ಹೊಸ ದೃಷ್ಟಿ ಧೋರಣೆಗಳ ಹಿನ್ನೆಲೆಯಲ್ಲಿ ಆದಿಮಾತೆಯ ಸ್ವರೂಪ ಮತ್ತು ಉಪಾಸನೆಯನ್ನು ಕಂಡರಿಸಿರುವ ಪ್ರಸ್ತುತ ಕೃತಿ ‘ಲಜ್ಜಾಗೌರಿ‘ ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ಬಹಳ ಉಪಯುಕ್ತವಾದುದು. ಈ ಬಗೆಯ ಅಧ್ಯಯನ ಮುಖೇನ ಗೋದಾವರಿ, ಕೃಷ್ಣ ಮತ್ತು ತುಂಗಭದ್ರಾ ನದಗಳ ವ್ಯಾಪ್ತಿಯಲ್ಲಿರುವ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಕೆಲವು ಭಾಗಗಳಲ್ಲಿನ ಏಕ ಸಂಸ್ಕೃತಿಯ ಖಚಿತ ನೆಲೆಗಳನ್ನು ನಿಖರವಾಗಿ ಗುರುತಿಸಿದ್ದಾರೆ. ಮಾತ್ರವಲ್ಲ ಈ ಬಗೆಯ ಉಪಾಸನೆ ಭಾರತದ ಬೇರೆಬೇರೆ ಭಾಗಗಳಲ್ಲಿ ಹೇಗೆ ಆಚರಣೆಯಲ್ಲಿತ್ತು, ಇಂದಿನ ಸ್ವರೂಪವೆಂಥದ್ದು? ಎಂಬುದನ್ನು ಬೇರೆಬೇರೆ ನೆಲೆಯ ಆಕರಗಳ ಮುಖೇನ ವಿವರಿಸಿರುವ ಲೇಖಕರು ಉಪಾಸನಾ ಪರಂಪರೆಯ ನೈಜದರ್ಶನವನ್ನು ಈ ಕೃತಿಯ ರೂಪದಲ್ಲಿ ನಮ್ಮ ಮುಂದಿಟ್ಟಿದ್ದಾರೆ. ಹಾಗೆಯೇ ಈ ಉಪಾಸನಾ ಪರಂಪರೆಗೆ ಸಂಬಂಧಿಸಿದಂತೆ ತುಂಗಭದ್ರೆಯ ಈಚೆಗಿನ ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿಯೂ ಲಜ್ಜಾಗೌರಿಯ ಅನೇಕ ವಿಗ್ರಹಗಳು ಲಭ್ಯವಾಗಿದ್ದು, ಈ ಉಪಾಸನಾ ಪರಂಪರೆಯು ಪ್ರಾಚೀನವಾದುದು ಮಾತ್ರವಲ್ಲ ವ್ಯಾಪಕವಾದುದೂ ಹೌದು ಎಂಬುದಕ್ಕೆ ನಿದರ್ಶನಗಳಾಗಿವೆ. ಈ ಕುರಿತು ಭಾರತೀಯ ವಿದ್ವಾಂಸರಾದ ಡಿ.ಡಿ. ಕೋಸಾಂಬಿ, ಜಗದೀಶ ನಾರಾಯಣ ತಿವಾರಿ, ಎಚ್.ಡಿ.ಸಂಕಾಲಿಯಾರಂಥ ಅನೇಕ ಸಂಶೋಧಕರು ಮಾತ್ರವಲ್ಲ, ಪಾಶ್ಚಾತ್ಯ ಸಂಶೋಧಕರಾದ ಸ್ಟೆಲ್ಲಾ ಕ್ರಾಮರಿಶ್, ಕಾಡ್ರಿಂಗ್ಟನ್, ಶ್ರೀಮತಿ ಮರೆ, ಸೊಂತಿಮೇರ್‌ ಮುಂತಾದವರೂ ಅಧ್ಯಯನ ಮಾಡಿ ಲೇಖನಗಳನ್ನು, ಕೃತಿಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಈ ಬಗೆಯ ವ್ಯಾಪಕ ಅಧ್ಯಯನವಾಗಿಲ್ಲದ ಕಾರಣ ಪ್ರಸ್ತುತ ಕೃತಿಯನ್ನು ಅನುವಾದ ಮುಖೇನ ನಿಮ್ಮ ಮುಂದಿಡುತ್ತಿದ್ದೇನೆ.

ಈ ಅಮೂಲ್ಯ ಕೃತಿಯನ್ನು ಅನುವಾದ ಮಾಡುವಂತೆ ಸೂಚಿಸಿ, ಕೃತಿಯನ್ನು ಒದಗಿಸಿಕೊಟ್ಟು, ಹಲವಾರು ಸಲಹೆ ಸೂಚನೆಗಳ ಮೂಲಕ ಪ್ರೇರೇಪಿಸಿದವರು ನಮ್ಮ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳೂ, ಕರ್ನಾಟಕದ ಖ್ಯಾತ ಸಂಶೋಧಕರೂ ಆದ ಡಾ. ಎಂ.ಎಂ. ಕಲಬುರ್ಗಿಯವರು. ಹಾಗಾಗಿ ಇದನ್ನು ೨೦೦೧ – ೨೦೦೨ನೇ ಸಾಲಿನ ವಿಭಾಗದ ಸಾಂಸ್ಥಿಕ ಯೋಜನೆಯಾಗಿ ಕೈಗೆತ್ತಿಕೊಂಡೆನು. ಈ ಕೃತಿಯನ್ನು ಪೂರ್ಣವಾಗಿ ಅಭ್ಯಸಿಸಿ, ಅನುವಾದ ಮಾಡುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಕೆಲವಾರು ಸ್ಥಳಗಳಿಗೆ ಕಾರಣವಶಾತ್ ಹೋಗಬೇಕಾಯಿತು. ಆಗ ನನಗೆ ಅನಿರೀಕ್ಷಿತವೆಂಬಂತೆ ‘ಲಜ್ಜಾಗೌರಿ‘ ಆರಾಧನೆಯ ಕುರುಹುಗಳು ಕಂಡು ಬಂದವು. ನಾಗಮಂಗಲದಲ್ಲಿ ಇಂದಿಗೂ ಆಚರಣೆಯಲ್ಲಿರುವ ‘ದಂಡಿಗಮ್ಮನ ಕುಂಡಿ ಪೂಜೆ‘ಯ ವಿವರವನ್ನು ನನಗೆ ಡಾ. ಕರೀಗೌಡ ಬೀಚನಹಳ್ಳಿಯವರು ಒಮ್ಮೆ ಹೇಳಿದರು. ಆಗ ನನಗೆ ಆಳಂದದ ಆನಂದಿ ದೇವಿಯ ವಿಗ್ರಹ ಇಂದಿಗೂ ಹೀಗೆಯೇ ಇರುವ ವಿವರವು ನೆನಪಾಯಿತು. ವಿವರಣಾತ್ಮಕ ಕಥನವೇನೇ ಇರಲಿ, ಆರಾಧನ ವಿಗ್ರಹದ ಸ್ವರೂಪ ಒಂದೇ ಆಗಿರುವುದು ಮಾತ್ರ ಅತ್ಯಂತ ಕುತೂಹಲಕಾರಿಯಾದ ಸಂಗತಿ. ಧರ್ಮಸ್ಥಳದ ವಸ್ತು ಸಂಗ್ರಹಾಲಯದಲ್ಲಿ ನಾವುಂದ (ಕುಂದಾಪುರ)ದಲ್ಲಿ ದೊರೆತ ಲಜ್ಜಾಗೌರಿಯ ವಿಗ್ರಹವೊಂದನ್ನು ಗಮನಿಸಿದೆ. (ಕಾಲ ಕ್ರಿ.ಶ.೧೭ನೆಯ ಶತಮಾನ) ಕೆಳದಿ ಮ್ಯೂಸಿಯಂನಲ್ಲಿ ಒಂದು ವಿಗ್ರಹವಿದೆ. ಶಿಕಾರಿಪುರದಲ್ಲಿಯೂ (ಹುಚ್ರಾಯನ ಕೆರೆ ಏರಿಯ ಮೇಲೆ ಮತ್ತು ಬಳ್ಳಿಗಾವೆ) ಎರಡು ಲಜ್ಜಾಗೌರಿ ವಿಗ್ರಹಗಳು ಲಭ್ಯವಾಗಿವೆ. ನನ್ನ ಮಿತ್ರ ಕೆ.ಕೆ.ಮಕಾಳಿಯವರು ಬೀಳಗಿ (ಇಂದಿನ ಬಾಗಲಕೋಟೆ ಜಿಲ್ಲೆ)ಯಲ್ಲಿನ ಸಿದ್ದೇಶ್ವರ ದೇವಾಲಯದಲ್ಲಿ ಇರುವ ಲಜ್ಜಾಗೌರಿ ವಿಗ್ರಹದ ಒಂದು ಛಾಯಾಚಿತ್ರವನ್ನು ಒದಗಿಸಿದರು. ಈ ಎಲ್ಲವುಗಳೊಂದಗೆ ಎಂ.ಎಂ. ಕಲಬುರ್ಗಿ (ಮಾರ್ಗ – ೨), ಎಂ.ಚಿದಾನಂದ ಮೂರ್ತಿ, ಅ. ಸುಂದರ, ಎಸ್. ಶೆಟ್ಟರ್, ದಲಿತ ಕವಿ ಸಿದ್ಧಲಿಂಗಯ್ಯ (ಗ್ರಾಮ ದೇವತೆಗಳು) ಸೇಡಿಯಾಪು ಕೃಷ್ಣಭಟ್ಟ (ತಥ್ಯ ದರ್ಶನ) ಶಂ. ಬಾ. ಜೋಶಿಯವರೇ ಮುಂತಾದ ಕನ್ನಡದ ಸಂಶೋಧಕರುಗಳೆಲ್ಲ ಲಜ್ಜಾಗೌರಿಯ ಬಗ್ಗೆ ಬೇರೆಬೇರೆ ಮಾಹಿತಿಗಳನ್ನು ತಂತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಡಾ. ಕಲಬುರ್ಗಿಯವರು ಲಜ್ಜಾಗೌರಿಯನ್ನು ಕುರಿತು ನೀಡಿರುವ ಹೆಸರು ‘ಬತ್ತಲೆಗೌರಿ’. ಢೇರೆಯವರ ಪ್ರಸ್ತುತ ಕೃತಿಯ ಮಹತ್ವವೆಂದರೆ ಉಪಾಸಕರನ್ನು ಮುಖ್ಯವಾಗಿಟ್ಟುಕೊಂಡು ನಡೆಸಿರುವ ಅಧ್ಯಯನ ಸ್ವರೂಪ ವೈಶಿಷ್ಟ್ಯ, ಉಪಾಸಕರ ನಂಬಿಕೆ, ಆಚರಣೆಗಳು, ಸಂಪ್ರದಾಯಗಳು, ಪದ್ಧತಿಗಳು, ಆರಾಧನೆಯ ಬಗೆ, ದೇವಿಯನ್ನು ಕುರಿತ ಮನೋಭಾವ, ಇಂದು ದೇವಾಲಯದ ಒಂದು ಮೂಲೆಯಲ್ಲಿ ಇದ್ದರೂ ಆ ದೇವಿಯನ್ನು ಕದ್ದು ಮುಚ್ಚಿಯಾದರೂ ಪೂಜಿಸುತ್ತಲಿರುವ ವಿಚಾರ – ಈ ಮೊದಲಾಗಿ ಅನೇಕ ನೆಲೆಗಳಿಂದ ಲಜ್ಜಾಗೌರಿಯ ಪೂರ್ಣ ಸ್ವರೂಪವನ್ನು ತಮ್ಮ ಕೃತಿ ಮುಖೇನ ಮನದಟ್ಟು ಮಾಡಿರುವುದು. ಅಲ್ಲದೆ, ಲಜ್ಜಾಗೌರಿಯ ಸಾಂಸ್ಕೃತಿಕ ವಿವರಗಳಿಗೆ ಸಂಬಂಧಿಸಿದಂತೆ ಅನೇಕ ಪುರುಷ ದೇವತೆಗಳನ್ನು ಕ್ಷೇತ್ರಪಾಲಕ ಮತ್ತು ಕ್ಷೇತ್ರಪತಿತ್ವದಂಥ ಅಂಶಗಳ ಹಿನ್ನೆಲೆಯಲ್ಲಿ ಚರ್ಚಿಸಿ ಸ್ತ್ರೀ ಸಂವೇದನೆಯ ಮೂಲವನ್ನು ಗುರುತಿಸಿದ್ದಾರೆ. ಭಾರತದ ಬೇರೆಬೇರೆ ಪ್ರದೇಶದಲ್ಲಿ ಇಂದಿಗೂ ಇದರ ಕುರುಹುಗಳಿರುವುದು, ಏಕ ಸಂಸ್ಕೃತಿಯ ಖಚಿತತೆಗೆ ದ್ಯೋತಕಗಳಾಗಿವೆ. ಶಾಕ್ತೋಪಾಸಕರ ಇತಿಹಾಸದೊಂದಿಗೆ ಅರ್ಥಾತ್ ಮಾನವ ಉಗಮದ ಜೊತೆಜೊತೆಗೆ ಬಂದ ಈ ದೇವಿಯ ಆರಾಧನೆ ಇಂದಿನ ನಾಗರಿಕ ಪ್ರಜ್ಞೆಗೆ ವಿಚಿತ್ರವೂ, ಸಂಕೋಚವೂ ಆದ ಮನೋಭಾವವನ್ನು ಉಂಟುಮಾಡಿ ಹೊಸ ಹೊಸ ರೂಪು, ಅಲಂಕಾರಗಳಿಗೆ ಕಾರಣವಾಗಿರುವುದನ್ನು ಈ ಕೃತಿ ಅಮೂಲಾಗ್ರವಾಗಿ ಚರ್ಚಿಸುತ್ತದೆ. ಅಲ್ಲದೆ ಶೈವ, ವೈಷ್ಣವ ಮುಂತಾದ ಪಂಥಗಳು ಬಂದ ಮೇಲೆ ಆ ದೇವಿಯನ್ನು ತಂತಮ್ಮ ಪುರುಷ ದೇವತೆಗಳ ಅಂಗವಾಗಿ ಮಾಡಿಕೊಂಡುದರ ಸೂಕ್ಷ್ಮವಿವರಗಳನ್ನು ಲೇಖಕರು ತೌಲನಿಕ ನೆಲೆಯಿಂದ ಗಂಭೀರವಾಗಿ ಗುರುತಿಸಿರುವುದು ವಿಶೇಷ. ಹಾಗೆಯೇ ಲಜ್ಜಾಗೌರಿಯ ಅನೇಕ ನೆಲೆಗಳು ಇಸ್ಲಾಂ ಸಂತರ ಹೆಸರಿನಲ್ಲಿ ಆರಾಧಿಸಲ್ಪಡುತ್ತಿರುವ ವಿವರ ಹಾಗೂ ಆ ಕುರಿತ ವಿವರಣೆಯ ಸಾಹಿತ್ಯ ಸಾಮಗ್ರಿಯನ್ನೂ ಇಲ್ಲಿ ವಿಶ್ಲೇಷಿದ್ದಾರೆ. ಜೋತಿಬಾನಂಥ ಕ್ಷೇತ್ರಪಾಲಕ ದೇವರನ್ನು ಶೈವೀಕರಣಗೊಳಿಸಲು ನಡೆದ ಪ್ರಕ್ರಿಯೆ; ವಿಠಲ ಮತ್ತು ವೆಂಕಟೇಶ (ತಿರುಪತಿ)ರನ್ನು ವೈಷ್ಣವೀಕರಣಗೊಳಿಸಿಕೊಂಡಿರುವ ಬಗೆ; ಕೊಲ್ಹಾಪುರದ ಅಂಬಾಬಾಯಿಯನ್ನು ಮಹಾಲಕ್ಷ್ಮಿಯನ್ನಾಗಿಸಿ ತಿರುಪತಿಯ ವೆಂಕಟೇಶನ ಸಂಬಂಧ ಕಲ್ಪಿಸಿರುವುದು; ಏಕವೀರೆ ಎಂದು ಕರೆಯಲಾಗಿರುವ ಈ ದೇವಿಯು ಶಕ್ತಿದೇವತೆಯಾಗಿ ಆರಾಧಿಸಲ್ಪಡುತ್ತಿರುವುದು; ಏಕವೀರಾಪತಿ ಎಂಬ ಮೂಲಕ ಜೋತಿಬಾನೊಂದಿಗೆ ಆಕೆಯ ಸಂಬಂಧವು ಸ್ಪಷ್ಟಗೋಚರವಾಗುತ್ತಿರುವುದು – ಈ ಮುಂತಾದ ಅನೇಕ ವಿಚಾರಗಳು ಉಪಾಸನಾ ಸಂಸ್ಕೃತಿಯ ಮೂಲ ಮತ್ತು ಇಂದಿನ ಪರಿವರ್ತನ ಸ್ವರೂಪದ ಹಿನ್ನೆಲೆಯಲ್ಲಿ ಬೇರೆಬೇರೆ ಘಟ್ಟಗಳ ಮೂಲಕ ಸಂಸ್ಕೃತಿ ಚಿಂತನೆಗೆ ಹೊಸ ಆಯಾಮವನ್ನು ಒದಗಿಸುತ್ತವೆ. ಇದರ ಅಧ್ಯಾಯಗಳೆಲ್ಲ ಕೃತಿ ರೂಪದಲ್ಲಿ ಬರುವುದಕ್ಕೆ ಮುನ್ನ ಲೇಖನಗಳ ರೂಪದಲ್ಲಿ ಪ್ರಕಟವಾಗಿ ಮಹಾರಾಷ್ಟ್ರದ ಸಂಸ್ಕೃತಿ ಚಿಂತಕರನ್ನು ಸ್ಫೂರ್ತಿಗೊಳಿಸಿ ವಿಫುಲ ಮಾಹಿತಿ, ಪ್ರತಿಕ್ರಿಯೆಗಳಿಗೆ ಕಾರಣವಾಗಿದ್ದವು. ನಿರಾಕರಣೆಯಂಥ ನಿರಪೇಕ್ಷ್ಯ ನೆಲೆಗಿಂತ ಅಧ್ಯಯನ ಕುತೂಹಲವು ಹೇಗೆ ಸಂಶೋಧಕರಿಗೆ ನೆರವಾಗುತ್ತವೆ ಎಂಬುದಕ್ಕೆ ಈ ಪ್ರಯೋಗ ನಿದರ್ಶನ.

ಹೀಗೆ ಬೇರೆಬೇರೆ ನಿಟ್ಟಿನಿಂದ ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿರುವ ಈ ಕೃತಿಯನ್ನು ಅನುವಾದಿಸುವಂತೆ ಸರ್ವರೀತಿಯಲ್ಲೂ ಒತ್ತಾಸೆಯಾಗಿ ನಿಂತವರು ಡಾ. ಎಂ.ಎಂ. ಕಲಬುರ್ಗಿಯವರು. ಈ ಕೃತಿಯ ಅನುವಾದವನ್ನು ಪೂರ್ಣವಾಗಿ ಪರಿಶೀಲಿಸಿ, ಕೆಲವಾರು ಸಲಹೆ ಸೂಚನೆಗಳನ್ನು ನೀಡಿ ಈ ರೂಪಕ್ಕೆ ಕಾರಣರಾದವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯ್ಷರು, ಶ್ರೇಯೋಭಿಲಾಷಿಗಳೂ ಆದ ಡಾ. ಗುರುಲಿಂಗ ಕಾಪಸೆಯವರು. ಹಾಗೆಯೇ ಇಂಥ ಕೃತಿಯು ಅವಶ್ಯ ಕನ್ನಡಕ್ಕೆ ಬರಬೇಕು ಎಂದು ಮತ್ತೆಮತ್ತೆ ವಿಚಾರಿಸುತ್ತಾ ಪ್ರೋತ್ಸಾಹಿಸಿದವರು ಅಧ್ಯಯನಾಂಗದ ನಿರ್ದೇಶಕರು ಹಾಗೂ ನಮ್ಮ ವಿಭಾಗದ ಮುಖ್ಯಸ್ಥರೂ ಆದ ಡಾ. ಕರೀಗೌಡ ಬೀಚನಹಳ್ಳಿಯವರು. ಇನ್ನು ಪ್ರಸ್ತುತ ಕೃತಿಯ ಮಹತ್ವವನ್ನು ಮನಗಂಡು ಕೃತಿ ಪ್ರಕಟಣೆಗೆ ಎಲ್ಲ ಹಂತಗಳಲ್ಲೂ ಅನುವು ಮಾಡಿಕೊಟ್ಟವರು ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳೂ ಹಾಗೂ ನನ್ನ ವಿದ್ಯಾಗುರುಗಳೂ ಆದ ಡಾ. ಎಚ್.ಜೆ.ಲಕ್ಕಪ್ಪಗೌಡರು – ಇವರೆಲ್ಲರಿಗೂ ನನ್ನ ತುಂಬು ಹೃದಯದ ಕೃತಜ್ಞತೆಗಳು. ಕಂಪ್ಯೂಟರ್ ಅಳವಡಿಕೆಯಿಂದ ಹಿಡಿದು ಎಲ್ಲ ಹಂತಗಳಲ್ಲೂ ಸಹಕರಿಸಿದ ಪ್ರಸಾರಾಂಗ ನಿರ್ದೇಶಕರಾದ ಡಾ. ಹಿ.ಚಿ.ಬೋರಲಿಂಗಯ್ಯ, ಪ್ರಕಟಣಾ ವಿಭಾಗದ ಮಿತ್ರ ಸುಜ್ಞಾನಮೂರ್ತಿ, ಮುಖಪುಟ ರಚಿಸಿದ ಗೆಳೆಯ ಕೆ.ಕೆ.ಮಕಾಳಿ, ಅಕ್ಷರ ಸಂಯೋಜನೆ ಮಾಡಿದ ಶ್ರೀಮತಿ ಎ.ನಾಗವೇಣಿ ಹಾಗೂ ಪ್ರಸಾರಾಂಗದ ಇತರೆ ಸಹೋದ್ಯೋಗಿಗಳಿಗೆಲ್ಲರಿಗೂ ಬಹಳವಾಗಿ ಸ್ಮರಿಸಿಕೊಳ್ಳುವುದಕ್ಕೆ ನನಗೆ ಬಹಳ ಸಂತೋಷವಾಗುತ್ತದೆ. ಹಾಗೆಯೇ ಈ ಕೃತಿಯನ್ನು ಅನುವಾದ ಮಾಡಿ ನಮ್ಮ ವಿಶ್ವವಿದ್ಯಾಲಯದಿಂದ ಪ್ರಕಟಿಸಲು ಅನುಮತಿಯನ್ನು ಕೊಟ್ಟು ಕಾರಣಾಂತರಗಳಿಂದ ಪ್ರಕಟಣೆಯ ಕಾರ್ಯ ನಿಧಾನವಾದಾಗ ಪತ್ರ ಮುಖೇನ ಹಾಗೂ ದೂರವಾಣಿಯ ಮೂಲಕವೂ ಹಲವಾರು ಬಾರಿ ಆಸಕ್ತಿಯಿಂದ ವಿಚಾರಿಸುತ್ತಿದ್ದ ಮಹಾರಾಷ್ಟ್ರದ ಶ್ರೇಷ್ಠ ಸಂಸ್ಕೃತಿ ಚಿಂತಕರೂ, ಖ್ಯಾತ ಸಂಶೋಧಕರೂ ಆದ ಡಾ. ರಾಮಚಂದ್ರ ಚಿಂತಾಮಣ ಢೇರೆಯವರೆಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ. ಜೊತೆಗೆ ಮೂಲ ಲೇಖಕರಿಂದ ಅನುಮತಿ ಪತ್ರ ಬರುವುದು ತಡವಾದಾಗ ಸ್ವತಃ ತಾವೇ ಆಸಕ್ತಿವಹಿಸಿ, ಕಾರಣಾಂತರದಿಂದ ಪುಣೆಗೆ ಹೋದಾಗ ಡಾ. ಢೇರೆಯವರ ಮನೆಗೂ ಹೋಗಿ ಅನುಮತಿ ಪತ್ರವನ್ನು ಕೇಳಿಪಡೆದು ನನಗೆ ತಲುಪಿಸಿದ ಡಾ. ಎಂ.ಎಂ.ಕಲಬುರ್ಗಿಯವರನ್ನು ಮತ್ತೊಮ್ಮೆ ನಾನು ಮನಸಾರೆ ಕೃತಜ್ಞತೆ ಹೇಳದೆ ಇರುವುದಕ್ಕೆ ಸಾಧ್ಯವಿಲ್ಲ.

ಡಾ. ವಿಠಲರಾವ್ ಗಾಯಕ್ವಾಡ್