ಲಜ್ಜಾಗೌರಿ: ಒಂದು ಕಲ್ಪನಾಬಂಧ

‘ಲಜ್ಜಾಗೌರಿ’ ಎಂಬ ಹೆಸರಿನಲ್ಲಿ ನಾವು ಯಾವ ದೇವಿಯನ್ನು ಗುರುತಿಸುತ್ತಿರುವೆವೋ, ಅವಳ ಉಪಾಸನೆಯ ಅನೇಕ ಸ್ಥಳಗಳು ಈಗ್ಗೆ ನಮಗೆ ಜ್ಞಾತವಾಗಿವೆ. ಅವುಗಳಲ್ಲಿ ಯಾವುವು ಅವಳ ಅಥವಾ ಅವಳ ಸಮುನ್ನತ ರೂಪದ ಉಪಾಸನೆಯಲ್ಲಿ ಮುಖ್ಯವೆನಿಸಿರುವುವೋ, ಅಂಥವುಗಳಲ್ಲಿ ಮಾಹೂರಝರಿ, ಆಳಂದ, ಭೋಕರದನ – ಇವುಗಳ ಸಂಬಂಧವಾಗಿಯೂ ಅನ್ಯ ಸಾಧನಗಳ ಆಧಾರದಿಂದ ಶೋಧನೆಯು ಸಾಧ್ಯ. ಸ್ಥಳೀಯ ಕಥೆ – ಗಾಥೆಗಳ. ಉಪಾಸನಾ – ವಿಶೇಷಗಳ ಅಥವಾ ಅವಶೇಷಗಳ ಅನುಬಂಧವು ಕೈಗೆ ದಕ್ಕುವವರೆಗೆ ಇಂಥ ಶೋಧವು ಸಾಧ್ಯವಾಗುವುದಿಲ್ಲ. ಎಂತಲೇ ಉತ್ತರದಲ್ಲಿ ದೊರೆತಿರುವ ಮೂರ್ತಿಗಳ ಸ್ಥಳವನ್ನು ಕುರಿತಂತೆ ಏನನ್ನೂ ತಿಳಿಯುವುದಕ್ಕೆ ಸಾಧ್ಯವಾಗಿಲ್ಲ. ಅತ್ತಕಡೆಯ ವಿದ್ವಾಂಸರೇ ಇದಕ್ಕೆ ಮುಂದೆ ಬರಬೇಕಾಗಿದೆ. ಮಹಾರಾಷ್ಟ್ರದಲ್ಲಿ ತೇರಾ, ನೇವಾಸೆ, ಮನಸರ – ಇತ್ಯಾದಿ ಸ್ಥಳಗಳಲ್ಲಿ ಉಪಲಬ್ಧವಾಗಿರುವ ಪುರಾತನ ಅವಶೇಷಗಳ ಮೂಲಕ ಆ ದೇವಿಯ ಮೂರ್ತಿಗಳಿಗೆ ಆಯಾಯ ಸ್ಥಳಗಳ ಸಾಂಸ್ಕೃತಿಕ ಇತಿಹಾಸದಲ್ಲಿ ಇರುವ ಸ್ಥಾನ ಎಂಥದು? ಆ ಸ್ಥಾನಗಳ ಗುರುತ್ವ ಇಂದು ಯಾವ ರೂಪದಲ್ಲಿದೆ? – ಈ ವಿಷಯಗಳನ್ನು ಶೋಧಿಸಬೇಕಾಗಿರುವುದು ಅಗತ್ಯ.

ಏಲಾಪುರದ ಎಲ್ಲಮ್ಮಾ

ವೇರುಳದ ಗುಹೆಯೊಂದರಲ್ಲಿ (ಕ್ರಮಾಂಕ.೨೧) ‘ಸಾಂಗ’ (ಶಿರೋಯುಕ್ತ) ಲಜ್ಜಾಗೌರಿಯ ಮೂರ್ತಿಯಿರುವುದನ್ನು ಡಾ. ಸಂಕಾಲಿಯಾ ಅವರು ಗುರುತಿಸಿದ್ದರು. (ಚಿತ್ರವನ್ನು ನೋಡಿ). ಈ ಮೂರ್ತಿಯ ಕೆಲವು ಭಾಗಗಳು ತುಂಡಾಗಿರುವುವಾದರೂ ಉಳಿದ ಭಾಗದಿಂದ ತಿಳಿಯುವಂತೆ, ಅದು ಪೂರ್ಣ ಪರಿಣತ ರೂಪದ ಲಜ್ಜಾಗೌರಿ ಮೂರ್ತಿ. ವೇರುಳದ ಗುಹೆಗಳಲ್ಲಿ ಇದಕ್ಕೆ ಸ್ಥಾನ ದೊರೆತಿರುವುದು, ಆ ಕ್ಷೇತ್ರದಲ್ಲಿ ಈ ದೇವಿಗಿರುವ ವಿಶೇಷತೆಯಿಂದಲೇ ಎಂಬುದು ನಮ್ಮ ಮನಸ್ಸಿನಲ್ಲಿ ಮೂಡುವ ಸ್ಪಷ್ಟವಾದ ವಿಚಾರ. ಕಾರಣ ಇಂದಿನ ಗ್ರಾಮನಾಮವಾದ ವೇರುಳವು ‘ಏಲಾಪುರ‘ವೆಂಬ ಪ್ರಾಚೀನ ಗ್ರಾಮನಾಮದ ಒಂದು ರೂಪವೇ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ‘ಏಲಾಪುರ’ ಎಂಬ ಹೆಸರಿನ ಸ್ಪಷ್ಟೀಕರಣ ಕಥೆಯೊಂದರ ಪ್ರಕಾರ ಯಾರೋ ಏಲಾ (ಯೇಲಾ) ಎಂಬ ರಾಜನಿಗೆ ಸಂಬಂಧಿಸಿದ್ದು ಎನ್ನಲಾಗಿದ್ದರೂ, ಈ ಹೆಸರಿಗೆ ಸಂಬಂಧಿಸಿದಂತೆ ಮೊದಲು ನಮ್ಮ ದೃಷ್ಟಿಗೆ ಎದುರಾಗುವ ಸಂಗತಿ ಎಲ್ಲಮ್ಮ. ಆಲಂಪುರವು ಮೂಲತಃ ಏಲಾಪುರ, ಎಲಮಾಪುರವಾಗಿತ್ತೆಂಬುದು ಈ ಹಿಂದೆಯೇ ನೋಡಿರುವ ಅಂಶ. ಹಾಗೆಯೇ ಬದಾಮಿ – ಮಹಾಕೂಟದ ಮಾಹಾತ್ಮ್ಯ ಕಥೆಯಲ್ಲಿ ಬರುವ ವಾತಾಪಿ – ಇಲ್ವಲರ ಸಂಬಂಧದಂತೆ ವೇರುಳ ಮಾಹಾತ್ಮ್ಯ ಕಥೆಯಲ್ಲೂ ಬಂದಿರುವುದು ಗಮನೀಯ. ಹನ್ನೆರಡನೆಯ ಶತಮಾನದಲ್ಲಿ ವೇರುಳ ಗುಹೆಯಲ್ಲಿ ಆಗಮಿಕರು ತಂತ್ರ ಸಾಧನಗಳನ್ನು ನಡೆಸಿಕೊಂಡಿದ್ದರು ಎಂಬ ವಿಚಾರವು ಬಂದಿದೆ ಲೀಳಾಚರಿತ್ರೆಯಲ್ಲಿ. (ಪೂರ್ವಾರ್ಧ. ಭಾಗ.೧, ೪೬ – ೪೭). ಈ ಹಿನ್ನೆಲೆಯಲ್ಲಿ ಈ ಕ್ಷೇತ್ರವು ಮೂಲದಲ್ಲಿ ಏಲಪುರವಾಗಿತ್ತು. ಎಲ್ಲಮ್ಮಳ ಕಾರಣವಾಗಿಯೇ ಅದಕ್ಕೆ ಈ ಹೆಸರು ಬಂದಿರಬಹುದೇ? ಕ್ಷೇತ್ರಸ್ಥ ದೇವತೆಗಳು, ಅವಶೇಷಗಳು ಮತ್ತು ಕಥೆಗಾಥೆಗಳನ್ನು (ಎಲ್ಲಾ ಮಾಹಾತ್ಮ್ಯ ಕಥೆಗಳು) ಸೂಕ್ಷ್ಮವಾಗಿ ಅವಲೋಕಿಸಬೇಕಾಗುತ್ತದೆ ಈ ಸಂಬಂಧವಾಗಿ. ಈ ಸಾಮಗ್ರಿಯ ಪ್ರಾಥಮಿಕವಾದ ಸ್ಥೂಲ ದೃಷ್ಟಿಯಿಂದ ನನಗೆ ತಿಳಿದ ಶೋಧದ ಒಂದು ದಿಶೆಯನ್ನು ನಮೂದಿಸಬೇಕೆಂಬ ಉದ್ದೇಶವೇ ಈ ಸೇರ್ಪಡೆಯ ಹಿನ್ನೆಲೆ.

ಪೇಡಗಾವ, ಬಿಟಲೇ ಮತ್ತು ಮಾರ್ಡೀ

ಪೂಜಾ ವಿಷಯದ ಪ್ರತೀಕಗಳು ಎಷ್ಟು ಪ್ರಸಿದ್ಧವಾಗುವುವೆಂದರೆ, ಪೂಜಾ ವಿಷಯಗಳನ್ನು ಬಿಟ್ಟು ಪೂಜಾ ಸ್ಥಾನಗಳ ರೂಪದಲ್ಲಿ ಒಂದು ಪವಿತ್ರ ಕಲ್ಪನಾ ಬಂಧ (Sacred Motif) ಅಲಂಕರಣವಾಗಿಯೂ ಅವುಗಳ ಬಳಕೆಯಾಗುವುದುಂಟು. ಪೂರ್ಣಕುಂಭ, ಗಜಲಕ್ಷ್ಮಿ ಇವುಗಳು ಹೀಗೆಯೇ ಶುಭಚಿಹ್ನೆಗಳ ಸ್ವರೂಪದಲ್ಲಿ ಪವಿತ್ರ ಕಲ್ಪನಾಬಂಧಗಳಾಗಿ ಮಂದಿರ ಸ್ಥಾಪನೆಯಲ್ಲಿ ಬಳಸಲಾಗುತ್ತಿರುವುದು. ಮಾತ್ರವಲ್ಲ ನಮ್ಮ ನಿವಾಸ ಸ್ಥಾನಗಳ ದ್ವಾರ ಪಟ್ಟಿಕೆಗಳ ಮೇಲೂ ಅವುಗಳನ್ನು ಶುಭತ್ವ ದರ್ಶಕ ಚಿಹ್ನೆಗಳಾಗಿ ಬಹುತೇಕ ಬಳಸುತ್ತಿರುವುದು ಗಮನೀಯ. ವರ್ಣನಾತ್ಮಕ ವಿಷಯವಾಗಿರುವ ನಮ್ಮ ದೇವೀಮೂರ್ತಿಗಳನ್ನು ಸಹ ಅಲ್ಪ ಪ್ರಮಾಣದಲ್ಲಿ ಹೀಗೆ ಬಳಸಿಕೊಂಡು ಬರಲಾಗಿದೆ. ಅಹಮದ್ ನಗರ ಜಿಲ್ಲೆಯಲ್ಲಿನ (ಮಹಾರಾಷ್ಟ್ರ) ಪೇಡಗಾಂವ (ತಾಲೂಕ. ಶ್ರೀಗೋಂಧೆ) ಎಂಬಲ್ಲಿ ಹೇಮಾಡ ಪಂಥದವರು ನಿರ್ಮಿಸಿದ ಒಂದು ಮಧ್ಯಯುಗೀನ ಭೈರವ ಮಂದಿರವಿರುವುದು. ಕ್ಷೇತ್ರಪಾಲಕ ದೇವರ ಮಂದಿರವಾದ ಇದರಲ್ಲಿನ ಒಂದು ಸ್ತಂಭದ ಮೇಲೆ ಈ ದೇವಿ (ಚಿತ್ರಾವಳಿಯಲ್ಲಿನ ೨೩ನೆಯ ಚಿತ್ರವನ್ನು ನೋಡಿ)ಯನ್ನು ಕೆತ್ತಲಾಗಿದ್ದು, ಅವಳ ಯೋನಿಯಿಂದ ಹೊರಟ ಇಲ್ಲವೆ ಯೋನಿಯಲ್ಲಿ ಸೇರಿಕೊಂಡ (ಪ್ರವಿಷ್ಟ) ಎರಡು ನಾಗಗಳನ್ನು ಮತ್ತೊಂದೆಡೆ ಅವಳು ತನ್ನ ಎರಡೂ ಕೈಗಳಿಂದ ಹಿಡಿದುಕೊಂಡಿದ್ದಾಳೆ. ಸಾಂಗ (ಶಿರೋಯುಕ್ತ) ಸ್ವರೂಪದವಳಾಗಿದ್ದಾಳೆ ಈ ದೇವಿ. ಸರ್ಪ ಅಥವಾ ನಾಗವು ಪುರುಷ ತತ್ತ್ವದ ಪ್ರತಿನಿಧಿ, ಆದಿಪುರುಷವೆಂಬುದನ್ನು ಈ ಕೃತಿಯ ಕೊನೆಯ ಮೂರು ಅಧ್ಯಾಯಗಳಲ್ಲಿ ಮತ್ತೆಮತ್ತೆ ವಿವರಿಸಲಾಗಿದೆ. ಗಜಲಕ್ಷ್ಮಿ ಶಿಲ್ಪದಲ್ಲಿ ವರ್ಷಣ ಶೀಲವಾದ ಎರಡು ಗಜಗಳಿರುವಂತೆ ಇಲ್ಲಿ ಯೋನಿ ಪ್ರವಿಷ್ಟವಾದ ಎರಡು ನಾಗಗಳಿವೆ. ಎರಡು ಗಜ, ಎರಡು ನಾಗ, ಇಲ್ಲಿನ ‘ಎರಡು’ ಸಂಖ್ಯೆಯ ಸೂಚನೆಯೆಂದರೆ ಪುರುಷನ ಅನೇಕತೆಯೊಂದಿಗೆ ಇರುವ ವಿಶೇಷ ಬದ್ಧತೆ. ಪ್ರಕೃತಿ ಏಕವಾಗಿದ್ದರೆ – ಪುರುಷ ಅನೇಕ! ಕ್ಷೇತ್ರಪಾಲಕ ಅಥವಾ ಕ್ಷೇತ್ರಪತಿಯ ಮಂದಿರದಲ್ಲಿ ಕ್ಷೇತ್ರದ ಶಿಲ್ಪವು ಕ್ಷೇತ್ರಪತಿ ಸಂಯುಕ್ತವಾಗಿರಬೇಕು ಎಂಬುದು ಈ ಮೂಲ ಶ್ರದ್ಧೆಯನ್ನೇ ಒಳಗೊಂಡುದಾಗಿದೆ. ಈ ಶಿಲ್ಪದ ವಿವರ ಮತ್ತು ಛಾಯಾಚಿತ್ರಗಳು ನನ್ನ ಸಂಶೋಧಕ ಮಿತ್ರ ಶ್ರೀಪ್ರಭಾಕರ ಕುಲಕರ್ಣಿಯವರ ಸೌಜನ್ಯದಿಂದ ಉಪಲಬ್ಧವಾದದ್ದು ನನಗೆ.

ಸೋಲಾಪುರ ಜಿಲ್ಲೆಯಲ್ಲಿನ ಬಿಟಲೇ (ತಾಲೂಕ ಮೋಹೋಳಾ), ಮಾರ್ಡೀ (ತಾ.ಸೋಲಾಪುರ) ಮತ್ತು ಕರ್ನಾಟಕ ಗುಲಬರ್ಗಾ ಜಿಲ್ಲೆಯಲ್ಲಿನ ಮಣೂರ (ತಾ.ಅಫಜಲಪುರ) ಎಂಬ ಸ್ಥಳಗಳಲ್ಲಿ ಮಧ್ಯಯುಗೀನ ಯಮಾಯಿಯ ಮಂದಿರಗಳಿವೆ. ಅವುಗಳ ಸ್ತಂಭಗಳ ಮೇಲೆ ‘ಲಜ್ಜಾಗೌರಿ‘ಯ ಶಿರೋಯುಕ್ತ ರೂಪವನ್ನು ಈ ಕಲ್ಪನಾಬಂಧ (sacred Motif) ಸ್ವರೂಪದಲ್ಲಿಯೇ ಕೆತ್ತಲಾಗಿದೆ. ಈ ಮಾಹಿತಿಯನ್ನು ಪತ್ರ ಮುಖೇನ ನನಗೆ ತಿಳಿಸಿದವರು ನನ್ನ ಸಂಶೋಧಕ ಮಿತ್ರ ಶ್ರೀಆನಂದ ಕುಂಭಾರ. ಅವರು ಜ್ಞಾನನಿಷ್ಠ ಸಂಶೋಧಕರು. ಇವರಲ್ಲಿ ಯಾವುದೇ ಆಧುನಿಕ ಸಲಕರಣೆಗಳಿಲ್ಲ. ಆದರೆ ಅವರು ಮಾಡಿರುವ ದೋಲಾಮುದ್ರೆ (pencil bed) ಮತ್ತು ಹತ್ತೊಂಭತ್ತನೆಯ ಶತಮಾನದ ಅನೇಕ ಅಲಭ್ಯ ಕೃತಿಗಳ ಸಂಗ್ರಹ ಲಕ್ಷಾಂತರ ರೂಪಾಯಿಗಳ ಬೆಲೆಯುಳ್ಳದ್ದು. ಇತ್ತೀಚೆಗೆ ಅವರು ಸೋಲಾಪುರ ಜಿಲ್ಲೆ ಮತ್ತು ಅದಕ್ಕೆ ತಾಗಿಕೊಂಡಿರುವ ಭಾಗಗಳಲ್ಲಿ ಮತ್ತೆಮತ್ತೆ ತಿರುಗಾಡಿ ಅನೇಕ ಅಜ್ಞಾತ ಶಾಸನಗಳು, ಪುರಾತನ ಮಂದಿರಗಳು ಮತ್ತಿತರೆ ವಿಶೇಷ ಅಂಶಗಳನ್ನು ಬೆಳಕಿಗೆ ತಂದಿದ್ದಾರೆ. ಈ ಮೇಲೆ ಹೇಳಿದ ಮೂರೂ ಸ್ಥಳಗಳಿಗೂ ಅವರೇ ಸ್ವತಃ ಹೋಗಿ ಮಾಹಿತಿ ಸಂಗ್ರಹಿಸಿರುವುದು ಗಮನೀಯ.

ಬಿಟಲೇ ಎಂಬಲ್ಲಿನ ಮಂದಿರವು ಹೇಮಾಡ ಪಂಥದವರ ನಿರ್ಮಾಣವಾಗಿದ್ದು ಅಲ್ಲಿನ ಪರಿಸರದಲ್ಲಿ ಒಂದು ಹಾಳುಬಿದ್ದ ಗಜಲಕ್ಷ್ಮಿಯ ಶಿಲ್ಪವಿದೆ. ಮಾರ್ಡೀಯಲ್ಲಿನ ಮಂದಿರದ ಪರಿಸರದಲ್ಲಿ ‘ತೀರ್ಥ‘ವಾಗಿ ಬಳಸುತ್ತಿರುವ ಒಂದು ಹಳೆಯ ಬಾವಿ, ಅನೇಕ ಭಗ್ನ ಮೂರ್ತಿಗಳು, ಶಿಲ್ಪಗಳು ಮತ್ತು ನಾಲ್ಕೈದು ಶಾಸನಗಳು (ಇವುಗಳಲ್ಲಿ ಒಂದು ಸಂಸ್ಕೃತ, ಉಳಿದುವೆಲ್ಲವೂ ಕನ್ನಡ) ಇವೆ. ಬಿಟಲೇ, ಮಾರ್ಡೀ ಮತ್ತು ಮಣೂರಗಳಲ್ಲಿ ಇರುವ ಯಮಾಯಿ (ಯಲ್ಲಮ್ಮಾ)ಯ ಮಂದಿರಗಳಲ್ಲಿನ ಒಂದೊಂದು ಸ್ತಂಭದ ಮೇಲೆ, ಅದರ ನಾಲ್ಕೂ ಬದಿಗಳಲ್ಲಿ ಕೆತ್ತಿರುವ ಶಿಲ್ಪಗಳೆಲ್ಲ ಸ್ತ್ರೀಯರದ್ದೇ. ಕೈಗಳನ್ನು ಮೇಲಕ್ಕೆತ್ತಿರುವ, ಮೊಳಕಾಲುಗಳನ್ನು ಮಡಿಚಿ ಅತ್ತಿತ್ತ ಬಾಗಿಸಿರುವ, ಉತ್ಫುಲ್ಲವಾದ ಯೋನಿ ಹಾಗೂ ಪುಷ್ಟವಾದ ಸ್ತನಗಳಿಂದ ಕೂಡಿದ ಸ್ವರೂಪದ್ದಾಗಿವೆ ಇವು.

ಮಣೂರಿನ ಯಲ್ಲಮ್ಮಾ

ಇಲ್ಲಿ ಎರಡು ಯಲ್ಲಮ್ಮನ ಮಂದಿರಗಳಿರುವುವು. ಮಣೂರ ಎಂಬ ಊರು. ಭೀಮಾ ನದಿಯ ಎರಡೂ ದಡಗಳ ಮೇಲೆ ಇರುವುದು. ಇವುಗಳ ಪೈಕಿ ಚಿಕ್ಕ ಮಣೂರು (ಮಣೂರ ಖುರ್ದ) ವು ನದಿಯ ಪಶ್ಚಿಮ ತೀರದ ಮೇಲಿದ್ದು ವಿಜಾಪುರದ ಇಂಡಿ ತಾಲೂಕಿಗೆ ಸೇರಿದೆ. ಇನ್ನೂ ಹಿರೇ ಮಣೂರ (ಮಣೂರ ಬದ್ರುಕ)ವು ನದಿಯ ಪೂರ್ವ ತೀರದ ಮೇಲಿದ್ದು ಗುಲಬರ್ಗಾ ಜಿಲ್ಲೆಯ ಅಫಜಲಪುರ ತಾಲೂಕಿಗೆ ಸೇರಿದುದಾಗಿದೆ. ಯಲ್ಲಮ್ಮನ ಒಂದು ಮಂದಿರ ಇನ್ನೂ ಹಿರೇ ಮಣೂರ (ಮಣೂರ ಬದ್ರುಕ)ವು ನದಿಯ ಪೂರ್ವ ತೀರದ ಮೇಲಿದ್ದು ಗುಲಬರ್ಗಾ ಜಿಲ್ಲೆಯ ಅಫಜಲಪುರ ತಾಲೂಕಿಗೆ ಸೇರಿದುದಾಗಿದೆ. ಯಲ್ಲಮ್ಮನ ಒಂದು ಮಂದಿರ ನದಿಯ ಪಾತ್ರದಲ್ಲಿಯೇ ಇದ್ದರೆ, ಮತ್ತೊಂದು ಇರುವುದು ಹಿರೇ ಮಣೂರಿನಲ್ಲಿ. ಈ ಎರಡೂ ಮಂದಿರಗಳು ಚಾಲುಕ್ಯರ ಕಾಲದವುಗಳಾಗಿದ್ದು, ಶಿಲ್ಪ ಸೌಂದರ್ಯದಿಂದ ಕಂಗೊಳಿಸುತ್ತಲಿವೆ. ನದಿಯ ಪಾತ್ರದಲ್ಲಿರುವ ಮಂದಿರದ ಮೇಲೆ ಕಾಮಶಿಲ್ಪಗಳನ್ನು ಕೆತ್ತಲಾಗಿದೆ. ಸ್ತಂಭದ ಮೇಲಿರುವ ಲಜ್ಜಾಗೌರಿ ಶಿಲ್ಪವಿರುವುದು ಊರೊಳಗಿನ ಮಂದಿರದಲ್ಲಿ. ಇಲ್ಲಿ ಸ್ತ್ರೀಯರು ಸಂತಾನ ಪ್ರಾಪ್ತಿಗಾಗಿ ವ್ರತಾಚರಣೆ ಕೈಗೊಳ್ಳುವುದುಂಟು. ಅಲ್ಲದೆ ಬೇವಿನ ಉಡುಗೆ ತೊಟ್ಟು ದೇವಿಯನ್ನು ಪೂಜಿಸುವುದೊಂದು ವಿಶೇಷ. ಮಣೂರ ಎಂಬ ಗ್ರಾಮವು (ಮಣ್ಣು+ಊರು) ಮೃತ್ತಿಕಾಪುರ ಎಂಬರ್ಥದ್ದಾಗಿದ್ದು, ಆ ಹೆಸರೂ ಸಹ ಯಲ್ಲಮ್ಮದೇವಿಯ ಅಧಿಷ್ಠಾನದೊಂದಿಗೆ ಸಂಬಂಧಪಟ್ಟುದಾಗಿದೆ.