ಯೋಗಿನೀ ಕೌಲಮತದ ಗಂಗೋತ್ರಿ

ಜನಪದ ಧರ್ಮದವರಲ್ಲಿನ ಕ್ಷೇತ್ರ ಮತ್ತು ಕ್ಷೇತ್ರಪತಿಯ ಯುಗಲವನ್ನೇ ಶಾಕ್ತ ತಾಂತ್ರಿಕರು ಶಕ್ತಿ ಮತ್ತು ಭೈರವರನ್ನಾಗಿ ಪಕ್ವಗೊಳಿಸಿದವರು. ಮಹಾರಾಷ್ಟ್ರದಲ್ಲಿನ ತ್ರಯಂಬಕ ಕ್ಷೇತ್ರದಲ್ಲಿ ಪ್ರಸಿದ್ಧವಾದ ಒಬ್ಬ ಜನಪದ ದೇವಿಯ ಉಪಾಸನೆಯಲ್ಲಿ ಹೇಳಲಾಗುವ ಕತೆಯಲ್ಲಿ ಶಾಕ್ತತಾಂತ್ರಿಕ ಸಂಪ್ರದಾಯವು ಉಗಮಗೊಂಡುದರ ಬಗ್ಗೆ ರೋಚಕವೂ, ಉದ್ಭೋದಕವೂ ಆದ ಅಂಶಗಳಿವೆ. ತ್ರಯಂಬಕ ಕ್ಷೇತ್ರದ ಮಹತ್ವವು ನಮ್ಮ ವಾಙ್ಮಯದಲ್ಲಿ ಮತ್ತೆ ಮತ್ತೆ ಉಲ್ಲೇಖಗೊಂಡಿದೆ. ಆದರೂ ಈ ಕ್ಷೇತ್ರ ಸಂಬಂಧವಾದ ‘ಕಥೆ – ಗಾಥೆಗಳು’ ಮತ್ತು ‘ಶ್ರುತಿ – ಸ್ಮೃತಿ‘ಗಳು ಪ್ರಾತಿನಿಧಿಕವೆಂಬಂತೆ ಸಂಚಯಗೊಂಡಿವೆ ‘ತ್ರಯಂಬಕ ಕ್ಷೇತ್ರಮಾಹಾತ್ಮ್ಯೆ’ಯಲ್ಲಿ.[1] ಪದ್ಮ ಪುರಾಣದಲ್ಲಿ ಅಂತರ್ಗತವಾಗಿರುವ ಹಾಗೂ ಸಾಕ್ಷೀಭೂತವಾಗಿರುವ ಈ ಮಾಹಾತ್ಮ್ಯೆ ಗ್ರಂಥವು ೩೪ ಅಧ್ಯಾಯಗಳುಳ್ಳದ್ದಾಗಿದ್ದು, ಇದರಲ್ಲಿ ೧೭೧೮ಶ್ಲೋಕಗಳಿವೆ. ಈ ಸ್ಥಳ ಮಾಹಾತ್ಮ್ಯೆಯಲ್ಲಿ ತ್ರಯಂಬಕ ಕ್ಷೇತ್ರದಲ್ಲಿನ ಬ್ರಹ್ಮಗಿರಿಯಾದಿ ಪರ್ವತಗಳು, ಗೋದಾವರಿ ಯಾದಿ ಪುಣ್ಯ ಪ್ರವಾಹಗಳು, ತ್ರಯಂಬಕೇಶ್ವರಾದಿ ದೇವತೆಗಳ ಮಾಹಾತ್ಮ್ಯೆಯ ಕಥೆ ಮತ್ತು ಆ ಸ್ಥಳಗಳಲ್ಲಿನ ಸಾಂಸ್ಕೃತಿಕ ಘಟನೆಗಳು ಮತ್ತು ಸ್ಥಿತ್ಯಂತರಗಳ ಮಾಹಿತಿಯನ್ನು ನೀಡುವಂಥ ಸ್ಮೃತಿ – ಗಾಥೆಗಳನ್ನು ಸಂಕಲನಗೊಳಿಸಲಾಗಿದೆ. ಇದರ ರಚನಾ ಕಾಲವನ್ನು ನಿಶ್ಚಿತವಾಗಿ ಹೇಳಲು ಆಗುವುದಿಲ್ಲವಾದರೂ, ಇದರಲ್ಲಿ ಸೂಚಿತವಾಗಿರುವ ತ್ರಯಂಬಕೇಶ್ವರನ ಸಾಂಸ್ಕೃತಿಕ ಇತಿಹಾಸದಿಂದ ಇದು ನಿಃಸಂಶಯವಾಗಿ ಕ್ರಿ.ಶ. ೧೨ – ೧೨ನೆಯ ಶತಮಾನಕ್ಕೆ ಮುಂಚಿನದ್ದೇ ಆಗಿರಬೇಕು.

ಈ ಶಿವರೂಪ ಬ್ರಹ್ಮಗಿರಿಯ ಎಡಗಡೆಯ ಭಾಗವನ್ನು ನೀಲಗಿರಿ ಎಂದು ಕರೆಯಲಾಗಿದ್ದು ಅದನ್ನು ಶಿವನ ವಾಮಜಾನು ಎಂದೊಪ್ಪಲಾಗಿದೆ (ಅಯಂ ನೀಲಗಿರಿಂಸ್ತಸ್ಯ ವಾಮಜಾನುಃ ಪ್ರಕೀರ್ತಿತಃ |‘೭.೧). ಶಿವನು ತನ್ನ ವಾಮಾಂಕದ ಮೇಲೆ – ನೀಲಗಿರಿ – ಪಾರ್ವತಿಯನ್ನು ಕೈಯಲ್ಲಿ ಹಿಡಿದು ಕುಳ್ಳಿರಿಸಿಕೊಂಡಿದ್ದಾನೆ (೭.೧೬). ಈ ನೀಲಪರ್ವತ ವಾಸಿನಿ ಭವಾನಿಯು ಇಲ್ಲಿ ‘ನೀಲಾಂಬಾ‘ಳಾಗಿ ವಿರಾಜಮಾನಳಾಗಿದ್ದಾಳೆ. ಮಾಹಾತ್ಮ್ಯೆಕಾರರು ಈ ನೀಲಪರ್ವತ ವಾಸಿನಿ ಜಗನ್ಮಾತೆಯನ್ನು ಕೆಲವೊಮ್ಮೆ ‘ನೀಲಾಂಬಾ’ ಎಂಬುದಾಗಿಯೂ ಉಲ್ಲೇಖಿಸಿದ್ದಾರೆ. ಅಲ್ಲದೆ ಆಕೆ ರೇಣುಕೆಯೇ ಹೌದು (೭.೩೧) ಎಂಬುದಾಗಿ ನಿಃಸಂದಿಗ್ಧ ಶಬ್ದಗಳಲ್ಲಿ ಹೇಳಿರುವುದುಂಟು. ಜೊತೆಗೆ ಅವಳ ದರ್ಶನ ಮಹಿಮೆಯು ಉತ್ಕಟ ಶಬ್ದಗಳಿಂದ ವರ್ಣಿತವಾಗಿದೆ:

ನೀಲಪರ್ವತವಾಸಿನ್ಯಾ ರೇಣುಕಾಯಾಃ ಪದಾಂಬುಜಮ್ |
ಯೇ ಪಶ್ಯಂತಿ ನರಾ ರಾಜಾನ್ ನ ತೇ ಯಾಂತಿ ಪುನರ್ಭವಮ್ || (.೩೨)

[ಹೇ ರಾಜಾ, ಈ ನೀಲಪರ್ವತ ವಾಸಿನಿಯಾದ ರೇಣುಕೆಯ ಚರಣ ಕಮಲವನ್ನು ಯಾವ ನರರು ದರ್ಶಿಸುವರೋ, ಅವರೆಲ್ಲ ಪುನಃ ಪುನಃ ಜನುಮವೆತ್ತುವ ಚಕ್ರದಿಂದ ಮುಕ್ತಿ ಪಡೆವರು.]

ರೇಣುಕೆಯ ವಸತಿಸ್ಥಾನವಾದ ಈ ನೀಲಗಿರಿಯು ದತ್ತಾತ್ರೇಯನ ಸಿದ್ಧಿಕ್ಷೇತ್ರವೆಂಬುದಾಗಿಯೂ ಪ್ರಖ್ಯಾತಿ ಪಡೆದಿದೆ. ‘ಸಿದ್ಧಿಕ್ಷೇತ್ರಮಿದಂ ಪುಣ್ಯಂ ದತ್ತಸ್ಯಾಕ್ಷಯಕಾರಕಮ್‌‘ |(೭.೨೦) ಮತ್ತು ‘ದತ್ತಾತ್ರೇಯಂ ಹರಿಂ ಸಾಕ್ಷಾತ್ ವಸಂತಂ ನೀಲಪರ್ವತೇ |’(೭.೨೬) ಎಂಬುದಾಗಿ ಮತ್ತೆ ಮತ್ತೆ ಹೇಳಲಾಗಿದೆ. ಮಾಹಾತ್ಮ್ಯೆಕಾರರು ಹೀಗೂ ಮಾಹಿತಿ ನೀಡಿದ್ದಾರೆ, ಇದೇ ಸಿದ್ಧಕ್ಷೇತ್ರದಲ್ಲಿ ಪರಶುರಾಮನು ಸಿದ್ಧಿಪಡೆದನು (‘ಜಾಮದಗ್ನ್ಯೇನ ರಾಮೇಣ ಸಿದ್ಧಿಃ ಪ್ರಾಪ್ತತ್ರ ಭೂಮಿಪ |’(೭.೩೨)

‘ತ್ರ್ಯಂಬಕಕ್ಷೇತ್ರ ಮಾಹಾತ್ಮ್ಯೆ‘ಯಲ್ಲಿನ ನೀಲಗಿರಿ ವಿಚಾರವನ್ನು ಗಮನಿಸಿದಾಗ ಹೀಗೆನಿಸುವುದು, ಬ್ರಹ್ಮಗಿರಿಯ ಎಡಭಾಗದ ದಾರಿಯಲ್ಲಿ ರೇಣುಕೆಯ ಒಂದು ಸ್ಥಾನ ಪ್ರಾಚೀನ ಕಾಲದಿಂದಲೂ ಇದ್ದು, ಅಲ್ಲಿಯೂ ಮಾಹೂರ ಕ್ಷೇತ್ರದಲ್ಲಿನಂತೆ ರೇಣುಕಾ – ದತ್ತಾತ್ರೇಯ – ಪರಶುರಾಮ ಇವರುಗಳ ಕಥಾಚಕ್ರ ಸಂಬಂಧಪಡೆದಿದೆ.

ಬ್ರಹ್ಮಗಿರಿಯ ದಕ್ಷಿಣ ಭಾಗದಲ್ಲಿ ಕೋಲಂಬಾ ಎಂಬ ದೇವಿಯ ನೆಲೆಯುಂಟು. ಈ ಕೋಲಂಬಾ ಮತ್ತು ನೀಲಪರ್ವತವಾಸಿನಿ ನೀಲಾಂಬಾ ಇಬ್ಬರೂ ಒಂದೇ ಎಂಬುದು ಮಾಹಾತ್ಮ್ಯೆಕಾರರ ಅಭಿಪ್ರಾಯ. ಪೂರ್ವಕಾಲದಲ್ಲಿ ಈ ಜಾಗೆಯಲ್ಲಿದ್ದ ಒಂದು ಗುಹೆಯಲ್ಲಿ ಕೋಲಾಸುರ ಎಂಬ ಹೆಸರಿನ ದೈತ್ಯ – (ಹಿರಣ್ಯಾಕ್ಷನ ಭಾವ) ನಿರುತ್ತಿದ್ದ. ಗೌತಮನ ಪ್ರಾರ್ಥನೆಯನುಸಾರ ನೀಲಾಂಬಾ ರೇಣುಕೆಯು ಗಂಗಾದ್ವಾರಕ್ಕೆ ಬಂದು ಅವನನ್ನು ವಧಿಸಿದಳು. ಕೊಲ್ಹಾಸುರನು ತನ್ನ ಕೊನೆಗಳಿಗೆಯಲ್ಲಿ ಮಾಡಿಕೊಂಡ ಪ್ರಾರ್ಥನೆಯಂತೆ ‘ತನ್ನಾಮ ಧಾರಿಣೀ’ (ಕೋಲಾಂಬಾ) ಯಾಗಿ ಅಲ್ಲಿಯೇ ವಿರಾಜಮಾನಳಾದಳು ಎಂಬುದಾಗಿದೆ ಮಾಹಾತ್ಮ್ಯೆಕಾರರ ಉಲ್ಲೇಖ(೧೪. ೪೧ – ೬೫). ಈ ಕಥೆಯು ‘ಕೋಲಾಂಬ’ ಎಂಬ ಹೆಸರಿನ ಸ್ಪಷ್ಟೀಕರಣವಾಗಿದೆ (Explanatory Tale) ಎಂಬುದು ಸುಸ್ಪಷ್ಟ. ಇಂದಿಗೂ ಕೋಲಾಂಬೆಯ ತಾಣವಿರುವ ಬ್ರಹ್ಮಗಿರಿಯ ಭಾಗವನ್ನು ಕೋಲಗಿರಿ, ಕೋಲಾಚಲ ಅಥವಾ ಕೋಲಾಗಢ ಎಂಬ ಹೆಸರಿನಿಂದ ಕರೆಯುತ್ತಿದ್ದಾರೆ.

ಜ್ಞಾನದೇವನ ಕಾಲದಲ್ಲಿ ಪ್ರಖ್ಯಾತನಾಗಿದ್ದ ಮಹಾನುಭಾವ ಪಂಥದ ಸಂಸ್ಥಾಪಕ ಚಕ್ರಧರ ಸ್ವಾಮಿಗೂ ತ್ರಯಂಬಕ ಕ್ಷೇತ್ರದೊಂದಿಗೆ ಸಂಬಂಧವಿತ್ತು. ಒಂದಾನೊಂದು ಕಾಲ, ಶಕ ೧೧೮೯ರ ಆಶ್ವೀಜದಲ್ಲಿ ಮೆಹಕರದ ಮೂಲಕ ಸ್ವಾಮಿಯವರು ಪೈಠಣಕ್ಕೆ ಬಂದರು. ಸಿಂಹಸ್ಥ ಯಾತ್ರೆಯ ನಿಮಿತ್ತ ತ್ರಯಂಬಕೇಶ್ವರಕ್ಕೆ ಹೊರಟ ದಾರಿ ಇದು. ತ್ರಯಂಬಕೇಶ್ವರನಲ್ಲಿ ಪ್ರತಿಜ್ಞೆ ಹೊತ್ತ ಮೇಲೆ ಸ್ವಾಮಿಗಳು ಗಂಗಾಧ್ವಾರಕ್ಕೆ ಬಂದು ಕೆಲಕಾಲ ವಿಶ್ರಮಿಸಿದರು. ಆಗ್ಗೆ ಅಲ್ಲಿನ ಕೋಳಾಯಿಯೆಂಬ ದೇವಿಯ ನಾಭಿಯಿಂದ ನೀರು ಒಸರುತ್ತಿದ್ದುದನ್ನು ಕಂಡ ಸ್ವಾಮಿಯ ಡಖಲೆ ಎಂಬ ಶಿಷ್ಯನೊಬ್ಬ ದೇವಿಯ ಹೊಕ್ಕುಳಲ್ಲಿ ತನ್ನ ಬೆರಳನಿಟ್ಟನು. ನಂತರ ದೇವಿಯನ್ನು ಉದ್ದೇಶಿಸಿ, “ನಿಂತು ಗಂಗಾತೀರದ ಊರುಗಳಿಗಯ್ವೆ: ಈಗ ನನ್ನ ಬೆರಳ ನೂಕಿ ಹರಿಯಲಾರೆ:”. ಡಖಲೆಯು ದೇವಿಯನ್ನು ಕುರಿತು ಆಡಿದ ಮಾತು ಸ್ವಾಮಿಯವರಿಗೆ ರುಚಿಸಲಿಲ್ಲ. ಆ ಕಾರಣ ಅವನನ್ನು ಕುರಿತು ಹೀಗೆ ಹೇಳಿದರು, “ಡಖಲೆ ಹೀಗೆ ಆಡಬಾರದು ದೇವಿಗೆ:”.

ಡಖಲೆಯು ಗಂಗಾದ್ವಾರದ ಕೋಳಾಯಿ ದೇವಿಗೆ ಮಾಡಿದ ಅವಮಾನ ಮತ್ತು ಸ್ವಾಮಿಯು ಆತನಿಗೆ ಆ ಕುರಿತು ನೀಡಿದ ಸಮಜಾಯಿಷಿ ಕಥೆ ಬಂದಿರುವುದು ಲೀಳಾಚರಿತ್ರೆಯಲ್ಲಿ. ಕೋಳಾಯಿಯ ಉಲ್ಲೇಖವು ಸ್ಥಳಪುರಾಣದಲ್ಲಿ ಹೀಗೆ: ‘ಬ್ರಹ್ಮಗಿರೀಚಾಂ ಅಧೋಪರಿಂ ಕೋಳಾಏ..’ ಈ ಕೋಳಾಯಿಯೇ ತ್ರಯಂಬಕೇಶ್ವರ ಮಾಹಾತ್ಮ್ಯೆಯಲ್ಲಿ ವರ್ಣಿಸಲಾಗಿರುವ ಕೋಲಾಂಬಾ (ಅಂಬಾ = ಆಯಿ) ಎಂದು ಮತ್ತೊಮ್ಮೆ ಸ್ಪಷ್ಟಪಡಿಸಬೇಕಾದ ಅಗತ್ಯವಿಲ್ಲ.

ತ್ರಿಕ (ಅದ್ವೈತೀ) ಶೈವ ಪರಂಪರೆಯ ಪ್ರವರ್ತಕನೆನಿಸಿದವನು ತ್ರ್ಯಂಬಕ. ಅವನ ತ್ರ್ಯಂಬಕ ಮಠದ ಒಂದು ಶಾಖೆಯು ಕಾಮರೂಪದಲ್ಲಿ ಪ್ರತಿಷ್ಠಾಪಿತವಾಗಿದೆ. ಈ ಶಾಖೆಯು ಅರ್ಧತ್ರ್ಯಂಬಕ ಮಠ ಇಲ್ಲವೇ ಉತ್ತರ ದುಹಿತೃ ಪರಂಪರೆಯಲ್ಲಿನ ಮಚ್ಛಂದ ಅಥವಾ ಮೀನ ಎಂಬ ಸಿದ್ಧ, ಕಾಲ ಕ್ರಿ.ಶ. ಐದನೆಯ ಶತಮಾನ. ಈ ಮಠದೊಂದಿಗೆ ಸಂಬಂಧ ಹೊಂದಿದ್ದ ತಾಂತ್ರಿಕ ಪಂಥವು ‘ಯೋಗಿನೀ ಕೌಲಮತ’ ಎಂಬ ಹೆಸರಿನಿಂದ ಪ್ರಖ್ಯಾತವಾಗಿತ್ತು.

ಅರ್ಧತ್ರ್ಯಂಬಕ ಮಠದಲ್ಲಿನ ಯೋಗಿನೀ ಕೌಲಮತದ ಪ್ರವರ್ತನ ಇತಿಹಾಸವು ಹೇಳುವಂತೆ, ಈ ತಾಂತ್ರಿಕ ಸಂಪ್ರದಾಯವು ತನ್ನ ಆದಿಪೀಠವು ತ್ರ್ಯಂಬಕ ಮಠವೆಂದೇ ಒಪ್ಪಿಕೊಂಡಿದೆ. ಯೋಗಿನೀ ಕೌಲಮತದ ಪ್ರವರ್ತಕ ಮಚ್ಛದ ಅಥವಾ ಮೀನ ಎಂಬುವವನ ಪತ್ನಿಯ ಹೆಸರು ಉಲ್ಲೇಖಗೊಂಡಿರುವುದು ‘ಕುಂಕಣಾಂಬಾ’. ಕುಂಕಣಾಂಬಾ (ಕುಂಕಣಾ+ಅಂಬಾ) ಎಂಬ ಹೆಸರನ್ನು ಉಚ್ಚರಿಸಿದೊಡನೆ ನಮ್ಮ ನೆನಪಿಗೆ ದೇವಿ ರೇಣುಕೆ, ಕುಂಕಣವು ಈಕೆಯ ಒಂದು ಪರ್ಯಾಯ ನಾಮವೇ. ಅಲ್ಲದೆ ಕುಂಕಣಾ – ರೇಣುಕಾ ಎಂಬೆರಡೂ ಹೆಸರುಗಳು ಏಕಾರ್ಥಕಗಳೇ, ಕುಂಕಣಾ (ಕುಂ = ಪೃಥ್ವಿ, ಕಣ = ರೇಣುರೂಪ) ಎಂದರೆ ಭೂಮಿಯ ಕಣಗಳಿಂದ ಮಾಡಿದ ಮತ್ತು ರೇಣುಕಾ (ರೇಣು+ಕಾ) ಎಂದರೆ ರೇಣುಮಯಿ. ಅಂದರೆ ಈ ಎರಡೂ ಹೆಸರುಗಳು ಭೂದೇವಿಯದ್ದೇ ಆಗಿರುವುವು. ಕುಂಕಣ ಅಥವಾ ರೇಣುಕಾ ದೇವಿಯನ್ನು ದಕ್ಷಿಣ ಭಾರತದಲ್ಲಿ (ವಿಶೇಷವಾಗಿ ಆಂಧ್ರಪ್ರದೇಶ, ಕರ್ನಾಟಕ, ಕೊಂಕಣ ಮತ್ತು ಗೋಮಾಂತಕ ಭಾಗಗಳಲ್ಲಿ) ಹುತ್ತದ ರೂಪದಲ್ಲಿಯೇ ಪೂಜಿಸುತ್ತಿರುವುದು ವಿಶೇಷ ಗಮನೀಯ. ಹುತ್ತವು ಭೂಮಿಯ ಯೋನಿಯ ಪ್ರತೀಕ, ಈ ಪ್ರತೀಕದ ಅನುಷಂಗವಾಗಿಯೇ ಹುತ್ತಸ್ಥ ನಾಗನನ್ನು ಪುರುಷ ತತ್ತ್ವದ ಅಂದರೆ ಕ್ಷೇತ್ರಪಾಲಕ ಪ್ರತಿನಿಧಿಯಾಗಿ ಮಾನ್ಯ ಮಾಡಿರುವುದು. ಕುಂಕಣಾ ದೇವಿಯು ಪ್ರಮುಖ ಅಧಿಷ್ಠಾತ್ರಿಯಾಗಿರುವ ಪ್ರದೇಶವು ಕೌಂಕಣ ಅಥವಾ ಕೊಂಕಣಾ ಎಂಬ ಹೆಸರು ಪಡೆದಿದೆ. ತ್ರ್ಯಂಬಕೇಶ್ವರನ ಪರಿಸರದಲ್ಲಿ ಕೊಂಕಣ ಎಂಬ ಹೆಸರಿನ ಒಬ್ಬ ದೇವಿಯು ಇಂದಿಗೂ ಆದಿವಾಸಿ ಪಂಗಡದಲ್ಲಿ ಪೂಜಿಸಲ್ಪಡುತ್ತಿದ್ದಾಳೆ. ಅಲ್ಲದೆ ಈ ಭಾಗದಲ್ಲಿ ಕುಂಕಣಾಳ ಉಪಾಸಣೆ ಇಂದಿಗೂ ಪ್ರಚಲಿತದಲ್ಲಿರುವ ಉದಾಹರಣೆಗಳು ಉಪಲಬ್ಧವಾಗಿವೆ.

ಕೌಲಮತವು ಕುಂಕಣಾ ಅಥವಾ ರೇಣುಕೆಯ (ಅಂದರೆ ಭೂಮಿಯ) ಜನಪದ ಧರ್ಮದ ಉಪಾಸನೆಯಿಂದ ಉತ್ಕ್ರಾಂತಗೊಂಡುದಾಗಿದೆ. ‘ಕು’ ಎಂದರೆ ಭೂಮಿ. ಭೂಮಿ ವಾಚಕವಾದ ಈ ಏಕಾಕ್ಷರಕ್ಕೆ ‘ಲ’ ಎಂಬ ಸ್ವ ಅರ್ಥಕ ಪ್ರತ್ಯಯವು ಸೇರಿ ‘ಕುಲ’ ಎಂಬ ರೂಪವು ಸಿದ್ಧವಾಯಿತು. ತಾಂತ್ರಿಕ ಪರಿಭಾಷೆಯಲ್ಲಿ ‘ಕುಲ’ ಎಂದರೆ ‘ಶಕ್ತಿ’ ಎಂಬುದು ವಿದ್ವಾಂಸರಿಗೆ ತಿಳಿದಿರುವಂಥ ವಿಷಯವೇ. ಕುಲವು ಭೂಮಿ ಸಂಬಂಧಿತ, ಇದರಿಂದಲೇ ‘ಕೌಲಮತ’ ಎಂಬ ಸಾಂಪ್ರದಾಯಿಕ ಹೆಸರು ಜನಪದ ಧರ್ಮದಿಂದಲೇ ರೂಢಗೊಂಡಿತು ಎಂಬುದಕ್ಕೆ ನಮ್ಮ ಜೀವನದಲ್ಲಿಯೇ ಪುರಾವೆಗಳು ಲಭಿಸುತ್ತವೆ ಇಂದಿಗೂ. ಮಚ್ಛಂದಾದಿ ತಾಂತ್ರಿಕರು ಈ ಜನಪದೀಯ ಧರ್ಮಕ್ಕೆ ತಾಂತ್ರಿಕ ಸ್ವರೂಪವನ್ನು ಕೊಟ್ಟು, ಅದಕ್ಕೆ ‘ಕೌಲಮತ’ ಎಂಬ ಹೆಸರನ್ನೂ ಕೊಟ್ಟರು. ಮಚ್ಛಂದನ ಪತ್ನಿಯ, ಶಕ್ತಿಯ ಅಂತೆಯೇ ಮುದ್ರಾಯೋಷಿತೆಯ ಹೆಸರು ಕುಂಕಣಾಂಬಾವಿದ್ದಿರಬೇಕು ಎಂಬ ಸಂಗತಿಯನ್ನು ಈ ಸಂದರ್ಭದಲ್ಲಿ ಅವಶ್ಯಗಮನಿಸುವಂಥದ್ದು.

ಮಚ್ಛಂದನ ಕೌಲ ಸಂಪ್ರದಾಯದ ಪೂರ್ಣ ಹೆಸರು ‘ಯೋಗಿನೀ ಕೌಲಮತ’ ಎಂಬುದನ್ನು ಈಗಾಗಲೇ ಗಮನಿಸಿದ್ದೇವೆ. ಯೋನಿ ರೂಪದಲ್ಲಿ ಪೂಜಿಸಲ್ಪಡುವ ಭೂದೇವಿ ರೇಣುಕೆಯು ಆಲಂಪುರ ಇತ್ಯಾದಿ ಪೀಠಗಳಲ್ಲಿ ‘ಜೋಗುಳಾಂಬಾ’ ಎಂಬ ಲೌಕಿಕ ಹೆಸರಿನಿಂದ ಪ್ರಖ್ಯಾತಳಾಗಿದ್ದಾಳೆ. ‘ಜೋಗುಳಾಂಬಾ’ ಎಂದರೆ ‘ಸಂತಾನದಾತ್ರಿ’ ಮಾತೆ. ಈ ದಾಕ್ಷಿಣಾತ್ಯ ಹೆಸರಿನ ಸಂಸ್ಕೃತೀಕರಣವು ಯುಗಲಾ, ಯೋಗೀನಿ, ಯೋಗೇಶ್ವರಿ (ಕ್ಷೇತ್ರಪಾಲಕ ದೇವ ಭೈರವನ ಸಹಚರಣಿ ಯೋಗೇಶ್ವರಿ)ಯೇ ಮೊದಲಾದ ಸ್ವರೂಪಗಳಲ್ಲಿ ಆಗಿದೆ. ಈ ಹಿನ್ನೆಲೆಯಲ್ಲಿ ಯೋಗೀನೀ ಕೌಲಮತ ಎಂದರೆ ಸಂತಾನದಾತ್ರೀ ಭೂದೇವಿಯ ಯೋನಿಪೂಜಾ ಸಂಪ್ರದಾಯ ಎಂಬುದಾಗಿ ಸ್ಪಷ್ಟೀಕರಣ ಬಂದು ಬಿಡುತ್ತದೆ ಅನಾಯಾಸವಾಗಿಯೇ. ಲೋಕ ಧರ್ಮವು ತಾಂತ್ರಿಕ ಪಂಥದಲ್ಲಿ ಉಂಟು ಮಾಡಿದ ಸಂಕ್ರಮಣ ವಿಚಾರವಂತೂ ಒಂದು ಬೃಹತ್ ಪ್ರಬಂಧದ ವಿಷಯವೇ ಆದೀತು ಎಂಬುದನ್ನು ಗಮನದಲ್ಲಿಡುವಂಥದ್ದು.

ಇಲ್ಲಿ ಕೌಲಮತದ ಇತಿಹಾಸ ಅಥವಾ ಅದರ ಸ್ವರೂಪವನ್ನು ಹೇಳಿ ಪ್ರಯೋಜನವಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಬಹಳ ವಿಶೇಷವಾಗಿ ಮನಸ್ಸಿಗೆ ತಂದುಕೊಳ್ಳಬೇಕಾದುದೆಂದರೆ ತ್ರ್ಯಂಬಕ ಮಠವು ಯೋಗಿನೀ ಕೌಲಮತದ ಗಂಗೋತ್ರಿ. ಈ ಮತವು ದಕ್ಷಿಣದಲ್ಲಿನ ಭೂ ದೇವಿಯ ಯೋನಿಪೂಜಾ ಜನಪದ ಸಂಪ್ರದಾಯದಿಂದ ತಾಂತ್ರಿಕರು ಉತ್ಕಾಂತಗೊಳಿಸಿದುದಾಗಿದೆ. ಜನಪದ ಧರ್ಮದ ಮೂಲದಿಂದಲೇ ತಂತ್ರಧರ್ಮದ ವಾಸ್ತುಶಿಲ್ಪವು ರೂಪುಗೊಂಡಿದೆ ಎಂಬುದಕ್ಕೆ ಬಲಿಷ್ಠ ಪುರಾವೆಯಾಗಿ ಯೋಗೀನೀ ಕೌಲಮತದ ಹುಟ್ಟಿನ ರಹಸ್ವಯನ್ನು ಅರಿಯುವುದು ಬಹಳ ಮುಖ್ಯ ಸಂಗತಿ.

ಬ್ರಹ್ಮಗಿರಿಗೆ ‘ಕೌಲಗಿರಿ’ ಅಥವಾ ‘ಕೌಲಗಢ’ ಎಂಬ ಪರ್ಯಾಯ ನಾಮಗಳೇಕೆ ಬಂದುವು? ಮತ್ತು ಅದರ ಪಕ್ಕದಲ್ಲೇ ಇರುವ ರೇಣುಕಾರೂಪಿ ಕೌಲಾಂಬಿಕೆಯ ತಾಣದ ಮಹತ್ವವೇನು? ಎಂಬುದನ್ನು ಕುರಿತು ಮತ್ತೆ ಸ್ಪಷ್ಟಪಡಿಸುವ ಅವಶ್ಯಕತೆಯೂ ಇಲ್ಲ.[2]

ಉತ್ತಾನಾ ಮಹೀ

ಶ್ರೀಮತಿ ಸ್ಟೆಲ್ಲಾ ಕ್ರಾಮರಿಶ್ ಅವರು ‘ಲಜ್ಜಾಗೌರಿ‘ಯನ್ನು ‘ಉತ್ತಾನಪಾದ ಅದಿತಿ’ ಎಂದಿದ್ದಾರೆ. ಅಲ್ಲದೆ ಅದರ ಮಸ್ತಕದ ಜಾಗೆಯಲ್ಲಿರುವ ಕಮಲವು ಭಾರತೀಯ ಪರಂಪರೆಯಲ್ಲಿ ಸೃಷ್ಟಿಯ ಪ್ರತೀಕವಾಗಿರುವುದರಿಂದ, ಅದು ಅವಳ ವ್ಯಕ್ತಿತ್ವದ ಸಂಪೂರ್ಣ ಪ್ರತೀಕರೂಪವಾಗಿದೆ ಎಂಬುದನ್ನು ಆಸ್ವಾದಕ ಶೈಲಿಯಲ್ಲಿ ವಿಶದಪಡಿಸುತ್ತದೆ. ಆಲಂಪುರದ ‘ಲಜ್ಜಾಗೌರಿ’ಯ ಮೂರ್ತಿಯನ್ನು ಕುರಿತ ಸಂದರ್ಭದಲ್ಲಿಯೇ ಶ್ರೀಮತಿ ಕ್ರಾಮರಿಶ್ ಅವರ ಅಭಿಪ್ರಾಯವನ್ನು ವಿವರಿಸಲಾಗಿದೆ. ಈಜಿಪ್ಟ್‌ನಲ್ಲಿಯ ‘ಬೌಬೋ’ ಎಂಬ ಹೆಸರಿನ ಮಾತೃದೇವತೆಗಳ ಮೂರ್ತಿ ವರ್ಗವನ್ನು ಅವರು ತಮ್ಮ ಕಣ್ಣೆದುರಿಗಿಟ್ಟುಕೊಂಡು ‘ಲಜ್ಜಾಗೌರಿ’ಯನ್ನು ಉತ್ತಾನಪಾದ ಅದಿತಿಯೊಂದಿಗೆ ಜೋಡಿಸಿರುವರು. ಈ ಮೂರ್ತಿಯು ರೋಮನ್ ಸಂಸ್ಕೃತಿಯ ಸಂಪರ್ಕ ಕಾಲದಲ್ಲಿ ‘ಬೌಬೋ’ ಪ್ರಕಾರದ ಮೂರ್ತಿಯ ಅನುಕರಣೆಯಿಂದಾಗಿ ಭಾರತದಲ್ಲಿ ಪ್ರಚಲಿತವಾಯಿತು ಎಂಬುದಾಗಿ ಹೇಳುವಂತಹ ಮೋಹ ಅವರಲ್ಲಿ ಬರಲಿಲ್ಲ. ಇದು ಅವರ ಗಂಭೀರ ಪ್ರಜ್ಞೆಯ ವೈಶಿಷ್ಟ್ಯವೆಂಬುದರಲ್ಲಿ ಸಂದೇಹವಿಲ್ಲ.

ಶ್ರೀಮತಿ ಕ್ರಾಮರಿಶ್ ಅವರ ದೃಷ್ಟಿಯೆದುರು ಆಲಂಪುರ ಮತ್ತು ಮಹಾಕೂಟದಲ್ಲಿನ ‘ಲಜ್ಜಾಗೌರಿ’ ಮೂರ್ತಿಗಳಿದ್ದವು. ಕೇವಲ ಮೂರ್ತಿಗಳಷ್ಟೇ ಇದ್ದವು; ಜೊತೆಗೆ ವೈದಿಕ ಅದಿತಿಯ ಮಹಾಮಹಿಮಾಮಯ ರೂಪವು ಪರಿಚಿತವಿತ್ತು ಅವರಿಗೆ, ಹಾಗೆಯೇ ಅವಳ ಪೃಥ್ವೀರೂಪದ ಬಗ್ಗೆಯೂ ಅರಿವಿತ್ತು. ಎಂತಲೇ ಅವರು ಈ ವಿಶಿಷ್ಟ ಮೂರ್ತಿಗಳು ವೇದಗಳಲ್ಲಿನ ಉತ್ತಾನ ಪಾದ ಅದಿತಿಯ ಮೂರ್ತಿಗಳಾಗಿವೆ ಎಂದು ನಿಃಶಂಕೆಯಿಂದ ಹೇಳಿದ್ದು. ಅದಿತಿಯಿಂದ ಲಜ್ಜಾಗೌರಿಯ ವರೆಗಿನ ಪ್ರದೀರ್ಘ ಪರಂಪರೆಯ ಪ್ರಮಾಣಗಳನ್ನು ಆಧಾರಭೂತವಾಗಿ ಸ್ಪಷ್ಟಪಡಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರ ಪ್ರಜ್ಞೆಗೆ ಹೊಳೆದ ಒಂದು ಮಹಾ ಸತ್ಯವನ್ನು ಭಾರತೀಯ ಪರಂಪರೆಯಲ್ಲಿನ ಪ್ರಮಾಣಗಳಿಂದ ಸ್ಪಷ್ಟಪಡಿಸುವುದಕ್ಕೆ ಸಾಧ್ಯವಿದೆ. ಪುರಾತತ್ವವನ್ನು ಬಿಟ್ಟು ಬೇರೆಯ ಪ್ರಮಾಣಗಳನ್ನು ಅಪೇಕ್ಷಿಸುವ ಡಾ. ಸಂಕಾಲಿಯಾ ಅವರು ಕ್ರಾಮರಿಶ್‌ರ ಅಭಿಪ್ರಾಯವನ್ನು ವಿರೋಧಿಸಿದ್ದಾರೆ. ಅವರು ಆಗ್ರಹ ಪೂರ್ವಕವಾಗಿ ಪ್ರತಿ ಪಾದಿಸುವುದೆಂದರೆ, ಲಜ್ಜಾಗೌರಿಯ ಮೂಲ ‘ಬೌಬೋ’ ಎಂಬ ವಿದೇಶಿ ಮಾತೃ ದೇವತೆಯಲ್ಲಿದೆ.[3]

ಲಜ್ಜಾಗೌರಿ ವಿಷಯವಾಗಿ ಇರುವ ಈ ಪೂರ್ವ ಚರ್ಚೆಯ ಹಿನ್ನೆಲೆಯಲ್ಲಿ ನಾನು ಆ ದೇವಿಯ ಉಪಾಸನಾ ಕೇಂದ್ರಗಳನ್ನೆಲ್ಲ ಶೋಧಿಸಿದೆ; ಅಲ್ಲಿನ ಉಪಾಸನಾ ಪರಂಪರೆಯನ್ನು ಗಮನಿಸಿದೆ; ಉಪಾಸಕರ ಧೋರಣೆಗಳನ್ನು ಶೋಧಿಸಿದರೆ; ಕಥೆ – ಗಾಥೆಗಳನ್ನು ಪರಿಚಯ ಮಾಡಿಕೊಂಡೆ; ಅಲ್ಲಿ ಪ್ರಕಟಗೊಂಡಿರುವ ಪ್ರತೀಕಗಳನ್ನೆಲ್ಲ ಆಧಾರವಾಗಿಟ್ಟುಕೊಂಡು ವೇದಕಾಲದಿಂದ ಹಿಡಿದು ವರ್ತಮಾನದವರೆಗೂ ಸೃಷ್ಟಿಶೀಲ ದೇವತೆಯ ಸಾತತ್ಯವು ನಮ್ಮ ಪರಂಪರೆಯಲ್ಲಿ ಹೇಗೆ ಅಸ್ತಿತ್ವದಲ್ಲಿದೆ ಎಂಬುದನ್ನು ಬೇರೆ ಬೇರೆ ನೆಲೆಗಳಿಂದ ದರ್ಶಿಸಿದ್ದೇನೆ. ಲಜ್ಜಾಗೌರಿ, ಜೋಗುಳಾಂಬಾ, ಮಾತಂಗಿ, ಯಲ್ಲಮ್ಮಾ, ರೇಣುಕಾ, ಕುಂಕಣಾ, ಕೋಲಂಬಿಕಾ, ಕೋಟವೀ ಈ ಎಲ್ಲವೂ ಅದಿತಿ – ಪೃಥ್ವಿಯ ರೂಪಗಳೇ ಆಗಿವೆ. ಅಥವಾ ಅದಿತಿಯೊಂದಿಗೆ ಏಕರೂಪತೆಯನ್ನು ಸಾಧಿಸಲು ಇಚ್ಛಿಸುವಂತಹ ದೇವಿಯರ ರೂಪಗಳಾಗಿವೆ ಎಂದು ಹೇಳುತ್ತಿರುವುದು ಸರಳವಾಗಿಯಂತೂ ಅಲ್ಲ, ಈ ಎಲ್ಲಾ ಪ್ರಮಾಣಗಳನ್ನು ದೃಢ ಸ್ವರೂಪದಲ್ಲಿ ಗಮನಿಸಿದಯೇ.

‘ಲಜ್ಜಾಗೌರಿ’ ಎಂಬ ಯಥಾರ್ತ ನಾಮದಿಂದ ಯಾವ ದೇವಿಯ ದರ್ಶನ ಪಡೆದಿರುವೆನೋ, ಅವಳ ಆ ಸರ್ವೋತ್ಕೃಷ್ಟ ಮೂರ್ತಿಯಿರುವುದು ಆಲಂಕಪುರದಲ್ಲಿ. ಆ ಮೂರ್ತಿಯ ಶಿಲ್ಪ ಸೌಂದರ್ಯವನ್ನು ಶ್ರೀಮತಿ ಕ್ರಾಮರಿಶ್ ಅವರು ತಮ್ಮ ರಮಣೀಯ ಶೈಲಿಯಲ್ಲಿ ಪ್ರಖರವಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂರ್ತಿಯು ಭೂಮಿಗೆ ತನ್ನ ಬೆನ್ನನ್ನು ಒರಗಿಸಿಕೊಂಡಿದೆ. ಅಂದರೆ ಅಂಗಾತ ಸ್ಥಿತಿಯಲ್ಲಿಟ್ಟು ಪೂಜಿಸಲಾಗುತ್ತಿದೆಯೆಂಬುದು ಅವಳು ಇರುವ ರೀತಿಯಿಂದ ತಿಳಿಯುತ್ತದೆ ಮೇಲ್ನೋಟಕ್ಕೆ. ಶಿವಪಿಂಡಿಕಾದ ಕೆಳಗಣ ಸ್ಥಿತಿ ಯಾವುದಾಗಿರುತ್ತದೆಯೋ ಅದೇ ರೀತಿಯಲ್ಲಿ ಈ ಮೂರ್ತಿಯ ಪೂಜೆಯೂ ಅಪೇಕ್ಷಿತ. ಅವಳಿಗೆ ಜಲಧಾರೆಗಳಿಂದ ಮೀಯಿಸಿದ ಮೇಲೆ, ಆ ನೀರು ಹರಿದು ಹೋಗುವುದಕ್ಕಾಗಿ ಅವಳ ಎರಡೂ ಕೈಗಳಲ್ಲಿ ದಾರಿ ಮಾಡಲಾಗಿದೆ. ಆಲಂಪುರದ ಮೂರ್ತಿಯ ಈ ವಿಶೇಷತೆಯನ್ನು ಗಮನಿಸಿದರೆ, ಪ್ರತ್ಯಕ್ಷ ‘ಉತ್ತಾನ’ ರೂಪದಲ್ಲಿ ದೊರೆತ ಈ ದೇವತೆಗಳನ್ನು ‘ಉತ್ತಾನ’ ಅವಸ್ಥೆಯಲ್ಲಿಟ್ಟೇ ಪೂಜಿಸುವ ರೂಢಿಯೊಂದಿತ್ತು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

‘ಲಜ್ಜಾಗೌರಿ’ಯ ಈ ‘ಉತ್ತಾನ’ ಸ್ಥಿತಿಯನ್ನು ನೋಡಿದಾಗ ಸ್ಪಷ್ಟವಾಗುವುದೇನೆಂದರೆ ಇದು ಗರ್ಭಧಾರಣೆ ಮಾಡುವುದಕ್ಕಾಗಿ ಬೀಜ ಸ್ವೀಕಾರ ಮಾಡುವ ಕ್ಷಣದ ಅವಸ್ಥೆಯದ್ದಾಗಿದೆ. ಅಥವಾ ಪರಿಪುಷ್ಟ ಗರ್ಭವು ಜನುಮ ನೀಡುವ ಅವಸ್ಥೆಯಲ್ಲಿದೆ ಎಂಬುದು. ಇವುಗಳಲ್ಲಿ ಯಾವುದೇ ಅವಸ್ಥೆಯದ್ದಾಗಿರಲೀ ಅದಂತೂ ಮಾತೃ ದೇವತೆಯೊಂದಿಗೆ ಸಂಬಂಧಿಸಿದುದು, ಸೃಷ್ಟಿಕ್ರಿಯೆಗೆ ಸಂಬಂಧಿಸಿದುದು, ವಿಶ್ವನಿರ್ಮಿತಿಗೆ ಸಂಬಂಧಿಸಿದುದಾಗಿದೆ ಎಂಬುದಂತೂ ಶಂಕಾತೀತವಾದ ಶುದ್ಧ ಸತ್ಯ.

ಉತ್ತಾನೇವ ವೈ ಯೋನಿರ್ಗರ್ಭಮ್ ಬಿಭರ್ತಿ |
ಶತಪಥ. (೩.೨.೩.೨೯)

[ಸಂಭೋಗ ಕಾಲದಲ್ಲಿ ‘ಉತ್ತಾನ’ (ಅಂಗಾತ)ವಾಗಿರುವ ಯೋನಿಯಿಂದ ಗರ್ಭಧಾರಣೆಯಾಗುತ್ತದೆ.]

ಶತಪಥ ಬ್ರಾಹ್ಮಣದಲ್ಲಿ ‘ಉತ್ತಾನ ಯೋನಿ’ ಎಂಬ ಶಬ್ದವಿದೆ. ‘ಲಜ್ಜಾಗೌರಿ’ ಮೂರ್ತಿಯ ಬಗ್ಗೆ ಇದಕ್ಕಿಂತ ಬೇರೆಯಾಗಿ ವರ್ಣನೆ ಮಾಡಲು ಸಾಧ್ಯವಿಲ್ಲ. ವಿಶೇಷವಾಗಿ ‘ಲಜ್ಜಾಗೌರಿ’ ಮೂರ್ತಿಯ ಪೂರ್ವರೂಪ ಯಾವುದು ಎಂದರೆ, ಯಾರ ಮೂರ್ತಿಯು ಕೇವ ನಾಭಿಯವರೆಗಿನ ಭಾಗವನ್ನಷ್ಟೇ ತೋರಿಸುವುದಾಗಿರುವುದೋ ಅದು. ಅಂಥ ಮೂರ್ತಿಗಳನ್ನೆಲ್ಲ ‘ಉತ್ತಾನಯೋನಿ’ ಎಂಬ ಹೆಸರಿನಿಂದಲೇ ಉಲ್ಲೇಖಿಸಲಾಗಿದೆ. ಅಲ್ಲದೆ ಎರಡೂ ಪಕ್ಕಕ್ಕೆ ಬಾಗಿಸಿರುವ ಕಾಲುಗಳ ಅಗತ್ಯತೆಯ ಅರಿವನ್ನು ಔಚಿತ್ಯ ಪೂರ್ಣವಾಗಿಯೇ ಕಾಪಾಡಿಕೊಳ್ಳಲಾಗಿದೆ.

ಶತಪಥ ಬ್ರಾಹ್ಮಣದಲ್ಲಿನ ‘ಉತ್ತಾನ ಯೋನಿ’ ಎಂಬ ಶಬ್ದದಲ್ಲಿರುವ ‘ಯೋನಿ’ ಎಂಬುದು ಸ್ತ್ರೀ ಮತ್ತು ಪೃಥ್ವಿಗಳೆರಡರ ದ್ಯೋತಕ. ಆದರೆ ಅದರಲ್ಲಿ ಹೆಚ್ಚು ಅಭಿಪ್ರೇತಗೊಂಡಿರುವುದು ಮಾತ್ರ ಸ್ತ್ರೀರೂಪವೇ. ಸ್ತ್ರೀಯಂತೆಯೇ ಪೃಥ್ವಿಯ ಉತ್ತಾನಾವಸ್ಥೆಯೂ ಗರ್ಭಧಾರಣ ಸಾಮರ್ಥ್ಯವಿರುವ ವಿಧಾನದಲ್ಲಿಯೇ ರೂಪಿಸಿದ್ದಾರೆ ವೈದಿಕ ಪರಂಪರೆಯ ಋಷಿಗಳು.

ಯಥೇಯಂ ಪೃಥಿವೀ ಮಹ್ಯುತ್ತಾನಾ ಗರ್ಭಂ ಆ ದಧೇ |
ಏವಂ ತ್ವಂ ಗರ್ಭಂ ಆ ದಧೇ ದಶಮೇ ಮಾಸಿ ಸೂತವೇ ||
(ಋ.ಖಿಲ.೪.೧೩೨.೩)

[ಹೇಗೆ ಉತ್ತಾನ (ಅಂಗಾತ), ಮಹಿ (ಮಹಾನ್, ವಿಸ್ತೃತ) ಯಾದ ಪೃಥ್ವಿಯು ಗರ್ಭಧಾರಣೆ ಮಾಡಿಕೊಳ್ಳುವಳೋ, ಹಾಗೆಯೇ ನೀನು ಹತ್ತನೆಯ ತಿಂಗಳಿನಲ್ಲಿ ಪ್ರಸವಿಸುವುದಕ್ಕಾಗಿ ಗರ್ಭವನ್ನು ಧರಿಸು.]

ಉತ್ತಾನ ಸ್ತ್ರೀ ಮತ್ತು ಉತ್ತಾನ ಪೃಥ್ವಿಯರ ಸಮರೂಪತೆ ಮತ್ತು ಏಕರೂಪತೆಯು ಬಹಳ ಸ್ಪಷ್ಟವಾಗಿ ಪ್ರಕಟಗೊಂಡಿರುವುದು ಇಲ್ಲಿ. ಒಂದು ವ್ಯತ್ಯಾಸವೆಂದರೆ ಪೃಥ್ವಿ ದೊಡ್ಡವಳು (ಮಹಿ), ಸ್ತ್ರೀ ಚಿಕ್ಕವಳು. ಆದರೆ ರೂಪದ ಈ ಲಘು – ಗುರುತ್ವದ ಭಿನ್ನತೆಯಿಂದಾಗಿ ಅವರ ಸೃಷ್ಟಿಶೀಲತೆಯ ಸಾಮ್ಯ, ಅವರ ಮಾತೃ ಧರ್ಮದಲ್ಲಿನ ಏಕರೂಪತ್ವದಲ್ಲಿ ಯತ್ಕಿಂಚಿತ್ತೂ ಊನತೆಯುಂಟಾಗುವುದಿಲ್ಲ.

ವಿಶ್ವಗರ್ಭಾಲಯ

ಅದಿತಿ, ಪೃಥ್ವಿ ಅಥವಾ ಲಜ್ಜಾಗೌರಿಯರ ಪೂರ್ಣಯೋನಿ ರೂಪವೇ ‘ವಿಶ್ವ ಗರ್ಭಾಲಯ’. ಆ ಮೂರ್ತಿಗಳನ್ನು ಕುರಿತಂತೆ ನಾನು ನನ್ನ ಕಲ್ಪನೆಯಿಂದ ಮಾಡಿರುವ ಅಲಂಕಾರ ವರ್ಣನೆಗಳಿವು ಎನಿಸಬಹುದು. ಆದರೆ ಇದು ನನ್ನ ಕಲ್ಪನೆಯಲ್ಲ; ಉಪಾಸಕರಲ್ಲಿ ಪ್ರತೀತವಾಗಿರುವ ಧರೋಣೆಗಳಿಂದ ರೂಪುಗೊಂಡಂಥ ಸತ್ಯ. ಹುತ್ತದ ಪ್ರತೀಕದಿಂದ ಹಿಡಿದು ಲಜ್ಜಾಗೌರಿಯ ಸಾಂಗ – ಸಾಲಂಕೃತ ಮೂರ್ತಿಯವರೆಗಿನ ರೂಪ ವಿಕಾಸವನ್ನು ನೋಡಿದರೆ ಈ ಭಾವಗಮ್ಯ ಸತ್ಯದ ದರ್ಶನವು ಝಗಝಗಿಸುವ ಸ್ವರೂಪದಲ್ಲಿ ನೋಡುವುದಕ್ಕೆ ಸಿಗಬಹುದು ನಮಗೆ. ಹುತ್ತವು ಭೂಮಿಯ ಯೋನಿ ಸ್ವರೂಪ. ಅದ ಯೋನಿರೂಪಿ ಭೂದೇವಿ ಎಂಬ ಧೋರಣೆ ದಕ್ಷಿಣದಲ್ಲಿನ ಜನಪದ ಧಾರ್ಮಿಕ ಕ್ಷೇತ್ರಗಳಾದ ಯಲ್ಲಮ್ಮ – ಸಾಂತೇರಿಯರ ಉಪಾಸನೆಯಲ್ಲಿ, ಹಾಗೆಯೇ ವೈದಿಕ ವಾಙ್ಮಯದಲ್ಲಿ ಹುತ್ತದ ಪ್ರತಿಷ್ಠೆ ಬಹಳವಾಗಿರುವುದು ಈ ಅಂಶಗಳಲ್ಲಿ ಕಂಡು ಬರುತ್ತದೆ. ಶ್ರೀಮತಿ ದುರ್ಗಾ ಭಾಗವತ ಅವರು ಶತಪಥ ಬ್ರಾಹ್ಮಣದ ಆಧಾರದಿಂದ (೧.೧.೧.೧೭) ದ್ಯಾವಾ – ಪೃಥ್ವಿಯ ಭಾವ – ಬಂಧದ ವಿಲಕ್ಷಣ ಸಂಕೇತವನ್ನು ದಾಖಲಿಸಿದ್ದಾರೆ.[4] “ಶತಪಥ ಬ್ರಾಹ್ಮಣದಲ್ಲಿ ಯಾವುದೋ ಕಾರಣಗಳಿಂದ ದೇವತೆಗಳು ಬೆಣೆ ಹೊಡೆದು ಅವರನ್ನು (ದ್ಯಾವಾ – ಪೃಥ್ವಿ) ವಿಭಕ್ತಗೊಳಿಸಿದರು; ಆಗ್ಗೆ ಆ ಇಬ್ಬರೂ ದೂರ ಹೋಗುವ ಮುನ್ನ ಒಬ್ಬರನ್ನೊಬ್ಬರು ಭೇಟಿಯಾದರು; ಆಕಾಶವು ಭೂಮಿಗೆ ಉಪ್ಪು (ವೀರ್ಯ)ಕೊಟ್ಟಿತು, ಪೃಥ್ವಿಯು ಆಕಾಶಕ್ಕೆ ಹುತ್ತದೊಳಗಣ ಸುಫಲನಕಾರಿ ಮಣ್ಣನ್ನು ಕೊಟ್ಟಿತು ಎಂಬ ಕಥೆ ಬರುತ್ತದೆ”. ಉಪ್ಪು ಆಕಾಶದಿಂದ ಪೃಥ್ವಿಗೆ ಬಿದ್ದಿರುವ ವೀರ್ಯ ಎಂಬ ಕಲ್ಪನೆಯು ಐತರೇಯ ಬ್ರಾಹ್ಮಣದಲ್ಲಿಯೂ (೨.೪.೨೭) ಇರುವುದು ಕಂಡುಬಂದಿದೆ ಅವರಿಗೆ. ದುರ್ಗಾ ಭಾಗವತರು ಉದ್ಧರಿಸಿರುವ ಈ ಕಥೆಯನುಸಾರ ಉಪ್ಪು ದ್ಯುಲೋಕ (ಆಕಾಶ)ದ ವೀರ್ಯವಾಗಿದ್ದರೆ, ಹುತ್ತದಲ್ಲಿನ ‘ಸುಫಲನ’ ಮಣ್ಣು ಪೃಥ್ವಿಯ ಧಾತು ಎಂಬುದು ಸುಸ್ಪಷ್ಟ. ಅಂದರೆ ಹುತ್ತವು ಪೃಥ್ವಿಯ ಯೋನಿ ಎಂಬುದು ಈ ಮೂಲಕ ಸ್ಪಷ್ಟವಾಗುತ್ತದೆ – ವೈದಿಕ ಋಷಿಗಳ ದೃಷ್ಟಿಯಲ್ಲಿಯೂ ಅದು ಪೃಥ್ವಿಯ ಯೋನಿಯಾಗಿದೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು.

ಹುತ್ತದ – ರೂಪದಲ್ಲಿ ಕ್ಷೇತ್ರ ದೇವತೆಯ ಮತ್ತು ನಾಗರೂಪದಲ್ಲಿ ಹುತ್ತದಲ್ಲಿ ನೆಲೆಸಿರುವ ಕ್ಷೇತ್ರಪತಿ ಮತ್ತು ಕ್ಷೇತ್ರಪಾಲಕನ ಉಪಾಸನೆಯು ಸಾತತ್ಯವಾಗಿ ನಡೆದುಕೊಂಡು ಬರುತ್ತಿದೆ. ಈ ಅಂಶವನ್ನು ಯಲ್ಲಮ್ಮಾ, ಮಾತಂಗಿ, ರೇಣುಕಾ, ಸಾಂತೇರಿಯರಂಥ ಕ್ಷೇತ್ರ ದೇವಿಯರಲ್ಲಿ ಮತ್ತು ಮುರುಗ, ಸುಬ್ರಹ್ಮಣ್ಯ, ಜೋತಿಬಾ, ಖಂಡೋಬಾ, ರವಳನಾಥ, ಮ್ಹಸ್ಕೋಬಾರಂಥ ಕ್ಷೇತ್ರಪತಿಗಳ ಪ್ರತೀಕ ವಿಶೇಷಗಳಿಂದ ನಿಃಶಂಕೆಯಿಂದಲೇ ನೋಡಿದ್ದೇವೆ. ಹುತ್ತದ ಮಣ್ಣನ್ನು ನಮ್ಮ ಲೌಕಿಕ ಮತ್ತು ವೈದಿಕ ಪರಂಪರೆಗಳೆರಡರಲ್ಲೂ ಅತ್ಯಂತ ಪವಿತ್ರವೆಂದು ಒಪ್ಪಿಕೊಳ್ಳಲಾಗಿದೆ. ವೇದಕಾಲದಿಂದ ಇಂದಿನವರೆಗೂ ಅನೇಕ ವಿಧಿ – ವಿಧಾನಗಳಲ್ಲಿ ಅದರ ಪ್ರತೀಕವನ್ನು ಅವಶ್ಯವೆಂದು ಮಾನ್ಯ ಮಾಡಿರುವುದು ವಿಶೇಷ ಗಮನೀಯ ಸಂಗತಿ. ಒಟ್ಟಾರೆ ಏನೇ ಆಗಿದ್ದರೂ ಹುತ್ತ ಬಹಳ ನಾಜೂಕಾದುದು ಅದನ್ನು ಪೂಜಾ ವಿಷಯವಾಗಿ ಮಾಡಿಕೊಳ್ಳುವ ದೃಷ್ಟಿಯಿಂದ ಪರಿಶೀಲಿಸಿದರೆ, ಅದರ ಸ್ವರೂಪ ಗಟ್ಟಿಯಾದುದಲ್ಲ. ಯಾವ ಹುತ್ತಗಳ ಮೇಲೆ ಮಂದಿರಗಳನ್ನು ಕಟ್ಟಲಾಗಿರುವುದೋ ಅವುಗಳ ನೈಸರ್ಗಿಕ ಸ್ವರೂಪವೂ ಅಂಥದೇ. ಮತ್ತೆಮತ್ತೆ ಅವುಗಳನ್ನು ‘ಕೊಬ್ಬಿಸಿದಂತೆ’ ಮಣ್ಣಿನ ಲೇಪನ ಮಾಡಬೇಕಾಗುತ್ತದೆ. ವೇಂಗುರ್ಲೆಯಲ್ಲಿನ ಸಾಂತೇರಿ ಮಂದಿರದಲ್ಲಿ ನಾನು ಈ ರೀತಿ ಎತ್ತರಿಸಿರುವುದ್ನು ನೋಡಿದ್ದೇನೆ. ಹುತ್ತದ ಈ ಮಿತಿಯಿಂದಾಗಿಯೇ ಮುಂದೆ ಭೂದೇವಿಯ ಸ್ಥಾಯಿಮೂರ್ತಿಗಳನ್ನು (ಸುಟ್ಟ ಮಣ್ಣು ಮತ್ತು ಶಿಲೆ) ಮಾಡಲಾರಂಭಿಸಿದ್ದಿರಬೇಕು. ಈ ಹಂತದಲ್ಲಿ ಪೂರ್ಣತಃ ಸ್ತ್ರಿಯ ಯೋನಿಯನ್ನು ಸದೃಶಗೊಳಿಸುವುದಕ್ಕೆ ಮುಂಚೆ ಒಂದು ಅವಸ್ಥೆಯು ಇಂತಿದ್ದಿರಬಹುದು. ಅಂದರೆ ಶಂಕುವಿನಾಕಾರದ ಅನುಕರಣೆ. ಸ್ವತಃ ಹುತ್ತದಂತೆಯೇ ಇರುವ, ದರ್ಶನ ಭಾಗದಲ್ಲಿ ಯೋನಿ ಸದೃಶ ದ್ವಾರವುಳ್ಳ ಶಂಕ್ವಾಕಾರ ಶಿಲಾ ಮೂರ್ತಿಗಳು ದಕ್ಷಿಣ ಭಾರತದಲ್ಲಿ ಬಹುತೇಕ ಕಡೆಗಳಲ್ಲಿ ಲಭ್ಯವಾಗಿವೆ. (ಅವುಗಳ ಛಾಯಾಚಿತ್ರಗಳನ್ನು ಓದುಗರಿಗೆಂದು ಈ ಕೃತಿಯಲ್ಲಿ ನೀಡಲಾಗಿದೆ). ಈ ಶಂಕ್ವಾಕಾರ ಮೂರ್ತಿಯೇ ಗರ್ಭಾಶಯ, ‘ಗರ್ಭಗೃಹ’. ಅದರ ದರ್ಶನೀಯ ಯೋನಿ ಸದೃಶ ದ್ವಾರವೇ ‘ಗರ್ಭಗೃಹದ ಪ್ರವೇಶದ್ವಾರ’. ಲಜ್ಜಾಗೌರಿಯ ಪೂರ್ಣಯೋನಿ ರೂಪ ಎಂದರೆ ‘ವಿಶ್ವದ ಗರ್ಭಾಲಯ’. ನಾನು ಹೀಗೆ ಹೇಳಿರುವುದರ ಕಾರಣವೇನೆಂಬುದರ ರಹಸ್ಯವು ಈ ಮೂರ್ತಿಯನ್ನು ಕಣ್ಣಾರೆ ಕಂಡಾಗ ಸಹಜವಾಗಿಯೇ ತಿಳಿಯುತ್ತದೆ. ಮಂದಿರದ ವಿಶೇಷವಾಗಿ ಮಂದಿರದಲ್ಲಿನ – ‘ಗರ್ಭಾಶಯ‘ದ ಮೂಲವು ಈ ಸ್ವರೂಪ (ಸಂಕಲ್ಪನೆ)ದ್ದೇ ಇರಬಹುದೇ ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬಾರದೆ ಇರುವುದಿಲ್ಲ.[5]

ಈ ಶಂಕ್ವಾಕಾರ (ಹುತ್ತ – ಸದೃಶ) ಯೋನಿ ಮೂರ್ತಿಗಳು ಲಭ್ಯವಾದ ಮೇಲೆ ಅಥವಾ ತೀರಾ ಇತ್ತೀಚಿನವರೆಗಿನ ಸ್ತ್ರೀ – ಯೋನಿಯ ರೂಪದಲ್ಲಿ ಮತ್ತು ಅದೂ ಉತ್ತಾನ ಸ್ಥಿತಿಯಲ್ಲಿರುವ ಸ್ತ್ರೀ – ಯೋನಿಯ ರೂಪದ ಮೂರ್ತಿಗಳನ್ನು ಕ್ರಮವಾಗಿ ರೂಪಿಸುವುದು ಅವಶ್ಯ. ನಾಭಿಯವರೆಗಷ್ಟೇ ಸ್ತ್ರೀರೂಪವನ್ನು ಪ್ರದರ್ಶಿಸುವ ಈ ಮೂರ್ತಿಗಳು ಕೇವಲ ಸೃಷ್ಟಿಕ್ರಿಯೆಯ ಭಾವವನ್ನಷ್ಟೇ ವ್ಯಕ್ತಪಡಿಸುವಂಥವುಗಳು. ಪೋಷಣೆಯ ಭಾವವು ಮಾತೃತ್ವ ಮೂಲ ಸಂಕಲ್ಪನೆಯಲ್ಲಿ ನಿಹಿತ (ಸ್ಥಾಪಿತ)ವಾಗಿದ್ದರೂ, ಪೋಷಣೆಯ ಇಂದ್ರಿಯಗಳು ಮಾತ್ರ ಈ ಮೂರ್ತಿಗಳಲ್ಲಿ ಪ್ರಕಟವಾಗಿರಲಿಲ್ಲ. ಎಂತಲೇ ಈ ಮುಂದಿನ ಅವಸ್ಥೆಯಲ್ಲಿ ಸೃಷ್ಟಿ ಮತ್ತು ಪೋಷಣೆಗೆ – ಸೃಷ್ಟಿ ಮತ್ತು ಪುಷ್ಟಿ ಇವೆರಡೂ ಕಾರ್ಯಗಳು ಆಗುವ ಎರಡು ಅಂಗಗಳು – ಅಂದರೆ ಯೋನಿ ಮತ್ತು ಸ್ತನಗಳು ಎದ್ದು ಕಾಣುವಂತಿರುವ ಶಿರೋಹೀನ ಮೂರ್ತಿಗಳು ಬಂದವು. ಈ ಮೂರ್ತಿಗಳ ಶಿರದ ಭಾಗದಲ್ಲಿ ಮತ್ತು ಅವುಗಳ ಅಕ್ಕಪಕ್ಕದಲ್ಲಿ, ಕೆಲವೊಮ್ಮೆ ಸ್ತನಗಳ ಜಾಗದಲ್ಲಿಯೂ ಕಮಲಗಳನ್ನು ಕೊರೆಯಲಾಗಿದೆ. ಕಮಲವು ಸೃಷ್ಟಿಯ ತವರು – ಸೃಷ್ಟಿಯುತ್ಪತ್ತಿಗೆ ಕೇಂದ್ರ; ಹಾಗಾಗಿ ಸೃಷ್ಟಿದೇವತೆಯ ಸಂಪೂರ್ಣ ವ್ಯಕ್ತಿತ್ವ (ವ್ಯಕ್ತಿತ್ವದ ಸಂಪೂರ್ಣ ಅರಿವು ಮುಖದಿಂದ – ಶಿರದಿಂದ ವ್ಯಕ್ತವಾಗುತ್ತದೆ ಎಂದು) ವನ್ನು ಕಮಲ ಮುಖೇನ ವ್ಯಕ್ತಪಡಿಸುವ ಕಲಾತ್ಮಕ ಔಚಿತ್ಯವನ್ನು ಉಪಾಸಕ – ಕಲಾಕಾರರು ಪ್ರಕಟಪಡಿಸಿದ್ದಾರೆ. ಶಿರೋಯುಕ್ತ – ಸಾಂಗ – ಸಾಲಂಕೃತ ಮೂರ್ತಿಗಳೆಲ್ಲ ಕೊನೆಯ ಅವಸ್ಥೆಯವು. ಲಜ್ಜಾಗೌರಿಯ ಉಪಲಬ್ಧ ಮೂರ್ತಿಗಳು ಕಾಲವು ಸಾತವಾಹನೋತ್ತರವೆಂಬುದು ಸಂಶೋಧಕರ ಅಭಿಪ್ರಾಯ. ಹುತ್ತದಿಂದ ಯೋನಿಯ ಮೂರ್ತಿಯವರೆಗಿನ ವಿಕಾಸ ಕ್ರಮವನ್ನು ಸ್ಪಷ್ಟವಾಗಿ ಗಮನದಲ್ಲಿಟ್ಟುಕೊಂಡರೆ ‘ಉತ್ತಾನಾ ಮಹೀ‘ಯ ಉಪಾಸನೆಯು ಭಾರತದಲ್ಲಿ ವೇದಕಾಲದಿಂದಲೇ ಹಾಗೂ ಬಹುಶಃ ಪ್ರಾಗೈತಿಹಾಸಿಕ ಕಾಲದಿಂದಲೇ ಪ್ರಚಲಿತದಲ್ಲಿತ್ತು ಎಂದು ಒಪ್ಪಿಕೊಳ್ಳುವುದಕ್ಕೆ ಯಾವುದೇ ಅಡ್ಡಿಯೂ ಇಲ್ಲ.

ಅಭಿಜನ ಮತ್ತು ಬಹುಜನರ ಮಾತೆ

ಸಕಲ ಮಾನವರು, ಪಶು – ಪಕ್ಷಿಗಳು, ಜೀವ – ಜಂತುಗಳು, ವೃಕ್ಷ – ವನಸ್ಪತಿಗಳಿಗೆಲ್ಲ ಮಾತೆಯಾಗಿದ್ದಾಳೆ ಧರಿತ್ರಿ. ಈ ಮಹಾಮಾತೆಯ ಪೂಜೆಯನ್ನು ನಾವು ನಮ್ಮ ಪರಂಪರೆಯಲ್ಲಿ ನಮ್ಮ ಪದ್ಧತಿಯಿಂದಲೇ ವಿಕಸಿತಗೊಳಿಸಿದ್ದೇವೆ. ನಮ್ಮ ಧೋರಣೆ – ಕಲ್ಪನೆಗಳಿಗೆ ಅನುಗುಣವಾಗಿಯೇ ನಿರ್ಮಾಣಗೊಂಡಿರುವುವಾಗಿವೆ ಅವಳ ಪ್ರತೀಕಗಳು. ಹಾಗೆಯೇ ಮಾತೆಯ – ಮಹಾಮಾತೆಯ ಮಹತ್ವವನ್ನು ಸಕಲ ಮಾನವರು ಸರ್ವ ದಿಶೆಗಳಲ್ಲಿ ಮತ್ತು ಸರ್ವ ಕಾಲಗಳಲ್ಲಿ ಹಾಡುತ್ತಾ ಬಂದಿದ್ದಾರೆ ಎಂಬ ವಿಚಾರವನ್ನೂ ನಾವು ಸದಾ ಮನಸ್ಸಿನಲ್ಲಿ ಇಟ್ಟು ಕೊಂಡಿರಬೇಕು.

ಮಾನವ ಪ್ರಾಣಿಯು ಜನಿಸಿದ್ದು ಈ ಭೂಮಿಯಿಂದಲೇ ಎಂಬ ನಂಬಿಕೆ ಜಗತ್ತಿನಾದ್ಯಂತ ಇದೆ; ಅನೇಕ ಭಾಷೆಗಳಲ್ಲಿ ಮಾನವನನ್ನು ನಿರ್ದೇಶಿಸಿರುವುದು ‘ಭೂಮಿ – ಜ’ ಎಂಬರ್ಥದಲ್ಲಿಯೇ. [“The Human beings were born from the Earth is a belief of universal distribution. In many Languages man is named ‘the Earth – born’.] ಎಂಬ ವಿಚಾರವನ್ನು ನಾನು ಇಲ್ಲಿ ನೆನಪಿಸಿಕೊಳ್ಳುತ್ತೇನೆ.”[6] ಆದರೂ ನಾನು ಉದ್ದೇಶ ಪೂರ್ವಕವಾಗಿಯೇ ಒಂದು ಮಿತಿಯನ್ನು ಕಾಯ್ದುಕೊಂಡಿದ್ದೇನೆ. ಅದೆಂದರೆ ಭಾರತೀಯ ದೃಷ್ಟಿಯಿಂದ, ಭಾರತೀಯ ಪರಂಪರೆಯ ಪ್ರಮಾಣಗಳಿಂದ ಭಾರತದಲ್ಲಿ ಸಾತತ್ಯವಾಗಿ ನಡೆದುಕೊಂಡು ಬಂದಿರುವ ಸೃಷ್ಟಿಶೀಲ ದೇವತೆಗಳ ದರ್ಶನವು ಒಂದು ವಿಶಿಷ್ಟ ಬಗೆಯ ಮೂರ್ತಿಯ ಮೂಲಕ ಪಡೆಯುವುದು ಮತ್ತು ರೂಪಿಸುವುದು. ಈ ಮರ್ಯಾದೆಯ ಹೇತುವಿನ ಪೂರ್ಣ ವಿಶ್ವಾಸವನ್ನು ಕಾಯ್ದುಕೊಂಡೇ ನಾನು ಈ ‘ಲಜ್ಜಾಗೌರಿ‘ಯ ದರ್ಶನ ಯಾತ್ರೆಯನ್ನು ಮಾಡಿ ಮುಗಿಸಿದ್ದೇನೆ, ವಾಚಕರನ್ನೂ ಜೊತೆಯಲ್ಲಿ ಕರೆದುಕೊಂಡು. ವಾಚಕರ ಸಂತೋಷ ಮತ್ತು ಸಂತೋಷಜನ್ಯ ಪ್ರೇಮದ ‘ಧನ್ಯತೆ‘ಯು ಲಭ್ಯವಾದರೆ ಈ ಯಾತ್ರೆಯ ವ್ರತವು ಮತ್ತೆ ಯಾವುದಾದರೂ ಭವ್ಯಯಾತ್ರೆಯ ರೂಪದಲ್ಲಿ ನೇರ್ಪುಗೊಳಿಸುವುದಕ್ಕೆ ಬರುತ್ತದೆ.

‘ಲಜ್ಜಾಗೌರಿ‘ಯ ದರ್ಶನವನ್ನು ಪಡೆಯುವಾಗ ಅವಳ ಮೂಲ ರೂಪದ ‘ಬಹುಜನ’ ಉಪಾಸಕರು ಮತ್ತು ಅವಳ ಮುಖ್ಯವಾದ ಇಲ್ಲವೆ ಉದ್ದೇಶ ಪರಿವರ್ತಿತ ರೂಪದ ‘ಅಭಿಜನ’ (Elites) ಉಪಾಸಕರು ಹೀಗೆ ಇವರಿಬ್ಬರ ದರ್ಶನವೂ ಅನಾಯಾಸವಾಗಿಯೇ ಲಭಿಸಿತು. ಆದಾಗ್ಯೂ ಈ ಮಾತೃದೇವತೆಯ ಉಪಾಸನಾ ಕ್ರಮದಲ್ಲಿ ಅಭಿಜನ ಮತ್ತು ಬಹುಜನರ ಸಂಬಂಧ ಹೇಗಿದೆ, ಬಹುಜನರಿಗೆ ಪ್ರಿಯವಾದ ಅವಳ ಮೂಲರೂಪವನ್ನು ಉನ್ನತಗೊಳಿಸುವಾಗಿ ಅಭಿಜನರು ಅವಳ ‘ಬಹುಜನ’ ಉಪಾಸಕರನ್ನು ಉಪೇಕ್ಷಿಸಿದ್ದೇಕೆ? ಈ ಹಂತದಲ್ಲಿ ಸಮುನ್ನತವೇನೋ ಮಾಡಿದರು, ಸಮುನ್ನತ ರೂಪದ ಉಪಾಸನೆಯಲ್ಲಿ ಅಭಿಜನರು ಮೂಲದ ಬಹುಜನ ಪ್ರಿಯವಾದ ರೂಪವನ್ನು ಹೇಗೆ ವ್ಯವಸ್ಥೆಗೊಳಿಸಿದರು? ಈ ವ್ಯವಸ್ಥೆಯಲ್ಲಿ ಮೂಲರೂಪಕ್ಕೆ ಗೌರವ ನಿಜವಾದುದೇ? ಇಲ್ಲವೆ ಗೌರವದ ಆಭಾಸವನ್ನು ನಿರ್ಮಾಣಮಾಡಿ ಅದನ್ನು ಪೂರ್ಣವಾಗಿ ಉಪೇಕ್ಷಿತಗೊಳಿಸುವ ಕ್ಲುಪ್ತಿಯು (Device) ಏನಾದರೂ ಇತ್ತೇ? ಎಂಬಿತ್ಯಾದಿ ಗಹನ ಗಂಭೀರ ಪ್ರಶ್ನೆಗಳಿಗೆ ಉತ್ತರ ನೀಡುವುದನ್ನು ನಾನು ಕೈಬಿಟ್ಟಿರುವೆ. ಬಹುಜನರ ದೇವತೆಯನ್ನು ನಮ್ಮ ಸಂಸ್ಕೃತಿಯನುಸಾರ ಸಮುನ್ನತಗೊಳಿಸುವ ಅಭಿಜನರ ಸರಣಿ ಯಾವುದು? ಮತ್ತು ಆ ಸರಣಿಯಿಂದ ಸಾಮಾಜಿಕ ಅಭಿಸರಣ – ಅಭಿಭರಣ (ಸಮಾನತೆ) ಸಾಧ್ಯವಾಯಿತೋ ಅಥವಾ ಸಾಮಾಜಿಕ ಶೋಷಣೆಗೆ ಅವಕಾಶವಾಯಿತೋ ಎಂಬುದು ಈ ವ್ಯಾಪ್ತಿಯಲ್ಲಿ ಬರುವ ವಿಷಯವಲ್ಲ. ಒಟ್ಟಾರೆ ಬಹುಜನರ ವೇದನೆಗಳನ್ನು ಭೇದಿಸಬೇಕಾದ ಸಾಮರ್ಥ್ಯವನ್ನು ಗಳಿಸಿ ಕೊಳ್ಳುವುದಕ್ಕಾಗಿ ವೇದಗಳ ವಾಣಿಯಿಂದಲೇ ಈ ಮಹಾಮಾತೆಯನ್ನು ವಂದಿಸೋಣ ಬನ್ನಿ:

ಮಾತಾ ಭೂಮಿಃ ಪುತ್ರೋ ಅಹಂ ಪೃಥಿವ್ಯಾಃ |
ನಮೋ ಮಾತ್ರೇ ಪೃದಿವ್ಯೈ ನಮೋ ಮಾತ್ರೇ ಪೃಥಿವ್ಯೈ ||
(ಅಥರ್ವಣ.೧೨.೧.೧೨)

ಪೃಥ್ವಿಯೇ ಮಹಾಮಾತೆಯಾಗಿದ್ದಾಳೆ; ನಾನು ಪೃಥ್ವಿಯ ಪುತ್ರ. ಆ ಪೃಥ್ವಿಮಾತೆಗೆ ಎನ್ನ ನಮನವಿರಲಿ – ಆ ಪೃಥ್ವಿಮಾತೆಗೆ ಎನ್ನ ನಮನವಿರಲಿ!

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಶ್ರೀತ್ರ್ಯಂಬಕ ಕ್ಷೇತ್ರ ಮಾಹಾತ್ಮ್ಯಂ: ಜಗದೀಶ್ವರ, ಶಿಳಾ ಪ್ರೆಸ್, ಮುಂಬಯಿ, ಶಕ. ೧೭೯೪.

[2]ಚಕ್ರಪಾಣಿ: ರಾ.ಚಿಂ.ಢೇರೆ, ಪುಣೆ, ೧೯೭೭, ಪು.೨೮೭ – ೩೦೪.

[3] Artibus Asiae: Vol.XXIII, P.121 [”In India the inspiration was most probably received from Egypt through the Romans in about the first – second century A.D.” H.D.Sankalia.]

[4]ಲೋಕ ಸಾಹಿತ್ಯಾಚೀ ರೂಪರೇಖಾ: ದುರ್ಗಾ ಭಾಗವತ, ಮುಂಬಯಿ, ೧೯೫೬, ಪು.೧೪೦.

[5] Tantra Asana: Ajit Mookarjee, P.68.

[6] Myths, Dreams and Mysteries: Mircea Eliadi, P.163.