಾನಗರದಲ್ಲಿ ಮೊಟ್ಟಮೊದಲ ಬಾರಿಗೆ ಪರಿಚಯಿಸಿ ಭಾರತದ ದಕ್ಷಿಣ ಭಾಗದಲ್ಲಿ ಅದಕ್ಕೆ ಭದ್ರ ನೆಲೆಯೊದಗಿಸಿದ ಸಂಗೀತ ದಂಪತಿಗಳಲ್ಲಿ ಶ್ರೀಮತಿ ಲಕ್ಷ್ಮಿಜೀ ಭಾವೆ ಅಗ್ರಗಣ್ಯರು. ಪತಿ ಶ್ರೀ ಗೋವಿಂದ ವಿಠಲ ಭಾವೆಯವರ ಸಹಕಾರ, ಕನ್ನಡಿಗರ ಪ್ರೀತ್ಯಾದರದ ಫಲವಾಗಿ ಬೆಂಗಳೂರಿನಲ್ಲಿ ಸರಸ್ವತಿ ಸಂಗೀತ ವಿದ್ಯಾಲಯ ಸ್ಥಾಪಿಸಿ ನೂರಾರು ಜನ ಆಸಕ್ತರಿಗೆ ಹಿಂದೂಸ್ಥಾನಿ ಸಂಗೀತ ಧಾರೆಯೆರೆದ ಶ್ರೀಮತಿ ಲಕ್ಷ್ಮೀಜೀ ಭಾವೆ ಕರ್ನಾಟಕದ ಮಹಿಳಾ ಹಿಂದೂಸ್ಥಾನಿ ಗಾಯಕಿಯರಲ್ಲಿ ಅಗ್ರಗಣ್ಯರು. ಶ್ರೀಮತಿ ರಾಧಾಬಾಯಿ ಲಿಮೆಯೆ ಮತ್ತು ಶ್ರೀ ಬಾಲಕೃಷ್ಣ ಲಿಮೆಯೆ ಅವರ ಪುತ್ರಿಯಾಗಿ ಜನಿಸಿದ ಶ್ರೀಮತಿ ಲಕ್ಷ್ಮೀಜೀ ಇವರು, ಅಗ್ರಜರಾದ ಶ್ರೀ ಶಂಕರರಾವ್‌ ಲಿಮೆಯ ಅವರ ಆಶ್ರಯದಲ್ಲೇ ಬೆಳೆದ ಹುಡುಗಿ. ಚಿಕ್ಕಂದಿನಿಂದಲೇ ಸಂಗೀತವೆಂದರೆ ಪ್ರಾಣ. ಮನೆಯ ಮುಂದೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಭಜನ ಮಂಡಲಿ. ಬೀದಿ ಹಾಡುಗಾರರ ಹಿಂದೆ ಎಷ್ಟೋ ಬಾರಿ ದೂರ ದೂರ ಹೋಗಿ, ಪರಿಚಯಸ್ಥರ ಕೈಗೆ ಸಿಕ್ಕಿ ಅವರ ಮನೆಗೆ ತಂದೊಪ್ಪಿಸಿದಾಗ ಏಟಿನ ರುಚಿ ಈಗಲೂ ನೆನೆಸಿಕೊಳ್ಳುವ ಶ್ರೀಮತಿ ಲಕ್ಷ್ಮೀಜೀ ಭಾವೆಯವರಿಗೆ ಪ್ರೊಫೆಸರ್ ಗೋವಿಂದರಾವ್‌ ಭಾವೆ ಪರಿಚಯವಾದಾಗ, ಅವರ ಮುಂದೆ ಹಾಡಿ ಅವರನ್ನು ತಬ್ಬಿಬ್ಬುಗೊಳಿಸಿದರು. ಹಿರಿಯರ ಆಶೀರ್ವಾದದೊಂದಿಗೆ, ಶ್ರೀ ಗೋವಿಂದರಾಯರ ಧರ್ಮಪತ್ನಿಯಾದರು. ಗಂಧರ್ವ ಸಂಗೀತ ಮಹಾವಿದ್ಯಾಲಯದ ಸ್ಥಾಪಕರು, ಶ್ರೇಷ್ಠ ಸಂಗೀತಗಾರರೂ ಆದ ಸಂಗೀತ ವಿದ್ವಾನ್‌ ದಿವಂಗತ ವಿಷ್ಣು ದಿಗಂಬರ ಫಲೂಸ್ಕರ್ ರವರ ಹಿತವಚನ ಮತ್ತು ಘನ ಸಲಹೆಯ ಮೇಲೆ ಬೆಂಗಳೂರಿಗೆ ೧೯೩೧ನೇ ಇಸವಿಯಲ್ಲಿ ಬಂದು ನೆಲೆಸಿದರು.

ಬೆಂಗಳೂರಿನಲ್ಲಿ ಮೊಟ್ಟಮೊದಲಿಗೆ ಹಿಂದೂಸ್ಥಾನಿ ಸಂಗೀತದ ಪರಿಮಳವನ್ನು ಪಸರಿಸಿದ ಶ್ರೇಯಸ್ಸು. ಈ ಇಬ್ಬರು ಪತಿ-ಪತ್ನಿಯರಿಗೆ ಸಲ್ಲಬೇಕು. ಆಗ್ಗೆ ಹಿಂದೂಸ್ಥಾನಿ ಯ ಪರಿಚಯವೇ ಇಲ್ಲದೆ ಬೆಂಗಳೂರು ನಾಗರಿಕರಿಗೆ ಶ್ರೀ ಸರಸ್ವತಿ ವಿದ್ಯಾಲಯವನ್ನು ೧೯೩೧ರಲ್ಲಿ ಕೇವಲ ೩ ರೂ. ಬಾಡಿಗೆ ಮನೆಯಲ್ಲಿ ಸ್ಥಾಪಿಸಿ, ಇಂದಿನವರೆಗೂ ಸೇವೆ ಸಲ್ಲಿಸುತ್ತಿರುವ ಸರಸ್ವತಿ ವಿದ್ಯಾಲಯದ ಪ್ರಾಧ್ಯಾಪಕಿ ಗೋವಿಂದರಾವ್‌ ಭಾವೆಯವರ ಧರ್ಮಪತ್ನಿ ಮತ್ತು ಶಿಷ್ಯೆಯಾದ ಶ್ರೀಮತಿ ಲಕ್ಷ್ಮೀಜೀ ಭಾವೆಯವರು, ಸಹಸ್ರಾರು ಮಕ್ಕಳಿಗೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಜನೆಯ ಮೂಲಕ ಹಿಂದೂಸ್ಥಾನಿ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ.

ದಿವಂಗತ ವಿಷ್ಣು ದಿಗಂಬರ್ ಫಲೂಸ್ಕರ್ ರವರೇ ಹೇಳಿದಂತೆ ಸಂಗೀತ ಕೇವಲ ಪುರುಷರ ಸೊತ್ತಲ್ಲ, ಮೂಲತಃ ಅದು ಸ್ತ್ರೀ ಸೊತ್ತು ಎಂಬುದಕ್ಕೆ ಸಾಕ್ಷಿ ಶ್ರೀಮತಿ ಲಕ್ಷ್ಮೀಜೀ ಭಾವೆ.

ಇವರಿಗೆ  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೮೦ನೇ ಸಾಲಿನ ವಾರ್ಷಿಕ ಸಂಗೀತ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಸ್ಥಾಪಿಸಿದ ‘ಸರಸ್ವತಿ ಸಂಗೀತ ವಿದ್ಯಾಲಯ’ವನ್ನು ಅವರ ಮಗಳಾದ ಉಭಯಗಾನ ವಿಶಾರದೆ ಹಾಗೂ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಶ್ರೀಮತಿ ಶ್ಯಾಮಲಾ ಜಿ. ಭಾವೆ ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.