ಆಲಾಪುರದ ಲಜ್ಜಾಗೌರಿ

ಇತ್ತೀಚೆಗೆ ಅಂದರೆ ಕ್ರಿ.ಶ. ೧೯೭೩ರಲ್ಲಿ ಮರಾಠವಾಡ ಪ್ರಾಂತ್ಯ (ಮಹಾರಾಷ್ಟ್ರ)ದ ಔರಂಗಾಬಾದ್‌ ಜಿಲ್ಲೆಯ ಭೋಕರದನ ಎಂಬಲ್ಲಿ ನಡೆದ ಉತ್ಖನನದಲ್ಲಿ ಲಜ್ಜಾಗೌರಿ ಮೂರ್ತಿಯೊಂದು ಉಪಲಬ್ಧವಾಗಿದೆ.[1] ಇಂದು ಇದು ಒಂದು ತಾಲೂಕು ಕೇಂದ್ರವಾಗಿದ್ದರೂ, ಪುರಾತನ ಭಗ್ನಾವೇಶೇಷಗಳುಳ್ಳ ೧೦,೦೦೦ ಜನವಸತಿಯುಳ್ಳ ಒಂದು ಮಾಮೂಲಿ ಊರು. ಶಾತವಾಹನರ ಪೂರ್ವದಲ್ಲಿಯೇ ಉಜ್ಜಯಿನಿ – ಪ್ರತಿಷ್ಠಾನ ಮಹಾಮಾರ್ಗದ ಮೇಲೆ ಪ್ರತಿಷ್ಠಾಪಿತವಾಗಿದ್ದ ಈ ಪ್ರಸಿದ್ದ ನಗರವು ಬಹಳ ಕಾಲದವರೆಗೆ ಸಮೃದ್ಧಿ ಮತ್ತು ಸಂಸ್ಕೃತಿಯ ಮುಖ್ಯ ಕೇಂದ್ರವೆನಿಸಿತ್ತು. ಅದರ ಪ್ರಾಚೀನ ಪ್ರತಿಷ್ಠಿತ ಹೆಸರು ಭೋಗವರ್ಧನ, ಅದರ ಭೌತಿಕ ಸಂಸ್ಕೃತಿಯ ದ್ಯೋತಕವೆನಿಸಿತ್ತು ಅದು. ಇಂದಿನ ಹೆಸರಾದ ಭೋಕರದನವು ಭೋಗವರ್ಧನದ ರೂಪಾಂತರವೆಂಬುದು ಸರ್ವೇಮಾನ್ಯ ಸಂಗತಿ. ಸ್ಥಳೀಯ ದಂತಕಥೆಗಳು ಹೇಳುವಂತೆ ಈ ನಗರವು ಕೃಷ್ಣನ ಶತ್ರು ಭೌಮಾಸುರನ ರಾಜಧಾನಿ. ಇಲ್ಲಿನ ಬಹುತೇಕ ಧರ್ಮಪ್ರಮಾಣ ಲಕ್ಷ್ಮೀಪುತ್ರರುಗಳೆಲ್ಲ ಸಾಂಚಿ – ಬರಹೂತ್‌ನಲ್ಲಿ ಸ್ತೂಪಗಳನ್ನು ಕಟ್ಟಲು ಕೈತುಂಬ ಹನ ನೀಡಿದ್ದರೆಂಬ ಸಂಗತಿಯು ಕಾಣಸಿಗುತ್ತದೆ ಶಾಸನಗಳಲ್ಲಿ.

ಕೇಳಣಾ ನದಿಯ ಎಡದಂಡೆಯ ಮೇಲಿದ್ದ ರಾಷ್ಟ್ರಕೂಟರ ಕಾಲದ (ಸುಮಾರು ಕ್ರಿ.ಶ. ಎಂಟನೆಯ ಶತಮಾನ) ಒಂದು ಶೈವಗಹೆಯು ಉಪಲಬ್ಧವಾಗಿದೆ. ಭೋಕರದನದಲ್ಲಿ ಶೈವ ಸಂಪ್ರದಾಯ ಪ್ರಭುತ್ವದ ಪ್ರಾರಂಭವು ಬಹಳ ಹಿಂದೆಯೇ ಆಗಿರಬೇಕು ಎಂಬುದಕ್ಕೆ ಬಹಳಷ್ಟು ಪ್ರಮಾಣಗಳು ದೊರೆತಿವೆ. ಮಾಹಿಷ್ಮತಿಯ ಕಲಚೂರಿ ದೊರೆ ಶಂಕರಗಣ ಎಂಬಾತನು ಭೋಗವರ್ಧನಕ್ಕೆ ಸೇರಿದ ಒಂದು ಊರಿನ ಜಮೀನನ್ನು ಬ್ರಾಹ್ಮಣನೊಬ್ಬನಿಗೆ ದಾನವಾಗಿ ಕೊಟ್ಟುದನ್ನು ದಾಖಲಿಸಿರುವ ಕ್ರಿ.ಶ.೫೯೭ರ ಕಾಲದ ಒಂದು ಕೋರಿ ಬರೆಹವು ಲಭ್ಯವಾಗಿದೆ.

ಇದರ ಅರ್ಥಾನುಸಾರ ಭೋಕರದನವು ಸಾತವಾಹನ ಪೂರ್ವದಲ್ಲಿಯೇ ಒಂದು ಸಮೃದ್ಧ ನಗರವಾಗಿತ್ತು. ಬೌದ್ಧ ಧರ್ಮಾನುಯಾಯಿಗಳಾಗಿದ್ದ ವ್ಯಾಪಾರಿಗಳು ಬಹಳವಾಗಿ ನೆಲೆಸಿದ್ದರು.

ಕೇಳಣಾ ನದಿಯ ಎಡದಂಡೆಯ ಮೇಲಿದ್ದ ರಾಷ್ಟ್ರಕೂಟರ ಕಾಲದ (ಸುಮಾರು ಕ್ರಿ.ಶ. ಎಂಟನೆಯ ಶತಮಾನ) ಒಂದು ಶೈವಗುಹೆಯು ಉಪಲಬ್ಧವಾಗಿದೆ. ಭೋಕರದನದಲ್ಲಿ ಶೈವ ಸಂಪ್ರದಾಯ ಪ್ರಭುತ್ವದ ಪ್ರಾರಂಭವು ಬಹಳ ಹಿಂದೆಯೇ ಆಗಿರಬೇಕು ಎಂಬುದಕ್ಕೆ ಬಹಳಷ್ಟು ಪ್ರಮಾಣಗಳು ದೊರೆತಿವೆ. ಮಾಹಿಷ್ಮತಿಯ ಕಲಚೂರಿ ದೊರೆ ಶಂಕರಗಣ ಎಂಬಾತನು ಭೋರ್ಗವರ್ಧನಕ್ಕೆ ಸೇರಿದ ಒಂದು ಊರಿನ ಜಮೀನನ್ನು ಬ್ರಾಹ್ಮಣನೊಬ್ಬನಿಗೆ ದಾನವಗಿ ಕೊಟ್ಟುದನ್ನು ದಾಖಲಿಸಿರುವ ಕ್ರಿ.ಶ. ೫೯೭ರ ಕಾಲದ ಒಂದು ಕೋರಿ ಬರೆಹವು ಲಭ್ಯವಾಗಿದೆ.

ಇದರ ಅರ್ಥಾನುಸಾರ ಭೋಕರದನವು ಸಾತವಾಹನ ಪೂರ್ವದಲ್ಲಿಯೇ ಒಂದು ಸಮೃದ್ಧ ನಗರವಾಗಿತ್ತು. ಬೌದ್ಧ ಧರ್ಮಾನುಯಾಯಿಗಳಾಗಿದ್ದ ವ್ಯಾಪಾರಿಗಳು ಬಹಳವಾಗಿ ನೆಲೆಸಿದ್ದರು. ಗುಪ್ತರ ಕಾಲಾನಂತರ ಅಲ್ಲಿ ಬೌದ್ಧಧರ್ಮದ ಪ್ರಭಾವ ಕಡಿಮೆಯಾಗಿ ಶೈವ ಧರ್ಮವು ಪ್ರಬಲವಾಯಿತು. ಈ ಎಲ್ಲ ಭೌತಿಕ ಮತ್ತು ಸಾಂಸ್ಕೃತಿಕ ಸಮೃದ್ಧತೆಯಲ್ಲಿ ಲಜ್ಜಾಗೌರಿಯಂತಹ ಜನಪದ ದೇವಿಯ ಉಪಾಸನೆಗಿದ್ದ ಸ್ಥಾನ ಎಂಥದು ಎಂಬುದೇ ಇಲ್ಲಿ ನಮಗೆ ಮುಖ್ಯವಾಗುವ ಪ್ರಶ್ನೆ.

ಲಜ್ಜಾಗೌರಿಯ ಎರಡು ಶಿಲಾಮೂರ್ತಿಗಳು ಲಭ್ಯವಾಗಿವೆ ಇಲ್ಲಿನ ಉತ್ಖನನದಲ್ಲಿ. ಇವೆರಡೂ ಮೂರ್ತಿಗಳು ಯೋನಿಸ್ತನಯುಕ್ತ (ಶಿರೋಹೀನ)ವಾದುವಾಗಿದ್ದು, ನಸುಗೆಂಪು ಮಳಲಿನ ಚೌಕಾಕಾರ ಶಿಲೆಯ ಮೇಲೆ ಎದ್ದು ಕಾಣುವಂತೆ ಕೆತ್ತಲಾಗಿದೆ. ಅಲ್ಲಿಯೇ ಭಗ್ನಮೂರ್ತಿಯೊಂದು ದೊರೆತಿದ್ದು, ಅದು ಸಾತವಾಹನೋತ್ತರ ಕಾಲದ್ದು. ಅಂದರೆ ಕ್ರಿ.ಶ. ಐದರಿಂದ – ಏಳನೆಯ ಶತಮಾನದ್ದಿರಬೇಕೆಂಬುದು ವಿದ್ವಾಂಸರ ಅಭಿಪ್ರಾಯ. ಮತ್ತೊಂದು ಮೂರ್ತಿ ಎಡಭಾಗವಷ್ಟೆ ಒಡೆದಿದ್ದು, ಅದರ ಎರಡೂ ಕಡೆಗಳಲ್ಲಿ ಎರಡೆರಡು ಕಮಲಗಳನ್ನು ಕೆತ್ತಲಾಗಿತ್ತೆಂಬುದು ಬಲಭಾಗದಲ್ಲಿರುವ ಕಮಲಗಳಿಂದ ಸ್ಪಷ್ಟವಾಗುತ್ತದೆ. ಈ ಮೂರ್ತಿಯ ಉಪಲಬ್ಧ ಸ್ತರವು ಅನಿಶ್ಚಿತವಾಗಿರುವುದರಿಂದ ಅದರ ಕಾಲವನ್ನು ಹೇಳುವುದಕ್ಕೆ ಸಾಧ್ಯವಾಗಿಲ್ಲ.

ನನ್ನ ದೃಷ್ಟಿಯಲ್ಲಿ ಮಹತ್ವವಾದುವುಗಳೆಂದರೆ ಭೋಕರದನದ ಉತ್ಖನನದಲ್ಲಿ ದೊರೆತ ಈ ಮೇಲೆ ಹೇಳಿದ ಮೂರ್ತಿಗಳು. ಇವು ಭೋಕರದನದ ಜೊತೆಗೆ ಅದಕ್ಕೆ ಹತ್ತಿರದ ಆಲಾಪುರ ಎಂಬ ಹಳ್ಳಿಗೆ ಹತ್ತಿರದ ದಿಣ್ಣೆಯೊಂದರಲ್ಲಿ (ಮರಡಿ) ದೊರೆತುವಾಗಿವೆ. ಭೋಕರದನ ಎಂಬ ಇಂದಿನ ಊರು ಕೇಳಣಾ ನದಿಯ ಬಲದಂಡೆಯ ಮೇಲಿದ್ದು, ಹಳೆಯ ಅವಶೇಷಗಳ ಮೇಲೆಯೇ ಇಂದು ವಸತಿಗಳು ಸಂಸ್ಥಾಪಿತವಾಗಿವೆ. ಆದರೆ ಆಲಾಪುರವು ಕೇವಲ ಕೆಲವಾರು ನೂರುಗಳ ಸಂಖ್ಯೆಯ ಜನವಸತಿ ಇರುವ ಹಳ್ಳಿ. ಇದು ಕೇಳಣ ನದಿಯ ಎಡದಂಡೆಯ ಮೇಲಿದೆ. ಪುರಾತನ ಅವಶೇಷಕ್ಕೆ ಅಲ್ಲಿನ ವಸತಿ ಉಪಸರ್ಗ (ತೊಂದರೆ)ವನ್ನು ಉಂಟುಮಾಡಿಲ್ಲ.

ಆಲಾಪುರ ಎಂಬ ಹೆಸರನ್ನು ಉಚ್ಚರಿಸಿದಾಗ ವಚಾಕರಿಗೆ ‘ಆಲಾಪುರ ಯುಗಲಾದೇವಿ’ ಎಂಬ ಅಷ್ಟಾದಶ ಶಕ್ತಿಪೀಠಗಳ ಗಣನೆಯ ಉಲ್ಲೇಖ ಅರಿವಿಗೆ ಬಾರದೆ ಇರುವುದಿಲ್ಲ. ಜೋಗುಳಾಂಬೆಯ ಪ್ರಕರಣದಲ್ಲಿ ಆಲಂಪುರ ಮತ್ತು ಅಲ್ಲಿನ ಭೂದೇವಿ ಜೋಗುಳಾಂಬೆಯ ವಿಚಾರವನ್ನು ಹೇಳಲಾಗಿದೆ. ಅಷ್ಟಾದಶ ಶಕ್ತಿಪೀಠಗಳಲ್ಲಿನ ಪ್ರತಿಷ್ಠಿತಗೊಂಡ ಈ ದೇವಿಯ ಶೋಧವನ್ನು ಡಾ. ಪಾಂಡುರಂಗ ದೇಸಾಯಿಯವರ ಮಾಹಿತಿಯ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಆ ಪ್ರಕಾರ ಭೋಕರದನದ ಉತ್ಖನನದಲ್ಲಿ ಲಜ್ಜಾಗೌರಿ – ಮೂರ್ತಿ ದೊರೆತ ಸ್ಥಳದ ಹೆಸರೂ ಆಲಾಪುರವಾಗಿದ್ದು ಅದರ ಅಧಿಷ್ಠಾತ್ರಿ ದೇವಿ ಈಕೆಯೇ ಎಂದು ನಿಶ್ಚಿತವಾಗಿ ಹೇಳುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಆಲಾಪುರದಲ್ಲಿ ಒಂದು ಶೈವ ಗುಹೆಯೂ ಸಹ ದೊರೆತಿದ್ದು, ಅದರಲ್ಲಿ ಇರುವ ಶಿಲಾಲೇಖವು ಹಾಳಾಗಿದ್ದು ಓದಲು ಸಾಧ್ಯವಾಗುತ್ತಿಲ್ಲ. ಒಂದೊಮ್ಮೆ ಸಾಧ್ಯವಾಗಿದ್ದರೆ ಬಹುಶಃ ಮಹಾಕೂಟದಲ್ಲಿಯಂತೆ ಇಲ್ಲಿ ಶೈವ – ಶಾಕ್ತ ಸಂಪ್ರದಾಯದಲ್ಲಿ ಲಜ್ಜಾಗೌರಿಯು ಹೊಂದಿರುವ ಪಾಲೆಷ್ಟು ಮತ್ತು ಯಾವ ಸ್ವರೂಪದ್ದೆಂದು ತಿಳಿಯಲು ಸಾಧ್ಯವಾಗುತ್ತಿತ್ತು.

ಇಂದು ಈ ‘ಬಹುಶಃ – ಆಗಿದ್ದರೆ’ ಎಂಬ ಭಾಷೆಯಿಂದ ಏನೂ ಉಪಯೋಗವಿಲ್ಲ. ಆಲಾಪುರ ಎಂಬ ಈ ಸ್ಥಾನದ ಹೆಸರು ಮತ್ತು ಲಜ್ಜಾಗೌರಿ ಮೂರ್ತಿ ಅಲ್ಲಿ ಉಪಲಬ್ಧವಾಗಿರುವುದು. ಈ ಎರಡನ್ನು ಒಟ್ಟಾಗಿ ವಿಚಾರ ಮಾಡಿದರೆ (ಹಾಗೆ ಮಾಡುವುದು ಅವಶ್ಯ ಕೂಡ) ‘ಆಲಾಪುರೆ ಯುಗಲಾದೇವಿ’ ಎಂಬ ವರ್ಣನೆಯು ಹೇಗೆ ಆಂಧ್ರಪ್ರದೇಶದ ಆಲಂಪುರಕ್ಕೆ ಅನ್ವಯಿಸಿರುವಂತೆಯೇ ಮಹಾರಾಷ್ಟ್ರ ಭೋಕರದನಕ್ಕೆ ಹತ್ತಿರದ (ಬಹುಶಃ ಪ್ರಾಚೀನ ಭೋಗವರ್ಧನದ ಉಪನಗರವಾಗಿದ್ದ) ಆಲಾಪುರಕ್ಕೂ ಅನ್ವಯಿಸಬಹುದಾಗಿದೆ.

ಸಾಂತೇರಿ ಮತ್ತು ಸಪ್ತಕೋಟೀಶ್ವರ

ಸಾಂತೇರಿ ಮತ್ತು ರವಳನಾಥರ ಸಂಬಂಧವಾಗಿ ಈ ಕ್ಷೇತ್ರ ಮತ್ತು ಕ್ಷೇತ್ರಪತಿಯ ಸ್ವರೂಪ ಮತ್ತು ಆ ಕುರಿತ ವಿಚಾರವನ್ನು ಜೋತಿಬಾನ ಸಂದರ್ಭದಲ್ಲಿ ನೋಡಿದ್ದೇವೆ. ಸಾಂತೇರಿ ಎಂಬ ದೇವಿನಾಮವು ಸಾಂತೇರೇ (ಹುತ್ತ) ಎಂಬ ಶಬ್ದರಿಂದ ಬಂದಿತು ಎನ್ನಲಾಗಿದೆ. ಈ ಹೇಳಿಕೆಗೆ ಆಧಾರವೂ ಉಂಟು. ಕಾರಣ ಈ ದೇವಿಯ ಮೂರ್ತಿಯ ರೂಪದಂತೆಯೇ ಹುತ್ತದ ರೂಪದಲ್ಲಿಯೂ ಪೂಜಿಸಲ್ಪಡುತ್ತಿದ್ದಾಳೆ. ಗೋಮಾಂತಕ ಪ್ರದೇಶ ಮತ್ತು ದಕ್ಷಿಣ ಕೊಂಕಣ ಭಾಗದ ಊರುಗಳಲ್ಲೆಲ್ಲ ಅವಳ ತಾಣಗಳು ಹುತ್ತದ ರೂಪಗಳಾಗಿವೆ. ಹುತ್ತವು ಭೂಮಿ – ದ್ರವ್ಯಗಳಿಂದ ಉಂಟಾದುದಾಗಿದ್ದು, ಅದನ್ನು ಭೋಮ (<ಭೌಮ), ಭೋಂಬಾಡಾ (ಪೃಥ್ವಿ) ಎಂಬುದಾಗಿ ಕರೆಯುವರು. ನನಗೆ ತಿಳಿದಿರುವಂತೆ ಅವಳನ್ನು ‘ಭೂಮಿಕಾ ದೇವಿ’ ಎಂಬ ಅಭಿದಾನದಿಂದಲೂ ಪೂಜಿಸುವುದುಂಟು ಸ್ಪಷ್ಟವಾಗಿ.

ಕೆಲವೆಡೆ ಸಾಂತೇರಿಯನ್ನು ‘ಶಾಂತಾದುರ್ಗಾ’ (ಕರ್ನಾಟಕದಲ್ಲಿ ಸ್ತ್ರೀನಾಮವಾಗಿ ‘ಶಾಂತಲಾ ದೇವಿ’ ಎಂಬುದಾಗಿ ಬಳಕೆಯಾಗುತ್ತಿದೆ) ಎಂಬುದಾಗಿಯೂ ಕರೆಯಲಾಗುತ್ತಿದೆ. ಅಂತೆಯೇ ಒಂದೆಡೆ ಆಕೆಗಿರುವ ಹೆಸರು. ‘ಸತೇಶ್ವರಿ’ ಸಾಂತೇರಿ, ಸತೇಶ್ವರಿ ಮತ್ತು ಸಪ್ತ ಕೋಟೇಶ್ವರ ಎಂಬ ದೇವತಾ ನಾಮಗಳಲ್ಲಿ ಧ್ವನಿಸಾಮ್ಯವುಂಟು. ಹಾಗಾಗಿ ಸಾಂತೇರಿ ಎಂಬ ಹೆಸರಿನ ಬಗ್ಗೆ ಬೇರೆಯದೇ ಆದ ರಹಸ್ಯವೊಂದು ನನ್ನ ದೃಷ್ಟಿಯೆದುರು ಬರುತ್ತದೆ. ‘ಸೃಷ್ಟಿಯ’ ಹಾಗಾಗಿ ‘ಸತ್ತ’ [ಲಂಜಾ ಮತ್ತು ಲಜ್ಜಾ ಎಂಬ ಅರ್ಥಕ್ಕೆ ಸಂಬಂಧಿಸಿರುವ] ಕನ್ನಡ ಶಬ್ದವನ್ನು ಸಂಸ್ಕೃತೀಕರಣದ ಧ್ವನಿಸಾಮ್ಯದಿಂದ ವಿವೇಚಿಸಲು ಹೊರಟರೆ ಸ್ವಾಭಾವಿಕವಾಗಿಯೇ ‘ಸಪ್ತ’ ಎಂದಾಗುತ್ತದೆ. ಇದೇ ಪ್ರಕ್ರಿಯೆಯಲ್ಲಿಯೇ ಮಹಾಕೋಟೇಶ್ವರಿಯ ನಾಥ ಮಹಾಕೋಟೇಶ್ವರನಾದುದು ಮತ್ತು ಸಪ್ತಕೋಟೀಶ್ವರಿಯ ನಾಥ ಸಪ್ತಕೋಟೀಶ್ವರನಾದನೆಂದು ಹೇಳಿದಲ್ಲಿ ಅತಿಶಯೋಕ್ತಿಯಾಗುವುದಿಲ್ಲ.

ಸಪ್ತಕೋಟೀಶ್ವರದಲ್ಲಿನ ‘ಸಪ್ತಕೋಟಿ‘ಯ ಮೂಲ ‘ಯೇಳಕೋಟಿ’ (ಯೇಳ = ಏಳು, ಕೋಟೆ = ೧೦೦ ಲಕ್ಷಗಳನ್ನು ಹೊಂದಿರುವುದು) ಎಂಬುದಾಗಿದೆ. ಆದರೆ ಸಾಂತೇರಿಯು ಪೂಜಿಸಲ್ಪಡುತ್ತಿರುವ ರೂಪವನ್ನು ಕುರಿತು ವಿಚಾರ ಮಾಡಿದರೆ, ಆಕೆ ಕೇವಲ ಸೃಜನೇಂದ್ರಿಯ ರೂಪದಲ್ಲಷ್ಟೆ ಪೂಜಿಸಲ್ಪಡುವ ಭೂದೇವಿಯಾಗಿದ್ದಾಳೆ. ಹಾಗಾಗಿ ನಿಃಸಂಶಯವಾಗಿ ಹೇಳಬಹುದಾದರೆ ‘ಯೇಳ ಕೋಟಿ‘ಯ ಅರ್ಥ ‘ನಗ್ನ ಯಲ್ಲಮ್ಮ’ (ಯೇಳ = ಯಲ್ಲಮ್ಮ, ಕೋಟ್ಟ = ನಗ್ನ) ಎಂಬುದಾಗಿಯೇ ಹೇಳಬೇಕಾಗುವುದು.

ಸಾಂತೇರಿರವಳನಾಥರ ತರಂಗಗಳು

ಸಾಂತೇರಿ, ಪಾವಣಾಯಿ, ರವಳನಾಥ, ಭೂತನಾಥ – ಇತ್ಯಾದಿ ಗೋಮಾಂತಕೀಯ ದೇವಿಯರ ಉಪಾಸನೆಯಲ್ಲಿ ‘ತರಂಗ’ ಎಂಬ ಪ್ರಕಾರವು ಬಹಳೇ ಮಹತ್ವವಾದುದು. ‘ತರಂಗ’ ಎಂಬುದು ನಪುಂಸಕಲಿಂಗ ಶಬ್ದವಾಗಿದ್ದು, ನಾಲ್ಕು – ಆರು ಅಡಿ ಉದ್ದದ ಅಲಂಕೃತ ಕಾಷ್ಠಕ್ಕೆ ಆ ಹೆಸರಿದೆ. ಅಲ್ಲದೆ ಆ ಕೋಲಿಗೆ ಕಂಬ ಅಥವಾ ನಿಶಾನ ಎಂದೂ ಹೇಳುವುದುಂಟು. “ಗೋಮಾಂತಕ ಮತ್ತು ದಕ್ಷಿಣ ಕೊಂಕಣ ಪ್ರಾಂತ್ಯಗಳಲ್ಲಿನ ಎಲ್ಲ ದೇವಾಲಯಗಳಲ್ಲಿಯೂ ಬಹುತೇಕ ‘ತರಂಗ’ ಎಂಬ ಹೆಸರಿನ ದೇವತೆಗಳಿರುತ್ತವೆ. ‘ತರಂಗ’ ಎಂಬುದು ಆಳೆತ್ತರವುಳ್ಳ ಕಟ್ಟಿಗೆಯ ಮೃದು ಭಾಗವನ್ನು ಗೋಲಾಕಾರವಾಗಿ ರೂಪಿಸಲ್ಪಟ್ಟಿದ್ದಾಗಿದೆ. ಅದರ ಮೇಲೆ ಬೇರೆಬೇರೆ ಬಣ್ಣಗಳ ಪಟ್ಟೆಗಳಿರುತ್ತವೆ. ಆ ತರಂಗದ ಮೇಲೆ ಹಿತ್ತಾಳೆ ಅಥವಾ ಬೆಳ್ಳಿ ಮುಖವಾಡ (ಸ್ತ್ರೀ – ಪುರುಷರ) ವಾಗಿ ಕೇವಲ ಅಂಗೈ ಅಥವಾ ಕಲಶವನ್ನು ಇಡುತ್ತಾರೆ. ವಿಶೇಷ ಸಂದರ್ಭಗಳಲ್ಲಿ ರೇಶಿಮೆ ದಡಿಯ ಧೋತ್ರ ಇಲ್ಲವೆ ಸೀರೆಯನ್ನು ಉಡಿಸಿ ಪೂಜಿಸುತ್ತಾರೆ.”[2] ಈ ಮಾಹಿತಿಯನ್ನು ನೀಡಿದವರು ಶ್ರೀಬಾಂಬರ್ಡೇಕರ. ಆದರೆ ಶ್ರೀ.ಪು.ರಾ.ಬೆಹೆರೆ ಅವರ ಅಭಿಪ್ರಾಯ ಹೀಗಿದೆ: “ತರಂಗದ ಮೇಲೆ ಕೈ, ನಾಗಫಣಿಗಳಿಂದ ಅಲಂಕರಿಸಿದ ದೇವಿಯ ಮುಖವಾಡ ಇಲ್ಲವೆ ಕಲಶವಿರುತ್ತದೆ…. ಪುರುಷನ ಮುಖವಾಡ ಕಾಣುವುದಿಲ್ಲ”. ಬಹುತೇಕ “ಪ್ರತಿಯೊಂದು ಜಾಗೆಯಲ್ಲೂ ರವಳನಾಥನ ತರಂಗ ಇದ್ದೇ ಇರುತ್ತದೆ.”[3] ಇದರ ಅರ್ಥವೆಂದರೆ ರವಳನಾಥನ ತರಂಗವೇ ಬಹಳ ಮುಖ್ಯವಾದ ತರಂಗವಾಗಿದ್ದು ಅದನ್ನು ಗುರುವನು (ಕ್ಷೇತ್ರಪಾಲಕನ ಪೂಜಾರಿ) ಹಿಡಿದಿರುತ್ತಾನೆ.

ಸ್ಥಳೀಯ ವಿದ್ವಾಂಸರು ಒದಗಿಸಿದ ಈ ಮಾಹಿತಿಯ ಮಹತ್ವವನ್ನು ಪರೀಕ್ಷಿಸಿದಾಗ ತಿಳಿಯುವದೇನೆಂದರೆ, ತರಂಗ ಎಂದರೆ ಒಂದು ಕಾಷ್ಠ. ಅದಕ್ಕೆ ನಾಗಫಣಿಯೊಂದಿಗೆ ಸಂಬಂಧವಿದೆ. ಅದರ ದ್ಯೋತಕ ಸಂಕೇತವೆನಿಸಿದ ಇದು (ತರಂಗ) ನಪುಸಂಗ ಲಿಂಗೀ. ಅಲ್ಲದೆ ಮುಖ್ಯವಾಗಿ ರವಳನಾಥನೆಂಬ ಕ್ಷೇತ್ರಪತಿ ಮತ್ತು ಕ್ಷೇತ್ರಪಾಲಕನೊಂದಿಗೆ ಸಂಬಂಧ ಹೊಂದಿರುವಂಥದು. ಆಂಧ್ರ – ಕರ್ನಾಟಕಗಳಲ್ಲಿ ಮಾತಂಗಿ, ಜೋಗುಳಾಂಬೆ ಮತ್ತು ಯಲ್ಲಮ್ಮರ ಉಪಾಸನೆಯಲ್ಲಿ, ಉಪಾಸಕರ ಲಾಂಛನದಲ್ಲಿ ನಾಗಫಣಿಯುಕ್ತ ಕೋಲು ಅಂದರೆ ನಾಗಕಾಷ್ಠದ ಮಹತ್ವದ ಪರಿ ಮತ್ತು ಅದರ ಪ್ರತೀಕವಾಗಿ ಇದರ ಅಗತ್ಯತೆ ಎಷ್ಟೆಂಬುದನ್ನು ಕುರಿತು ಈ ಹಿಂದೆಯೇ ವಿವರಿಸಲಾಗಿದೆ. ಗೋಮಾಂತಕ ಪ್ರದೇಶದಲ್ಲಿನ ಸಾಂತೇರಿ – ರವಳನಾಥ ಎಂಬ ಯುಗಳವು ಕ್ಷೇತ್ರ – ಕ್ಷೇತ್ರಪತಿಯರ ಯುಗಳವೇ ಆಗಿದ್ದಾರೆ. ಅಲ್ಲದೆ ರವಳನಾಥನ ಸಹಚಾರಿಣಿಯರಾದ ಯಲ್ಲಮ್ಮ – ಮಾತಂಗಿಯರಂತೆಯೇ ಹುತ್ತದ ರೂಪದಲ್ಲಿ ಪೂಜಿಸಲ್ಪಡುತ್ತಿರುವವಳು ‘ಭೂಮಿಕಾ’ ದೇವಿಯಾಗಿರುವುದರಿಂದ ರವಳನಾಥ ಮತ್ತು ಅವನೊಂದಿಗೆ ಜೀವಾತ್ಮಕ ಸಂಬಂಧವಿರುವ ದೇವತೆಗಳ ಉಪಾಸನೆಯಲ್ಲಿ ನಾಗಕಾಷ್ಠ ರೂಪವಾದ ‘ತರಂಗ‘ಕ್ಕೆ ಮಹತ್ವವಿರುವುದು ತೀರಾ ಸ್ವಾಭಾವಿಕವೇ.

ಇಲ್ಲಿ ಮುಖ್ಯವಾಗಿ ಉಳಿಯುವ ಪ್ರಶ್ನೆ ಎಂದರೆ ‘ತರಂಗ’ ಎಂಬ ಸಾಂಕೇತಿಕತೆಯದ್ದು. ತರಂಗ ನಾಗಕಾಷ್ಠಕ್ಕೆ ಸಮರೂಪವೆಂಬುದನ್ನು ಈಗಾಗಲೇ ನೋಡಿದ್ದೇವೆ. ನಾಗಕಾಷ್ಠವು ಲಿಂಗರೂಪವೆಂಬುದು ನಮಗೆ ಈಗಾಗಲೇ ತಿಳಿದಿರುವಂಥ ವಿಷಯವೇ. ಹಾಗಾಗಿ ತರಂಗವೂ ಸಹ ಆ ಪ್ರತೀಕ ಸಾಮರ್ಥ್ಯವನ್ನು ಒಳಗೊಂಡುದೇ ಆಗಿರಬೇಕೆಂಬುದಾಗಿ ಒಪ್ಪುವುದರಲ್ಲಿ ಯಾವ ತಪ್ಪು ಕಾಣುವುದಿಲ್ಲ. ಲಿಂಗ – ಲಾಂಗಲ – ಲಗುಲ (ನೇಗಿಲು) ಇತ್ಯಾದಿ ಶಬ್ಧಗಳ ಆಸ್ಟ್ರಿಕ್ ಮೂಲ ಪರ್ಯಾಯವು ಲಗ್ – ಲಂಗ್. ಅಲ್ಲದೆ ಅವುಗಳಲ್ಲಿ ‘ತ್ಲಂಗ್’ ಎಂಬುದಾಗಿಯೂ (‘ತ್ಲೋ‘ನ ಹಾಗೆ) ಅನುಮಾನಿಕ (Hypothetical) ಪರ್ಯಾಯವೊಂದರ ಸಂಭಾವ್ಯತೆಯೂ ಇದೆ.”[4] ‘ತ್ಲಂಗ್‌‘ನಲ್ಲಿ ಸ್ವರಾಗಮವಾದರೆ ‘ತಲಂಗ’ ಎಂಬ ರೂಪ ಬರುತ್ತದೆ. ಹಾಗೂ ‘ಲ – ರ‘ಗಳಲ್ಲಿನ ಅಭೇದತೆಯಿಂದ ‘ತರಂಗ’ ಎಂಬ ಲಿಂಗವಾಚಕ ರೂಪ ಸಹಜವಾಗಿಯೇ ಉಪಲಬ್ಧವಾಗುವುದು. ‘ತರಂಗ‘ದ ಈ ವ್ಯುತ್ಪತ್ತಿಯು ಕೇವಲ ಧ್ವನಿಸಾಮ್ಯದ ಮೇಲಷ್ಟೆ ಇಲ್ಲ, ಬದಲಾಗಿ ತರಂಗದ ಸ್ವರೂಪ ವಿಶ್ಲೇಷಣೆಯೂ ಅದಕ್ಕೆ ಆಧಾರವಾಗಿರುವುದನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.

ಕೋಟ್ಟವೈ: ನಗ್ನ ಮಾತೃದೇವತೆ

ಮಹಾಕೂಟದಲ್ಲಿನ ಮಹಾಕೋಟೇಶ್ವರಿಯ ಬಗ್ಗೆ ವಿವರಿಸುವಾಗ ಮತ್ತು ಸಪ್ತಕೋಟೀಶ್ವರನ ನಾಮರಹಸ್ಯವನ್ನು ಬಿಡಿಸುವಾಗ ‘ಕೋಟ್ಟ’ ಎಂಬ ನಗ್ನಾರ್ಥಕ ಮೂಲ ರೂಪದೆಡೆಗೆ ಗಮನಹರಿಸಲಾಗಿತ್ತು. ತಮಿಳುನಾಡಿನ ಪಾಲೈ ಎಂಬಲ್ಲಿನ ಆದಿಮ ಪಂಗಡದವರ ಜನಪ್ರಿಯ ದೇವಿ ಕೋಟ್ಟವೈ. ಪ್ರಾಚೀನ ತಮಿಳು ವಾಙ್ಮಯದಲ್ಲಿ ಉಲ್ಲೇಖಿಸಿರುವಂತೆ ಕೋಟ್ಟವೈ ಅಥವಾ ಕೋರ‍್ರವೈ ಆರಂಭದಲ್ಲಿ ವನದೇವಿ ಎನಿಸಿದ್ದಳು. ವೀರರಿಗೆ ಯುದ್ಧದಲ್ಲಿ ವಿಜಯವನ್ನು ದೊರಕಿಸಿಕೊಡುವ ಈಕೆ ಪ್ರತಿಫಲವಾಗಿ ಮನುಷ್ಯ ಬಲಿಯನ್ನು ಪಡೆಯುತ್ತಿದ್ದಳು. ಆರಂಭದಲ್ಲಿ ಉಗ್ರರೂಪಿಯಾಗಿದ್ದ ಈಕೆಗೆ ಮುಂದೆ ಪಾರ್ವತಿಯ ಚರಿತ್ರೆಯನ್ನು ಅನ್ವಯಿಸುವುದರ ಮೂಲಕ ಶಿವನಿಗೆ ಹತ್ತಿರದವಳನ್ನಾಗಿಸಿದರು. ಅಲ್ಲದೆ ವಿಂಧ್ಯವಾಸಿನಿ ಮತ್ತು ಮಹಿಷ ಮರ್ಧಿನಿಯ

ಕೋಟ್ಟವೈ: ನಗ್ನ ಮಾತೃದೇವತೆ

ಮಹಾಕೂಟದಲ್ಲಿನ ಮಹಾಕೋಟೇಶ್ವರಿಯ ಬಗ್ಗೆ ವಿವರಿಸುವಾಗ ಮತ್ತು ಸಪ್ತಕೋಟೀಶ್ವರನ ನಾಮರಹಸ್ಯವನ್ನು ಬಿಡಿಸುವಾಗ ‘ಕೋಟ್ಟ’ ಎಂಬ ನಗ್ನಾರ್ಥಕ ಮೂಲ ರೂಪದೆಡೆಗೆ ಗಮನಹರಿಸಲಾಗಿತ್ತು. ತಮಿಳುನಾಡಿನ ಪಾಲೈ ಎಂಬಲ್ಲಿನ ಆದಿಮ ಪಂಗಡದವರ ಜನಪ್ರಿಯ ದೇವಿ ಕೋಟ್ಟವೈ. ಪ್ರಾಚೀನ ತಮಿಳು ವಾಙ್ಮಯದಲ್ಲಿ ಉಲ್ಲೇಖಿಸಿರುವಂತೆ ಕೋಟ್ಟವೈ ಅಥವಾ ಕೋರ‍್ರವೈ ಆರಂಭದಲ್ಲಿ ವನದೇವಿ ಎನಿಸಿದ್ದಳು. ವೀರರಿಗೆ ಯುದ್ಧದಲ್ಲಿ ವಿಜಯವನ್ನು ದೊರಕಿಸಿಕೊಡುವ ಈಕೆ ಪ್ರತಿಫಲವಾಗಿ ಮನುಷ್ಯ ಬಲಿಯನ್ನು ಪಡೆಯುತ್ತಿದ್ದಳು. ಆರಂಭದಲ್ಲಿ ಉಗ್ರರೂಪಿಯಾಗಿದ್ದ ಈಕೆಗೆ ಮುಂದೆ ಪಾರ್ವತಿಯ ಚರಿತ್ರೆಯನ್ನು ಅನ್ವಯಿಸುವುದರ ಮೂಲಕ ಶಿವನಿಗೆ ಹತ್ತಿರದವಳನ್ನಾಗಿಸಿದರು. ಅಲ್ಲದೆ ವಿಂಧ್ಯವಾಸಿನಿ ಮತ್ತು ಮಹಿಷ ಮರ್ಧಿನಿಯರೊಂದಿಗೆ ಏಕರೂಪತೆಯೂ ಉಂಟಾಯಿತು ಇವಳಿಗೆ. ಜೊತೆಗೆ ತೀರಾ ಸಹಜವೆಂಬಂತೆ ಅವಳ ಏಕಮೇವ ಪುತ್ರನಾಗಿದ್ದ ದಕ್ಷಿಣದ ಪ್ರಖ್ಯಾತ ಕ್ಷೇತ್ರಪಾಲದೇವ ಮುರುಗನಿಗೂ ಶಿವ – ಪಾರ್ವತಿಯರ ಪುತ್ರನಾದ ಸ್ಕಂದನೊಂದಿಗೆ ಏಕರೂಪತೆಯು ಪ್ರಾಪ್ತವಾಯಿತು.

ಡಾ. ವಾಸುದೇವಶರಣ ಅಗ್ರವಾಲ ಅವರು ಕೋಟ್ಟವೈ ದೇವಿಯ ಸ್ವರೂಪವನ್ನು ಕುರಿತಂತೆ ತಮ್ಮ ಕೃತಿಯಲ್ಲಿ ವಿಶೇಷ ಅಂಶಗಳನ್ನು ನೀಡಿದ್ದಾರೆ:[5]

“ದಕ್ಷಿಣ ಭಾರತದಲ್ಲಿ ಈಕೆ ಮಾತೃದೇವತೆ. ಸರ್ವತ್ರ ಪ್ರಚಲಿತವಾಗಿತ್ತು ಇವಳ ಪೂಜೆ. ಮೊದಲಿಗೆ ರಾಕ್ಷಸಿ ರೂಪದವಳಾಗಿದ್ದ ಈಕೆಯು ಅನಂತರದಲ್ಲಿ ದುರ್ಗೆ ಇಲ್ಲವೆ ಉಮೆಯ ರೂಪದಲ್ಲಿ ಪೂಜಿಸಲ್ಪಡುವುದಕ್ಕೆ ತೊಡಗಿದಳು. ಶ್ರೀಜಗದೀಶಚಂದ್ರ ಜೈನ್ ಅವರು ಜೈನ ಸಾಹಿತ್ಯದ ಆಧಾರದಿಂದ ಕೋಟ್ಟಕಿರಿಯಾಮಹ ಎಂಬರ್ಥದಲ್ಲಿ ಕೋಟ್ಟಕ್ರಿಯಾ ದೇವಿಯ ಉತ್ಸವವನ್ನು ಉಲ್ಲೇಖಿಸಿದ್ದಾರೆ. ದುರ್ಗೆಯು ಮಹಿಷವನ್ನೇರಿ ಸವಾರಿ ಹೊರಟಾಗ ಈಕೆಯನ್ನು ಕುರಿತು ಕರೆವ ಹೆಸರು ಕೋಟ್ಟಕಿರಿಯಾ, ಎಂದು ಹೇಳಲಾಗಿದೆ ನ್ಯಾಯಧಮ್ಮ ಕಟಿಕೆಯಲ್ಲಿ. ಈ ಮೂಲಕ ಸೂಚಿತವಾಗುವುದೇನೆಂದರೆ, ಮಹಿಷಾಸುರ ಮರ್ದಿನಿ ಮತ್ತು ಕೋಟ್ಟಕಿರಿಯಾರುಗಳು ಮೂಲದಲ್ಲಿ ಪರಸ್ಪರ ಸಂಬಂಧಿಗಳು ಅಥವಾ ಒಮದೇ ಪರಿವಾರದಲ್ಲಿದ್ದ ದೇವತೆಗಳು. ಆದಿಮ ನಿವಸಿ ಜಾತಿಗಳವರಲ್ಲಿ ಪ್ರಚಲಿತದಲ್ಲಿತ್ತು ಅವರ ಪೂಜೆ. ಭಾಗವತದಲ್ಲಿ ಹೇಳಿರುವಂತೆ ಬಾಣಾಸುರನ ತಾಯಿ ಕೋಟರಾ (‘ತನ್ಮತಾ ಕೋಟರಾ ನಾಮ ನಗ್ನಾ ಮುಕ್ತಿ ಶಿರೋರುಹಾ!’ ಭಾ. ೧೦.೬೩.೨೦). ನಗ್ನದೇವಿ ಕೋಟರಾ ಮತ್ತು ದಕ್ಷಿಣದ ಕೋಟ್ಟವೈ ಇವೆರಡೂ ಒಬ್ಬಳೇ ದೇವಿಯ ಹೆಸರುಗಳು. ಬಾಣಭಟ್ಟನು ತನ್ನ ‘ಹರ್ಷಚರಿತ‘ದಲ್ಲಿ ಯಾರ ದರ್ಶನವನ್ನು ಅಪಶಕುನವೆಂದು ಭಾವಿಸಲಾಗಿತ್ತೋ, ಆ ಕೋಟವಿಯನ್ನು ಕುರಿತು ಉಲ್ಲೇಖಿಸಿದ್ದಾನೆ. ಟೀಕಾಕಾರರಾದ ಶಂಕರ ಅವರು ‘ಕೋಟವಿ‘ಯನ್ನು ಅರ್ಥೈಸಿರುವುದು ‘ನಗ್ನಸ್ತ್ರೀ‘ಯಾಗಿ. ಈ ಲಕ್ಷಣವು ಭಾಗವತ ಪುರಾಣದಲ್ಲಿನ ಕೋಟಕಿಯ ಲಕ್ಷಣಕ್ಕೆ ಸಮನಾದುದಾಗಿದೆ. ಕೋಶಕಾರರಾದ ಕೇಶವ ಅವರ ಅಭಿಪ್ರಾಯದಂತೆ (ಕಲ್ಪದ್ರುಕೋಶ, ಶ್ಲೋಕ. ೧೨೭) ಕೋಟವಿಯು ಅಂಬಿಕೆಯ ಒಂದು ರೂಪ. ಹೇಮಚಂದ್ರನು (ಹನ್ನೆರಡನೇ ಶತಮಾನ) ಕೂದಲನ್ನು ಹೇಗೇಗೋ ಹರವಿಕೊಂಡಿದ್ದಂಥ ನಗ್ನ ಸ್ತ್ರೀಯನ್ನು ‘ಕೋಟವಿ’ ಎಂದು ಹೇಳಿದ್ದಾನೆ. (‘ನಗ್ನಾ ತು ಕೋಟವೀ |’ – ಅಭಿದಾನ – ಚಿಂತಾಮಣಿ, ೩.೯೮; ಟೀಕೆ: ‘ನಗ್ನಾ ವಿವಸ್ತ್ರ ಯೋಷಿತ್‌ ಮುಕ್ತಕೇಶೀತ್ಯಾಗಮಃ ಕೋಟನೆ ಲಜ್ಜಾವಶಾತ್ ಯಾತಿ ಕೋಟವೀ |‘).

“ಕೋಟವಿಯ ಪೂಜೆಯು ಆದಿಮ ಜನಾಂಗದವರಲ್ಲಿ ಪ್ರಚಲಿತದಲ್ಲಿತ್ತು. ಅಲ್ಲಿಂದ ಆಕೆ ಅನೇಕ ಹೆಸರುಗಳನ್ನು ಧಾರಣ ಮಾಡಿಕೊಂಡಂಥ ಘೋರ ಉಗ್ರರೂಪಿಣಿ ದೇವಿಯರೊಂದಿಗೆ ಸಮನ್ವಯಗೊಳ್ಳುತ್ತಾ ದಕ್ಷಿಣದಿಂದ ಉತ್ತರದವರೆಗೂ ವ್ಯಾಪಿಸಿ ಜನಪ್ರಿಯಳಾದಳು. ಕಾಶಿ ವಿಶ್ವವಿದ್ಯಾಲಯದ ಅಕ್ಕಪಕ್ಕದಲ್ಲಿ ಪ್ರಾಚೀನ ಯಕ್ಷಪೂಜೆ ಮತ್ತು ದೇವೀ ಪೂಜೆಗಳ ಕುರುಹಿರುವುದನ್ನು ಕುರಿತು ಶೋಧಿಸುವಾಗ್ಗೆ, ನನಗೆ ವಿಶ್ವವಿದ್ಯಾಲಯದ ಆವರಣದಲ್ಲಿಯೇ ಕೋಟಮಾಯಿ (ತಾಯಿ)ಯ ಒಂದು ಚಿಕ್ಕ ಮಂದಿರವು ಲಭಿಸಿತು; ಅದು ಕೋಟವೀ ದೇವಿಯದ್ದೇ ಹೌದು. ಮುಂದೆ ನನಗೆ ತಿಳಿದು ಬಂದಂತೆ, ಆಲಮೋಡಾ ಜಿಲ್ಲೆಯಲ್ಲಿನ ಲೋಹಧಾರದಿಂದ ಹನ್ನೆರಡು ಮೈಲು ಅಂತರದಲ್ಲಿ ಕೋಟಲಗಢ ಎಂಬ ತಾಣವಿದೆ. ಸ್ಥಳೀಯ ದಂತ ಕಥೆಯ ಪ್ರಕಾರ ಇದು ಕೋಟ್ಟವಿಯ ಗಢ. ಈ ಕೋಟ್ಟವಿಯು ಬಾಣಾಸುರನ ತಾಯಿ. ಅವಳ ಅರ್ಧ ಶರೀರ (ಮೇಲ್ಭಾಗ) ಕವಚದಿಂದ ಮುಚ್ಚಿಕೊಂಡಿದ್ದರೆ, ಕೆಳಗಣ ಅರ್ಧಶರೀರ ನಗ್ನವಾಗಿತ್ತು…. ಈ ಮೂಲಕ ನಿಷ್ಕರ್ಷಿಸಬಹುದಾದರೆ, ಕೋಟ್ಟ ಕಿರಿಯಾ, ಕೋಟ್ಟವೈ, ಕೋಟರಾ, ಕೋಟವೀ ಅಥವಾ ಕೋಟಮಾಯಿ ಎಂಬೀ ದೇವಿಯ ಪೂಜೆಯು ದಕ್ಷಿಣದಿಂದ ಹಿಮಾಲಯದವರೆಗೂ ಸರ್ವತ್ರ ಪ್ರಚಲಿತವಾಗಿತ್ತು.”

ಡಾ. ಸಂಕಾಲಿಯಾ ಅವರು ಗುಜರಾತಿನ ಪುರಾತತ್ತ್ವ ಅವಶೇಷಗಳನ್ನು ಪರಾಮರ್ಶಿಸುವಾಗ ಆ ಪ್ರದೇಶದಲ್ಲಿನ ಕೋಟ್ಟಮಹಿತಾ ದೇವಿಯ ಮಂದಿರವನ್ನು ಉಲ್ಲೇಖಿಸಿದ್ದಾರೆ.[6]ದ್ವಿತೀಯ ಧ್ರುವಸೇನನು (ಕ್ರಿ.ಶ.೬೩೯ – ೬೪೦) ಈ ಮಂದಿರವನ್ನು ಜೀರ್ಣೋದ್ಧಾರ ಗೊಳಿಸಿದ್ದನಲ್ಲದೆ, ಅಲ್ಲಿನ ಪೂಜೆ – ಅರ್ಚನೆಗಳಿಗಾಗಿ ಮೀಸಲಿರಿಸಿ ನಿಂತುಹೋಗಿದ್ದ ಶಾಸಕೀಯ ದತ್ತಿಯನ್ನು ಪುನಃ ವ್ಯವಸ್ಥೆಗೊಳಿಸಿದ್ದನು. ಈ ಉಲ್ಲೇಖ ಅವನ ಒಂದು ದಾನಶಾಸನದಲ್ಲಿಯೂ ಬಂದಿದೆ. ಇದನ್ನು ಮೊದಲು ಸಂಪಾದಿಸಿದ ಜ್ಯಾಕ್ಸನನ್ನು ಈ ಸ್ಥಾನವು ‘ಕೋಟ್ಟರಾ ದೇವಿ’ ಎಂಬ ಹೆಸರಿನಲ್ಲಿ ಅಸ್ತಿತ್ವದಲ್ಲಿದ್ದುದಾಗಿ ಉಲ್ಲೇಖಿಸಿದ್ದಾನೆ. ಆ ಮಂದಿರದ ನಿರ್ಮಾಣವು ಧ್ರುವಸೇನನಿಗೂ ಪೂರ್ವದಲ್ಲಿದ್ದ ದ್ರೋಣಸಿಂಹನೆಂಬ ದೊರೆಯಿಂದ ತ್ರಿಸಂಗಮದ ಸ್ವತಲ ಸೀಮೆಯಲ್ಲಿ ಆಗಿತ್ತೆಂಬ ಬಗ್ಗೆ ಈ ಮೇಲೆ ಹೇಳಿದ ಶಾಸನದಲ್ಲಿಯೇ ಉಲ್ಲೇಖವಿದೆ. ಆಗಿನ ‘ತ್ರಿಸಂಗಮಕ’ ಸ್ಥಾನವೇ ಇಂದಿನ ‘ತರಸಮಿಯಾ’.

‘ಕೋಟ್ಟಮಹಿಕಾ ದೇವಿ’ ಎಂಬ ಹೆಸರಿನಿಂದಾಗಿ ನನ್ನ ಮನಸ್ಸಿನಲ್ಲಿ ಬರುವ ವಿಚಾರವೆಂದರೆ, ಮಹಾರಾಷ್ಟ್ರದಲ್ಲಿನ ಮಹಿಕಾವತಿ ನಗರದ (ಮುಂಬಯಿಗೆ ಹತ್ತಿರದ ಕೇಳವೇ ಮಾಹಿಮಾ) ಅಧಿಷ್ಠಾತ್ರಿದೇವಿ ಮಹಿಕಾವತಿಯೂ ಕೋಟ್ಟಮಹಿಕಾ ದೇವಿಯೇ ಆಗಿದ್ದಿರಬಹುದಲ್ಲವೇ? ಕಾರಣ “ರಾಮಭಕ್ತನಾದ ಹನುಮಂತನು ಒದ್ದು ಮಕಾಡೆ ಕೆಡವಿದ ತಾಯಿಯ ಅಜ್ಜಿ ಕರ್ನಾಟಕದವಳು. ಹಾಗಾಗಿ ನನ್ನ ತಾಯಿಯ ಭಾಷೆಯಲ್ಲಿ ಅಲ್ಲಿನ ಅನೇಕ ಗ್ರಾಮೀಣ ಶಬ್ದಗಳಿವೆ. ನನ್ನ ಚಿಕ್ಕ ತಂಗಿಯೊಬ್ಬಳು ನಗ್ನಳಾಗಿ ಓಡಾಡುತ್ತಿದ್ದರೆ, ಇಲ್ಲವೆ ನಿರ್ಲಜ್ಞೆಯಿಂದ ಗಹಗಹಿಸಿ ನಗುತ್ತಲಿದ್ದಾಗಲೆಲ್ಲ, ನನ್ನ ತಾಯಿ ತಪ್ಪದೆ ‘ಕೋಟಕಾಯಾ’ ಎನ್ನುತ್ತಿದ್ದಳು. ಅಂತೆಯೇ ಕುಣಿದು ಕುಪ್ಪಳಿಸುವ ಅವಳ ಗೆಳತಿಯರಿಗೂ ಕೂಡ ‘ಸಾಟಕಾಯ, ಕೋಟಕಾಯಾ’ (ನಮ್ಮ ಭಾಷೆಯಲ್ಲಿ ‘ಸಾಳಕಾಯಾ – ಮ್ಹಾಳಕಾಯಾ’) ಎಂಬ ಮಾತು ಹೇಳುತ್ತಿದ್ದಳು… ಅಂದರೆ ‘ನಿರ್ಲಜ್ಞೆ(ನೀಲಾಜರೀ), ನಗ್ನ (ನಾಗಡಿ) ಸ್ತ್ರೀ ಎಂಬರ್ಥದಲ್ಲಿ ‘ಕೋಟಕಾಯಿ’ (ಕೋಟವಾಯಿ – ಕೋಟವಿ) ಎಂಬ ಶಬ್ದಗಳು ನಮ್ಮ ಮನೆಯಲ್ಲಿ, ಅದರ ಅರ್ಥ – ಪರಂಪರೆ ತಿಳಿಯದಿದ್ದರೂ ಹೇಗೋ ಬಳಕೆಯಲ್ಲಿತ್ತು.” ಪ್ರೊ. ಬ್ರಹ್ಮಾನಂದ ದೇಶ ಪಾಂಡೆಯವರು ನೀಡಿದ ಈ ಮಾಹಿತಿಯು ಕೋಟವೀ – ಕೋಟ್ಟಕಿರಿಯಾ ಎಂಬ ದೇವಿಯ ಮೂಲರೂಪದ ಮೇಲೆ ಪ್ರಕಾಶನ ಬೀರುವ ದಿಶೆಯಲ್ಲಿ ಹೆಚ್ಚು ಪ್ರಯೋಜನಕಾರಿ. ಅವರ ಇದೇ ಪತ್ರದಲ್ಲಿ ತಿಳಿಸಿದ್ದ ಮತ್ತೊಂದು ವಿಚಾರವೆಂದರೆ, “ಮಾಹೂರಝರಿಯ ಒಂದು ಊರ್ಧ್ವ ಪಾದ ನಗ್ನಮೂರ್ತಿಯು ನನ್ನ ಸಂಗ್ರಹದಲ್ಲಿದೆ.” ಬಹಿರಾ ಜಾತವೇದದ ಹತ್ತನೆಯ ಟೀಕುವಿನಲ್ಲಿ (೬.೧೫೬) ವಿಘ್ನ ದೇವತೆಗಳ ಸಾಲಿನಲ್ಲಿ ‘ಕೋಟರಾ‘ವನ್ನು ಹೆಸರಿಸಲಾಗಿರುವುದು.

ಮ್ಹಸ್ಕೋಬ: ಒಬ್ಬ ಕ್ಷೇತ್ರಪತಿ

ಯಮಾಯಿಯ ಜೋತಿಬಾ, ಸಾಂತೇರಿಯ ರವಳನಾಥ, ಮ್ಹಾಳಸಾಳ ಖಂಡೋಬಾ ಇವರುಗಳಂತೆ ಜೋಗೇಶ್ವರಿಯ ಭೈರವರೂಪಿ ಮ್ಹಸ್ಕೋಬಾ ಎಂಬ ಕ್ಷೇತ್ರಪಾಲಕ ದೇವರೂ ಮಹಾರಾಷ್ಟ್ರದಲ್ಲಿ ಪ್ರಖ್ಯಾತ. ಅವನ ಮುಖ್ಯತಾಣ ಪುರಂದರ ತಾಲೂಕಿನ ವೀರ ಎಂಬ ಗ್ರಾಮ. ಆತ ಪ್ರಮುಖವಾಗಿ ಕುರುಬರ ದೇವರು; ಹಾಗಾಗಿ ಅವನ ಮುಖ್ಯ ತಾಣವಾಗಿರುವ ಊರಿನ ಹೆಸರು ಕುರುಬರ ಬೀರೋಬಾ (ವೀರ – ಬೀರ+ಬಾ)ನೊಂದಿಗೆ ಸಂಬಂಧ ಹೊಂದಿರುವುದು ಸಂಭವನೀಯವೇ. ಮ್ಹಸ್ಕೋಬಾನ ಪಾರಂಪರಿಕ ಮಾಹಿತಿಯನ್ನು ಗ್ರಂಥಿತಗೊಳಿಸಿರುವ ‘ಶ್ರೀನಾಥ ಮ್ಹಸ್ಕೋಬಾ ದೇವಾಚೆ ಚರಿತರ’ ಗ್ರಂಥವು ಅನೇಕ ಬಾರಿ ಮುದ್ರಣ ಕಂಡಿದೆ.[7] ಈ ಕೃತಿಯಲ್ಲಿ ಬಂದಿರುವ ಮ್ಹಸ್ಕೋಬಾನ ಪಾರಂಪರಿಕ ವಿಚಾರವನ್ನು ಪರಿಶೀಲಿಸಿದರೆ, ಅವನ ಮೂಲ ಪ್ರಕೃತಿಯ ಚಿತ್ರಣವು ಸ್ಪಷ್ಟವಾಗಿ ಮೂಡಬಹುದು.

ಕುರುಬರ ನಂಬುಗೆಯಂತೆ ವೀರ ಗ್ರಾಮದ ಮ್ಹಸ್ಕೋಬಾನು ಮೂಲತಃ ಸೋನಾರಿಯ ಭೈರವನಾಗಿದ್ದ. ಕಮಲಾಜಿ ಎಂಬ ಕುರುಬನ ‘ವಾಡೆ’ (ಕುರಿ, ಟಗುರು ಮತ್ತು ದನಗಳ ಹಿಂಡು) ಸೋನಾರಿಯಲ್ಲಿದ್ದಾಗ ನಿತ್ಯವೂ ಆತ ಭೈರವನ ದರ್ಶನ ಪಡೆದು, ತನ್ನ ರೀತಿ ಹಾಗೂ ಶಕ್ತಿಯ ಅನುಸಾರವಾಗಿ ಪೂಜಿಸುತ್ತಿದ್ದ. ಮುಂದೆ ಅವನ ವಾಡೆಯು ನೀರೆಯ (ನದಿ) ತಟದಲ್ಲಿನ ಬೋರಬನಕ್ಕೆ ಬಂದಿತು. ಆದರೆ ಅವನ ಭಯರವ ಭಕ್ತಿಯ ಹುಚ್ಚು ಹಾಗೆಯೇ ಉಳಿದಿತ್ತು. ಆತ ನಿತ್ಯವೂ ಪೂಜಾ ಸಮಯದಲ್ಲಿ ಭೈರವನನ್ನು ಧ್ಯಾನಿಸುತ್ತಲೇ ಸೋನಾರಿಗೆ ಹೋಗಿ ಬರುತ್ತಿದ್ದನು. ಅಲ್ಲಿನ ಪೂಜಾರಿಗಳಿಗೆ ಈ ‘ಕುರುಬ’ನ ಪೂಜಾ ರಹಸ್ಯ ತಿಳಿದಿರಲಿಲ್ಲ. ಹಾಗಾಗಿ ಇದನ್ನು ಭೇದಿಸಲು ನಿರ್ಧರಿಸಿದರು ಅವರು. ಆಗ ದೇವನೇ ಸ್ವತಃ ಕಮಲಾಜಿಗೆ ಹೇಳಿದ, “ನೀನು ಇತ್ತಕಡೆ ಬರಬೇಡ, ನಾನೇ ಬರುತ್ತೇನೆ ನಿನ್ನಲ್ಲಿಗೆ. ನಿನ್ನ ಪಕ್ಕದಲ್ಲಿಯೇ ಮೋಟು ಗಿಡವು ಚಿಗುರಿ ತಳಿರಿನಿಂದ ತುಂಬಿದರೆ ನೀನು ತಿಳಿವುದು, ನಾನು ಅಲ್ಲಿದ್ದೇನೆ ಎಂದು.” ಈ ವಚನಾನುಸಾರ ಭೈರವನು ಐದು ಹೆಡೆಯ ಮಹಾಸರ್ಪದ ರೂಪದಲ್ಲಿ ಬೋರವನಕ್ಕೆ ಬಂದನು. ಒಂದು ಎಳೆಯ ಹಸುವನ್ನು ಸುತ್ತು ಹಾಕಿದ ಭೈರವನು ತನ್ನ ನಾಲ್ಕು ಹೆಡೆಗಳಿಂದ ಅದರ ನಾಲ್ಕು ಸ್ತನಗಳಲ್ಲಿನ ಹಾಲನ್ನು ಕುಡಿದು ನಂತರ ಲಘುರೂಪವನ್ನು ಧರಿಸಿ ಕಮಲಾಜಿಯ ಕಂಬಳಿ(ಘೋಂಗಡೀ)ಯ ಆಸನವನ್ನು ಪ್ರೀತಿಯಿಂದ ಅಲಂಕರಿಸಿದ. ಈ ಕ್ರಮ ವರ್ಷ ಪೂರ್ತಿ ನಡೆಯುತ್ತಿತ್ತು ನಿತ್ಯವೂ. ಕಮಲಾಜಿಯ ಹಿರಿಯರು ಇದನ್ನು ತಿಳಿದು ಗಾಬರಿಗೊಂಡರು. ಹಿರಿಯರ ಭಯದ ಕಾರಣ ದೇವರು ದೂರಾಗುವುದು ಬೇಕಾಗಿರಲಿಲ್ಲ ಕಮಲಾಜಿಗೆ. ಹಾಗಾಗಿ ದೇವರೇ ಅವನಿಗೆ ಹೀಗೆ ಸೂಚಿಸಿದ. ನೀನು ನನ್ನನ್ನು ಹತ್ತಿರದ ಯಾವುದಾದರೊಂದು ಹುತ್ತದಲ್ಲಿ ಬಿಡು.” ಕಮಲಾಜಿ ಅದರಂತೆಯೇ ಮಾಡಿದನು. ಆದರೆ ಆ ಹುತ್ತವಿದ್ದ ಹೊಲದವರು ಕಮಲಾಜಿಯ ವಿರೋಧವನ್ನು ಲೆಕ್ಕಿಸದೆ ಹೊಲವನ್ನು ಉಳುತ್ತಾ ಹುತ್ತವನ್ನೂ ಬಿಡಲಿಲ್ಲ. ಪರಿಣಾಮವಾಗಿ ಅವರೆಲ್ಲ ಸಾವು ಕಾಣಬೇಕಾಯಿತು. ಆ ಹೊಲದ ಯಜಮಾನ ಕಮಲಾಜಿಯಲ್ಲಿ ಕರುಣೆದೋರುವಂತೆ ಬೇಡಿದ, ಅವನ ಭಕ್ತಿಭಾವದಿಂದ ಸತ್ತ ಮಕ್ಕಳು ಮತ್ತೆ ಬದುಕಿದರು. ಹುತ್ತದ ಬಳಿಯಲ್ಲಿದ್ದ ನೇಗಿಲನ್ನು ಕಿತ್ತು ಹೊರತೆಗೆದಾಗ ಆ ಜಾಗೆಯಲ್ಲಿ ಒಂದು ಕೆಂಪು ಸೀಸದಿಂದ ಲೇಪನಗೊಂಡ ಒರಟುಕಲ್ಲಿನ ರೂಪದಲ್ಲಿ ಪ್ರತ್ಯಕ್ಷನಾದ ದೇವ ಭೈರವ. ಆ ಒರಟುಕಲ್ಲೇ ಇಂದಿನ ಮ್ಹಸ್ಕೋಬಾನ ಪ್ರತೀಕ.

ವೀರ ಎಂಬಲ್ಲಿ ಲಭ್ಯವಾದ ಈ ಮ್ಹಸ್ಕೋಬಾ ಅವತಾರ ಕಥೆಯು ಅವನ ಮೂಲ ರೂಪದ ಮೇಲೆ ವಿಶೇಷವಾಗಿ ಬೆಳಕು ಚೆಲ್ಲುತ್ತದೆ. ಆತ ಮೂಲತಃ ಕ್ಷೇತ್ರಪಾಲಕ (ಭೈರವ) ದೇವರು; ಐದು ಹೆಡೆಯುಳ್ಳ ನಾಗನ ರೂಪದಲ್ಲಿ ಆತ ಭಕ್ತರಿಗೆ ದರ್ಶನ ಕೊಡುತ್ತಾನೆ ಮತ್ತು ಹುತ್ತದಲ್ಲಿ ಆಶ್ರಯ ಪಡೆಯುತ್ತಾನೆ. ಅವನ ಈ ಅವತಾರದ ಕಥೆಯು ಮ್ಹಸ್ಕೋಬಾನಿಗೆ ಇರುವ ಜೋತಿಬಾ, ರವಳನಾಥ, ಮುರುಗ, ಸುಬ್ರಹ್ಮಣ್ಯಾದಿ ಪ್ರಖ್ಯಾತ ಕ್ಷೇತ್ರಪಾಲಕರೊಂದಿಗಿನ ಸಾಮ್ಯವನ್ನು ಸಿದ್ಧಪಡಿಸಿ ತೋರಿಸುವುದಾಗಿದೆ. ಈ ವಿಶೇಷತೆಯು ಕೇವಲ ಅವತಾರ ಕಥೆಯಷ್ಟಕ್ಕೆ ಸೀಮಿತವಾಗಿಲ್ಲ, ಬದಲಾಗಿ ಈ ದೇವನ ಸಾಮರ್ಥ್ಯ ಹಾಗೂ ಭಕ್ತರ ವಿಶಿಷ್ಟ ಧೋರಣೆಗಳೂ ವ್ಯಕ್ತವಾಗಿವೆ; ಈ ದೇವನನ್ನು ಸರ್ಪವಿಷಹಾರಕನೆಂದು ನಂಬಿದ್ದಾರೆ. “ಎಂಥದೇ ದೊಡ್ಡ ಕಟುಸರ್ಪವು ಕಡಿದಿರಲಿ, ಕಡಿದಾತನನ್ನು ದೇವಾಲಯಕ್ಕೆ ಕರೆತಂದು ಲಿಂಬೆರಸ ಕುಡಿಸಿ ಶ್ರೀನಾಥನನ್ನು ಪ್ರದಕ್ಷಿಣೆ ಹಾಕಿಸಿದರೆ ಸಾಕು ಹುಷಾರಾಗಿ ಬಿಡುತ್ತಾನೆ ಆತ. ಇಂದಿಗೂ ಇದು ಪ್ರಚಲಿತವಾಗಿರುವ ನಂಬಿಕೆ. ಕುರುಬರು ಭಾರತದಲ್ಲಿ ಮಾತ್ರವೇ ಅಲ್ಲ ಖಾನ್‌ದೇಶ (ಮುಸ್ಲಿಂ)ಗಳಲ್ಲಿಯೂ ಇದ್ದಾರೆ. ಅವರಿಗೆ ಕೊಂಚ ಖಾಯಿಲೆಯಾದರೂ ಸಾಕು ವೀರಗ್ರಾಮವಿರುವ ದಿಶೆಗೆ ಮುಖ ಮಾಡಿ ಶ್ರೀನಾಥನ ಹೆಸರು ಜಪಿಸಿದರೆ ಸಾಕು ಸರಿಯಾಗಿ ಬಿಡುತ್ತಾರೆ.” ಸರ್ಪ ವಿಷಹಾರಕತ್ವದಂತೆಯೇ ಸಂತಾನದಾತೃತ್ವ ಸಾಮರ್ಥ್ಯವೂ ಇವನಿಗುಂಟು ಎಂಬುದು ಇವನ ಉಪಾಸನಾ ಕ್ಷೇತ್ರದಲ್ಲಿರುವ ಶ್ರದ್ಧೆ. “ಸಂತತಿಯಿಲ್ಲದ ಸ್ತ್ರೀಯರು, ಆ ದೇವರ ಸೇವೆ ಮಾಡಲು ಆರಂಭಿಸಿದೊಡನೆ ಸಂತತಿ ಪ್ರಾಪ್ತವಾಗುವುದು” ಎಂಬ ಸಶ್ರದ್ಧೆಯ ಉಲ್ಲೇಖವನ್ನೂ ದಾಖಲಿಸಿದ್ದಾರೆ ಚರಿತ್ರಕಾರರು.

ಮಾಘಶುದ್ಧ ಪೌರ್ಣಮಿಯಿಂದ ಮಾಘದಶಮಿಯ ಕಾಲದಲ್ಲಿ ನೆರೆಯುತ್ತದೆ ಮ್ಹಸ್ಕೋಬಾನ ಜಾತ್ರೆ. ಇದರಲ್ಲಿ ಜೋಗೇಶ್ವರಿಯೊಂದಿಗೆ ಇವನ ಲಗ್ನ ನಡೆಯಿಸುವ ಒಂದು ಪ್ರಕ್ರಿಯೆಯುಂಟು. ಜಾತ್ರೆಗೆ ಕುರುಬರೇ ಅಲ್ಲದೆ ಇತರೆ ಜಾತಿ – ಪಂಗಡಗಳ ಸಾವಿರಾರು ಭಕ್ತರು ಸೇರುತ್ತಾರೆ; ಕೋಲುಗಳನ್ನು ತಿರುಗಿಸಲಾಗುತ್ತದೆ; ಗುಲಾಲು (ಗುಲಾಬಿ ಕುಂಕುಮ) – ಕೊಬ್ಬರಿಯನ್ನು ಬಹಳವಾಗಿ ಎರಚಲಾಗುವುದು. ‘ಚಾಂಗಭಲ‘ದ ಘೋಷಣೆ ಮುಗಿಲು ಮುಟ್ಟುತ್ತದೆ; ಭಕ್ತರ ಅದ್ಬುತ ‘ಪವಾಡ’ ನೋಡಲು ಲಭ್ಯ. ಮ್ಹಸ್ಕೋಬಾನ ಜಾತ್ರೆಯಲ್ಲಿ ಪ್ರಕಟವಾಗುವ ಅವನ ಉಪಾಸನೆಯ ಈ ಎಲ್ಲ ವಿಶೇಷಗಳು ಜೋತಿಬಾನ ಉಪಾಸನಾ – ವಿಶೇಷಗಳೊಂದಿಗೆ ತಂತೋತಂತಾಗಿ ಸರಿಹೊಂದುವುವು. ಅದಕ್ಕಿಂತಲೂ ಹೆಚ್ಚಾಗಿ ಮ್ಹಸ್ಕೋಬಾನ ಜಾತ್ರೆಯಲ್ಲಿ ಸಂಚರಿಸುವ ಯಾತ್ರಿಕನಿಗೆ ತಾನು ಜೋತಿಬಾನ ಜಾತ್ರೆಯಲ್ಲಿರುವೆನೋ ಎಂಬ ಅನುಭವ ಉಂಟಾಗುವಷ್ಟಿದೆ ಈ ಎರಡರ ನಡುವಣ ಸಾಮ್ಯ.

ಈ ಜಾತ್ರೆಯ ಮತ್ತೊಂದು ಲಕ್ಷಣೀಯ ವಿಶೇಷವೆಂದರೆ ದೇವ ಮಂದಿರದ ರಂಗಶಿಲೆಯ ಮೇಲೆ ಒಂಬತ್ತು ದಿನಗಳ ತನಕ ನಡೆವ ದೊಂಬರಾಟದ ನೃತ್ಯ. ಈ ನೃತ್ಯಸೇವೆಯನ್ನು ಸಾದರಪಡಿಸುವ ದೊಂಬರಾಟಿದವರಿಗೆ ಯಾವತ್ತೂ ತಪ್ಪದೆ ಈ ಜಾತ್ರೆಯಲ್ಲಿ ಹಾಜರಾಗಬೇಕಾದ್ದು ಅವಶ್ಯ. ಅನ್ಯಥಾ ದೇವರ ಅವಕೃಪೆಗೆ ಪಾತ್ರರಾಗಬೇಕಾದೀತೆಂಬ ಭಯ ತುಂಬಿದೆ ಅವರಲ್ಲಿ.

 

[1] Excavations at Bhokaradan (1973): S.B. Deo and R.S. Gupte, Nagpur, 1974, PP.1 – 5,6 202 – 203, 212, 215.

[2]ಮಠಗಾವಾಚಾ ಶಿಲಾಲೇಖ:ವಾ. ಅ. ಬಾಂಬಡೇಕರ, ಮುಂಬಯಿ, ೧೯೨೫, ಪು.೧೫೮.

[3]ಶ್ರೀರವಳನಾಥ ಆಣಿ ಕೋಕಣಾತೀಲ್ ದೇವಸ್ಕಿ: ಪು.ರಾ.ಬೆಹರೆ, ಬೋರಿವಿಲಿ, ೧೯೫೫, ಪು.೧೩.

[4]ಭಾರತೀಯ ಸಂಸ್ಕೃತಿಮೇ ಆರ್ಯೇತರಾಂಶ: ಶಿವಶೇಖರ ಮಿಶ್ರ, ಲಖನೌ, ೧೯೫೨, ಪು.೪೮ – ೫೩.

[5]ಪ್ರಾಚೀನ ಭಾರತೀಯ ಲೋಕಧರ್ಮ: ವಾಸುದೇವ ಶರಣ ಅಗ್ರವಾಲ, ಅಹಮದಾಬಾದ್, ೧೯೬೪, ಪು.೧೧೩ – ೧೪. ಮತ್ತೆ ನೋಡಿ: Ancient India Vol.4.P.152. plate 202 – 203. ಜೈನ ಆಗಮ ಸಾಹಿತ್ಯಮೇ ಭಾರತೀಯ ಸಮಾಜ: ಜಗದೀಶ್ ಚಂದ್ರ ಜೈನ್, ವಾರಾಣಸೀ, ೧೯೬೫, ಪು.೪೪೯ – ೪೫೦; ಹರ್ಷಚರಿತ: ಏಕ್‌ ಸಾಂಸ್ಕೃತಿಕ ಅಧ್ಯಯನ: ವಾಸುದೇವ ಶರಣ ಅಗ್ರವಾಲ, ಪಟನಾ ೧೯೫೩, ಪು.೧೩೪ – ೧೩೫. Dravidian India: T.R. Shesha Iyengar, Madras, 1925, P.97; The Sangam Age: K.A.Nilakanta Shastri, Madras, 1972. P.70; A Social History of the Tamils, Vol.1:K.K. Pillay, Madras, 1975. PP.497 – 498; studies in Goddess cults: J.N. Tiwari, PP.315 – 337.

[6] Archaelogy of Gujarat: H.D. Sankalia, Bombay, 1941, PP.218.

[7]ಶ್ರೀ ಮ್ಹಸ್ಕೋಬಾಚೇ ಚರಿತ್ರ, ೧೮೮೯; ಶ್ರೀನಾಥ ಮ್ಹಸ್ಕೋಬಾ ದೇವಾಚೇ ಚರಿತ್ರ, ೧೯೩೬.