“ರವೀ ಬಾರೋ, ಬಾಯಿಪಾಠ ಹೇಳುವಿಯಂತೆ.”

“ಬಾಯಿಪಾಠ? ನಾನೊಲ್ಲೆ. ಪದ್ಯ ಹೇಳಿಕೊಡಿ, ತಾತ.”

“ಹಾಗೇ ಆಗಲಿ ಬಾಪ್ಪ! ಮೊದಲು ಮಗ್ಗಿ ಹೇಳಿ ಆಮೇಲೆ ಪದ್ಯಾನೇ ಹೇಳೋಣವಂತೆ.”

“ರವಿ ತಾತನ ಮಾತಿಗೆ ಒಪ್ಪಿದ. ತಪ್ಪಿಲ್ಲದ ಮಗ್ಗಿ ಒಪ್ಪಿಸಿದ.”

“ನಿನ್ನೆ ಹೇಳಿದೆಯಲ್ಲ ಆ ಕಾಗುಣಿತ! ಅದೂ ಬರುತ್ತೆ. ಹೇಳಲೇ ತಾತ?”

– ಎಂದವನೇ ಕ, ಕಾ, ಕೋ, ಕು….., ತಪ್ಪುತಪ್ಪಾಗಿ ಹೇಳಿದ.

ತಾತಾ ಹೇಳಿದರು;

“ಛೆ, ಛೆ, ಛೇ, ಕೊಂಚ ನಿಧಾನವಾಗಿ ಹೇಳೋ ಮಹಾರಾಯ.”

ಮತ್ತೆ ಅದೇ ಪಾಠ, ಕ, ಕಾ, ಕೋ, ಕು, ರವಿ ಒಪ್ಪಿಸಿದ.

ತಾತ ತಿದ್ದಿ ಸರಿಯಾಗಿ ಹೇಳಿದರು. ಆದರೂ ರವಿಯ ರೈಲು ಹಳಿ ತಪ್ಪಿಯೇ ಹೊರಳುತ್ತಿತ್ತು. ಜೊತೆಗೆ ಆಕಳಿಕೆ ಬೇರೆ.

“ರವಿ, ಈ ಬಾಯಿಪಾಠ ಇನ್ನು ಸಾಕು. ಉಳಿದಿದ್ದು ನಾಳೆ ಮುಂದುವರಿಸೋಣ. ಅಂದಹಾಗೆ ನೀನು ಪದ್ಯ ಹೇಳಿಕೊಡಿ ಅಂದಿದ್ದೆ ಅಲ್ವೆ……?” – ತಾತ ಕೇಳಿದ್ದೇ ತಡ ರವಿ ಛಂಗನೇ ಹಾರಿದ; ತಾತನ ಗಲ್ಲಕ್ಕೆ ಮುತ್ತಿಟ್ಟು, ” ನಮ್ಮ ತಾತ ತುಂಬ ಜಾಣ; ಹೇಳು ತಾತ ಪದ್ಯ” ಅಂದ.

“ತುಂಬಾ ಸಂತೋಷ! ಎಲ್ಲಿ, ನಾನು ಹೇಗೆ ಹೇಳಿಕೊಡುತ್ತೀನೋ ಹಾಗೇ ಹೇಳಬೇಕು. ನಾನು ನಿಲ್ಲಿಸಿದ ಸ್ಥಳದಲ್ಲೇ ನಿಲ್ಲಿಸಬೇಕು. ಆಗಬಹುದೇ?”

“ಓ ಆಗಲಿ, ಹಾಗೇ ಮಾಡುತ್ತೇನೆ.” ರವಿ ಒಪ್ಪಿಸಿದ. ತಾತ ಪದ್ಯವನ್ನು ನಿಧಾನವಾಗಿ ಹೇಳಿಕೊಡತೊಡಗಿದರು. ರವಿ ಹಾಗೇ ಹೇಳಿದ.

“ಕಮಲ ದಳದ ನಯನ
ಕಾಳಿಯ ಮಥನ
ಕಿಸಲಯೋಪಮ ಚರಣ
ಕೀಶಪತಿ ಸೇವ್ಯ
ಕುಜಹರ
ಕೂರ್ಮುಸಮ ಸತ್ಕಪೋಲ್
ಕೇಯೂರಧರ
ಕೈರವ ಶ್ಶಾಮ
ಕೋಕನದ ಗೃಹೇಯ ರಮಣ
ಕೌಸ್ತುಭ ಶೋಭ
ಕಂಬು ಚಕ್ರ ಗದಾಬ್ಜ………
ಕಸ್ತೂರಿಕಾ ತಿಲಕ ಕಾವುದೆಂದು ಅಮಿತ್ ಪ್ರಭಾವ
ಮೂರ್ತಿಯಂ ನುತಿಸಲು
ಆತನಂ ಹರಿನೆಗಪಿದಂ ಕೃಪೆಯೊಳು”

“ತುಂಬ ಚೆನ್ನಾಗಿದೆ ತಾತ ಪದ್ಯ! ಕ-ಕಾ-ಕಿ-ಕೀ, ಓ. ಈ ಪದ್ಯದಲ್ಲಿ ಕಾಗುಣಿತ ಬಂದಿದೆ ಅಲ್ವೆ?”

ಹೌದಪ್ಪಾ ಹೌದು! ಕಾಗುಣಿತ ತಪ್ಪೋರು ಈ ಪದ್ಯ್ ನೆನಪಿಡಬೇಕು.”

“ಇಂತಹ ಪದ್ಯ ಇನ್ನೂ ಇದೆಯಾ ತಾತ?”

“ಇಂತಹುದೇ ಏನು, ಇನ್ನೂ ಚಿತ್ರವಿಚಿತ್ರವಾದ ಚಮತ್ಕಾರ ಪದ್ಯಗಳಿವೆ. ಅವೆಲ್ಲ ನೀನು ನೋಡಬೇಕಾದರೆ “ಜೈಮಿನಿ ಭಾರತ”ವನ್ನು ಓದಬೇಕು.”

ಹೌದೆ? ಜೈಮಿನಿ ಭಾರತ ಅಂದರೇನು? ಅದನ್ನು ಬರೆದವರು ಯಾರು?

“ಮೊದಲು ಜೈಮಿನಿ ಅನ್ನೋ ೠಷಿ ಸಂಸ್ಕೄತದಲ್ಲಿ ಬರೆದ. ಅದನ್ನು ಕನ್ನಡದಲ್ಲಿ ಲಕ್ಷ್ಮೀಶ ಬರೆದಿದ್ದಾನೆ. ಅವನು ಬರೆದ ಭಾರತವು ಕನ್ನಡ ನಾಡಿನ ಹಳ್ಳಿ-ಹಳ್ಳಿಯಲ್ಲಿ ಮನೆಮನೆಯಲ್ಲಿ ಜನಕ್ಕೆ ಚೆನ್ನಾಗಿ ಗೊತ್ತು.”

“ಹೌದೇ? ಹಾಗಾದರೆ ಆ ಲಕ್ಷ್ಮೀಶ ಯಾರು? ಅವನ ಊರು ಯಾವುದು? ಆ ಕಥೆ ಹೇಳು ತಾತ.”

ಕಥೆ ಹೇಳಿದರು

“ಕರ್ನಾಟಕದಲ್ಲಿ ಚಿಕ್ಕಮಗಳೂರು ಜಿಲ್ಲೆ ಇದೆಯಲ್ಲ. ಈ ಜಿಲ್ಲೆಯ ಕಡೂರು ತಾಲ್ಲೂಕಿನವರು ಲಕ್ಷ್ಮೀಶ ಕವಿ. ಕಡೂರಿಗೆ ಬಹು ಹತ್ತಿರದಲ್ಲಿ ದೇವನೂರು ಎಂಬ ಗ್ರಾಮವಿದೆ. ಈ ಊರು ಲಕ್ಷ್ಮೀಶನ ಜನ್ಮಸ್ಥಳ.”

“ಹೌದೇ ತಾತ? ಅಲ್ಲೇ ಹುಟ್ಟಿದವನೆಂದು ಹೇಗೆ ಹೇಳುತ್ತಾರೆ?”

ಅಲ್ಲಿ ಬೇಕಾದಷ್ಟು ಗುರುತುಗಳು ಇವೆಯಪ್ಪಾ. ಬೇಕಾದಷ್ಟು ದಾಖಲೆಗಳಿವೆ. ಕವಿಯ ಕುಲದೇವ ಲಕ್ಷ್ಮೀರಮಣನ ಗುಡಿ ಇದೆ. ಈ ಗುಡಿಯಲ್ಲೇ ಲಕ್ಷ್ಮೀಶ ಕವಿಯ ವಿಗ್ರಹವನ್ನು ಇಟ್ಟಿದ್ದಾರೆ. ಇನ್ನು ಲಕ್ಷ್ಮೀಶನ ಕಾವ್ಯಮಂಟಪ ಬಹಳ ಮುಖ್ಯವಾದುದು. ಅದನ್ನು “ಕವಿ ಕಟ್ಟಿದ ಕಾವ್ಯ ಮಂಟಪ,” ಅನ್ನುವರು. ಎಲ್ಲಕ್ಕೂ ಮುಖ್ಯವಾದುದು ಲಕ್ಷ್ಮೀಶನ ಮನೆದಳ! ನಮ್ಮ ಕವಿ ಇದ್ದದ್ದಕ್ಕೆ ಇದಕ್ಕಿಂತ ಮತ್ತಾವ ಸಾಕ್ಷಿ ಬೇಕು?”

“ಲಕ್ಷ್ಮೀಶ “ಮನೆದಳ” ಅಂದರೆ?”

ಅದೇ ಲಕ್ಷ್ಮೀಶನ್ ಮನೆ ಇದ್ದ ಸ್ಥಳ ಎಂದು ಅರ್ಥ. ಅದು ಸರ್ಕಾರದ ದಾಖಲೆಯಲ್ಲಿ ಇಂದೂ ಇದೆ.”

“ದೇವನೂರಿನಲ್ಲಿ ಇಂದು ನೋಡುವುದು ಏನಿದೆ? ಅಲ್ಲಿಗೆ ಹೋಗುವುದು ಹೇಗೆ?”

“ದೇವನೂರು ಚಿಕ್ಕ ಗ್ರಾಮ. ಮುನ್ನೂರು ಮನೆಗಳಿರಬೇಕು. ಎರಡು ಸಾವಿರ ಒಳಗೆ ಅಲ್ಲಿ ಪ್ರಜಾ ಸಂಖ್ಯೆ. ರೈತರೇ ಹೆಚ್ಚು.”

“ದೇವನೂರ ಜೀವನಾಡಿ ಅಲ್ಲಿಯ ಕೆರೆ, ವಿಶಾಲವಾದ ಆ ಕೆರೆಯ ನೋಟ ನೋಡುವುದೇ ಒಂದು ಚೆನ್ನ. ಇದು ಸುಮಾರು ಒಂದು ಮೈಲಿಗೂ ಮೀರಿ ನಿಲ್ಲುತ್ತದೆ. ಕೆರೆಯನ್ನೇ ತಾಕಿ ನಿಂತಿರುವ ತೋಟ ತುಂಬ ಸುಂದರವಾಗಿದೆ. ಹಣ್ಣುಗಳಿಂದ ತುಂಬಿದ ಮರಗಳು, ಮಾವು ಹುಣಸೇ ಮರಗಳ ಗುಂಪು- ಇವೆಲ್ಲ ಸೇರಿ ದೇವನೂರ ಮುಂದಿನ ದೄಶ್ಯ ಎಷ್ಟು ಚೆನ್ನಾಗಿದೆ ಅಂತೀ!”

“ದೇವನೂರಿಗೆ ರೈಲು ನಿಲ್ದಾಣವಿದೆ. ಬೆಂಗಳೂರಿನಿಂದ ಮುಂಬಯಿಗೆ ಹೋಗುವವರು ಇದನ್ನು ಕಾಣಬಹುದು. ಅಲ್ಲಿಗೆ ಬಸ್ಸಿನಲ್ಲೂ ಹೋಗಬಹುದು.”

“ರವೀ, ಒಟ್ಟಿನಲ್ಲಿ ಹೇಳುತ್ತೇನೆ ಕೇಳು, ಕನ್ನಡಿಗನಾಗಿ ಹುಟ್ಟಿದ ಮೇಲೆ ಕಾಣಲೇಬೇಕಾದ ಊರು ಲಕ್ಷ್ಮೀಶ ಕವಿಯ ದೇವನೂರು!”

“ಈಗ ಕವಿಯ ವಿಚಾರಕ್ಕೆ ಬರೋಣ”

ಇದೇ ನನ್ನ ಆಸೆ”

“ಲಕ್ಷ್ಮೀಶನ ತಂದೆ ಅಣ್ಣಯ್ಯ. ತಾಯಿಯ ಹೆಸರು ತಿಳಿಯದು. ಈ ಅಣ್ಣಯ್ಯನಿಗೆ ಅಣ್ಣಮಾಂಕಾ ಎಂದೂ ಹೆಸರಿದ್ದಿರಬೇಕು. ಇವರ ತಾಯಿ ಸುರಪುರದ ಕಡೆಯವರು. ಸುರಪುರ ಗುಲ್ಬರ್ಗ ಜಿಲ್ಲೆಗೆ ಸೇರಿದೆ.”

“ಅಣ್ಣಯ್ಯ ದಂಪತಿಗಳು ಸುಸಂಸ್ಕೄತರು. ಇವರಿಗೆ ಲಕ್ಷ್ಮೀಕಾಂತನಲ್ಲಿ ಬಹಳ ಭಕ್ತಿ. ಬಹು ಕಾಲದವರೆಗೆ ಮಕ್ಕಳೇ ಆಗಲಿಲ್ಲ. ಇದೊಂದೇ ಅವರಿಗಿದ್ದ ದೊಡ್ಡ ಚಿಂತೆ.”

“ಒಂದು ದಿನ ರಾತ್ರಿ ಕನಸೊಂದು ಬಿತ್ತು.! ಲಕ್ಷ್ಮೀಕಾಂತ ದೇವರೇ ಬಂದಂತೆ ಕನಸು: “ದಂಪತಿಗಳೇ! ನೀವು ಚಿಂತಿಸಬೇಡಿ, ವೇಲಾಪುರಿಯಲ್ಲಿ ವೈಕುಂಠದಾಸರೆಂಬ ಮಹಾತ್ಮರಿದ್ದಾರೆ. ಅವರ ಸೇವೆಮಾಡಿ. ದಾಸರ ಅನುಗ್ರಹದಿಂದ ನಿಮಗೊಬ್ಬ ಸುಕುಮಾರ ಜನಿಸುತ್ತಾನೆ” ಎಂದು ಹೇಳಿದರಂತೆ.

“ಅಣ್ಣಯ್ಯ ದಂಪತಿಗಳು ಹಾಗೆಯೇ ಮಾಡಿದರು. ವೈಕುಂಠದಾಸರು, “ನಿಮಗೆ ನಿಮ್ಮ ಕುಲದೇವರ ಅನುಗ್ರಹವಾಗಿದೆ. ಇದೋ ಈ ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ. ಲಕ್ಷ್ಮೀಕಾಂತನ ದಯೆಯಿಂದ ನಿಮ್ಮ ಇಚ್ಚೆ ನೆರವೇರುವುದು” ಎಂದು ಆಶೀರ್ವದಿಸಿದರು.

“ಊರಿಗೆ ಬಂದರು ದಂಪತಿಗಳು. ಸ್ವಾಮಿಯ ಸೇವೆ ಎಡೆಬಿಡದೆ ಮಾಡಿದರು. ಅಣ್ಣಯ್ಯನಿಗೆ ಜೈಮಿನಿ ಭಾರತವೆಂದರೆ ಪಂಚಪ್ರಾಣ. ಇದನ್ನು ನಿತ್ಯ ಪಾರಾಯಣ ಮಾಡುತ್ತಿದ್ದ. ಅವನ ಪ್ರಿಯವಾದ ಇನ್ನೊಂದು ಗ್ರಂಥ “ಜಗನ್ನಾಥ ವಿಜಯ.” ಇದನ್ನು ಬರೆದವ ರುದ್ರಭಟ್ಟ ಮಹಾಕವಿ. ರುದ್ರಭಟ್ಟ ದೇವನೂರಿನ ಸಿದ್ದೇಶ್ವರ ಗುಡಿ ಜೀರ್ಣೋದ್ದಾರ ಮಾಡಿದ್ದನಂತೆ.”

“ಚೈತ್ರ ಶುದ್ದ ಹುಣ್ಣಿಮೆ, ಗಂಡು ಮಗು ಜನಿಸಿತು; ಚಂದ್ರನಂತೆ ಕಾಂತಿಮಯವಾಗಿತ್ತು. ಅಣ್ಣಯ್ಯ ಶಿಶುವಿಗೆ ಶ್ರೀಕಾಂತ ಎಂದು ಹೆಸರಿಟ್ಟ. ಇದೇ ಮುಂದೆ ಲಕ್ಷ್ಮೀಶ ಎಂದು ಪ್ರಸಿದ್ದವಾಯಿತು.”

“ಶ್ರೀಕಾಂತ ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ. ತಂದೆ ಅಣ್ಣಯ್ಯ್ ತಾಯಿಯ ಸ್ಥಾನದಲ್ಲೂ ನಿಂತ. ಮಗುವಿನ ಪಾಲನೆ ಪೋಷಣೆ ಅವನ ಪಾಲಾಯಿತು.”

“ತಂದೆಗೆ “ತನ್ನ ಮಗು ಕೀರ್ತಿಶಾಲಿಯಾಗಬೇಕು, ತನಗೆ ಪ್ರಿಯವಾದ ಜೈಮಿನಿ ಭಾರತವನ್ನು ಕನ್ನಡದಲ್ಲಿ ಬರೆಯಬೇಕು” ಎಂದು ಆಸೆ. ಈ ಆಸೆ ನೆರವೇರಿಸಲೋ ಏನೋ ದಿನಕ್ಕೊಂದು ಕಥೆ ಹೇಳಿದ. ಯವನಾಶ್ವ, ಅನುಸ್ವಾಲ, ನೀಲಧ್ವಜ, ಜ್ವಾಲೆ, ಚಂಡಿ, ಸುಧನ್ವ, ಪ್ರಮೀಳೆ, ಬಭ್ರುವಾಹನ, ಲವ-ಕುಶ, ತಾಮ್ರಧ್ವಜ, ಮಯೂರಧ್ವಜ, ವೀರವರ್ಮ, ಚಂದ್ರಹಾಸ ಮತ್ತು ಬಕದಾಲಭ್ಯ – ಇವರ ಕಥೆಗಳನ್ನು ಕೇಳಿದ ಲಕ್ಷ್ಮೀಶ, “ಈ ಕಥೆಗಳು ಎಲ್ಲಿಯವು? ಇದನ್ನು ಯಾರು ಬರೆದಿದ್ದಾರೆ?” ಎಂದು ಪ್ರಶ್ನೆ ಮಾಡಿದ.”

“ಇವೆಲ್ಲ ಜೈಮಿನಿ ಭಾರತದವು. ಜೈಮಿನಿ ಭಾರತದವು. ಜೈಮಿನಿ ಎಂಬ ೠಷಿ ಸಂಸ್ಕೄತದಲ್ಲಿ ಬರೆದಿದ್ದಾನೆ. ಮಗು, ನೀನು ಇದನ್ನು ಕನ್ನಡದಲ್ಲಿ ಬರೆ, ಇದೇ ನನ್ನ ಆಸೆ.!”

“ತಂದೆ ಈ ಮಾತು ಹೇಳಿ ಬಹುದಿನಗಳಾಗಿವೆ. ಲಕ್ಷ್ಮೀಶ ಈಗ ಒಬ್ಬಂಟಿಗ, ತಂದೆಯನ್ನೂ ಕಳೆದುಕೊಂಡ. ಆದರೂ ತಂದೆಯ ಮಾತು ಸದಾ ಕೇಳಿಬರುತ್ತಿತ್ತು. “ಮಗು ನೀನು ಹೇಗಾದರೂ ಮಾಡಿ ಕನ್ನಡದಲ್ಲಿ ಬರೆ.”

“ಇದು ಹೇಗೆ ಸಾಧ್ಯ? “ನಾನು ಕವಿಯಲ್ಲ, ಜ್ಞಾನಿಯಲ್ಲ. ತಂದೆಯ ಮಾತು ನಡೆಯಲೇಬೇಕು ನಾನೇನು ಮಾಡಲಿ?” ಚಿಂತಿಸಿದ ಲಕ್ಷ್ಮೀಶ.

ಬರೆ ಹಾಕಿದರು

“ಒಂದು ದಿನ ಲಕ್ಷ್ಮೀಶನಿಗೆ ಬರೆ ಹಾಕಿದರು! ಕಾರಣ……? ಯಾರದೋ ಮನೆಯಲ್ಲಿ ಊಟ ಮಾಡಿದನಂತೆ! ಇದು ಅವನು ಮಾಡಿದ ದೊಡ್ಡ ತಪ್ಪು. ಪಾಪ! ಲಕ್ಷ್ಮೀಶನಿಗೆ ಬಹು ದುಃಖವಾಯಿತು. ಅದನ್ನು ತೋಡಿಕೊಳ್ಳುವುದು ಯಾರಲ್ಲಿ? ನೇರವಾಗಿ ಲಕ್ಷ್ಮೀಕಾಂತ ಸ್ವಾಮಿಯ ಬಳಿ ಬಂದ. ಅವನಿಗೆ ಸ್ವಾಮಿಯಲ್ಲಿ ಬಹಳ ನಂಬಿಕೆ. ತಂದೆ ಹೇಳಿದ ಮಾತು ನೆನಪಿಗೆ ಬಂತು – “ಸ್ವಾಮಿಯ ಕೄಪೆಯಿಂದ ಜನಿಸಿದ್ದೀಯ. ಎಂತಹ ಕಷ್ಟ ಕಾಲ ಬಂದರೂ ಭಯ ಪಡಬೇಡ. ಇದು ಯಾವಾಗಲೂ ನೆನಪಿರಲಿ.” “ಕ್ಷ್ಮೀಕಾಂತನೊಲವಿಂದೆ ವಿಷಮಮೄತವಹುದು.!”

“ಆ ಕೂಡಲೇ ಸ್ವಾಮಿಯ ಇದಿರು ನಿಂತ, ಕೈ ಜೋಡಿಸಿ, ಮಂಡಿಯೂರಿ ಪ್ರಾರ್ಥಿಸಿದ. ಅವನ ಪ್ರಾರ್ಥನೆಗಳೆಲ್ಲಾ ಜೈಮಿನಿ ಭಾರತದಲ್ಲಿವೆ. ಹತ್ತಾರು ಸೊಗಸಾದ ಪದ್ಯಗಳು. ಅವೆಲ್ಲ ನೀನು ದೊಡ್ಡವನಾದ ಮೇಲೆ ಓದಿ ನೋಡು.

 

"ಮಗು, ಇದನ್ನು ನೀನು ಕನ್ನಡದಲ್ಲಿ ಬರಿ."

“ಸರಿ ತಾತಾ, ಲಕ್ಷ್ಮೀಶ ಆಮೇಲೆ ಎಲ್ಲಿಗೆ ಹೋದ? ಏನು ಮಾಡಿದ?” – ರವಿ ಭಾರವಾದ ಮನಸ್ಸಿನಿಂದ ಕೇಳಿದ.

“ಲಕ್ಷ್ಮೀಶ ದೇವನೂರು ಬಿಟ್ಟು ಅಲ್ಲಿಂದ ಒಂದು ಗುಟ್ಟಾದ ಜಾಗಕ್ಕೆ ಹೋದ. ಆತನು ಹೋದ ಜಾಗದ ಬಗ್ಗೆ ಒಂದು ಒಗಟಿನಂತೆ ಬರೆದಿದ್ದಾನೆ.”

ೠಷಿಯೇ ಒಲಿದು ಬಂದ

“ಹೇಮಗಿರಿ ಒಂದು ಸುಂದರವಾದ ಬೆಟ್ಟ. ಲಕ್ಷ್ಮೀಶ ಇದನ್ನೇ ಬಹಳವಾಗಿ ಕೊಂಡಾಡಿದ್ದಾನೆ. ಇದು ದೇವನೂರಿಗೆ ಸುಮಾರು ೨೦ ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಯ ಪ್ರಕೄತಿ ಬಹಳ ರಮಣೀಯ. ಭಕ್ತ ಧ್ರುವನಂತೆ ಲಕ್ಷ್ಮೀಶ ಹೇಮಗಿರಿ ತಪ್ಪಲಲ್ಲಿ ಧ್ಯಾನಕ್ಕೆ ಕುಳಿತ. ಎಚ್ಚರವಾದಾಗ ಅಲ್ಲಿಯೇ ದೊರಕುವ ಹಣ್ಣು ಹಂಪಲು ತಿನ್ನುವುದು, ನೀರಡಿಕೆ ಆದಾಗ ಕೆರೆಯ ನೀರು ಕುಡಿಯುವುದು, ಒಮ್ಮೊಮ್ಮೆ ಅಲ್ಲಿಯ ಮಲ್ಲಿಕಾರ್ಜುನ ಸ್ವಾಮಿಯ ಸೇವೆ ಮಾಡುವುದು, ಮತ್ತೆ ಗವಿಯೊಂದರಲ್ಲಿ ಕುಳಿತು ಧ್ಯಾನ ಮಾಡುವುದು – ಹೀಗೆ ಅನೇಕ ವರ್ಷಗಳೇ ಕಳೆದವು.

“ಅಂದು ಚೈತ್ರ ಶುಧ್ದ ಹುಣ್ಣಿಮೆ. ಲಕ್ಷ್ಮೀಶ ಜನಿಸಿದ ದಿನ. ತಂದೆ ಇದ್ದಾಗ ಹುಟ್ಟಿದ ಹಬ್ಬವನ್ನು ಸಂಭ್ರಮದಿಂದ ಮಾಡುತ್ತಿದ್ದರು. ಮಗನಿಗೆ ಆ ನೆನಪು ಬಂತು. ಈಗ ಅವನಿರುವುದು ಹೇಮಗಿರಿಯಲ್ಲಿ. ಅದೂ ಒಬ್ಬಂಟಿಗನಾಗಿ, ಇಲ್ಲಿ ಮಾಡುವುದೇನು?”

“ಎಂದಿನಂತೆ ವಿಷ್ಣು ಸಮುದ್ರದಲ್ಲಿ ಮಿಂದ. ಹೇಮಗಿರಿಯ ತಪ್ಪಲಿನಲ್ಲಿ ಹೂಗಳನ್ನು ಕೊಯ್ದು ತಂದ ಮಲ್ಲಿಕಾರ್ಜುನನಿಗೆ ಅರ್ಪಿಸಿ ಪ್ರಾರ್ಥಿಸಿದ, “ಸ್ವಾಮಿ ನಿನ್ನ ಸನ್ನಿಧಿಗೆ ಬಂದು ಅನೇಕ ವರುಷಗಳು ಉರುಳಿಹೋಗಿವೆ. ಆದರೂ ನನ್ನ ಮನಸ್ಸಿಗೆ ನೆಮ್ಮದಿ ಇಲ್ಲ. ನಮ್ಮ ತಂದೆಯ ಮಾತು ಹುಸಿಯಾಗಬಾರದು., ದಯೆತೋರು ದೇವಾ”.

“ಅವನ ಪ್ರಾರ್ಥನೆ ಮುಗಿಯುವ ವೇಳೆಗೆ ಚಂದ್ರ ಮೂಡಿದ್ದ. ಹಾಲು ಚೆಲ್ಲಿದಂತಹ ಬೆಳದಿಂಗಳು. ಅವನ ಮನಸ್ಸು ಆನಂದದಿಂದ ನಲಿಯುತ್ತಿತ್ತು. ಮತ್ತೆ-ಧ್ಯಾನಕ್ಕೆ ಕುಳಿತ. ಕೋಳಿ ಕೊಕ್ಕೋ…..ಕೋ……. ಎಂದು ಕೂಗಿತು. ಅದು ಮೊದಲ ಜಾವದ ಕೋಳಿಯ ಕೂಗಿರಬೇಕು. ಕೆಲವು ಹಕ್ಕಿಗಳು ಗೂಡಿನಿಂದ ಚಿಲಿಪಿಲಿಗುಟ್ಟುತ್ತ ಹೊರಬರುತ್ತಿವೆ. ಶ್ರೀಕಾಂತನಿಗೆ ಅದಾವುದರ ಅರವೇ ಇಲ್ಲ. ಮುಚ್ಚಿದ ಕಣ್ಣು ಮುಚ್ಚಿದಂತೇ ಇತ್ತು. ಆಗ ಒಂದು ವಿಶೇಷ ನಡೆಯಿತು ಎಂದು ಕಥೆ ಇದೆ.

“ಯಾರೋ ಮಾತನಾಡಿದಂತೆ ಆಯಿತು:”

“ಶ್ರೀಕಾಂತ…….ಶ್ರೀಕಾಂತ…….! ಇಲ್ಲಿ ನೋಡು ನಾನು ಬಂದಿದ್ದೇನೆ. ನಾನು ಯಾರು ಗೊತ್ತೆ? ನಿಮ್ಮ ತಂದೆಯ ಅಭಿಮಾನಿ. ನಾನೇ ಜೈಮಿನಿ! ನನ್ನ ಕಥೆಗಳನ್ನು ಕೇಳಿರುವೆಯಲ್ಲವೆ? ಏಳು……. ಕಣ್ಣುಬಿಡು. ನಿನ್ನ ತಂದೆಯ ಆಸೆಯನ್ನು ಪೂರ್ಣಗೊಳಿಸು. ಇದೋ ಈ ಗ್ರಂಥವನ್ನು ತೆಗೆದುಕೋ. ಇದೇ ನಾನು ಬರೆದ ಭಾರತ, ಇದನ್ನು ನೀನು ಕನ್ನಡದಲ್ಲಿ ಬರೆ.

“ಆದರೆ ನೋಡು, ನೀನು ಮಾತ್ರ ದೇವನೂರಿಗೆ ಮರಳಿ ಹೋಗಬೇಕು. ನಿನ್ನ ದೇವರ ಗುಡಿಯಲ್ಲೇ ಇದನ್ನು ಬರೆಯಬೇಕು. ಹೆದರಬೇಡ, ನೀನು ಕವಿಯಾಗಬಲ್ಲೆ! ಇಡೀ ಕನ್ನಡ ನಾಡಿನಲ್ಲೇ ನಿನ್ನ ಕೀರ್ತಿ ಹಬ್ಬುವುದು. ಅದು ಹೇಗೆ ಸಾಧ್ಯ ಎಂದು ಅನುಮಾನ ಬೇಡ ಲಕ್ಷ್ಮೀಕಾಂತನೊಲವಿಂದೆ ವಿಷಮಮೄತವಹುದು.!”

ಶ್ರೀಕಾಂತ ಕಣ್ಣುಬಿಟ್ಟು ನೋಡುತ್ತಾನೆ, ಎದುರಿನಲ್ಲಿ ಯಾರೂ ಇಲ್ಲ. ಆದರೆ ಗ್ರಂಥ ಒಂದು ಇದೆ. ತನಗಾದ ಅನುಭವ ನಿಜವೋ ಸುಳ್ಳೋ ಎಂದು ತಡಕಾಡಿದ. ತನ್ನ ಮೈ ಜಿಗುಟಿಕೊಂಡ. “ಚುರಕ್” ಎಂದು ನೋವಾಯಿತು. ನನ್ನ ಕನಸು ಹುಸಿಯಲ್ಲ ಎಂದುಕೊಂಡ. ಜೈಮಿನಿ ಗ್ರಂಥ ಕೈಗೆ ತೆಗೆದುಕೊಂಡ. ಅವನಿಗಾದ ಆನಂದ ಹೇಗೆ ಹೇಳಲಿ?

ಮರಳಿ ತೌರೂರಿಗೆ

“ಶ್ರೀಕಾಂತ ಊರಿಗೆ ಬಂದ. ಬಾಲಕನಾಗಿ ಹೋದವನು ಯುವಕನಾಗಿ ಬಂದಿದ್ದಾನೆ. ಹೊಳೆಯುತ್ತಿರುವ ಅವನ ಮೂಗು, ನುಣುಪಾದ ಕೆನ್ನೆ, ಕಾಂತಿಯನ್ನು ಬೀರುವ ಕಣ್ಣು, ಕಿರಿದಾಗಿ ಅಡಗಿದ ರೆಪ್ಪೆಗಳು, ನೀಳವಾದ ಹುಬ್ಬು, ವಿಸ್ತಾರವಾದ ಹಣೆ, ಮನೋಹರವಾದ ಚೆಂದುಟಿ, ಅದರ ಮೇಲೆ ಚಿಗುರಿದ ಮೀಸೆ, ಸುಂದರವಾದ ಮುಖ- ಈ ರೂಪವನ್ನು ಕಂಡು ಮೆಚ್ಚದವರೇ ವಿರಳ

ಶ್ರೀಕಾಂತನಿಗೆ ಮದುವೆಯಾಯಿತು. ಲಕ್ಷ್ಮೀ ಆತನ ಕೈ ಹಿಡಿದಳು. ಆಕೆ ಬಲು ಜಾಣೆ. ಕಾವ್ಯದಲ್ಲಿ ಒಳ್ಳೆಯ ಅಭಿರುಚಿ. ಲಕ್ಷ್ಮೀ ಹಾಡಿದಳೆಂದರೆ ಸಾಕು, ಗಾನದೇವತೆಯೇ ಪ್ರತ್ಯಕ್ಷವಾದಂತೆಯೇ. ಈ ಇಬ್ಬರ ಜೋಡಿ ಹಾಲು ಸಕ್ಕರೆ ಬೆರೆತಂತೆ ಇತ್ತು.

ಕೃತಿಗೆ ನಾರಾಯಣನೇ ಕರ್ತೃ

“ಕವಿ ಕಾವ್ಯವನ್ನು ಬರೆದು ಮುಗಿಸಿದ. ಆದರೂ ಬರೆದವನು ನಾನಲ್ಲ ಎಂದು ಹೇಳುತ್ತಾನೆ. ಮತ್ತೆ? – ಎಂದವರಿಗೆ ಸುಂದರವಾದ ನಿದರ್ಶನ ಕೊಡುತ್ತಾನೆ: ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ ವಾಣಿಯಿಂ ಕವಿತೆಯಂ ಪೇಳಿಸಿದ. ವೈಣಿಕ ವೀಣೆಯನ್ನು ನುಡಿಸುವಂತೆ ಲಕ್ಷ್ಮೀಕಾಂತ ನನ್ನ ಬಾಯಿಯಿಂದ ಹಾಡಿಸಿದ. ಇದು ಅವನ ನಿಲುವು. ಇದಕ್ಕೊಂದು ಕಾರಣವೂ ಉಂಟು. ಆ ಕಥೆಯನ್ನು ಈಗ ಹೇಳುತ್ತೇನೆ ಕೇಳು.

“ಲಕ್ಷ್ಮೀಕಾಂತನಿಗೆ “ಶ್ರೀ” ಕಾರದೊಡನೆ ಕಾವ್ಯ ಆರಂಭಿಸಬೇಕು ಎಂಬ ಆಸೆ. ನನ್ನ ಕುಲದೇವತೆಯ ಸ್ತ್ರೋತ್ರ ಮೊದಲು; ಅನಂತರ ಶಿವ, ಗಣಪತಿ, ಶಾರದೆಯರನ್ನು ಕೊಂಡಾಡೋಣ – ಇದು ಅವನ ನಿರ್ಧಾರ.”

“ಈ ಆಸೆಯನ್ನು ಹೊತ್ತು ಆರಂಭಿಸಿದ – “ಶ್ರೀವಧು ವಿನಂಬಕ ಚಕೋರಕಂ ಬಿರಿಯೇ…….” ಪದ ಸೊಗಸಾಗಿ ಬಂತು. ಈ ಸಾಲನ್ನೇ ಮತ್ತೆ ಮತ್ತೆ ಹಾಡಿದ; ಆಲೈಸಿದ. ಅದರಲ್ಲಿ ಏನೋ ಒಂದು ವಿಧವಾದ ಒಡಕು ಪದ ಇದ್ದಂತೆ ಅನಿಸಿತು. “ಬಿರಿಯೇ” ಎಂದು ಬರಬಾರದು. ಹಾಗಾದರೆ ಮತ್ತಾವ ಪದ ಹಾಕಲಿ? ಯಾವುದು ಹಾಕಿದರೆ ಸರಿದೂಗೀತು? ಇದೋ…… ಅದೋ…… ಎಂದು ಬಹಳ ಹೊತ್ತು ಆಲೋಚಿಸಿದ. ಪರಿಹಾರವೇ ಕಾಣಲಿಲ್ಲ. ಕುಳಿತಾಗ ನಿಂತಾಗ ಅದೇ ಚಿಂತೆ. ಲಕ್ಷ್ಮೀ ಗಂಡನ ಮುಖ ಮೌನವಾಗಿರುವುದನ್ನು ಕಂಡಳು. “ಇದೇಕೆ ಹೀಗಿದ್ದೀರಿ? ಮೈಗೇನೂ ಆಯಾಸವಾಗಿಲ್ಲವಷ್ಟೇ?” ಆಕೆ ಕೇಳಿದಳು.”

“ಲಕ್ಷ್ಮೀ ಮೈಗೆ ಆಯಾಸವಾದರೆ ಔಷಧಿ ಉಂಟು. ಮನಸ್ಸಿಗೆ ಆಯಾಸವಾದರೆ ಯಾವ ಔಷಧಿ ತರಲಿ?”……

“ಅದಕ್ಕೂ ಇದೆ. “ಭವರೋಗ ವೈದ್ಯ” ನಮ್ಮ್ ಲಕ್ಷ್ಮೀಕಾಂತನಿದ್ದಾನೆ. ಏಳಿ, ಬೇಗ ಎದ್ದು ಪೂಜೆಯನ್ನಾದರೂ ಮುಗಿಸಿ.”

“ಅದೂ ಸರಿ” ಎಂದು ಪೂಜೆಗೆ ಕುಳಿತ. ಗಂಧ, ಪುಷ್ಪ, ಧೂಫ, ದೀಪ, ನೈವೇದ್ಯ, ಆರತಿ- ಎಲ್ಲಾ ಮಾಡಿ ಆಯಿತು. ಪ್ರದಕ್ಷಿಣೆ, ನಮಸ್ಕಾರ ಮಾಡುವಾಗಲೂ “ಬಿರಿಯೇ…… ಬಿರಿಯೇ” ಎಂಬುದೇ ಕಾಣುತ್ತಿತ್ತು. ಇಡೀ ರಾತ್ರಿ ಆ ಚಿಂತೆಯಲ್ಲೇ ಕಳೆದ.

“ಮರುದಿನ ಲಕ್ಷ್ಮೀ ಬೇಗನೇ ಎದ್ದಳು. ಲಕ್ಷ್ಮೀಶ ಇನ್ನೂ ಮಲಗಿರುವುದನ್ನು ಕಂಡಿ ಅವಳಿಗೆ ಅಚ್ಚರಿ, ಎಂದೂ ಇಷ್ಟು ವೇಳೆ ಮಲಗಿದವರಲ್ಲ. ಬೆಳಗಿನ ಜಾವವೇ ಎದ್ದು ವೇದಾ ನದಿಗೆ ಹೋಗುವುದು ಅವರ ರೂಢಿ. ಇಂದೇಕೆ ಹೀಗೆ ಮಲಗಿದರು? ಇದು ಅವಳನ್ನು ಕಾಡಿದ ಚಿಂತೆ. ಓಹೋ! ಈಗ ನೆನಪಾಯಿತು. ರಾತ್ರಿ ನಿದ್ರೆ ಕೆಟ್ಟು ಬರೆದಿದ್ದಾರೆ. ಪಾಪ! ಆಯಾಸವಾಗಿದೆ. ಹಾಗೇ ಮಲಗಲೀ, ಎಂದು ಶಾಲನ್ನು ಹೊದಿಸಿದಳು.

ಲಕ್ಷ್ಮೀಶ ಎಚ್ಚರವಾದಾಗ ವೇಳೆ ಬಹಳವಾಗಿತ್ತು. “ಲಕ್ಷ್ಮೀ ಎಂತಹ ಕೆಲಸವಾಯಿತು! ನೀನಾದರೂ ಎಚ್ಚರಿಸಬಾರದಿತ್ತೆ?” ಎಂದು ಕೇಳಿದ.”

“ಹೋಗಲಿ ಬಿಡಿ, ರಾತ್ರಿ ಎದ್ದು ಬರೆದು ನಿದ್ರೆ ಕೆಟ್ಟಿದ್ದೀರಿ. ಬೆಳಿಗ್ಗೆ ಕೊಂಚ ನಿದ್ರೆ ಬಂದಿರಬೇಕು” ಅಂದಳು ಲಕ್ಷ್ಮೀ.

“ರಾತ್ರಿ ನಿದ್ದೆ ಕೆಟ್ಟನೇ? ನಾನು ರಾತ್ರಿ ಬರೆದನೆ? ಇದೇನು ಹೇಳುವೆ ಲಕ್ಷ್ಮೀ”

“ನಾನು ಸುಳ್ಳು ಹೇಳುತ್ತೇನೆಯೇ? ಬೇಕಾದರೆ ತಾಳೇ ಗರಿಯನ್ನೇ ಕೇಳಿ. ಅದೇ ಸಾಕ್ಷಿ ಹೇಳುತ್ತದೆ.”

“ಲಕ್ಷ್ಮೀಯ ಮಾತಿನಲ್ಲಿ ಸತ್ಯವಿತ್ತು. ಹಿಂದಿನ ದಿನ ಮುಚ್ಚಿಟ್ಟ ತಾಳೆ ಗರಿ ಹಾಳೆ ಇಂದು ತೆರೆದಿದೆ! ಹತ್ತಿರ ಹೋಗಿ ನೋಡುತ್ತಾನೆ “ಬಿರಿಯೇ” ಎಂಬುದನ್ನು ಹೊಡೆದು ಪೊರೆಯೇ” ಎಂದು ತಿದ್ದಿದೆ. ಕವಿ ಕುತೂಹಲಗೊಂಡ. ಲಕ್ಷ್ಮೀಯ ಮುಖ ನೋಡಿ,

 

"ವೀಣೆಯಿಂ ಗಾನಮಂ ನುಡಿಸುವಂದದೊಳು"

“ನೀನು ಹೇಳುವುದು ನಿಜವೇ? ರಾತ್ರಿ ಈ ಕಾವ್ಯವನ್ನು ನಾನು ಬರೆದೆನೆ? ನೀನು ಅದನ್ನು ನೋಡಿದ್ದು ಸತ್ಯವೇ?” ಮತ್ತೆ ಮತ್ತೆ ಕೇಳಿದ.

“ಸರಿಹೋಯಿತು ಬಿಡಿ, “ಲಕ್ಷ್ಮೀ, ದೇವರ ದಯೆ ದೊಡ್ಡದು. ನನ್ನನ್ನು ಕಾಡುತ್ತಿದ್ದ ಚಿಂತೆ ದೂರವಾಯಿತು. ಇದೋ ಮಂಗಳ ಪದ್ಯವನ್ನು ಸರಿಪಡ್ಡಿಸಿದ್ದೇನೆ, ನೋಡು” ಎಂದು ನೀವೇ ಹೇಳಿದಿರಿ. ಅಷ್ಟೇ ಅಲ್ಲ, ಆ ಪದ್ಯವನ್ನು ಪೂರ್ತಿಮಾಡಿ ಮೈ ಮರೆತು ಹಾಡಿದಿರಿ.”

“ಲಕ್ಷ್ಮೀಶ ಚಕಿತನಾದ. “ಸ್ವಾಮಿ, ನಿನ್ನ ಕೃಪೆ ಅಪಾರವಾದುದು! ಭಕ್ತನ ಕಷ್ಟವನ್ನು ಪರಿಹರಿಸಿದೆ ನೀನು. ಇದೋ ಈ ಕಾವ್ಯ ನನ್ನದಲ್ಲ, ಕೃತಿಗೆ ನಾರಾಯಣನೇ ಕರ್ತೃಎಂದ.

ಮಕ್ಕಳ ಹಿಂಡು ಹಿಂಡೇ ಬಂತು

“ಲಕ್ಷ್ಮೀಶನ ಮನೆ.

“ಅದೇನೋ ಹೇಳಿದೆಯಲ್ಲ! ಸರ್ರನೆ….. ಘರ್ರನೇ…. ಕರ್ರನೆ…… ಎಲ್ಲಿ ಅದು ಇನ್ನೊಂದು ಬಾರಿ……”

“ಅದೇ ಸರ್ರನೇ ಸುತ್ತಿತು ಕುದುರೆ, ಘರ್ರನೆ ಕಿರುಚಿದ ಹನುಮಂತ, ಕರ್ರನೆ ಕತ್ತಲು ಕವಿಯಿತು, ಘರ್ರನೆ ಗಾಲಿ ಹೊರಳಿತು, ತಿರ್ರನೆ ತಿರುಗಿತು ಸುಂಟರಗಾಳಿ, ಸರ್ರನೆ ಸರಿಯಿತು ಸೈನ್ಯ – ಇದು ಸುಧನ್ವನ ಪರಾಕ್ರಮಕ್ಕೆ ನಿದರ್ಶನ.”

“ಅಲ್ಲಣ್ಣ! ಬಭ್ರುವಾಹನ-ಅರ್ಜುನ ಯುದ್ಧ ಮಾಡಿದರಲ್ಲ? ಆವಾಗ ರಥ, ಆನೆ, ಕಾಲಾಳು, ಕುದುರೆ, ರಣವಾದ್ಯ ಇದರ ರವಂ…… ರವಂ ಅಂತ ಪದ್ಯ ಹೇಳಿದೆಯಲ್ಲ? ಆ ಪದ್ಯ ಪೂರ್ತಿ ಹೇಳಣ್ಣ!”

“ತೇರ್ ವಂಗಡದ ಜರ್ಜಾರವಂ
ಗಜದ ಘಂಟಾರವಂ
ಹಯದ ಹೇಷಾರವಂ
ನಡೆವ ಸೇನಾರವಂ
ಭೇರಿಯ ಮಹಾರವಂ
ಬಹಳ ಕಹಳಾರವಂ
ಸಂಗಡಿಸಿದ ಜ್ಯಾರವಂ
ಭಟರ ಬಾಹಾರವಂ
ದಳದ ಬಂಭಾರವಂ
ರಣ ಕಿಲಕಿಲಾರವಂ
ಪಟಹ ಢಕ್ಕಾರವಂ
ಪುದಿದ ನಾನಾರವಂ
ಕಿವಿಗೆ ಕಠೋರವಂ ತೀವಿ ತಿಂದು.”

ಮತ್ತೊಮ್ಮೆ ಲಕ್ಷ್ಮೀಶ ಹೇಳುತ್ತಿದ್ದ. ಅದನ್ನು ಕೇಳಿ ಮಕ್ಕಳ ಹಿಂಡು ಹಿಂಡೇ ಬಂತು. ಅವರಲ್ಲಿ ಒಬ್ಬ ಕೇಳಿದ, ಅಣ್ಣ, ನಿನ್ನೆ ನೀನು ಪ್ರಶ್ನೆ ಕೇಳ್ತಿನಿ, ಅದಕ್ಕೆ ಯಾರು ಉತ್ತರ ನೀಡುತ್ತಾರೋ ಅವರಿಗೊಂದು ಮಾವಿನ ಹಣ್ಣು ಅಂದಿದ್ದೆ. ಎಲ್ಲಿ ಕೇಳಣ್ಣ ಈಗ.”

“ಲಕ್ಷ್ಮೀಶ ಮಕ್ಕಳ ಕುತೂಹಲಕ್ಕೆ ತಲೆದೂಗಿದ. ಆಗ ಮಕ್ಕಳನ್ನು ಕುರಿತು, “ಹೇಳಿ ನೋಡೋಣ, ಉತ್ತರ ಗಟ್ಟಿಯಾಗಿ ಹೇಳಬಾರದು. ಮೆತ್ತಗೆ ಒಬ್ಬೊಬ್ಬರೇ ಬಂದು ನನ್ನ ಕಿವಿಯಲ್ಲಿ ಹೇಳಬೇಕು” ಎಂದ.

ಲಕ್ಷ್ಮೀಶ ನಿಧಾನವಾಗಿ ಪ್ರಶ್ನೆ ಹಾಕಿದ:

“ಒಂದು ಲೋಕಕ್ಕೆ ಕಣ್ಣಾಗಿರುವ
ಎರಡು ಬಗೆಯಲ್ಲಿ ನಡೆವ
ಮೂರು ಮೂರ್ತಿಗಳನ್ನು ಒಳಗೊಂಡಿರುವ
ನಾಲ್ಕು ಒಡಲಾಗಿರುವ
ಐದನೇ ಅಂಗದಲ್ಲಿ ಕಾಣಿಸುವ
ಆರು ಋತುಗಳಲ್ಲಿ ಇರುವ
ಏಳು ಕುದುರೆ ರಥಕ್ಕೆ ಕಟ್ಟಿರುವ
ಓ ದೇವ! ನನ್ನ ಬಿಲ್ಲನ್ನು ಕೊಟ್ಟು ಕಾಪಾಡು.”

– ಹೀಗೆ ಲವನು ಬೇಡಿಕೊಂಡ. ಈಗ ಹೇಳಿ ಆ ದೇವರು ಯಾರು?

ಮಕ್ಕಳು ಒಬ್ಬರ ಮುಖ ಒಬ್ಬರು ನೋಡಿದರು. ಅವರ ನೋಟ ಒಬ್ಬರನ್ನೊಬ್ಬರ ಪ್ರಶ್ನಿಸುವಂತೆ ಇತ್ತು. ಆಗ ಅವರಲ್ಲಿ ಒಬ್ಬ ಎದ್ದುನಿಂತ. “ನಾನು ಹೇಳುತ್ತೇನೆ” ಅಂದ. ಮತ್ತೆ ಯಾರೂ ಹೇಳಿದ್ದನ್ನು ಕಂಡು ಲಕ್ಷ್ಮೀಶ, “ಸರಿ, ಗಟ್ಟಿಯಾಗಿ ಹೇಳು” ಅಂದ.

“ಲವನು ಪ್ರಾರ್ಥಿಸಿದ್ದು ಸೂರ್ಯದೇವರನ್ನು. ಸರಿಯೇ ಅಣ್ಣ ನಾನು ಹೇಳಿದ್ದು?”
“ಸರಿ. ಇದು ನಿನಗೆ ಹೇಗೆ ತಿಳಿಯಿತು?”

“ನಮ್ಮ ಅಜ್ಜಿ ನಿನ್ನೆ ತಾನೇ ಹೇಳಿದ್ರು ಇದನ್ನು.”

“ಹುಡುಗರು ಅವನ ಉತ್ತರಕ್ಕೆ “ಗೊಳ್” ಎಂದು ನಕ್ಕರು. ಮಕ್ಕಳ ನಗೆಯಲ್ಲಿ ಲಕ್ಷ್ಮೀಶನೂ ಭಾಗಿಯಾದ.

ಕುರುಡನಿಗೆ ಕಣ್ಣು ಬಂದಂತಾಯಿತು

“ಲಕ್ಷ್ಮೀಶ ಕಾವ್ಯ ಬರೆದು ಮುಗಿಸಿದ. ಆದರೆ ಕಾವ್ಯ ಮಂಗಮಾಯವಾಯಿತು!”

“ಹೌದೇ! ಮಂಗಮಾಯವಾಯಿತೇ?”

“ಹೌದು ಆ ವಿಚಾರ ಹೇಳುತ್ತೇನೆ ಕೇಳು.

“ಒಮ್ಮೆ ಲಕ್ಷ್ಮೀಶನ ಮನೆಗೆ ಕಳ್ಳರು ನುಗ್ಗಿದರು. ಅಂದಿನ ರಾತ್ರಿ ಕವಿ ಊರಲ್ಲಿರಲಿಲ್ಲ. ಹೆಂಡತಿಯೊಡನೆ ಪ್ರಯಾಣ ಮಾಡಿದ್ದ. ಬೆಳಗಾಗುವುದರೊಳಗಾಗಿ ಕಳ್ಳತನ ನಡೆದಿತ್ತು.

“ಸುದ್ದಿ ಕಾಡು ಕಿಚ್ಚಿನಂತೆ ಹಬ್ಬಿತು. ಹತ್ತಾರು ಜನ ಸೇರಿದರು. ಆ ವೇಳೆಗೆ ಕವಿಯೇ ಬಂದ. ಸುದ್ದಿ ಕೇಳಿ ಲಕ್ಷ್ಮೀಗೆ ಕಳವಳವಾಯಿತು. ಧಡಧಡನೆ ಮನೆ ಹೊಕ್ಕಳು. ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಆದರೆ ಏನೂ ಕಳುವಾದಂತೆ ಕಾಣಲಿಲ್ಲ.

 

"ಲಕ್ಷ್ಮೀ ಪುಸ್ತಕವನ್ನು ಗಂಡನ ಕೈಗೆ ಕೊಟ್ಟಳು"

“ಲಕ್ಷ್ಮೀಶ ಮನೆಯಿಂದ ಹೊರಬಂದ. ಅವನ ಮುಖ ಮ್ಲಾನವಾಗಿದೆ. ಅವನಿಗೆ ಅತೀವ ವೇದನೆ. ಕಾರಣ ಅವನು ಬರೆದ ಪುಸ್ತಕ ಮಂಗಮಾಯವಾಗಿದೆ!”

“ಒಳ್ಳೆಯವರೆಂದರೆ ಸಾಕು, ಅವರಿಗೊಬ್ಬ ಕೆಟ್ಟವನು ಇದ್ದೇ ಇರುತ್ತಾನೆ. ಲಕ್ಷ್ಮೀಶನ ಮೇಲೆ ಒಂದಿಬ್ಬರಿಗೆ ಹೊಟ್ಟೆಕಿಚ್ಚು. ಕಾರಣ ಅವನ ಪದ್ಯಗಳು ಚೆನ್ನಾಗಿವೆ. ಅವನ ಕಥೆಗಳು ಜನಪ್ರಿಯವಾಗಿವೆ – ಇದು ಅವರ ಹೊಟ್ಟೆಕಿಚ್ಚಿಗೆ ಕಾರಣ. ಆದ್ದರಿಂದ ಅವನ ಕಾವ್ಯವನ್ನೇ ಕದ್ದುಬಿಟ್ಟರು. ಆದರೆ ಕಳ್ಳ ಸಿಕ್ಕಿಬಿದ್ದ.

“ಊರ ಜನ ಕಳ್ಳನನ್ನು ಪತ್ತೆ ಹಚ್ಚಿದರು. ಕಳ್ಳ ತನ್ನ ತಪ್ಪು ಒಪ್ಪಿಕೊಂಡ. ಆದರೆ ಮಾಡುವುದೇನು? ಕಾವ್ಯವನ್ನು ಬೆಂಕಿಯಲ್ಲಿ ಹಾಕಿ ಸುಟ್ಟುಬಿಟ್ಟಿದ್ದ!

“ಇದನ್ನು ಕೇಳಿದ ಕವಿ “ಅಯ್ಯೋ…….. ಎಂತಹ ನೀಚ ಕೆಲಸ ಮಾಡಿದೆ? ಪವಿತ್ರವಾದ ಗ್ರಂಥವನ್ನು ಸುಡಬಹುದೆ? ಹೋಯಿತು…….. ನನ್ನ ಸರ್ವಸ್ವವೂ ಹೋಯಿತು. ಕೄಷ್ಣಾ….. ವಾಸುದೇವ…… ಆಪದ್ಬಾಂಧವ…… ಮುಂದೇನು ಗತಿ, ಮುಂದೇನು ಗತಿ……? ಎಂದು ಕಣ್ಣೀರು ಹಾಕಿದ.

ಪತಿ ಕಣ್ಣೀರು ಸುರಿಸುವುದನ್ನು ಕಂಡಳು ಲಕ್ಷ್ಮೀ. ಇನ್ನು ತಡ ಮಾಡಬಾರದೆಂದು ಮುಂದೆ ಬಂದಳು. ಅವಳ ಕೈಯಲ್ಲಿ ಪುಸ್ತಕವಿತ್ತು. ಗಂಡನ ಕೈಗೆ ಕೊಟ್ಟು ಸಂತಸದಿಂದ ನೋಡಿದಳು. ಅದು ಅವಳು ಬರೆದಿದ್ದ ಮತ್ತೊಂದು ಪ್ರತಿ. ಇದನ್ನು ಕಂಡ ಕವಿಗೆ ಕುರುಡನಿಗೆ ಕಣ್ಣೇ ಬಂದಂತಾಯಿತು. ಕಾವ್ಯವನ್ನು ಕಂಡು ಕುಣಿದಾಡಿದ. ನೆರೆದಿದ್ದ ಜನ ಲಕ್ಷ್ಮೀಯ ಬುದ್ಧಿಗೆ ತಲೆದೂಗಿದರು.

ಇದು ಅವರ ವಿಚಾರ

“ಲಕ್ಷ್ಮೀಶನಿಗೆ ಅನೇಕ ಹೆಸರುಗಳು ಪ್ರಚಲಿತ. ಲಕ್ಷ್ಮೀಪತಿ, ಲಕ್ಷ್ಮೀಕಾಂತ, ಲಕ್ಷ್ಮೀಲೋಲ, ಶ್ರೀಕಾಂತ, ಲಕ್ಷ್ಮೀಕಾಂತ ಹೆಬ್ಬಾರ್ – ಹೀಗೆ ಇನ್ನು ಎಷ್ಟೋ! ಆದರೂ ಲಕ್ಷ್ಮೀಶ ಎಂಬುದು ಕವಿಯ ಜನಪ್ರಿಯ ಹೆಸರು. ಕವಿಯು ತನ್ನನ್ನು “ಲಕ್ಷ್ಮೀಶನೆಂಬೋರ್ವನು” ಎಂದು ಕರೆದುಕೊಂಡಿದ್ದಾನೆ.”

“ಅವರ ತಾಯಿ ತಂದೆಯವರ ವಿಚಾರ ಮೊದಲೇ ತಿಳಿಸಿರುವೆ. ಇನ್ನು ಕವಿಯ ಹೆಂಡತಿಯೇ ಲಕ್ಷ್ಮೀ, ಇವರಿಗೆ ಒಬ್ಬ ಮಗನಿದ್ದನೆಂದು ಹೇಳುತ್ತಾರೆ.

“ಲಕ್ಷ್ಮೀಶ-ಲಕ್ಷ್ಮೀ ಲಕ್ಷ್ಮೀಕಾಂತನಲ್ಲಿ ಐಕ್ಯರಾದರು. ಅನಂತರ ಅವರ ಮಗ ಮದುವೆ ಆಗಲಿಲ್ಲ. ಆದ್ದರಿಂದ ಅವರ ವಂಶವೇ ಬೆಳೆಯಲಿಲ್ಲ – ಅನ್ನುತ್ತಾರೆ ಊರ ಜನ.

“ಇನ್ನು ಅವನ ಕಾಲದ ಬಗ್ಗೆ ಹೀಗೇ ಎಂದು ಹೇಳುವಂತಿಲ್ಲ. ಪುರಂದರ, ಕನಕದಾಸರುಗಳ ಕಾಲ ಅಂತ ನಂಬಿಕೆ. ಸ್ವಲ್ಪ ಹೆಚ್ಚು ಕಡಿಮೆ ನಾಲ್ಕು ನೂರು ವರ್ಷ ಆಗಿರಬೇಕು. ನಮ್ಮ ನಾಡಿನಲ್ಲಿ ೧೯೬೯ ರಲ್ಲಿ ಕವಿಯ ನಾಲ್ಕುನೂರು ವರ್ಷಗಳ ಹಬ್ಬ ಜರುಗಿತು. ಕನ್ನಡ ನಾಡಿನ ಮೂಲೆ-ಮೂಲೆಗಳಿಂದ ಅಭಿಮಾನಿಗಳು ಬಂದಿದ್ದರು. ಬಹು ಸಂಭ್ರಮದಿಂದ ನಡೆಯಿತು ಆ ಹಬ್ಬ.

ರವಿ ಕೇಳಿದ, “ಜೈಮಿನಿ ಭಾರತ ಕಥೆಗಳ ಸಾಗರ. ಇದು ಜನಪ್ರಿಯ ಕಾವ್ಯ ಅಂದೆಯಲ್ಲ. ಆ ವಿಷಯ ಹೇಳು ತಾತ.”

ಲಕ್ಷ್ಮೀಶ ಕಾವ್ಯ ಬೆಲ್ಲದ ಅಚ್ಚಿನಂತೆ

“ಹಿಂದಿನ ಕಾಲದಲ್ಲಿ “ಕನ್ನಡ ಜೈಮಿನಿ ಭಾರತ ಓದಿದ್ದೀಯಾ?” ಎಂದು ಕೇಳುತ್ತಿದ್ದರು ಹುಡುಗರನ್ನು. “ಏನಯ್ಯಾ ಜೈಮಿನಿ ಭಾರತಕ್ಕೆ ಅರ್ಥ ಹೇಳುತ್ತೀಯಾ?” ಇದು ಪಂಡಿತರಿಗೆ ಹಾಕುವ ಪ್ರಶ್ನೆ. “ನಿಮ್ಮ ಮಗಳಿಗೆ ಜೈಮಿನಿ ಭಾರತ ಹಾಡಲು ಬರುವುದೇ?” – ಇದು ಹೆಣ್ಣು ಪರೀಕ್ಷಿಸುವವರ ಮಾತು.

“ಹೀಗೆ ಲಕ್ಷ್ಮೀಶನ ಕಾವ್ಯ ನಾಡಿನಲ್ಲೆಲ್ಲ ಹಬ್ಬಿತ್ತು. ಸಂಜೆಯ  ವೇಳೆ ಗುಡಿ-ಮಂದಿರಗಳಲ್ಲಿ ಓದುತ್ತಿದ್ದರು. ಓದು ಬರಹ ಬಾರದವರೂ ಸೀತಾ ಪರಿತ್ಯಾಗ, ಭಕ್ತ ಸುಧನ್ವ ಅಥವಾ ಮತ್ತೊಂದು ಪ್ರಸಂಗ ಕಂಠಪಾಠ ಮಾಡುತ್ತಿದ್ದರು. ಆದ್ದರಿಂದಲೇ ಇದೊಂದು ಜನಪ್ರಿಯ ಕಾವ್ಯ.

ಲಕ್ಷ್ಮೀಶನ ಕಾವ್ಯ ಗಾತ್ರದಲ್ಲಿ ಚಿಕ್ಕದೇನಲ್ಲ. ೩೪ ಸಂಧಿಗಳು, ೧೯೧೭ ಪದ್ಯಗಳ ಕಾವ್ಯ ಇದು.

“ಜೈಮಿನಿ ಭಾರತದ ಪೀಠಿಕಾ ಸಂಧಿ ಓದಲೇಬೇಕು; ಕೇವಲ ಹನ್ನೆರಡು ಪದ್ಯಗಳಿವೆ. ವಿಷ್ಣು, ಶಿವ, ಗಣಪತಿ, ಸರಸ್ವತಿ ಇವರೆಲ್ಲರನ್ನೂ ಒಂದೊಂದು ಪದ್ಯದಲ್ಲಿ ಪ್ರಾರ್ಥಿಸಿದ್ದಾನೆ. ಉಳಿದ ಎಂಟು ಪದ್ಯಗಳೂ ಕಾವ್ಯದ ಮೇಲೈಗೆ ಮೀಸಲು.

“ಕವಿಯಾಗಬೇಕು ಅನ್ನುವವರಿಗೆ ಇದು ಮಾರ್ಗದರ್ಶನ ನೀಡುತ್ತದೆ. ಧರ್ಮರಾಯ ಯಜ್ಞ ಕುದುರೆ ಬಿಡುತ್ತಾನೆ. ಅದು ಭಾರತವನ್ನೇ ಸುತ್ತಿ ಬರುತ್ತದೆ. ಈ ಸಂದರ್ಭದಲ್ಲಿ ಕೆಲವು ರಾಜ್ಯಗಳ ಸ್ಥಳ ಪರಿಚಯ ಕವಿ ಸೊಗಸಾಗಿ ಮಾಡಿದ್ದಾನೆ. ಉದಾಹರಣೆಗೆ – ಭದ್ರಾವತಿ, ಮಣಿಪುರ. ಮಾಹಿಷ್ಮತಿ, ರತ್ನಪುರ, ಚಂಪಕಾನಗರ. ಇನ್ನು ಸ್ತ್ರೀ ರಾಜ್ಯ ಒಂದಿತ್ತು ಎಂದು ವರ್ಣಿಸುತ್ತಾನೆ ಕವಿ. ಇದು ಬ್ರಹ್ಮಪುತ್ರಾ ನದಿಗೆ ಉತ್ತರದಿಕ್ಕಿನಲ್ಲಿತ್ತಂತೆ. ಸೌರಾಷ್ಟ್ರ – ಇದು ಇಂದಿನ ಗುಜರಾತ ರಾಜ್ಯ. ಕುಂತಳಪುರವು ಶಿವಮೊಗ್ಗ ಜಿಲ್ಲೆಯ ಒಂದು ಭಾಗದ ಹೆಸರು. ಇವಲ್ಲದೆ ಇನ್ನೂ ಅನೇಕ ಸ್ಥಳ ಪರಿಚಯ ಈ ಕಾವ್ಯದಲ್ಲಿ ಇದೆ. ಅಲ್ಲಿಯ ವರ್ಣನೆ ಬಲು ಸೊಗಸು. ಅದರಲ್ಲಿಯೂ ಭದ್ರಾವತಿಯ ವರ್ಣನೆ ಇಂದೂ ಕಣ್ಣಿಗೆ ಕಟ್ಟುವಂತಿದೆ. ಅವೆಲ್ಲ ಓದುತ್ತಿದ್ದರೆ ಭೋಗೋಳದ ಪಾಠವನ್ನೇ ಕೇಳಿದಂತಾಗುವುದು.”

“ಇವನ ಪದ್ಯಗಳು ಕೇಳಲು ಬಲು ಇಂಪು. ಹಾಡುವವರಿಗೆ ಉತ್ಸಾಹವನ್ನು ನೀಡುತ್ತದೆ. ಗಮಕಿಗಳಿಗೆ, ವಾಚಕರಿಗೆ ಇದೊಂದು ಪರಮಪ್ರಿಯ ಗ್ರಂಥ. ಶ್ರೀರಾಮ ದೇವರನ್ನು ಕುರಿತು ಹಾಡುವ ಈ ಪದ್ಯ ಬಹಳ ಪ್ರಸಿದ್ಧಿ ಪಡೆದಿದೆ. ಅದರ ಸೊಗಸಿಗೆ ನೀವೇ ಹಾಡಿ ನೋಡಿ.

“ರಾಮನಂ ಭುವನಾಭಿರಾಮನಂ ಗುಣರತ್ನ||
ಧಾಮನಂ ಸತ್ಕೀರ್ತಿ ಕಾಮನಂ ಶರಣ ಜನ
ವಾರ್ಧಿಯಂ ಮಿಗೆ ಪೆರ್ಚಿಪ||
ಸೋಮನಂ ಸೌಭಾಗ್ಯ್ ಸೋಮನಂ ಕುವಲಯ ||
ಶ್ಯಾಮನಂ ನಿಜತನು ಶ್ಯಾಮನಂ ಘನ ಪುಣ್ಯ ||
ನಾಮನಂ ಸಂತತಂ ನಾ ಮನದಣಿಯೆ
ರಮಿಸದೆ ಬಾಳ್ವೆನೆಂತೆದಳು ||

“ಲಕ್ಷ್ಮೀಶನ ಕಾವ್ಯ ಕಥೆಗಳ ಗಣಿ ಎನ್ನಬೇಕು. ಚಂಡಿ, ಸುಧನ್ವ, ಪ್ರಮೀಳೆ, ಚಂದ್ರಹಾಸ – ಎಷ್ಟು ಮಂದಿಯ ಕಥೆಗಳನ್ನು ಸ್ವಾರಸ್ಯವಾಗಿ ಹೇಳುತ್ತಾನೆ! ಸೀತೆಯ ಕಥೆಯನ್ನಂತೂ ಮರೆಯುವಂತೆಯೇ ಇಲ್ಲ. ಸೀತೆ, ಲಕ್ಷ್ಮಣ, ಭೀಮ, ಬಭ್ರುವಾಹನ್, ಚಂದ್ರಹಾಸ ಒಬ್ಬೊಬ್ಬರೂ ಜೀವಂತವಾಗಿ ನಮ್ಮ ಮುಂದೆ ನಿಲ್ಲುತ್ತಾರೆ.

“ಇನ್ನು ವೀರವರ್ಮನ ಯುದ್ಧ ಬಭ್ರುವಾಹನ ಕಾಳಗ- ಇವೆಲ್ಲ ವೀರರಸಕ್ಕೆ ನಿದರ್ಶನಗಳು. ಭಕ್ತರಿಗೆ ಇದೊಂದು ಪೂಜಾಗ್ರಂಥ ಅನ್ನಬೇಕು. ಶ್ರೀಕೄಷ್ಣ ಭಕ್ತರಿಗೆ ಸುಂದರವಾದ ಸ್ತ್ರೋತ್ರಗಳನ್ನೇ ಬರೆದಿದ್ದಾನೆ.

“ಸಮುದ್ರ, ಪರ್ವತ, ನದಿ, ಕೆರೆ, ತೋಟ, ಸೂರ್ಯೋದಯ, ಸೂರ್ಯಾಸ್ತ, ಎಲ್ಲ ವಿಧದ ವರ್ಣನೆಗಳಿವೆ ಈ ಕಾವ್ಯದಲ್ಲಿ.”

“ನೀತಿ ಕಾವ್ಯಗಳಿಗೆ ಲೆಕ್ಕವೇ ಇಲ್ಲ. ಇವನು ಹೋಲಿಕೆಗಳನ್ನು ಕೊಡುವುದೇ ಚೆನ್ನ. “ಪರ್ವತವು ಮಹಾಯೋಗಿಯಂತೆ ಕಾಣಿಸಿತು – ಕೂಡಿದರು ಪವನ ಹುತವಹರಂತೆ” ಅನ್ನುತ್ತಾನೆ.

“ಶಾರದೆಯ ಪ್ರಾರ್ಥನೆಯಲ್ಲಿ- “ನಗೆಗೂಡಿ ನೋಡಿ” ಎಂದು ಕೇಳಿಕೊಳ್ಳುತ್ತಾನೆ. ಕಾರಣ ಕೄಷ್ಣ, – ಭೀಮ, ಸತ್ಯಭಾಮೆ- ದ್ರೌಪದಿ, ಚಂಡಿ, ಇವರ ಕಥೆ ಓದುವವರಿಗೆ ನಗು ತಡೆಯಲು ಸಾಧ್ಯವೇ ಇಲ್ಲ.

“ಲಕ್ಷ್ಮೀಶನ ಕಾವ್ಯದ ಸೊಗಸಿಗೆ ಸೀತಾವನವಾಸದ ಕಥೆಯನ್ನು ಓದಿ ನೋಡಬಹುದು. ಸೀತೆ ಗರ್ಭಿಣಿ. ಅವಳಿಗೆ ಮತ್ತೆ ಕಾಡಿಗೆ ಹೋಗಿ ಇರಬೇಕು. ಋಷಿಗಳ ಹೆಂಡತಿಯರ ಜೊತೆಗೆ ಕೆಲವು ದಿನಗಳನ್ನು ಕಳೆಯಬೇಕು ಎಂದು ಆಸೆ. ಗಂಡ ಒಬ್ಬನೇ ಇದ್ದಾಗ ಹೇಳುತ್ತಾಳೆ. ಅವನು ಮೊದಲು ನಗುತ್ತಾನೆ. ಆನಂತರ ಆಕ್ಷೇಪಿಸುತ್ತಾನೆ, ಸಮಾಧಾನಮಾಡಿ ಕಳುಹಿಸುತ್ತಾನೆ. ಕೆಲವು ದಿನಗಳ ನಂತರ ಯಾರೋ ಒಬ್ಬಾತ, ಲಂಕೆಯಿಂದ ರಾಮನು ಸೀತೆಯನ್ನು ಕರೆದುಕೊಂಡು ಬಂದದ್ದು ತಪ್ಪು ಎಂದು ಮಾತನಾಡಿದ. ರಾಜನಾದವನು ಪ್ರಜೆಗಳು ಒಪ್ಪುವಂತೆ ನಡೆಯಬೇಕು ಎಂದು ನಂಬಿದ ಶ್ರೀರಾಮ, ಸೀತೆಯನ್ನು ಕಾಡಿನಲ್ಲಿ ಬಿಟ್ಟುಬಿಡಲು ತೀರ್ಮಾನಿಸುತ್ತಾನೆ. ಅವಳನ್ನು ಲಕ್ಷ್ಮಣ ಕರೆದುಕೊಂಡು ಹೋಗಬೇಕು. ಅವನೂ, ಭರತ, ಶತ್ರುಘ್ನರೂ ಪ್ರತಿಭಟಿಸಿದರೂ ಫಲವಿಲ್ಲ. ಪಾಪ ಸೀತೆಗೆ ನಿಜ ತಿಳಿಯದು. ಕೌಸಲ್ಯೆಗೆ ಹೇಳುತ್ತಾಳೆ

ನಂಬಿದರಭೀವಷ್ಟಮಂ ಸುಲಿಸುವ ಕೄಪಾಳು ತಾ
ನೆಂಬುದಂ ಕಾಣಿಸಿದನಿಂದೆನ್ನ ಕಾಂತೆನೆನಗೆ

(ನಂಬಿದವರ ಆಸೆಯನ್ನು ನಡೆಸುವ ಕೄಪಾಳು ತಾನು ಎಂದು ನನ್ನ ಪತಿ ಇವತ್ತು ತೋರಿಸಿಕೊಟ್ಟಿದ್ದಾನೆ.)

“ಋಷಿ ಪತ್ನಿಯರಿಗೆ ಅರಸಿನ ಕುಂಕುಮ ಗಂಧ ವಸ್ತ್ರಾಭರಣಗಳನ್ನು ಸಂತೋಷದಿಂದ, ಸಂಭ್ರಮದಿಂದ ಸೀತೆ ಸಿದ್ಧಮಾಡಿಕೊಳ್ಳುತ್ತಿದ್ದಾಳೆ. ನಿಜ ತಿಳಿದ ಲಕ್ಷ್ಮಣ ಬಿರಿಯುತ್ತಿರುವ ಹೄದಯವನ್ನು ತಡೆಹಿಡಿದು ನೋಡುತ್ತಿದ್ದಾನೆ.!

“ಕಾಡನ್ನು ರಥ ಪ್ರವೇಶಿಸುತ್ತದೆ. ಋಷಿಗಳ ಆಶ್ರಮಗಳೇ ಸೀತೆಗೆ ಕಾಣವು. ಕಳವಳದಿಂದ ಲಕ್ಷ್ಮಣನನ್ನು ಪ್ರಶ್ನಿಸುತ್ತಾಳೆ. ಕಣ್ಣಿನಲ್ಲಿ ನೀರು ತುಂಬಿ ಮಾತನಾಡಲಾರದೆ ಕಷ್ಟದಿಂದ ಲಕ್ಷ್ಮಣ, “ನಿಮ್ಮನ್ನು ಕಾಡಿನಲ್ಲಿ ಬಿಟ್ಟು ಬಾ ಎಂದು ಅಣ್ಣ ನನ್ನನ್ನು ಕಳುಹಿಸಿದ” ಎಂದು ಹೇಳುತ್ತಾನೆ.

“ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ ಮುರಿದಿಳೆಗೊರಗುವಂತೆ

(ಬಿರುಗಾಳಿ ಬೀಸಿದಾಗ ಗೊನೆ ಬಿಟ್ಟ ಬಾಳೆ ನಡುನಡುಗಿ ಭೂಮಿಗೆ ಕುಸಿಯುವಂತೆ) ಸೀತೆ ಕೆಳಕ್ಕೆ ಬಿದ್ದಳಂತೆ. ಅವಳಿಗೆ ಗಾಳಿ ಬೀಸುತ್ತಾ ಲಕ್ಷ್ಮಣನು, “ರಾಮನ ಸೇವೆ ಸಂದುದೇ ತನಗೆ” ಎಂದು ದುಃಖಪಟ್ಟ. ಎದ್ದ ನಂತರ ಸೀತೆ ಲಕ್ಷ್ಮಣನಿಗೆ ಹೇಳುತ್ತಾಳೆ;

ಕಲ್ಮುಳ್ಳಿಡಿದ ಕಾಡೊಳಂದನ್ನೆನುಪಚರಿಸಿ
ಪಲ್ಮೊರೆದು ಗರ್ಜಿಪ ವಿರಾಧನಂ ಮರ್ದಿಸಿದೆ
ಬಲ್ಮೆಯಿಂ ನಾಂ ಕಳುಹಿದೊಡೆ ಜನಸ್ಥಾನದಿಂ
ಹೋದೆ ರಾಘವನ ಬಳಿಗೆ|
ನಲ್ಮೆಯಂ ಮರೆದಪನೆ ಸೌಮಿತ್ರಿ ನೀನೆಲ್ಲ
ರೂಲ್ಮೈದುವನೆ ತನಗೆ ಕಾನನದೊಳೆನ್ನ ನಿಲಿ
ಸಲ್ಮನಂ ಬಂದಪುದೆ ತಂದೆ ನಿನಗೆ

ಹಿಂದೆ ಶ್ರೀರಾಮನೂ, ತಾನೂ, ಲಕ್ಷ್ಮಣನೂ ಕಾಡಿಗೆ ಹೋದಾಗ ತನ್ನನ್ನು ಲಕ್ಷ್ಮಣನು ಉಪಚರಿಸಿದ; ವಿರಾಧನನ್ನು ಬಡಿದುಹಾಕಿದ; ತಾನು ಅವನನ್ನು ಕಠಿಣವಾಗಿ ಬೈದು ಕಳುಹಿಸಿದರೂ ತನ್ನಲ್ಲಿ ಸಿಟ್ಟು ಮಾಡಿಕೊಳ್ಳಲಿಲ್ಲ ಎಂದು ಸೀತೆ ನೆನಪಿಸಿಕೊಂಡು, “ಎಲ್ಲ ಮೈದುನರಂತೆ ನೀನು ಮೈದುನನೆ?” ಎಂದು ಹೊಗಳುತ್ತಾಳೆ. “ನನ್ನನ್ನು ಕಾಡಿನಲ್ಲಿ ಬಿಡಲು ನಿನಗೆ ಹೇಗೆ ಮನಸ್ಸು ಬಂದಿತು?” ಎಂದು ಕೇಳುತ್ತಾ, ಅವಳು ಲಕ್ಷ್ಮಣನನ್ನು “ತಂದೆ” ಎಂದು ಕರೆಯುವಾಗ ನಮ್ಮ ಕಣ್ಣಿನಲ್ಲಿ ನೀರು ತುಂಬುತ್ತದೆ. ಲಕ್ಷ್ಮಣನಿಗೆ ಬಾಯಿಯಲ್ಲಿ ಮಾತೇ ಹೊರಡದು. ಅವನ ಸಂಕಟವನ್ನು ನಾವು ಊಹಿಸಬಹುದು. ಬಹು ಕಷ್ಟದಿಂದ, “ತಾಯಿ, ನಿನ್ನನ್ನು ಬಿಟ್ಟು ಹೋಗಲಾರೆ, ಇರಲಾರೆ” ಎಂದು ಹೇಳುವ ಹೊತ್ತಿಗೆ ಗಂಟಲು ಬಿಗಿಯುತ್ತದೆ. ಕಡೆಗೆ ಸೀತೆಯೇ

ಧೈರ್ಯ ತಂದುಕೊಂಡು ಅವನಿಗೆ ಹೇಳುತ್ತಾಳೆ;

ಏಕೆ ನಿಂತಿಹೆ ಪೋಗು ಸೌಮಿತ್ರಿ ಕೋಪಿಸನೆ
ಕಾಕುತ್ಸ್ಥ ತಳುವಿದೊಡೆ ನೆರವುಂಟು ತನ
ಗೀಕಾಡೊಳುಗ್ರಜಂತುಗಳಲ್ಲಿ ರಘುನಾಥನೇಕಾ ಕಿಯಾಗಿರ್ಪನು

(ಲಕ್ಷ್ಮಣ, ಏಕೆ ನಿಂತೆ? ಇಲ್ಲಿ ನೀನು ನಿಂತರೆ ಶ್ರೀರಾಮ ಕೋಪ ಮಾಡಿಕೊಳ್ಳುವುದಿಲ್ಲವೆ? ನನಗೆ ಈ ಕಾಡಿನಲ್ಲಿ ಕಾಡು ಪ್ರಾಣಿಗಳ ಸಹಾಯವಿದೆ, ಅಲ್ಲಿ ಶ್ರೀರಾಮ ಒಬ್ಬನೇ ಇದ್ದಾನೆ.)

ಸೀತೆಯ ಒಂದೊಂದು ಮಾತು ಅವಳ ದೊಡ್ಡತನವನ್ನು ತೋರಿಸುತ್ತದೆ. ಅವಳು ಸಹನೆಯ ಮೂರ್ತಿ, ಕ್ಷಮೆಯ ಪ್ರತೀಕ, ಹಿರಿಮೆಯ ಅವತಾರ. ಕಡೆಗೆ ಹೇಳುತ್ತಾಳೆ.

ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ
ಕಡುಪಾತಕಂ ಗೆಯ್ದು ಪೆಣ್ಣಾಗಿ ಜನಿಸಿ ತನ್ನೊಡಲಂ ಪೊರೆವುದೆನ್ನೊಳಪರಾಧಮುಂಟು ಸಾಕಿರಲ್ಬೇಡ ನೀನು|
ನಡೆ ಪೋಗು ನಿಲ್ಲದಿರ್ ನಿನಗೆ ಮಾರ್ಗದೊಳಾಗ ಲಡಿಗಡಿಗೆ ಸುಖಂ

(ಕರುಣಾಳು ರಾಮನಲ್ಲಿ ತಪ್ಪಿಲ್ಲ. ಬಹು ಪಾಪ ಮಾಡಿ ಹೆಣ್ಣಾಗಿ ಹುಟ್ಟಿ ನನ್ನ ದೇಹವನ್ನು ಪಾಲಿಸಿಕೊಂಡು ಬಂದೆ, ನನ್ನದೇ ತಪ್ಪು. ನೀನು ಇಲ್ಲಿ ನಿಲ್ಲಬೇಡ, ಹೋಗು. ನಿನಗೆ ದಾರಿಯಲ್ಲಿ ಹೆಜ್ಜೆ ಹೆಜ್ಜೆಗೆ ಸುಖವಾಗಲಿ.)

ಹೆಣ್ಣಿನ ಜನ್ಮವೇ ಪಾಪ ಎಂಬುದು ಯಾವಾಗಲೂ ನಿಜ ಎಂದಲ್ಲ. ತನ್ನ ದುಃಖದಲ್ಲಿ ಸೀತೆಗೆ ಹೆಣ್ಣಿನ ಜನ್ಮವೇ ಕಣ್ಣೀರಿನದು, ಬಹು ಪಾಪ ಮಾಡಿದ್ದರೆ ಹೆಣ್ಣಾಗಿ ಹುಟ್ಟುವುದು ಎನ್ನಿಸುತ್ತದೆ. ತನ್ನನ್ನು ಕಾಡಿಗೆ ಕಳುಹಿಸಿದ ಗಂಡನ ವಿಷಯದಲ್ಲಿ ಕಡೆಗೂ ಆಡುವ ಮಾತು: “ಕರುಣಾಳು”: ತನ್ನನ್ನು ಕಾಡಿನಲ್ಲಿ ಬಿಟ್ಟ ಮೈದುನನಿಗೆ “ಮಾರ್ಗದೊಳು ಆಗಲಿ ಅಡಿಗಡಿಗೆ ಸುಖಂ” ಎಂದು ಹರಸುತ್ತಾಳೆ. ಮತ್ತೆಲ್ಲಿ ಕಾಣಬೇಕು ನಾವು ಇಂತಹ ದೊಡ್ಡತನವನ್ನು!

“ಲಕ್ಷ್ಮಣನು ವನದೇವತೆಗಳಿಗೂ ಗಂಗಾದೇವಿಗೂ ಪ್ರಾರ್ಥನೆ ಮಾಡುತ್ತಾನೆ. “ಸೀತೆಯನ್ನು ಕಾಪಾಡಿ” ಎಂದು ಸೀತೆಗೆ ನಮಸ್ಕರಿಸಿ ಹೊರಡುತ್ತಾನೆ. ಮುಂದೆ ವಾಲ್ಮೀಕಿ ಋಷಿ ಸೀತೆಯನ್ನು ಕಂಡು ಸಮಾಧಾನ ಮಾಡಿ ತನ್ನ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಾನೆ.”

ಹೀಗೆ ಲಕ್ಷ್ಮೀಶ ಕಥೆ ಹೇಳುವಾಗ ಪಾತ್ರಗಳನ್ನು ನಮ್ಮ ಮುಂದೆ ಜೀವಂತವಾಗಿ ನಿಲ್ಲಿಸುತ್ತಾನೆ.” ನಮ್ಮ ಅಂತಃಕರಣವನ್ನು ಸೂರೆ ಮಾಡುತ್ತಾನೆ. ಹಿಂದೆ ನಾವು ಓದಿದ ಕೆಲವು ಪದ್ಯಗಳು, ಕಾಗುಣಿತ ಬಂದಿರುವಂತಹವು, ಚಮತ್ಕಾರದ ಪದ್ಯಗಳು. ಅವನ್ನು ಓದಿದರೆ ಒಂದು ಬಗೆಯ ಸಂತೋಷ. ಆದರೆ ಲಕ್ಷ್ಮೀಶನಲ್ಲಿರುವುದು ಈ ಚಮತ್ಕಾರ. ನಾದಮಾಧುರ್ಯ ಇವಿಷ್ಟೇ ಅಲ್ಲ. ಆತ ಸೊಗಸಾಗಿ ಕಥೆ ಹೇಳಬಲ್ಲ. ನಮ್ಮಲ್ಲಿ ಕೋಪ, ಸಂತೋಷ, ಮೆಚ್ಚಿಕೆ, ಕರುಣೆ ಎಲ್ಲ ಉಕ್ಕಿಸಬಲ್ಲ: ಪಾತ್ರಗಳ ಹಿರಿಮೆಯನ್ನು ನೋಡಿ ನಾವು ತಲೆದೂಗುವಂತೆ ಮಾಡಬಲ್ಲ.”

“ಬೆಲ್ಲದ ಅಚ್ಚಿನಂತೆ ಲಕ್ಷ್ಮೀಶನ ಕಾವ್ಯ ಎತ್ತ ಕಡಿದರೂ ಬೆಲ್ಲದ ಅಚ್ಚು ಸಿಹಿಯೆ, ಇವನ ಕಾವ್ಯವೂ ಅಷ್ಟೇ. ಯಾವ ಭಾಗವನ್ನೇ ತೆಗೆದುಕೊಂಡರೂ ನವರಸದಲ್ಲಿ ಒಂದು ಸಿಕ್ಕೇ ಸಿಕ್ಕುವುದು.

“ಆದ್ದರಿಂದ ಲಕ್ಷ್ಮೀಶನನ್ನು “ನಾದಲೋಲ”, “ಉಪಮಾಲೋಲ”, “ಲೋಲಕ ಚಕ್ರವರ್ತಿ”, “ಗಮಕ ಚಕ್ರವರ್ತಿ” ಮತ್ತು “ಕವಿಚೂತವನಚೈತ್ರ” ಎಂದು ಕರೆದರು.”

ರವಿ ಕೇಳಿದ – “ಕವಿಗೆ ಹುಟ್ಟಿದ ಊರ ಬಗ್ಗೆ ಬಹಳ ಪ್ರೀತಿ ಅಂದೆಯಲ್ಲ, ಆ ವಿಷಯ ಹೇಳು ತಾತ.”

ಜನಸೇವೆಯೇ ಜನಾರ್ಧನನ ಸೇವೆ

“ಲಕ್ಷ್ಮೀಶನಿಗೆ ತಾನು ಹುಟ್ಟಿದ ಸ್ಥಳದ ಬಗ್ಗೆ ತುಂಬ ಪ್ರೇಮ. “ಸ್ವರ್ಗಕ್ಕಿಂತಲೂ ನನ್ನ ಊರೇ ನನಗೆ ದೊಡ್ಡದು! ಇಲ್ಲಿಯ ಗಿಡ-ಮರಗಳೇ ಕಲ್ಪವೄಕ್ಷ. ಈ ಜಲ್ಲಿಕಲ್ಲುಗಳೇ ಸಾಲಿಗ್ರಾಮ. ಅಕ್ಕ ಪಕ್ಕದ ಕೆರೆ-ಕಟ್ಟೆಗಳೇ ಪುಣ್ಯನದಿಗಳು. ಊರ ಮುಂದಿನ ಕೆರೆಯೇ ಸಮುದ್ರ. ಲಕ್ಷ್ಮೀಕಾಂತನ ಗುಡಿಯೇ ವೈಕುಂಠ. ದೇವನೂರೇ ಕೈಲಾಸ! ಅಂದಮೇಲೆ ನಾನು ಇನ್ನೆಲ್ಲಿ ಹೋಗಲಿ?” ಹೀಗೆ ಅನೇಕ ಬಾರಿ ಹೇಳುತ್ತಿದ್ದ. ಅವನ ಕಾವ್ಯದಲ್ಲಿ ದೇವಪುರ, ಅಮರಪುರ, ಸುರಪುರ, ದಿವಿಜಪುರ, ಗಿರ್ವಾಣಪುರ ಎಂದೆಲ್ಲ ತನ್ನ ಊರನ್ನು ಕೊಂಡಾಡಿರುತ್ತಾನೆ.

“ಹುಟ್ಟಿದ ಊರಿಗೆ ಅಷ್ಟಿಷ್ಟು ಸೇವೆ ಸಲ್ಲಿಸಬೇಕು – ಇದು ಕವಿಯ ಆಸೆ. ಅದಕ್ಕಾಗಿ ಊರ ಮುಂದೆ ಸುಂದರವಾದ ತೋಟ ಮಾಡಿದ. ಅದರಲ್ಲಿ ಹೂವಿನ ಗಿಡಗಳು, ಹಣ್ಣು – ಹಂಪಲು ಬೆಳೆಸಿದ.

“ಇನ್ನು ಅಲ್ಲಿ ಸಿಹಿ ನೀರಿಗೆ ಬರ. ಅದನ್ನು ಪೂರೈಸಲು ಕವಿ ಬಾವಿಗಳನ್ನು ತೋಡಿಸಿದ. ಊರನ್ನು ನೋಡಲು ಬರುವವರಿಗೆ ನೆರಳು ಬೇಡವೇ? ಅದಕ್ಕಾಗಿ ಅವನು ಸಾಲು ಮರಗಳನ್ನು ನೆಡಿಸಿದ.

“ದೇವನೂರ ಜೀವನಾಡಿ ಅಲ್ಲಿಯ ಕೆರೆ. ಒಂದು ಮೈಲಿಗೂ ಮೀರಿದ ಕೆರೆಯ ದಂಡೆ. ಆದರೇನು, ನೀರಿಗೆ ಮಾತ್ರ ಕಷ್ಟ. ಕೆರೆ ತುಂಬಲು ಕಾಲುವೆಗಳ ಆಸರೆ ಇಲ್ಲ. ಊರ ನಾಲ್ಕು ಕಡೆಯಿಂದ ಕಾಲುವೆಗಳನ್ನು ತೆಗೆಸಿದ. ಕವಿಯ ಆಸೆಯಂತೆ ಕಾಲುವೆ ನೀರು ಕೆರೆ ತುಂಬಿಸಿತು.

“ಲಕ್ಷ್ಮೀಶನ ದೄಷ್ಟಿ ಮತ್ತೊಂದು ಕಡೆ ಹರಿಯಿತು. ಅದೇ ಲಕ್ಷ್ಮೀಕಾಂತನ ಗುಡಿ! ಗುಡಿ ತಲೆಯ ಮೇಲೆ ಬೀಳುವಂತಿದೆ. ಅದಕ್ಕಾಗಿ ಬಹಳ ದುಡಿದ. ಗುಡಿ ಹಸನಾಯಿತು.

“ಕವಿಗೆ ಈಗ ಕೊಠಾರ ಮಂಠಪದ ಚಿಂತೆ! “ನನ್ನ ಕಾವ್ಯ ಜನಿಸಿದ್ದು ಇಲ್ಲಿ. ನನ್ನನ್ನು ಸತ್ಕರಿಸಿದ್ದೂ ಈ ಮಂಟಪವೇ. ದೇವರು ಬಿಜಮಾಡುವ ಮಂಟಪ ಇದು! ಅಂದಮೇಲೆ ಸುಂದರವಾದ ಕೀರ್ತಿಮಂಟಪ ಆಗಬೇಡವೇ?”

“ಅದಕ್ಕಾಗಿ ಲಕ್ಷ್ಮೀಶನೇ ಸೊಂಟಕಟ್ಟಿ ನಿಂತ. ಕೆಲಸಗಾರರ ಜೊತೆ ಬೆರೆತ: ಕಲ್ಲು ಮಣ್ಣು ಹೊತ್ತ. ಒಂದೆರಡು ತಿಂಗಳಲ್ಲಿ ಕೆಲಸ ಮುಗಿಯಿತು.

“ಈಗ ಅದು “ಕವಿ ಕಟ್ಟಿದ ಕಾವ್ಯ ಮಂಟಪ”ವಾಗಿದೆ. ಕನ್ನಡ ನಾಡಿಗೆ ಕವಿ ನೀಡಿದ ಅಮೂಲ್ಯವಾದ ಉಡುಗೊರೆ ಇದು. ಈ ಸುಂದರವಾದ ಮಂಟಪದಲ್ಲಿ ಕುಳಿತಾಗ ಕವಿ ಕಣ್ಣ ಮುಂದೆ ಹಾದು ಹೋದಂತೆ ಎನಿಸುವುದು.

“ಇವೆಲ್ಲಕ್ಕೂ ಸಾವಿರಾರು ರೂಪಾಯಿಗಳು ಖರ್ಚಾಗಿರಬೇಕು. ಇದಕ್ಕೆ ಹಣ ಎಲ್ಲಿಂದ ಬಂತು? ಎಂದು ಕೇಳಬಹುದು.

“ಹೌದು, ಅದು ಸಹಜವೇ ಸರಿ. ಜನತೆ ಕವಿಯನ್ನು ಸತ್ಕರಿಸಿದ್ದರು. ಆಗ ಅಭಿಮಾನಿಗಳು ಧನ-ಕನಕ ವಸ್ತುಗಳನ್ನು ನೀಡಿದ್ದರು. ಅವೆಲ್ಲವನ್ನೂ ಈ ಜನ ಸೇವೆಗೇ ನೀಡಿದ. ಹೀಗೆ ಲಕ್ಷ್ಮೀಶ ಕವಿ ಸೇವೆ ಮತ್ತೇಷ್ಟೋ? ಅದನ್ನು ಹೇಳುವವರು ಯಾರು?   

ನಮ್ಮ ಜೊತೆಗೇ

“ಇಂದಿಗೂ ಕವಿಯ ಬಗ್ಗೆ ಊರ ಜನರಿಗೆ ಪ್ರೇಮವಿದೆ. ದೇವರ ಗುಡಿಯಲ್ಲಿ ಅವನ ಪ್ರತಿಬಿಂಬ ಮಾಡಿಟ್ಟಿದ್ದಾರೆ. ಆ ಶಿಲಾಮೂರ್ತಿ ಪುಟ್ಟದು, ಆದರೂ ಸುಂದರವಾಗಿದೆ. ದೇವರ ಪೂಜೆಯ ನಂತರ ಕವಿಯ ಪೂಜೆಯೂ ನಡೆಯುತ್ತದೆ. ಅಷ್ಟೇ ಅಲ್ಲ, ಚೈತ್ರ ಶುದ್ಧ ಹುಣ್ಣಿಮೆ ಲಕ್ಷ್ಮೀಶ ಜನಿಸಿದ್ದು. ಅಂದು ಲಕ್ಷ್ಮೀಶ ಜಯಂತಿ ಆಚರಿಸುತ್ತಾರೆ.

ಇದಲ್ಲದೆ ಕೆಲವರು ಕಾಣಿಕೆ ಎತ್ತಿ ಗೌರವಿಸುವ ಪದ್ಧತಿ ಉಂಟು. ಮದುವೆ, ಮುಂಜಿಗಳಲ್ಲಿ ತಮ್ಮ ತಮ್ಮ ಗುರುಗಳಿಗೆ ಕಾಣಿಕೆ ನೀಡುತ್ತಾರೆ. ಅದಕ್ಕೆ “ಸಂಭಾವನೆ” ಎಂದು ಕರೆಯುವರು. ಗುರುಗಳ ಜೊತೆಗೆ ಸಂಭಾವನೆ ಎನ್ನುವುದು ಬಹಳ ದೊಡ್ಡ ವಿಚಾರ. ಭಾರತದಲ್ಲೇ ಇಂತಹ ಗೌರವ ಮತ್ತೊಬ್ಬ ಕವಿಗೆ ಸಂದಿರುವುದು ನಾನು ಕಾಣೆ.

“ಲಕ್ಷ್ಮೀಶ ಕಣ್ಮರೆಯಾಗಿ ನಾನ್ನೂರು ವರ್ಷಗಳಾದರೂ ಸಂದಿವೆ. (ಆರು ನೂರು ವರ್ಷಗಳಾಗಿವೆ ಎಂದೂ ಕೆಲವರು ಹೇಳುತ್ತಾರೆ.) ಆದರೂ ಅವನ ಊರಿಗೆ ಹೋಗಿ ನೋಡಬೇಕು. ಲಕ್ಷ್ಮೀಶ ನಮ್ಮ ಸಂಗಡ ಇದ್ದಂತೆಯೇ ಭಾಸವಾಗುತ್ತದೆ.

“ಅವನ ಕಾವ್ಯವನ್ನು ಓದುತ್ತಿದ್ದರೆ ಮನಸ್ಸು ಹರ್ಷದಿಂದ ಉಬ್ಬುತ್ತದೆ. ಕಾವ್ಯದಲ್ಲಿ ಲಕ್ಷ್ಮೀಶ ನಮ್ಮ ಜೊತೆಗೇ ಇದ್ದಾನೆ ಎನ್ನಿಸುತ್ತದೆ.”