24_279_LG-KUH

ಡಾ. ರಾಮಚಂದ್ರ ಚಿಂತಾಮಣ ಢೇರೆ (ಜನನ ೨೧ನೇ ಜುಲೈ ೧೯೩೦ ಸ್ಥಳ: ನಿಗಡೆ, ಮಾವಳ (ತಾ), ಪುಣೆ)ಯವರು ಮಹಾರಾಷ್ಟ್ರದ ಸಾಂಸ್ಕೃತಿಕ ಚಿಂತಕರಲ್ಲಿ ಬಹಳ ಮುಖ್ಯರಾದವರು. ಅವರನ್ನು ‘ಮಹಾರಾಷ್ಟ್ರ ಸಂಸ್ಕೃತಿಯ ಪ್ರಭಾವೀ ಭಾಸ್ಯಕಾರ‘, ‘ರಸನಿಧಿ’ ಎಂದುಮುಂತಾಗಿ ಕರೆಯಲಾಗಿದೆ. ಅವರ ಸಂಶೋಧನ ಕೃತಿಗಳು, ಸಂಪಾದನ ಕೃತಿಗಳು, ಜೀವನ ಚರಿತ್ರೆಗಳು ಹಾಗೂ ಅನುವಾದಿತ ಕೃತಿಗಳು ನೂರರ ಸಂಖ್ಯೆಯನ್ನು ದಾಟಿವೆ. ಹಾಗೆಯೇ ಸುಮಾರು ಇನ್ನೂರಕ್ಕಿಂತಲೂ ಅಧಿಕ ಸಂಶೋಧನ ಲೇಖನಗಳು ಪ್ರಕಟವಾಗಿವೆ. ಮಹಾರಾಷ್ಟ್ರದಲ್ಲಿನ ದೈವಗಳು, ಧರ್ಮಸಂಪರದಾಯ, ದೈವತಶಾಸ್ತ್ರ ಮತ್ತು ದೈವಕಥಾಶಾಸ್ತ್ರ, ಸಂತಚರಿತ್ರೆ ಮತ್ತು ಸಂತವಾಙ್ಮಯ, ಪ್ರಾಚೀನ ಮರಾಠಿ ಸಾಹಿತ್ಯ; ಶೋಧ ಮತ್ತು ಪರಂಪರೆ, ಭಾರತೀಯ ಸಂದರ್ಭದಲ್ಲಿ ಮಹಾರಾಷ್ಟ್ರ ಸಂಸ್ಕೃತಿಯ ಅಧ್ಯಯನ ಹಾಗೂ ಜನಪದ ಸಾಹಿತ್ಯ, ಜನಪದ ಸಂಸ್ಕೃತಿ – ಮುಂತಾದುವು ಇವರ ಪ್ರಮುಖ ಅಧ್ಯಯನ ಕ್ಷೇತ್ರಗಳು.

ಆರ್ಯೀಕರಣಗೊಂಡ ಮೇಲೆ ಉತ್ತರದ ಕಡೆಗೇ ಮುಖ ಮಾಡಿ ತಾವು ಆರ್ಯರೆಂದು ಪ್ರತಿಪಾದಿಸಿಕೊಳ್ಳುತ್ತಿದ್ದ ಮರಾಠರ ನಿಜವಾದ ಸಂಸ್ಕೃತಿಯ ನೆಲೆ ಆರ್ಯೇತರವಾದುದು ಎಂದು ಸಾಧಾರವಾಗಿ ತೋರಿಸಿಕೊಟ್ಟವರು ರಾ. ಚೀ. ಢೇರೆ. ಮಹಾರಾಷ್ಟ್ರದ ಸಾಮ್ರಾಜ್ಯ ನಿರ್ಮಪಕನಾದ ಶಿವಾಜಿಯು ಹೊಯ್ಸಳರ ಬಳಿಯಪ್ಪ ಎಂಬ ವ್ಯಕ್ತಿಯ ವಂಶಾವಳಿಗೆ ಸೇರಿದವನು. ದಕ್ಷಿಣದ ಪ್ರಮುಖ ರಾಜವಂಶವಾದ ಈ ಅಂಶವನ್ನು ನಾವು ಬಹಳ ಹೆಮ್ಮೆಯಿಂದ ಹೇಳಬೇಕು. ಶಿವಾಜಿಯ ಪೂರ್ವಜರ ರಾಜಾಸ್ಥಾನದ ಸಿಸೋದಿಯ ವಂಶಕ್ಕೆ ಸೇರಿದವರಲ್ಲ ಎಂದು ದೃಢವಾಗಿ ಪ್ರತಿಪಾದಿಸುವ ಮೂಲಕ ಕನ್ನಡದ ಶಂ.ಬಾ. ಜೋಶಿಯವರ ವೈಚಾರಿಕ ಸಂಶೋಧನೆಯ ಪಾತಳಿಯ ಮಹತ್ವವನ್ನು ಎತ್ತಿಹಿಡಿದವರಾಗಿದ್ದಾರೆ. ಗೋದಾವರಿ – ಕೃಷ್ಣ – ತುಂಗಭದ್ರಾ ನದಿಗಳ ಭೂಮಿಯಲ್ಲಿ ನಿರ್ಮಾಣಗೊಂಡ ಈ ಸಂಸ್ಕೃತಿಯು ಒಂದೇ! ಕನ್ನಡ – ಮರಾಠಿ – ತೆಲುಗು ಹೀಗೆ ಭಿನ್ನ ಭಾಷೆಗಳನ್ನು ಆಡುತ್ತಿರುವ ಜನಾಂಗವಾಗಿರುವರಷ್ಟೇ ಎಂಬುದನ್ನು ಬೇರೆಬೇರೆ ಆಕರಗಳಿಂದ ಸೂಕ್ಷ್ಮವಾಗಿ ವಿವರಿಸಿದ್ದಾರೆ ತಮ್ಮ ಕೃತಿಗಳಲ್ಲಿ. ಆದಿಮಾತೆಯ ಉಪಾಸನೆ, ಶೈವಸಂಸ್ಕೃತಿಯ ನೆಲೆಗಳು, ವಿಠ್ಠಲ ಸಂಪ್ರದಾಯ, ನಾಥ ಸಂಪ್ರದಾಯ, ದತ್ತ ಸಂಪ್ರದಾಯ, ಮೈಲಾರ – ಖಂಡೋಬಾರುಗಳ ಆರಾಧನೆ – ಇವೇ ಮೊದಲಾದ ಸಂಶೋಧನ ಸಂಗತಿಗಳನ್ನು ಲಿಖಿತ ಮತ್ತು ಮೌಖಿಕ ಆಕರಗಳಿಂದ ಅರುಹಿ ದಾಕ್ಷಿಣಾತ್ಯ ಸಂಸ್ಕೃತಿಯ ವೈಶಿಷ್ಟ್ಯವನ್ನು ಮನಗಾಣಿಸಿದ್ದಾರೆ. ಮಾತ್ರವಲ್ಲ ದ್ರಾವಿಡವೆನ್ನಲಾಗಿರುವ ಈ ಸಂಸ್ಕೃತಿಯು ಭಾರತಾದ್ಯಂತ ಹೇಗೆ ಪಸರಿಸಿತ್ತು ಮತ್ತು ಪ್ರಭಾವಕಾರಿಯೂ ಆಗಿತ್ತು ಎಂಬುದನ್ನು ಗಂಭೀರವಾಗಿ ಗುರುತಿಸಿದ್ದಾರೆ. ಕನ್ನಡದ ಸಾಂಸ್ಕೃತಿಕ ಚಿಂತಕರಿಗೆ ಅವರ ಕೃತಿಗಳು ಬಹಳ ಮುಖ್ಯವಾಗುವುದು ಈ ಕಾರಣದಿಂದಾಗಿಯೇ.

ಪ್ರಮುಖ ಕೃತಿಗಳು

೧. ಶ್ರೀಗುರುದೇವ ದತ್ತ (ಔದುಂಬರ – ನರಸೋಬಾಚೆ ವಾಡಿ) – ೧೯೫೮

೨. ಶ್ರೀಗುರು ಗೋರಖನಾಥ: ಚರಿತ್ರ ಆಣಿ ಪರಂಪರಾ – ೧೯೫೯

೩. ದಲಿತಾಂಚಾ ಕೈವಾರಿ ಭಾರ್ಗವರಾಮ (ಪರಶುರಾಮಕ್ಷೇತ್ರ) – ೧೯೫೯

೪. ಸಂತ ಆಣಿ ಸಮಾಜ (ಸಂ.) – ೧೯೬೪

೫. ಮಹಾರಾಷ್ಟ್ರ – ಇತಿಹಾಸ ದರ್ಶನ – ೧೯೬೯

೬. ಖಂಡೋಬಾ – ೧೯೬೯

೭. ಲೋಕ ಸಂಸ್ಕೃತೀಚೇ ಕ್ಷಿತಿಜೇ – ೧೯೭೧

೮. ಶಕ್ತಿಪೀಠಾಂಚಾ ಶೋಧ – ೧೯೭೩

೯. ಚಕ್ರಪಾಣಿ – ೧೯೭೭

೧೦. ಶೋಧಶಿಲ್ಪ – ೧೯೭೭

೧೧. ಲಜ್ಜಾಗೌರಿ – ೧೯೭೮

೧೨. ಶ್ರೀವಿಠ್ಠಲ: ಏಕ್‌ ಮಹಾ ಸಮನ್ವಯ – ೧೯೮೪

೧೩. ನಾಥ ಸಂಪ್ರದಾಯಾಚಾ ಇತಿಹಾಸ – ೧೯೮೯

೧೪. ಲೋಕದೈವತಾಂಚೇ ವಿಶ್ವ – ೧೯೯೬

೧೫. ಶಿಖರ ಶಿಂಗಣಾಪುರಚಾ ಶ್ರೀಶಂಭುಮಹಾದೇವ – ೨೦೦೧

ಇವುಗಳಲ್ಲಿ ಕೆಲವಾರು ಕೃತಿಗಳು ಈಗಾಗಲೇ ಕನ್ನಡಕ್ಕೆ ಅನುವಾದವಾಗಿದ್ದು ಪ್ರಕಟವಾಗಿವೆ.

ಇವರ ಸಂಶೋಧನ ಅಧ್ಯಯನ ಹಾಗೂ ಬರೆಹವನ್ನು ಮನ್ನಿಸಿ ಅನೇಕ ಪುರಸ್ಕಾರ, ಪ್ರಶಸ್ತಿಗಳು ಲಭ್ಯವಾಗಿವೆ:

೧. ಮಹಾರಾಷ್ಟ್ರ ರಾಜ್ಯ ಪುರಸ್ಕಾರ (ಬೇರೆಬೇರೆ ಕೃತಿಗಳಿಗೆ ಹತ್ತು ಬಾರಿ)

೨. ಪುಣೆ ವಿದ್ಯಾಪೀಠ ಪುರಸ್ಕಾರ (ಜ್ಞಾನದೇವನೇ ಮೊದಲಾಗಿ ಬೇರೆಬೇರೆಯಾಗಿ ಆರು ಬಾರಿ) ಮತ್ತು ಯು.ಜಿ.ಸಿ. ರೀಸರ್ಚ್ ಸೀನಿಯರ್‌ ಫೆಲೋಶಿಪ್.

೩. ಡೆಕ್ಕನ್ ಕಾಲೇಜು ಫೆಲೋಶಿಪ್ (ಯು.ಜಿ.ಸಿ. ಸೀನಿಯರ್‌ ರೀಸರ್ಚ್)

೪. ಮಹಾರಾಷ್ಟ್ರ ರಾಜ್ಯ ಸಾಹಿತ್ಯ ಮತ್ತು ಸಂಸ್ಕೃತಿ ಮಂಡಳಿ ಪುರಸ್ಕಾರ (ಮೂರು ಬಾರಿ)

೫. ರಾಜವಾಡೆ ಸಂಸೋಧನ ಮಂಡಳದ ಗೌರವ ಸದಸ್ಯತ್ವ

೬. ಮಹಾರಾಷ್ಟ್ರ ಫೌಂಡೇಶನ್ ಜೀವನ ಗೌರವ ಪುರಸ್ಕಾರ – ೨೦೦೦.

ಹೀಗೆ ಬೇರೆಬೇರೆ ನಲವತ್ತು ಪ್ರಶಸ್ತಿಗಳು ಲಭ್ಯವಾಗಿವೆ. ಪಂಡಿತ ಅವಳೀಕರ, ಇರಾವತಿ ಕರ್ವೆ, ದುರ್ಗಾ ಭಾಗವತ್, ರಾಜವಾಡೆ, ಹ.ಧೀ. ಸಂಕಾಲಿಯಾ ಮೊದಲಾದ ಖ್ಯಾತ ಸಂಶೋಧಕರು ಇವರ ಸಂಶೋಧನೆ ಅಧ್ಯಯನದ ಮಹತ್ವವನ್ನು ಮೆಚ್ಚಿದ್ದಾರೆ.