ಆಂಧ್ರ – ಕರ್ನಾಟಕ – ಮಹಾರಾಷ್ಟ್ರಗಳಲ್ಲಿ ಕಂಡು ಬರುವ ಭೂದೇವಿಯ ಸೃಜನೇಂದ್ರಿಯ ಉಪಾಸನೆಯಲ್ಲಿನ ಕೆಲವು ಸಮಾನ ಶ್ರದ್ಧಾ ವೈಶಿಷ್ಟ್ಯಗಳನ್ನು ಈ ಹಿಂದಿನ ಎರಡು ಅಧ್ಯಾಯಗಳಲ್ಲಿಯೇ ಸ್ಪಷ್ಟವಾಗಿ ಗಮನಿಸಲಾಗಿದೆ. ಈ ವಿಸ್ತೃತ ಭೂಭಾಗದಲ್ಲಿಯೇ ಈ ದೇವಿಯು ಮಾತಂಗಿ ಎಂಬ ಹೆಸರಿನಲ್ಲಿಯೂ ನೆಲೆಸಿ ಪ್ರಖ್ಯಾತಳಾಗಿದ್ದಾಳೆ. ಕೆಲವೊಮ್ಮೆ ರೇಣುಕೆಯೊಂದಿಗೆ ಸಮರೂಪತೆ ಸಾಧಿಸಿಯೋ ಅಥವಾ ಏಕರೂಪತೆ ಸಾಧಿಯೋ ಇರುವ ಆದಿಮ ಕಾಲದ ದೇವತೆ ಈಕೆ. ಈ ಮಾತಂಗಿಯ ಉಪಾಸನೆ ಹಾಗೂ ಅವಳ ಉಪಾಸಕರ ವೈಶಿಷ್ಟ್ಯಗಳ ಶೋಧವು ಲಜ್ಜಾಗೌರಿಯ ಲಜ್ಜಿತ ಗೂಢತೆಯನ್ನು ಬಿಡಿಸುವಲ್ಲಿಯೂ ಬಹಳಷ್ಟು ಸಹಕಾರಿ.

ಧರಿಣಿಯ ಪೂತ್ರ (ಪುತ್ರ)

ಮಹಾರಾಷ್ಟ್ರದಾದ್ಯಂತ ಎಲ್ಲೆಡೆಯೂ ವಾಸಿಸುತ್ತಿರುವ ಮಹಾರ್ ಜನಾಂಗದವರು ಪೂರ್ವ ಕಾಲದಿಂದಲೂ ತಮ್ಮನ್ನು ‘ಭೂಮಿಪುತ್ರ’ ಇಲ್ಲವೆ ‘ಧರಣಿಯ ಪೂತ’ ಎಂದು ಕರೆದುಕೊಳ್ಳುತ್ತಲೇ ಬಂದಿದ್ದಾರೆ. ಅವರಲ್ಲಿ ಸುಮಾರು ಐವತ್ನಾಲ್ಕು ಪಂಗಡಗಳಿದ್ದು, ಅವುಗಳಲ್ಲಿ ‘ಗೋಪಾಲ’ ಎಂಬುದೊಂದು ಪಂಗಡ.[1] ಮಾತಂಗಿಯ ಉಪಾಸಕರು ತಮ್ಮನ್ನು ‘ಗೋಪಾಲ ಎಂದು ಕರೆದುಕೊಳ್ಳುತ್ತಾರೆ’. ಈ ‘ಗೋಪಾಲ’ ಎಂಬ ಪಂಗಡದ ಅಸ್ತಿತ್ವವನ್ನು ಕುರಿತು ಅನೇಕ ಮಹಾನುಭಾವ ಗ್ರಂಥಗಳ ಉಲ್ಲೇಖಿಸಲಾಗಿದೆ. ಅವಳ ಬಗ್ಗೆ ಮನವರಿಕೆ ಬರುವುದು ಈ ಗೋಪಾಲ ಎಂಬ ಪಂಗಡದ ಮೂಲಕವೇ. ಮಹಾರರ ಮುಖ್ಯ ದೇವಿಯಾಗಿರುವ ಮರಿ ಆಯಿಯು ಸಹ ದಕ್ಷಿಣದಲ್ಲಿನ ಆದಿಮ ಮಾತೃದೇವತೆಗಳಲ್ಲಿ ಒಬ್ಬಳಾಗಿದ್ದಾಳೆ. ನಿರ್ಮಿತಿ ಮತ್ತು ಸಂಹಾರ ಈ ಎರಡಕ್ಕೂ ಅವಳೇ ಕಾರಣಳಾಗಿದ್ದಾಳೆ ಎಂಬ ತುಂಬು ಶ್ರದ್ದೆಯು ಇವರ ಜೀವನದಲ್ಲಿ ಬೇರೂರಿರುವುದು ಸ್ಪಷ್ಟ. ‘ಮಾರಿ’ ಎಂಬ ದಾಕ್ಷಿಣಾತ್ಯ ತಮಿಳು ಶಬ್ದವು ವರ್ಷಾವಾಚಕ (ಮಳೆಯ ಅಧಿದಾತ್ರಿ)ವಾಗಿದ್ದು, ಪರ್ಜನ್ಯ ದೇವನನ್ನು ವರ್ಷಣಶೀಲಗೊಳಿಸುವವಳೇ ಮಾರಿ ಎಂಬುದಾಗಿ ಅವಳ ಹೆಸರನ್ನು ಸ್ಪಷ್ಟೀಕರಿಸಲಾಗಿದೆ.[2] ಅಂದರೆ ತಮ್ಮನ್ನು ‘ಧರಣಿಪೂತ’ ಎಂದು ಕರೆದುಕೊಳ್ಳುವ ಮಹಾರರು ಈ ಮರಿ ಆಯಿಯ ಉಪಾಸಕರಾಗಿದ್ದಾರೆ, ಈ ಮರಿ ಆಯಿಯೇ ಧರಣೀದೇವಿ ಎಂಬುದರಲ್ಲಿ ಸಂಶಯವಿಲ್ಲ. ಎಲ್ಲೆಲ್ಲಿ ಆಕೆಯನ್ನು ‘ಮಾತಂಗಿ’ ಎಂಬ ಹೆಸರಿನಿಂದ ಕರೆಯಲಾಗಿದೆಯೋ ಅಲ್ಲೆಲ್ಲ ಅವಳ ಪೂಜಾರಿಗಳು ಮಹಾರರೇ [ಕ್ವಚಿತ್ತಾಗಿ ಮಾಂಗ್ (ಕಟುಕ)] ಆಗಿರುವುದು ವಿಶೇಷ. ಮಹಾರಾಷ್ಟ್ರದಲ್ಲಿ ಬಿತ್ತನೆಯ ಕಾಲಕ್ಕೆ ಮಾಂಗಿಣಿ (ಕಟುಕ) ಸ್ತ್ರೀಯ ಮಡಿಲು ತುಂಬುವ ರೂಢಿಯೊಂದು ಇರುವುದು ಇಲ್ಲಿ ಗಮನಿಸಬೇಕಾದ ಅಂಶ.

ಮಾಹೂರು, ತುಳಜಾಪುರ ಮತ್ತು ಸೌಂದತ್ತಿಗಳಲ್ಲಿರುವ ಮಾತಂಗಿಯ ಎಲೆಗಳಲ್ಲೆಲ್ಲ ಪೂಜಾರಿಗಳಾಗಿರುವುದು ಮಹಾರ್ – ಮಾಂಗ್ ಜಾತಿಯವರೇ.

ಮಾತಾಪುರ ಅಥವಾ ಮಾಹೂರವೇ ಮಾತಂಗಿ ದೇವಿಯ ಮುಖ್ಯ ನಿವಾಸಸ್ಥಾನವೆಂಬ ಉಲ್ಲೇಖವು ಮತ್ತೆ ಮತ್ತೆ ಬಂದಿದೆ. ಮಹಾರಾಷ್ಟ್ರದಲ್ಲಿರುವ ಈ ಪ್ರದೇಶ, ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿದೆ. ಹಾಗಾಗಿ ಮಾಹೂರದಲ್ಲಿನ ಮಾತಂಗಿಯು ಆಂಧ್ರ – ಕರ್ನಾಟಕಾದಿ ಹತ್ತಿರದ ದಕ್ಷಿಣ ಭಾಗಗಳಲ್ಲಿ ಯಾವ ಸಮಾಜ ಸ್ತರದವರಲ್ಲಿ ಕಾಣಸಿಗುತ್ತಾಳೆ ಎಂಬುದನ್ನು ಶೋಧಿಸಬೇಕಾದ್ದು ಅವಶ್ಯ.

ಈ ಬಗೆಯ ಶೋಧನೆಯಲ್ಲಿ ತೊಡಗಿದಾಗ ಅರಿವಿಗೆ ಬರುವುದೇನೆಂದರೆ ಪರಿಹ ಮತ್ತು ಮಾದಿಗ ಎಂಬೆರಡು ದಾಕ್ಷಿಣಾತ್ಯ ಜಾತಿಗಳವರಲ್ಲಿ ಮಾತ್ರ ಮಾತಂಗಿ ದೇವಿಯನ್ನು ಆರಾಧಿಸುವ ರೂಢಿಯಿರುವುದು ವಿಶೇಷ. ಪರಿಹ ಎಂಬುದು ನಮ್ಮ ಕಡೆಯ ಮಹಾರ ಇಲ್ಲವೆ ಚಮ್ಮಾರರಂತಹ ಒಂದು ಜಾತಿಯಾಗಿದ್ದು, ಮಾದಿಗರು ಆಂಧ್ರ ಕರ್ನಾಟಕದಲ್ಲಿ ಮಾಂಗರೇ ಆಗಿದ್ದಾರೆ. ಈ ಎರಡೂ ಜಾತಿಗಳವರಲ್ಲಿ ಮಾತಂಗಿ ದೇವಿಯ ಬಗೆಗೆ ಅನೇಕ ಕಥೆ – ಹಾಡುಗಳು ಪ್ರಚಲಿತವಾಗಿದ್ದು, ಅವಳಿಗೆ ಎಲ್ಲಮ್ಮ ಹಾಗೂ ರೇಣುಕಾ ಎಂಬ ಪರ್ಯಾಯ ನಾಮಗಳನ್ನೂ ಬಳಸುತ್ತಾರೆ.

ಮಾದಿಗ ಜಾತಿಯವರು ಆಂಧ್ರ – ಕರ್ನಾಟಕದಲ್ಲಿ ಬಹಳ ಸಂಖ್ಯೆಯಲ್ಲಿದ್ದಾರೆ. ಈ ಜಾತಿಗೆ ‘ಮಾತಂಗ’ ಎಂಬ ಹೆಸರೂ ಉಂಟು. ಜಂಬೂ ಋಷಿಯು ತಮ್ಮ ಮೂಲ ಪುರುಷನೆಂಬುದು ಇವರ ನಂಬಿಕೆ. (ಮಹಾರಾಷ್ಟ್ರದಲ್ಲಿನ ಢಗೋ – ಮೇಘೋ ಪಂಥೀಯ ಉಪಾಸಕರ ಗೀತೆಗಳಲ್ಲಿ ‘ಜಂಬೂಮಾಳಾ’ ಎಂಬ ಉಲ್ಲೇಖ ಬರುತ್ತದೆ.) ಈ ಜನರು ಹಸು, ಎಮ್ಮೆ, ಕುರಿ, ಆಡು ಇತ್ಯಾದಿ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ. ಹಾಗೂ ವಿಪರೀತ ಹೆಂಡವನ್ನು ಕುಡಿಯುತ್ತಾರೆ. ಇವರ ಕುಲಕಸುಬಿನಲ್ಲಿ ವ್ಯವಸಾಯದೊಂದಿಗೆ ಸ್ವಚ್ಛತಾ ಕಾರ್ಯವೂ ವಿಶೇಷವಾಗಿ ಸೇರಿಕೊಂಡಿದೆ. ಅವರು ಉಪಾಸಿಸುವ ದೇವಿಗೆ ಮಾರಮ್ಮ, ಮಾಸನಮ್ಮ, ಮಾತಂಗಿ ಇಲ್ಲವೆ ಮಹಾಲಕ್ಷ್ಮಿ ಎಂಬ ಹೆಸರುಗಳಿವೆ.[3] ಗೌರವಾರ್ಥಕವಾಗಿ ‘ಲಕ್ಷ್ಮೀಆಯಿ’ ಎಂಬುದಾಗಿಯೂ ಮತ್ತೆ ಮತ್ತೆ ಸಂಬೋಧಿಸಲ್ಪಡುತ್ತಿರುವ ಮಹಾರಾಷ್ಟ್ರದಲ್ಲಿನ ಮರಿ ಆಯಿಯು ಮಾತಂಗಿಯೇ ಎಂಬುದು ಈ ಪರ್ಯಾಯ ನಾಮದಿಂದ ತಿಳಿದು ಬರುತ್ತದೆ.

ಈ ಮಾದಿಗ ಜಾತಿಯಲ್ಲಿ ಇರುವ ಬವನೀಡ ಎಂಬ ಜನಪದ ಗಾಯಕ ವರ್ಗದವರು ಜೋಗುಳಾಂಬೆಯ ಉಪಾಸಕರಾಗಿರುವುದನ್ನು ಹಿಂದಿನ ಅಧ್ಯಾಯದಲ್ಲಿಯೇ ಹೇಳಲಾಗಿದೆ. ಜೋಗುಳಾಂಬೆಯೂ ಮಾತಂಗಿಯೇ. ಸೌಂದತ್ತಿಯಲ್ಲಿನ ಮಾತಂಗಿ ದೇವಿಗೆ ‘ಜುಗುಳೂ ಬಾಯಿ’ ಎಂಬ ಮತ್ತೊಂದು ಪ್ರಸಿದ್ಧ ಹೆಸರುಂಟು. ಬವನೀಡ ಜಾತಿಯ ಸ್ತ್ರೀ – ಪುರುಷರು ಈ ದೇವಿಯ ಕಥನ ಗೀತಗಳನ್ನು ಜಮಡಿಕಾ ಎಂಬ ಡೋಲಿನ ಜೊತೆಯಲ್ಲಿ ಬಹಳ ಆವೇಶದಿಂದ ಹಾಡುತ್ತಾರೆಂಬುದನ್ನೂ ಈ ಹಿಂದೆಯೇ ಹೇಳಲಾಗಿದೆ.

ಖಚಿತವಾಗಿ ನೋಡಿದಲ್ಲಿ ಈವರೆಗಿನ ಪರಿವೀಕ್ಷಣೆಯಿಂದ ಸೂಚಿತವಾಗುವಂತೆ, ಮಾಹೂರಿನಲ್ಲಿ ಅಧಿಷ್ಠಿತಳಾಗಿರುವ ರೇಣುಕೆಯೆಂಬ ಹೆಸರಿನ ದೇವತೆಯು ‘ಮಾತಂಗಿ ದೇವಿ‘ಯೇ. ಈ ಅಂಶವನ್ನು ಸ್ಪಷ್ಟಪಡಿಸಲು ರೇಣುಕೆಯ ಉಪಾಸನಾ ಕ್ಷೇತ್ರಗಳಲ್ಲಿರುವ ಕಥಾ ಪ್ರಸಂಗಗಳನ್ನು ಶೋಧಿಸಿದರೆ ರೇಣುಕಾ – ಮಾತಂಗಿಯರ ಏಕತ್ವಕ್ಕೆ ನಿರ್ಣಾಯಕವಾದ ಪುಷ್ಟಿಯು ದೊರೆಯುತ್ತದೆ.

ರೇಣುಕಾ ಮತ್ತು ಮಾತಂಗೀ

ರೇಣುಕಾ ಮತ್ತು ಮಾತಂಗೀಯರ ಸಂಬಂಧದ ವಿಷಯದಲ್ಲಿ, ರೇಣುಕೆಯ ಪಾರಂಪರಿಕ ಉಪಾಸಕರಾದ ಗೊಂದಲಿಗರು ಹೇಳುವ ಕಥೆಗಳಲ್ಲಿ ಬಹಳ ಮುಖ್ಯವಾದ ಕಥೆಯೊಂದಿದೆ:[4] ಮಾಹೂರ ದಡದ ಮೇಲೆ ಜಮದಗ್ನಿಯ ಆಶ್ರಮವಿತ್ತು. ಆತನಾದರೋ ಮಹಾಕೋಪಿ, ಅವನ ಹೆಂಡತಿ ರೇಣುಕಾ ಆಶ್ಚರ್ಯಪಡುವಷ್ಟು ಪತಿ ಪಾರಾಯಣೆ. ಅವಳು ತನ್ನ ಪಾತಿವ್ರತ್ಯದ ಪ್ರಭಾವದಿಂದಾಗಿ ದಿನವೂ ನೀರು ತರುತ್ತಿದ್ದಳು. ಅದು ಕೊಡದಿಂದ ಅಲ್ಲ, ತನ್ನ ಶಲ್ಯೆಯಲ್ಲಿ ಮೂಟೆಕಟ್ಟಿ. ಹಾಗೆ ತರತ್ತಿರುವಾಗ ಒಮ್ಮೆಯಾದರೂ ಒಂದು ತೊಟ್ಟು ನೀರು ಸಹ ಹೊರಗೆ ಒಸರುತ್ತಿರಲಿಲ್ಲ. ಒಂದು ದಿನ ಹೀಗೆಯೇ ಅವಳು ನೀರು ತರಲೆಂದು ನದಿಗೆ ಹೋಗಿದ್ದಾಗ, ಅಲ್ಲಿ ಜಲಕ್ರೀಡೆಯಾಡುತ್ತಾ ಮುಕ್ತ ವಿಲಾಸದಲ್ಲಿ ತೊಡಗಿದ್ದ ಗಂಧರ್ವರನ್ನು ನೋಡಿದಳು. ಗಂಧರ್ವ ಪುರುಷನ ಸುಂದರ ತಾರುಣ್ಯವನ್ನು ರೂಪವನ್ನು ಕಂಡ ರೇಣುಕೆಯು ಕ್ಷಣಕಾಲ ಮೋಹಕ್ಕೆ ಒಳಗಾದಳು. ಬೇಗನೇ ನೀರು ಕೊಂಡೊಯ್ಯಬೇಕೆಂಬುದರ ಅರಿವೂ ಇರಲಿಲ್ಲ ಅವಳಿಗೆ. ಅನಂತರ ಹೊತ್ತಾಯಿತೆಂದು ಮನಸ್ಸಿಗೆ ಬಂದೊಡನೆ ಅವಸರವಸರವಾಗಿ ನೀರನ್ನು ತನ್ನ ಶಲ್ಯೆಯಲ್ಲಿ ಕಟ್ಟಿ ತಲೆಯ ಮೇಲಿಟ್ಟುಕೊಂಡು ಆಶ್ರಮದ ಹಾದಿ ಹಿಡಿದಳು. ಆದರೆ ನೀರು ಪೂರ್ಣವಾಗಿ ಸೋರಿ ಹೋಗಿ ಅವಳ ಅಂಗಾಂಗಳೆಲ್ಲ ಒದ್ದೆಯಾದವು. ಆ ಅವಸ್ಥೆಯಲ್ಲಿ ಬಂದ ಪತ್ನಿಯನ್ನು ನೋಡಿದ ಜಮದಗ್ನಿಗೆ ವಿಪರೀತ ಕೋಪ ಬಂದಿತು.

ಏನು ನಡೆಯಿತು ಎಂಬುದನ್ನು ಸ್ಪಷ್ಟವಾಗಿ ಮನಗಂಡ ಜಮದಗ್ನಿಯು ತನ್ನ ಮಗ ಪರಶುರಾಮನನ್ನು ಕರೆದು ರೇಣುಕೆಯ ತಲೆ ಹಾರಿಸುವಂತೆ ಆಜ್ಞೆ ಮಾಡಿದ. ಒಡನೆಯೇ ಅದನ್ನು ಅಮಲಿಗೆ ತಂದನು ಪರಶುರಾಮ. ಮಗನ ಪಿತೃಭಕ್ತಿಗೆ ಮೆಚ್ಚಿ ಪ್ರಸನ್ನನಾದ ಜಮದಗ್ನಿಯು ಏನಾದರೂ ‘ವರಕೇಳು‘ವಂತೆ ತಿಳಿಸಲು, ತಕ್ಷಣ ಅವನು ತಂದೆಯಲ್ಲಿ ಕೇಳಿಕೊಂಡವರವೆಂದರೆ ತನ್ನ ತಾಯಿಯನ್ನು ಬದುಕಿಸಿಕೊಡಬೇಕು ಎಂಬುದು. ಅದಕ್ಕೆ ಸಮ್ಮತಿಸಿದ ಜಮದಗ್ನಿಯು ಮಗನಲ್ಲಿ ಹೇಳಿದ, ‘ಮೇಲಕ್ಕೆ ಹಾರಿ ಹೋದ ನಿನ್ನ ತಾಯಿಯ ಶಿರವನ್ನು ಹುಡುಕಿ ತಂದು ನಿನ್ನ ತಾಯಿಯ ಘಟಕ್ಕೆ ಸೇರಿಸು, ಆಗ ಅವಳಿಗೆ ಜೀವ ಬರುತ್ತದೆ’. ತಕ್ಷಣ ತಾಯಿಯ ಶಿರವನ್ನು ಹುಡುಕಿಕೊಂಡು ಹೊರಟ ಪರಶುರಾಮನಿಗೆ ಬಹಳವಾಗಿ ಹುಡುಕಿದರೂ ಅದು ದೊರೆಯಲಿಲ್ಲ. ನಿರಾಶೆಯಿಂದ ಹಿಂತಿರುಗುತ್ತಿರುವಾಗ ದಾರಿಯಲ್ಲಿ ತನ್ನ ತಾಯಿಯಂತೆಯೇ ಕಾಣುತ್ತಿದ್ದ ಮಾಂಗಿಣ (ಕಟುಕ ಜಾತಿ) ಹೆಂಗಸೊಬ್ಬಳು ಎದುರಾದಳು. ದಿಕ್ಕು ತೋಚದಂತಾಗಿದ್ದ ಆತ ಹಿಂದುಮುಂದು ನೋಡದೆ ಆ ಹೆಂಗಸಿನ ಶಿರವನ್ನು ಕತ್ತರಿಸಿ ತಂದು ತನ್ನ ತಾಯಿಯ ಮುಂಡಕ್ಕೆ ಸೇರಿಸಲು ಉದ್ಯುಕ್ತನಾದನು. ಆಗಲೇ ಪರಶುರಾಮನ ಈ ಕೃತ್ಯವನ್ನು ದೂರದೃಷ್ಟಿಯಿಂದ ಮನಗಂಡಿದ್ದ ಜಮದಗ್ನಿಯು ಖಡಾಖಂಡಿತವಾಗಿ ವಿರೋಧಿಸಿದ. ಮಾತ್ರವಲ್ಲ ತನ್ನ ಸ್ವಶಕ್ತಿಯಿಂದಲೇ ರೇಣುಕೆಯ ಶಿರವನ್ನು ತಂದು ಜೀವಂತಗೊಳಿಸಿದ ಕೊನೆಯಲ್ಲಿ ಜಮದಗ್ನಿಯು ತನ್ನ ಪತ್ನಿಯನ್ನು.

ತನ್ನ ತಾಯಿಯೇನೋ ಬದುಕಿದಳು ಆದರೆ ಅವಳಿಗಾಗಿ ಮಾಡಿದ ಪ್ರಯತ್ನದಲ್ಲಿ ವ್ಯರ್ಥವಾಗಿ ಮಾಂಗಿಣಿ ಸ್ತ್ರೀಯೊಬ್ಬಳು ಪ್ರಾಣ ನೀಗಬೇಕಾಗಿ ಬಂದುದು ಪರಶುರಾಮನಿಗೆ ಕೇಡಾಗಿಕಂಡಿತು. ಅವಳನ್ನು ತನ್ನ ತಾಯಿಯಂತೆಯೇ ಭಾವಿಸಿದ ಆತ ಅವಳ ಶಿರವನ್ನು ಮಾಹೂರಗಡದ ಮೇಲೆ ಪ್ರತಿಷ್ಠಾಪಿಸಿದ. ಅಲ್ಲದೆ ‘ರೇಣುಕೆಯ ಭಕ್ತರು ರೇಣುಕೆಯ ದರ್ಶನಕ್ಕೆ ಮುನ್ನವೇ ಈಕೆಯ ದರ್ಶನ ಪಡೆಯುವುದು, ಹಾಗೂ ರೇಣುಕೆಗೆ ನೈವೇದ್ಯವನ್ನು ಅರ್ಪಿಸುವ ಮೊದಲು ಈಕೆಗೆ ಮೊದಲು ನೈವೇದ್ಯವನ್ನು ತೋರಿಸುವುದು’ ಎಂಬುದಾಗಿ ನಿಯಮಿಸಿದನು. ಹೀಗೆ ಇಂದಿಗೂ ಮಾಹೂರಗಡದ ಮೇಲೆ ಆದ್ಯಪೂಜೆಯ ಗೌರವ ಪಡೆಯುತ್ತಿರುವ ಈಕೆಯೇ ಮಾತಂಗಿದೇವಿ.

ಪಂಡಿತ ಮಹಾದೇವಶಾಸ್ತ್ರಿ ಜೋಶಿಯವರು ಸಂಕಲಿಸಿದ ಈ ಕತೆಯ ವಕ್ತೃ ಶ್ರೀ ಮಾರುತಿ ಅನಾಜಿ ಪಾಚಂಗೆ ಎಂಬ ಪುಣೆಯ ಗೊಂದಲಿಗ. ರೇಣುಕೆ ಮತ್ತು ಮಾತಂಗಿಯರ ನಿಕಟ ಸಂಬಂಧದ ಮೇಲೆ ಬೆಳಕು ಚೆಲ್ಲುವ ಈ ಕಥೆಯು ಖಂಡಿತವಾಗಿಯೂ ಮಹತ್ವದ್ದು. ಮೂಲದ ಮಾತಂಗೀ ದೇವಿಯನ್ನು ಉನ್ನತೀಕರಣಗೊಳಿಸಿ ಆಕೆಗೆ ರೇಣುಕೆ ಎಂಬ ಹೆಸರನನ್ನು ಮತ್ತು ಹೊಸ ಚರಿತ್ರೆಯನ್ನು ಅನುಗ್ರಹಿಸಲಾಗಿದೆ ಇಲ್ಲಿ. ಅಂದರೆ ರೇಣುಕೆಯ ಉಪಾಸನೆಯಲ್ಲಿ ಮೂಲ ರೂಪದ ಸ್ಥಾನ, ಗೌಣವಾಗಿದ್ದರೂ ಸರಿಯೇ ಆದ್ಯ ಪೂಜೆಯ ಗೌರವವನ್ನು ಅವಳಿಗೆ ಕೊಡಬೇಕಾಯಿತು ಎಂಬುದು ಕಥೆಯ ಸ್ಪಷ್ಟ ಅನ್ವಯಾರ್ಥ.

ಈ ಕಥೆಯ ಅನೇಕ ರೂಪಾಂತರಗಳು ಪ್ರಚಲಿತದಲ್ಲಿವೆ. ಒಂದು ಕತೆಯ ಪ್ರಕಾರ ಮಾತಂಗಿ ಹಾಗೂ ರೇಣುಕೆಯರ ಶಿರಗಳು ಪರಸ್ಪರ ಅದಲು – ಬದಲಾದವು. ಮತ್ತೊಂದರಲ್ಲಿ ಪರಿಹಾ ಸ್ತ್ರೀ ಮತ್ತು ಎಲ್ಲಮ್ಮರ ಶಿರಗಳು ಅದಲು – ಬದಲಾದುವು. ಈ ಪರಿಹಾ ಜಾತಿಯಲ್ಲಿನ ಕಥೆಯಲ್ಲಿ ಮರಿ ಆಯಿಯೇ ಪರಶುರಾಮನ ಮಾತೆ ಎಂಬ ಅಂಶ ವ್ಯಕ್ತವಾಗಿದೆ. ಪರಿಹಾ ಸ್ತ್ರೀಯ ಮುಂಡ ಹಾಗೂ ಋಷಿ ಪತ್ನಿಯ ರುಂಡವು ಏಕತ್ರಗೊಂಡಾಗ ಹುಟ್ಟಿದ ಸ್ತ್ರೀಯೇ ಮರಿ ಆಯಿದೇವಿ. ಮತ್ತು ಋಷಿ ಪತ್ನಿಯ ಮುಂಡವೂ, ಪರಿಹಾ ಸ್ತ್ರೀಯ ರುಂಡವೂ ಏಕತ್ರಗೊಂಡು ಜೀವಂತಗೊಂಡ ಸ್ತ್ರೀಯೇ ಎಲ್ಲಮ್ಮದೇವಿ ಎಂಬುದಾಗಿ ಮರಿ ಆಯಿ ಹಾಗೂ ಎಲ್ಲಮ್ಮರ ಅನುಬಂಧದಲ್ಲಿ ಉಲ್ಲೇಖಿಸಲಾಗಿದೆ.[5] ಸೌಂದತ್ತಿಯ ಎಲ್ಲಮ್ಮನ ಜೋಗಪ್ಪ – ಜೋಗತಿಯರ ಉಪಾಸಕ ವರ್ಗವು ದೇವಿಯ ಬಗ್ಗೆ ಅನೇಕ ಹಾಡುಗಳನ್ನು ಹೇಳುತ್ತಾರೆ. ಅವುಗಳಲ್ಲಿ ಒಂದು –

ನೀರೋಳಗೆ ನಿಂತಿಹಳು ರೇಣುಕಾ ಉಟ್ಟು ಪೀತಾಂಬರ |
ಪರಶುರಾಮನಿಹನು ಬದಿಯೊಳು, ಮಾತಂಗಿಯಹಳು ಎದುರು ||

ಎಂಬ ಭಿನ್ ಉಲ್ಲೇಖವಿದ್ದರೂ ರೇಣುಕೆ – ಮಾತಂಗಿಯರನ್ನು ಕುರಿತಂತೆ, ‘ಮುಂಡವಹುದು ಎಲ್ಲಮ್ಮನದು | ಶಿರವಹುದು ಮಾತಂಗಿಯದು |’ ಎಂಬುದಾಗಿಯೂ ಹಾಗೂ ‘ಮೊದಲು ಮಾನ ನೀಡಿದ ಮಾತಂಗಿಗೆ |’ ಎಂಬ ಉಲ್ಲೇಖವೂ ಸ್ಪಷ್ಟವಾಗಿಯೇ ಪ್ರಕಟಗೊಂಡಿದೆ.

ಈ ಮೇಲೆ ಹೇಳಿದ ಮಾಹಿತಿಯಿಂದ ಸೂಚಿತವಾಗುವುದೇನೆಂದರೆ, ಮಾತಂಗಿ – ರೇಣುಕೆಯರ ಏಕತ್ವ ಸಿದ್ಧಗೊಂಡಿರುವ ರೀತಿ ಹೇಗೆ ಎಂಬುದು. ಮಹಾನುಭಾವೀಯ ಗ್ರಂಥಗಳಲ್ಲಿ ಮಾತಂಗಿಯನ್ನು ‘ಮೇಸಕೋ, ಮಾಯರಾಣಿ’ (ಕ್ಷುದ್ರದೇವತೆಗಳು) ಎಂದು ಹೇಳಲಾಗಿದೆ. ಆ ಸತ್ಯಾ ಸತ್ಯತೆಯನ್ನು ಪರೀಕ್ಷಿಸುವುದು ಬಹಳ ಅಗತ್ಯ.

ಮಾತಂಗಿ ಮತ್ತು ಮೇಸಕೋ, ಮಾಯರಾಣಿ

ಮರಾಠಿ ಸಂತವಾಙ್ಮಯದಲ್ಲಿ ಮತ್ತೆಮತ್ತೆ ಬಂದಿರುವ ಹೆಸರುಗಳೆಂದರೆ, ಮಸಕೋ ಮತ್ತು ಮಾಯರಾಣಿ ಎಂಬ ದೇವೀ ನಾಮಗಳು, ಕ್ಷುದ್ರ ದೇವತೆಗಳ ನಾಮಾವಳಿಗಳಲ್ಲಿಯೇ ಈ ಎರಡನ್ನು ಸೇರಿಸಿರುವ ಅವರು, ಅವರ ಉಪಾಸನೆಗೂ ತೀವ್ರ ನಿಷೇಧ ಹೇರಿದ್ದಾರೆ –

೧.         ವಾಸನಾ ಮಾಂಗೀಣ ಮಾತಂಗಿನೀ | ಕಾಮನಾ ಜಳೀ ಮಾಯರಾಣೀ |
ಅಭಾವ ಭಾಂಗಡ ಭೂತ ಜೋಗಿನೀ | ತ್ಯಾಂಸೀ ನಗ್ನ ಪೂಜಿತೀ ಕೀ ||
(ಏಕನಾಥ ಗಾಥಾ. ಕ್ರ.೩೮೯೨)

೨.         ಶಿಮಗಾ ಫಾಲ್ಗುನ ಹೋಳೀಚೇ ದಿನೀ | ನಗ್ನ ಹೋಊನ್ ಪೂಜಿತೀ ಮಾಯರಾಣಿ |
ತೀ ಡೋಳೆ ದವಡೀ ಅವಲಕ್ಷಣೀ | ಜೋ ಪಾಹೂ ಜಾಯ ತ್ಯಾಚೇ ||

೩.         ಖಂಡೇರಾವ ಝಾಡೀ ಮೇಸಕೋ ಮಾಯರಾಣಿ | ಭೈರವ ಗಸ್ತೀ ಕರತಸೇ ||
ದರಬಾರ ಝಾಡೀ ಮೇಸಕೋ ಮಾಯರಾಣಿ | ಭೈರವ ಗಸ್ತೀ ಕರತಸೇ ||
(ಶೇಖ್‌ ಮಹಮದ್: ಯೋಗ ಸಂಗ್ರಾಮ. ೧೨, ೪೯, ೮೨)

೪.         ತುಕಾಈ ನಾ ನರಸೋ ಮಾಯರಾಣೀ | ವಸತೀ ಸ್ಮಶಾನೀ |
ಭೋಗೇ ಘಾಲೇ ಗೋಂಧಳ ||
(ಶೇಖ್ ಮಹಮದ್ : ಕವಿತಾ ಸಂಗ್ರಹ, ಪು. ೧೦೯)

೫.         ಜಾಖಮಾತಾ ಮಾಯರಾಣೀ | ಬಾಳಾ ಬಗುಳಾ ಮಾನವಿಣೀ |
ಪೂಜಾ ಮಾಂಗಿಣೀ ಜೋಗಿಣೀ |ಕುಲಧರ್ಮ ಕರಾವೀ ||
(ದಾಸಬೋಧ, ೪.೫.೧೬)

೬.         ನವ್ಹೇ ಜಾಖಾ ಈ ಜೋಖಾಈ | ಮಾಯರಾಣೀ ಮೇಸಾಬಾಈ ||
(ತುಕಾರಮ ಗಾಥಾ, ಕ್ರ.೨೩ – ೮೪)

೭.         ಮೈಳೀ ಮುರೀ ಮಾಯರಾಣೀ | ಅಪುಲಾಲಿಯಾ ಪರಿವಾರಗಣೀ |
ಉಠಾವಲ್ಯಾ ಸಮರಾಂಗಿಣೀ | ನಗ್ನ ಯಕ್ಷಿಣಿ ಧಾಂವತೀ ||
(ಹರಿವರದಾ, ೫೫.೧೭೮)

ಈ ಉಲ್ಲೇಖಗಳಲ್ಲಿ ಫಾಲ್ಗುಣ ಪೌರ್ಣಮಿಯ ದಿನದಂದು ಈ ಮಾಯರಾಣಿಯ ನಗ್ನಪೂಜೆ ನಡೆಯುತ್ತದೆಂಬ ಸ್ಪಷ್ಟ ವಿಚಾರವಿರುವುದು. ಶ್ರೀ ಕೃ.ವಿ.ಆಚಾರ್ಯ ಕಾಲಗಾಂವಕರ ಅವರು ಮಹಾರಾಷ್ಟ್ರದಲ್ಲಿನ ಕೆಲವು ಬ್ರಾಹ್ಮಣ ಮನೆತನಗಳಲ್ಲಿ ಪ್ರಚಲಿತದಲ್ಲಿರುವ ಮಾಯರಾಣಿಯ ಕುಲಧರ್ಮಾಚಾರವನ್ನು ವರ್ಣಿಸಿರುವರು. ಆ ದೇವಿಯ ಕುಲಧರ್ಮಾನುಸಾರ ವಿಕೇಷ ವಿಧವೆಯನ್ನು ಆಹ್ವಾನಿಸಿ ಊಟಕ್ಕೆ ಬಡಿಸಬೇಕು.[6]

ಈ ಮೇಲಣ ಉಲ್ಲೇಖಗಳಲ್ಲಿ ಮಾಯರಾಣಿ ಮತ್ತು ಮೇಸಾಈ ಮೇಸಕೋ ಸ್ವತಂತ್ರ ದೇವಿಯರಾಗಿ ಅಭಿಪ್ರೇತರಾಗಿರುವಂತೆಯೇ, ಅವರ ಏಕತೆಯೂ ಗೃಹೀತವಾಗಿದೆ. ಬಾಬಾ ಪದಮನಜಿಯವರು ತಮ್ಮ ‘ಹಿಂದೂ ಧರ್ಮಾಚೇ ಸ್ವರೂಪ’ ಎಂಬ ಕೃತಿಯ ಎರಡನೆಯ ಭಾಗದಲ್ಲಿ ‘ಮೇಸಾಈ, ಮೇಸಕೋ’ ಎಂಬ ಶೀರ್ಷಿಕೆಯಡಿ ಮೇಸಕೋ ದೇವಿಯ ಬಗ್ಗೆ ನೀಡಿರುವ ಮಾಹಿತಿ ಅತ್ಯಂತ ಮಹತ್ವದ್ದಾಗಿದೆ:[7] “ಬಹುತೇಕ ಈ ದೇವತೆಗಳಿರುವುದು ಮಹಾರ್‌ ಜನಾಂಗದವರಲ್ಲಿ. ಭಾದ್ರಪದ ಮಾಸದಲ್ಲಿ ಭಾದವಿ ಎಂಬ ಹೆಸರಿನಿಂದ ಈ ದೇವಿಯರಿಗೆ ನಿತ್ಯಪೂಜೆಯನ್ನು ಸಲ್ಲಿಸಲಾಗುತ್ತದೆ. ರೋಗರುಜಿನಗಳು ಹೆಚ್ಚಾಗುವುದಕ್ಕೆ ಮೂಲಕಾರಣ ಮಹಾರರ ಈ ದೇವತೆಗಳೇ ಎಂಬುದು ಜನರ ಒಂದು ನಂಬಿಕೆ. ಹಾಗಾಗಿ ಊರಿನ ಜನರು ಮಹಾರರ ಬಗ್ಗೆ ನಮ್ರರಾಗಿರುವುದಲ್ಲದೆ, ಈ ಮೇಸಾಈಯ ಪ್ರಸನ್ನತೆಗಾಗಿ ಧನ, ಧಾನ್ಯ, ಕುರಿ, ಆಡು ಇತ್ಯಾದಿ ಪೂಜಾ ಪರಿಕರಗಳನ್ನು ಅವರಿಗೆ ಒದಗಿಸುತ್ತಾರೆ.”

ಬಾಬಾ ಪದಮನಜಿಯವರು ಉಲ್ಲೇಖಿಸಿರುವ ‘ಭಾದವಿ’ ಎಂಬ ಮೇಸಕೋ ದೇವಿಯ ಪೂಜಾ ದಿನವು ‘ಮಾಹೂರ ಭಾದವಿ’ ಎಂಬುದಾಗಿಯೂ ಪ್ರಸಿದ್ಧವಾಗಿದೆ.[8] ಈ ಮೂಲಕ (ಮಾಹೂರ ಸಂಬಂಧಿತ) ಮೇಸಕೋ – ಮಾತಂಗೀ – ರೇಣುಕೆಯರ ಏಕತ್ವದ ಸಂಕೇತವು ಸಹಜವಾಗಿಯೇ ಪ್ರಾಪ್ತವಾಗಿರುವುದು.

ಮಾತಂಗೀ ದೀಕ್ಷಾ

ಮಾದಿಗಾ (ಮತಂಗ) ಎಂಬುದು ಆಂಧ್ರ – ಕರ್ನಾಟಕಗಳಲ್ಲಿ ಒಂದು ಜಾತಿಯ ಹೆಸರು. ಇವರ ಉಪಾಸನಾ ದೇವಿಯೇ ಮಾತಂಗಿ. ದೇವದಾಸಿ, ಬಸವಿ, ಜೋಗಿತಿಯರ ಹಾಗೆಯೇ ಮಾದಿಗ ಸಮಾಜದಲ್ಲಿಯೂ ಕುಮಾರಿಯರು ಮಾತಂಗಿಯ ಉಪಾಸನಾ ದೀಕ್ಷೆಯನ್ನು ಕೈಗೊಳ್ಳುತ್ತಾರೆ.[9] ಈ ದೀಕ್ಷೆಗೊಂಡ ಕುಮಾರಿಯರನ್ನು ಕರೆಯುವುದು ಮಾತಂಗಿ ಎಂಬುದಾಗಿಯೇ. ಹೀಗೆ ದೀಕ್ಷೆ ಹೊಂದಿದ ಕುಮಾರಿಯು ಸಾಕ್ಷಾತ್‌ ಮಾನವ ರೂಪದ ಮಾತಂಗಿಯೇ ಹೌದು. ಮಾದಿಗ ಮತ್ತಿತರೆ ಜಾತಿ – ಪಂಗಡಗಳಲ್ಲಿನ ಭಕ್ತರ ಮನಸ್ಸಿನಲ್ಲಿರುವ ಶ್ರದ್ಧೆಯೇ ಇದಕ್ಕೆ ಕಾರಣ. ಮಾತಂಗಿ ದೇವಿಯ ಈ ಮಾನವ ರೂಪದ ಪ್ರತಿನಿಧಿಯನ್ನು ಆರಿಸುವ ವಿಚಾರವನ್ನು ತಿಳಿಯುವುದು ಅವಶ್ಯ.

ಯಾವುದಾದರೊಂದು ಹಳ್ಳಿಯಲ್ಲಿ ಮಾತಂಗಿಯನ್ನು ನಿಯಮಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದರೆ, ಆ ಹಳ್ಳಿಯಲ್ಲಿರುವ ಎಲ್ಲಾ ಅವಿವಾಹಿತ ಹೆಣ್ಣುಮಕ್ಕಳನ್ನು ಮಾತಮ್ಮ ಅಥವಾ ಮಾತಂಗಿ ದೇವಿಯ ಮಂದಿರದೆದುರು ಸೇರಿಸುತ್ತಾರೆ. ಅನಂತರ ಡೋಲಿನ ಢಣಢಣ ನಾದದೊಡನೆ ದೇವಿಯ ಸ್ತುತಿ, ಪ್ರಾರ್ಥನೆಗಳು ನಡೆಯುತ್ತವೆ. ದೇವಿಯು ತನ್ನ ಇಚ್ಛಾನುಸಾರ ಒಬ್ಬ ಕುಮಾರಿಯ ಮೂಲಕ ಪ್ರತ್ಯಕ್ಷಳಾಗಬೇಕೆಂಬುದಾಗಿರುವುದು ಅವರು ಮತ್ತೆಮತ್ತೆ ಮಾಡುವ ಪ್ರಾರ್ಥನೆ. ಸ್ವಲ್ಪ ಹೊತ್ತಿನಲ್ಲಿಯೇ ಆ ಪ್ರಕಾರ ಯಾರಾದರೊಬ್ಬ ಕುಮಾರಿಯು ತನ್ನ ಮೈದುಂಬಿದಂತೆ ವರ್ತಿಸಿದರೆ, ದೇವಿ ತನ್ನ ಮಾಧ್ಯಮವನ್ನು ಆರಿಸಿಕೊಂಡಳೆಂದು ಉರಿನ ಜನರು ಭಾವಿಸುತ್ತಾರೆ.

ಆದರೆ ಅಷ್ಟಕ್ಕೆ ಮುಗಿಯುವುದಿಲ್ಲ ಈ ಪ್ರಕ್ರಿಯೆ. ದೇವಿಯು ಆರಿಸಿಕೊಂಡ ಕುಮಾರಿಯು ಇನ್ನೂ ಅನೇಕ ದಿವ್ಯಗಳಿಂದ ಹೊರಬೀಳಬೇಕು. ಭೂಮಿಯ ಮೇಲೆ ರಂಗೋಲಿ ಬಿಡಿಸಿ (ಮುಗ್ಗು), ಅದರ ಮೇಲೆ ಆಕೆಯನ್ನು ಕೂರಿಸುತ್ತಾರೆ. ಅವಳ ಆಸನದ ಹತ್ತಿರವೇ ತುಂಬಿರುವ ಮೊಸರಿನ ಪಾತ್ರೆಗಳನ್ನು ಇಡಲಾಗುವುದು. ದೇವೀ ಮೈತುಂಬಿದ್ದರೂ ಸ್ವತಃ ತನ್ನನ್ನು ಸಾವರಿಸಿಕೊಂಡು ತನ್ನ ಇಚ್ಛೆಗೆ ಬಂದ ಆಸನವನ್ನು ಅಲಂಕರಿಸುತ್ತಾಳೆ ಆ ಕುಮಾರಿ. ಅವಳ ಆಸನದ ಸುತ್ತ ಬಹಳ ಹತ್ತಿರವಾಗಿ ಇನ್ನೂ ನಾಲ್ಕು ತುಂಬಿದ ಮೊಸರಿನ ಪಾತ್ರೆಗಳಿರುತ್ತವೆ. ಆ ಪಾತ್ರೆಗಳಿಗೆಲ್ಲ ಹಗ್ಗಕಟ್ಟಿ ಅದರ ಮತ್ತೊಂದು ತುದಿಯನ್ನು ಮೇಲಿನ ಚಪ್ಪರಕ್ಕೆ ಕಟ್ಟಿರುತ್ತಾರೆ. ಹಗ್ಗದಿಂದ ಕಟ್ಟಲಾಗಿರುವ ಈ ಮೊಸರಿನ ಪಾತ್ರೆಗಳ ನಡುವೆ ಕುಳಿತಿರುವ ಆ ಕುಮಾರಿಯು ದೇವೀ ಮೈದುಂಬಿಕೊಂಡುದರಿಂದ ಆದ ಭಾರ, ನೋವನ್ನು ಸಹಿಸಿ ಮೊಸರಿನ ಪಾತ್ರೆಗೆ ಏನು ಧಕ್ಕೆಯಾಗದಂತೆ ಅವುಗಳ ನಡುವೆ ಓಡಾಡುವಲ್ಲಿ ಯಶಸ್ವಿಯಾದರೆ ಮಾತ್ರ ಮಾತಂಗಿ ದೀಕ್ಷೆಯ ಸತ್ವಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾಳೆಂದು ಅರ್ಥ. ಹೀಗೆ ದೀಕ್ಷೆಗೊಂಡ ಕುಮಾರಿಗೆ ಒಂದು ಬುಟ್ಟಿ, ನಾಗಕಾಷ್ಠ (ನಾಗಫಣಿಯ ಕೋಲು), ನಿಂಬೆಯ ಗಿಡದ ಕೊಂಬೆಯ ಗುಚ್ಚ ಹಾಗೂ ಕವಡೆಗಳನ್ನು ಪೋಣಿಸಿರುವ ಹಗ್ಗವೇ ಮೊದಲಾದ ಮಾತಂಗಿಯ ಲಾಂಛನಗಳನ್ನು ಅರ್ಪಿಸುತ್ತಾರೆ. ಈ ಲಾಂಛನಗಳೆಲ್ಲ ಪ್ರಾಪ್ತವಾದ ಮೇಲೆಯೇ ಕುಮಾರಿಗೆ ಮಾತಂಗಿ ದೇವಿಯನ್ನು ಪ್ರತಿನಿಧಿಸುವ ಪ್ರತಿಷ್ಠೆ ಲಭ್ಯವಾಗುವುದು; ನಂತರ ಅವಳು ಸಾಕ್ಷಾತ್ ಮಾತಂಗಿ ದೇವಿ ಎಂಬುದಾಗಿ ಮಾದಿಗ ಸಮಾಜದಲ್ಲಿ ಪರಮಾದರದಿಂದ ಗೌರವಿಸಲ್ಪಡುತ್ತಾಳೆ.

ಮಾತಂಗಿ ದೀಕ್ಷೆಯ ವಿಷಯವಾಗಿ ಇನ್ನೂ ಕೆಲವು ಪ್ರಕಾರಗಳು ರೂಢಿಯಲ್ಲಿವೆ. ಕೆಲವೊಮ್ಮೆ ಮುದ್ದಾಮಾಗಿ ಯೋಜಿಸಿದ ಸಮಾರಂಭವೇ ಅಲ್ಲದೆ ಇತರೆಡೆಯೂ ಒಬ್ಬ ಕುಮಾರಿಯು ದೇವಿಯು ಮೈದುಂಬಿಕೊಂಡ ಭಾವನೆಯಿಂದ ತೂರಾಡುತ್ತಲೋ, ಮೈಭಾರವಾದಂತೆಯೋ ವರ್ತಿಸತೊಡಗುವುದುಂಟು. ಆಗ ಅವಳ ಆಕಾಂಕ್ಷೆಯ ಸ್ವರೂಪವನ್ನು ಪರೀಕ್ಷಿಸಿ ಅವಳಿಗೆ ಮಾತಂಗಿ ಲಾಂಛನಗಳನ್ನು ಅರ್ಪಿಸುವುದೂ ರೂಢಿಯಲ್ಲಿದೆ.

ಮಾತಂಗಿ ದೀಕ್ಷೆಯ ತೀರಾ ಭಿನ್ನವಾದ ಪ್ರಕಾರವೊಂದು ಚೆಂಡಲೂರು ಎಂಬ ಗ್ರಾಮದಲ್ಲಿ ರೂಢಿಯಲ್ಲಿದೆ. ಮಾತಂಗಿ ದೀಕ್ಷೆಯ ಸಂಬಂಧವಾಗಿ ಯಾವುದಾದರೊಂದು ಹುತ್ತವನ್ನು ಶೋಧಿಸಿ ಅಗೆದು ದೀಕ್ಷೇಚ್ಛೂ ಕುಮಾರಿಯನ್ನು ಅದರೊಳಗೆ ಕೂರಿಸಿ ಅವಳ ತಲೆಯ ಮೇಲೆ ಒಂದು ಬುಟ್ಟಿಯನ್ನು ಮುಚ್ಚುತ್ತಾರೆ. ನಂತರ ಬವನೀಡು ಗಾಯಕರು ತಮ್ಮ ವಾದ್ಯಗಳೊಡನೆ ಮಾತಂಗಿ ದೇವಿಯ ಮತ್ತು ಈ ಮುನ್ನ ಆಗಿರುವ ಮಾತಂಗಿ ಉಪಾಸಕರ ಲೀಲೆಗಳನ್ನು ಹಾಡುತ್ತಾರೆ. ಹಾಗೆ ಮಾಡುತ್ತಿರುವಾಗಲೇ ಆ ‘ಹುತ್ತಸ್ಥ’ ಕುಮಾರಿಯಲ್ಲಿ ದೇವಿಯು ಸಂಚಾರವಾಗಿ, ಆಕೆ ತನ್ನ ತಲೆಯ ಮೇಲಣ ಬುಟ್ಟಿಯನ್ನು ಅತ್ಯಂತ ಆವೇಗದಿಂದ ದೂರಕ್ಕೆಸೆದು ಹೊರಬರುತ್ತಾಳೆ. ಮಾದಿಗ ಜನತೆ ದೇವಿಯ ಈ ಅವತರಣವನ್ನು ತುಂಬು ಶ್ರದ್ಧೆಯಿಂದ ಆಹ್ವಾನಿಸಿ ಪೂಜಿಸುವರಲ್ಲದೆ, ಆ ಕುಮಾರಿಗೆ ನಾಗಕಾಷ್ಠಾದಿ ಲಾಂಛನಗಳನ್ನು ಧಾರಣ ಮಾಡಲು ಸಹ ಕೊಡುತ್ತಾರೆ. ಮಾತಂಗಿ ದೀಕ್ಷೆಯ ಈ ಪ್ರಕಾರವನ್ನು ವಿಶೇಷವಾಗಿಯೇ ಪರಿಗಣಿಸಬೇಕು. ಕಾರಣ ಮಾತಂಗಿಯ ಮೂಲದ ಪ್ರತೀಕವೇ ಹುತ್ತವೆಂಬುದನ್ನು ಇಲ್ಲಿ ಗಮನಿಸುವುದು ಅಗತ್ಯ.

ಮಾತಂಗಿ ದೀಕ್ಷೆಯ ಮೇಲೆ ಅಂತಿಮ ಮುದ್ರೆಯನ್ನು ಒತ್ತುವಲ್ಲಿಯೂ ಒಂದು ವಿಧಿಯುಂಟು. ಕರ್ನೂಲ್‌ ಜಿಲ್ಲೆಯಲ್ಲಿನ ಕುಂಭಮ್‌ ಬಳಿಯಿರುವ ಮಲಿಂಥಪಡು ಎಂಬ ಊರು ಮಾತಂಗಿ ಅಥವಾ ಎಲ್ಲಮ್ಮಾ ದೇವಿಯ ಒಂದು ಮುಖ್ಯ ಉಪಾಸನಾ ಕೇಂದ್ರ. ಬೇರೆಬೇರೆ ಊರುಗಳಿಂದಲೂ ಮಾತಂಗಿಯರಾಗಲು ಬಯಸಿ ಕುಮಾರಿಯರು ಬರುತ್ತಾರೆ ಇಲ್ಲಿಗೆ. ಇದಕ್ಕೆ ಬರುವ ವೆಚ್ಚ ಅಪಾರ, ಇದನ್ನು ಬಹಳ ಸಂತೋಷದಿಂದಲೇ ಭರಿಸುತ್ತಾರೆ ಜನತೆ. ಇಲ್ಲಿಗೆ ಬಂದ ಎಲ್ಲಾ ಮಾತಂಗಿ ಅಪೇಕ್ಷಿತ ಕುಮಾರಿಯರನ್ನು ಸಾಲಾಗಿ ಕೂರಿಸಲಾಗುವುದು. ಆನಂತರ ಬ್ರಾಹ್ಮಣನೊಬ್ಬ ದೇವಿಯ ಮುಖದ ಮೇಲಿನಂತೆ ಎಲ್ಲಾ ಕುಮಾರಿಯರ ಮೇಲೆಯೂ ಚಿಹ್ನೆಯನ್ನು ಒತ್ತುತ್ತಾನೆ. ಆಮೇಲೆ ಒಂದು ಕೋಣವನ್ನು ಬಲಿಕೊಡಲಾಗುತ್ತದೆ. ಈ ವಿಧಿ ನಡೆವುದು ಐದು ದಿನಗಳ ಕಾಲ. ಯಥಾಸಾಂಗವಾಗಿ ಎಲ್ಲವೂ ಮುಗಿದ ಮೇಲೆ ಈ ಎಲ್ಲಾ ಮಾತಂಗಿ ಅಪೇಕ್ಷಿತ ಕುಮಾರಿಯರ ಮೂಲಕ ದೇವಿಯ ಪ್ರಾಣತತ್ತ್ವವು ಮುನ್ನಡೆಯಿತೆಂದು ಭಾವಿಸಲಾಗುವುದು.

ಮಾತಂಗಿ ದೀಕ್ಷೆಯನ್ನು ಸ್ವೀಕರಿಸಿದ ಮೇಲೆ ಪ್ರತಿಯೊಬ್ಬ ಮಾತಂಗಿ ಕನ್ಯೆಯನ್ನು ವೃಕ್ಷದೊಡನೆ ವಿವಾಹ ಮಾಡಲಾಗುತ್ತದೆ. ಪ್ರತೀಕಾತ್ಮಕವಾದ ಈ ವಿವಾಹ ವಿಧಿಯ ನಂತರದಲ್ಲಿ ಮಾತಂಗಿ ಆದವಳು ಯಾವನೇ ಪುರುಷನೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವ ಸ್ವಾತಂತ್ರ‍್ಯವನ್ನು ಪಡೆಯುತ್ತಾಳೆ. ಆದರೆ ಇದರಿಂದ ಅವಳಿಗೆ ಯಾವುದೇ ಅಪ್ರತಿಷ್ಠೆಯು ಬರುವುದಿಲ್ಲ.

 

[1]ಮುಂಬಯಿ ಇಲ್ಯಾಖ್ಯಾತೀಲ್ ಜಾತಿ : (ಮುಂಬಯಿ ಪ್ರಾಂತ್ಯದಲ್ಲಿನ ಜಾತಿ) ಗೋ.ಮಂ.ಕಾಲೇಲಕರ, ಬರೋಡ, ೧೯೨೮, ಪುಟ. ೨೦೨ – ೨೦೮.

[2] Sakti cult and Tara: Ed.by. D.C. Sircar, University of calcutta, calcutta, 1967, p.33 (‘The cult of Sakti in Tamilnad’ : T.V. Mahalingam, “iti is also supposed that Mariamman is Goddess of rain, The Tamil term Mari meaning ‘a shower’.”)

[3]ಭಾರತೀಯ ಸಂಸ್ಕೃತಿ ಕೋಶ, ಖಂಡ: ಸಂ.ಪಂ. ಮಹಾದೇವಶಾಸ್ತ್ರಿ ಜೋಶಿ, ಪುಣೆ, ೧೯೭೨, ಪುಟ. ೩೦೯ – ೩೧೩ (ಮೂಲ ಸಂದರ್ಭ:ಮೈಸೂರು ಟ್ರೈಬ್ಸ್ಅಂಡ್ ಕ್ಯಾಸ್ಟ್ಸ್‌‘: ನಂಜುಂಡಯ್ಯ ಅಯ್ಯರ್, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.)

[4]ಲೋಕ ಕಥಾ ಕುಂಜ : ಪಂ. ಮಹಾದೇವಶಾಸ್ತ್ರಿ ಜೋಶಿ, ಪುಣೆ, ೧೯೬೨, ಪು. ೨೧ – ೨೪ (‘ಮಾಂಗಿಣೀಚೆ ಶಿರ’.)

[5] The village Gods of South India: by H. Whitehead, calcutta, 1921, p. 116; Dravidian Gods in modern Hinduism: by W.T. Elmore, Madras, 1925, pp.98 – 106.

[6]ಭಾರತ ಇತಿಹಾಸ ಸಂಶೋಧಕ ಮಂಡಳ ತ್ರೈಮಾಸಿಕ.

[7] ಹಿಂದೂ ಧರ್ಮಾಚೇ ಸ್ಚರೂಪಭಾಗ: ಬಾಬಾ ಪದಮನ್‌ಜಿ, ಪುಟ.೨೬೧.

[8] The Mahar Folk : A Robertson, calcutta, 1938, p.71.

[9] Dravidian Gods: pp. 22 – 26.