ಮಾಹೂರ ಮತ್ತು ಮಾಹೂರಝರಿ

ಮಾಹೂರಝರಿಯ ಮೂರ್ತಿಗಳಂತೆಯೇ ಇರುವ ದೇವೀ ಮೂತಿಗಳು ಆಲಂಪುರದಲ್ಲಿಯೂ ದೊರೆತಿವೆ. ಅಲ್ಲಿನ ಸಂಸ್ಕರತ ಸ್ಥಳಮಾಹಾತ್ಮ್ಯೆಯಲ್ಲಿ ಅದನ್ನು ಕರೆದಿರುವುದು ಭೂದೇವಿ ಎಂಬುದಾಗಿ. ಅವಳು ‘ಜೋಗುಳಾಂಬಾ’ ( = ಸಂತಾನದಾತ್ರಿ) ಎಂಬ ಹೆಸರಿನಿಂದ ಜಗತ್‌ ಪ್ರಸಿದ್ಧಳಾಗಿದ್ದರೂ, ಆಕೆಯನ್ನು ರೇಣುಕೆಯೆಂಬ ಹೆಸರಿನಿಂದಲೇ ಗುರುತಿಸಲಾಗುತ್ತಿದೆ. ಈ ಸಂಗತಿಯನ್ನು ಈಗಾಗಲೇ ಆಧಾರ ಸಮೇತ ಮಂಡಿಸಿದ್ದೇನೆ. ಹಾಗೆಯೇ ವಾರಂಗಲ್‌ನ ದುರ್ಗದಲ್ಲಿ ಇರುವ ಏಕವೀರ ಮಂದಿರದಲ್ಲಿನ ಏಕವೀರೆಯ ಮೂರ್ತಿಯೂ ಇದೇ ರೀತಿಯಲ್ಲಿರುವುದಾಗಿ ‘ಕ್ರೀಡಾಬಿರಾಮಮು’ ಕೃತಿಯಲ್ಲಿ (ತೆಲುಗು) ಹೇಳಲಾಗಿರುವ ಸಂಗತಿಯನ್ನೂ ಸಹ ಈಗಾಗಲೇ ವಿವರಿಸಲಾಗಿದೆ. ಆಲಂಪುರ ಮತ್ತು ವಾರಂಗಲ್‌ಗಳಲ್ಲಿನ ಉತ್ತಾನಪಾದ ಶಿರೋಹೀನ ನಗ್ನದೇವಿಯ ಮೂರ್ತಿಗಳಿಗೆ ಭೂದೇವಿ, ರೇಣುಕಾ ಹಾಗೂ ಏಕವೀರಾ ಎಂಬ ಅಭಿದಾನ ಮಾಡಿರುವುದರ ಹಿನ್ನೆಲೆ ಏನೆಂಬುದಕ್ಕೆ ಮಾಹೂರಝರಿಯ ಪೂರ್ವ ನಿರ್ದಿಷ್ಟ ಮೂರ್ತಿಯ ನಾಮ – ಪರಿಚಯವು ನಿಃಸಂಶಯವಾಗಿ ಸಹಾಯಕವಾಗುತ್ತದೆ. ವಿಶಿಷ್ಟ ಬಗೆಯ ಮೂರ್ತಿಯೊಂದರ ಉಪಲಬ್ಧತೆ ಹಾಗೂ ಮಾಹೂರ ಎಂಬ ಉಪಲಬ್ಧ ಸ್ಥಾನದ ಹೆಸರು ಈ ಎರಡು ವಿಷಯಗಳು ಈ ಬಗೆಯ ಅನುಮಾನ ಹುಟ್ಟಿಕೊಳ್ಳಲು ಕಾರಣವಾಗುತ್ತವೆ.ನದಿ ದಂಡೆಯಲ್ಲಿ ಕಟ್ಟಲಾಗಿರುವ (ಪ್ರಣೀತೇಕಾಠ) ಮಾಹೂರಿನ ದೇವಿಯ ಹೆಸರಿನಂತೆಯೇ ಮಾಹೂರಝರಿಯ ಈ ದೇವಿಯ ಹೆಸರು ‘ರೇಣುಕಾ’ ಅಥವಾ ರೇಣುಕೆಯ ಯಾವುದೋ ಒಂದು ಪರ್ಯಾಯ ನಾಮ (ಭೂದೇವಿ, ಏಕವೀರಾ ಇತ್ಯಾದಿ)ವು ಇರುವಂಥ ಸಾಧ್ಯತೆಯಿದೆ.

ಮಾಹೂರಝರಿಯಲ್ಲಿನ ಮಾತೃ ದೇವತೆಯ ಹೆಸರಿನ ಶೋಧನೆ ಮಾಡುವುದಕ್ಕೆ ಮುಂಚೆ ಖುದ್ದಾಗಿ ಮಾಹೂರಿನ ರೇಣುಕೆಯ ಮೂರ್ತಿ ಮತ್ತು ನಾಮಪರ್ಯಾಯಗಳ ಬಗ್ಗೆ ಅಧಿಕೃತವಾಗಿ ಚರ್ಚಿಸುವುದು ಅವಶ್ಯ. ಕಾರಣ ಈ ಎರಡೂ ನೆಲೆಗಳಲ್ಲಿನ ಪೀಠನಾಮಗಳಲ್ಲಿರುವ ಸಂಪೂರ್ಣ ಸಾಮ್ಯದಲ್ಲಿ ದೇವೀ ರೂಪದ ಮತ್ತು ದೇವೀ ನಾಮದ ಸಂಪೂರ್ಣ ಸಾಮ್ಯದ ಸಂಭಾವ್ಯದ ಬಗ್ಗೆಯೂ ನಿಶ್ಚಿತ ಸೂಚನೆ ದೊರೆಯುತ್ತದೆ.

ಮಾಹೂರಿನ ಶಿರೋಹೀನ ನಗ್ನದೇವೀ ಮೂರ್ತಿ

ಆಲಂಪುರದಲ್ಲಿನ ಉತ್ತಾನಪಾದ, ಶಿರೋಹೀನ ನಗ್ನದೇವಿಯು ರೇಣುಕೆಯಾಗಿದ್ದು ಅವಳನ್ನು ಭೂದೇವಿ ( = ಪೃಥ್ವಿ) ಎಂಬುದಾಗಿಯೂ ಕರೆಯುತ್ತಾರೆ ಎಂಬುದನ್ನು ಈಗಾಗಲೇ ಹೇಳಲಾಗಿದೆ. ರೇಣುಕೆಯ ಸರ್ವಾಧಿಕ್ಯ ಖ್ಯತಿಯ ತಾಣವು ಮಾಹೂರ (ಜಿಲ್ಲಾ. ನಾಂದೇಡ್) ದಲ್ಲಿದೆ. ಇಲ್ಲಿನ ರೇಣುಕಾ ಮೂರ್ತಿಯ ಇಂದಿನ ದೃಶ್ಯಮಾನರೂಪ ರೂಕ್ಷಶಿಲೆಯದು. ಇದು ಸ್ವಲ್ಪ ಮಟ್ಟಿಗೆ ನಿಜವೂ ಹೌದು. ಶಿಲೆ ಎಂದರೆ ದೇವಿಯ ಕೇವಲ ಮೂಖದ ಭಾಗವಾಗಿದೆ ಎಂಬುದು ಭಕ್ತರ ಅಭಿಪ್ರಾಯ. ಮಾಹೂರಿನ ರೇಣುಕೆಯೂ ಸಹ ಉತ್ತಾನಪಾದ, ಶಿರೋಹೀನ, ನಗ್ನದೇವಿಯಾಗಿದ್ದು ಪಾರಂಪರಿಕ ಶ್ರದ್ಧೆಯ ನೆಲೆಯಿಂದ ರೂಪುಗೊಂಡಿರುವುದಾಗಿದೆ. ಅಲ್ಲದೆ ಈ ಮಾತಾಪುರ ನಿವಾಸಿನಿಯಾದ ರೇಣುಕೆಗೆ ‘ಪೃಥ್ವಿ’ ಎಂಬ ಪರ್ಯಾಯ ನಾಮವನ್ನು ಬಳಸಲಾಗಿದೆ.

ಹರಿ ಅಂಗಾಪೂರಕರ ಎಂಬ ಕವಿಯು ರಚಿಸಿದ್ದು, ಜೋತಿಬಾನ ಮಾಹಾತ್ಮ್ಯೆಯನ್ನು ಸಾರುವ ‘ಕೇದಾರ ವಿಜಯ’ ಎಂಬ ಹೆಸರಿನ ಓವೀ ಬದ್ಧವಾದ ಗ್ರಂಥವೊಂದು ಪ್ರಕಟವಾಗಿದೆ.[1] ಕೊಲ್ಹಾಪುರಕ್ಕೆ ಹತ್ತಿರದ ‘ವಾಡಿ – ರತ್ನಾಗಿರಿ’ ಎಂಬ ಹೆಸರಿನಿಂದ ಪ್ರಸಿದ್ಧವಾದ ಬೆಟ್ಟದ ಮೇಲಿದೆ ಜೋತಿಬಾನ ಪ್ರಖ್ಯಾತ ಸ್ಥಳವು. ಜೋತಿಬಾನು ಯಮಾಯಿಯ ಪತಿ. ಜೋತಿಬಾ – ಯಮಾಯಿಯರ ವಿವಾಹ ಉತ್ಸವವು ಪ್ರತಿವರ್ಷವೂ ಇಲ್ಲಿ ನಡೆಯುವುದು. ಯಮಾಯಿ ಎಂಬುದು ಲೋಕ ಶ್ರದ್ದೆಯ ದೃಷ್ಟಿಯಿಂದ ರೇಣುಕೆಯದ್ದೇ ಒಂದು ಪರ್ಯಾಯ ನಾಮವಾಗಿದೆ. ಈ ಶ್ರದ್ಧಾನುಸಾರವೇ ಪ್ರಸ್ತುತ ಕೃತಿಯಲ್ಲಿ ಜಮದಗ್ನಿ, ಪರಶುರಾಮ ಮತ್ತು ರೇಣುಕೆಯರ ಕಥೆಯು ಸಮಾವೇಶವಾಗಿದೆ. ತಂದೆಯ ಆಜ್ಞಾನುಸಾರ ಪರಶುರಾಮನು ತನ್ನ ತಾಯಿ ರೇಣುಕೆಯ ಶಿರಚ್ಛೇದ ಮಾಡಿದನು. ಇದರಿಂದ ಸಂತುಷ್ಟನಾದ ಜಮದಗ್ನಿಯು ತನ್ನ ಆಜ್ಞಾಧಾರಕ ಪುತ್ರನಿಗೆ ‘ವರ ಕೇಳು’ ಎಂದು ಹೇಳಿದನು. ತಂದೆಯ ಈ ಪ್ರಸನ್ನ ಮನಃಸ್ಥಿತಿಯ ಅವಕಾಶ ಪಡೆದ ಪರಶುರಾಮನು ‘ವಿಶ್ವವು ಶಕ್ತಿಹೀನವಾಯಿತು’ ಎಂಬುದನ್ನು ಮನವರಿಕೆ ಮಾಡಿಕೊಟ್ಟುದಲ್ಲದೆ, ‘ಈಗಳು ಎಲ್ಲ ಅಪರಾಧಗಳನ್ನು ಕ್ಷಮಿಸುವುದು, ತಾಯಿಯನ್ನು ಎಬ್ಬಿಸುವುದು ಕ್ಷೇಮದೊಳು |’ ಎಂದು ವಿನಂತಿಸಿಕೊಂಡನು. ಅದನ್ನು ಮನ್ನಿಸಿದ ಜಮದಗ್ನಿಯು ‘ರೇಣುಕೆಯ ಶವವನ್ನು ನೀನು ಹೋಮಾಗ್ನಿಯೊಳಗೆ ಹಾಕು, ಅವಳು ದಿವ್ಯ ದೇಹವನ್ನು ಧಾರಣ ಮಾಡಿಕೊಂಡು ರತ್ನಾಗಿರಿಯಲ್ಲಿ ನಿನಗೆ ಭೇಟಿ ಮಾಡುವಳು’, ಎಂಬುದಾಗಿ ಹೇಳಿದನು. ಆ ಪ್ರಕಾರವೇ ಎಲ್ಲವನ್ನೂ ಪರಶುರಾಮನು ಮಾಡಿದನು:

ಅರಿತು ಮುಂದಣ ಭವಿಷ್ಯವನು | ಹಾಕಿದನು ಹೋಮಾಗ್ನಿಯೊಳು ರೇಣುಕೆಯನು |
ತೈಂಭವಾನಿ ವದೇ ಅನಾದಿವೇಷೀ | ಪರಶರಾಮ ಮಾತೆಯು ಆದರದಿ ||

ನುಡಿದಳು ಪುತ್ರ ಕೇಳೀ ಮಾತನು | ನೀನು ನಡೆ ಬರುವೆ ನಾ ಬೆನ್ನೊಳೆ |
ಮಾತೆಯನು ನೋಡಿದರೆ ಹಿಂತಿರುಗಿ ವಿಷಮ ದೃಷ್ಟಿ | ಆಗದು ನಿನಗೆ ಭೆಟ್ಟಿ ||

ನಿರುತವಿದು ಇಂತು ಜ್ವಾಲಾಮುಖಿ – | ನಾಭಿವರೆಗಂ ಬಾಹಿರಳಹಳು ರೇಣುಕಾ |
ಹೊರಟಳು, ಹಿಡಿಯದೇನನ್ನು ಮನದೊಳು ಶಂಕೆ | ಶಂಕೆವೆತ್ತ ರಾಮನಾದರೊ ನೋಡಿದ ||

ನೋಡಲು ಹಿಂದೆ ರಾಮನು ತಿರುಗಿ | ಉಳಿದಳು ಅಲ್ಲಿಯೇ ಕೋಪದಿಂ ರೇಣುಕೆ |
ಪ್ರಕಟವಾಗದು ಇನ್ನು ಎನ್ನಯ ನಗ್ನ ಅಂಗ | ಮಾತಾಪುರ ಮಾಹೂರ ಯಾಲಗಿ ನುಡಿದಳಿಂತು ||
(‘ಕೇದಾರ ವಿಜಯ‘, ೨೭.೧೪೪ – ೧೪೭)

ಈ ಮೇಲಣ ಓವಿಯಲ್ಲಿ ನಾಭಿಯವರೆಗೆ ನಗ್ನವಾಗಿದ್ದ ರೇಣುಕೆಯ ಮೂರ್ತಿಯ ಸ್ಪಷ್ಟ ಉಲ್ಲೇಖವಿದೆ. ಈ ಮುನ್ನ ಹೇಳಿದ ಕಥನಗಳೂ ಕೂಡ ಈ ಬಗೆಯ ಮೂರ್ತಿಗಳ ಸ್ಪಷ್ಟೀಕರಣ ಕಥೆ (Explanatory tale)ಗಳೇ ಆಗಿವೆಯೆಂಬುದು ಸುಸ್ಪಷ್ಟ. ಹೋಮಾಗ್ನಿಯಿಂದ ಕ್ರಮಶಃ ಪ್ರಕಟವಾಗುತ್ತಿದ್ದ ರೇಣುಕೆಯು ಪೂರ್ಣಗೊಳ್ಳುವ ಮುನ್ನವೇ ಶಂಕಾಕುಲಿತನಾದ ಪರಶು ರಾಮನು ಹಿಂದಿರುಗಿ ನೋಡಿಬಿಟ್ಟನು. ಎಂತಲೇ ಆಕೆ ಪೂರ್ಣವಾಗಿ ಪ್ರಕಟಗೊಳ್ಳದೇ ಹಾಗೆಯೇ ನಿಂತುಬಿಟ್ಟಳು. ಅಲ್ಲದೆ ಆಕೆ ರತ್ನಾಗಿರಿಗೆ ಬರಲು ನಿರಾಕರಿಸಿ ಮಾಹೂರಿನಲ್ಲಿಯೇ ಉಳಿದು, ಅದನ್ನೇ ತನ್ನ ನಿವಾಸ ಸ್ಥಾನವನ್ನಾಗಿ ಮಾಡಿಕೊಂಡಳು ಎಂಬುದು ಕಥಾಕಾರನ ಅಂಬೋಣ. ರೇಣುಕೆಯ ಈ ನಾಭಿಪರ್ಯಂತ ನಗ್ನ ಮೂರ್ತಿಯೆಂದರೆ ಶಿರದಿಂದ ನಾಭಿಯವರೆಗೆ ಏನೂ ಇಲ್ಲದ್ದು, ಪಾದಗಳಿಂದ ನಾಭಿಯವರೆಗೆ ಮಾತ್ರ ಇರುವುದು ಎಂದರ್ಥ. ‘ಪ್ರಕಟವಾಗದು ಇನ್ನು ಎನ್ನಯ ನಗ್ನ ಅಂಗ’ ಎಂಬ ರೇಣುಕೆಯ ಮಾತುಗಳಿಂದಲೂ ಇದು ಸ್ಪಷ್ಟವಾಗುತ್ತದೆ. ಈ ಬಗೆಯ ಸ್ಪಷ್ಟೀಕರಣ ಕಥೆಗಳಲ್ಲಿ ಪ್ರಾಯಃ ಯಾವಾಗಲೂ ವಿಸಂವಾದಗಳ ಕೆಲವು ಕುರುಹುಗಳು ಮುಕ್ತವಾಗಿ ಇರುವುದು ಹಾಗೂ ಸತ್ಯಾನ್ವೇಷಣ ದೃಷ್ಟಿಗೆ ಈ ಕುರುಹುಗಳಿಂದಲೇ ಸತ್ಯದ ಮೂಲ ರೂಪದರ್ಶನವನ್ನು ಪಡೆಯುವುದಕ್ಕೆ ಸಾಧ್ಯವುಂಟಾಗುವುದು.

‘ಕೇದಾರ ವಿಜಯ‘ದಲ್ಲಿನ ಈ ಕಥೆಯ ಆಧಾರದಿಂದ ನಾವು ಅರಿಯಬಹುದಾದುದು ಏನೆಂದರೆ, ಮಾಹೂರಿನ ಈ ರೇಣುಕೆಯೂ ಆಲಂಪುರದ ಅಥವಾ ಮಾಹೂರಝರಿಯ ದೇವಿಯಂತೆಯೇ ಉತ್ತಾನಪಾದ, ಶಿರೋಹೀನ ಹಾಗೂ ನಗ್ನರೂಪಿಯಾಗಿದ್ದಾಳೆ. ಜೋತಿಬಾನ ಸ್ತೋತ್ರದ ಸಂದರ್ಭದಲ್ಲಿ ಒಂದೆಡೆ ಅವನಿಗೆ ‘ಏಕವೀರಾಪತಿ’ ಹಾಗೂ ರೇಣುಕಾನಾಥ’ ಎಂಬ ರೇಣುಕೆಯ ಸಾಹಚರ್ಯ ದ್ಯೋತಕ ಹೆಸರುಗಳಿರುವಂತೆಯೇ, ‘ಮೇದಿನೀಪತಿ’ ಎಂದೂ ಕರೆದಿರುವುದುಂಟು. ಅದರ ಅರ್ಥವೇನೆಂದರೆ ಜೋತಿಬಾನು ಕ್ಷೇತ್ರಪಾಲಕ ಇಲ್ಲವೆ ಕ್ಷೇತ್ರಪತಿಯಾಗಿದ್ದರೆ, ರೇಣುಕೆ ಕ್ಷೇತ್ರ, ಭೂದೇವಿ, ಮೇದಿನಿ (ಪೃಥ್ವಿ) – ಎಂದೆನಿಸಿದ್ದಾಳೆ.

ರೇಣುಕೆಗೆ ಇರುವಪೃಥ್ವಿಎಂಬ ನಾಮ

ರೇಣುಕೆಯನ್ನು ಭೂದೇವಿ ಮತ್ತು ಪೃಥ್ವಿಯ ರೂಪವಾಗಿ ಒಪ್ಪಿಕೊಳ್ಳಲಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಅವಳ ಮೂಲರೂಪ ಅದೇ ಆಗಿರುವುದರ ಬಗ್ಗೆ (ಅವಳ ‘ರೇಣುಕಾ’ ಎಂಬ ಹೆಸರಿನಿಂದಲು ಸ್ವಾಭಾವಿಕವಾಗಿ ವ್ಯಕ್ತವಾಗುತ್ತದೆ)ಯೂ ಅನೇಕ ಪುರಾವೆಗಳಿವೆ. ಅವುಗಳನ್ನೆಲ್ಲ ಸಾದರಪಡಿಸಿ, ಆ ಮೂಲಕ ಪ್ರಕಟವಾಗುವ ದೇವತಾ ರಹಸ್ಯಗಳ ಸರ್ವಾಂಗೀಣ ದರ್ಶನ ಪಡೆಯುವುದು ಒಂದು ಬೃಹದ್ ಗ್ರಂಥದ ವಿಷಯವೇ ಆಗಿದೆ. ನನಗೆ ಇಲ್ಲಿ ಈ ವಿಸ್ತೃತತೆಯ ಮೋಹವನ್ನು ಕೈಬಿಡಬೇಕಾದುದು ಅನಿವಾರ್ಯವಾಗಿದೆ. ಮಾಹೂರಿನ ರೇಣುಕೆಗೆ ಯಾವ ಮನೆತನದಲ್ಲಿ ಕುಲದೇವತೆಯಾಗಿ ಪ್ರತಿಷ್ಠೆ ಇರುವುದೋ ಅಂಥ ಒಂದು ಪ್ರಸಿದ್ದ ಮನೆತನವು ಅವಳನ್ನು ಪೃಥ್ವಿ ಎಂಬ ಹೆಸರಿನಲ್ಲಿ ಸ್ವೀಕರಿಸಿರುವ ಅಂಶವನ್ನು ಮುಖ್ಯವಾಗಿಟ್ಟು ಕೊಂಡು ಚರ್ಚಿಸಬಯಸುತ್ತೇನೆ. ಹೈದರಾಬಾದ್‌ನ ‘ರಾಜೇರಾಯ ಗಯಾಂ ಬಹಾದೂರ’ ಎಂಬ ಬಿರುದಾಂಕಿತ ಭಾಲೇರಾವ್ ಮನೆತನದವರು ರೇಣುಕೆಯ ಭಕ್ತರಾಗಿದ್ದು, ಮಾಹೂರಿನ ರೇಣುಕೆಯೇ ಇವರಿಗೆ ಕುಲದೇವತೆಯಾಗಿದ್ದಾಳೆ. ಕುಲದೇವತೆಯ ಹಾಗೂ ಉಪಾಸ್ಯ ದೇವತೆಯ ಹೆಸರುಗಳನ್ನು ತಂತಮ್ಮ ಮನೆತನದ ವ್ಯಕ್ತಿಗಳಿಗೆ ಅತ್ಯಂತ ಶ್ರದ್ಧೆಯಿಂದಲೇ ನಾಮಕರಣ ಮಾಡುವಂತಹ ಪರಂಪರೆ ನಿನ್ನೆ ಮೊನ್ನಿನವರೆಗೂ ಸಾರ್ವತ್ರಿಕವಾಗಿತ್ತು. ಈ ಪರಂಪರೆಯನ್ನು ಅನುಸರಿಸುತ್ತಿದ್ದ ರೇಣುಕೆಯ ಭಕ್ತರಾದ ಭಾಲೆರಾವ್ ಅವರ ಮನೆತನದಲ್ಲಿ ದೇವೀ ಸಂಬಂಧಿತವಾಗಿ ಭವಾನಿಬಾಯಿ, ರೇಣುಕಾ ಬಾಯಿ, ಅಮಬಾಬಾಯಿ, ತುಳಜಾಬಾಯಿ, ದುರ್ಗಾಬಾಯಿ ಇತ್ಯಾದಿ ಸ್ತ್ರೀನಾಮಗಳು, ಭವಾನ್‌ರಾವ್, ಭವಾನಿಶಂಕರ್‌ರಾವ್, ರೇಣುಕಾದಾಸ, ಅಂಬಾದಾಸ ಇತ್ಯಾದಿ ಪುರಷನಾಮಗಳನ್ನು ಸಾಮಾನ್ಯವಾಗಿ ಇಡಲಾಗಿದ್ದುದು ಕಂಡುಬರುತ್ತದೆ. ಈ ಮನೆತನದ ಒಬ್ಬ ವಿದ್ಯಾವಂತ ಪುರುಷನ ಹೆಸರು ‘ಪೃಥ್ವಿರಾಜ’ ಎಂದಿದೆ. ಈ ಹೆಸರಿನಲ್ಲಿರುವ ‘ರಾಜ’ ಎಂಬ ಪದವು ಪೃಥ್ವಿಯ ಸ್ವಾಮಿತ್ವದ ದ್ಯೋತಕವೇನಲ್ಲ, ಅದು ‘ರಾವ್’ ಎಂಬ ಶಬ್ದದಂತೆ ಕೇವಲ ಗೌರವದರ್ಶಕವಾಗಿದೆ. ಅಂದರೆ ‘ಪೃಥ್ವಿರಾಜ‘ವೂ ಸಹ ಭವಾನ್‌ರಾವ್, ತುಳೋಜೀ, ತುಕೋಜಿ, ಅಂಬಾಜಿ ಹೆಸರುಗಳಂತೆ ಪುರುಷನಿಗೆ ಇಡಲಾಗಿರುವಂಥ ಸ್ತ್ರೀ ದೇವತೆಯ ಹೆಸರೇ ಆಗಿದೆ. ‘ರೇಣುಕಾ ಸಹಸ್ರನಾಮಾ’ದಲ್ಲಿಯೂ (ಶ್ಲೋಕ .೧೬) ರೇಣುಕೆಯನ್ನು ‘ಪೃಥ್ವಿ’ ಎಂದು ಕರೆಯಲಾಗಿದೆ.

ಈಗ ನಮಗೆ ಇಷ್ಟು ತಥ್ಯವು ನಿಸ್ಸಂಶಯವಾಗಿ ಗೊತ್ತಾಗಿದೆ, ಪ್ರಣೀತೇಕಾಠದ ಮಾಹೂರದ ರೇಣುಕೆಯೂ ಆಲಂಪುರದ ದೇವತೆಯಂತೆಯೇ ಉತ್ತಾನಪಾದ, ಶಿರೋಹೀನ, ನಗ್ನದೇವಿಯಾಗಿರುವಳು. ಅಲ್ಲದೆ ಅವಳಿಗೂ ‘ಪೃಥ್ವಿ’ ಎಂಬ ಮೂಲರೂಪ ದ್ಯೊತಕವಾದ ಪರ್ಯಾಯ ನಾಮವು ರೂಢಿಯಲ್ಲಿತ್ತು. ಈ ತಥ್ಯದರ್ಶನದ ಹಿನ್ನೆಲೆಯಲ್ಲಿ ಮಾಹೂರಝರಿಯ ಉತ್ತಾನ ಪಾದ, ಶಿರೋಹೀನ, ನಗ್ನ ದೇವಿಯ ಬಗ್ಗೆ ವಿಚಾರ ಮಾಡುವುದು ಉದ್ಭೋಧಕವೆನಿಸುತ್ತದೆ. ಮಾಹೂರ ಮತ್ತು ಮಾಹೂರಝರಿ ಈ ಪೀಠನಾಮಗಳ ಸ್ಪಷ್ಟ ಸಾಮ್ಯಗಳು ಈಗಾಗಲೇ ನಮ್ಮೆದುರಿಗೆ ಇವೆ. ಹಾಗೆಯೇ ಮಾಹೂರಿನ ರೇಣುಕೆಯೂ ಉತ್ತಾನಪಾದ, ಶಿರೋಹೀನ, ನಗ್ನ ರೂಪವಾಗಿ ಇದ್ದುದರ ಉಲ್ಲೇಖವು ನಮಗೆ ದೊರಕಿದೆ. ಇನ್ನು ಮಾಹೂರಝರಿಯಲ್ಲಿಯೇ ದೊರೆತಿರುವ ದೇವೀ ಮೂರ್ತಿಯ ರೂಪವೂ ಕೂಡ ನಮಗೆ ಪ್ರತ್ಯಕ್ಷ್ಯ ನೋಡಲು ಸಿಗುತ್ತದೆ. ಈ ಎರಡು ಪ್ರಬಲ ಸಾಮ್ಯಗಳ ಆಧಾರದಿಂದ ನಾವು ಸಹಜವಾಗಿಯೇ ಊಹಿಸಬಹುದಾದರೆ, ಮಾಹೂರ ಮತ್ತು ಮಾಹೂರಝರಿ ಈ ಎರಡು ಸಮಾನ ನಾಮಕ ಸ್ಥಳಗಳಲ್ಲಿನ ಏಕರೂಪದ ದೇವಿಯ ಹೆಸರಿನಲ್ಲಿಯೂ ಪೂರ್ಣ ಸಾಮ್ಯವು ಇರಲೇಬೇಕು.

ಮಾಹೂರ (= ಮಾತಾಪುರ) ಎಂಬ ಸ್ಥಳನಾಮದಲ್ಲಿರುವುದು ದೇವಿಯ ಜಗನ್ಮಾತೃತ್ವದ ಸೂಚನೆ. ಇನ್ನು ರೇಣುಕಾ ಅಥವಾ ಪೃಥ್ವಿ ಎಂಬ ದೇವಿಯ ಏಕಾರ್ಥಕ ನಾಮದಲ್ಲಿಯೂ ಅವಳ ಮೂಲ ಸ್ವರೂಪದ ಸೂಚನೆ ಇದೆ. ಮಾಹೂರಝರಿ ಎಂಬ ಸ್ಥಳನಾಮವು ದೇವಿಯ ಜಗನ್ಮಾತೃತ್ವದ ದೃಷ್ಟಿಯ ಹಿನ್ನೆಲೆಯಲ್ಲಿ ‘ಮಾತಾಪುರ‘ವೇ ಆಗಿದ್ದಿರಬಹುದು ಎನಿಸುತ್ತದೆ. ಆದರೆ ಅದು ಅವಳ ಮೂಲ ಸ್ವರೂಪದ ದೃಷ್ಟಿಯಿಂದ ‘ಪೃಥ್ವೀಪುರ‘ವಾಗಿರಬಹುದು ಅಥವಾ ಹಾಗಿರುವ ಸಂಭವವೂ ಉಂಟು. ಈ ಬಗೆಯ ಅಪೇಕ್ಷೆ ಅಥವಾ ಸಂಭವನೀಯತೆಗೆ ಸತ್ಯದ ಪ್ರತಿಷ್ಠೆಯು ಪ್ರಾಪ್ತವಾಗಬೇಕಾದರೆ ಸಾಕಷ್ಟು ಪುರಾವೆಗಳು ಬೇಕು.

ಪೃಥ್ವೀಪುರವು ಇರುವುದಾದರೂ ಎಲ್ಲಿ?

೧೯೭೧ ಜೂನ್ ತಿಂಗಳಲ್ಲಿ ವಾಕಾಟಕರ ನೃಪತಿ ದ್ವಿತೀಯ ಪೃಥ್ವಿಶೇಣನ ಒಂದು ತಾಮ್ರಪಟ ಮಾಹೂರಝರಿಯಲ್ಲಿ ದೊರಕಿದೆ. ಡಾ.ವಿ.ಭಿ.ಕೋಲತೆ ಅವರು ಸಂಪಾದಿಸಿ ಈ ತಾಮ್ರಪಟವು ಅದೇ ವರ್ಷ ‘ವಿದರ್ಭ ಸಂಶೋಧನ ಮಂಡಳ ವಾರ್ಷಿಕ‘ದಲ್ಲಿ ಪ್ರಕಟವಾಯಿತು.[2] ಈ ದಾನಪತ್ರವು ‘ಪೃಥಿವೀ ಸಮುದ್ರ’ ಎಂಬ ಸ್ಥಾನದಿಂದ ನೀಡಿದುದಾಗಿದ್ದು, ‘ಪೃಥಿವೀಪುರ‘ದಲ್ಲಿನ ವಿಷ್ಣುದತ್ತ ಮತ್ತು ಭವದತ್ತ ಎಂಬಿಬ್ಬರು ಬ್ರಾಹ್ಮಣರಿಗೆ ಜಮಲಖೇಟಕ ಎಂಬ ಊರನ್ನು ದಾನವಾಗಿ ಕೊಟ್ಟುದರ ಉಲ್ಲೇಖ ಅದರಲ್ಲಿದೆ.

‘ಪೃಥಿವೀ ಸಮುದ್ರ’ ಮತ್ತು ‘ಪೃಥಿವೀಪುರ’ ಎಂಬ ಸ್ಥಾನಗಳ ಬಗ್ಗೆ ಪ್ರಸ್ತುತ ತಾಮ್ರಪಟವನ್ನು ಸಂಪಾದಿಸಿರುವ ಡಾ. ವಿ.ಭಿ.ಕೋಲತೆಯವರು ಏನನ್ನೂ ಹೇಳಿಲ್ಲ. ಸ್ಥಾನ ನಿಶ್ಚಯದ ಸಂದರ್ಭದಲ್ಲಿ ಅವರ ಬರಹವಿಂತಿದೆ: “ಎಲ್ಲಿಂದ ಈ ತಾಮ್ರಪಟವು ಕೊಡಲ್ಪಟ್ಟಿದೆಯೋ, ಆ ಪೃಥಿವೀ ಸಮುದ್ರವೆಂಬ ಊರು ನಿಶ್ಚಿತ ಸ್ವರೂಪದಿಂದ ಶೋಧವಾಗುವುದಿಲ್ಲ. ಈ ಊರಿನ ಹೆಸರಿನ ಆರಂಭದಲ್ಲಿನ ‘ಪೃಥಿವೀ’ ಎಂಬ ರಾಜನ ನಾಮವನ್ನು ಬಿಟ್ಟು, ‘ಸಮುದ್ರ’ ಎಂಬ ಗ್ರಾಮ ನಾಮದ ಅನುಷಂಗದಿಂದಲೇ ಅದರ ಶೋಧಕ್ಕೆ ಕೈಹಾಕಬೇಕು. ವಾಕಾಟಕರ ಶಾಖೆಯಾಗಿದ್ದ ರಾಜ್ಯವೊಂದು ಪೂರ್ವವಿದರ್ಭದಲ್ಲಿ ಇದ್ದುದರಿಂದಾಗಿ ಆ ಭಾಗದಲ್ಲಿಯೇ ಎಲ್ಲೋ ಒಂದೆಡೆ ಈ ರಾಜಧಾನಿಯ ಊರೊಂದು ಇದ್ದಿರಬಹುದಾದ ಶಕ್ಯತೆಯಿದೆ. ಈ ದೃಷ್ಟಿಯಿಂದ ನೋಡಿದರೆ ನಾಗಪುರ ಜಿಲ್ಲೆಯ ಸಾವನೇರ ತಾಲೂಕಿನಲ್ಲಿರುವ ‘ಸಮುದ್ರೀ‘, ವರ್ಧಾ (ಜಿಲ್ಲೆ ಹಾಗೂ) ತಾಲೂಕಿನಲ್ಲಿರುವ ‘ಕ್ಷೀರ ಸಮುದ್ರ’ ಮತ್ತು ಹಿಂಗಣಘಾಟ್ ಎಂಬ ತಾಲೂಕಿನಲ್ಲಿರುವ ‘ಸಮುದ್ರುಪುರ’ – ಈ ಊರುಗಳು ವಿಚಾರಾರ್ಹವೆನಿಸುತ್ತವೆ. ವಾಕಾಟಕರ ರಾಜಧಾನಿಯು ಪೂರ್ವದ ಕಡೆಯಿಂದ ಪಶ್ಚಿಮದ ಕಡೆಗೆ ಸ್ಥಳಾಂತರಗೊಂಡುದರಿಂದ ಪ್ರವರ ಪುರದಿಂದ ಮತ್ತೆ ಪೂರ್ವದತ್ತಲೇ ಅರಸುವುದು ಸಂಭವನೀಯವೆನಿಸುವುದಿಲ್ಲ. ಹಾಗಾಗಿ ‘ಸಮುದ್ರೀ’ ಊರಿನ ವಿಚಾರವನ್ನು ಕೈಬಿಡಬಹುದು. ವರ್ಧಾ ತಾಲೂಕಿನಲ್ಲಿರುವ ‘ಕ್ಷೀರ ಸಮುದ್ರ‘ವು ಪವನಾರಕ್ಕೆ ಹತ್ತಿರದಲ್ಲಿ ವಾಯುವ್ಯಕ್ಕೆ ಆರು ಮೈಲು ಅಂತರದಲ್ಲಿ ಇದೆ. ರಾಜಧಾನಿಯನ್ನು ಬದಲಾಯಿಸಿದಾಗ ಅದನ್ನು ಇಷ್ಟು ಹತ್ತಿರದಲ್ಲಿಯೆ ಮಾಡಿರುವುದಂತೂ ಸಾಧ್ಯವಿಲ್ಲ. ‘ಸಮುದ್ರಪುರ‘ವನ್ನೇ ರಾಜಧಾನಿಯನ್ನಾಗಿ ಬದಲಾಯಿಸಿ ಕೊಂಡಿರಬಹುದಾದ ಸಾಧ್ಯತೆಯೇ ಅಧಿಕವಾಗಿದೆ. ಪವನಾರದಿಂದ (ಪ್ರವರ ಪುರ) ಆಗ್ನೇಯಕ್ಕೆ ಸಮುದ್ರಪುರವು ಸುಮಾರು ಇಪ್ಪತ್ತು ಮೈಲು ದೂರದಲ್ಲಿದೆ. ಬಹುಶಃ ಇದೇ ‘ಪೃಥಿವೀಸಮುದ್ರ‘ವಾಗಿರಬಹುದು ಎನಿಸುತ್ತದೆ. ‘ಕ್ಷೀರಸಮುದ್ರ‘ವೂ ಸಹ ‘ಪೃಥವೀಪುರ‘ವಾಗಿರುವ ಸಾಧ್ಯತೆಯು ಇಲ್ಲದಿಲ್ಲ. ಯಾವ ಬ್ರಾಹ್ಮಣನಿಗೆ ಅವನಿದ್ದ ಊರನ್ನೇ ದಾನವಾಗಿ ಕೊಡಲಾಗಿತ್ತೋ ಆ ‘ಪೃಥಿವೀಪುರ‘ದ ಶೋಧವು ಸಾಧ್ಯವಾಗಿಲ್ಲ.”[3]

ಡಾ. ಕೋಲತೆಯವರ ವಿವೇಚನೆಯ ಸಾರವನ್ನು ಹೀಗೆ ಮಂಡಿಸಬಹುದು:

೧. “ಪೃಥಿವೀ ಸಮುದ್ರ ಎಂಬುದು ಒಂದು ಊರಿನ ಹೆಸರು. ಅದು ಪೃಥಿವೀಶೇಣ ದೊರೆಯ ರಾಜಧಾನಿಯಾಗಿದ್ದಿರಬೇಕು. ವಾಕಾಟಕರು ತಮ್ಮ ರಾಜಧಾನಿಯನ್ನು ಪೂರ್ವದ ಕಡೆಯಿಂದ ಪಶ್ಚಿಮದತ್ತ ಬದಲಾಯಿಸಿದುದನ್ನು ಗಮನದಲ್ಲಿ ಇಟ್ಟು ಕೊಂಡರೆ, ಪೃಥಿವೀ ಸಮುದ್ರವೆಂಬ ಊರು ಪವನಾರ (ಪ್ರವರ ಪುರ) ಎಂಬ ಮೊದಲಿನ ರಾಜಧಾನಿಗೆ ಪಶ್ಚಿಮಕ್ಕೇ ಇರಬೇಕು. ಈ ದೃಷ್ಟಿಯಿಂದ ಪೃಥಿವೀ ಸಮದ್ರ ಎಂಬ ಈ ಊರು ಸಮುದ್ರಪುರ (ತಾಲೂಕ್‌ – ಹಿಂಗಳಾಘಾಟ್, ಜಿಲ್ಲೆ – ವರ್ಧಾ) ಮತ್ತು ಕ್ಷೀರ ಸಮುದ್ರ (ತಾಲೂಕ್‌, ಜಲ್ಲೆ – ವರ್ಧಾ) ಇವುಗಳ ಪೈಕಿ ಒಂದಾಗಿರಬಹುದು.

೨. ಪೃಥವೀಪುರ ಎಂಬುದು ಪೃಥಿವೀ ಸಮುದ್ರ ಎಂಬ ಊರಿನಿಂದ ಬೇರೆಯಾದಾಗಿದ್ದು, ಅದನ್ನು ಗುರುತಿಸುವುದು ಸಾಧ್ಯವಾಗಿಲ್ಲ.

ಮಾಹೂರಝರಿಯೇ ಪೃಥಿವೀಪುರ

ಡಾ. ಕೋಲತೆಯವರು ಪೃಥಿವೀ ಸಮುದ್ರ ಎಂಬ ಊರು ಇದ್ದಿರಬೇಕು ಎಂಬುದಾಗಿ ಗ್ರಹಿಸಿಕೊಂಡಿದ್ದುದರಿಂದ ಹಾಗೂ ಪೃಥಿವೀ ಸಮುದ್ರವನ್ನು ಪೃಥಿವೀಪುರದಿಂದ ಬೇರೆಯಾಗಿ ಕಂಡುದರಿಂದ ಸ್ಥಳ ನಿಶ್ಚಯದ ಅವರ ದಿಶೆಯು ಬೇರೆಡೆ ಹೋಗುವಂತಾಯಿತು ಎಂಬುದು ನನ್ನ ಅನಿಸಿಕೆ. ಈ ಸಂದರ್ಭದಲ್ಲಿ ಸಕ್ರಮವಾಗಿ ಶೋಧನೆಗೆ ತೊಡಗಿದಾಗ ನನಗೆ ಲಭಿಸಿದ ಈ ಕೆಲವು ಅಂಶಗಳತ್ತ ಗಮನಹರಿವುದು ಅವಶ್ಯ:

೧. ‘ಪೃಥಿವೀಸಮುದ್ರ‘ವು ಗ್ರಾಮ ನಾಮವಾಗಿರದೆ, ಒಂದು ತೀರ್ಥ ನಾಮವಾಗಿರಬೇಕು. ಸಮುದ್ರ ಎಂಬುದು ತಟಾಕ (ಕೆರೆ, ಹೊಂಡಗಳನ್ನು ಕುರಿತ) ವಾಚಕ ಶಬ್ದವಾಗಿದೆ.

೨. ‘ಪೃಥಿವೀಸಮುದ್ರ’ ಎಂಬ ಕೆರೆಯ ‘ಪೃಥಿವೀಪುರ’ ಎಂಬ ಊರಿನದ್ದೇ ಇರಬೇಕು.

೩. ಪವಿತ್ರ ಜಲಪ್ರವಾಹದ ಅಥವಾ ಜಲಾಶಯದ ತಟದಲ್ಲೂ ದಾನ ಕೊಡುವ ರೂಢಿಯು ಬಹಳೇ ಪರಂಪರಾಗತವಾದುದು. ಆದ್ದರಿಂದ ಪೃಥಿವೀಶೇಣ ದೊರೆಯು ಪೃಥಿವೀಪುರದಲ್ಲಿನ ಪೃಥಿವೀಸಮುದ್ರದ ತಟದ ಮೇಲೆ ದಾನ ಪತ್ರ ಕೊಟ್ಟಿರುವುದು ಸ್ವಾಭಾವಿಕವಾಗಿದೆ.

೪. ಪ್ರಸ್ತುತ ದಾನಪತ್ರ ಮಾಹೂರಝರಿಯಲ್ಲಿ ದೊರಕಿದೆ. ಮಾಹೂರಝರಿಯಲ್ಲಿ ಸಂಶೋಧಕರಿಗೆ ಈವರಿಗೆ ವಾಕಾಟಕರ ಕಾಲದ ಇಟ್ಟಿಗೆ, ಮುದ್ರೆ ಮತ್ತಿತರೆ ಅವಶೇಷಗಳು ವಿಫುಲವಾಗಿ ದೊರೆತಿದೆ. ಆದ್ದರಿಂದ ಮಾಹೂರಝರಿ ಎಂಬ ಈ ಸ್ಥಳವು ವಾಕಾಟಕ ಸಂಸ್ಕೃತಿಯ ಒಂದು ಜಾಗೃತ ಕೇಂದ್ರವಾಗಿತ್ತು ಎಂಬುದು ಸಿದ್ಧವಾಗುತ್ತದೆ.

೫. ದಾನಪತ್ರವು ಇಲ್ಲಿಯೇ ದೊರಕಿರುವುದರಿಂದ ಈ ಮಾಹೂರಝರಿಯೇ ಪೃಥಿವೀಪುರ ಆಗಿರಲೇಬೇಕು. ಮಾಹೂರ (= ಮಾತಾಪುರ) ಮತ್ತು ಪೃಥಿವೀಪುರ ಇವು ಏಕಾರ್ಥಕವಾದ ಗ್ರಾಮ ನಾಮಗಳಾಗಿವೆ.

೬. ವಾಕಾಟಕ ರಾಜನು ತನ್ನನ್ನು ‘ಹಾರೀತೀಪುತ್ರ‘ನೆಂದು ಕರೆದುಕೊಂಡಿದ್ದಾನೆ.[4] ಹಾರೀತೀ ಎಂಬುವವಳು ಒಬ್ಬ ಮಾತೃದೇವತೆಯೇ.

೭. ಹರಿಷೇಣ, ದಾಮೋದರಸೇನ ಇತ್ಯಾದಿ ಹೆಸರುಗಳಲ್ಲಿ ಪೂರ್ವಪದವು ಹೇಗೆ ದೇವ ವಾಚಕವಾಗಿದೆಯೋ, ಹಾಗೆಯೇ ಪೃಥಿವೀಶೇಣ ಎಂಬ ಹೆಸರಿನಲ್ಲಿನ ‘ಪೃಥ್ವಿ’ ಎಂಬ ಪೂರ್ವ ಪದವೂ ದೇವತಾ ವಾಚಕವೇ ಆಗಿದೆ. ಇದು ಮಾಹೂರಿನ ಅಥವಾ ಮಾಹೂರಝರಿಯ ಮಾತೃದೇವತೆಯ ಮೂಲರೂಪದ ದರ್ಶಕ ಪರ್ಯಾಯ ನಾಮವೂ ಹೌದು.

೮. ತಾನು ಮಾತೃದೇವತೆಯ ಪುತ್ರನೆಂದು ಹೇಳಿಕೊಳ್ಳುವ ರಾಜಪುರುಷರ ಮಾಲಿಕೆಯು ಪರಂಪರಾಗತವಾದುದು. ಅಂತೆಯೇ ಮಾತೃದೇವತೆಯ ಹೆಸರಿನೊಂದಿಗೆ ಪೂರ್ಣತಃ ಸಂಬಂಧಿಯಾಗಿರುವ ಪೃಥಿವೀಶೇಣನು ಮಾತೃದೇವತೆಯ ನಿವಾಸ ಸ್ಥಾನ ಹಾಗೂ ತನ್ನ ಹೆಸರಿನ ಸ್ಮಾರಕವಾಗಿ ಮಾಹೂರಝರಿಗೆ ‘ಪೃಥಿವೀಪುರ’ ಎಂಬ ಅಭಿದಾನವಿರಿಸಿ ಕೊಂಡಿರುವುದು ಎಲ್ಲ ರೀತಿಯಿಂದಲೂ ಉಚಿತವಾಗಿದೆ.

ಈ ಸುಸಂಗತವಾದ ಊಹೆಯ ಹಿನ್ನೆಲೆಯಲ್ಲಿ ಹೇಳಬಹುದಾದರೆ, ಮಾಹೂರಝರಿ ಎಂಬೂರು ವಾಕಾಟಕರ ಕಾಲದಲ್ಲಿ ಮಾತೃಪುರ ಮತ್ತು ಪೃಥಿವೀಪುರ ಎಂಬ ಉಭಯ ನಾಮಗಳಿಂದ ಪ್ರಸಿದ್ಧವಾಗಿತ್ತು. ಹಾಗೂ ಪೃಥ್ವಿಮಾತೆ ಇಲ್ಲವೆ ರೇಣುಕೆಯ ಉಪಾಸನೆಯ ಪ್ರಮುಕ ಕೇಂದ್ರವೂ ಆಗಿತ್ತು. ಹಂಟರ್ ಅವರು ತಮಗೆ ಲಭಿಸಿದ ದೇವೀ ಮೂರ್ತಿಗಳ ಬಗ್ಗೆ ವರ್ಣಿಸು ವಾಗ್ಗೆ ಹೇಳಿರುವ ‘ಭೂಮಿ ರೂಪ ಮಾತೃದೇವತೆ’ (Earth – Mother Goddess) ಎಂಬುದು ಈ ಹಿನ್ನೆಲೆಯಲ್ಲಿ ಯಥಾರ್ಥವಾದುದೇ ಆಗಿದೆ.

ಮಹಾಕೂಟ, ಆಲಂಪುರ ಮತ್ತು ಮಾಹೂರಝರಿಗಳಲ್ಲಿನ ಈ ವಿಚಿತ್ರ ರೂಪದ ದೇವತೆಗಳ ಒಂದೂವರೆ ಸಾವಿರ ವರ್ಷಗಳ ಇತಿಹಾಸವನ್ನು ನೋಡಿದಾಗ ನಮಗೆ ಒಮದು ಸಂಗತಿಯು ಸ್ಪಷ್ಟವಾಗುತ್ತದೆ. ಕಾಲಾಂತರದಲ್ಲಿ ಶಕ್ತಿರೂಪ ಧರಿಸಿ ಶಿವನೊಂದಿಗೆ ವೈಭವದಿಂದ ಮೆರೆಯುತ್ತಿರುವ ಈ ದೇವಿಯು ಮೂಲತಃ ‘ಭೂದೇವಿ‘ಯೇ ಆಗಿದ್ದಾಳೆ, ‘ಪೃಥ್ವಿ‘ಯೇ ಆಗಿದ್ದಾಳೆ. ಆಲಂಪುರ (ಮತ್ತು ಬಹುತೇಕ ಮಾಹೂರಝರಿ)ದಲ್ಲಿ ಅವಳಿಗೆ ಇರುವುದು ರೇಣುಕೆಯ ಚರಿತ್ರೆ. ಆ ರೇಣುಕೆಯಿಂದಾಗಿಯೇ ಈ ದೇವಿಯ ರೂಪರಹಸ್ಯವನ್ನು ಭೇದಿಸುವುದಕ್ಕೆ ಪೂರ್ಣವಾಗಿ ಸಾಧ್ಯವಾಯಿತು:

೧. ರೇಣುಕಾ ಎಂಬುವವಳೇ ಭೂದೇವಿ. ಅವಳ ‘ರೇಣುಕಾ’ ಎಂಬ ಹೆಸರು ಪೃಥ್ವೀ ವಾಚಕವೇ ಆಗಿದೆ. ರೇಣು+ಕಾ = ರೇಣುಮಯಿ = ಪೃಥ್ವಿ.

೨. ಮೃದು ಕಣಗಳಿಂದ ಮಾಡಿದ ಹುತ್ತವೇ ರೇಣುಕೆಯ ಉಪಾಸನೆಗಾಗಿ ಬಳಸುತ್ತಿರುವ ನೈಸರ್ಗಿಕವಾದ ಪ್ರತೀಕ. ಹುತ್ತವು ಪೃಥ್ವಿಯ ಯೋನಿ – ಗರ್ಭಾಶಯದ ಪ್ರತೀಕವಾಗಿದೆ. ‘ಪೊಟ್ಟು’ ಎಂಬ ದಾಕ್ಷಿಣಾತ್ಯ ಶಬ್ದದಿಂದ ಬಂದಿರುವುದಾಗಿದೆ. ‘ಪೋಟ್‌’ ( = ಗರ್ಭಾಶಯ)ಗೆ ‘ಹುತ್ತ‘ವು ಈ ಉಭಯ ಅರ್ಥಗಳಿಗೆ ದ್ಯೋತಕ.

೩. ಹುತ್ತದ ರೂಪದಲ್ಲಿ ಪೂಜಿಸಲಾಗುತ್ತಿರುವ ಮಾತಂಗಿ ಹಾಗೂ ಸಾಂತೇರಿಯರೆಂಬ ಇಬ್ಬರು ದೇವಿಯರೂ ಸಹ ರೇಣುಕೆಯ ಸಮರೂಪದವರೇ – ಅಷ್ಟೇ ಏಕೆ ಏಕ ರೂಪದವರೇ ಆಗಿದ್ದಾರೆ. ಮಾತಂಗಿಯ ಚರಿತ್ರೆಯು ರೇಣುಕಾಳಿಗೆ ಹಂದಿಕೊಳ್ಳುತ್ತದೆ. ದಕ್ಷಿಣ ಕೊಂಕಣ ಹಾಗೂ ಗೋಮಾಂತಕ ಪ್ರದೇಶಗಳಲ್ಲಿ ಪ್ರಸಿದ್ಧವಾಗಿರುವ ಸಾಂತೇರಿಯು ಪರಶುರಾಮ ಸ್ಥಾಪಿತಳೆಂಬುದು ಪಾರಂಪರಿಕ ಕಥನವಾಗಿದೆ.

೪. ರೇಣುಕೆಯ ಮಾಹಾತ್ಮ್ಯೆಯ ಪ್ರಕಾರ ಆಕೆಯನ್ನು ಅದಿತಿಯ ಅವತಾರವೆಂದು ಹೇಳಲಾಗುತ್ತಿದೆ. ಅದಿತಿಯು ಪೃಥ್ವಿಯೇ ಎಂಬ ವೈದಿಕ ಋಷಿಗಳ ಮತವು ಸುವಿಖ್ಯಾತವಾದುದು.

೫. ವಿಶ್ವವನ್ನೇ ತನ್ನ ಗರ್ಭದಲ್ಲಿ ಧಾರಣೆ ಮಾಡಿಕೊಂಡಿರುವ ಪೃಥ್ವಿಯನ್ನು ವೈದಿಕ ಋಷಿಗಳು ‘ಉತ್ತಾನಾಮಹೀ ಪೃಥ್ವೀ’ (Earth Great Nude) ಎಂದು ಸ್ತುತಿಸಿದ್ದಾರೆ. ಈ ವರ್ಣನೆಯು ಮಹಾಕೂಟಾದಿ ಸ್ಥಳಗಳಲ್ಲಿ ದೊರೆತಿರುವ ಭೂದೇವಿಯ ರೂಪದೊಂದಿಗೆ ಸರ್ವಥಾ ಹೋಲುತ್ತದೆ.

೬. ದಕ್ಷಿಣ ಭಾರತದಲ್ಲಿ ಯೋನಿಯ ಪ್ರತೀಕವಾಗಿರುವ ನಿಸರ್ಗದತ್ತ ಹುತ್ತವನ್ನು ಅತಿ ಪ್ರಾಚೀನ ಕಾಲದಿಂದ ಇಂದಿನವರೆಗೂ ಅಖಂಡವಾಗಿ ಉಪಾಸನೆ ಮಾಡುತ್ತಾ ಬರಲಾಗಿದೆ. ಹುತ್ತವು ಬಹಳೇ ನಾಜೂಕಾದುದಾಗಿರುವಂತೆ ಈ ಸದೃಶದಲ್ಲಿ ರೂಪುಗೊಂಡ ಶಿಲಾಮೂರ್ತಿಯ ಬಳಕೆಯೂ ಕೆಲವೆಡೆ ಉಪಲಬ್ಧವಾಗಿವೆ. ಹುತ್ತದ ಶಿಲಾರೂಪ ಪ್ರತಿಕೃತಿಯ ನಂತರದಲ್ಲಿ ನಾಭಿಯವರೆಗಿನ ಯೋನಿ ಮೂರ್ತಿಯ ರಚನೆಯು ಆರಂಭವಾಯಿತು. ಹಾಗೆಯೇ ಪ್ರಸವದ ಜೊತೆಜೊತೆಗೆ ಪೋಷಣೆಯೂ ಕೂಡ ಮಾತೃತ್ವದೊಂದಿಗೇ ಸಂಬಂಧಪಟ್ಟುದಾಗಿರುವುದರಿಂದ ಯೋನಿಯಂತೆ ಸ್ತನಗಳಿಗೂ ಮಹತ್ವ ಪ್ರಾಪ್ತವಾಗಿ ಸ್ಕಂದಗಳವರೆಗೆ ಮೂರ್ತಿಯು ನಿರ್ಮಾಣವಾಗತೊಡಗಿತು. ಭೂದೇವಿಯ ಸೃಜನಶೀಲ (ಮತ್ತು ಶೋಷಣ) ಇಂದ್ರಿಯಗಳ ಮೂರ್ತಿಯಾಗಿದ್ದ ಇದು, (ಹುತ್ತ) ಯೋನಿ ಸ್ತನಯುಕ್ತ ಮೂರ್ತಿಯಾಗುವ ತನಕ ಆದ ಕ್ರಮವಿಕಾಸವನ್ನು ಪುರಾವೆಗಳೊಂದಿಗೆ ಸಿದ್ಧಮಾಡಲು ಬರುತ್ತದೆ.

೭. ‘ಬೀಜ’ ವನ್ನು ಉದರದಲ್ಲಿ ಮೊಳೆಯಿಸುವ ಈ ದೇವತೆಯ ಸಂಬಂಧವಾಗಿ ವಿಭಿನ್ನ ವಾದ ನಾಮ – ರೂಪಗಳಿಂದ ಹಾಗೂ ಪ್ರತೀಕಗಳಿಂದ ಪೂಜಿಸುವ ಕ್ಷೇತ್ರಪತಿಗಳ ಇಲ್ಲವೆ ಕ್ಷೇತ್ರಪಾಲಕರ ಸ್ವರೂಪನ್ನು ಅನಾವರಣಗೊಳಿಸಲು ಬರುತ್ತದೆ.

೮. ಭಾರತದಲ್ಲಿನ ಈ ವಿಚಿತ್ರರೂಪೀ ದೇವಿಯ ಉಪಾಸನೆಯು ಯಾವುದೇ ವಿದೇಶೀ ದೇವಿಯರೊಂಡನೆ ಸಂಬಂಧ ಹೊಂದಿಲ್ಲ. ಈ ಬಗೆಯ ಕೇವಲ ಯೋನಿ ರೂಪದ ಇಲ್ಲವೆ ಯೋನಿಸ್ತನ ರೂಪದ (ಶಿರೋವಿಹೀನ) ದೇವಿಯ ಮೂರ್ತಿಗಳು ಬೇರೆಲ್ಲಿಯೂ ಉಪಲಬ್ಧವಾಗಿಲ್ಲ. ವಿದೇಶದಲ್ಲಿನ ದೇವೀ ಮೂರ್ತಿಯೊಂದಿಗೆ ಈ ಭಾರತೀಯ ಮೂರ್ತಿಯು ಕೆಲವು ವಿಷಯಗಳಲ್ಲಿ ಸಾಮ್ಯ ಹೊಂದಿವೆ. ಆದರೆ ಅದು ಕೇವಲ ನಿರ್ಮಿತಿಯ ಆದಿಕಾರಣವಾಗಿ. ಅಂದರೆ ದೇವಿಯ ವಿಷಯದಲ್ಲಿರುವ ಸಮಾನ ಮಾನವೀಯ ಅಂಶಗಳೊಂದಿಗೆ ಮಾತ್ರ.

೯. ಭೂದೇವಿಯ ಈ ಉಪಾಸನಾ ಕ್ಷೇತ್ರದಲ್ಲಿ ಆರ್ಯ ದ್ರಾವಿಡವೆಂಬ ಭೇದವು ಉಳಿದುಕೊಂಡಿದೆ. ಈ ವಾಸ್ತವ ಮತ್ತು ಕಾಲ್ಪನಿಕ ಭೇದಗಳ ಅತೀತವಾಗಿಯೂ ಅವಳ ಉಪಾಸನೆಯು ಏನಿಲ್ಲವೆಂದರೂ ಮೂರು ಸಾವಿರ ವರ್ಷಗಳಷ್ಟು ಹಿಂದಿನಿಂದಲೇ ಪ್ರಬಲವಾಗಿದ್ದುದು ಕಂಡು ಬರುತ್ತದೆ.

ರೇಣುಕೆಯ ಚರಿತ್ರೆಯ ಮತ್ತು ಉಪಾಸನಾ ಸ್ವರೂಪದ ಗವಾಕ್ಷಿಯಿಂದ ಭೂದೇವಿಯ ಯೋನಿ ಪೂಜೆ ಮೂರು ಸಾವಿರ ವರ್ಷಗಳ ಅದ್ಭುತ ಚಿತ್ರಪಟವನ್ನು ತೋರಿಸಿಕೊಡಬಹುದಾಗಿದೆ.

ಮಂದಿರ ಮತ್ತು ಸಂಗ್ರಹಾಲಯ

ಈ ಏನೆಲ್ಲವೂ ಯಾವ ಶ್ರದ್ಧೆಯಿಂದಾಗಿ ಘಟಿಸಿತೋ, ಆ ಶ್ರದ್ಧೆಯ ಲೀಲೆಯು ಹೀಗೆ ವಿಪರೀತವಾಗಿ ಬಿಟ್ಟಿದೆ. ಏಕೆಂದರೆ ನಾವೇ ಉದಾರೀಕರಿಸಿದ ದೇವಿಯ ಮೂಲರೂಪವು ಇಂದು ಉಪೇಕ್ಷೆಗೆ ಒಳಗಾಗಿದೆ. ಮಹಾಕೂಟದಲ್ಲಿ ಆ ಮೂಲರೂಪವು ಇಂದು ಒಂದು ಮೂಲೆಯಲ್ಲಿ ಬಿದ್ದು ಕಾಲದ ನಿಷ್ಕರುಣ ಪ್ರಹಾರಕ್ಕೆ ಒಳಗಾಗಿದ್ದರೆ, ಆಲಂಪುರದಲ್ಲಿ ಆ ಮಂದಿರದಿಂದಲೇ ಬಹಿಷ್ಕೃತಗೊಂಡು ಸಂಗ್ರಹಾಲಯದಲ್ಲಿನ ಹಾದಿಯಲ್ಲಿನ ಮೂಲೆಯಲ್ಲಿ ಬಿಸುಡಲ್ಪಟ್ಟಿದೆ.

ಮನುಷ್ಯ ಶ್ರದ್ಧೆಯ ಈ ನಡೆಯು ಎಷ್ಟೇ ವಿಚಿತ್ರವೆನಿಸಿದರೂ, ಅವುಗಳ ದಿಶೆಯ ಪರಿಯಂತೂ ಈ ನೆಲೆಗೆ ಬಂದು ಬಿಟ್ಟಿದೆ. ದೇವತೆಗಳ ಚರಿತ್ರೆಯ ಶೋಧನೆಯಿಂದ ಈ ಬಗೆಯ ಸಿದ್ಧಾಮತವನ್ನು ರೂಪಿಸುವುದಕ್ಕೆ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಈ ಸಿದ್ಧಾಂತವನ್ನು ಮನಃಪೂರ್ವಕವಾಗಿ ಯೋಜಿಸಿದರೆ ಮನುಷ್ಯ ಶ್ರದ್ಧೆಯಿಂದ ರೂಪುಗೊಂಡ ದೇವತಾ ಸಮೂಹವನ್ನು ಭೇದಿಸುವುದರ ಚಿಂತನೆಯೊಂದನ್ನು ಕಟ್ಟಿಕೊಳ್ಳಬಹುದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಶ್ರೀ ಕೇದಾರ ವಿಜಯ : ಪ್ರಕಾಶನ ಶಿವಾಜಿರಾವ್ ಆಬಾಜಿರಾವ್ ಸಾವಂತ್, ಶ್ರೀ ರಾಮತತ್ತ್ವ ಪ್ರಕಾಶ, ಬೆಳಗಾವಿ. ೧೯೬೫, ಪುಟ.೩೨೪.

[2]ವಿದರ್ಭ ಸಂಶೋಧನ ಮಂಡಳ ವಾರ್ಷಿಕ: ೧೯೭೧, ಪುಟ. ೫೩ – ೭೭.

[3]ಅದೇ : ಪುಟ. ೭೧ – ೭೨.

[4]ವಾಕಾಟಕ ನೃಪತಿ ಆಣಿ ತ್ಯಾಂಚಾ ಕಾಲ: ವಾ.ವಿ.ಮಿರಾಶೀ, ನಾಗಪುರ ವಿಶ್ವವಿದ್ಯಾಲಯ, ನಾಗಪುರ, ೧೯೫೭, ಪುಟ.೨೪, ೭೩, ೩೨೯.