ಮಹಾರಾಷ್ಟ್ರದಲ್ಲಿನ ಅಲಕ್ಷಿತ ಉಪಾಸನಾ ಸಂಪ್ರದಾಯಗಳಲ್ಲಿ ಒಂದು ಮಾತಂಗೀಪಟ್ಟ. ಇದು ಪೂರ್ವಕಾಲದಿಂದಲೂ ಉಪೇಕ್ಷಿತ ಸಮಾಜದ ಸ್ತರದಲ್ಲಿಯೇ ಇದ್ದುದರಿಂದಾಗಿ ಇದಕ್ಕೆ ಈ ಸ್ಥಿತಿ. ಮಾತಂಗೀಪಟ್ಟ ಎಂದರೆ ಮಾತಂಗಿಯ ಪೀಠ. ಅಂದರೆ ಮಾತಂಗಿ ದೇವಿಯ ಪೀಠ ಅಥವಾ ಅಧಿಷ್ಠಾನಗೊಂಡಿರುವ ಉಪಾಸನಾ ಸಂಪ್ರದಾಯ. ಈ ಹೆಸರಿನಿಂದ ಸ್ಪಷ್ಟವಾಗುವಂತೆ ಇದು ಮಾತಂಗಿ ಎಂಬ ದೇವಿಯ ಉಪಾಸನಾ ಸಂಪ್ರದಾಯ. ಮಹಾನುಭಾವ ಸಂಪ್ರದಾಯ ಮತ್ತು ಮಾತಂಗೀಪಟ್ಟವನ್ನು ಏಕತ್ವವಾಗಿ ಗೃಹೀತಗೊಳಿಸಿಕೊಂಡು ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕೈದು ಶತಮಾನಗಳಿಂದ ಮಹಾನುಭಾವೇತರ ವ್ಯಕ್ತಿಗಳು ತೀವ್ರವಾಗಿ ಆಘಾತವನ್ನು ಉಂಟುಮಾಡುತ್ತಾ ಬಂದಿದ್ದಾರೆ. ಇದರ ತೀವ್ರತೆಗೆ ಅಸ್ವಸ್ಥಗೊಂಡ ಮಹಾನುಭಾವ ಪಂಥದವರು ಪೂರ್ವಕಾಲದಲ್ಲಿಯೇ ಮತಪ್ರದರ್ಶನದಂತಹ ದುರ್ಬಲ ಪ್ರಯತ್ನವನ್ನು ಕೈಗೊಳ್ಳಬೇಕಾದ ಅನಿವಾರ್ಯ ಸ್ಥಿತಿಯೊಂದಕ್ಕೆ ಕೈ ಹಾಕಬೇಕಾಯಿತು. ಅಲ್ಲದೆ ಮತ್ತೊಂದು ನೆಲೆಯಿಂದ ನ್ಯಾಯಾಲಯದಲ್ಲಿ ಪಿರ್ಯಾದನ್ನು ಸಹ ಮಾಡಿ ನೋಡಿದ್ದರು. ಆದರೆ ಇಂದಿಗೂ ಒಂದಲ್ಲ ಒಂದು ಕಾರಣಕ್ಕೆ ಮಹಾನುಭಾವೀಯರ ಎಲ್ಲಾ ಪ್ರತಿವಾದದ ಪ್ರಯತ್ನಗಳು ಕ್ಷೀಣವಾಗುತ್ತಲೇ ನಡೆದಿವೆ. ಮಾತಂಗೀಪಟ್ಟದ ಉತ್ಪತ್ತಿಯ ಕಥೆಯು ಮಹಾನುಭಾವ ಪಂಥದ ಉತ್ಪತ್ತಿ ಕಥೆಯೊಂದಿಗೆ ಏಕತೆಯನ್ನು ಉದ್ಘೋಷಿಸುವಂಥ ಮಹಾನುಭಾವೇತರರ ಪ್ರಯತ್ನಗಳು ಅಲ್ಲಿ ಇಲ್ಲಿ ನಡೆಯುತ್ತಲೇ ಇವೆ.

ಈ ದೀರ್ಘಕಾಲೀನ ಸಾಂಪ್ರದಾಯಿಕ ಸಂಘರ್ಷದ ಪಾರ್ಶ್ವಭೂಮಿಯನ್ನು ಹಿಡಿದೇ ನಾವು ಮಾತಂಗೀಪಟ್ಟದ ಶೋಧಕ್ಕೆ ಕೈ ಹಾಕಬೇಕಾಗಿದೆ. ಈ ಶೋಧದ ದಿಶೆಯನ್ನು ನಿಶ್ಚಿತ ಗೊಳಿಸುವಲ್ಲಿ ಈ ಮುಂದಿನ ಕೆಲವು ಪ್ರಶ್ನೆಗಳಿಗೆ ಅವಶ್ಯವಾಗಿ ಉತ್ತರವನ್ನು ಕಂಡುಕೊಳ್ಳಬೇಕು:

೧. ಮಹಾನುಭಾವ ಸಂಪ್ರದಾಯ ಮತ್ತು ಮಾತಂಗೀಪಟ್ಟ ಈ ಎರಡು ಸಂಪ್ರದಾಯಗಳು ಬೇರೆಬೇರೆಯಾದುವೇ? ಅಥವಾ ಎರಡು ಬೇರೆ ಬೇರೆ ಹೆಸರುಗಳಿಂದ ಗುರುತಿಸಲ್ಪಡುತ್ತಿರುವ ಇವು ಒಂದೇ ಸಂಪ್ರದಾಯವೇ?

೨. ಒಂದೊಮ್ಮೆ ಮಾತಂಗೀಪಟ್ಟವು ಮಹಾನುಭಾವಕ್ಕಿಂತ ಭಿನ್ನ ಸಂಪ್ರದಾಯವನ್ನು ಹೊಂದಿರುವಂಥದಾಗಿದ್ದರೆ ಅದರ ಸ್ವರೂಪ ಎಂಥದು? ಅದು ಯಾವಾಗ ಉದ್ಭವವಾದುದು? ಮಹಾರಾಷ್ಟ್ರದಲ್ಲಿ ಎಲ್ಲಿ, ಯಾವಾಗ ಮತ್ತು ಹೇಗೆ ಅದು ಪ್ರಸರಣ ಗೊಂಡಿತು?

೩. ಮಹಾನುಭಾವ ಸಂಪ್ರದಾಯ ಮತ್ತು ಮಾತಂಗೀಪಟ್ಟ ಇವುಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣಗಳೇನು? ಅಥವಾ ಉಭಯ ಸಂಪ್ರದಾಯಗಳಲ್ಲಿ ಏನಾದರೂ ಸಂಬಂಧವಿರುವುದೋ ಹೇಗೆ?

ಕೃಷ್ಣಂಭಟಕಥೆಯ ಪ್ರಾಚೀನತೆ

ಯಾರೋ ಕೃಷ್ಣಂಭಟನೆಂಬ ಅಭಿಚಾರಿಯೂ, ವ್ಯಚಿಚಾರಿಯೂ ಆದ ದೇವಿಯ ಭಕ್ತನೊಬ್ಬನಿಗೆ ಮಾಂಗಿಣಿ (ಕಟುಕ ಜತಿ)ಯೊಬ್ಬಳಲ್ಲಿ ಹುಟ್ಟಿದ ಐವರು ಮಕ್ಕಳ ಸಂಪ್ರದಾಯವೇ ಪಂಚ ಕೃಷ್ಣೋಪಾಸಕ ಮಹಾನುಭಾವ ಸಂಪ್ರದಾಯವೆನಿಸಿಕೊಂಡಿದೆ. ಅದು ಕಳೆದ ಸುಮಾರು ನಾಲ್ಕು ಶತಮಾನಗಳಿಂದ ಅಲ್ಲಲ್ಲಿ ಪ್ರಚಾರದಲ್ಲಿರುವುದು. ಆ ಐವರು ‘ಮಾಂಗ್ ಭಾವಾ’ (ಮಾಂಗ್ ಸಹೋದರರು)ರ ಸಂಪ್ರದಾಯವೇ ಮುಂದೆ ‘ಮಾನಭಾವ’ ಅಥವಾ ‘ಮಹಾನುಭಾವ’ ಎಂಬ ಶೋಭನಾಮವನ್ನು ಪಡೆಯಿತೆಂಬುದು ಅದರ ಪ್ರಚಾರಕರ ಸ್ಪಷ್ಟೀಕರಣ ಕಥೆ. ಮಹಾನುಭಾವಾ ಸಂಪ್ರದಾಯದ ಉತ್ಪತ್ತಿಯ ಸಂಗತಿಯನ್ನು ಹೇಳುವ ನಾಗೇಶ ಕೃತ ‘ಮಹಾತ್ಮಾ ಕಥಾನಕ’ (ಸಂಸ್ಕೃತ)[1] ಮತ್ತು ‘ಮಾನಭಾವೋತ್ಪತ್ತಿ ಕಥಾ’ (ಮರಾಠಿ)[2] ಎಂಬೆರಡು ಗ್ರಂಥಗಳು ಪ್ರಕಟಗೊಂಡಿವೆ. ಅವುಗಳ ರಚನಾ ಕಾಲವಿನ್ನು ಅನಿಶ್ಚಿತ. ಆದರೆ ಅವುಗಳಲ್ಲಿ ಸಂಸ್ಕೃತ ಗ್ರಂಥಕ್ಕೆ ಬಳಸಿರುವ ಕಾಗದ ಹಾಗೂ ಅಕ್ಷರ ಸ್ವರೂಪವನ್ನು ಗಮನಿಸಿದರೆ ಎರಡು ನೂರು ಇಲ್ಲವೆ ಒಂದು ನೂರಾ ಐವತ್ತು ವರ್ಷಗಳಿಂದ ಆಕೆಯದ್ದು ಎನಿಸುವುದಿಲ್ಲ ಎಂಬುದು ಈ ಕೃತಿಯ ಸಂಪಾದಕರಾದ ಶ್ರೀ ಪಾ.ಮಾ. ಚಾಂದೋರಕರರ ಅಭಿಪ್ರಾಯ. ಈ ಸಂಸ್ಕೃತ ಗ್ರಂಥದ ಆಧಾರದಿಂದಲೇ ರಚನೆಗೊಂಡುದಾಗಿದೆ ಮರಾಠಿ ಗ್ರಂಥ.

ಕಳೆದ ಶತಮಾನದಲ್ಲಿ ಪ್ರಖ್ಯಾತ ಕೋಶಕಾರರೆನಿಸಿದ್ದ ಶ್ರೀ ರಘುನಾಥಶಾಸ್ತ್ರಿ ಗೋಡ ಬೋಲೆಯವರು ತಮ್ಮ ‘ಭರತ ಖಂಡಾಚೆ ಅರ್ವಾಚೀನ ಕೋಶ’ ಕೃತಿಯಲ್ಲಿ ಕೃಷ್ಣಂಭಟಾನ ಕಥೆಯನ್ನು ಮಹಾನುಭಾವ ಸಂಪ್ರದಾಯದ ಉತ್ಪತ್ತಿ ಕಥೆಯಾಗಿಯೇ ದಾಖಲಿಸಿದ್ದಾರೆ.[3] ಇದೇ ಸುಮಾರಿನಲ್ಲಿ (ಕ್ರಿ.ಶ. ೧೮೭೦) ರಚನೆಗೊಂಡಿರುವ ‘ತಾರೀಖೇ ಅಮಜದೀ’ ಎಂಬ ಫಾರ್ಸಿ ಕೃತಿಯಲ್ಲಿಯೂ ಮಹಾನುಭಾವ ಸಂಪ್ರದಾಯದ ವಿರೋಧಿಗಳು ಹೇಳುತ್ತಿದ್ದ ಮಾತಂಗೀರತ ಕೃಷ್ಣಂಭಟಾನಿಂದ ಈ ಸಂಪ್ರದಾಯವು ಹುಟ್ಟಿದುದೆಂದು ದಾಖಲಾಗಿದೆ.[4] ಮಹಾನುಭಾವ ಕವಿ ಕೃಷ್ಣಮುನಿ ಡಿಂಭ (ಸುಮಾರು ಕ್ರಿ.ಶ. ಹದಿನೇಳನೆಯ ಶತಮಾನದ ಉತ್ತರಾರ್ಧ) ಎಂಬುವವರೂ ಕೂಡ ತಮ್ಮ ‘ಫಲಟಣ – ಮಾಹಾತ್ಮ್ಯ’ (ಫಲ ಮಹಾತ್ಮೆ) ಎಂಬ ಅಪ್ರಕಟಿತ ಕೃತಿಯಲ್ಲಿ ಜೈನಧರ್ಮೀಯ ವಿರೋಧಕ ವಿಷಯವನ್ನು ಕುರಿತು ಬರೆಯುವಾಗ್ಗೆ ಹೀಗೆ ಹೇಳಿದ್ದಾರೆ:

ಸರ್ವತ್ರ ನಿಂಬನಾಥ ಜೈನೇ | ಮಾತಂಗಮೂಲ ಮಾಡಿದರು ಸರ್ವದರ್ಶನ |
ಆ ಗ್ರಂಥವನು ವಾಚಿಸಿದವರು | ಸಿಂಗಣಾಪ್ರತಿ || .೪೪.

ಇಲ್ಲಿ ಕೃಷ್ಣಮುನಿಯು ಮಾಡಿರುವ ‘ಸರ್ವದರ್ಶನ‘ದ ಉಲ್ಲೇಖಾನುಸಾರ ಅವನ ‘ಮುಂಡಿ (ಮಂಡೆ) ದರ್ಶನ‘ವನ್ನು ಜೈನರು ‘ಮಾತಂಗಮೂಲ‘ವೆಂಬುದಾಗಿ ಹೇಳಿದುದನ್ನು ಸೂಚಿತ ಗೊಳಿಸಿಕೊಳ್ಳಬೇಕು. ಸ್ವತಃ ಕೃಷ್ಣಮುನಿಯೇ ಮಾತಂಗಿ ದೇವಿಯ ಉಪಾಸನೆಯನ್ನು ತೀವ್ರವಾಗಿ ನಿಷೇಧಗೊಳಿಸುತ್ತಾನೆ.

ಆವ ದೇವಿ ಆರ ಮನಸ್ಸು | ಅವನು ಮಾಡಿಹನದರ ಉಪಾಸನೆ |
ಬಿಟ್ಟುಕೊಟ್ಟು ಕೈವಲ್ಯರಾಣಾ | ಪೂಜಿಸಿಹ ಮಾತಂಗಿನಿಯಂದದಿ || .೪೨.

ಕೈವಲ್ಯರಾಯನ ಉಪಾಸನೆಯನ್ನು ಬಿಟ್ಟು ಮಾತಂಗಿನಿಯರಂದದಲ್ಲಿ ಕ್ಷುದ್ರ ದೇವತೆಗಳನ್ನು ಭಜಿಸುವುದು ಕೃಷ್ಣಮುನಿಗೆ ಅತ್ಯಂತ ನಿಂದಾತ್ಮಕವೆನಿಸಿದೆ.

ಕೃಷ್ಣಮುನಿಯ ಹಿರಿಯ ಸಮಕಾಲೀನನಾದ ಮಹಮದ್ ಬಾಬಾ ಶ್ರೀಗೋಂದೇಕರ (ಸಮಾಧಿಸ್ಥ: ಕ್ರಿ. ಶ. ಸುಮಾರು ೧೬೭೫)ನೂ ಸಹ ಮಹಾನುಭಾವ ಪಂಥದ ಕಠೋರ ಟೀಕಾಕಾರ. ಅವನು ತನ್ನ ‘ನಿಷ್ಕಲಂಕ ಪ್ರಬೋಧ’ ಕೃತಿಯಲ್ಲಿ ಮುದ್ದಾಮಾಗಿ ಕೃಷ್ಣಂಭಟನ ಕಥೆಯನ್ನು ಉಲ್ಲೇಖಿಸಿದ್ದಾನೆ.[5]

ಸೆಳೆದುದು ಕೃಷ್ಣಂಭಟನನು ಅಂಕುಡೊಂಕು ಮರ್ಗ
ಅವನ ಶಿಷ್ಯ ಮಂಡಳಿಯು ಆಚರಿಸಿಹರದನೆ ||೮೨ ||

ಈ ಎಲ್ಲಾ ಆಧಾರಗಳಿಂದ ನಿಃಸಂಶಯವಾಗಿ ಸಿದ್ಧವಾಗುವುದೇನೆಂದರೆ, ಕೃಷ್ಣಂಭಟನ ಕಥೆಯೇ ಮಹಾನುಭಾವರ ಉತ್ಪತ್ತಿ ಕಥೆ. ಈ ತಿಳಿವಳಿಕೆ (ಧೋರಣೆ)ಯು ಕ್ರಿ.ಶ. ಹದಿನೇಳನೆಯ ಶತಮಾನದ ಮಧ್ಯಭಾಗದಷ್ಟು ಹಳೆಯದ್ದು. ಇದು ದೃಢಗೊಳ್ಳುವಂತಹ ಕಾರಣಗಳೂ ಆ ಪೂರ್ವದಲ್ಲಿಯೇ ಯಾವಾಗಲಾದರೂ ಘಟಿಸಿದ್ದಿರಬಹುದು.

ಅಲ್ಲದೆ ಒಂದೊಮ್ಮೆ ಮಹಾನುಭಾವ ಪಂಥದ ವಿರೋಧಿಗಳು ಇಂಥದನ್ನು ಕೇವಲ ಕೃಷ್ಣಂಭಟ ಕಥೆಯ ನಿಂದನೆಗೋಸ್ಕರವೇ ಬಳಸುತ್ತಿದ್ದಿರಲೂಬಹುದು. ಆದರೆ ಮಹಾನುಭಾವೀಯ ಗ್ರಂಥಕಾರರು ಮಾತ್ರ ಕೃಷ್ಣಂಭಟ ಸಂಪ್ರದಾಯದ ಮಾಹಿತಿಯನ್ನು ‘ಮಾತಂಗೀ ಪಟ್ಟ’ ಅಥವಾ ‘ಮಾಂಗಿಣೀಪಟ’ ಎಂಬ ಹೆಸರಿನಿಂದಲೇ ಕರೆದು, ಅದೊಂದು ಸ್ವತಂತ್ರ ಸಂಪ್ರದಾಯವೆಂಬಂತೆ ಉಲ್ಲೇಖಿಸಿದ್ದಾರೆ. ಅಲ್ಲದೆ, ಆ ವಿಷಯವಾಗಿ ಅತ್ಯಂತ ತೀವ್ರವಾಗಿಯೇ ತಮ್ಮ ಅಸಮ್ಮತ ಅಭಿಪ್ರಾಯವನ್ನು ಮತ್ತೆಮತ್ತೆ ಹೇಳಿದ್ದಾರೆ. ವಿಶೇಷವಾಗಿ ‘ದಿನಕರ ನಿಬಂಧ’ (ಸಂಸ್ಕೃತ) ಮತ್ತು ‘ಗಜ ಕೇಸರೀ’ (ಮರಾಠಿ, ಗದ್ಯ ಹಾಗೂ ಓವೀಬದ್ಧವಾಗಿ ಎರಡು ಸಂಸ್ಕರಣಗಳಲ್ಲಿರುವುದು) ಎಂಬೆರಡು ಮಹಾನುಭಾವೀಯ ಗ್ರಂಥಗಳಲ್ಲಿ ಅನೇಕ ಮಹಾನುಭಾವೇತರ ಸಂಪ್ರದಾಯಗಳ ಬಗ್ಗೆ ಖಂಡನೆಯ ಜೊತೆಜೊತೆಗೇ ಕೆಲವು ವಿಶಿಷ್ಟ ಮಾಹಿತಿಗಳಿವೆ. ಅಲ್ಲದೆ ಆ ಖಂಡನೆಯ ಹಿನ್ನೆಲೆಯಲ್ಲಿಯೆ ಮಹಾನುಭಾವ ಸಂಪ್ರದಾಯದ ಮಂಡನೆಯ ಪ್ರಯತ್ನವಿರುವುದು ಇಲ್ಲಿನ ಗಮನೀಯ ಅಂಶ. ಈ ಎರಡೂ ಗ್ರಂಥಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಖಂಡನಾಮಯ ವಿಷಯಗಳಾಗಿರುವ ಅನೇಕ ಸಂಪ್ರದಾಯಗಳಲ್ಲಿ ‘ಮಾತಂಗೀಪಟ್ಟ’ ಅಂದರೆ ಕೃಷ್ಣಂಭಟನ ಸಂಪ್ರದಾಯವೂ ಸಮಾವೇಶಗೊಂಡಿರುವುದು. ಈ ಎರಡೂ ಗ್ರಂಥಗಳು ಸುಮಾರು ನೂರೈವತ್ತು – ಇನ್ನೂರು ವರ್ಷಗಳಿಗಿಂತ ಹಿಂದಿನವಲ್ಲ. ಆದರೂ ‘ಮಾತಂಗೀಪಟ್ಟ‘ದ ವೃತ್ತಾಂತ ಮಾತ್ರ ಅವಶ್ಯ ನೋಡಬೇಕಾದುದು. ಮಹಾನು ಭಾವೇತರರ ಅಭಿಪ್ರಾಯವನ್ನು ಪರೀಕ್ಷಿಸುವುದಕ್ಕೆ ಮಹಾನುಭಾವೀಯ ಗ್ರಂಥಕಾರರು ನೀಡಿರುವ ‘ಮಾತಂಗೀಪಟ್ಟ’ ದ ವೃತ್ತಾಂತಗಳ ಸತ್ಯಾಸತ್ಯತೆಯನ್ನು ಶೋಧಿಸುವ ಪ್ರಯತ್ನ ಮಾಡಬಹುದೇನೋ ಎನಿಸುತ್ತದೆ ನನಗೆ. ಅದೇನಾದರೂ ನಿಜವೆಂದು ಖಚಿತವಾದಲ್ಲಿ ಮಹಾನುಭಾವೇತರರ ತಿಳಿವಳಿಕೆ ಪ್ರಮಾದಮಯವಾದುದೆಂದೂ ತಂತಾನೆ ಸಿದ್ಧವಾಗುವುದು. ಜೊತೆಗೆ ಆ ಪ್ರಮಾದ ಪೂರ್ಣತೆಯ ಕಾರಣಗಳನ್ನು ಶೋಧಿಸುವ ಸ್ವತಂತ್ರ ಪ್ರಯತ್ನದ ದಿಶೆಯೂ ಸ್ಪಷ್ಟವಾಗುತ್ತದೆ.

ದಿನಕರ ನಿಬಂಧದಲ್ಲಿನ ಮಾತಂಗೀಪಟ್ಟ ವರ್ಣನೆ

ಮಹಾನುಭಾವರ ‘ದಿನಕರ ನಿಬಂಧ‘ವೆಂಬ ಕೃತಿಯಲ್ಲಿ ಮಾತಂಗೀಪಟ್ಟದ ವರ್ಣನೆ ಇಂತಿದೆ:

ಕಂಥಡೀನಾಥ ಶಿಷ್ಯೋsಸೌ ಕೃಷ್ಣಭಟ್ಟೋsಥ ಮಾಂತ್ರಿಕಃ |
ಮಾತಾಪುರೇ ನ್ಯವಾಸೀತ್ಸ ಶಾಬರಾಗಮತತ್ಪರಃ ||೮೩ ||
ತೇನಾಗಮರಹಸ್ಯೇನ ಮಾತಂಗೀ ದೇವತಾ ಕಿಲ |
ಪ್ರಾರ್ಥಿತಾ ಮಾನ್ಯತಾಯೈ ಚ ಜಾತಾ ಸಾ ವರದಾಯಿನೀ ||೮೪ ||
ಮಾತಂಗೈ ದೇವತಾಯೈ ಚ ದತ್ತಾ ಮಾತಂಗಕನ್ಯಕಾ |
ಬಲಿಸ್ತಾಂ ಜೀವಯಿತ್ವಾ ಚ ದದೌ ತಸ್ಯಾಥ ದೇವತಾ ||೮೫ ||
ಜಾತಾ ಸಾ ವರದಾ ತಸ್ಯ ಯಥೇಷ್ಟಂ ತೇನ ತತ್ತಥಾ |
ತಸ್ಯಾ ಮಾತಂಗಕನ್ಯಾಯಾಶ್ಚಕ್ರೇ ಪಾಣಿಗ್ರಹಂ ಸ್ವಯಂ ||೮೬ ||
ಕೃಷ್ಣಭಟಾಚ್ಚ ತಸ್ಯಾಂ ವೈ ಜಾತಾಃ ಪಂಚ ಕುಮಾರಕಾಃ |
ದತ್ತೋ ಢಗಸ್ತಥಾ ಮೇಗೋ ಗುಂಡಶ್ಚಾಂಗಶ್ಚ ಪಂಚಮಃ ||೮೭ ||
ಪುತ್ರೈಶ್ಚ ಪಂಚಭಿಃ ಕೃಷ್ಣಭಟ್ಟಸ್ತ್ರಿಶತವತ್ಸರಾನ್ |
ಜೀವಿತೋsಭೂನ್ಮಹಾರಾಷ್ಟ್ರೇ ಏಕವೀರಾ ಪ್ರಸಾದತಃ ||೮೮ ||
ತೇ ವೈ ಪಂಚಕುಮಾರಾಶ್ಚ ಜಾತಾ ವೈ ಮಾಂತ್ರಿಕಾಃ ಕಿಲ |
ಆತ್ಮಾನಂ ಪಂಚಕೃಷ್ಣಂ ಚ ರಾವಳಂ ಕಥಯಂತಿ ||೮೯ ||
ಚಾಂಗೋsಥ ಮಂತ್ರವಾದೀ ಚ ತತ್ಪ್ರಸನ್ನಾ ತ್ವಭೂತ್ಕಿಲ |
ಏಕವೀರಾ ಮಹಾದೇವೀ ದದೌ ಭೂತಿಂ ಸಲಾಘವಾಮ್ ||೯೦ ||

ಕಂಥಡೀನಾಥನು ‘ನಾಥ‘ನಾಗಿರುವುದರಿಂದ ‘ದಿನಕರ ನಿಬಂಧ‘ದ ಕರ್ತೃವು ಆತನ ಮಾರ್ಗವನ್ನು ಮುದ್ರೀ ಮಾರ್ಗದ (ಅಂದರೆ ನಾಥ ಸಂಪ್ರದಾಯದ ಒಂದು ‘ಭ್ರಷ್ಟಭೇದ’ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಶ್ಲೋಕ. ೮೨). ಕೃಷ್ಣಭಟನು ಈ ಕಂಥಡೀನಾಥನಿಗೆ ಶಿಷ್ಯ. ಮಾಂತ್ರಿಕನಾಗಿದ್ದ ಆತ ಇಂದ್ರಜಾಲಿಗೆ ವಿದ್ಯೆಯಲ್ಲಿಯೂ ಪ್ರವೀಣ. ಮಾತಾಪುರದಲ್ಲಿ ವಾಸಿಸಿದ್ದ ಆತ ತನಗೆ ಹೆಚ್ಚಿನ ಮಾನ್ಯತೆ ದೊರೆಯಬೇಕೆಂಬ ಆಸೆಯಿಂದ ಅಲ್ಲಿನ ದೇವಿ ಮಾತಂಗಿಯನ್ನು ನಿತ್ಯವೂ ಪ್ರಾರ್ಥಿಸುತ್ತಿದ್ದ. ಅಲ್ಲದೆ, ಆ ದೇವಿಯನ್ನು ಪ್ರಸನ್ನಗೊಳಿಸುವುದಕ್ಕಾಗಿ ಒಬ್ಬ ಮಾತಂಗ ಕನ್ಯೆಯನ್ನು ಸಹ ಬಲಿಕೊಟ್ಟನು. ಈ ಕೃತ್ಯದಿಂದ ಪ್ರಸನ್ನಳಾದ ದೇವಿಯು ಬಲಿಯಾದ ಮಾತಂಗ ಕನ್ಯೆಗೆ ಮರುಜೀವ ನೀಡಿದ್ದಲ್ಲದೆ, ಅವಳನ್ನೇ ವಿವಾಹವಾಗುವಂತೆ ಕೃಷ್ಣಂಭಟನಿಗೆ ಆದೇಶ ಮಾಡಿದಳು. ಆ ಪ್ರಕಾರವೇ ಮಾತಂಗ ಕನ್ಯೆಯನ್ನು ವರಿಸಿದ ಕೃಷ್ಣಂಭಟನು ಅವಳಿಂದ ದತ್ತೋ, ಢಗೋ, ಮೇಘೋ, ಗುಂಡೋ ಮತ್ತು ಚಾಂಗೋ ಎಂಬ ಐವರು ಪುತ್ರರನ್ನು ಪಡೆದನು. ಆತ ಏಕವೀರೆಯ (ಅಂದರೆ ಮತಾಪುರದ ಮಾತಂಗೀ ದೇವಿಯ) ವರಪ್ರಸಾದದಿಂದ ಮಹಾರಾಷ್ಟ್ರದಲ್ಲಿ ಮುನ್ನೂರು ವರ್ಷಗಳ ಕಾಲ ಬದುಕಿದ್ದನು ತನ್ನ ಆ ಐವರು ಪುತ್ರರೊಂದಿಗೆ. ಅವನ ಆ ಐವರೂ ಪುತ್ರರು ಮಾಂತ್ರಿಕರೇ ಆದರು. ಅವರು ತಮ್ಮನ್ನು ‘ರಾವಳ’ (ಮಾತಂಗಿ ಉಪಾಸಕ)ರೆಂದು ಕರೆದುಕೊಳ್ಳುತ್ತಿದ್ದರಲ್ಲದೆ, ತಮ್ಮ ಐವರ ಸಮೂಹವನ್ನು ‘ಪಂಚಕೃಷ್ಣ’ ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಆ ಐವರಲ್ಲಿ ಚಾಂಗೋ ಎಂಬಾತನು ಮಂತ್ರವಾದಿಯಾಗಿ ಏಕವೀರಾ ದೇವಿಯಿಂದ ಒಂದು ವಿಶಿಷ್ಟ ಸಿದ್ದಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದನು.

ಆ ಸಿದ್ಧಿಯ ಬಲದ ಮೇಲೆಯೆ ಚಾಂಗೋ ಪೈಠಣಕ್ಕೆ ಬಂದು ಅಲ್ಲಿ ಗೊಂದಲ, ಗಲಿಬಿಲಿಯನ್ನು ಉಂಟು ಮಾಡಿದನು. ಅಲ್ಲದೆ ಅಲ್ಲಿನ ಮಹಾನುಭಾವ ಆಚಾರ್ಯರನ್ನೆಲ್ಲ ವಾದದಲ್ಲಿ ಸೋಲಿಸಿಬಿಟ್ಟ. ನಂತರ ಮುನಿರಾಜನೆಂಬ ನವಗ್ರಹಿನಾಮಕ ಮಹಾನುಭಾವನೊಬ್ಬ ಅವನಲ್ಲಿ ಬಂದು ಸೇರಿಕೊಂಡನು. ಆನಂತರ ಅವನ ಆಚಾರ – ವಿಚಾರಗಳಲ್ಲೆಲ್ಲ ಮಹಾನುಭಾವದವರ ಆಚಾರ – ವಿಚಾರಗಳು ಹೇಗೆ ಕೂಡಿಕೊಂಡವು ಎಂಬುದನ್ನು ದಿನಕರ ನಿಬಂಧದ ಕರ್ತೃವು ಮುಂದೆ ಹದಿನಾರು ಶ್ಲೋಕಗಳಲ್ಲಿ (ಕ್ರಮಾಂಕ ೯೧ – ೧೦೬) ವರ್ಣಿಸಿದ್ದಾನೆ. ಕೊನೆಗೆ ಉಳಿದ ನಾಲ್ವರು ಕೃಷ್ಣ ಪುತ್ರರ ನಿಜಸ್ಥಿತಿಯನ್ನು ಈ ಕೆಳಗಿನಂತೆ ಬಣ್ಣಿಸಿದ್ದಾನೆ ಗ್ರಂಥಕಾರ:

ದತ್ತಾದ್ಯಾಶ್ಚೈವ ಚತ್ವಾರಃ ಕೃಷ್ಣಂಭಟಾತ್ಮಜಾಶ್ಚ ಯೇ |
ತೈಶ್ಚತುರ್ಭಿಃ ಸಮಾಖ್ಯಾತಂ ಧರಣೀವಾರಿದೈವತಮ್ ||೧೦೭ ||
ಕಾಯ ಪ್ರಕ್ಷಾಳಮಾತ್ಮಾನಂ ಗೋಪಾಲಂ ಕಥಯಂತಿ ಹಿ |
ತೇ ವೈ ಮಾತಂಗಗುರವೋ ಮಾತಂಗಾಸ್ತೇ ತದಾನುಗಾಃ ||೧೦೮ ||
ದತ್ತೋ ಜಾಠವಡೇ ಗ್ರಾಮೇ ಮೃತೋ ಯಾತ್ರಾಸ್ಥಲಂ ತ್ವಭೂತ್ |
ಢಗೋsಸ್ಯ ಬಾಬುಲಗ್ರಾಮೇ ಮೃತವಾನ್ ಬಾಲಪರ್ವತೇ ||೧೦೯ ||
ಡೋಂಬೇಗ್ರಾಮೇ ಮೃತೋ ಮೇಘೋ ಗುಂಡೋ ನಿಂಬಪುರೇ ಮೃತಃ |
ತೇಷಾಂ ಧೂತಾದಿಭೇದಾಶ್ಚ ಬಹವೋ ವಾಸಂನಾವಶಾಃ ||೧೧೦ ||

ದತ್ತೋ, ಢಗೋ, ಮೇಘೋ ಮತ್ತು ಗುಂಡೋ ಎಂಬೀ ನಾಲ್ವರು ಕೃಷ್ಣಪುತ್ರರು ಧರಣಿ ಹಾಗೂ ನೀರು – ಈ ದೇವತೆಗಳ ಉಪಾಸನೆಯನ್ನು ಹೆಚ್ಚು ಪುರಸ್ಕರಿಸಿದವರು. ಅವರು ತಮ್ಮನ್ನು ‘ಕಾಯ ಪ್ರಕ್ಷಾಳ’ ಮತ್ತು ‘ಗೋಪಾಳ’ ಎಂಬ ಬಿರುದಿನಿಂದ ಕರೆದುಕೊಳ್ಳುತ್ತಿದ್ದರು. ಅವರು ಮಾತಂಗನಿಗೆ ಗುರುವಾದರು. ಮಾತಂಗನೋ ಅವರ ಅನುಯಾಯಿಯಾದ. ಈ ನಾಲ್ವರ ಪೈಕಿ ದತ್ತೋ ಎಂಬುವನು ಜಾಠವಡಾದಲ್ಲಿಯೂ, ಢಗೋ ಎಂಬಾತನು ಬಾಲಘಾಟಾದಲ್ಲಿನ ಬಾಭುಳಗಾಂವ್ ಎಂಬ ಸ್ಥಾನದಲ್ಲಿಯೂ ಮೇಘೋ ಎಂಬಾತ ಡೋಂಬೆ ಗ್ರಾಮದಲ್ಲಿಯೂ ಹಾಗೂ ಗುಂಡೋ ಎಂಬಾತ ನಿಂಬಪುರದಲ್ಲಿಯೂ ನಿಧನರಾದರು. ಅವರ ಈ ನಿಧನ ಸ್ಥಳಗಳು ಅವರ ಪರಂಪರೆಯಲ್ಲಿ ಪ್ರಮುಖವಾದ ಯಾತ್ರಾಸ್ಥಳಗಳೆನಿಸಿಕೊಂಡಿವೆ.

‘ದಿನಕರ ನಿಬಂಧ’ದಲ್ಲಿನ ಈ ಮಾಹಿತಿಯನ್ನು ನಿಷ್ಕರ್ಷಿಸಿದಾಗ ತಿಳಿಯುವಂತೆ, ಕೃಷ್ಣಂ ಭಟನ ಆರಾಧ್ಯ ದೇವತೆ ಮಾಹೂರಿನ ಏಕವೀರಾ ಅಥವಾ ಮಾತಂಗೀದೇವಿ. ಆ ದೇವಿಗೆ ‘ಬಲಿಯಾಗಿ ಅರ್ಪಿಸಿದ್ದ ಮಾಂತಂಗ ಕನ್ಯೆ‘ಯಿಂದಲೇ ಅವನಿಗೆ ದತ್ತೋನೇ ಮೊದಲಾಗಿ ಐವರು ಪುತ್ರರು ಜನಿಸಿದ್ದರು. ಆ ಐವರಲ್ಲಿ ಚಾಂಗೋನನ್ನು ಬಿಟ್ಟು ಉಳಿದಂತೆ ನಾಲ್ವರಿಗೆ ಧರಣಿ ಹಾಗೂ ಜಲದೇವತೆಗಳ ಉಪಾಸನೆಯಲ್ಲಿ ಬಹಳೇ ಅಭಿಮಾನ. ಅವರಿಗೆ ಅನುಯಾಯಿಯಾಗಿತ್ತು ಮಾತಂಗ ಸಮಾಜ. ಜಾಠವಡಾ, ಬಾಭುಳಗಾಂವ್, ಡೋಂಬೇ ಗ್ರಾಮ ಹಾಗೂ ನಿಂಬಪುರಗಳೆಂಬ ಅವರ ಮೃತ್ಯು ಸ್ಥಳಗಳೆಲ್ಲ ಅವರ ಪರಂಪರೆಯ ನಿಮಿತ್ತವಾಗಿ ಮುಖ್ಯ ಯಾತ್ರಾ ಸ್ಥಳಗಳ ಪ್ರತಿಷ್ಠೆ ಪಡೆದವು. ‘ಕಾಯ ಪ್ರಕ್ಷಾಳ’ ಮತ್ತು ‘ಗೋಪಾಳ’ ಇವು ಅವರ ಉಪಾಸನಾ ಸಂಪ್ರದಾಯದಲ್ಲಿನ ಸಂಪ್ರದಾಯಿಕ ಬಿರುದುಗಳು. ಮುಂದೆ ಅವರ ಪರಂಪರೆಯಲ್ಲಿ ಉಂಟಾದ ಕೆಲವಾರು ಮತಭೇದಗಳ ಕಾರಣಗಳಿಂದಾಗಿ (ವಾಸನಾವಶಾಃ) ‘ಧೂತ’ ಇತ್ಯಾದಿ ಭೇದ ಗಳುಂಟಾದವು.

‘ದಿನಕರ ನಿಬಂಧ‘ದಲ್ಲಿನ ಈ ಮಾಹಿತಿಯು ‘ಗಜಕೇಸರಿ‘ಯಲ್ಲಿನ ಮಾತಂಗೀಪಟ್ಟದ (ಮಾಂಗಿಣೀಪಟ) ಮಾಹಿತಿಯೊಂದಿಗೆ ಸಂವಾದಿಯಾದುದೇ ಆಗಿದೆ.

ಜಾಖದೇವಬಾ ಪಾಠದಲ್ಲಿನಢಗೋ ಮೇಘೋ ಮಾರ್ಗಕಥನ

‘ಮಾತಂಗೀಪಟ್ಟ’ ಮತ್ತು ಅದರ ಭೇದ ಇವುಗಳ ವಸ್ತುಸ್ಥಿತಿಯನ್ನು ಒದಗಿಸುವ ಮತ್ತೊಂದು ಸಾಂಕೇತಿಕ ಲಿಪಿಯುಳ್ಳ ಮಹಾನುಭಾವ ಕೃತಿಯೊಂದು ನೋಡಲು ಲಭಿಸಿತ್ತು ನನಗೆ. ‘ಜಾಖ ದೇವಬಾನ ಪಾಠ’ ಎಂಬ ಶೀರ್ಷಿಕೆಯುಳ್ಳ ಈ ಕೃತಿಯಲ್ಲಿ ಕೃಷ್ಣಪುತ್ರ ಚಾಂಗೋ ಹಾಗೂ ಅವನ ಶಿಷ್ಯ ಮ್ಹಾಯಾ ಆಚಾರ್ಯ ಇವರು ಪ್ರವರ್ತಿಸಿರುವ ನವಗ್ರಹಾದಿ ಐದು ಉಪ ಸಂಪ್ರದಾಯಗಳ ಮಾಹಿತಿ ಇರುವಂತೆಯೇ, ಢಗೋ ಮೇಘೋ ಮಾರ್ಗಗಳ ಬಗ್ಗೆಯೂ ಸಂಕ್ಷಿಪ್ತ ಮಾಹಿತಿಯಿದೆ. ಪ್ರಸ್ತುತ ಸಂದರ್ಭದಲ್ಲಿ ಅದು ಮಹತ್ವದ್ದೇ ಆಗಿರುವುದರಿಂದ ಅದನ್ನು ಇಲ್ಲಿ ಉದ್ಧೃತಗೊಳಿಸಬೇಕಾದ್ದು ಅವಶ್ಯ: “ಢಗೋ ಮೇಘೋ ಮಾರ್ಗಕಥನ: ಕೃಷ್ಣಂಭಟನ ಐವರು ಪುತ್ರರು: ಅವರು ತಮ್ಮನ್ನು ಪಂಚರಾಊಳ, ಪಂಚಕೃಷ್ಣ ಎಂದು ಕರೆದು ಕೊಂಡಿದ್ದಾರೆ: ಒಬ್ಬ ದತ್ತೋ: ಆತ ಜಾಠವಡಾ ಸೇರಿಕೊಂಡ: ಢಗೋ ಎಂಬಾತ ಬಾಳಘಟದಲ್ಲಿನ ಬಾಭುಳಗಾಂವ್‌ನಲ್ಲಿ ಸೇರಿಕೊಂಡ : ಮೇಘೋ ಎಂಬುವವನು ಡೋಮೆ ಗ್ರಾಮಕ್ಕೆ ಹೋದ : ಗುಂಡೋ ಎಂಬುವವನು ಭಟ್ಟಾನ ನಿಂಬಾ ಎಂಬ ಊರಿನಲ್ಲಿ ನೆಲೆಸಿದ: ಅವೇ ಅವರ ತೀರ್ಥಗಳಾದವು: ಆ ನಾಲ್ವರದ್ದೂ ಒಂದೇ ಸಂಪ್ರದಾಯ: ಧರಣಿ ಮತ್ತು ಜಲ ಅವರ ದೇವತೆಗಳು: ಮತಂಗನಿಂದ ಮಂತ್ರ ದೀಕ್ಷೆ : ತಮ್ಮನ್ನು ಕರೆದು ಕೊಂಡಿರುವುದು ಕಾಯಪಾಖಿ ಎಂಬುದಾಗಿ : ಗೋಪಾಳ ಎಂದೂ ಸಹ ಕರೆದುಕೊಂಡಿದ್ದಾರೆ: ಅವರಿಗೆಲ್ಲ ಒಂದೇ ವಾಸನೆ : ತಮ್ಮನ್ನು ತಾನೇ ಅವಧೂತರು ಎಂದು ಹೇಳಿಕೊಳ್ಳುವುದು ||”

ಚಾಂಗೋನನ್ನು ಉಳಿದು ಅನ್ಯ ನಾಲ್ವರು ಕೃಷ್ಣಪುತ್ರರ ಮೃತ್ಯು ಸ್ಥಾನವನ್ನು ನೋಂದಾಯಿಸುವಾಗ ಬಾಭುಳಗಾಂವ ಎಂಬುದು ಬಾಳಘಾಟ ಇರಬೇಕೆಂದೂ ಹಾಗೂ ನಿಂಬಾ ಎಂಬುದು ‘ಭಟ್ಟಾನ’ ಅಂದರೆ ನಾಗದೇವಾಚಾರ್ಯನ ನಿಂಬಾ ಇದ್ದಿರಬೇಕು ಎಂದು ಹೇಳಲಾಗಿದೆ.

ಓವೀಬದ್ಧಗಜಕೇಸರಿಯಲ್ಲಿನ ಮಾತಂಗೀಪಟ್ಟದ ವರ್ಣನೆ

‘ಗಜಕೇಸರಿ’ ಎಂಬ ಗ್ರಂಥದ ಒಂದು ಓವಿಬದ್ಧ (ಓವಿ ಎಂಬುದು ಒಂದು ಛಂದೋರೂಪ, ಇದೊಂದು ದ್ವಿಪಾದಿ) ಸಂಸ್ಕರಣ ರೂಪವೂ ಇದ್ದಿರಬೇಕು. ಮಹಾನುಭಾವ ಪಂಥದವರೊಂದಿಗೆ ಮಾತಂಗೀಪಟ್ಟದ ಸಂಬಂಧವನ್ನು ಗುರುತಿಸುವುದನ್ನು ಖಂಡಿಸುವ ಉದ್ದೇಶಕ್ಕಾಗಿ ಮಹಾನುಭಾವ ಮಹಂತರು ಪ್ರಸ್ತುತ ಶತಕದ (೨೦ನೇ ಶತಮಾನ) ಪ್ರಥಮ ಪಾದದಲ್ಲಿ ಪ್ರಕಟಿಸಿದ ಒಂದು ಕೃತಿಯಲ್ಲಿನ ಓವೀಬದ್ಧ ಸಂಸ್ಕರಣ ರೂಪದ ಕೆಲವು ಭಾಗಗಳನ್ನು ಉದ್ಧೃತಗೊಳಿಸಲಾಗಿದೆ ಇಲ್ಲಿ:

ಕೃಷ್ಣಂಭಟ ಮಾತಾಪುರಿಯವನು | ಅವನಿಗೆ ಗುರುವು ಕಂಥಡೀನಾಥ |
ಬಲ್ಲನು ಆಗಮಂಗಳ ಸಕಲಾರ್ಥವನು | ತೋರಣಮಾಳದೊಗವನ ವಸತಿ ||೩೬ ||

ಮಂತ್ರ ತಂತ್ರ ಮೋಹನ | ವೀರ್ಯಸ್ತಂಭನ ಉಚ್ಚಾಟನ |
ನಿರೂಪಣ ಮಾಡಿದ ಕೃಷ್ಣಂಭಟನು | ಉಪದೇಶಿದನು ಮಾತಂಗೀ ಮಂತ್ರವನು ||೩೭ ||

ಅರಸಿದ ಸುಲಕ್ಷಣವಹ ಸಂದರಿಯನು | ಮಾತಂಗಿ ಕನ್ಯೆಯನು ಕೃಷ್ಣಂಭಟ |
ತಂದನವಳ ಆಹುತಿ ನೀಡಲೆನೆ | ದೇವಿಗೆ ||೩೮ ||

ತನಗೆ ಬಲಿಗೊಟ್ಟ ಮಾಂತಗ ಕನ್ಯೆಗೆ ಮತ್ತೆ ಜೀವಕೊಟ್ಟ ದೇವಿಯು ಅವಳನ್ನು ಕೃಷ್ಣಂಟನ ಸ್ವಾಧೀನಕ್ಕೇ ಕೊಟ್ಟಳು; ಅವಳನ್ನು ವಿವಾಹ ಮಾಡಿಕೊಂಡನಾತ; ತದನಂತರ ಅವಳಿಂದ ಐವರು ಪುತ್ರರು ಜನಿಸಿದರು:

ಮೊದಲವ ದತ್ತೋ ಎರಡನೆಯವ ಢಗೋ | ಮೂರನೆಯವ ಗುಂಡೋ, ನಾಲ್ಕನೆಯವ ಮೇಘೋ |
ಐದನೆಯವ ಚಾಂಗೋ | ಬತ್ತೀಸ ಲಕ್ಷಣಂಗಳು ||೪೩ ||

ದತ್ತೋ ಕೊನೆಗಂಡ ಜಾಠವಾಡಾ | ಢಗೋನೋ ಬಾಭುಳಗಾಂವದೊಳು ಸತ್ತನು |
ಡೋಮೆ ಗ್ರಾಮದಿ ಮೇಘೋ ಹುದುಗಿದ | ಗುಂಡೋ ನಿಂಬಾದೊಳು ಸತ್ತನು ||೪೪ ||

ಚಾಂಗೋ ಮಾಡಿದ ಬಹಳೇ ವ್ಯಭಿಚಾರ | ಸೋತು ಒಳ ಸೇರಿದ ರಾಜದ್ವಾರದೊಳು |
ಮಾಡಿದವರವನ ಶಿರಚ್ಛೇದನವ ದೇವಗಿರಿಯೊಳಗೆ | ಚಮ್ಮಾರನಿಂದಲಿ ||೪೫ ||

 

[1]ಭಾರತ ಇತಿಹಾಸ ಸಂಶೋಧಕ ಮಂಡಳ ಪಂಚಮ ಸಮ್ಮೇಳನ ವೃತ್ತ: ಶಕ. ೧೮೩೯, ಪುಟ ೩೫ – ೫೩.

[2]ಭಾರತ ಇತಿಹಾಸ ಸಂಶೋಧಕ ಮಂಡಳ ವಾರ್ಷಿಕ ಇತಿವೃತ್ತ : ಶಕ. ೧೮೩೫, ಪುಟ ೧೫೦ – ೧೫೭.

[3]ಭರತ ಖಂಡಾಚಾ ಅರ್ವಾಚೀನ ಕೋಶ: ರಘುನಾಥ ಶಾಸ್ತ್ರಿ ಗೋಡಬೋಲೆ, ಪುಟ ೧೦೧ – ೧೦೪ (ಉಲ್ಲೇಖ: ‘ಕೃಷ್ಣಂಭಟ ಜೋಶಿ’

[4]ಮಹಾನುಭಾವ ಸಂಶೋಧನ ೧ : ವಿ.ಭಿ. ಕೋಲತೆ, ಮಲಕಾಪುರ, ೧೯೬೨, ಪುಟ ೧೪೬ – ೧೫೯.

[5]ಶೇಖ್ ಮಹಮದ್ ಬಾಬಾ ಶ್ರೀಗೋಂದೇಕರ ಯಾಂಚಿ ಕವಿತಾ ಸಂಗ್ರಹ: ವಾ.ಸೀ. ಬೇಂದ್ರೆ, ಮುಂಬಯಿ, ೧೯೬೧, ಪುಟ. ೩೨.