ನಗ್ನ ದೇವಿಯ ಉಪಾಸನೆಯ ಕೇಂದ್ರವಾದ ಮಹಾಕೂಟದಂತೆಯೇ ಮತ್ತೊಂದು ಮಹತ್ವದ ಕೇಂದ್ರವಾಗಿದೆ ಅಲಂಪುರ. ಹಳೆಯ ಹೈದರಾಬಾದ್ ಸಂಸ್ಥಾನದ ರಾಯಚೂರು ಜಿಲ್ಲೆಯ ನಂದಿ ಕೋಟಕೂರು ತಾಲೂಕಿನಲ್ಲಿದ್ದ ಊರಿದು. ಆಂಧ್ರಪ್ರದೇಶ ರಾಜ್ಯದ ನಿರ್ಮಾಣವಾದ ಮೇಲೆ ಆಡಳಿತ ವಿಭಾಗದ ಪುನಾರಚನೆಯಾಯಿತು. ಆಲಂಪುರವು ಅದೇ ಹೆಸರಿನ ತಾಲೂಕಾಗಿ ಮೆಹಬೂಬ್‌ ನಗರ ಜಿಲ್ಲೆಯಲ್ಲಿ ಸೇರಿಕೊಂಡಿತು. ತುಂಗಭದ್ರಾ ಹಾಗೂ ಕೃಷ್ಣಾ ನದಿಯ ಸಂಗಮ ಸ್ಥಳಕ್ಕೆ ಹತ್ತಿರವಾಗಿರುವ ಇದು ಇರುವುದು ತುಂಗಭದ್ರೆಯ ಪಶ್ಚಿಮಕ್ಕೆ. ಮೆಹಬೂಬ್‌ ನಗರ ಜಿಲ್ಲೆಯ ಕೊನೆಯಲ್ಲಿರುವ ಇದಕ್ಕೆ ಕರ್ನೂಲ್ ಜಿಲ್ಲೆಯ ಸರಹದ್ದು ತಾಗಿ ಕೊಂಡಿದೆ. ಹೈದರಾಬಾದ್ ಮತ್ತು ಬೆಂಗಳೂರು ನಡುವಣ ರೈಲು ಮಾರ್ಗದಲ್ಲಿ ಆಲಂಪುರ ರೋಡ್ ಎಂಬ ಸ್ಟೇಶನ್ ಇದೆ. ಸ್ಟೇಶನ್‌ನಿಂದ ಆರು ಮೈಲುಗಳ ಅಂತರದಲ್ಲಿದೆ ಈ ಊರು.

ಭಕ್ತರು, ತತ್ತ್ವಜ್ಞಾನಿಗಳು ಮತ್ತು ಕಲಾರಸಿಕರಿಗೆ ಇದೊಂದು ಆಕರ್ಷಕ ಸ್ಥಳ. ಈ ಊರನ್ನು ಶ್ರೀಶೈಲ ಕ್ಷೇತ್ರದ ಪಶ್ಚಿಮ ದ್ವಾರವೆಂದೂ ಗುರುತಿಸಲಾಗುತ್ತಿದೆ. ಮಹಾತ್ಮೆಯ ದೃಷ್ಟಿಯಿಂದ ಇದನ್ನು ದಕ್ಷಿಣ ಕಾಶಿ ಎಂದೂ ಹೇಳಲಾಗಿರುವುದುಂಟು. ಅಲ್ಲದೆ ಸ್ಥಳ ಪುರಾಣದಲ್ಲಿ ಇದನ್ನು ಕಾಶಿಯೊಂದಿಗೆ ತುಲನೆ ಮಾಡಿ ಈ ಸ್ಥಾನದ ಮಹಿಮೆಯನ್ನು ಅತ್ಯಂತ ಉತ್ಕಟತೆಯಿಂದ ಬಣ್ಣಿಸಲಾಗಿದೆ:

ಬ್ರಹ್ಮೇಶೋsಯಂ ಸ ವಿಶ್ವೇಶಃ ಸಾ ಕಾಶೀ ಹೇಮಲಾಪುರೀ |
ಸಾ ಗಂಗಾ ತುಂಗ ಭದ್ರೇತಿ ಸತ್ಯಮೇತನ್ನ ಸಂಶಯಃ ||

[ಹೇಮಲಾಪುರಿ (ಅಂದರೆ ಆಲಂಪುರಿ)ಯು ಕಾಶಿಯೇ ಹೌದು; ಅಲ್ಲಿನ ಬ್ರಹ್ಮೇಶರನೇ ವಿಶ್ವೇಶ್ವರ. ಇನ್ನು ತುಂಗಭದ್ರಾ ನದಿಯು ಗಂಗೆಯೇ ಹೌದು ಎಂಬುದಿದು ಸಂಶಯ ರಹಿತವಾದ ಸತ್ಯ.]

ಇಲ್ಲಿ ಶಿಲ್ಪ ಸೌಂದರ್ಯದಿಂದ ಕೂಡಿದ ಅನೇಕ ಮಂದಿರಗಳಿವೆ. ದೇವಿಯ ಅನೇಕ ಮೂರ್ತಿಗಳಂತೂ ಕಣ್ಮನ ಸೆಳೆಯುವಂತಹವು. ಮೌನವನ್ನು ಮುರಿಯುವಂತಹ ಅನೇಕ ಮಹತ್ವಯುತವಾದ ಶಿಲಾಶಾಸನಗಳೂ ಇಲ್ಲಿವೆ. ಇಲ್ಲಿನ ಮಂದಿರಗಳು ಎರಡು ಸಮೂಹದಲ್ಲಿವೆ: ಒಂದು ‘ನವ ಬ್ರಹ್ಮೇಶ್ವರ ಮಂದಿರ ಸಮೂಹ’ ಹಾಗೂ ಮತ್ತೊಂದು ‘ಪಾಪನಾಥ ಮಂದಿರ ಸಮೂಹ’. ಪಾಪನಾಥ ಮಂದಿರವು ಊರಿನ ದಕ್ಷಿಣ ಭಾಗಕ್ಕೆ ಒಂದು ಮೈಲು ಅಂತರದಲ್ಲಿರುವ ತುಂಗಭದ್ರೆಯ ಬಲದಂಡೆಯ ಮೇಲಣ ಒಂದು ದಟ್ಟವಾದ ಅರಣ್ಯದಲ್ಲಿದೆ. ಆದರೆ ಆಲಂಪುರದ ಮಾಹಾತ್ಮ್ಯೆಯ ದೃಷ್ಟಿಯಿಂದ ನೋಡಿದಾಗ ಇದಕ್ಕಿರುವ ಮಹತ್ವಗೌಣವಾದುದು. ಅಂತೆಯೇ ವಾಸ್ತುಶಿಲ್ಪದ ದೃಷ್ಟಿಯಿಂದಲೂ ಅದು ಸಾಧಾರಣವಾದುದೇ. ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ಸಂಗಮ ಸ್ಥಳದಲ್ಲಿರುವ ಸಂಗಮೇಶ್ವರ ಮಂದಿರವು ಇಂದಿನ ಕರ್ನೂಲ್ ಜಿಲ್ಲೆಯ ನಂದಿ ಕೋಟಕೂರು ತಾಲೂಕಿನ ಸಂಗಮೇಶ್ವರ ಎಂಬ ಗ್ರಾಮದಲ್ಲಿದ್ದು ಅತ್ಯಂತ ದೈನ್ಯ ಸ್ಥಿತಿಯಲ್ಲಿದೆ. ಇದನ್ನು ಕೂಡ ಆಲಂಪುರದ ಪ್ರಾಗ್ವೈಭವದ ಒಂದು ಭಾಗವೆಂದೇ ಒಪ್ಪಬೇಕಾಗುತ್ತದೆ.

ನವಬ್ರಹ್ಮೇಶ್ವರ ಮಂದಿರ ಸಮೂಹವೇ ಇಲ್ಲಿಯ ಪ್ರಮುಖ ಮಂದಿರ. ಧರ್ಮದೃಷ್ಟಿ ಹಾಗೂ ಶಿಲ್ಪದೃಷ್ಟಿಗಳಿಂದ ಮಹಾಕೂಟದ ನವಲಿಂಗ ಮಂದಿರದಂತೆಯೆ ಇಲ್ಲಿನ ಒಂಬತ್ತು ಮಂದಿರಗಳೂ ಒಂದೇ ಚಿಕ್ಕ ಆವರಣದಲ್ಲಿ ಕಟ್ಟಿರುವ ಭವ್ಯ ಪ್ರಾಕಾರದಲ್ಲಿವೆ. ಈ ನವ ಮಂದಿರಗಳ ಸಮೂಹವನ್ನು ನವಬ್ರಹ್ಮೇಶ್ವರ ಇಲ್ಲವೆ ನವಲಿಂಗೇಶ್ವರ ಎಂಬ ಸಮೂಹ ದರ್ಶಕ ಹೆಸರಿನಿಂದ ಕರೆಯಲಾಗಿದೆ. ಮಹಾಕೂಟದಲ್ಲಿ ಹೇಗೆ ಲಜ್ಜಾಗೌರೀಶ್ವರ ಅಥವಾ ಮಹಾಕೋಟೇಶ್ವರನ ಮಂದಿರವು ಮುಖ್ಯವಾಗಿರುವುದೋ ಹಾಗೆಯೇ ಇಲ್ಲಿಯೂ ಮಧ್ಯಭಾಗದಲ್ಲಿರುವ ಬಾಲಬ್ರಹ್ಮೇಶ್ವರನ ಮಂದಿರವು ಪ್ರಮುಖವಾಗಿದೆ. ಉಳಿದ ಅಷ್ಟ ಶಿವಮಂದಿರಗಳೆಂದರೆ ಕುಮಾರಬ್ರಹ್ಮ, ಅರ್ಕಬ್ರಹ್ಮ, ವೀರಬ್ರಹ್ಮ, ವಿಶ್ವಬ್ರಹ್ಮ, ತಾರಕಬ್ರಹ್ಮ, ಗರುಡ ಬ್ರಹ್ಮ, ಸ್ವರ್ಗಬ್ರಹ್ಮ ಮತ್ತು ಪದ್ಮಬ್ರಹ್ಮ.

ಬಾಲಬ್ರಹ್ಮೇಶ್ವರನನ್ನು ಬರಿಯ ‘ಬ್ರಹ್ಮೇಶ್ವರ’ ಎಂದೂ ಕರೆಯಲಾಗುತ್ತದೆ. ಈ ಶಿವ ಮಂದಿರದಿಂದಾಗಿ ಆಲಂಪುರಕ್ಕೆ ಬ್ರಹ್ಮೇಶ್ವರ ಕ್ಷೇತ್ರ ಅಥವಾ ನವಬ್ರಹ್ಮೇಶ್ವರ ಕ್ಷೇತ್ರ ಎಂಬ ಮತ್ತೊಂದು ಅಭಿದಾನವೂ ಪ್ರಾಪ್ತವಾಗಿದೆ.

ಬಾಲಬ್ರಹ್ಮೇಶ್ವರನ ಹತ್ತಿರದಲ್ಲಿಯೇ ಜೋಗುಳಾಂಬಾ ಎಂಬ ದೇವಿಯ ತಾಣವೊಂದುಂಟು. ಇವಳು ಬಾಲಬ್ರಹ್ಮೇಶ್ವರನ ಅರ್ಧಾಂಗಿನಿ. ಇವಳನ್ನು “ಯೋಗಿನಿ” ಎಂಬ ಸಂಸ್ಕೃತ ಹೆಸರಿನಿಂದಲೂ ಕರೆಯುತ್ತಾರೆ. ಇವಳ ರೂಪವು ಬಹಳ ಉಗ್ರ.[1] ಇದಲ್ಲದೆ ಇಲ್ಲಿನ ಶಿಲ್ಪ – ಸಮೂಹದಲ್ಲಿ ಮಹಿಷ ಮರ್ದಿನಿಯ ಹತ್ತು – ಹನ್ನೆರಡು ಸುಂದರವಾದ ಮೂರ್ತಿಗಳಿವೆ.[2]

ನಗ್ನದೇವಿಯ ಮೂರ್ತಿ:

ನವಲಿಂಗೇಶ್ವರ ಮಂದಿರ ಪ್ರಾಕಾರದಲ್ಲಿನ ಒಂದು ದೇವಾಲಯದಲ್ಲಿ ಮಹಾಕೂಟದ ದೇವಿಯಂತಹದ್ದೇ ಆದರೆ ಗಾತ್ರದಲ್ಲಿ ಅದಕ್ಕಿಂತಲೂ ದೊಡ್ಡದಾದ ಮತ್ತು ಹೆಚ್ಚು ಸುಂದರವಾದ ಮೂರ್ತಿ ಇತ್ತು. ಬಹುಶಃ ಈ ಮೂರ್ತಿಯು ಈಗ ಸಂಗ್ರಹಾಲಯದಲ್ಲಿ ವಿರಾಜಮಾನವಾಗಿರುವಂತೆ ತೋರುತ್ತದೆ. ಶ್ರೀಮತಿ ಸ್ಟೆಲ್ಲಾ ಕ್ರಾಮರಿಶ್‌ ಅವರು ತಮ್ಮ ಬರಹದಲ್ಲಿ ಸಂಗ್ರಹಾಲಯಸ್ಥ ಮೂರ್ತಿಯೆಂದು ಹೇಳಿರುವುದು ಇದನ್ನೇ. ಆಲಂಪುರದ ಪ್ರಾಚೀನ ಅವಶೇಷಗಳ ಕಡೆಗೆ ಹಾಗೂ ಈ ವಿಶಿಷ್ಟ ದೇವೀ ಮೂರ್ತಿಯೆಡೆಗೆ ಅಧ್ಯಯನಾಸಕ್ತರ ಗಮನ ಸೆಳೆವ ಪ್ರಯತ್ನವನ್ನು ಮೂವತ್ತು ವರ್ಷಗಳ ಹಿಂದೆಯೇ ಡಾ. ಪಾಂಡುರಂಗ ದೇಸಾಯಿಯವರು ಮಾಡಿದ್ದರು. ಅವರು ಆಲಂಪುರದ ಶೋಧಯಾತ್ರೆಯ ನಂತರ ಒಂದು ಸಂಕ್ಷಿಪ್ತವೂ ಮಹತ್ವಪೂರ್ಣವೂ ಆದ ಟಿಪ್ಪಣಿಯನ್ನು ಬರೆದಿದ್ದು, ಅದು ಮೈಸೂರು ವಿಶ್ವವಿದ್ಯಾನಿಲಯದ ಮುಖವಾಣಿಯೆನಿಸಿದ್ದ ‘ಪ್ರಬುದ್ಧ ಕರ್ನಾಟಕ‘ದಲ್ಲಿ ೧೯೪೩ರಲ್ಲಿಯೇ ಪ್ರಕಟಗೊಂಡಿತ್ತು. ಅವರು ತಾವು ಈ ಮೂರ್ತಿಯನ್ನು ನವಲಿಂಗೇಶ್ವರ ಮಂದಿರದ ಪ್ರಾಕಾರದಲ್ಲಿಯೇ ನೋಡಿದ್ದುದಾಗಿ ಹೇಳಿದ್ದಾರೆ: “ಅಂಗಾತ ಮಲಗಿದ್ದ ಸ್ತ್ರೀ ಮೂರ್ತಿ. ಸ್ಥೂಲ ಅವಯವ. ಮೂಲತಃ ತಲೆಯಿಲ್ಲದಿದ್ದ ಇದು ನಗ್ನರೂಪದಲ್ಲಿತ್ತು. ಸಂತತಿ ಅಪೇಕ್ಷಿಯ ಸ್ತ್ರೀಯರು ಅದನ್ನು ಪೂಜಿಸುತ್ತಿದ್ದರು. ಸ್ಥಳೀಯರ ನಂಬಿಕೆಯ ಪ್ರಕಾರ ಈ ಮೂರ್ತಿಯು ರೇಣುಕಾದೇವಿ. ಅವಳ ಶಿರವು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಎಲ್ಲಮ್ಮ ದೇವಿಯ ರೂಪದಲ್ಲಿದೆ ಎಂದು ಭಾವಿಸಲಾಗಿದೆ.”[3]

ಡಾ. ದೇಸಾಯಿಯವರು ಇಂಥದ್ದೆ ಇನ್ನೊಂದು ಮೂರ್ತಿಯನ್ನು ಅದಕ್ಕೆ ಸಮೀಪದಲ್ಲಿರುವ ಸಂಗಮೇಶ್ವರದಲ್ಲಿನ (ತಾಲೂಕ್ – ನಂದಿ ಕೋಟಕೂರ, ಜಿಲ್ಲಾ೦ – ಕರ್ನೂಲ್) ಸಂಗಮೇಶ್ವರ ಮಂದಿರದಲ್ಲಿ ಇಡಲಾಗಿತ್ತು. ಅದನ್ನು ನೋಡಿರುವ ಅವರು ತಾವು ಕಣ್ಣಾರೆ ಕಂಡುದನ್ನು ವರ್ಣನೆ ಮಾಡಿರುವ ರೀತಿ ಇಂತಿದೆ: “ಆಕೆಯದು ನಗ್ನರೂಪ. ಮುಖ್ಯವಾಗಿ ಯೋನಿ ಭಾಗ ಎದ್ದು ಕಾಣಬೇಕೆಂಬ ಕಾರಣದಿಂದ ಕಾಲುಗಳನ್ನು ಅತ್ತಿತ್ತ ಮಡಿಚಿಕೊಂಡಿದ್ದಾಳೆ. ಆಕೆಗೂ ಶಿರವಿಲ್ಲ. ಬದಲಾಗಿ ಶಿರದ ಭಾಗದಲ್ಲಿ ಎತ್ತಿನ ಗಾಡಿಯ ಚಕ್ರದಂತಹ ಒಂದು ಚಕ್ರವಿದೆ. ಅವಳನ್ನು ‘ಭೂದೇವಿ’ ಎಂದು ಕರೆಯಲಾಗುತ್ತದೆ. ಸ್ತ್ರೀಯರು ಸಂತಾನ ಪ್ರಾಪ್ತಿಯ ಹಂಬಲದಿಂದ ಅವಳನ್ನು ಪೂಜಿಸುತ್ತಾರೆ. ಇದನ್ನೆಲ್ಲ ಹೇಳಿದವನು ಸ್ಥಳೀಯ ಜನರೇ”.[4]

ಆಲಂಪುರದಲ್ಲಿನ ಸಂಗ್ರಹಾಯದಲ್ಲಿರುವ ಮೂರ್ತಿಯನ್ನು ಕುರಿತಂತೆ ಶ್ರೀಮತಿ ಕ್ರಾಮರಿಶ್ ಅವರು ‘An Image of Aditi Uttanapada’ ಎಂಬ ಶೀರ್ಷಿಕೆಯಲ್ಲಿ ಒಂದು ಹೃದಯಂಗಮ ಲೇಖನವನ್ನು ಬರೆದಿದ್ದಾರೆ.[5] ಆದರೆ ಆ ಮೂರ್ತಿಯ ಶಿರದ ಭಾಗದಲ್ಲಿರುವುದು ಅರಳಿದ ಕಮಲವಾದರೆ, ಆ ಮೂರ್ತಿಯ ಕೈಲಿಯಲ್ಲಿರುವುದು ಕಮಲದ ಮೊಗ್ಗು.

ಸ್ಥಳ ಮಹಾತ್ಮ್ಯೆಯಲ್ಲಿನ ಕಥೆ:

ಆಲಂಪುರದ ಸ್ಥಳ ಮಹಾತ್ಮ್ಯೆಯಲ್ಲಿ ಈ ದೇವಿಯನ್ನು ಕುರಿತ ಕಥೆಯಿದೆ. ಸಂಸ್ಕೃತ ಭಾಷೆಯಲ್ಲಿರುವ ಇದು ಐದು ಅಧ್ಯಾಯಗಳುಳ್ಳದ್ದಾಗಿದ್ದು, ಸ್ಕಂದಪುರಾಣದಲ್ಲಿಯೂ ಇದು ಅಂತರ್ಗತವಾಗಿದೆ ಎನ್ನಲಾಗಿದೆ. ಈ ಮಾಹಾತ್ಮ್ಯೆಕೃತಿಯಲ್ಲಿ ಆಲಂಪುರದಲ್ಲಿನ ಬ್ರಹ್ಮೇಶ್ವರಾದಿ ದೇವದೇವತೆಗಳು ಹಾಗೂ ಪಾಪವಿನಾಶ ತೀರ್ಥ. ಗಣಿಕಾ ಸಿದ್ದೇಶ್ವರ ತೀರ್ಥ. ರಾಜರಾಜೇಶ್ವರ ತೀರ್ಥ ಇತ್ಯಾದಿ ತೀರ್ಥಗಳನ್ನು ಕುರಿತಂತೆ ಅತ್ಯಂತಸವಿಸ್ತರವಾಗಿ ಬಣ್ಣಿಸಲಾಗಿದೆ.

ನಗ್ನದೇವಿಯನ್ನು ಕುರಿತಂತೆ ಈ ಸ್ಥಳ ಪುರಾಣದಲ್ಲಿ ಬಂದಿರುವ ಕಥೆಯು ವಿಶೇಷ ಚಿಂತನೀಯವಾಗಿದೆ:[6] ರೇಣುಕಾ ಎಂಬಾಕೆಯು ಜಮದಗ್ನಿ ಋಷಿಯ ಪತಿವ್ರತಾ ಪತ್ನಿ. ನಿತ್ಯವೂ ತನ್ನ ಪತಿಯ ಪೂಜೆ – ಅರ್ಚನೆಗಾಗಿ ಬೇಕಾಗುವ ನೀರನ್ನು ತುಂಗಭದ್ರ ನದಿಯಿಂದ ಕಚ್ಛಾ ಮಣ್ಣಿನ ಕೊಡದಲ್ಲಿ ತರುತ್ತಿದ್ದಳು. ನದಿಗೆ ಹೋಗುವುದು ಅದರ ದಡದಲ್ಲಿಯ, ಕೆಸರನ್ನು ತೆಗೆದುಕೊಂಡು ಕೊಡವನ್ನು ಮಾಡುವುದು. ಆ ತಾಜಾ ಕೊಡದಲ್ಲಿ ನೀರನ್ನು ತುಂಬಿಕೊಂಡು ಆಶ್ರಮಕ್ಕೆ ಬರುವುದು ಅವಳ ನಿತ್ಯದ ಕ್ರಮವಾಗಿತ್ತು. ಅವಳ ಪಾತಿವ್ರತ್ಯದ ಸಾಮರ್ಥ್ಯದಿಂದಾಗಿ ಆ ಹಸಿ ಮಣ್ಣಿನ ಕೊಡದಿಂದ ಒಂದು ತೊಟ್ಟಷ್ಟೂ ನೀರು ಒಸರುತ್ತಿರಲಿಲ್ಲ, ಮಣ್ಣು ಕರಗುತ್ತಲೂ ಇರಲಿಲ್ಲ.

ಒಂದು ದಿನ ಮಾತ್ರ ಅವಳಿಗೆ ಆ ಸಾಮರ್ಥ್ಯ ಇಲ್ಲವಾಯಿತು. ಕಾರಣ ಆ ದಿನ ತುಂಬ ಭದ್ರೆಯ ಜಲರಾಶಿಯಲ್ಲಿ ಒಬ್ಬ ರಾಜನು ತನ್ನ ಸುಂದರಳಾದ ತರುಣಿ ಪತ್ನಿಯೊಂದಿಗೆ ಜಲ ಕ್ರೀಡೆಯಾಡುತ್ತಿದ್ದನು. ಆ ದೃಶ್ಯ ಕಂಡೊಡನೆ ರೇಣುಕಾಳ ಚಿತ್ತವು ಒಂದು ಕ್ಷಣ ವಿಚಲಿತವಾಯಿತು. ಈ ಮಾನಸಿಕ ಸ್ಖಲನದ ಪರಿಣಾಮವಾಗಿ ಅವಳಿಗೆ ಹಸಿ ಮಣ್ಣಿನಿಂದ ಹೊಸ ಕೊಡವನ್ನು ಮಾಡುವುದಾಗಲಿಲ್ಲ.

ಆ ಕಾರಣ ಹತಾಶಳಾದ ಆಕೆ ಬರಿಗೈಯಲ್ಲಿ ಆಶ್ರಮಕ್ಕೆ ಹಿಂದಿರುಗಿ ಬಂದಳು. ನಡೆದುದನ್ನೆಲ್ಲ ಆಗಲೇ ಗ್ರಹಿಸಿದ್ದ ಕೋಪಿಷ್ಠ ಪತಿಯು ತನ್ನ ಮಕ್ಕಳನ್ನು ಒಬ್ಬೊಬ್ಬರಾಗಿ ಕರೆದು ಅವಳ ಶಿರಚ್ಛೇದನಕ್ಕೆ ಆಜ್ಞೆ ಮಾಡಿದನು. ಆದರೆ ಮೊದಲ ಮೂವರು ಮಕ್ಕಳು ಮಾತೃಹತ್ಯಾ ಭೀಷಣ ಕಾರ್ಯವನ್ನು ನಿರಾಕರಿಸಿದರು. ಕೊನೆಯವನಾದ ಪರಶುರಾಮನು ಮಾತ್ರ ಪಿತನ ಆಜ್ಞೆಯನ್ನು ಪಾಲಿಸಿದನು. ತನ್ನ ಆಜ್ಞಾಧಾರಿತ ಕೃತಿಶೀಲ ಪುತ್ರನ ಮೇಲೆ ಪ್ರಸನ್ನನಾದ ಜಮದಗ್ನಿಯು ಏನಾದರೂ ವರ ಕೇಳುವಂತೆ ಹೇಳಿದನು. ಇದೇ ಸಮಯವೆಂದು ಪರಶುರಾಮನು ತನ್ನ ಮಾತೆಯನ್ನು ಬದುಕಿಸಿ ಕೊಡಬೇಕೆಂಬ ವರವನ್ನು ಕೇಳಿದನು. ಅದನ್ನು ಕೇಳಿದ ಜಮದಗ್ನಿ ತಲೆಯಲ್ಲಾಡಿಸುತ್ತಾ ಹೀಗೆ ಹೇಳಿದ: “ವತ್ಸಾ, ನಿನ್ನ ತಾಯಿ ಈಗ ಮುಂಚಿ ನಂತೆ ಆಗುವುದು ಅಸಾಧ್ಯ. ಕಾರಣ ನೀನು ಹಾರಿಸಿದ ಅವಳ ಶಿರವು ಹಾರಿ ಬಿದ್ದುದು ಅತ್ಯಂತ ಅಪವಿತ್ರವಾದ ಜಲದಲ್ಲಿ (ಚಮ್ಮಾರನ ಅಂಗಡಿಯ ನೀರಿನ ತೊಟ್ಟಿಯಲ್ಲಿ). ಹಾಗಾಗಿ ಅದನ್ನು ಅವಳ ದೇಹದೊಂದಿಗೆ ಏಕರೂಪಗೊಳಿಸುವುದು ಸರಿಯಲ್ಲ. ಆದರೆ ಇಷ್ಟು ಮಾತ್ರ ಸಾಧ್ಯವಾಗಬಹುದು. ಅದೆಂದರೆ ಎಲ್ಲಾ ಜನರೂ ಅವಳ ಶಿರವನ್ನು ‘ಎಲ್ಲಮ್ಮ’ ಎಂಬ ಹೆಸರಿನಿಂದ ಉಪಾಸಿಸುವರು. ಅವಳ ದೇಹವು ‘ಭೂದೇವಿ’ ಎಂಬ ಹೆಸರಿನಿಂದ ಖ್ಯಾತಿ ಪಡೆಯುವುದು.” ಜಮದಗ್ನಿ ನೀಡಿದ ಈ ವರದಿಂದಾಗಿ ಆಲಂಪುರದಲ್ಲಿ ರೇಣುಕೆಯ ಶಿರವು ‘ಎಲ್ಲಮ್ಮ‘ಳಾಗಿ ಪ್ರತಿಷ್ಠಾಪಿತವಾಯಿತು. ಅಂತೆ ಅವಳ ದೇಹವು ‘ಭೂದೇವಿ’ ಎಂಬ ಹೆಸರಿನಿಂದ ಪೂಜೆಗೊಳ್ಳತೊಡಗಿತು. ಈ ಎಲ್ಲಮ್ಮನೇ ಆಲಂಪುರದ ಗ್ರಾಮದೇವತೆ ಎನಿಸಿಕೊಂಡಿದ್ದಾಳೆ.

ಎಲ್ಲಮ್ಮ, ರೇಣುಕಾ ಮತ್ತು ಭೂದೇವಿ

ಎಲ್ಲಮ್ಮ ದಕ್ಷಿಣದಲ್ಲಿನ ದೇವಿ ರೇಣುಕೆಯ ಚರಿತ್ರೆಯನ್ನು ಹೊಂದಿದ್ದಾಳೆಂಬುದು ಈಗ ದಾಕ್ಷಿಣಾತ್ಯ ದೇವತೆಗಳ ಅಧ್ಯಯನಕಾರರಿಗೆ ಮಾನ್ಯವಾದ ವಿಷಯ. ಆಲಂಪುರ ಮತ್ತು ಸಂಗಮೇಶ್ವರದಲ್ಲಿನ ನಗ್ನ, ಶಿರೋಹೀನ ಮೂರ್ತಿಗಳನ್ನು ಸ್ಥಳ ಪುರಾಣಕಾರರು ಮತ್ತು ಸ್ಥಳೀಯ ಜನರು ಭೂದೇವಿಯೆಂದೇ ಕರೆದಿದ್ದಾರೆ. ಅದು ರೇಣುಕೆಯ ದೇಹವೇ ಎಂಬುದಾಗಿ ಜನರು ಒಪ್ಪಿಕೊಂಡಿರುವುದೂ ಸ್ಪಷ್ಟವಾಗಿದೆ.

ಸ್ಥಳ ಪುರಾಣದ ಕಥೆಯಲ್ಲಿ ಲೋಕಪ್ರತಿಭೆಯಿಂದ ತುಂಬಿಕೊಂಡಿರುವ ಅದ್ಭುತ ರಮ್ಯತೆಗಳನ್ನೆಲ್ಲ ದೂರ ಸರಿಸಿದರೆ ನಮಗೆ ಕೆಲವಾರು ಅಂಶಗಳು ಸ್ಪಷ್ಟವಾಗಿ ಕಾಣಸಿಗುತ್ತವೆ. ಅದೆಂದರೆ ಯಾವ ದೇವಿಯನ್ನು ಕೇವಲ ಅಕ್ಕಿಯ (ತಾಂಡಳ್ಯಾ) ರೂಪದಲ್ಲಿ ಪೂಜಿಸಲಾಗುತ್ತಿದೆಯೋ, ಅದೇ ದೇವಿಯ ಯೋನಿಮೂರ್ತಿಯನ್ನು ರೂಪಿಸಲಾಗುತ್ತಿತ್ತು. ಅವಳಿಗೆ ಪ್ರಾಕೃತದಲ್ಲಿ ಎಲ್ಲಮ್ಮ, ಸಂಸ್ಕೃತದಲ್ಲಿ ರೇಣುಕಾ ಎಂಬ ಹೆಸರುಗಳಿವೆ. ಏನೇ ಹೆಸರಿರಲಿ, ಅವಳಂತೂ ಭೂದೇವಿಯೇ ಎಂಬುದು ಜನರ ಮನಸ್ಸಿನೊಳಗಿನ ಶ್ರದ್ಧೆಯ ವಿಚಾರ. ಅಲ್ಲದೆ ಸ್ತ್ರೀಯರು ತಮಗೆ ಸಂತಾನ ಪ್ರಾಪ್ತಿಯಾಗಬೇಕೆಂದು ಅತ್ಯಂತ ಭಕ್ತಿ, ನಿಷ್ಠೆಯಿಂದ ಪೂಜಿಸುತ್ತಲೇ ಬಂದಿದ್ದಾರೆ ಅವಳನ್ನು. ಎಲ್ಲಮ್ಮ, ರೇಣುಕಾ ಮತ್ತು ಭೂದೇವಿ – ಈ ಮೂರೂ ಹೆಸರುಗಳು ಪರ್ಯಾಯವಾಗಿ ಬಳಕೆಯಾಗಿರುವುದು ಒಬ್ಬ ದೇವಿಯನ್ನು ಉದ್ದೇಶಿಸಿಯೇ. ಅವಳ ಮೂರ್ತಿಯ ಶಿರೋ ಹೀನತೆಯ ಸ್ವರೂಪದ ಸ್ಪಷ್ಟೀಕರಣಕ್ಕಾಗಿಯೇ ಶಿರಚ್ಛೇದನ ಕಥೆಯು ನಿರ್ಮಿತವಾಗಿರುವುದು ಎಂಬುದಂತೂ ಸುಸ್ಪಷ್ಟ.

ಆಲಂಪುರದ ನಾಮರಹಸ್ಯ

ಆಲಂಪುರ ಇಲ್ಲವೆ ಆಲಮಪುರ ಎಂಬ ಈ ಸ್ಥಾನದ ಹೆಸರು ಅನೇಕ ಬಗೆಯಲ್ಲಿ ಉಲ್ಲೇಖಗೊಂಡಿದೆ. ರಾಷ್ಟ್ರಕೂಟರ ದೊರೆ ಮೂರನೆಯ ಗೋವಿಂದನು ತನ್ನ ಒಂದು ತಾಮ್ರಪಟದಲ್ಲಿ (ಶಕ.೭೨೫) ಅದನ್ನು ‘ಆಲಂಪುರ’ ಎಂದು ಕರೆದಿದ್ದಾನೆ.[7] ಅದರೆ ಅವನ ಮಗ ಅಮೋಘ ವರ್ಷನು ತನ್ನ ಮತ್ತೊಂದು ತಾಮ್ರ ಪಟದಲ್ಲಿ (ಶಕ. ೭೯೩) ಇದನ್ನು ಹೆಸರಿಸಿರುವುದು ‘ಹೇಲಾಪುರ’ ಎಂಬುದಾಗಿ.[8] ಕಾಕತೀಯ ರಾಜ ಪ್ರತಾಪರುದ್ರನ ಆಲಂಪುರ ಶಾಸನದಲ್ಲಿ (ಶಕ. ೧೨೨೫) ಈ ಸ್ಥಾನಕ್ಕೆ ನಿರ್ದೇಶಿತವಾಗಿರುವ ರೂಪ ‘ಆಲಂಪುರೀ’?[9] ಈ ಶಾಸನದ ಆರಂಭದಲ್ಲಿ ‘ಹತಂಪುರವರ ಪ್ರತೀತ ಮಹೋದಯಮ್’ ಎಂಬುದಾಗಿದೆಯೆಂದು ಶ್ರೀ ಪಿ.ಶ್ರೀನಿವಾಸಾಚಾರ್‌ರ ಅಭಿಪ್ರಾಯ. ಆದರೆ ಇದು ‘ಹಲಂಪುರ…’ ಎಂಬುದಾಗಿರಬೇಕು. ಶಾಸನ ‘ಹಲಂಪುರ‘ಕ್ಕೆ ಬದಲಾಗಿ ‘ಹತಂಪುರ’ ಎಂಬುದಾಗಿ ಕೆತ್ತಿರಬೇಕು ಎನ್ನಲಾಗಿದೆ. ಈ ಹಿನನೆಲೆಯಲ್ಲಿಯೇ ‘ಹತಂಪುರ‘ದ ಜಾಗದಲ್ಲಿ ‘ಹಲಂಪುರ’ ಇರಬೇಕೆಂದು ಸೂಚಿಸಿದವರು ಡಾ. ಪಾಂಡುರಂಗ ದೇಸಾಯಿಯವರು. ಸ್ಥಳಪುರಾಣದಲ್ಲಿ ಮಾತ್ರ ಆಲಂಪುರದಲ್ಲಿ ‘ಹೇಮಲಾಪುರಿ’ ಎಂದು ಹೇಳಿರುವುದನ್ನು ನಾನು ಗಮನಿಸಿದ್ದೇನೆ. ಇದು ಅಲಕಾಪುರೀ, ಅಲಕಾಪುರ ಎಂಬ ರೂಪಗಳಲ್ಲಿ ಸಂಸ್ಕೃತೀಕರಣಗೊಂಡಿರುವುದೂ ಕಂಡುಬರುತ್ತದೆ.

ಈ ಎಲ್ಲಾ ನಾನು ಪರ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸ್ಪಷ್ಟವಾಗಿ ಕಂಡು ಬರುವಂತಹ ಅಂಶವೆಂದರೆ ಹಲಂಪುರ, ಹೇಲಾಪುರ, ಹೇಮಲಾಪುರ ಇವುಗಳಲ್ಲಿ ಇರುವ ವ್ಯಂಜನವಾದ ‘ಹ’ ಅಕ್ಷರವು ವಿಶಿಷ್ಟ ಉಚ್ಚಾರ ಪ್ರವೃತ್ತಿಯ ಆವಿಷ್ಕಾರವಾಗಿದೆ. ಮೂಲದಲ್ಲಿ ಈ ಹೆಸರುಗಳೆಲ್ಲ ಅಲಂಪುರ, ಏಲಾಪುರ ಮತ್ತು ಏಲಮಪುರೀ (ವರ್ಣ ವಿಪರ್ಯಯದಿಂದಾಗಿ ಏಮಲಾಪುರಿ – ಹೇಮಲಾಪುರಿ) ಎಂಬುವುಗಳಾಗಿದ್ದಿರಬೇಕು. ಅಲಕಾಪುರ ಎಂಬ ಸಂಸ್ಕೃತೀಕರಣವನ್ನು ಸಹ ನಾವು ಹೀಗೆಯೇ ಅರ್ಥೈಸಬಹುದು. ಜ್ಞಾನದೇವನ ಆಳಂದೀ ಮತ್ತು ರಾಘವ ಚೈತನ್ಯನ ಆಳಂದವು ಅಲಕಾ, ಅಲಕಾವತಿ ಎಂಬುದಾಗಿ ಸಂಸ್ಕೃತೀಕರಣಗೊಂಡಿರುವ ಸಂಗತಿಯು ನಮ್ಮ ಕಣ್ಣೆದುರಿಗೇ ಇದೆ. ಹೀಗಿರುವಾಗ ಆಳಂದ – ಆಳಂದಿಗಳೊಂದಿಗೆ ಧ್ವನಿ ಸಾದೃಶ್ಯವಂತಹ ಆಲಂಪುರವು ಅಲಕಾಪುರ ಎಂದಾಗಿರುವುದರಲ್ಲಿ ಅಸ್ವಾಭಾವಿಕವಾದುದೇನೂ ಕಾಣುವುದಿಲ್ಲ.

ಈ ಹಿನ್ನೆಲೆಯಲ್ಲಿಯೇ ಆಲಂಪುರ, ಏಲಾಪುರ, ಏಲಮಾಪುರ ಎಂಬಿವೇ ಮೊದಲಾದ ಮೂಲ ಗ್ರಾಮನಾಮಗಳ ಪರ್ಯಾಯವು ನಮ್ಮೆದುರು ನಿಲ್ಲುತ್ತದೆ. ಈ ಪರ್ಯಾಯವು ನಿಜವಾಗಿಯೂ ಆಲಂಪುರದ ಗ್ರಾಮದೇವತೆಯಾಗಿರುವ ಎಲ್ಲಮ್ಮ ದೇವಿಯ ಹೆಸರಿನೊಂದಿಗೆ ಸಂಬಂಧ ಹೊಂದಿರುವಂತಿದೆ. ಮಾತ್ರವಲ್ಲ ಈ ಎಲ್ಲವೂ ಮೂಲದ “ಎಲ್ಲಮ್ಮಾಪುರ” ಎಂಬ ಹೆಸರಿನ ಉಚ್ಚಾರದ ಸುಲಭದ ಪರಿವರ್ತನಗಳಾಗಿವೆ ಎಂಬುದರಲ್ಲಿಯೂ ಸಂಶಯವಿಲ್ಲ.

ಆಲಾಪುರದ ಯುಗಲಾ ದೇವಿ

ಆಲಂಪುರ ಎಂಬ ಶಕ್ತನಾಮವು ಎಲ್ಲಮ್ಮ ದೇವಿಯೊಂದಿಗೆ ಸಂಬಂಧ ಹೊಂದಿರುವುದಾಗಿದೆ. ಎಲ್ಲಮ್ಮನೇ ಆಲಂಪುರದ ಪರಂಪರಾ ಪುನೀತ ಗ್ರಾಮದೇವತೆಯೆನಿಸಿರುವಳು. ಒಂದು ವೇಳೆ, ಇದು ನಿಜವಾಗಿದ್ದರೆ, ಶಕ್ತಿಪೀಠವಾಗಿ ಆಲಂಪುರವನ್ನು ಉಲ್ಲೇಖಿಸುವಾಗ ಶಕ್ತಿಯ ಉಪಾಸಕರು ದೇವಿಯ ‘ಎಲ್ಲಮ್ಮ’ ಎಂಬ ಹೆಸರನ್ನು ಸ್ವೀಕರಿಸಿರುವಂತೆ ಕಾಣುವುದಿಲ್ಲ. ಶಕ್ತಿಪೀಠದ ಗಣನೆಯಲ್ಲಿ ಆಲಂಪುರವೂ ಇದೆ. ಆದರೆ ಇದನ್ನು ಮೊದಲು ಉಲ್ಲೇಖಿಸಿದ ಕೀರ್ತಿಯು ಡಾ. ಪಾಂಡುರಂಗ ದೇಸಾಯಿಯವರಿಗೆ ಸಲ್ಲುತ್ತದೆ. ಅವರು ತಮ್ಮ ಈ ಮೊದಲು ಹೇಳಿದ ಲೇಖನವಲ್ಲದೆ, ‘Tantric Cult in Epigraphs’ ಎಂಬುದಲ್ಲಿಯೂ,[10] ಆಲಂಪುರದ ಶಕ್ತಿಪೀಠವನ್ನು ಸಾಧಾರವಾಗಿ ವಿವರಿಸಿದ್ದಾರೆ. ಅಷ್ಟಾದಶಪೀಠಂ ಎಂಬ ಹೆಸರಿನ ಹದಿನೆಂಟು ಶಕ್ತಿಪೀಠಗಳ ಸೂಚಿ ಕೊಡುವ ಸಂಸ್ಕೃತದ ಚಿಕ್ಕ ಪ್ರಕರಣವೊಂದು ಉಪಲಬ್ಧವಾಗಿದೆ.[11] ಇದು ಶಂಕರಾಚಾರ್ಯರ ಹೆಸರಿನಲ್ಲಿ ಇರುವುದಾದರೂ, ಅವರ ಉತ್ತರಕಾಲೀನದ್ದು ಎನಿಸುತ್ತದೆ. ಅದರಲ್ಲಿ ಆಲಂಪುರವನ್ನು ಒಂದು ಶಕ್ತಿಪೀಠವನ್ನಾಗಿ ಗುರುತಿಸಿ ಹೀಗೆ ವರ್ಣಿಸಲಾಗಿದೆ:

ಆಲಾಪುರೇ ಯುಗಲಾದೇವಿ ಶ್ರೀಶೈಲೇ ಭ್ರಮರಾಂಬಿಕಾ |
ಉಜ್ಜಯಿನ್ಯಾಂ ಮಹಾಕಾಲೀ ಮಾಹುರೇ ಏಕವೀರಕಾ ||

ಶಕ್ತಿಪೀಠಗಳ ವಿವಿಧ ಗಣನೆಗಳು ಹಾಗೂ ಪೀಠಸ್ಥಾನಗಳ ನಿಶ್ಚಿತತೆಯ ಸಂಬಂಧವಾಗಿ ಡಾ. ದಿನೇಶಚಂದ್ರ ಸರ್ಕಾರ ಅವರು ನೀಡಿರುವ ಸಂಶೋಧನ ಮಾಹಿತಿಗಳು ಅತ್ಯಂತ ಮಹತ್ವದುವಾಗಿವೆ.[12] ಅವರ ಸಂಶೋಧನೆಯಲ್ಲಿನ ಬಹುಮುಖ್ಯ ಅಂಶವೆಂದರೆ ಮಹಾಕೂಟ ಮತ್ತು ಆಲಂಪುರಗಳ ನಮೂದು. ಮಹಾಕೂಟದ ವಿಷಯವಾಗಿ ಈವರೆಗೆ ಯಾರೂ ಈ ದೃಷ್ಟಿಯಿಂದ ಶೋಧಿಸಿಲ್ಲ. ಆದರೆ ಆಲಂಪುರದ ಶಕ್ತಿಪೀಠ ಪ್ರತಿಷ್ಠಾನದ ಶೋಧವನ್ನು ಡಾ. ಪಾಂಡುರಂಗರಾವ್ ದೇಸಾಯಿಯವರು ಡಾ. ಸರಕಾರರಿಗಿಂತ ಮೊದಲೇ ಮಾಡಿದ್ದರು. ಆದರೆ ಆ ಕುರಿತ ಲೇಖನವು ಕನ್ನಡ ಭಾಷೆಯಲ್ಲಿದ್ದುದರಿಂದ ಡಾ. ಸರ್ಕಾರದ ಲಕ್ಷ್ಯವು ಆ ಕಡೆಗೆ ಹೋಗಿರಲಿಕ್ಕಿಲ್ಲ.

ಅಷ್ಟಾದಶ (ಹದಿನೆಂಟು) ಶಕ್ತಿಪೀಠಗಳ ಸೂಚಿಯಲ್ಲಿನ ಆಲಾಪುರ ಎಂಬುದು ಇಂದಿನ ಆಲಂಪುರವೇ ಆಗಿದೆ. ಅಂತೆಯೇ ಅಲ್ಲಿನ ಯುಗಲಾದೇವಿ ಎಂಬ ಶಕ್ತಿದೇವತೆ ಬ್ರಹ್ಮೇಶ್ವರನ ಅರ್ಧಾಂಗಿ ಎಂದೆನಿಸಿರುವ ಜೋಗುಳಾಂಬೆಯೇ. ಡಾ. ದೇಸಾಯಿಯವರು ಇದನ್ನು ಬಹಳ ಸೂಕ್ಷ್ಮವಾಗಿಯೇ ತಿಳಿಸಿದ್ದಾರೆ. ಈ ಹೆಸರಿನ ಸಂಸ್ಕೃತೀಕರಣ ರೂಪವೇ ಎಂಬುದು ಸುಸ್ಪಷ್ಟ.

ಮತ್ಸ್ಯಪುರಾಣದಲ್ಲಿ ಹೇಳಿರುವ ಶ್ರಾಧ್ಧಯೋಗ್ಯ ಸ್ಥಾನಗಳ ಸೂಚಿಯಲ್ಲಿ ಆಲಂಪುರವೂ ಬಂದಿದೆ; ಅದು ಹೀಗಿದೆ:

ಪುಣ್ಯಂ ರಾಮೇಶ್ವರಂ ತದ್ವದ್ ಏಲಾಪುರಮಲಂಪುರಮ್ |
(ಮತ್ಸ್ಯಪುರಾಣ, ೨೨.೫೦)

ಎಲ್ಲಮ್ಮಾ, ರೇಣುಕಾ ಮತ್ತು ಜೋಗುಳಾಂಬಾ

ಎಲ್ಲಮ್ಮಾ ಮತ್ತು ರೇಣುಕಾ ಇವು ಒಬ್ಬಳೇ ದೇವಿಯ ಎರಡು ಹೆಸರುಗಳಾಗಿವೆ. ಇದನ್ನು ಇನ್ನೂ ಗಂಭೀರವಾಗಿ ಹೇಳಬಹುದಾದರೆ, ಎಲ್ಲಮ್ಮಾ ದೇವಿಯದ್ದೇ ಉನ್ನತ ರೂಪ ರೇಣುಕಾ ಎಂಬ ಹೆಸರಿನಿಂದ ಪ್ರತಿಷ್ಠಿತಗೊಂಡಿದೆ. ‘ರೇಣುಕಾ ಸಹಸ್ರನಾಮ’ ಎಂಬ ಸ್ತೋತ್ರದಲ್ಲಿ ರೇಣುಕಾಳನ್ನು ಮಹಾಪುರ ನಿವಾಸಿನಿ, ಮಹಾಪುರಾದ್ರಿ ನಿಲಯಾ, ಮಹಾಪುರ ಕೃತಸ್ಥಿತಿಃ, ಮಹಾಪುರ ಸುಖಾಸೀನಾ ಮಹಾಪುರ ಮಹಾದೇವಿ ಎಂಬಿತ್ಯಾದಿ ವಿಶೇಷಣಗಳಿಂದ ಸಂಬೋಧಿಸುವಲ್ಲಿ ಮಾಹೂರನ್ನು ಉಲ್ಲೇಖಿಸಲಾಗಿದೆ. ಅಂತೆಯಾ ಅವಳನ್ನು ‘ಅಲಕಾಪುರ ಸಂಸ್ಥಾನಾ’ ಎಂಬ ವಿಶೇಷಣದಿಂದ ಆಲಂಪುರ ಪೀಠವನ್ನು ಕುರಿತು ನಿರ್ದೇಶಿಸಲಾಗಿದೆ.[13] ಇದೇ ಸ್ತೋತ್ರದಲ್ಲಿ ರೇಣುಕೆಯನ್ನು ಕುರಿತಂತೆ ಏಕವೀರಾ, ಯಮಾಂಬಾ (ಯಮಾಈ), ಏಲಾಂಬಾ (ಎಲ್ಲಮ್ಮಾ) ಎಂಬುದಾಗಿಯೂ ಸಂಬೋಧಿಸಲಾಗಿದೆ.[14] ಎಂಬುದನ್ನು ಮುಖ್ಯವಾಗಿ ಗಮನಿಸಬೇಕು.

ಈಗ ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ಎಲ್ಲಮ್ಮಾಳೇ ಒಂದೊಮ್ಮೆ ಆಲಂಪುರದ ಗ್ರಾಮದೇವತೆಯಾಗಿದ್ದರೆ, ಆಲಂಪುರವು ಒಂದೊಮ್ಮೆ ಮೂಲತಃ ಎಲ್ಲಮ್ಮಾಪುರವೇ ಆಗಿದ್ದರೆ, ಶಕ್ತಿಪೀಠ ದೇವತೆಯಾಗಿ ಯುಗಲೆಯ – ಜೋಗುಳಾಂಬೆಯ ನಿರ್ದೇಶನವು ಬಂದಿರುವಾದರೂ ಏಕೆ?

 

[1]ಪ್ರಬುದ್ಧ ಕರ್ನಾಟಕ: ೨೫.೨, ಅಂಕ ೯೬, ದೀಪಾವಳಿ ೧೯೪೩, ಪುಟ ೨೫ – ೩೦. Temples and Legends of Andhra Pradesh: by N. Ramesha, Bharatiya Vidya Bhavan, Bombay, 1962, PP. 32 – 38.

[2] Indian History Congress: Proceedings of the Twenty first Session, 1958. Trivendrum, PP. 129 – 136.

[3]ಪ್ರಬುದ್ಧ ಕರ್ನಾಟಕ: ೨೫.೨, ಪುಟ. ೨೫ – ೩೦.

[4]ಅದೇ

[5] Artibus Asiae : Vol. XIX, PP. 259 – 270.

[6] Temples and Legends of Andhra Pradesh: PP.34 – 39.

[7]ವಿದರ್ಭ ಸಂಶೋಧನ ಮಂಡಳ ವಾರ್ಷಿಕ : ೧೯೫೮, ಪುಟ. ೧೧೫.

[8] Epigraphia India: Vol. XVIII, P.235.

[9] Hyderabad Archaeological Series: No. 13, PP.167 – 168

[10] Journal of Oriental Research: Madras, Vol. XIX, P.287.

[11] The Sakta Pithas: by Dr. D.C. Sircar, Motilal Banarasidas, Delhi, P.19.

[12]ಅದೇ

[13]ಅದೇ : ಶ್ಲೋಕ. ೧೨೬.

[14]ಅದೇ : ಶ್ಲೋಕ. ೧೦೫, ೧೦೬.