೧೯೫೩ರಲ್ಲಿ ಆಂಧ್ರ ಪ್ರದೇಶದ ಐತಿಹಾಸಿಕ ತೆನಾಲಿ ಗ್ರಾಮದಲ್ಲಿ ಜನಿಸಿದ ಶ್ರೀಮತಿ ಲಕ್ಷ್ಮೀ ರಾಜಾಮಣಿ ಅವರು ಕರ್ನಾಟಕದ ಕೆಲವೇ ಕೂಚುಪುಡಿ ನೃತ್ಯ ಗುರುಗಳಲ್ಲಿ ಪ್ರಮುಖರು. ಬಾಲ್ಯದಲ್ಲೇ ಶ್ರೀ ವೆಂಪಟಿ ಕೋದಂಡರಾಮಯ್ಯ ಹಾಗೂ ಏಲೂರು ವೇದಾಂತ ಪ್ರಹ್ಲಾದ ಶರ್ಮ ಅವರ ಮಾರ್ಗದರ್ಶನದಲ್ಲಿ ಕೂಚುಪುಡಿ ಶೈಲಿಯಲ್ಲಿ ಶಿಕ್ಷಣ ಪಡೆಯುವ ಅವಕಾಶ ಶ್ರೀಮತಿ ಲಕ್ಷ್ಮೀ ಅವರಿಗೆ ದೊರೆಯಿತು. ಜೊತೆಗೆ ಆಂಧ್ರ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿ ಕೂಡ ಗಳಿಸಿಕೊಂಡಿದ್ದಾರೆ.

ದೇಶವ್ಯಾಪಿ ಪ್ರಮುಖ ಉತ್ಸವಗಳಲ್ಲಿ ಚೆನ್ನೈ ಮತ್ತು ಬೆಂಗಳೂರು ದೂರದರ್ಶನಗಳಲ್ಲಿ ಕಾರ್ಯಕ್ರಮ ನೀಡಿರುವ ಶ್ರೀಮತಿ ಲಕ್ಷ್ಮೀ ಅವರು ಬೆಂಗಳೂರಿನಲ್ಲಿ ’ಲಕ್ಷ್ಮೀ ಕೂಚುಪುಡಿ ಸೆಂಟರ್’ ಸಂಸ್ಥೆ ಸ್ಥಾಪಿಸಿ ನೂರಾರು ಯುವ ನೃತ್ಯ ಕಲಾವಿದರನ್ನು ಕ್ಷೇತ್ರಕ್ಕೆ ನೀಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಕಲಿತ ಅನೇಕ ನೃತ್ಯ ಕಲಾವಿದರು ಮಾರ್ಧಯಮದಲ್ಲಿ ಅಂತರರಾಷ್ಟ್ರ ಮನ್ನಣೆ ಪಡೆದಿದ್ದಾರೆ.

ಓಂ ದುರ್ಗಾಯೈ ನಮಃ, ನೌಕಾ ಚರಿತಂ, ಜಗನ್ಮೋಹನ ಕೃಷ್ಣ, ಆಲಮೇಲು ಮಂಗಾ ಕಲ್ಯಾಣಂ, ಶ್ರೀ ವೆಂಕಟೇರ್ಶವರ ವೈಭವಂ, ಎಂಕಿನಾಯಿಡು, ಬುದ್ದ ಅಟ್ಟಗಾಢ ಹೀಗೆ ಹಲವು ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ. ಕರ್ನಾಟಕ ಸರ್ಕಾರದ ಕೂಚುಪುಡಿ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಮತಿ ಲಕ್ಷ್ಮೀ ರಾಜಾಮಣಿ ಅವರು ಪೊನ್ನಯ್ಯ ಲಲಿತಕಲಾ ಅಕಾಡೆಮಿ, ಕೇಶವ ನೃತ್ಯ ಶಾಲಾ, ಕರ್ನಾಟಕ ನೃತ್ಯಕಲಾ ಪರಿಷತ್ತು, ರಸಿಕ ಆರ್ಟ್ಸ್‌ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮುಂತಾದ ಸಂಸ್ಥೆಗಳು ನಡೆಸುವ ಕಾರ್ಯಾಗಾರಗಳಲ್ಲಿ ಕೂಚುಪುಡಿ ನೃತ್ಯ ಶೈಲಿಯ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಕೆಲವು ಸಂಸ್ಥೆಗಳಿಂದ ಸನ್ಮಾನಿತರಾಗಿರುವ ಇವರಿಗೆ ೨೦೦೦-೦೧ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.