ಕನ್ನಡ ಜೈಮಿನಿ ಭಾರತವು ನಮ್ಮ ಸಾಹಿತ್ಯ ಪ್ರಪಂಚದಲ್ಲಿ ಸಹೃದಯರು, ದೈವಭಕ್ತರು, ಸಾಹಿತ್ಯಾಭಿಲಾಷಿಗಳು, ಗಮಕಿಗಳು, ಕವಿಗಳು, ಪಂಡಿತರು ಇತ್ಯಾದಿ ಎಲ್ಲರನ್ನೂ ಆಕರ್ಷಿಸಿದೆ. ಹೀಗೆ ಜನಪ್ರಿಯವಾಗಲು ಈ ಕಾವ್ಯದಲ್ಲಿರುವ ಬಹುಮುಖವಾದ ಸ್ವಾರಸ್ಯವೇ ಕಾರಣವೆನ್ನಬಹುದು. ಒಂದು ಉತ್ತಮ ಕಾವ್ಯದಲ್ಲಿ ಪ್ರಾಸಾದಿಕಶೈಲಿ, ಆಕರ್ಷಕ ಕಥಾವಸ್ತು, ವಿನೂತನ ವರ್ಣನೆಗಳು, ಒಳ್ಳೆಯ ರಸಭಾವ ನಿರೂಪಣಿ, ಶ್ಲಾಘ್ಯವಾದ ಅರ್ಥಾಲಂಕಾರ ಮತ್ತು ಶಬ್ಧಾಲಂಕಾರಗಳು, ಚೈತನ್ಯ ಪೂರ್ಣವಾದ ಪಾತ್ರಸೃಷ್ಟಿ, ಕುಶಲ ಸಂಭಾಷಣಿ, ಅಪೂರ‍್ವ ಪದಪ್ರಯೋಗ, ಜಾಣ್ನುಡಿಗಳ ಸವಿಕರಣ ಇತ್ಯಾದಿಗಳೆಲ್ಲವೂ ಇರಬೇಕು. ಕನ್ನಡ ಜೈಮಿನಿ ಭಾರತವು ಮೇಲೆ ಕಂಡ ಎಲ್ಲ ಸದ್ಗುಣಗಳನ್ನೂ ಒಳಗೊಂಡಿದೆ. ಆದ್ದರಿಂದಲೇ ಈ ಕಾವ್ಯವು ಎಲ್ಲ ವರ್ಗದ, ಎಲ್ಲ ಸಾಹಿತಿಗಳ ಮನ್ನಣಿಗೂ ಪಾತ್ರವಾಗಿ, ಕನ್ನಡ ಕಾವ್ಯ ಪ್ರಪಂಚದ ಕಲ್ಪವೃಕ್ಷ, ಸಹೃದಯರ ಚಿಂತಾಮಣಿ ಮತ್ತು ರಸಿಕರ ಕಾಮಧೇನು ಎನಿಸಿದೆ.

ಭಾಗ್ಯಶಾಲಿಯಾದ ಕವಿಗೆ ಮಾತ್ರ ಒಳ್ಳೆಯ ಶೈಲಿ ಅಳವಡುತ್ತದೆ. ಒಳ್ಳೆಯ ಶೈಲಿಯು ಕೈವಶವಾಗಬೇಕಾದರೆ ಕವಿಯು ಕಾವ್ಯ ಸಮಾಧಿಯಲ್ಲಿ ಸಿದ್ಧನಾಗಿರಬೇಕು. ಕವಿಯು ಶಾಸ್ತ್ರಜ್ಞನೂ ಲೋಕಾನುಭವಿಯೂ ಆಗಿರಬೇಕು. ಮೇಲಾಗಿ ಭಗವಂತನ ಕೃಪೆಗೆ ಪಾತ್ರನಾಗಿರಬೇಕು. ಈ ಎಲ್ಲ ಸದ್ಗುಣಗಳೂ ಲಕ್ಷ್ಮೀಶನಲ್ಲಿ ಇರುವುದರಿಂದಲೇ “ಗೀರ‍್ವಾಣ ಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಾ ನಿಪುಣನು ವೀಣಿಯಿಂ ಗಾನಮಂ ನುಡಿಸುವಂದದೊಳ್ ಎನ್ನ ವಾಣಿಯಿಂ ಕವಿತೆಯಂ ಪೇಳಿಸಿದಂ” ಎಂದು ಹೇಳಿಕೊಂಡಿದ್ದಾನೆ. (ಸಂ. ೧, ಪ. ೮) ಇದು ಕವಿಯ ನಿರಹಂಕಾರಭಾವನೆಗೆ ನಿದರ್ಶನವಾಗಿದೆ ಯಲ್ಲದೆ, ತಾನು ಲಕ್ಷ್ಮೀಶನ ಕೈವೀಣಿ ಮಾತ್ರ ಎಂಬ ವಿನಮ್ರಭಾವನೆಗೂ ಗುರುತಾಗಿದೆ. ತನ್ನ ಕಾವ್ಯವು “ವರವರ್ಣದಿಂದೆ ಶೋಭಿತಮಾಗಿ ರೂಪ ವಿಸ್ತರದಿಂದೆ ಚೆಲ್ವಾಗಿ ಮಧುರತರ ನವರಸೋದರಭರಿತದಿಂದೆ ವಿಲಸಿತಮಾಗಿ ಸುಮನೋನುರಾಗದಿಂ ಪ್ರಚುರಮಾಗಿ ನಿರುತ ಮಂಜುಳ ಶಬ್ದದಿಂದೆ ಕಿವಿಗಿಂಪಾಗಿ” ಇದೆ ಎಂದು ಕವಿ ಹೇಳುತ್ತಾನೆ (ಸಂ.೧. ಪ. ೧೨). ಅಲ್ಲದೆ, ಒಂದು ಒಳ್ಳೆಯ ಕಾವ್ಯವು ಛಂದಸ್ಸು, ಲಕ್ಷಣ, ಅಲಂಕಾರ, ಭಾವ, ರಸ ಇವುಗಳಿಂದ ಕಳೆವೆತ್ತ ಸತ್ಕೃತಿ, ಚಮತ್ಕೃತಿ ಯುಕ್ತವೆಂದೂ, ಇಂತಹ ಸುಗುಣಗಳಿಂದ ಕೂಡಿದ ಕಾವ್ಯವೇ ಸುಶ್ರಾವ್ಯವೆಂದೂ, ಹಾಗಿಲ್ಲದ ಕಾವ್ಯವು ಅಶ್ರಾವ್ಯವೆಂದೂ ಲಕ್ಷ್ಮೀಶನು ಹೇಳುತ್ತಾನೆ. ತನ್ನ ಕಾವ್ಯವು ವೀಣಾಧ್ವನಿಯಂತೆ, “ನಿರುತ ಮಂಜುಳ ಶಬ್ದದಿಂದೆ ಕಿವಿಗಿಂಪಾಗಿ ” ಪರಿಶೋಭಿಸುವುದೆಂದು ಕವಿ ಆತ್ಮವಿಶ್ವಾಸದಿಂದ ಹೇಳಿದ್ದಾನೆ. ಇವನ ಕಾವ್ಯದಲ್ಲಿ ಕನ್ನಡ ಮತ್ತು ಸಂಸ್ಕೃತ ಶಬ್ದಗಳು ಉಚಿತವರಿತು ಪ್ರಯೋಗಿಸಲ್ಪಟ್ಟಿವೆ. ಪದಮೈತ್ರಿಯು ಅತಿಶಯವಾಗಿದೆ. ಇದು ಕಾವ್ಯದ ಘನತೆಯನ್ನು ಹೆಚ್ಚಿಸಿದೆ.

ಒಳ್ಳೆಯ ಕಾವ್ಯದಲ್ಲಿ ಪದಮೈತ್ರಿ ಬಹಳ ಅಗತ್ಯ. ಕಾವ್ಯಗಳನ್ನು ಗಮಕಿಗಳು ಓದುವಾಗ, ಶ್ರೋತೃಗಳ ಮನಸ್ಸಿಗೆ ಸೊಂಪು, ಕಿವಿಗಳಿಗೆ ಇಂಪು, ಅತ್ಮಕ್ಕೆ ತಂಪು ಉಂಟಾಗುವಂತೆ ಮೃದು ಮಧುರ ಪದಪುಂಜ ರಂಜಿತವಾಗಿ ರಚಿತವಾದ ಕಾವ್ಯಗಳೇ ನಿಜವಾದ ಮಹಾಕಾವ್ಯಗಳು.

ಕನ್ನಡದಲ್ಲಿ ಪಂಪ, ರನ್ನ, ಜನ್ನ, ಹರಿಹರ, ಚಾಮರಸ, ಷಡಕ್ಷರದೇವ, ಕುಮಾರವ್ಯಾಸ, ವಿರೂಪಾಕ್ಷ ಪಂಡಿತ, ಬಸವಪ್ಪಶಾಸ್ತ್ರಿ, ಮುದ್ದಣ ಮೊದಲಾದ ಕವಿಗಳಿಗೆ ಇಂತಹ ಶೈಲಿಯು ಅಳವಟ್ಟಿದೆ. ನಮ್ಮ ಲಕ್ಷ್ಮೀಶನು ಈ ಪ್ರಾಸಾದಿಕ ಶೈಲಿಯ ಮಹಾಕವಿಗಳ ಮಾಲೆಯಲ್ಲಿ ಪರಿಗಣಿಸಲ್ಪಟ್ಟಿದ್ದಾನೆ. ಅವನ ಶೈಲಿಯು “ವರವರ್ಣದಿಂದೆ ಶೋಭಿತಮಾಗಿ, ಮಧುರತರ ನವರಸೋದರದಿಂದೆ ವಿಲಸಿತ ಮಾಗಿ” ಆಹ್ಲಾದಕರವಾಗಿದೆ. ಅದು ಕಾರಣವೇ ಕನ್ನಡ ಜೈಮಿನಿಯು ತನ್ನನ್ನು ಕೇಳಿದ “ಜಾಣರಂ ತಲೆದೂಗಿಸದೆ ಇರದು” ಎನ್ನಬಹುದು.

ಭಾರತದ ಕಥಾವಸ್ತು ಅತ್ಯಂತ ಚಮತ್ಕಾರವಾದುದು. ಆ ಕಥೆಗಳು ಕೇಳುವವರ ಮನಸ್ಸಿನ ಮೇಲೆ ಪರಿಣಾಮವನ್ನುಂಟುಮಾಡುವ ಸುಖ-ದುಃಖ, ಲಾಭ-ನಷ್ಟ, ಮಾನ-ಅಪಮಾನ, ಪ್ರೇಮ-ದ್ವೇಷ, ಮೊದಲಾದುವುಗಳನ್ನು ಅನುಭವಕ್ಕೆ ತರುತ್ತವೆ. ಆದ್ದರಿಂದಲೇ ಭಾರತದ ಕಥೆಗಳು ಹೆಚ್ಚು ಜನಪ್ರಿಯವೆನಿಸಿವೆ. ಜೈಮಿನಿ ಭಾರತದಲ್ಲಿ ಧರ್ಮರಾಜನ ವ್ಯಸನ, ವೇದವ್ಯಾಸರ ಉಪದೇಶ, ವೃಷಕೇತು ಯೌವ್ಯನಾಶ್ವರ ಯುದ್ಧ, ಭೀಮಕೃಷ್ಣರ ಸಲ್ಲಾಪ, ಅರ್ಜುನ, ನೀಲಧ್ವಜರ  ಆಜಿ, ಜ್ವಾಲೆಯ ಚಲ, ಉದ್ದಾಲಕನ ಕಥೆ, ಸುಧನ್ಯಾರ್ಜುನರ ಕಾಳಗ ಯಜ್ಞಾಶ್ವವು ಹೆಣ್ಣು ಕುದುರೆಯಾಗಿ ಕಡೆಗೆ ಹುಲಿಯಾದ ವಿಚಾರ, ಅರ್ಜುನ ಪ್ರವಿಳೆಯರ ವಿವಾಹ, ಅರ್ಜುನ ಬಭ್ರುವಾಹನರ ಭಯಂಕರವಾದ ಯುದ್ಧ, ರಾಮಾಶ್ವಮೇಧದ ಕಥೆ, ಕುಶಲವರ ಕಾಳಗ, ತಾಮ್ರಧ್ವಜನಿಂದ ಕೃಷ್ಣಾರ್ಜುನರ ಪರಾಜಯ, ಬ್ರಾಹ್ಮಣ ವೇಷಧಾರಿಯಾದ ಶ್ರೀ ಕೃಷ್ಣನು ಮಯೂರಧ್ವಜನನ್ನು ಯಾಚಿಸುವುದು, ವೀರವರ‍್ಮನ ಕಥೆ, ಚಂದ್ರಹಾಸನ ಆಶ್ಚರ‍್ಯಕರವಾದ ಕಥೆ, ಬಕದಾಲ್ಭ್ಯನ ಸಾನ್ನಿಧ್ಯದ ವಿಚಾರ, ಧರ್ಮರಾಜನ ಅಶ್ವಮೇಧಯಾಗ ಇತ್ಯಾದಿ ವಿಚಾರಗಳು ಕುತೂಹಲ ಜನಕವಾದ ಕಥೆಗಳಿಂದ ಕೂಡಿವೆ. ಈ ಕಥೆಗಳಲ್ಲಿ ಯುದ್ಧ ಪ್ರಸಂಗವು ಬಹಳವಾಗಿ ಬರುವುದರಿಂದ ಆ ವರ್ಣನೆಯಲ್ಲಿ ಬರುವ ವೀರರಸವು ಜನತೆಗೆ ಸೂರ್ತಿಯನ್ನುಂಟುಮಾಡುತ್ತದೆ. ಸುಧನ್ವನನ್ನು ಹಂಸಧ್ವಜನು ಎಣ್ಣೆಯ ಕೊಪ್ಪರಿಗೆಯಲ್ಲಿ ಬೇಯಿಸಿದುದು, ನಿರಪರಾಧಿ ಸೀತಾದೇವಿಯನ್ನು ಶ್ರೀರಾಮನು ಅರಣ್ಯಕ್ಕೆ ಅಟ್ಟಿದುದು, ಭಾಗವತ ಶಿರೋಮಣಿ ಚಂದ್ರಹಾಸನನ್ನು ದುಷ್ಟಬುದ್ಧಿ ಕಟುಕರ ಪಾಲುಮಾಡಿದುದು ಇತ್ಯಾದಿ ಕಥಾ ಸಂದರ್ಭದಲ್ಲಿ ಬರುವ ಕರುಣರಸವು ಓದುವವರ ಮತ್ತು ಕೇಳುವವರ ಮನಸ್ಸಿನ ಮೇಲೆ ಪರಿಣಾಮವನ್ನುಂಟುಮಾಡುತ್ತದೆ. ಚಂಡಿಯ ಕಥೆ, ಭೀಮಕೃಷ್ಣರ ರಸಹಾಸ್ಯ, ನಾರದನ ವಿನೋದ ಇತ್ಯಾದಿ ಸನ್ನಿವೇಶಗಳಲ್ಲಿ ಬರುವ ತಿಳಿಹಾಸ್ಯವು ಓದುಗರನ್ನು ಹುರಿದುಂಬಿಸುತ್ತದೆ. ಈ ಜೈಮಿನಿ ಭಾರತದಲ್ಲಿ ಬರುವ ದುಷ್ಟಬುದ್ಧಿ, ಜ್ವಾಲೆ ಮುಂತಾದವರ ದುರಂತ ಜೀವನ ಚಿತ್ರಗಳು, ಸುಪ್ರಸಿದ್ಧ ಷೇಕ್ಸ್‌ಪಿಯರನ ನಾಟಕಗಳ ದುರಂತ ಪ್ರತಿನಾಯಕರ ಕಥೆಗಳನ್ನು ನೆನಪಿಗೆ ತರುತ್ತವೆ. ಇವೆಲ್ಲಕ್ಕೂ ಮಿಗಿಲಾಗಿ ಈ ಕಾವ್ಯದ ಆದ್ಯಂತದಲ್ಲಿ ಬರುವ ಶ್ರೀ ಕೃಷ್ಣಮಹಿಮೆಯೂ, ಅವನ ಅನಂತ ಲೀಲಾವಳಿಯೂ, ದಿವ್ಯವಾದ ದೇವಾಲಯಕ್ಕೆ ಸುವರ್ಣದ ಗೋಪುರದಂತೆ ಇಲ್ಲಿ ಕಂಗೊಳಿಸುತ್ತಿವೆ.

ಕವಿ ಲಕ್ಷ್ಮೀಶನು “ವಿಮಲ ಜೈಮಿನಿ ಭಾರತದ ಕಥೆಯನು ” ಹೇಳಲು ಹೊರಟು ಅವನು ಸಂಪೂರ್ಣವಾಗಿ ಹೇಳಿರುವುದು ಶ್ರೀ ಕೃಷ್ಣಮಹಾತ್ಮ್ಯ. ಆದುದರಿಂದಲೇ “ಪುಣ್ಯಮಿದು ಶ್ರೀ ಕೃಷ್ಣಚರಿತಾಮೃತಂ” ಎಂದು (ಸಂ.೩೪, ಪ. ೪೬) ತನ್ನ ಕಾವ್ಯದ ಆತ್ಮ ಯಾವುದೆಂಬುದನ್ನು ಬಾಯಿಬಿಟ್ಟು ಹೇಳಿದ್ದಾನೆ. ಸಂಸ್ಕೃತದ ಮೂಲ ಜೈಮಿನಿಯು ಭಾರತವಾಗಿದೆಯೇ ಹೊರತು “ಶ್ರೀ ಕೃಷ್ಣಚರಿತಾಮೃತಂ” ಆಗಿಲ್ಲವೆಂಬುದು ನಮಗೆ ವಿದಿತವಾಗಿದೆ. ಆದರೆ, ಕನ್ನಡ ಜೈಮಿನಿಯು ಶ್ರೀ ಕೃಷ್ಣಚರಿತಾಮೃತವಾಗಿದೆ. ಅಷ್ಟೇ ಅಲ್ಲ. ಜೈಮಿನಿ ಭಾರತಕ್ಕೆ ಪಾಂಡವರು ನಿಜವಾಗಿ ಕಥಾನಾಯಕರೆನಿಸಿದ್ದರೆ ಲಕ್ಷ್ಮೀಶ ಕವಿಯ ಕಾವ್ಯದಲ್ಲಿ ಶ್ರೀ ಕೃಷ್ಣನೇ ಕಥಾನಾಯಕನೆಂಬಂತೆ ಕಂಗೊಳಿಸುತ್ತಾನೆ. ಇದು ಕವಿಯ ಶ್ರೀ ಕೃಷ್ಣಭಕ್ತಿಯ ಪರಿಣಾಮವೆನ್ನಬಹುದು.

ಲಕ್ಷ್ಮೀಶನು ದೂರ ದೃಷ್ಟಿಯುಳ್ಳ ವಿನಯಶೀಲನಾದ ಕವಿ. ಆದುದರಿಂದಲೇ ಅವನ ಪೂರ್ವ ಕವಿಗಳಿಂದ ತಕ್ಕಷ್ಟು ಪ್ರಯೋಜನವನ್ನು ಪಡೆದು ತನ್ನ ಕಾವ್ಯವನ್ನು ಕಳೆಗೊಳಿಸಿದ್ದಾನೆ; ಬಲಗೊಳಿಸಿದ್ದಾನೆ; ಬೆಲೆಗೊಳಿಸಿದ್ದಾನೆ. ಉದಾಹರಣೆಗೆ :

ಕಂದ ||
“ ಪೂಡುವ ಕುದುರೆ ಬೆಸಂ ಕೊಂ |
ಡೋಡುವ ತೇರ್ಗೊಂದೆ ಗಾಲಿ ಪೊಳೆವಂ ಪೆಳವಂ ||
ಕೇಡಿಂಗಲಸಿದೊಡಕ್ಕುಮೆ |
ನೋಡಿರೆ ರವಿ ಕೆಡೆದನಸ್ತಗಿರಿ ಮಸ್ತಕದೊಳ್ ||”

(ಆಶ್ವಾಸ ೫, ಪ.೪) ಎಂಬ ನೇಮಿಚಂದ್ರನ “ಅರ್ಧನೇಮಿ” ಪುರಾಣದ ಪದ್ಯವನ್ನು ತನ್ನ ಕಾವ್ಯದ (ಸಂ. ೨೬, ಪ. ೨೬)ರಲ್ಲಿ ಸೊಗಸಾಗಿ ಬಳಸಿಕೊಂಡಿದ್ದಾನೆ. ಅಂತೆಯೇ ದೇವಕವಿಯ ಕುಸುಮಾವಳಿಯಲ್ಲಿನ (ಅ. ೭. ಪದ್ಯ ೧೨).

ಕಂದ || “ನಗೆದಳುರ್ವ ಮಾಗೆಯ ಹಿಮ |
ಕಗಿದಾಗಳೆ ಶಶಿಯನಮರ ನದಿಯಂ ಬಿಟ್ವಾ ||
ನಗಜಾತೆಯ ತನುವಂ ತಾಂ |
ಬಿಗಿಯಪ್ಪಿದ್ಧರ್ದನಾರಿಯಾದನುಮೀಶಂ ||”

ಎಂಬ ಪದ್ಯದ ತಾತ್ಪರ್ಯವನ್ನೂ ತನ್ನ ಕಾವ್ಯದಲ್ಲಿ (ಸಂ. ೨೪, ಪ. ೩) ಹದವರಿತು ಬಳಸಿಕೊಂಡಿದ್ದಾನೆ. ಈ ರೀತಿ ಹಿಂದಿನ ಕವಿಗಳೂ ಕೂಡ ವರ್ತಿಸಿದ್ದಾರೆ. ಪ್ರಾಚೀನ ಷಟ್ಟದಿಕಾರನಾದ ರಾಘವಾಂಕನಿಂದ ಕೂಡ ಈ ಕವಿ ತಕ್ಕಷ್ಟು ಪ್ರಯೋಜನ ಪಡೆದಿರುವನೆಂಬುದನ್ನು ಹರಿಶ್ಚಂದ್ರ ಕಾವ್ಯ ಮತ್ತು ಜೈಮಿನಿ ಭಾರತಗಳ ಅವಲೋಕನದಿಂದ ಮನಗಾಣಬಹುದು. ಹರಿಶ್ಚಂದ್ರ ಕಾವ್ಯವು ಕನ್ನಡದಲ್ಲಿ ಪ್ರಪ್ರಥಮ ವಾರ್ಧಕ ಕಾವ್ಯವಾಗಿರುವುದು ಇಲ್ಲಿ ಗಮನಾರ್ಹವಾದ ಸಂಗತಿಯಾಗಿದೆ.

ಭಾಸನ ಭಾವಗಳು ಕಾಳಿದಾಸನಲ್ಲಿಯೂ, ಪಂಪನ ಅಭಿಪ್ರಾಯಗಳು ರನ್ನನಲ್ಲಿಯೂ, ಸುರಂಗನ ಪ್ರಯೋಗಗಳು ಷಡಕ್ಷರದೇವನಲ್ಲಿಯೂ ಕಂಡು ಬರುವುದನ್ನು ನಾವು ಸಾಹಿತ್ಯದಲ್ಲಿ ನೋಡುತ್ತಿದ್ದೇವೆ. ಇದನ್ನು ಒಂದು ಬಗೆಯ ಕವಿ ಸಂಪ್ರಾದಾಯವೆಂದು ಕೂಡ ನಾವು ಕರೆಯಬಹುದು. ಮತ್ತೆ ಕೆಲವು ವಿದ್ವಾಂಸರು ಹೇಳಿರುವಂತೆ, ಲಕ್ಷ್ಮೀಶನ ಕಾವ್ಯಪ್ರಭಾವವು ಚೆನ್ನಬಸವ ಪುರಾಣ, ಭಾವ ಚಿಂತಾರತ್ನ, ಸೌಂದರ ಪುರಾಣ, ಮೋಹನ ತರಂಗಿಣಿ ಮೊದಲಾದ ಮಹಾಕಾವ್ಯಗಳಲ್ಲಿಯೂ ಕಂಡು ಬರುತ್ತದೆ. ಕೋನಯ್ಯನ “ಕೃಷ್ಣಾರ್ಜುನ ಸಂಗರ”, ಬಬ್ಬೂರು ರಂಗನ “ಪರಶುರಾಮನ ರಾಮಾಯಣ”, ಲಕ್ಷ್ಮ ಕವಿಯ “ಭಾರತ”, ಗೋಪ ಕವಿಯ “ನಂದಿ ಮಹಾತ್ಮ್ಯೆ” ಮೊದಲಾದ ಗ್ರಂಥಗಳಲ್ಲಿಯೂ ಲಕ್ಷ್ಮೀಶನ ಪ್ರಭಾವ ಕಂಡುಬರುತ್ತದೆ.

ಕನ್ನಡ ಭಾಷೆಯಲ್ಲಿ ಒಳ್ಳೆಯ ವ್ಯುತ್ಪತ್ತಿಯನ್ನು ಸಂಪಾದಿಸಬೇಕೆನ್ನುವವರು ಜೈಮಿನಿ ಭಾರತ ಮತ್ತು ರಾಜಶೇಖರ ವಿಳಾಸಗಳನ್ನು ಕಂಠಪಾಠಮಾಡುವ ಪದ್ಧತಿ ನಮ್ಮ ದೇಶದಲ್ಲಿ ಬಹಳ ವರ್ಷಗಳಿಂದ ಬಂದಿದೆ. ಈ ಎರಡು ಕಾವ್ಯಗಳನ್ನೂ ಚೆನ್ನಾಗಿ ಅಭ್ಯಾಸಮಾಡಿದವನು ಮತ್ತಾವ ಕನ್ನಡ ಕಾವ್ಯಗಳನ್ನಾದರೂ ಸುಲಭವಾಗಿ ಜೀರ್ಣಿಸಿಕೊಳ್ಳಬಹುದೆಂಬುದು ಸಹೃದಯರ ಅಭಿಪ್ರಾಯವಾಗಿದೆ.

ಲಕ್ಷ್ಮೀಶನ ಕಾವ್ಯದಲ್ಲಿ ಉಪಮೆಗಳು ಬಹಳ ಆಕರ್ಷಕವಾಗಿವೆ. ವಿಮರ್ಶಕರು ಈ ಕವಿಯನ್ನು “ಉಪಮಾಲೋಲ” ಎಂದು ಒಕ್ಕಣಿಸಿದ್ದಾರೆ. ಮತ್ತೆ ಕೆಲವರು “ನಾದಲೋಲ” ಎಂದು ಹೊಗಳಿದ್ದಾರೆ. ಓದುಗರ ಮನಸ್ಸಿನ ಮೇಲೆ ವಿಷಯವು ಸ್ಪಷ್ಟವಾಗಿ ನಿರೂಪಣೆಯಾಗಲು, ಕಾವ್ಯದ ಸೌಂದರ್ಯವು ಅಧಿಕವಾಗಲು ಈ ಉಪಮಾಲಂಕಾರವು ಅಗತ್ಯ. ಕವಿಯು ದುಃಖಿಸುವ ಧರ್ಮರಾಯನನ್ನು ಕುರಿತು, “ಅನಿಲ ಸಂಚಾರ ಮೊಂದಿನಿತಿಲ್ಲದುರಿವ ಕಡುವೇಸಗೆಯ ಬಿಸಿಲಿಂದೆ ಬಸವಳಿದ ಕೋಮಲ ರಸಾಲದಂತೆ” (ಸಂ. ೨, ಪ. ೧೪) ಎಂದೂ, ಕಟುಕರ ಕೈಯ್ಯಲ್ಲಿ ಸಿಕ್ಕಿದ ಚಂದ್ರ ಹಾಸನನ್ನು ಕುರಿತು, “ಪಾಪಿಗಳ ಒಡಲೊಳಿಹ ಪರಮಾತ್ಮನಂತೆ, ಯಮದೂತರೆಳೆತಂದ ಅಜಾಮಿಳನಂತೆ, ಕಾಕ ಸಂಘಾತದೊಳ್ ಸಿಕ್ಕಿರ್ದ ಕೋಗಿಲೆಯ ಮರಿಯಂತೆ, ನಲುಗಿ ಕತ್ತಲೆಯೊಳಿರ್ದ ಶೀತಲ ಮರೀಚಿಲಾಂಛನದಂತೆ, ಬಹಳ ಕೋಪಾತಿಶಯದೊಳಗಿಹ ವಿವೇಕದಂತೆ, ಆಗ ಪಶುಘಾತಕಿಗಳೆತ್ತಿ ಕೊಂಡೊಯ್ವ ಬಾಲಕನಿರ್ದ್ದನು.”  (ಸಂ. ೨೮, ಪ. ೩೧.) ಎಂದೂ ಹೇಳಿದ್ದಾನೆ. ದುಷ್ಟಬುದ್ಧಿಯ ಮನಸ್ಸು “ಕ್ರೂರ ನಕ್ರಾಕುಲಕೊಳಿಡಿದಿರ್ದ ಪೆರ್ಮಡು ಗಭೀರ ನಿರ‍್ಮಲಜಲದೊಳೆಸೆವಂತೆ” (ಸಂ. ೨೮, ಪ. ೨೮) ಇದ್ದಿತು. ಉದ್ದಾಲಕನು ಚಂಡಿಯೊಡನೆ ಸಂಸಾರ ಹೂಡಿದೊಡನೆ “ಮುಳ್ಳಿಡಿದ ಮರನೇರಿದಂತಾದುದು” (ಸಂ. ೧೦, ಪ. ೨೪) ಎಂದು ಹೇಳಿದ್ದಾನೆ. ಸುರಥನು ಶತ್ರುಗಳ ಮೇಲೆ ರಭಸದಿಂದ ಬೀಳುವುದನ್ನು ಕುರಿತು. “ಸೊಕ್ಕಾನೆ ಪೊಕ್ಕು ಕಾಸಾರಮಂ ಕಲಕುವಂತೆ” (ಸಂ. ೧೪, ಪ. ೬) ಎಂದು ವರ್ಣಿಸಿದ್ದಾನೆ. ಲಕ್ಷ್ಮಣನ ಮಾತು ಕಿವಿಗೆ ಬಿದ್ದಾಗ ಗರ್ಭಿಣಿಯಾದ ಸೀತಾದೇವಿಯು ನೆಲಕ್ಕೆ ಬಿದ್ದಳೆಂಬುದನ್ನು “ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ ಮುರಿದಿಳೆಗೊರಗುವಂತೆ” (ಸಂ. ೧೯, ಪ. ೧೬) ಎಂದು ಕವಿ ಉಪಮಿಸಿದ್ದಾನೆ. ಈ ಬಗೆಯ ಉಪಮೆಗಳೂ, ನಿದರ್ಶನಗಳೂ ಪ್ರಗಲ್ಭನಾದ ಕವಿಗೆ ಮಾತ್ರ ಹೇಳಲು ಸಾಧ್ಯವು.

ಕಲಿಯುಗದ ವಿಪ್ರರಾಚಾರಮಂ ಬಿಡುವಂತೆ (೧೮-೫೧), ಕರೆವ ಕಪಿಲೆಯಂ ಅಡವಿಗಟ್ಟುವರೆ (೧೮-೫೨), ಮಂತ್ರ ಪೂತದ ಹವಿಯನರಿದಿಂಜಲಿಪುದೆ ವಾಯಸಂ (೧೮-೪೬), ಮಮತೆಯಂ ಮಹಾ ಯೋಗಿ ಬಿಡುವಂತೆ (೧೮-೫೪),ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ (೧೯-೩೨), ಜಗದೊಳುಪಕಾರಿಯಾದವಂ ತನ್ನ ನೋವಂ ನೋಳ್ಪನೆ (೧೯-೩೫), ಸಿಡಿಲ ಗರ್ಜನೆಗೆ ಮೊರೆವ ಮರಿಸಿಂಗದಂತೆ (೨೦-೧೩), ಕೂಟ ಸಾಕ್ಷಿಯ ಸಿರಿವೊಲು (೨೦-೧೬), ಕನ್ಯಾವಿಕ್ರಯಂಗೈದು ಜೀವಿಸುವ ಮಾನವನ ಪಿತೃಗಳಂತೆ (೨೦-೩೧), ಪೆಣ್ಗಳ್ಗೆ ಸೋಲದವರಾರ್ (೩೦-೪) ಕಡವರವನೆಡಯಿ ಸಂಧಿಸಿದ ಕಡುಬಡವನಂತೆ (೨೮-೫೪), ಆರ್ತರಂ ನೋಡಿ ಮಿಗೆ ಮರುಗದಿಹ ಮಾನವಂ ಪಾಪಿಯಲ್ತೆ (೨೨-೩೫), ಕತ್ತಲೆಯ ಮನೆಗೆ ಮಣಿದೀಪ ಮಾದಂತೆ, ಬತ್ತಿದ ಸರೋವರಕೆ ನವಜಲಮೊದವಿದಂತೆ, ಬಿತ್ತರದ ಕಾವ್ಯ ರಚನೆಗೆ ದೇವತಾಸ್ತುತಿ ನೆಗಳ್ದಂತೆ (೨೦-೬೩), ಸನ್ನುತ ವಸಂತದೊಳ್ ಬಾಯ್ದೆರೆವ ಕೋಗಿಲೆಯ ಮರಿಯವೊಲ್ (೨೯-೩೦), ಪೆಣ್ಗಳಾಸ್ಯಕೆ ಸೋಲ್ದುವಾ ಕೊಳದ ಕಮಲಂಗಳ್ (೩೦-೯), ಉಲ್ಲಂಘಿಸುವರುಂಟೆ ವಿಧಿಕೃತವನು (೩೦-೨೬), ದೀಪಮಂ ಕೆಡಿಸುವ ಪತಂಗದಂತೆ (೩೧-೫೨), ಲೋಭಿಯ ಧನಂ ಕಾಕಭಾಜನಮಪ್ಪುದು ಅಡವಿಯೊಳ್ ಬಿದ್ದ ಪೆಣನಂತೆ (೨೪-೩೭), ನಿಧಾನವನಭಾಗ್ಯಂ ಕಾಣದಿರ್ಪಂತೆ (೩-೩೦), ಪರನಿಂದೆಗೈ ದರ್ಗೆ ಪರಿಭವಂ ಕೈಯ್ಯೊಡನೆ ತೋರದಿಹುದೆ (೧೭-೪೩), ತನ್ನಂ ತಾತ ನುಲಿದುದಿಲ್ಲವೆ ಸತ್ಯಭಾಷೆಗಾಗಿ (೧೮-೫೦), ಸಮರ್ಥರ್ಗೆ ತನುಧನ ಮನೊಪ್ಪಿಸದೊಡೆ ಉಳಿವರೆ ಕೃಶರ್ (೨೪-೩೬), ಪ್ರಾಣನಾಯಕನಿರೆ ಮರೆದೊರೆಗಿದ ಅಧಮಾಂಗನೆಯ ಒಲ್ (೨೫-೬೦), ಗರುಡ ಹನುಮಂತರ್ಗೆ ಚಕ್ರಿ ಪಣ್ವಂಚಿದಂತೆ (೨೬-೬೧), ಮಾತರಿಶ್ವ ಮಿತ್ರಜ್ವಾಲೆ ಪೊರೆಯೊಳ್ ಇರೆಭೇಷಜವನರಸುವರೆ (೨೬-೭೪), ಕನ್ಯಾಶುಲ್ಕಂ ಅತಿ ದೋಷಕರಂ (೨೭-೨೯), ಕಮಲಾಂಬಿಕೆಯರ ಕೃತದ ಬೇಟ (೨೯-೩೫)-ಇತ್ಯಾದಿ ಜೈಮಿನಿ ಭಾರತದಲ್ಲಿ ಬರುವ ಸವಿಕಟ್ಟಾದ ಮಾತುಗಳು ಲಕ್ಷ್ಮೀಶನ ಹೃದಯದ ಸಂದೇಶದಂತಿವೆ. ಇಂತಹ ಜೀವಂತ ವಾಕ್ಯಗಳನ್ನು ಪ್ರಯೋಗಿಸುವ ಜಾಣ್ಮೆ ರಾಘವಾಂಕ-ಲಕ್ಷ್ಮೀಶರಂತಹ ವರಕವಿಗಳಿಗೆ ಮಾತ್ರ ವಿಸಲಾದುದು. ‘ರನ್ನಮೊಂದಂ ತಳೆದಹಿ ರತ್ನಾಕರಕ್ಕೆ   ಸರಿವಂದಪುದೆ ?’

ಲಕ್ಷ್ಮೀಶನ ಕಾವ್ಯದಲ್ಲಿ ಓದುಗರನ್ನು ಒಲಿಸಿಕೊಳ್ಳುವ ಶೃಂಗಾರವು ಮೊದಲಿಂದ ಕಡೆಯವರೆಗೂ ಬಂದಿದೆ. ಸ್ತ್ರೀವರ್ಣನೆಗಳಲ್ಲಿ ಈತನಿಗೆ ಪೂರ್ವಕವಿಗಳಾದ ನೇಮಿಚಂದ್ರ-ಸೋಮರಾಜರು ಮಾರ್ಗದರ್ಶಕರೆಂದು ತೋರುತ್ತದೆ. ಕವಿ ಒಳ್ಳೆಯ ಸೌಂದರ‍್ಯೋಪಾಸಕನಾದುದರಿಂದ ಸೂಕ್ಷ್ಮವಾಗಿ ಪ್ರಕೃತಿ ವರ್ಣನೆಯನ್ನು ಮಾಡುವ ಜತೆಗೆ ಸ್ತ್ರೀವರ್ಣನೆಯನ್ನೂ ಅತಿಶಯವಾಗಿಯೇ ಮಾಡಿರುತ್ತಾನೆ. ಈ ಕಾವ್ಯವು ರಸಿಕರ ಹೃದಯವನ್ನು ಆಕರ್ಷಿಸಲು ಇದೂ ಒಂದು ಕಾರಣವಾಗಿರಬೇಕು. ಸುಧನ್ವ ಪ್ರಭಾವತಿಯರ ಸಮಾಗಮ, ಸೀತಾರಾಮರ ಪ್ರೇಮಾವಲೋಕನ, ವಿಷಯೆ ಚಂದ್ರಹಾಸರ ಸಮಾಗಮ, ರತ್ನಪುರದ ಸೂಳೆಗೇರಿಯ ವರ್ಣನೆ-ಮೊದಲಾದ ಸನ್ನಿವೇಶಗಳಲ್ಲಿ ಶೃಂಗಾರವು ಅತಿಶಯವಾಗಿಯೇ ಬಂದಿದೆ. ಈಗಿನ ಕಾಲದ ಕೆಲವು ಮಂದಿ ಇಲ್ಲಿ ಶೃಂಗಾರವು ಅಧಿಕವಾಯ್ತೆಂದು ಹೇಳಿರುವರಾದರೂ, ಹಿಂದಿನಕಾಲದ ಜನರ ಅಭಿರುಚಿಗೆ ತಕ್ಕಂತೆ ಇಲ್ಲಿ ಕವಿ ಸ್ತ್ರೀ ವರ್ಣನೆಗಳನ್ನು ಮಾಡಿದ್ದಾನೆಂದು ನಾವು ತಿಳಿಯಬೇಕು. ಕಾಲ ಬದಲಾದಂತೆ ಸಮಾಜದ ಕಾವ್ಯಾಭಿರುಚಿಯೂ ಬದಲಾಯಿಸುವುದನ್ನು ನಾವು ಎಲ್ಲ ಸಾಹಿತ್ಯ ಚರಿತ್ರೆಯಲ್ಲಿಯೂ ಕಾಣಬಹುದು.

ಸುಪ್ರಸಿದ್ಧ ಸಾಹಿತಿಗಳಾದ ಶ್ರೀ ಸಿ.ಕೆ. ವೆಂಕಟರಾಮಯ್ಯನವರು ಹೇಳುವಂತೆ, “ಲಕ್ಷ್ಮೀಶನ ಕಾವ್ಯದಲ್ಲಿ ಸ್ತ್ರೀಪಾತ್ರಗಳು ಪುರುಷಪಾತ್ರಗಳಿಗಿಂತ ವಿಶೇಷ ಮನೋಹರವಾಗಿವೆ. ಕವಿಯು ಸ್ತ್ರೀ ಪಾತ್ರ ರಚನೆಯಲ್ಲಿ ವಿಶೇಷ ಕೌಶಲವನ್ನು ತೋರಿದ್ದಾನೆ” ಎಂಬುದು ಇಲ್ಲಿ ಗಮನಾರ್ಹವಾಗಿದೆ.

ಜೈಮಿನಿಭಾರತದಲ್ಲಿ ರಸಿಕಳಾದ ಚತುರೆ ಸತ್ಯಭಾಮೆ, ವಕ್ರಳಾದ ಚಂಡಿ, ಸಾಧಿಯಾದ ಸೀತಾದೇವಿ, ಚಲಗಾರ್ತಿಯಾದ ಜ್ವಾಲೆ, ಸುಮಕೋಮಲೆಯಾದ ಪ್ರಭಾವತಿ, ಸ್ತ್ರೀ ರಾಜ್ಯದ ಒಡತಿ ಪ್ರಮೀಳೆ, ನಾಗಕನ್ನಿಕೆಯಾದ ಚಿತ್ರಾಂಗದೆ, ಭೋಗಾಕಾಂಕ್ಷಿಣಿಯಾದ ವಿಷಯೆ ಇತ್ಯಾದಿ ಪಾತ್ರಗಳು ಈ ಕಾವ್ಯದ ಸೌಂದರ್ಯವನ್ನೂ ಮಹತ್ವವನ್ನೂ ಹೆಚ್ಚಿಸಿವೆ. ಈ ಸ್ತ್ರೀ ಪಾತ್ರಗಳ ಸೃಷ್ಟಿಯಲ್ಲಿ ಕವಿಯು ತೋರಿಸಿರುವ ಪ್ರತಿಭೆಯೂ ಕೌಶಲ್ಯವೂ ಅಸಮಾನವಾಗಿವೆ.

ಒಟ್ಟಿನಲ್ಲಿ ಲಕ್ಷ್ಮೀಶನ ಶೈಲಿಯು ಪಂಪ ಭಾರತದ ನಾರಿಕೇಳಪಾಕದಂತೆ ಕಠಿಣವೂ ಅಲ್ಲ, ಕನಕದಾಸರ ನಳಚರಿತ್ರೆಯ ದ್ರಾಕ್ಷಾಪಾಕದಂತೆ ಸುಲಭವೂ ಅಲ್ಲ, ರಾಘವಾಂಕ ಹರಿಶ್ಚಂದ್ರ ಕಾವ್ಯ, ಚಾಮರಸನ ಪ್ರಭುಲಿಂಗ ಲೀಲೆ, ರತ್ನಾಕರನ ಭರತೇಶವೈಭವ, ಕುಮಾರವ್ಯಾಸನ ಮತ್ತು ಕುಮಾರ ವಾಲ್ಮೀಕಿಯ ಭಾರತ-ರಾಮಾಯಣಗಳಂತೆ ಕದಳೀಪಾಕದಿಂದ ಕೂಡಿದೆ. ಸುಕೃತಶಾಲಿಯಾದ ಮಾನವನು ಪಡೆಯಬಹುದಾದ ಬ್ರಹ್ಮಾನಂದ, ಕಾಂತಾನಂದ, ಕಾವ್ಯಾನಂದ ಎಂಬ ಆನಂದ ತ್ರಯಗಳಲ್ಲಿ ಮಹಾಕವಿ ಲಕ್ಷ್ಮೀಶನು ನಮಗೆ ಒಳ್ಳೆಯ ಕಾವ್ಯಾನಂದವನ್ನು ಒದಗಿಸಿಕೊಟ್ಟು ಉಪಕಾರಮಾಡಿರುತ್ತಾನೆ.

ಲಕ್ಷ್ಮೀಶನು ಹೀಗೆ ಮಹಾ ಪ್ರತಿಭಾಶಾಲಿಯೆನಿಸಿದರೂ ಇವನ ಕಾವ್ಯದಲ್ಲಿಯೂ ಕೆಲವು ಲೋಪದೋಷಗಳುಂಟೆಂದು ವಿಮರ್ಶಕರು ಹೇಳುತ್ತಾರೆ. “ಕಾವ್ಯಮಂ ನಡೆಸುವಾತಂ ರಸಾವೇಶಮರಹಾಲಸ್ಯ ವೆಡೆಗೊಳಲು ತಪ್ಪುಗು ಮಲ್ಲದೆ ಕಾವ್ಯಕರ್ತೃ ತಪ್ಪುವನೆ ಒಂದೆರಡೆಡೆಯೊಳು.” (ಹರಿಶ್ಚಂದ್ರ ಕಾವ್ಯ ಸಂಗ್ರಹ ೧-೫) ಎಂದು ಮಹಾಕವಿ ರಾಘವಾಂಕನು ಹೇಳುವಂತೆ ಕವಿಗಳು ರಸಾವೇಶ, ಮರಹು, ಆಲಸ್ಯ ಇವುಗಳಿಂದ ಒಂದೆರಡು ತಪ್ಪುಗಳನ್ನು ಮಾಡುವುದೂ ಉಂಟು, “ಗೋವರ್ಧನಂಗೆ ಮೊಲೆಗೊಟ್ಟ ಪೂತನಿಯ ವೊಲಾಯ್ತು” (ಸಂ. ೨೧, ಪ.೩) ಎಂದು ರಾಮದೂತರು ರಾಘವನ ಮುಂದೆ ಹೇಳಿದಂತೆ ಕವಿ ಚಿತ್ರಿಸಿದ್ದಾನೆ. ಇಲ್ಲ ಮುಂದೆ ಬರುವ ಕೃಷ್ಣಾವತಾರದ ಕಥೆ ಹಿಂದಣ ರಾಮಾವತಾರದ ಸಂದರ್ಭದಲ್ಲಿ ಹೇಳುವುದು ಉಚಿತವಲ್ಲವೆಂದೂ, ಇದು ಕವಿಯ ಮೈಮರವೆಯಿಂದ ಆಗಿರಬೇಕೆಂದೂ ವಿಮರ್ಶಕರು ಹೇಳುತ್ತಾರೆ. ಅನಂತರ ತಾಮ್ರಧ್ವಜನ ಪ್ರತಾಪಕ್ಕೆ ಶ್ರೀ ಕೃಷ್ಣಾರ್ಜುನರು ಸೋತು ಮುಂದೇನುಗತಿಯೆಂದು ಯೋಚಿಸುವ ಸನ್ನಿವೇಶದಲ್ಲಿ, ಅವನ ರತ್ನಪುರದ ಕೇರಿ ಕೇರಿಗಳಲ್ಲಿ ಹೋಗಿ, ವೇಶ್ಯಾಸ್ತ್ರೀಯರ ಮತ್ತು ವಿಟಪುರುಷರ ವೈಭವಗಳನ್ನು ನೋಡುತ್ತಾ ಹೋದರೆಂದು ಹೇಳುವ ಸಂದರ್ಭವು ಅಷ್ಟು ಉಚಿತವಾದುದಲ್ಲವೆಂದು ವಿಮರ್ಶಕರು ಹೇಳುತ್ತಾರೆ. “ಇರ್ದ್ದಪುದೆ ನಿರ್ಗುಣಮುಂ ನಿರ್ದೋಷಮುಂ ಎನಿಪ ವಸ್ತುಲೋಕದೊಳ್” ಎಂಬ ಅಭಿನವಕಾಳಿದಾಸ ಬಸವಪ್ಪಶಾಸ್ತ್ರಿಗಳ ಮಾತು ಇಲ್ಲಿ ನಮಗೆ ಸ್ಮರಣಾರ್ಹವಾಗಿದೆ (ದಮಯಂತೀ ಸ್ವಯಂವರ, ಪೀಠಿಕಾಸಂಧಿ, ಪ.೨೫). ಹಂಸಕ್ಷೀರ ನ್ಯಾಯದಂತೆ ಗುಣವನ್ನು ಸ್ವೀಕರಿಸುವುದೇ ಸಹೃದಯರ ಮಾರ್ಗವಾಗಿದೆ. ಕನ್ನಡ ಜೈಮಿನಿಯು ಜನಪ್ರಿಯವಾಗಲು ಇದರಲ್ಲಿನ ಸಂಭಾಷಣಾ ವೈಖರಿಯೂ ಒಂದು ಕಾರಣವಾಗಿರಬೇಕು. ಈ ವಿಷಯದಲ್ಲಿ ಲಕ್ಷ್ಮೀಶನು ಪ್ರಾಚೀನ ಕವಿಗಳಾದ ರನ್ನ, ರಾಘವಾಂಕ ಮತ್ತು ಕುಮಾರವ್ಯಾಸ ರಿಂದ ಹೆಚ್ಚಿನ ಉಪಕಾರವನ್ನು ಪಡೆದಂತೆ ತೋರುತ್ತದೆ. ಈ ಜೈಮಿನಿ ಭಾರತದ ಕಥೆಗಳು ಅಲ್ಲಿಂದೀಚೆಗೆ ಅನೇಕ ನಾಟಕಗಳಾಗಿ ಪರಿವರ್ತಿಸ್ಪಟ್ಟಿವೆ. ಉದಾಹರಣೆಗೆ.- ಪ್ರಮೀಳಾರ್ಜುನೀಯ, ಸುಧನ್ವಾರ್ಜುನರ ಕಾಳಗ, ಬಭ್ರುವಾಹನಾರ್ಜುನರ ಕಾಳಗ, ಚಂದ್ರಹಾಸ ನಾಟಕ, ಕುಶಲವರ ಕಾಳಗ ಇತ್ಯಾದಿ ನಾಟಕಗಳು ಜನರಲ್ಲಿ ಹೆಚ್ಚು ಬಳಕೆಯಲ್ಲಿರುವುದನ್ನು ನೆನಪಿಗೆ ತಂದುಕೊಳ್ಳಬಹುದು. ಈ ಎಲ್ಲ ನಾಟಕಗಳ ಮೇಲೆಯೂ ಲಕ್ಷ್ಮೀಶನ ಪ್ರಭಾವ ಬಿದ್ದಿದೆ. ಇದಕ್ಕೆ ಈ ಕಾವ್ಯದಲ್ಲಿರುವ ನಾಟಕೀಯತೆಯೇ ಮುಖ್ಯ ಕಾರಣ. ಸೋಲೂರು ಹುಚ್ಚುಕವಿ ಎಂಬಾತನು ಜೈಮಿನಿ ಭಾರತವನ್ನು ‘ಯಾಗ ಚರಿತ್ರೆ’ ಎಂಬ ಹೆಸರಿನಿಂದ ಯಕ್ಷಗಾನವಾಗಿ ಬರೆದಿರುವನು.

ಜೈಮಿನಿ ಭಾರತದ ಕಥೆಯನ್ನು ವೈಶಂಪಾಯನನ ಶಿಷ್ಯನಾದ ಜೈಮಿನಿಯು ಮಹಾರಾಜ ಜನಮೇಜಯನಿಗೆ ಹೇಳಿದ್ದಾನೆ. ಈ ಮಹಾಕಾವ್ಯದಲ್ಲಿ ಬರುವ ಕೆಲವು ಉಪಕಥೆಗಳನ್ನು ಬೇರೆಬೇರೆಯವರೂ ಹೇಳಿದ್ದಾರೆ. ಉದಾಹರಣೆಗೆ, ನಾರದನು ಚಂದ್ರಹಾಸನ ಕಥೆಯನ್ನು ಅರ್ಜುನನಿಗೆ ಹೇಳುತ್ತಾನೆ. ಚಂಡಿಯ ಕಥೆಯನ್ನು ಸೌಭರಿ ಮುನಿಯು ಹೇಳುತ್ತಾನೆ. ಕೆಲವು ಕಥೆಗಳು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿರುವ ತಮಿಳು ಪೆರಿಯ ಪುರಾಣದ ಶಿವಭಕ್ತರ ಕಥೆಗಳನ್ನು ನೆನಪಿಗೆ ತರುತ್ತವೆ. ಹಂಸಧ್ವಜನು ಸುಧನ್ವನನ್ನು ಕಾಯುವ ಎಣ್ಣೆಯಲ್ಲಿ ಬೇಯಿಸಿದುದು, ಮಯೂರಧ್ವಜನು ಬ್ರಾಹ್ಮಣನಾಗಿ ಬಂದ ಶ್ರೀ ಕೃಷ್ಣನಿಗೆ ತನ್ನ ದೇಹವನ್ನೇ ಕೊಯ್ದು ಕೊಟ್ಟುದು ಈ ಕಥೆಗಳನ್ನು ನಾವಿಲ್ಲಿ ನಿದರ್ಶನವಾಗಿ ನೋಡಬಹುದು.

ಮಹಾಭಾರತವನ್ನು ಓದಿದ ಜನ ಜೈಮಿನಿ ಭಾರತವನ್ನು ಓದಿದಾಗ ಒಂದು ದೊಡ್ಡ ವ್ಯತ್ಯಾಸವನ್ನು ಕಾಣುತ್ತಾರೆ. ಭಾರತದಲ್ಲಿ ಕೃಷ್ಣಾರ್ಜುನರು ಅತ್ಯಂತ ಪ್ರತಾಪ ಮತ್ತು ಪ್ರಭಾವಶಾಲಿಗಳಾಗಿ ಕಂಗೊಳಿಸಿದ್ದಾರೆ. ಅದರೆ, ಜೈಮಿನಿಯಲ್ಲಿ ಈ ಉಭಯರ ಶಕ್ತಿ ಸಾಮರ್ಥ್ಯಗಳೂ ಕುಂದಿದಂತೆ ಕಂಡುಬರುತ್ತದೆ. ಈ ಅಶ್ವಮೇಧದ ಕಥೆಯಲ್ಲಿ ಅರ್ಜುನನು ಜಯಿಸಿರುವುದು ತಂಬಾ ಸ್ವಲ್ಪ; ಸೋತಿರುವುದು ಬಹಳ. ಅಲ್ಲಾಗಿರುವ ಗೆಲುವು ಶ್ರೀಕೃಷ್ಣನ ಅವತಾರ ಮಹಾತ್ಮ್ಯದಿಂದ. ಅರ್ಜುನನು ಸುಧನ್ವ-ಸುರಥರ ಕೂಡೆ ಯುದ್ಧಮಾಡಿದಾಗ ಶ್ರೀಕೃಷ್ಣನ ಸಹಾಯವಿಲ್ಲದೆ ಅವರನ್ನು ಗೆಲ್ಲುವುದು ಅಸಾಧ್ಯವಾಗಿದೆ. ತಾಮ್ರಧ್ವಜನು ಕೃಷ್ಣಾರ್ಜುನರನ್ನು ಮೂರ್ಛೆ ಕೆಡವಿದ್ದಾನೆ. ಚಂದ್ರಹಾಸನು ಶ್ರೀಕೃಷ್ಣನ ದಾಕ್ಷಿಣ್ಯಕ್ಕಾಗಿ ಅರ್ಜುನನನ್ನು ಗೌರವಿಸಿದ್ದಾನೆ. ಬಭ್ರವಾಹನನು ಅರ್ಜುನನನ್ನು ಕಣ್ ಕಣ್ ಬಿಡಿಸಿ ಕಡೆಗೆ ಅರ್ಜುನನ ತಲೆಯನ್ನು ಕತ್ತರಿಸಿದ್ದಾನೆ. ಈ ಎಲ್ಲ ಸನ್ನಿವೇಶಗಳನ್ನೂ ಓದಿದಾಗ ಮಹಾಭಾರತದ ಅರ್ಜುನನ ಸಾಮರ್ಥ್ಯ ಜೈಮಿನಿಯ ಅರ್ಜುನನಲ್ಲಿ ಕಂಡುಬರುತ್ತಿಲ್ಲವಲ್ಲಾ ಅನ್ನಿಸುತ್ತದೆ.

ಮತ್ತೆ ಕೆಲವು ವಿಮರ್ಶಕರ ಅಭಿಪ್ರಾಯದಂತೆ ವಿಜಯನಗರ ಸಾಮ್ರಾಜ್ಯದಲ್ಲಿ ಆಳುತ್ತಿದ್ದ ಶ್ರೀಕೃಷ್ಣದೇವರಾಯನನ್ನು (೧೫೦೯-೨೦) ಗುರಿಯನ್ನಾಗಿ ಇಟ್ಟುಕೊಂಡು ಕವಿಯು ಜೈಮಿನಿ ಭಾರತವನ್ನು ಶ್ರೀಕೃಷ್ಣ ಚರಿತಾಮೃತವನ್ನಾಗಿ ಮಾಡಿದ್ದಾನೆಂದೂ, ಅಲ್ಲಿ ವರ್ಣಿಸಲ್ಪಟ್ಟಿರುವ ಭದ್ರಾವತಿಯ ವೈಭವವು ವಿಜಯನಗರದ ವೈಭವವೆಂದೂ ತಿಳಿದುಬಂದಿದೆ. ಶ್ರೀಕೃಷ್ಣರಾಯನ ರಾಯಚೂರು ವಿಜಯ ಮೊದಲಾದುವುಗಳನ್ನು ಕಂಡು ಕೇಳಿ ಕವಿಯು ಸೂರ್ತಿಗೊಂಡು ಶ್ರೀಕೃಷ್ಣನ ವ್ಯಾಜದಿಂದ ಕನ್ನಡ ರಾಜನಾದ ಶ್ರೀಕೃಷ್ಣದೇವರಾಯನನ್ನು ಅಭಿವರ್ಣಿಸಿರುವನೆಂಬ ವಿಷಯ ಪರಿಶೀಲನಾರ್ಹವಾಗಿದೆ. ಕೃಷ್ಣದೇವರಾಯನು ಪರಮವೈಷ್ಣವನಾಗಿಯೂ, ದೊರೆಯಾಗಿಯೂ, ವಿಷ್ಣುವಿನ ಅಂಶೀಭೂತನಾಗಿಯೂ ಇದ್ದುದರಿಂದ ವಿಷ್ಣುಭಕ್ತನಾದ ಕವಿಗೆ ಆ ರಾಜರನ್ನು ಕವಿಗಳು ಅಭಿವರ್ಣಿಸುವುದನ್ನು ಪಂಪ ರನ್ನರ ಕಾವ್ಯಗಳಲ್ಲಿ ನಾವು ಕಂಡಿರುತ್ತೇವೆ.

ಕಾವ್ಯವು ರಸಋಷಿಗಳಾದ ಕವಿಗಳ ಹೃದಯದ ಭಾಷೆ. ರಸವತ್ತಾದ ವಾಕ್ಯಗಳ ಸರಣಿಯೇ ‘ಕಾವ್ಯ’ ಎಂದು ಅಲಂಕಾರಿಕರು ಹೇಳಿದ್ದಾರೆ. ವಾಚ್ಯಾರ್ಥಕ್ಕಿಂತ ವ್ಯಂಗ್ಯವು ಕಾವ್ಯದ ಸ್ವಾರಸ್ಯವನ್ನು ಹೆಚ್ಚಿಸುತ್ತದೆ ಎಂಬುದು ರಸಿಕರ ಅಭಿಪ್ರಾಯ. ಕಾವ್ಯದ ಜೀವವು ರಸ; ಕಾವ್ಯದ ಒಡಲು ಭಾವ; ಅರ್ಥವೇ ಅವಯವ; ಶಬ್ದ ವಿರಸವೇ ನುಡಿ; ಅಲಂಕಾರವೇ ತೊಡಿಗೆ; ಸುಲಕ್ಷಣವೇ ಕಾವ್ಯಲಕ್ಷಣ; ವಿಮಳ ಪದನ್ಯಾಸ ನಡೆ; ರೀತಿಯೇ ಸುಕುಮಾರತೆ; ರಸಿಕತನವೇ ಸುಳಿ; ಸುಖವೇ ನಿಲಯ-“ಇಂತಹ ಪೊಸಕಾವ್ಯ ಕನ್ನಿಕೆ” ಯು ಭಗವಂತನಿಗೆ ಅರ‍್ಪಿಸಲು ಅರ್ಹಳು ಎಂದು ಕವಿ ರಾಘವಾಂಕನು (ಹರಿಶ್ಚಂದ್ರ ಕಾವ್ಯ ೧-೩೩) ಹೇಳಿದ್ದಾನೆ. ಲಕ್ಷ್ಮೀಶನೂ ಇಂತಹ “ಪೊಸಕಾವ್ಯಕನ್ನಿಕೆ”ಯನ್ನು ಸೃಷ್ಟಿಸಿ,

ತೊಳಗುವ ಸುವರ್ಣಭೂಷಣದಿಂದೆ ಸೇರಿಸಿದ |
ಲಲಿತ ಮುಕ್ತಾಹಾರದಿಂದೆ ಪರಿರಂಜಿಸುವ |
ಪಲವಲಂಕಾರಂಗಳಿಡಿದ ಚೆಲ್ವಿನ ದೇವಪುರದ ಲಕ್ಷ್ಮೀಕಾಂತನ ||
ವಿಲಸಿತ ಕೃತಿಲಲನೆ ಮೃದುಪದವಿಲಾಸದಿಂ |
ಸಲೆಸೊಗಸಲಡಿಗಡಿಗೆ ನಡೆಯಲ್ಕೆ
ಚಿತ್ತಂಗಳೊಲಿದೆರಗದಿರ್ದಪುದೆ ಧರೆಯೊಳಗೆ
ರಸಿಕರಾಗಿರ್ದ ಭಾವುಕನಿಕರದ ………………….. ||
(ಜೈಮಿನಿ ಭಾರತ ೩೪೪೪)

ಈ ಪದ್ಯದಲ್ಲಿ ತನ್ನ ಕಾವ್ಯವು ‘ವಿಲಸಿತ ಕೃತಿಲಲನೆ’ ಎಂದು ಹೇಳಿ ಆ ಕಾವ್ಯ ಕನ್ನಿಕೆಯನ್ನು ಅನುರೂಪನಾದ ತನ್ನ ಇಷ್ಟದೇವತೆ ದೇವಪುರದ ಲಕ್ಷ್ಮೀಶನಿಗೆ ಒಪ್ಪಿಸಿದ್ದಾನೆ; ಹಾಗೂ ಅವನ ಅನುಗ್ರಹವನ್ನು ಸಂಪೂರ್ಣವಾಗಿ ಅರ್ಜಿಸಿದ್ದಾನೆ. ಇಂತಹ ಸಾಹಸವು ಮಹಾಕವಿಗಳಿಗೆ ಮಾತ್ರ ಸಾಧ್ಯವಾದುದು. ‘ನಿಗ್ರಹನುಗ್ರಹ ಸಮರ್ಥರಲ್ಲವೆ ಕವಿಗಳ್’ ಎಂದು ನೇಮಿಚಂದ್ರನು ಹೇಳಿಲ್ಲವೆ ?

ಕವಿಗಳಲ್ಲಿ ವಾಗ್ವಶ್ಯರು ಮತ್ತು ವಶ್ಯವಾಕ್ಕುಗಳು ಎಂದು ಎರಡು ಬಗೆಯ ವರಿದ್ದಾರೆ. ವಾಗ್ವಶ್ಯರನ್ನು ಸಾಮಾನ್ಯ ಕವಿಗಳೆಂದೂ, ವಶ್ಯವಾಕ್ಕುಗಳನ್ನು ಮಹಾಕವಿಗಳೆಂದೂ ವಿದ್ವಾಂಸರು ಕರೆದಿದ್ದಾರೆ. ಕನ್ನಡ ಜೈಮಿನಿ ಭಾರತದಲ್ಲಿ ಬರುವ ಯತಿ, ಗಣ, ಪ್ರಾಸ, ಅನುಪ್ರಾಸ, ಯಮಕ ಮೊದಲಾದ ಕಾವ್ಯಾಂಶಗಳನ್ನೂ, ಶ್ಲೇಷ, ಉತ್ಪ್ರೇಕ್ಷೆ, ಉಲ್ಲೇಖ, ಉಪಮೆ, ರೂಪಕ, ದೃಷ್ಟಾಂತ, ಸ್ವಭಾವೋಕ್ತಿ, ಅತಿಶಯೋಕ್ತಿ ಮೊದಲಾದ ಅಲಂಕಾರಗಳನ್ನೂ ನಾವು ಪರಿಶೀಲಿಸಿದಾಗ ಲಕ್ಷ್ಮೀಶನನ್ನು ವಶ್ಯವಾಕ್ಕಾದ ಮಹಾ ಕವಿಯೆಂದು ಧಾರಾಳವಾಗಿ ಒಪ್ಪಕೊಳ್ಳಬಹುದು. ಇವನ ಮಹಾ ಕಾವ್ಯವು ಕಠಿಣವಾದ ನಾರಿಕೇಳಪಾಕವನ್ನೂ, ಅತಿ ಸುಲಭವಾದ ದ್ರಾಕ್ಷಾಪಾಕವನ್ನೂ ಉಳಿದು, ಸುಮಧುರವಾದ ಕದಳೀಪಾಕದಲ್ಲಿ ವಿರಚಿತವಾಗಿರುವುದರಿಂದಲೂ, ಕವಿಯ ಪ್ರತಿಭೆ, ಪಾಂಡಿತ್ಯ, ದೈವಭಕ್ತಿ, ಲೋಕಾನುಭವ, ಉದಾರಭಾವನೆಗಳ ಫಲವಾಗಿ ಕಾವ್ಯವು ಪ್ರಾಸಾದಿಕ ಶೈಲಿಯಿಂದ ಕೂಡಿರುವುದರಿಂದಲೂ ಈ ಕಾವ್ಯವು ವಾಚಕರಿಗೂ ಶ್ರೋತೃಗಳಿಗೂ ಅಮೃತಪಾನಮಾಡಿದಂತೆ ಸಂತೋಷವನ್ನುಂಟುಮಾಡುತ್ತದೆ.

ಸಾಹಿತ್ಯ ಪ್ರಪಂಚದ ಪರಿಚಯವುಳ್ಳವರಿಗೆ ಒಬ್ಬೊಬ್ಬ ಮಹಾಕವಿಯು ಒಂದೊಂದು ವಿಚಾರದಲ್ಲಿ ಗಣ್ಯತೆಯನ್ನು ಪಡೆದಿರುವನೆಂಬುದು ತಿಳಿದ ವಿಚಾರ. ಸಂಸ್ಕೃತ ಕವಿಗಳಲ್ಲಿ ಭಾಸನು ವಿನೂತನ ಪ್ರತಿಭೆಗೂ, ಕಾಳಿದಾಸನು ರಸಜ್ಞತೆಗೂ, ಬಾಣಭಟ್ಟನು ವರ್ಣನೆಗಳಿಗೂ, ಭವಭೂತಿಯು ಗಂಭೀರಶೈಲಿಗೂ ಹೆಸರಾಗಿರುವರೆಂಬುದು ಪಂಡಿತರಿಗೆ ತಿಳಿದಿರುವ ಸಂಗತಿ. ಅಂತೆಯೇ ಕನ್ನಡ ವಾಙ್ಮಯದಲ್ಲಿ ಆದಿ ಪಂಪನು ಗಂಭೀರ ಭಾವನೆಗಳಿಗೂ, ಕವಿಚಕ್ರವರ್ತಿ ರನ್ನನು ರಸನಿರೂಪಣೆಗೂ, ಅದರಲ್ಲಿಯೂ ವೀರರಸ ಪ್ರತಿಪಾದನೆಗೂ, ಕನ್ನಡ ಜಾಣ ಹರಿಹರನು ಭಕ್ತಿರಸ ಪ್ರತಿಪಾದನೆಗೂ, ರಾಘವಾಂಕನು ಅನ್ಯಾದೃಶ ಕರುಣರಸಕ್ಕೂ, ಷಡಕ್ಷರದೇವನು ಮಿಗಿಲಾದ ಶೃಂಗಾರ ವಿಲಾಸಗಳಿಗೂ, ಕುಮಾರವ್ಯಾಸನು ಸುಂದರ ಪಾತ್ರಸೃಷ್ಟಿಗೂ ಪ್ರಾಮುಖ್ಯತೆಯನ್ನು ಪಡೆದಿರುವರೆಂಬ ವಿಚಾರ ಪ್ರಖ್ಯಾತವಾದುದು. ಆದರೆ, ಮಹಾಕವಿ ಲಕ್ಷ್ಮೀಶನಲ್ಲಿ ಈ ಮೇಲೆ ಕಂಡ ಎಲ್ಲ ಸದಂಶಗಳೂ ಒಟ್ಟುಗೂಡಿರುವುದು ಆಶ್ಚರ‍್ಯಕರವೂ ಅನ್ಯಾದೃಶವೂ ಆದ ಸಂಗತಿಯಾಗಿದೆ. ಈ ವೈಶಿಷ್ಟ್ಯದಿಂದಲೇ ಕವಿಯು ಹೆಚ್ಚು ಜನಪ್ರಿಯನಾಗಿದ್ದಾನೆ. ಕನ್ನಡ ಜೈಮಿನಿಯು ಪಂಪ ಭಾರತದಂತೆ ಗಂಭೀರ ಶೈಲಿಯಿಂದ ಕೂಡಿಯೂ, ಗದಾಯುದ್ಧದಂತೆ ವೀರರಸ ಪ್ರಚೋದಕವಾಗಿಯೂ, ಗಿರಿಜಾಕಲ್ಯಾಣದಂತೆ ಭಕ್ತಿರಸ ಬಂಧುರವಾಗಿಯೂ, ಹರಿಶ್ಚಂದ್ರ ಕಾವ್ಯದಂತೆ ಕೋಡಿವರಿವ ಕರುಣರಸದಿಂದ ಕೂಡಿಯೂ,  ಕನ್ನಡ ಭಾರತದಂತೆ ಸ್ವಾರಸ್ಯವಾದ ಪಾತ್ರಸೃಷ್ಟಿಭರಿತವಾಗಿಯೂ, ಷಡಕ್ಷರದೇವನ ರಾಜಶೇಖರದಂತೆ ಶೃಂಗಾರ ವಿಲಾಸಮಯವಾಗಿಯೂ ಕಂಗೊಳಿಸುತ್ತಿದೆ. ಜೇನುತುಪ್ಪದಲ್ಲಿ ಎಲ್ಲ ಹೂವುಗಳ ರಸವೂ ಒಟ್ಟುಗೂಡಿರುವಂತೆ ಕನ್ನಡ ಜೈಮಿನಿ ಭಾರತದಲ್ಲಿ ಎಲ್ಲ ರಸಗಳೂ, ಎಲ್ಲ ಭಾವಗಳೂ, ಎಲ್ಲ ಗುಣಗಳೂ ಒಟ್ಟುಗೂಡಿವೆ. ಅದುದರಿಂದಲೇ ಕನ್ನಡ ಜೈಮಿನಿಯು ಸಹೃದಯರ ಹಾಗೂ ಪಂಡಿತರ ಕರ್ಣಕಮನೀಯ ಕಾವ್ಯವೆನಿಸಿದೆ.

ಲಕ್ಷ್ಮೀಶನು ಕನ್ನಡ-ಸಂಸ್ಕೃತ ಭಾಷೆಗಳೆರಡರಲ್ಲಿಯೂ ಅದ್ವಿತೀಯ ಪಂಡಿತನಾಗಿದ್ದನು. ಕನ್ನಡ ಭಾಷೆಯ ಬೆಡಗು-ಬಿನ್ನಾಣಗಳನ್ನೂ, ಸಂಸ್ಕೃತ ಸಾಹಿತ್ಯದ ಗಾಂಭೀರ‍್ಯ-ಮಾಧುರ‍್ಯಗಳನ್ನೂ ಚೆನ್ನಾಗಿ ಬಲ್ಲವನಾಗಿದ್ದನು. ಅವನ ಕಾವ್ಯದಲ್ಲಿ ಪ್ರಾಸಾದಿಕ ಗುಣವೇ ಅಲ್ಲದೆ ಪಾಂಡಿತ್ಯದ ಪ್ರಭಾವವೂ ಎದ್ದು ಕಾಣುತ್ತದೆ. ಅನು ಉಭಯ ಕವಿತಾವಿಶಾರದನಷ್ಟೇ ಅಲ್ಲ; ವಿದ್ವತ್ಕವಿಯೂ ಅಹುದು. ಒಬ್ಬ ಸುಭಾಷಿತಕಾರನು ಹೇಳುವಂತೆ, “ವಿದ್ವತ್ಕವಯಃ ಕವಯಃ |  ಕೇವಲ ಕವಯಸ್ತು ಕೇವಲಂ ಕಪಯಃ ||  ಕುಲಜಾ ಜಾಯಾ ಜಾಯಾ |  ಕೇವಲ ಜಾಯಾತು ಕೇವಲಂ ಮಾಯಾ||” – ಅಂದರೆ ‘ವಿದ್ವತ್ತಿನಿಂದ ಕೂಡಿದ ಕವಿಗಳೇ ನಿಜವಾದ ಕವಿಗಳು. ಏನೋ ಕವಿಗಳಾದವರು ಕೇವಲ ಕಪಿಗಳೇ ಸರಿ. ಸತ್ಕುಲ ಪ್ರಸೂತಳಾದ ಪತ್ನಿಯೇ ನಿಜವಾದ ಪತ್ನಿ. ಕೇವಲ ಪತ್ನಿಯಾದವಳು ಶುದ್ಧ ಮಾಯೆ’ ಎಂಬಂತೆ ಸಂಸ್ಕೃತ ಮತ್ತು ಪಾಂಡಿತ್ಯಗಳೆರಡರಿಂದ ಕೂಡಿದವರು ಮಹಾಕವಿಗಳೆನಿಸಿಕೊಳ್ಳತ್ತಾರೆ. ದೇಶಾಟನ, ಪಂಡಿತ ಭಾಷಣ, ಪ್ರಾಚೀನ ಕಾವ್ಯಪಠಣ ಇವುಗಳಿಂದ ಕವಿಯ ಜ್ಞಾನವು ವಿಕಾಸಗೊಳ್ಳುತ್ತದೆ. ಈ ಪಾಂಡಿತ್ಯಕ್ಕೆ ಭಗವಂತನ ಅನುಗ್ರಹವೂ ಕೂಡಿದರೆ ಚಿನ್ನಕ್ಕೆ ಸುವಾಸನೆ ಬಂದಂತೆ; ಹಾಲಿಗೆ ಸಕ್ಕರೆ ಸೇರಿದಂತೆ, ಕವಿಯ ಕಾವ್ಯ ಲೋಕೋತ್ತರವೆನಿಸುತ್ತದೆ. ಲಕ್ಷ್ಮೀಶನು ಇಂತಹ ಉನ್ನತಮಟ್ಟದ ಕವಿ ಎನಿಸಿದ್ದಾನೆ. ಅವನ ಕನ್ನಡ ಭಾಷಾ ಪಾಂಡಿತ್ಯವನ್ನು ಇಲ್ಲಿ ಕಾಣಬಹುದು.

ಕೊಡೆಯೆಂಬರಾತ ಪತ್ರವನುದರ ದೇಶಮಂ |
ಪೊಡೆಯೆಂಬರೊಲಿದು ಮಂಥನವನೆಸೆಗೆಂಬುದಂ |
ಕಡೆಯೆಂಬರಾರಡಿಯ ನಳಿಯೆಂಬರುದಕಪ್ರವಾಹಮಂ ತೊರೆಯೆಂಬರು ||
ಮಡಿಯೆಂಬರಂಬರದ ಧೌತಮಂ ಕಬರಿಯಂ |
ಮುಡಿಯೆಂಬರೆಡವಿಡದೆ ಮುಸುಕಿರ್ದ ಮೇಘಮಂ |
ಜಡಿಯೆಂಬರುರುಶಿಲೆಯ ನರೆಯೆಂಬರಲ್ಲದಿವನುಡಿಯರವನ್ನಾಳ್ವಿಳೆಯೊಳು ||
(ಸಂ.. . .)

ಈ ಮೇಲಿನ ಪದ್ಯದಲ್ಲಿ ಕೊಡೆ, ಪೊಡೆ, ಕಡೆ, ಅಳಿ, ತೊರೆ, ಮಡಿ, ಮುಡಿ, ಜಡಿ, ಅರೆ*ಎಂಬ ಕನ್ನಡ ಶಬ್ದಗಳನ್ನು ಎರಡರ್ಥ ಬರುವಂತೆ ಕವಿ ಹೇಳಿದ್ದಾನೆ. ಈ ಶಬ್ದಗಳಿಗೆ ಒಂದು ವಿಧವಾದ ಕೆಟ್ಟ ಅರ್ಥಗಳಿದ್ದರೂ ಧರ‍್ಮರಾಜನ ರಾಜ್ಯದ ಜನರು ಈ ಶಬ್ದಗಳನ್ನು ಒಳ್ಳೆಯ ಅರ್ಥದಲ್ಲಿಯೇ ಬಳಸುತ್ತಾರೆ ಎಂದು ಕವಿ ಹೇಳಿದ್ದಾನೆ. ಇದರಿಂದ ಲಕ್ಷ್ಮೀಶನು ಕನ್ನಡ ಜಾಣನೆಂಬುದು ಸಿದ್ಧವಾಗುತ್ತದೆ.

ಲವನು ಸೂರ‍್ಯನನ್ನು ಸ್ತೋತ್ರಮಾಡುವ ಮತ್ತೊಂದು ಸಂದರ್ಭದಲ್ಲಿ ಕನ್ನಡ ಛಂದಸ್ಸಾದ ಷಟ್ಟದಿಯಲ್ಲಿ ಶುದ್ಧ ಸಂಸ್ಕೃತ ಭಾಷೆಯಲ್ಲಿ ಪದ್ಯವನ್ನು ಬರೆದು ತನ್ನ ಗೀರ‍್ವಾಣ ಭಾಷಾ ಪಾಂಡಿತ್ಯವನ್ನು ಕವಿಯು ವ್ಯಕ್ತಪಡಿಸಿದ್ದಾನೆ. ಅದನ್ನಿಲ್ಲಿ ನೋಡಬಹುದು.

ಮಿತ್ರಾಯ ಸೂರ‍್ಯಾಯ ಹಂಸಾಯ ಪೂಷ್ಣೇ ಸ |
ವಿತ್ರೇ ಜಗಚ್ಚಕ್ಷುಷೇ ಚಂಡಘೃಣಯೇ ಪ |
ವಿತ್ರಾಯ ಪಿಂಗಾಯ ಪುರಷಾಯ ಭಾವವೇ ಜ್ಯೋತಿಷೇ ಭಾಸ್ಕರಾಯ ||
ಸತ್ರೈಕ ರೂಪಾಯ ವಿಮಲಾಯ ವಿಶ್ವರ |
ಕ್ಷಿತ್ರೇ ಸಹಸ್ರ ಕಿರಣಾಯ ರವಯೇ ಮಂದ |
ಪಿತ್ರೇ ದಿವಾಕರಾಯ ಬ್ರಹ್ಮವಿಷ್ಣು ರುದ್ರಾತ್ಮನೇ ತುಭ್ಯಂ ನಮಃ || (ಸಂ.೨೦. . ೪೦.)

ಈ ಮೇಲಿನ ಪದ್ಯದಲ್ಲಿ ಕವಿಯು ಕನ್ನಡದಷ್ಟೇ ಧಾರಾಳವಾಗಿ ಸಂಸ್ಕೃತದಲ್ಲಿಯೂ ಕವಿತೆಯನ್ನು ಬರೆಯಬಲ್ಲನೆಂಬುದಕ್ಕೆ ನಿದರ್ಶನವಿದೆ. ಷಡಕ್ಷರದೇವ ಮೊದಲಾದ ಉದ್ದಾಮ ಕವಿಗಳ ರಾಜಶೇಖರ ವಿಳಾಸ ಮೊದಲಾದ ಕಾವ್ಯಗಳಲ್ಲಿ ಇಂತಹ ಉಭಯ ಭಾಷಾಪಾಂಡಿತ್ಯ ಪೂರ್ಣ ಕವಿತಾ ಪ್ರಯೋಗಗಳನ್ನು ನಾವು ಕಾಣಬಹುದು.

ಕವಿಜೈತ್ರವನಚೂತನಾದ ಲಕ್ಷ್ಮೀಶನು ಉಚಿತ ಪದಪ್ರಯೋಗಗಳಿಗೂ, ಬಿಗಿಯಾದ ಪ್ರಾಸ, ಮಧುರವಾದ ಯತಿಗಳ ಹೊಂದಾಣಿಕೆಗೂ ಹೆಸರಾಗಿದ್ದಾನೆ. ಚಂದ್ರಹಾಸನ ಕಥೆಯಲ್ಲಿ ರಾಜಪುತ್ರಿ-ಮಂತ್ರಿಪುತ್ರಿಯರ ಜತೆಯಲ್ಲಿ ಬಂದ ತರುಣಿಯರು “ಕಳೆದುಳಿದ ರನ್ನೆಯರ್” (ಸಂ. ೩೦, ಪ.೩) ಎಂದು ಹೇಳುವಲ್ಲಿ ವನಕ್ಕೆ ಬಂದ ಆ ತರುಣಿಯರು ಬಾಲ್ಯವನ್ನು ಕಳೆದು, ವೃದ್ಧತ್ವವನ್ನುಳಿದು ಕೇವಲ ಯೌವನದಿಂದ ಅಥವಾ ಏರುಂಜಾವ್ವನದಿಂದ ಕೂಡಿದ್ದರೆಂಬುದು ಕವಿಯ ತಾತ್ಪರ‍್ಯ. ಧರ‍್ಮರಾಜನು ವೇದವ್ಯಾಸರಲ್ಲಿ ಮಾತನಾಡುವಾಗ “ರಾಜಕುಲದ ನೃಪರ ಸಾಧುಚಾರಿತ್ರಮೆನ್ನಿಂದೆ ಸೊಗಡಾಗದಂತೆ ಆದರಿಸಿ ನೀವೆ ಕಾರುಣ್ಯದಿ ಮಾಳ್ಪುದು ಶುಭೋದಯವನು.” (ಸಂ.೨, ಪ. ೨೪) ಎಂದು ಹೇಳಲಾಗಿದೆ. ಇಲ್ಲಿ ಬಂದಿರುವ “ಸೊಗಡು” ಎಂಬ ಶಬ್ದವು ಆ ಸಂದರ್ಭಕ್ಕೆ ಅತ್ಯಂತ ಉಚಿತವಾಗಿದೆ. ಇಂತಹ ನೂರಾರು ಉಚಿತ ಪದ ಪ್ರಯೋಗಗಳನ್ನು ನಾವು ಈ ಕಾವ್ಯದಲ್ಲಿ ಓದಬಹುದು.

ದುಷ್ಟಬುದ್ಧಿಯು ತನ್ನ ಮಗ ಮದನನಿಗೆ ಬರೆದ ಪತ್ರದಲ್ಲಿ “ಮಹಾಹಿತ” (ಮಹಾಅಹಿತ) “ಸರ‍್ವಥಾಮಿತ್ರನಪ್ಪಂ” (ಸರ‍್ವಥಾ-ಅಮಿತ್ರನಪ್ಪಂ) “ಸಾಮಾನ್ಯದವನಲ್ಲ” (ಅಸಾಧಾರಣ ಪುರುಷ, ಮುಂದೆ ಇವನಿಂದ ತೊಂದರೆ ಬರುವ ಸಂಭವವಿದೆ) ಇತ್ಯಾದಿ ಮಾತುಗಳನ್ನು ಕವಿಯು ತಂಬಾ ಸ್ವಾರಸ್ಯವಾಗಿ ಉಪಯೋಗಿಸಿದ್ದಾನೆ. “ಮರುಳಹರೆ ಭೂಪಾಲ ಬಾದರಾಯಣನಿಕ್ಕಿದುರುಳ ಕಣ್ಣಿಗೆ” (ಸಂ.೨, ಪ.೫೬) ಎಂದು ಶ್ರೀ ಕೃಷ್ಣನುಹೇಳುವ ಮಾತೂ, “ಅಹಾ ಮಹಾದೇವ ಚಿತ್ರವಂ ಕೇಳಿದೆವಲಾ, ಕರಡಿಯ ಮಗಳನಾಳ್ದ ನಿನಗೋಹೋ ಧರೆಯೊಳದ್ಭುತಾಕಾರರಾರೊ” (ಸಂ.೨, ಪ. ೫೯) ಎಂಬಲ್ಲಿ ಕವಿಯು ಉಪಯೋಗಿಸಿರುವ ಮಾತುಗಳೂ, “ನೋಡಿದಂ ನಾರದ ಮುನೀಂದ್ರನೀ ಕೌತುಕವಂ ಸತ್ಯಭಾಮೆಯ ಮನೆಗೆ ಬಂದು” (ಸಂ.೩೩. ಪ. ೪೭) “ನಿನ್ನ ಸಂತಸದೇಳ್ಗೆಗೆ ಖಂಡನಂ ಮಾಳ್ಪುದು ಅನನದಿರವು” (ಸಂ.೨, ಪ.೧೫) “ಚಕ್ರಿಗಭಿಮುಖನಾದ ಬಳಿಕಲ್ಲಿ ಮುಕ್ತಿಯಲ್ಲದೆ ಬೇರೆ ಜಯಮುಂಟೆ” (ಸಂ. ೧೧, ಪ. ೧೩) “ಈ ಪುರದ ಸಕಲನಾರೀಗಣಂ ಪತಿವ್ರತಾಶೀಲಮಂ ತಾಳ್ದೆಸೆವುದು” (ಸಂ. ೧೭, ಪ. ೧೬) “ತಾಯೆ ನೀನೇತಕೆಳೆಸಿದೆ ನಿನ್ನನೀಗ ರಘರಾಯಂ ತಪೋವನಕೆ ಕಳುಹಿ ಬರಹೇಳಿದಂ” (ಸಂ. ೧೮, ಪ. ೬೧) “ಜಾನಕಿಯ ಕಣ್ಗೆ ತೋರಿತು ಸನ್ನುತ ರಘೂದ್ವಹನ ಕೀರ್ತಿಯೆನೆ ಪರಿವ ದಿವಿಜನದಿ” (ಸಂ.೧೯, ಪ.೪) “ಕೊಯ್ಯಲೊಲ್ಲದೆ ಕೊರಳನಿಂತು ತನ್ನಂ ಬಿಡಲ್ ಮಾಡಿದಪರಾಧಮುಂಟೆ” (ಸಂ.೧೯, ಪ. ೧೭) ಇತ್ಯಾದಿ ಭಾವಪೂರ್ಣವಾದ ಪ್ರಯೋಗಗಳು ಕವಿಯ ಪ್ರತಿಭೆಗೂ ರಸಜ್ಞತೆಗೂ ಲೋಕಾನುಭವಕ್ಕೂ ನಿದರ್ಶನವೆನಿಸಿವೆ.

‘ಕವಿಯು ಜನಾಂಗದ ಪ್ರತಿನಿಧಿ. ಜನತಾ ಸಂಸ್ಕೃತಿಯ ಸಂರಕ್ಷಕ. ಕವಿಯೇ ಹಿಂದಿನ ಮತ್ತು ಮುಂದಿನ ಜನಗಳ ಸಂಬಂಧದ ಪ್ರೇಮತಂತು. ಕವಿಯು ಜನತೆಯ ಮಾರ್ಗದರ್ಶಕನೂ ಅಹುದು. ನಾಡಿನ ಸಂರಕ್ಷಕನೂ ಅಹುದು. ಅದು ಕಾರಣವೇ “ನಾನೃಷಿಃ ಕುರುತೇಕಾವ್ಯಂ” ಎಂಬ ವಾಕ್ಯವು ಪ್ರಸಿದ್ಧವಾಗಿರುವುದು. “ಕವಿಯೇ ಸರ‍್ವರೊಳುತ್ತಮಂ,” ಎಂದು ಕವಿ ಸೋಮನೂ, “ಶಾಪಾನು ಗ್ರಹ ಸಮರ್ಥರಲ್ಲವೆ ಕವಿಗಳ್” ಎಂದು ನೇಮಿಚಂದ್ರನೂ ಹೇಳಿದ್ದಾರೆ. “ಜನ ಬದುಕಲೆಂದು” ಕವಿಗಳು ಕಾವ್ಯಗಳನ್ನು ಬರೆಯುತ್ತಾರೆ. ಅದು ಕಾರಣವೇ ಕವಿಗಳನ್ನು ನಮ್ಮ ದೇಶದ ರಾಜಾಧಿರಾಜರೂ, ಮಹಾಜನಗಳೂ ಇತಿಹಾಸ ಕಾಲದಿಂದ ಸನ್ಮಾನಿಸಿಕೊಂಡು ಬಂದಿದ್ದಾರೆ. ಭೋಜರಾಜನು ಕಾಳಿದಾಸನ ಪ್ರತಿಭೆಗೆ ಮಾರುಹೋದನೆಂದೂ, ಶ್ರೀಕೃಷ್ಣದೇವರಾಯನು ಮಹಾಕವಿ ಅಲಸಾನಿ ಪೆದ್ದಣ್ಣನನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಅದಕ್ಕೆ ತನ್ನ ಹೆಗಲುಕೊಟ್ಟು ಕವಿಯನ್ನು ಗೌರವಿಸಿದನೆಂದೂ, ಚಿಕ್ಕದೇವರಾಜನು ಕವಿ ತಿರುಮಲಾರ‍್ಯನನ್ನು ತನ್ನ ಮಂತ್ರಿಯನ್ನಾಗಿ ಮಾಡಿಕೊಂಡನೆಂದೂ ನಮ್ಮಲ್ಲಿ ಕಥೆಗಳಿವೆ. ಹೀಗೆ ಮಾಡಿದುದರಿಂದ ಜನ ತಮ್ಮನ್ನು ತಾವೇ ಉದ್ಧರಿಸಿಕೊಂಡಂತಾಗುತ್ತದೆ. ಆ ದೃಷ್ಟಿಯಿಂದ ಸುಕವಿ ಲಕ್ಷ್ಮೀಶನನ್ನು ಪೂಜಿಸಿ, ಪ್ರೀತಿಸಿಕೊಂಡು ಬಂದ ಕನ್ನಡ ಜನ ಒಳ್ಳೆಯ ಸಂಪ್ರದಾಯವನ್ನೇ ನಡೆಸಿದ್ದಾರೆನ್ನಬಹುದು.

ಸಾಹಿತ್ಯವು ಜನಾಂಗದ ಜೀವನಾಡಿ, ಸಮಾಜ ಜೀವನದ ಪ್ರತಿಬಿಂಬ. ಒಂದು ದೇಶದ ನಾಗರಿಕತೆಯನ್ನು ಆ ದೇಶದ ಸಾಹಿತ್ಯಾವಲೋಕನದಿಂದ ಸುಲಭವಾಗಿ ಅರಿಯಬಹುದು ಎಂಬುದು ಪ್ರಾಜ್ಞರ ಮತ. ಸಂಸ್ಕೃತಿಯು ಸಮಾಜದ ಪ್ರಾಣ. ಅಂತಹ ಪ್ರಾಣದ ಸಂರಕ್ಷಣೆಗೆ ಸಾಹಿತ್ಯೋದ್ಧಾರವೇ ಒಳ್ಳೆಯ ದಾರಿ. ‘ಸಾಹಿತ್ಯವು ಸಮಕಾಲೀನ ಜನರ ರನ್ನಗನ್ನಡಿ” (Literature is the golden mirror of contemporary society)  ಎಂಬ ಸ್ವಾಮಿ ವಿವೇಕಾನಂದರ ಮಾತು ಈ ಅರ್ಥವನ್ನೇ ಸಮರ್ಥಿಸುತ್ತದೆ. ಉತ್ತಮ ಸಾಹಿತ್ಯಕ್ಕೆ ಜೈಮಿನಿ ಭಾರತದಂತಹ ಗ್ರಂಥರತ್ನಗಳೇ ಅಂತಃಕರಣಗಳು. ಅಂದಮೇಲೆ ಇಂತಹ ಕಾವ್ಯಕರ್ತೃಗಳು ನಮ್ಮ ನಾಡಿಗೆ ಮಾಡಿರುವ ಉಪಕಾರವೆಷ್ಟೆಂಬುದನ್ನು ನಾವು ಅನುಭವದಿಂದ ಮನಗಾಣಬಹುದು. ಆ ಕವಿಗಳ ಉಪಕಾರವನ್ನು ಸ್ಮರಿಸಿ ಅವರಿಗೆ ನಮ್ಮ ಭಕ್ತಿಕಾಣಿಕೆ ಅರ್ಪಿಸಬಹುದು.

“ಬಹುತರ ಜನ್ಮ ಕೋಟಿಗಳೊರ್ಜಿಸಿದುತ್ತಮ ಪುಣ್ಯದೇಳ್ಗೆಯಿಂ | ಮಹಿಯೊಳೆ ಸತ್ಕವಿತ್ವದಿವಿಷನ್ಮಣಿ ಸಾರ್ಗುಂ” ಎಂದು ಷಡಕ್ಷರಕವಿ ಹೇಳಿದ್ದಾನೆ. ಶಾಸ್ತ್ರವೆಂಬ ಶ್ರೀರೋಹಣಗಿರಿಯನ್ನು ಕವಿ-ಪಂಡಿತ-ಗಮಕಿ-ವಾದಿ-ವಾಗ್ಮಿ-ರಸಿಕ-ಸಹೃದಯ ಮೊದಲಾದವರೆಲ್ಲರೂ ಹತ್ತುತ್ತಾರೆ. ಆದರೆ ಅಲ್ಲಿರುವ ಚಿಂತಾರತ್ನವು, ಅಂದರೆ ಕವಿತಾನಾಮಕ ರತ್ನವು “ಮಾರಾರಿಯ ಕೃಪೆಯಿಲ್ಲದಂಗೆ ಕೊರೆಗುಮೆ”? ಎಂದು ಕವಿ ಷಡಕ್ಷರನು ಕೇಳುತ್ತಾನೆ. ಭಗವಂತನ ಹಾಗೂ ಶರಣರ ಸೇವೆಗೆ ವಿಸಾಲಾಗದ ಕವಿತೆ ‘ನಿರರ್ಥಕ’ ಎಂದು ಆತ ಹೇಳುತ್ತಾನೆ. ಆದ್ದರಿಂದಲೇ “ನುತಿಸೆನುಳಿದ ಸರರಂ ನರರಂ” ಎಂದು ಷಡಕ್ಷರನು ಹೇಳಿದ್ದಾನೆ. ತನ್ನ ನಾಲಗೆಯನ್ನು ಸಾರ್ಥಕಪಡಿಸಿಕೊಳ್ಳಲು ಅದನ್ನು “ಅಭವಂಗೆ ಮಾರಿದೆಂ” ಎಂದು ಮಹಾಕವಿ ಸುರಂಗನು ಹೇಳುತ್ತಾನೆ. ಇಂತಹ ಶರಣಕವಿಗಳ ಸಂಪ್ರದಾಯದಲ್ಲಿಯೇ ಲಕ್ಷ್ಮೀಶನು ತನ್ನ ಸರ‍್ವಸ್ವವನ್ನೂ ಸುರಪುರದ ಲಕ್ಷ್ಮೀರಮಣನಿಗೆ ಒಪ್ಪಿಸಿ ತಾನು ಆ ಭಗವಂತನ ಕೈವೀಣೆಯಾಗಿ ಭಗವಂತನನ್ನೂ, ಮಯೂರಧ್ವಜ, ಚಂದ್ರಹಾಸ, ಯುಧಿಷ್ಠಿರಾದಿ ಭಾಗವತರನ್ನೂ ಅಭಿವರ್ಣಿಸಿ ತನ್ನ ಕವಿತೆಯನ್ನೂ, ಜೀವನವನ್ನೂ, ಸಾರ್ಥಕಪಡಿಸಿ ಕೊಂಡಿದ್ದಾನೆ. ತನ್ನ ಅಮರ ಸಂದೇಶವನ್ನು ಸದಾ ಸಾರುತ್ತಾ ಕನ್ನಡನಾಡನ್ನು ಸೂರ್ತಿಗೊಳಿಸಿದ್ದಾನೆ. ಕನ್ನಡ ಸಾಹಿತ್ಯವನ್ನು ಪ್ರಕಾಶಗೊಳಿಸಿದ್ದಾನೆ.

ಈ ಎಲ್ಲ ಕಾರಣಗಳಿಂದ ಲಕ್ಷ್ಮೀಶನು ತನ್ನ ಕಾವ್ಯದಲ್ಲಿ ಚಿತ್ರಿಸಿರುವ ಭಾವನೆಗಳೆಲ್ಲಾ ೧೬ನೇ ಶತಕದ ಸುಭಿಕ್ಷವಾದ ಕರ್ಣಾಟಕದ ಜನರ ಭಾವನೆಗಳೆನ್ನಬಹುದು ; ವಿಜಯನಗರದ ಕಾಲದ ದೇಶಾಭಿಮಾನಪೂರ್ಣ ವಿಚಾರಗಳೆನ್ನಬಹುದು; ಕನ್ನಡ ಜನತೆಯ ಜೀವನ ಸಾರಸರ‍್ವಸ್ವವೆನ್ನಬಹುದು ; ಭಾಗವತ ಧರ್ಮದ ಅಮರ ಸಂದೇಶವೆನ್ನಬಹುದು.

ಕಾವ್ಯಗಳ ಉದ್ದೇಶವು ಜನತೆಗೆ ವಿವೇಕವನ್ನೂ, ಆನಂದವನ್ನೂ ಏಕ ಕಾಲದಲ್ಲಿ ಉಂಟುಮಾಡುವುದು. ಈ ಅರ್ಥವನ್ನೇ ಕವಿರಾಜಮಾರ್ಗದಲ್ಲಿ (೧-೧೮).

ಪಾಪಮಿದು ಪುಣ್ಯಮಿದು ಹಿತ |
ರೂಪ ಮಿದಹಿತ ಪ್ರಕಾರಮಿದು ದುಃಖೋ ||
ಪಾತ್ತಮಿದೆಂದರಿಪುಗು |
ಮಾ ಪರಮ ಕವಿ ಪ್ರಧಾನರಾ ಕಾವ್ಯಂಗಳ್ ||”  ಎಂದು ನೃಪತುಂಗನು ಹೇಳಿದ್ದಾನೆ.

ಮಹಾಕವಿ ಪಂಪನು “ಆದಿಪುರಾಣದೊಳರಿವುದು ಕಾವ್ಯ ಧರ್ಮಮಂ ಧರ್ಮಮುಮುಂ” (ಅ.೧, ಪ.೩೮) ಎಂದು ಹೇಳಿ ಮಹಾಕಾವ್ಯಗಳಲ್ಲಿ ಧರ್ಮವನ್ನೂ ಕಾವ್ಯಧರ್ಮವನ್ನೂ ಜತೆಜತೆಯಲ್ಲಿ ನಿರೂಪಿಸುವುದು ಕವಿಯ ಕರ್ತವ್ಯವೆಂದು ಹೇಳಿದ್ದಾನೆ.

ಸತ್ಕಾವ್ಯವು ಸಹೃದಾನಂದದಾಯಕವೆನಿಸಬೇಕು. ಹರೀಶ್ವರನು ತನ್ನ ಗಿರಿಜಾ ಕಲ್ಯಾಣದಲ್ಲಿ ಹೇಳುವಂತೆ (ಅ.೧, ಪ. ೨೧).

ಕೇಳಲೊಡಂ ಕಿವಿ ಸವಿಯೊಳ |
ಗಾಳದೊಡಂ ತನ್ನನಂ ಮುಳುಂಗದೊಡಂ ಸೌ ||
ಖ್ಯಾಲಂಬಿಯೆನಿಪ ಚಿತ್ತಂ |
ಲೀಲೆಯೊಳವಗಾಹ ಮಿರದೊಡದು ಸತ್ಕೃತಿಯೇ || “

ಎಂಬಂತೆ ಕಾವ್ಯವು ಕೇಳಿದವರ ಕಿವಿ ಮನಗಳನ್ನು ಸೂರೆಗೊಂಡು ಚಿತ್ತಾನಂದವನ್ನುಂಟುಮಾಡುವಂತಿರಬೇಕು. ಈ ಎಲ್ಲ ವಿಚಾರಗಳನ್ನೂ ಜೈಮಿನಿಯ ಕವಿ ತನ್ನ ಹೆಗ್ಗುರಿಯಾಗಿ ಉಳ್ಳವನಾಗಿದ್ದಾನೆ. “ಧರೆಯೊಳಾರಾಜಿಸುವ ಕನ್ನಡದ ನುಡಿಗಳ ಬಗೆಯರಿದವರಾವಲಕ್ಷಣದಿಂದೆ ಮುನ್ನ ಕಬ್ಬಗಳನುಸುರಿದರದೇ ಲಕ್ಷ್ಯಮಲ್ಲದೆ ಪೆರತೆನಗೆ ಸಲ್ಲದು” (೧-೧೧) ಎಂದು ಗಂಭೀರವಾಗಿ ಹೇಳಿದ್ದಾನೆ. ಹೀಗೆ ಕರ್ಣಾಟಕದ ಮಹಾಕವಿ ಪರಂಪರೆಯಲ್ಲಿ ಬೆಳೆದು ಬಂದ ಸುಂದರ ಕಾವ್ಯ ಮಾಕಂದ ವೃಕ್ಷವೇ ಕನ್ನಡ ಜೈಮಿನಿ ಭಾರತ. ಆದುದರಿಂದಲೇ ಈ ಕಾವ್ಯ ಮಾಕಂದವು ರಸಿಕರೆಂಬ ಗಿಳಿಗಳನ್ನೂ, ಗಮಕಿಗಳೆಂದು ಕೋಗಿಲೆಗಳನ್ನೂ, ಸಹೃದಯರೆಂಬ ದುಂಬಿಗಳನ್ನೂ, ಜಿಜ್ಞಾನುಸಳೆಂಬ ಪ್ರಾಣಿಜಾಲವನ್ನೂ ಸದಾ ತನ್ನೆಡೆಗೆ ಬರಮಾಡುತ್ತಿರುತ್ತದೆ. ಆದುದರಿಂದಲೇ ‘ಕರ್ಣಾಟ ಕವಿಚೈತ್ರವನಚೂತ’ ಎಂಬ ಬಿರುದು ಈ ಕವಿಗೆ ಅನ್ವರ್ಥವಾಯಿತೆಂದು ವಿದ್ವತ್ಸಭೆಯು ತೀರ್ಮಾನಿಸಿದೆ. ಕನ್ನಡ ಕವಿಗಳ ಚೈತ್ರವನದಲ್ಲಿ ಲಕ್ಷ್ಮೀಶ ಸುಂದರ ಚೂತವೃಕ್ಷವೆನಿಸಿ ಸದಾ ಕಂಗೊಳಿಸುತ್ತಿದ್ದಾನೆ. ತನ್ನ ಸುಶ್ರಾವ್ಯವಾದ ಕಾವ್ಯ ವೀಣೆಯಿಂದ ಕಿವಿಗಿಂಪಾಗಿ ತನ್ನ ಅಮರ ಕಾವ್ಯಗಾನವನ್ನು ಕೇಳಿಸುತ್ತಿದ್ದಾನೆ. ಇಂತಹ ಸುಕೃತವು ಲಕ್ಷ್ಮೀರಮಣನ  ಕೃಪೆ ಇಲ್ಲದವರಿಗೆ ಸಾಧವೆ?

ಈ ಸಂದರ್ಭದಲ್ಲಿ ರಸಿಕ ಚಕ್ರಿ ಹರೀಶ್ವರನು ಹೇಳುವುದು-

ಕಂದ || ಕ್ಷುದ್ರುಂಗೆ ಸಕಲ ಸುಜನೋ |
ಪದ್ರವ ರೂಪಂಗೆ ಪರರ ಕಾವ್ಯಾರ್ಥಮುಮಂ||
ಛಿದ್ರಿಸುವಂಗತಿ ಶಬ್ದದ
ರಿದ್ರಂಗಕ್ಕುಮೆ ನವೀನ ಕಾವ್ಯಾರಂಭಂ ||
(ಗಿರಿಜ ಕಲ್ಯಾಣ. . , . ೨೬)

ಅಲ್ಪತನವುಳ್ಳವನೂ, ಸತ್ಪುರುಷರನ್ನು ಹಿಂಸಿಸುವವನೂ, ಅನ್ಯರ ಕಾವ್ಯಗಳನ್ನು ವಿನಾಕಾರಣ ಟೀಕಿಸುವವನೂ ಶಬ್ದಾರ್ಥ ದರಿದ್ರನೂ ಆದವನಿಗೆ ನವೀನಕಾವ್ಯ ನಿರ್ಮಾಣವು ಸಾಧ್ಯವಿಲ್ಲವೆಂದು ಇದರ ತಾತ್ಪರ‍್ಯ. ಅಂದರೆ, ಕವಿಯು ಋಷಿಯ ಅಂಶೀಭೂತನಾದುದರಿಂದ ಋಷಿಯಂತೆಯೇ ಚಿತ್ತಶುದ್ಧನೂ, ದೈವಭಕ್ತನೂ ಅಗಿರಬೇಕೆಂಬುದು ಇದರ ತಾತ್ಪರ‍್ಯವೆನಿಸಿದೆ.

(Literature is the golden mirror of contemporary society)