ಜೋಗುಳಾಂಬೆಯೇ ಈ ರೇಣುಕಾ

ಈ ಪ್ರಶ್ನೆಗೆ ಆಂಧ್ರ ಪ್ರದೇಶದ ಜನಪದ ಸಂಸ್ಕೃತಿಯಲ್ಲಿ ಉತ್ತರ ದೊರಕುತ್ತದೆ. ಆಂಧ್ರ ಪ್ರದೇಶದಲ್ಲಿ ಮಾದಿಗಾ ಎಂಬ ಹೆಸರಿನ ಒಂದು ಚಮ್ಮಾರನ ಜಾತಿಯಿದೆ. ಈ ಮಾದಿಗಾ ಜಾತಿಯಲ್ಲಿ ಬವನೀಡ ಹೆಸರಿನ ಜನಪದ ಗಾಯಕರದು ಒಂದು ವರ್ಗ. ಇವರು ಜೋಗುಳಾಂಬೆಯ ಉಪಾಸಕರು. ಬವನೀಡ ಜಾತಿಯ ಸ್ತ್ರೀ – ಪುರುಷರು ಈ ದೇವಿಯ ಕಥನ ಗೀತೆಯನ್ನು ಜವನಿಕಾ ಅಥವಾ ಜಮಡಿಕಾ ಎಂಬ ಹೆಸರಿನ ಡೋಲಿನೊಂದಿಗೆ ಬಹಳ ಆವೇಶದಿಂದ ಹಾಡುತ್ತಿರುತ್ತಾರೆ. ಇವರ ಪ್ರಕಾರ ಇದು ‘ಎಲ್ಲಮ್ಮನ ಕಥೆ’ ಅಥವಾ ‘ರೇಣುಕೆಯ ಕಥೆ’. ಈ ಕಥನ ಗೀತೆಗಳಲ್ಲಿ ಚರಿತ್ರಾತ್ಮಕ ಕಥನವನ್ನೂ ಸೇರಿಸಿಕೊಂಡಿರುತ್ತಾರೆ. ಜೋಗುಳಾಂಬೆಯ ಪ್ರಸಿದ್ಧ ತಾಣವಾಗಿರುವ ಆಲಂಪುರ ಕ್ಷೇತ್ರವನ್ನೊಳಗೊಂಡ ಮೆಹಬೂಬ್‌ ನಗರ ಜಿಲ್ಲೆಯಲ್ಲಿ ಈ ಬವನೀಡ ಜನಪದ ಗಾಯಕರ ಸ್ಥಾನ ಉಚ್ಚವೂ, ವಿಶಿಷ್ಟವೂ ಆಗಿದೆ. ‘ಜುಕ್ ಜುಮ್ ಜುಮ್, ಜುಕ್ ಜುಮ್ ಜುಮ್’ ಎಂಬ ಜಮಡಿಕೆಯ ಧ್ವನಿಯೊಂದಿಗೆ ಹೆಚ್ಚು ಆವೇಶದಿಂದ ಹಾಡುತ್ತಿದ್ದರು ಎಂಬುದರ ಚಿತ್ರಣ ಕಾಕತೀಯ ದೊರೆಗಳ ಕಾಲದ ‘ಕ್ರೀಡಾಭಿರಾಮಮು’ ಎಂಬ ಕೃತಿಯಲ್ಲಿಯೂ ಕಾಣಸಿಕ್ಕುತ್ತದೆ.[1]

ಮಾದಿಗ ಜನಾಂಗದವಳಾದ ಜೋಗುಳಾಂಬೆಯ ಪೂಜಾರಿಣಿಯು ದೇವಿಯ ಹೆಸರಿನಲ್ಲಿ ಭಿಕ್ಷೆ ಬೇಡುತ್ತಾ ತಿರುಗಾಡುತ್ತಿರುತ್ತಾಳೆ. ಅವಳು ಆಗ್ಗೆ ಹೇಗೆ ಕಾಣುತ್ತಿರುತ್ತಾಳೆ ಎಂಬುದರ ವರ್ಣನೆ ಶುಕಸಪ್ತತಿ ಎಂಬ ವಿಜಯನಗರ ರಾಜ್ಯಕಾಲೀನ ತೆಲುಗು ಗ್ರಂಥದಲ್ಲಿ ಈ ಕೆಳಗಿನಂತಿದೆ.[2]

ಕೊರಳೊಳು ದೇವಿಯ ಚರ್ಮಚರಣ, ಉದ್ದನೆಯ ಕವಡೆಹಾರ ಅಂತೆ ದರುಶನ ಮಾಲೆ |
ಹಣೆಯೊಳು ಅರಿಶಿನ ತಿಲಕವು ಅಂತೆ ದೇವಿ ಭಂಡಾರವು ಎಡಗೈಯಲ್ಲಿ ||
ಸೀರೆಯನು ಉಟ್ಟಿಹಳು, ನಾಗಫಣಿ ದಂಡವು ಬಲಗೈಯಲ್ಲಿ |
ಮಾಡುತಲಿ ಪರಶುರಾಮ ಗಾಯನವನು ಭಿಕ್ಷೆಗೆ ನಡೆದಳು ಜೋಗುಳಾಂಬೆ ||

ಇಲ್ಲಿ ಪರಶುರಾಮ ಮತ್ತು ಜೋಗುಳಾಂಬೆಯರ ಸಂಬಂಧವು ಜೋಗುಳಾಂಬಾ – ರೇಣುಕೆಯರ ಏಕಾತ್ಮತೆಯ ದ್ಯೋತಕವಾಗಿದೆ. ಜೋಗುಳಾಂಬೆಯ ಉಪಾಸಿಕೆಯ ಕೈಯಲ್ಲಿರುವ ನಾಗಫಣಿಗೆ (ಮುಳ್ಳಿನ ಕಂಟಿ) ಎಲ್ಲಮ್ಮಾ – ರೇಣುಕೆಯರ ಉಪಾಸನಾ ಕ್ಷೇತ್ರದಲ್ಲಿ ಬಹಳೇ ಮಹತ್ವವಿದೆ. ಇದನ್ನು ಮುಂದೆ ಯಥಾವಕಾಶ ಸ್ಪಷ್ಟವಾಗಿ ವಿವರಿಸಲಾಗುವುದು.

‘ಕ್ರೀಡಾಭಿರಮಮು’ ಕೃತಿಯಲ್ಲಿ ಒಬ್ಬ ಬ್ರಾಹ್ಮಣ ಮತ್ತು ಒಬ್ಬ ವೈಶ್ಯ – ಈ ಇಬ್ಬರು ಸ್ನೇಹಿತರು ಸೇರಿ ಮಾಡಿದ ಒಂದು ದಿನದ ವಾರಂಗಲ್ ಯಾತ್ರೆಯ ರೋಚಕ ವೃತ್ತಾಂತವು ಒಂದೆಡೆ ವರ್ಣನೆಗೊಂಡಿದೆ. ಇವರೀರ್ವರು ವಾರಂಗಲ್‌ನಲ್ಲಿ ಸುತ್ತುತ್ತಾ ಸುತ್ತುತ್ತಾ ಏಕ ವೀರೆಯ ಮಂದಿರಕ್ಕೆಬರುತ್ತಾರೆ. ಆ ಪ್ರಸಂಗವನ್ನು ನಿಮಿತ್ತವಾಗಿಟ್ಟುಕೊಂಡು ಪ್ರಸ್ತುತ ಕೃತಿಯ ಲೇಖಕರು ಏಕವೀರಳ ವಿಷಯವಾಗಿ ವಿಫುಲ ಮಾಹಿತಿಯನ್ನು ನೀಡಿದ್ದಾರೆ.[3] ಅವರ ಪ್ರಕಾರ ಆಕೆ ಪರಶುರಾಮನ ಮಾತೆಯಾದ ರೇಣುಕೆ; ಆಕೆಯ ಪ್ರಮುಖ ತಾಣ ಮಾಹೂರು ಆಗಿರುವುದರಿಂದ ಅವಳಿಗೆ ‘ಮಾಹೂರಮ್ಮಾ’ ಎಂಬುದಾಗಿಯೂ ಸಂಬೋಧಿಸುವುದುಂಟು. ಅಲ್ಲದೆ ಅವಳೇ ಕಾಕತೀಯರ ಕುಲದೇವತೆ ಕಾಕತಮ್ಮ (ಕಾಕತಿ) ಎಂಬುದಾಗಿಯೂ ಉಲ್ಲೇಖಿಸಿರುವರು. ಅದಕ್ಕಿಂತಲೂ ವಿಶೇಷವಾದ ವಿಚಾರವೆಂದರೆ, ಆ ಮೂರ್ತಿ ನಗ್ನವಾಗಿರುವುದರ ವರ್ಣನೆ. ‘ಕ್ರೀಡಾಶೂನ್ಯ ಕಟೀರ ಮಂಡಳಮು ದೇವೀ ಶಂಭಳೀವ್ರಾತಮಮ್ |’ ಎಂಬ ತೆಲುಗಿನ ಹೇಳಿಕೆಯಿದೆ. ಈ ಶಬ್ದಾವಲಿಯಲ್ಲಿರುವ ‘ಶಂಭಳೀ’ ಎಂಬ ವಿಶೇಷಣವು ಏಕವೀರೆಯ ನಗ್ನ ಸ್ವರೂಪವನ್ನು ಸ್ಪಷ್ಟವಾಗಿ ನಿರ್ದೇಶಿಸುವುದಾಗಿದೆ. ಈ ‘ಶಂಭಳೀ’ ಎಂಬ ವಿಶೇಷಣವು ‘ಲಂಜಾ‘, ‘ಲಂಜಿಕಾ’, ‘ಮಹಾಕೋಟೇಶ್ವರೀ’ ಎಂಬ ಹೆಸರುಗಳೊಂದಿಗೆ ಏಕರೂಪತೆಯನ್ನು ಹೊಂದಿರುವಂಥದ್ದಾಗಿರುವುದು ಗಮನಾರ್ಹ.

‘ಕ್ರೀಡಾಭಿರಾಮಮು’ ಮತ್ತು ‘ಶುಕಸಪ್ತತಿ’ ಎಂಬೆರಡು ತೆಲುಗು ಗ್ರಂಥಗಳಿಂದ ಈ ಮೇಲೆ ನೀಡಿದ ಉಲ್ಲೇಖಾನುಸಾರ ನಮಗೆ ತಿಳಿದುಬರುವುದು ಏನೆಂದರೆ ಎಲ್ಲಮ್ಮಾ, ರೇಣುಕಾ ಮತ್ತು ಜೋಗುಳಾಂಬಾ ಈ ಮೂರೂ ಒಬ್ಬಳೇ ದೇವಿಯ ಹೆಸರುಗಳಾಗಿರುವುವು. ಆಂಧ್ರ ಪ್ರದೇಶದಲ್ಲಿನ ಮಾದಿಗ ಜನಾಂಗದವರ ಉಪಾಸ್ಯದೇವಿ ಈಕೆ. ಈ ಜನಾಂಗದ ಜೋಗುರಾಳು ಎಂಬ ಹೆಸರಿನ ಪೂಜಾರಿಣಿಯು ‘ನಾಗಫಣಿ ದಂಡ‘ವನ್ನು ವಿಶೇಷವಾಗಿ ಹಿಡಿದು ಜೋಗುಳಾಂಬಾ ದೇವಿಯ ಹೆಸರಿನಲ್ಲಿ ಭಿಕ್ಷೆ ಬೇಡುತ್ತಾ ಸಂಚರಿಸುತ್ತಿರುತ್ತಾಳೆ. ಅದೇ ಜಾತಿಯಲ್ಲಿನ ಬವನೀಡ ಎಂಬ ಜನಪದ ಗಾಯಕರು ಈ ದೇವಿಯ ಚರಿತ್ರೆಯನ್ನು ‘ಎಲ್ಲಮ್ಮನ ಕಥೆ’ ಅಥವಾ ‘ರೇಣುಕೆಯ ಕಥೆ’ ಎಂಬುದಾಗಿ ಹಾಡುತ್ತಾ ಸುತ್ತಾಡುತ್ತಿರುತ್ತಾರೆ. ಅವಳ ನಗ್ನ ಸ್ವರೂಪವನ್ನುಳ್ಳ ಒಂದು ಉಪಾಸನಾ ಕೇಂದ್ರವು ಕಾಕತೀಯರ ಕಾಲದಲ್ಲಿ ವಾರಂಗಲ್‌ನಲ್ಲಿಯೇ ಇತ್ತು.

ಜೋಗುಳಾಂಬೆ : ಸಂತಾನದಾತ್ರೀ ಮಾತೃದೇವತೆ

ಮಹಾಕೂಟದಲ್ಲಿ ಯಾವ ಯೋನಿರೂಪವುಳ್ಳ ದೇವಿಯನ್ನು ಲಂಜಿಕಾ, ಲಜ್ಜಾಗೌರಿ ಅಥವಾ ಮಹಾಕೋಟೇಶ್ವರಿ ಎಂಬ ಹೆಸರಿನಲ್ಲಿ ಉಪಾಸನೆ ಮಾಡಲಾಗುತ್ತಿದೆಯೋ, ಆಲಂಪುರದಲ್ಲಿ ಯಾರನ್ನು ಭೂದೇವಿ, ರೇಣುಕಾ ಎಂಬ ಅಭಿದಾನಗಳಿಂದ ಕರೆಯಲಾಗುತ್ತಿದೆಯೋ ಆ ದೇವಿ ಸಂತಾನದಾತೆಯಾಗಿದ್ದಾಳೆ ಎಂಬುದನ್ನು ಈಗಾಗಲೇ ನೋಡಿದ್ದೇವೆ. ಬಂಜೆ ಸ್ತ್ರೀಯರು ಸಂತಾನ ಪ್ರಾಪ್ತಿಯಾಗಿ ಅವಳನ್ನು ಉಪಾಸಿಸುತ್ತಾರೆ ಎಂಬ ವಿಚಾರವು ನಮಗೆ ಮಹಾಕೂಟ, ಸಿದ್ಧನಕೋಟೆ, ಆಲಂಪುರ ಮತ್ತು ಸಂಗಮೇಶ್ವರದಲ್ಲಿನ ಪರಂಪರೆಯಿಂದ ಜ್ಞಾತವಾಗಿದೆ. ಹಾಗೆಯೇ ಜೋಗುಳಾಂಬೆ ಎಂಬುದೂ ಕೂಡ ಆ ದೇವಿಗೆ ನೀಡಿರುವ ಒಂದು ಹೆಸರು ಎಂಬುದನ್ನು ಈಗಾಗಲೇ ಸಾಧಾರವಾಗಿ ತಿಳಿಯಲಾಗಿದೆ.

ನಿಜವಾಗಿಯೂ ಹೇಳುವುದಾದರೆ ಜೋಗುಳಾಂಬೆ ಎಂಬ ಹೆಸರು ‘ಸಂತಾನದಾತ್ರೀ ಮಾತೃ ದೇವತೆ’ ಎಂಬ ಅರ್ಥವುಳ್ಳುದಾಗಿದೆ. ಯೋಗಿನಿ ಅಥವಾ ಯುಗಲಾ ಎಂಬ ಆ ಹೆಸರಿನ ಧ್ವನಿ ಸಾಮ್ಯವನ್ನು ಉಳಿಸಿಕೊಂಡು ಹೇತುತಃ ರೂಪುಗೊಂಡ ಕೃತ್ರಿಮ ಸಂಸ್ಕೃತೀಕರಣವಿದು. ಜೋಗುಳಮ್ಮ ಅಥವಾ ಜೋಗುಳಾಂಬೆ ಎಂಬ ಹೆಸರಿನಲ್ಲಿರುವ ಅಮ್ಮಾ – ಅಂಬೆ ಎಂಬ ಮಾತೃತ್ವ ದರ್ಶಕ ಉತ್ತರ ಪದವನ್ನು ಬಿಟ್ಟರೆ ಉಳಿಯುವುದು ‘ಜೋಗುಳ’ ಎಂಬ ರೂಪವಷ್ಟೆ. ಈ ರೂಪವು ಜೋಗುಳಾಂಬೆ ಎಂಬ ಹೆಸರಿನಲ್ಲಿನ ರಹಸ್ಯ ಬೀಜವಾಗಿದೆ. ‘ಜೋಗುಳ’ ಎಂಬ ಶಬ್ದಕ್ಕೆ ದಾಕ್ಷಿಣಾತ್ಯ ಭಾಷೆಗಳಲ್ಲಿ ಇರುವ ಅರ್ಥ ತೊಟ್ಟಿಲ ಹಾಡು, ಜೋಗುಳ ಪದ, ತೂಗುವ ಪದ.[4] ಅರ್ಥಾತ್‌ ಜೋಗುಳಾಂಬೆ ಎಂದರೆ ಮನೆಯಲ್ಲಿ ತೊಟ್ಟಿಲು ತೂಗುವಂತೆ ಮಾಡುವ ಅರ್ಥಾತ್‌ ಜೋಗುಳ ಗೀತೆಯ ದನಿಯು ಮೊಳಗುವಂತೆ ಮಾಡುವಂಥ ಮಾತೃ ದೇವತೆ! ಲಂಜಿಕಾ, ಲಜ್ಜಾಗೌರಿ ಅಥವಾ ಮಹಾಕೋಟೇಶ್ವರಿ ಎಂಬ ಹೆಸರುಗಳಲ್ಲಿ ಅವಳ ಬಾಹ್ಯ ರೂಪವು ಸ್ಪಷ್ಟವಾಗಿದ್ದರೆ, ಜೋಗುಳಾಂಬೆ ಎಂಬ ಹೆಸರಿನಲ್ಲಿ ಅವಳ ಕಾರ್ಯ ಸ್ವರೂಪದ ಸೂಚೆ ಇದೆ.

ನನ್ನ ಸಂಗ್ರಹದಲ್ಲಿ ‘ಶ್ರೀಸ್ಕಾಂದೇ ಸಿಂಹಾದ್ರೀ ಖಂಡೇ ಉತ್ತರಾರ್ಧೆ ಸ್ವಾಯಂಭುವೇ… ರಾಮಕ್ಷೇತ್ರ ವರ್ಣನಮ್’ ಎಂಬ ಮುದ್ರೆಯಿಂದ ಕೂಡಿದ ಹರುಕು ಮುರುಕಾದ ಹಸ್ತ ಲಿಖಿತವೊಂದಿದೆ. ಸ್ಕಂದಪುರಾಣದ ಸಹ್ಯಾದ್ರಿ ಕಂಡದಲ್ಲಿನ ಈ ‘ರಾಮಕ್ಷೇತ್ರ ವರ್ಣನ‘ವು ಪರಶುರಾಮ ನಿರ್ಮಿತ ಭೂಮಿಯ [ಕೊಂಕಣ ಗೋಮಾಂತಕ] ಮಹಿಮೆಯನ್ನು ಕುರಿತುದಾಗಿದೆ. ಈ ಗ್ರಂಥದ ಹನ್ನೊಂದನೆಯ ಅಧ್ಯಾಯದಲ್ಲಿ ರೇಣುಕೆಯ ತಾಣವು ಪರಶುರಾಮ ನಿರ್ಮಿತ ಭೂಮಿಯಲ್ಲಿ ಹೇಗೆ ಬಂದಿತು ಎಂಬುದನ್ನು ಪೌರಾಣಿಕ ನೆಲೆಯಿಂದ ಸ್ಪಷ್ಟೀಕರಿಸಲಾಗಿದೆ. ತನ್ನ ಪುತ್ರ ಭಾರ್ಗವ ರಾಮನನ್ನು ನೋಡಬೇಕೆಂಬ ಲಾಲಸೆಯಿಂದ ರೇಣುಕೆಯು ಯೋಗಿನಿಯರ ಗಣದೊಂದಿಗೆ ಅಂಬಾಲಯದಿಂದ [ಮಾಹೂರದಿಂದ] ಪರಶುರಾಮನ ಭೂಮಿಯಲ್ಲಿ ಬಂದಿದ್ದಳು. ಪರಶುರಾಮನು ಆಗ ಉತ್ಕಟ ಭಾವದಿಂದ ಆಕೆಯನ್ನು ಸ್ತುತಿಸಿದನು. ಹಾಗೂ ನಾನು ನಿರ್ಮಿಸಿದ ಭೂಮಿಯಲ್ಲಿ ನಿನ್ನ ಅನೇಕ ವಿಭೂತಿಗಳು ಸ್ಥಿರವಾಗಿ ಉಳಿಯಬೇಕು ಮತ್ತು ಇಲ್ಲಿ ವಾಸಿಸುತ್ತಿರುವ ವಿಪ್ರರಿಗೆ ಕುಲದೇವತೆ ನೀನಾಗಬೇಕು ಎಂಬುದಾಗಿ ವಿನಂತಿಸಿಕೊಡನು. ಅಲ್ಲಿನ ಜನರಿಗೂ ಹೀಗೆ ಹೇಳಿದ, ‘ನೀವು ನಿಮ್ಮ ಕುಲದ ವೃದ್ಧಿಗಾಗಿ ಈ ನನ್ನ ಮಾತೆಯನ್ನು ಉಪಾಸಿಸಬೇಕು’. ಈ ಎಲ್ಲಾ ಪ್ರಸಂಗಗಳ ವಣ್ನೆಯಲ್ಲಿ ಪರಶುರಾಮನು ರೇಣುಕೆಯನ್ನು ಕುರಿತಂತೆ ‘ಯೋಗಾಂಬಾ‘, ‘ಯೋಗಾಂಬಿಕಾ’ ಮತ್ತು ‘ಅಂಬುಜ ಯೋನಿ ಮಾತೃಕಾ’ ಎಂಬುದಾಗಿ ಅತ್ಯಂತ ಪಾರದರ್ಶಕವಾದ ವಿಶೇಷಣಗಳನ್ನು ಬಳಸಿದ್ದಾನೆ. ಈ ವಿಶೇಷಣಗಳಲ್ಲಿ ‘ಯೋಗಾಂಬಾ’ ಮತ್ತು ‘ಯೋಗಾಂಬಿಕಾ’ ಎಂಬುವು ‘ಜೋಗುಳಾಂಬೆ‘ಯ ಸಂಸ್ಕೃತೀಕರಣಗಳಾಗಿವೆ. ‘ಅಂಬುಜ ಯೋನಿ ಮಾತೃಕಾ’ ಎಂಬುದು ಮಾತ್ರ ರೇಣುಕೆಯ ಯೋನಿ ರೂಪದ ಮೂರ್ತಿಯನ್ನು ಮತ್ತು ಅವಳ ಆ ವಿಶಿಷ್ಟ ಮೂರ್ತಿಗೆ ಸಂಬಂಧಿಸಿದ ಕಮಲದ ಪ್ರತೀಕತ್ವವನ್ನು ಸಹಜವಾಗಿಯೇ ವಿಶದಗೊಳಿಸುವಂತಹ ಒಂದು ಪ್ರಭಾವೀ ವಿಶೇಷಣವಾಗಿದೆ.

ರೇಣುಕಾಳ ಉಲ್ಲೇಖದ ನಿಮಿತ್ತವಾಗಿಯೇ ಜೋಗುಳಾಂಬಾ ಎಂಬ ಹೆಸರಿನ ಸಂಸ್ಕೃತೀಕರಣವನ್ನು ಬಳಸಲಾಗುತ್ತದೆ. ಹಾಗೂ ಅವಳನ್ನು ಕಮಲಯೋನಿ ಮಾತೃಕಾ ಎಂದು ಹೇಳಬೇಕು ಎಂಬುದಕ್ಕಾಗಿಯೇ ಇರುವ ಈ ವಿಷಯವು ನಮಗೆ ಪ್ರಸ್ತುತ ಸಂದರ್ಭದಲ್ಲಿ ಬಹಳ ಅರ್ಥಗರ್ಭಿತವೇ. ಅದರಂತೆಯೇ ಯಾವ ದೇವಿಯ ಪ್ರಮುಖ ತಾಣವು ಮಾಹೂರ ಆಗಿರುವುದೋ ಹಾಗೂ ಯಾರನ್ನು ಪರಶುರಾಮನ ಮಾತೆ ಎಂಬುದಾಗಿ ಮಾನ್ಯ ಮಾಡಲಾಗಿದೆಯೋ ಅವಳೇ ಕೊಂಕಣ – ಗೋಮಾಂತಕ ಪ್ರದೇಶದಲ್ಲಿ ಬ್ರಾಹ್ಮಣ ಕುಲದ ರಕ್ಷಕ ದೇವತೆಯಾಗಿದ್ದಾಳೆ. ಈ ಗ್ರಂಥದ ಈ ಧೋರಣೆಯೂ ಕೂಡ ನಮ್ಮನ್ನು ಅಧಿಕವಾಗಿ ವಿಚಾರ ಮಾಡಲು ತೊಡಗಿಸುವಂಥದ್ದಾಗಿದೆ.

ಮಹಾರಾಷ್ಟ್ರದಲ್ಲಿ ಜೋಗುಲಾದೇವಿ:

ಜೋಗುಳಾಂಬೆ ಎಂಬ ಹೆಸರಿನಲ್ಲಿ ಈ ದೇವಿಯ ಆರಾಧನೆಯು ಮಹಾರಾಷ್ಟ್ರದಲ್ಲಿ ಜರುಗುತ್ತಲಿತ್ತು ಎಂಬುದಕ್ಕೆ ಅನೇಕ ಆಧಾರಗಳಿವೆ. ಚಕ್ರಧರ ಸ್ವಾಮಿಯ ಒಬ್ಬ ಶಿಷ್ಯೆ ಅಉಸಾ ಎಂಬುವವಳಲ್ಲಿ ಜೋಗುಲಾದೇವಿಯ ಹಿತ್ತಾಳೆ ಲೋಹದ ಮೂರ್ತಿಯೊಂದಿತ್ತು ಎಂಬುದಾಗಿ ಲೀಳಾ ಚರಿತ್ರೆಯಲ್ಲಿನ ವರ್ಣನೆಯಿಂದ ತಿಳಿದುಬರುತ್ತದೆ.[5] ಪೂರ್ವಾಶ್ರಮದಲ್ಲಿ ನಾಥ ಪಂಥದ ಅನುಯಾಯಿಯಾಗಿದ್ದ ಈಕೆ ಮೂಲತಃ ಪ್ರತಿಷ್ಠಿತ ಬ್ರಾಹ್ಮಣ ಕುಲಪ್ರಸೂತೆ. ನಾಥ ಪಂಥದಲ್ಲಿ ದೀಕಷೆ ತೆಗೆದುಕೊಂಡ ಮೇಲೆ ಈಕೆ ಭ್ರಮಣಶೀಲಳಾಗಿ ಬಿಟ್ಟಿದ್ದಳು. ಚಕ್ರಧರ ಸ್ವಾಮಿಯ ಪ್ರಭಾವ ಕಕ್ಷೆಯಲ್ಲಿ ಅವಳ ಪ್ರವೇಶವಾದೊಡನೆಯೇ ಅವಳು ಆ ಸ್ವಾಮಿಯೆಡೆಗೆ ಆಕರ್ಷಿಸಲ್ಪಟ್ಟಳು. ಸ್ವಾಮಿಗಳು ಈ ದೇವತೋಪಾಸನೆಯನ್ನು ತುಚ್ಛವೆಂದು ಪರಿಗಣಿಸಿದ್ದರು. ಆ ಸ್ವಾಮಿಗಳು ಆಉಸೆಯ ಗಂಟನ್ನು ಸ್ವಹಸ್ತದಿಂದ ಬಿಚ್ಚಲು ‘ದೇವತೆ ಹೊರಟಳು: ಜೋಗುಲಾದೇವಿ: ರಿರಿಯಾ (?) ಹಿತ್ತಾಳೆಯವಳು ಹೊರಟಳು: ತಿತರೀಯ ಮಹುವಾದ (?) ಕೃಷ್ಣೆಯವಳು ಹೊರಟಳು: ತಿತರೀಯ ಮಹುವಾದ (?) ಕೃಷ್ಣೆಯವಳು ಹೊರಟಳು: ಆಗ ಗೋಸಾವಿಯು ಆದರಿಸಿದನು: ಆಗ ಆಉಸಿ ನುಡಿದಳು: ಸ್ವಾಮಿ ಸ್ವಾಮಿ: ಜಗನ್ನಾಥಾ: ಜೋಗುಲಾದೇವಿ ತ್ಯಜಿಸಿ ನಡೆದಿರುವಳು ಸ್ವಾಮಿ: ಕೃಷ್ಣೆಯವಳನು ಬಿಡಬೇಡ: ಆಕೆ ನನ್ನ ಮಾರ್ಗದರ್ಶಿ:’ ಈ ಮೂಲಕ ಸ್ಪಷ್ಟವಾಗುವುದೇನೆಂದರೆ, ಆಉಸೆ ನಿತ್ಯವೂ ಈ ಹಿತ್ತಾಳೆಯ ಜೋಗುಲಾದೇವಿ ಮೂರ್ತಿಯನ್ನು ಉಪಾಸನೆ ಮಾಡುತ್ತಿದ್ದಳು. ಆ ಮೂರ್ತಿಯ ಪೂಜಾ ಕಾರಣವಾಗಿಯೇ ಆಉಸೆಗೆ ಅಡರಿದ್ದುದು ಭ್ರಮಣ.

ಮಹಾರಾಷ್ಟ್ರದಲ್ಲಿ ಜೋಗುಲಾದೇವಿ ಹೆಸರಿನ ಒಂದು ಊರು ಇದೆ. ಈ ಊರು ಔರಂಗಾ ಬಾದ್ ಜಿಲ್ಲೆ ತಾಲೂಕಿನ ರಾಮಸಗಾಂವದಿಂದ ಮೂರು ಮೈಲು ದೂರದಲ್ಲಿ ಪಶ್ಚಿಮ ದಿಕ್ಕಿಗೆ ಬರುವ ಗೋದಾವರಿಯ ಉತ್ತರ ತಟದ ಮೇಲಿದೆ. ಚಕ್ರಧರ ಸ್ವಾಮಿಯು ಇಲ್ಲಿಗೆ ಬಂದಿದ್ದನು ಹಾಗೂ ‘ದೇವತಾ ಭುವನೀ ಪ್ರಾತಃ ಪೂಜಾ ಆರೋಗಣ‘ವೂ ಇಲ್ಲಿಯೇ ಆಗಿತ್ತು ಎಂಬುದರ ಉಲ್ಲೇಖ ಮಹಾನುಭಾವೀಯ ವಾಙ್ಮಯದಲ್ಲಿದೆ.[6]

ವಿಶೃಂಖಲಾ ದೇವಿ

ಸುವಿಖ್ಯಾತ ಶಾಕ್ತ ತಾಂತ್ರಿಕವಾದ ಭಾಸ್ಕರರಾಯ ಹಾಗೂ ಭಾಸುರಾನಂದನಾಥ ಇವರಿಗೆ ಆಲಂಪುರ ಪೀಠ ಮತ್ತು ಅಲ್ಲಿನ ನಗ್ನದೇವೀ ಮೂರ್ತಿಯ ಬಗ್ಗೆ ತಿಳಿದಿತ್ತು. ಈ ಬಗ್ಗೆ ಅವರು ತಮ್ಮ ‘ಸೌಭಾಗ್ಯ ಭಾಸ್ಕರ’ ಎಂಬ ಹೆಸರಿನ ಲಲಿತಾ ಸಹಸ್ರನಾಮ ಭಾಷ್ಯದಲ್ಲಿ ಬಹಳ ಸ್ಪಷ್ಟವಾಗಿಯೇ ಉಲ್ಲೇಖಿಸಿದ್ದಾರೆ. ಈಗ್ಗೆ ಮುಖ್ಯವಾಗಿ ಗಮನಿಸಬೇಕಾದುದು ‘ವಿಶೃಂಖಲಾ’ ಎಂಬ ಹೆಸರಿನ ಸ್ಪಷ್ಟೀಕರಣವನ್ನು. ಕರ್ಮಾದಿ ನಿರ್ಬಂಧಗಳ ಅಥವಾ ವಿವಿಧ ನಿಷೇಧಗಳ ಶೃಂಖಲೆಯನ್ನು ಯಾವಳು ಅಲ್ಲಗಳೆದಿರುವಳೋ, ಅವಳೇ ‘ವಿಶೃಂಖಲಾ‘, ಎಂದು ತಾತ್ತ್ವಿಕವಾಗಿ ಸ್ಪಷ್ಟೀಕರಣ ನೀಡಿದ್ದಾರೆ ಭಾಸ್ಕರರಾಯರು. ಮತ್ತೆ ಮುಂದುವರೆದು:

ನಗ್ನೇತಿ ವಾ | ಅಲಂಪುರಾದಿ ಪೀಠೇಷ ತಾದೃಶದೇವೀಮೂರ್ತಿದರ್ಶನಾತ್
ಸ್ವಯೋನಿದರ್ಶನಾಮ್ಮ ಹ್ಯತ್ಪಶುವರ್ಗಾಮನುಸ್ಮರೇದಿತಿ ತಿರಸ್ಕಾರಿಣೀ

ಧ್ಯಾನದರ್ಶನಾಚ್ಚ ಜವನಿಕಾಯಾ ಜವನಿಕಾಂತರಾನಪೇಕ್ಷತ್ವೇನ
ತಾದೃಶಧ್ಯಾನಸ್ಯ ಯುಕ್ತತ್ವಾಚ್ಚ |’ ಶಂಕಲಾ ಸ್ಯಾತ್ಕಟೀವಸ್ತ್ರ
ಬಂಧೇsಪಿ ನಿಗಡೇsಪಿ ಚೇತಿ ವಿಶ್ವಃ ||”

ಈ ಭಾಷ್ಯದಲ್ಲಿ ಭಾಸ್ಕರರಾಯರು ‘ವಿಶೃಂಖಲಾ’ ಎಂಬ ದೇವಿಯ ನಾಮದಲ್ಲಿ ‘ನಗ್ನ’ ಎಂಬುದಕ್ಕೆ ಒಂದು ಅರ್ಥ ಪರ್ಯಾಯವನ್ನು ಕೊಟ್ಟು, ಅದರ ಪುಷ್ಟಿಗಾಗಿ ಅಲಂಪುರಾದಿ ಪೀಠಗಳಲ್ಲಿನ ತಾದೃಶ (ನಗ್ನ) ದೇವಿಯ ಮೂರ್ತಿಗಳನ್ನು ಸಾಕ್ಷ್ಯಗಳಾಗಿ ಮುಂದಿರಿಸಿದ್ದಾರೆ. ಭಾಸ್ಕರರಾಯರಾದರೊ ಈ ಶಕ್ತಿಯ ವಾಮ ಮಾರ್ಗೀಯ ಉಪಾಸಕ ಶಾಕ್ತ ತಂತ್ರದ ಒಬ್ಬ ಮಹಾನ್ ಭಾಷ್ಯಕಾರ: ಶಾಕ್ತಪೀಠಗಳ ಪುನರುದ್ಧಾರಕ; ಅಸೇತು ಹಿಮಾಚಲ ಭಾರತದ ಧರ್ಮಯಾತ್ರಿಕ. ಅಂಥವರು ಅಲಂಪುರಾದಿ ಪೀಠಗಳಲ್ಲಿನ ನಗ್ನ ಮೂರ್ತಿಗಳನ್ನು ಉಲ್ಲೇಖ ಮಾಡಿದ್ದು, ‘ವಿಶೃಂಖಲಾ’ ಎಂಬ ದೇವಿಯ ಹೆಸರಿಗೆ ‘ನಗ್ನ’ ಎಂಬುದಾಗಿ ಸ್ಪಷ್ಟೀಕರಣ ನೀಡಿರುವರು. ಇದು ಈ ಬಗೆಯ ನಗ್ನ ಮೂರ್ತಿಗಳಿಗೆ ಶಕ್ತಿ ಪ್ರತಿಷ್ಠಾಪನೆ ಹಾಗೂ ಆ ಬಗೆಯ ಮೂರ್ತಿಗಳು ಎಲ್ಲೆಲ್ಲಿದ್ದವೋ ಅವುಗಳಿಗೆಲ್ಲ ಪೀಠ ಪ್ರತಿಷ್ಠಾಪನೆಯು ಪ್ರಾಪ್ತವಾಗಿತ್ತು ಎಂಬುದಕ್ಕೆ ಸ್ಪಷ್ಟ ದ್ಯೋತಕವಾಗಿದೆ.

ಶಾಕ್ತ ತಾಂತ್ರಿಕರ ಪ್ರಭಾವ ಕ್ಷೇತ್ರ

ಯೋನಿರೂಪೀ ದೇವಿಯ ಉಪಾಸನೆಯನ್ನುಳ್ಳ ಮಹಾಕುಟ ಮತ್ತು ಆಲಂಪುರ ಇವೆರಡೂ ಬಹಳ ಪ್ರಸಿದ್ಧ ಶಕ್ತಿಪೀಠಗಳಾಗಿರುವ ಇತಿಹಾಸವನ್ನು ಈ ಮೊದಲೇ ಗಮನಿಸಲಾಗಿದೆ. ಶಕ್ತಿ ಪೀಠಗಳ ನಾಮಾವಳಿಯಲ್ಲಿ ಮಹಾಕೂಟ ಮತ್ತು ಆಲಂಪುರಗಳು ಸೇರಿಕೊಂಡಿರುವುದು ಕೇವಲ ಗೌರವ ಸೂಚಕವಾಗಿಯಂತೂ ಅಲ್ಲ. ಈ ಸ್ಥಾನವನ್ನು ಶಕ್ತಿಪೀಠವಾಗಿ ವೈಭವೀಕರಣಗೊಳಿಸುವಲ್ಲಿ ಶಾಕ್ತ ತಾಂತ್ರಿಕರ ಕೈವಾಡ ಬಹಳೇ ಇತ್ತು ಎಂದು ಒಪ್ಪಿಕೊಳ್ಳುವುದಕ್ಕೆ ಬಲವಾದ ಆಧಾರಗಳು ಉಪಲಬ್ಧವಾಗಿವೆ.

ರೇಣುಕೆಯ ಸಹಸ್ರನಾಮ ಸ್ತೋತ್ರದಲ್ಲಿ ಅವಳನ್ನು ಕುರಿತು ‘ಅಲಕಾಪುರ ಸಂಸ್ಥಾನ’ ಎಂದು ಹೇಳಿರುವ ಉಲ್ಲೇಖವನ್ನುಈ ಮೊದಲೇ ಗಮನಿಸಲಾಗಿದೆ. ಹಾಗೆಯೇ, ರೇಣುಕೆಯ ತಾಂತ್ರಿಕ ಉಪಾಸನೆಗಾಗಿ ‘ರೇಣುಕಾತಂತ್ರ’ ಎಂಬ ತಾಂತ್ರಿಕ ಗ್ರಂಥವೊಂದು ರಚನೆಯಾಗಿದ್ದು, ಅದರಲ್ಲಿ ರೇಣುಕೆಯ ಯೋನಿರೂಪೀ ಮೂರ್ತಿಯ ಉಪಾಸನಾ ವಿಚಾರವನ್ನು ವಿಸ್ತೃತವಾಗಿ ಹೇಳಲಾಗಿದೆ. ಹೈದರಾಬಾದ್‌ನಲ್ಲಿಯ ಒಬ್ಬ ಬ್ರಾಹ್ಮಣ ಸರದಾರನ ಮನೆತನದಲ್ಲಿ – ಒಂದು ಬೆಳ್ಳಿಯ ಹಾಗೂ ಒಂದು ಬಂಗಾರದ – ಎರಡು ಯೋನಿರೂಪೀ ರೇಣುಕೆಯ ಮೂರ್ತಿಗಳು ನಿತ್ಯ ಪೂಜಿಸಲ್ಪಡುತ್ತಿದ್ದುದು ರೇಣುಕಾ ತಂತ್ರಾನುಸಾರವೇ. ಈ ಮಾಹಿತಿಯನ್ನು ಡಾ. ಪಾಂಡು ರಂಗ ದೇಸಾಯಿಯವರು ಆಲಂಪುರದ ಯೋನಿರೂಪೀ ಮೂರ್ತಿಯ ಸಂದರ್ಭದಲ್ಲಿ ನೀಡಿರುವುದು ಗಮನೀಯವಾಗಿದೆ.[7]

ಶಾಕ್ತ ತಾಂತ್ರಿಕರ ಪ್ರಭಾವವನ್ನು ಕುರಿತು ವಿಚಾರ ಮಾಡುವಾಗನನಗೆ ಮಹಾಕೂಟ ಮ್ತು ಆಲಂಪುರ ಈ ಎರಡೂ ನೆಲೆಗಳಲ್ಲಿ ಈ ದೇವಿಯ ಸಾನ್ನಿಧ್ಯದಲ್ಲಿರುವ ನವಶಿವಲಿಂಗ ಮಂದಿರಗಳ ಮಹತ್ವವು ವಿಶೇಷವಾಗಿ ಕಾಣುತ್ತದೆ. ಮಹಾಕೂಟದಲ್ಲಿನ ಒಂಬತ್ತು (ನವ) ಶಿವ ಸ್ಥಾನಗಳನ್ನು ‘ನವಲಿಂಗಾನಿ’ ಎಂಬ ಸಮೂಹ ದರ್ಶಕ ಉಲ್ಲೇಖವನ್ನು ಶಾಕಂಭರೀ ಮಾಹಾತ್ಮ್ಯವೆಂಬ ಕೃತಿಯಲ್ಲಿ ಮಾಡಲಾಗಿದ್ದು, ಅದನ್ನು ಬೇರೆಬೇರೆ ಹೆಸರಿನಿಂದಲೂ ದಾಖಲಿಸಲಾಗಿದೆ. ಇದನ್ನು ಮಹಾಕೂಟದ ಪೀಠದ ಪರಿಚಯ ಮಾಡಿಕೊಳ್ಳುವ ಸಂದರ್ಭದಲ್ಲಿ ತಾವು ಗಮನಿಸಿರುತ್ತೀರಿ. ಆಲಂಪುರದಲ್ಲಿರುವ ನವ ಶಿವಮಂದಿರಗಳನ್ನು ನವ ಬ್ರಹ್ಮೇಶ್ವರ ಮತ್ತು ನವ ಲಿಂಗೇಶ್ವರ ಎಂಬ ಎರಡು ಸಮೂಹ ವಾಚಕ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಇಲ್ಲಿ ‘ಬ್ರಹ್ಮ‘ವು ‘ಲಿಂಗ’ ಎಂಬುದಕ್ಕೆ ಪರ್ಯಾಯವಾಗಿ ಬಳಕೆಗೊಂಡಿರುವುದು ಕಂಡು ಬರುತ್ತದೆ.

ಈ ನವ ಶಿವಮಂದಿರಗಳ ಪ್ರಯೋಜನವಾದರೂ ಏನು? ಎರಡೂ ಸ್ಥಳಗಳಲ್ಲಿ ನವ ಶಿವಮಂದಿರಗಳಿದ್ದು, ಆ ಪೈಕಿ ಒಂದಕ್ಕೆ ಪ್ರಾಧಾನ್ಯ ಇದ್ದಿರಬೇಕು; ಆ ಪ್ರಧಾನ ಶಿವಲಿಂಗಗಳಿಗೆ ಶಕ್ತಿಯ ಸಮರಸೀಕರಣ ಸಾಧ್ಯವಾಗಿರುವಂತಿದೆ. ಅಲ್ಲದೆ ಇದಕ್ಕೆ ಕೆಲವು ವಿಶೇಷ ಉಪಾಸನಾ ಸಂದರ್ಭಗಳೂ ಇದ್ದಿರಬೇಕು. ಈ ಜಿಜ್ಞಾಸೆಯಿಂದ ಹೊರಟಿದ್ದ ನನಗೆ ಮೂರನೆಯ ಪ್ರಯತ್ನದಲ್ಲಿ ಥಟ್ಟನೆ ನೆನಪಿಗೆ ಬಂದುದು ಸೌಂದರ್ಯ ಲಹರಿಯಲ್ಲಿನ ಈ ಮುಂದಣ ಶ್ಲೋಕ:

ಶರೀರಂ ತ್ವಂ ಶಂಭೋಃ ಶಶಿಮಿಹಿರವಕ್ಷೋರುಹಯುಗಂ
ತವಾತ್ಮಾನಂ ಮನ್ಯೇ ಭಗವತಿ ನವಾತ್ಮಾನಮನಘನಮ್ |
ಅತಃ ಶೇಷಃ ಶೇಷಿತ್ಯಯಮುಭಯ ಸಾಧಾರಣತಯಾ
ಸ್ಥಿತಃ ಸಂಬಂಧೋ ವಾ ಸಮರಸ ಪರಾನಂದಪರಯೋಃ ||೩೫ ||

[ಹೇ ಭಗವತಿ, ಸೂರ್ಯಚಂದ್ರರೂಪೀ ಸ್ತನದ್ವಯವುಳ್ಳ ನಿನ್ನ ಅತ್ಯಂತ ರಮಣೀಯ ಶರರವಿದು ಶಿವನ ಶರೀರವೇ ಎನಿಸುತ್ತದೆ. ಎಂತಲೇ ಏಕರೂಪತೆಯ ದೃಷ್ಟಿಯಿಂದ ಭಗವಾನ್ ಶಂಕರ ಮತ್ತು ಭಗವತಿ ಇವರ ನಡುವಣ ಶೇಷ ಮತ್ತು ಶೇಷಿ ಸಂಬಂಧವೆಂಬುದು ಅಂದರೆ ಗೌಣ ಮುಖ್ಯ ಭಾಗ ಉಭಯತರರಿಗೂ ಅನ್ವಯಿಸುತ್ತದೆ.]

ಈ ಶ್ಲೋಕದಲ್ಲಿ ಭಗವತಿಯನ್ನು ‘ನವಾತ್ಮಾ’ ಎಂದು ಕರೆಯಲಾಗಿದೆ. ಈ ವಿಶೇಷಣ ಬೇರೆಬೇರೆ ರೀತಿಯಲ್ಲಿ ಸ್ಪಷ್ಟೀಕರಣಗೊಂಡಿರುವುದುಂಟು. ಆದರೆ ಮಹಾಕೂಟ ಮತ್ತು ಆಲಂ ಪುರಗಳಲ್ಲಿನ ಶಕ್ತಿಪೀಠಗಳ ವೈಶಿಷ್ಟ್ಯದ ಸಂದರ್ಭದಲ್ಲಿ ಒಂದು ಪರಂಪರಾಮಾನ್ಯ ಸ್ಪಷ್ಟೀಕರಣವು ತಂತೋತಂತಾಗಿ ಬೆಸೆಯುತ್ತದೆ.[8] ಶಿವನನ್ನು ‘ಅಷ್ಟಮೂರ್ತಿ’ ಎಂದೊಪ್ಪಲಾಗಿದೆ. ಕಾಳಿದಾಸನು ತನ್ನ ಶಾಕುಂತಲದ ನಾಂದಿಯಲ್ಲಿಯೇ ಅಷ್ಟಮೂರ್ತಿ ಶಿವನನ್ನು ಸ್ತುತಿಸಿದ್ದಾನೆ. ಹಾಗೆಯೇ ಶಕ್ತಿಯೂ ‘ಅಷ್ಟಧಾ’ವೇ ಆಗಿದೆ. ಅಂದರೆ ಶಿವ – ಶಕ್ತಿಯರ ಅಷ್ಟಮೂರ್ತಿತ್ವವು ಒಂದೇ. ಶಿವನು ಕೊಂಚ ಶಕ್ತಿಯುಕ್ತನಾಗಿದ್ದರಿಂದಲೇ ಕಾರ್ಯ ಸಮರ್ಥನಾಗಿರುವನು. ಇಲ್ಲದಿದ್ದರೆ ಆತ ನಿಷ್ಕ್ರಿಯನಾಗಿ ಬಿಡುವನು. ಅಂದರೆ ಶಿವಯೋಗದಲ್ಲಿ ಶಕ್ತಿಯೇ ಕಾರ್ಯಕಾರಿಣಿಯಾಗಿರುವವಳು. ಶಿವಶಕ್ತಿಯರ ಸಮನ್ವಿತ ರೂಪದಲ್ಲಿ ಶಕ್ತಿಯು ನವ ಮೂರ್ತಿತ್ವವನ್ನು ಸೃಷ್ಟಿಸಿ, ನವಾತ್ಮಳಾಗುತ್ತಾಳೆ. ಅಷ್ಟ ಮೂರ್ತಿ ಶಿವನ ಪ್ರತ್ಯೇಕವಾಗಿರುವ ಎಂಟು ಶಿವಲಿಂಗಗಳು ಮತ್ತು ಒಂಬತ್ತನೆಯ (ನವ) ಶಕ್ತಿಯುಕ್ತ ಶಿವನ ಪ್ರತೀಕವಾಗಿರುವ ಲಿಂಗ (ಶಾಕಂಭರೀ ಮಾಹಾತ್ಮ್ಯದಲ್ಲಿ ಆ ಕುರಿತು ‘ಶಿವಾಯಾ ಸಹಿತಃ ಶಂಭುಃ’ ಎಂದು ಸಂಬೋಧಿಸಲಾಗಿದೆ.) – ಹೀಗೆ ನವ ಲಿಂಗಗಳ ಸಮೂಹ ‘ನವಾತ್ಮಾ ಭಗವತಿ’ ಎಂದಾಗುವುದು. ಮಹಾಕೂಟ ಮತ್ತು ಆಲಂಪುರಗಳಲ್ಲಿನ ನವಲಿಂಗೇಶ್ವರ ಎಂಬುವುಗಳು ಶಾಕ್ತ ತಾಂತ್ರಿಕರ ಈ ಧಾರಣೆಯ ಮೂರ್ತ ಆವಿಷ್ಕಾರವೇ ಹೌದು ಎಂಬುದರಲ್ಲಿ ಯಾವ ಸಂಶಯವೂ ಇರಲಾರದು.

ಮಾಹೂರಝರಿಯ ಭೂದೇವಿಮೂರ್ತಿ

ವಿದರ್ಭ ಪ್ರಾಂತ್ಯದಲ್ಲಿನ ಮಾಹೂರಝರಿ ಎಂಬಲ್ಲಿ ಸುಮಾರು ನಲವತ್ತು ವರ್ಷಗಳ ಹಿಂದೆ ಉತ್ತಾನವಾದ ಅವಸ್ಥೆಯಲ್ಲಿರುವ ಶಿರೋಹೀನ ನಗ್ನದೇವೀ ಮೂರ್ತಿಯು ಡಾ.ಜಿ.ಎ.ಪಿ. ಹಂಟರ್ ಅವರಿಗೆ ಉಪಲಬ್ಧವಾಗಿತ್ತು. ‘ಶಾರದಾಶ್ರಮ ವಾರ್ಷಿಕ‘ದಲ್ಲಿ (ಶಕ. ೧೮೫೫) ಅವರು ಮಾಹೂರಝರಿಯ ಪ್ರಾಚೀನ ಅವಶೇಷಗಳನ್ನು ಕುರಿತಂತೆ ಒಂದು ಲೇಖನವನ್ನೂ ಪ್ರಕಟಿಸಿದ್ದರು. ಅದರಲ್ಲಿ ಪ್ರಸ್ತುತ ಮೂರ್ತಿಯ ಛಾಯಾಚಿತ್ರವೂ ಇತ್ತು. (ಹಿಂದಿನ ಪ್ರಕರಣದ ಟಿಪ್ಪಣಿ ಕ್ರಮಾಂಕ ೪ನ್ನು ನೋಡಿ).

ಮಾಹೂರಝರಿ ಎಂಬ ಊರು ವಿದರ್ಭ ಪ್ರಾಂತ್ಯದಲ್ಲಿನ ನಾಗಪುರ (ತಾಲೂಕು ಮತ್ತು ಜಿಲ್ಲೆ)ದಲ್ಲಿದೆ. ನಾಗಪುರ – ಕಾಟೋಲ ಮಾರ್ಗದಲ್ಲಿ ನಾಗಪುರದಿಂದ ಏಳನೆಯ ಮೈಲಿಕಲ್ಲಿನಿಂದ ಉತ್ತರಕ್ಕೆ ಎರಡು ಮೈಲು ದೂರದಲ್ಲಿದೆ ಈ ಸ್ಥಳ. ಸುಮಾರು ಐದುನೂರು ಜನರಿರುವ ಊರಿನಲ್ಲಿ ಪುರಾತನ ಅವಶೇಷಗಳು ವಿಪುಲವಾಗಿ ಕಾಣಸಿಗುತ್ತವೆ. ಇಲ್ಲಿ ಮರಣಿಸಿದವರನ್ನು ಹೊಳಲಾಗಿರುವ ಅನೇಕ ಲೋಹ ಯುಗೀನ (ಕ್ರಿ.ಪೂ. ಏಳು – ಎಂಟನೆಯ ಶತಕ) ಶಿಲಾ ವರ್ತುಲಗಳು, ವಿವಿದ ಬಣ್ಣದ ಕಲ್ಲಿನ ಮಣಿಗಳು, ವಾಕಾಟಕರ ಕಾಲದ ಇಟ್ಟಿಗೆಗಳು, ಕ್ಷತ್ರಪರ ಕಾಲದ ನಾಣ್ಯಗಳು ಹಾಗೂ ಕೆಲವು ಮುದ್ರಿತ ಹಂಚುಗಳು ಸಂಶೋಧಕರಿಗೆ ಉಪಲಬ್ಧವಾಗಿರುವುವು. ತಮ್ಮ ಲೇಖನದಲ್ಲಿ ಹಂಟರ್‌ ಅವರು ಈ ಎಲ್ಲಾ ಮಹತ್ವಯುತ ಅವಶೇಷಗಳೆಡೆ ಪುರಾತತ್ತ್ವಜ್ಞರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಇತ್ತೀಚಿನವರೆಗೂ ಅವುಗಳ ದಾಖಲಾತಿ ಮಾತ್ರ ಸಾಧ್ಯವಾಗಿಲ್ಲ. ಕ್ರಿ.ಶ.೧೯೭೧ರಲ್ಲಿ ನಾಗಪುರ ವಿಶ್ವವಿದ್ಯಾಲಯದ ‘ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವ’ ವಿಭಾಗದ ವತಿಯಿಂದ ಇಲ್ಲಿನ ಶಿಲಾ ಸಾಮಗ್ರಿಗಳನ್ನು ಉತ್ಖನನ ಮಾಡುವುದರ ಜೊತೆಗೆ, ಅಲ್ಲಿನ ಮಿಕ್ಕ ಅವಶೇಷಗಳನ್ನು ಪರಿವೀಕ್ಷಿಸಲಾಯಿತು. ಅದೇ ಸುಮಾರಿನಲ್ಲಿ ಉಪಲಬ್ಧವಾದ ವಾಕಾಟಕ ವಂಶೀಯನಾದ ರಾಜನೊಬ್ಬನ ತಾಮ್ರಪಟವನ್ನು ಸಂಪಾದಿಸಿದರು ಡಾ. ವಿ.ಭಿ. ಕೋಲತೆಯವರು.[9]

ಮಾಹೂರಝರಿಯಲ್ಲಿ ಉಪಲಬ್ಧವಾದ ಉತ್ತಾನಪಾದ ಮತ್ತು ಶಿರೋಹೀನ ನಗ್ನ ದೇವಿಯು ‘ದ್ರಾವಿಡ ಪೂರ್ವ ಭೂಮಿರೂಪೀ ಮಾತೃದೇವತೆ’ (Pre Dravidian Earth – Mother Goddess) ಆಗಿರಬಹುದೆಂಬುದು ಡಾ.ಹಂಟರರ ಅಭಿಪ್ರಾಯ.[10] ನಲವತ್ತು ವರ್ಷಗಳ ಹಿಂದೆ ಅವರಿಗೆ ದೊರೆತಿದ್ದ ಈ ಮೂರ್ತಿ ಇಗ ಎಲ್ಲಿದೆ ಎಂಬುದು ತಿಳಿದಿಲ್ಲ. ಆದರೆ ಇದೇ ಜಾಗದಲ್ಲಿ ಒಂದೆಡೆ ಇದೇ ಪ್ರಕಾರದ ಮೂರ್ತಿಯೊಂದು ಡಾ. ಬಾಲಕೃಷ್ಣ ದಾಭಾಡೆಯವರಿಗೆ ಸಿಕ್ಕಿತ್ತೆಂದು ಡಾ.ವಿ.ಭಿ.ಕೋಲತೆಯವರು ೧೯೭೩ರ ಮಧ್ಯದಲ್ಲಿ ಪುಣೆಯಲ್ಲಿ ಭೇಟಿಯಾದಾಗ ನನಗೆ ತಿಳಿಸಿದ್ದರು, ನಂತರ ಪ್ರಾಧ್ಯಾಪಕ ದಾಭಾಡೆಯವರಿಗೆ ಅಲ್ಲಿಯೇ ಮತ್ತೆ ಇಂತಹ ಮತ್ತೊಂದು ಮೂರ್ತಿಯ ಲಭಿಸಿತು.

ಮಾಹೂರಝರಿಯಲ್ಲಿಯೇ ಈ ಬಗೆಯ ಅನೇಕ ದೇವೀ ಮೂರ್ತಿಗಳುಉಪಲಬ್ದವಾಗುತ್ತಿರುವುದರ ಅರ್ಥ ಆ ಊರು ಈ ದೇವಿಯ ಮುಖ್ಯ ‘ಉಪಾಸನಾ ಕೇಂದ್ರವಾಗಿತ್ತೆಂಬುದು. ಮಾಹೂರಝರಿ ಎಂಬ ಗ್ರಾಮ ನಾಮದಲ್ಲಿನ ‘ಝರಿ’ ಎಂಬ ಉತ್ತರ ಪದವನ್ನು ಬಿಟ್ಟರೆ, ಉಳಿವ ‘ಮಾಹೂರ‘ವು ತನ್ನ ಭಿನ್ನತೆಯನ್ನು ತೋರುವ ಕುರುಹನ್ನುಳ್ಳುದಾಗಿರುವುದಂತೂ ಸ್ಪಷ್ಟ. ಅಂದರೆ ಈ ಸ್ಥಾನದ ಹೆಸರು ‘ಮಾಹೂರ’ ಎಂಬುದಂತೂ ಖಚಿತ. ರೇಣುಕೆಯ ಪ್ರಖ್ಯಾತ ತಾಣವಾಗಿರುವ ಪ್ರಣೀತೆಕಾಠದ ಮಾಹೂರ ಮತ್ತು ಝರಿ (ಪ್ರವಾಹ) ಸಾನ್ನಿಧ್ಯದಿಂದ ಗುರುತಿಸಲ್ಪಡುವ ಮಾಹೂರ – ಈ ಎರಡೂ ಸ್ಥಾನಗಳು ಮಾತೃದೇವತೆಯ ಅಧಿಷ್ಠಾನದಿಂದಾಗಿಯೇ ಮಾತಾಪುರ> ಮಾಹೂರ ಎಂಬ ಹೆಸರು ಪಡೆದಿರುವುದರಲ್ಲಿ ಸಂಶಯವಿಲ್ಲ.

 

[1]ಆಂಧ್ರಾಕಾ ಸಾಮಾಜಿಕ ಇತಿಹಾಸ: ಸುರವರಮ್ ಪ್ರತಾಪರೆಡ್ಡಿ, ಸಾಹಿತ್ಯ ಅಕಾಡೆಮಿ, ನಯಿದಿಲ್ಲಿ, ೧೯೫೯, ಪುಟ. ೫೯,೨೦೧.

[2]ಅದೇ: ಪುಟ. ೩೧೪.

[3]ಅದೇ: ಪುಟ – ೫೮; Select Kakatiya Temples: by M. Ramarao, Sri Venkateshwara University, Tirupati, 1966, PP. 27,28.

[4]ಕನ್ನಡಮರಾಠಿ ಶಬ್ದಕೋಶ : ಪುಂಡಲೀಕಜೀ ಕಾತಗಡೆ, ಸಾಹಿತ್ಯ ಮತ್ತು ಸಂಸ್ಕೃತಿ ಮಂಡಳ, ಮಹಾರಾಷ್ಟ್ರ ರಾಜ್ಯ, ಪುಟ. ೨೬೪.

[5]ಲೀಳಾ ಚರಿತ್ರ: ಪೂರ್ವಾರ್ಧ ಸಂ. ಡಾ.ಶಂ.ಗೋ.ತುಳಪುಳೆ, ಸುವಿಚಾರ ಪ್ರಕಾಶನ ಮಂಡಳ, ನಾಗಪುರ ಪುಣೆ, ೧೯೬೬, ಪುಟ. ೮೭.

[6]ಸ್ಥಾನಪೋಥಿ (ಸ್ಥಳಪುರಾಣ): ಸಂ. ಡಾ.ವಿ.ಭಿ. ಕೋಲತೆ, ಅರುಣ ಪ್ರಕಾಶನ, ಮಲಕಾಪುರ, ಪುಟ. ೫೦,೧೦೪.

[7]ಪ್ರಬುದ್ಧ ಕರ್ನಾಟಕ: ೨೫.೨, ಪುಟ. ೨೫ – ೩೦ (ಅಡಿ ಟಿಪ್ಪಣಿ).

[8]ಸೌಂದರ್ಯ ಲಹರಿ: ಸಂ. ಪ್ರಾ.ಹ.ಬಾ.ಭಿಡೆ, ಪ್ರಕಾಶನ ಶ್ರೀಮತಿ ಮಾಯಾವತಿ ಭಿಡೆ, ಸೌಂದರ್ಯ ಲಹರಿ: ಸಂ.ಪಿ.ಎನ್.ಎನ್. ಸ್ವಾಮಿ ಧನಪತಿ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೪೬, ಪುಟ. ೧೧೧ ೧೧೭.

[9]ವಿದರ್ಭ ಸಂಶೋಧನ ಮಂಡಳ: ನಾಗಪುರ, ಮಾರ್ಚ್ ೧೯೫೨. ಡಾ.ವಿ.ಭಿ. ಕೋಲತೆ, ಡಾ.ಶಾಂ.ಭಾ.ದೇವ ಮತ್ತು ಅಜಯ ಮಿತ್ರ ಶಾಸ್ತ್ರಿಯವರುಗಳ ಲೇಖನ, ‘ಮಾಹೂರ ಝರಿ ಉತ್ಖನನದ ವಿಸ್ತೃತ ಸಂಶೋಧನ ವೃತ್ತ’ ಎಂಬ ಇತ್ತೀಚೆಗೆ ನಾಗಪುರ ವಿಶ್ವವಿದ್ಯಾಲಯದಿಂದ ಪ್ರಕಟಗೊಂಡ ಕೃತಿ.

[10]ಶಾರದಾಶ್ರಮ ವಾರ್ಷಿಕ: ಶಕ. ೧೮೫೫ ಸಂ.ಯ.ಖು.ದೇಶಪಾಂಡೆ, ಶಾರದಾಶ್ರಮ, ಯವತಮಾಳ, ಪು. ೩೪ (ಅಡಿಟಿಪ್ಪಣಿ).