‘ಮಾಂಗಿಣೀಪಟ‘ದ ಗದ್ಯ ‘ಗಜಕೇಸರಿ‘ಯಲ್ಲಿನ ಕಥೆ

‘ಗಜಕೇಸರಿ’ ಗ್ರಂಥದಲ್ಲಿ ‘ಮಾಂಗಿಣೀಪಟ‘ವೆಂಬ ಹೆಸರಿನಲ್ಲಿ ಮಾತಂಗೀಪಟ್ಟದ ಬಗ್ಗೆ ಒಂದು ಕಥೆಯಿದೆ. ಅದನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಾದ್ದು ಅವಶ್ಯ. ಮೊದಲನೆಯದಾಗಿ ನಾವು ಈ ಕಥೆಯನ್ನು ಯಥಾಮೂಲ ಸ್ವರೂಪದಲ್ಲಿ ತಿಳಿದುಕೊಳ್ಳೋಣ:

“ಈಗ ಮಾಂಗಿಣೀಪಟ || ಮಾತಾಪುರದೊಳು ಕೃಷ್ಣಂಭಟ ಇದ್ದನು: ಅವನಿಗೆ ಗುರುವು ಆಗಮಿಕನಹ ಕಂಥಡೀನಾಥ : ಉಪದೇಶಿಸಿದ ಸಕಲ ಮಂತ್ರ ತಂತ್ರಗಳನು : ಆದರೂ ಭಟನು ಸುಲಕ್ಷಣವಹ ಮಾತಂಗ ಕನ್ಯೆಯೋರ್ವಳನರಸಿ ಬಲಿಗೊಟ್ಟನು ಮಾತಂಗೀದೇವಿಗೆ: ಮಾತಂಗೀ ಎಂದರೆ ಮೇಶಕೋ (ಕ್ಷುದ್ರದೇವಿ) : ಈ ಕಾರ್ಯದಿಂದ ಆಕೆ ಪ್ರಸನ್ನಗೊಂಡಳು : ಕೊಟ್ಟಳು ವರವನು ಭಟನಿಗೆ : ಸಿಂಪಡಿಸಿ ಅಮೃತವನು ಮತ್ತೆ ಬದುಕಿಸಿದಳವಳನು : ಪ್ರತ್ಯಕ್ಷ ನುಡಿದಳು ದೇವೀ : ವರಿಸುವುದೀ ಕನ್‌ಎಯನು ನೀನು : ನಿನಗಾಗುವರು ಐವರು ಪುತ್ರರು ಇವಳಿಂದ : ವಾದ ವಿವಾದಂಗಳೊಳಗೆಲ್ಲ ನಿನಗೇ ಜಯವು: ಪಡೆವೆ ಧನದಾನ್ಯಂಗಳನು : ವಶರಾಗುವರೋ ರಾಜ ಪ್ರಜೆಗಳೆಲ್ಲ: ಇಂತು ವರವ ಕರುಣಿಸಿ ಅದೃಶಳಾದಳು ದೇವೀ: ನಂತರದೊಳು ಕೃಷ್ಣಂಭಟ ಪಾಣಿಗ್ರಹಣ ಮಾಡಿದನಾ ಕನ್ಯೆಯನು: ಅವಳಲ್ಲಿ ಜನಿಸಿದರೈವರು ಪುತ್ರರು || ಅವರಹರು ದತ್ತೋ: ಢಗೋ: ಮೇಘೋ: ಗುಂಡೋ: ಚಾಂಗೋ: ಪಂಚ ಮಾರ್ಗವೊಂದರೊಳು ಗುಪ್ತವಾಗಿ ಪೂಜಿಸುತ್ತಿದ್ದನು ಮೇಶಕೋ ದೇವಿಯ || ಶಾಹಾಲಮ ಪ್ರಭು ಮಾರ್ಗ || ಸಿಧವೋಳೀ ಮಾರ್ಗ || ಬ್ರಹ್ಮಜ್ಞಾನಿ ಮಾರ್ಗ || ಉಪರಿಯಾ ಮಾರ್ಗ | ಇಂತೈದು ಮಾರ್ಗಂಗಳನವನು ಪ್ರತಿಷ್ಠಾಪಿಸಿದ : ಮತ್ತೆ: ಉಳಿದ ನಾಲ್ವರು ಕೂಡಿ ರೂಪಿಸಿದರು ಢಗೋ – ಮೇಘೋ ಮಾರ್ಗವನು || ಧರಣಿ ಜಲ ದೇವತೆಗಳು : ಮಾತಂಗನಿಂ ಮಂತ್ರ ದೀಕ್ಷಾ: ತಮ್ಮನ್ನವರು ಕರೆದುಕೊಳ್ವರು ಕಾಯಪಾಕ್ಷಿ ಎನುತ: ಗೋಪಾಳನೆನುತಲಿ ಮತ್ತೆ: ಇಂತಹ ಮಾರ್ಗವೊಂದನು ಪ್ರತಿಷ್ಠಾಪಿಸಿ ಮಡಿದರು ನಾಲ್ವರು: ದತ್ತೋ ಜಾಠವಡಾದೊಳಗೆ: ಢಗೋ ಬಾಭುಳಗಾಂವದೊಳಗೆ: ಮೇಘೋ ಡೋಂಬೆ ಗ್ರಾಮದೊಳಗೆ: ಗುಂಡೋ ನಿಂಬಾದೊಳಗೆ: ಅವೇ ಅವರ ತೀರ್ಥಗಳೆನಿಸಿದವು ಮುಂದೆ: ಇಂತಹುದು ಮಾಂಗಿಣೀಪಟದ ಆದಿಯು:

“ಜನರು ಮನ್ನಿಸಿ ಅವರ ದರುಶನವನು ಭಜಿಸುವರು: ಅವರೆಲ್ಲ ಅಧಮ ಜಾತಿಯವರು: ಕಾಂ ಪಾಂ : ಮೇಶಕೋ ಒಬ್ಬಳು ಕ್ಷುದ್ರ ದೇವಿ: ಹೀನಯೋನಿಯರಹ ಕರ್ಮ ಚಾಂಡಾಳರಿಗೆ ಮಾನ್ಯಳು: ಬ್ರಾಹ್ಮಣ – ವೇದ – ಶ್ರೋತ್ರಿಯರಿಗಂತೆ ಬ್ರಹ್ಮಜ್ಞಾನಿಗಳಿಗವಳೋ ಅತಿ ಮಲಿನ: ನುಡಿದಿಲ್ಲ ಅವಳನು ಆವ ಪ್ರಮಾಣ ಗ್ರಂಥವು: ಕಾಂ: ಅವರೋ ಜೀವಕೃತರು : ಜೀವನದ ದುಃಖವು ತಪ್ಪದು ||ಎಂತಾದರೂ ||

ಯೇ ಯಥಾ ಮಾಂ ಪ್ರಪದ್ಯಾಂತೇ ತಾಂಸ್ಥತೈವ ಭಜಾಮ್ಯಹಂ |
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ||
(ಗೀತಾ, ೪ – ೧೧.)

ಅಂದರೆ ಯಾವ ಪ್ರಾಣಿಯು ಕ್ಷುದ್ರ ದೇವತೆಯನ್ನು ಕುರಿತು ಭಜಿಸುವುದೋ: ಅದು ಅದರ ಫಲವನ್ನೂ ಪಡೆವುದು: ಮತ್ತು: ಅರಿತು ಪೂಜಿಸಲು ಪರಮೇಶ್ವರನನ್ನು: ಪಡೆವುದದು ಅಚ್ಯುತ ಪದವನು || ಯಕ್ಷಿಣಿಯಾದಿ ಕ್ಷುದ್ರ ದೇವತೆಗಳನು ರೂಪಿಸಿದೊಡೆಬಹುದು ವಿಶ್ವದೊಳು ಅಧೋ ಗತಿಯು : ಇಂತಿರಲು ಮೇಶಕೋ ಮಾಯಾರಾಣಿಯರನೆಲ್ಲ ಇಡುವುದಾದರೂ ಇಲ್ಲಿ ||೩೪ ||

‘ಗಜಕೇಸರಿ’ ಕೃತಿಯಲ್ಲಿನ ‘ಮಾಂಗಿಣೀಪಟ‘ದ ವಿವರಗಳನ್ನು ವಿಶ್ಲೇಷಿಸಿದಾಗ ಕಂಡು ಬರುವ ಮಹತ್ವದ ಸಂಗತಿಗಳಿವು:

೧. ಮಾಂಗಿಣೀಪಟದ ಪ್ರವರ್ತಕ ಕೃಷ್ಣಂಭಟನೆಂದು ಒಬ್ಬ ಬ್ರಾಹ್ಮಣ.

೨. ಕಂಥಡೀನಾಥನೆಂಬ ಆಗಮಿಕನೊಬ್ಬನ ಶಿಷ್ಯನಾಗಿದ್ದ ಆತ, ತನ್ನ ಗುರುವಿನಿಂದ ಮಂತ್ರ ತಂತ್ರಗಳನ್ನೆಲ್ಲ ಕಲಿತುಕೊಂಡಿದ್ದನು.

೩. ಆತ ವಾಸಿಸುತ್ತಿದ್ದುದು ಮಾತಾಪುರವೆಂಬ ಊರಿನಲ್ಲಿ.

೪. ಮಾತಾಪುರದ ಮಾತಂಗಿ ದೇವಿಯ ಉಪಾಸಕನಾಗಿದ್ದ.

೫. ಆ ದೇವಿಗೆ ಮೇಶಕೋ ಮಾಯರಾಣಿಗಳೆಂಬುದಾಗಿ ಪರ್ಯಾಯ ನಾಮಗಳಿದ್ದವು.

೬. ಕೃಷ್ಣಂಭಟನು ಸುಂದರ ಮಾತಂಗ ಕನ್ಯೆಯೊಬ್ಬಳನ್ನು ಹುಡುಕಿ ಮಾತಂಗಿ ದೇವಿಗೆ ಬಲಿಕೊಟ್ಟನು.

೭. ಅವನ ಕೃತ್ಯದಿಂದ ಪ್ರಸನ್ನಳಾದ ದೇವಿ ಅಮೃತ ಸಿಂಚನ ಮಾಡಿ ಆ ಸತ್ತ ಮಾತಂಗ ಕನ್ಯೆಯನ್ನು ಮತ್ತೆ ಜೀವಂತಗೊಳಿಸಿದಳು. ಹಾಗೂ ಅವಳನ್ನೇ ಮದುವೆಯಾಗುವಂತೆಯೂ ಆದೇಶಿಸಿದಳು.

೮. ‘ಜೊತೆಗೆ ಮಾಂತಗ ಕನ್ಯೆಯಾದ ಇವಳಿಂದ ಐವರು ಪುತ್ರರಾಗುವರು ನಿನಗೆ: ವಾದ ವಿವಾದಗಳಲ್ಲಿ ನಿಶ್ಚಿತ ಜಯಪ್ರಾಪ್ತಿ: ಧನ ಧಾನ್ಯಗಳು ಯಥೇಚ್ಛ ಬರುವುದು ಹಾಗೂ ರಾಜಪ್ರಜೆಗಳೆಲ್ಲ ವಶರಾಗುವರು’ ಎಂಬ ವರವನ್ನು ದಯಪಾಲಿಸಿದಳು ಅವನಿಗೆ.

೯. ದೇವಿಯ ಆದೇಶದಂತೆ ಕೃಷ್ಣಂಭಟ ವರಿಸಿದನು ಮಾತಂಗ ಕನ್ಯೆಯನ್ನು. ಅನಂತರ ಅವಳ ಉದರದಲ್ಲಿ ಐವರು ಪುತ್ರರು ಜನಿಸಿದರು. ದತ್ತೋ, ಢಗೋ, ಮೇಘೋ, ಗುಂಡೋ ಮತ್ತು ಚಾಂಗೋ ಅವರ ಹೆಸರುಗಳು.

೧೦. ಮ್ಹಾಯಾ ಎಂಬ ಚಾಂಗೋನ ಶಿಷ್ಯನೊಬ್ಬ ಆಚಾರ್ಯನಾಗಿದ್ದನು. ಚಾಂಗೋನು ನವಗ್ರಹಮಾರ್ಗ, ಶಹಾಲಮ ಪ್ರಭು ಮಾರ್ಗ, ಸಿದ್ಧ ಓಳಿ ಮಾರ್ಗ, ಬ್ರಹ್ಮಜ್ಞಾನಿ ಮಾರ್ಗ ಹಾಗೂ ಉಪರಿಯಾ ಮಾರ್ಗಗಳನ್ನು ಪ್ರತಿಷ್ಠಾಪಿಸಿ ಅವುಗಳ ಆಚಾರ್ಯತ್ವವನ್ನು ಮ್ಹಾಯಾನಿಗೆ ವಹಿಸಿದ್ದನು.

೧೧. ಚಾಂಗೋನನ್ನು ಬಿಟ್ಟು ಉಳಿದ ನಾಲ್ವರು ಢಗೋ – ಮೇಘೋ ಮಾರ್ಗವನ್ನು ನಿರ್ಮಿಸಿದರು. ಧರಣಿ ಮತ್ತು ಜಲ ಅವರ ಮಾರ್ಗದ ಅಧಿದೇವತೆಗಳು. ಆ ಮಾರ್ಗದ ಅನುಯಾಯಿಗಳು ಸ್ವತಃ ತಮ್ಮನ್ನು ಕಾಯಪಾಖೀ, ಗೋಪಾಳ, ಧೂತ ಎಂಬಿತ್ಯಾದಿಯಾಗಿ ಕರೆದುಕೊಳ್ಳುತ್ತಿದ್ದರು.

೧೨. ಹೀಗೆ ಢಗೋ – ಮೇಘೋ ಮಾರ್ಗವನ್ನು ಪ್ರತಿಷ್ಠಾಪಿಸಿದ ಆ ನಾಲ್ವರು ಕಾಲಾಂತರದಲ್ಲಿ ನಿಧನರಾದರು. ದತ್ತೋ ಜಾಠವಡಾ, ಢಗೋ ಬಾಂಭುಳಗಾಂವ್‌, ಮೇಘೋ ಡೋಂಬೆ ಗ್ರಾಮ, ಹಾಗೂ ಗುಂಡೋ ನಿಂಬ ಎಂಬ ಊರುಗಳಲ್ಲಿ ತಂತಮ್ಮದೇಹಗಳನ್ನು ನೆಲಕ್ಕೆ ಚೆಲ್ಲಿದರು.

೧೩. ‘ಗಜಕೇಸರಿ’ ಕರ್ತೃವಿನ ಅಭಿಪ್ರಾಯದಂತೆ ಮಾಂಗಿಣೀಪಟದ ಅನುಯಾಯಿಗಳೆಲ್ಲ ಅಧಃಪತನ ಹೊಂದುತ್ತಾರೆ. ಕಾರಣ ಆ ಮಾರ್ಗದ ಮೇಶಕೋ ಎಂಬ ದೇವಿಯು ಹೀನ ಯೋನಿಗಳು ಹಾಗೂ ಕರ್ಮಚಾಂಡಾಳರ ದೇವತೆಯಾಗಿದ್ದು, ವೇದನಿಷ್ಠ ಬ್ರಾಹ್ಮಣರು ಮತ್ತು ಬ್ರಹ್ಮಜ್ಞಾನಿಗಳಿಗೆಲ್ಲ ಮಲಿನಳೆನಿಸಿದ್ದಾಳೆ. ಯಕ್ಷಿಣಿಯಿಂದ ಹಿಡಿದು ವಿಶ್ವಪರ್ಯಂತವಿರುವ ದೇವತಾ ಸಮೂಹಗಳ ಉಪಾಸನೆಯಿಂದ ಜೀವ ಕೊಂಚವಷ್ಟೇ ಅಧೋಗತಿ ಹೊಂದಬಹುದು. ಆದರೆ ಮೇಶಕೋ ಮಾಯರಾಣಿಯ ರಂಥ ದೇವಿಯರ ಉಪಾಸಕರ ಗತಿ ಏನಾಗುವುದೆಂದು ಊಹಿಸುವುದಕ್ಕೆ ಸಾಧ್ಯವೇ ಇಲ್ಲ.

ಈ ವಿಶ್ಲೇಷಣೆಯಿಂದ ಮಾಂಗಿಣೀಪಟದ ಸ್ವರೂಪದ ಬಗ್ಗೆ ಒಂದು ಸ್ಥೂಲವಾದ ಕಾಲ್ಪನಿಕ ಚಿತ್ರ ನಮಗೆ ಮೂಡುತ್ತದೆ: ಅದು ಮಾತಾಪುರ ಅಂದರೆ ಮಾಹೂರದಲ್ಲಿನ ದೇವಿಯ ಉಪಾಸನಾ ಸಂಪ್ರದಾಯ. ಆಕೆ ಮಾಹೂರಿನ ರೇಣುಕೆಯೇ. ಅವಳಿಗೆ ಮಾತಂಗೀ, ಮೇಶಕೋ ಮತ್ತು ಮಾಯರಾಣಿ ಎಂಬ ಪರ್ಯಾಯ ನಾಮಗಳಿವೆ. ಹೀನಯೋನಿಗಳವರೆಂಬುದಾಗಿ ಗುರುತಿಸಿರುವ ಹಾಗೂ ‘ಕರ್ಮಚಾಂಡಾಳ‘ರೆಂದು ವರಿಷ್ಠ ವರ್ಗಗಳವರಿಂದ ತುಚ್ಛವಾಗಿ ಪರಿಗಣಿಸಲ್ಪಟ್ಟಿರುವ ಮಾತಂಗ ಜಾತಿಯ ಜನರೇ ಆ ದೇವಿಯ ವಿಶೇಷ ಉಪಾಸಕರು. ಮಾತಂಗ ಜಾತಿಯ ಕನ್ಯೆಯರು ದೇವಿಯ ಈ ಉಪಾಸನೆಯಲ್ಲಿಯೇ ತಮ್ಮೆಲ್ಲ ಆಯುಷ್ಯವನ್ನು ಸವೆಸುತ್ತಾರೆ. ಮಾತಂಗಿ ದೇವಿಯ ಈ ಸಂಪ್ರದಾಯಕ್ಕೆ ‘ಢಗೋ – ಮೇಘೋ’ ಎಂಬ ಪರ್ಯಾಯ ನಾಮವೂ ಇದ್ದು, ಧರಣಿ ಮತ್ತು ಜಲ ಇವುಗಳಷ್ಟೆ ತಮಗೆ ದೇವತೆಗಳೆಂದು ನಂಬಿದ್ದಾರೆ ಈ ಸಂಪ್ರದಾಯಗಳವರು. ಕಾಯಪಾಖಿ, ಗೋಪಾಳ, ಧೂತ ಇತ್ಯಾದಿಯಾಗಿ ಈ ಸಂಪ್ರದಾಯದ ಅನುಯಾಯಿಗಳನ್ನು ಕರೆಯಲಾಗಿದೆ. ನವಗ್ರಹ ಮಾರ್ಗ, ಶಹಾಲಮಪ್ರಭು ಮಾರ್ಗ, ಸಿದ್ಧವೋಳಿ ಮಾರ್ಗ ಮತ್ತು ಉಪರಿಯಾ ಮಾರ್ಗ ಇವು ಮಾತಂಗಿಯ ವಿಶಿಷ್ಟ ಸ್ವತಂತ್ರ ಸಂಪ್ರದಾಯಗಳು. ಮಾಂಗಿಣೀಪಟ ಅಥವಾ ಸರ್ವಮಾನ್ ಢಗೋ – ಮೇಘೋ ಮಾರ್ಗದೊಂದಿಗೆ ಈ ನಾಲ್ಕು ಸಂಪ್ರದಾಯಗಳು ಮಾತ್ರ ಯಾವ ಸಂಬಂಧವನ್ನೂ ಹೊಂದಿಲ್ಲ.

‘ಮಾಂಗಿಣೀಪಟ‘ದ ಮಹಾನುಭಾವೀಯರ ವಿಶ್ಲೇಷಣೆಯಿಂದ ಅದರ ಸ್ವರೂಪವನ್ನು, ಈ ಸ್ಥೂಲ ಕಾಲ್ಪನಿಕ ಚಿತ್ರವನ್ನು ನಾರು ರೂಪಿಸಿರುವುದು, ಅದರ ಸತ್ಯಾಸತ್ಯತೆಯನ್ನು ಪರಕಿಸುವುದಕ್ಕಾಗಿ, ಆ ಮುನ್ನ ಈ ಪ್ರಶ್ನೆಗಳಿಗೆಲ್ಲ ಉತ್ತರವನ್ನು ಕಂಡುಕೊಳ್ಳಬೇಕಾದ್ದು ಅವಶ್ಯ.

೧. ಮಾಹೂರ ಕ್ಷೇತ್ರದ ಅಧಿಷ್ಠಾತ್ರಿ ದೇವಿರೇಣುಕೆಗೆ ಮಾತಂಗೀದೇವಿ (ಹಾಗೂ ಮೇಸಕೋ, ಮಾಯರಾಣಿ) ಎಂಬ ಪರ್ಯಾಯ ನಾಮಗಳು ಇರುವುವೇ?

೨. ಈ ದೇವಿಯ ಉಪಾಸನಾ ಸಂಪ್ರದಾಯದಲ್ಲಿ ಮಾತಂಗಾದಿ ‘ಹೀನಯೋನಿ‘ಗಳಾಗಿ ಪರಿಗಣಿಸಲ್ಪಟ್ಟಿರುವ ಜಾತಿಗಳವರಿಗೆ ಪ್ರಾಧಾನ್ಯ ಉಂಟೇ?

೩. ದೇವಿಯ ಉಪಾಸಕಿ ಎಂಬುದಾಗಿ ದೀಕ್ಷೆ ತೆಗೆದುಕೊಂಡಿರುವ ‘ಮುಕ್ತ ಚರಿತ‘ರಾದ ಮಾತಂಗಿ ಕುಮರಿಯರನ್ನು ಮಾತಂಗಿ ದೇವಿಯ ಉಪಾಸನಾ ಸಂಪ್ರದಾಯದಲ್ಲಿ ಕಾಣಬಹುದೇ?

೪. ಈ ದೇವಿಯ ಉಪಾಸನಾ ಸಂಪ್ರದಾಯಕ್ಕೆ ‘ಢಗೋ – ಮೇಘೋ ಮಾರ್ಗ‘ವೆಂಬ ಹೆಸರಿದ್ದಿತೇ? ಹಾಗೂ ಧರಣಿ ಮತ್ತು ಜಲಗಳಿಗೆ ಇಲ್ಲಿ ದೈವತ್ವ ಪ್ರತಿಷ್ಟೆ ಲಭ್ಯವಾಗಿರುವುದೇ?

೫. ಈ ಸಂಪ್ರದಾಯದ ಅನುಯಾಯಿಗಳಿಗೆ ಕಾಯಪಾಖಿ, ಗೋಪಾಳ, ಧೂತ ಎಂಬ ಸಂಜ್ಞೆ (ಸಂಕೇತ)ಗಳು ಪ್ರಚಲಿತವಾಗಿರುವುವೇ?

ಈ ಪ್ರಶ್ನೆಗಳಿಗೆಲ್ಲ ‘ಹೂಂಕಾರ’ ಉತ್ತರವೇ ದೊರೆತುದಾದರೆ, ಮಹಾನುಭಾವೀಯ ಗ್ರಂಥಗಳಲ್ಲಿ ವರ್ಣಿಸಲ್ಪಟ್ಟಿರುವ ‘ಮಾಂಗಿಣೀಪಟ‘ದ ಸ್ವರೂಪ ನಿಜವಾದುದೋ? ಹಾಗೂ ‘ಮಾಂಗಿಣೀಪಟ’ ಮತ್ತು ಮಹಾನುಭಾವ ಸಂಪ್ರದಾಯದ ಏಕತ್ವದ ದೃಷ್ಟಿಯಿಂದ ಸುಸಂಬದ್ಧವಾದುದೋ? ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಇವುಗಳಲ್ಲಿ ಬಹುತೇಕ ಪ್ರಶ್ನೆಗಳು ಹೂಂಕಾರಾರ್ಥ ಉತ್ತರಗಳನ್ನು ಹಿಂದಿನ ಪ್ರಕರಣದಲ್ಲಿ ಸಪ್ರಮಾಣವಾಗಿಯೇ ಚರ್ಚಿಸಲಾಗಿದೆ. ನವಗ್ರಹ ಮಾರ್ಗ, ಶಹಾಲಮಪ್ರಭು ಮಾರ್ಗ, ಸಿದ್ಧಓಳಿ ಮಾರ್ಗ, ಬ್ರಹ್ಮಜ್ಞಾನಿ ಮಾರ್ಗ ಹಾಗೂ ಉಪರಿಯಾ ಮಾರ್ಗವೆಂಬ ಐದು ಸಂಪ್ರದಾಯಗಳಿಗೆ ಮಹಾರಾಷ್ಟ್ರದ ಸಾಂಸ್ಕೃತಿಕ ಇತಿಹಾಸದಲ್ಲಿ ಇರುವ ಅಸ್ತಿತ್ವ, ಅವುಗಳ ಪರಸ್ಪರ ಸಂಬಂಧ ಮತ್ತು ಮಹಾನುಭಾವ ಸಂಪ್ರದಾಯದೊಂದಿಗೆ ಅವುಗಳಿಗೆ ಇರುವ ಸಂಬಂಧ – ಇವು ಮಾತಂಗೀಪಟ್ಟದ ಸಂದರ್ಭಧಲ್ಲಿ ಅನಾವಶ್ಯಕವೆನಿಸಿದ್ದರಿಂದ ಅದನ್ನು ಚರ್ಚಿಸಿವು ಗೋಜಿಗೇ ಹೋಗುವುದಿಲ್ಲ. ನಿಜವಾಗಿಯೂ ಹೇಳುವುದಾದರೆ, ಈ ಐದು ಸಂಪ್ರದಾಯಗಳನ್ನು ಶೋಧಿಸುವ ನನ್ನ ಪ್ರಯತ್ನವು ಇಂದಿಗೂ ಅಪೂರ್ಣವಾಗಿದೆ. ಈ ಪ್ರಯತ್ನಕ್ಕೆ ಲಕ್ಷಣೀಯ ಯಶಸ್ಸು ದೊರೆಯದೆ, ಆ ಬಗ್ಗೆ ಏನನ್ನಾದರೂ ಬರೆಯುವುದು ಉಚಿತವೆನಿಸುವುದಿಲ್ಲ.

ಢಗೋ ಮೇಘೋಗಳ ಪೂಜಾಸ್ಥಾನಗಳು

‘ಗಜಕೇಸರಿ‘ಯೇ ಮೊದಲಾದ ಮಹಾನುಭಾವೀಯ ಗ್ರಂಥಗಳಲ್ಲಿ ದತ್ತೋ ಮೊದಲಾದ ಕೃಷ್ಣಪುತ್ರರ ಮೃತ್ಯು ಸ್ಥಳಗಳನ್ನು ನಿರ್ದಿಷ್ಟವಾಗಿ ಹೇಳಲಾಗಿದೆ. ಇವುಗಳಲ್ಲಿ ಬಾಭುಳಗಾಂವ್ ಎಂಬುದು ‘ಬಾಳೆಘಾಟಿ’ ಹಾಗೂ ನಿಂಬಾ ಎಂಬುದು ‘ಭಟ್ಟಾನ ನಿಂಬಾ’ ಆಗಿದ್ದಿರಬೇಕೆಂದೂ ಉಲ್ಲೇಖವಿರುವುದು. ‘ಭಟ್ಟಾನ ನಿಂಬಾ’ ಎಂದರೆ, ನಾಗದೇವಾಚಾರ್ಯನ ನಿಮಬಾ ಎಂಬುದು ಈಗ ನಿಶ್ಚಿತವಾಗಿರುವಂಥ ಸಂಗತಿ. ಡೋಮೆ ಗ್ರಾಮವು ಚಕ್ರಧರಸ್ವಾಮಿಯ ನಿವಾಸಸ್ಥಾನವಾಗಿತ್ತೆಂಬುದು ಮಹಾನುಭಾವ ಸಂಪ್ರದಾಯದಲ್ಲಿ ಖಚಿತವಾಗಿ ಹೇಳಲ್ಪಟ್ಟಿರುವ ವಿಚಾರ. ಈ ಸ್ಥಾನದ ಸ್ವಾಮಿಯವರ ತ್ರಿಕಾಲ ಪೂಜೆಯ ವರ್ಣನೆಯೇ ಬಾ ಈ ದೇವ ಭಾಸ ಎಂಬುವವರ ‘ಪೂಜಾವಸರಾ’ ಕೃತಿಯಲ್ಲಿನ ವಿಷಯ. ಅಂದರೆ ‘ಢಗೋ – ಮೇಘೋ ಮಾರ್ಗ‘ದ ನಾಲ್ಕು ಯಾತ್ರಾ ಸ್ಥಳಗಳ ಪೈಕಿ ಡೋಮೆ ಗ್ರಾಮವು ಚಕ್ರಧರ ನಿವಾಸದಿಂದಲೂ ಹಾಗೂ ನಿಂಬಾವು ನಾಗದೇವಾಚಾರ್ಯನ ನಿವಾಸದಿಂದಲೂ ಮಹಾನುಭಾವ ಸಂಪ್ರದಾಯದಲ್ಲಿ ಪಾವಿತ್ರ‍್ಯತೆಯನ್ನು ಪಡೆದುಕೊಂಡಿವೆ. ಮಹಾನುಭಾವ ಸಂಪ್ರದಾಯ ಮತ್ತು ಮಾತಂಗೀಪಟ್ಟಗಳು ಒಂದೇ ಹೌದು ಎಂಬ ಹಳೆಯ ಧೋರಣೆಗೆ ಈ ವಸ್ತುಸ್ಥಿತಿಯಿಂದ – ಮಹಾನುಭಾವ ಸಂಪ್ರದಾಯ ಮತ್ತು ಢಗೋ ಮೇಘೋ ಮಾರ್ಗಗಳವರ ಕ್ಷೇತ್ರ ಸ್ಥಾನಗಳು ಒಂದೇ ಆಗಿರುವುದು – ಯಾವುದೇ ಪುಷ್ಟಿಯೂ ದೊರೆಯುವುದಿಲ್ಲ ಎಂಬ ಸ್ವಾಭಾವಿಕ ಶಂಕೆಯು ಸಹಜವಾಗಿಯೇ ಯಾರ ಮನಸ್ಸಿನಲ್ಲಾದರೂ ಉದ್ಭವಿಸುವಂತಹದ್ದು!

ಈ ಶಂಕೆಯ ಪ್ರೇರಣೆಯಿಂದ ನಾನು ಜಾಠವಡಾ, ಬಾಭುಳಗಾಂವ, ಡೋಮೆ ಗ್ರಾಮ ಮತ್ತು ನಿಂಬಾಗಳಲ್ಲಿನ ಸ್ಥಳ ಪರಿಚಿತರಲ್ಲಿ ಅತ್ಯಂತ ಪ್ರಾಥಮಿಕ ನೆಲೆಯಿಂದ ಚರ್ಚಿಸಿದ್ದೇನೆ. ಈ ಮೂಲಕ ತಿಳಿದುಬಂದುದೇನೆಂದರೆ, ಬಾಭುಳಗಾಂವ್ ಮತ್ತು ನಿಂಬಾಗಳೆರಡರಲ್ಲೂ ಇಂದು ಢಗೋ ಮೇಘೋ ಮಾರ್ಗಗಳ ಪೂಜಾಸ್ಥಾನಗಳಿದ್ದ ಬಗ್ಗೆ ಯಾವ ಕುರುಹೂ ಇಲ್ಲ.[1] ಆದರೆ ಡೋಮೆ ಗ್ರಾಮ ಮತ್ತು ಜಾಠವಡಾ (ಜಾಠೋಡಾ) ಈ ಎರಡೂ ಊರುಗಳಲ್ಲಿ ಇವು ಇಂದಿಗೂ ಸ್ವತಂತ್ರ ಅಸ್ತಿತ್ವ ಪಡೆದಿವೆ.

ಡೋಮೆ ಗ್ರಾಮವು ಮಹಾನುಭಾವ ಸಂಪ್ರದಾಯದಂತೆ ಢಗೋ ಮೇಘೋ ಮಾರ್ಗ ಕ್ಷೇತ್ರವೂ ಆಗಿರುವುದು. ಹಾಗಾಗಿ ಅದನ್ನು ಪ್ರತ್ಯಕ್ಷವಾಗಿ ನೋಡುವ ಉದ್ದೇಶದಿಂದ ನಾನು ೧೫ನೆಯ ಜನವರಿ ೧೯೭೨ ರಂದು ಅಲ್ಲಿಗೆ ಭೇಟಿ ಕೊಟ್ಟಿದ್ದೆ. ಇಂದು ಆ ಊರಿಗಿರುವ ಹೆಸರು ಕಮಾಲಪುರ (ಜಿಲ್ಲಾ, ನಗರ). ಶ್ರೀರಾಮಪುರದಿಂದ ೧೩ ಮೈಲು ಅಂತರದಲ್ಲಿರುವ ಅಲ್ಲಿ ಮಹಾನುಭಾವ ಪಂಥಕ್ಕೆ ಸೇರಿದ ಸ್ವತಂತ್ರ ಮಂದಿರವೊಂದಿದ್ದು, ಅದಕ್ಕೂ ಢಗೋ ಮೇಘೋ ಸ್ಥಾನಕ್ಕೂ ಯಾವ ಸಂಬಂಧವೂ ಇಲ್ಲ. ಢಗೋ ಮೇಘೋ ನೆಲೆಯು ಊರಿನ ಒಂದು ಪಕ್ಕದಲ್ಲಿದ್ದು, ರಸ್ತೆಗಿಂತ ಸ್ವಲ್ಪ ಎತ್ತರದಲ್ಲಿ ಕಟ್ಟಲಾಗಿದೆ. ನಾಲ್ಕೂ ಬದಿಗಳಲ್ಲಿ ಕಲ್ಲಿನಿಂದ ಕಟ್ಟಿಲ್ಪಟ್ಟಿರುವಂತಹ ಇದರ ಪ್ರಾಕಾರವು ೧೧೨ ಅಡಿ ಉದ್ದ ಹಾಗೂ ೧೮ ಅಡಿ ಅಗಲವುಳ್ಳುದಾಗಿದೆ. ಪ್ರಾಕಾರದ ಪುರ್ವಕ್ಕೆ ಮುಖ್ಯ ಬಾಗಿಲಿದ್ದು, ದಕ್ಷಿಣಕ್ಕೆ ಮತ್ತೊಂದು ಚಿಕ್ಕ ಬಾಗಿಲಿದೆ. ಮುಖ್ಯದ್ವಾರದ ಎದುರು ಅಂದರೆ ರಸ್ತೆಯಲ್ಲಿ ಏಳು ಅಡಿ ಎತ್ತರವುಳ್ಳ ಒಂದು ಕಟ್ಟೆಯಿದ್ದು, ಅದರ ಮೇಲೆ ನಂದಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಢಗೋ ಮೇಘೋ ಪಂಥದವರು ಅದನ್ನು ಗೌರವಯುತವಾಗಿ ಕರೆಯುತ್ತಿರುವ ಹೆಸರು ಸಾಹೇಬಾ.

ಪೂರ್ವದ ಬಾಗಿಲಿನ ಮೆಟ್ಟಿಲುಗಳನ್ನು ಹತ್ತಿ ಒಳಗೆ ಹೋದರೆ ಪ್ರಾಕಾರದ ಹಿಂದೆ ಉತ್ತರ – ದಕ್ಷಿಣವಾಗಿ ೩೫ ಅಡಿ ಉದ್ದ, ೧೯ ಅಡಿ ಅಗಲ ಹಾಗೂ ೩ ೧/೪ ಅಡಿ ಎತ್ತರವಾಗಿರುವ ದೊಡ್ಡ ಕಟ್ಟೆ. ಈ ಕಟ್ಟೆಯ ಮೇಲೆ ದಕ್ಷಿಣ – ಉತ್ತರ ಭಾಗಕ್ಕೆ ಕ್ರಮವಾಗಿ ಚಿಕ್ಕ ಚಿಕ್ಕ ಕಟ್ಟೆಗಳಿವೆ. ಈ ಐದು ಸ್ಥಾನಗಳು ಢಗೋ ಮೇಘೋ ಆದಿಯಾದ ಐವರು ಉಪಾಸಕರುಗಳವು. ಆ ಊರಿನವರಷ್ಟೆ ಅಲ್ಲ ಪರ ಊರಿನ ಮಹಾರ್ (ಹೊಲೆಯ) ಜನಾಂಗದವರೂ ಇದರ ಉಪಾಸಕರಾಗಿದ್ದಾರೆ. ಗೋಪಾಲ ಪಿರಾಜಿ ಅಂಭೋರೆ ಎಂಬ ಮಹಾರ್ ಜನಾಂಗದವ ಇಲ್ಲಿ ಪೂಜಾರಿಯಾಗಿದ್ದ, ಅವನ ಭೇಟಿಯಾಗಲಿಲ್ಲ ನನಗೆ. ಆದರೆ ವಿಶ್ವನಾಥ ಎಂಬ ಮಾಂಗ್‌ ಜಾತಿಯವನೊಬ್ಬ ಈ ತಾಣ ಹಾಗೂ ಡೋಮೆ ಗ್ರಾಮದ ಢಗೋ ಮೇಘೋ ಪಂಥೀಯ ಅನ್ಯ ಸ್ಥಳಗಳ ಬಗ್ಗೆ ಮಾಹಿತಿಕೊಟ್ಟ. ಅವನು ಹೇಳಿದಂತೆ ಮಾಂಗ್‌ ಜನಾಂಗದವರೂ ಸಹ ಈ ಸ್ಥಾನವನ್ನು ಮಾನ್ಯ ಮಾಡಿರುವರು. ಕಮಾಲಪುರ ಗ್ರಾಮ ಪಂಚಾಯಿತಿಯ ದಫ್ತರದಲ್ಲಿ ಉಲ್ಲೇಖಿಸಿರುವಂತೆ ಇದು ‘ಢಗೋ ಮೇಘೋ’ ದೇವಾಲಯ. ಜೊತೆಗೆ ‘ಅಸ್ಪೃಶ್ಯ ಸಮಾಜದವರ ಸಾರ್ವಜನಿಕರ ಮಂದಿರ’ ಎಂಬುದಾಗಿಯೂ ಬಣ್ಣಿಸಲಾಗಿದೆ.

ಈ ಊರಿನಲ್ಲಿ ಈ ಪಂಥದವರ ಇನ್ನೂ ಅನೇಕ ಸ್ಥಾನಗಳಿವೆ. ಢಗೋ ಮೇಘೋದ ಮುಕ್ತ ಮಂದಿರಕ್ಕೆ ಹತ್ತಿರದಲ್ಲಿಯೇ ಸಿದ್ಧನಾಥ ಅಥವಾ ಸೋಮನಾಥ ಎಂಬುವವರ ಸಮಾಧಿಯುಂಟು. ಅಲ್ಲಿಂದ ಸ್ವಲ್ಪ ದೂರದಲ್ಲಿಯೇ ‘ಬಿರದಾವನ’ ಅಥವಾ ‘ಕೋರಿಭೂಮಿ’ (ಕನ್ಯಾಭೂಮಿ) ಎಂಬೊಂದು ನೆಲೆಯಿದೆ. ಹಾಗೆಯೇ ಗೋದಾವರಿ ನದಿಯ ತೀರದಲ್ಲಿರುವ ಮಡುವಿನ (ಡೋಹ) ಹೆಸರು ‘ಜಮನ ಡೋಹ’. ಈ ಪಂಥದವರಲ್ಲಿ ಅದರಲ್ಲಿನ ಕಲ್ಲನ್ನು ತಂದು ದೇವರೆಂದು ಪೂಜಿಸುವ ಸಂಪ್ರದಾಯವಿದೆ. ಡೋಮೆ ಗ್ರಾಮದಲ್ಲಿ ವೈಶಾಖಶುದ್ಧ ೯,೧೦,೧೧ನೇ ದಿನಗಳಂದು ನೆರೆಯುವುದು ಢಗೋ ಮೇಘೋ ಪಂಥದವರ ಜಾತ್ರೆ. ಒಂದು ಕಾಲಕ್ಕೆ ಇಲ್ಲಿಗೆ ವರ‍್ಹಾಡ ಪ್ರದೇಶದಿಂದ ಇನ್ನೂರರಿಂದ ಇನ್ನೂರೈವತ್ತು ಮಂದಿ ಹೊಲೆಯ ಭಕ್ತರು ಬರುತ್ತಿದ್ದರು. ಆದರೆ ಈಗ್ಗೆ ಮಹಾರರು ಬಹುದೊಡ್ಡ ಪ್ರಮಾಣದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರವಾಗಿರುವುದರಿಂದ ಕೇವಲ ಇಪ್ಪತ್ತು – ಇಪ್ಪತ್ತೈದಕ್ಕೆ ಇಳಿದಿದೆ ಬರುವ ಯಾತ್ರಿಕರ ಸಂಖ್ಯೆ. ಜಾತ್ರೆಯಲ್ಲಿ ಹೋಮ ಮಾಡುವುದರೊಂದಿಗೆ ಕುರಿಗಳನ್ನು ಬಲಿಕೊಡಲಾಗುವುದು. ಸೋಮನಾಥ ಅಥವಾ ಸೋಮಾಜಿ ಎಂಬುವವನ ಉಲ್ಲೇಖ ಈ ಪಂಥದವರು ಹಾಡುವ ಗೀತೆಗಳಲ್ಲಿ ಮತ್ತೆಮತ್ತೆ ಬರುತ್ತದೆ. ಜಮನ ಡೋಹ್ಕೆ ಸಂಬಂಧಿಸಿದಂತೆ ಈ ಸೋಮಾಜಿಯ ಲೀಲೆ ಇರುವುದನ್ನು ನನಗೆ ವಿವರಿಸಿದಾತ ವಿಶ್ವನಾಥನೆಂಬ ಒಬ್ಬ ಮಾಂಗ್ ವ್ಯಕ್ತಿ.

‘ಗಜಕೇಸರಿ‘ಯೇ ಮೊದಲಾದ ಮಹಾನುಭಾವೀಯ ಗ್ರಂಥಗಳ ಉಲ್ಲೇಖಾನುಸಾರ ಜಾಠವಡಾ ದತ್ತೋನ ಮೃತ್ಯುಸ್ಥಾನ. ಇದು ಔರಂಗಾಬಾದ್‌ ಜಿಲ್ಲೆಯಲ್ಲಿನ ಹರಸೂಲ್‌ಗೆ ಹತ್ತಿರದಲ್ಲಿದ್ದು, ಔರಂಗಾಬಾದ್ – ದಿಲ್ಲಿ ದ್ವಾರದ ವಾಯುವ್ಯಕ್ಕೆ ಸುಮಾರು ಆರುಮೈಲು ದೂರಕ್ಕಿದೆ. ೧೯೭೨ರ ಜನವರಿಯಲ್ಲಿ ನಾನು ಈ ಸ್ಥಳಕ್ಕೆ ಹೋಗಿಬಂದೆ. ಮಹಾನುಭಾವೀಯ ಗ್ರಂಥಗಳಲ್ಲಿನ ಪೂರ್ವನಿರ್ದಿಷ್ಟ ಉಲ್ಲೇಖಗಳ ಸಾತತ್ಯವು ಅನುಭವಕ್ಕೆ ಬಂದದ್ದು ಪೂರ್ಣತಃ ಅಲ್ಲಿಯೇ. ಈ ಜಾಗದಲ್ಲಿ ಅಂದರೆ ಊರ ಹೊರಗಿರುವ ಬೆಟ್ಟದ ಬುಡದಲ್ಲಿ ‘ಪಾಣದೇವ’ ಹಾಗೆಯೇ ‘ಢಗೋ ಮೇಘೋ’ ಎಂಬ ಹೆಸರಿನಲ್ಲಿ ಗುರುತಿಸಲ್ಪಡುವ ಒಂದು ನೆಲೆ ಈಗಲೂ ಇದೆ. ಅಲ್ಲಿ ಒಂದು ದೊಡ್ಡ ಅಡಿ (೧೫x೧೫) ಕಟ್ಟೆಯಿದ್ದು, ಅದರ ಮೇಲೆಯೂ ಒಂದು ಚಿಕ್ಕ ಕಲ್ಲಿನ ಕಟ್ಟೆಯುಂಟು ಅಡಿ (೨೧೧x೨೧೧). ಈ ಸ್ಥಾನದ ಉಪಾಸಕರು ಮಹಾರರಾಗಿದ್ದು, ಕಿಸನ್ ಕೊಂಡಾಜೀ ವಾಘಮಾರೆ ಎಂಬ ವರ್ಹಾಡದ ಮಹಾರನೊಬ್ಬ ಅದಕ್ಕೆ ಪೂಜಾರಿ. ವೈಶಾಖ ಶುದ್ಧ ೯, ಜಾಠೋಡಾದಲ್ಲಿನ ‘ಪಾಣದೇವ’ ಅಥವಾ ‘ಢಗೋ ಮೇಘೋ‘ದ ಜಾತ್ರೆಯ ದಿನ. ಊರಿನ ಬಯಲಿನಲ್ಲಿ ಇರುವ ಪಾಣದೇವನ ಇನಾಮಿ ಭೂಮಿಗೆ ಇರುವ ಹೆಸರು ‘ಮೇಘವನ’.

ಜಾಠೋಡಾದ ಶೋಧ ಯಾತ್ರೆಯಲ್ಲಿ ನನ್ನೊಂದಿಗೆ ಡೆಕ್ಕನ್ ಕಾಲೇಜಿನ ಸಂಶೋಧಕ ಮಿತ್ರರೊಬ್ಬರು ಹಾಗೂ ಕೆಲವು ಮಹಾನುಭಾವ ಸಂಣ್ಯಾಸಿಗಳು ಸೇರಿಕೊಂಡಿದ್ದರು.[2] ಮಹಾನುಭಾವ ಸಂನ್ಯಾಸಿಗಳನ್ನು ನೋಡಿದ ಕಿಸನ್ ಕೊಂಡಾಜೀ ವಾಘಮಾರೆಯು ತನ್ನ ಅಸಂತುಷ್ಟತೆಯನ್ನು ನೇರವಾಗಿಯೇ ವ್ಯಕ್ತಪಡಿಸಿದ. ಎಂತಲೇ ಮಹಾನುಭಾವರಿಗೆ ಸಂಬಂಧಿಸಿದಂತೆ ತೀವ್ರವಾದ ವಿರೋಧಗಳೂ ಅನೇಕ ಬಾರಿ ವ್ಯಕ್ತವಾದವು ಅವನಲ್ಲಿ. ಅಲ್ಲದೆ ಸಾರಾಯಿ ಸೇವಿಸಿದ್ದರಿಂದ ನನ್ನ ಯಾವ ಪ್ರಶ್ನೆಗೂ ಸರಳವಾಗಿ ಉತ್ತರಿಸುತ್ತಲೇ ಇರಲಿಲ್ಲ ಆತ. ಮಾತ್ರವಲ್ಲ ಮಧ್ಯೆಮಧ್ಯೆ ನನ್ನನ್ನೂ ಸಹ ನಿಂದಿಸುತ್ತಿದ್ದನು. ಆದರೂ ನಾನು ಮಾತ್ರ ಅವನನ್ನು ಪ್ರಸನ್ನ ಗೊಳಿಸುವ ಪ್ರಯತ್ನ ಮಾಡುತ್ತಲೇ ಕಲೆ ಹಾಕುತ್ತಿದ್ದೆ ಅವನು ಹೇಳುವ ಮಾಹಿತಿಗಳನ್ನೆಲ್ಲ. ಒಮ್ಮೆ ಮಾತ್ರ ಆತ ತೀವ್ರ ಕೋಪದಲ್ಲಿ ಹೀಗೆ ಹೇಳಿದ: “ನಮ್ಮ ದೇವರ – ಧರಣಿ ಮತ್ತು ಪಾಣದೇವ – ಗುಹ್ಯವು ನಿಮ್ಮ ದೇವರಂತೆ ಕೇವಲ ಕೃತಿಗಳಲ್ಲಷ್ಟೇ ಇಲ್ಲ. ಅದು ನನ್ನ ತಾಯಿ ಮುಕುಳಿ (ಯೋನಿ)ಯಲ್ಲೂ | ನನ್ನ ತಂದೆಯ ಅಗ್ರಭಾಗ (ಶಿಶ್ನ)ದಲ್ಲಿಯೂ ಇರುವುದಾಗಿದೆ!”

ಅವನ ಮಾತನ್ನು ಕೇಳಿದ ನನ್ನೊಡನಿದ್ದ ಸಂಶೋಧಕ ಮಿತ್ರ ಹಾಗೂ ಮಹಾನುಭಾವ ಸಂನ್ಯಾಸಿಗಳು ಬೇಸರಗೊಂಡರು; ‘ಅವನ ಸಹವಾಸ ಬಿಟ್ಟು ನಾವು ಇನ್ನು ಔರಂಗಾಬಾದಿನ ದಾರಿ ಹಿಡಿಯೋಣ’ ಎಂದು ಒತ್ತಾಯಿಸಲು ಆರಂಭಿಸಿದರು. ಆದರೆ ನನಗೆ ಮಾತ್ರ ಅವನ ಈ ವರ್ತನೆ ಸಂತೋಷವನ್ನೆ ತಂದಿತ್ತು. ಕಾರಣ ಆ ಮೂಲಕವಾಗಿ ಆತ ಮಾತಂಗೀಪಟ್ಟ ಅಥವಾ ಢಗೋ ಮೇಘೋ ಮಾರ್ಗದ ಪ್ರಾಣಭೂತ ತತ್ತ್ವಗಳನ್ನು ಅತ್ಯಂತ ಸಹಜವಾಗಿಯೇ ಹೊರ ಹಾಕಿದ್ದ. ಧರಣಿ – ಜಲದೇವತೆಗಳನ್ನು ಭಜಿಸುವ ಈ ಸಂಪ್ರದಾಯವು ಸ್ತ್ರೀ – ಪುರುಷ ತತ್ತ್ವಗಳಿಗೆ ಅತ್ಯಂದ ಆದಿಮವಾದುದು. ಆತನ ಆ ಉದ್ಗಾರದಲ್ಲಿ ಪ್ರಕಟಗೊಂಡಿತ್ತು ಈ ವಿಚಾರ.

ಕಿಸನ ಕೊಂಡಾಜೀಯು ನನಗೆ ಅನೇಕ ಹಾಡುಗಳನ್ನು ಪೂರ್ಣಾಪೂರ್ಣ ರೂಪಗಳಲ್ಲಿ ಹಾಡಿ ತೋರಿಸಿದ; ‘ಢಗೋ ಮೇಘೋ’ ಸಂಪ್ರದಾಯವಿರುವ ಅನೇಕ ತಾಣಗಳ ಮಾಹಿತಿಯನ್ನು ಸಹ ಆತ ಒದಗಿಸಿಕೊಟ್ಟ. ಧರಣಿ ಮತ್ತು ಪಾಣದೇವರ ಮಹಿಮೆಗಳನ್ನು ಆತ ಹಾಡುತ್ತಿದ್ದುದು ಹೀಗೆ –

ಕೇಳು ಪಂಡಿತಾ, ಹೇಳುವೆ ನಿನಗೆ ತಾಯಿ ತಂದೆಯರ ಕೀರ್ತಿಯನು |
ಈ ಜಗವನ್ನು ಪಾಲಿಸಿದ ಮಾತೆ ಆರೆಂಬುದನು ||
ಈ ಜಗದ ಪಾಲನೆ ಮಾಡಿದವಳೀ ತಾಯಿಯೇ |
ಸರ್ವರಿಗೂ ಈವಳು ಭೋಜನವ ತನ್ನಿಚ್ಚೆಯನುಸಾರ ||”

‘ಖರೇ ಸಾಂಗ್’ (ನಿಜ ಹೇಳು) ಎಂಬ ಉದ್ಘೋಷವು ಮತ್ತೆ ಮತ್ತೆ ಬರುತ್ತಿತ್ತು ಅವನ ಮಾತುಗಳಲ್ಲಿ –

ಸತ್ಯವನು ನುಡಿ ಸತ್ಯದೊಳು ನಡೆ ಶೋಧಿಸು ಅಂತರಂಗವನು |
ಸತ್ ನಾಮಕ್ಕೆ ಹಚ್ಚಿರಿ ಒರೆಗಲ್ಲು, ಇದಹುದು ಜೀವನ ಸೂತ್ರ ||
ಜಾಠೋಡ ಗ್ರಾಮವನು ದೂರದೊಳಿದ್ದು ಬಣ್ಣಿಸಲೆನಿತು ಎನ್ನ ವಾಣಿಯಲಿ |
ಸೋಮವಂಶವು ಬರುವುದು ವರ್ಹಾಡಾ ಜಾತ್ರೆಗೆ ನಡೆದು ||
ಅರೇ ಢಗೋಜಿ ಮೇಘೋಜಿಯರಹರು ದೇವರು ಪೀರರು ಮಹಾರರಿಗೆ |
ಎತ್ತಿದನೀ ಅವತಾರವನು ದೇವನು ಪ್ರಸನ್ನದಿಂದಲೆ ಭಕ್ತ ಜನರಿಗಾಗಿ ||”

ಕಿಸನ ಕೊಂಡಾಜೀಯ ಬಾಯಿಂದ ಬಂದ ಹಾಡುಗಳಲ್ಲಿ ಅನೇಕ ಸಾಂಪ್ರದಾಯಿಕ ಕಥೆಗಾಥೆಗಳು ಪ್ರಕಟವಾದವು. ಆದರೆ ಯಾವುದೇ ಹಾಡಾಗಲಿ ಅತ್ಯಂತ ಸಹಜವೆಂಬಂತೆ ಆತ ಪೂರ್ಣವಾಗಿ ಹೇಳುತ್ತಿರಲಿಲ್ಲ. ಆದರಿಂದ ಈ ಅಲ್ಪಸ್ವಲ್ಪ ಕಥನಗಳಿಗೆ ಅನ್ವಯಾರ್ಥ ನೀಡುವುದು ಸಾಧ್ಯವಿಲ್ಲ.

ಡೋಮೆ ಗ್ರಾಮ ಹಾಗೂ ಜಾಠೋಡಾಗಳಲ್ಲಿನ ಶೋಧ ಯಾತ್ರೆಯಲ್ಲಿ ನನಗೆ ಇನ್ನೂ ಅನೇಕ ಢಗೋ ಮೇಘೋ ಸಂಪ್ರದಾಯದ ನೆಲೆಗಳು ಪತ್ತೆಯಾದವು. ಕೋಕಣ ಖೇಡಾ ಅಥವಾ ಕೋಕಣ ಗಾಂವ (ತಾ. ಸಂಗಮನೇರ, ಜಿ.ನಗರ), ಪರತೂರ (ಔರಾಂಗಾಬಾದ್‌ಗೆ ಸಮೀಪ), ಮೇಹೂಣಬಾರಾ (ತಾ. ಕನ್ನಡ, ಜಿ. ಔರಂಗಾಬಾದ್), ಖುರ್ದ ಅಕೋಲಾ, ಸೋನ ಗಾಂವ, (ತಾ. ಜಳಗಾಂವ್ ಜಾಮೋರ, ಜಿ. ಬುಲಡಾಣಾ), – ಇಲ್ಲಿನ ಪಿಂಚಳಡೋಲ ಕೆರೆ, ದೇಶ ಮೂಖರ ಅಂಬಾ (ತಾ. ಪಾಥರೀ, ಜಿ. ಪರಭಣಿ), ಸಾವಂಗಾ (ತಾ. ಚಾಂದೂರ ರೈಲ್ವೆ, ಜಿ. ಅಮರಾವತಿ) ಇತ್ಯಾದಿ ಹಲವೆಡೆಗಳಲ್ಲಿ ಢಗೋ ಮೆಘೋ ದೇವರುಗಳ ಬಗ್ಗೆ ಭಕ್ತಿ ಗೀತೆಗಳನ್ನು ಹಾಡುತ್ತಾರೆ. ಜಾತ್ರೆಯ ಸಮಯದಲ್ಲಿ ನಡೆಯುವ ಭಜನಾ ಕಾರ್ಯಕ್ರಮಗಳಲ್ಲಿ ನಾನಾ ಬಗೆಯ ಜನಪದ ಗೀತೆಗಳ ಸರಣಿಯನ್ನು ಹಾಡುವುದುಂಟು. ಈ ಗೀತೆಗಳಲ್ಲಿ ಢಗೋ ಮೇಘೋ ಸಂಪ್ರದಾಯದ ಸೃಷ್ಟಿ, ಉತ್ಪತ್ತಿ ಸಂಬಂಧವಾದ ತತ್ತ್ವಜ್ಞಾನ ಮತ್ತು ಆ ಸಂಪ್ರದಾಯದಲ್ಲಿನ ಸಿದ್ಧರುಗಳು ನಡೆಸಿದ ಚಮತ್ಕಾರಕ ಕಥನಗಳನ್ನು ಬಣ್ಣಿಸುತ್ತಾರೆ. ಖುರ್ದ ಅಕೋಲಾ ಎಂಬಲ್ಲಿನ ದೇವಕಿರಾಮ ಸಖಾರಾಮ ಸಾಳವೆ ಎಂಬಾತ ಢಗೋ ಮೆಘೋ ಸಂಪ್ರದಾಯದ ಪ್ರಸಿದ್ಧ ಅನುಯಾಯಿಯಾಗಿದ್ದು ಅವನ ಬಳಿ ಬಹಳಷ್ಟು ಗೀತ ಸರಣಿಗಳೇ ಇವೆ.

ಲೇಖನದ ಆರಂಭದಲ್ಲಿ ನಾವು ಶ್ರೀಕಾರವನ್ನು ಬಳಸಿ ಹೇಗೆ ‘ಶ್ರೀರಾಮ ಸಮರ್ಥ’ ಎಂಬುದಾಗಿ ಬರೆಯುತ್ತೇವೆಯೋ ಹಾಗೆಯೇ ಈ ಪಂಥಕ್ಕೆ ಸೇರಿದ ಜನರು ‘ಮೇಘಶ್ಯಾಮ ಸಮರ್ಥ’ (ಸಮರ್ಥ = ಸಶಕ್ತ) ಎಂದು ಹೇಳುತ್ತಾರೆ. ಇದು ಅವರ ಪಾಣದೇವ ಇಲ್ಲವೆ ಢಗೋ ಮೇಘೋದ ಹೆಸರಾಗಿದೆ ಎಂಬುದನ್ನು ಮತ್ತೆ ಸ್ಪಷ್ಟಪಡಿಸುವ ಅಗತ್ಯವಿಲ್ಲ. ಅವರು ಹಾಡುವ ಗೀತೆಯ ಒಂದು ನಮೂನೆಯನ್ನು ಮೂಲ ಭಾಷೆಯಲ್ಲಿಯೇ ಯಾವ ಬದಲಾವಣೆಯೂ ಇಲ್ಲದಂತೆ ಸಾದರಪಡಿಸಿದ್ದೇನೆ ಮುಂದೆ. ಇದರಿಂದ ಅವರ ಗೀತ ಸರಣಿ ಹಾಗೂ ಗೀತೆಯಲ್ಲಿನ ವಿಚಾರಗಳ ಸ್ವರೂಪದ ಬಗ್ಗೆ ನಮಗೆ ಸ್ಥೂಲ ಕಲ್ಪನೆಯು ಬರುತ್ತದೆ:

||ಮೇಘಶ್ಯಾಮ ಸಮರ್ಥ ||
ಒಬ್ಬನಿಗೆ ಹೇಳುವರು ಒಬ್ಬನೆ ನಿರಂಜನ ಬ್ರಹ್ಮನಹನು ಬಲಶಾಲಿ |
ಒಂದೇ ನಾಮ, ಒಂದೇ ಶಕ್ತಿ ಅರಿವುದು ತಿಳಿಯಿರಿದನು ||
ಎರಡು ಎಂದರೆ ಎರಡಾಯಿತು ಶಿವಶಕ್ತಿಗಳೆರಡು |
ಇಬ್ಬರೊಳಗೆ ಮತ್ತೆ ದ್ವೈತವಾದರೂ ಎಲ್ಲುಂಟು ||
ಮೂರು ಎಂದರೆ ಮೂರಾಯಿತು ತಿರುಗುಣಿಯ ಕೂನದಂದದಿ |
ಬ್ರಹ್ಮವಿಷ್ಣುಮಹೇಶ್ವರರು ಮೂರೆಂಬುದನು ತಿಳಿದು ||

ನಾಲ್ಕು ಎಂದರೆ ನಾಲ್ಕು ವೇದಂಗಳ ಮಾಡಿದರು ಗಾಯನ |
ಐದು ಎಂದರೆ ಐದು ತತ್ತ್ವಂಗಳವು ದೇಹಕಾರಣ ||
ಐದರಿಂದ ಇಪ್ಪತ್ತೈದು ಪಂಚಭೂತಗಳಿಂದ |
ಆರು ಎಂದರೆ ಆರು ದರುಶನ ಲಿಂಗಗಳ ಗುರುತು ||
ಆರು ಶಾಸ್ತ್ರಂಗಳು ಅಷ್ಟಾದಶ ಪುರಾಣಂಗಳಾದುವೆಲ್ಲಿಂದ |
ಏಳು ಎಂದರೆ ಸತ್ತ ಧಾರುಗಳು ಪಿಂಡಗಳ ದೇವನು ಮಾಡಿದ ||
ಏಳು ವಾರಂಗಳ ಸರಣಿ ಬಂದುದೆಲ್ಲಿಂದ ಹೇಳಿ |
ಎಂಟು ಎಂದರೆ ಅಷ್ಟಪಕಳೆಗಳು ಉರಿದುವು ಸಕಲ |
ಎಂಟರಿಂದ ಎಂಟು ಭೈರವ ಕೇಳುವುದು ನೀವಿದನು ||
ಎಂಬತ್ತು ಎಂದರೆ ಒಂಬತ್ತು ಚೌಕಿಗಳು ಬಾಗಿಲುಗಳ ಗುರುತು |
ಜೇಷ್ಠ ಋಷಿಗಳು ಮಾತ್ರ ರೂಢಿಗೊಳುವುದು ಇದನರಿತು ||
ಹತ್ತು ಎಂದರೆ ಹತ್ತನೆಯ ದ್ವಾರ ಸದ್ಗುರುವಿನ ಕೂನಾ |
ಇಂತಹ ಗುರುವಿನ ಪೂರ್ಣ ಅನುಭವ ನಿಮಗೆ ತಿಳಿದಿಲ್ಲವಿನ್ನು ||”

ಇದು ಚರ್ಮವಾದ್ಯದೊಡನೆ ಹಾಡುವ ಗೀತ ಶ್ರೇಣಿಗೆ ಸೇರಿದ್ದು. ಇದರಲ್ಲಿನ ಕ್ರಮಸಂಖ್ಯೆಗಳ ಬಳಕೆಯಲ್ಲಿ ಆ ಮೂಲಕ ಯಾವುದೋ ‘ಜ್ಞಾನ’ ಅಥವಾ ‘ತಿಳಿವಳಿಕೆ’ ಯನ್ನು ಹೇಳುವ ಪ್ರಯತ್ನವಿದೆ. ಜ್ಞಾನ ಪ್ರಕಟೀಕರಣದ ಈ ಪಾರ್ಶ್ವಭೂಮಿಯ ಮೂಲಕ ಶ್ರೋತೃವನ್ನು ಚಕಿತಗೊಳಿಸಿ ಪ್ರಶ್ನೆಗಳಲ್ಲಿ ಸಿಲುಕಿಸುವ ಪ್ರಯತ್ನದಂತಹ ಸರ್ವವಿಶೇಷವು ಈ ಎಲ್ಲಾ ಗೀತಕಾರರನ್ನು ಕಲಗಿ ತುರಾಯಿಗಳವರ ಹತ್ತಿರಕ್ಕೆ ಕೊಂಡೊಯ್ಯುವಂತಿದೆ. ಕಲಗಿ ತುರಾಯಿ (ಶೃಂಗಾರ ಲಾವಣಿಗಳು) ಗೀತ ಪರಂಪರೆಯ ಸಂದರ್ಭದಲ್ಲಿ ಈ ಲೋಕ ಧರ್ಮೀಯ ಗೀತಗಳನ್ನು ಅಭ್ಯಸಿಸುವುದೂ ಅತ್ಯಗತ್ಯ.

‘ಪಾಣದೇವಾಚೀ ಆರತೀ’ (ಪಾಣದೇವರ ಭಕ್ತಿಗೀತಗಳು) ಎಂಬ ಶೀರ್ಷಿಕೆಯಲ್ಲಿ ಬರುವ ಒಂದು ಗೀತೆಯಲ್ಲಿ ಹೀಗೆ ವ್ಯಕ್ತವಾಗಿರುವುದು ಡೋಮೆ ಗ್ರಾಮದ ಮಹಿಮೆ –

ಊರು ಡೋಂಬೆಗಿರಿ ಪವಿತ್ರ ತಾಣ ಪುಣ್ಯ ನೆಲೆ |
ಬಾಪ ಸಾಹೇಬ ಪ್ರಭು ಮೆರೆದಿಹನು, ಹಿಡಿವುದವನ ಭಾವದಿಂದಲಿ ಮನದೊಳು || ||
ಅಸಂಬದ್ಧವು ದೇವುಳಗಾಂವ, ವಕ್ರವಹುದು ಡೋಂಬೆ ಸರ |
ಹರಿದಿಹಳು ಎರಡು ಬದಿಗಳಲಿ ಗಂಗೆಯು ನಿರಂತರ || ||
ಶಿವನೇ ಸೇವೆಗೆಯ್ದಿಹನು ಗುರುಗಳಿಗೆ, ಕೇಳಿರಿ ಡೋಂಬೆ ಸರದ ಮಹಿಮೆಯನು |
ಡೋಂಬೆ ಸರದ ಮಹಿಮೆಯ ಬಣ್ಣಿಸುತ, ಮೈಮರೆವುದು ದೇವ ಧರ್ಮದೊಳಗೆ || ||”

ಇಲ್ಲಿ ಭಕ್ತರು ಪಾಣದೇವನನ್ನು ‘ಬಾಪ ಸಾಹೇಬ’ (ಬಾಪ = ತಂದೆ) ಎಂಬುದಾಗಿ ಹೇಳಿದ್ದಾರೆ. ಧರಣಿಯು ತಾಯಿಯಾಗಿದ್ದರೆ, ನೀರು (ಪಾಣದೇವ: ಢಗೋ ಮೇಘೋ) ತಂದೆಯೆನಿಸಿದ್ದಾನೆ, ಎಂಬುದು ಈ ಭಕ್ತರ ಹಾಗೂ ಅದರ ಸಂಪ್ರದಾಯದವರ ದೃಢವಾದ ಶ್ರದ್ಧೆಯಾಗಿದೆ. ಈ ಡೋಮೆ ಗ್ರಾಮ ಮಹಿಮೆಯ ಗೀತೆಯಲ್ಲಿಯೂ, ‘ತಿರಕೋಟಿ ಚ್ಯಾ ವರತೇ ಸವಾ ಹಾತಾಚಿ ಗೋಲಟಾ’ (ತಿರಕೋಟಿಯ ಮೇಲಿನ ಒಂದು ಕಾಲು ಗಾತ್ರದ ಗೋಲಟಾ) ಎಂಬ ಉಲ್ಲೇಖ ಬರುತ್ತದೆ. ತ್ರಿಕೂಟ ಗೋಲ್ಹಾಟ ಇವು ಯೋಗದ ಪರಿಭಾಷೆಗಳು. ಅಂತೆಯೇ,

ಸತ್ಯವನು ನುಡಿಯಿರಿ, ಸತ್ಯದೊಳು ನಡೆಯಿರಿ, ಇದಹುದು ನಿಜ ಧರ್ಮವು |
ಸತ್ಯನಾಮವನು ಮರೆಯಬಾರದು ಎಂದು, ನುಡಿದು ನಡೆದನಿದನೆ ಬಾಬಾ ||”

ಎಂಬುದಾಗಿ ಸತ್ಯದಪ್ರಸಿದ್ಧಿಯನ್ನು ಸಾರುವ ಸಾಲುಗಳು ಸರ್ವತ್ರ ತಪ್ಪದೆ ಬರುತ್ತವೆ.

 

[1]ಮಹಾನುಭಾವ ಸಂಪ್ರದಾಯದ ಅನುಯಾಯಿಯಾದ ಅಮರಾವತಿಯ ಒಬ್ಬ ತರುಣ ಯುವಕ ಶ್ರೀ ಪುರುಷೋತ್ತಮ ನಾಗಪುರೆ ಅವರ ಅಭಿಪ್ರಾಯ. ಬಾಭೂಳಗಾಂವ ಮತ್ತು ನಿಂಬಾ (ಲಿಂಬಾ) – ಈ ಎರಡೂ ನೆಲೆಗಳಲ್ಲಿನ ತಾಣಗಳಿಂದು ದುರಸ್ತಿಯ (ಹರಕು ಮುರುಕು) ಹಂತದಲ್ಲಿವೆ. (ಮಹಾನುಭಾವ: ಏಕ್ ಆಹ್ವಾನ್ಪುರುಷೋತ್ತಮ ನಾಗಪುರೆ, ಅಮರಾವತಿ, ೧೯೭೩, ಪುಟ ೧೩೯.)

[2]ಡೋಮೆ ಗ್ರಾಮ ಮತ್ತು ಜಾಠೋಡಾಈ ಎರಡೂ ಸ್ಥಳಗಳಲ್ಲಿ ಸಂಶೋಧನೆಗೆಂದು ಹೋದಾಗ ಡೆಕ್ಕನ್ ಕಾಲೇಜಿನ ಶ್ರೀ ಪ್ರಭಾಕರ ಕುಲಕರ್ಣಿಯವರು ನನ್ನೊಡನಿದ್ದರು. ಹಾಗೆಯೇ ಈ ಎರಡೂ ಸ್ಥಳಗಳಲ್ಲಿ ಶ್ರೀ ಓಂಕಾರದಾದ ಮಹಾನುಭಾವ ಅವರು ವಿಶೇಷವಾಗಿ ಸಹಕರಿಸಿದ್ದರಿಂದ ಮಹಾನುಭಾವ ಹಸ್ತಪ್ರತಿಯೊಂದು ಪ್ರಾಪ್ತವಾಯಿತು. ಮ. ಮುರಲೀಧರಶಾಸ್ತ್ರಿ ಆರಾಧ್ಯ, ಮ. ನಾಗರಾಜ ಬಾಬಾ, ಶ್ರೀ ಋಷಿರಾಜಶಾಸ್ತ್ರಿ ಕಪಾಟೆ, ಶ್ರೀ ಸಂತರಾಜ ಬಾಬಾ ಇವರೇ ಮೊದಲಾದ ಹಳೆಯ – ಹೊಸ ತಲೆಮಾರಿನ ಮಹಾನುಭಾವ ಸಂನ್ಯಾಸಿಗಳ ಋಣವನ್ನು ಸಹ ಇಲ್ಲಿ ಅವಶ್ಯ ಉಲ್ಲೇಖಿಸಬೇಕು.