ಸುಮಾರು ಮುನ್ನೂರು ಐವತ್ತು ವರ್ಷಗಳ ಹಿಂದೆ. ಅದೊಂದು  ಚಳಿಗಾಲದ ಬೆಳಿಗ್ಗೆ ಸೂರ್ಯನಿನ್ನೂ ಹುಟ್ಟಿಯೆ ಇರಲಿಲ್ಲ. ಆ ಕೊರೆಯುವ ತಣ್ಣನೆ ಗಾಳಿಯಲ್ಲಿ ಅರಮನೆಯ ತೋಟಗಳ ಅಧಿಕಾರಿ ಮೊಮೈ ತಾಮೂಲಿ ಬರ್ ಬುರಾ ನಿತ್ಯದಂತೆ ತೋಟವನ್ನು ಸುತ್ತುಹಾಕುತ್ತಿದ್ದ.ಉದ್ಯಾನವೆಲ್ಲವೂ ಇಬ್ಬನಿಯಿಂದ ಕೂಡಿ ಸುಂದರವಾಗಿ ಕಾಣುತ್ತಿತ್ತು.

ಮೊಮೈಗೆ ಮಗು ಅಳುತ್ತಿರುವ ಧ್ವನಿ ಕೇಳಿಸಿದಂತಾಯಿತು. ಒಂದು ನಿಮಿಷ ಅವಾಕ್ಕಾಗಿ ಹಾಗೇ ನಿಂತ. ಈ ಕೊರೆಯುವ ಚಳಿಯಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿರುವವರಾರು ಎನ್ನಿಸಿತು. ಕುತೂಹಲವನ್ನು ತಡೆಯಲಾರದೆ ಅಳುವಿನ ಧ್ವನಿಯ ದಿಕ್ಕನ್ನೇ ಅನುಸರಿಸಿ ಹೊರಟ. ಅವನು ಕಂಡ ದೃಷ್ಟ ಅವನನ್ನು ಬೆರಗುಗೊಳಿಸಿತು. ಇದ್ದುದರಲ್ಲೆ ಸ್ವಲ್ಪ ಸ್ವಚ್ಛವಾಗಿದ್ದ ಜಾಗದಲ್ಲಿ ಆರು ತಿಂಗಳೂ ತುಂಬಿರದ ಒಂದು ಕೂಸು! ಮೈಯಲ್ಲಾ ರಕ್ತವಾಗಿದೆ. ದೇವರ ದಯೆಯಿಂದ ಇನ್ನೂ  ಬದುಕಿತ್ತು. ಓಡಿಹೋಗಿ ಮಗುವನ್ನು ಕೈಗೆತ್ತಿಕೊಂಡ.

ರಕ್ತದಲ್ಲಿ ಮುಳುಗಿದವ

ಮೊಮೈಗೆ ಮಕ್ಕಳಿರಲಿಲ್ಲ. ದೇವರೇ ಒಂದು ಮಗುವನ್ನು ಕರುಣಿಸಿದನೆಂದು ಭಾವಿಸಿ ಅದನ್ನು ಸಾಕಲು ತೀರ್ಮಾನಿಸಿದ. ಮನೆಗೆ ಕರೆದೊಯ್ದ, ಮಗುವಿಗೆ ಲಚಿತ್ ಎಂದು ಹೆಸರಿಟ್ಟ. ಅಸ್ಸಾಂ ಭಾಷೆಯಲ್ಲಿ ‘ಲ’ ಎಂದರೆ ರಕ್ತ ‘ಚಿತ್’ ಎಂದರೆ ಮುಳುಗಿದವ. ಈಗ ತಾನಿಟ್ಟ ಹೆಸರು ಮುಂದೆ ಅದೆಷ್ಟು ಅರ್ಥಪೂರ್ಣವಾಗುವುದೆಂದು ಮೊಮೈಗೆ ಹೇಗೆ ತಿಳೀಯಬೇಕು? ಮುಂದೆ ಅವನು ಬೆಳೆದು ದೊಡ್ಡವನಾದಮೇಲೆ ಅದೆಷ್ಟು ಜನ ಶತ್ರುಗಳ ರಕ್ತದಿಂದ ಅದೆಷ್ಟು ಸಲ ಅವನು ತೊಯ್ಯುವಂತಾಯಿತೋ!

ಅಸ್ಸಾಮಿನ ಮೇಲೆ ಮೊಗಲರ ಕಣ್ಣು

ಮೊಗಲರು ಅಸ್ಸಾಂ ಅನ್ನು ತಮ್ಮ  ಕೈವಶ ಮಾಡಿಕೊಳ್ಳಬೇಕೆಂದು ಹದಿನೇಳು ಸಲ ದಾಳಿಮಾಡಿದರು. ಆದರೆ ಒಂದು ಸಲವೂ ಅದನ್ನು ಗೆಲ್ಲಲಾರದೆ ಹೋದರು.

೧೬೩೯ರಲ್ಲಿ ಅಲ್ಲಾ ಯಾರ್ ಖಾನನೆಂಬ ಮೊಗಲ್ ಸರದಾರನೊಬ್ಬ ಅಸ್ಸಾಂ ಮೇಲೆ ದಾಳಿಯಿಟ್ಟ. ಅಹೋಂ ವಂಶದ ರಾಜರುಗಳು ಅಸ್ಸಾಂನಲ್ಲಿ ರಾಜ್ಯವಾಳುತ್ತಿದ್ದರು. ಒಬ್ಬರಿಗೊಬ್ಬರು ವಿಪರಿತ ಕಚ್ಚಾಡುತ್ತಿದ್ದರು. ಈ ಒಳ್ಳೆಯ ಅವಕಾಶವನ್ನು ಉಪಯೋಗ ಮಾಡಿಕೊಂಡು ಅಸ್ಸಾಮಿನ ಪಶ್ಚಮ ಭಾಗವನ್ನು ಮೊಗಲ್ ಸರದಾರ ಸುಲಭವಾಗಿ ಗೆದ್ದ. ಈ ವೇಳೆಗೆ ನಮ್ಮ ಮೊಮೈ ತಾಮೂಲಿ ಬರ್ ಬುರಾ ತನ್ನ ಶೌರ್ಯ ಪರಕ್ರಮಗಳಿಂದ ಸೈನ್ಯಾಧಿಕಾರಿಯಾಗಿದ್ದ. ಅವನ ಜೊತೆ ಅಲ್ಲಾ ಯಾರ್ ಖಾನ್ ಒಂದು ಒಪ್ಪಂದ ಮಾಡಿಕೊಂಡ. ಆದರೆ ಸ್ವಲ್ಪ ಸಮಯ ಕಳೆಯುವುದರೊಳಗಾಗಿ ಮೊಗಲ್ ದೊರೆ ಶಹಜಹಾನ್ ಕಾಯಿಲೆಯಿಂದ ಮಲಗಿರುವನೆಂಬ ಸುದ್ದಿ ತಿಳಿಯಿತು. ಕೂಡಲೇ ರಾಜಾ ಜಯಧ್ವಜ ಸಿಂಹನು ಪಶ್ಚಿಮ ಆಸ್ಸಾಂನಿಂದ ಮೊಗಲರನ್ನು ಹೊರಗೆ ಅಟ್ಟಿ ತನ್ನ ರಾಜ್ಯವನ್ನು ಭದ್ರಮಾಡಿಕೊಂಡ.

ಮೀರ್ ಜುಮ್ಲಾ

ಮುಂದಿನ ಮೊಗಲ್ ದೊರೆ ಔರಂಗಜೇಬ. ಅವನ ಕೈಕೆಳಗೆ ಮೀರ್ ಜುಮ್ಲಾ ಎಂಬ ದಕ್ಷ ಸರದಾರನಿದ್ದ. ಅಸ್ಸಾಂ ಅನ್ನು ಗೆದ್ದುಕೊಂಡು ಬರುವಂತೆ ಔರಂಗಜೇಬ ಅವನನ್ನು ಕಳಿಸಿಕೊಟ್ಟ. ಭಾರೀ ಸೈನ್ಯವನ್ನು ಕಟ್ಟಿಕೊಂಡು ಬಂದ ಮೀರ್ ಜುಮ್ಲಾ ಆಸ್ಸಾಂ ಮೇಲೆ ದಾಳಿಯಿಟ್ಟ. ಗೌಹಾಟಿಯ ದಂಡನಾಯಕನಿಗೆ ಲಂಚಕೊಟ್ಟು ಅವನನ್ನು ಗೆದ್ದು, ಆಗಿನ ರಾಜಧಾನಿ ಗಾರಗಾಂವ್ ಕಡೆ ಹೊರಟ. ರಾಜನಿಗೆ ಭಯವಾಗಿದ್ದರಿಂದ ಅವನು ಚರೈದೇವ್ ಎನ್ನುವ ಹತ್ತಿರದ ಗುಡ್ಡಗಾಡು ಪ್ರದೇಶದಲ್ಲಿ ಹೋಗಿ ಅವಿತುಕೊಂಡುಬಿಟ್ಟ. ಇದು ನಡೆದದ್ದು ೧೬೯೨ರಲ್ಲಿ. ಮೀರ್ ಜುಮ್ಲಾ ಅಸ್ಸಾಂ ಅನ್ನು ಗೆದ್ದಿದ್ದು ನಿಜ ಆದರೆ ಅಲ್ಲಿ ಅವನು ಇರಲಾರದೇ ಹೋದ. ಏಕೆಂದರೆ ಅಸ್ಸಾಮಿನ ಹವಾಮಾನ ಪರಿಸ್ಥಿತಿಯಿಂದ ಸೈನಿಕರು ಕಂಗಾಲಾಗಿಬಿಟ್ಟಿದ್ದರು. ಆ ಸದಾ ಬೀಳುತ್ತಿರುವ ಮಳೆ, ಸೊಳ್ಳೆಗಳ ಕಾಟ ಇವುಗಳನ್ನು ಅವು ಕಂಡಿದ್ದೇ ಇಲ್ಲ. ಕಾಡಿನ ತುಂಬಾ ರಕ್ತಹೀರುವ ಜಿಗಣೆಗಳು. ಸಾಲದ್ದಕ್ಕೆ ಬೆಂಕಿ ಹರಡಿದಂತೆ ಸೈನ್ಯದೊಳಗೆ ಮಲೇರಿಯ ರೋಗದ ಹರಡುವಿಕೆ. ಕೊನೆಗೆ ಬೇರೆ ದಾರಿಯೇ ಇಲ್ಲದೆ ೧೬೯೩ರಲ್ಲಿ ಒಂದು ಕೌಲನ್ನು ಮಾಡಿಕೊಂಡರು. ಅದರ ಪ್ರಕಾರ ಪಶ್ಚಿಮ ಅಸ್ಸಾಂ ಅನ್ನು ಮೊಗಲರಿಗೆ ಬಿಟ್ಟುಕೊಟ್ಟು ಅಹೋಂ ರಾಜರು ಯುದ್ಧ ಮಾಡಬಾರದೆಂಬ ಷರತ್ತಾಯಿತು.

ಅಹೋಂ ರಾಜಕುಮಾರಿಯೊಬ್ಬಳನ್ನು ಮೊಗಲ್ ರಾಜವಂಶಕ್ಕೆ ಮದುವೆ ಮಾಡಿಕೊಡಬೇಕಾಯಿತು. ಇವೆಲ್ಲದರ ಜೊತೆಗೆ ಅಹೋಂ ರಾಜರು ಪ್ರತಿವರ್ಷವೂ ಲಕ್ಷಾಂತರ ರೂಪಾಯಿಗಳನ್ನು ಹಾಗೂ ೬೦ ಆನೆಗಳನ್ನು ಕಾಣಿಕೆಯಾಗಿ ಮೊಗಲ್ ದೊರೆಗೆ ಕಳಿಸಬೇಕಾಗಿತ್ತು. ಈ ಎಲ್ಲಾ ಕರಾರುಗಳನ್ನು ಮಾಡಿಕೊಂಡು ಮೀರ್ ಜುಮ್ಲಾ ದೆಹಲಿಗೆ ವಾಪಸ್ಸು ಹೊರಟ. ಆದರೆ ಅವನು ದೆಹಲಿಯನ್ನು ತಲಪಲೇ ಇಲ್ಲ, ದಾರಿಯಲ್ಲೇ ಪ್ರಾಣಬಿಟ್ಟ.

ಲಚಿತನಿಗೆ ಅಪಮಾನ

ಈ ಮಧ್ಯೆ ಮೊಮೈ ತಾಮೂಲಿ ಸಾಕುತ್ತಿದ್ದ ಮಗು ಲಚಿತ ದಷ್ಟಪುಷ್ಟವಾಗಿ ಬೆಳೆದು ಸಾಹಸದಿಂದ  ಕೂಡಿದ ತರುಣನಾಗಿದ್ದ. ಅವನ ಪರಾಕ್ರಮ ಪ್ರವೃತ್ತಿಯು ಅಹೋಂ ದೊರೆಗಳತನಕ ಮುಟ್ಟಿ ಅವರು ಅದನ್ನು ಮೆಚ್ಚುವಂತಾಗಿತ್ತು. ಜೊತೆಗೆ ಮೊಮೈ ತಾಮೂಲಿಯ ಮಗಳೊಬ್ಬಳನ್ನು ರಾಜನಿಗೆ ವಿವಾಹ ಮಾಡಿಕೊಟ್ಟಿದ್ದರು. ಈ ಮೀರ್ ಜುಮ್ಲಾ ದಾಳಿ ಮಾಡಿದ ಸಮಯದಲ್ಲಿ ನಾರಾ ಗುಡ್ಡಪ್ರದೇಶದ ರಾಜನ ವಿರುದ್ಧ ಮಾಡಲು ಲಚಿತನನ್ನು ಕಳಿಸಿಕೊಟ್ಟಿದ್ದರು. ನಾರಾ ಗುಡ್ಡಪ್ರದೇಶದಲ್ಲಿ ವಿಜಯವನ್ನು ಸಂಪಾದಿಸಿ ವಾಪಸ್ಸು ಬಂದಾಗ ಲಚಿತ್ ನನ್ನು ಸ್ವಾಗತಿಸುವವರೇ ಇಲ್ಲ. ಎಲ್ಲ ಕಡೆ ಏನೋ ದುಗುಡ. ವಿಚಾರಮಾಡಿದಾಗ ಲಚಿತನಿಗೆ ಜುಮ್ಲಾನ ದಾಳಿಯ ವಿಷಯ ತಿಳಿಯಿತು. ಆ ವೇಳೆಗಾಗಲೇ ಮೀರ್ ಜುಮ್ಲಾನು ಒಪ್ಪಂದಗಳನ್ನು ಮಾಡಿಕೊಂಡು ರಾಜಕುಮಾರಿಯನ್ನು ಕರೆದುಕೊಂಡು ಗಾರಗಾಂವ್ ಅನ್ನು ಬಿಟ್ಟು ಬಿಟ್ಟಿದ್ದ. ಲಚಿತ್ ಇದ್ದಿದ್ದರೆ ಹೀಗಾಗಲು ಬಿಡುತ್ತಿರಲಿಲ್ಲ. ಜುಮ್ಲಾನನು ಕರೆದೊಯ್ಯುತ್ತಿದ್ದ ತನ್ನ ಸಹೋದರಿಯನ್ನು ವಾಪಸ್ಸು ಕರೆದುಕೊಂಡು ಬರಬೇಕೆಂದು ಲಚಿತ್ ಜುಮ್ಲಾನನ್ನು ಅಟ್ಟಿಸಿಕೊಂಡು ಹೋದ. ಆದರೆ ಅದು ಫಲಿಸಲಿಲ್ಲ. ಅವನು ತುಂಬಾ ದೂರ ಹೋಗಿಬಿಟ್ಟದ್ದ. ಬೇರೆ ದಾರಿಕಾಣದೆ ಲಚಿತ್ ಗಾರಗಾಂವಿಗೆ ವಾಪಸ್ಸಾದ. ಆದರೆ ಅವನು ಮನಸ್ಸು ಮಾತ್ರ ಕೋಪದಿಂದ ಕುರಿಯುತ್ತಿತ್ತು.

ಮೊಗಲರ ವಿರುದ್ಧ ಸಿದ್ಧತೆ

ರಾಜ ಜಯಧ್ವಜ ಸಿಂಹನಿಗೂ ಈ ಕರಾರಿನಿಂದ ಅಸಮಾಧಾನವಾಗಿತ್ತು. ಕೌಲನ್ನು ಮುರಿದು ಮೊಗಲರ ಮೇಲೆ ದಾಳಿಯಿಡಬೇಕೆಂದು ತವಕಿಸುತ್ತಿದ್ದ. ಆದರೆ ಅವನ ಪ್ರಧಾನಿ ಆಟಾನ್ ಬುಧ ಗೋಹಾ ಬೋರಪತ್ರ ಡಾಂಗರಿಯಾ ದುಡುಕಬಾರದೆಂದು ಬುದ್ಧಿವಾದ ಹೇಳಿದ.”ಜಾಣನಾದವನು ಸರಿಯಾದ ಕಾಲ ಒದಗಿ ಬರುವವರೆಗೆ ಯಾವ ಕೆಲಸವನ್ನೂ ಕೈಗೊಳ್ಳವುದಿಲ್ಲ. ಮೊದಲು ನಮ್ಮ ಸೈನ್ಯವನ್ನು ರೂಢಿಸಿಕೊಳ್ಳೋಣ. ನಂತರ ಮೊಗಲರನ್ನು ಹೊರಗಟ್ಟೋಣ. ಸದ್ಯಕ್ಕೆ ನಮ್ಮಲ್ಲಿರುವ ಮದ್ದುಗುಂಡುಗಳು ಬಹಳ ಸ್ವಲ್ಪ. ಸೈನ್ಯವೂ ಸಂಘಟಿತವಾಗಿಲ್ಲ. ಸೈನ್ಯವನ್ನು ಬಿಗಿಮಾಡಿ, ಶಸ್ತ್ರಾಸ್ತ್ರಗಳನ್ನು ಸಿದ್ಧಮಾಡಿಕೊಂಡು ದಾಳಿಯಿಟ್ಟರೇನೇ ನಾವು ಮೊಗಲರ ವಿರುದ್ಧ ಜಯಗಳಿಸಬಹುದು” ಎಂದು ಹೇಳಿದ.

ಸರಿ, ಸಿದ್ಧತೆಗಳು ಶುರುವಾದವು. ಸುಸಜ್ಜಿತವಾದ ದೊಡ್ಡ ಸೈನ್ಯವನ್ನು ನಿರ್ಮಿಸಿದರು. ಅಸ್ಸಾಂನಲ್ಲಿ ನದಿಗಳು ಬಹಳ. ಆದ್ದರಿಂದ ನೌಕಾಪಡೆಯನ್ನೂ ಸಿದ್ಧಗೊಳಿಸಲಾಯಿತು. ಮುಂದಿನ ಪ್ರಶ್ನೆ ಅಕ್ಕಪಕ್ಕದ ರಾಜರುಗಳಿಂದಲೂ ಬೆಂಬಲವನ್ನು ಗಳಿಸುವುದು. ಅವರುಗಳನ್ನು ಸಂಪರ್ಕಿಸಿ ಸೇನೆಯನ್ನು ಕಳಿಸಿಕೊಟ್ಟು ಸಹಕರಿಸುವಂತೆ ವಿನಂತಿಸಲು ದೂತರನ್ನು ಕಳಿಸಿಕೊಟ್ಟರು, ‘ಈ ಮೊಗಲರನ್ನು ಹೊರಗೆ ದಬ್ಬಿ ನಮ್ಮ ನಾಡನ್ನು ಸ್ವತಂತ್ರಗೊಳಿಸಲು ಹೊರಟಿದ್ದೇವೆ. ಈ ದೇಶವು ಸ್ವತಂತ್ರವಾಗಬೇಕು. ಈ ಸ್ವಾತಂತ್ಯ್ರ ಯುದ್ಧದಲ್ಲಿ ದಯವಿಟ್ಟು ನಮ್ಮೊಡನೆ ಸಹಕರಿಸಿ’ ಎಂದು ಕಾಗದದಲ್ಲಿ ಬರೆಯಲಾಗಿತ್ತು. ಖಾಸಿ ಮತ್ತು ಜಯಂತಿಯ ದೊರೆಗಳು ಹಾಗು ದಾಚರಿಯಾದ ದೊರೆ ಇವರೆಲ್ಲರೂ ಅವಶ್ಯಕತೆ ಬಿದ್ದಲ್ಲಿ ಖಂಡಿತವಾಗಿ ಸಹಾಯ ಮಾಡುವುದಾಗಿ ಭರವಸೆ ಕೊಟ್ಟರು. ಯುದ್ಧದ ಸಿದ್ಧತೆಗಳೆಲ್ಲವನ್ನು ಅಹೋಂ ದೊರೆಯೇ ನಿಂತು ಉಸ್ತುವಾರಿ ಮಾಡುತ್ತಿದ್ದ.

ರಣಾಂಗಣದಲ್ಲಿ ಶಕ್ತಿ ತೋರಿಸಲಿ

ತುಂಬಾ ಕಷ್ಟಸಾಧ್ಯವಾದ ಈ ತಯಾರಿ ತನ್ನ ಆಹುತಿಯನ್ನು ತೆಗದುಕೊಳ್ಳವುದನ್ನು ಮರೆಯಲಿಲ್ಲ. ರಾಜ ಜಯಧ್ವಜ ಸಿಂಹ ಕಾಯಿಲೆಯಿಂದ ಮಲಗುವಂತಾಯಿತು. ಇನ್ನೇನು ಸಾಯುವ ಸ್ಥಿತಿಗೆ ಮುಟ್ಟಿದ ರಾಜನು ಮಗ ಚಕ್ರಧ್ವಜ ಸಿಂಹನನ್ನು ಕರೆಸಿ “ನಾನು ಬದುಕಿರುವಾಗ ನಮ್ಮ ನಾಡಿನ ಪಶ್ಚಿಮ ಭಾಗದಿಂದ ಮೊಗಲರನ್ನು ಓಡಿಸಲು ಸಾಧ್ಯವಾಗಲಿಲ್ಲವೆಂದು ನನಗೆ ತುಂಬಾ ಚಿಂತೆಯಾಗಿದೆ. ಆ ಕೆಲಸ ಪೂರ್ತಿಯಾಗುವವರೆಗೆ ನನ್ನ ಆತ್ಮಕ್ಕೆ ಶಾಂತಿ ಇರದು’ ಎಂದು ತನ್ನ ಅಳಲನ್ನು ತೋಡಿಕೊಂಡ. ತನ್ನ ತಂದೆಯ ದೇಶಭಕ್ತಿಯನ್ನು ಕಂಡು ಪುಳಕಿತನಾದ ಯುವರಾಜ ಚಕ್ರಧ್ವಜ ಸಿಂಹನು “ನಮ್ಮ ತಾಯಿನಾಡಿಗೆ ಉಂಟಾಗಿರುವ ಕಳಂಕನ್ನು ನಿರ್ಮೂಲ ಮಾಡುತ್ತೇವೆಂದು ನಿಮಗೆ ಮಾತು ಕೊಡುವೆ” ಎಂದು ಹೇಳಿದಾಗ ದೊರೆಗೆ ಮನಸ್ಸಿನ ಭಾರವು ಕಡಿಮೆಯಾದಂತಾಯಿತು. ತನ್ನ ಪ್ರಾಣವನ್ನು ಬಿಟ್ಟ.

ಮುಂದಿನ ರಾಜ ಚಕ್ರಧ್ವಜ ಸಿಂಹ. ಅವನು ಸಿಂಹಾಸನವನ್ನು ಏರುವ ವೇಳೆಗೆ ಯುದ್ಧದ ಸಿದ್ಧತೆಗಳು ಮುಗಿದಿದ್ದವು. ಒಂದು ದಿನ ಆಸ್ಥಾನಕ್ಕೆ ಮೊಗಲ್ ರಾಜನ ಕಡೆಯಿಂದ ಒಬ್ಬ ದೂತ ಬಂದ. ಅವನು ಕೆಲವು ಉಡುಪುಗಳನ್ನು ತಂದಿದ್ದ. ಮೊಗಲ್ ರಾಜನ ಸಾಮಂತನೆಂಬುದರ ಕುರುಹಾಗಿ ರಾಜನು ಆ ಉಡುಪನ್ನು ಧರಿಸಬೇಕೆಂದು ತನ್ನ ರಾಜನು ಹೇಳಿಕಳಿಸಿದ್ದಾನೆಂದು ಅವನು ತಿಳಿಸಿದ. ಅಹೋಂ ದೊರೆಗೆ ಬೆಂಕಿಯಂತಹ ಕೋಪ ಬಂತು. “ಇಂದ್ರನ ವಂಶಕ್ಕೆ ಸೇರಿದ ನನ್ನನ್ನು ಮೊಗಲ ಸಾಮಂತನೆಂದು ಕರೆಯುವುದಕ್ಕೆ ನಿನಗೆಷ್ಟು ಪೊಗರು? ನಿನ್ನ ಉದ್ಧಟತನಕ್ಕಾಗಿ ನಿನ್ನ ತಲೆಯನ್ನೇ ತೆಗೆಯುತ್ತಿದ್ದೆ. ಆದರೆ ನೀನು ದೂತನಾದ್ದರಿಂದ ಜೀವಸಹಿತ ಬಿಟ್ಟಿದ್ದೇನೆ. ನಾವು ಯಾರಿಗೂ ಸಾಮಂತರಲ್ಲವೆಂದು ನಿನ್ನ ದೊರೆಗೆ ತಿಳಿಸು. ಅಷ್ಟು ಬೇಕಿದ್ದರೆ ರಣಾಂಗಣದಲ್ಲಿ ಉತ್ತಮನೆಂಬುದನ್ನು ನನಗೆ ತೋರಿಸಿಕೊಡಲಿ” ಎಂದು ಉತ್ತರ ಕೊಟ್ಟು ಕಳಿಸಿದ.

ರಾಮಸಿಂಹ ಹೊರಟ

ದೂತನು ತಂದ ಸುದ್ದಿಯಿಂದ ಔರಂಗಜೇಬ ಕಿಡಿಕಿಡಿಯಾದ. ಈ ಸೊಕ್ಕಿನ ಅಸ್ಸಾಮೀಯರಿಗೆ ಸರಿಯಾದ ಪಾಠ ಕಲಿಸಬೇಕೆಂದುಕೊಂಡ. ಔರಂಗಜೇಬನು ಬಹು ಉಪಾಯಗಾರ. ಆಗ್ರಾ ಕೋಟೆಯಿಂದ ಶಿವಾಜಿಯು ತಪ್ಪಿಸಿಕೊಂಡಿದ್ದ. ತನ್ನ ಸೇನಾಧಿಕಾರಿ ರಾಮಸಿಂಹನ ಕೈವಾಡ ಇದರಲ್ಲಿ ಇರಲೇಬೇಕೆಂದು ಔರಂಗಜೇಬನಿಗೆ ಶಂಕೆ ಇದ್ದೇ ಇತ್ತು. ಅವನು ರಾಮಸಿಂಹನನ್ನು  ಕರೆದು ಅಸ್ಸಾಂಅನ್ನು ಗೆದ್ದು ಬರಬೇಕೆಂದು ಅದೇಶ ನೀಡಿದ. ಅವನ ಮನಸ್ಸಿನಲ್ಲಿದ್ದ ವಿಚಾರ ಸುಲಭವಾಗಿ ಅರ್ಥವಾಗುವಂಥಾದ್ದು. ಅಸ್ಸಾಂಗೆ ಹೋಗುವುದೆಂದರೆ ಆಗ ಎಲ್ಲರೂ ಹೆದರುತ್ತಿದ್ದರು, ಅಸ್ಸಾಂನಲ್ಲಿ ಮಲೇರಿಯ ರೋಗ ಮತ್ತು ಮಾಟಮಂತ್ರಗಳು ಹೆಚ್ಚೆಂದು ಜನ ನಂಬಿದ್ದರು. ಅಸ್ಸಾಂ ಮೇಲೆ ಯುದ್ಧ ಮಾಡಲು ಕಳಿಸಿದ ಯಾವ ವೀರನೂ ಜೀವಸಹಿತ ವಾಪಸ್ಸು ಬರುತ್ತಲೇ ಇರಲಿಲ್ಲ. ಆದ್ದರಿಂದ ರಾಮಸಿಂಹನೇನಾದರೂ ಸೋತು ಅಲ್ಲೇ ಸತ್ತರೆ ಒಳ್ಳೆಯದು ಅಥವಾ ಅಕಸ್ಮಾತ್ ಆತ ಅಸ್ಸಾಂ ಅನ್ನು ಗೆದ್ದರೆ ಮತ್ತೂ ಒಳ್ಳೆಯದೇ, ಹಾಗಾದಾಗ ಅಸ್ಸಾಮೀಯರಿಗೆ ಪಾಠ ಕಲಿಸಿದಂತಾಗುತ್ತೆ ಅಷ್ಟೆ. 

ಅಳುತ್ತಿದ್ದ ಮಗುವನ್ನು ಕಂಡ

ಅಸ್ಸಾಂಗೆ ಹೋಗೆಂದು ಹೇಳಿರುವುದು ಪರೋಕ್ಷವಾಗಿ ವಿಧಿಸಿರುವ ಶಿಕ್ಷೆಯೆಂದು ರಾಮಸಿಂಹನಿಗೆ ಚೆನ್ನಾಗಿ ಗೊತ್ತಿತ್ತು. ಒಂದು ಸಣ್ಣ ವಿನಂತಿಯನ್ನು ಔರಂಗಜೇಬನ ಮುಂದಿಟ್ಟ: “ಮಹಾಸ್ವಾಮಿ, ಅಸ್ಸಾಂನ ತುಂಬಾ ಮಾಯ ಮಾಟ ಮಾಡುವವರಿದ್ದಾರೆ. ಅವುಗಳ ನಿವಾರಣೆಗಾಗಿ ದೈವೀಶಕ್ತಿಯುಳ್ಳ ಸಾಧುವೊಬ್ಬನನ್ನು ನನ್ನ ಜೊತೆ ಕರೆದುಕೊಂಡು ಹೋಗಲು ದಯವಿಟ್ಟು ಅನುಮತಿ ನೀಡಬೇಕು” ಎಂದ. ಔರಂಗಜೇಬನು ಒಪ್ಪಿಗೆ ಸೂಚಿಸಿದಾಗ ಸಿಖ್ಖರ ಒಂಬತ್ತನೇ ಗುರು ತೇಗಬಹದ್ದೂರರನ್ನು ತನ್ನ ಜೊತೆ ಕಳಿಸಿಕೊಡುವಂತೆ ವಿನಂತಿಸಿಕೊಂಡು. ಈ ಸಿಖ್ಖರ ಗುರುವಿನ ಮೇಲೆ ಔರಂಗಜೇಬಿನಿಗೆ ಕೋಪವಿರುವುದು ರಾಮಸಿಂಹನಿಗೆ ಗೊತ್ತಿತ್ತು. ಏನಾದರೊಂದು ನೆಪಹೂಡಿ ಅವನನ್ನು ಮುಗಿಸಿಬಿಡಲು ಔರಂಗಜೇಬನು ಹೇಸುವುದಿಲ್ಲವೆಂಬುದೂ ರಾಮಸಿಂಹನಿಗೆ ಗೊತ್ತಿತ್ತು. ಅದನ್ನು ತಡೆಯಬೇಕೆಂದೇ ರಾಮಸಿಂಹನು ಈ ಉಪಾಯ ಮಾಡಿದ್ದು. ಗುರು ತೇಗ ಬಹದ್ದೂರರು ಅಸ್ಸಾಮಿನ ದಾಳಿಯಲ್ಲಿ ರಾಮಸಿಂಹನಿಗೆ ಜೊತೆ ಕೊಟ್ಟಿದ್ದು ಹೀಗೆ. ರಾಮಸಿಂಹನು ೬೩೦೦೦ ಸೈನಿಕರು, ಒಂದು ದೊಡ್ಡ ಅಶ್ವಸೈನ್ಯ ಮತ್ತು ಭಾರಿ ತುಪಾಕಿಗಳ ಸಮೇತ ದಾಳಿಗೆ ಹೊರಟ, ಅವನು ಮೊದಲು ಹೋಗಿದ್ದು ಢಾಕಾಗೆ, ಅಲ್ಲಿಯ ನವಾಬನನ್ನು ಸಹಾಯಮಾಡಬೇಕೆಂದು ರಾಮಸಿಂಹ ಕೇಳಿದಾಗ ನವಾಬನು ಸಂತೋಷದಿಂದ ಒಪ್ಪಿದ. ಈಗ ರಾಮಸಿಂಹನ ಸೈನ್ಯ ಜನಸಾಗರದಂತೆ ಕಾಣುತ್ತಿತ್ತು. ಸಹಾಯಕರನ್ನೂ ಸೇರಿಸಿದರೆ ಅಂದಾಜು ಮೂರು ಲಕ್ಷ ಜನರು ಅವನ ಕೈಕೆಳಗಿದ್ದರು. ಒಳ್ಳೆಯ ಪ್ರವಾಹದೋಪಾದಿಯಲ್ಲಿ ಅಸ್ಸಾಂ ಹಿಂದೂ ರಾಜ್ಯವನ್ನು ಮುಳುಗಿಸಿಬಿಡಲು ಸೈನ್ಯವು ಮುಂದುವರೆಯಿತು.

ಅರಮನೆಗೆ ಆಹ್ವಾನ

ಆ ಕಡೆ ಅಹೋಂ ದೊರೆಗಳೇನೂ ಸುಮ್ಮನೆ ಕುಳಿತಿರಲಿಲ್ಲ. ಗೌಹಾಟಿಯಲ್ಲಿರುವ ಸೈನ್ಯಕ್ಕೆ ಸೂಕ್ತನಾದ ಸರದಾರನನ್ನು ನೇಮಿಸುವುದು ಮೊದಲು ಕೆಲಸವಾಗಿತ್ತು. ಏಕೆಂದರೆ ಯುದ್ಧದ ಮುಖಭಾರ ಇದ್ದುದೇ ಅಲ್ಲಿ. ಅಲ್ಲಿರುವ ಸೈನ್ಯಾಧಿಕಾರಿಯು ಎಲ್ಲರ ವಿಶ್ವಾಸಕ್ಕೆ ಪಾತ್ರನಾದವನೂ, ದೇಶಭಕ್ತನೂ, ರಾಜಭಕ್ತಿಯುಳ್ಳವನೂ, ಧೈರ್ಯಶಾಲಿಯೂ ಯುದ್ಧದ ತಂತ್ರಗಳನ್ನು ಅರಿತವನೂ, ಪರಾಕ್ರಮಿಯೂ ಮತ್ತು ಜನ್ಮತಃ ನಾಯಕನೂ ಆದಂತಹವನಾಗಿರಬೇಕಿತ್ತು. ಈ ಸ್ಥಾನಕ್ಕೆ ಲಚಿತನೇ ಅತ್ಯಂತ ಸೂಕ್ತನಾದವನೆಂದು ತೀರ್ಮಾನಿಸಲಾಯಿತು.

ಅರಮನೆಯ ದರ್ಬಾರಿಗೆ ಬರಬೇಕೆಂದು ಮಾರನೆಯ ದಿನ ಲಚಿತನಿಗೆ ಆಹ್ವಾನ ಹೋಯಿತು. ಆ ಪ್ರಕಾರ ಲಚಿತ್ ಅರಮನೆಗೆ ಬಂದ. ರಾಜನಿಗೆ ವಂದಿಸಲು ಮಂಡಿಯೂರಿದ.

ಬರ್ಪುಕಾನ್

ಆಗ ಒಂದು ವಿಲಕ್ಷಣ ಸಂಗತಿ ನಡೆಯಿತು. ರಾಜನ ಬಳಿಯಲ್ಲಿ ಅಂಗರಕ್ಷಕ ನಿಂತಿದ್ದ. ಲಚಿತನು ಮಂಡಿಯೂರುತ್ತಲೇ ಅವನು ಲಚಿತನ ಪೇಟವನ್ನು ಹಾರಿಸಿ ಎತ್ತಿಕೊಂಡು ಓಡಿಹೋಗಿಬಿಟ್ಟ. ಲಚಿತ್ ಕೋಪದಿಂದ ಕೆಂಡವಾಗಿಬಿಟ್ಟ, ಎಂತಹ ಅವಮಾನ! ನಾನು ರಾಜನ ಎದುರಿಗಿದ್ದೇನೆ ಎನ್ನುವುದು ಅವನಿಗೆ ಮರೆತೇಹೋಯಿತು. ಕೂಡಲೇ ಅಟ್ಟಿಸಿಕೊಂಡು ಹೋಗಿ ಸಿಂಹಾಸನದ ಹಿಂದೆ ಅವಿತುಕೊಂಡಿದ್ದ ಅಂಗರಕ್ಷಕನನ್ನು ಜುಟ್ಟು ಹಿಡಿದು ಕರೆದುಕೊಂಡು ಬಂದ. ಕತ್ತಿಯನ್ನು ಒರೆಯಿಂದ ಎಳೆದ. ಇನ್ನೇನು ಆ ರಾಕ್ಷಸನ ತಲೆಯನ್ನು ಕತ್ತರಿಸಿಹಾಕುವುದರಲ್ಲಿದ್ದಾಗ, ರಾಜ ಅವನನ್ನು ತಡೆದು ಕೇಳಿದ: “ಇದೇನು ಲಚಿತ್? ನಮ್ಮ ಎದುರಿನಲ್ಲಿ ಕತ್ತಿ ಹೊರಗೆಳೆಯುತ್ತಿ? ಎಷ್ಟು ಧೈರ್ಯ?”

ಲಚಿತ್ ಹೇಳಿದ: “ಮಹಾಪ್ರಭು, ಇವನು ನನ್ನ ಪೇಟವನ್ನು ಹಾರಿಸಿದ್ದಾನೆ. ಇಂತಹ ಅವಮಾನವನ್ನು ಯಾವ ಯೋಧನೂ ಸಹಿಸಲಾರ. ಇದು ನನ್ನ ಗೌರವದ ಪ್ರಶ್ನೆ.”

ರಾಜನು ಹೇಳಿದ: “ಚಿಂತಿಸಬೇಡ, ಇವನು ಹಾಗೆ ಮಾಡಿದ್ದು ನನ್ನ ಅಪ್ಪಣೆಯ ಪ್ರಕಾರವೇ. ನಿನ್ನ ಧೈರ್ಯವನ್ನು ಆತ್ಮಗೌರವವನ್ನು ಪರೀಕ್ಷೆ ಮಾಡುವುದಕ್ಕೋಸ್ಕರ ಹೀಗೆ ಮಾಡಿದೆ. ನೀನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವೆ.”

ಗೌರವವನ್ನು ಪ್ರಾಣಕ್ಕಿಂತ ಮಿಗಿಲಾಗಿ ಕಾಣುವಂತಹ ಮನುಷ್ಯನೇ ರಾಜನಿಗೆ ಬೇಕಾಗಿದ್ದದ್ದು. ತನ್ನ ಕೈಯಿಂದಲೇ ರಾಜ ಲಚಿತನಿಗೆ ಪೇಟವನ್ನು ತೊಡಿಸಿದ. ಲಚಿತನನ್ನು ಬರ್ ಪುಕಾನ್ (ದಂಡನಾಯಕ) ಎಂದು ಘೋಷಿಸಲಾಯಿತು.

ಮೊಗಲರಿಂದ ಮುಂಚೆ ಆಗಿದ್ದ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ಲಚಿತನಿಗೆ ಸಂತೋಷವೇ ಆಯಿತು. ಗಾರಗಾಂವ್ ನಿಂದ ಗೌಹಾಟಿಗೆ ಅವನು ಪ್ರಯಾಣ ಬೆಳೆಸಿದ.

ಲಚಿತನು ಈಗ ಬರ್ ಪುಕಾನ್. ಮೊಗಲರನ್ನು ಹೊರಹಾಕುವುದಾಗಿ ದೊರೆಗೆ ವಚನ ಕೊಟ್ಟು ಹೊರಟಿದ್ದಾನೆ. ಆಹೋಂ ಸೈನ್ಯ ಬ್ರಹ್ಮಪುತ್ರಾ ನದಿಯಲ್ಲಿ ದೋಣಿಗಳಲ್ಲಿ ಪ್ರಯಾಣ ಹೊರಟಿತು. ಸೈನ್ಯ ಸರಾಯಿ ಘಾಟನ್ನು ತಲಪಿತು. ದಾರಿಯಲ್ಲಿ ಸಿಕ್ಕಿದ ಸಣ್ಣಪುಟ್ಟ ಕೋಟೆ ಕೊತ್ತಲಗಳನ್ನು ಗೆದ್ದು ಸೈನ್ಯ ಮುಂದುವರೆಯುತ್ತಿತ್ತು. ಇಟಖುಲಿ (ಈಗಿನ ಗೌಹಾಟಿ ಹತ್ತಿರ) ಕೋಟೆಯಲ್ಲಿದ್ದ ಮೊಗಲ್ ಸರದಾರ ಸೈಯದ್ ಫಿರೋಜ್ ಖಾನನಿಗೆ ಗುಪ್ತಚಾರರಿಂದ ಸುದ್ಧಿ ಗೊತ್ತಾಯಿತು. ಇನ್ನೇನು ಆಹೋಂ ಸೈನಿಕರು ಈಗೋ ಆಗೋ ಅನ್ನುವುದರೊಳಗಾಗಿ ದಾಳಿಮಾಡಿಬಿಡಬಹುದೆಂದು ಬೇಹುಗಾರರು ತಿಳಿಸಿದರು. ‘ಬರಲಿ ಬರಲಿ ಒಂದು ಕೈ ನೋಡುವಾ’ ಎಂದು ಸರದಾರ ಯುದ್ಧಕ್ಕೆ ಸಿದ್ಧನಾದ. ಲಚಿತನ ಸೈನ್ಯವನ್ನು ಅವರು ಫಿರಂಗಿಗಳಿಂದಲೇ ಸ್ವಾಗತಿಸಿದರು. ಮೊಗಲರ ಸೈನ್ಯ ಬಲಶಾಲಿಯಾಗಿತ್ತು. ಈಗೇನು ಮಾಡುವುದು? ಫಿರಂಗಿಗಳನ್ನು ಉಪಯೋಗಕ್ಕೆ ಬಾರದಂತೆ ಮಾಡುವ ತನಕ ಲಚಿತನಿಗೆ ಗೆಲುವುಸಿಗುವ ಸಂಭವವೇ ಇರಲಿಲ್ಲ. ಇನ್ನು ಇಟಿಖುಲಿಯನ್ನು ವಶಪಡಿಸಿಕೊಳ್ಳುವುದು ಕನಸಾಗೇ ಉಳಿದುಬಿಡುತ್ತದೆ.

ಏನಾಯಿತು ಫಿರಂಗಿಗಳಿಗೆ?

ಇರಲಿ ಇದಕ್ಕೊಂದು ಉಪಾಯ ಮಾಡೋಣವೆಂದು ಲಚಿತ ಯೋಚನೆ ಮಾಡಿದ. ಅಂದೇ ರಾತ್ರಿ ಕೆಲವು ಗುಪ್ತಚಾರರನ್ನು ಒಟ್ಟಿಗೆ ಸೇರಿಸಿ ತನ್ನ ಯೋಜನೆಯನ್ನು ಅವರಿಗೆ ತಿಳಿಸಿದ. ಗುಪ್ತಚಾರರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ಬೇರೆಬೇರೆ ದಿಕ್ಕುಗಳಲ್ಲಿ ಅವರನ್ನು ಇಟಖುಲಿಗೆ ಕಳಿಸಿಕೊಡಲಾಯಿತು. ಮಧ್ಯ ರಾತ್ರಿಯಲ್ಲಿ ಇದ್ದಕ್ಕಿದ್ದಂತೇ ಗುಂಡುಗಳ ಶಬ್ದ ಕೇಳಿ ಬಂದಿದ್ದರಿಂದ ಗಾಬರಿಗೊಂಡ ಮೊಗಲ್ ಸರದಾರ ತನ್ನ ಜೊತೆಗಾರರನ್ನು ಕರೆದುಕೊಂಡು ಅದೇನೆಂದು ತಿಳಿದುಕೊಳ್ಳಲು ಶಬ್ದ ಬಂದ ಕಡೆಗೆ ಓಡಿದ. ಇದೇ ಸಮಯಕ್ಕಾಗಿ ಕಾದಿದ್ದ ಗುಪ್ತಚಾರರ ಇನ್ನೊಂದು ಗುಂಪು ಎಲ್ಲಾ ಫಿರಂಗಿಗಳಲ್ಲೂ ನೀರನ್ನು ತುಂಬಿಸಿ ಅಲ್ಲಿಂದ ಕಾಲ್ಕಿತ್ತರು.

ಮಾರನೆಯ ಬೆಳಗ್ಗೆ ಲಚಿತನ ಸೈನಿಕರು ಧೈರ್ಯದಿಂದ ಕೋಟೆಗೆ ಲಗ್ಗೆ ಹಾಕುತ್ತಿರುವುದನ್ನು ನೋಡಿದ ಮೊಗಲ್ ಸರದಾರನಿಗೆ ಆಶ್ಚರ್ಯವಾಯಿತು. ಫಿರಂಗಿಗಳನ್ನು ಉಪಯೋಗಿಸಿ ಅವರನ್ನು ಧ್ವಂಸ ಮಾಡಿರೆಂದು ಆತ ಆಜ್ಞೆ ಮಾಡಿದೆ. ಆದರೆ ಒಂದಾದರೂ ಫಿರಂಗಿ ಹೊಡೆಯಲ್ಲೊಲ್ಲದು. ಎಲ್ಲಾ ತುಸ್ ಆಗಿಬಿಟ್ಟಿದ್ದವು.  ಅಸ್ಸಾಮೀಯರ ಧಾಳಿಯನ್ನು ತಾಳಲಾರದೆ ಮೊಗಲ್ ಸೈನ್ಯ ದಿಕ್ಕಾಪಾಲಾಗಿ ಚದುರಿಹೋಯಿತು. ಲಚಿತನು ಸೈನ್ಯದ ಪೈಕಿ ಹೆಚ್ಚು ಧೈರ್ಯಶಾಲಿಗಳು ಮುನ್ನುಗ್ಗಿ ಕೋಟೆಯ ಬಾಗಿಲನ್ನು ತಳ್ಳಿ ತೆಗೆದೇಬಿಟ್ಟರು. ಲಚಿತನು ಒಳಗೆ ಬರುತ್ತಿದ್ದಂತೆಯೇ ’ಲಚಿತನಿಗೆ ಜಯವಾಗಲಿ’ ಎನ್ನುವ ಘೋಷಣೆ ಗಗನಮುಟ್ಟಿತು, ಲಚಿತನ ಜಯದ ಸುದ್ದಿಯನ್ನು ತಿಳಿದಾಗ ರಾಜನಿಗೆ ತುಂಬಾ ಸಮಾಧಾನವಾಯಿತು. 

ಲಿಚತ್ ಬದುಕಿರುವವರೆಗೆ ಗೌಹಾಟಿಯನ್ನು ಬಿಟ್ಟುಕೊಡಲಿಲ್ಲಾ ಎಂದು ತಿಳಿಸಿ

ಈ ವೇಳೆಗೆ ಮೊಗಲ್ ಸೈನ್ಯವು ಪಶ್ಚಿಮ ಅಸ್ಸಾಂಅನ್ನು ತಲಪಿತ್ತು. ರಾಮಸಿಂಹನು ಮುಂದುವರೆದು ಗೌಹಾಟಿಯ ವಾಯುವ್ಯದಲ್ಲಿ ೧೫ ಮೈಲಿ ದೂರವಿರುವ ಹಾಜೋ ಎನ್ನುವ ಜಾಗದಲ್ಲಿ ಬೀಡುಬಿಟ್ಟ.

ಇಷ್ಟರಲ್ಲಿ ಮಳೆ ಆರಂಭವಾಯಿತು, ಅಸ್ಸಾಮಿನಲ್ಲಿ ಸುರಿಯುವ ಧಾರಾಕಾರ ಮಳೆ ಮೊಗಲ್ ಸೈನ್ಯಕ್ಕೆ ಅಭ್ಯಾಸವಿರಲಿಲ್ಲ, ಜೊತೆಗೆ ಮಲೇರಿಯಾ ತನ್ನ ಆಹುತಿಯನ್ನು ತೆಗೆದುಕೊಳ್ಳದೆ ಬಿಡಲಿಲ್ಲ. ಗೌಹಾಟಿ ಕೋಟೆಯನ್ನು ಲಚಿತ್ ಭದ್ರವಾಗಿ ಕಾಯುತ್ತಿದ್ದ. ಶುಕ್ರೇಶ್ವರ ಗುಡ್ಡದ ಮೇಲೆ ಲಚಿತನದ ಸೈನ್ಯ ಬೀಡುಬಿಟ್ಟಿತ್ತು. ತನ್ನ ಯುದ್ಧನೀತಿಯನ್ನು ಅವನು ಇಲ್ಲಿಂದ ನಿರೂಪಿಸುತ್ತಿದ್ದ.

ಯುದ್ಧದಲ್ಲಿ ಎಲ್ಲಕ್ಕಿಂತ ಮುಖ್ಯಪಾತ್ರ ವಹಿಸುವುದು ಸೈನಿಕರ ಮನೋಬಲ. ತನ್ನ ಶತ್ರುವಿನ ಪಾಳೆಯದಲ್ಲಿ ಕೆಲವು ಜನ ಫಕೀರವೇಷಧಾರಿಗಳು ನುಸುಳುವಂತೆ ಲಚಿತನು ಬುದ್ದಿವಂತಿಕೆಯಿಂದ ಏರ್ಪಾಟುಮಾಡಿದ. ಅವರು ಅಲ್ಲೆಲ್ಲಾ ಓಡಾಡಿಕೊಂಡಿದ್ದು ಸುದ್ಧಿಗಳನ್ನು ಸಂಗ್ರಹಿಸುತ್ತಿದ್ದರು, ಜೊತೆಗೆ ಮೊಗಲ್ ಸೈನಿಕರ ನಡುವೆ ಅಹೋಂ ಸೈನ್ಯದ ಪರಾಕ್ರಮದ ಬಗ್ಗೆ ಪಿಸು ಮಾತುಗಳನ್ನು ಹಬ್ಬಿಸುತ್ತಿದ್ದರು. ‘ಏನು ಆಹೋಂ ಸೈನಿಕರ ವಿರುದ್ಧ ಯುದ್ಧ ಮಾಡುವಿರಾ? ನಿಮಗೆಲ್ಲೋ ಹುಚ್ಚು ಹಿಡಿದಿರಬೇಕು’ ಎಂದು ಹೇಳುತ್ತಿದ್ದರು. ‘ನಿಮಗೇನು ಗೊತ್ತು? ಅಹೋಂ ಸೈನ್ಯದ ಜೊತೆಗೆ ಬೇಕಾದಷ್ಟು ಜನ ಯಂತ್ರಿಣಿಗಳಿದ್ದಾರೆ. ಅವರೆಲ್ಲಾ ಕಾಮಾಖ್ಯ ದೇವಿಯ ಭಕ್ತರು. ಅಷ್ಟೇ ಅಲ್ಲ, ನರಮಾಂಸವನ್ನು ತಿನ್ನುವ ರಾಕ್ಷಸನ ಒಂದು ತುಕಡಿಯೂ ಅವರ ಹತ್ತಿರ ಇದೆ’ ಎಂದು ಇನ್ನೊಮ್ಮೆ ಹೇಳುವರು. ಇವರ ಮಾತನ್ನು ಯಾರಾದರೂ ಶಂಕಿಸಿದರೆ ‘ಬನ್ನಿ, ಬೇಕಾದರೆ ದೂರದಿಂದ ತೋರಿಸುತ್ತೇವೆ’ ಎಂದು ಸವಾಲು ಹಾಕುವರು. ಮೊಗಲ್ ಸೈನಿಕರನ್ನು ಸಣ್ಣ ದೋಣಿಗಳಲ್ಲಿ ಕೂರಿಸಿಕೊಂಡು ಉತ್ತರದ ಕಡೆ ಕರೆದೊಯ್ಯುತ್ತಿದ್ದರು. ಅಲ್ಲಂದ ನಿಂತು ನೋಡಿದ ಮೊಗಲ್ ಸೈನಿಕರಿಗೆ ಕಂಡಿದ್ದೇನು? ಐವತ್ತು ಜನ ರಾಕ್ಷಸರು ಬೆಂಕಿಯ ಸುತ್ತ ಮನುಷ್ಯರ ತುಂಡಾದ ಕೈಗಳನ್ನೋ ಕಾಲುಗಳನ್ನೋ ಹಿಡಿದುಕೊಂಡು ಕುಣಿಯುತ್ತಿದ್ದಾರೆ! ನೋಡಿದವರ ಎದೆ ಝಲ್ಲೆನಿಸುವಂತಿತ್ತು. ಲಚಿತನ ಸೈನ್ಯಾಧಿಕಾರಿಗಳು ಈ ವಿಶೇಷ ಪ್ರೇಕ್ಷಕರಿಗೆಂದೇ ಆಡಿರುವ ಹೂಟವೆಂದು ಅವರಿಗೆ ತಿಳಿಯಲಿಲ್ಲ.

ದೇಶಕ್ಕಿಂತ ಮಾವ ದೊಡ್ಡವನಲ್ಲ

ಒಂದು ಅಮಾವಾಸ್ಯೆಯ ರಾತ್ರಿ, ಅಸ್ಸಾಂ ಸೈನಿಕರು ಬಾಳೆಗಿಡದ ಕಾಂಡಗಳನ್ನು ಕತ್ತರಿಸಿ ಅದಕ್ಕೆ ಪಂಜು ದೀಪಗಳನ್ನು ಜೋಡಿಸಿ ನದಿಗಳಲ್ಲಿ ತೇಲಿ ಬೀಡುತ್ತಿದ್ದರು. ದೂರದಿಂದ ನೋಡಿದವರಿಗೆ ಸೈನ್ಯದ ಒಂದು ದೊಡ್ಡ ತುಕಡಿ ಚಲಿಸುತ್ತಿದೆಯೇನೋ ಅನ್ನಿಸುತ್ತಿತ್ತು. ಇನ್ನು ಕೆಲವು ವೇಳೆ ನೂರಾರು ಮರದ ಗೂಟಗಳನ್ನು ನೆಟ್ಟು ಅವುಗಳ ಮೇಲೆ ಪಂಜುಗಳನ್ನು ಹೊತ್ತಿಸುತ್ತಿದ್ದರು. ಭಾರೀ ಸೈನ್ಯವು ಬೀಡು ಬಿಟ್ಟಿರುವಂತೆ ಕಲ್ಪನೆ ಕೊಡುತ್ತಿತ್ತು.

ಒಂದು ಸಣ್ಣ ಕೈಮಿಲಾವಣೆಯಲ್ಲಿ ಅಸ್ಸಾಂ ಸೈನಿಕರು ನಿರ್ಮಿಸಿದ್ದ ಕೊತ್ತಲದ ಭಾಗವೊಂದಕ್ಕೆ ಜಖಂ ಆಯಿತು. ಅದನ್ನು ಕೂಡಲೇ ಸರಿಪಡಿಸಬೇಕಾದ ಅಗತ್ಯವಿತ್ತು. ಸೋದರಮಾವನ ನೇತೃತ್ವದಲ್ಲಿ ಕೆಲವು ಸೈನಿಕರನ್ನು ಲಚಿತ್ ಅಲ್ಲಿಗೆ ಅಟ್ಟಿದ. ಸೈನಿಕರಿಗೆ ತುಂಬಾ ಸುಸ್ತಾಗಿತ್ತಾದ್ದರಿಂದ ಒಂದು ದಿನದಮಟ್ಟಿಗೆ ವಿಶ್ರಾಂತಿ ಬೇಕೆಂದು ವಿನಂತಿಸಿಕೊಂಡರು. ಲಚಿತನ ಸೋದರಮಾವ ಅವರೆಲ್ಲರಿಗೂ ನಿದ್ದೆಮಾಡಲು ಅನುಮತಿಯನ್ನು ಕೊಟ್ಟು ತಾನೂ ಹೋಗಿ ಮಲಗಿಬಿಟ್ಟ. ಕೆಲಸವು ಹೇಗೆ ಮುಂದುವರೆಯುತ್ತಿದೆಯೋ ನೋಡೋಣವೆಂದು ಲಚಿತ್ ಅಲ್ಲಿಗೆ ಬಂದರೆ ಎಲ್ಲಾ ನಿದ್ದೆ ಹೊಡೆಯುತ್ತಿದ್ದಾರೆ; ಲಚಿತ್ ಗೆ ತುಂಬಾ ಕೋಪ ಬಂತು. ಸೋದರಮಾವನನ್ನು ಎಬ್ಬಿಸಿ “ಇದೇನು? ಎಲ್ಲರೂ ಕೆಲಸ ಮಾಡದೆ ನಿದ್ದೆ ಮಾಡುತ್ತಿದ್ದಾರಲ್ಲ ಏಕೆ?” ಎಂದು ವಿಚಾರಿಸಿದ.

ಸೋದರಮಾವ ತಬ್ಬಿಬ್ಬಾದ, ಅದೂ ಇದೂ ಸಬೂಬನ್ನು ಹೇಳಲು ಆರಂಭಿಸಿದಾಗ ಲಚಿತನಿಗೆ ಅವನು ತನ್ನ ಕರ್ತವ್ಯ ಮಾಡದೇ ಇಡೀ ಸೈನ್ಯಕ್ಕೆ ಅಪಾಯ ತಂದ ಎಂದು ಸ್ಪಷ್ಟವಾಯಿತು. ಒರೆಯಿಂದ ಕತ್ತೆಯನ್ನು ತೆಗೆದು “ದೇಖೋತ್ ಕೈ ಮೋಮಾಈ ಡಾಂಗರ್ ನಹಾಯ್” (ದೇಶಕ್ಕಿಂತ ಮಾವನೇನೂ ದೊಡ್ಡವನಲ್ಲ) ಎಂದು ಹೇಳಿ ಒಂದೆ ಏಟಿಗೆ ಅವನ ತಲೆ ಬುರುಡೆಯನ್ನು ಕತ್ತರಿಸಿಹಾಕಿಬಿಟ್ಟ.

ಎಚ್ಚೆತ್ತ ಸೈನಿಕರು ಏನಾಗುವುದೆಂದು ನೋಡುತ್ತಿದ್ದರು. ತಮ್ಮ ಅಧಿಪತಿಯ ತಲೆಯನ್ನು ಲಚಿತ್ ಕತ್ತಿರಿಸಿದುದನ್ನು ಕಂಡು ತತ್ತರಿಸಿಹೋದರು. ಕೂಡಲೇ ಕೆಲಸಕ್ಕೆ ತೊಡಗಿದರು. ಬೆಳಗಿನ ಜಾವದ ವೇಳೆಗೆ ಕೆಲಸ ಪೂರೈಸಿಯಾಗಿತ್ತು.

ಹಿಂದಿನ ದಿನ ತಾವು ಹಾಳುಮಾಡಿದ್ದ ಭಾಗವು ಬೆಳಗೇಳುವುದರೊಳಗೆ ಭದ್ರವಾಗಿದ್ದನ್ನು ಕಂಡು ಮೊಗಲ್ ಸೈನಿಕರಿಗೆ ಆಶ್ಚರ್ಯವೋ ಆಶ್ಚರ್ಯ!

ಎಲ್ಲಾ ಕೋಟೆಗಳನ್ನು ಲಚಿತ್ ನಿಗಾ ಇಟ್ಟು ಬಲಪಡಿಸಿದನಾದರೂ ರಂಗಮಲಿ ಎನ್ನುವ ಕೋಟೆ ಅವನ ಕೈತಪ್ಪಿಹೋಯಿತು. ಅದು ಹೇಗಾಯಿತೆಂದು ಲಚಿತನಿಗೆ ಕೌತಕವಾಯಿತು. ಅದು ಹೇಗಾಯಿತೆಂದು ಲಚಿತನಿಗೆ ಕೌರುಕವಾಯಿತು. ಸಂಬಂಧಪಟ್ಟವರನ್ನು ಕರೆಯಿಸಿ ಕೇಳಿದ. ರಾಮಸಿಂಹನು ಅಲ್ಲೊಂದು ಉಪಾಯ ಮಾಡಿದ್ದ. ರಣರಂಗದಲ್ಲಿ ಹೊಗೆಯನ್ನು ಹಾಕಿ ಯಾರಿಗೆ  ಯಾರೂ ಕಾಣಿಸದಂತೆ ಮಾಡಿ ಆ ಗೊಂದಲದಲ್ಲಿ ನೂರಾರು ನಾಯಿಗಳನ್ನು  ಛೂಬಿಟ್ಟಿದ್ದ. ಬಲವಾದ ಆ ನಾಯಿಗಳು ಅಹೊಂ ಸೈನಿಕರಮೇಲೆ ಎರಗಿ ಅವರನ್ನು ಉರುಳಿಸಿ ಎತ್ತಿಕೊಂಡು ಹೋಗಿಬಿಟ್ಟಿದ್ದವು. ಅಳಿದುಳಿದವರು ಇಟಖುಲಿ ಕಡೆಗೆ ಹೊರಟಿದ್ದರು.

ಎಲ್ಲಾ ಸರದಾರರ ಸಭೆ ಸೇರಿತು. ರಾಮಸಿಂಹನನ್ನು ಸೋಲಿಸುವುದು ಹೇಗೆಂದು ಎಲ್ಲರೂ ವಿಚಾರ ಮಾಡತೊಡಗಿದರು. ಏನಾದರೂಮಾಡಿ ರಾಮಸಿಂಹನನ್ನು ಸರಾಯಿ ಘಾಟಿಗೆ ಬರುವ ಹಾಗೆ ಮಾಡಬೇಕೆಂದೂ, ಅಲ್ಲಿ ಮೊಗಲ್ ಸೈನ್ಯವನ್ನು ಬಲಿಹಾಕಬೇಕೆಂದೂ ಯೋಜನೆ ಹಾಕಿದರು. ಏಕೆಂದರೆ ಸರಾಯಿ ಘಾಟಿನಲ್ಲಿ ಅಸ್ಸಾಂ ಸೈನಿಕರನ್ನು ಸೋಲಿಸಲು ಯಾರ ಕೈಯಿಂದಲೂ ಸಾಧ್ಯವಾಗುತ್ತಿರಲಿಲ್ಲ.

ಗಸೆಗಸೆಯನ್ನು ಅರೆದು

ದಿನಗಳು ಉರುಳಿದವು, ತಿಂಗಳುಗಳೂ ಉರುಳಿದವು ಆದರೆ ರಾಮಸಿಂಹನಿಗೆ ಮಾತ್ರ ಗೌಹಾಟಿಯೊಳಗೆ ಹೋಗಲು ಆಗಲಿಲ್ಲ. ಸರಿ ಏನಾದರೊಂದು ಉಪಾಯ ಮಾಡೋಣವೆಂದು ಆತ ಯೋಚಿಸಿದ. ಒಬ್ಬ ದೂತನ ಕೈಯಲ್ಲಿ ಒಂದು ಕಾಗದವನ್ನೂ ಮತ್ತು ಒಂದು ಚೇಲದ ತುಂಬಾ ಗಸಗಸೆಯನ್ನೂ ಕೊಟ್ಟು ಲಚಿತನ ಬಳಿ ಕಳಿಸಿಕೊಟ್ಟ. ಅವನು ಕಳಿಸಿದ ಕಾಗದದಲ್ಲಿ “ಓ ಬರ್ ಪುಕಾನ್, ನೀನೊಬ್ಬ ದೊಡ್ಡ ಯೋಧನೆಂದು ಹೇಳಿಕೊಳ್ಳುವೆ. ಆದರೆ ಹೊರಗೆ ಬಂದು ಗಂಡಸಿನ ತರಹೆ ನೀನೇಕೆ ಯುದ್ಧ ಮಾಡುವುದಿಲ್ಲ? ಕೋಟೆಯ ಹಿಂದೆ ಏಕೆ ಅವಿತುಕೊಂಡಿರುವೆ? ಈ ಅಸಂಖ್ಯಾತ ಗಸಗಸೆಯ ಬೀಜಗಳಂತೆಯೇ ನನ್ನ ಸೈನ್ಯವೂ ವಿಶಾಲವಾಗಿದೆ ಎಂಬುದನ್ನು ಸ್ವಲ್ಪ ತಿಳಿದುಕೋ. ನಿನ್ನನ್ನು ಮುಗಿಸಿಬಿಡಲು ನಮಗೆ ಅರೆನಿಮಿಷ ಸಾಕು. ಆದ್ದರಿಂದ ಕೂಡಲೇ ಗೌಹಾಟಿಯನ್ನು ನಮಗೆ ಒಪ್ಪಿಸಿ, ನಿನ್ನ ಮತ್ತು ನಿನ್ನ ಸೈನಿಕರ ಪ್ರಾಣವನ್ನು ಉಳಿಸಿಕೋ” ಎಂದು ಬರೆದಿದ್ದ.

ಲಚಿತನಿಗೆ ಆ ಪತ್ರವು ತಲಪಿತು. ಜೊತೆಗೆ ಗಸಗಸೆಯ ಚೀಲವೂ ಸಹ. ಅವನು ಆ ಗಸಗಸೆಯೆಲ್ಲವನ್ನೂ ಚೆನ್ನಾಗಿ ಅರೆದು ಒಂದು ಮಡಕೆಯಲ್ಲಿ ಹಾಕಿದ. ತೂತು ಕೊರೆದ ಬೊಂಬಿನಲ್ಲಿ ಮರಳನ್ನು ತುಂಬಿಸಿ ಮಡಕೆಯ ಬಾಯನ್ನು ಅದರಿಂದ ಮುಚ್ಚಿದ. ಅದೇ ದೂತನ ಜೊತೆಗೆ ತನ್ನ ಉತ್ತರವನ್ನು  ಬರೆದುಕೊಟ್ಟು ಮಡಕೆಯನ್ನು ಕಳಿಸಿದ.

ರಾಮಸಿಂಹ ಪತ್ರವನ್ನು ಒಡೆದು ನೋಡಿದ. ಅದರಲ್ಲಿ ” ಓ ರಜಪೂತ ಸರದಾರನೇ, ನಿನ್ನನ್ನು ಕಂಡರೆ ನನಗೆ ಎಳ್ಳಷ್ಟೂ ಭೀತಿ ಇಲ್ಲ. ಹೊರಗಡೆ ಬಂದು ಯುದ್ಧಮಾಡು ಎಂದು ನೀನು ನನಗೆ ಹೇಳಿರುವೆ ಬಂದು ಯುದ್ಧಮಾಡು ಎಂದು ನೀನು ನನಗೆ ಹೇಳಿರುವೆ. ನೀನು ಇಷ್ಟುದೂರ ಬಂದಿದ್ದು ಇಷ್ಟಕ್ಕೇ ಏನು? ನಿನ್ನ ಮನಸ್ಸಿಗೆ ತೃಪ್ತಿಯಾಗುವಷ್ಟು ಯುದ್ಧವು ಶಿವಾಜಿಯಿಂದ ನಿನಗೆ ಹತ್ತಿರದ ದಕ್ಷಿಣದಲ್ಲೇ ಸಿಗುತ್ತಿತ್ತಲ್ಲ, ನಿನ್ನ ಗಸಗಸೆಯ ಕಾಳಿನಂತೆ ಅಸಂಖ್ಯಾತವಾಗಿರಬಹುದು, ಆದರೆ ನಮ್ಮ ಸೈನ್ಯವು ಅದನ್ನು ಚೆನ್ನಾಗಿ ಅರೆದು ಈ ಮಡಕೆಯಲ್ಲಿರುವ ಕಣಕದಂತೆ ಮಾಡಿಬಿಡುತ್ತದೆಂಬುದು ನೆನಪಿರಲಿ. ಬೊಂಬಿನೊಳಗಿರುವ ಮರಳಿನ ಕಣಗಳಂತೆ ನಮ್ಮ ಸೈನ್ಯವೂ ವಿಶಾಲವಾಗಿದೆ. ಅದನ್ನು ಹುಡಿ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ” ಎಂದು ಬರೆದಿತ್ತು.

ರಾಮಸಿಂಹ ಲಚಿತನಿಂದ ಕೋಟೆ ಕಿತ್ತುಕೊಳ್ಳಲು ಬೇರೆ ಉಪಾಯ ಹುಡುಕಬೇಕಾಯಿತು. ಲಂಚ ಕೊಟ್ಟರೆ ಅವನ ಮನಸ್ಸು ಸೋಲಬಹುದು ಎಂದು ಯೋಚಿಸಿದ. ಲಚಿತನಿಗೆ ನಾಲ್ಕು ಲಕ್ಷ ರೂಪಾಯಿಗಳನ್ನು ಕೊಡುವುದಾಗಿ ಹೇಳಿಕಳುಹಿಸಿದ “ಹಣವನ್ನು ತೆಗೆದುಕೊ, ನಾನು ಕೋಟೆಯನ್ನು ಮುತ್ತುತ್ತೇನೆ. ನೀನು ಯುದ್ಧ ಮಾಡುವ ಹಾಗೆ ನಟಿಸು. ಘೋರವಾಗಿ ಯುದ್ಧಮಾಡಿ ಸೋತವನ ಹಾಗೆ ಕೋಟೆಯನ್ನು ಬಿಟ್ಟು ಹೋಗಿಬಿಡು” ಎಂದು ಹೇಳಿಕಳುಹಿಸಿದ. ಇದಕ್ಕೆಲ್ಲ ಸೋಲುವವನೆ ಲಚಿತ್? ಅದನ್ನು ಹಾಗೇ ತಿರಸ್ಕರಿಸಿಬಿಟ್ಟ.

ನಿಷ್ಠ ದಂಡಾಧಿಪತಿಗೆ ಅವಮಾನ

ಮುಂದಿನ ಹೆಜ್ಜೆಯಾಗಿ ರಾಮಸಿಂಹ ಒಂದು ಮೋಸ ಮಾಡಲು ಹವಣಿಸಿದ. ಅಹೋಂ ರಾಜರ ಆಸ್ಥಾನದಲ್ಲಿ ಪೆಲಾನ್ ಪುಕಾನ್ ಎಂಬುವವನಿದ್ದ. ಈ ಪುಕಾನ್ ಗೆ ಲಚಿತನನ್ನು ಕಂಡರೆ ಮೊದಲಿನಿಂದಲೂ ಅಸೂಯೆ. ರಾಮಸಿಂಹ ಲಂಚಕೊಟ್ಟು ತನ್ನೊಡನೆ ಸಹಕರಿಸುವಂತೆ ಮಾಡಿಕೊಂಡ. ರಾಮಸಿಂಹನು ಲಚಿತ್ ಬರ್ ಪುಕಾನ್ ಗೆ ಒಂದು ಪತ್ರ ಬರೆದ. ಅದು ಪೆಲಾನ್ ಕೈಗೆ ಬೀಳುವಂತೆ ಮಾಡಿದ. ಅದರ ಒಕ್ಕಣೆ ಹೀಗಿತ್ತು. “ಓ ಬರ್ ಪುಕಾನ್, ನೀನೇಕೆ ಯುದ್ಧವನ್ನು ಇನ್ನೂ ಮುಂದುವರೆಸುತ್ತಿರುವೆ? ನೀನು ಯುದ್ಧ ನಿಲ್ಲಿಸುತ್ತೇನೆಂದು ಮಾತುಕೊಟ್ಟಿದ್ದಕ್ಕೆ ತಾನೇ ನಾನು ನಿನಗೆ ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದು?”

ಮೊಗಲ್ ಸೈನ್ಯವನ್ನು ಲಚಿತನು ಏಕೆ ಹೊರಹಾಕುತ್ತಿಲ್ಲವೆಂದು ರಾಜನು ಸ್ವಲ್ಪ ಚಿಂತಿತನಾಗಿದ್ದ. ಆಧರೆ ತನ್ನ ಸೈನ್ಯದ ಮಿತಿಯೇನೆಂಬುದು ಲಚಿತನಿಗೆ ಗೊತ್ತಿತ್ತು. ನೇರ ಯುದ್ಧದಲ್ಲಿ ರಾಮಸಿಂಹನ ಅಶ್ವ ಸೈನ್ಯವನ್ನು ಎದುರಿಸುವುದು ಸಾಧ್ಯವೇ ಇರಲಿಲ್ಲ. ಏನಿದ್ದರೂ ಕಿರುಕುಳದ ಯುದ್ಧ ಮಾಡಬಹುದಿತ್ತು ಅಷ್ಟೇ. ಪ್ರಧಾನಿ ಅಟಾನ್ ಬುಧ ಗೋಹಾನನಿಗೂ ಇದೇ ಆಭಿಪ್ರಾಯವಿತ್ತು. ತಾವು ಎಚ್ಚರಿಕೆಯಿಂದ ಮುಂದುವರೆಯಬೇಕೆಂದು ರಾಜನಿಗೆ ಪ್ರಧಾನಿಯು ಪದೇ ಪದೇ ಅರುಹುತ್ತಲೇ ಇದ್ದ.

ಪರಿಸ್ಥಿತಿಯು ಹೀಗಿರುವಾಗ ಪೆಲಾನ್ ಪುಕಾನ್ ತನ್ನ ಕೈಗೆ ಸಿಕ್ಕಿದ್ದ ಕಾಗದವನ್ನು ತಂದು ದೊರೆಗೆ ತೋರಿಸಿದ. ರಾಜನಿಗೆ ಕೋಪ ಉಕ್ಕಿಬಂತು. “ಇಂತಹ ದ್ರೋಹಿ ಇವನು, ಶತ್ರುಗಳ ಹಣಕ್ಕೆ ಕೈ ಒಡ್ಡುವ ನೀಚ, ಅವನನ್ನು ಕರೆಸಿ, ಕೇಳಿ, ಶಿಕ್ಷೆ ಮಾಡುತ್ತೇನೆ” ಎಂದು ಗುಡುಗಿದ. ಆದರೆ ಪ್ರಧಾನಿ ಅಟಾನ್ ಬುಧ ಗೋಹಾನ್ ತಾಳ್ಮೆಯ ಮನುಷ್ಯ, ವಿವೇಕಶಾಲಿ. ಅವನು ರಾಜನಿಗೆ ಲಚಿತನ ದೇಶಪ್ರೇಮ ಆಥವಾ ಶ್ರದ್ಧೆಯನ್ನು ಶಂಕಿಸುವುದು ತರವಲ್ಲವೆಂದು ಹೇಳಿದ. ” ಈ ಕಾಗದವನ್ನು ನಂಬಿ ಲಚಿತನಿಗೆ ಅವಮಾನ ಮಾಡಬೇಡಿ, ಈ ಕಾಗದದಲ್ಲೇ ಮೋಸವಿರಬಹುದು” ಎಂದು ಎಚ್ಚರಿಸಿದ.

ಇದನ್ನು ಕೇಳಿದ ನಂತರ ದೊರೆಯ ಲಚಿತ್ ಗೆ ಒಂದು ಪತ್ರ ಬರೆದು ಕಳಿಸಿದ. ಅದರಲ್ಲಿ “ಓ ಬರ್ ಪುಕಾನ್, ನಿನ್ನನ್ನು ನಾನು ಗೌಹಾಟಿಗೆ ಕಳಿಸಿದ್ದು ಶತ್ರುವನ್ನು ನಿರ್ನಾಮ ಮಾಡಲೆಂದು. ಇಷ್ಟು ದಿವಸಗಳಾದರೂ ನೀನೇಕೆ ಈ ಕೆಲಸವನ್ನು ಪೂರ್ತಿ ಮಾಡಲಿಲ್ಲ? ಮೊಗಲರ ಮೇಲೆ ಯುದ್ಧ ಮಾಡುವುದಕ್ಕೆ ನೀನೇನಾದರೂ ಅಂಜುತ್ತಿರುವೆಯಾ? ಇದೋ ಈಗ ನಾನು ನಿನಗೆ ಖಚಿತವಾಗಿ ಹೇಳುತ್ತಿರುವೆ. ಕೂಡಲೇ ಮೊಗಲರ ಸೈನ್ಯವನ್ನು ಮುಖಾಮುಖಿ ಎದುರಿಸು. ಇಲ್ಲವೇ ಹರಿದು ಹೋಗಿರುವ ಹೆಂಗಸಿನ ಒಳಉಡುಪನ್ನು (ಮೇಖಲಾ) ಧರಿಸಿ ಆತ್ಮಹತ್ಯೆ ಮಾಡಿಕೋ” ಎಂದಿತ್ತು.

ಸೋಲು

ರಾಜನ ದೂತ ಕಾಗದವನ್ನು ತೆಗೆದುಕೊಂಡು ಹೋಗಿ ಲಚಿತ್ ಗೆ ತಲಪಿಸಿದ. ಕಾಗದ ಒಡೆದು ಓದಿದ ಲಚಿತ್. ತುಂಬಾ ದುಃಖವಾಯಿತು. ತಾನು ರಾಜನಲ್ಲಿ ಎಷ್ಟು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೆ? ಇದೇ ಪ್ರತಿಫಲವೇ? ಆದರೇನುಮಾಡುವುದು? ರಾಜನು ಸ್ಪಷ್ಟವಾದ ಸೂಚನೆಯನ್ನು ಕೊಟ್ಟುಬಿಟ್ಟಿದ್ದಾನೆ. ಇದಕ್ಕೆ ಉತ್ತರಿಸುವುದು ತಪ್ಪಾದೀತು. ಹೇಗೆ, ಏಕೆ ಎಂದು ಕೇಳುವುದಲ್ಲ, ಮಾಡುವುದು ಮತ್ತು ಮಡಿಯುವುದು ಇದೇ ಸೈನಿಕರ ಪಾಲಿನ ಕರ್ತವ್ಯ ತಾನೇ. ಅದೇ ರೀತಿ ಲಚಿತ್ ಮುಂದುವರೆದ.

ಲಚಿತ್ ತನ್ನ ಸೈನ್ಯದಲ್ಲಿದ್ದ ಇಪ್ಪತ್ತು ಸಹಸ್ರ ಮಂದಿಯನ್ನು ಎರಡು ಭಾಗ ಮಾಡಿದ. ಮೊದಲನೇ ಭಾಗದಲ್ಲಿ ಐದು ಸಾವಿರ ಸೈನಿಕರಿದ್ದರು. ಅವರು ಮೊಗಲ್ ಸೈನ್ಯವನ್ನು ಮುಖಾಮುಖಿ ಎದುರಿಸಲು ಹೊರಟು. ಇಷ್ಟು ಕಡಮೆ ಸಂಖ್ಯೆಯಲ್ಲಿ ಎದುರಾದ ಶತ್ರು ಸೈನ್ಯವನ್ನು ಕಂಡು ಮೂರು ಲಕ್ಷ ಸಂಖ್ಯೆಯಲ್ಲಿದ್ದ ಮೊಗಲರಿಗೆ ತುಂಬಾ ಖುಷಿಯಾಯಿತು. ಅಸ್ಸಾಂ ಸೈನಿಕರು ಕೋಟೆಯಿಂದ ಹೊರಕ್ಕೆ ಬಂದರೆ ಅವರನ್ನು ಮುಗಿಸಿಬಿಡಬಹುದೆಂದು ಅವರು ಯುದ್ಧವನ್ನು ಆರಂಭಿಸಿದರು.

ಆದರೆ ಯುದ್ಧದ ಮಧ್ಯದಲ್ಲಿ ತಮ್ಮನ್ನು ಅಸ್ಸಾಂನ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸುತ್ತುವರಿದಿದ್ದಾರೆಂದು ತಿಳಿಯಿತು. ಅವರು ಅದನ್ನು ನಿರೀಕ್ಷಿಸಿಯೇ ಇರಲಿಲ್ಲ. ಮೊಗಲ್ ಸೈನ್ಯವು ನಿರ್ನಾಮವಾಗಿ ಬಿಡುವುದರಲ್ಲಿತ್ತು. ಆ ವೇಳೆಗೆ ರಾಮಸಿಂಹ ತನ್ನ ಅಶ್ವಪಡೆಯನ್ನು ಹೊರಕ್ಕೆ ತಂದ. ಅಸ್ಸಾಂನ ಸೈನಿಕರು ಪದಾತಿಗಳು. ಅವರು ತಮ್ಮ ಕಾಲಿನ ಮೇಲೆ, ರಾಮಸಿಂಹನ ಸೈನ್ಯ ಕುದುರೆಯ ಮೇಲೆ! ಇದು ಸಮವಾಗುವುದು ಹೇಗೆ ಸಾಧ್ಯ? ಯುದ್ಧದಲ್ಲಿ ಲಚಿತ್ ನ ಕಡೆ ಹತ್ತುಸಾವಿರ ಯೋಧರು ಪ್ರಾಣತೆತ್ತರು. ಸಾವಿರಾರು ಜನ  ಗಾಯಗೊಂಡರು.

ತನ್ನ ಅಶ್ವ ಪಡೆಯ ವಿಜಯವನ್ನು ಕಂಡು ರಾಮಸಿಂಹ ಉಬ್ಬಿಹೋದ. “ಇಂದ್ರನು ಕೂಡಾ ನಮ್ಮ ಅಂಬರದ (ಆಂದರೆ ರಾಜಾಸ್ತಾನದ) ಆಶ್ವಪಡೆಯನ್ನು ಎದುರಿಸಲಾರ, ಇನ್ನು ಈ ಅಸ್ಸಾಮೀಯರು ಯಾವ ಲೆಕ್ಕ! ಎಂದು ಅವನ ಭಾವನೆ.

ಲಚಿತನ ಪಾಳೆಯದಲ್ಲಿ ದುಃಖವು ತಾಂಡವವಾಡುತ್ತಿತ್ತು. ತನಗಾದ ನಷ್ಟವನ್ನು ಕಂಡು ಅವನಿಗೆ ಹೃದಯ ಬಿರಿಯುತ್ತಿತ್ತು. ತನಗಾದ ನಷ್ಟವನ್ನು ಕಂಡು ಅವನಿಗೆ ಹೃದಯ ಬಿರಿಯುತ್ತಿತ್ತು. “ನಾನೆಂತಹ ಪಾಪಿ, ಶಿಸ್ತಿನ ಹೆಸರಿನಲ್ಲಿ, ರಾಜಾಜ್ಞೆಯನ್ನು ಪಾಲಿಸಬೇಕೆಂಬ ಹಟದಿಂದಾಗಿ ನನ್ನ ಹತ್ತು ಸಾವಿರ ಸೈನಿಕರು ಪ್ರಾಣ ಕೊಡಬೇಕಾಯಿತು. ಹಿಂದೂ ರಾಷ್ಟ್ರದ ಹತ್ತು ಸಾವಿರ ಕಂಬಗಳು ಅವು. ನಾನೆಂತಹ ಪಾಪಿ!” ಎಂದು ಪದೇ ಪದೇ ಪ್ರಲಾಪಿಸತೊಡಗಿದ.

ಅತ್ತು ಪ್ರಯೋಜನವೇನು? ಗಟ್ಟಿ ಮನಸ್ಸು ಮಾಡಿ ಎದ್ದುನಿಂತ. ತನ್ನ ಸೈನಾಧಿಕಾರಿಗಳನ್ನು ಒಟ್ಟಿಗೆ ಸೇರಿಸಿದ “ನಮ್ಮ ರಕ್ತದ ಕೊನೆಯ ಹನಿ ಇರುವವರೆಗೂ ಗೌಹಾಟಿಯನ್ನು ಕಾಪಾಡುತ್ತೇವೆಂದು ನಾವೆಲ್ಲರೂ ಶಪಥ ಮಾಡೋಣ” ಎಂದು ಅವರಿಗೆ ಪ್ರೇರೇಪಿಸಿದ.

ರಾಮಸಿಂಹನಿಗೆ ಅಲಬಾಯ್ ಸಮಪ್ರದೇಶದಲ್ಲಿ ಜಯ ಸಿಕ್ಕಿತಾದರೂ ಅವನಿಗೆ ಗೌಹಾಟಿಯೆಂದರೆ ದೆಹಲಿಯಷ್ಟೇ ದೂರವಿದೆ ಎನಿಸುವಂತಾಗಿತ್ತು. ತನ್ನ ಶಕ್ತಿಯನ್ನು ಉಪಯೋಗಿಸಿದರೂ ಲಚಿತ್ ಬರ್ ಪುಕಾನನ ರಕ್ಷಣಾ ಪಡೆಗಳನ್ನು ಅವನ ಕೈಯಿಂದ ಛೇದಿಸಲಾಗಲಿಲ್ಲ. ಗೌಹಾಟಿ ಬಹಳ ಭದ್ರವಾಗಿ ಉಳಿದೇ ಇತ್ತು. 

ದೇಶಕ್ಕಿಂತ ಮಾವನೇನು ದೊಡ್ಡವನಲ್ಲ

ಲಚಿತನಿಗೆ ಕಷ್ಟ ಪರಂಪರೆ

 

ಈ ವೇಳೆಗೆ ಯುದ್ಧ ಶುರುವಾಗಿ ನಾಲ್ಕು ವರ್ಷಗಳಾಗಿದ್ದವು. ಈ ಮಧ್ಯೆ ಚಕ್ರಧ್ವಜ ಸಿಂಹ ಕಾಯಿಲೆ ಬಿದ್ದು ತೀರಿಕೊಂಡುಬಿಟ್ಟ, ಮುಂದಿನ ದೊರೆ ಉದಾಯಾದಿತ್ಯ. ಲಚಿತನಿಗೆ ಸುದ್ದಿ ತಿಳಿಯಿತು. “ನಾನು ರಾಜನಿಗೆ ಕೊಟ್ಟಿದ್ದ ಮಾತನ್ನು ಪೂರೈಸಲಾಗಲಿಲ್ಲವಲ್ಲ” ಎಂದು ಅವನು ತುಂಬಾ ವ್ಯಥೆಪಟ್ಟುಕೊಂಡ.

ಈ ಹೊಸ ರಾಜನಿಗೆ ಒಬ್ಬ ಸಲಹೆಗಾರ ಹುಟ್ಟಿಕೊಂಡ. ಅವನೊಬ್ಬ ಸಾಮಾನ್ಯ ಪ್ರಜೆ. ಅವನ ಹೆಸರು ಧೇಬೇರ. ಅವನು ಆಸ್ಥಾನದ ಕುಲೀನರ ಮೇಲೆಲ್ಲಾ ಸೇಡು ತೀರಿಸಿಕೊಳ್ಳಲು ಶುರುಮಾಡಿದ. ಅವರಿಗೆ ಮತ್ತು ಅವರ ಸಂಸಾರದ ಇತರರಿಗೆ ಕಿರುಕುಳ ಶುರುವಾಯಿತು. ಗೌಹಾಟಿಗೆ ಬಂದು ಪರಿಸ್ಥಿತಿಯನ್ನು ಸರಿಪಡಿಸಬೇಕೆಂದು ಕೋರಿ ಲಚಿತ್ ಗೆ ಕಾಗದಗಳ ಮೇಲೆ ಕಾಗದಗಳು ಬರಲು ಆರಂಭಿಸಿದವು. ಲಚಿತ್ ಅಲುಗಾಡಲಿಲ್ಲ. ಧೇಭೇರನು ಲಚಿನತ ಮನೆಯವರನ್ನೂ ಉಳಿಸಲಿಲ್ಲ. ಅವರಿಗೂ ಅವಮಾನ ಮಾಡಿದ, ಆದರೆ ಏನೇ ಆದರೂ ಲಚಿತ್ ತನ್ನ ಕರ್ತವ್ಯದಿಂದ ವಿಮುಖನಾಗಲಿಲ್ಲ.

ಮೊಗಲರ ದಾಳಿ

ಮಾನಸಿಕವಾಗಿ ಮತ್ತು ಶಾರೀರಿಕನಾಗಿ ಅಚಿತ್ ಗೆ ತುಂಬಾ ಆಯಾಸವಾಗಿತ್ತು. ಶತ್ರುಗಳನ್ನು ಸೋಲಿಸಲು ಸಾಧ್ಯವಾಗಲಿಲ್ಲ. ತನ್ನನ್ನು ನೆಚ್ಚಿ ಯುದ್ಧಕ್ಕೆ ಕಳುಹಿಸಿದ್ದ ರಾಜ ಪ್ರಾಣಬಿಟ್ಟಿದ್ದು ಜೊತೆಗೆ ಗೌಹಾಟಿಯಲ್ಲಿ ತನ್ನ ಮನೆಯವರಿಗೆ ದುಃಖ, ಅವಮಾನ, ಮನಸ್ಸಿನ ಆತಂಕದಿಂದಲೇ ಅವನಿಗೆ ಕಾಯಿಲೆ ಬಂದಿತು. ಜ್ವರದ ತಾಪದಿಂದ ನರಳಿದ ರಾಮಸಿಂಹನಿಗೆ ಸುದ್ದಿ ತಿಳಿಯಿತು. ರಾಜನು ಹೊಸಬ, ಲಚಿತ್ ಗೆ ಕಾಯಿಲೆ, ಇದಕ್ಕಿಂತ ಉತ್ತಮವಾದ ಅವಕಾಶವು ತನಗೆ ದೊರೆಯಲಾರದೆಂದು ಆತನು ಖುಷಿಪಡಹತ್ತಿದ. ಗೌಹಾಟಿಯನ್ನು ಗೆಲ್ಲಲ್ಲು ಕೊನೆಯ ಪ್ರಯತ್ನವನ್ನು ಮಾಡಿಯೇಬಿಡಬೇಕೆಂದು ನಿರ್ಧರಿಸಿದ. ತನ್ನ ಎಲ್ಲ ಸೈನಿಕರನ್ನೂ ದೋಣಿಯಲ್ಲಿ ಕಳುಹಿಸಿಕೊಟ್ಟು ನದಿಯ ಮಾರ್ಗದಿಂದ ಗೌಹಾಟಿಯ ಕಡೆಗೆ ಹೊರಟ.

ಲಚಿತ್‌ಗೆ ಈ ಸುದ್ದಿ ಗೊತ್ತಾಯಿತು. ಅವನಿಗಿನ್ನೂ ಜ್ವರದ ತಾಪ ತುಂಬಾ ಇತ್ತು . (ಅಸ್ಸಾಮಿನ ಚರಿತ್ರೆಯ ಪುಸ್ತಕಗಳಲ್ಲಿ ಇದನ್ನು ‘ಅಖೋ ಈ ಫುಟ್ಟಾ ಜ್ವರ’ ವೆಂದು ವರ್ಣಿಸಲಾಗಿದೆ. ಅಂದರೆ ಜ್ವರದ ತಾಪವೆಷ್ಟೆಂದರೆ ದೇಹದ ಮೇಲೆ ಅಕ್ಕಿಕಾಳೇನಾದರೂ ಬಿದ್ದಲ್ಲಿ ಬಿಸಿಗೆ ಅದು ಅರಳಾಗುತ್ತದಂತೆ.) ಇಟಖುಲಿ ಹತ್ತಿರದಲ್ಲಿದ್ದ ಅಶ್ವಕ್ರಾಂತ ಎನ್ನುವ ಜಾಗಕ್ಕೆ ಮೊಗಲ್ ಸೈನ್ಯ ಬಂದಿಳಿದಿದ್ದನ್ನು ಕಂಡು ಅಸ್ಸಾಂ ಸೈನ್ಯ ಧೈರ್ಯಗೆಟ್ಟಿತು.

ಧೀರ ಲಚಿತ್

ಲಚಿತನ ಮೈ ಬೆಂಕಿಯಂತೆ ಕಾಯುತ್ತಿತ್ತು. ಆದರೆ ಪಾಳೆಯದಲ್ಲಿನ ಗಜಿಬಿಜಿಯಿಂದ ಏನೋ ನಡೆಯುತ್ತಿದೆ ಎನ್ನಿಸಿತು. ತನ್ನ ಹಾಸಿಗೆಯನ್ನು ರಣರಂಗಕ್ಕೆ ಎತ್ತಿಕೊಂಡು ಹೋಗುವಂತೆ ಲಚಿತ್ ಆಗ್ರಹಪಡಿಸಿದ. ಗೌಹಾಟಿಯ ಕಡೆಗೆ ನೂರಾರು ದೋಣಿಗಲು ಧಾವಿಸುತ್ತಿವೆ. ಅವುಗಳಲ್ಲಿ ಮೊಗಲ ಸೈನಿಕರು! ಕ್ಷಣದಲ್ಲಿ ಲಚಿತ್ ಏನು ನಡೆಯುತ್ತಿದೆ ಎಂದು ಗ್ರಹಿಸಿದ. ಗೌಹಾಟಿಯನ್ನು ಉಳಿಸಬೇಕು! ಒಂದು ಕ್ಷಣವೂ ತಡಮಾಡದೆ ತನ್ನ ನೌಕಾಪಡೆಯು ಸಿದ್ಧವಾಗಬೇಕೆಂದು ಅಜ್ಞೆ ಹೊರಡಿಸಿದ.

ಆಗಿನ ಕಾಲದಲ್ಲಿ ಒಂದು ಪದ್ಧತಿಯಿತ್ತು. ಯಾವುದೇ ದಾಳಿಯನ್ನು ಆರಂಭಿಸಬೇಕಾದರೂ ಶುಭಮುಹೂರ್ತಕ್ಕಾಗಿ ಜ್ಯೋತಿಷಿಗಳನ್ನು (ದೇವಧಾಯಿಗಳು) ಕೇಳೂವ ಅಭ್ಯಾಸವಿತ್ತು. ಅದೇ ರೀತಿ ದೇವಾಧಾಯಿಗಳನ್ನು ವಿಚಾರಿಸಿದಾಗ ದಾಳಿ ಮಾಡುವುದಕ್ಕೆ ಒಳ್ಳೆಯ ಮುಹೂರ್ತವು ಇನ್ನೂ ಕೂಡಿಬಂದಿಲ್ಲ ಎಂದು ಅವರು ಉತ್ತರಿಸಿದರು! ಮೊಗಲ್ ಸೈನ್ಯವು ಮುಂದೆಮುಂದೆ ನುಗ್ಗುತ್ತಿತ್ತು. ಸರಾಯಿ ಘಾಟ್ ತನಕ ಬಂದುಬಿಟ್ಟಿತ್ತು.

ಇನ್ನು ಲಚಿತನಿಗೆ ತಡೆಯಲಾಗಲಿಲ್ಲ. “ಓ ದೇವಧಾಯಿ, ನಿನ್ನಿಂದಾಗಿ ನಾನು ಯುದ್ಧದಲ್ಲಿ ಸೋಲಬೇಕಾಗುತ್ತದೆ. ನನ್ನನ್ನು ಹಾಳು ಮಾಡಿದೆ ನೀನು” ಎಂದು ಕಿರುಚಿ ಹೇಳಿದ.

ಜ್ಯೋತಿಷಿಯು ಮೌನವಾಗೇ ಇದ್ದ. ಲಚಿತನಿಗೆ ಮೈ ಕೆಂಡ, ಜೊತೆಗೆ ಕೆಂಡದ ಮೇಲೆ ನಿಂತಂತೆ ಎನ್ನಿಸುತ್ತಿತ್ತು. ಕ್ಷಣಕ್ಷಣಕ್ಕೂ ಉದ್ವೇಗ ತಾಳಲಾರದೆ ಬಿದ್ದೇ ಬಿಡುತ್ತೇನೆ ಎನ್ನಿಸುತ್ತಿತ್ತು. ಕಡೆಗೊಮ್ಮೆ ದೇವಧಾಯಿಯು ತಲೆಯೆತ್ತಿ “ಬರ್ ಪುಕಾನ್, ಈಗ ನೀನು ದಾಳಿ ಮಾಡು. ಇದು ಶ್ರೀರಾಮಚಂದ್ರನು ಲಂಕೆಯನ್ನು ಮುತ್ತಿದ ಗಳಿಗೆಯಾದ್ದರಿಂದ ತುಂಬಾ ಶುಭವಾಗಿದೆ” ಎಂದು ಹೇಳಿದ.

ಇದು ನಡೆದಿದ್ದು ೧೬೭೪ನೇ ಇಸವಿಯ ವಿಜಯದಶಮಿಯ ದಿನ.

ಬರ್ಪುಕಾನನೇನೋ ದಾಳಿಮಾಡಲು ಆಜ್ಞೆನೀಡಿದ. ಆದರೆ ಮೊಗಲರ ದಾಳಿ ಎಷ್ಟು ಭೀಕರವಾಗಿತ್ತೆಂದರೆ ಅದರ ಮುಂದೆ ಅಹೋಂ ನಾವಿಕರ ದಾಳಿ ಪ್ರಯೋಜನವಿಲ್ಲದಂತಾಯಿತು. ಸೈನಿಕರು ನದಿಯ ಮೇಲ್ಭಾಗಕ್ಕೆ ದೋಣಿ ಹಾಯಿಸಲು ಪ್ರಾರಂಭಿಸಿದರು. ರಾಮಸಿಂಹನ ನಾವಿಕರ ಕೈಯಿಂದ ಸಾವನ್ನು ತಪ್ಪಿಸಿಕೊಳ್ಳಬೇಕಾದರೆ ಅವರಿಗೆ ಇದ್ದದ್ದು ಅದೊಂದೇ ಉಪಾಯ. ಲಚಿತ್ ಇದ್ದ ದೋಣಿಯ ನಾವಿಕರೂ ಸಹ ನದಿಯ ಮೇಲ್ಭಾಗಕ್ಕೆ ಹೋಗಲು ದೋಣಿಯನ್ನು ತಿರುಗಿಸಿದರು.

ಲಚಿತ್‌ನಿಗೆ ಈ ದೃಶ್ಯವನ್ನು ಕಂಡು ದಿಗ್ಭ್ರಮೆಯಾಯಿತು. “ಹೀಗೇಕೆ ಮಾಡುತ್ತಿರುವಿರಿ?” ಎಂದು ಕೇಳಿದ್ದಕ್ಕೆ “ನಿಮ್ಮ ಪ್ರಾಣ ಉಳಿಸಲು” ಎಂದು ಉತ್ತರಿಸಿದರು. ಲಚಿತನಿಗೆ ಕೋಪ ತಡೆಯಲಾಗಲಿಲ್ಲ. ಮೈಯೆಲ್ಲ ಉರಿಯಾಯಿತು. ದೋಣಿ ಹಾಯಿಸುತ್ತಿದ್ದವರನ್ನು ಲಚಿತ್ ಆ ಜ್ವರದಲ್ಲೂ ಎತ್ತಿ ಬ್ರಹ್ಮಪುತ್ರಾ ನದಿಯೊಳಕ್ಕೆ ಎಸೆಯಲು ಪ್ರಾರಂಭಿಸಿದ.

ಆಗ ಇನ್ನೊಂದು ವಿಚಿತ್ರ ನಡೆಯಿತು. ನಡೆಸುವವರೇ ಇಲ್ಲದ ದೋಣಿ ಈಗ ನದಿಯ ಕೆಳಮುಖಕ್ಕೆ ಚಲಿಸಲು ಆರಂಭಿಸಿತು. ಅಂದರೆ ಮೊಗಲ್ ಸೈನ್ಯದ ಕಡೆಗೆ!

ಸಾವಿರಾರು ಮಂದಿ ಮೊಗಲ್ ಸೈನಿಕರು ತುಂಬಿರುವ ನೌಕೆಗಳ ದಿಕ್ಕಿನಲ್ಲಿ ದೋಣಿಯು ನಿಧಾನವಾಗಿ ಚಲಿಸುತ್ತಿದೆ. ಅದರಲ್ಲಿ ಲಚಿತ್ ಇದ್ದಾನೆ. ಅವನು ಜ್ವರದಿಂದ ಎಷ್ಟು ಬಳಲಿದ್ದಾನೆಂದರೆ ನಿಲ್ಲಲ್ಲೂ ಆಗುತ್ತಿಲ್ಲ. ಅಂತಹುದರಲ್ಲೂ ಜೋರಾಗಿ ಕಿರುಚಿ ತನ್ನ ಸೈನಿಕರಿಗೆ ಹೇಳುತ್ತಿದ್ದಾನೆ. “ಹೇಡಿಗಳಾ, ಓಡಿಹೋಗಿ ನಿಮ್ಮ ಸಂಸಾರದ ಜೊತೆ ಸುಖವಾಗಿ ಇರಿ. ಆದರೆ ರಾಜನಿಗೆ ಲಚಿತ್ ’ಜಿಯೊ ಈ ಥಾಕಾ ಮಾನೇ ಗೌಹಾಟೀ ಏರಾ ನಾಯಿ’ (ಅಂದರೆ ಲಚಿತನು ಬದುಕಿರುವ ತನಕ ಗೌಹಾಟಿಯನ್ನು ಬಿಟ್ಟುಕೊಡಲಿಲ್ಲ.)” ಎಂದು ತಿಳಿಸಿ. ಇದನ್ನು ಕೇಳಿದ ಅಸ್ಸಾಮೀ ಸೈನಿಕರಿಗೆ ನಾಚಿಕೆಯಾಯಿತು. ಹಿಂದಿರುಗಿದರು. ಶೌರ್ಯದಿಂದ ಪ್ರತ್ಯಾಕ್ರಮಣ ಮಾಡಿದರು. ಮೇಲ್ದಿಕ್ಕಿಗೆ ಹೋಗುತ್ತಿದ್ದ ದೋಣಿಗಳೆಲ್ಲವೂ ಪ್ರವಾಹದ ದಿಕ್ಕಿಗೆ ತಿರುಗಿ ತಮ್ಮ ಸೇನಾಧಿಕಾರಿಯ ಆಜ್ಞೆಗೆ ತಕ್ಕಂತೆ ಮುಂದೆ ಹೊರಟವು. ಇವರ ದಾಳಿಯ ಹೊಡೆತ ಎಷ್ಟಿತ್ತೆಂದರೆ ಮೊಗಲ್ ಸೈನ್ಯವು ಅದನ್ನು ತಾಳಲಾರದೆ ತತ್ತರಿಸಿಹೋಯಿತು.

ತಪ್ಪಿಸಿಕೊಂಡು ಹೋಗಲು ಮೊಗಲರು ಪ್ರಯತ್ನ ಮಾಡಿದರು. ಆದರೆ ಅವರ ದೋಣಿಗಳೆಲ್ಲ ಅಸ್ತವ್ಯಸ್ತವಾಗಿ ಹೊರಗೆ ಹೋಗಲಾರದಂತಹ ತೊಡಕಿನಲ್ಲಿ ಸಿಕ್ಕಿ ಹಾಕಿಕೊಂಡವು. ಬ್ರಹ್ಮಪುತ್ರಾ ನದಿಯ ಈ ದಡದಿಂದ ಆ ದಡಕ್ಕೆ ದೋಣಿಯಗಳ ಮೇಲೆ ನಡೆದುಕೊಂಡು ಹೋಗಬಹುದಾದಂತಹ ಒಂದು ಸೇತುವೆಯೇ ಅಲ್ಲಿ ನಿರ್ಮಾಣವಾಗಿತ್ತು. ಒಂದೊಂದೇ ಸ್ಥಳವನ್ನು ಬಿಟ್ಟುಕೊಟ್ಟು ಮೊಗಲ್ ಸೈನ್ಯ ಪಲಾಯನ ಮಾಡಿತು. ಲಚಿತನಿಗೆ ಅದ್ಭುತ ಜಯ ಸಿಕ್ಕಿತು. ಆದರೆ ಅಷ್ಟಕ್ಕೆ ಅವನು ಸಮಾಧಾನಪಟ್ಟುಕೊಳ್ಳಲಿಲ್ಲ. ಅವರನ್ನು ಪೂರ್ತಿ ಹೊರಗೆ ಹಾಕಿ ಎಂದು ಸಾರಿದ. ಮೊಗಲರನ್ನು ಅಟ್ಟಿಸಿಕೊಂಡು ವಿಜಯೀ ಅಸ್ಸಾಮೀ ಸೈನ್ಯ ಅವರ ಹಿಂದೆ  ಹೊರಟಿತು. ಮನಾಹಾ ನದಿಯನ್ನು ಮೊಗಲ್ ಸೈನ್ಯವು ದಾಟುವ ತನಕ ಅವರನ್ನು ಅಟ್ಟಿಸಿಕೊಂಡು ಹೋಯಿತು. (ಆಗಿನ ಕಾಲಕ್ಕೆ ಆ ನದಿಯೇ ಅಸ್ಸಾಮಿನ ಗಡಿ.)

ಅಮರನಾದ ಲಚಿತ

ಸೋತ ರಾಮಸಿಂಹನು ಭಗ್ನಹೃದಯದಿಂದ ದೆಹಲಿಗೆ ಹಿಂದಿರುಗಿದ. “ದೇವರ ಆಶೀರ್ವಾದವಿರುವ ಈ ನಾಡನ್ನು ಗೆಲ್ಲಬೇಕೆಂದು ಯೋಚಿಸುವುದು ಮೂರ್ಖತನವಾದೀತು. ಅಲ್ಲಿಯ, ಪ್ರತಿಯೊಬ್ಬ ಸೈನಿಕನೂ ಅಸಾಮಾನ್ಯ ಕತ್ತಿವರಸೆಗಾರ, ಬಿಲ್ಲುಗಾರ, ಈಜು ಬಲ್ಲವ, ದೋಣಿ ಹುಟ್ಟು ಹಾಕಬಲ್ಲವ, ಸಾಮಾನ್ಯ ಮುನುಷ್ಯರಿಗಿರುವ ಸಾಮರ್ಥ್ಯಕ್ಕೆ ಅದೆಷ್ಟೋಪಾಲು ಜಾಸ್ತಿ ಶಕ್ತಿಯುಳ್ಳವ. ಅವನೊಬ್ಬ ಸಮರ್ಪಿತ ಜೀವನದ ಶೂರ ಮತ್ತು ದೇಶಭಕ್ತ. ಪರದೇಶೀ ಆಕ್ರಮಣಕಾರರ ಕುಟಿಲ  ಯೋಜನೆಯನ್ನು ಅವರು ಪೂರ್ತಿ ಧ್ವಂಸ ಮಾಡಬಲ್ಲರು” ಎನ್ನುವ ವಿಷಯ ಅವನು ಎಂದೂ ಮರೆಯಲಾರದಂತೆ ಮನದಟ್ಟಾಗಿತ್ತು.

ಶತ್ರುಗಳನ್ನು ಹೊರಗಟ್ಟಿ, ಅಸ್ಸಾಂ ಅನ್ನು ಮುಕ್ತಗೊಳಿಸಿದ ಕೆಲವೇ ದಿನಗಳಲ್ಲಿ ಲಚಿತ್ ತೀರಿಕೊಂಡ. ಅವನೆಂದು ತನ್ನ ಕೊನೆಯುಸಿರೆಳೆದ ಎಂಬುದರ ಬಗ್ಗೆ ಚರಿತ್ರೆಯು ಮೌನವಾಗಿದೆ. ಆದರೆ ಅಸ್ಸಾಮಿನ ಮನೆಮನೆಗಳಲ್ಲಿ ಇಂದಿಗೂ ಅವನ ಶೌರ್ಯ, ಸಾಹಸ, ಉತ್ಕೃಷ್ಟ ದೇಶಭಕ್ತಿಯ ಗಾಥೆಗಳನ್ನು ಕೇಳಬಹುದು. ಎಲ್ಲಿಯವರೆಗೆ ಈ ನಾಡಿನಲ್ಲಿ ಸ್ವಾತಂತ್ಯ್ರದ ಹಂಬಲವಿರುತ್ತದೋ ಅಲ್ಲಿಯವರೆಗೆ ಲಚಿತ್ ಬರ್ ಪುಕಾನನಂತಹ ಮಹಾನ್ ಧೀರರ ನೆನಪು ಭಾರತೀಯರ ಹೃದಯಲ್ಲಿ ಹಸಿರಾಗಿರುತ್ತದೆ.