ಆದಿಪುರಷನ ಸಹಸ್ರ ಕರಗಳಲ್ಲಿ ವಿರಮಿಸಿರುವ ಮಹಾಮಾತೆ ಧರಿತ್ರಿಯು ಅಸೀಮ ಸಂತೃಪ್ತಳಾಗಿ, ಸತ್ವಸಂಪನ್ನ ಧಾನ್ಯಗಳು ಮತ್ತು ರಸಭರಿತ ಫಲಗಳನ್ನು ತನ್ನ ಗರ್ಭದಲ್ಲಿ ಹೊರಲು ಸಜ್ಜಾಗುತ್ತಾಳೆ. ಆಗ ಅವಳ ಅವಯುವಗಳೆಲ್ಲವುಹಸಿರಿನಿಂದ ಸಿಂಗಾರಗೊಂಡು ವಿಶೇಷವಾಗಿ ಮೆರೆಯುತ್ತಿರುವುವು. ಧರಿತ್ರಿಯ ಲಘುರೂಪ(miniature)ವಾಗಿರುವ ಸ್ತ್ರೀಯ ಗರ್ಭಭಾರದಿಂದ ಸಿಂಗಾರಗೊಂಡಂಥ (ಮುತ್ತು ರತ್ನಮಯವಾಗಿ) ಅವಸ್ಥೆಯೂ ಇಂಥದೇ ಆಗಿರುತ್ತದೆ. ‘ನಾಳಿನ ಮಹಾತಾಯಿ’ (ಉಧ್ಯಾಚೀ ಮಾಊಲೀ)ಯಾಗಲಿರುವಂಥ ಆಕೆ ಕೈತುಂಬ ಹಸಿರು ಬಳೆಗಳನ್ನು ಧರಿಸಿ, ಹಸಿರು ಬಣ್ಣದ ದೊಡ್ಡ ಸೀರೆಯನ್ನುಟ್ಟು ಗರ್ಭಮಂಥರ ಗತಿಯಲ್ಲಿ ನಡೆಯಲಾರಂಭಿಸಿದಾಗ ಸ್ವತಃ ಮನನವಾಗುವುದೇನೆಂದರೆ, ಧರಿತ್ರಿಯು ಸ್ವತಃ ತನ್ನ ಕೌತುಕವನ್ನು ತಾನೇ ಅನುಭವಿಸುವುದಕ್ಕಾಗಿ ಹೀಗೆ ಲಘುರೂಪ ಧರಿಸಿ ಅಲೆದಾಡುತ್ತಿರುವಳೋ ಹೇಗೆ? ಧರಿತ್ರಿಯ ದೇಹ ಮತ್ತು ಸ್ತ್ರೀಯ ದೇಹ(ಉದರ)ಗಳಿಂದ ಜನ್ಮ ತಾಳಿದುದಾಗಿದೆ ಈ ದಿವ್ಯ ಸೃಷ್ಟಿ. ನಾನಾ ರಂಗುಗಳು ಹಾಗೂ ನಾನಾ ಸ್ಪರ್ಶಗಳು, ನಾನಾ ಗಂಧಗಳು ಹಾಗೂ ನಾನಾ ರಸಗಳು, ನಾನಾ ಶ್ರುತಿಗಳು ಹಾಗೂ ನಾನಾ ಗತಿಗಳಿಂದ ಕೂಡಿದುದಾಗಿದೆ ಈ ದಿವ್ಯ ಸೃಷ್ಟಿ. ಬಾಹ್ಯ ಸೃಷ್ಟಿಯು ದಿವ್ಯವಾಗಿರುವಂತೆಯೇ, ನಾನಾ ಭಾವ – ಭಾವನೆಗಳು, ಸಂಕಲ್ಪ – ವಿಕಲ್ಪಗಳು, ರಾಗ – ದ್ವೇಷಗಳು ಮತ್ತು ಸೃಜನಶೀಲ ಪ್ರಜ್ಞೆ – ಪ್ರತಿಭೆಗಳ ಮಾನವೀಯ ಅಂತಃಸೃಷ್ಟಿಯೂ ಸಹ ದಿವ್ಯವೇ ಆಗಿದೆ. ಎಂತಲೇ ಇದು ಎಲ್ಲಿಂದ ಜನ್ಮವೆತ್ತುತ್ತದೆಯೋ ಅದರ ತವರನ್ನು (ಮಾಹೇರ) ಅದಿತಿ (Imper ish able) ಎಂದು ಸಾರ್ಥಕವಾಗಿ ಹೆಸರಿಸಿವೆ ವೇದಗಳು. ಗ್ರೀಷ್ಮ ಋತುವಿನಲ್ಲಿ ಕಪ್ಪಗಾದ ಸೃಷ್ಟಿಯು ಪುನಃ ವರ್ಷ ಋತುವಿನ ಸಹಸ್ರ ಧಾರೆಯಲ್ಲಿ ಮಿಂದು ಧರಿತ್ರಿಯ ಉದರದಲ್ಲಿ ಗರ್ಭರೂಪವನ್ನು ಹೊಂದಿ ಮೆರೆಯುತ್ತಿರುತ್ತದೆ. ಶರದ್ ಋತುವಿನಲ್ಲಿ ಲಕ್ಷಾವಧಿ ಎಲೆ ಹೂವುಗಳಿಂದ ಕೂಡಿ ತಾರುಣ್ಯವಡೆದ ಇದು ಶಿಶಿರದಲ್ಲಿ ಒಂದೇ ಸಮನೆ ಉದುರುವುದಕ್ಕೆ ತೊಡಗುತ್ತದೆ. ಇದಕ್ಕೆ ಮತ್ತೆ ಅಗ್ನಿಕಾವು ಬರುವುದು ಗ್ರೀಷ್ಮದಲ್ಲಿಯೇ. ಮತ್ತೆ ವರ್ಷ ಋತುವಿನ ಆರ್ದ್ರತೆಯಲ್ಲಿ ಹೊಸಗರ್ಭಕ್ಕೆ ಸಿದ್ಧತೆ ಉಂಟಾಗುವುದು. ಜನನ, ಮರಣ ಮತ್ತು ಪುನರ್ ಜನನ – ಈ ಜೀವನ ಚಕ್ರವು ವರ್ಷಚಕ್ರದೊಂದಿಗೆ ಸೇರಿ ತಿರುಗುತ್ತಿರುತ್ತದೆ ನಿರಂತರವಾದ ಒಂದು ನಿಶ್ಚಿತ ಗತಿಯಲ್ಲಿ. ಆದರೂ ಈ ಸೃಷ್ಟಿಯ ಮಾತೆಯು ಪ್ರತಿಯೊಂದು ‘ಋತು‘ವಿನಲ್ಲಿಯೂ ತಾನು ಹೊಸ ಗರ್ಭವನ್ನು ಹೊರುವಲ್ಲಿ ತೀರಾ ‘ಮೊದಲಿನ’ ಉಲ್ಲಾಸದಿಂದಲೇ ಸಿದ್ಧಳಾಗಿರುತ್ತಾಳೆ. ಅವಳ ಮಹಾಮಾತೃತ್ವವು ಅಜರಾಮರವಾದುದು. ಆದಿತಿಯೂ, ದೇವ ಮಾತೆಯೂ ಆಗಿದ್ದಾಳೆ ಆಕೆ. ಸರ್ವ ಸೃಷ್ಟಿಯ ಮಹಾಮಾತೆಯಾದ ಧರಿತ್ರಿ ಮತ್ತು ಮಾನವ ಮಾತೆಯಾದ ಸ್ತ್ರೀ ಇವರ ಸಮಧರ್ಮಿತ್ವ ಕುರಿತ ವಿಷಯವಾಗಿ ಮನುವಿನ ಮಾತುಗಳಿಂತಿವೆ:

ಕ್ಷೇತ್ರ ಭೂತಾ ಸ್ಮೃತಾ ನಾರೀ, ಬೀಜಭೂತಃ ಸ್ಮೃತಃ ಪುಮಾನ್ |
ಕ್ಷೇತ್ರಬೀಜಸಮಾಯೋಗಾತ್ ಸಂಭವಃ ಸರ್ವದೇಹೀನಾಮ್ ||
(ಮನು.೯ – ೩೩)

[ನಾರಿ ಕ್ಷೇತ್ರರೂಪಿಯಾಗಿದ್ದರೆ, ಪುರುಷನು ಬೀಜರೂಪಿ. ಕ್ಷೇತ್ರ ಮತ್ತು ಬೀಜ ಇವುಗಳ ಸಮಾಯೋಗದಿಂದಲೇ ಪ್ರಾಣಿಮಾತ್ರಗಳೆಲ್ಲ ಜನ್ಮತಾಳುತ್ತವೆ.]

ಅದಿತಿ: ಪೃಥ್ವಿ

ದೇವ ಮಾತೆಯಾದ ಅದಿತಿ ಮತ್ತು ಪೃಥ್ವಿಯರನ್ನು ವೈದಿಕ ಋಷಿಗಳು ಕೆಲವೊಮ್ಮೆ ಭಿನ್ನರೂಪದಲ್ಲಿಯೂ, ಕೆಲವೊಮ್ಮೆ ಸಮರೂಪದಲ್ಲಿಯೂ ಮತ್ತೆ ಕೆಲವೊಮ್ಮೆ ಏಕರೂಪದಲ್ಲಿಯೂ ಒಪ್ಪಿಕೊಂಡಿರದ್ದಾರೆ. ಭೂಮಿಯು ‘ಜನಯಿತ್ರಿ’ (Producer), ‘ಧಾತ್ರಿ’ (sustainer) ಪೃಥ್ವಿ (The broad) ಮತ್ತು ಮಹೀ (The Great) ಎನಿಸಿಕೊಂಡಿದ್ದಾಳೆ. ಅದಿತಿಯನ್ನು ಪೃಥ್ವಿಂತೆಯೇ ‘ಮಹೀಮಾತಾ’ (The creat Mother) ಎಂದು ಕರೆಯಲಾಗಿದೆ(ಋಗ್ವೇದ. ೧.೭೨.೯; ೯.೭೪.೫ ಇತ್ಯಾದಿ). ಅಲ್ಲದೆ ಆಕೆಯನ್ನು ಅಷ್ಟಯೋನಿ, ಅಷ್ಟಪುತ್ರಳೆಂದೂ ಕರೆದಿರುವುದುಂಟು. ಏಳು ಮಂದಿ ದಿವ್ಯಪುತ್ರರಿಗೆ – ಆದಿತ್ಯರಿಗೆ – ಜನುಮ ನೀಡಿದ ಅದಿತಿಯು ಕೊನೆಗೆ, ತನ್ನ ಎಂಟನೆಯ ಗರ್ಭವನ್ನು ಒಡೆದು ಹಾಕಿದಳು. ಆದರೆ ಈ ಆದಿತ್ಯರುಗಳು ಸೃಷ್ಟಿಯ ಸಾತತ್ಯದಲ್ಲಿ ಭಾಗಿಯಾಗುವುದಕ್ಕೆ ನಿರಾಕರಿಸಿದ ಕಾರಣ, ಪುನಃ ಆ ಮೃತ ಗರ್ಭಾಂಡ (ಮಾರ್ತಾಂಡ)ವನ್ನು ಸಚೇತನಗೊಳಿಸಿ ಪೋಷಿಸಲಾರಂಭಿಸಬೇಕಾಯಿತು ಆಕೆಗೆ. ಜನನ ಮತ್ತು ಮರಣಗಳ ಚಕ್ರದ ನಿರಂತರ ತಿರುಗುವಿಕೆಯನ್ನು ಕಾಯ್ದುಕೊಳ್ಳುವುದಕ್ಕಾಗಿಯೇ ಆಕೆ ಈ ಮೃತ ಗರ್ಭಾಂಡಕ್ಕೆ ಪುನಃ ಜೀವಕೊಡಲು ಮುಂದಾದಳು:

ಪ್ರಜಾಯೈ ಮೃತ್ಯವೇ ತ್ವತ್ ಪುನರ್ಮಾರ್ತಾಂಡಮಭಿಭರತ್ ||
(ಋ.೧೦.೭೨.೯)

(ಹೇ ಮಾರ್ತಾಂಡ, ಪ್ರಜನನ ಮತ್ತು ಮರಣಗಳಿಗಾಗಿ ನಾನು ಪುನಃ ನಿನಗೆ ಮರುಜೀವ ನೀಡುತ್ತಲಿದ್ದೇನೆ.)

ವೈದಿಕ ಋಷಿಗಳು ವರ್ಣಿಸಿದ ಅದಿತಿಯ ದಿವ್ಯಚರಿತ್ರೆಯಲ್ಲಿನ ಈ ಪರ್ವ ಆಕೆಯ ಪೃಥ್ವಿರೂಪತೆಯನ್ನು ಮೆರೆಯುವಂತಹದ್ದಾಗಿದೆ ಎಂಬುದಲ್ಲಿ ಸಂಶಯವಿಲ್ಲ. ಪೃಥ್ವಿಯ ಸಾತತ್ಯದಲ್ಲಿ ‘ಪುನರಪಿ ಜನನಂ, ಪುನರಪಿ ಮರಣಂ’ ಅವಶ್ಯವಾದುದು. ಎಂತಲೇ ಪ್ರಜನನ ಮತ್ತು ಮರಣ ಪ್ರಕ್ರಿಯೆಯಾಗಿ ಮೃತ ಗರ್ಭಾಂಡಕ್ಕೆ ಪುನಃ ಜೀವಕೊಟ್ಟಂಥ ಅದಿತಿಯು ಜನನ – ಮರಣಗಳಿಂದ ಯುಕ್ತವಾದ ಸೃಷ್ಟಿ ಸಾತತ್ಯವನ್ನು ಋತುಚಕ್ರ ಮುಖೇನ ಕಾಯುಕ ಪೃಥ್ವಿಯೊಂದಿಗೆ ಏಕರೂಪವುಳ್ಳವಳಾಗಿರುವುದು ಸ್ಪಷ್ಟ.

ಪೃಥ್ವಿ, ಯಜ್ಞವೇದಿ ಮತ್ತು ಸೃಷ್ಟಿ

ಸಕಲ ವಿಶ್ವವೂ ಯಜ್ಞಮಯ, ಯಜ್ಞರೂಪ ಮತ್ತು ಯಜ್ಞೋದ್ಭವವೆಂಬುದಾಗಿ ಒಪ್ಪಿಕೊಂಡಿರುವ ವೈದಿಕ ಋಷಿಗಳ ದೃಷ್ಟಿಯಲ್ಲಿ ಸರ್ವ ಪೃಥ್ವಿಯೂ ಒಂದು ಯಜ್ಞವೇದಿ. ‘ಇಯಂ ವೈ ವೇದಿ’ (ಈ ಪೃಥ್ವಿಯು ವೇದಿಯಾಗಿರುವುದು) ಎಂಬುದಾಗಿದೆ ಅವರ ಉಕ್ತಿ. ಕಾರಣ ಈ ವೇದಿಯ ಮೇಲೆಯೇ ನವ ನಿರ್ಮಿತಿಗೋಸ್ಕರ ಸತತ ಜೀವನಾಹುತಿಗಳು ಬೀಳುತ್ತಿರುವುದು. ಮೃತ್ಯು ಮತ್ತು ಮಾತೃತ್ವ ಇವುಗಳ ಸಮಾನ ಪ್ರಾತಿನಿಧ್ಯವನ್ನು ವಹಿಸಿರುವ ಈ ಮಣ್ಣನ್ನು ಯಜ್ಞವೇದಿ ಎಂದು ಒಪ್ಪಿರುವುದರಲ್ಲಿ ನಿರ್ಶಚಿತವಾಗಿಯೂ ಒಂದು ಮಹಾಸತ್ಯದ ಪ್ರಕಟಣೆ ಹಾಗೂ ಒಂದು ದಿವ್ಯರಹಸ್ಯದ ಉದ್ಘಾಟನೆಯು ಇದೆ. ಕೇವಲ ಭಾರತದಲ್ಲಿಯಷ್ಟೆ ಅಲ್ಲ ಜಗತ್ತಿನಾದ್ಯಂತ ಮಾನವ ಸಮೂಹದಲ್ಲಿ ವಿಶ್ವ ನಿರ್ಮಿತಿಯು ಒಂದು ದಿವ್ಯ ಯುಗಳಗಳ ಮಿಥುನ ಲೀಲೆಯಿಂದಾಗುವುದು, ಇಲ್ಲವೆ ಯಜ್ಞಕ್ರಿಯೆಯಿಂದಾಗುವುದು, ಅಥವಾ ಸ್ವಯಂ ಸ್ಫೂರ್ತ ಜೀವನಾಹುತಿಯಿಂದ ಆಗುವುದು ಎಂಬುದಾಗಿ ನಂಬಿಕೆಯು ಬೇರೂರಿದೆ. ಡಾ. ಎಲಿಯಾದ್ ಅವರು ನಿರ್ಮಿತಿಯ ಈ ದ್ವಿವಿಧ ಸ್ರೋತವನ್ನು ಸ್ಪಷ್ಟಗೊಳಿಸುವ ದಿಶೆಯಲ್ಲಿ ಹೀಗೆ ಹೇಳಿದ್ದಾರೆ:[1]

“Let us specially note that the creation is completed and perfected either by a hierogamy or else by a violent death; which means that the creation depends both upon sexuality and upon sacrifice, voluntary sacrifice above all. The myth of the origin of the edible plants – a myth very widelydistributed – always has to do with the spontaneous sacrifice of devine benig.”

[ಇದನ್ನು ವಿಶೇಷವಾಗಿಯೇ ಉಲ್ಲೇಖಿಸುವುದು ಅವಶ್ಯ. ಏಕೆಂದರೆ ನಿರ್ಮಿತಿಯು ಯುಗಳ ಮಿಥುನ ಕ್ರಿಯೆಯಿಂದ ಇಲ್ಲವೆ ಆವೇಗಪೂರ್ಣ (ರಭಸ) ಮೃತ್ಯುವಿನಿಂದ ಪರಿಪೂರ್ಣಗೊಳ್ಳುವಂಥದು. ಇದರ ಅರ್ಥವೇನೆಂದರೆ ನಿರ್ಮಿತಿಯು ಮಿಥುನ ಕ್ರಿಯೆ ಮತ್ತು ಯಜ್ಞಸ್ವಯಂ ಸ್ಫೂರ್ತ ಆತ್ಮ ಬಲಿದಾನ – ಈ ಎರಡು ಅಂಶಗಳನ್ನು ಅವಲಂಬಿಸಿರುತ್ತದೆ. ಖಾದ್ಯ ವನಸ್ಪತಿಗಳ ನಿರ್ಮಿತಿಯ ಬಗ್ಗೆ ಜಗತ್ತಿನ ವಿಸ್ತೃತ ಭೂಭಾಗದಲ್ಲಿ ಪ್ರಸರಣವಾಗಿರುವ ದಿವ್ಯ ಕಥೆಯು ದೈವೀ ಪ್ರಾಮಾಣ್ಯದ ಆವೇಗಪೂರ್ಣ ಬಲಿದಾನದೊಂದಿಗೆ ಸಂಬಂಧ ಹೊಂದಿದೆ.]

ಕೊಂಚ ವಿಸ್ತೃತ ವಿವರಣೆಯ ಕೃತ್ರಿಮತೆಯನ್ನು ಸಹಿಸಿಯೂ ಸ್ವಯಂ ಸ್ಫೂರ್ತ ಆತ್ಮ ಬಲಿದಾನ ಮತ್ತು ನಿರ್ಮಿತ ಇವುಗಳ ಸಂಬಂಧದ ವಿಷಯವಾಗಿ ಡಾ. ಎಲಿಯಾದ್ ಅವರು ಮಾಡಿರುವ ಸುಂದರ ವಿವೇಚನೆಯನ್ನು ಉದ್ಧರಿಸದೆ ಇರುವುದಕ್ಕೆ ಸಾಧ್ಯವಿಲ್ಲ. ಅವರು ಹೇಳಿರುವ ಮಾತುಗಳು ಇಂತಿವೆ:[2]

“This myth of creation by a violent death transcends, therefore, the mythology of the Earth – mother. The fundamental idea is that Life can only take birth from another life which is sacrificed. The violent death is creative in this sense, that the life which is sacrificed manifests itself in a more brilliant from upon another plane of existence. The sacrifice brings about a tremendou’s transference: the life concentrated in one person overflows that person and manifests itself on the cosmic or collective scale. A single being transforms itself into a comos, or takes multiple re – birth in a whole vegetable species or race of mankind. A Living `whole’ bursts into fragments and disperses itself in myriads of animated forms. In other terms, here again we find the well known cosmogonic pattern of the primordia `wholeness’ broken into fragments by the act of creation.”

[ಆವೇಗಪೂರ್ಣ ಮೃತ್ಯುವಿನಿಂದ ಉಂಟಾಗುವುದು ನಿರ್ಮಿತಿ ಎಂದು ಹೇಳುವ ದಿವ್ಯ ಕಥೆಯನ್ನು ಈ ಭೂಮಾತೆಯ ಕಥಾವಿಶ್ವಕ್ಕೂ ಕೂಡ ದಾಟಿಸಬಹುದಾಗಿದೆ. ಇದರಲ್ಲಿನ ಮೂಲಭೂತ ಪರಿಕಲ್ಪನೆ ಹೀಗಿದೆ, ಜೀವನ ಬಲಿಗೊಂಡ ಮತ್ತೊಂದು ಜೀವನದಿಂದಲೇ ಜನ್ಮ ಪಡೆಯುವುದಕ್ಕೆ ಸಾಧ್ಯ. ಆವೇಗಪೂರ್ಣವೇನೆಂದರೆ, ಬಲಿಯಾದ ಬದುಕೇ ಅಧಿಕ ತೇಜಸ್ವಿಯಾದ ಸ್ವರೂಪದಲ್ಲಿ ಮತ್ತೊಂದು ಪಾತಳಿಯ ಮೇಲೆ ಸ್ವತಃ ತಾನೇ ಪ್ರಕಟಗೊಳ್ಳುವುದು. ಯಜ್ಞ ಅಥವಾ ಬಲಿದಾನವು ಈ ವಿಲಕ್ಷಣ ಸ್ವರೂಪವನ್ನು ಬದಲಿ ರೂಪದಲ್ಲಿ ಘಟಿಸುವಂತೆ ಮಾಡುತ್ತದೆ. ಯಾವನೋ ವ್ಯಕ್ತಿಯಲ್ಲಿ ಕೇಂದ್ರಿತವಾದ ಬದುಕು ವ್ಯಕ್ತಿತ್ವದ ಮುಖೇನ ಹೊರಸೂಸುತ್ತದೆ ಹಾಗೂ ಸ್ವತಃ ತನ್ನನ್ನು ವೈಶ್ವಿಕ ಇಲ್ಲವೆ ಸಾಮೂಹಿಕ ಪ್ರಮಾಣದಲ್ಲಿ ಪ್ರಕಟಗೊಳಿಸಿಕೊಳ್ಳುತ್ತದೆ. ಒಂದು ವ್ಯಷ್ಟಿರೂಪದ ಜೀವನವು ಸಮಷ್ಟಿ ರೂಪವನ್ನು ಹೊಂದುವುದು ಇಲ್ಲವೆ ಸಕಲ ವನಸ್ಪತಿ ಜಾತಿಗಳ ಅಥವಾ ಮಾನವ ಜಾತಿಯ ರೂಪದಲ್ಲಿ ಪುನರ್ಜನ್ಮ ಪಡೆಯುವುದು. ಒಂದು ಪ್ರಾಣಮಯ ಪೂರ್ಣತೆಯು ಅನೇಕ ಅಂಶಗಳಲ್ಲಿ ಪರಿಸ್ಫುಟವಾಗಿ ಸ್ಪಷ್ಟಗೊಂಡು ಅಸಂಖ್ಯ ಸಚೇತನ ರೂಪಗಳಲ್ಲಿ ಹಬ್ಬುವುದು. ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳಬಹುದಾದರೆ, ಸೃಷ್ಟಿ ಕ್ರಿಯೆಯ ಕಾರಣ ಆದಿಮ ಪೂರ್ಣತೆಯು ಅನೇಕ ಅಂಶಗಳ ಸ್ವರೂಪದಲ್ಲಿ ಪರಿಸ್ಫುಟಗೊಂಡು ವಿಶ್ವ ನಿರ್ಮಿತಿಯ ಸಂದರ್ಭದಲ್ಲಿನ ಕಲ್ಪನೆಯಾಗಿ ನಮಗೆ ಕಾಣಿಸುತ್ತದೆ ಮೇಲಣ ವಿಚಾರಗಳಿಂದ ಸ್ಪಷ್ಟವಾಗಿ ಮತ್ತೊಮ್ಮೆ].

ಯಜ್ಞ ಮತ್ತು ನಿರ್ಮಿತಿಗಳ ಅನುಬಂಧದ ವಿಷಯವಾಗಿ ಡಾ. ಎಲಿಯಾದ್‌ರು ಮಾಡಿರುವ ಈ ವಿವೇಚನೆ ಒಂದು ಆತ್ಮಿಕ ಪ್ರತ್ಯಯ ಸ್ವರೂಪದ್ದೆಂದೇ ಹೇಳಬೇಕು. ಅವರ ವಿವೇಚನೆಯ ಹಿನ್ನೆಲೆಯಲ್ಲಿ ನಿರ್ಮಿತಿಯ ಉಭಯ ಪ್ರಕ್ರಿಯೆಗಳ ಅನುಬಂಧದ ವಿಚಾರವು ಮನದಟ್ಟಾಗುವುದು. ಅಂದರೆ, ಆದಿಮ ಯುಗಲಗಳ ಮಿಥುನ ಕ್ರಿಯೆ ಮತ್ತು ದೈವೀ ಜೀವನದ ಸ್ವಯಂ ಸ್ಫೂರ್ತ ಬಲಿದಾನ (ಯಜ್ಞ) ಇವು ನಿರ್ಮಿತಿಯ ಭಿನ್ನ ಸ್ರೋತಗಳಾಗಿವೆಯೋ ಇಲ್ಲವೆ ಅವುಗಳಲ್ಲಿ ಆತ್ಮೀಯ ಸಂಬಂಧವಿದೆಯೋ ಎಂಬ ಪ್ರಶ್ನೆಯೊಂದು ತುಡಿಯುತ್ತದೆ ಮನಸ್ಸಿನೊಳಗೆ. ವೈದಿಕ ಋಷಿಗಳು ಆದಿ ಮಿಥುನಗಳ ಸಾಮರಸ್ಯವನ್ನು ಯಜ್ಞರೂಪದಲ್ಲಿಯೇ ಅನುಭವಿಸಿದ್ದಾರೆಂಬ ಸತ್ಯವು ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಮಹತ್ವದ್ದು. ಬೃಹದಾರಣ್ಯ ಕೋಪನಿಷತ್ತಿನಲ್ಲಿ (೬.೨.೯ – ೧೩) ಸಮಗ್ರ ವಿಶ್ವನಿರ್ಮಿತಿಯು ಈ ಕ್ರಮದಲ್ಲಿ ಯಜ್ಞಗಳಿಂದ ಉಂಟಾಗುವುದೆಂಬ ಅದ್ಭುತ ಕಲ್ಪನೆಯನ್ನು ಅತ್ಯಂತ ಸೂಕ್ಷ್ಮವಾಗಿಯೂ ವಿವರಣಾತ್ಮಕವಾಗಿಯೂ ಮಂಡಿಸಲಾಗಿದೆ:

೧. ದಿವ್ಯಲೋಕವು ಒಂದು ಯಜ್ಞ. ಅದರ ಹೋಮದ ಕಟ್ಟಿಗೆ ಆದಿತ್ಯ. ರಶ್ಮಿಯು ಧೂಮರೂಪ. ದಿವಸವೇ ಜ್ವಾಲೆ. ದಿಶೆ ಅಂಗಾರ(ಕೆಂಡ). ಉಳಿದ ದಿಶೆಗಳು ವಿಸ್ಫು ಲಿಂಗ(ಬೆಂಕಿಯ ಕಿಡಿ). ಈ ಅಗ್ನಿಯಲ್ಲಿ ದೇವರು ಶ್ರದ್ಧೆಯನ್ನು ಆಹುತಿಯಾಗಿ ಹಾಕುವನು. ಆ ಆಹುತಿಯ ಮುಖೇನ ರಾಜನಾದ ಸೋಮನು ನಿರ್ಮಾಣಗೊಳ್ಳುತ್ತಾನೆ.

೨. ಪರ್ಜನ್ಯವು ಯಜ್ಞ. ಅದಕ್ಕೆ ಸುಮಿಧಾ ಸಂವತ್ಸರ. ಅಭ್ರವೇ ಧುಮರೂಪ. ಅಶನಿ (ಮಿಂಚು)ಯೇ ಅಂಗಾರ. ಮೇಘಗಳ ಗರ್ಜನೆಯು ವಿಸ್ಫುಲಿಂಗ. ಈ ಅಗ್ನಿಯಲ್ಲಿ ದೇವನು ರಾಜನಾದ ಸೋಮನನ್ನು ಆಹುತಿಯಾಗಿ ಹಾಕುವನು. ಆ ಆಹುತಿಯಿಂದ ವೃಷ್ಟಿಯು ನಿರ್ಮಾಣವಾಗುವುದು.

೩. ಇಹಲೋಕವು ಯಜ್ಞ. ಅದಕ್ಕೆ ಸುಮಿಧಾ ಪೃಥ್ವಿ. ಅಗ್ನಿಯೇ ಧೂಮ. ಚಂದ್ರಮನೇ ಅಂಗಾರ. ನಕ್ಷತ್ರಗಳು ವಿಸ್ಫುಲಿಂಗ. ಈ ಅಗ್ನಿಯಲ್ಲಿ ದೇವನು ವೃಷ್ಟಿಯನ್ನು ಆಹುತಿಯಾಗಿ ಹಾಕುವನು. ಆ ಆಹುತಿಯಿಂದ ಅನ್ನವು ನಿರ್ಮಾಣವಾಗುವುದು.

೪. ಇಹಲೋಕವು ಯಜ್ಞ. ಅವನ ನಗ್ನ ಮುಖವೇ ಅದಕ್ಕೆ ಸಮಿಧಾ. ಪ್ರಾಣವೇ ಧೂಮ. ವಾಕ್ ಜ್ವಾಲೆಯಾಗಿದ್ದರೆ, ಕಣ್ಣುಗಳು ಅಂಗಾರಕ. ಕಿವಿಗಳು ವಿಸ್ಫುಲಿಂಗ. ಈ ಅಗ್ನಿಯಲ್ಲಿ ದೇವನು ಅನ್ನವನ್ನು ಆಹುತಿಯಾಗಿ ಹಾಕುವನು. ಆ ಆಹುತಿಯಿಂದ ರೇತಸ್ಸು (ವೀರ್ಯ) ನಿರ್ಮಾಣವಾಗುತ್ತದೆ.

೫. ಸ್ತ್ರೀಯು ಯಜ್ಞಾಗ್ನಿ. ಅವಳ ಉಪಸ್ಥ (ಜನನೇಂದ್ರಿಯ) ವೇ ಸುಮಿಧಾ. ರೋಮಗಳು ಧೂಮ, ಜ್ವಾಲೆಯು ಯೋನಿ, ಅದರೊಳಗೆ ಏನೆಲ್ಲ ಕ್ರಿಯೆಗಳು ನಡೆಯುತ್ತದೆಯೋ ಅದೇ ಅಂಗಾರ. ಆನಂದೋದ್ರೇಕವೇ ಅದಕ್ಕೆ ವಿಸ್ಫುಲಿಂಗ. ಈ ಅಗ್ನಿಯಲ್ಲಿ ದೇವನು ರೇತವನ್ನು ಆಹುತಿಯಾಗಿ ಹಾಕುವನು. ಆ ಆಹುತಿಯಿಂದ ಹುಟ್ಟಿಬರುತ್ತಾನೆ ಪುರುಷ. ಅವನು ಎಲ್ಲಿಯವರೆಗೆ ನಿಶ್ಚಿತನಾಗಿರುವನೋ ಅಲ್ಲಿಯವರೆಗೆ ಬದುಕಿರುತ್ತಾನೆ. ಅವನು ಮರಣಗೊಂಡಾಗ ಅವನನ್ನು ಪುನಃ ಅಗ್ನಿಗೇ ಹಾಕಲಾಗುವುದು.

ಉಪನಿಷತ್ತಿನ ಋಷಿಯು ವರ್ಣಿಸಿರುವ ನಿರ್ಮಿತಿಯ ಯಜ್ಞರೂಪ ಚಕ್ರವು, ನಿರ್ಮಿತಿಯ ಯಜ್ಞರೂಪ ಚಕ್ರವು, ನಿರ್ಮಿತಿಯ ಉಭಯ ಸ್ರೋತಗಳ ವಿಚಾರ ಚರ್ಚೆಯಾಗಿರುವುದಂತೂ ಸುಸ್ಪಷ್ಟ. ಋಷಿಯ ದೃಷ್ಟಿಯಲ್ಲಿ ಮಿಥುನ ಕ್ರಿಯೆಯೂ ಒಂದು ಯಜ್ಞರೂಪವೇ ಆಗಿರುವುದರಿಂದ, ಆ ಕ್ರಿಯೆಗೆ ಸಹಜವಾಗಿಯೇ ಒಂದು ದೈವೀ ಪಾವಿತ್ರ‍್ಯವಲಯವು ಪ್ರಾಪ್ತವಾಗುತ್ತದೆ. ಅದೇ ಉಪನಿಷತ್ತಿನಲ್ಲಿಯೇ ಮತ್ತೊಂದೆಡೆ ಮಿಥುನ ಕ್ರಿಯೆಯನ್ನು ಯಜ್ಞರೂಪವಾಗಿಯೇ ನೋಡುವ ಕಲ್ಪನೆಯು ಮತ್ತೆ ಪ್ರಕಟವಾಗಿದೆ (ಬೃಹದಾರಣ್ಯಕ ೬.೪.೨.೩; ಶತಪಥ. ೧೪.೯.೪.೧ – ೨). ಪ್ರಜಾಪತಿಗೆ ಹೀಗೆನಿಸಿತೊಮ್ಮೆ, ತನಗೆ (ತನ್ನ ವೀರ್ಯಕ್ಕೆ) ಎಲ್ಲಿಯಾದರೊಂದು ಆಶ್ರಯ (ಪ್ರತಿಷ್ಠೆ) ಅವಶ್ಯ. ಆ ಕಾರಣವಾಗಿಯೇ ಅವನು ಸ್ತ್ರೀಯನ್ನು ನಿರ್ಮಿಸಿದ. ಅವಳ ‘ಉಪಸ್ಥ’ ವೇದಿ (ಯಜ್ಞ)ಯಾಗಿ ರೋಮಗಳು ಈ ಅಗ್ನಿಯ ಜ್ವಾಲೆಗಳಾದುವು.

ಮಿಥುನ ಕ್ರಿಯೆಯನ್ನು ಯಜ್ಞರೂಪದಲ್ಲಿ ನೋಡುವ ಈ ವಿಲಕ್ಷಣ ಕಲ್ಪನೆಯನ್ನು ದೃಷ್ಟಿಸಿದರೆ, ನಾವು ಯಜಮಾನ ಎಂಬ ಶಬ್ದವನ್ನು ‘ಪತಿ’ ಎಂಬರ್ಥದಲ್ಲಿ ಏಕೆ ಬಳಸುತ್ತಿದ್ದೇವೆ ಎಂಬುದು ಸಹಜವಾಗಿಯೇ ಸ್ಪಷ್ಟವಾಗುತ್ತದೆ(ಶತಪಥ.೧೧.೩.೨.೧). ಯಜಮಾನ ಎಂದರೆ ಯಜ್ಞ ಮಾಡುವವ(one who performs sacrifice). ಪತಿಯು ಸ್ತ್ರೀರೂಪಿ ಅಗ್ನಿಯಲ್ಲಿ ರೇತಸ್ಸನ್ನು (ವೀರ್ಯ) ಆಹುತಿ ಮಾಡುತ್ತಾನೆ. ನಂತರ ಆ ಮೂಲಕ ‘ಪ್ರಜಾ’ ನಿರ್ಮಾಣಗೊಳ್ಳುವರು ಎಂಬ ಭಾವವು ಪತಿಗೆ ‘ಯಜಮಾನ’ ಎಂದು ಕರೆದಿರುವುದರ ಮೂಲಕ ವ್ಯಕ್ತವಾಗುತ್ತದೆ. ಅಲ್ಲದೆ ಯಾರು ‘ಯಜಮಾನ‘ನಾಗಲು ಇಚ್ಛಿಸುವನೋ, ಆತ ಪ್ರಥಮವಾಗಿ ಯಜ್ಞದೀಕ್ಷೆ ತೆಗೆದುಕೊಂಡು ದೈವೀ ಪಾತಳಿಯ ಮೇಲೆ ಪುನರ್ಜನ್ಮವನ್ನು ಪ್ರಾಪ್ತಗೊಳಿಸಿ ಕೊಳ್ಳಬೇಕು. ಆನಂತರವೇ ಅವನಿಗೆ ಪ್ರಾಪ್ತವಾಗುವುದು ‘ಯಜ್ಞ’ ಮಾಡುವ ಮತ್ತು ಅದರಿಂದ ಸಮೃದ್ಧಿಯನ್ನು ಪ್ರಾಪ್ತಗೊಳಿಸುವಂಥ ಅಧಿಕಾರ. ವಿಧಿಯುಕ್ತವಾದ ವಿವಾಹಾನಂತರ ತನ್ನ ಧರ್ಮ ಪತ್ನಿಯಲ್ಲಿ ರೇತೋದಾನ (ವೀರ್ಯದಾನ) ಮಾಡುವ ಪುರುಷವೇ ‘ಯಜಮಾನ’. ಯಜ್ಞ ವಿಷಯಕವಾದ ಈ ದೈವೀ ವಿಚಾರವು ಪೂರ್ಣತಃ ಸುಸಂವಾದಿಯಾದುದು ಎಂಬುದು ಸಹಜವಾಗಿಯೇ ನಮಗೆ ತಿಳಿಯುತ್ತದೆ. ನಿರ್ಮಿತಿ ಪ್ರಕ್ರಿಯೆಯ ಕಡೆಗೆ ನೋಡುವ ಪ್ರಾಚೀನರ ಈ ದೃಷ್ಟಿ ವಿಲಕ್ಷಣವಾದುದೇ ಸರಿ.

ಗೋವುವೃಷಭ

ಅದಿತಿ ಮತ್ತು ಪೃಥ್ವಿ ಇವರುಗಳ ಸಂಬಂಧ ಮತ್ತು ಅವರ ಏಕರೂಪತೆಯ ವಿಚಾರವನ್ನು ಕುರಿತು ಹೇಳಲಾಗಿದೆ. ಅಂತೆಯೇ ಸ್ತ್ರೀ ಮತ್ತು ಪೃಥ್ವಿಯರ ಸೃಜನ ಪ್ರಕ್ರಿಯೆಯನ್ನು ವೈದಿಕ ಋಷಿಗಳು ಯಜ್ಞರೂಪವಾಗಿ ನೋಡಿರುವ ಅನುಭವವನ್ನು ವಿವರಿಸಲಾಗಿದೆ. ಸ್ತ್ರೀ ಮತ್ತು ಪೃಥ್ವಿಯರು ಯಾವ ಪುರುಷ ಮತ್ತು ಪುರುಷ ತತ್ತ್ವದ ಸಹಯೋಗದಿಂದ ನಿರ್ಮಿತಿಯನ್ನು ಉಂಟುಮಾಡವರೋ, ಆ ಪುರುಷನನ್ನು ವೈದಿಕ ಋಷಿತಗಳು ‘ಮಹಾನಗ್ನ’ (the Greatnude) ಎಂದಿರುವರು. ಅಲ್ಲದೆ ಅವನೊಂದಿಗೆ. ವಿದ್ವಾಂಸರಾದ ಡಾ. ವಾಸುದೇವಶರಣ ಅಗ್ರವಾಲ ಅವರು ‘ಶಿವಮಹಾದೇವ’ (೧೯೬೬) ಎಂಬ ತಮ್ಮ ಇಂಗ್ಲಿಷ್ ಕೃತಿಯೊಂದರಲ್ಲಿ ಈ ಬಿರುದುಗಳನ್ನು ಪ್ರತೀಕಾತ್ಮಕವಾಗಿ ಹೇಳಿದ್ದಾರೆ.[3]ಅವರ ಪ್ರಕಾರ: “ಶಿವನ ಮೂಲಭೂತವಾದ ರಹಸ್ಯಾರ್ಥಕ ರೂಪಗಳಲ್ಲಿ ‘ಮಹಾನಗ್ನ’ ಅಥವಾ ‘ದಿಗಂಬರ’ (ದಿಶೆಗಳನ್ನೇ ಅವಸ್ತ್ರಗಳಾಗಿ ಹೊಂದಿರುವವನು)ವೂ ಒಂದು. ಈ ವಿಶೇಷಣದ ಪ್ರತೀಕಾತ್ಮಕತೆಯ ಮೂಲ ‘ಮಹಾನಗ್ನ’ ವಿಷಯವು ವೈದಿಕ ವಿಚಾರಗಳಲ್ಲಿಯೂ ಇದೆ (ಅಥರ್ವ.೨೦.೧೩೬.೧೧).ಇದು ಪರಮ ಪುರಷನ ಅಥವಾ ನಿರ್ಮಾತೃವಿನ ವಿಶೇಷಣವಾಗಿದ್ದು, ಅವನ ಪ್ರಕೃತಿಯನ್ನು ‘ಮಹಾನಗ್ನಿ’ ಯೆನ್ನಲಾಗಿದೆ… ಮಹಾನಗ್ನಿಯು ಮಹಾನಗ್ನನ ಹಿಂದೆ ಧಾವಿಸಿ ಹೋಗಿ ಆತನಿಗೆ ಹೇಳುತ್ತಾರೆ; ‘ಈ ಅನ್ನವನ್ನು ನೀನು ತಿನ್ನು ಮತ್ತು ನನ್ನನ್ನು ಉಪಭೋಗಿಸು’. ಈ ಎಲ್ಲಾ ಪ್ರತಿಮಾ ಸೃಷ್ಟಿಯು ಲೈಂಗಿಕ ಮೂಸೆಯಲ್ಲಿ ಘಟಿಸಿದುದಾಗಿದ್ದು, ವಿಶ್ವನಿರ್ಮಿತಿಗಾಗಿ ನಿರ್ಮಾತೃವಿನಲ್ಲಿ ಮೊದಲು ಕಾಮೋದ್ಬವವಾಯಿತು. ಆ ಆದಿಮ ಕಾಲದ ಭಾಷೆಯು ಈ ಪ್ರತಿಮಾ ಸೃಷ್ಟಿಯಲ್ಲಿ ಪ್ರಕಟಗೊಂಡಿರುವ ಪರಿ ಹೀಗಿ.”

ಡಾ. ಅಗ್ರವಾಲರು ಸೂಚಿಸಿರುವಂತೆ ‘ಮಹಾನಗ್ನ’ ವೃಷಭರೂಪೀ ಶಿವ ಅಥವಾ ನಂದಿ. ನಂದಿ ಎಂದರೆ ಆನಂದಿ – ಆನಂದದಾಯಿ. ನಿರ್ಮಿತಿ ಪ್ರಕ್ರಿಯೆಯಲ್ಲಿ ಸ್ತ್ರೀತತ್ತ್ವದೊಂದಿಗೆ ಮಗ್ನ ನಾಗುವಾಗ ಅವನ ಈ ‘ನಂದಿ‘ – ರೂಪವು ಪ್ರಕಟವಾಗಿರುವುದು. ಈ ರೂಪವನ್ನು ಅವರು ‘ಆನಂದದಾಯಿ ಸರ್ವಜನಕ್ಷಮ ಬೀಜ’ (Joy – givinge procreative seed) ಎಂಬುದಾಗಿ ಕರೆದಿದ್ದಾರೆ.[4]

ಅಂದರೆ ಈ ನಂದಿ ಅಥವಾ ವೃಷಭರೂಪ ಪುರುಷತತ್ತ್ವ ಸಾಹಚರ್ಯತೆಯಿಂದ ಸ್ತ್ರೀ ಅಥವಾ ಪೃಥ್ವಿಯು ಗೋರೂಪದವಳಾಗಿರಲು ಅಪೇಕ್ಷಿಸುವ ಸಂಗತಿ ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ. ಈ ‘ಅಪೇಕ್ಷೆ’ ವೈದಿಕ ಪ್ರತೀಕ ವಿದ್ಯೆಯೊಂದಿಗೆ ಪೂರ್ಣತಃ ಸಂವಾದಿಯಾಗುವಂತಹದ್ದಾಗಿದೆ. ವೇದಗಳು ಅದಿತಿ ಮತ್ತು ಪೃಥ್ವಿಯನ್ನು ‘ಗೋವು’ ಎಂದು ಕರೆದಿರುವುದು ಈ ಕಾರಣದಿಂದಲೇ. (ಋ.೮.೧೦೦.೧೫; ೧.೧೬೪.೮; ೮.೯೪.೧ ಇತ್ಯಾದಿ) ನಿರುಕ್ತದ ಪ್ರಕಾರ ‘ಗೋವು’ ಪೃಥ್ವಿಯ ಒಂದು ಪರ್ಯಾಯ ನಾಮ:

ಗೌರಿತಿ ಪೃಥಿವ್ಯಾ ನಾಮಧೇಯಂ ಯದಸ್ಯಾಂ ಭೂತಾನಿ ಗಚ್ಛಮತಿ |
(ನಿರುಕ್ತ.೨.೧.೧)

(ಪೃಥ್ವಿಯ ಹೆಸರು ಗೋವು; ಎಂತಲೇ ಭಕ್ತರು ಗಮನ ಹರಿಸುತ್ತಾರೆ ಅವಳೆಡೆಗೆ.)

ಗೋ – ಗೌ ಎಂಬ ಹೆಸರಿನ ಪೃಥ್ವೀವಾಚಕ ಅರ್ಥವನ್ನು ಸ್ಪಷ್ಟಪಡಿಸುವಲ್ಲಿ ನಿರುಕ್ತಕಾರ ‘ಗೌ’ ಎಂಬ ಶಬ್ದವು ‘ಗಮ್’ ಎಂಬ ಗತ್ಯರ್ಥಕ ಧಾತುವಿನಿಂದ ವ್ಯುತ್ಪತ್ತಿಗೊಳಿಸಿದ್ದಾನೆ. ನಿಘಂಟುಕಾರರು ಸಹ ಈ ‘ಗೌ’ ಶಬ್ದದ ವ್ಯುತ್ಪತ್ತಿಯನ್ನು ಈ ರೀತಿಯಲ್ಲಿಯೇ ನೀಡಿರುವವರು:

ಗೌರಿತಿ ಪೃಥಿವ್ಯಾ ನಾಮಧೇಯಂ
ಯದ್ದೂರಂ ಗತಾ ಭವತಿ ಯಚ್ಚಾಸ್ಯಾಂ ಭೂತಾನಿ ಗಚ್ಛಂತಿ |
(ನಿಘಂಟು, ೨.೫)

[ಗೌ ಎಂಬುದು ಪೃಥ್ವಿಯ ಹೆಸರು. ಅವಳು ದೂರ ದೂರ ಹೋಗುತ್ತಿರುತ್ತಾಳೆ. ಆ ಕಾರಣ ಭಕ್ತರೂ ಅವಳನ್ನು ಹಿಂಬಾಲಿಸುತ್ತಾರೆ.]

ಪೃಥ್ವಿಯ ಈ ಗೋರೂಪತೆಯನ್ನು ಪುರಾಣಕಾರರೂ ಪರಿಪುಷ್ಟಗೊಳಿಸಿದ್ದಾರೆ. ಪೃಥ್ವಿಯ ದೋಹನ (ಹಾಲು ಕರೆಯುವಿಕೆ) ಮಾಡಿ ನಾನಾ ದ್ರವ್ಯಗಳನ್ನು ಹೇಗೆ ಪ್ರಾಪ್ತಿಸಿಕೊಳ್ಳಲಾಯಿತು. ಆ ದೋಹನ ಕ್ರಿಯೆಯಲ್ಲಿ ಪ್ರತಿಬಾರಿಯೂ ವತ್ಸ, ಪಾತ್ರ ಮತ್ತು ದೋಗ್ಧಾ – ಈ ಭೂಮಿಕೆಗಳನ್ನು ಯಾರ‍್ಯಾರು ವಹಿಸಿದ್ದರು ಎಂಬುದನ್ನೆಲ್ಲ ಸವಿಸ್ತರವಾಗಿ ಬಣ್ಣಿಸಿವೆ ಪುರಾಣಗಳು. ಗಂಧ – ಮರುಳರಾದ ಗಂಧರ್ವರು ಚಿತ್ರರಥನನ್ನು ವತ್ಸನನ್ನಾಗಿ ಮಾಡಿ ಪದ್ಮಪಾತ್ರೆಯಲ್ಲಿ ಪೃಥ್ವಿಯನ್ನು ದೋಹನ ಮಾಡಿ ಸುಗಂಧ ದೊರಕಿಸಿಕೊಂಡ ಕಲ್ಪನೆಯ ವಿವರ ಕಮಲ ಪ್ರತೀಕದ ವಿವರಣೆಯಲ್ಲಿ ನೋಡಲಾಗಿದೆ. ದೈತ್ಯರ ಭಾರದಿಂದ ಅಥವಾ ಅನ್ಯಾಯ – ಅತ್ಯಾಚಾರಗಳ ಅತಿರೇಕತೆಯಿಂದ ಸಂತ್ರಸ್ತಳಾದ ಪೃಥ್ವಿಯು ಪ್ರತಿಯೊಂದು ಬಾರಿಯೂ ಗೋವಿನ ರೂಪದಲ್ಲಿ ಪರಮಾತ್ಮನೆಡೆಗೆ ಹೋಗುತ್ತಾಳೆ. ಅವಳ ಮುಖ್ಯ ಉದ್ದೇಶ ದುಷ್ಟರನ್ನು ಸಂಹರಿಸುವುದಕ್ಕೆ ಅವತಾರವನ್ನೆತ್ತಲು ಅವನನ್ನು ಪ್ರವೃತ್ತೊಳಿಸುವುದು. ಈ ಬಗೆಯ ಕಥೆ, ಪುರಾಣಗಳು ಬಹಳಷ್ಟಿವೆ. ಮಾತ್ರವಲ್ಲ ವಿದ್ವಾಂಸರಿಗೆ ಈ ಬಗ್ಗೆ ಸ್ಪಷ್ಟ ಕಲ್ಪನೆಯೂ ಇದೆ.

ಸಾತಾರ(ಮಹಾರಾಷ್ಟ್ರ) ಜಿಲ್ಲೆಯ ವಡಗಾಂವ್ ಎಂಬಲ್ಲಿ (ಜಯರಾಮ ಸ್ವಾಮಿಗಳದ್ದು) ದೊರೆತಿರುವ ಲಜ್ಜಾಗೌರಿ ಮೂರ್ತಿಯ ಬಲಭಾಗದಲ್ಲಿ ವೃಷಭ (ನಂದಿ)ವಿದೆ. ಲಜ್ಜಾಗೌರಿಯು ಮಹಾಮಾತೆಯಾದ ಪೃಥ್ವಿಯೇ ಆಗಿರುವುದರಿಂದ ಅವಳ ಗೋರೂಪಿಯಾಗಿದ್ದಾಳೆ ಮತ್ತು ಆ ಹಿನ್ನೆಲೆಲ್ಲಿ ಅವಳಿಗೆ ಸಹಚರನಾಗಿರುವುದು ನಂದಿ. ನಮ್ಮ ವೈವಾಹಿಕ ಆಚರಣೆಗಳಲ್ಲಿ ವರನ ಮಸ್ತಕಕ್ಕೆ ಕಟ್ಟುವ ಬಾಶಿಂಗ ವೃಷಭ ರೂಪವನ್ನು ಒಪ್ಪಿಕೊಂಡ ಪುರುಷ ತತ್ತ್ವದ ಪ್ರತೀಕವೇ ಆಗಿದೆ.

ಬಾಶಿಂಗದ ಸ್ವರೂಪವು ಇಂದು ನಮ್ಮ ವಿವಾಹ ಸಂಪ್ರದಾಯದಲ್ಲಿ ‘ವರ’ ನ (ವಧುವಿಗೂ) ಮಸ್ತಕಕ್ಕೆ ಕಟ್ಟುವ ಒಂದು ‘ಶೋಭಾಯಮಾನ ವಸ್ತು‘ವಾಗಿಯಷ್ಟೆ ಕಾಣುತ್ತಿದೆ. ಆದರೆ ಅದಕ್ಕೊಂದು ಅನುಷ್ಠಾನಿಕವಾದ ಮಹತ್ವವಿದೆ ಮೂಲದಲ್ಲಿ. ಬಾಶಿಂಗ ಎರಡು ಶಿಂಗ(ಕೋಡು)ಗಳುಳ್ಳ ಒಂದು ಮುಕುಟ. ‘ಬಾಶಿಂಗ’ ಎಂಬ ಶಬ್ದವು ಎರಡು ಘಟಕಗಳಿಂದಾಗಿದೆ: ಬಾ ಮತ್ತು ಶಿಂಗ. ‘ಬಾ’ ಎಂದರೆ ‘ದ್ವಿ‘, ‘ಎರಡು’. (ಉದಾಹರಣೆಗೆ ಬಾವನ್ (ಐವತ್ತೆರಡು), ಬಾಸಷ್ಟ (ಅರವತ್ತೆರಡು), ಬಾಹತ್ತರ್ (ಎಪ್ಪತ್ತೆರಡು) ಎಂಬೀ ಸಂಖ್ಯಾ ವಾಚಕ ಶಬ್ದಗಳಲ್ಲಿನ ‘ಬಾ’ ಎಂಬ ಪೂರ್ವಪದಕ್ಕೆ ಅರ್ಥ ‘ಎರಡು’. ‘ಶಿಂಗ’ ಎಂಬ ಶಬ್ದವು ಸಂಸ್ಕೃತದ ‘ಶೃಂಗ’ ಎಂಬುದರಿಂದ ಬಂದುದಾಗಿರುವುದಂತೂ ಸ್ಪಷ್ಟ. ಅಂದರೆ, ಬಾಶಿಂಗ ಎಂಬುದು ದ್ವಿಶೃಂಗ. ಎರಡು ಶಿಂಗಗಳು – ಎರಡು ಶಿಂಗಗಳಿಂದ ಯುಕ್ತವಾದ ಶಿರೋಭೂಷಣ. ಇಂಗ್ಲಿಶಿನಲ್ಲಿ `Hor – Days’ ಎಂದು ಹೇಳಲಾಗಿದೆ ಇದನ್ನು. ವಿವಾಹ ವಿಧಿಯಲ್ಲಿ ಈ ಎರಡು ಶಿಂಗ (ಕೋಡು)ಗಳ ಶಿರೋಭೂಷಣವನ್ನು ವರನ ಮಸ್ತಕಕ್ಕೆ ಕಟ್ಟುವುದುಂಟು ನಮ್ಮಲ್ಲಿ ಇಂದಿಗೂ. ವಿಶಿಷ್ಟವಾಗಿ ಈ ಶಿಂಗಗಳು ಪಶುಗಳ ವ್ಯವಚ್ಛೇದಕ ಲಕ್ಷಣಗಳಾಗಿದ್ದು ಅದನ್ನು ನಾವು ಬಹಳ ಮಹತ್ವವಾದ ವಿಧಿಯೊಂದರಲ್ಲಿ ಬಳಸುತ್ತಾ ಬಂದಿದೇವೆ. ಇದು ಹೀಗೇಕೆ ಎಂಬುದರ ಉತ್ತರವನ್ನು ಶೋಧಿಸುವುದು ಅವಶ್ಯ. ಮಾನವರು ಲಗ್ನವಿಧಿಯಂಥ ಪ್ರಸಂಗದಲ್ಲಿ ಸ್ವತಃ ತಮ್ಮನ್ನು ಪಶುರೂಪಗೊಳಿಸಿ ಕೊಂಡು ಮೆರೆಯುವುದೇಕೆ ಎಂಬ ರಹಸ್ಯವನ್ನು ಶೋಧಿಸಬೇಕಾದದ್ದು ಅಗತ್ಯ.

ಶೃಂಗ: ಪೌರುಷ ಪ್ರತೀಕ

ಬಾಶಿಂಗ ಮತ್ತು ವಿವಾಹ ವಿಧಿಗಳ ಸಂಬಂಧ ಎಷ್ಟು ದೃಢವಾಗಿರುವುದೆಂದರೆ ವಿವಾಹಾನುಕೂಲ ಪರಿಸ್ಥಿತಿಯ ಉಲ್ಲೇಖವನ್ನು ನಾವು ‘ಬಾಶಿಂಗಬಲ ಇರುವುದು’ (ಬಾಶಿಂಗಬಳ್ ಉಭೇರಾಹಣೇ) ಎಂಬುದಾಗಿ ಹೇಳುತ್ತೇವೆ. ಲಗ್ನ ಮುಗಿಸುವ ಉಲ್ಲೇಖವನ್ನು ‘ಬಾಶಿಂಗ ಬಿಡುವುದು’ (ಬಾಶಿಂಗ ಸುಟಣೆ) ಎಂಬ ಶಬ್ದಾವಳಿಗಳಲ್ಲಿ ಬಿಂಬಿಸಲಾಗಿದೆ. ಯಾವನೇ ವ್ಯಕ್ತಿ ಯಾವುದೋ ವಿಶಿಷ್ಟ ಕೆಲಸಕ್ಕೆ ವಿಶೇಷವಾಗಿ ಯೋಗ್ಯ ವ್ಯಕ್ತಿಯೆನಿಸಿದ್ದರೆ ಅವನನ್ನು ಕುರಿತಂತೆ ಆ ವ್ಯಕ್ತಿಯ ಮಸ್ತಕದ ಮೇಲೆ ಬಾಶಿಂಗವಿದೆ ಎಂಬುದಾಗಿ ಸಾಕ್ಷಿ ನುಡಿಯುತ್ತಾರೆ. ಬಾಶಿಂಗವು ವಿವಾಹ ವಿಧಿಯಲ್ಲಿ ವರನ ಪೌರುಷ ಪ್ರತೀಕವಾಗಿರುವುದೇ ಇದಕ್ಕಿರುವು ಅರ್ಥ. ಬಾಶಿಂಗವು (ದ್ವಿಶೃಂಗ) ಯಾವ ಪ್ರಾಣಿಗಳ ವ್ಯವಚ್ಛೇದಕ ಲಕ್ಷಣವಾಗಿರುವುದೋ ಆ ಪ್ರಾಣಿ ಅಥವಾ ಅವುಗಳಲ್ಲಿನ ಪ್ರಾತಿನಿಧಿಕ ಪ್ರಾಣಿಯನ್ನು ಇಂತಹ ಪರಂಪರೆಯಲ್ಲಿ ಪೌರುಷಕ್ಕೆ ಪ್ರತೀಕವಾಗಿ ಸ್ವೀಕರಿಸಿದುದಾಗಿರಬೇಕು.

ಎತ್ತು, ಕೋಣ, ಜಿಂಕೆ (ಗಂಡು)ಗಳೆಲ್ಲ ಪ್ರಸಿದ್ಧವಾಗಿರುವುದು ಶೃಂಗಯುಕ್ತ ಪ್ರಾಣಿಗಳಾಗಿಯೇ. ಇವುಗಳಲ್ಲಿ ಎತ್ತಿನ ಮಹತ್ವ ಅನನ್ಯ ಸಾಧಾರಣವೆನಿಸಿದೆ ನಮ್ಮ ಸಂಸ್ಕೃತಿಯಲ್ಲಿ ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ವೃಷಭವನ್ನು ಅತ್ಯಮತ ಪವಿತ್ರವಾದುದೆಂದು ಒಪ್ಪಿಕೊಳ್ಳಲಾಗಿದೆ. ಪುರಾಣಗಳು ಅದನ್ನು ಶಿವನ ವಾಹನವಾಗಿಸಿ, ಅದರ ಪ್ರತಿಷ್ಠೆಯನ್ನು ಇನ್ನೂ ಸ್ಥಿರ ಗೊಳಿಸಿವೆ. ವೀರ್ಯವಾನ್ ಪುರುಷನನ್ನು ನಮ್ಮಲ್ಲಿ ‘ಪುರುಷಷಮ’ ಎಂಬುದಾಗಿ ಬಹಳೇ ಗೌರವದಿಂದ ಉಲ್ಲೇಖಿಸುವರು. ‘ವೃಷಭನಂತಹ ಪುರುಷ’ ಎಂಬುದಾಗಿ ಪುರುಷನನ್ನು ಉಲ್ಲೇಖಿಸುವಾಗ, ನಮ್ಮ ಮನಸ್ಸಿನಲ್ಲಿ ಪುರುಷನನ್ನು ಪಶುವಿನೊಂದಿಗಿಟ್ಟು ತುಲನೆ ಮಾಡು ವಂಥ ಯಾವುದೇ ಗೌಣಭಾವವಿರುವುದಿಲ್ಲ, ಬದಲಾಗಿ ಅಭಿಮಾನದ ತರಂಗಗಳೇಳುತ್ತಿರುತ್ತವೆ. ಪುರುಷನ ಬಗೆಗಿನ ಈ ಅಸಾಧಾರಣ ಮಹತ್ವವು ನಮ್ಮ ಜೀವನ ಮತ್ತು ಸಾಹಿತ್ಯದಲ್ಲಿ ವೇದ ಕಾಲದಿಂದಷ್ಟೇ ಅಲ್ಲ ವೇದ ಪೂರ್ವಕಾಲದಿಂದಲೂ ಇರುವುದು ಗಮನಾರ್ಹ ಸಂಗತಿ. ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿನ ಈ ವೃಷಭ ಮಹಿಮೆಯು ಒಂದು ಬೃಹದ್ ಗ್ರಂಥವಾಗುವಂಥ ವಿಷಯವನ್ನುಳ್ಳದಾಗಿದೆ.

ವೃಷ ಅಥವಾ ವೃಷಭ ಎಂಬ ಸಂಸ್ಕೃತ ಶಬ್ದದ ವ್ಯುತ್ಪತ್ತಿ (ವೃಷ್‌ ಸಿಂಚನ ಮಾಡುವುದು) ಎಂಬ ಧಾತುವಿನಿಂದ ಬಂದುದಾಗಿದೆ. ವೀರ್ಯ ಸಿಂಚನ ಮಾಡುವುದು ಎಂಬುದಾಗಿದೆ ಈ ವೃಷ ಶಬ್ದ ಮೂಲ ಅರ್ಥ. ಅಂದರೆ ವೃಷ ಅಥವಾ ವೃಷಭವು ಅದರ ವರ್ಷಣಶೀಲವಾದ ಮೂಲ ಪ್ರಕೃತಿಯಿಂದಲೇ ಪೌರುಷ ಪ್ರತೀಕವಾಗಿ ಪರಿಣಮಿಸಿರುವುದು. ದ್ಯಾವ – ಪೃಥ್ವಿಯ ಸಂಬಂಧದಲ್ಲಿ ವೃಷಭವು ದ್ಯುಲೋಕದ ಪ್ರತಿನಿಧಿತ್ವ ವಹಿಸಿ ಜಲವೃಷ್ಟಿಯ ಮೂಲಕ ಪೃಥ್ವಿಯನ್ನು ಸುಫಲನಗೊಳಿಸುತ್ತದೆ. ಅಂದರೆ, ಸಮಷ್ಟಿಯ ಸಂದರ್ಭದಲ್ಲಿ ಯಾರು ಜಲವೃಷ್ಟಿ ಮಾಡುವ ‘ದ್ಯೌ’ ಆಗಿರುವನೋ, ಆತನೇ ವೃಷ್ಟಿಯ ಸಂದರ್ಭದಲ್ಲಿ ವೀರ್ಯ ವೃಷ್ಟಿ ಮಾಡುವ ಪುರುಷನಾಗಿರುತ್ತಾನೆ. ಜಲವು ಪೃಥ್ವಿಯನ್ನು ಸುಫಲನಗೊಳಿಸುವ ದಿವ್ಯ ಪುರುಷನ ವೀರ್ಯವಾಗಿದೆ ಎಂಬುದಾಗಿ ಮತ್ತೆ ಮತ್ತೆ ಅನೇಕ ಬಾರಿ ಉಚ್ಛರಿಸಿರುವುದುಂಟು. ದ್ಯಾವಾ – ಪೃಥ್ವಿಯರ ಈ ಬಿಡಿಸಲಾಗದ ಸಂಬಂಧವು ವೇದಗಳ ಅನೇಕ ಋಷಿವರ್ಯರ ವಿಷಯವೂ ಆಗಿದೆ. ‘ಆಕಾಶದೊಂದಿಗೆ ಆಯಿತು ಧರಣಿ ಮಾತೆಯ ಸಂಬಂಧವು!’ ಎಂಬ ಗೀತೆಯನ್ನು ಇಂದಿಗೂ ಕವಿ ಜನರು ಹಾಡುತ್ತಲಿದ್ದಾರೆ.

ವಿಶ್ವಸೃಷ್ಟಿಯ ಸಾಮರ್ಥ್ಯ

ಪುರಾಣಗಳ ಪ್ರಕಾರ ವೃಷಭ ಶಿವನ ವಾಹನ, ಆದರೆ ಆರಂಭದಲ್ಲಿ ರುದ್ರ – ಶಿವನನ್ನೆ ವೃಷಭ ರೂಪಿಯೆನ್ನಲಾಗಿತ್ತು ಎಂಬುದು ವೈದಿಕ ಉಲ್ಲೇಖಗಳಿಂದ (ಋ.೧.೧೪೩.೬) ತಿಳಿದು ಬರುತ್ತದೆ. ಆರಂಭದಲ್ಲಿ ಅ – ಮಾನವ ಪ್ರತೀಕಗಳ ರೂಪದಲ್ಲಿ ಪೂಜಿಸಲ್ಪಟ್ಟ ಪ್ರತೀಕವೇ ಅದರ ವಾಹನವಾದುದರ ಉಲ್ಲೇಖ ಭಾರತೀಯ ದೇವತಾ – ಮಂಡಲದ ಇತಿಹಾಸದಲ್ಲಿ ಮತ್ತೆ ಮತ್ತೆ ಬಂದಿದೆ. ರುದ್ರ – ಶಿವನ ವಿಷಯದಲ್ಲಿಯೂ ಇದು ಸತ್ಯ. ಪ್ರಾರಂಭದಲ್ಲಿ ಆತ ವೃಷಭನಾಗಿದ್ದ; ಮುಂದೆ ಅವನೇ ವೃಷಭ ವಾಹನನಾದ. ಅಂತೆಯೇ ವಿಷ್ಣು ಸುಪರ್ಣ (ಗರುಡ) ರೂಪಿಯಾಗಿದ್ದ ಮುಂದೆ ಅವನೇ ಗರಡು ವಾಹನನಾದ. ಶಿವನ ವೃಷಭತ್ವದ ಸೂಚನೆ (ಕುರು ಹು)ಯು ಉತ್ತರ ಕಾಲೀನ ಶೈವ ವಾಙ್ಮಯದಲ್ಲಿ ವಿಪುಲವಾಗಿಯೇ ಬಂದಿದೆ. ಲಿಂಗಪುರಾಣದಲ್ಲಿ ಶಿವನು ಉಲ್ಲೇಖಿಸಲ್ಪಟ್ಟಿರುವುದು ‘ದೀಪ್ತಶೃಂಗ‘, ‘ಏಕಶೃಂಗ’, ‘ಶೃಂಗಿನ್’ ಎಂಬ ಶೃಂಗ ಸಂಬಂಧಿ ಹೆಸರುಗಳಲ್ಲಿಯೇ. ಶೈವರ ಅನುಕರಣೆಯಿಂದ ವೈಷ್ಣವರೂ ಸಹ ‘ವಿಷ್ಣು ಸಹಸ್ರನಾಮಾ‘ದಲ್ಲಿ ವಿಷ್ಣುವನ್ನು ‘ಮಹಾಶೃಂಗ‘, ‘ಏಕಶೃಂಗ’ ಮತ್ತು ‘ಶೃಂಗಿನ್’ ಎಂಬ ಹೆಸರುಗಳಿಂದ ಕರೆದಿರುವುದುಂಟು. ವಿಶ್ವಜನಕನು ಹೀಗೆ ಶೃಂಗಧಾರಿಯೆನಿಸಿದ್ದಾನೆ ನಮ್ಮ ಪರಂಪರೆಯಲ್ಲಿ; ಶೃಂಗವು ಅವನ ವಿಶ್ವಸೃಷ್ಟಿ ಸಾಮರ್ಥ್ಯದ ಪ್ರತೀಕವಾಗಿದೆ.

ಕೋಡು(ಶಿಂಗ) ಇದು ಪೌರುಷ ಪ್ರತೀಕವೂ, ಪೃಥ್ವಿ ಮತ್ತು ಸ್ತ್ರೀಯರನ್ನು ಸುಫಲನಗೊಳಿಸುವ ಸಾಮರ್ಥ್ಯಯುಕ್ತವಾದುದೂ ಆಗಿರುವುದರ ಸ್ಪಷ್ಟ ಆವಿಷ್ಕಾರವನ್ನು ರಾಮಾಯಣದ ಬಾಳಕಾಂಡ (ಸರ್ಗ ೯ – ೧೦)ದಲ್ಲಿ ಕಾಣಬಹುದಾಗಿದೆ ನಾವು. ಅಂಗದೇಶದಲ್ಲಿ ರೋಮಪಾದನೆಂಬ ರಾಜನೊಬ್ಬ ರಾಜ್ಯಭಾರ ನಡೆಸುತ್ತಿದ್ದ. ಅವನಿಂದ ಘಟಿಸಿದ ಯಾವುದೋ ಒಂದು ಪಾಪದ ಕಾರಣವಾಗಿ ಅವನ ರಾಜ್ಯದಲ್ಲಿ ದೀರ್ಘಕಾಲದ ಬರಗಾಲವುಂಟಾಗಿ, ಎಲ್ಲೆಡೆ ಹಾಹಾಕಾರವೆದ್ದಿತು. ರಾಜನು ಬ್ರಾಹ್ಮಣರನ್ನು ಕರೆಸಿ ಜಲವೃಷ್ಟಿಯ ಸಂಬಂಧವಾಗಿ ಚರ್ಚಿಸಿದನು. ಬ್ರಾಹ್ಮಣರು ರಾಜನಿಗೆ ಹೇಳಿದ್ದು ಹೀಗೆ: “ವಿಭಾಂಡಕ ಮುನಿಯ ಪುತ್ರ ಋಷ್ಯಶೃಂಗ ಒಬ್ಬ ಅಪ್ಪಟ ಬ್ರಹ್ಮಚಾರಿ. ಆತ ಇಂದಿಗೂ ಸ್ತ್ರೀಯರ ದರ್ಶನವನ್ನೇ ಮಾಡಿಲ್ಲ. ನೀನು ಅವನಲ್ಲಿಗೆ ವೇಶ್ಯೆಯನ್ನು ಕಳುಹಿಸಿ ಅವಳ ಮುಖೇನ ಅವನಿಗೆ ಮೋಹ ಉಂಟಾಗುವಂತೆ ಮಾಡು, ನಂತರ ಅವನನ್ನು ನಿನ್ನ ರಾಜ್ಯಕ್ಕೆ ಕರೆದುಕೊಂಡು ಬಂದು, ನಿನ್ನ ಮಗಳನ್ನು ಕೊಟ್ಟು ವಿವಾಹ ಜರುಗಿಸು. ಹಾಗೆ ಮಾಡಿದರೆ ತಂತಾನೆ ಜಲವೃಷ್ಟಿಯುಂಟಾಗುತ್ತದೆ”. ರೋಮಪಾದನು ಬ್ರಾಹ್ಮಣರ ಉಪದೇಶಾನುಸಾರ ಋಷ್ಯಶೃಂಗನನ್ನು ತನ್ನ ರಾಜ್ಯಕ್ಕೆ ಕರೆ ತಂದು, ತನ್ನ ಮಗಳಾದ ಶಾಂತಾಳನ್ನು ಕೊಟ್ಟು ವಿವಾಹ ಮಾಡುವ ಮೂಲಕ ಬರಗಾಲ ಪೀಡನೆಯಿಂದ ತನ್ನ ದೇಶವನ್ನು ಸಂರಕ್ಷಿಸಿಕೊಂಡನು.

ಋಷ್ಯಶೃಂಗದ ಈ ಸುಫಲನಕಾರಕ ಸಾಮರ್ಥ್ಯವು ದಶರಥನಿಗೆ ತಿಳಿಯಿತು. ಆತನೂ ಅವನನ್ನು ತನ್ನು ಅಯೋಧ್ಯಾ ರಾಜ್ಯಕ್ಕೆ ಕರೆದೊಯ್ದ. ಸಂತಾನ ಪ್ರಾಪ್ತಿಯ ಕಾರಣ ಅವನ ನೇತೃತ್ವದಲ್ಲಿಯೇ ಪುತ್ರಕಾಮೇಷ್ಠಿ ಯಾಗವನ್ನು (ಸರ್ಗ ೧೧ – ೧೮) ಜರುಗಿಸಿದನು. ಅಂಗ ದೇಶದಲ್ಲಿನ ಅವರ್ಷಣ (ಬರ)ವನ್ನು ಇಲ್ಲಗೊಳಿಸುವುದಕ್ಕಾಗಿ ಮತ್ತು ಅಯೋಧ್ಯಾ ದೊರೆ ದಶರಥನ ರಾಣಿಯರ ಸಂತಾನ ಹೀನತೆಯನ್ನು ದೂರ ಮಾಡಿ ಅವರ ಕಂಕುಳನ್ನು ತುಂಬಿಸುವುದಕ್ಕೆ ಋಷ್ಯಶೃಂಗನ ಉಪಸ್ಥಿತಿ ಉಪಯುಕ್ತವಾಗಿತ್ತು ಎಂಬುದೇ ರಾಮಾಯಣದಲ್ಲಿನ ಈ ಕಥೆಯ ಅನ್ವಯಾರ್ಥ. ಋಷ್ಯಶೃಂಗನು ಶೃಂಗಧಾರಿ ಪುರುಷ, ಜಿಂಕೆಯ ಶೃಂಗವಾಗಿತ್ತು ಅವನ ಈ ಶೃಂಗ. ಶೃಂಗ ಮತ್ತು ಸುಫಲನಕಾರಕ ಪೌರುಷ ಇವುಗಳ ದೃಢ ಸಂಬಂಧದ ಬಗ್ಗೆ ಋಷ್ಯಶೃಂಗ – ಕಥೆಯು ಸ್ಪಷ್ಟ ಪ್ರಕಾಶನ ಬೀರುತ್ತದೆ.

 

[1] Myth, Dreams and Mystries: Mircea Eliade, PP.183

[2]ಅದೇ, ಪು.೧೮೪.

[3] Siva mahadeva: V.S. Agrawala, Varanasi, 1966, PP.40 – 41.

[4]ಅದೇ, ಪು.೪೧