ಮಾಕೋಟೆ ಮುಕುಟೇಶ್ವರಿ

ಮಹಾಕೂಟದ ಈ ದೇವಿಯು ಕೇವಲ ಸ್ಥಾನಿಕ ಪಾತಳಿಯ ಮೇಲೆಯೇ ಶಕ್ತಿರೂಪವನ್ನು ಹೊಂದಿಲ್ಲ. ಬದಲಾಗಿ ಅವಳಿಗೆ ಅಖಿಲ ಭಾರತದ ಮಟ್ಟದಲ್ಲಿ ಒಂದು ಶಕ್ತಿ ಪ್ರತಿಷ್ಠೆಯು ಪ್ರಾಪ್ತವಾಗಿತ್ತು ಎಂಬುದಾಗಿ ಒಪ್ಪಿಕೊಳ್ಳುವುದಕ್ಕೆ ಪ್ರಬಲವಾದ ಪುರಾವೆಗಳು ಉಪಲಬ್ದವಾಗಿವೆ. ಅಷ್ಟೋತ್ತರ ಶತ (೧೦೮) ಶಕ್ತಿಪೀಠಗಳ ಗಣನೆಯಲ್ಲಿನ ಈ ಮುಂದಿನ ಉಲ್ಲೆಖವು ಮಹಾಕೂಟ ದೇವಿಯ ವಿಷಯಕ್ಕೆ ಸಂಬಂಧಿಸಿದ್ದೇ ಎಂಬುದು ನನ್ನ ಸಕಾರಣಬದ್ಧವಾದ ಭಾವನೆ:

ಕುರಂಡಲೇ ತ್ರಿಸಂಧ್ಯಾ ಸ್ಯಾನ್ ಮಾಕೋಟೇ ಮುಕುಟೇಶ್ವರೀ |
ಮಂಡಲೇಶೇ ಶಾಂಡಕೀ ಸ್ಯಾತ್ಕಾಲೀ ಕಾಲಾಂಜರೆ ಪುನಃ ||
                        (ದೇವೀ ಭಾಗವತ, ೭.೩೮.೨೯)

ರುದ್ರಕೋಟ್ಯಾಂ ತು ಕಲ್ಯಾಣೀ ಕಾಲೀ ಕಾಲಂಜರೇ ತಥಾ |
ಮಹಾಲಿಂಗೇ ತು ಕಪಿಲಾ ಮಾಕೋಟೇ ಮುಕುಟೇಶ್ವರೀ ||
                        (ಸ್ಕಂದ ಪುರಾಣ, ಅವಂತಿ – ರೇವಾ, ೧೯೮.೭೦)

ಮಹಾಲಿಂಗೇ ತು ಕಪಿಲಾ ಮಕೋಂಟೇ ಮುಕುಟೇಶ್ವರೀ |
ಶಾಲಗ್ರಾಮೇ ಮಹಾದೇವಿ ಶಿವಲಿಂಗೇ ಜಲಪ್ರಿಯಾ ||
                        (ಮತ್ಸ್ಯಪುರಾಣ, ೧೩ – ೩೩)

ಮಾಕೋಟಾಖ್ಯೇ ಮಹಾಕೋಟಃ ಶಿವಾ ಚ ಮುಂಡಕೇಶ್ವರೀ |
ಮಂಡಲೇಶ್ವರಪೀಠೇ ಚ ಶಂಕರಃ ಖಾಂಡವೀ ಶಿವಾ ||[1]
                        (ಬೃಹನ್ನೀಲತಂತ್ರ ವ ಪ್ರಾಣತೋಷಣೀ ತಂತ್ರ)

ಈ ಎಲ್ಲಾ ಉಲ್ಲೇಖಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ತಿಳಿಯುವುದೇನೆಂದರೆ, ಪೀಠನಾಮ ಮತ್ತು ಶಕ್ತಿನಾಮಗಳೆರಡರ ನಿರ್ದೇಶನದಲ್ಲಿ ಇರುವ ಪಾಠ ಭೇದ. ಆದರೂ ‘ಮಾಕೋಟ’ ಎಂಬ ಪೀಠನಾಮ ಮತ್ತು ‘ಮುಕುಟೇಶ್ವರಿ’ ಎಂಬ ಶಕ್ತಿನಾಮಗಳು ಅನೇಕ ಕಡೆಗಳಲ್ಲಿ ಕಾಣಸಿಗುತ್ತವೆ. ‘ಮಾಕೋಟ‘ಕ್ಕೆ ಬದಲಾಗಿ ಮರ್ಕೋಟ, ಕರ್ಕೋಟ, ಸಾಕೋಟ ಹಾಗೂ ‘ಮುಕುಟೇಶ್ವರಿ‘ಗೆ ಬದಲಾಗಿ ಮುಂಡಕೇಶ್ವರೀ, ಮಂಡಲೇಶ್ವರೀ ಎಂಬ ಪಾಠ ಭೇದಗಳಿವೆ. ಇವುಗಳಲ್ಲೆಲ್ಲ ಹೆಚ್ಚು ಪ್ರಾಧಾನ್ಯ ಇರುವುದು ‘ಮಾಕೋಟ’ ಮತ್ತು ‘ಮುಕುಟೇಶ್ವರೀ’ ಎಂಬ ಪಾಠಭೇದಗಳಿಗೆ. ಬೃಹನ್ನೀಲ ಮತ್ತು ಪ್ರಾಣತೋಷಣೀ ಎಂಬ ತತ್ತ್ವಗ್ರಂಥಗಳಲ್ಲಿನ ‘ಮುಂಡಕೇಶ್ವರೀ’ ಎಂಬ ಪಾಠವು ಶ್ಲೋಕ ರಚನೆಯ ದೃಷ್ಟಿಯಿಂದ ಸರಿಹೊಂದುವಂಥದಲ್ಲ. ಅಲ್ಲಿ ‘ಮುಕುಟೇಶ್ವರೀ’ ಎಂಬ ಪಾಠವೇ ಅಭಿಪ್ರೇತವಾಗಿರಬೇಕು ಎಂಬುದಾಗಿ ತಿಳಿಯುತ್ತದೆ. ಪೀಠನಾಮ (ಮಾಕೋಟ) ಮತ್ತು ಭೈರವನಾಮ (ಮಹಾಕೋಟ) ಇವುಗಳ ಪೂರ್ವಸಂದರ್ಭವನ್ನು ಗಮನಿಸಿದಾಗ ಅದು ನಿಶ್ಚಯವಾಗುತ್ತದೆ.

ದೇವಿಯ ‘ಮುಕುಟೇಶ್ವರೀ’ ಎಂಬ ನಾಮವು ಕೇವಲ ಅಷ್ಟೋತ್ತರಶತ ಶಕ್ತಿಪೀಠದ ನಾಮಾವಳಿಯಲ್ಲಿ ಮಾತ್ರವಲ್ಲ, ಇತರೆಡೆಗಳಲ್ಲಿಯೂ ಕಾಣಸಿಗುವುದು. ಧರ್ಮರಣ್ಯದಲ್ಲಿನ ಜನರ ರಕ್ಷಣೆಗಾಗಿ ದೇವತೆಗಳು ಸ್ಥಾಪಿಸಿದ ಗೋತ್ರ ಮಾತೃಕೆಗಳು ಇಲ್ಲವೆ ಕುಲದೇವಿಯರ ಸೂಚಿಯಲ್ಲಿಯೂ ಸ್ಕಂದಪುರಾಣವು ಮತ್ತೊಮ್ಮೆ ಮುಕುಟೇಶ್ವರಿಯನ್ನು ಸಮಾವೇಶಗೊಳಿಸಿದೆ :

ರಕ್ಷಣಾರ್ಥಂ ಹಿ ವಿಪ್ರಾಣಾಂ ಲೋಕಾನಾಂ ಹಿತಕಾಮ್ಯಯಾ |
ಗೋತ್ರಾನ್ ಪ್ರತಿ ತಥೈಕೈಕಾ ಸ್ಥಾಪಿತಾ ಯೋಗಿನೀ ತಥಾ ||

ಯಸ್ಯ ಗೋತ್ರಸ್ಯ ಯಾ ಶಕ್ತೀರ್ ರಕ್ಷನೇ ಪಾಲನೇ ಕ್ಷಮಾ |
ಸಾತಸ್ಯ ಕುಲದೇವಿತಿ ಸಾಕ್ಷಾತ್ತತ್ರ ಬಭೂವ ಹ ||

ಮಾತಂಗೀ ಚ ಮಹಾದೇವೀ ವಾಣೀ ಚ ಮುಕುಟೇಶ್ವರೀ |
ಭದ್ರೀ ಚೈವ ಮಹಾಶಕ್ತಿಃ ಸಂಹಾರೀ ಚ ಮಹಾಬಲಾ ||

ಚಾಮುಂಡಾ ಚ ಮಹಾದೇವೀ ಇತ್ಯೇತಾ ಗೋತ್ರಮಾತರಃ |
ಬ್ರಹ್ಮಾವಿಷ್ಣು ಮಹೇಶಾದ್ಯೈಃ ಸ್ಥಾಪಿತಾಸ್ತತ್ರ ರಕ್ಷಣೇ ||
            (ಸ್ಕಂದಪುರಾಣ, ಬ್ರಹ್ಮಖಂಡ, ಧರ್ಮಾರಣ್ಯಮಾಹಾತ್ಮ್ಯಾ,
೧೦.೧೦೬ – ೦೭,೧೧೦ – ೧೧೧)

ಇದೇ ರೀತಿಯಲ್ಲಿ ಚಂಡೀಕವಚದಲ್ಲಿಯೂ ದೇವಿಯು ತನ್ನ ಶರೀರದಲ್ಲಿನ ಯಾವ ಯಾವ ಭಾಗವನ್ನು ಯಾವಯಾವ ರೂಪದಲ್ಲಿ ರಕ್ಷಿಸಬೇಕು ಎಂಬುದನ್ನು ಹೇಳುವಾಗ್ಗೆ ಮುಕುಟೇಶ್ವರಿಯ ನಾಮನಿರ್ದೇಶನವಿದೆ :

ಅಂತ್ರಾಣಿ ಕಾಲರಾತ್ರಿಶ್ಚ ಪಿತ್ತಂ ಚ ಮುಕುಟೇಶ್ವರೀ |
ಪದ್ಮಾವತೀ ಪದ್ಮಕೋಶೇ ಕಫೇ ಚೂಡಾಮಣಿಸ್ತಥಾ ||
(ಚಂಡೀಕವಚ, ೩೨)

ಬೇರೆಡೆಯಲ್ಲಿಯ ಈ ಒಂದು ಉಲ್ಲೇಖ ‘ಮುಕುಟೆಶ್ವರೀ’ ಎಂಬ ಹೆಸರು ನಿಶ್ಚಿತವಾಗುವುದಕ್ಕೆ ಸಹಾಯಕವಾಗಿದೆ. ಮೇಲಿನ ಎಲ್ಲಾ ಉಲ್ಲೇಖಗಳ ಹಿನ್ನೆಲೆಯಲ್ಲಿ ವಿವೇಚಿಸಿದಾಗ, ಮಾಕೋಟ ಎಂಬ ಹೆಸರಿನ ಪೀಠವು ಮುಕುಟೇಶ್ವರೀ ಎಂಬ ಹೆಸರಿನ ಶಕ್ತಿಯ ನಿವಾಸವಾಗಿದ್ದು, ಹಾಗೆಯೇ ಅಲ್ಲಿ ಮಹಾಕೋಟ ನಾಮದ ಭೈರವೂ ಇದೆ ಎಂಬುದಾಗಿ ಶಕ್ತಿಪೀಠಗಳ ಅಷ್ಟೋ ತ್ತರಶತ ನಾಮಾವಳಿಕಾರರ ಅಭಿಪ್ರಾಯ ಮನಸ್ಸಿಗೆ ವೇದ್ಯವಾಗುತ್ತದೆ.

ಮಹಾಕೋಟ = ಮಾಕೋಟ

ಸದ್ಯ ಇರುವ ನಂದಿಕೇಶ್ವರ, ಮಹಾಕೂಟ ಎಂಬ ಎರಡು ಸ್ಥಳನಾಮಗಳು ಲಂಜಿಕೇಶ್ವರ ಮತ್ತು ಮಹಾಕೂಟೇಶ್ವರ ಎಂಬ ಉಭಯ ನಾಮಗಳಿಂದ ಪರಸಿದ್ಧವಾದ ಒಂದೇ ಶಿವಸ್ಥಾನಗಳೆಂದು ಈ ಮೊದಲೇ ಹೇಳಲಾಗಿದೆ. ಅಂದರೆ ಮಹಾಕೂಟ ಎಂಬ ಸದ್ಯದ ಒಂದು ಸ್ಥಳನಾಮವು ಶಿವನ ಮಹಾಕೂಟೇಶ್ವರ ಎಂಬ ಹೆಸರಿನೊಂದಿಗೆ ಸಂಬಂಧಪಡೆದುದಾಗಿದೆ. ಮಹಾಕೂಟೇ ಶ್ವರವೆಂಬುದು ಮಹಾಕೂಟ ಎಂಬುದಾಗಿ ಒಂದು ಸಂಕ್ಷಿಪ್ತ ರೂಪವನ್ನು ಪಡೆದಿರುವಂತೆ ಕಾಣುವುದು. ಈ ಹಿಂದೆ ಹೇಳಿದಂತೆ ಅಷ್ಟೋತ್ತರಶತ ನಾಮಾವಳಿಯಲ್ಲಿ ಬಂದಿರುವ ಮಹಾಕೂಟ (ಓ, ಉ ಈ ಸ್ವರಗಳಲ್ಲಿ ರೂಪ ವಿಪರ್ಯಯ ಆಗುತ್ತಿರುತ್ತದೆ.) ವೂ ಈ ಹೆಸರುಗಳೊಂದಿಗೆ ಸೇರಿಕೊಳ್ಳುವಂತಹದ್ದೇ ಎಂಬುದು ಗಮನೀಯ. ಅಂತೆಯೇ ಮಾಕೋಟ ಎಂಬ ಪೀಠನಾಮ, ಮಹಾಕೋಟ ಎಂಬ ಭೈರವ ನಾಮದಿಂದಲೇ ಬಂದಿರುವುದಾಗಿದೆ ಎಂಬ ಯೋಚನೆ ಸಹಜವಾಗಿಯೇ ಪ್ರವಹಿಸುತ್ತದೆ. ಮಹಾಕೋಟ ಎಂಬ ಹೆಸರು ಮಾಕೋಟ ಎಂಬುದಾಗಿ ರೂಪಪರಿವರ್ತನೆಗೊಂಡಿರುವುದು ಕನ್ನಡದ ಜಾಯಮಾನಕ್ಕೆ ಸಹಜವಾದುದೇ ಹೌದು. ಇದನ್ನು ಈ ಕೆಳಗಣ ಶಬ್ದಗಳ ಹಿನ್ನೆಲೆಯಿಂದ ಸ್ಪಷ್ಟವಾಗಿ ಅರಿಯಬಹುದು:

ಮಹಾಕಾಲೀ > ಮಹಾಕಾಳಿ
ಮಹಾಜಾಲ > ಮಾಜಾಲ
ಮಹಾಫಲ > ಮಾಪಳ
ಮಹಾಪುರುಷ > ಮಾಪುರುಷ
ಮಹಾಲಕ್ಷ್ಮೀ > ಮಾಲಕುಮಿ
ಮಹಾಸರಸ್ವತೀ > ಮಾಸರಸತಿ
ಮಹಾಹೇಯ > ಮಾಹೇಯ
ಮಹಾಸತಿ > ಮಾಸತಿ, ಮಾಸ್ತಿ

ಕನ್ನಡ ಶಬ್ದ ಭಂಡಾರದಿಂದ ಮಹಾ>ಮಾ ಈ ಪ್ರಕ್ರಿಯೆಯ ಎಷ್ಟು ಉದಾಹರಣೆಗಳನ್ನು ಬೇಕಾದರೂ ತೆಗೆದು ತೋರಿಸಬಹುದು. ಅಂದರೆ ಮಾಕೋಟ ಎಂಬ ಪೀಠನಾಮ ಮಹಾಕೋಟ ( = ಮಹಾಕೂಟ) ಎಂಬುದರ ಸದ್ಯ ಪ್ರಚಲಿತವಾಗಿರುವ ಪೀಠನಾಮದ ರೂಪವೆಂದು ಒಪ್ಪುವುದಕ್ಕೆ ಯಾವ ಅಡ್ಡಿಯೂ ಇಲ್ಲ.

ಮುಕುಟೇಶ್ವರೀ = ಮಹಾಕೋಟೇಶ್ವರೀ

ಈಗ ‘ಮುಕುಟೇಶ್ವರೀ’ ಎಂಬ ಶಕ್ತಿನಾಮದ ಬಗ್ಗೆ ವಿಚಾರ ಮಾಡಬೇಕಾದುದು ಅಗತ್ಯ. ‘ಮುಕುಟೇಶ್ವರೀ‘ಯೂ ಕೂಡ ‘ಮಹಾಕೋಟೇಶ್ವರೀ’ ಅಥವಾ ‘ಮಹಾಕೂಟೇಶ್ವರೀ’ ಎಂಬ ಹೆಸರಿನದ್ದೇ ಒಂದು ರೂಪವಾಗಿದೆ ಎಂದು ನನಗನಿಸುತ್ತದೆ. ಅದು ಹೇಗೆ ಎಂಬುದನ್ನು ನಾನು ಸ್ಪಷ್ಟಪಡಿಸಬೇಕು. ಮಂಗಳೇಶನ ಬದಾಮಿ ಶಾಸನದಲ್ಲಿರುವ ‘ಲಂಜಿಗೇಶ್ವರಾ’ ನಿರ್ದೇಶನದಂತೆಯೇ ಮಹಾಕೂಟದಲ್ಲಿಯೇ ಇರುವ ಅವನ ಮತ್ತೊಂದು ಶಾಸನದಲ್ಲಿ ಮಹಾಕೋಟೇಶ್ವರ ಎಂಬ ಶಿವನಾಮ ನಿರ್ದೇಶನವಾಗಿ ‘ಮುಕುಟೇಶ್ವರ ನಾಥ’ ಎಂಬ ರೂಪವಿರುವುದು.

‘ಮಕುಟೇಶ್ವರನಾಥಸ್ಯಾಸ್ಮಾಕಂ ಪಿತ್ರಾ ಜ್ಯೇಷ್ಠನ ಚೋಪದತ್ತಮ್‌….’ ಇತ್ಯಾದಿ.[2]

ಮಂಗಳೇಶನ ದೊಡ್ಡ ಅತ್ತಿಗೆ (ಪ್ರಥಮ ಕೀರ್ತಿವರ್ಮನ ಪತ್ನಿ) ದುರ್ಲಭಾದೇವಿಯು ಕಲಚೂರಿಯಿಂದ ಸುಲಿಗೆಗೆಯ್ದ ವಸ್ತುಗಳೊಂದಿಗೆ ಇನ್ನು ಹತ್ತು ಪ್ರದೇಶಗಳನ್ನು ಮಕುಟೇಶ್ವರ ನಾಥನಿಗೆ ದಾನವಾಗಿ ಕೊಟ್ಟುದರ ಉಲ್ಲೇಖಕ್ಕಾಗಿಯೇ ಮೇಲಿನ ಶಿಲಾಶಾಸನವನ್ನು ರೂಪಿಸಿರುವುದಾಗಿದೆ. ಈ ಶಾಸನವು ೧೨ನೆಯ ಏಪ್ರಿಲ್ ೬೦೨ರ ಕಾಲದ್ದಾಗಿರುವುದು.

ಮಂಗಳೇಶನ ಶಾಸನದಲ್ಲಿ ಮಹಾಕೂಟದ ಶಿವನನ್ನು ಲಂಜಿಗೇಶ್ವರ (= ಲಂಜಿಕೇಶ್ವರ) ಮತ್ತು ಮಕುಟೇಶ್ವರ (= ಮಹಾಕೂಟೇಶ್ವರ, ಮಹಾಕೋಟೇಶ್ವರ) ಎಂಬ ಹೆಸರುಗಳಿಂದಲೂ ಉಲ್ಲೇಖಿಸಿರುವುದನ್ನು ಸ್ವತಃ ನಾನೇ ನೋಡಿದ್ದೇನೆ. ಲಂಜಿಕೇಶ್ವರ ಹೆಸರಿನಲ್ಲಿ ಲಂಜಿಕಾ ಎಂಬ ಶಕ್ತಿಯು ಸಮಾವಿಷ್ಟವಾಗಿರುವಂತೆಯೇ, ಮಕುಟೇಶ್ವರ ಎಂಬ ನಾಮದಲ್ಲಿಯೂ ಮಕುಟೇಶ್ವರೀ ಎಂಬ ಶಕ್ತಿ ದೇವತೆಯು ಸೇರಿಕೊಂಡಿರುವಳು. ಮಹಾಕೂಟೇಶ್ವರಿ ಎಂಬುದರ ರಹಸ್ಯವು ತಿಳಿಯದ ಕಾರಣ ಲಿಪಿಕಾರರು ಅದನ್ನು ಮುಕುಟೇಶ್ವರಿ (ತಮ್ಮ ದೃಷ್ಟಿಗೆ ಸರಿಕಂಡಂತೆ) ಎಂಬುದಾಗಿ ರೂಪು ನೀಡಿರುವುದು ಸ್ವಾಭಾವಿಕವೇ. ಅಲ್ಲದೆ ಮಕುಟ ಎಂಬ ಸಂಸ್ಕೃತ ಶಬ್ದದ ಅರ್ಥವು ಮುಕುಟ ಎಂದೇ ಇರುವುದುರಿಂದ ‘ಮಕುಟೇಶ್ವರೀ’ ಎಂಬುದಕ್ಕೆ ‘ಮುಕುಟೇಶ್ವರಿ’ ಎಂಬ ರೂಪವನ್ನು ನೀಡುವ ಮೋಹವನ್ನು ಬಿಡುವುದು ಅಶಕ್ಯವೇ ಸರಿ.

ಈ ಎಲ್ಲಾ ವಿವೇಚನೆಯಿಂದ ಈ ಮುಂದಿನ ಮೂರು ತಥ್ಯಗಳು ನಿಃಸಂದೇಹವಾಗಿ ನಮ್ಮೆದುರು ಮೂಡುತ್ತವೆ :

೧. ಮಾಕೋಟ ಎಂಬ ಹೆಸರಿನಿಂದ ಉಲ್ಲೇಖಿಸಿರುವ ಶಕ್ತಿಪೀಠವೆಂದರೆ ಇಂದಿನ ಮಹಾಕೂಟ (ಮಹಾಕೋಟ)ವೇ ಹೌದು:

೨. ಲಂಜಿಕಾ, ಲಜ್ಜಾಗೌರಿ ಮತ್ತು ಮಹಾಕೂಟೇಶ್ವರಿ – ಈ ಮೂರೂ ಹೆಸರುಗಳಿಂದ ಯುಕ್ತಗೊಂಡಿರುವಂಥ ನಗ್ನ, ಉತ್ತಾನಪಾದ, ಶಿರೋಹೀನ ದೇವತೆಯು ಈ ಶಕ್ತಿಪೀಠದಲ್ಲಿನ ಮುಕುಟೇಶ್ವರಿ ಎಂಬ ಅಧಿಷ್ಠಾತ್ರಿ ಶಕ್ತಿದೇವತೆಯೇ ಹೌದು:

೩. ಲಂಜಿಕೇಶ್ವರ, ಲಜ್ಜಾಗೌರೀಶ್ವರ ಮತ್ತು ಮಹಾಕೂಟೇಶ್ವರ ಎಂಬ ತ್ರಿವಿಧ ಹೆಸರುಗಳಿಂದ ಪ್ರಸಿದ್ಧವಾಗಿರುವ ಶಿವನು ಇಲ್ಲಿನ ಪೀಠದಲ್ಲಿನ ಮಹಾಕೋಟ ಭೈರವನೇ.

ಮಹಾಕೋಟೇಶ್ವರೀಯ ನಾಮರಹಸ್ಯ

ಅಂತಿಮವಾಗಿ ಒಂದು ಮಹತ್ವದ ಪ್ರಶ್ನೆಗೆ ಉತ್ತರಿಸಬೇಕಾದದ್ದು ಅಗತ್ಯ. ಅದೇನೆಂದರೆ ಒಂದೇ ಸ್ಥಾನಕ್ಕೆ ನಂದಿಕೆಶ್ವರ ಮತ್ತು ಮಹಾಕೂಟ ಎಂಬ ಎರಡು ಹೆಸರುಗಳೇಕೆ? ಒಬ್ಬನೇ ದೇವನಿಗೆ ಲಂಜಿಕೇಶ್ವರ ಮತ್ತು ಮಹಾಕೋಟೇಶ್ವರ – ಮಹಾಕೂಟೇಶ್ವರ ಎಂಬೆರಡು ಹೆಸರುಗಳ ಅಗತ್ಯವೇನು? ಹಾಗೆಯೇ ಒಬ್ಬಳೇ ದೇವಿಗೆ ಲಂಜಿಕಾ ಮತ್ತು ಮಹಾಕೋಟೇಶ್ವರಿ ಎಂಬ ನಾಮಗಳು ಬಂದುವೇಕೆ? ಈ ಮೂರು ಅಂಶಗಳು ಪ್ರಶ್ನೆಗಳ ರೂಪದಲ್ಲಿ ಕಾಣುತ್ತಿರುವುದೆಲ್ಲ ಒಂದೇ ಎಂಬುದು ಓದುಗರ ಗಮನಕ್ಕೆ ಬಾರದಿರದು. ಕಾರಣ ದೇವಿಯ ಹೆಸರಿನಿಂದಲೇ ದೇವನಿಗೆ ಹೆಸರು ಬಂದುದು, ಹಾಗೆಯೇ ದೇವನ ಹೆಸರಿನಿಂದಲೇ ಊರಿಗೆ ಹೆಸರು ಬಂದುದಾಗಿದೆ. ಅಂದರೆ ದೇವಿಯ ಈ ಎರಡು ನಾಮ ವಿಚಾರಗಳ ಪ್ರಶ್ನೆಗೆ ಉತ್ತರ ಸಿಕ್ಕರೆ ದೇವನ ಹಾಗೂ ಊರಿನ ಹೆಸರುಗಳ ರಹಸ್ಯವು ತಂತಾನೆ ಅನಾವರಣಗೊಳ್ಳುತ್ತದೆ.

ದೇವಿಯ ಎರಡು ನಾಮಗಳಲ್ಲಿ ಲಂಜಿಕಾ ಎಂಬುದರ ಹಿನ್ನೆಲೆಯನ್ನು ಈಗಾಗಲೇ ಬಿಡಿಸಲಾಗಿದೆ. ಲಂಜಿಕಾ (ಲಂಜಾ) ಅಂದರೆ ನಗ್ನ, ನಿರ್ಲಜ್ಜ ಸ್ತ್ರೀ. ಉಳಿದ ಪ್ರಶ್ನೆಯೆಂದರೆ ಮಹಾಕೋಟೇಶ್ವರಿಯ ನಾಮರಹಸ್ಯ. ಈ ಹೆಸರೂ ಸಹ ಮೊದಲ ಹೆಸರಿನ ಅರ್ಥದ್ದೇ ಆಗಿದ್ದಲ್ಲಿ, ಎರಡೂ ಹೆಸರುಗಳ ಸಮಸ್ಯೆಯನ್ನು ಅನಾಯಾಸವಾಗಿ ಬಿಡಿಸಬಹುದು. ಒಂದೊಮ್ಮೆ ವಿಭಿನ್ನ ಅರ್ಥದ್ದಾಗಿದ್ದರೆ ಮತ್ತೊಂದು ಹೆಸರಿನ ಕಾರಣವನ್ನು ಶೋಧಿಸಬೇಕಾಗುತ್ತದೆ.

‘ಮಹಾಕೋಟೇಶ್ವರೀ’ ಎಂಬ ಹೆಸರಿನಲ್ಲಿಯ ‘ಮಹಾ’ ಎಂಬ ಮೊದಲ ವಿಶೇಷಣ ಹಾಗೂ ‘ಈಶ್ವರಿ’ ಎಂಬ ದೇವೀವಾಚಕ ಉತ್ತರ ಪದವನ್ನು ಬಿಟ್ಟರೆ, ‘ಕೋಟ’ ಎಂಬುದರ ಅಜ್ಞಾತ ಅರ್ಥ ಹಾಗೆಯೆ ಉಳಿಯುತ್ತದೆ. ಈ ‘ಕೋಟ‘ದಲ್ಲಿಯೇ ಮಹಾಕೋಟೇಶ್ವರಿಯ ಹೆಸರಿನ ಎಲ್ಲ ಕೂಟವೂ ಸಮಾವಿಷ್ಠಗೊಂಡಿದೆ.

ಈ ‘ಕೋಟ’ ಶಬ್ದದ ಬಗ್ಗೆ ಅರ್ಥ ಸಂಶೋಧನೆಯ ಸಂದರ್ಭದಲ್ಲಿ ನನ್ನ ನೆನಪಿಗೆ ಬರುವವಳೆಂದರೆ ‘ಕೋಟವಿ’ ಎಂಬ ಹೆಸರಿನ ದೇವತೆ. ಕೋಟರೀ, ಕೋಟರಾ ಎಂಬ ರೂಪ ಭೇದಗಳಿಂದ ಕಾಣಸಿಗುವ ಈ ದೇವಿಯ ಹೆಸರು ಮಹಾಕೋಟೇಶ್ವರಿಯ ನಾಮರಹಸ್ಯವನ್ನು ಬಿಡಿಸುವುದಕ್ಕೆ ಸಹಾಯಕವಾದೀತು. ಕೋಟವೀ, ಕೋಟರೀ, ಕೋಟರಾ, ಕೋಟ್ಟಕಿರಿಯಾ, ಕೋಟ್ಟಮಹಿಕಾ, ಕೋಟಮಾಯಿ – ಇವೇ ಮುಂತಾದ ದೇವಿಯ ನಾಮಗಳು ಕೋಟ – ಕೋಟ್ಟ ಎಂಬುವುಗಳಿಗೆ ಸಮಾನವಾದ ಅಂಶಗಳಾಗಿವೆ. ಅಂದರೆ ಮಹಾಕೋಟೇಶ್ವರಿ ಮತ್ತು ಕೋಟವೀ ಇವುಗಳ ನಾಮ ಬೀಜವು ಒಂದೇ, ಅದೆಂದರೆ ಕೋಟ – ಕೋಟ್ಟ. ಈ ಬೀಜವನ್ನು ಸಂಸ್ಕೃತ ಕೋಶಕಾರರು ತಮ್ಮದನ್ನಾಗಿ ಮಾಡಿಕೊಂಡಿರಬಹುದು, ಆದರೆ ಅದು ಮೂಲತಃ ದಕ್ಷಿಣ ಭಾರತೀಯ ಭಾಷೆಗಳಲ್ಲಿನ ಪದವೆಂಬುದು ವಿದಿತ. ಸಂಸ್ಕೃತ ಕೋಶದಲ್ಲಿ ‘ಕೋಟವಿ‘ಗೆ ನಗ್ನಸ್ತ್ರೀ ಎಂಬುದಾಗಿಯೇ ಅರ್ಥವನ್ನು ನಮೂದಿಸಲಾಗಿದೆ.

ಕೋಟ – ಕೋಟೆ ಈ ಶಬ್ದಗಳ ಅರ್ಥವನ್ನು ಶೋಧಿಸುವಲ್ಲಿ ಮರಾಠಿಯ ‘ಕೋಡಗಾ’ ಎಂಬ ಶಬ್ದದ ನೆನಪಾಗುತ್ತದೆ. ಈ ಶಬ್ದವು ದಾಸೋಪಂತರ ‘ಗ್ರಂಥರಾಜ‘ದಲ್ಲಿ ‘ಕೋಟಗಾ’ ಹಾಗೂ ಮೋರೋಪಂತರ ‘ಕೇಶಾವಲಿ‘ಯಲ್ಲಿ ‘ಕೋಟಿಗಾ’ ಎಂಬ ರೂಪಗಳಿಂದ ಬಳಕೆಗೊಂಡಿದೆ.[3] ಈ ಶಬ್ದಕ್ಕೆ ಮರಾಠಿಯಲ್ಲಿ ‘ನಿರ್ಲಜ್ಜ’ ಎಂಬ ಅರ್ಥವಿರುವುದು. ‘ಲಹಾನಗಾ’ (ಚಿಕ್ಕದಾದುದು) ಎಂಬ ಶಬ್ಧದಲ್ಲಿನ ‘ಗಾ‘ದಂತೆಯೇ ‘ಕೋಟಗಾ‘ದಲ್ಲಿನ ‘ಗಾ’ ಸಹ ಒಂದು ಪ್ರತ್ಯಯವೇ. ಅಂದರೆ ಕೋಟಗಾದಲ್ಲಿನ ‘ಗಾ‘ವನ್ನು ಬಿಟ್ಟರೆ ‘ನಿರ್ಲಜ್ಜ’ ಎಂಬರ್ಥದ ‘ಕೋಟ’ (ಅಥವಾ ‘ಕೋಟೀ‘) ಎಂಬುದಷ್ಟೆ ಉಳಿಯುತ್ತದೆ. ಮಹಾರಾಷ್ಟ್ರ – ಶಬ್ದಕೋಶದಲ್ಲಿಯೂ ಈ ಶಬ್ದಕ್ಕೆ ಮೂಲ ಕನ್ನಡದಲ್ಲಿನ ಕೋಟ್ಟಿ = ನಿರ್ಲಜ್ಜ ಎಂಬುದಾಗಿಯೇ ಹೇಳಲಾಗಿದೆ.

ಈ ಎಲ್ಲ ವಿಚಾರಗಳಿಂದ ಸ್ಪಷ್ಟವಾಗಿ ನಮ್ಮ ಗಮನಕ್ಕೆ ಬರುವುದೇನೆಂದರೆ, ಮಹಾಕೂಟದ ದೇವಿಗಿರುವ ಲಂಜಿಕಾ ಮತ್ತು ಮಹಾಕೋಟೇಶ್ವರಿ ಈ ಎರಡೂ ಹೆಸರುಗಳು ಒಂದೇ ಅರ್ಥದುವಾಗಿವೆ ಎಂಬುದು. ಎರಡಕ್ಕೂ ಇರುವುದು ನಗ್ನ, ನಿರ್ಲಜ್ಜ ಎಂಬ ಅರ್ಥವೇ. ಮಹಾಕೋಟೇಶ್ವರಿಯು ಮಹಾನಗ್ನ ದೇವಿಯಾಗಿದ್ದರೆ, ಮಹಾಕೋಟೇಶ್ವರನು ಮಹಾನಗ್ನ ದೇವನೆನಿಸಿದ್ದಾನೆ. ಆಕೆ ಯೋನಿಯ ಮೂರ್ತರೂಪಳಾಗಿದ್ದರೆ, ಆತ ಲಿಂಗಕ್ಕೆ ಮೂರ್ತ ರೂಪನಾಗಿದ್ದಾನೆ.

ಮಹಾಯೋನಿ ಮತ್ತು ಮಹಾಲಿಂಗ

ಲಂಜಿಕಾ ಅಥವಾ ಮಹಾಕೋಟೇಶ್ವರಿಯು ಸಕಲ ಸೃಷ್ಟಿಯನ್ನು ಪ್ರಸವಿಸುವ ಮಹಾಯೋನಿಯೆನಿಸಿದ್ದಾಳೆ. ಎಲ್ಲಾ ನಿರ್ಮಿತಿಗಳಿಗೂ ಅವಳೇ ತವರು. ಸಕಲ ಚರಾಚರಗಳು ಪ್ರಸವಗೊಳ್ಳುತ್ತಿರುವುದು ಅವಳಿಂದಲೇ. ಅವಳ ಸ್ತನ್ಯಪಾನವನ್ನು ಮಾಡುವುದರ ಮೂಲಕವೇ ಸಕಲ ಜೀವಜಂತುಗಳ ಜೀವನ ನಡೆಯುತ್ತಿರುವುದು. ಅವಳ ಮೂರ್ತಿ ನಿರ್ಮಾಣ (ಮತ್ತು ಪೋಷಣೆಯ)ದ ಇಂದ್ರಿಯವನ್ನು ತಿಳಿಯಬೇಕು ಎಂಬ ಕಾರಣಕ್ಕಾಗಿಯೇ ಆ ಭಾಗವನ್ನಷ್ಟೇ ರೂಪಿಸಿರುವುದು ಇಲ್ಲಿನ ಮುಖ್ಯ ದೃಷ್ಟಿಯಾಗಿದೆ. ಪ್ರಥಮತಃ ಅವಳು ಸೃಷ್ಟಿಶೀಲಳಾದ ದೇವಿಯಾಗಿದ್ದು, ಸ್ವಾಭಾವಿಕವಾಗಿಯೇ ಅದನ್ನು ಪೋಷಿಸುವವಳೂ ಆಗಿದ್ದಾಳೆ. ಸೃಷ್ಟಿಯ ಸೂಚಕವಾದ ಯೋನಿ ಮತ್ತು ಪುಷ್ಟಿಯ ಸೂಚಕವಾದ ಸ್ತನಗಳಿಗೆ ಅವಳ ಮೂರ್ತಿ ವಿಜ್ಞಾನದಲ್ಲಿ ಮಹತ್ವದ ಸ್ಥಾನ ನೀಡಿರುವುದು ಸಹ ಈ ಸ್ವಾಭಾವಿಕತೆಯಿಂದಲೇ. ಅವಳ ಮೂತಿಗೆ ಸಂಬಂಧಿಸಿದಂತೆ ಇರುವ ಕಮಲದ ಹೂವು ಕೂಡ ಸೃಷ್ಟಿಯ ಪ್ರತೀಕವೇ. ಅದಕ್ಕಿಂತಲೂ ಹೆಚ್ಚಾಗಿ ಯೋನಿಯ ಸುರಮ್ಯ ಪರ್ಯಾಯವೆಂದೇ ಇದು ಪರಿಗಣಿತವಾಗಿದೆ ಭಾರತೀಯ ಪರಂಪರೆಯಲ್ಲಿ. ಕ್ವಚಿತ್ತಾಗಿ ಕೆಲವೆಡೆ ಅವಳಿಗೆ ದೊರೆತಿರುವ ವೃಷಭದ ಸಾನ್ನಿಧ್ಯ ಕೂಡ ಲಕ್ಷಣೀಯವಾಗಿದೆ. ವೃಷಭವು ಪ್ರಜೋತ್ಪಾದಕ ಪ್ರಭಾವಿಯಾದ ವೀರ್ಯ, ಪೌರುಷ ಹಾಗೂ ಪಿತೃತ್ವದ ಪ್ರತೀಕವೆನಿಸಿದೆ. ವೃಷಭ ಮತ್ತು ಶಿವನ ಸಂಪರ್ಕವೂ ಈ ವೈಶಿಷ್ಟ್ಯದ ಸೂಚಕವೇ. ಎಂತಲೇ ಶಕ್ತಿಯ ರೂಪದಲ್ಲಿರುವ ಲಂಜಿಕಾ ಮಹಾಯೋನಿಯಾಗಿದ್ದರೆ, ಶಿವನು ಮಹಾಲಿಂಗ. ‘ಜಗತಃ ಪಿತರೌ’ ಎಂದೇ ಈ ಜೋಡಿ ಭಾರತೀಯ ಪರಂಪರೆಯಲ್ಲಿ ವಂದನೀಯರಾಗಿದ್ದಾರೆ. ಶಿವನು ಲಿಂಗರೂಪಿಯಾಗಿದ್ದಾಗ ಅವನ ಅವಯವ ಸಂಪನ್ನಮೂರ್ತಿಯು ಹೇಗೆ ಅಗತ್ಯವಾದುದಾಗಿರುವುದಿಲ್ಲವೋ, ಹಾಗೆಯೇ ಜಗನ್ಮಾತೆಯ ವಿಷಯದಲ್ಲೂ ಭಾವಿಸುವುದು ಅವಶ್ಯ. ಆಕೆ ಕೇವಲ ಯೋನಿ ರೂಪದವಳು. ಅವಳನ್ನು ಶಿರೋವಿಹೀನೆ ಎಂದು ಹೆಳುವುದು ತಪ್ಪು. ಈಗ್ಗೆ ಉಪಲಬ್ಧವಾಗಿರುವ ಅವಳ ಮೂರ್ತಿಗಳಲ್ಲಿ ಕೆಲವು ಕೇವಲ ಯೋನಿ ರೂಪದವಾಗಿದ್ದರೆ, ಮತ್ತೆ ಕೆಲವು ಯೋನಿ – ಸ್ತನ ರೂಪದವಾಗಿರುವುದು ಗಮನೀಯ.

ಉನ್ನತಿ ಮತ್ತು ಉಪೇಕ್ಷೆ

ಈವರೆಗೆ ಈ ಸಂತಾನದಾತ್ರಿ ಯೋನಿದೇವಿಯ ಸ್ವರೂಪವನ್ನು ಅರಿಯುವುದಕ್ಕೆ ಪ್ರಯತ್ನಿಸಿದ್ದು ಮಹಾಕೂಟದಲ್ಲಿನ ಅವಳ ಉಪಾಸನಾ ಕಕ್ಷೆಯಲ್ಲಿಯೇ. ಈ ಕಕ್ಷೆಯನ್ನು ಕಾಯ್ದುಕೊಳ್ಳಬೇಕಾದ್ದು ಅಗತ್ಯವಾದುದರಿಂದ ಕೆಲವಾರು ಪ್ರಶ್ನೆಗಳತ್ತ ದೃಷ್ಟಿ ಹಾಯಿಸದೆ ಇರಬೇಕಾಯಿತು. ಉದಾಹರಣೆಗೆ ಭಾರತದ ಯಾವ ಬೇರೆ ಬೇರೆ ಭಾಗಗಳಲ್ಲಿ ಈ ದೇವಿಯ ಮೂರ್ತಿಗಳು ಉಪಲಬ್ಧವಾಗಿರುವುವು? ಅವುಗಳಲ್ಲಿ ಎಷ್ಟು ಸ್ಥಳಗಳಲ್ಲಿ ಅವಳ ಉಪಾಸನೆಯ ಸಾತತ್ಯ ಇನ್ನೂ ಉಳಿದಿದೆ? ಎಲ್ಲಿ ಇಂಥ ಉಪಾಸನೆ ನಡೆಯುತ್ತಲಿದೆಯೋ ಅಲ್ಲೆಲ್ಲ ಅವಳಿಗೆ ಶಕ್ತಿ ಪ್ರತಿಷ್ಠೆಯೊಂದು ಪ್ರಾಪ್ತವಾಗಿರುವುದೇ? ಹಾಗಿದ್ದರೆ ಆ ಪ್ರಕ್ರಿಯೆಯು ಮಹಾಕೂಟದ ರೀತಿಯಲ್ಲಿದೆಯೋ ಅಥವಾ ಭಿನ್ನವಾಗಿದೆಯೋ? ಭಿನ್ನವಾಗಿದ್ದರೆ ಅದಕ್ಕೆ ಕಾರಣಗಳೇನು? ಆ ದೇವಿಯ ಮೂರ್ತಿಯು ಮೇಲಣ ವರ್ಣನೆಯ ರೀತಿಯಂತೆ ಕ್ರಿಸ್ತೋತ್ತರ ಕಾಲದ್ದೇ ಆಗಿದ್ದರೆ, ಆ ವಿಶಿಷ್ಟ ಬಗೆಯ ಮೂರ್ತಿಯು ಪರಕೀಯ ಪ್ರಭಾವದಿಂದ ಉಂಟಾದುದೇ? ಆ ಮೂರ್ತಿಯು ಪ್ರಚಲನಗೊಳ್ಳುವುದಕ್ಕೆ ಮುನ್ನವೇ ದೇವಿಯಿದ್ದಳೋ ಹೇಗೆ? ಹಾಗೆನಾದರೂ ಇದ್ದರೆ ಅವಳ ವಿಗ್ರಹವನ್ನು ಹೇಗೆ ಉಪಾಸನೆಯಲ್ಲಿ ಉಪಯೋಗಿಸಲಾಗುತ್ತಿತ್ತು? ಇತ್ಯಾದಿ ಅನೇಕಾನೇಕ ಪ್ರಶ್ನೆಗಳು ಉತ್ತರದ ಹಾದಿಯನ್ನು ಕಾಯುತ್ತಲಿವೆ. ಆದರೆ ಸದ್ಯ ಈ ಪ್ರಶ್ನೆಗಳನ್ನು ಹಾಗೆಯೇ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಈಗ್ಗೆ ಒಂದು ವಿಷಯದತ್ತ ಗಮನಹರಿಸುವುದು ಅವಶ್ಯ. ಈ ದೇವಿಯು ಶಕ್ತಿರೂಪದಲ್ಲಿ ಪ್ರಕಟವಾದ ನಂತರ ಅವಳ ಮೂಲ ಲೌಕಿಕ ರೂಪವನ್ನು ಅತ್ಯಂತ ಉಪೇಕ್ಷಿತಗೊಳಿಸುತ್ತಾ ಹೋಗಲಾಯಿತು. ಮಹಾಕೂಟದಲ್ಲಿ ಈ ಪ್ರಕಾರದ ಮುರಿದು ಹಾಳಾದ ಮೂರ್ತಿಯು ಒಂದು ಮೂಲೆಯಲ್ಲಿ ಹಾಗೆಯೇ (ಆಶ್ರಯವಿಲ್ಲದಂತೆ) ಬಿದ್ದಿದೆ. ಲಜ್ಜಾಗೌರೀಶ್ವರ ಇಲ್ಲವೆ ಮಹಾಕೋಟೇಶ್ವರ ಶಿವನು ಈ ದೇವಿನಾಮವನ್ನು ತಾನೇ ಹೊಂದಿ ಮೆರೆಯುತ್ತಿದ್ದಾನೆ. ಅಲ್ಲದೆ ಈಗ್ಗೆ ಈ ದೇವಿಯ ರೂಪವು ಲೋಪವಾಗಿ ಪಾರ್ವತಿಯ ಸ್ವರೂಪವನ್ನು ಪಡೆದಿದೆ. ಅಲಂಪುರದ ಸ್ಥಿತಿಯೂ ಹೀಗೆಯೇ ಇದೆ. ಅಂತೆಯೇ ಉಳಿದ ಅನೇಕ ಸ್ಥಳಗಳಲ್ಲಿನ ವಿಚಾರದಲ್ಲಿಯೂ ಇದೇ ಅವಸ್ಥೆ. ಅಂದರೆ ಇವೆಲ್ಲ ದೇವತೆಗಳ ವಿಚಾರವು ಘಟಿಸಿರುವುದು ಜನಪದ ಪರಿಸರವನ್ನು ಆಧರಿಸಿಯೇ. ಯಾವುದಾದರೊಂದು ದೇವತೆಯ ಜನಪ್ರಿಯತೆ ಹೆಚ್ಚಾದರೆ ಸಾಕು, ಧರ್ಮಧುರೀಣರು ಆಕೆಯನ್ನು ಪೂರ್ವಪ್ರತಿಷ್ಠಿತ ದೇವತೆಯೊಡನೆ ಸಂಬಂಧ ಕಲ್ಪಿಸುವ ಮುಖೇನ ಬಹಳ ಎತ್ತರೆತ್ತರಕ್ಕೆ ಕೊಂಡೊಯ್ಯುತ್ತಾರೆ; ಮಾತ್ರವಲ್ಲ ಅವಳಿಗೊಂದು ಹೊಸ ಚರಿತ್ರೆಯೂ ರೂಪುಗೊಳ್ಳುತ್ತದೆ. ಆ ಚರಿತ್ರೆಗೆ ಅನುರೂಪವಾಗುವಂತಹ ಪೂರ್ವಸ್ಥಿತಿಯೊಂದನ್ನು ಸಹ ಹೆಸರಿಸುತ್ತಾರೆ. ಈ ಎಲ್ಲದರಲ್ಲಿಯೂ ಮೂಲನಾಮ, ರೂಪ ಮತ್ತು ಧೋರಣೆಗಳ ಸಾಮಗ್ರಿಗಳನ್ನು ಅತ್ಯಂತ ಸೂಕ್ಷ್ಮವಾಗಿಯೂ, ಅತ್ಯಂತ ಕೌಶಲ್ಯದಿಂದಲೂ ಬಳಸಿಕೊಳ್ಳುವುದು ಗಮನೀಯ. ಅಂದರೆ ಆ ದೇವತೆಯ ಮೂಲರೂಪವನ್ನು ಈ ಔನ್ನತ್ಯವಾದ ರೂಪದೊಂದಿಗೆ ಅತ್ಯಂತ ಗೌಣವಾಗಿ ಸಂಬಂಧ ಕಲ್ಪಿಸುವುದಷ್ಟೇ ಅಲ್ಲ, ಆ ಮೂಲ ದೇವತೆಗೆ ಈ ಹೊಸ ಉಪಾಸನಾ ಕೇಂದ್ರದ ಒಂದು ಮೂಲೆಯಲ್ಲಿ ಜಾಗ ಮಾಡಿಕೊಡುವುದಕ್ಕೆ ಕೂಡಾ ಮರೆಯುವುದಿಲ್ಲ. ಲಂಜಿಕೆ (ಲಜ್ಜಾಗೌರಿ)ಯ ವಿಚಾರದಲ್ಲಿಯೂ ಈ ಎಲ್ಲವೂ ಕ್ರಮಬದ್ಧವಾಗಿ ಆಗಿದೆ ಎಂಬುದು ಸ್ಪಷ್ಟ.

ಮಹಾಕೂಟದ ಲಂಜಿಕೆಯ ರಹಸ್ಯವನ್ನು ಅರಿಯುವ ಪ್ರಯತ್ನದಲ್ಲಿ ಪುನಃ ಒಮ್ಮೆ ಅತ್ಯಂತ ಪ್ರಕರ್ಷಕವಾದ ಒಂದು ಅನುಭವವು ಬಂದಿತು. ಅದೆಂದರೆ ವಸ್ತು ಸಂಗ್ರಹಾಲಯದ ಆವರಣದಲ್ಲಿಯೋ ಇಲ್ಲವೆ ಮೇಜಿನ ಮೇಲೆಯೋ ಬಂದು ಬಿದ್ದಿರುವ ಛಾಯಾಚಿತ್ರಗಳಿಂದ ಯಾವುದೇ ದೇವತೆಯ ಆಂತರ್ಯವನ್ನು ಕೈಗೆಟುಕಿಸಿಕೊಳ್ಳಲಾಗುವುದಿಲ್ಲ. ಜನರ ಶ್ರದ್ಧೆಯನ್ನು ವ್ಯಾಪಿಸಿರುವಂತಹ ದೇವತೆಗಳ ಅಂತರಂಗದರ್ಶನವನ್ನು ಪಡೆಯುವುದಕ್ಕೆ ಈ ಶ್ರದ್ಧೆಯ ಅಭಿವ್ಯಕ್ತಿ ಸ್ವರೂಪದ ಹಳತು ಹೊಸತುಗಳ ಎಲ್ಲ ಸಮಗ್ರ ಮಾಧ್ಯಮಗಳನ್ನು ಶೋಧಿಸಬೇಕಾದ್ದು ಅವಶ್ಯ. ಸಂಶೋಧಕರು ನಿತ್ಯವು ಮನಸ್ಸಿನಲ್ಲಿ ಜಪಿಸಬೇಕಾದ ವಿಚಾರವಿದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] The Sakta pithas: by Dr. D.C. Sircar, p.32.(Reprint from the Journal of the Royal Asiatic society of Bengal vol.XIV, No. 1.1948)

[2] Sources of karnataka History: Vol.I: Ed.by.S. Srikantha shastri, Mysore, 1940, pp.36 – 37.

[3] ‘ಸಬಳಾಪ್ರತಿ ಜೋ ಕೋಟಗಾ |’ (ಗ್ರಂಥರಾಜ, ೩.೧೦೭) ಮತ್ತು ‘ಸ್ವಯಂಹಿ ಕಥಿತೋಂ, ನಸೇ ತಿಳಹಿ ಲಾಜ, ಮೀ ಕೋಟಿಗಾ |’ (ಕೇಶಾವಲಿ.೧೭)