“ಲಜ್ಜಾಗೌರಿ”ಯು ಮಾತೃದೇವತೆ, ಮಹಾಮಾತೆ. ಈಕೆ ವಿಶ್ವಸೃಷ್ಟಿಯ ದೇವತೆ ಎಂಬ ಕಾರಣದ ಹಿನ್ನೆಲೆಯಲ್ಲಿಯೇ ವೇದಪೂರ್ವ ಕಾಲದಿಂದಲೂ ಭಾರತದಾದ್ಯಂತ ಈಕೆಯ ಉಪಾಸನೆಯು ಚಾಲ್ತಿಯಲ್ಲಿದೆ. ಇಂದಿಗೂ ಅದು ಕ್ವಚಿತ್ ಕ್ಷೀಣ ರೂಪದಲ್ಲಿ ಉಳಿದುಕೊಂಡು ಬಂದಿರುವುದು ಗಮನೀಯ. ಉಪಾಸನ ಸಾತತ್ಯವು ಇಂದು ನ್ಯೂನವಾಗಿದ್ದರೂ, ಮಾತೃತ್ವದ ಮಹತ್ವವು ಅಜರಾಮರವಾಗಿ ಇರುವುದರಿಂದ ಆ ತತ್ತ್ವದ ಪ್ರತೀಕವಾಗಿ ಪ್ರಸಿದ್ಧ ದೇವತೆಗಳ ನಾಮ, ರೂಪ, ರಹಸ್ಯವನ್ನು ಅರಿಯಬೇಕಾದ ಜಿಜ್ಞಾಸೆಯು ಶಾಶ್ವತ ಸ್ವರೂಪದಲ್ಲಿ ಇದ್ದೇ ಇರುವುದು. “ಲಜ್ಜಾಗೌರಿ”ಯ ಮೂಲಕ ಪ್ರಸ್ತುತ ಕೃತಿಯಲ್ಲಿ ಮಹಾಮಾತೆಯ ನಾಮ – ರೂಪ – ರಹಸ್ಯವನ್ನು ಅರಿಯುವ ಒಂದು ನಮ್ರ ಪ್ರಯತ್ನವನ್ನು ಮಾಡಲಾಗಿದೆ.

“ಲಜ್ಜಾಗೌರಿ”ಯು ಸೃಷ್ಟಿಶೀಲ ದೇವತೆಯಾಗಿದ್ದು, ಸೃಜನೇಂದ್ರಿಯದ ರೂಪದಲ್ಲಿ ಪೂಜಿಸಲ್ಪಡುತ್ತಿರುವವಳಾಗಿರುವುದರಿಂದ, ಅವಳ ಮೂರ್ತಿಯೇ ವಿಶ್ವದ “ಗರ್ಭಗೃಹ”ವಾಗಿ ಕಾಣುತ್ತದೆ. ಈ “ಗರ್ಭಗೃಹ”ದ ದ್ವಾರದಲ್ಲಿ ನಿಂತು ಮಾತೃತ್ವದ ರಹಸ್ಯವನ್ನು ಅರಿಯುವ ಮತ್ತು ಲಕ್ಷ್ಯಪೂರ್ವಕವಾಗಿ ದೃಷ್ಟಿಸುವ ಇಚ್ಛೆಯನ್ನು ಪೋಷಿಸುವುದು “ಕಠಿಣ”ವೇ (Awkward) ಆಗಿದೆ; ಅಲ್ಲದೆ ಇದು ಅಪರಾಧಿ ಸ್ವರೂಪದ್ದೂ ಆಗಿದೆ ಎಂಬುದರ ಅರಿವು ನನಗಿದೆ. ಆದರೂ ಯಾವ ಉಪಾಸಕರು ಅವಳನ್ನು ಈ ರೂಪದಲ್ಲಿ ಕಲ್ಪಿಸಿರುವರೋ, ಸೃಷ್ಟಿಸಿರುವರೋ ಮತ್ತು ಉಪಾಸಿಸುತ್ತಾ ಬಂದಿರುವರೋ ಅವರ ಮಾತೃತ್ವ ವಿಷಯದ ಅಚಲ ಶ್ರದ್ಧೆಯು ನನ್ನ ಬೆನ್ನಿಗೆ ಇರುವುದರಿಂದ ನಾನು ಈ ವತ್ಸನ ಭೂಮಿಕೆಯಿಂದ ಈ “ಗರ್ಭಗೃಹ”ದ ದ್ವಾರದಲ್ಲಿ ನಿಲ್ಲುವ ಧಾರ್ಷ್ಟ್ಯಕ್ಕೆ ಕೈ ಹಾಕಿದ್ದೇನೆ. ಅದು ಸಾಕ್ಷಾತ್ ಕ್ಷಮಾರ್ಹವೇ ಆಗಿದೆ!

“ಲೋಕ ಸಂಸ್ಕೃತಿಯ ಕ್ಷಿತಿಜಗಳು” ಎಂಬ ನನ್ನ ಕೃತಿಯು ೯ನೆಯ ಆಗಸ್ಟ್ ೧೯೭೧ರಲ್ಲಿ ಪ್ರಕಟವಾಯಿತು. ಅದರಲ್ಲಿ ಸಮಾವಿಷ್ಟವಾಗಿರುವ “ಬಾಲಗ್ರಹಗಳ ಉಪಾಸನೆ” ಎಂಬ ಲೇಖನದಲ್ಲಿ ನಾನು ಇನಾಮ್ ಎಂಬ ಊರಿನ ಉತ್ಖನನದಲ್ಲಿ ದೊರೆತ ವಿಶಿರಾ ಎಂಬ ದೇವಿಯ ಮೂರ್ತಿಯ ಬಗ್ಗೆ ಡಾ. ಹ.ಧೀ. ಸಂಕಾಲಿಯ ಅವರು ಮಂಡಿಸಿದ ಅಭಿಪ್ರಾಯಕ್ಕೆ ಸಾಧಾರವಾಗಿ ವಿರೋಧವನ್ನು ವ್ಯಕ್ತಪಡಿಸಿದ್ದೆ. ಆ ಲೇಖನವನ್ನು ಓದಿದ ನನ್ನ ಗೆಳೆಯ ಡಾ. ಮ.ಶ್ರೀ. ಮಾಟೆಯವರು ಆಗಸ್ಟ್‌೧೯೭೧ರಲ್ಲಿಯೇ ಬೇರೊಂದು ಶಿರೋಹೀನ ದೇವಿಯ ಮೂರ್ತಿಯನ್ನು ಕುರಿತು ನನ್ನ ಲಕ್ಷ್ಯವನ್ನು ಸೆಳೆದರು. ಈ ಸ್ವರೂಪದ ಬಗ್ಗೆ ವಿಶ್ವವಿಖ್ಯಾತ ಪುರಾತತ್ತ್ವಜ್ಞರು ಮತ್ತು ಕಲಾವಿಮರ್ಶಕರು ತಂತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಶ್ರೀಮತಿ ಸ್ಟೆಲ್ಲಾ ಕ್ರಾಮರಿಶ್, ಡಾ. ಹ.ಧೀ. ಸಂಕಾಲಿಯ ಮತ್ತು ಡಾ. ಜಗದೀಶ ನಾರಾಯಣ ತಿವಾರಿ ಯವರುಗಳು ಮಾಡಿದ ಚರ್ಚೆ ಬಹಳ ಮಹತ್ವದ್ದು. ಆದರೆ ಈ ವಿದ್ವಾಂಸರ ಪೂರ್ವಪ್ರಕಟ ಚರ್ಚೆ ನನಗೆ ಸಮಾಧಾನವನ್ನು ಉಂಟುಮಾಡಲಿಲ್ಲ. ಯಾವುದೇ ಉಪಾಸ್ಯ ಸ್ವರೂಪವನ್ನು ಕುರಿತ ಪರಕಿಸುವಿಕೆ ಉಪಾಸಕ ನಿರಪೇಕ್ಷ್ಯತೆಯಿಂದ ಕೂಡಿದುದಾಗಿದ್ದರೆ ಸಫಲವಾಗುವುದಿಲ್ಲ. ಎಂಬುದು ಬಹಳ ಮುಖ್ಯ ವಿಚಾರ. ಈ ವಿಷಯದಲ್ಲಿ ನನಗೆ ಒಂದು ತಪಸ್ಸಿನ ಅನುಭವವಿರುವುದರಿಂದ ನಾನು ಈ ವಿಚಿತ್ರ ರೂಪದ ದೇವಿಯ ಶೋಧವನ್ನು ಉಪಾಸನ – ಪರಂಪರೆಯ ಅನುಷಂಗವಾಗಿ ಕೈಗೆತ್ತಿಕೊಂಡೆ. ಹಗಲು ರಾತ್ರಿ ಇದೊಂದೇ ಸಮಸ್ಯೆಯ ಬಗ್ಗೆ ಯೋಚಿಸಿ ಶೋಧಿಸಲಾರಂಭಿಸಿದೆ. ೧೯೭೧ರ ಕೊನೆಯ ಹೊತ್ತಿಗೆ ಈ ದೇವಿಯ ಅಂತರಂಗದರ್ಶನ ಲಭಿಸಿದ ಸಮಾಧಾನ ನನಗೆ ಉಂಟಾಯಿತು.

ಆನಂತರ ವಿಫುಲ ನವನವೀನ ಸಾಮಗ್ರಿಗಳನ್ನು ಕುರಿತು ಶೋಧಿಸಲಾರಂಭಿಸಿದೆ. ದೊರೆತ ಆ ಎಲ್ಲ ನವೀನ ಸಾಮಗ್ರಿಯ ಬೆಳಕಿನಲ್ಲಿ ಪಡೆದ ಈ ದರ್ಶನವು ಇನ್ನು ಅಧಿಕಾಧಿಕಾವಾಗಿ ಸ್ಪಷ್ಟವಾಗಿ ತೊಡಗಿತ್ತು, ಮತ್ತು ವ್ಯಾಪಕವಾಗತೊಡಗಿತ್ತು. ಈ ವಿಷಯವಾಗಿ ಮಹಾರಾಷ್ಟ್ರದ ಪ್ರತಿಭಾ ಸಂಪನ್ನ ವೈಚಾರಿಕ ಮಿತ್ರ ಪ್ರೊ. ನರಹರ ಕುರುಂದಕರ ಅವರೊಡನೆ ಅನೇಕ ಬಾರಿ ಚರ್ಚಿಸಿದೆ. ಅವರ ಉತ್ತೇಜನಾಪೂರ್ವಕ ಸಮ್ಮತಿಯು ದೊರೆತುದರಿಂದ ನನ್ನ ಆತ್ಮವಿಶ್ವಾಸವು ದೃಢಗೊಂಡಿತು. ಅರಿವು ಮತ್ತು ತಿಳಿವಳಿಕೆಗೆ ಬಂದುದನ್ನು ಶಬ್ದಾಂಕಿತಗೊಳಿಸಬೇಕೆಂಬ ಒಳ ತುಡಿತವೇನೋ ಇತ್ತು. ಆದರೆ ನಾನು ಕೇವಲ ಲೇಖನೋಪಜೀವಿಯಾಗಿದ್ದುದರಿಂದ, ವ್ಯಾವಹಾರಿಕವಾಗಿ ನಿಶ್ಚಿತಗೊಂಡಿದ್ದ ಕೆಲವಾರು ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಅಂತರಂಗದ ಈ ಊರ್ಮಿಗೆ ತತ್ಕಾಲದಲ್ಲಿಯೇ ಪ್ರತಿಕ್ರಿಯಿಸುವುದಕ್ಕೆ ಸಾಧ್ಯವಾಗಲಿಲ್ಲ. ಆದರೂ ಅದನ್ನು ಹಾಗೆಯೇ ಅದುಮಿಡಲಾಗಿದೆ, ಜುಲೈ ೧೯೭೨ ರಲ್ಲಿ ಮಹಾಕೂಟ ಮತ್ತು ಆಲಂಪುರಗಳೆಂಬ ಎರಡು ಕ್ಷೇತ್ರಗಳಲ್ಲಿನ ವಿಶಿಷ್ಟ ದೇವೀ ಮೂರ್ತಿಗಳನ್ನು ಕುರಿತು ಒಂದು ದೀರ್ಘವಾದ ಸಂಶೋಧನ ಪ್ರಬಂಧವನ್ನು ಸಿದ್ಧಪಡಿಸಿದೆ. ಅದನ್ನು ಪರಿವೀಕ್ಷಿಸಲು ನನ್ನ ಹಿರಿಯ ಗೆಳೆಯ ಪ್ರೊ. ಅರವಿಂದ ಮಂಗರೂಳಕರ ಅವರಿಗೆ ಓದಲು ಕೊಟ್ಟೆ. ಅವರು ತಮ್ಮ ಅಮೌಲ್ಯ ಸಮಯವನ್ನು ವೆಚ್ಚಮಾಡಿ, ಇದನ್ನು ಬಹಳ ಆಸ್ಥೆಯಿಂದ ಓದಿದರು, ಪರಿಶೀಲಿಸಿದರು ಮತ್ತು ತಮ್ಮ ಸಂತೃಪ್ತಿಯನ್ನು ವ್ಯಕ್ತಪಡಿಸಿದರು.

ಈ ಸಂಬಂಧವಾಗಿ ಒಂದು ಪರಾಮರ್ಶನ ಕೃತಿಯನ್ನು ರಚಿಸುವ ಇಚ್ಛೆಯಿಂದ ಅದರ ಸಿದ್ಧತೆಯಲ್ಲಿ ತೊಡಗಿದ್ದೆನಾದ್ದರಿಂದ ಪ್ರಸ್ತುತ ನಿಬಂಧ ಪ್ರಕಟಣೆಗೆ ಅವಸರಿಸಲಿಲ್ಲ. ಮುಂದೆ ೧೯೭೩ರ ಏಪ್ರಿಲ್‌ನಲ್ಲಿ ಪಂಡಿತ ಸು.ಗ.ಜೋಶಿಯವರು ತಾವು ಸಂಪಾದಿಸುವ ‘ಮರಾಠವಾಡಾ ಸಂಶೋಧನ ಮಂಡಳದ ವಾರ್ಷಿಕ‘ಕ್ಕೆ ಆ ಲೇಖನವನ್ನು ನನ್ನಿಂದ ಆಗ್ರಹಪೂರ್ವಕವಾಗಿ ಪಡೆದುಕೊಂಡರು. ಅವರ ಮಾರ್ಗದರ್ಶಕರಾದ ತರ್ಕತೀರ್ಥ ಲಕ್ಷ್ಮಣಶಾಸ್ತ್ರಿಯವರು ಆ ಲೇಖನವನ್ನು ಓದಿ, ನಮ್ಮ ಸದಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಪ್ರಾಚೀನ ಮರಾಠಿ ವಾಙ್ಮಯ ಮತ್ತು ಮಹಾರಾಷ್ಟ್ರದ ಇತಿಹಾಸದಲ್ಲಿ ಖ್ಯಾತನಾಮರೂ ಸಂಶೋಧಕರೂ ಆದ ಡಾ. ವಿ.ಭಿ. ಕೋಲತೆಯವರು ೧೯೭೩ರ ಅಕ್ಟೋಬರ್ ತಿಂಗಳಲ್ಲಿ ಪುಣೆಗೆ ಬಂದಿದ್ದರು. ಖ್ಯಾತ ಚಿತ್ರಕಾರ ಶ್ರೀ ಅನಂತರಾವ್ ಸಾಲಕರ ಅವರೊಂದಿಗೆ ಶ್ರೀ ನಾ.ಧ. ಪಾಟೀಲರ ಮನೆಯಲ್ಲಿ ನಾನು ಅವರನ್ನು ಭೇಟಿಯಾದೆ. ಆಗ್ಗೆ ಅವರು ಶಾಸ್ತ್ರಿಯವರಿಂದ ಪಡೆದುಕೊಂಡಿದ್ದ ಆ ನಿಬಂಧವನ್ನು ಓದಿದ್ದನ್ನು ಹೇಳಿದರು ಮತ್ತು ಅದರ ಆಶಯವನ್ನು ಉತ್ತೇಜನಕಾರಿಯಾದ ಶಬ್ದಗಳಲ್ಲಿ ವರ್ಣಿಸಿದರು. ಅಲ್ಲದೆ ಮಾಹಾರಝರಿ ಎಂಬಲ್ಲಿಯೂ ಇಂಥ ವಿಚಿತ್ರ ರೂಪದ ದೇವಿಯ ಮತ್ತೊಂದು ಮೂರ್ತಿ ಇರುವುದರ ಬಗ್ಗೆಯೂ ಮಾಹಿತಿ ನೀಡಿದರು.

ಈ ಬಗೆಯಲ್ಲಿ ಬೇರೆಬೇರೆ ಆದರಣೀಯ ವಿದ್ವಾಂಸರು ನನ್ನ ಸಂಶೋಧನೆಯ ಬಗ್ಗೆ ಮನಃಪೂರ್ವಕವಾಗಿ ತಮ್ಮ ಕೌತುಕವನ್ನು ವ್ಯಕ್ತಪಡಿಸಿದ್ದರಿಂದ ಈ ನಿಬಂಧವನ್ನು ಪ್ರಕಟಣೆ ಮಾಡಿ ಈ ಕುರಿತ ಪ್ರತಿಕ್ರಿಯೆಯನ್ನು ಬಹುದೊಡ್ಡ ಪ್ರಮಾಣದಲ್ಲಿ ಪರೀಕ್ಷಿಸುವ ಉತ್ಕಂಠತೆಯೊಂದು ನನ್ನಲ್ಲಿ ಮೂಡಿತು. ಅಲ್ಲದೆ ಮೇಲೆ ಹೇಳಿದ ವಾರ್ಷಿಕದ ಪ್ರಕಟಣೆಯು ಅನೇಕಾನೇಕ ತಾಂತ್ರಿಕ ಕಾರಣಗಳಿಂದ ಮುಂದೆ ಮುಂದೆ ಹೋದದ್ದರಿಂದ ಅನಿವಾರ್ಯವಾಗಿ ಪ್ರಸ್ತುತ ನಿಬಂಧವನ್ನು ‘ಶಕ್ತಿಪೀಠದ ಶೋಧ‘ ಎಂಬ ಹೆಸರಿನಲ್ಲಿ ೨೫ನೆಯ ಅಕ್ಟೋಬರ್ ೧೯೭೩ ರಲ್ಲಿ ಸ್ವತಂತ್ರವಾಗಿ ಪುಸ್ತಿಕೆ ರೂಪದಲ್ಲಿ ಪ್ರಕಟಿಸಿದೆ. ಡಾ. ಕೋಲತೆಯವರು ನೀಡಿದ್ದ ಮಾಹಿತಿಯಿಂದ ಗಮನಕ್ಕೆ ಬಂದ ಶಕ್ತಿಪೀಠವಾದ ಮಾಹೂರಝರಿಯ ಮಹತ್ವವನ್ನು ಕುರಿತಂತೆ ಒಂದು ಲೇಖನವನ್ನು ಪೂರ್ವನಿರ್ದಿಷ್ಟವಾಗಿದ್ದ ಈ ನಿಬಂಧದಲ್ಲಿ ಹೊಸದಾಗಿ ಸೇರಿಸಿದೆ.

ನನ್ನ ಸಂಶೋಧನೆಯಲ್ಲಿನ ಮಹತ್ವವು ನನಗೆ ಸ್ಪಷ್ಟವಾಗಿ ತಿಳಿಯಬೇಕು. ಜೊತೆಗೆ ಗ್ರಂಥದ ಪ್ರತಿಪಾದನೆಯು ಅಧಿಕಾಧಿಕವಾಗಿ ನಿರ್ದೋಷವೂ, ಸಮತೋಲನಪೂರ್ಣವೂ ಆಗಬೇಕೆಂದ ಇಚ್ಛೆ ನನ್ನಲ್ಲಿ ಇನ್ನೂ ಉತ್ಕಟಗೊಂಡಿತು. ಕಾರಣ ಈ ನಿಬಂಧದಂತೆಯೇ ಸಂಕಲ್ಪಿತ ಕೃತಿಯಲ್ಲಿನ ಕೆಲವು ಮಹತ್ವದ ಪ್ರಕರಣಗಳನ್ನು ‘ಆನಂದವನ‘, ‘ನವಭಾರತ‘, ‘ಪ್ರತಿಷ್ಠಾನ‘ ಮತ್ತು ‘ಸಂತಕೃಪಾ‘ ದಂತಹ ಮಾಸಿಕಗಳಲ್ಲಿಯೂ ಕೇಸರಿ [ದೈನಿಕ]ಯ ಸಾಪ್ತಾಹಿಕ ಅಂಕ ದಲ್ಲಿಯೂ ಪ್ರಕಟಿಸಿದೆ. ಆ ಲೇಖನಗಳನ್ನು ಅನೇಕ ತಜ್ಞರು ಮುಕ್ತಕಂಠದಿಂದ ಪ್ರಶಂಸಿದರು.

“ಶಕ್ತಿಪೀಠದ ಶೋಧ” ಎಂಬ ಕೃತಿಯ ವಿಚಾರವಾಗಿ ಅನೇಕರು ಪ್ರತ್ಯಕ್ಷವಾಗಿ ಭೇಟಿ ಮಾಡಿಯೋ ಇಲ್ಲವೆ ಪತ್ರಮುಖೇನ ಮತ್ತು ವೃತ್ತ ಪತ್ರಿಕೆಗಳಲ್ಲಿ ಪತ್ರರೂಪವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ, ಆ ಬಗ್ಗೆ ವಿಸ್ತೃತವಾದ ಚರ್ಚೆಯು ನಡೆಯಿತು. ಶ್ರೀ ಭಾವು ಸಾಹೇಬ ಮಾಡಖೋಲಕರ (‘ತರುಣ ಭಾರತ ನಾಗಪುರ, ೨೧ನೆಯ ಏಪ್ರಿಲ್‌೧೯೭೪) ಮತ್ತು ಪ್ರೊ. ನರಹರ ಕುರುಂದಕರ (‘ಕೇಸರಿ‘, ೧೩ನೆಯ ಜನವರಿ ೧೯೭೪) ಅವರುಗಳು ಸುದೀರ್ಘವಾಗಿ ತಮ್ಮ ಅಭಿಪ್ರಾಯ ಬರೆದಿದ್ದರು. ಡಾ. ಮ.ಶ್ರೀ.ಮಾಟೆ, ಡಾ.ಮ.ಕೆ.ಢವಳೀಕರ, ಡಾ.ವಿ.ಶ್ರೀ. ವಾಕಣಕರ, ಪ್ರೊ. ಭಾಳಕೃಷ್ಣ ದಾಭಾಡೆಯವರೇ ಮೊದಲಾದ ವಿದ್ವಾಂಸರು ತಮ್ಮ ಅಭಿಮತವನ್ನು ವಿವರವಾಗಿ ವ್ಯಕ್ತಪಡಿಸಿದ್ದರು. ಇವರಲ್ಲಿ ಪ್ರೊ. ದಾಭಾಡೆಯವರು ಮಾಹೂರ ಝರಿಯ ಪುರಾತನ ಅವಶೇಷಗಳನ್ನು ಕುರಿತು ಹಲವಾರು ಬಾರಿ ಸೂಕ್ಷ್ಮ ಅಧ್ಯಯನ ಕೈಗೊಂಡಂಥವರು. ಅಲ್ಲಿ ದೊರೆತ ಲಜ್ಜಾಗೌರಿ ಮೂರ್ತಿಯ ಛಾಯಾಚಿತ್ರವನ್ನೂ ಅವರು ತೆಗೆದುಕೊಂಡಿದ್ದಾರೆ. ಮನಸರ ಎಂಬಲ್ಲಿ ದೊರೆತ ಮತ್ತು ಸದ್ಯ ನಾಗಪುರದ ಮ್ಯೂಸಿಯಂನಲ್ಲಿರುವ ಒಂದು ಲಜ್ಜಾಗೌರಿಯ ಮೂರ್ತಿಯನ್ನು ಅವರು ಪ್ರತ್ಯಕ್ಷವಾಗಿ ಲಕ್ಷಿಸಿದವರಾಗಿದ್ದಾರೆ. ಈ ಎಲ್ಲ ಅಧ್ಯಯನದ ಹಿನ್ನೆಲೆಯಲ್ಲಿ ಅವರು ನನ್ನ ಮಾಹೂರಝರಿ ವಿಷಯದ ವಿವೇಚನೆಗೆ ಬರೆದುದೇನೆಂದರೆ, “ಡಾ. ಕೋಲತೆಯವರು ಮಾಹೂರಝರಿ ವಿಷಯದ ವಿವೇಚನೆಗೆ ಬರೆದುದೇನೆಂದರೆ, “ಡಾ. ಕೋಲತೆಯವರು ಮಾಹೂರಝರಿಯಲ್ಲಿ ಉಪಲಬ್ಧವಾದ ತಾಮ್ರಪಟದ ವಾಚನ ಮಾಡಿದ್ದಾರೆ. ಅವರಿಗೆ ಪೃಥಿವೀಪುರ ಮತ್ತು ಪೃಥಿವೀಸಮುದ್ರ ಇವುಗಳ ಬಗ್ಗೆ ನಿಖರ ಶೋಧನೆ ಸಾಧ್ಯವಾಗಿರಲಿಲ್ಲ… ತಾವು ವಿವರಿಸಿದ ಸಂಗತಿಯು ತಮ್ಮ ಪ್ರತಿಭಾ ಶಕ್ತಿಗೆ ನಿದರ್ಶವಾಗಿದೆ. ಈ ಸಂಗತಿಯನ್ನು ತಾವು ಪುಣೆಯಲ್ಲಿದ್ದುಕೊಂಡೇ ಗುರುತಿಸಿದ್ದು ಒಂದು ವಿಶೇಷವಾಗಿದೆ. ಮಾಹೂರಝರಿಯ ಭೂಪ್ರದೇಶವನ್ನು ಯಾರು ಹಲವಾರು ಬಾರಿ ತುಳಿದಿರುವರೋ ಅವರಿಗೆ ಈ ಹೊಸ ಅರ್ಥ ಸಂಗತಿಯ ಬಗ್ಗೆ ಕೌತುಕ ಉಂಟಾದೀತು. ಪೃಥಿವೀಷೇಣ, ಪೃಥಿವೀಪುರ ಮತ್ತು ಪೃಥಿವೀ ಸಮುದ್ರ ಇವುಗಳ ಸಂಬಂಧವು ಬಹಳ ಉದ್ಬೋಧಕವೂ ಮತ್ತು ಕುತೂಹಲವನ್ನು ಉಂಟುಮಾಡುವಂತಹದ್ದಾಗಿದೆ…. ಮಾಹೂರಝರಿಯಲ್ಲಿ ಒಂದು ದೊಡ್ಡ ಕೆರೆಯಿದೆ. ಅದು ಕ್ರಿ.ಪೂ. ಕಾಲದ್ದಿರಬೇಕೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆ ಕೆರೆಯ ದಂಡೆಯ ಮೇಲೆ ಮತ್ತು ಊರಿನ ಪಕ್ಕದಲ್ಲಿ ಆಶ್ಮವರ್ತುಳಗಳು (ಸಮಾಧಿ)ಗಳು ಇವೆ. ಅವುಗಳ ಕಾಲವೂ ಕ್ರಿ.ಪೂ. ಅಂದರೆ ಕ್ರಿ. ಪೂ.೮ ರಿಂದ ೬ನೆಯ ಶತಕದ್ದಾಗಿರಬೇಕು ಎಂಬುದು ಡಾ. ಶಾಂ.ಭಾ.ದೇವ ಅವರ ಅಭಿಪ್ರಾಯವಾಗಿದೆ. ಮಾಹೂರಝರಿಯ ಕೆರೆಯ ಆ ಕಾಲದಲ್ಲಿ ‘ಪೃಥಿವೀ ಸಮುದ್ರ‘ ಎಂಬುದಾಗಿ ಪ್ರಸಿದ್ಧವಾಗಿದ್ದಿರಬೇಕು.”

ಪ್ರೊ. ದಾಭಾಡೆಯವರು ತಮ್ಮ ಪತ್ರದೊಂದಿಗೆ ಮಾಹೂರಝರಿಯ ಒಂದು ಕಚ್ಛಾ ನಕಾಶೆಯನ್ನು ಪರಿಶ್ರಮಪೂರ್ವಕವಾಗಿ ತೆಗೆದು ಕಳುಹಿಸಿದ್ದರು. ಅದರಲ್ಲಿ ಸದ್ಯ ಊರಿನ ಉತ್ತರ ಭಾಗಕ್ಕಿರುವ ‘ಸಮುದ್ರ‘ (ಕೆರೆ), ಊರಿನ ಪಶ್ಚಿಮದ ಕಡೆಯಿಂದಹರಿಯುವ ‘ಝರಿ‘, ಭೂದೇವಿಯ ಮತ್ತು ಅನ್ಯ ಮಾತೃದೇವತೆಗಳು ಉಪಲಬ್ಧವಿರುವ ತಾಣಗಳನ್ನು ಹಾಗೆಯೇ ಹಳೆಯ ಮತ್ತು ಹೊಸ ವಸತಿಗಳ ಭಾಗವನ್ನು ಸಹ ಗುರುತಿಸಲಾಗಿತ್ತು. ಅವರು ಕಳುಹಿಸಿಕೊಟ್ಟ ಈ ಮಾಹಿತಿ ಮತ್ತು ನಕಾಶೆಯಿಂದ ನಾನು ಸಾಹಿತ್ಯಕ ಪುರಾವೆಗಳೊಂದಿಗೆ ಮಂಡಿಸಿದ್ದ ಮಾಹೂರಝರಿಯ ವಿಷಯ ಸಂಶೋಧನೆಗೆ ಪ್ರತ್ಯಕ್ಷ ಅವಶೇಷಗಳ ಪುಷ್ಟಿಯು ದೊರಕಿತು. ಅವರ ಸಾಪೇಕ್ಷ್ಯ ಮತ್ತು ಸಹೃದಯಪೂರ್ವಕ ಸಹಯೋಗಕ್ಕೆ ನಾನು ತುಂಬಾ ಋಣಿಯಾಗಿದ್ದೇನೆ.

ಲಜ್ಜಾಗೌರಿಯ ರಹಸ್ಯವನ್ನು ಭೇದಿಸುವ ಈ ಪ್ರಯತ್ನದಲ್ಲಿ ನಾನು ಸಮನ್ವಿತ ಅಥವಾ ಸಮಗ್ರ ಶಾಸ್ತ್ರದೃಷ್ಟಿಯನ್ನು ಅವಲಂಬಿಸಿದ್ದೇನೆ. ಆ ಶಾಸ್ತ್ರದೃಷ್ಟಿಗೆ ಸೌಂದರ್ಯ ದೃಷ್ಟಿಯಿಂದ ಯಾವ ಆರೋಪವನ್ನು ಮಾಡಿರುವುದಿಲ್ಲ. ಶಾಸ್ತ್ರದೃಷ್ಟಿ ಮತ್ತು ಸೌಂದರ್ಯದೃಷ್ಟಿ ಇವೆರಡನ್ನು ಸಮನ್ವಯವಾಗಿಟ್ಟಕೊಂಡು ಲಜ್ಜಾಗೌರಿ ದರ್ಶನವನ್ನು ಆಸಕ್ತ ಜ್ಞಾನಿಗಳಿಗೆ ಕೇವಲ ಉದ್ಭೋಧಕವಾಗಿ [ಜ್ಞಾನ] ಮಾತ್ರವಲ್ಲ, ಅದು ಪೂರ್ಣವಾಗಿ ಮನಮುಟ್ಟುವಂತೆ ಮಾಡಬೇಕೆಂಬುದು ನನ್ನ ಮುಖ್ಯದೃಷ್ಟಿ.

ಬಾಹ್ಯ ಸೃಷ್ಟಿಯಲ್ಲಿ ರಹಸ್ಯಮಯವಾಗಿರುವಂಥ ಸೌಂದರ್ಯವನ್ನು ಹೇಗೆ ಸಹಸ್ರ ಕಣ್ಣುಗಳಿಂದ ಅನುಭವಿಸಬೇಕಾಗುವುದೋ ಹಾಗೆಯೇ ಮಾನವನ ಅಂತಃದೃಷ್ಟಿಯಿಂದ ಪ್ರಕಟವಾಗಿರುವ ಭಾವ – ವಿಚಾರಗಳ, ಶ್ರದ್ದೆ – ಸಂಕಲ್ಪಗಳ, ಪ್ರತಿಮೆಗಳ ರಹಸ್ಯಮಯ ಸೌಂದಯವನ್ನು ಪ್ರಜ್ಞಾ – ಪ್ರತಿಭೆಯ ಸಹಸ್ರಮಯ ಕಣ್ಣುಗಳಿಂದ ಅನುಭವಿಸಬೇಕಗುತ್ತದೆ. ಅನ್ಯಥಾ ಸೀಮಿತ ದೃಷ್ಟಿಯ ಸೌಂದರ್ಯ ಸಾಮಗ್ರಿಗಳಿಂದ ಅನುಭವಿಸುವುದು ಅಶಕ್ಯವೇ ಸರಿ. ನಿರ್ಮಾತೃವು ನಮಗೆ ಅನೇಕ (ಎರಡು ಎಂಬುದು ಒಂದೇ!) ನೇತ್ರಗಳನ್ನು ಕೊಟ್ಟಿರುವನು. ಆದರೆ ನಾವು ಕೊಂಚ ಶಾಸ್ತ್ರಗಳಲ್ಲಿ ಆಕಾರಗೊಂಡಿರುವ ವಿಶಿಷ್ಟ ಪದ್ಧತಿಗಳ ರೂಪವನ್ನು ಹೊತ್ತುಕೊಂಡುದರಿಂದ ‘ಏಕಾಕ್ಷಿ‘ಗಳಾದೆವು. ಇದರಿಂದ ನಮ್ಮ ‘ದರ್ಶನ‘ಕ್ಕೂ ಒಂದು ಮಿತಿಯು ಬಂದಿತು. ಅದು ನಮ್ಮ ಪಾಲಿಗೆ ಒದಗಿ ಬಂದಿರುವ ಒಂದು ಕೊರತೆಯೇ ಸರಿ. ಇಂಥ ಕೊರತೆ ನನ್ನ ದೃಷ್ಟಿಗೆ ಬರುವುದು ಬೇಡವೆಂದು, ತತ್ಕಾಲದಲ್ಲೇ ಅದನ್ನು ಕಠೋರವಾಗಿ ಸಾವರಿಸಿಕೊಳ್ಳುವ ಶಕ್ತಿ ನೀಡುವಂತೆ ಸಮಗ್ರ ಮತ್ತು ಸಮನ್ವಿತ ದೃಷ್ಟಿಯುಳ್ಳ ಎಲ್ಲಾ ಜ್ಞಾನಿಗಳಲ್ಲಿ ನಾನು ನಮ್ರವಾಗಿ ಪ್ರಾರ್ಥಿಸಿಕೊಳ್ಳುತ್ತಿರುವೆನು.

ರಾಮಚಂದ್ರ ಚಿಂತಾಮಣ ಢೇರೆ