ಹುತ್ತದಿಂದ ಅವತರಿಸುವ ರಹಸ್ಯ

ಮಾತಂಗೀ ದೀಕ್ಷೆಯ ಪ್ರಸಂಗದಲ್ಲಿ ಮಾತಂಗಿ ಆಗಲು ಅಪೇಕ್ಷಿಸಿದ ಸ್ತ್ರೀಯನ್ನು ಹುತ್ತದಲ್ಲಿ ಕೂರಿಸಿ, ಅವಳಲ್ಲಿ ದೇವಿಯ ಸಂಚಾರವಾದ ಮೇಲೆ ಹುತ್ತದಿಂದ ಪ್ರಕಟವಾದಂತೆ ತೋರುವ ಅನುಭವ ನಿದರ್ಶನವನ್ನು ಈ ಹಿಂದೆಯೇ ವಿವರಿಸಲಾಗಿದೆ. ಮಾತಂಗಿಯ ಮೂಲ ಪ್ರತೀಕವೇ ಹುತ್ತ. ದಕ್ಷಿಣ ಭಾರತದ ಅನೇಕ ಕಡೆಗಳಲ್ಲಿ ರೇಣುಕಾ – ಎಲ್ಲಮ್ಮ – ಮಾತಂಗಿಯರನ್ನು ಪೂಜಿಸಲಾಗುತ್ತಿರುವುದು ಕೂಡ ಈ ರೂಪದಲ್ಲಿಯೇ. ಗೋಮಾಂತಕ ಹಾಗೂ ದಕ್ಷಿಣ ಕೊಂಕಣ ಪ್ರದೇಶದಲ್ಲಿಯೂ ಹುತ್ತವನ್ನು ಪೂಜಿಸುತ್ತಿರುವುದು ಸಾಂತೇರಿ ದೇವಿಯ ರೂಪದಲ್ಲಿಯೇ. ರೇಣುಕೆಯಂತೆ ಸಾಂತೇರಿಯೂ ಕೂಡ ಸ್ಥಾಪಿತಳಾಗಿರುವುದು ಪರಶುರಾಮನಿಂದಲೇ ಎಂದು ಹೇಳಲಾಗಿದೆ. ಮೃದುಕೋಮಲವಾದ ರೇಣುಳಿಂದ ಗೂಢಾಕಾರವಾಗಿ ಕಟ್ಟಲ್ಪಟ್ಟಿರುವ ಹುತ್ತವೇ ಭೂಮಿಯ ಯೋನಿ. ಅದರಲ್ಲಿ ವಾಸ ಮಾಡುವ ನಾಗನಾದರೋ ಪುರುಷ ತತ್ತ್ವದ ಪ್ರತಿನಿಧಿ. ರೇಣುಕಾ ಎಂಬ ದೇವೀ ನಾಮವು ಮೂಲತಃ ಭೂಮಿವಾಚಕ (ರೇಣುಕಾ = ರೇಣುಮಯಿ = ಪೃಥ್ವಿ). ಹಾಗಾಗಿ ಅವಳನ್ನು ಕೋರಿ ಭೂಮಿಕಾ (ಕುಮಾರಿ ಭೂಮಿ) ಎಂಬುದಾಗಿ ಕರೆದಿರುವುದುಂಟು. ಗೋಮಾಂತಕದಲ್ಲಿನ ಸಾಂತೇರಿಯೂ ಪ್ರಖ್ಯಾತಳಾಗಿರುವುದು ‘ಭೂಮಿ’ ಎಂಬ ಪರ್ಯಾಯ ನಾಮದಿಂದಲೇ. ಕ್ಷೇತ್ರದೇವತಾ ರೂಪದ ಪ್ರತೀಕವಾಗಿ ಹುತ್ತವು ಪೂಜಿಸಲ್ಪಡುತ್ತಿರುವುದರಿಂದ ಸ್ವಾಭಾವಿಕವಾಗಿಯೇ ಮುರುಗನ್, ಸುಬ್ರಹ್ಮಣ್ಯ, ಖಂಡೋಬಾ, ಜೋತಿಬಾ, ರವಳನಾಥ, ಭೈರವ ಈ ಎಲ್ಲಾ ಕ್ಷೇತ್ರಪತಿ ಅಥವಾ ಕ್ಷೇತ್ರಪಾಲಕರು ನಾಗರೂಪವಾಗಿ ಗ್ರಹಿಸಲ್ಪಟ್ಟಿದ್ದಾರೆ. ಇಂದಿಗೂ ಸುಬ್ರಹ್ಮಣ್ಯನು ಪೂಜಿಸಲ್ಪಡುತ್ತಿರುವುದು ಹುತ್ತಸ್ಥ ನಾಗನ ರೂಪವಾಗಿಯೇ. ಬಳ್ಳಾರಿಯಲ್ಲಿನ ‘ಮಣ್‌ ಮೈಲಾರ’ (ಮಣ್ಣು ಮೈಲಾರ = ಮೃತಿಕಾ ಮೈಲಾರ) ಮತ್ತು ಜೇಜೂರಿಯಲ್ಲಿನ (ಮಹಾರಾಷ್ಟ್ರ) ಎತ್ತರದ ‘ಆದಿ ಮೈಲಾರ’ ಇವೂ ಹೀಗೆಯೇ ‘ಹುತ್ತಸ್ಥ ನಾಗ’ ರೂಪದಲ್ಲಿರುವುದು ವಿಶೇಷ ಗಮನೀಯ. ಗೋಮಾಂತಕದಲ್ಲಿನ ಸಾಂತೇರಿ ದೇವಿಯ ಕೈಯಲ್ಲಿ ನಾಗವಿರುವುದು ಹಾಗೂ ಮಾತಂಗಿಯ ಉಪಾಸಕರ ಕೈಯಲ್ಲಿ ನಾಗಕಾಷ್ಠ ಇರುವುದಾದರೂ ಏಕೆ? ಎಂಬುದರ ರಹಸ್ಯ ಬಿಡಿಸಲು ಸಾಧ್ಯವಾಗುವುದು ಈ ನಾಗ ಕ್ಷೇತ್ರಪತಿತ್ವದಿಂದಲೇ ಎಂಬುದನ್ನು ಮರೆಯುವಂತಿಲ್ಲ.

ರೇಣುಕೆಯ ಕಥಾವಾಙ್ಮಯದಲ್ಲಿನ ಕಥೆಯೊಂದು ಇಂತಿದೆ: ಪ್ರತ್ಯಕ್ಷ ಆದಿಶಕ್ತಿಯು ಹುತ್ತದಿಂದ ಕನ್ಯಾ ರೂಪದಲ್ಲಿ ಪ್ರಕಟಗೊಂಡಳು ಹಾಗೂ ಒಬ್ಬ ರಾಜನ ಕನ್ಯೆಯಾಗಿ ಬೆಳೆದಳು.[1] ಮಾತಂಗಿ ದೀಕ್ಷೆಯಲ್ಲಿಯೂ ಸಹ ಪುನಃ ವ್ಯಕ್ತವಾಗುತ್ತಿರುವುದು ಈ ಸಾಂಪ್ರದಾಯಿಕ ಶ್ರದ್ಧೆಯೇ. ಭೂಮಿಯ ಉಪಾಸನೆಯಲ್ಲಿ ಹುತ್ತಕ್ಕೆ ಇಂಥ ಅಸಾಧಾರಣ ಮಹತ್ವವಿದೆ. ಬ್ರಾಹ್ಮಣ ಗ್ರಂಥಗಳಲ್ಲಿ ಪ್ರಾಚೀನ ಕಾಲದಿಂದಲೂ ಅನೇಕ ವಿಧಿ – ವಿಧಾನಗಳಲ್ಲಿ ಹುತ್ತದ ಮಣ್ಣನ್ನು ಸುಫಲನಕಾರಕ ರೂಪದಲ್ಲಿ ಬಳಸಲಾಗುತ್ತಿತ್ತು ಎಂಬುದರ ಬಗ್ಗೆ ಅನೇಕ ಪುರಾವೆಗಳು ಉಪಲಬ್ಧವಾಗುತ್ತವೆ.

ಕುಮಾರಿ ರೇಣುಕಾ ಮತ್ತುಅಪ್ಪನೇ ಇಲ್ಲದ ಪರಶುರಾಮ

ಹುತ್ತದ ರೂಪವಾಗಿ ಪೂಜಿಸಲ್ಪಡುತ್ತಿರುವ ರೇಣುಕೆಯು ಭೂಮಿ ಕುಮಾರಿ ಭೂಮಿಯಾಗಿರುವಳೆಂಬುದನ್ನು ಈಗಾಗಲೇ ನೋಡಿದ್ದೇವೆ. ಮಾತೃದೇವತೆಯು ಪ್ರತಿಯೊಂದು ಋತುವಿನಲ್ಲಿಯೂ ಎಲ್ಲವನ್ನು ತನ್ನ ಉದರದಲ್ಲಿ ಹೊತ್ತು ತರುತ್ತಿರುವಳಾದರೂ, ಅಖಂಡ ರೂಪದಿಂದ ಆಕೆ ಕನ್ಯೆಯೇ. ಆಕೆ ಪುರುಷತ್ವವನ್ನು ಅನೇಕ ಸಂಬಂಧಗಳಿಂದ ಪೋಷಿಸುವಳಾದರೂ, ಆಕೆಯ ಕೌಮಾರ್ಯಕ್ಕೆ ಎಲ್ಲೂ, ಯಾವತ್ತೂ ಚ್ಯುತಿ ಬಂದಿಲ್ಲ. ಮಾತೃದೇವತಾ ಉಪಾಸನಾ ಪರಂಪರೆಯಲ್ಲಿ ಈ ವಿಚಾರವು ಒಂದು ಸಾತತ್ಯವಾದ ಸಂಗತಿಯೇ. ಸೌಂದತ್ತಿಯಲ್ಲಿನ ಎಲ್ಲಮ್ಮ ರೇಣುಕೆಯ ಪಾರಂಪರಿಕ ಗೀತೆಗಳಲ್ಲಿ ಅವಳ ಕೌಮಾರ್ಯ ಕನ್ಯೆತನದ ಉಲ್ಲೇಖವು ಮತ್ತೆ ಮತ್ತೆ ಬರುತ್ತದೆ.[2] ಗೆಳೆಯರು ‘ಅಪ್ಪನಿಲ್ಲದೆ ಹುಟ್ಟಿದ ಹುಡುಗ’ ಎಂದು ಒಂದೇ ಸಮನೆ ಪರಶುರಾಮನನ್ನು ಅಣಕಿಸುತ್ತಿರುತ್ತಾರೆ. ಆದ್ದರಿಂದ ಆತ ತನ್ನ ತಾಯಿಯಲ್ಲಿ ‘ಬೇಗನೆ ನನ್ನ ತಂದೆಯನ್ನು ತೋರಿಸು!’ ಎಂದು ಆಗ್ರಹ ಮಾಡುತ್ತಾನೆ. ಅದಕ್ಕೆ ರೇಣುಕೆಯು ಹೀಗೆ ಹೇಳುತ್ತಾಳೆ:

ಆಡಲಿಕ್ಕೆಂದು ಹೋಗಿದ್ದಳು ಸಂಭಾನ ಮಗಳು |
ಆರು ಜನರಿಗೆ ಗಣ (?) ಕೊಡುವಾಗ |
ಕೇಳಿ ಪಡೆದೆನಾಗ ತಂದೆಯಿಲ್ಲದಂತೆ ನಿನ್ನನ್ನು |
ನನಗಿಲ್ಲ ಪತಿ, ನಿನಗಿಲ್ಲ ಪಿತ |
ಅಂತಿರಲು ಎಲ್ಲಿ ತೋರುವುದೀ ಹೊತ್ತಿನೊಳು ||

ಮತಂಗ ಮತ್ತು ಮಾತಂಗಿ

‘ಮಾತಂಗಿ‘ಯ ಹೆಸರಿನಲ್ಲಿ ಧರಣಿಯ (ಹಾಗೂ ‘ಮೇಘ, ಆಕಾಶ‘ಗಳ ಮೂಲಕ ಜಲ) ಪೂಜೆ ಮಾಡುತ್ತಿರುವುದನ್ನು ಕಂಡಾಗ ನನಗೆ ಸ್ಮರಣೆಯಾಗುವವಳು ಗಜಲಕ್ಷ್ಮಿ. ಲಕ್ಷ್ಮಿ – ಪದ್ಮ, ಪದ್ಮಜಾ, ಪದ್ಮಹಸ್ತಾಲಕ್ಷ್ಮಿ ಎಂಬೆಲ್ಲ ಗಜಲಕ್ಷ್ಮಿಯ ಸಂಕಲ್ಪನೆಗಳು ಭೂಮಿಯವೇ ಆಗಿವೆ. ಇನ್ನು ವರ್ಷಣ ಶೀಲವೆನಿಸಿರುವ ಗಜವು ‘ದ್ಯೌ’ (ಆಕಾಶ)ಗೆ ಪ್ರತಿನಿಧಿಯೆನಿಸಿದೆ. ‘ಬೆಸೆಯಿತು ಸಂಬಂಧವು ಧರಣಿ ಮಾತೆಗೆ ಆಕಾಶದೊಡನೆ!’ ಎಂಬ ಮಂಗಲ ಘೋಷವನ್ನು ಪ್ರತಿಧ್ವನಿಸುವ ಶಿಲ್ಪ, ಸೃಷ್ಟಿಯ ಸರ್ವ ರಹಸ್ಯವನ್ನು ಅಭಿವ್ಯಕ್ತಿಸುವುದೇ ಆಗಿದೆ. ಗಜಲಕ್ಷ್ಮಿ ಸಂಕಲ್ಪನೆಯಲ್ಲಿನ ಈ ಭಾವವು ಮಾನವ ಮನಸ್ಸಿನ ಆದ್ಯ ಉನ್ಮೇಷವಾಗಿರುವುದರಿಂದ ಈ ಸಂಕಲ್ಪನೆ ಸ್ವಾಭಾವಿಕವಾಗಿಯೇ ಪುರಾತನತೆಯ ಪಿರ್ಯಾದನ್ನು ಹೇಳುತ್ತದೆ. ಬುದ್ಧನ ಜನನದ ಪ್ರತೀಕ (Symbol of Buddha’s Nativity) ವಾಗಿ ಸಂಕಲ್ಪಗೊಂಡು ಉದ್ಬವಿಸಿದವಳು ಗಜಲಕ್ಷ್ಮಿ. ಅವಳ ಮೊದಲ ಶಿಲ್ಪವು ರೂಪುಗೊಂಡದ್ದು ಸಾಂಚಿ – ಭರಹೂತ್‌ನ ಸ್ತೂಪದಲ್ಲಿ ಎಂಬುದಾಗಿ ಒಪ್ಪಿಕೊಳ್ಳುವವರು ಈ ಸಂಕಲ್ಪನೆಯಲ್ಲಿರುವ ಆದಿಮ ಪ್ರಕೃತಿಯ ಭಾವವನ್ನು ಮನಸ್ಸಿಗೆ ತಂದುಕೊಂಡಿರುವಂತೇನು ಕಾಣುವುದಿಲ್ಲ. ಇಂದಿಗೂ ಗಜಲಕ್ಷ್ಮಿಯ ಉಪಾಸನೆಯು ಮಹಾರಾಷ್ಟ್ರದ ಗ್ರಾಮೀಣರಲ್ಲಿ ರೂಢಿಯಲ್ಲಿ ಇರುವಂಥದು ಈ ಆದಿಮ ಭಾವಕ್ಕೆ ಪ್ರಾಧಾನ್ಯ ನೀಡಿಯೇ ಎಂಬುದು ಗಮನೀಯ.

ಮಹಾರಾಷ್ಟ್ರದಲ್ಲಿನ ಸಾತಾರಾ, ಸೋಲಾಪುರ, ಕೊಲ್ಹಾಪುರದ ಭಾಗಗಳಲ್ಲಿ ಹಾಗೂ ಕ್ವಚಿತ್ತಾಗಿ ಬೇರೆಡೆಗಳಲ್ಲಿಯೂ ಕೂಡ ಗಜಲಕ್ಷ್ಮಿಯನ್ನು ಪೂಜಿಸುತ್ತಿರುವುದು ಗ್ರಾಮ ದೇವತೆಯ ಸ್ವರೂಪದಿಂದಲೇ. ಕೊಲ್ಹಾಪುರದ ಭಾಗದಲ್ಲಿಯಂತೂ ಆಕೆ ಊರೂರುಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದು, ಆಕೆಗೆ ಭಾವೇಶ್ವರಿ, ಭಾವಕಾ, ಭಾವಕಾಈ ಇತ್ಯಾದಿ ಹೆಸರುಗಳಿವೆ. ಪ್ರತಿಯೊಂದು ಊರುಗಳಲ್ಲಿ ಆಕೆಯನ್ನು ಪೂಜಿಸುತ್ತಿರುವುದು ಸುಲಭ – ಪ್ರಸೂತಿ ಆಗಬೇಕು ಎಂಬ ಕೋರಿಕೆಯ ಮೂಲಕವಾಗಿ. ಮೂಲತಃ ಆಕೆ ಸುಫಲನಕಾರಕ ದೇವಿ ಎನಿಸಿರುವುದರಿಂದ, ಜನರು ಈ ಬಗೆಯ ಹೇತುವನ್ನಿಟ್ಟುಕೊಂಡು ಆರಾಧಿಸುತ್ತಿರುವುದು ತೀರಾ ಸ್ವಾಭಾವಿಕವೇ ಹೌದು.

ಗಜಲಕ್ಷ್ಮಿ ಪರಿಕಲ್ಪನೆಯಲ್ಲಿರುವ ಗಜವು ಮೇಘದ ಪ್ರತಿನಿಧಿಯಾಗಿರುವುದಂತೂ ಸುಸ್ಪಷ್ಟ. ಕಾಳಿದಾಸನು ತನ್ನ ‘ಮೇಘದೂತ’ ಕಾವ್ಯದಲ್ಲಿ ಕೇವಲ ಕಾಲ್ಪನಿಕವಾಗಿ ಮಾತ್ರ ಮೇಘ ಮತ್ತು ಆಕೆಯನ್ನು ಸಾಮ್ಯತೆಯಿಂದ ವರ್ಣಿಸಿದ್ದಾನೆಂದು ಹೇಳುವುದು ಸರಿಯಲ್ಲ; ಏಕೆಂದರೆ ನಮ್ಮ ಪರಂಪರೆಯಲ್ಲಿಯೇ ಆನೆ ಮತ್ತು ಮೇಘಗಳ ಸಾಮ್ಯವು – ಇಲ್ಲವೆ ಏಕತ್ವ – ಸರ್ವತ್ರ ಸ್ವೀಕೃತವಾಗಿರುವಂಥ ವಿಷಯ. ಪರ್ಜನ್ಯ ದೇವನಾದ ಇಂದ್ರನು ಆರೂಢನಾಗಿರುವ ಐರಾವತವೂ ಸಹ ಒಂದರ್ಥದಲ್ಲಿ ಮೇಘವೇ. ಇರಾ ಎಂದರೆ ನೀರು; ಅಂದರೆ ಐರಾವತಿ ಎಂಬುದು ಇರವಾನ್, ಜಲಯುಕ್ತವಾದ ಮೇಘ. ಇದೇ ಸಂದರ್ಭದಲ್ಲಿ ನನಗೆ ನೆನಪಾಗುವ ಮತ್ತೊಂದು ಹೆಸರೆಂದರೆ ಆನೆಗೆ ಇರುವ ‘ಮತಂಗ’ ಎಂಬ ಪರ್ಯಾಯ ನಾಮ.[3] ‘ಮತಂಗ‘ವು ಮೇಘ ರೂಪ ಪುರುಷತತ್ತ್ವವಾಗಿದ್ದರೆ, ಮಾಂತಿ ಪೃಥ್ವಿರೂಪ ಸ್ತ್ರೀತತ್ತ್ವ.

ದೇವಿಯ ಉಪಾಸನೆಯಲ್ಲಿರುವ ಕವಡೆಯ ಸ್ಥಾನ

ದಕ್ಷಿಣ ಭಾರತದಲ್ಲಿ ರೇಣುಕಾ, ಎಲ್ಲಮ್ಮ, ಮಾತಂಗಿ, ಮರಿ ಆಯಿ, ಭವಾನಿ, ಮಹಾಲಕ್ಷ್ಮಿ ಇತ್ಯಾದಿ ದೇವಿಯರ ಉಪಾಸನಾ ಕ್ಷೇತ್ರಗಳಲ್ಲೆಲ್ಲ ಕವಡೆಗೆ ಅತ್ಯಂತ ಹೆಚ್ಚಿನ ಮಹತ್ವವಿರುವುದು. ಗೊಂದಲಿಗ, ಭುತ್ಯಾ, ಪೋತರಾಜ, ಮಾತಂಗಿ, ಜೋಗಪ್ಪ, ಜೋಗತಿಯರಂಥ ಉಪಾಸಕ ವರ್ಗದವರೆಲ್ಲ ಕವಡೆ ಹಾರಗಳನ್ನು ತಮ್ಮ ಮೈಮೇಲೆ ನಾನಾ ಅಲಂಕಾರಗಳಿಂದ ಧರಿಸಿರುತ್ತಾರೆ. ಗೊಂದಲಿಗರು, ಭುತ್ಯರು, ಮಾತಂಗಿ – ಜೋಗತಿಯರುಗಳ ಕೊರಳಲ್ಲಿ ಇರುವ ಹಾರ ಕವಡೆಯದು. ಭುತ್ಯರು ಧರಿಸುವ ಶಂಕಾಕಾರ ಟೊಪ್ಪಿಗೆಯ ಮೇಲ್ಭಾಗವಂತೂ ಕವಡೆಗಳಿಂದಲೇ ಅಲಂಕರಣಗೊಂಡಿರುತ್ತದೆ. ಜೋಗಿತಿಣಿಯರ ‘ಜಗಾಂ’ (ಪರಡಿಗೆ) ಪೋಣಿಸಲ್ಪಟ್ಟಿರುವುದು ಕೂಡ ಕವಡೆಗಳಿಂದಲೇ. ಇನ್ನು ಬಗಲಲ್ಲಿನ ಭಂಡಾರದ ಚೀಲಗಳಿಗೂ ಕವಡೆಗಳು ಇರುತ್ತವೆ. ಮಾತಂಗಿಯರ ಪರಡಿಗೆಗಳಿಗೂ ಕವಡೆಗಳದೇ ಅಲಂಕಾರ. ಈ ಎಲ್ಲಾ ಉಪಾಸಕ ವರ್ಗದವರಲ್ಲಿ ಕಂಠದಿಂದ ವಕ್ಷಸ್ಥಲದವರೆಗೆ ಇಳಿಬಿದ್ದಿರುವ ದೇವೀ ಪ್ರತಿಮೆ ಇರುವ ಒರಟು ವಸ್ತ್ರಗಳ ಮೇಲೆಯೂ ಕವಡೆಗಳನ್ನು ಕೂರಿಸಲಾಗಿರುತ್ತದೆ. ಪ್ರತ್ಯಕ್ಷ ದೇವೀಗೂ ಸಹ ಕವಡೆಗಳ ಸಿಂಗಾರ ಅತ್ಯಂತ ಪ್ರಿಯವೆಂದು ದೇವೀ ವಿಷಯಕ ಜನಪದ ಗೀತೆಗಳಲ್ಲಿ ಮತ್ತೆ ಮತ್ತೆ ವ್ಯಕ್ತವಾಗಿದೆ:[4]

ಹಳದಿ ಪೀತಾಂಬರವು ಅಂಬೆಗೆ ಉಡಿಸಲು |
ಹಳದಿ ಪಿತಾಂಬರವು ದೇವಿಗೆ ಉಡಿಸಲು ||
ಕವಡೆಗಳಿಂದಲಿ ಅಂಬೆಯ ಸಿಂಗರಿಸಿದ |
ಆ ದೇವಿಯ ಸಿಂಗರಸಿದ ||

ದೇವಿಯ ಉಪಾಸಕರ ಪ್ರಧಾನ ಲಾಂಛನಗಳೆಂದರೆ ಮಾಲೆ ಮತ್ತು ಪರಡಿಗೆ. ಮಾಲೆಯು ಹೇಗೆ ಕವಡೆಗಳದ್ದೇ ಆಗಿರುತ್ತದೆಯೋ ಹಾಗೆಯೇ ಪರಡಿಗೆ (ಬಿದಿರಿನಿಂದ ಮಾಡಿದ ಬುಟ್ಟಿ – ‘ವಂಢ ಪಾತ್ರೆ‘)ಯೂ ಕವಡೆಗಳಿಂದಲೇ ಅಲಂಕಾರಗೊಂಡಿರುತ್ತದೆ. ‘ಮಾಲೆ ಪರಡಿಗೆ ಬಂದಿಹುದು ಎನ್ನ ಅದೃಷ್ಟಕ್ಕೆ’ ಎಂಬುದಾಗಿ ಈ ‘ಲಾಂಛನ‘ದ ಬಗ್ಗೆ ಅಭಿಮಾನಪಡುವುದುಂಟು ದೇವೀ ಉಪಾಸಕರು. ‘ಮಾಲೆ ಪರಡಿಗೆ ಬಂದಿದೆ. ಅವಳಿಗೆ, ಉಧೋ ಎನ್ನುತಿಹಳು ಜೋಗವ್ವಳಿಗೆ |’ ಎಂಬುದಾಗಿ ಪೋತರಾಜನ ಬಾಯಿಯಿಂದಲೂ ಮಾಲೆ – ಪರಡಿಗೆಯ ನಿರ್ದೇಶನ ಬರುತ್ತದೆ. ಜೋಗಿತಿ ಭಕ್ತಿಭಾವದಿಂದ ಎಲ್ಲಮ್ಮನನ್ನು ಈ ಮಾತುಗಳಲ್ಲಿ ಬಣ್ಣಿಸಿರುವುದು ಹೀಗೆ:

ಎಲ್ಲೂ ಎಲ್ಲಮ್ಮ ಮಂಗಳವಾರ ದಿವಸ |
ಎಲ್ಲೂ ಶುಕ್ರವಾರ ದಿವಸ |
ಬೆಟ್ಟವನಿಳಿದು ಬರುವಳು ||
ತುಂಬಿಹುದು ಹಣೆಯೂರು ಭಂಡಾರ ವಿಭೂತಿಗಳಿಂದಲಿ |
ಮತ್ತೆ ಕುಂಕುಮ ತಿಲಕವನುಟ್ಟಿಹಳು ಮೇಲೆ ||
ಮಾಲೆ ಪರಡಿಗೆ ಮುದ್ರೆಯನು ಹಿಡಿದು ಮತ್ತೆ |
ಎಲ್ಲೂ ನಡೆದಿಹಳು ಜೋಗವಾ ಬೇಡುತಾ ||

ಸಾಕ್ಷಾತ್ ಎಲ್ಲಮ್ಮ ದೇವಿಯೇ ಮಾಲೆ ಪರಡಿಗೆಯ ‘ಮುದ್ರೆ’ (ಅಧಿಕಾರ ದ್ಯೋತಕವಾದ ಅಲಂಕಾರ) ಹಿಡಿದು ಬೇಡುತಿಹಳು ಜೋಗವಾ’ ಎಂಬುದು ಈ ಗೀತೆಯ ಸಾರ. ಈ ಮೂಲಕ ದೇವಿಯ ಕಂಠದಲ್ಲಿ ವಿರಾಜಮಾನವಾಗಿರುವ ಹಾಗೂ ಭಂಡಾರದಿಂದ ತುಂಬಿ ಹೋಗಿರುವ ಈ ಕವಡೆಗಳ ಮಾಲೆಯು ಪ್ರಚಂಡ ಶಕ್ತಿಯುಳ್ಳದ್ದೆಂಬ ಶ್ರದ್ಧೆಯೂ ವ್ಯಕ್ತವಾಗಿರುವಂತಿದೆ. ಎಲ್ಲಮ್ಮ ದೇವಿಯು ಒಬ್ಬ ಅಪರಾಧಿಯ ಮೈಮೇಲೆ ಕವಡೆ ಮಾಲೆಯಲ್ಲಿನ ಭಂಡಾರವನ್ನು ಹಾಕಿದೊಡನೆ ಅವನ ಅಂಗವೆಲ ಉರಿಯಲಾರಂಭಿಸಿತು ಎಂಬ ಉಲ್ಲೇಖ ಬರುತ್ತದೆ ಒಬ್ಬ ಜೋಗಿತಿಯ ಕಥನ ಗೀತೆಯಲ್ಲಿ :

ಕವಡೆಯ ಮಾಲೆಯೊಳಗಣ ಭಂಡಾರವ ತೆಗೆದಳು |
ಅವನ ಮೈಮೇಲೆಲ್ಲ ಎರಚಿದಳು |
ಹತ್ತಿಕೊಂಡಿತು ಉರಿ ವಿಪರೀತ ಅವನಾ ಮೈಯೆಲ್ಲ ||

ಕವಡೆ: ಯೋನಿಯ ಪ್ರತೀಕ

ದೇವಿಯ ಉಪಾಸನೆಯಲ್ಲಿ ಮುಖ್ಯವಾಗಿ ಬಳಸುವ ಕವಡೆಗೆ ಅಸಾಧಾರಣ ಸ್ಥಾನವಿರುವುದು ಕವಡೆಯು ಯೋನಿ ಸದೃಶ ಆಕಾರದ ಪ್ರತೀಕವಾಗಿರುವುದರಿಂದಲೇ. ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿಯೂ ಕವಡೆಯನ್ನು ಯೋನಿ ಪ್ರತೀಕವೆಂದು ಒಪ್ಪಲಾಗಿದೆ. ಕವಡೆಯ ಮಹತ್ವವನ್ನು ಕುರಿತಂತೆ ಬ್ರಿಫಾನರ ಮಾತುಗಳಿಂತಿವೆ:[5] ”Cowrie shells are often worn, usually as charms against sterility. Like all fertility charms the cowrie and other shells have come to aquire magic protective virtues against all evils. The Japanese, if a cowrie shell happens to by unavailable, use a pornographic picture representing the female genitals as a substitute.”

[ಸಾಮಾನ್ಯವಾಗಿ ಕವಡೆಗಳನ್ನು ಬಳಸುತ್ತಿರುವುದಕ್ಕೆ ಮುಖ್ಯ ಕಾರಣ ಬಂಜೆತನವನ್ನು ನಿರಾಕರಿಸುವುದು. ಇತರೆ ಎಲ್ಲ ಸುಫಲನಕಾರಕ ಯಾತುಯುಕ್ತ ವಸ್ತುಗಳಂತೆಯೇ ಕವಡೆಗಳ ಬಗ್ಗೆಯೂ ಸಹ ಎಲ್ಲ ಬಗೆಯ ಅನಿಷ್ಟಗಳನ್ನು ನಿವಾರಿಸುವ ಸಾಮರ್ಥ್ಯವುಳ್ಳದ್ದಾಗಿದೆ ಇದು ಎಂಬ ಶ್ರದ್ಧೆಯಿದೆ. ಕವಡೆಗಳು ಸಹಜವಾಗಿಯೆ ಪ್ರಾಪ್ತವಾಗುವಂಥ ವಸ್ತುವಲ್ಲ. ಎಂತಲೇ ಜಪಾನಿಯರು ಕವಡೆಗೆ ಪರ್ಯಾಯವಾಗಿ ಯೋನಿಯ ಚಿತ್ರಗಳನ್ನೇ ಬಳಸುತ್ತಾರೆ.]

ಹೀಗೆ ಕವಡೆಗಳನ್ನು ಯೋನಿಯ ಪ್ರತೀಕವಾಗಿ ಸ್ವೀಕರಿಸಿರುವುದರಿಂದಲೇ ಸೃಷ್ಟಿಶೀಲ ದೇವತೆಗಳಿಗೂ ಅದು ಪ್ರಿಯವಾದುದೆಂದು ಒಪ್ಪಿಕೊಳ್ಳಲಾಗಿರುವುದು. ಅಲ್ಲದೆ ಅವರ ಉಪಾಸನೆಯಲ್ಲಿ ಅದಕ್ಕೂ ಅಸಾಧಾರಣ ಸ್ಥಾನ ಲಭಿಸಿರುವುದರಲ್ಲಿ ಯಾವ ಅಸ್ವಾಭಾವಿಕತೆಯೂ ಕಾಣುತ್ತಿಲ್ಲ.

ವಿವಾಹ ವಿಧಿಗಳಲ್ಲಿ ಕವಡೆಯ ಸ್ಥಾನ

ಸ್ತ್ರೀಯ ಸೃಜನೇಂದ್ರಿಯ ಪ್ರತೀಕವಾದ ಕವಡೆಗೆ ಪ್ರತಿಷ್ಠಿತೆಯ ಪ್ರಾಪ್ತವಾಗಿರುವುದರಿಂದಲೇ ಅವಳ ಸುಫಲನಕಾರಕ ಸಾಮರ್ಥ್ಯವು ಲೋಕ ಮಾನಸದಲ್ಲಿ ಸ್ಥಿರಗೊಂಡಿತು. ಅಲ್ಲದೆ ಸುಫಲನಕ್ಕೆ ಸಂಬಂಧಿಸಿದಂತಹ ವಿಧಿವಿಧಾನಗಳಲ್ಲಿಯೂ ಅವಳಿಗೆ ಮಹತ್ವವು ಲಭಿಸಿತು. ಇಂತಹ ಸ್ವರೂಪದ ವಿಧಿವಿಧಾನಗಳಲ್ಲೆಲ್ಲ ವಿವಾಹ ವಿಧಿಯು ಸಹಜವಾಗಿಯೇ ಸರ್ವಾಧಿಕ್ಯವಾದ ವಿಧಿಯೆನಿಸಿರುವುದು. ಜೀವನದಲ್ಲಿ ಸಾತತ್ಯವನ್ನು ತಂದುಕೊಡುವಂಥ ಸ್ತ್ರೀ – ಪುರುಷರ ನಡುವಣ ಸಂಬಂಧಕ್ಕೆ ವಿಧಿಪೂರ್ವಕವಾದ ಪ್ರತಿಷ್ಠೆಯೊಂದು ಬರುವುದು ವಿವಾಹದಿಂದಲೇ. ಎಂತಲೇ ಸುಫಲನಕಾರಕವೂ ಯಾತ್ವಾತ್ಮಕವೂ ಆದ ಸಾಮರ್ಥ್ಯ (Fertility charm) ವಿರುವ ಅನೇಕ ವಿಷಯಗಳು ವಿವಾಹದೊಂದಿಗೆ ಸಂಬಂಧ ಹೊಂದಿರುವಂಥವೇ ಆಗಿವೆ. ಕವಡೆಯನ್ನೂ ಇಂಥ ಸಾಮರ್ಥ್ಯಯುಕ್ತ ವಸ್ತುವೆಂದು ಒಪ್ಪಿಕೊಂಡಿರುವುದರಿಂದ ವಿವಾಹ ಕಾರ್ಯದಲ್ಲಿ ಅದಕ್ಕಿರುವ ಮಹತ್ವವು ಅಸ್ವಾಭಾವಿಕವಾಗಿ ಕಾಣುವುದಿಲ್ಲ.[6]

ಕೆಲವಾರು ಜಾತಿ – ಪಂಗಡಗಳಲ್ಲಿ ವಧುವಿಗೆ ವಸ್ತುಗಳನ್ನು ಕಾಣಿಕೆ (ದೇಜ್ – ಅಳಿಯ ನಾಗುವವ ಮಾವನಿಗೆ ಕೊಡುವುದು) ಕೊಡುವ ಸಂಪ್ರದಾಯವಿದ್ದು, ಅವುಗಳಲ್ಲಿ ಕವಡೆಗಳನ್ನು ಸೇರಿಸುವುದು ಅವಶ್ಯವಾಗಿದೆ. ಆಂಧ್ರಪ್ರದೇಶದಲ್ಲಿನ ಎರಕುಲ ಎಂಬ ಪಂಗಡದಲ್ಲಿ ವಧುವಿನ ತಂದೆಗೆ ಕೊಡುವ ಕಾಣಿಕೆಗಳಲ್ಲಿ, ಕವಡೆಗಳನ್ನು ಪ್ರತೀಕಾತ್ಮಕವಾಗಿ ಅವಶ್ಯ ಸೇರಿಸಿರುವುದುಂಟು. ಪಂಜಾಬಿನಲ್ಲಿ ವಧುವಿಗೆ ನೀಡುವ ವಸ್ತುಗಳಲ್ಲಿ ಚರಕವೂ ಸೇರಿರುತ್ತದೆ. ವಿಶೇಷವೆಂದರೆ ಆ ಚರಕವನ್ನು ಮಾತ್ರ ಅಲಂಕರಿಸುವುದು ಕವಡೆಗಳಿಂದಲೇ. ವಿವಾಹದ ನಂತರ ವಧು ತನ್ನ ತವರಿನಿಂದ ಮಾವನ ಮನೆಗೆ ಹೋಗಲು ತಯಾರಾದಾಗ ಅವಳಿಗೆ ತವರಿನ ಉಡುಗೊರೆಯಾಗಿ ಅವಶ್ಯಕ ನಿತ್ಯೋಪಯೋಗಿ ವಸ್ತುಗಳಿಂದ ತುಂಬಿರುವ ಒಂದು ಪೆಟ್ಟಿಗೆಯನ್ನು ನೀಡುವುದು ಭಾರತದ ಕೆಲವು ಭಾಗಗಳಲ್ಲಿ ರೂಢವಾಗಿರುವ ಸಂಪ್ರದಾಯ. ಒರಿಸ್ಸಾದಲ್ಲಿ ಇದನ್ನು ‘ಜಗಥೀ ಪೆಂಡಿ’ ಎಂದರೆ, ಆಂಧ್ರಪ್ರದೇಶದಲ್ಲಿ ‘ಕವಿಡ ಪೆಟ್ಟೆ’ ಎನ್ನುತ್ತಾರೆ. ಇದರಲ್ಲಿ ತಪ್ಪದೆ ಕೆಲವಾರು ಕವಡೆಗಳನ್ನು ಇಟ್ಟಿರುವ ವಿಚಾರ ಗಮನಿಸುವಂಥದು. ಅಸ್ಸಾಮಿನಲ್ಲಿಯ ಕೆಲವಾರು ಜಾತಿಗಳವರಲ್ಲಿ ವರನು ವಧುವಿಗೆ ಕವಡೆಯನ್ನು ಉಡುಗೊರೆಯಾಗಿ ಕೊಡುವ ಪದ್ಧತಿಯುಂಟು. ವಿವಾಹ ಸಮಯದಲ್ಲಿ ವರನ ಕಡೆಯಿಂದ ಉಡುಗೊರೆಯ ರೂಪದಲ್ಲಿ ಸಿಗುವ ಈ ಕವಡೆಗಳನ್ನು ವಧುವು ಕುಂಕುಮದ ಬಟ್ಟಲಿ (ಭರಣಿ)ನಲ್ಲಿ ಇಡುತ್ತಾಳಲ್ಲದೆ, ವಿಶೇಷ ಸಂದರ್ಭದಲ್ಲಿ ಈ ಬಟ್ಟಲಿನಲ್ಲಿನ ಕುಂಕುಮವನ್ನು ಮಾತ್ರ ಬಳಸುತ್ತಾಳೆ.

ರಾಜಾಸ್ಥಾನದಲ್ಲಿನ ಸಂಪ್ರದಾಯದಂತೆ ವಿವಾಹ ಮಂಟಪದಲ್ಲಿ ವಧುವರರ ಮಸ್ತಕದ ಮೇಲೆ ಇಳಿಬಿದ್ದಿರುವಂತೆ ಕೆಲವಾರು ವಸ್ತುಗಳನ್ನು ರಕ್ತದ ಬಣ್ಣವುಳ್ಳ ವಸ್ತ್ರದಲ್ಲಿ ಕಟ್ಟಿರುತ್ತಾರೆ. ಅದರಲ್ಲಿ ಒಂದು ಕವಡೆಯೂ ಸೇರಿಕೊಂಡಿರುವುದು ವಿಶೇಷ. ವಿವಾಹ ವಿಧಿಗಳಲ್ಲಿ ವಧುವರರ ಕೈಗಳಿಗೆ ಕಟ್ಟಲಾಗಿರುವ ಕಂಕಣಗಳಲ್ಲಿಯೂ ಕೆಲವೆಡೆಗಳಲ್ಲಿ ಅಡಿಕೆಯ ಜೊತೆಗೆ ಕವಡೆಗಳನ್ನು ಕಟ್ಟುತ್ತಾರೆ. ಮಹಾರಾಷ್ಟ್ರದಲ್ಲಿ ‘ಅಡಿಕೆ ಬಿಡಿಸುವ’ ಜನಪ್ರಿಯ ಕ್ರೀಡೆಯೊಂದು ಹೆಚ್ಚು ಪ್ರಚಾರದಲ್ಲಿದೆ. ಹಾಗೆಯೇ ಒರಿಸ್ಸಾದಲ್ಲಿಯೂ ಇದು ಕಂಡು ಬರುತ್ತದೆ. ವಧು ಒಂದು ಕವಡೆಯನ್ನು ತನ್ನ ಎರಡು ಕೈಗಳಿಂದ ಗಟ್ಟಿಯಾಗಿ ಮುಚ್ಚಿಕೊಳ್ಳುತ್ತಾಳೆ. ವರನಾದವನು ತನ್ನ ಎಡಗೈನ ಹೆಬ್ಬೆರಳು ಮತ್ತು ತೋರು ಬೆರಳುಗಳಿಂದ ಅದನ್ನು ಬಿಡಿಸಬೇಕು.

ಕವಡೆಯನ್ನು ಜೀವನದಾತ್ರಿ, ಸಂತಾನದಾತ್ರಿ ಮತ್ತು ಸೌಭಾಗ್ಯ ದಾತ್ರಿ ಎಂಬುದಾಗಿ ಒಪ್ಪಿಕೊಳ್ಳಲಾಗಿದೆ. ವಿವಾಹ ಸಮಯದಲ್ಲಿ ವಧುವಿಗೆ ಕವಡೆಯನ್ನು ಉಡುಗೊರೆಯಾಗಿ ನೀಡುವ ಉದ್ದೇಶ ಅದು ಸಂತಾನದಾಯಕವಾದುದು ಎಂಬ ಕಾರಣದಿಂದಲೇ. ಅಸ್ಸಾಮ್‌ನ ಅಹೋಮ ಜಾತಿಯವರಲ್ಲಿ ಕವಡೆಗಳಲ್ಲಿ ಮಾತೃ ದೇವತೆಯು ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ. ‘ಚಕಲಾಂಗ’ (ವಿವಾಹ) ಸಮಾರಂಭದಲ್ಲಿ ಅವರಲ್ಲಿನ ಕೆಲವು ಹಿರಿಯ ವ್ಯಕ್ತಿಗಳು ಕವಡೆಗಳನ್ನು ಕೈಲಿ ಹಿಡಿದು ವಧುವರರ ಕಿವಿಯ ಹತ್ತಿರ ಅವುಗಳನ್ನು ಅಲ್ಲಾಡಿಸಿ ಶಬ್ದ ಮಾಡುವುದುಂಟು. ಹೀಗೆ ಮಾಡುವುದರಿಂದ ನವ ದಾಂಪತ್ಯದಲ್ಲಿ ಸಮೃದ್ಧಿಯುಂಟಾಗುವುದಲ್ಲದೆ ಸಂತಾನವೂ ಪ್ರಾಪ್ತವಾಗುತ್ತದೆ ಎಂಬುದು ಅವರಲ್ಲಿರುವ ನಂಬಿಕೆ.

ರಾಜಾಸ್ಥಾನದಲ್ಲಿನ ‘ಮೀನಾ’ ಎಂಬ ಪಂಗಡದವರಲ್ಲಿ ಪ್ರಥಮ ಸಮಾಗಮದಂದು ವಧು ಶಯನ ಗೃಹಕ್ಕೆ ಹೋಗುವಾಗ್ಗೆ ಅವಳ ವಸ್ತುಗಳನ್ನೆಲ್ಲ ಕವಡೆಗಳಿಂದಲೇ ಸಿಂಗರಿಸಿರುವುದು ವಾಡಿಕೆ.

ವಿವಾಹ ವಿಧಿಯಲ್ಲಿ ಕವಡೆಗಳಿಗೆ ಇರುವ ವಿಶೇಷ ಮಹತ್ವ, ಅದು ಪೂರ್ಣತಃ ಯೋನಿ ರೂಪದ್ದಾಗಿರುವುದರಿಂದ ಎಂಬುದನ್ನು ಮತ್ತೆ ಸ್ಪಷ್ಟಪಡಿಸುವ ಅಗತ್ಯವಿಲ್ಲ. ಅದು ಈಗಾಗಲೇ ಸರ್ವ ವಿಧಿತಾರ್ಥ ವಿಚಾರವೇ. ಬಿಡಿಸುವ ಕ್ರೀಡೆಗಳಾಗಿ ಇರುವಂಥ ಏನೆಲ್ಲವನ್ನು ವಧುವರರು ಆಡುವ ಸಂಪ್ರದಾಯಗಳಿವೆಯೋ ಅಲ್ಲೆಲ್ಲ ಕವಡೆಗಳನ್ನೇ ಬಳಸುತ್ತಿರುವುದು ಮಹತ್ವದ ವಿಷಯ. ಬಂಗಾಳದಲ್ಲಿನ ಕೆಲವು ಭಾಗಗಳಲ್ಲಿ ವಧುವರರಿಗೆ ವೈವಾಹಿಕ ಜೀವನದ ಭವಿಷ್ಯವನ್ನು ಕವಡೆಗಳ ಮುಖೇನವೇ ಹೇಳುವುದೂ ಉಂಟು. ವಧು ಮತ್ತು ವರರು ತಮ್ಮ ಕೈಯಲ್ಲಿ ಕೆಲವು ಕವಡೆಗಳನ್ನು ತೆಗೆದುಕೊಂಡು ಅವನ್ನು ಕುಲುಕಿಸಿ ಮೆಲ್ಲಗೆ ಕೆಳಗೆ ಹಾಕುತ್ತಾರೆ. ಅವು ಸಮ ಸಂಖ್ಯೆಯಲ್ಲಿ ಬಿದ್ದರೆ ಶುಭ ಲಕ್ಷಣವೆಂದೂ, ಒಂದೊಮ್ಮೆ ವಿಷಯ (ಅಸಮ) ಸಂಖ್ಯೆಯಲ್ಲಿ ಬಿದ್ದರೆ ಅನಿಷ್ಟ ಸೂಚಕವೆಂಬ ಗಾಢವಾದ ನಂಬಿಕೆಯೂ ಉಂಟು.

ನವ ವಿವಾಹಿತ ದಂಪತಿಗಳಲ್ಲಿ ಪರಸ್ಪರ ಪರಿಚಯವಾದ ಮೇಲೆ, ಅವರ ಮನೋಮಿಲನವು ಸಾಧ್ಯವಾಗಬೇಕು. ಹಾಗೂ ಪರಸ್ಪರ ವಿಷಯಗಳಲ್ಲಿ ಆರೋಗ್ಯದಾಯಕ ಆಕರ್ಷಣೆಯು ವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ನಡೆಸಿಕೊಂಡು ಬಂದಿರುವ ವಿವಾಹದ ವಿಧಿಗಳ ವ್ಯವಸ್ಥೆಯೊಳಗೇ ರೂಪಿಸುವ ಆಟಗಳಲ್ಲಿ ಕವಡೆಯಾಟಕ್ಕೆ ವಿಶೇಷ ಮಹತ್ವ. ಪಗಡೆಯಾಟದ ಪಟವನ್ನಿಟ್ಟು ಕವಡೆಗಳ ‘ಕೈ’ ಬಿಡುತ್ತಾ ರಂಗೇರುವ ವಧುವರರ ಈ ‘ಕವಡೆಯ ಕ್ರೀಡೆ’ ಅವರ ಸಂಗಮಕ್ಕೆ ಉತ್ಸುಕತೆಯನ್ನು ಹೆಚ್ಚಿಸುವಲ್ಲಿ ಉಪಕಾರಿ. ‘ಜಗತಃ ಪಿತರೌ’ ಎಂದು ಪ್ರಸಿದ್ಧಿಯಾಗಿರುವ ಶಿವ – ಶಕ್ತಿಯರ ‘ಚದುರಂಗದಾಟದ ಪಗಡೆ‘ಯು (ಸಾರೀಪಾಟ) ಅನೇಕ ಜನಪದ ಕಥೆ ಹಾಗೂ ಪುರಾಣಗಳಲ್ಲಿ ಚಿರಂತನ ಸ್ವರೂಪ ಪಡೆದಿದೆ. ವೇರುಳದ ಗುಹೆಗಳಲ್ಲಿನ ಮೂರ್ತಿ ಚಿತ್ರಗಳಲ್ಲಿ ಅತ್ಯಂತ ಹೃದಯಂಗಮವಾಗಿರುವುದೆಂದರೆ ಶಿವ – ಶಕ್ತಿಯರು ಪಗಡೆಯಾಡುತ್ತಿರುವ ಶಿಲ್ಪ. ಜೀವನ ಸಾತತ್ಯದ ದ್ಯೋತಕವೋ ಎಂಬಷ್ಟು ಮಹಿಮಾನ್ವಿತವೆನಿಸಿದೆ ಕವಡೆ ಈ ಕ್ರೀಡೆಯಿಂದ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಅದೇ, ಪುಟ. ೯೮ – ೧೦೬.

[2]ಏಕ್‌ ಹೋತಾ ರಾಜಾ : ಪುಟ. ೯೨ – ೯೩ (‘ಯಲ್ಲಮ್ಮ ದೇವೀಚಿ ಗಾಣೀ‘).

[3]ನೀಲಕಂಠ ಕೃತಿ ಮತಂಗಲೀಲಾ‘: ಹಸ್ತಿಗಳನ್ನು ವಿಷಯ ಕುರಿತ ಗ್ರಂಥವು ಉಪಲಬ್ಧ.

[4]ಏಕ್ಹೋತಾ ರಾಜಾ : ಪುಟ. ೧೧, ೯೦, ೯೪.

[5] The Mothers: R. Briffault, London, 1959, p.390.

[6] ‘Bhavan’s Journal’: XVIII, 23.11 June 1972, pp.51 – 53.