ಜೋತಿಬಾ: ಒಂದು ಚರ್ಚೆ

ಪ್ರಸ್ತುತ ಕೃತಿಯಲ್ಲಿನ ‘ಜೋತಿಬಾ’ ಎಂಬ ಪ್ರಕರಣವು ‘ನವಭಾರತ’ ಮಾಸಿಕದಲ್ಲಿ (ಜನವರಿ, ೧೯೭೬) ಲೇಖನ ರೂಪವಾಗಿ ಪ್ರಕಟಗೊಂಡಿತ್ತು. ಪತ್ರಕಾರರಾದ ಶ್ರೀ ರಾ.ಟೀಕೆಕರ ಅವರು ಆ ಕುರಿತು ಕೆಲವು ಆಕ್ಷೇಪಗಳನ್ನು ಎತ್ತಿದ್ದರು. ಆ ಆಕ್ಷೇಪಗಳಿಗೆ ನಾನು ಕೊಟ್ಟ ಉತ್ತರ (‘ನವಭಾರತ‘, ಫೆಬ್ರವರಿ ಮತ್ತು ಮಾರ್ಚ್, ೧೯೭೬) ವಾಚಕರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಿತು. ಆ ಭಾಗವನ್ನು ಇಲ್ಲಿ ಪರಿಶಿಷ್ಟ ರೂಪದಲ್ಲಿ ಸಾದರಪಡಿಸಿರುತ್ತೇನೆ.

ಆಕ್ಷೇಪ: ಶ್ರೀ ರಾ. ಟೀಕೆಕರ

ಜನವರಿ೧೯೭೬ರ ‘ನವಭಾರತ‘ದಲ್ಲಿ ಪ್ರಕಟವಾದ ಡಾ. ಢೇರೆಯವರ ‘ಜೋತಿಬಾ: ಶೋಧ ಆಣಿ ಬೋಧ’ ಲೇಖನವು ಗಂಭೀರವಾದುದು. ಅದನ್ನು ಪುಷ್ಟೀಕರಿಸುವ ಹಾಗೂ ವಿರೋಧಿಸುವ ಕೆಲವಾರು ಮಾಹಿತಿಗಳನ್ನು ‘ಶ್ರೀ ಸೋಮನಾಥತೀರ್ಥ’ (ಲೇ. ಗೌತಮಬುವಾ ಪಾಠಕ್, ನಾಸಿಕ್, ೧೯೫೯) ಎಂಬ ಕೃತಿಯಲ್ಲಿವೆ. ಡಾ. ಢೇರೆಯವರು ಇದನ್ನು ಗಮನಿಸಿದಂತಿಲ್ಲ.

ಶಿವದರ್ಶನ (ಕಲೆ ಎರಡು, ಪುಟ.೪ – ೨೧)ದಲ್ಲಿನ ಮಾಹಿತಿಗಳನ್ನು ಡಾ. ಢೇರೆಯವರು ಅಭ್ಯಸಿಸಿದ್ದರೆ, ಅವರ ಯುಕ್ತಿವಾದವು ಬೇರೆಯಾಗಿರುತ್ತಿತ್ತು. ಸ್ಥಳ, ಜಲ, ವಾಯು ಮತ್ತು ಜ್ಯೋತಿ ಎಂಬ ನಾಲ್ಕು ಬಗೆಯ ಲಿಂಗಗಳಿವೆ. ಜ್ಯೋತಿಗಳ ಪೂಜೆಯು ಭಾರತ ಹಾಗೂ ಭಾರತದಾಚೆ ಎಲ್ಲೆಲ್ಲಿ ಕಂಡು ಬರುತ್ತದೆ ಎಂಬುದನ್ನು ಕುರಿತು ಹೇಳುವಾಗ (ಪು.೮) ಜ್ಯೋತಿಬಾನ ಬೆಟ್ಟವು ಈ ಜ್ಯೋತಿಯದ್ದೇ ಆಗಿರಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ರುದ್ರ, ಸೂರ್ಯ ಮತ್ತು ಅಗ್ನಿ – ಇವರುಗಳ ಏಕರೂಪತೆಯನ್ನು ತೋರಿಸುವ ಚರ್ಚೆ (ಪು.೧೭ – ೨೧) ಯು ವಿಶೇಷ ಮಹತ್ವದ್ದಾಗಿದೆ.

ಶ್ರೀ ಗೌತಮಬುವಾ ಪಾಠಕ್ ಅವರು ಕಾಬೂಲಿನ ಆಸಮಾಯಿ ಮಂದಿರ ಮತ್ತು ಬಾಕೂವಿಯಲ್ಲಿನ ದೇವಾಲಯಗಳನ್ನು ಉಲ್ಲೇಖಿಸಿದ್ದಾರೆ. ಇವುಗಳಲ್ಲಿ ಅಸಮಾಯಿಯ ಮಂದಿರವನ್ನು ನಾನು ಸ್ವತಃ ನೋಡಿರುವುದರಿಂದ ಅವರಿಗೆ ಬೆಂಬಲವಾಗಿರುತ್ತೇನೆ ವೇದಮೂರ್ತಿ ಸಾತವಳೇಕರರ ಹೇಳಿಕೆಯಿಂದ ಬಾಕುವಿನ ಮಂದಿರದ ಬಹಳ ಮಾಹಿತಿಗಳು ಮತ್ತು ಛಾಯಾಚಿತ್ರಗಳನ್ನು ಸೇರಿಸಿರುವುದು, ಪಾಠಕರರು ಆ ವಿಷಯವನ್ನು ಕುರಿತು ಹೇಳುವುದಕ್ಕೆ ಒಂದು ದಾರಿಯಾಗಿದೆ ಎಂಬುದಾಗಿ ನಾನು ಹೇಳಲಿಚ್ಛಿಸುತ್ತೇನೆ.

ಜೋತಿಬಾನ ‘ಜೋತ’ ನಿಷ್ಪತ್ತಿಯನ್ನು ಕೃಷಿಯ ಉಪಕರಣದೊಂದಿಗೆ ಸಂಬಂಧ ಕಲ್ಪಿಸುವಾಗ್ಗೆ ಡಾ. ಢೇರೆಯವರು ಕೊಂಚ ಅವಸರಿಸಿದ್ದಾರೆಂದು ಎನಿಸುತ್ತದೆ. ಈ ಬೆಟ್ಟಕ್ಕೆ ‘ಜೋತಬಾ’ ಎಂಬ ಹೆಸರಿದ್ದರೆ ಡಾ. ಢೇರೆಯವರ ದಾರಿ ಖಚಿತವಾಗುತ್ತಿತ್ತು. ಆದರೆ ಅದಕ್ಕಿರುವ ಹೆಸರು ಜೋತಿಬಾ. ಹಾಗಾಗಿ ಜೋತದೊಂದಿಗೆ ಸಂಬಂಧ ಹೊಂದುವುದಿಲ್ಲ. ‘ಹರಬಾ’ (ಹರಿ ಇಲ್ಲವೆ ನರಹರಿಯಾಗಿರುವಂತೆ), ‘ಕೋಂಡಬಾ’, ‘ಧೋಂಡಬಾ’ (ಕೋಂಡಿಬಾ, ಧೋಂಡಿಬಾ) ಎಂಬ ಪರ್ಯಾಯ ನಾಮಗಳುಂಟಾಗುವ ಮರಾಠಿಯ ವೈಶಿಷ್ಟ್ಯವನ್ನು ಗಮನದಲ್ಲಿ ಇಟ್ಟುಕೊಂಡರೆ ‘ಜೋತಬಾ’ ಮತ್ತು ‘ಜೋತಿಬಾ‘ಗಳಲ್ಲಿನ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಈ ಮೂಲಕ ‘ಜೋತ’ ಎಂಬ ನೆಲೆಯಿಂದ ರೂಪುಗೊಂಡಿರುವ ಸರ್ವ ತರ್ಕವೂ ಬಿದ್ದುಹೋಗುತ್ತದೆ. ಜೋತಿಬಾನ ಬೆಟ್ಟದಲ್ಲಿ ಎಲ್ಲೋ ಹತ್ತಿರದಲ್ಲಿ ಜ್ಯೋತಿ ಹೊಮ್ಮುತ್ತಿದ್ದಿರಬೇಕು – ಬಹುಶಃ ಅದು ಜ್ಯೋತಿರ್ಲಿಂಗದ ನೆಲೆಯಲ್ಲಿಯೇ ಹೊರ ಹೊಮ್ಮುತ್ತಿದ್ದಿರಬೇಕು.

‘ಕೇದಾರ’ ಶಬ್ದವು ಕ್ಷೇತ್ರವಾಚಕ ನಿಜ; ಆದರೆ ಅದು ಸಾಮಾನ್ಯ ಕ್ಷೇತ್ರವಲ್ಲ. ನೀರಿನಿಂದ ಆವರಿಸಿರುವ, ತುಂಬಿರುವ ಕ್ಷೇತ್ರ ಎಂಬರ್ಥವಿದೆ ಅದಕ್ಕೆ. ಈ ಉದ್ಧೃತ ವಿಚಾರವು ಅದಕ್ಕೆ ಹೆಚ್ಚಿನ ಪುಷ್ಟಿಯನ್ನು ಕೊಡುತ್ತದೆ.

ಕಾರ್ತಿಕೇಯನ ವಾಹನ ಮಯೂರ, ಅದಂತೂ ಸರ್ಪ ಭಕ್ಷ್ಯಕ. ಎಂತಲೇ ಧಾನ್ಯ ಭಂಡಾರಗಳ ಮೇಲೆ, ಹಳ್ಳಿಗಾಡುಗಳಲ್ಲಿನ ಗೋಡೆಗಳ ಮೇಲೆಲ್ಲ ವಕ್ರವಕ್ರವಾಗಿಯಾದರೂ ಸರಿ ನವಿಲಿನ ಚಿತ್ರಣವಿರುತ್ತದೆ. ಹೀಗಿರುವಾಗ ಮಯೂರ ವಾಹನನಾದ ಕಾರ್ತಿಕೇಯನ ಸಂಬಂಧವು ನಾಗರಾಜನೊಂದಿಗೆ ಕೂಡುವುದಾದರೂ ಹೇಗೆ? ಅಯ್ಯಪ್ಪನ್, ಶಾಸ್ತಾ ವಾಸ್ತವ ವಾಗಿ ಈಗ ಹರಿಹರರ ಪುತ್ರ. ಈ ಕಥೆಯು ಡಾ. ಢೇರೆಯವರಿಗೆ ತಿಳಿದಿರಬಹುದು. ಅವನ ಭಕ್ತರು ಬಹಳ ಕಠಿಣ ರೀತಿಯಲ್ಲಿ ಅವನ ವ್ರತಗಳನ್ನು ಆಚರಿಸುತ್ತಾರೆ; ೪೦ ದಿನಗಳ ಕಾಲ ಕಪ್ಪುಬಟ್ಟೆಗಳನ್ನಷ್ಟೆ ತೊಟ್ಟಿರುತ್ತಾರೆ. ಆ ಹರಿಹರ ಪುತ್ರನಿಗೆ ಹೊಂದುವಂತೆ ಇತರೆ ಯಾವ ದೇವತೆಯಲ್ಲಿ ಇಂಥ ಸಾಮ್ಯವನ್ನು ಕಾಣಬಹುದು?

ಇಂಥ ಅವಸರ ಪ್ರತಿಪಾದನೆ ಯೋಗೀಶ್ವರಿಯ ವಿಷಯದಲ್ಲಿಯೂ ನಿಜ. ನರ್ಮದೆಯ ದಡದಲ್ಲಿನ ಭೇಡಾ ಘಾಟದ ಹತ್ತಿರ, ಖಜುರಾಹೋದ ಒಂದು ಮಂದಿರದಲ್ಲಿ ಮತ್ತು ಒರಿಸ್ಸಾದ ಹಿರಾಪೂರ ಹಾಗೂ ರಾಣಿಪುರದ ಎರಡು ಮಂದಿರಗಳಲ್ಲಿ ಒಟ್ಟಾರೆ ಅರವತ್ನಾಲ್ಕು ಯೋಗಿನಿಯರ ಮೂರ್ತಿಗಳು ಸಿಗುತ್ತವೆ. ಅವುಗಳನ್ನು ಅಭ್ಯಸಿಸಿದ ವಿವಿಧ ಅಭಿಪ್ರಾಯಗಳು ಈಗ ನಮ್ಮ ಮುಂದಿವೆ. ಅವುಗಳನ್ನು ಗಮನಿದೆ ಯೋಗೀಶ್ವರಿಯನ್ನು ಇಷ್ಟೊಂದು ತ್ವರೆಯಿಂದ ಕಥಿಸಿರುವುದು ತರವಲ್ಲ. ಕೊಲ್ಹಾಪುರದಲ್ಲಿನ ಅಂಬಾಬಾಯಿ (ಮಹಾಲಕ್ಷ್ಮಿ) ಮಂದಿರದಲ್ಲಿಯೇ ಕೆಲವಾರು ಯೋಗಿನಿಯರ ಶಿಲ್ಪಗಳಿವೆಯೆಂದು ಹೇಳಿರುವುದುಂಟು.

ರತ್ನ(ತ್ನಾ)ಗಿರಿ ಎಂಬ ಹೆಸರನ್ನು ಯಾರೋ ಪೇಟೆಂಟ್ ತೆಗೆದುಕೊಂಡಿರುವಂತೆ ಕಾಣುವುದಿಲ್ಲ. ಒರಿಸ್ಸಾದಲ್ಲಿ ಕೂಡ ಈ ಹೆಸರಿನ ಒಂದು ಪ್ರಖ್ಯಾತ ಊರಿದೆ. ಹೀಗಿರುವಾಗ ಇದಿಷ್ಟರಿಂದಲೇ ಕೊಂಕಣದಲ್ಲಿನ ರತ್ನಾಗಿರಿಯೊಂದಿಗೆ ಅದರ ಸಂಬಂಧ ಕಲ್ಪಿಸ ಬರುವುದೇ? ಅಲ್ಲದೆ ಗ್ರಾಮ ನಾಮವೇ ಗಿರಿವಾಚಕವಾಗಿರುವುದರಿಂದ ಬೆಟ್ಟಕ್ಕೆ ಹೆಸರಿರುವುದು ಸಹಜವೇ. ಸಿಂಧ್ ಮಾರ್ಗದಿಂದ ಬರುವವರಿಗೆ ಪಶ್ಚುಮ ತೀರದಲ್ಲಿ ಇತರೆ ಹಲವಾರು ಸುಲಭವಾಗಿ ಸಿಗುವ ಬಂದರುಗಳಿವೆ. ರತ್ನಾಗಿರಿಯಂತೂ ಅಷ್ಟು ಸುಲಭವಾಗಿ ತಲುಪುವಂಥ ಬಂದರೇನಲ್ಲ. ಆ ಹೊತ್ತಿನಲ್ಲಿಯೂ ಇದು ಹಾಗೆಯೇ ಇತ್ತು. ಎಂತಲೇ ರತ್ನಾಗಿರಿಗೆ ಸಿಂಧ್ ಪ್ರಾಂತ್ಯದಲ್ಲಿನ ಹಳೆಯ ರಹವಾಸಿಗಳು ಬಂದಿಳಿದರು – ಅವರು ಶಿಂಧೆ ಮನೆತನದವರಾಗಿದ್ದರು ಎಂಬ ಊಹೆಯಂತೂ ಚರ್ಚಾಸ್ಪದವಾದುದು. ಇರಾನ್‌ನಿಂದ ಬಂದ ಫಾರಶೀಗಳೂ ಕೂಡ ಪಶ್ಚಿಮ ತೀರದಲ್ಲಿಯೇ ಬಂದಿಳಿದದ್ದು. ಆ ಎಲ್ಲರಿಗೂ ಇರುವ ಸಾಮಾನ್ಯ ಹೆಸರುಗಳು ಇರಾಣಿ ಫಾರ್ಸಿ – ಫಾರಶಿ. ಅವರ ಕುಲನಾಮ ಬೇರೆಯೇ ಇರುವುದು ನಮಗೆಲ್ಲ ತಿಳಿದ ವಿಚಾರವೇ.

ಡಾ. ಢೇರೆಯವರು ಈ ಎಲ್ಲ ಅಂಶಗಳನ್ನು ಗಮನಿಸಬೇಕು. ನಂತರ ತಮ್ಮ ಅಭಿಪ್ರಾಯವೇನೆಂಬುದನ್ನು ತಿಳಿಸಬೇಕು ಎಂಬುದು ನನ್ನ ನಮ್ರವಾದ ವಿನಂತಿ.

ರಾ. ಚಿಂ.ಢೇರೆಯವರ ಉತ್ತರ

ನನ್ನ ‘ಜೋತಿಬಾ: ಶೋಧ ಆಣಿ ಬೋಧ’ ಎಂಬ ಲೇಖನಕ್ಕೆ ಸಂಬಂಧಿಸಿದಂತೆ ಶ್ರೀ ರಾ. ಟೀಕೆಕರ ಅವರ ಪ್ರತಿಕ್ರಿಯೆ ೧೯೭೬ರ ಫೆಬ್ರವರಿ ಅಂಕಣದಲ್ಲಿ ಪ್ರಕಟವಾಯಿತು. ಶ್ರೀ ಟಿಕೇಕರಾ ಅವರ ವ್ಯಾಪಕ ವ್ಯಾಸಂಗ ಮತ್ತು ತಿಳಿವಳಿಕೆಯ ಅಗಾಧ ಸಾಮರ್ಥ್ಯವನ್ನು ನಾನು ಬಲ್ಲೆ. ಅದರಿಂದಾಗಿಯೇ ಅವರಂತಹ ಸಾಪೇಕ್ಷ್ಯ ಜೇಷ್ಠ ಅಧ್ಯಯನಕಾರರು ನನ್ನ ಲೇಖನವನ್ನು ಓದಿ, ತತ್ಕಾಲದಲ್ಲಿಯೇ ಪರಿಗಣಿಸಿ ಪ್ರತಿಕ್ರಿಯಿಸಿದುದರ ಬಗ್ಗೆ ತುಂಬು ಅಭಿಮಾನ ನನಗೆ.

ಪ್ರಾರಂಭದಲ್ಲಿಯೇ ಅತ್ಯಂತ ನಮ್ರವಾಗಿ ನಾನು ಸ್ಪಷ್ಟಪಡಿಸಲು ಇಚ್ಛಿಸುವುದೆಂದರೆ, ನನ್ನ ಲೇಖನದ ಪ್ರತಿಪಾದನೆಗೆ ಸಂಬಂಧಿಸಿದಂತೆ ಬಹುತೇಕ ಎಲ್ಲ ಪ್ರಾತಿನಿಧಿಕ ಸಾಮಗ್ರಿಗಳನ್ನು ನಾನು ನೋಡಿದ್ದೇನೆ ಎಂಬ ಸಂಗತಿ. ಈ ಕುರಿತು ದೀರ್ಘಕಾಲ ಪರ್ಯಂತ ವಿಚಾರ ಮಾಡಿಯೇ ಜೋತಿಬಾನ ಪ್ರತೀಕಾತ್ಮಕತೆಯ ಸಂಬಂಧವಾಗಿ ನನ್ನ ಅಭಿಪ್ರಾಯ ಮಂಡಿಸಿರುವುದು. ಈ ಬಗೆಯ ಲೇಖನಗಳಲ್ಲಿ ಅಧ್ಯಯನಕಾರರಿಗೆ ಯಾವ ಹೊಣೆ ಇರಬೇಕೋ ಅದನ್ನು ಪಾಲಿಸಿಯೇ ಈ ಎಲ್ಲವನ್ನು ಪ್ರತಿಪಾದಿಸಿರುವುದು. ಈ ಸಂಬಂಧವಾಗಿ ‘ಅವಸರ ಮಾಡುವಿಕೆ’ ಮತ್ತು ‘ಲಗುಬಗೆಯಿಂದ ವಿನಾಶಕ್ಕೆ ತಳ್ಳುವಿಕೆ‘ಯು ಸಲ್ಲದ ಸಂಗತಿ ಎಂಬುದರ ನಿರಂತರ ಅರಿವಿರುವುದು ನನಗೆ.

‘ಜ್ಯೋತಿರ್ಲಿಂಗ’ ಎಂಬ ಹೆಸರು ಮತ್ತು ಶಿವೋಪಾಸನೆಯ ಸಂಬಂಧದ ಸಾಂಪ್ರದಾಯಿಕ ಸಂಗತಿಗಳು ನನಗೆ ಪೂರ್ಣವಾಗಿ ತಿಳಿದಿದೆ. ಪ್ರಸಿದ್ಧ ಕೀರ್ತನಕಾರರಾದ ಶ್ರೀಗೌತಮಬುವಾ ಪಾಠಕ್ ಅವರ ಸೋಮನಾಥ ಸಂಬಂಧವಾಗಿರುವ ಕೃತಿಯನ್ನು ಅದು ಪ್ರಕಟವಾದ ಕಾಲಕ್ಕೇ ಅಭ್ಯಸಿಸಿದ್ದೆನು. ಮಾತ್ರವಲ್ಲ ಈ ವಿಷಯಕ್ಕೇ ಸಂಬಂಧಿಸಿದಂತಹ ಶ್ರೀಮುಳೆ, ಶ್ರೀಸ.ಕರ.ಫಡಕೆ ಮತ್ತು ಶ್ರೀದಂಡಗೆ ಅವರ ಮರಾಠಿ ಕೃತಿಗಳನ್ನು ಅಮೂಲಾಗ್ರ ಗಮನಿಸಿದ್ದೇನೆ. ಸಾಂಪ್ರದಾಯಿಕ ಮಂಡನೆಯ ಈ ಕೃತಿಗಳೇ ಅಲ್ಲದೆ, ತೀರಾ ಈಚೆಗಿನ Wendy Doniger o’Flaherty ಅವರ ‘Asceticism and Eroticism in the Mythology of Siva’, (೧೯೭೫) ಎಂಬ ಕೃತಿಯವರೆಗೂ ಶಿವ ಸಂಬಂಧಿಯಾದ ಸಂಶೋಧನ ಚರ್ಚೆಗಳನ್ನು ಬಿಡದೆ ದೃಷ್ಟಿಸಿದ್ದೇನೆ.[1] ಇಲ್ಲಿ ಯಕ್ಕಿಂಚಿತ್ತಷ್ಟೂ ಅವಸರ ಮಾಡಿಲ್ಲ ನಾನು.

ಆದರೆ ಜೋತಿಬಾನನ್ನು ಕುರಿತು ವಿಶ್ಲೇಷಿಸುವಾಗ ಶಿವ ಸಂಬಂಧವಾದ ಸಾಂಪ್ರದಾಯಿಕ ಸಾಮಗ್ರಿಗಳು ಮತ್ತು ಸಂಶೋಧನ ಚರ್ಚೆಗಳನ್ನೆಲ್ಲ ಶೋಧಿಸುವಂತಹ ಅಗತ್ಯವೇನೂ ಇಲ್ಲ. ಕಾರಣ ಲೋಕಧರ್ಮದ ಶ್ರೇಷ್ಠರು ಜೋತಿಬಾರನ್ನು ಶಿವನೊಂದಿಗೆ ಏಕರೂಪತ್ವಗೊಳಿಸುವುದಕ್ಕೆ ಎಷ್ಟೇ ಪ್ರಯತ್ನಿಸಿರುವರಾದರೂ, ಜೋತಿಬಾನಲ್ಲಿನ ಶುದ್ಧ ಲೌಕಿಕ ಕ್ಷೇತ್ರಪಾಲಕತ್ವವನ್ನು ಮಾತ್ರ ಬಿಟ್ಟು ಕೊಡಲಾಗಲಿಲ್ಲ. ಅವನ ಚರಿತ್ರೆ, ಮೂರ್ತಿಯ ವಿಧಾನ, ಉಪಾಸನಾ ಸ್ವರೂಪ, ಪರಿವಾರ ದೇವತೆಗಳು ಮತ್ತು ಉತ್ಸವ – ಮಹೋತ್ಸವ ಈ ಎಲ್ಲವಗಳಿಂದ ನಿಃ ಶಂಕವಾಗಿಯೂ, ನೀರಸವಾದ ರೀತಿಯಲ್ಲಿ ಆತನ ಕ್ಷೇತ್ರಪಾಲಕತ್ವವು ನಿದರ್ಶನಗೊಳ್ಳುತ್ತದೆ. ಪ್ರತಿಷ್ಠಿತವಾದ ಶಿವನ ರೂಪದೊಂದಿಗೆ ಅವನ ಸಂಬಂಧ ಹೊಂದುವುದಿಲ್ಲವಾದ್ದರಿಂದ, ಶಿವ ಸಂಬಂಧವಾದ ‘ಜ್ಯೋತಿರ್ಲಿಂಗ‘ದ ವಿಚಾರವನ್ನು ಜೋತಿಬಾನ ಸಂದರ್ಭದಲ್ಲಿ ಮಾಡುವುದು ಅಪ್ರಸ್ತುತ ಮಾತ್ರವಲ್ಲ ಅನಾವಶ್ಯಕ ಕೂಡ.

ನಾನು ‘ಜೋತ’ (ನೇಗಿಲು)ವನ್ನು ಜ್ಯೋತಿಯೊಂದಿಗೆ ಸಂಬಂಧ ಕಲ್ಪಿಸಿಲ್ಲ, ‘ಜೋತಾ‘ದೊಂದಿಗೆ ಅಂದರೆ ನೇಗಿಲಿನೊಂದಿಗೆ ಸಂಬಂಧ ಕಲ್ಪಿಸುವ ‘ಅವಸರ ತೋರಿದ್ದೇನೆ’ ಎಂಬುದು ಟಿಕೇಕಾರರ ಭಾವನೆ. ಆದರೆ ನನ್ನ ಪ್ರತಿಪಾದನೆ ಕೇವಲ ಈ ವ್ಯುತ್ಪತ್ತಿಯ ಮೇಲೆಯೇ ಆಧಾರಿತವಾದುದು ಮಾತ್ರವಾಗಿಲ್ಲ. ಜೋತಿಬಾನಿಗೆ ಸಂಬಂಧಿಸಿದ ವಿಷಯ ಸಾಮಗ್ರಿಗಳ ಎಲ್ಲ ಅಂಗಗಳಿಂದಲೂ ವ್ಯಕ್ತವಾಗುತ್ತಿರುವುದು ಅವನ ಕ್ಷೇತ್ರಪತಿತ್ವ ಮತ್ತು ಕ್ಷೇತ್ರಪಾಲಕತ್ವವೇ/ ಅವನ ‘ಕೇದಾರನಾಥ’ ಎಂಬ ಸಂಸ್ಕೃತ ನಾಮದ ‘ಕೇದಾರ’ ಎಂಬ ಪೂರ್ವಪದವು ಸೂಚಿಸುತ್ತಿರುವುದು ಅವನ Femal consort ಕ್ಷೇತ್ರತ್ವವನ್ನು. ಈ ಕ್ಷೇತ್ರತ್ವಕ್ಕೆ ಪುಷ್ಟಿಕೊಡುವ ಯಮಾಯಿ – ರೇಣುಕಾರಂಥ ಈ ಭೂದೇವಿಯರುಗಳ ಜೋತಿಬಾನೊಂದಿಗಿನ ಸಂಬಂಧ, ಜೋತಿಬಾನಿಗಿರುವ ರೇಣುಕಾಪತಿ, ಏಕವೀರಾಪತಿ ಎಂಬ ಹೆಸರುಗಳು, ಅವನ ನಾಗರೂಪತ್ವವನ್ನು ತೋರಿಸುವ ಹೆಸರುಗಳ ಉಪಾಸನಾ ವಾಙ್ಮಯದಲ್ಲಿನ ಸ್ಥಾನ, ನಾಗನ ಕ್ಷೇತ್ರಪತಿತ್ವ ವಿಷಯದ ನಿಃಶಂಕವಾದ ಸಿದ್ದಿ – ಇತ್ಯಾದಿ ಅನೇಕಾನೇಕ ಪ್ರಮಾಣಗಳಿಂದ ನನ್ನ ಅಭಿಪ್ರಾಯಗಳನ್ನು ಪುಷ್ಟಿಗೊಳಿಸಿದ್ದೇನೆ ನಾನು. ಕೇವಲ ‘ಜೋತ‘ದ ವ್ಯುತ್ಪತ್ತಿಯೊಂದನ್ನೇ ಆಧರಿಸಿಲ್ಲ. ಒಂದೊಮ್ಮೆ ನನ್ನ ವ್ಯುತ್ಪತ್ತಿಯನ್ನು ಬದಿಗಿರಿಸಬಹುದಾದರೆ, ನಾನು ನೀಡಿರುವ ಎಲ್ಲಾ ಪ್ರಮಾಣಗಳನ್ನು ಹೇಗೆ ವ್ಯವಸ್ಥೆಗೊಳಿಸುವುದು ಮತ್ತು ಜೋತಿಬಾನ ಲೌಕಿಕ ರೂಪ, ಚರಿತ್ರೆ ಮತ್ತು ಉಪಾಸನೆಗಳನ್ನು ಸರ್ವಾಂಶಗಳಿಂದ ಶಿವನಿಗೆ ಹೊಂದಿಸುವುದಾದರೂ ಹೇಗೆ – ಎಂಬುದರ ದಾಯಿತ್ವನ್ನು ಆಕ್ಷೇಪಕಾರರು ಭರಿಸಬೇಕಾಗುತ್ತದೆ. ಅದನ್ನು ಅವರು ನಿಭಾಯಿಸಿದಲ್ಲಿ ನನಗೆ ನನ್ನ ಪ್ರತಿಪಾದನೆಯನ್ನು ಪುನರ್ವಿಚಾರ ಮಾಡುವುದಕ್ಕೆ ಹೊಸ ಅಲಕ್ಷಿತ ಸಾಧನಗಳು ಉಪಲಬ್ಧವಾಗುವುವು.

ಕಾರ್ತಿಕೇಯ – ಸುಬ್ರಹ್ಮಣ್ಯರುಗಳಿಗೆ ದಕ್ಷಿಣ ಭಾರತದಲ್ಲಿ ನಾಗರಾಜನೊಂದಿಗೆ ಇರುವ ಸಂಬಂಧ ಅತ್ಯಂತ ದೃಢ ಸ್ವರೂಪದ್ದು. ಅದನ್ನು ನಾನು ಸಂಶೋಧನೆಯಿಂದ ಸ್ಪಷ್ಟಪಡಿಸುವ

ನಿಭಾಯಿಸಿದಲ್ಲಿ ನನಗೆ ನನ್ನ ಪ್ರತಿಪಾದನೆಯನ್ನು ಪುನರ್ವಿಚಾರ ಮಾಡುವುದಕ್ಕೆ ಹೊಸ ಅಲಕ್ಷಿತ ಸಾಧನಗಳು ಉಪಲಬ್ಧವಾಗುವುವು.

ಕಾರ್ತಿಕೇಯ – ಸುಬ್ರಹ್ಮಣ್ಯರುಗಳಿಗೆ ದಕ್ಷಿಣ ಭಾರತದಲ್ಲಿ ನಾಗರಾಜನೊಂದಿಗೆ ಇರುವ ಸಂಬಂಧ ಅತ್ಯಂತ ದೃಢ ಸ್ವರೂಪದ್ದು. ಅದನ್ನು ನಾನು ಸಂಶೋಧನೆಯಿಂದ ಸ್ಪಷ್ಟಪಡಿಸುವ ಪ್ರಶ್ನೆಯೇ ಬರುವುದಿಲ್ಲ. ಈ ವಿಷಯದ ಅಧಿಕ ವಿಚಾರಗಳಿಗಾಗಿ ‘ಸುಬ್ರಹ್ಮಣ್ಯ’. ಏಕ್ ಆಕಲನ’ (ಸುಬ್ರಹ್ಮಣ್ಯ: ಒಂದು ದೃಷ್ಟಿ) ಎಂಬ ನನ್ನ ಹಿಂದಿನ ಲೇಖನ (‘ಆನಂದವನ‘, ತ್ರೈಮಾಸಿಕ, ಪುಣೆ, ವರ್ಷ.೨, ಅಂಕ.೧)ವನ್ನು ಲಕ್ಷಿಸಬಹುದು. ಅಯ್ಯಪ್ಪನ್, ಶಾಸ್ತಾ, ಅಯ್ಯನಾರ, ಮುರುಗನ್ – ಇತ್ಯಾದಿ ಹೆಸರುಗಳಿಂದ ದಕ್ಷಿಣದಲ್ಲಿ ಖ್ಯಾತನಾಗಿರುವ ಕ್ಷೇತ್ರಪಾಲನನ್ನು ‘ಹರಿಹರಪುತ್ರ’ ಎಂಬುದಾಗಿ ಹೇಳುವ ಸಂಕಥನಗಳಿವೆಯೆಂಬುದು ನನಗೆ ಗೊತ್ತಿರುವ ವಿಷಯ. ವಿಷ್ಣುವಿನ ಮೋಹಿನಿ ರೂಪ ಕಂಡು ಮೋಹಾಸಕ್ತನಾದ ಹರ. ಇವರುಗಳ ಪುತ್ರನೀತ ಎಂಬ ಕಥೆಯುಂಟು. ಮಹಾರಾಷ್ಟ್ರದಲ್ಲಿನ ಕ್ಷೇತ್ರಪಾಲಕ ದೇವರಾದ ಖಂಡೋಬಾನನ್ನು ಒಂದೆಡೆ ಸ್ಕಂದನೊಂದಿಗೆ, ಮತ್ತೊಂದೆಡೆ ಹರನೊಂದಿಗೆ ಸಂಬಂಧ ಕಲ್ಪಿಸಿರುವುದು ವಿದಿತ. ಅವನ ಒಬ್ಬಳು ಪತ್ನಿ ನೇವಾಶಿಯ ಮ್ಹಾಳಸಾ. ಈ ನೇವಾಶಿ ಎಂಬ ತಾಣವಾದರೂ ಪೂರ್ಣ ‘ಮೋಹಿನಿಮಯ‘ವಾಗಿ ಬಿಟ್ಟಿದೆ. ಅಂತೆಯೇ ತಮಿಳುನಾಡಿನಲ್ಲಿ ಈ ಕ್ಷೇತ್ರಪಾಲಕ ದೇವನು ಸ್ವತಃ ತನ್ನನ್ನು ಮೋಹಿನಿಯ ಪುತ್ರನೆಂದು ಹೇಳಿಕೊಂಡಿದ್ದರೆ, ಮಹಾರಾಷ್ಟ್ರದಲ್ಲಿ ಪತಿಯೆಂದು ಹೇಳಿಕೊಂಡಿದ್ದಾನೆ. ಸ್ಕಂದಷಷ್ಠಿ ಅಥವಾ ನಾಗಷಷ್ಠಿಯು ತಮಿಳುನಾಡು, ಆಂಧ್ರ, ಕರ್ನಾಟಕಗಳಲ್ಲಿ ಸುಬ್ರಹ್ಮಣ್ಯ, ಮುರುಗನ್‌ರ ಉತ್ಸವದ ದಿನದಂದೇ ಇರುವುದು. ವಿಶೇಷವೆಂದರೆ ಮಹಾರಾಷ್ಟ್ರದಲ್ಲಿ ಈ ದಿನದಂದೇ ಚಂಪಾಷಷ್ಠಿಯ ಹೆಸರಿನಲ್ಲಿ ಖಂಡೋಬಾನ ಆರಾಧನೆ ನಡೆಯುತ್ತದೆ. ಮಾತೃದೇವತೆಗಳು ಪುರುಷ ದೇವರುಗಳನ್ನು ಪಿತ, ಪುತ್ರ, ಪತಿ, ಬಂಧು – ಎಂಬ ನಾನಾ ಸಂಬಂದಗಳಲ್ಲಿ ಸ್ವೀಕರಿಸಿರುವುದನ್ನು ಮತ್ತೆ ವಿಸ್ತರಿಸಿ ಹೇಳುವ ಅಗತ್ಯ ಕಾಣುವುದಿಲ್ಲ ನನಗೆ. ನಾಗರೂಪ ಸುಬ್ರಹ್ಮಣ್ಯ – ಮುರುಗನ್‌ ಮತ್ತು ಮಯೂರವಾಹನ ಸ್ಕಂದ ಕಾರ್ತಿಕೇಯರ ಏಕತ್ವ ಹೇಗೆ ಸಿದ್ಧವಾಗುವುದು ಎಂಬ ಪ್ರಶ್ನೆಯ ಉತ್ತರಕ್ಕಾಗಿ ಸುಬ್ರಹ್ಮಣ್ಯ ಸಂಬಂಧವಾದ ದಕ್ಷಿಣದಲ್ಲಿನ ಎಲ್ಲಾ ಕಥಾ ಸಮೂಹಗಳನ್ನು ನೋಡಬೇಕಾದ್ದು ಅವಶ್ಯವೆಂಬುದು ನನ್ನ ವಿನಂತಿ. ಅನೇಕ ಲೌಕಿಕ ಶ್ರದ್ಧೆಗಳ ಔನ್ನತ್ಯ ಮತ್ತು ಸಂಯೋಜನ ಪ್ರಯತ್ನದಲ್ಲಿ ದ್ವಂದ್ವಗಳನ್ನು ದೂರಮಾಡುವ ಧರ್ಮಧುರೀಣರ ಸರಣಿಯವರಾದ ಶ್ರೀ ಟಿಕೇಕರರಿಗೆ ನಾನು ಸ್ಪಷ್ಟಪಡಿಸಿ ಹೇಳುವಂಥ ಯಾವುದೇ ಅಗತ್ಯ ಕಾಣುವುದಿಲ್ಲ. ಸುಪರ್ಣ (ಗರುಡ) ರೂಪ ಮತ್ತು ಗರುಡವಾಹನ ವಿಷ್ಣು ಶೇಷಶಾಯಿಯಾಗಿರುವುದು ಹೇಗೆ ಯೋಗಿರಾಜ ಶಿವನು ಎತ್ತರದ ಕಂಭ (ಊರ್ಧ್ವಮೇಢು) ಹೇಗಾದನು – ಈ ಪ್ರಶ್ನೆಗಳ ಉತ್ತರದಲ್ಲಿಯೇ ಮೇಲಿನ ಶಂಕೆಗಳಿಗೆ ಉತ್ತರವೂ ಇದೆ. ಅನ್ಯಥಾ ವೈಜ್ಞಾನಿಕ ದೃಷ್ಟಿಯಿಂದಲೇ ವಿಶ್ಲೇಷಿಸಬಹುದಾದರೆ ವಿಷಹಾರಿಯಾದ ನಾಗನನ್ನು ಕುಲರಕ್ಷಕ, ನಿಧಿರಕ್ಷಕ, ಸಂತಾನದಾತೃ, ಕ್ಷೇತ್ರಪತಿ, ಕ್ಷೇತ್ರಪಾಲಕ – ಎಂಬುದಾಗಿ ಮಾತ್ರವಲ್ಲ ಸ್ತ್ರೀತತ್ತ್ವದ ಪರಮಪ್ರಿಯವಾದ ಒಂದು ಸ್ವರೂಪವಾಗಿಯೂ ಜನಮಾನಸದಲ್ಲಿ ಬೇರೂರಿರುವುದಕ್ಕೆ ಸಮರ್ಥನೆ ಸಾಧ್ಯವಿಲ್ಲ.

ಯೋಗೀಶ್ವರಿಯ ಪ್ರತಿಪಾದನೆಯಲ್ಲಿನ ನನ್ನ ಪ್ರಯತ್ನವೆಂದರೆ, ಕ್ಷೇತ್ರಪಾಲನ ಸಾಹಚರ್ಯವಾಗಿ ನೋಡುವುದು. ಅರವತ್ನಾಲ್ಕು ಯೋಗಿನಿಯರು ಮ್ತು ಅವರ ಉಪಾಸನೆಯ ವಿಷಯವಾಗಿ ಇರುವ ಚರ್ಚೆಯನ್ನು ತಿಳಿದಿದ್ದೇನೆ ನಾನು. ಒಂದೇ ಹೆಸರು ವಿಭಿನ್ನ ಸಂದರ್ಭದಲ್ಲಿ ವಿಭಿನ್ನಮೂಲ ಸ್ತೋತ್ರವಾಗಿ ಬಂದಿರುವುದುಂಟು. ಆ ಮೂಲ ಸ್ತೋತ್ರವನ್ನು ದುರ್ಲಕ್ಷಿಸಿ ಆ ಹೆಸರಿನ ಅರ್ಥವನ್ನಷ್ಟೇ ನೋಡುವುದು ಒಂದು ಪ್ರಚ್ಛನ್ನ ಪ್ರಕ್ರಿಯೆಯಾದೀತು. ಉದಾಹರಣೆಗೆ ಹೊಸಪೇಟೆಯ (ಬಳ್ಳಾರಿ ಜಿಲ್ಲೆ) ಹತ್ತಿರದಲ್ಲಿರುವ ಕಮಲ ಚಿಹ್ನಾಂಕಿತ ಯೋನಿರೂಪ ದೇವೀ ಮೂರ್ತಿಗೆ ಇರುವ ಹೆಸರು ‘ವ್ಯಾಘ್ರೇಶ್ವರಿ’. ಈ ಹೆಸರನ್ನು ಕುರಿತು ‘ವ್ಯಾಘ್ರ’ ಮುಖೇನ ಹೇಗೆ ವಿವೇಚಿಸಲು ಸಾಧ್ಯ? ಖಂಡೋಬಾನ ಉಪಾಸಕರನ್ನು ಮಹಾರಾಷ್ಟ್ರದಲ್ಲಿ ‘ವಾಘ್ಯಾ’ (ಹುಲಿಯಪ್ಪ) ಎಂದು ಕರೆಯುತ್ತಾರೆ. ಈ ಹೆಸರಿನ ಪಾರಂಪರಿಕ ಸ್ಪಷ್ಟೀಕರಣ ಕಥೆಯು ಕೂಡ ವ್ಯಾಘ್ರ ಸಂಬಂಧವಾದುದೇ ಆದರೆ ಪ್ರತ್ಯಕ್ಷವಾಗಿ ನೋಡಿದಲ್ಲಿ ಮಾತ್ರ ಕಾಣುವುದು. ವ್ಯಾಘ್ರ ಕ್ರಿಯೆಯ ನಾಯಿಯ ಗುರು ಗುಟ್ಟುವಿಕೆಯ ಸಂಬಂಧ. ಪಾರಂಪರಿಕ ವಾಙ್ಮಯದಲ್ಲಿ ಇದು ಮತ್ತೆ ಮತ್ತೆ ಉಲ್ಲೇಖಗೊಂಡಿದೆ. ಇಲ್ಲಿ ನಾವು ‘ವಾಘ್ಯಾ’ ಎಂದೊಡನೆ ವ್ಯಾಘ್ರದೆಡೆಗೆ ಪ್ರಥಮ ದೃಷ್ಟಿ ಬೀರುವ ವಿಚಾರವನ್ನು ಬಿಟ್ಟು, ಸತ್ಯಶೋಧನಾರ್ಥವಾಗಿ ಕನ್ನಡದ ‘ಬಗ್ಗೆಯ’ (ನಾಯಿ) ಪದದೆಡೆ ಹೊರಳಬೇಕಾದ್ದು ಅವಶ್ಯ. ಹಾಗೆಯೇ ‘ಯೋಗೇಶ್ವರಿ’ ಎಂಬ ಕ್ಷೇತ್ರಪಾಲಕ ಭೈರವನ ಸಹಚರಿಣಿಯ ನಾಮದ ವಿಚಾರವನ್ನು ಪರಿಗಣಿಸಬೇಕು. (ನೋಡಿ: ಶಕ್ತಿ ಪೀಠಾಂಚಾ ಶೋಧ’ (ಶಕ್ತಿಪೀಠಗಳ ಶೋಧ): ರಾ.ಚಿ.ಢೇರೆ., ಮೋಘೆ ಪ್ರಕಾಶನ, ಕೊಲ್ಹಾಪುರ, ಪುಣೆ, ೧೯೭೩).

‘ರತ್ನಾಗಿರಿ‘ಯ ವಿಷಯವಾಗಿ ಶ್ರೀ ಟಿಕೇಕಾರರ ಸಂಪೂರ್ಣ ಪರಿಚ್ಛೇದ ಅಕಾರಣ ಬರೆದುದಾಗಿದೆ. ಕಾರಣ ಆ ಪರಿಚ್ಛೇದದಲ್ಲಿ ಅವರು ಖಂಡಿಸಿರುವ ರೀತಿಯು ನನ್ನ ಲೇಖನದಲ್ಲಿಯೇ ಉದ್ಧೃತಗೊಳಿಸಿರುವ ಶ್ರೀ ಭಾಸ್ಕರರಾವ್ ಜಾಧವ ಅವರ ಮಾತುಗಳಲ್ಲಿಯೇ ಇದೆ ಎಂಬುದನ್ನು ತಿಳಿಸಲು ಬಯಸುತ್ತೇನೆ. ಆ ಅಭಿಪ್ರಾಯವನ್ನು ನಾನು ಮಾತ್ರ ಒಪ್ಪುವುದಿಲ್ಲ. ಬದಲಾಗಿ ಸಿಂಧ್ – ಶಿಂಧೆ ಕುಲ, ಅವರ ನಾಗವ್ರತ ಮತ್ತು ಜೋತಿಬಾ ಭಕ್ತಿ – ಇವುಗಳ ಅನುಬಂಧವನ್ನು ನನ್ನ ಲೇಖನವೆಂಬ ಗರ್ಭಗುಡಿಯಲ್ಲಿ ಸೂಕ್ಷ್ಮವಾಗಿ ಜೋಡಿಸಿ ತೋರಿಸಿರುತ್ತೇನೆ. ಶ್ರೀ ಟಿಕೇಕರ ಅವರು ಉಪೇಕ್ಷೆಯಿಂದಲೋ ಎಂಬಂತೆ ಶ್ರೀ ಜಾಧವರ ಅಭಿಪ್ರಾಯವನ್ನು ತಮ್ಮದೆಂದು ಹೇಳುತ್ತಾ ಟೀಕಿಸಿರುವುದು ಗಮನಿಸುವಂಥದು.

‘ರುದ್ರ, ಸೂರ್ಯ, ಅಗ್ನಿ – ಇವರುಗಳ ಏಕರೂಪತೆಯನ್ನು ತೋರಿಸುವ ಚರ್ಚೆ‘ಯಲ್ಲಿಯೂ ನನ್ನ ಅಭಿಪ್ರಾಯಕ್ಕೆ ಬಾಧೆ ತರುವಂತಹದ್ದೇನೂ ಇಲ್ಲ. ಕಾರಣ ನನ್ನ ಪ್ರತಿಪಾದನೆ ಯಾವ ದ್ಯಾವಾ – ಪೃಥ್ವಿಯ ಆದ್ಯ, ಸನಾತನ ಮತ್ತು ಅವಿಚ್ಛಿನ್ನ ಸಂಬಂಧ ಪ್ರತೀಕಗಳೊಂದಿಗೆ ಹೊಂದಿಕೊಂಡುದಾಗಿದೆಯೋ, ಆ ಸಂಬಂಧದಲ್ಲಿನ ‘ದ್ಯೌ’ನಲ್ಲಿಯೇ ಏನಾದರೂ ಹೊಸತನ್ನು ಕಲಿತು ಸ್ವತಃ ನನ್ನನ್ನು ದುರಸ್ತಿಮಾಡಿಕೊಳ್ಳುವ ದಿಶೆಯಲ್ಲಿ ನಾನು ಸದಾ ಸಿದ್ಧನಾಗಿರುತ್ತೇನೆ. ಕಾರಣ ನಾನು ಅಭಿಪ್ರಾಯಗಳ ಪ್ರತಿಪಾದಕ, ಆಗ್ರಹಕಾರನಲ್ಲ. ಒಟ್ಟಾರೆ ನಾನು ಜ್ಞಾನದ ಪ್ರೇಮಿ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

 

[1]ಈ ಉತ್ತರ ಕೊಟ್ಟ ಮೇಲೆ ಶಿವ ಮತ್ತು ಜೈನಧರ್ಮದ ವಿಷಯವಾಗಿ ಈ ಮುಂದಣ ಎರಡು ಉತ್ತಮ ಕೃತಿಗಳು ನೋಡುವುದಕ್ಕೆ ಲಭ್ಯವಾದವು: