ಪೇಶ್ವೆಗಳ ಕಾಲದಲ್ಲಿಢಗೋಜಿ ಮೇಘೋಜಿ

‘ಢಗೋ – ಮೇಘೋ’ ಪಂಥದ ಅಸ್ತಿತ್ವವು ಪೇಶ್ವೆಗಳ ಕಾಲದ ಕಾಗದ ಪತ್ರಗಳಲ್ಲಿಯೇ ಕಾಣಸಿಗುತ್ತದೆ. ಶಾಹೂ ಮಹಾರಾಜರ ಬರೆಹದಲ್ಲಿ ವಡೂ ಎಂಬಲ್ಲಿನ ಸಂಭಾಜಿ ಮಹಾ ರಾಜನ ಸಮಾಧಿಯನ್ನು ವ್ಯವಸ್ಥೆಗೊಳಿಸುವ ಸಂದರ್ಭದಲ್ಲಿ ಈ ಕೆಳಗಿನಂತೆ ಉಲ್ಲೇಖ ಬರುತ್ತದೆ:[1]

“ರಾಜಶ್ರೀ ಕೈಲಾಸವಾಸಿ ಸ್ವಾಮಿಯವರ ವೃಂದಾವನವು ವಡೂ ಎಂಬ ಚಿಕ್ಕ ಗ್ರಾಮದಲ್ಲಿ ಪಾಬಲದ ತೀರ ಜುನ್ನರ ಪ್ರಾಂತ್ಯದಲ್ಲಿದೆ. ಆ ವೃಂದಾವನದ ಸ್ವಚ್ಛತಾ ಕಾರ್ಯವನ್ನು ಗೋವಿಂದ ಗೋಪಾಳ ಡಗೋಜಿ ಮೇಘೋಜಿ ಎಂಬ ಸೇವಕ ಮಾಡುತ್ತಾನೆ. ಇದರ ಮೇಲ್ವಿಚಾರಣೆಗಾಗಿ ಚಿಕ್ಕ ವಡೂ ಗ್ರಾಮ, ಪಾಬಲದ ತೀರದಲ್ಲಿನ ಸದರಿ ಜಮೀನನ್ನು ಇನಾಮು ನೀಡಲಾಗಿದೆ.”

ಈ ಉಲ್ಲೇಖ (ನೋಂದಣಿ)ವು ಕ್ರಿ. ಶ. ೧೭೩೨ – ೩೩ (ಸಲಾಸ ಸಲಾಸೀನ ಮಯಾ ಮತ್ತು ಅಲಪ್ ಸಾಬನಾ ೨೪) ರ ಕಾಲದ್ದು. ಈ ನೋಂದಣಿ ಸಂಬಂಧವಾಗಿ ಎಂ.ಎಂ. ದತ್ತೋ ವಾಮನ ಪೋತದಾರ ಎಂಬಾತ ಒಂದು ಪ್ರತ್ಯೇಕ ಟಿಪ್ಪಣಿಯನ್ನು ಬರೆದಿದ್ದನು.[2] ಅಲ್ಲಿ ಹೇಳಿರುವಂತೆ, “ಮೇಲೆ ಹೆಸರಿಸಿದ ಗೋವಿಂದ ಗೋಪಾಲ ಢಗೋಜಿ ಮೇಘೋಜಿಯಲ್ಲಿನ ಅಂತ್ಯ ಪದಗಳ ಬಗ್ಗೆ ಶಂಕೆಯುಂಟಾಯಿತು. ಢಗೋಜಿ ಮೇಘೋಜಿ ಎಂಬುದು ಯಾರದಾದರೂ ಅಡ್ಡ ಹೆಸರು ಆದಂತಹ ಸಂಪ್ರದಾಯ ಕಂಡು ಬಂದಿಲ್ಲ ನನಗೆ. ಆದರೆ ಢಗೋಜಿ ಮೇಘೋಜಿ ಎಂಬ ಹೆಸರು ಮಹಾರ್‌ ಸಮಾಜದವರ ಗುರು ಪರಂಪರೆಯಾಗಿರುವಂತಿದೆ. ಈ ಉಲ್ಲೇಖವು ‘ಕೊಲ್ಹಾಪುರ ಗಜೆಟಿಯರ್’ (ಇಂಗ್ಲಿಶ್) ಪುಟ – ೧೧೪ರಲ್ಲಿ ಬರುತ್ತದೆ. ಈ ಪ್ರಕಾರ ಮಹಾರರ ಈ ಗುರುವಿನ ಮೂರು ಗದ್ದುಗೆಗಳಿವೆ. ಅವುಗಳೆಂದರೆ ಕೊಲ್ಹಾಪುರ, ಗೋದಾವರಿ ತೀರದ ಡೋಂಬಿಣಗಾಂವ ಮತ್ತು ವಾಶೀ… ಎಂಬುವುಗಳು. ಇಲ್ಲಿ ಬರುವ ಅನುಮಾನವೆಂದರೆ ಯಾವ ವಡೂವಿನಲ್ಲಿ ಮಹಾರಾಜರ ದೊಡ್ಡ ಇನಾಮು ಇರುವುದೋ ಅದು ಸಂಭಾಜಿ ವೃಂದಾವನಕ್ಕೆ ಹತ್ತಿಕೊಂಡೇ ಇದೆ. ಗೋವಿಂದ ಗೋಪಾಲ ಢಗೋಜಿ ಮೇಘೋಜಿ ಎಂದು ಹೆಸರಿಸಿರುವ ವ್ಯಕ್ತಿಯು ಮಹಾರರ ಗುರುವಾಗಿರುವುದಾದರೂ ಹೇಗೆ? ಗೋವಿಂದ ಗೋಪಾಲನದಾದರೋ ವೃಂದಾವನವನ್ನು ಸ್ವಚ್ಛಗೊಳಿಸುವ ಕೆಲಸ. ಇದರಲ್ಲಿ ಯಾವ ವಿಸಂಗತಿಯೂ ಇಲ್ಲ. ಗೋವಿಂದ ಗೋಪಾಲ ಎಂಬ ಹೆಸರೇನೋ ಮಹಾರರಲ್ಲಿ ಉಂಟು. ಅವರ ಗುರುವಿನಲ್ಲಿ, ವಿಶೇಷವಾಗಿ ಭಜನಾ ಮಂಡಳಿಯವರಲ್ಲಿಯಂತೂ ಅಧಿಕವಾಗಿಯೇ ಕಾಣಸಿಗುತ್ತಿದ್ದಿರಬೇಕು.”

ಮಹಾ ಮಹೋಪಾಧ್ಯಾಯರ ಈ ಅನುಮಾನವು ಈಗ ಸತ್ಯದ ಪ್ರತಿಷ್ಠೆಯಾಗಿಯೇ ಬರುತ್ತದೆ. ಮಹಾರ್ – ಮಾಂಗರಂತಹ ಸಮಾಜದವರಲ್ಲಿ ಪ್ರಸರಣವಾಗಿರುವ ಢಗೋ ಮೇಘೋ ಸಂಪ್ರದಾಯವು, ತಮ್ಮ ಸಾಂಪ್ರದಾಯಿಕ ಮಹಾಂತರಿಗೆ ‘ಗೋಪಾಲ’ ಇತ್ಯಾದಿ ಬಿರುದುಗಳನ್ನು ನೀಡುತ್ತಿದ್ದುದರ ಉಲ್ಲೇಖಗಳು ಮಹಾನುಭಾವೀಯ ಗ್ರಂಥಕಾರರಲ್ಲಿ ಬರುತ್ತವೆ. ‘ಢಗೋ ಮೆಘೋ’ ಎಂಬ ಪದವೂ ಪರಂಪರೆಯಲ್ಲಿ ಹೀಗೆಯೆ ನಡೆದುಕೊಂಡು ಬಂದಿರುವಂತೆ ಕಾಣುತ್ತದೆ. ಇದಕ್ಕೆ ‘ಸವಾಯಿ ಮಾಧವರಾವ್ ಪೇಶ್ವೆಯವರ ದೈನಂದಿನತೆ‘ಯಲ್ಲಿನ ಒಂದು ಉಲ್ಲೇಖವು ನಿರ್ಣಾಯಕ ಸ್ವರೂಪದ ಪುಷ್ಟಿಯನ್ನು ಒದಗಿಸುತ್ತದೆ.[3] ಪೌಡಖೋರೆ ಎಂಬಲ್ಲಿನ ರಘುನಾಥ ತ್ರ್ಯಂಬಕ ಮತ್ತು ಕೃಷ್ಣದಾಮೋದರ ಜೋತಿಷಿ ಎಂಬುವವರು ಮಾಧವ ರಾವ್‌ ಎಂಬುವವರ ಬಳಿ ಒಂದು ತಕರಾರು ಹೂಡಿದ್ದರು. ಪೌಡಖೋರೆಯಲ್ಲಿನ ಜ್ಯೋತಿಷ, ಪೌರೋಹಿತ್ಯ ಮತ್ತು ಧರ್ಮಾಧಿಕಾರಿ ವೃತ್ತಿಯು ಈ ಜ್ಯೋತಿಷಿದ್ವಯರಲ್ಲಿಯೇ ಪರಂಪರಾ ಗತವಾಗಿ ನಡೆದುಕೊಂಡು ಬಂದಿತ್ತು. ಆದರೆ ಅಲ್ಲಿನ ಕಂದಾಯಾಧಿಕಾರಿಯು ಅವರ ಮೇಲೆ ಮಹಾರರ ಮದುವೆಗಳನ್ನು ನಡೆಸಿಕೊಂಡು ಬರುವಂತೆ ಒತ್ತಡ ತರುತ್ತಿದ್ದನು. ಈ ಜ್ಯೋತಿಷಿ ದ್ವಯರು ಹೇಳುವಂತೆ, ‘ನಾವು ಮಹಾರರ ಮದುವೆ ನಡೆಸಿಕೊಡುವುದಿಲ್ಲ; ಅದು ನಮ್ಮ ವೃತ್ತಿಯ ಭಾಗವೂ ಅಲ್ಲ. ನಾವು ಕೇವಲ ಮದುವೆಯ ಮುಹೂರ್ತವನ್ನಷ್ಟೆ ನಿಶ್ಚಯಿಸುವವರು.’ ಮಹಾರರ ಮದುವೆಯನ್ನು ಅವರ ಪೈಕಿಯಲ್ಲೇ ಹಿರಿಯರೊಬ್ಬರು ನಡೆಸಿ ಕೊಡುತ್ತಿದ್ದರೆಂಬುದು ಅವರ ಅಂಬೋಣ. ತಮ್ಮ ಹೇಳಿಕೆಗೆ ಪುಷ್ಟ್ಯರ್ಥವಾಗಿ ಈ ಇಬ್ಬರು ಜೋತಿಷಿಗಳು ವೇದ ಮೂರ್ತಿ ರಂಗಜೋಶಿ ಜುನ್ನರಕರ ಅವರಿಂದ ಸಾಕ್ಷ್ಯವನ್ನು ಬರೆಸಿದ್ದಾರೆ. ಜುನ್ನರಕರ ಜೋಶಿಯವರು ಬರೆದಿರುವುದು ಹೀಗೆ, “ಜುನ್ನರ ಪಟ್ಟಣವನ್ನು ಒಳಗೊಂಡಂತೆ ಅಲ್ಲಿಗೆ ಸಮೀಪದ ಊರುಗಳು, ಪಾಊಣಶೇ ಹಾಗೂ ಶಿವನೇರಿ ಇತ್ಯಾದಿ ದುರ್ಗಗಳು. ಐದು ಸ್ಥಳಗಳ ಜ್ಯೋತಿಷ್ಯದ ವೃತ್ತಿಯು ಪರಂಪರಾಗತವಾಗಿ ನನಗೆ ಬಂದಿದೆ. ಆದರೆ ನನ್ನ ಈ ವೃತ್ತಿಯಲ್ಲಿ ಅತಿಶೂದ್ರರ ಮದುವೆ ನಡೆಸಿಕೊಡುವುದು ಸೇರಿಕೊಂಡಿಲ್ಲ. ಅತಿಶೂದ್ರರ ಜಾತಿಯಲ್ಲಿ ಢಗೋ ಮೇಘೋ ಎಂಬುವವರಿದ್ದಾರೆ, ಅವರೇ ಅವರ ಮದುವೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ…”

ಈ ಉಲ್ಲೇಖಾನುಸಾರ ಸ್ಪಷ್ಟವಾಗುವುದೇನೆಂದರೆ, ಮಹಾರರ ಮದುವೆಯೇ ಮೊದಲಾದ ವಿಧಿಗಳ ಪೌರೋಹಿತ್ಯ ಇರುವವರಿಗೆ ‘ಢಗೋ ಮೇಘೋ’ ಅಥವಾ ‘ಢಗೋಜಿ ಮೇಘೋಜಿ’ ಎಂಬ ನೆಲೆಯನ್ನು ಕಲ್ಪಿಸಲಾಗಿದೆ. (ಬಹುಶಃ ಇಂದಿಗೂ ಹಾಗೆಯೆ ಕರೆಯಲಾಗುತ್ತಿದೆ ಅವರನ್ನು.) ಈ ಸ್ಥಾನ ಅವರ ‘ಗುರುತ್ವ‘ಕ್ಕೆ ಸಂಬಂಧಿಸಿದುದಾಗಿದ್ದು, ಇದರಿಂದ ಅವರ ಸಂಪ್ರದಾಯವೇನೆಂಬುದೂ ಸ್ಪಷ್ಟವಾಗುತ್ತದೆ. ಇಂದಿಗೂ ಮಹಾರಾಷ್ಟ್ರದಲ್ಲಿ ಅವರ ಈ ಸಂಪ್ರದಾಯದ ಅಸ್ತಿತ್ವವು ಕಾಣಸಿಗುತ್ತಿರುವುದರಿಂದ ಈ ಬಗ್ಗೆ ಯಾವ ಅನುಮಾನವೂ ಬೇಕಾಗಿಲ್ಲ.

ಅನೇಕ ಧರ್ಮ ಪಂಥಗಳ ಇಲ್ಲವೆ ಉಪಪಂಥಗಳ ಬಗ್ಗೆ ಉಲ್ಲೇಖಿಸಿರುವ ‘ಧರ್ಮಪ್ರಕಾಶ’ ಎಂಬೊಂದು ಚಿಕ್ಕ ಮಹಾನುಭಾವೀಯ ಪ್ರಕರಣದಲ್ಲಿ ‘ಢಗೋ ಮೇಘೋ’ ಪಂಥವನ್ನು ವಾಘ್ಯೇ, ಭರಾಡಿ, ವಾಸುದೇವ ಶಂಖಾಸುರ, ದಂಡಿ, ಟಾಳಧಾರ, ಪಹಾಟಗಾಣ ಇತ್ಯಾದಿ ಲೋಕ ಧರ್ಮೀಯ ಸಂಸ್ಥೆಗಳ ಗಣತಿಯೊಂದಿಗೆ ಸೇರಿಸಲಾಗಿರುವುದು ಅವಶ್ಯ ಮನೀಯ ಸಂಗತಿ.[4]

ಕೋರಿ [ಕನ್ಯೆ] ಭೂಮಿ

ಧರಣಿ ಮತ್ತು ಜಲ ಇವು ಈ ಪಂಥದ ದೇವತೆಗಳು. ಧರಣಿಯನ್ನು ಈ ಪಂಥದವರು ಕರೆದಿರುವುದು ‘ಕೋರಿ ಭೂಮಿ’ ಎಂಬುದಾಗಿ. ಡೋಮೆ ಗ್ರಾಮದಲ್ಲಿ ಈ ಹೆಸರಿನಲ್ಲಿಯೇ ವಿಶಿಷ್ಟ ಪೂಜೆಯು ನಡೆಯುತ್ತಾ ಬಂದಿದೆ. ಜಾಠೋಡಾದ ಕಿಸನ್ ಕೋಂಡಾಜಿಯು ಹೇಳಿದ ಒಂದು ಗೀತೆಯಲ್ಲಿ ಈ ಸ್ಥಳದ ಉಲ್ಲೇಖವು ಬರುತ್ತದೆ:

ಡೋಮೆ ಗ್ರಾಮದಲಿ ಕೋರಿ ಭೂಮಕಾ ಹೋಮ ಜಾಗೆಯು |
ಆ ಹೋಮದಿಂ ಹೊರ ಬಂದನು ಸೋಮ ಮೇಘಶ್ಯಾಮನೊಂದಿಗೆ ನಡೆಯುತ್ತಾ ||
ಪೃಥ್ವಿಗಾಗೇ ಎತ್ತಿದನೊ ಅವತಾರವನು ಮೇಘಶ್ಯಾಮ ದೂತ |
ನಾಲ್ಕು ರತ್ನಂಗಳು ಹೃದಯದಿಂ ಹೊರ ಹೊರಟವು ಸನ್ನಾಮದೊಳು ನಡೆಯುತ ||

‘ಕೋರಿ ಭೂಮಕಾ’ (ಕುಮಾರಿ ಭೂಮಿ) ಮತ್ತು ‘ಮೇಘಶ್ಯಾಮ’ (ಶ್ಯಾಮ ವರ್ಣದ ಮೇಘ) ಇವು ಧರಣಿ ಮತ್ತು ಜಲ ದೇವತೆಗಳ ಸಂಕೇತವೆಂಬುದು ಸುಸ್ಪಷ್ಟ. ಖುರ್ದ್ ಅಕೋಲಾ ಊರಿನವನಾದ ದೇವಕಿ ರಾಮನು ಹೇಳಿದ ಹಾಡಿನಲ್ಲಿಯೂ ‘ಕೋರಿ ಭೂಮಕಾಂಚ ಮಕಾನ್ ಆಹೇ ಡೋಂಬೆ ಗಿರಾಂತ್‌ |’ [ಕುಮಾರಿ ಭೂಮಿಯ ನೆಲೆಯಿಹುದು ಡೋಂಬೆ ಗ್ರಾಮದೊಳು] ಎಂಬ ಸಾಕ್ಷ್ಯವಿದೆ. ಆಶ್ಚರ್ಯವೆಂದರೆ, ಮಾಹೂರಿನ ರೇಣುಕೆಯ ಉಪಾಸಕರಾದ ಗೊಂದಲಿಗರೂ ‘ಮಾಹೂರಗಡಚೀ ಕೋರಿ ಭೂಮಕಾ, ತಿಥ ನಾಂದೇ ರೇಣುಕಾ’ [ಮಾಹೂರ ಗಡದ ಕೋರಿ ಭೂಮಕಾ, ಮೆರೆದಿಹಳಲ್ಲಿ ರೇಣುಕೆಯೆಂದು] ಎಂಬುದಾಗಿ ಹಾಡುತ್ತಿರುತ್ತಾರೆ. ಗೊಂದಲಿಗರಂತೆಯೇ ಭವಾನಿಯ ಭಕ್ತರ (ಭುತ್ಯಾ) ಗೀತೆಗಳಲ್ಲಿಯೂ ‘ಕೋರಿ ಭೂಮಕಾ‘ದ ವಿಚಾರವು ಬರುತ್ತದೆ:

ಮಾಹೂರಗಡ ಸವ್ವಾ ಈ ಸಹವಾಸಿ ಕೋರಿ ಭೂಮಕಾ |
ಪರಶುರಾಮ ಮಾತೆ ಮೆರೆದಿಹಳು ರೇಣುಕಾ ||

ಮಾತಂಗೀ ದೇವಿಯ ಪ್ರಮುಖ ಉಪಾಸಕ

‘ದಿನಕರ ಪ್ರಬಂಧ’ ಮತ್ತು ‘ಗಜಕೇಸರಿ’ ಎಂಬ ಮಹಾನುಭಾವೀಯ ಗ್ರಂಥಗಳಲ್ಲಿ ಮಾತಂಗೀ ದೇವಿಯ ಉಪಾಸಕರು ಪ್ರಧಾನವಾಗಿ ‘ಹೀನ ಯೋನಿಯ‘ರೆಂದು ಹೇಳಲಾದ ವರ್ಗಗಳಿಗೆ ಸೇರಿದವರೆಂಬ ಉಲ್ಲೇಖವಿದೆ. ಈ ಗ್ರಂಥದಲ್ಲಿ ಉಲ್ಲೇಖಿಸಲಾಗಿರುವ ‘ಮಾತಂಗೀ ಪಟ್ಟ’ ಅಥವಾ ‘ಢಗೋ ಮೇಘೋ’ ಮಾರ್ಗದ ತೀರ್ಥ ಕ್ಷೇತ್ರಗಳಲ್ಲಿ ಇಂದಿಗೂ ಪ್ರಮುಖವಾಗಿ ಮಹಾರರು ಮತ್ತು ಕ್ವಚಿತ್ತಾಗಿ ಮಾಂಗ್ ಜಾತಿಯವರು ಉಪಾಸಕರಾಗಿರುವರು.

ಈ ಮಹಾರ್ – ಮಾಂಗರ ಸಂಪ್ರದಾಯದ ಅಧಿಷ್ಠಾತ್ರಿ ದೇವಿಯನ್ನು ಮಾತಂಗೀ, ಧರಣಿ, ಕೋರಿ ಭೂಮಕ ಇತ್ಯಾದಿ ಹೆಸರುಗಳಿಂದ ನಿರ್ದಿಷ್ಟಗೊಳಿಸಲಾಗಿದೆ. ಅವಳಿಗೆ ಆನುಷಂಗವಾಗಿ ಬರುವ ಪುರುಷ ತತ್ತ್ವವನ್ನು ಜಲ, ಪಾಣದೇವ ಇಲ್ವೆ ಢಗೋ ಮೇಘೋ ಎಂಬ ಹೆಸರಿನಲ್ಲಿ ನಿರ್ದಿಷ್ಟಗೊಳಿಸಲಾಗಿದೆ. ಗ್ರಂಥಗತವಾದ ಪುರಾವೆಗಳು ಹಾಗೂ ಇಂದಿಗೂ ಪ್ರಚಲಿತದಲ್ಲಿರುವ ಉಪಾಸಕರ ಧೋರಣೆಗಳಿಂದ ನಾವು ಇದನ್ನು ನೋಡಬಹುದಾಗಿದೆ. ಈ ಎರಡು ದೇವತೆ (ಧರಣಿ ಮತ್ತು ಜಲ)ಗಳು ಸುಸ್ಪಷ್ಟವಾಗಿ ಲೋಕಧರ್ಮೀಯ ಪರಂಪರೆಯಲ್ಲಿನ ಪುರಾತನ ದೇವತೆಗಳಾಗಿವೆ. ಮಹಾರ್, ಮಾಂಗಾದಿ ಸಮಾಜಗಳ ಪಾರಂಪರಿಕ ಜಾತಿಗತವಾದ ಶ್ರದ್ಧೆಗಳೊಂದಿಗೆ ಈ ದೇವತೆಗಳ ದೃಢವಾದ ಸಂಬಂಧವಿದೆ.

ಕೃಷ್ಣಂಭಟ ಕಥೆಯ ಅನ್ವಯಾರ್ಥ

ಮಾತಂಗೀ ದೇವಿ, ಅವಳ ಉಪಾಸಕ ಜಾತಿ ಮತ್ತು ಆ ಜಾತಿಯೊಳಗಿನಿಂದ ಅರಿಸಿದ ದೇವಿಯ ಸ್ತ್ರೀ ಪ್ರತಿನಿಧಿ ಈ ಎಲ್ಲದರ ಹಿನ್ನೆಲೆಯಿಂದ ವಿಚಾರ ಮಾಡಿದಾಗ ನಮಗೆ ಕೃಷ್ಣಂಭಟ ಕಥೆಯ ಅನ್ವಯಾರ್ಥವು ತಿಳಿಯುತ್ತದೆ. ‘ಮಾತಂಗಿ ದೀಕ್ಷೆ ತೆಗೆದುಕೊಂಡ ಸ್ತ್ರೀಯು ಯಾವನೇ ಪುರುಷ ಮಾತಂಗಿ ಉಪಾಸಕನೊಂದಿಗೆ ಮುಕ್ತ ಸಂಬಂಧವನ್ನು ಇಟ್ಟುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಕೃಷ್ಣಂಭಟ (ಯಾರ ಕುಲದೇವತೆ ಮಾಹೂರಿನ ರೇಣುಕೆ ಅಥವಾ ಮಾತಂಗಿಯಾಗಿರುವಳೋ ಆತ)ನೆಂಬೊಬ್ಬನೊಂದಿಗೆ ಆಕೆಯ ಸಂಬಂಧ ಬೆಳೆದಿರುವುದು ಅಸಂಭಾವ್ಯ ಸಂಗತಿಯೇನಲ್ಲ. ಕೃಷ್ಣಂಭಟನು ಆಗಮಿಕ ಅಂದರೆ ತಾಂತ್ರಿಕನಾಗಿದ್ದನೆಂಬ ಉಲ್ಲೇಖ ಕಥೆಯಲ್ಲಿಯೇ ಇದೆ. ವಾಮಾಚಾರಿ ತಾಂತ್ರಿಕನು ತನ್ನ ಸ್ತ್ರೀ ಪ್ರಧಾನವಾದ ಸಾಧನೆಗಾಗಿ ಡೋಂಬಿನಿ, ಮಾತಂಗಿನಿ, ರಜಕಿನಿ (ಕೆಳ ಜಾತಿಗಳವರು)ಯರಂಥ ಸ್ತ್ರೀಯರನ್ನು ಉಪಯೋಗಿಸಿಕೊಳ್ಳುತ್ತಾರೆ ಎಂಬುದಂತೂ ಜ್ಞಾತವಾಗಿರುವಂಥ ವಿಷಯವೇ. ಮಾತಂಗಿಯ ಉಪಾಸಕಿಯರಾಗಿರುವ ಮಾತಂಗೀ ಸ್ತ್ರೀಯೊಂದಿಗೆ ಈ ಬಗೆಯ ಸಂಬಂಧ ಹೊಂದಿದ ಮೇಲೆ ಸನಾತನ ಬ್ರಾಹ್ಮಣರಿಂದ ಬಹಿಷ್ಕೃತಗೊಂಡ ಕೃಷ್ಣಂಭಟ ಮತ್ತು ಅವನ ಐವರು ಪುತ್ರರು ಈ ಮಾತಂಗೀಯ ಉಪಾಸನಾ ಕ್ಷೇತ್ರದಲ್ಲಿಯೇ ತಮ್ಮ ಪಾರಂಪರಿಕ ಜ್ಞಾನವನ್ನು ಪ್ರಯೋಗಿಸುತ್ತಿದ್ದರೆಂಬುದು ಸ್ವಾಭಾವಿಕವಾದ ಸಂಗತಿಯೇ ಆಗಿದೆ.

ಅಂದರೆ ಮಾತಂಗಿಯ ಉಪಾಸನಾ ಪಂಥವು ಪುರಾತನ ಲೋಕ ಧರ್ಮದ ಪ್ರಾತಿನಿಧಿಕ ಸಾತತ್ಯಶೀಲ ಆವಿಷ್ಕಾರವೇ ಹೌದು. ಕೃಷ್ಣಂಭಟ ಮತ್ತು ಅವನ ಮಕ್ಕಳು ಈ ಪಂಥವನ್ನು ಸೇರಿಕೊಂಡವರಾಗಿದ್ದಾರೆ. ಇದೊಂದು ತಾತ್ಕಾಲಿಕ ಸ್ವರೂಪದ ಚಿಕ್ಕ ಘಟನೆಯಷ್ಟೆ. ಮಾತಂಗೀ ಪಟ್ಟ ಇಲ್ಲವೆ ಢಗೋ ಮೇಘೋ ಮಾರ್ಗವು ಈ ಕೃಷ್ಣಭಟನಿಗಿಂತಲೂ ಪೂರ್ವದ್ದು. ಇದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ಜನಪದ ದೇವತೆಯ ಒಂದು ಉಪಾಸನಾ ಪ್ರವಾಹವಾಗಿದೆ. ಕೃಷ್ಣಂಭಟನ ಐವರು ಪುತ್ರರ ಪೈಕಿ ಚಾಂಗೋನನ್ನು ಬಿಟ್ಟು ಅನ್ಯ ನಾಲ್ವರು ಪುರಾತನವಾದ ಈ ಉಪಾಸನಾ ಮಾರ್ಗವನ್ನೇ ಸ್ವೀಕರಿಸಿದ್ದರು. ಚಾಂಗೋ ಎಂಬಾತ ಮಾತ್ರ ತನ್ನ ಶಿಷ್ಯ, ಪ್ರಶಿಷ್ಯರೊಂದಿಗೆ ಶಹಲಾಮ್, ಸಿದ್ಧವೋಳಿ, ಬ್ರಹ್ಮಜ್ಞಾನಿ, ಉಪರಿಯಾ ಮುಂತಾದ ಪಂಥಗಳನ್ನು ಪ್ರಚಲನಗೊಳಿಸಿದನು. ಈ ಪಂಥಗಳು ಪುರಾತನ ಮಾತಂಗೀಪಟ್ಟ ಅಥವಾ ಢಗೋ ಮೇಘೋ ಮಾರ್ಗದೊಂದಿಗೆ ಅಂಥ ಸಂಬಂಧಳನ್ನೇನು ಹೊಂದಿಲ್ಲ. ಚಾಂಗೋ ಪ್ರವರ್ತಿತವಾದ ಈ ಪಂಥಗಳ ಇತಿಹಾಸದ ಶೋಧ ಹಾಗೂ ಅವುಗಳಿಗೆ ಮಾತಂಗೀಪಟ್ಟ ಮತ್ತು ಮಹಾನುಭಾವ ಸಂಪ್ರದಾಯದೊಂದಿಗೆ ಏನಾದರೂ ಸಂಬಂಧವಿತ್ತೇ ಎಂಬುದು ಒಂದು ಸ್ವತಂತ್ರ ಅಧ್ಯಯನದ ವಿಚಾರವಾಗಿದೆ. ಮಾತಂಗೀಪಟ್ಟವು ಮಹಾನುಭಾವ ಸಂಪ್ರದಾಯದ ಮೇಲೆ ಕಳೆದ ಮೂರ‍್ನಾಲ್ಕು ಶತಮಾನಗಳಿಂದ ಒಂದೇ ಸಮನೆ ಏಕೆ ಆರೋಪ ಮಾಡುತ್ತಾ ಬಂದಿದೆ? ಹಾಗೂ ಈ ಆರೋಪಕ್ಕೆ ಮಹಾನುಭಾವ ಸಂಪ್ರದಾಯವು ಕೊಟ್ಟ ಪ್ರತಿಕ್ರಿಯೆ ಎಂಥದು ಈ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಇಂದು ನಿಃಶಂಕೆಯ ಪ್ರಮಾಣದ ಹಾಗೂ ವಸ್ತುನಿಷ್ಠತೆಗೆ ಎದುರಾಗುವ ಸಿದ್ಧತೆಯ ಅಭಾವವು ಇದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಶಾಹೂ ಮಹಾರಾಜ ಯಾಂಚಿ ರೋಜನಿಶಿ (ಡೈರಿ): ಸಂಪಾದಕ. ಗ.ಜಿ. ವಾಡ, ದ. ಬ. ಪಾರಸನೀಸ, ಪುಣೆ, ಪುಟ ೩೬.

[2]ಭಾರತ ಇತಿಹಾಸ ಸಂಶೋಧಕ ಮಂಡಳ ತ್ರೈಮಾಸಿಕ : ೧೯.೨, ಅಕ್ಟೋಬರ್ ೧೯೩೮, ಪುಟ – ೬೧. (‘ಢಗೋಜೀ ಮೇಘೋಜೀ‘)

[3]ಸವಾ ಈ ಮಾಧವರಾವ್ ಪೇಶ್ವೆ ಯಾಂಚಿ ರೋಜ್ನಿಶಿ (ಡೈರಿ): ಸಂಪಾದಕ, ಗ.ಜಿ.ವಾಡ, ಕಾ.ಬಾ. ಮರಾಠೆ, ಮುಂಬಯಿ, ೧೯೧೧, ಪುಟ ೨೭೯ – ೨೮೧.

[4]ಮರಾಠಿ ಸಂಶೋಧನ ಪತ್ರಿಕಾ: ೧೫.೧, ಅಕ್ಟೋಬರ್ ೧೯೬೭, ಪುಟ ೭ – ೧೨ (‘ಮಹಾನುಭಾವ ದರ್ಶನ ಪ್ರಕಾಶ‘: ಡಾ.ಯು.ಮ. ಪಠಾಣ್.)