ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವ ಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಭಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡ ಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ವೈದಿಕ ಸಂಸ್ಕೃತಿಯನ್ನು ಆರ್ಷೇಯ ಸಂಸ್ಕೃತಿಯೆಂದು ಮತ್ತು ಅಖಂಡ ಭಾರತೀಯ ಸಂಸ್ಕೃತಿಯೆಂದು ಹಾಗೂ ಇಂದು ಕಂಡುಬರುವ ವೈವಿಧ್ಯಮಯ ಸಂಸ್ಕೃತಿಗಳೆಲ್ಲ ಈ ವೈದಿಕ ಸಂಸ್ಕೃತಿಯ ತಾಯಿ ಬೇರಿನಿಂದ ಹೊರಟ ಉಪಸಂಸ್ಕೃತಿಗಳೆಂದು ನಂಬಿಸುವ ಮತ್ತು ಬಿಂಬಿಸುವ ತೀವ್ರ ಹಾಗೂ ವ್ಯವಸ್ಥಾಬದ್ಧವಾದ, ಉದ್ದೇಶಪೂರ್ವಕವಾದ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಭಾರತೀಯ ಸಂಸ್ಕೃತಿ ಏಕಾಖಂಡವಲ್ಲವೆಂದು ಅದರೊಳಗೆ ವೇದಕಾಲೀನ ಸಂಸ್ಕೃತಿಗಿಂತ ಭಿನ್ನವೂ ವಿಶಿಷ್ಟವೂ ಆದ ನುರಾರು ಮೂಲ ಸಂಸ್ಕೃತಿಗಳು ಹುದುಗಿವೆಯೆಂದು, ಅದ್ದರಿಂದ ಇವು ಒಂದರೊಳಗೆ ಮತ್ತೊಂದಾಗದೆ ತಮ್ಮದೇ ಮೂಲಗಳನ್ನು, ಉದ್ದೇಶಗಳನ್ನು ಮತ್ತು ವ್ಯಾಪ್ತಿಯನ್ನು ಒಳಗೊಂಡ ಸ್ವತಂತ್ರ ಸಂಸ್ಕೃತಿಗಳೆಂದು ಇತ್ತೀಚಿನ ಅಧ್ಯಯನ ಮತ್ತು ಸಂಶೋಧನೆಗಳು ತೋರಿಸಿಕೊಟ್ಟಿವೆ. ಅಷ್ಟೇ ಅಲ್ಲ, ಅಪ್ರಾಚೀನವೆಂದು ಪ್ರತಿಪಾದಿಸಲಾಗುವ ವೇದಕಾಲೀನ ಸಂಸ್ಕೃತಿ ಕೂಡ ವಿವಿಧ ಪ್ರಾಚೀನ ಜನಾಂಗಗಳಿಂದ ಹುಟ್ಟಿಬಂದ ನೂರಾರು ಮೂಲನಿವಾಸಿ ತಪಸ್ವಿಗಳ ಧ್ಯಾನ, ಚಿಂತನೆ ಮತ್ತು ಕ್ರಿಯೆಗಳಿಂದ ಸಂಪುಟಗೊಂಡಿವೆ ಎಂಬುದು ದಿನದಿಂದ ದಿನಕ್ಕೆ ಹೆಚ್ಚು ನಿಚ್ಚಳವಾಗುತ್ತಿದೆ. ಆದ್ದರಿಂದ ವೇದ ಸಂಸ್ಕೃತಿ ಮತ್ತು ಜನ ಸಂಸ್ಕೃತಿಗಳನ್ನು ಒಂದಕ್ಕೊಂದು ತದ್ವಿರುದ್ಧವಾದ ನೆಲೆಯಲ್ಲಿ ಪರಿಭಾವಿಸದೆ ಕಾಲದಿಂದ ಕಾಲಕ್ಕೆ ಪರಿವರ್ತನೆಗೊಳ್ಳುತ್ತ, ಪರಿಷ್ಕಾರಗೊಳ್ಳುತ್ತ ಬಂದ ಸಂಕೀರ್ಣ ಸಂಸ್ಕೃತಿಯೆಂದು ಭಾವಿಸಬಹುದಾಗಿದೆ. ಆದರೂ ರಾಷ್ಟ್ರಾದ್ಯಂತ ನಡೆಸಲಾದ ಚಾರಿತ್ರಿಕ, ಸಾಂಸ್ಕೃತಿಕ ಮತ್ತು ಜನಾಂಗಿಕ ಸಂಶೋಧನೆಗಳ ಅಂತರ್‌ಗರ್ಭ ಹಲವು ಏಕಸಂಸ್ಕೃತಿಯ ಚರಣ ಚಿಹ್ನೆಗಳು ರಾಷ್ಟ್ರಾದ್ಯಂತ ಗೋಚರವಾಗುವುದನ್ನು ಕಂಡುಹಿಡಿಯಲಾಗಿದೆ. ಪ್ರಾಚೀನವೂ, ಮೂಲವೂ ಆದ ಈ ಸಾಂಸ್ಕೃತಿಕ ಗುರುತುಗಳು ಮಾನವನ ಚಿಂತನೆ, ಆಲೋಚನೆ, ಆಚರಣೆಗಳ ಮೂಲ ಸ್ವರೂಪವನ್ನು ಎತ್ತಿ ತೋರಿಸುತ್ತವೆ. ಇಂತಹ ಏಕ ಸಂಸ್ಕೃತಿಯ ಗುರುತುಗಳನ್ನು ಕಾಣಿಸುವ ಸಂಸ್ಕೃತಿಯಲ್ಲಿ ಲಜ್ಜಾ ಗೌರಿಯ ಸಂಪ್ರದಾಯವೂ ಒಂದು.

ಒಂದು ಜೀವದಿಂದ ಮತ್ತೊಂದು ಜೀವ ಮೈದಳೆಯುವ ವಿಸ್ಮಯಕಾರಕ ಅಂಶ ಆರಂಭಿದಂದಲೂ ಮನುಷ್ಯ ಚಿಂತನಾಕ್ರಮವನ್ನು, ಕಲ್ಪನಾಶಕ್ತಿಯನ್ನು ಆವರಿಸಿಕೊಂಡು ಅದರ ಕಾರಣಗಳನ್ನು ಕಂಡುಹಿಡಿಯುವ ದಿಸೆಯಲ್ಲಿ ಮನುಕುಲ ಇತಿಹಾಸಪೂರ್ವ ಯುಗದಿಂದಲೂ ಉದ್ಯುಕ್ತವಾಗಿದೆ. ಈ ಚಿಂತನೆಯ ದಾರಿಯಲ್ಲಿ ಮೊದಲು ಕಂಡುಕೊಂಡ ವಾಸ್ತವ ಸತ್ಯವೆಂದರೆ ಈ ಎಲ್ಲ ಜೀವ ಸೃಷ್ಟಿಗೆ ಸೃಜನೇಂದ್ರಿಯವೇ ಕಾರಣ ಎಂಬುದು. ಇದರಿಂದಾಗಿ ಜೀವಿಯಲ್ಲಿಯೇ ಇರುವ ಈ ಸೃಜನೇಂದ್ರಿಯವೇ ಬಗೆಬಗೆಯ ಜೀವಿಗಳ ಮೂಲಸ್ಥಾನವಾದ್ದರಿಂದ ಅದು ಆದಿದೈವಿಕವೆಂಬ ನಂಬಿಕೆ ಮೂಲಮಾನವನಲ್ಲಿ ಬಲಿಯುತ್ತಾ ಹೋದಂತೆ ಕಾಣುತ್ತದೆ. ಈ ಸೃಜನೇಂದ್ರಿಯ ನಮ್ಮನ್ನು ಈ ಬರ್ಹಿಲೋಕಕ್ಕೆ ತರುವ ತಾಯಿಯ ಒಂದು ಮುಖ್ಯ ಅಂಗ ಎಂಬ ಅರಿವು ಸ್ಪಷ್ಟವಾಯಿತು. ಹೆಣ್ಣಿಗೆ ತಾಯ್ತನವನ್ನು ನೀಡುವ ಮತ್ತು ಜಗತ್ತಿನ ವೈವಿಧ್ಯಮಯ ಸೃಷ್ಟಿಗೆ ಮೂಲಕಾರಣವಾಗಿರುವ ಸೃಜನಾಂಗವೇ ಅತಿಮಾನುಷ ಶಕ್ತಿಯಾದ ದೇವರು ಎಂಬ ಕಲ್ಪನೆ ಸಾಂದ್ರವಾಯಿತು. ಆದ್ದರಿಂದ ಮಾತೃದೇವತೆ ಎಂಬ ನಂಬಿಕೆಯ ಜೊತೆಜೊತೆಗೆ ಮಾತೆಯ ಪವಾಡ ಸದೃಶ ಮುಖ್ಯಾಂಗವಾದ ಸೃಜನೇಂದ್ರಿಯದ ಆರಾಧನೆಯೇ ದೈವದ ಆರಾಧನೆ ಎಂಬ ನಿಲುವಿನಲ್ಲಿ ನಮ್ಮ ಪ್ರಾಚೀನರು ನಿಂತರು. ಹೀಗಾಗಿ ಬ್ರಹ್ಮ, ವಿಷ್ಣು, ಮಹೇಶ್ವರ ಇತ್ಯಾದಿಯಾದ ಪುರಾಣ ಲೋಕದ ದೇವರುಗಳ ಆರಾಧನೆಗಿಂತಲೂ ಮೊದಲು ಈ ಸೃಜನೇಂದ್ರಿಯದ ಆರಾಧನೆ ಆರಂಭವಾಗಿರಬಹುದು. ಏಕೆಂದರೆ ಈ ದೇವತೆಗಳು ಮನುಷ್ಯನ ಕಲ್ಪನೆಯ ಕೂಸುಗಳು ಮತ್ತು ಪುರಾಣಯುಗದಿಂದ ಮೂಡಿಬಂದವರು. ಆದರೆ, ಈ ಸೃಜನೇಂದ್ರಿಯ ಮನುಷ್ಯನ ಪೌರಾಣಿಕ ಕಲ್ಪನೆ ಚಿಗುರುವುದಕ್ಕಿಂತ ಮುಂಚೆಯೇ ತಾನು ಹುಟ್ಟಿ ಬಂದಾಗಲೇ ತಾನು ದರ್ಶಿಸಿದ ಒಂದು ಅದ್ಭುತ ಅಂಗ. ಹೀಗಾಗಿ ಮೂಲ ಮಾನವರು ಈ ಅಂಗವನ್ನು ಪೂಜಿಸುವ, ಭಜಿಸುವ, ಧ್ಯಾನಿಸುವ ಸಂಪ್ರದಾಯವನ್ನು ಸೃಷ್ಟಿಸಿಕೊಂಡು ಅದರ ಆರಾಧನೆಯ ಫಲವಾಗಿ ಮುಂದಿನ ಪೀಳಿಗೆ ವೃದ್ಧಿಯಾಗುವುದೆಂಬ ಚಿಂತನೆಯನ್ನು ರೂಢಿಸಿಕೊಂಡರು. ಮಾತೃದೇವತೆಯ ವಿಗ್ರಹದ ಜೊತೆಯಲ್ಲಿಯೇ ಈ ಅಂಗವನ್ನು ಪ್ರಧಾನವಾಗಿ ಕಾಣಿಸುವ ಮತ್ತು ಆರಾಧಿಸುವ ಕ್ರಿಯೆ ಮುಂದುವರಿಯಿತು. ಇಂತಹ ಆಶ್ಚರ್ಯಕರವಾದ ಅದ್ಭುತಾಂಗವನ್ನು ಜನ್ಮತಃ ಧಾರಣ ಮಾಡಿಕೊಂಡ ತಾಯಿ ಶಕ್ತಿದೇವತೆಯಾದಳು. ಹೀಗಾಗಿ ಇತರ ದೇವತೆಗಳ ಆರಾಧನಾ ಪರಂಪರೆಗಿಂತ ಶಕ್ತಿದೇವತೆಯ ಆರಾಧನೆಯೇ ಪ್ರಾಚೀನವೆಂಬುದಾಗಿ ಭಾವಿಸಲಾಗಿದೆ. ಇತ್ತೀಚಿನ ಉತ್ಖನನಗಳ ಮೂಲಕ, ಶೋಧನೆಗಳ ಮೂಲಕ ಭಾರತದ ಬೇರೆ ಬೇರೆ ಕಡೆಗಳಲ್ಲಿ ಈ ವಿಗ್ರಹಗಳು ದೊರೆತಿರುವುದರಿಂದ ಇಂತಹ ಏಕಚಿಂತನೆಯಿಂದ ಮೂಡಿಬಂದ ಏಕಸಂಸ್ಕೃತಿ ಇಲ್ಲೆಲ್ಲ ಪಸರಿತ್ತೆಂಬುದು ವೇದ್ಯವಾಗುತ್ತದೆ. ಮಾನವ ಒಂದು ಮುಖ್ಯ ಅಂಗವೇ ಆಗಿರುವ ಸೃಜನೇಂದ್ರಿಯಕ್ಕೆ ಎಲ್ಲ ಕಾಲದಲ್ಲೂ ಪ್ರಾಮುಖ್ಯವಿದ್ದರೂ ಶಿಷ್ಟಸಂಸ್ಕೃತಿ ರೂಪುಗೊಂಡು ಬೆಳೆಯುತ್ತಾ ಬಂದಂತೆಲ್ಲ ಇದು ಮುಕ್ತವಾಗಿ ಕಾಣುವ, ಕಾಣಿಸುವ ಅಥವಾ ಓಲೈಸುವ ಅಂಗವಲ್ಲ ಎಂಬ ಸಂಕೋಚ ಭಾವನೆ ಹುಟ್ಟಿತು. ಇದರಿಂದಾಗಿ ಲಿಂಗಾರಾಧನೆ, ಸ್ತ್ರೀ ಜನನೇಂದ್ರಿಯ ಪೂಜೆ ಮುಕ್ತ ಮತ್ತು ಏಕಾಂತ ಪೂಜೆಯ ದೇವತೆಗಳಾಗಿಬಿಟ್ಟವು. ಈ ಬಗ್ಗೆ ಮಾತನಾಡುವುದು ಅಶ್ಲೀಲ ಎಂಬ ಭಾವನೆ ಸುಸಂಸ್ಕೃತರೆನಿಸಿಕೊಂಡವರಲ್ಲಿ ಬಲವಾಯಿತು. ಆದರೆ, ಬುದ್ಧಿಬಲದಿಂದ ಬೆಳೆಸಿಕೊಂಡ ಭಾವನೆಗಳು ಸಹಜ ಮಾನವ ಚಟುವಟಿಕೆಗಳ ವಲಯವನ್ನು ನಿರಾಕರಿಸಲಾರದೆ ಹೋದವು. ಇದರಿಂದ ಭಾರತದಲ್ಲಿ ಈ ಯೋನಿಪೂಜೆಯನ್ನು ಶಕ್ತಿಪೂಜೆಯ ಮುಖ್ಯ ಅಂಗವಾಗಿ ಪರಿಗಣಿಸಲಾಯಿತು. ಶಿಷ್ಟ ದೇವತೆಗಳ ಗುಡಿಗಳಲ್ಲಿಯೂ ಅದರ ಪ್ರಾಕಾರಗಳಲ್ಲಿಯೂ ಇವು ಕೆತ್ತಲ್ಪಟ್ಟವು. ಆರಾಧನೆಯ ಮುಖ್ಯ ಪೀಠದಲ್ಲಿದ್ದ ಈ ವಿಗ್ರಹಗಳು ಆ ಸ್ಥಾನದಿಂದ ದೂರ ದೂರಕ್ಕೆ ಶಿಷ್ಟತೆಯ ಕಾರಣದಿಂದಾಗಿ ಸರಿದವು ಎನಿಸುತ್ತದೆ. ಭಾರತದ ಹಲವಾರು ಮುಖ್ಯ ದೇವಾಲಯಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪೂಜೆಗೊಳ್ಳುವ ಗ್ರಾಮದೇವತೆಗಳ ಗುಡಿಗಳಲ್ಲಿ ಈ ಬಗೆಯ ವಿಗ್ರಹಗಳು ಕಂಡುಬರುತ್ತವೆ. ಮೊದಮೊದಲು ರಾಜಾರೋಷವಾಗಿ ನಡೆಯುತ್ತಿದ್ದ ಈ ಬಗೆಯ ಪೂಜೆ ಈ ಆಧುನಿಕ ಕಾಲದಲ್ಲೂ ಕದ್ದು ಮುಚ್ಚಿ ನಡೆಯುತ್ತಿದೆ ಎಂದು ಸಾಕ್ಷ್ಯಗಳು ನುಡಿಯುತ್ತವೆ.

ನಮ್ಮ ಪ್ರಾಚೀನ ಸಂಸ್ಕೃತಿಯ ಅಂಗವಾಗಿ ರೂಪುಗೊಂಡ ಲಜ್ಜಾಗೌರಿ ಸಂಪ್ರದಾಯದ ಚಾರಿತ್ರಿಕ, ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಹಾಗೂ ಈ ಸಂಪ್ರದಾಯ ಕಂಡುಬರುವ ಭಾರತದ ಬೇರೆ ಬೇರೆ ನೆಲೆಗಳ ಶೋಧನೆಯನ್ನು ಕೈಗೊಂಡು ಮರಾಠಿ ವಿದ್ವಾಂಸರಾದ ಡಾ. ರಾಮಚಂದ್ರ ಚಿಂತಾಮಣ ಢೇರೆ ಅವರು ಈ ಕೃತಿಯನ್ನು ರಚಿಸಿದ್ದಾರೆ. ಈ ವಿಷಯ ಅಶ್ಲೀಲವೆಂಬ ಭಾವನೆಗೆ ಪಕ್ಕಾಗದೆ, ಸಂಶೋಧಕನ ಸತ್ಯ ದರ್ಶನ ದೃಷ್ಟಿಯನ್ನು, ಅದು ಹೊರಡಿಸುವ ನಾನಾ ಸ್ತರಗಳ ಚಿಂತನೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಷಯವನ್ನು ಸೂಕ್ಷ್ಮವಾಗಿ, ಸೋಪಜ್ಞಶೀಲವಾಗಿ, ಆಧಾರಭೂತವಾಗಿ ಮತ್ತು ಮುಕ್ತ ಮನಸ್ಸಿನಿಂದ ವಿವೇಚಿಸಿದ್ದಾರೆ. ಜನಪದ ಮೂಲ ಸಂಸ್ಕೃತಿಯ ವಿಶಿಷ್ಟ ಅಧ್ಯಾಯವೊಂದನ್ನು ಅನಾವರ ಗೊಳಿಸುವ ಈ ಕೃತಿ ಮತ್ತಷ್ಟು ಮುಂದಿನ ಸಂಶೋಧನೆಗಳಿಗೆ ಚಾಲನೆಯನ್ನು ಒದಗಿಸುತ್ತದೆ ಎಂದು ನಂಬಿದ್ದೇನೆ. ಇಂತಹ ಬಹುಜನಪ್ರಿಯವಲ್ಲದ, ಆದರೆ ಪ್ರಬುದ್ಧ ಸಂಶೋಧನ ಕೃತಿಯೊಂದನ್ನು ನಮ್ಮ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಡಾ. ವಿಠಲರಾವ್ ಗಾಯಕ್ವಾಡ್ ಅವರು ಅತ್ಯಂತ ಪರಿಶ್ರಮದಿಂದ, ವಿವೇಚನೆಯಿಂದ, ನಿಪುಣತೆಯಿಂದ ಹಾಗೂ ಎಚ್ಚರದಿಂದ ಅನುವಾದ ಮಾಡಿಕೊಟ್ಟಿದ್ದಾರೆ. ಸ್ವತಃ ಮರಾಠಿಯನ್ನು ಸೊಗಸಾಗಿ ಮಾತನಾಡುವ, ಅಧ್ಯಯನ ಮಾಡುವ ಮತ್ತು ಆ ಕ್ಷೇತ್ರದಲ್ಲಿ ಅನುವಾದ ಕೃತಿಗಳನ್ನು ಪ್ರಕಟಿಸಿರುವ ಇವರ ಭಾಷೆ, ಮರಾಠಿ ಕನ್ನಡಗಳೆಡರ ಮೇಲೆ ಪ್ರಭುತ್ವವನ್ನು ಹೊಂದಿರುವುದರಿಂದ ಸಹಜ ಸುಂದರವೂ ಸಮರ್ಥವೂ ಆಗಿದೆ. ಮರಾಠಿಯ ಸಮೃದ್ಧ ಸಾಹಿತ್ಯದಿಂದ ಇಂಥ ಹಲವಾರು ಕೃತಿಗಳನ್ನು ಅವರು ಕನ್ನಡಕ್ಕೆ ತರಲಿ ಎಂದು ಹಾರೈಸುತ್ತ ಅವರ ಪರಿಶ್ರಮ, ಆಸಕ್ತಿ ಮತ್ತು ಬದ್ಧತೆಗಾಗಿ ಅವರನ್ನು ಅಭಿನಂದಿಸುತ್ತೇನೆ.

ಡಾ. ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಯವರು