ಮಹಾಕೂಟದ ಮೂರ್ತಿಯ ಮಹತ್ವ

ಪ್ರಸ್ತುತ ಕರ್ನಾಟಕದಲ್ಲಿ ನಮಗೆ ಕೇವಲ ಮಹಾಕೂಟದ ಮೂರ್ತಿಯನ್ನು ಕುರಿತಂತೆ ಮಾತ್ರ ವಿಚಾರ ಮಾಡಬೇಕಾಗಿರುವುದರಿಂದ ಈ ಅನೇಕ ಪ್ರಶ್ನೆಗಳನ್ನು ಸದ್ಯ ಪಕ್ಕಕ್ಕಿಡಬೇಕಾಗಿದೆ. ಈ ಮಹತ್ವದ ದೇವತೆಯ ಒಂದು ಉಪಾಸನಾ ಕೇಂದ್ರವಾಗಿರುವ ಮಹಾಕೂಟ ಪರಂಪರೆಯನ್ನು ಶೋಧಿಸಿದರೆ ಅವಳ ಸ್ವರೂಪದ ರಹಸ್ಯವನ್ನು ಭೇದಿಸಲು ಹೇಗೆ ಸಹಾಯವಾದೀತು ಎಂಬುದನ್ನು ನೋಡೋಣ.

ಶ್ರೀಮತಿ ಸ್ಟೆಲ್ಲಾ ಕ್ರಾಮರಿಶ್ ಅವರು ತಮ್ಮ ಲೇಖನದಲ್ಲಿ ಆಲಂಪುರದ ಮೂರ್ತಿಯ ಮೇಲೆ ಮಾತ್ರವೇ ಹೆಚ್ಚಾಗಿ ಒತ್ತು ನೀಡಿ, ಆನುಷಂಗಿಕವಾಗಿ ಭೀಟಾ ಮತ್ತು ಕೌಶಾಂಬಿಗಳಲ್ಲಿ ಲಭಿಸಿದ ಮೂರ್ತಿಗಳನ್ನು ಕುರಿತು ನಿರ್ದೇಶಿಸಿದ್ದಾರೆ. ಅಲ್ಲದೆ ಮಹಾಕೂಟದಲ್ಲಿನ ಮೂರ್ತಿಯನ್ನು ಆಲಂಪುರದ ಮೂರ್ತಿಯೊಂದಿಗೆ ವಿಶೇಷವಾಗಿ ತುಲನೆ ಮಾಡಿದ್ದಾರೆ. ಆದರೆ ಈ ತುಲನೆಯು ಪೂರ್ಣತಃ ಶಿಲ್ಪ ಸೌಂದರ್ಯ ಹಾಗೂ ತತ್ಪೋಷಕವಾದ ಸೌಂದರ್ಯ ಪ್ರತೀಕಗಳ ಸಂದರ್ಭಕ್ಕಷ್ಟೆ ಸೀಮಿತವಾಗಿರುವುದರಿಂದ ಅವರಿಗೆ ಮಹಾಕೂಟ (ಆಲಂಪುರವೂ ಸೇರಿದಂತೆ)ದ ಪರಂಪರೆಯ ಕಡೆಗೆ ಲಕ್ಷ್ಯವಹಿಸುವುದಕ್ಕೆ ಸಾಧ್ಯವಾಗಿಲ್ಲ. ಅವರು ತಮ್ಮ ಲೇಖನದೊಡನೆ ಮಹಾಕೂಟದ ದೇವೀ ಮೂರ್ತಿಯ ಛಾಯಾಚಿತ್ರವನ್ನು ಕೊಟ್ಟಿದ್ದಾರೆ. ಈ ಮೂಲಕ ಸ್ಪಷ್ಟವಾಗಿ ತಿಳಿದುಬರುವುದೇನೆಂದರೆ, ಈ ಮೂರ್ತಿಯು ಅಕ್ಷಮ್ಯವಾಗಿ ಕ್ಷತಗೊಂಡಿರುವುದು. ಮಹಾಕೂಟ – ಮಂದಿರವನ್ನು ಸುತ್ತುವರಿದಿರುವ ಪ್ರಾಕಾರದ ಒಂದು ಮೂಲೆಯಲ್ಲಿ ದುರ್ಲಕ್ಷಿತವಾಗಿ ಬಿದ್ದಿರುವ ಈ ಮೂರ್ತಿಯ ಬಗ್ಗೆ ಸ್ಟೆಲ್ಲಾ ಅವರು ಖೇದ ವ್ಯಕ್ತಪಡಿಸಿರುವರು. ಶ್ರೀ ಲೇಲೇ ಶಾಸ್ತ್ರಿಯವರು ಅದನ್ನು ತೊಂಬತ್ತು ವರ್ಷಗಳ ಹಿಂದೆ ನೋಡಿದಾಗ ಇದು ಭಂಗವಾಗಿರಲಿಲ್ಲ ಎಂಬುದು ಅವರ ವರ್ಣನೆಯಿಂದ ತಿಳಿದುಬರುತ್ತದೆ. ಡಾ. ಸಂಕಾಲಿಯಾ ವರಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ನನ್ನ ದೃಷ್ಟಿಯಲ್ಲಿ ಈ ದೇವಿಯ ಒಂದು ಉಪಾಸನಾ ಕೇಂದ್ರವಾಗಿ ಮಹಾಕೂಟಕ್ಕೆ ವಿಶೇಷ ಮಹತ್ವವುಂಟು. ಈ ದೇವಿಯ ಶೋಧನೆಯ ಕಾರಣವಾಗಿ ಕೈಗೊಂಡ ಮಹಾಕೂಟದ ಅಧ್ಯಯನವು ಅವಳ ನಾಮರೂಪದ ರಹಸ್ಯವನ್ನು ಬಿಡಿಸುವ ದೃಷ್ಟಿಯಿಂದ ಬಹಳೇ ಫಲಪ್ರದಕಾರಿ ಎಂಬುದು ನನಗೆ ಸ್ಪಷ್ಟವಾಗಿದೆ.

ನಂದಿಕೇಶ್ವರವಲ್ಲ, ಲಂಜಿಕೇಶ್ವರ

ಈ ಕ್ಷೇತ್ರವನ್ನು ನಂದಿಕೇಶ್ವರ ಮತ್ತು ಮಹಾಕೂಟ ಎಂಬ ಎರಡು ಹೆಸರುಗಳಿಂದ ಗುರುತಿಸಲಾಗುತ್ತಿದೆ ಎಂಬುದನ್ನು ಆರಂಭದಲ್ಲಿಯೇ ಚರ್ಚಿಸಲಾಗಿದೆ. ಹಾಗೆಯೇ ಈ ಕ್ಷೇತ್ರದ ಅಧಿಷ್ಠಿತ ದೇವನಾದ ಶಿವನೂ ಕೂಡ ಲಜ್ಜಾಗೌರೀಶ್ವರ ಮತ್ತು ಮಹಾಕೂಟೇಶ್ವರ ಎಂಬ ಹೆಸರುಗಳಿಂದ ಸ್ತುತಿಸಲ್ಪಡುತ್ತಿರುವುದನ್ನು ಗಮನಿಸಿರುತ್ತೇವೆ. ಪ್ರಥಮ ದರ್ಶನದಲ್ಲಿಯೇ ನಮ್ಮ ಮನಸ್ಸಿಗೆ ಬರುವ ವಿಚಾರವೆಂದರೆ, ನಂದಿಕೆಶ್ವರ ಮತ್ತು ಮಹಾಕೂಟ ಈ ಎರಡೂ ಕ್ಷೇತ್ರನಾಮಗಳ ಕ್ಷೇತ್ರಾಧಿಷ್ಠತೆಯು ಲಜ್ಜಾಗೌರೀಶ್ವರ ಮತ್ತು ಮಹಾಕೂಟೇಶ್ವರ ಎಂಬ ಹೆಸರುಗಳೊಂದಿಗೆ ಸಂಬಂಧಿಸಿದುದಾಗಿದೆ ಎಂಬುದು. ಈ ಬಗೆಯ ವಿಚಾರಕ್ಕೆ ಪ್ರತ್ಯಕ್ಷ ಐತಿಹಾಸಿಕ ಆಧಾರವೂ ಉಪಲಬ್ಧವಾಗಿದೆ.

ಬದಾಮಿಯ ಚಾಲಕ್ಯ ವಂಶದ ಮಂಗಲೇಶನು ತನ್ನ ಜೇಷ್ಠಬಂಧು (ಸೋದರ) ಪ್ರಥಮ ಕೀರ್ತಿವರ್ಮನ ಆಡಳಿತ ಕಾಲದಲ್ಲಿ ಬದಾಮಿಯಲ್ಲಿ ‘ವಿಷ್ಣುಗೃಹ’ (ಗುಹೆ.ಕ.೩) ವೊಂದನ್ನು ಕೊರೆಯಿಸಿದನು. ಅದರಲ್ಲಿ ವಿಷ್ಣುಮೂರ್ತಿಯೊಂದನ್ನು ಸ್ಥಾಪಿಸಿ, ವಿಷ್ಣುಗೃಹದಲ್ಲಿ ನಾರಾಯಣವಲಿ ಮತ್ತು ಹದಿನಾರು ಬ್ರಾಹ್ಮಣರ ನಿತ್ಯ ಭೋಜನ ವ್ಯವಸ್ಥೆಗೆಂದು ಲಂಜಿಕೇಶ್ವರ ಎಂಬ ಗ್ರಾಮವೊಂದನ್ನು ದಾನಕೊಟ್ಟಿದ್ದನು. ಕ್ರಮಾಂಕ ೩ರ ಗುಹೆಯ ವರಾಂಡದಲ್ಲಿನ ಸ್ತಂಭವೊಂದರ ಶಾಸನದಲ್ಲಿ ಇದನ್ನು ಕಾಣಿಸಲಾಗಿದೆ. ಈ ಶಾಸನವು ಶಕ. ೫೦೦ – (ಕ್ರಿ.ಶ.೫೭೮)ರ ಕಾಲದ್ದು. ಇದೇ ಗುಹೆಯಲ್ಲಿನ ದರ್ಶನ ಭಾಗದ ಎಡದಲ್ಲಿ ಮಂಗಲೇಶನ ಕನ್ನಡ ಶಾಸನವಿದ್ದು, ಅದರಲ್ಲಿ ಲಂಜಿಕೇಶ್ವರ ಗ್ರಾಮದಲ್ಲಿ ಬೆಳೆಯುವುದರ ಒಂದಷ್ಟು ಭಾಗವನ್ನು ದೇವರ ಪೂಜೆ, ಅರ್ಚನೆಗಾಗಿ ನಿಗದಿ ಪಡಿಸಿದ ಬಗ್ಗೆ ಉಲ್ಲೇಖಿಸಲಾಗಿದೆ.[1]

ಲಂಜಿಕೇಶ್ವರ ಮತ್ತು ಲಂಜಿಗೇಶ್ವರ ಎಂಬ ಹೆಸರುಗಳಿಂದ ಮಂಗಲೇಶನು ಉಲ್ಲೇಖಿಸಿದ್ದು ಇಂದಿನ ನಂದಿಕೇಶ್ವರನನ್ನೇ ಎಂಬುದನ್ನು ಇಂದಿನ ಶಾಸನ ಅಧ್ಯಯನಕಾರರೂ ಒಪ್ಪಿಕೊಂಡಿದ್ದಾರೆ.[2] ಇದರ ಅರ್ಥ ಸ್ಪಷ್ಟವಾಗಿಯೇ ಇದೆ; ಇದು ಲಂಜಿಗೇಶ್ವರ (ಲಂಜಿಕೇಶ್ವರ) ಎಂಬ ಮೂಲ ಹೆಸರಿನ ಧ್ವನಿಸಾಮ್ಯವನ್ನು ಉಳಿಸಿಕೊಂಡು ಮಾಡಿಕೊಂಡಿರುವ ಕೃತ್ರಿಮ ಸಂಸ್ಕೃತೀಕರಣ ರೂಪವಾಗಿದೆ.

ಲಂಜಿಕಾ ಮತ್ತು ಲಜ್ಜಾಗೌರಿ

ಇಲ್ಲಿ ಶಿವನು ಶಕ್ತಿಯೊಂದಿಗೆ (ಶಿವಯಾ ಸಹಿತಃ ಶಂಭುಃ) ಇರುವನು. ಶಕ್ತಿಯೊಡನೆ ಇರುವುದರ ದ್ಯೋತಕವಾಗಿಯೇ ‘ಲಜ್ಜಾಗೌರೀಶ್ವರ’ ಎಂಬ ಹೆಸರನ್ನು ಧಾರಣೆ ಮಾಡಿಕೊಂಡಿರುವನೆಂಬುದನ್ನು ‘ಶಾಕಂಭರೀ ಮಾಹಾತ್ಮ್ಯ’ ಕೃತಿಯ ಆಧಾರದಿಂದ ನಾನು ತಿಳಿದಿದ್ದೇನೆ. ಮಂಗಲೇಶನ ಎರಡು ಶಾಸನಗಳಲ್ಲಿರುವ ಗ್ರಾಮ ನಿರ್ದೇಶನಾನುಸಾರ ‘ನಂದಿಕೆಶ್ವರ’ ಎಂಬ ಹೆಸರು ‘ಲಂಜಿಕೇಶ್ವರ’ ಎಂಬ ಮೂಲದ ಸಂಸ್ಕೃತೀಕರಣವೆಂಬುದಾಗಿ ಹೇಗೆ ತಿಳಿಯುವುದೋ, ಹಾಗೆಯೇ ಲಜ್ಜಾಗೌರೀಶ್ವರ ಎಂಬುದೂ ಅದೇ ಹೆಸರಿನ (‘ಲಂಜಿಕೇಶ್ವರ‘) ಸಂಸ್ಕೃತೀಕರಣವೆಂಬುದು ಸುಸ್ಪಷ್ಟ. ‘ಲಜ್ಜಾಗೌರೀಶ್ವರ’ ಎಂಬ ಶಿವನ ಹೆಸರಿನಲ್ಲಿ ‘ಲಜ್ಜಾಗೌರಿ’ ಎಂಬ ದೇವಿಯ ನಾಮವು ಸಮಾವಿಷ್ಟವಾಗಿದೆ. ಅರ್ಥಾತ್‌ ‘ಲಂಜಿಕೇಶ್ವರ’ ಎಂಬ ಶಿವನ ಮೂಲ ಹೆಸರಿನಲ್ಲಿರುವ ‘ಲಂಜಿಕಾ’ ಎಂಬುದು ದೇವೀ ನಾಮವೇ ಎಂಬುದಾಗಿ ಅಭಿಪ್ರೇತವಾಗಿರುವಂತೆ ಕಂಡು ಬರುತ್ತದೆ. ಲಂಜಿ ಅಥವಾ ಲಂಜಿಕಾ ಈ ಹೆಸರಿನಿಂದಲೇ ಲಜ್ಜಾಗೌರಿ ಎಂಬ ಸಂಸ್ಕೃತೀಕರಣವು ಹೇತುತಃ ಸಾಧ್ಯವಾಗಿರುತ್ತದೆ ಎಂಬುದು ಗಮನೀಯ.

ಈಗ ನಮ್ಮೆದುರಿಗಿರುವ ಒಂದು ಪ್ರಶ್ನೆಯೆಂದರೆ ‘ಲಂಜಿ’ ಅಥವಾ ‘ಲಂಜಿಕಾ’ ಎಂಬ ಹೆಸರಿನ ಅರ್ಥವೇನು? ಎಂಬುದು. ಈ ಅರ್ಥಕ್ಕಾಗಿ ನಾನು ಹಳಗನ್ನಡದ ವಿದ್ವಾಂಸರು, ತಮಿಳು – ತೆಲುಗು – ಕನ್ನಡ ಭಾಷೆಗಳ ಅಧ್ಯಯನಕಾರರು ಹಾಗೂ ಪ್ರಸಿದ್ಧ ಇತಿಹಾಸ ಸಂಶೋಧಕರೂ ಆದ ತಿರುಮಲೆ ತಾತಾಚಾರ್ಯ ಶರ್ಮ (ಬೆಂಗಳೂರು) ಅವರಿಗೆ ಪತ್ರ ಬರೆದಿದ್ದೆ. ಅವರು ಕೂಡಲೇ ಲಂಜಿಕಾ ಶಬ್ದಕ್ಕಿರುವ ಕೋಶಗತ ಅರ್ಥವೆಂದರೆ ‘ವೇಶ್ಯೆ’ ಅಥವಾ ‘ದೇವದಾಸಿ’ ಎಂಬುದಾಗಿ ಉತ್ತರಿಸಿದರು. ಕಿಟೆಲ್‌ನ ಕನ್ನಡ – ಇಂಗ್ಲಿಶ್ ಶಬ್ದಕೋಶದಲ್ಲಿಯೂ ಸಹ ‘ಲಂಜೆ‘ಗೆ ‘ವೇಶ್ಯೆ’ (an adulteress) ಎಂದು ದಾಖಲಿಸಿರುವುದರೊಂದಿಗೆ, ಅದು ಮೂಲತಃ ಸಂಸ್ಕೃತ ಶಬ್ದವೆಂಬುದಾಗಿಯೂ ಹೇಳಲಾಗಿದೆ.[3] ಸಂಸ್ಕೃತದ ಅಕಾರಾಂತ ಸ್ತ್ರೀಲಿಂಗ ಶಬ್ದವು ಕನ್ನಡದಲ್ಲಿ ಎಕಾರಾಂತವಾಗುತ್ತದೆ. ಉದಾಹರಣೆಗೆ ರೇಣುಕಾ – ರೇಣುಕೆ, ಹಾಗೆಯೆ ‘ಲಂಜೆ’ ಎಂಬ ಶಬ್ದಕ್ಕೆ ಸಂಸ್ಕೃತದ ‘ಲಂಜಾ’ ಶಬ್ದವು ಅಭಿಪ್ರೇತವಾಗಿರುತ್ತದೆ. ಶ್ರೀ ಪುಂಡಲೀಕಜಿ ಕಾತಗಡೆಯವರು ತಮ್ಮ ಕನ್ನಡ – ಮರಾಠಿ ಶಬ್ದಕೋಶದಲ್ಲಿ ‘ಲಂಜೆ’ ಮತ್ತು ‘ಲಂಜಾ’ ಎಂಬೆರಡೂ ರೂಪಗಳನ್ನು ದಾಖಲಿಸಿ, ಅದಕ್ಕೆ ‘ವ್ಯಭಿಚಾರಿಣಿ, ದುರ್ವರ್ತಿನಿ’ ಎಂಬುದಾಗಿ ಅರ್ಥೈಸಿದ್ದಾರೆ.[4] ಮೋನಿಯರ್‌ ವಿಲಿಯಮ್ಸ್‌ ಅವರ ಸಂಸ್ಕೃತ – ಇಂಗ್ಲಿಶ್ ಕೋಶದಲ್ಲಿಯೂ ‘ಲಜ್ಜಾ’ ಶಬ್ದಕ್ಕೆ ಲಕ್ಷ್ಮಿ, ವೇಶ್ಯೆ ಎಂಬರ್ಥಗಳಿವೆ. ಹಾಗೆಯೇ ಆಪ್ಟೆಯವರ ಸಂಸ್ಕೃತ – ಇಂಗ್ಲಿಶ್ ಕೋಶದಲ್ಲಿ ಲಜ್ಜಾ (an adulteress) ಮತ್ತು ಲಂಜಿಕಾ (a prostitute, harlot) ಎಂಬೆರಡು ರೂಪಗಳನ್ನು ಕೊಟ್ಟಿರುವುದು ಈ ಮೇಲಿನ ಅರ್ಥದಲ್ಲಿಯೇ.[5]

ನಾಮ, ರೂಪಗಳ ಈ ಚರ್ಚೆಯಿಂದ ಸ್ಪಷ್ಟವಾಗುವುದೇನೆಂದರೆ, ಮಹಾಕೂಟದ ದೇವಿಯ ಮೂಲದ ಹೆಸರು ‘ಲಂಜಿಕಾ’. ಅದು ಅವಳ ನಗ್ನತೆ ಮತ್ತು ನಿರ್ಲಜ್ಜತೆಯ ದ್ಯೋತಕ. ಅದೇ ನಂತರ ‘ಲಜ್ಜಾಗೌರಿ’ ಎಂಬುದಾಗಿ ಸಂಸ್ಕೃತೀಕರಣಗೊಂಡಿತು. ‘ಲಜ್ಜಾಗೌರಿ’ ಎಂಬ ಅಭಿದಾನವು ಅಶೋಭ್ಯ ವಿಷಯವನ್ನು ಶೋಭನೀಯಗೊಳಿಸಿ ವ್ಯಕ್ತೀಕರಣವಾಗಿಸಿರುವುದರ (Euphemistic) ಹಿನ್ನೆಲೆಯಲ್ಲಿ ‘ನಿರ್ಲಜ್ಜ ಸ್ತ್ರೀ’ (Shameless women)ಯ ರೂಪವಾಗಿದೆ ಎಂಬ ಡಾ. ಸಂಕಾಲಯಾ ಅವರ ಸಂಗತಿ ಒಂದರ್ಥದಲ್ಲಿ ಸರಿ.[6] ‘ಲಜ್ಜಾ’ ಎಂಬುದಕ್ಕೆ ‘ಗುಹ್ಯೇಂದ್ರಿಯ’ ಎಂಬ ಅರ್ಥವಿರುವುದೂ ಕೂಡ ‘ಲಜ್ಜಾಗೌರಿ’ ಎಂಬ ಹೆಸರಿನ ಅಭಿಪ್ರೇತ ಅರ್ಥವೇ ಆಗಿದೆ.

‘ಲಂಜಿಕೆಶ್ವರ’ ಮತ್ತು ‘ಲಂಜಿಗೇಶ್ವರ’ ಎಂಬ ಹೆಸರುಗಳಿಂದ ಈ ಊರನ್ನು ನಿರ್ದೇಶಿಸುತ್ತಿದ್ದ, ಕ್ರಿ.ಶ.೬ನೆಯ ಶತಮಾನದ ಶಾಸನಗಳಲ್ಲಿ ಹಾಗೆ ಕಾಣಸಿಗುತ್ತಿರುವುದನ್ನು ವಿಶೇಷವಾಗಿ ಗಮನಿಸಬೇಕು. ಈ ಸಂದೇಶ ಗ್ರಾಮ ನಾಮವಾಗಿರಬಹುದಾದರೂ, ಅಲ್ಲಿನ ಅಧಿಷ್ಠಾತ್ರಿ ದೇವತೆಯ ನಾಮದಿಂದಲೇ ಆಗಿರುವುದರಿಂದ ಆ ಲಂಜಿಕೇಶ್ವರ ಎಂಬುದು ಶಿವಸ್ಥಾನದ ಪ್ರಾಚೀನತೆಯನ್ನು ದರ್ಶಿಸುವುದಾಗಿದೆ ಎಂದು ಒಪ್ಪುವಲ್ಲಿ ಯಾವ ಅಡ್ಡಿಯೂ ಇಲ್ಲ. ಶಿವನಾಮದಲ್ಲಿ ಸನ್ನಿವಿಷ್ಟವಾಗಿರುವ ಲಂಜಿಕಾ ಎಂಬ ದೇವಿಯು ಕ್ರಿ.ಶ. ಆರನೆಯ ಶತಮಾನಕ್ಕಿಂತ ಪೂರ್ವದಲ್ಲೇ ಇಲ್ಲಿ ಶಕ್ತಿ ಸ್ವರೂಪಿಯಾಗಿದ್ದು, ಶಿವನೊಂದಿಗೆ ತಾದಾತ್ಮ್ಯ ಹೊಂದಿದ್ದಳು ಎಂಬುದಾಗಿಯೂ ನಿಷ್ಕರ್ಷಿಸಬಹುದು.

ಲಂಕಾ ಪಾರ್ವತಿ

ಲಜ್ಜಾ, ಲಂಜಿಕಾ, ಲಜ್ಜಾಗೌರಿ ಎಂಬ ಈ ದೇವೀ ನಾಮಗಳನ್ನು ಸಾಂದರ್ಭಿಕವಾಗಿ ಚರ್ಚಿಸುವಲ್ಲಿ, ನನಗೆ ಮರಾಠಿ ಭಾಷೆಯಲ್ಲಿ ಬಳಸಲ್ಪಡುತ್ತಿರುವ ‘ಲಂಕೇಜಿ ಪಾರ್ವತಿ’ (ಲಂಕೆಯ ಪಾರ್ವತಿ) ಎಂಬ ಮಾತಿನಲ್ಲಿರುವ ಮಹತ್ವದ ಅರಿವಾಯಿತು. ‘ಲಂಕೇಜಿ ಪಾರ್ವತಿ’ ಎಂಬ ವಿಶೇಷಣವನ್ನು ಬಳಸುವ ವ್ಯಕ್ತಿಯ ಉದ್ದೇಶದಲ್ಲಿ “ತೀರಾ ಅನಲಂಕೃತಳು!” ಎಂಬ ಸೂಚನೆಯು ಇರುವುದು ಸ್ಪಷ್ಟ. ಒಬ್ಬ ಸ್ತ್ರೀಯ ಮೈಮೇಲೆ ಒಂದು ಒಡೆದ ಮಣಿಯೂ ಇಲ್ಲದಿದ್ದಲ್ಲಿ, ಅಂಥವಳನ್ನು ‘ಲಂಕೇಜಿ ಪಾರ್ವತಿ’ ಎಂಬುದಾಗಿ ಕರೆದು ತುಚ್ಛವಾಗಿ ಕಾಣುವುದು ಇತರೆ ಸ್ತ್ರೀಯರಲ್ಲಿ ಕಾಣುವ ಸಾಮಾನ್ಯ ವರ್ತನೆ. ಅವರ ಪ್ರಕಾರ ಅಲಂಕಾರವಿಲ್ಲದೆ ಸ್ತ್ರೀಯ ಸ್ತ್ರೀತ್ವವು ಎದ್ದು ಕಾಣುವುದಕ್ಕೆ ಸಾಧ್ಯವಿಲ್ಲ. ಸ್ತ್ರೀಯ ಆಂಗಿಕ ಹಾಗೂ ಆತ್ಮಿಕ ಸೌಂದರ್ಯವು ಅಲಂಕಾರವಿಲ್ಲದಿದ್ದರೆ ವ್ಯರ್ಥವಾಗುತ್ತದೆ.

ಸ್ತ್ರೀಜಾತಿಯ ಈ ಅಲಂಕಾರ ಪ್ರಜ್ಞೆ ಮತ್ತು ಅಲಂಕಾರಕ್ಕೆ ವ್ಯತಿರಿಕ್ತವಾಗಿರುವ ಸ್ತ್ರೀಯರ ಬಗೆಗಿನ ತುಚ್ಛಭಾವ ಒಂದು ಮುಖ್ಯವಾದ ಸಂಗತಿ. ಇಲ್ಲಿ ನನಗೆ ಬರುವ ಮುಖ್ಯ ಪ್ರಶ್ನೆಗಳೆಂದರೆ, ‘ಲಂಕೇಚಿ ಪಾರ್ವತಿ’ ಎಂಬುದರ ವಿವರವೇನು? ಪಾರ್ವತಿ ಲಂಕೆಗೆ ಹೋದುದು ಯಾವಾಗ? ಲಂಕೆಗೆ ಹೋಗಿಯೂ ಆಕೆ ಅನಲಂಕೃತಳಾಗಿ ಇದ್ದುದಾದರೂ ಹೇಗೆ? ಪಾರ್ವತಿಯು ಮೂಲತಃ ಒಬ್ಬ ಜೋಗಿಯ ಪತ್ನಿ. ತವರಿನ ವೈಭವವನ್ನೆಲ್ಲ ಅಲ್ಲಗಳೆದು ತಪಸ್ಸಿನ ಮೂಲಕ ಶ್ಮಶಾನವಾಸಿ ಶಿವನನ್ನು ಆಗ್ರಹಪೂರ್ವಕವಾಗಿ ವರಿಸಿದವಳು. ಅರ್ಥಾತ್ ಶಿವನ ಪತ್ನಿಯಾದ ಪಾರ್ವತಿಗೆ ಲಂಕೆಯೊಡನೆ ಸಂಬಂಧ ಕಲ್ಪಿಸುವುದಕ್ಕೆ ಹೊರತಾಗಿಯೂ ಅನಲಂಕೃತ ಸ್ತ್ರೀಯನ್ನು ಉದ್ದೇಶಿಸಿ ಈ ಉಪಮಾನವನ್ನು ಬಳಸಲು ಸಾಕಾಗುತ್ತಿರಲಿಲ್ಲವೆ? ಅದಕ್ಕಾಗಿ ಅವಳು ಲಂಕೆಗೆ ಹೋಗಿ ಅಲಂಕಾರದ ಬಗ್ಗೆ ಉದಾಸೀನ ಭಾವ ತಾಳಬೇಕಾದ ಜರೂರಿಯಾದರೂ ಏನು? ವೈಭವೋಪೇತ ಬದುಕಿನಲ್ಲಿದ್ದೂ ಅನಲಂಕೃತಳಾಗಿದ್ದವಳು, ಶ್ರೀಮಂತ ಮನೆಯಲ್ಲಿ ಜನಿಸಿಯೂ ಅಲಂಕಾರವನ್ನು ದೂರತಳ್ಳಿದವಳು ಎಂಬ ಅರ್ಥದಿಂದ ಸ್ತ್ರೀಗೆ ‘ಲಂಕೇಚಿ ಪಾರ್ವತಿ’ ಎಂದು ಹೇಳುವುದಿಲ್ಲ. ಬದಲಾಗಿ ಅನಲಂಕೃತ ಸ್ತ್ರೀಯನ್ನು ಕುರಿತಂತೆ ಮಾತ್ರ, ‘ಲಂಕೇಚಿ ಪಾರ್ವತಿ’ ಎಂಬ ವಿಶೇಷಣವನ್ನು ಏಕೆ ಬಳಸಲಾಗುತ್ತಿದೆ? ಎಂಬುದನ್ನು ಕುರಿತು ವಿಚಾರ ಮಾಡಲು ತೊಡಗಿದರೆ ನಮ್ಮ ಬುದ್ದಿಯು ಮಂಕಾಗತೊಡಗುತ್ತದೆ.

ಲಂಕಾಧಿಪತಿ ರಾವಣನು ಕೈಲಾಸಕ್ಕೆ ಹೋಗಿ ಬಂದ ಕಥೆಯು ರಾಮಾಯಣದಲ್ಲಿ ಪ್ರಸಿದ್ಧವೇ ಆಗಿದೆ; ಆದರೆ ಪಾರ್ವತಿಯು ಎಂದೂ ಲಂಕೆಗೆ ಹೋದುದರ ಬಗ್ಗೆಯಾಗಲೀ, ಅಲ್ಲಿಗೆ ಹೋಗಿ ಅಲಂಕಾರ ರಹಿತಳಾಗಿದ್ದ ಬಗ್ಗೆಯಾಗಲೀ ಒಂದೇ ಒಂದು ಪುರಾಣ ಕಥೆಯಾದರೂ ನನ್ನ ಗಮನಕ್ಕೆ ಬಂದಿಲ್ಲ. ಲಂಕೆಯು ಮೊದಲಿಗೆ ಕುಬೇರನ ರಾಜ್ಯವಾಗಿತ್ತು, ನಂತರ ರಾವಣನು ಅದರ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿದನು. ಆದರೆ ಕುಬೇರನಾದರೇನು, ರಾವಣನಾದರೇನು ಇಬ್ಬರೂ ಪಾರ್ವತಿಯನ್ನು ಉಪೇಕ್ಷಿಸುವವರಂತೂ ಅಲ್ಲ. ಕುಬೇರನು ಶಿವನ ಪರಮ ಸಖನಾಗಿದ್ದರೆ, ರಾವಣನು ಶಿವನಿಗೆ ಪರಮ ಭಕ್ತನೇ ಆಗಿದ್ದನು. ಶಿವನೊಂದಿಗೆ ಇಂತಹ ಆತ್ಮೀಯ ಸಂಬಂಧವುಳ್ಳ ಇವರಿಬ್ಬರೂ ಶಿವಪತ್ನಿಯನ್ನು ಉಪೇಕ್ಷಿಸುವ ಸಂಭವವಿಲ್ಲ. ಲಂಕೆಗೆ ಯಾವಾಗಲಾದರೂ ಪಾರ್ವತಿಯು ಬಂದಿದ್ದರೆ, ಕುಬೇರನಾಗಲಿ, ರಾವಣನಾಗಲಿ ಆಕೆಯ ಮೇಲೆ ಮುತ್ತು ರತ್ನಗಳ, ಬಂಗಾರದ ಮಳೆಯನ್ನೇ ಕರೆಯುತ್ತಿದ್ದುದರೆಂಬುದರಲ್ಲಿ ಯಾವ ಅನುಮಾನವೂ ಇಲ್ಲ! ಪಾರ್ವತಿಯನ್ನು ಅನಲಂಕೃತಳಾಗಿ ಇರುವುದಕ್ಕೆ ಬಿಡುವುದೆಂದರೆ ನವನಿಧಿಗಳಿಗೆ ಸ್ವಾಮಿಯಾದ ಕುಬೇರನಿಗಾಗಲೀ, ಇಲ್ಲವೆ ಸುವರ್ಣ ಲಂಕೆಯ ಒಡೆಯನಾದ ರಾವಣನಿಗಾಗಲಿ ರುಚಿಸುವಂತಹ ಮಾತಲ್ಲ. ಅಲ್ಲದೆ ಇದರಿಂದ ಅವರ ಶಿವ ಪ್ರೀತಿಯಲ್ಲಿ ನಿಶ್ಚಿತವಾಗಿಯೂ ವಿಸಂಗತಿಯೊಂದು ತಲೆದೋರುತ್ತಿತ್ತು.

ಆದರೂ ನಾವು ಅಲಂಕಾರ ರಹಿತ ಸ್ತ್ರೀಯನ್ನು ಲಂಕಾ ಪಾರ್ವತಿ ಎಂದು ಕರೆಯುತ್ತಿರುವುದಾದರೂ ಏಕೆ? ‘ಲಂಕೇಚಿ ಪಾರ್ವತಿ’ ಎಂಬ ವಿಶೇಷಣವನ್ನು ಬಳಸುವಾಗ ‘ಲಂಕಾ’ ಎಂಬ ಚಿರಪರಿಚಿತ ಶಬ್ದವೇ ನಮ್ಮ ದೃಷ್ಟಿಗೆದುರಾಗುತ್ತದೆ. ಹಾಗಾಗಿಯೇ ಈ ಬಿಕ್ಕಟ್ಟು ಉಂಟಾಗಿರಲಾರದೆ? ನಮಗೆ ಅಭಿಪ್ರೇತವಾಗಿರುವ ಅರ್ಥ ಮತ್ತು ನಾವು ಬಳಸುತ್ತಿರುವ ಶಬ್ದಗಳಲ್ಲಿ ಸಾಂಗತ್ಯ ಏರ್ಪಾಡದಿದ್ದರೆ, ನಾವು ತಪ್ಪು ಶಬ್ದವನ್ನು ಬಳಸುತ್ತಿದ್ದಿರಬೇಕು. ಅಥವಾ ನಾವು ಬಳಸುತ್ತಿರುವ ಶಬ್ದಗಳ ಸಂವಹನದ ಅರ್ಥವನ್ನು ನಾವು ಕಾಲಪ್ರವಾಹದಲ್ಲಿ ಮರೆತು ಬಿಟ್ಟರೆ ಬೇಕು.

ಪಾರ್ವತಿಯು ಸ್ಮಶಾನವಾಸಿ ಯೋಗಿರಾಜ ಶಿವನ ಅರ್ಧಾಂಗಿಯಾಗಿರುವುದರಿಂದ ಅವಳು ಅನಲಂಕೃತಳಾಗಿರುವುದರಲ್ಲಿ ಯಾವುದೇ ಅಸ್ವಾಭಾವಿಕತೆಯಿಲ್ಲ ಎಂಬುದನ್ನು ಈ ಮೊದಲೇ ಹೇಳಲಾಗಿದೆ. ಹಾಗಾಗಿ ಅನಲಂಕೃತ ಸ್ತ್ರೀಯರನ್ನು ಉದ್ದೇಶಿಸಿ ಪಾರ್ವತಿಯ ಹೆಸರನ್ನು ಬಳಸಿರುವುದರಲ್ಲಿ ಯಾವುದೇ ಅನೌಚಿತ್ಯವೂ ಕಾಣುವುದಿಲ್ಲ. ಅಂದರೆ ‘ಲಂಕೇಚಿ ಪಾರ್ವತಿ’ ಎಂಬ ಶಬ್ಧ ಪ್ರಯೋಗದಲ್ಲಿ ಮಾತ್ರ ಯಾವುದೋ ಸಂದಿಗ್ಧತೆ ಅಥವಾ ಗೂಢತೆಯು ಇದೆ. ‘ಲಂಕೇಚಿ’ ಎಂಬ ವಿಶೇಷಣದಲ್ಲಿ ‘ಲಂಕೆ‘ಯು ರಾವಣನ ರಾಜಧಾನಿ ಎಂಬ ವಿಚಾರ ನಮ್ಮ ಮನಸ್ಸಿನಲ್ಲಿ ದೃಢವಾಗಿ ಇರುವುದರಿಂದ ನಾವು ಈ ಶಬ್ದದ ಅರ್ಥಚಿಂತನವನ್ನು ಅರಿವಿನ ಹಿನ್ನೆಲೆಯಲ್ಲಿಯೇ ಮಾಡುತ್ತೇವೆ. ಹಾಗಾಗಿ ಸಹಜವಾಗಿಯೇ ಗೊಂದಲದಲ್ಲಿ ಸಿಕ್ಕು ಬಿಡುತ್ತೇವೆ. ಇದರರ್ಥವಿಷ್ಟೆ ‘ಲಂಕಾ’ ಎಂಬ ಶಬ್ದದ ಬಗ್ಗೆ ಪುನರ್‌ಪರಿಶೀಲನೆ ಅಗತ್ಯ.

‘ಲಂಕಾ’ ರಾವಣನ ರಾಜಧಾನಿಯ ಹೆಸರೆಂಬುದು ನಿಜ.ಆದರೆ ಕೋಶಕಾರರು ಇದಕ್ಕೆ ನೀಡಿರುವ ಅರ್ಥ ‘ನಗ್ನ ಸ್ತ್ರೀ’, ‘ವೇಶ್ಯೆ’ ಎಂದು. ಈ ಅರ್ಥದಲ್ಲಿಯೇ ಪಾರ್ವತಿಗೆ ಲಂಕಾ ಎಂಬ ವಿಶೇಷಣವು ಬಂದಿರುವುದು. ಅಂತೆಯೇ ‘ಲಂಕೆಯ ಪಾರ್ವತಿ’ ಎಂಬ ಪ್ರಯೋಗಕ್ಕೆ ನಗ್ನ ಪಾರ್ವತಿ, ‘ನಗ್ನದೇವಿ’, ‘ಅನಾವೃತ ಜಗನ್ಮಾತಾ’ ಎಂಬರ್ಥಗಳಿವೆ. ಅಂದರೆ ಇದನ್ನು ಲಕ್ಷ್ಯಾರ್ಥದಲ್ಲಿಯೇ ಪರಿಶೀಲಿಸಬೇಕಾಗುವುದು.

‘ಲಜ್ಜಾಗೌರಿ’ ದೇವತೆಗೆ ‘ಲಂಕಾ ಪಾರ್ವತಿ’ ಎಂಬ ಹೆಸರು ಪೂರ್ಣ ಸಾಮ್ಯವುಳ್ಳದ್ದು. ‘ಲಂಕಾ ಪಾರ್ವತಿ’ ಸಂದರ್ಭದಲ್ಲಿ ‘ಲಜ್ಜಾಗೌರಿ’ಯು ನನ್ನ ಸ್ಮರಣೆಗೆ ಬರುತ್ತದೆ. ‘ಲಜ್ಜಾಗೌರಿ’ ಎಂಬ ಹೆಸರಿನಲ್ಲಿನ ‘ಲಜ್ಜಾ’ ಎಂಬ ಪೂರ್ವಪದವು ‘ಲಂಜಾ’ ಎಂಬುದರ ಕೃತ್ರಿಮ ಪರಿವರ್ತನ ರೂಪವಾಗಿದೆ. ‘ಲಂಜಾ’ ಎಂದರೆ ನಗ್ನ ಸ್ತ್ರೀ, ವೇಶ್ಯೆ ಎಂಬರ್ಥಗಳಿವೆ. ಸೃಷ್ಟಿಶೀಲ ದೇವತೆಗೆ ಅವಳ ರೂಪದ ಸ್ಪಷ್ಟ ದ್ಯೋತಕವಾಗಿ ‘ಲಂಜಾ’ ಎಂಬ ಹೆಸರು ಸೇರ್ಪಡೆಯಾಗಿರುವುದರಲ್ಲಿ ಅಂತಹ ಅಸ್ವಾಭಾವಿಕತೆಯೇನೂ ಕಾಣುವುದಿಲ್ಲ. ಜಗನ್ಮಾತೆಯು ಕುಮಾರಿ ಎಂದೇ ಮಾನ್ಯವಾಗಿದ್ದಾಳೆ. ಪುರುಷತ್ವವೆಂಬುದು ಅವಳ ಜೀವನದಲ್ಲಿ ಒಂದು ಗೌಣವಾದ ಅಂಶ. ಎಂತಲೇ ವೇಶ್ಯಾವಾಚಕ ಶಬ್ದದಿಂದ ಉಲ್ಲೇಖಿತಳಾಗಿರುವಳು ಆಕೆ. ಹೀಗೆ ಹೇಳಿದ ಮಾತ್ರಕ್ಕೆ ಯಾವುದೇ ರೀತಿಯಲ್ಲೂ ಕಸಿವಿಸಿಪಡಬೇಕಾಗಿಲ್ಲ. ವೇಶ್ಯೆಯ ಜೀವನದಲ್ಲಿ ವೈಧವ್ಯಕ್ಕೆ ಸ್ಥಾನವೇ ಇಲ್ಲದುದರಿಂದ ವಿವಾಹ ವಿದಿತವಾದ ವಧುವಿಗೆ ವೇಶ್ಯೆಯ ಕೈಯಿಂದ ಮಂಗಳ ಸೂತ್ರವನ್ನು ಕಟ್ಟಿಸುವ ಸಂಪ್ರದಾಯವು ಇಂದಿಗೂ ಕೆಲವಾರು ಪ್ರದೇಶಗಳಲ್ಲಿ ರೂಢಿಯಲ್ಲಿದೆ. ಸಂತ ಜ್ಞಾನದೇವನು ವೇಶ್ಯೆಯನ್ನು ‘ಜ್ಞಾನಶಿವೇವರಚಿ ಅಹೇವ’ (ಮುತ್ತೈದೆ) ಎಂದು ಕರೆದಿದ್ದಾನೆ. ಇದರಲ್ಲಿ ವೈರುಧ್ಯ ಧ್ವನಿ ಇರಬಹುದಾದರೂ ವೇಶ್ಯೆಯರು ನಿರಂತರ ಅವಿಧವೆ (ಮುತ್ತೈದೆ)ಯರೆನಿಸಿದ್ದಾರೆ ಎಂಬ ವಿಷಯದಲ್ಲಿ ಸಂಶಯವೇನೂ ಇಲ್ಲ.

ಈ ದೇವಿಯು ಸೃಷ್ಟಿಯ ಅಧಿಷ್ಠಾತ್ರಿ ಎಂಬ ಕಾರಣದಿಂದಾಗಿಯೇ ಪ್ರಾಗೈತಿಹಾಸಿಕ ಕಾಲದಿಂದಲೂ ಪೂಜಿಸಲ್ಪಡುತ್ತಿದ್ದಾಳೆ. ಅವಳ ಸ್ವರೂಪ ಕಲ್ಪನೆಯ ಮೂಲಕವೇ ಮುಂದೆ ಆದಿ ಶಕ್ತಿಯ ನಾನಾ ರೂಪಗಳು ಉತ್ಕ್ರಾಂತವಾಗತೊಡಗಿದವು. ಈ ಕುರಿತಂತೆ ನಾನಾ ಚರಿತ್ರೆಗಳನ್ನು ಕಟ್ಟಿ ಹಾಡಿಕೊಂಡು ಬರಲಾಗಿದೆ. ಆದರೂ ಈ ದೇವಿಯ ಮೂಲ ರೂಪವು ಇಂದಿಗೂ ಲೋಕಧರ್ಮದಲ್ಲಿ ಉಳಿದುಕೊಂಡು ಬಂದಿರುವುದಂತೂ ಸ್ಪಷ್ಟ. ‘ಲಂಜಾ’ ಮತ್ತು ‘ಲಂಕಾ’ ಈ ಎರಡೂ ಒಂದೇ ಅರ್ಥದ ಶಬ್ದಗಳು. ಅಂತೆಯೇ ‘ಗೌರಿ’ ಮತ್ತು ‘ಪಾರ್ವತಿ’ ಈ ಎರಡೂ ಶಿವನ ಪತ್ನಿಯ ಹೆಸರುಗಳು. ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ‘ಲಂಕೇಚಿ ಪಾರ್ವತಿ‘ಯ ರೂಪ ರಹಸ್ಯ ನಮಗೆ ಸ್ಪಷ್ಟವಾಗುತ್ತದೆ.

ಲಜ್ಜಾಗೌರಿ ಅಥವಾ ಲಂಕಾ ಪಾರ್ವತಿ ದೇವಿಯ ಮೂರ್ತಿಯು ಅವಳ ಸಹಜ ಸ್ವರೂಪದಲ್ಲಿಯೇ ಇದೆ; ಅರ್ಥಾತ್‌ ವಸ್ತ್ರಾಲಂಕಾರ ರಹಿತವಾಗಿದೆ. ನಾವು ನಮ್ಮ ಇಷ್ಟಾನಿಷ್ಟಗಳನ್ನು ಅನುಸರಿಸಿಯೇ ದೇವಾನುದೇವತೆಗಳ ಮೂರ್ತಿಗಳನ್ನು ಸಾಲಂಕೃತಗೊಳಿಸುತ್ತಾ ಬಂದಿದ್ದೇವೆ. ಆದರೆ ಲಜ್ಜಾಗೌರಿ ಅಥವಾ ಲಂಕಾ ಪಾರ್ವತಿ ಎಂಬೀ ದೇವಿಯ ರೂಪವನ್ನು ಮಾತ್ರ ಮೂಲದಂತೆಯೇ ಇಂದಿಗೂ ಉಳಿಸಿಕೊಂಡು ಬರಲಾಗಿದೆ. ಅಲ್ಲದೆ ಅವಳನ್ನು ಸಾಲಂಕೃತ – ಸಿಂಗಾರಗೊಳಿಸುವ ಸಂಗತಿಯೇ ಅವಳ ಹೆಸರು ಮತ್ತು ರೂಪ ಸಂಕಲ್ಪನೆಗೆ ಅಸಂಗತವಾದುದು ಎಂಬ ಅಂಶ ಜನರ ಮನಸ್ಸಿನಲ್ಲಿ ಎಂದಿನಿಂದಲೋ ಸ್ಪಷ್ಟವಾಗಿಯೇ ಮೂಡಿರುವಂತಿದೆ.

ಈ ಮೂಲಕ ನಮಗೆ ಸ್ಪಷ್ಟವಾಗುವುದೇನೆಂದರೆ, ‘ಲಂಕಾ ಪಾರ್ವತಿ‘ಯು ವಸ್ತ್ರಾಲಮಕಾರ ರಹಿತ ದೇವಿಯಾಗಿರುವುದರಿಂದಲೇ, ಅಲಂಕಾರ ರಹಿತ ಸ್ತ್ರೀಯರಿಗೆ ಅವಳನ್ನು ಉಪಮಾನವಾಗಿ ಬಳಸುತ್ತಿರುವುದು ಸರಿಯಾಗಿದೆ. ಲಂಕಾ ಎಂದೊಡನೆ ಕೇವಲ ರಾವಣನ ರಾಜ್ಯವೆಂದಷ್ಟೆ ಗಟ್ಟಿಯಾಗಿ ಉಳಿದುಕೊಂಡು, ‘ಲಂಕಾ’ ಎಂಬುದಕ್ಕೆ ಇದ್ದ ‘ನಗ್ನಸ್ತ್ರೀ’ ಎಂಬ ಅರ್ಥವು ಪೂರ್ಣವಾಗಿ ವಿಸ್ಮೃತಿಗೆ ಒಳಗಾಗಿರುವುದರಿಂದ, ‘ಲಂಕೇಚಿ ಪಾರ್ವತಿ’ ಎಂಬುದಕ್ಕೆ ಸ್ಪಷ್ಟೀಕರಣ ನೀಡಬೇಕಾದ ಅಗತ್ಯವು ಬಂದಿತು. ಅಲ್ಲದೆ, ಲೋಕಗ್ರಹಿಕೆಯ ಒಂದು ಮಿತಿಯೂ ಸಹ ‘ಲಂಕಾ ಪಾರ್ವತಿ‘ಯನ್ನು ‘ಲಂಕೇತಿ ಪಾರ್ವತಿ‘ಯಾಗಿ ಸ್ಪಷ್ಟೀಕರಣಗೊಳಿಸುವಂಥ ತಪ್ಪು ರೂಢಿಗೆ ಕಾರಣವಾಯಿತೆಂದು ನಿರ್ಧರಿಸುವುದಕ್ಕೆ ಯಾವುದೇ ಹಿಂಜರಿಕೆಯು ಬೇಕಾಗಿಲ್ಲ.

ಲಜ್ಜಾಗೌರಿಹೆಸರಿನ ಸ್ಪಷ್ಟೀಕರಣ ಕಥೆ

ಮಹಾಕೂಟ ದೇವಿಯ ನಗ್ನತೆಯ ದ್ಯೋತಕವಾಗಿರುವ ‘ಲಂಜಿಕಾ’ ಎಂಬ ಹೆಸರು ಶಾಸನ ಪುರಾವೆಯಿಂದ ನಮಗೆ ಜ್ಞಾತವಾಗಿದೆ. ‘ಲಜ್ಜಾಗೌರಿ’ ಎಂಬುದು ಒಂದು ಸಂಶೋಭಿತ, ಸಂಸ್ಕೃತೀಕರಣ ರೂಪ ಎಂಬುದನ್ನು ಈಗಾಗಲೇ ಗುರುತಿಸಲಾಗಿದೆ. ನಿಜವಾದ ಲೋಕ ಪ್ರತಿಭೆಯೊಂದು ಮಾತ್ರವೇ ನಮ್ಮ ಪ್ರಕೃತಿಯನ್ನು ಅನುಸರಿಸಿ ಹೊಸಹೊಸ ಸ್ಪಷ್ಟೀಕರಣವನ್ನು ಶೋಧಿಸುತ್ತಿರುತ್ತದೆ ಹಾಗೂ ಆ ಸ್ಪಷ್ಟೀಕರಣವನ್ನು ಬೆಂಬಲಿಸುವ ಕಥಾನಕಗಳನ್ನು ರಚಿಸುತ್ತಾ ಹೋಗುತ್ತಿರುತ್ತದೆಂಬುದು ಗಮನಾರ್ಹ. ಈ ದೇವಿಗಿರುವ ಲಜ್ಜಾಗೌರಿಯೆಂಬ ಹೆಸರು, ಅವಳ ನಗ್ನ ಸ್ವರೂಪ, ಅವಳ ಶಿರರಾಹಿತ್ಯತೆಯ ಬಗ್ಗೆಯೂ ಸ್ಪಷ್ಟನೆ ನೀಡುವಂತಹ ಅನೇಕ ಕತೆಗಳು ಜನತೆಯಲ್ಲಿ ಪ್ರಚಲಿತವಾಗಿವೆ. ಮಹಾಕೂಟದ ಮೂರ್ತಿಯ ಸಂದರ್ಭದಲ್ಲಿ ದೇವೀ ಕೋಶಕಾರರಲ್ಲಿ ಬರುವ ಒಂದು ಕಥೆಯು ಇಂತಿದೆ:

“ಒಮ್ಮೆ ಶಂಕರ ಮತ್ತು ಪಾರ್ವತಿಯರು ಒಂದು ಕೊಳದಲ್ಲಿ ಜಲಕ್ರೀಡೆಯಾಡುತ್ತಿರುವಾಗ ಶಂಕರನ ದರ್ಶನ ಪಡೆಯಲೆಂದು ಒಬ್ಬ ಭಕ್ತನು ಅಲ್ಲಿಗೇ ಬಂದು ಬಿಟ್ಟನು. ಅವನನ್ನು ಕಂಡ ಕೂಡಲೇ ಅವಿರಬ್ಬರು ನಾಚಿ ನೀರಾದರು. ಶಂಕರನು ಅಲ್ಲಿದ್ದ ಒಂದು ಮಂದಿರಕ್ಕೆ ಓಡಿ ಹೋಗಿ ಶಿವ ಲಿಂಗದಲ್ಲಿ ಲೀನನಾಗಿಬಿಟ್ಟರೆ, ಪಾರ್ವತಿಯಾದರೊ ಆ ನೀರಿನಲ್ಲಿಯೇ ಮುಳುಗಿ ಮರೆಯಾದಳು. ಆಗ್ಗೆ ಅತಿಶಯ ಲಜ್ಜೆಗೊಂಡುದರ ಪರಿಣಾಮವೇ ಪಾರ್ವತಿಗೆ ‘ಲಜ್ಜಾಗೌರಿ’ ಎಂಬ ಹೆಸರು ಪ್ರಾಪ್ತವಾಯಿತು.”[7]

‘ತೀರ್ಥಯಾತ್ರಾ ಪ್ರಬಂಧ‘ದ ಕರ್ತೃ ಶ್ರೀ ಲೇಲೇ ಶಾಸ್ತ್ರಿಯವರು ಮಹಾಕೂಟದಲ್ಲಿನ ಲಜ್ಜಾಗೌರಿಯ ಚರಿತ್ರೆಗೆ ಸಂಬಂಧಿಸಿರುವಂತೆ ವಿವರಣೆ ನೀಡಿದ್ದಾರೆ: “ಅಲ್ಲಿನ ಜನರು ಹೇಳುವ ಕತೆ ಇಂತಿದೆ: ಒಮ್ಮೆ ಶಿವನು ವಿನೋಧವಾಗಿ ತನ್ನ ಹೆಂಡತಿ ಪಾರ್ವತಿಯ ಸತ್ವವನ್ನು ಪರೀಕ್ಷಿಸುವ ಉದ್ದೇಶದಿಂದ ತನ್ನ ಕೌದಿಯೊಂದನ್ನು ಜೋಪಾನವಾಗಿಡಬೇಕೆಂದು ಹೇಳಿ ಆಕೆಯ ಕೈಗೆ ಕೊಟ್ಟನು. ಅನಂತರ ತಾನೇ ಇಲಿಯ ರೂಪವ್ನು ಧರಿಸಿ ಅದರಲ್ಲಿ ಮೂವತ್ತು ರಂಧ್ರಗಳನ್ನು ಮಾಡಿದನು. ಪಾರ್ವತಿಯು ಇಲಿಯು ಕತ್ತರಿಸಿರುವ ಆ ಕೌದಿಯನ್ನು ನೋಡಿದೊಡನೆ ಶಿವನ ಕೋಪದ ನೆನಪಾಗಿ ಹೆದರಿಬಿಟ್ಟಳು. ಆಗ್ಗೆ ಶಿವನು ಸಿಂಪಿಗ (ದರ್ಜಿ)ನ ವೇಶದಲ್ಲಿ ಅಲ್ಲಿಗೆ ಬಂದನು. ಪಾರ್ವತಿಯು ತನ್ನಕೌದಿಯನ್ನು ಹೊಲಿದು ಕೊಡಬೇಕೆಂದು ಅವನಲ್ಲಿ ಕೇಳಿಕೊಂಡಳು. ಸಿಂಪಿಗನಾದರೋ ‘ನಾನು ನಿನ್ನೊಂದಿಗೆ ರಮಿಸಲು ಅನುವು ಮಾಡಿಕೊಡುವುದಾದರೆ ಮಾತ್ರ ಈ ಕೌದಿಯನ್ನು ಮುನ್ನಿನ ಹಾಗೆ ಮಾಡಿಕೊಡುವುದಾಗಿ ಹೇಳಿದನು’. ಶಿವನ ಉಗ್ರಕೋಪಕ್ಕೆ ಹೆದರಿದ್ದ ಪಾರ್ವತಿಯು ಅವನ ಇಚ್ಛೆಗೆ ಸಮ್ಮತಿಸಿದಳು. ಕೌದಿಯನ್ನು ಹೊಲಿದು ಕೊಟ್ಟಾದ ಮೇಲೆ ಈರ್ವರೂ ಸಂಭೋಗ ಕ್ರಿಯೆಯಲ್ಲಿ ನಿರತರಾಗಿದ್ದಾಗ ಶಿವನು ಸಿಂಪಿಗ ರೂಪವನ್ನು ಬಿಟ್ಟು ನಿಜರೂಪದಲ್ಲಿ ಪ್ರತ್ಯಕ್ಷನಾದನು.! ಅವನನ್ನು ಕಂಡೊಡನೆ ಪಾರ್ವತಿಯು ಅತ್ಯಂತ ನಾಚಿಕೆಯಿಂದ ಕುಗ್ಗಿ ಹೋದಳು! ತತ್ಪರಿನಾಮವಾಗಿ ಅವಳ ಮಸ್ತಕವು (ರುಂಡ) ತತ್ಕಾಲಕ್ಕೆ ಸಂಪೂರ್ಣವಾಗಿ ಕರಗಿಬಿಟ್ಟಿತು. ಶರೀರ ಮಾತ್ರ ಆಗ ಯಾವ ಸ್ಥಿತಿಯಲ್ಲಿತ್ತೋ ಅದೇ ಸ್ಥಿತಿಯಲ್ಲಿ ಉಳಿದುಬಿಟ್ಟಿತು”.[8]

ಇವುಗಳಲ್ಲಿ ಮೊದಲನೆಯ ಕಥೆಯು ನಗ್ನತೆ ಮತ್ತು ಲಜ್ಜಾಗೌರಿ ಹೆಸರು ಇವುಗಳ ಸ್ಪಷ್ಟೀಕರಣವಾಗಿದ್ದು, ಎರಡನೆಯ ಕಥೆಯು ಮೇಲಿನವುಗಳೊಂದಿಗೆ ಅವಳ ಶಿರೋವಿಹೀನ ಸ್ವರೂಪದ ಬಗೆಗಿನ ಸ್ಪಷ್ಟೀಕರಣ ನೀಡುವ ಪ್ರಯತ್ನದವುಗಳಾಗಿವೆ.

 

[1] A Guide to Badami: pp.53 – 54; ಶ್ರೀ ತಿರುಮಾಲೆ ತಾತಾಚಾರ್ಯ ಶರ್ಮ (ಬೆಂಗಳೂರು) ಇವರ ಪತ್ರ.

[2]ಅದೇ: ಪುಟ – ೫೪

[3] A Kannada – English Dictionary: by Rev. f. Kittel, Mangalore – 1894.

[4]ಕನ್ನಡಮರಾಠಿ ಶಬ್ದಕೋಶ: (ಸಂ.) ಪುಂಡಲೀಕಜೀ ಕಾತಗಡೇ, ಸಾಹಿತ್ಯ ಮತ್ತು ಸಂಸ್ಕೃತಿ ಮಂಡಳ, ಮಹಾರಾಷ್ಟ್ರ, ೧೯೬೯.

[5] The Student’s Sanskrit – English Dictionary: by V.S. Apte, Delhi, 1963.

[6]ಪೂರ್ವೋಕ್ತ: ನಿಯತಕಾಲಿಕೆ, ಪುಟ.೧೨೧.

[7]ಪೂರ್ವೋಕ್ತ: ಪುಟ – ೪೯೯.

[8]ಪೂರ್ವೋಕ್ತ: ಪುಟ – ೧೬೬