ಶಕ್ತ್ಯುಪಾಸನೆಯ ಇತಿಹಾಸ ಮಾನವನ ಇತಿಹಾಸದಷ್ಟೇ ಪ್ರಾಚೀನವಾದುದು. ಮಾನವನು ಪ್ರಥಮವಾಗಿ ದೇವತ್ವವನ್ನು ಕಲ್ಪಿಸಿಕೊಂಡನು ಮತ್ತು ಉಪಾಸಿಸಿದನು. ಅದು ಸ್ತ್ರೀರೂಪಿಯಾದ ಸೃಷ್ಟಿಯ ಗಹನಗೂಢ ಶಕ್ತಿಯನ್ನು ಧಾರಣೆ ಮಾಡಿಕೊಂಡಿರುವ ದೇವೀ ರೂಪದಲ್ಲಿಯೇ. ಮಾತೃದೇವತೆಯು ಮಾನವ ಸಂಸ್ಕೃತಿಯ ಇತಿಹಾಸದಲ್ಲಿನ ಆದ್ಯ ಶಕ್ತಿಯಾಗಿದ್ದಾಳೆ. ಎಂತಲೇ ಮಾನವನು ಅವಳಿಗೆ ಅತ್ಯುನ್ನತ ಸ್ಥಾನವನ್ನು ಕಲ್ಪಿಸಿದನು, ನಾನಾ ರೂಪಗಳಲ್ಲಿ ಕಂಡನು, ನಾನಾ ಹೆಸರುಗಳಲ್ಲಿ ಕರೆದನು, ಹಾಗೂ ನಾನಾ ಬಗೆಯಲ್ಲಿ ಪೂಜಿಸಿದನು. ಶಕ್ತ್ಯುಪಾಸನೆಯ ಇತಿಹಾಸವನ್ನು ಸರ್ವ ಅಂಗೋಪಾಂಗಗಳಿಂದ ಶೋಧಿಸ ಹೊರಟ ಅಧ್ಯಯನಕಾರನು ಮೊದಲು ಮನುಷ್ಯನ ಜೀವನ ಪ್ರವಾಹದಲ್ಲಿ ಉಂಟಾಗಿರುವ ಈ ಅನೇಕ ಪಲ್ಲಟಗಳನ್ನು ಪರಿಣಾಮಗಳನ್ನು ಗಮನಿಸಬೇಕಾಗಿ ಬರುತ್ತದೆ. ಮನುಷ್ಯನ ಮನಸ್ಸು ಅನೇಕ ಗೂಢತಮ ರಹಸ್ಯಗಳನ್ನು ಭೇದಿಸಿರುವ ಸಂಗತಿಯೂ ಗಮನಕ್ಕೆ ಬರುವುದು ಆಗ ಮಾತ್ರ.

ಭಾರತದಲ್ಲಿ ಶಕ್ತ್ಯುಪಾಸನೆಯ ಸಾಂಸ್ಕೃತಿಕ ಇತಿಹಾಸವು ಬಹುತೇಕ ಸರ್ವವ್ಯಾಪಕವಾದುದು. ಇದು ಕೇವಲ ಶಾಕ್ತ ತಾಂತ್ರಿಕರ ಪಂಥದ ಮಟ್ಟಿಗಷ್ಟೇ ಅಲ್ಲ, ಎಲ್ಲ ಭಾರತೀಯ ನಿತ್ಯದ ಧಾರ್ಮಿಕ ಬದುಕಿನಲ್ಲಿಯೂ ಶಕ್ತ್ಯುಪಾಸನೆಯ ಮಹತ್ವವು ನಿನ್ನೆ ಮೊನ್ನೆಯವರೆಗೂ ವ್ಯಾಪಿಸಿದ್ದುದು ಕಂಡುಬರುತ್ತದೆ. ನಮ್ಮ ವಾಙ್ಮಯ ಧಾರೆಯಲ್ಲಿ ಋಗ್ವೇದದ ಅದಿತಿಯಿಂದ ಹಿಡಿದು, ಇಂದಿಗೂ ಬಾಗಿಲಿಗೆ ಬರುವ ಗೊಂದಲಿಗರ ಹಾಡುಗಳಲ್ಲಿಯ ಭವಾನಿ – ರೇಣುಕೆಯರವರೆಗೆ ಶಕ್ತಿಯ ಮಹಿಮೆಯನ್ನು ಕೇಳಬಹುದಾಗಿದೆ. ಅಂತೆಯೇ ಸಿಂಧೂ ನದಿಯ ತೀರದಲ್ಲಿ ದೊರೆತ ಮೂರು ಸಾವಿರ ವರ್ಷಗಳ ಹಿಂದಿನ ಮೂರ್ತಿಯಿಂದ ಹಿಡಿದು ಹಳ್ಳಿಗಳಲ್ಲಿ ಇಂದಿಗೂ ಪ್ರಭಾವಶಾಲಿಯಾಗಿರುವ ಗ್ರಾಮ ದೇವತೆಗಳವರೆಗೆ ಅವಳ ಉಪಾಸನೆಯ ಸಾತತ್ಯವು ಕಾಣಸಿಗುತ್ತದೆ.

ಶಕ್ತ್ಯುಪಾಸನೆಯ ವಾಙ್ಮಯ ರೂಪಗಳ ದರ್ಶನವು ಎಷ್ಟು ಗಹನವಾಗಿರುವುದೋ, ಅಷ್ಟೇ ಮಟ್ಟಿಗೆ ಅವಳ ಮೂರ್ತಿಯ ರೂಪಗಳ ದರ್ಶನವೂ ಆಶ್ಚರ್ಯಕರವಾಗಿಯೇ ವಿಮೂಢಗೊಳಿಸುತ್ತದೆ. ಒಂದು (ಇಳಿಬಿದ್ದ) ಕರಂಡಕದ ಸುಂದರ ರೂಪದಲ್ಲಿ ಆಕೆ ತನ್ನ ಪ್ರಾಥಮಿಕ ಮೂರ್ತಿ ಸ್ವರೂಪವನ್ನು ಪ್ರಕಟಿಸಿರುವುದುಂಟು. ಅಂತೆಯೇ ನಂತರದಲ್ಲಿ ಆಕೆ ಅನೇಕ ಭುಜಗಳಿಂದಲೂ ಹಾಗೂ ಅನೇಕ ಆಯುಧಗಳಿಂದಲೂ ಕೂಡಿದ ರೂಪದಿಂದ ತನ್ನ ಪರಿಣತವಾದ ಮೂರ್ತಿ ಸ್ವರೂಪವನ್ನು ತೋರಿಸಿದ್ದಾಳೆ. ಈ ಎಲ್ಲಾ ಮೂರ್ತಿ ಸ್ವರೂಪಗಳ ಹಿಂದೆ ಉಪಾಸಕರು ಅವಳ ಬಗ್ಗೆ ಹೊಂದಿದ್ದ ಧೋರಣೆಯ ಎಳೆಗಳು ಗೂಢವಾಗಿ ಸುತ್ತಿಕೊಂಡಿವೆ. ಈ ಎಳೆಗಳನ್ನು ಬಿಡಿಸದ ಹೊರತು ಇಂಥ ಮೂರ್ತಿಗಳನ್ನು ಕುರಿತು ಏನನ್ನೂ ತಿಳಿಸುವುದಕ್ಕೆ ಸಾಧ್ಯವಿಲ್ಲ.

ವಿಚಿತ್ರ ರೂಪಗಳ ದೇವಿ

ಮರಾಠಾವಾಡ ಪ್ರದೇಶದಲ್ಲಿನ ತಗರಪುರ (ತೇರ, ಜಿಲ್ಲಾ – ಉಸ್ಮಾನಾಬಾದ್)ದಲ್ಲಿ ಸಂಶೋಧಕರು ಉತ್ಖನನ ಮಾಡಿದಾಗ ಅತ್ಯಂತ ವಿಚಿತ್ರವಾಗಿ ಭಾಸವಾಗುವ ದೇವಿಯ ಮೂರ್ತಿಗಳು ಉಪಲಬ್ಧವಾದವು. ಸುಟ್ಟಮಣ್ಣಿನಲ್ಲಿ ಸಮತಟ್ಟಾದ ಮುದ್ರೆಗಳುಳ್ಳ ಇವು ಬಹಳ ಆಕರ್ಷಣೀಯವಾಗಿದೆ. ಈ ಮೂರ್ತಿಗಳಲ್ಲಿ ಸ್ತ್ರೀರೂಪದವು ಕೇವಲ ನಾಭಿಪ್ರದೇಶದಿಂದ ಕೆಳಭಾಗದ್ದಾಗಿರುವುದು ವಿಶೇಷ. ಅವು ಪರಿಪೂರ್ಣವಾಗಿ ನಗ್ನವಾಗಿರುವುವಷ್ಟೇ ಅಲ್ಲ, ಯೋನಿ ಭಾಗಕ್ಕೆ ಹೆಚ್ಚಿನ ಉತ್ಫುಲ್ಲತೆಯನ್ನು ತರುವುದಕ್ಕಾಗಿ ಎರಡೂ ಮೊಣಕಾಲುಗಳನ್ನು ಅತ್ತ ಇತ್ತ ಪಕ್ಕಕ್ಕೆ ಹೊರಳಿಸಲಾಗಿದೆ. ಮುದ್ರೆಯ ನಾಲ್ಕೂ ಬದಿಗಳಲ್ಲಿ ನಾಲ್ಕು ಕಮಲಗಳಿವೆ.

ತೇರದಲ್ಲಿನ ಈ ಮೂರ್ತಿಯಂತೆಯೇ ಇರುವ ಅನೇಕ ಮೂರ್ತಿಗಳು ಬೇರೆಡೆ ಮಾಡಿದ ಉತ್ಖನನಗಳಲ್ಲಿಯೂ ಲಭ್ಯವಾಗಿವೆ. ಆದರೆ ಈ ಉತ್ಖನಿತ ಮೂರ್ತಿಯು ತನ್ನ ರೂಪದ ರಹಸ್ಯವನ್ನು ತಿಳಿಸಿಕೊಡುವುದಿಲ್ಲ. ಅದಕ್ಕಾಗಿ ನಾವು ಈ ವಿಚಿತ್ರ ರೂಪದ ದೇವಿಯ ಉಪಾಸಕರನ್ನು ಕಾಣಬೇಕಾದದ್ದು ಅವಶ್ಯ. ಏಕೆಂದರೆ ಈ ಉಪಾಸಕರ ಧೋರಣೆಗಳೇ ಉಪಾಸನೆಯ ರೂಪದಲ್ಲಿ ಮೂರ್ತಿಗೊಂಡಿರುತ್ತವೆ. ಸುದೈವದಿಂದ ತೇರದಲ್ಲಿ ಲಬ್ಯವಾದ ಮೂರ್ತಿಯ ಸ್ವರೂಪವುಳ್ಳ ದೇವಿಯ ಮೂರ್ತಿಗಳ ಉಪಾಸನೆಯ ಸಾತತ್ಯವನ್ನು ಇಂದಿಗೂ ನಾಲ್ಕಾರು ಎಡೆಗಳಲ್ಲಿ ಉಳಿಸಿಕೊಂಡು ಬರಲಾಗಿದೆ. ಇಂಥ ಎರಡು ಮೂರು ‘ಜಾಗೃತ’ ಉಪಾಸನ ಕೇಂದ್ರಗಳನ್ನು ಶೋಧಿಸಿದ ಮೇಲೆ ಈ ವಿಚಿತ್ರ ರೂಪದ ದೇವಿಯ ವಿಷಯದಲ್ಲಿ ಇರುವ ಜ್ಞಾನ ಯಾವುದೆಂಬುದನ್ನು ಸ್ಪಷ್ಟಗೊಳಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಕರ್ನಾಟಕದ ಈಗಿನ ಬಾಗಲಕೋಟ ಜಿಲ್ಲೆಯಲ್ಲಿಯ ಬದಾಮಿ ತಾಲೂಕಿನಲ್ಲಿ ನಂದಿಕೆಶ್ವರ ಎಂಬ ಹೆಸರಿನ ಊರಿದೆ, ಪೂರ್ವದಲ್ಲಿ ಚಾಲುಕ್ಯರ ರಾಜಧಾನಿಯಾಗಿದ್ದ ಪ್ರಖ್ಯಾತ ಬದಾಮಿಯಿಂದ ಇದು ಮೂರು ಮೈಲು ಅಂತರದಲ್ಲಿದೆ. ಬದಾಮಿಯಿಂದ ನಂದಿಕೇಶ್ವರದವರೆಗೆ ಮಾರ್ಗವು ಕಲ್ಲಿನ ಮೆಟ್ಟಿಲುಗಳಿಂದ ಕೂಡಿದೆ. ಬದಾಮಿಯ ಪಿಸರದಕ್ಕೆ ಹೊಂದಿಕೊಂಡಿರುವ ಇಲ್ಲಿ ಅನೇಕ ಪುರಾತನ ಅವಶೇಷಗಳಿವೆ. ವಿಶೇಷವಾಗಿ ಇಲ್ಲಿನ ‘ಮಹಾಕೂಟ’ ಮಂದಿರ ಸಮುಚ್ಚಯದಲ್ಲಿನ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳು ಅತಿಶಯವಾದ ಮಹತ್ವದುವುಗಳೆನ್ನಲಾಗಿದೆ. ನೆರೆಯ ಬದಾಮಿ ಕ್ಷೇತ್ರವು ಶಾಕಂಭರಿ ಅಥವಾ ಬನಶಂಕರಿ ದೇವಿಯ ಸ್ಥಾನ. ಅಲ್ಲಿ ಎಲ್ಲಮ್ಮ ದೇವಿಯ ಪುರಾತನ ಮಂದಿರವೂ ಇದೆ.

ಮಹಾಕೂಟ ಮಂದಿರ ಸಮೂಹವು ಉತ್ತಮವಾದ ಕಲ್ಲುಗಳಿಂದ ಬಿಗಿಯಾಗಿ ಕಟ್ಟಿದ ಆವರಣದಲ್ಲಿದೆ. ಈ ಮಂದಿರ ಸಮೂಹದಲ್ಲಿ ಅನೇಕ ಮಂದಿರಗಳಿದ್ದು, ಅವು ವಿವಿಧ ಸ್ಥಾಪತ್ಯ ಶೈಲಿಯ ದರ್ಶನ ನೀಡುವುವಂತಹವಾಗಿವೆ. ಮುಖ್ಯವಾಗಿ ಚಾಲುಕ್ಯ ಸ್ಥಾಪತ್ಯ ಶೈಲಿಗಾಗಿ ಈ ಮಂದಿರವು ಪ್ರಸಿದ್ಧ. ಇಲ್ಲಿನ ಮಂದಿರಗಳಲ್ಲೆಲ್ಲ ಪ್ರಮುಖವಾದುದೆಂದರೆ ಮಹಾಕೋಟೇಶ್ವರ ದೇವಾಲಯ. ಆವರಣದ ಮಧ್ಯಭಾಗದಲ್ಲಿ ‘ವಿಷ್ಣು ಪುಷ್ಕರಿಣಿ’ ಎಂಬ ರ್ತೀ ಕುಂಡವಿದೆ. ಇದನ್ನು ಅಗಸ್ತ್ಯ ಮಹರ್ಷಿಯು ಕಟ್ಟಿಸಿದನೆಂಬ ಅಖ್ಯಾಯಿಕೆ ಉಂಟು. ಅದರ ಮಧ್ಯ ಭಾಗದಲ್ಲಿ ಒಂದು ಮಂಟಪವಿದ್ದು, ಅಲ್ಲಿ ಚತುರ್ಮುಖ ಬ್ರಹ್ಮನ ಸುಂದರವಾದ ಮೂರ್ತಿಯೊಂದು ಇದೆ. ಪ್ರಾಕಾರದ ದ್ವಾರದಲ್ಲಿರುವ ದ್ವಾರಪಾಲಕರ ಬಗ್ಗೆ ಕ್ಷೇತ್ರ ಮಹಾತ್ಮೆಯಲ್ಲಿ ಬಂದಿರುವುದು ವಾತಾಪಿ ಮತ್ತು ಇಲ್ವಲರೆಂಬ ದೈತ್ಯರ ಉಲ್ಲೇಖ.

ಮಹಾಕೋಟೇಶ್ವರ ಮಂದಿರದಲ್ಲಿನ ಸ್ತಂಭದ ಮೇಲೆ ಆರು ಶಾಸನಗಳನ್ನು ಕೆತ್ತಲಾಗಿದೆ. ಅವುಗಳ ಪೈಕಿ ಒಂದು ವಿಜಯಾದಿತ್ಯ ಚಾಲುಕ್ಯನ ಆಡಳಿತಾವಧಿಯ (ಕ್ರಿ.ಶ.೬೯೬ – ೭೩೩) ಕಾಲದ್ದು. ಅದರಲ್ಲಿ ಒಬ್ಬ ಗಣಿಕೆಯು ಕೊಟ್ಟ ದಾನದ ಉಲ್ಲೇಖವಿದೆ. ಮತ್ತೊಂದು ಕ್ರಿ.ಶ. ೬೩೪ರ ಕಾಲಕ್ಕೆ ಸೇರಿದುದಾಗಿದ್ದು, ಅದರಲ್ಲಿ ಯಾರೋ ಒಪ್ಪುವರಸ ಎಂಬಾತನು ಕೊಟ್ಟ ದೇಣಿಗೆಯನ್ನು ಕುರಿತು ಉಲ್ಲೇಖಿಸಲಾಗಿದೆ. ಹಾಗೆಯೇ ಮೂರನೆಯ ಸ್ತಂಭದಲ್ಲಿಯೂ ದೇಣಿಗೆಯದ್ದೇ ವಿವರವುಂಟು. ಉಳಿದ ಮೂರು ಶಾಸನಗಳು ಅಂಥ ವಿಶೇಷವಾದುವುಗಳೇನಲ್ಲ.

ನಂದಿಕೇಶ್ವರ ಮತ್ತು ಮಹಾಕೂಟ ಎಂಬ ಎರಡು ಹೆಸರುಗಳಲ್ಲಿ ಗುರುತಿಸಲ್ಪಡುವ ಈ ಕ್ಷೇತ್ರವು ಶಿಲ್ಪ ಸೌಂದರ್ಯ ಹಾಗೂ ನಿಸರ್ಗ ಸೌಂದರ್ಯಗಳಿಂದ ಸಮೃದ್ಧವಾದುದು. ಕ್ಷೇತ್ರ ಮಹಾತ್ಮ್ಯಕಾರರು ಅದರ ಪಾವಿತ್ರ್ಯವನ್ನು ಕುರಿತು ಕೀರ್ತಿಸುವಾಗ್ಗೆ ಅದನ್ನು ‘ದಕ್ಷಿಣ ಕಾಶಿ’ ಎಂಬ ಬಿರುದಿನಿಂದ ಪ್ರಸಿದ್ಧಗೊಳಿಸಿದ್ದಾರೆ.”

ಶಾಕಂಭರೀ ಮಾಹಾತ್ಮ್ಯಂನಲ್ಲಿನ ಮಹಾಕೂಟ ಮಹಿಮೆ

ಮಹಾಕೂಟವು ಶಿವ – ಶಕ್ತಿಯರಿಬ್ಬರಿಗೂ ಪ್ರಿಯವಾದ ಕ್ಷೇತ್ರವಾಗಿದೆ. ಮಹಾಕೂಟದ ಪರಿಸರದಲ್ಲಿ ಶಿವನ ಸ್ಥಾನಗಳು ಅಧಿಕವಾಗಿವೆ. ಈ ಸರ್ವಕ್ಷೇತ್ರವು ಶಿವಲಿಂಗಮಯವಾದುದು ಎಂದು ಹೇಳಿದಲ್ಲಿ ಅತಿಶಯೋಕ್ತಿಯಾಗುವುದಿಲ್ಲ. ‘ಶಾಕಂಭರಿ ಮಾಹಾತ್ಮ್ಯೆ’ಯಲ್ಲಿ ಹೇಳಿರುವಂತೆ ಇಲ್ಲಿ ಕೋಟಿ ಲಿಂಗಗಳಿಗದ್ದವು. ಬದಾಮಿಯ ಬನಶಂಕರಿ ಅಥವಾ ಶಾಕಂಭರೀ ದೇವಿಯನ್ನು ಕುರಿತ ಕೃತಿಯೇ ‘ಶಾಕಂಭರೀ ಮಾಹಾತ್ಮ್ಯಂ’. ಸ್ಕಂದಪುರಾಣದಲ್ಲಿ ಅಂತರ್ಗತವಾಗಿರುವ ವಿಚಾರವನ್ನು ಹೇಳುವ ಈ ಕೃತಿಯಲ್ಲಿ ಮಹಾಕೂಟದ ಬಗ್ಗೆ ಅನೇಕ ಉಲ್ಲೇಖಗಳಿವೆ. ವಿಶೇಷವಾಗಿ ಇಲ್ಲಿನ ವೃಕ್ಷರಾಜಿಗಳು, ತೀರ್ಥಕುಂಡಗಳು, ಪ್ರಮುಖವಾದ ಶಿವ ಮಂದಿರಗಳು ಹಾಗೂ ದೇವಿಯನ್ನು ನಿರ್ದೇಶಿಸುವ ಕೆಳಗಿನ ಶ್ಲೋಕಗಳು ಪ್ರಸ್ತುತ ಸಂದರ್ಭದಲ್ಲಿ ಅತಿಶಯ ಮಹತ್ವದ್ದೆನಿಸುತ್ತವೆ:

ತಟೇ ಮಲಾಪಹಾರಿಣ್ಯಾಃ ಸಂತಿ ಲಿಂಗಾನಿ ಕೋಟಿಶಃ |
ತಾನಿ ಸರ್ವಾಣಿ ಗದಿಂತುಂ ನಾಲಂ ವರ್ಷಶತಾನ್ಯಪಿ ||

ಬಿಲ್ವರಾಜೀವನಂ ಚಾತ್ರ ವಿದ್ಯತೇ ಸುಮನೋಹರಮ್ |
ಶಿವಯಾ ಸಹಿತಃ ಶಂಭುರ್ವಿಶ್ರ್ಯಾಮತಿ ಸುಖಂ ತ್ವಿಹ ||

ವಿಷ್ಣು ಪುಷ್ಕರಿಣೀ ತೀರೇ ಮಲ್ಲಿಕಾರ್ಜುನ ಸನ್ನಿಧೌ |
ಪಾತಾಲೇಶಂ ಪಿನಾಕೀಶಂ ಲಜ್ಜಾಗೌರ್ಯಾಹ್ವಯಂ ತಥಾ ||

ಕೋಟಿಲಿಂಗ ವೈಷ್ಣವೇಶಂ ವೀರಭದ್ರೇಶ್ವರಂ ತಥಾ |
ನಾರಸಿಂಹಂ ವಾಮನಾಖ್ಯಂ ಶೃಗಾಲೇಶ್ವರಮೇವಚ ||

ಏತಾನಿ ನವಲಿಂಗಾನಿ ದುರತಘ್ನಾನಿ ತಾಪಸಾಃ |
ಪರ್ವತೇ ಕೋಟಿಲಿಂಗಾನಿ ಬಿಲ್ವಚಂದನರಾಜಿತೇ ||
(‘ಶಾಕಂಭರೀ ಮಾಹಾತ್ಮ್ಯಂ’, ೮.೧೯ – ೨೩)

ಶಾಕಂಭರೀ ಮಾಹಾತ್ಮ್ಯೆಯನುಸಾರ “ಮಲಪ್ರಭೆಯ ತಟದಲ್ಲಿ ಕೋಟಿ ಲಿಂಗಗಳಿವೆ. ಅವೆಲ್ಲವುಗಳ ಮಹಾತ್ಮ್ಯೆಯನ್ನು ವರ್ಣಿಸುವುದಕ್ಕೆ ನೂರಾರು ವರ್ಷಗಳಾದರೂ ಸಾಕಾಗುವುದಿಲ್ಲ. ಬಿಲ್ಪ ವೃಕ್ಷಗಳ ಆ ಸುಂದರ ತಾಣದಲ್ಲಿ ಶಿವನು ಶಕ್ತಿಸಹಿತ ವಿರಮಿಸಿದ್ದಾನೆ. ಮಲ್ಲಿಕಾರ್ಜುನನ ಸಾನ್ನಿಧ್ಯದಲ್ಲಿ ಮತ್ತು ವಿಷ್ಣು ಪುಷ್ಕರಿಣಿಯ ತೀರ್ಥದ ತೀರದಲ್ಲಿ ಪಾತಾಲೇಶ್ವರ, ಲಜ್ಜಾಗೌರೀಶ್ವರ, ಕೋಟಿಲಿಂಗೇಶ್ವರ, ವೈಷ್ಣವೇಶ್ವರ, ವೀರಭದ್ರೇಶ್ವರ, ನಾರಸಿಂಹೇಶ್ವರ, ವಾಮನೇಶ್ವರ ಮತ್ತು ಶೃಗಾಲೇಶ್ವರ ಎಂಬ ಪಾಪನಾಶಕವಾದ ನವಲಿಂಗಗಳಿವೆ. ಬಿಲ್ವ ಮತ್ತು ಚಂದನ ವೃಕ್ಷಗಳಿಂದ ಕೂಡಿರುವ ಪರ್ವತದ ಮೇಲೆ ಕೋಟಿ ಲಿಂಗಗಳಿವೆ.”

ಈ ನವಲಿಂಗಗಳ ಪೈಕಿ ‘ಲಜ್ಜಾಗೌರೀಶ್ವರ’ (ಲಜ್ಜಾಗೌರಿ+ಈಶ್ವರ) ಎಂಬುದೂ [‘ಶಿವಾಯಾ ಸಹಿತಃ ಶಂಭುಃ’] ಒಂದಾಗಿದೆ; ಅದಕ್ಕೆ ಮಹಾಕೋಟೇಶ್ವರ ಎಂಬ ಮತ್ತೊಂದು ಹೆಸರುಂಟು. ಅಂದರೆ ‘ಲಜ್ಜಾಗೌರಿ’ಯು ಇಲ್ಲಿನ ಅಧಿಷ್ಠಿತವಾದ ಶಕ್ತಿ ದೇವತೆಯ ಹೆಸರು. ಲಜ್ಜಾಗೌರಿಯು ಇರುವುದು ನವಲಿಂಗಗಳ ಸಮೂಹದಲ್ಲಿ, ಇದಕ್ಕೂ ಕೆಲವು ವಿಶೇಷ ಅರ್ಥವಿದ್ದಿರಬೇಕು. ಏಕೆಂದರೆ ಆಲಂಪುರ (ಆಂಧ್ರ)ದಲ್ಲಿಯೂ ಕೂಡ ಇದು ನವಬಹ್ಮೇಶ್ವರ ಇಲ್ಲವೆ ನವಲಿಂಗೇಶ್ವರ ಎಂದು ಪ್ರಸಿದ್ಧಿಯಾಗಿರುವ ನವಲಿಂಗಗಳ ಸಮೂಹದಲ್ಲಿಯೇ ಇರುವುದು. ನವದುರ್ಗ, ನವರಾತ್ರಿ, ನವಪತ್ರಿಕಾ ಇತ್ಯಾದಿ ದೇವಿ ಸಂಬಂಧವಾದ ‘ವನ’ ಎಂಬುದರ ಬಗ್ಗೆ ಈ ಸಂದರ್ಭದಲ್ಲಿ ವಿಚಾರ ಮಾಡುವುದು ಅಗತ್ಯ.

ಲಜ್ಜಾಗೌರಿಯ ವಿಚಿತ್ರಮೂರ್ತಿ

ಈ ದೇವಿಗೆ ‘ಲಜ್ಜಾಗೌರಿ’ ಎಂಬ ಹೆಸರಿರುವುದು ಒಂದು ವಿಚಿತ್ರ; ದೇವಿಗೆ ಸಂಬಂಧಿಸಿದ ಪ್ರಖ್ಯಾತ ಗ್ರಂಥಗಳಲ್ಲಿ ಈ ಹೆಸರು ಉಲ್ಲೇಖವಾಗಿಲ್ಲ. ಮಹಾಕೂಟ ಕ್ಷೇತ್ರದೊಳಗೆ ಈ ವಿಚಿತ್ರ ಹೆಸರಿನಿಂದಲೇ ಪ್ರಸಿದ್ಧವಾಗಿರುವ ದೇವಿಯ ಮೂರ್ತಿಯೂ ಬಹಳ ವಿಚಿತ್ರ ಭಾವನೆಯನ್ನು ತರುವಂಥದೇ ಆಗಿದೆ. ಶ್ರೀ ಗಣೇಶಶಾಸ್ತ್ರಿ ಲೀಲೆ ತ್ರಿಯಂಬಕಕರ ಅವರು ಕಳೆದ ಶತಮಾನದ ಅಂತ್ಯದಲ್ಲಿ ಶ್ರೀಮಂತ ರಘುನಾಥರಾವ್ ವಿಂಚೂರಕರ ಎಂಬುವವರೊಡನೆ ಮಹಾಕೂಟಯಾತ್ರೆ ಕೈಗೊಂಡಿದ್ದರು. ಆಗ್ಗೆ ಕಂಡಿದ್ದ ಲಜ್ಜಾಗೌರಿ ಮೂರ್ತಿಯನ್ನು ಕುರಿತಂತೆ ತಮ್ಮ ‘ತೀರ್ಥಯಾತ್ರಾ ಪ್ರಬಂಧ’ವೆಂಬ ಕೃತಿಯಲ್ಲಿ ಹೀಗೆ ವರ್ಣಿಸಿದ್ದಾರೆ. “ಮಹಾಕೂಟೇಶ್ವರನ ಸಾನ್ನಿಧ್ಯದಲ್ಲಿ ಲಜ್ಜಾಗೌರಿಯ ಮೂರ್ತಿಯೊಂದಿದೆ. ಈ ದೇವಿಯ ಮೂರ್ತಿಯಾದರೊ ಬಹಳೇ ಚಮತ್ಕಾರಿಕವಾದುದು. ನಗ್ನವಾಗಿ ಅಂಗಾತ ಮಲಗಿರುವ ಈ ದೇವಿಯ ಮೂರ್ತಿಯು ಇರುವುದು ರತಿಕಾಲದಲ್ಲಿ ಸ್ತ್ರೀಯರಿರುವ ಸ್ಥಿತಿಯಲ್ಲಿನಂತೆ. ಅವಳ ಸರ್ವ ಅವಯವಗಳನ್ನು ಬಹಳ ಸುಂದರವಾಗಿ ಕೆತ್ತಲಾಗಿದೆ. ಈ ಮೂರ್ತಿಗೆ ಮಸ್ತಕ ಮಾತ್ರವಿಲ್ಲ. ಮಸ್ತಕವನ್ನುಳಿದು ಕೆಳಗಿನ ದೇಹವಿದೆ. ಈ ಬಗೆಯ ಮೂರ್ತಿ ಮತ್ತೆಲ್ಲಿಯಾದರೂ ಇರುವ ಬಗ್ಗೆ ತಿಳಿದು ಬಂದಿಲ್ಲ.”[1]

ಉಪಲಬ್ಧವಾಗಿರುವ ಅನೇಕ ಮೂರ್ತಿಗಳು

ಶ್ರೀ ಲೇಲೇ ಶಾಸ್ತ್ರಿಯವರಿಗೆ ‘ಈ ಬಗೆಯ ಮೂರ್ತಿ’ ಅನ್ಯತ್ರ ಎಲ್ಲಿಯಾದರೂ ಇರುವುದು ತೊಂಬತ್ತು ವರ್ಷಗಳ ಹಿಂದೆ ತಿಳಿದು ಬಂದಿರಲಿಕ್ಕಿಲ್ಲ. ಆದರೆ ಈಗ್ಗೆ ಈ ಬಗೆಯ ಅನೇಕ ಮೂರ್ತಿಗಳು ಉಪಲಬ್ಧವಾಗಿರುವ ಸಂಗತಿಯನ್ನು ವಿದ್ವಾಂಸರು ದಾಖಲಿಸಿದ್ದಾರೆ. “ಆಲಂಪುರ (ತಾಲೂಕ್ – ಆಲಂಪುರ, ಜಿಲ್ಲೆ – ಮಹೆಬೂಬ್‌ನಗರ, ಆಂಧ್ರಪ್ರದೇಶ), ನಾಗಾರ್ಜುನಕೊಂಡ (ಆಂಧ್ರಪ್ರದೇಶ), ಸಿದ್ಧನಕೋಟೆ ಅಥವ ಸಿದ್ಧನಕೊಳ್ಳ (ಉತ್ತರ ಕರ್ನಾಟಕ), ಸಂಗಮೆಶ್ವರ (ತಾ.ನಂದಿಕೋಟ ಕೂರ), ವ್ಯಾಘ್ರೇಶ್ವರಿ (ಹೊಸಪೇಟೆಗೆ ಹತ್ತಿರ, ಕರ್ನಾಟಕ), ವಡಗಾಂವ (ಜಿಲ್ಲೆ – ಸಾತಾರಾ, ಮಹಾರಾಷ್ಟ್ರ) ಈ ಪ್ರದೇಶಗಳಲ್ಲೆಲ್ಲ ಈ ದೇವಿಯ ಶಿಲಾಮೂರ್ತಿಗಳು ಉಪಲಬ್ಧವಾಗಿವೆ. ಅಂತೆಯೇ ನೇವಾಸೆ (ಜಿಲ್ಲೆ – ಅಹಮದ್‌ನಗರ, ಮಹಾರಾಷ್ಟ್ರ), ತೇರ (ಜಿಲ್ಲೆ – ಉಸ್ಮಾನಾಬಾದ್, ಮಹಾರಾಷ್ಟ್ರ), ಮಾಹೂರಝರಿ (ಜಿಲ್ಲೆ – ನಾಗಪುರ, ಮಹಾರಾಷ್ಟ್ರ), ಭೋಕರದನ (ಜಿಲ್ಲೆ – ಔರಂಗಾಬಾದ್, ಮಹಾರಾಷ್ಟ್ರ), ಭೀಟಾ (ಉತ್ತರ ಪ್ರದೇಶ), ಕೌಶಾಂಬಿ (ಉತ್ತರ ಪ್ರದೇಶ) ಮತ್ತು ನಾಗಾರ್ಜುನಕೊಂಡ (ಆಂಧ್ರಪ್ರದೇಶ)ಗಳ ಉತ್ಖನನದಲ್ಲಿ ಈ ಬಗೆಯ ಮಣ್ಣಿನ ಮೂರ್ತಿಗಳು ಲಭಿಸಿವೆ.”[2]

ಈ ಎಲ್ಲ ಮೂರ್ತಿಗಳಲ್ಲಿನ ಮುಖ್ಯ ವಿಶೇಷತೆಯೆಂದರೆ, ಯೋನಿ ದರ್ಶನಕ್ಕಾಗಿ ಮೊಳಕಾಲುಗಳನ್ನು ಮಡಿಸಿ ಆಕಡೆ ಈಕಡೆ (ಅಂದರೆ ಎರಡೂ ಪಕ್ಕಕ್ಕೆ) ಬಾಗಿಸಿರುವುದು. ಇಲ್ಲಿನ ಕೆಲವು ಮೂರ್ತಿಗಳು ನಾಭಿಯಿಂದ ಕೆಳಭಾಗದವಷ್ಟೇ ಇದ್ದರೆ, ಮತ್ತೆ ಕೆಲವು ಕುತ್ತಿಗೆಯವರೆಗಷ್ಟೇ ಇರುವುವಾಗಿವೆ. ಯಾವುದಕ್ಕೂ ತಲೆಯನ್ನು ಮಾತ್ರ ಮಾಡಿರುವಂತೆ ಕಾಣುವುದಿಲ್ಲ. ಕುತ್ತಿಗೆಯವರೆಗೆ ರೂಪಿಸಲಾಗಿರುವ ಮೂರ್ತಿಗಳಲ್ಲಿ ಸ್ತನಗಳ ದರ್ಶನಕ್ಕಾಗಿ ಕೈಗಳನ್ನು ಪಕ್ಕಕ್ಕೆ ಇರುವಂತೆ ಮಾಡಲಾಗಿದೆ. ಆಲಂಪುರ, ಮಹಾಕೂಟ ಮತ್ತು ಭೀಟಾಗಳಲ್ಲಿನ ಮೂರ್ತಿಗಳಿಗೆ ತಲೆಯ ಭಾಗದಲ್ಲಿ ಕಮಲದ ಹೂವನ್ನು ಇಡಲಾಗಿದೆ. ಕೈಗಳಲ್ಲಿಯೂ ಕಮಲದ ಹೂ ಇಲ್ಲವೆ ಕಮಲದ ಮೊಗ್ಗುಗಳಿವೆ. ತೇರದಲ್ಲಿ ದೊರೆತ ಒಂದು ಮೃತ್ತಿಕಾ ಮೂರ್ತಿಯ ಬೆನ್ನಿನ ನಾಲ್ಕು ಬದಿಗಳಲ್ಲಿ ನಾಲ್ಕು ಕಮಲಗಳಿವೆ. ವಡಗಾಂವ್‌ನಲ್ಲಿನ ಮೂರ್ತಿಯ ಹತ್ತಿರದಲ್ಲಿ ವೃಷಭವಿರುವುದು ಬಹಳ ವಿಶೇಷ.

ಉಪಾಸನೆಯ ಪ್ರಯೋಜನ

ಮಹಾಕೂಟ ಮತ್ತು ಸಿದ್ಧನಕೋಟೆ (ಕೊಳ್ಳ)ಗಳಲ್ಲಿ ‘ಲಜ್ಜಾಗೌರಿ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಈ ದೇವಿಯನ್ನು ಸ್ತ್ರೀಯರು ಸಂತಾನ ಪ್ರಾಪ್ತಿಯ ಉದ್ದೇಶದಿಂದ ಉಪಾಸಿಸುತ್ತಾರೆ. ಮಹಾಕೂಟದಲ್ಲಿನ ದೇವಿತೆ ‘ಬಂಜೆಯಾಗಿರುವ ಸ್ತ್ರೀಯರು ಸಂತಾನ ಪ್ರಾಪ್ತಿಗಾಗಿ ವ್ರತಾಚರಣೆಯನ್ನು ಕೈಗೊಳ್ಳುವ’[3] ಮಾಹಿತಿಯನ್ನು ದೇವೀ ಕೋಶಕಾರರು ನೀಡಿದ್ದಾರೆ. ಅಂತೆಯೇ ಸಿದ್ಧನಕೋಟೆಯಲ್ಲಿ ಸ್ತ್ರೀಯರು ದೇವಿಯ ಯೋನಿ ಮತ್ತು ಸ್ತನಗಳಿಗೆ ಬೆಣ್ಣೆ ಮತ್ತು ಸಿಂಧೂರವನ್ನು ಹಚ್ಚಿ ತಮ್ಮ ಇಚ್ಛೆಯನ್ನು ನೆರವೇರಿಸುವಂತೆ ಪ್ರಾರ್ಥಿಸುತ್ತಾರೆ.[4] ಆಲಂಪುರದಲ್ಲಿನ ನವಲಿಂಗೇಶ್ವರ ಮಂದಿರದ ಪ್ರಾಕಾರದಲ್ಲಿರುವ ಒಂದು ಚಿಕ್ಕ ದೇವಾಲಯದಲ್ಲಿ ಇಂಥ ದೇವಿಯು ಇದ್ದು ಅವಳನ್ನು ಪೂಜಿಸುತ್ತಿರುವವರೆಲ್ಲ ಸಂತಾನ ಬಯಸುತ್ತಿರುವಂಥ ಸ್ತ್ರೀಯರೇ. ಸಂಗಮೆಶ್ವರ (ತಾ. ನಂದಿಕೋಟಕೂರ)ದಲ್ಲಿ ಇರುವ ಮೂರ್ತಿಯನ್ನು ಸಹ ಸ್ತ್ರೀಯರು ಪೂಜಿಸುತ್ತಿರುವುದು ಈ ಉದ್ದೇಶದಿಂದಲೇ.

ನಾಗಾರ್ಜುನ ಕೊಂಡದಲ್ಲಿ ದೊರೆತಿರುವ ಚಂದ್ರಶಿಲೆ (ಅಮೃತಶಿಲೆ)ಯ ದೇವೀ ಮೂರ್ತಿಯನ್ನು ಇಕ್ಷ್ವಾಕು ವಂಶದ ಏಹವಲ ಶಂತಮೂಲ ಎಂಬಾತನ ಪತ್ನಿಯು ಕೆತ್ತಿಸಿದ ಬಗ್ಗೆ ಲಿಖಿತವಿದೆ. ‘ಜೀವತ್ಪುತ್ರಾ ಮತ್ತು ಅವಿಧವಾ’ ಸ್ತ್ರೀಯರು ಇದನ್ನು ಮಾಡಿಸಿದ್ದು ಎಂಬುದಾಗಿ ಪಾದ ಪೀಠದ ಮೇಲೆ ಬ್ರಾಹ್ಮೀಲಿಪಿಯಿಂದ ಪ್ರಾಕೃತ ಭಾಷೆಯಲ್ಲಿ ಹೇಳಲಾಗಿದೆ.[5] ಮೂರ್ತಿಯನ್ನು ಮಾಡಿಸಿದ ಸ್ತ್ರೀಯನ್ನು ‘ಜೀವತ್ಪುತ್ರಾ’ ಮತ್ತು ‘ಅವಿಧವಾ’ ಎದು ವಿಶೇಷಣಾತ್ಮಕವಾಗಿ ಹೇಳಿರುವುದರ ಅರ್ಥ ಇದು ‘ಸಂತತಿ’ ಮತ್ತು ‘ಸೌಭಾಗ್ಯ‘ದ ಸಂರಕ್ಷಣೆಗೆ ಸಂಬಂಧಿಸಿದ್ದು ಎಂಬುದನ್ನು ಸ್ಪಷ್ಟವಾಗಿ ಸೂಚಿಸಿರುವುದಾಗಿದೆ.

ಈ ವಿವರಣೆಯಿಂದ ಮನದಟ್ಟಾಗುವುದು ಏನೆಂದರೆ, ಮಹಾಕೂಟ ಮತ್ತು ಸಿದ್ಧನಕೋಟೆಗಳಲ್ಲಿನ ‘ಲಜ್ಜಾಗೌರಿ’ ಎಂಬ ಅಭಿದಾನ ಹೊಂದಿರುವ ಈ ದೇವಿಯು ಸರ್ವತ್ರ ‘ಸಂತಾನ ಪ್ರಾಪ್ತಿ ಮತ್ತು ಸಂರಕ್ಷಣೆಯ ದೇವತೆ‘ಯಾಗಿ ಪೂಜಿಸಲ್ಪಡುತ್ತಿದ್ದಾಳೆ ಎಂಬುದು.

ಮೂರ್ತಿಯ ಪೂರ್ವಾಭ್ಯಾಸ

ವಿಚಿತ್ರವಾಗಿ ತೋರುವ ಈ ದೇವಿಯ ಮೂರ್ತಿಗಳು ಭಾರತದಲ್ಲಿ ಅನೇಕ ಸ್ಥಳಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಲಭಿಸಿವೆ. ಆದಾಗ್ಯೂ ಆ ಬಗ್ಗೆ ಆಗಬೇಕಾದ ರೀತಿಯಲ್ಲಿ ಅಧ್ಯಯನವಾಗಿಲ್ಲ. ಭೀಟಾ ಎಂಬಲ್ಲಿ ಉಪಲಬ್ಧವಾಗಿರುವ ಮೂರ್ತಿಯನ್ನು ಕುರಿತಂತೆ ಚರ್ಚಿಸಿರುವ ಮಾರ್ಶಲ್ ಅವರು ಇದು ಹರಪ್ಪಾದಲ್ಲಿ ದೊರೆತ ಶಿರೋಯುಕ್ತ, ಶೀರ್ಷಾಸನಸ್ಥ, ವನಸ್ಪತಿ ಪ್ರಸೂತ, ನಗ್ನಳಾದ ಪೃಥ್ವೀ ಮಾತೆಯ ಮೂರ್ತಿಯೊಂದಿಗೆ ಸಂಬಂಧ ಹೊಂದಿದೆಯೆಂದು ಗುರುತಿಸಿದ್ದಾರೆ.[6] ಆನಂತರ ಶ್ರೀಮತಿ ಸ್ಟೆಲ್ಲಾ ಕ್ರಾಮರಿಶ್ ಅವರು ‘Artibus Asiae’ ಎಂಬ ನಿಯತ ಕಾಲಿಕೆಯೊಂದರಲ್ಲಿ ಪ್ರಕಟವಾದ ಒಂದು ಮುಖ್ಯ ಲೇಖನದಲ್ಲಿ ಆಲಂಪುರದ ವಸ್ತು ಸಂಗ್ರಹಾಲಯದಲ್ಲಿರುವ ಮೂರ್ತಿಗಳ ಪ್ರತೀಕಾತ್ಮಕತೆಯನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಿದ್ದಾರೆ.[7] ಪ್ರಸ್ತುತ ದೇವಿಯ ಮೂರ್ತಿಯು ‘ಉತ್ತಾನಪಾದ’ ಸ್ವರೂಪದಲ್ಲಿರುವುದನ್ನು ಗಮನಿಸಿದ ಅವರು ವೇದದಲ್ಲಿನ ವಿಶ್ವಜನನಿ ಆದಿಮಾತೆಗಿದ್ದ ‘ಉತ್ತಾನಪಾದ’ ವಿಶೇಷಣದತ್ತ ಗಮನಸೆಳೆಯುತ್ತಾರೆ. ಅಲ್ಲದೆ ಪ್ರಸ್ತುತ ದೇವಿಯನ್ನು ವೈದಿಕ ಅದಿತಿಯೊಂದಿಗೆ ಐಕ್ಯತ್ಮಕ ಗೊಳಿಸುವ ಕಲ್ಪನೆಯನ್ನು ಮುಂದಿಟ್ಟು, ಕಮಲ ಪ್ರತೀಕವು ಸೃಜನ ಕ್ರಿಯೆಯೊಂದಿಗೆ ಹೊಂದಿರುವ ಸಂಬಂಧವನ್ನು ಸಹ ಹೃದಯಂಗಮವಾಗಿ ಬಣ್ಣಿಸಿದ್ದಾರೆ.

ಈ ನಂತರದ ಮಹತ್ವಯುತ ಪ್ರಯತ್ನವೆಂದರೆ, ಜಗತ್‌ಪ್ರಸಿದ್ಧ ಪುರಾತತ್ವಜ್ಞರಾದ ಡಾ. ಹ.ಧೀ.ಸಂಕಾಲಿಯಾ ಅವರದು. ಈ ಮೇಲೆ ಉಲ್ಲೇಖಿಸಲಾದ ನಿಯತಕಾಲಿಕೆಯಲ್ಲಿಯೇ ಅವರು ಶ್ರೀಮತಿ ಸ್ಟೆಲ್ಲಾ ಕ್ರಾಮರಿಶ್ ಅವರ ಪ್ರತಿಪಾದನೆಗೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ತಮ್ಮ ಲೇಖನದ ಮೂಲಕ. “ಇದು ಮೂಲದಲ್ಲಿ ‘ಬೌಬೋ’ (Baubo) ಎಂಬ ವಿದೇಶಿ ದೇವತೆಯಾಗಿದ್ದು, ಈಜಿಪ್ತ್‌ ಮೂಲಕ ರೋಮನ್ ಸಂಪರ್ಕವಿದ್ದ ಕಾಲದಲ್ಲಿ, ಅಂದರೆ ಕ್ರಿಸ್ತೋತ್ತರದ ಒಂದು, ಎರಡನೆಯ ಶತಮಾನದ ಹೊತ್ತಿಗೆ ಭಾರತಕ್ಕೆ ಬಂದಿತು” ಎಂಬುದು ಅವರ ಅಭಿಪ್ರಾಯ![8] ಭಾರತಕ್ಕೆ ಬಂದ ಮೇಲೆ ಅದು ಬಹು ಬೇಗನೆ ಭಾರತೀಕರಣ ಗೊಂಡಿತು ಎಂದೂ ಅವರು ಹೇಳಿದ್ದಾರೆ. ಭಾರತದಲ್ಲಿ ಉಪಲಬ್ಧವಾಗಿರುವ ಪ್ರಸ್ತುತ ದೇವಿಯ ಮೂರ್ತಿಯು ಕ್ರಿಸ್ತೋತ್ತರ ಕಾಲದ್ದೇ ಆಗಿರುವುದು. ಅಲ್ಲದೆ ಕ್ರಿಸ್ತ ಪೂರ್ವದ ಭಾರತದಲ್ಲಿ ಅವಳ ಅಸ್ತಿತ್ವದ ಬಗ್ಗೆ ನಿಃಸಂದಿಗ್ಧವಾಗಿ ಯಾವುದೇ ಪುರಾವೆಯೂ ಇಲ್ಲದುದರಿಂದ, ಶ್ರೀಮತಿ ಸ್ಟೆಲ್ಲಾ ಕ್ರಾಮರಿಶ್ ಅವರು ಅದಿತಿಯೊಡನೆ ಈ ದೇವಿಯ ಸಂಬಂಧವನ್ನು ಕಲ್ಪಿಸಿರುವುದು ಸ್ವೀಕಾರಾರ್ಹವಲ್ಲ ಎಂಬುದಾಗಿ ಡಾ. ಸಂಕಾಲಿಯಾ ಅಭಿಪ್ರಾಯಪಟ್ಟಿರುತ್ತಾರೆ.

ಡಾ. ಸಂಕಾಲಿಯಾ ಅವರ ವಿವೇಚನೆಯ ಮೇಲೆ ಶ್ರೀ ಕಾಡ್ರಿಂಗ್ಟನ್ ಮತ್ತು ಶ್ರೀಮಂತಿ ಮುರೆ ಎಂಬ ಇಬ್ಬರು ವಿದೇಶಿ ವಿದ್ವಾಂಸರ ಪ್ರಭಾವವಿರುವುದು ಸ್ಪಷ್ಟ.[9]

ತೀರಾ ಇತ್ತೀಚೆಗೆ (ಜೂನ್‌ ೧೯೭೧) ಡಾ. ಜಗದೀಶ ನಾರಾಯಣ ತಿವಾರಿಯವರು ಆಸ್ಟ್ರೇಲಿಯನ್ ನ್ಯಾಶನಲ್ ಯೂನಿವರ್ಸಿಟಿಯಲ್ಲಿ ಪಿಎಚ್‌.ಡಿ. ಪದವಿಗಾಗಿ ಉತ್ತರ ಭಾರತದಲ್ಲಿನ ದೇವೀ ಉಪಾಸನಾ ಪರಂಪರೆಯ ವಿಷಯವಾಗಿ ಒಂದು ಮಹತ್ವ ಪೂರ್ಣವಾದ ಮಹಾ ಪ್ರಬಂಧವೊಂದನ್ನು ಸಲ್ಲಿಸಿದ್ದಾರೆ. ಆ ಪ್ರಬಂಧದ ಕೊನೆಯಲ್ಲಿ ಪರಿಶಿಷ್ಟ ರೂಪದಲ್ಲಿ ಎರಡು ವಿಸ್ತೃತ ಪ್ರಕರಣಗಳಿವೆ. ಪ್ರಸ್ತುತ ಉತ್ತಾನಪಾದ ನಗ್ನದೇವಿ ಮತ್ತು ಕೋಟವಿ ಎಂಬ ಮತ್ತೊಬ್ಬ ನಗ್ನದೇವಿಯ ಬಗ್ಗೆ ಅಲ್ಲಿ ಸೂಕ್ಷ್ಮ ಚಿತ್ರಣವಿದೆ.[10] ಇದರಲ್ಲಿ ವಿಸ್ತೃತವಾಗಿಯೂ ಸೂಕ್ಷ್ಮವಾಗಿಯೂ ಚರ್ಚಿಸಿರುವ ಡಾ. ತಿವಾರಿ ಅವರು ಕೊನೆಗೆ ಡಾ. ಸಂಕಾಲಿಯಾ ಅವರ ಅಭಿಪ್ರಾಯದ ಪರವಾಗಿಯೇ ನಿಲ್ಲುತ್ತಾರೆ. ಅಲ್ಲದೆ ಶ್ರೀಮತಿ ಕ್ರಾಮರಿಶ್‌ ಅವರು ಪ್ರತಿಪಾದಿಸಿದ ಕಮಲ ಪ್ರತೀಕದ ರಹಸ್ಯೋದ್ಘಾಟನೆಯ ಮಟ್ಟಿಗೆ ಅವರ ವಿಚಾರವನ್ನು ಪುಷ್ಟೀಕರಿಸಿರುವರು. ಅವರ ಪ್ರಕಾರ ಪ್ರಸ್ತುತ ಮೂರ್ತಿಯು ಕಮಲದೊಂದಿಗೆ ಹೊಂದಿರುವ ಸಂಬಂಧವು ಭಾರತೀಕರಣದ ಒಂದು ಸುಂದರ ಹಂಬಲವಾಗಿದೆ.

ಮಾರ್ಶಲ್, ಸ್ಟೆಲ್ಲಾ ಕ್ರಾಮರಿಶ್, ಸಂಕಾಲಿಯಾ ಮತ್ತು ತಿವಾರಿ – ಈ ನಾಲ್ವರು ವಿದ್ವಾಂಸರು ಈವರೆವಿಗೆ ಈ ವಿಚಿತ್ರ ರೂಪದ ದೇವೀ ಮೂರ್ತಿಯ ಬಗ್ಗೆ ಚರ್ಚಿಸಿದ್ದಾರೆ. ಪೃಥ್ವಿ, ಅದಿತಿ ಮತ್ತು ಬೌಬೋ – ಇವುಗಳೊಂದಿಗೆ ಈ ದೇವಿಯನ್ನು ಏಕಾತ್ಮ್ಯಗೊಳಿಸಿ ತೋರಿಸುವ ಪೂರ್ವ ಪ್ರಯತ್ನ ವಿದ್ವತ್ಪೂರ್ಣವಾದುದೇನೋ ಸರಿ. ಆದರೆ ಈ ಎಲ್ಲರೂ ದೇವಿಯ ಉಪಾಸನೆ, ಉಪಾಸಕರ ಧಾರಣವೃತ್ತಿ ಮತ್ತು ಅವರು ರಚಿಸಿರುವ ಕಥೆ, ಗಾಥೆಗಳ ಕಡೆಗೆ ಮಾತ್ರ ಪೂರ್ಣವಾಗಿ ದುರ್ಲಕ್ಷಿಸಿರುವರು.

ಯಾವುದೇ ದೇವತೆಯ ಉಪಾಸಕ ನಿರಪೇಕ್ಷ್ಯವಾದ ಶೋಧವು ನಿಷ್ಫಲವಾಗದೆ ಹೋಗದು. ‘ದೇವ ದಾನವ ನರೇ ನಿರ್ಮಿತೀ’ ಎಂಬ ಸತ್ಯವು ಅಧ್ಯಯನ ಕ್ಷೇತ್ರದಲ್ಲಿ ಸದೈವ ಸಾಮಾನ್ಯವಾಗಿ ಇರಿಸಬೇಕಾದದ್ದು ಅಗತ್ಯ. ‘ಜಸಾಭಾವ, ತಸಾದೇವ’ (ಎಂತು ಭಾವವೊ, ಅಂತೆ ದೇವನು) ಎಂಬ ಸಿದ್ಧಾಂತವು ಕೇವಲ ಭಕ್ತರದ್ದಷ್ಟೇ ಅಲ್ಲ, ಅಧ್ಯಯನಕಾರರ ನಿತ್ಯ ಅನುಭವದ ವಿಷಯವೂ ಹೌದು. ಹೀಗಿರುವಾಗ ಈ ಸಿದ್ದಾಂತವನ್ನು ದುರ್ಲಕ್ಷಿಸಿ, ದೇವತೆಯ ಅಂತರಂಗವನ್ನು ದಕ್ಕಿಸಿಕೊಳ್ಳುವುದಂತೂ ಸುತಾರಂ ಸಾಧ್ಯವಿಲ್ಲ.

ಮಹಾಕೂಟ ಮತ್ತು ಸಿದ್ಧನಕೊಳ್ಳಗಳಲ್ಲಿ ಯಾವ ದೇವಿಗೆ ‘ಲಜ್ಜಾಗೌರಿ’ ಎಂಬುದಾಗಿ ಅಭಿದಾನ ಮಾಡಲಾಗಿದೆಯೋ ಆ ದೇವಿಗೆ ಬೇರೆಡೆಗಳಲ್ಲಿ ಬೇರೆಬೇರೆಯಾದ ಯಾವ್ಯಾವ ಹೆಸರುಗಳಿಂದ ಗುರುತಿಸುವರು? ಈ ಭಿನ್ನ ಹೆಸರುಗಳಿಗೆ ಕಾರಣಗಳೇನು? ಈ ಹೆಸರುಗಳಿಗೆ ಪಾರಂಪರಿಕ ಸ್ಪಷ್ಟೀಕರಣವನ್ನು ಹೇಗೆ ನೀಡಲಾಗಿದೆ? ವಿವಿಧ ಹೆಸರುಗಳಿಂದ ಮತ್ತು ಒಂದೇ ವಿಶಿಷ್ಟ ರೂಪದಿಂದ ಗುರುತಿಸಲ್ಪಡುತ್ತಿರುವ ಈ ದೇವಿಯ ಉಪಾಸಕರು ರಚಿಸಿರುವ ಚರಿತ್ರೆಯಾದರೂ ಎಂಥದು/ ಇಂಥ ಚರಿತ್ರೆ ಉಪಲಬ್ಧವಾಗಿದ್ದರೆ, ಅದರಲ್ಲಿ ದೇವಿಯ ಪ್ರಚೀನತೆ ಎಷ್ಟು? ಆ ದೇವಿಯು ಈ ಚರಿತ್ರೆಯಂತೆ ಮೂರ್ತಿರೂಪದಲ್ಲಿ ಪೂಜಿಸಲ್ಪಡುವ ಮುನ್ನ ಬೇರೆಬೇರೆ ಪ್ರತೀಕಗಳಲ್ಲಿ ಪೂಜೆಗೊಳ್ಳುತ್ತಿದ್ದಳೋ ಹೇಗೆ? ಅವಳ ಶಿರವಿಲ್ಲದಿರುವಿಕೆಗೆ ಕಾರಣವೇನು? ಭಾರತದಲ್ಲಿ ಎಲ್ಲೆಡೆ ಕಂಡುಬಂದಿರುವ ಈ ದೇವಿಯ ಉಪಾಸನೆಯ ಬಗ್ಗೆ ಮತ್ತು ಕಥೆ – ಗಾಥೆಗಳ ವಿಷಯವಾಗಿ ಪ್ರಾದೇಶಿಕ ಪೃಥಗಾತ್ಮತೆಯು ಏನಾದರೂ ಪ್ರಾಪ್ತವಾಗಿದೆಯೇ? ಈ ಪೃಥಗಾತ್ಮದಲ್ಲಿ ಯಾವುದಾದರೊಂದು ಏಕಾತ್ಮಕತೆಯ ತಂತು ಉಳಿದು ಬಂದಿರುವುದೇ? ಇತ್ಯಾದಿ ಅನೇಕಾನೇಕ ಪ್ರಶ್ನೆಗಳು ಉತ್ತರವನ್ನು ಬಯಸಿ, ಅಧ್ಯಯನಕಾರರ ಎದುರು ಸವಾಲಾಗಿ ನಿಂತಿವೆ. ಈ ಆಹ್ವಾನವನ್ನು ನಿರಾಕರಿಸಿ ಈ ದೇವಿಯ ಅಂತರಂಗದರ್ಶನ ಮಾಡುವುದು ಫಲದಾಯಕವಾಗಲಾರದು. ಈ ಸವಾಲನ್ನು ಸ್ವೀಕರಿಸಿದ ಮೇಲೆಯೇ ಮಾರ್ಶಲ್ ಮತ್ತು ಸ್ಟೆಲ್ಲಾ ಕ್ರಾಮರಿಶ್‌ ಅವರ ಪಕ್ಷವು ಹೆಚ್ಚು ಸತ್ಯಕ್ಕೆ ಸಮೀಪವಾಗಿದೆಯೇ? ಅಥವಾ ಸಂಕಾಲಿಯಾ ಮತ್ತು ತಿವಾರಿಯವರ ಪಕ್ಷವು ಸತ್ಯಕ್ಕೆ ಹೆಚ್ಚು ಹತ್ತಿರವಾಗಿದೆಯೇ? ಎಂಬುದರ ನಿರ್ಣಯಗೊಳ್ಳುವಿಕೆಗೂ ಸಾಧ್ಯತೆಯಿದೆ.

 

[1]ತೀರ್ಥಯಾತ್ರಾ ಪ್ರಬಂಧ: ಗಣೇಶಶಾಸ್ತ್ರ ಲೇಲೇ, ತ್ರಿಂಬಕಕರ ದೇಶಮುಖ ಪ್ರಕಾಶನ, ಪುಣೆ (ದ್ವಿತೀಯ ಮುದ್ರಣ), ೧೯೬೪, ಪುಟ. ೧೬೬.

[2]ಪ್ರಬುದ್ಧ ಕರ್ನಾಟಕ: ೨೫.೨, ಕ್ರಮಾಂಕ, ೯೬, ದೀಪಾವಳಿ ೧೯೪೩, (ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿತ), ಪುಟ. ೨೫ – ೩೦. (ಡಾ. ಪಾಂಡುರಂಗ ದೇಸಾಯಿಯವರ ‘ಆಲಂಪುರ’ ಎಂಬ ಕನ್ನಡ ಲೇಖನ. ಇದರಲ್ಲಿ ಸಂಗಮೇಶ್ವರ ಮೂರ್ತಿಯ ಉಲ್ಲೇಖವಿದೆ). ಶಾರದಾಶ್ರಮ ವಾರ್ಷಿಕ, ಶಕ.೧೮೫೫ (ಡಾ.ಜಿ.ಎ.ಪಿ. ಹಂಟರ್ ಅವರ ‘The Antiguities of Mahurzari’ ಎಂಬ ಲೇಖನದ ಪುಟ ೩೦ ರಲ್ಲಿ ಮಾಹೂರಝರಿಯಲ್ಲಿ ದೊರೆತಿರುವ ಮೂರ್ತಿಯ ಛಾಯಾಚಿತ್ರ); Artibus Asiae, Vol.XIX, pp.259 – 270 (ಶ್ರೀಮತಿ ಸ್ಟೆಲ್ಲಾ ಕ್ರಾಮರಿಶ್ ಅವರ ‘An Image of Aditi – Uttanapad’ ಎಂಬ ಲೇಖನದೊಂದಿಗೆ ಆಲಂಪುರ ಮತ್ತು ಮಹಾಕೂಟಗಳಲ್ಲಿನ ಮೂರ್ತಿಗಳ ಛಾಯಾಚಿತ್ರಗಳು, ಭೀಟಾ ಮತ್ತು ಕೌಶಾಮಬಿಗಳಲ್ಲಿನ ಮೂರ್ತಿಗಳ ವಿವರ); Vol.XXIII, pp.111 – 123 (ಡಾ.ಹ.ಧೀ. ಸಂಕಾಲಿಯಾ ಅವರ ‘The Nude Goddess or shameless woman’ ಎಂಬ ಲೇಖನದಲ್ಲಿ ತೇರ, ಉಸ್ಮಾನಾಬಾದ, ವಡಗಾಂವ, ಆಲಂಪುರ, ಭೀಟ, ನಾಗಾರ್ಜುನ ಕೊಂಡ ಮತ್ತು ಸಿದ್ಧನಕೋಟೆ (ಕೊಳ್ಳ) – ಈ ಸ್ಥಳಗಳಲ್ಲಿನ ಛಾಯಾಚಿತ್ರಗಳು); Studies in Goddess cults in Northern India: Dr.J.N. Tiwari (ಅಪ್ರಕಟಿತ ಪ್ರಬಂಧ, ಡೆಕ್ಕನ್ ಕಾಲೇಜು ಗ್ರಂಥಾಲಯ, ಪುಣೆ, ಇದರಲ್ಲಿ ನಾಗಾರ್ಜುನಕೊಂಡದಲ್ಲಿನ ಅಭಿಲಿಖಿತ ಮೂರ್ತಿಯ ಲೇಖನದೊಡನೆ ಛಾಯಾಚಿತ್ರವೂ ಇದೆ.); Excavations at Bhokardan: S.B.Deo and R.S. Gupte, Nagpur, 1974, p.212.

[3]ಆದಿಶಕ್ತಿ ಚೇ ವಿಶ್ವರೂಪ (ದೇವೀಕೋಶ), ಖಂಡ ಮೂರು: ಪ್ರ.ಕೃ. ಪ್ರಭು ದೇಸಾಯಿ ಟಿಳಕ, ಮಹಾರಾಷ್ಟ್ರ ವಿದ್ಯಾಪೀಠ, ಪುಣೆ – ೧೯೬೮, ಪುಟ – ೪೯೯.)

[4] Artibus Asiae, Vol.XXIII: p.121

[5] Studies in Goddess cults in Northern India: p.281

[6] MohenJodaro and the Indus civilization: Marshall John, London,1931, Vol.I.p.62.

[7] Artibus Asiae, Vol.XIX: pp.259 – 270. (ಟಿಪ್ಪಣಿ ಕ್ರಮಾಂಕ ೪ರಲ್ಲಿ ಉಲ್ಲೇಖಿಸಲಾಗಿರುವ ಲೇಖನ).

[8]ಪೂರ್ವೋಕ್ತ: ನಿಯತ ಕಾಲಿಕೆ, ಪುಟ.೧೨೧.

[9] Man, XXXV, 1935; No. 70, p. 65 (ಕ್ಯಾಡಿಂಗ್ಟನ್ ಅವರ ‘Iconography: classical and Indian’ ಲೇಖನ) ಮತ್ತು Journal of the Royal Anthropological Institute of Great Britain and Ireland, Vol.XIV, 1934 pp. 93 – 100 (ಶ್ರೀಮತಿ ಎಂ.ಎ. ಮುರೆಯವರ ‘Female Fertility Figures’ ಲೇಖನ)

[10]ಪೂರ್ವೋಕ್ತ ಪ್ರಬಂಧ: ಪುಟ ೨೬೯ – ೩೩೭ (ಟಿಪ್ಪಣಿ ಕ್ರಮಾಂಕ ೪ ರಲ್ಲಿ ಉಲ್ಲೇಖ)