ಪೃಥ್ವಿಯನ್ನು ಮಾತೆ, ಆದಿಮಾತೆ ಎಂದು ಕರೆಯಲಗಿದೆ. ಅವಳ ಆದಿಮಾತೃತ್ವಕ್ಕೆ ಪ್ರಾಧಾನ್ಯತೆಯನ್ನು ತಂದುಕೊಡುವ ಒಂದು ಜನಪದ ಸಂಪ್ರದಾಯವು ಆಚರಣೆಯಲ್ಲಿದೆ. ನಾನಾ ರೂಪು – ರಂಗಿನಿಂದ ಮತ್ತು ರಸಗಂಧಗಳಿಂದ ತುಂಬಿರುವ ವನಸ್ಪತಿಯ ಗರ್ಭವನ್ನು ಹೊತ್ತವಳು ಪೃಥ್ವಿ. ಅಂತೆಯೇ ನಾನಾ ವಿಕಾರ – ವಿಚಾರಗಳಿಂದಲೂ, ಸಂಕಲ್ಪ – ವಿಕಲ್ಪಗಳಿಂದಲೂ ತುಂಬಿರುವ ಮಾನವ ಜನಾಂಗವನ್ನು ತನ್ನ ಗರ್ಭದಲ್ಲಿ ಹೊರುವವಳು ಸ್ತ್ರೀ – ಇವರಿಬ್ಬರಲ್ಲಿಯೂ ಆದಿಮ ಕಾಲದಿಂದಲೂ ಸಾಧರ್ಮ್ಯ ಹಾಗೂ ಏಕರೂಪತ್ವವನ್ನು ಕಲ್ಪಿಸಲಾಗಿದೆ. ಸ್ತ್ರೀಯ ಸುಫಲನ ಪ್ರಕ್ರಿಯೆಯನ್ನು ವರ್ಣಿಸುವಾಗ್ಗೆ ಸ್ತ್ರೀಯ ದೇಹಧರ್ಮವನ್ನು ಆಕೆಗೆ ಆರೋಪಿಸಿರುವುದುಂಟು. ಅದಕ್ಕಿಂತಲೂ ಮುಖ್ಯವಾದುದೆಂದರೆ, ಪೃಥ್ವಿಯ ಮೂರುತಿಯನ್ನು ಸ್ತ್ರೀಯಂತೆಯೇ ರೂಪಿಸಿ ಉಪಾಸನೆ ಮಾಡುತ್ತಲಿರುವುದು.

ರಜೋದರ್ಶನ, ಪುಷ್ಪಿತಾವಸ್ಥಾ, ಫಲಶೋಭನ, ಋತು – ಇತ್ಯಾದಿ ಸ್ತ್ರೀಯ ಸುಫಲನ – ಪ್ರಕ್ರಿಯೆಯ ಸಂಕೇತಗಳೆಲ್ಲವೂ ಪೃಥ್ವಿಯ ಸುಫಲನ – ಪ್ರಕ್ರಿಯೆಯ ಸಂಕೇತಗಳೇ ಆಗಿವೆ. ಇದನ್ನು ಮತ್ತೊಮ್ಮೆ ಸ್ಪಷ್ಟೀಕರಿಸಿ ಹೇಳುವ ಅಗತ್ಯವೇನೂ ಕಾಣುತ್ತಿಲ್ಲ. ಸ್ತ್ರೀಯ ದೇಹಧರ್ಮವನ್ನು ಪೃಥ್ವಿಯ ಸೃಜನಶೀಲತೆಯ ಅಂಶದೊಂದಿಗೆ ಸಂಬಂಧ ಕಲ್ಪಿಸುವ ಪ್ರವೃತ್ತಿಯು ಜಗತ್ತಿನ ಎಲ್ಲಾ ಮಾನವ ಸಮೂಹಗಳಲ್ಲಿಯೂ ಆದಿ ಮಾನವನ ಕಾಲದಿಂದಲೇ ಕಂಡುಬಂದಿರುವ ಮುಖ್ಯ ಸಂಗತಿ. ಹೇಗೆ ಸ್ತ್ರೀಯು ಋತುಸ್ನಾತಳಾಗದೆ, ರಜಸ್ವಲಾವಸ್ಥೆಯನ್ನು ಅನುಭವಿಸದೆ ಸುಫಲನ ಸಾಮರ್ಥ್ಯ ಹೊಂದಲಾರಳೋ, ಹಾಗೆಯೇ ನವಸೃಷ್ಟಿಯ ಗರ್ಭವನ್ನು ಹೊರುವ ಮುನ್ನ ಪೃಥ್ವಿಯೂ ಸ್ತ್ರೀಯಂತೆಯೇ ರಜಸ್ವಲೆಯಾಗುತ್ತಾಳೆ ಎಂಬ ನಂಬಿಕೆಯನ್ನು ಇಂದಿಗೂ ಕಾಣಬಹುದಾಗಿದೆ.

ಅಂಬುವಾಚಿ: ಕೃಷಿ ಜೀವನದಲ್ಲಿನ ಉತ್ಸವ

‘ಅಂಬುವಾಚಿ‘ಯು ಪೃಥ್ವಿಯ ರಜಸ್ವಲಾವಸ್ಥೆಗೆ ಸಂಬಂಧಿಸಿದ ಒಂದು ವ್ರತೋತ್ಸವ. ‘ಅಂಬುವಾಚಿ‘ಗೆ ಇರುವ ಅರ್ಥ ರಜೋದರ್ಶನ. “In Sanskrit Ambu is water and bachi may mean to express or to blossom” ಎಂಬುದಾಗಿ ವ್ಯಾಖ್ಯಾನಿಸಿದ್ದಾರೆ ಅಸ್ಸಾಮಿ ವಿದ್ವಾಂಸರಾದ ಶ್ರೀ ಜೋಗೇಶದಾಸ್.

[1] ಇದರಲ್ಲಿನ (ಸಂಕೇತ) ‘ಅಂಬು’ ಎಂಬ ಪೂರ್ವ ಪದವು ಜಲವಾಚಕ. ಸೃಷ್ಟಿ ಪ್ರಕ್ರಿಯೆಯಲ್ಲಿ ಜಲವನ್ನು ಸ್ತ್ರೀತತ್ತ್ವದ ಪ್ರತೀಕವಾಗಿ ಮಾನ್ಯ ಮಾಡಲಾಗಿದೆ. ‘ಅಗ್ನಿ ಸೋಮಾತ್ಮ ಕಂ ಜಗತ್’ ಎಂದೂ ಸಹ ಇದನ್ನು ಹೇಳಲಾಗಿದೆ. ಇದು ಸೋಮನ ಅಂದರೆ ಜಲದ ಗರ್ಭದಿಂದ ಪ್ರಸವಗೊಂಡದ್ದು, ಸೃಷ್ಟಿ ಸಾಮರ್ಥ್ಯದ ಜಲವನ್ನು (Procreative waters) ಇಲ್ಲಿ ‘ಅಂಬು’ ಎಂಬುದಾಗಿ ಕರೆಯಲಾಗಿದೆ. ಇಲ್ಲಿ ಜಲದ ಸೃಷ್ಟಿ ಸಾಮರ್ಥ್ಯ ಪ್ರಕಟವಾಗುವ ಅವಸ್ಥೆ – ರಜಸ್ವಲಾವಸ್ಥೆಯ – ಯನ್ನು ‘ಅಂಬುವಾಚಿ’ ಎಂಬ ಸಂಕೇತಾರ್ಥದಲ್ಲಿ ಹೇಳಲಾಗಿದೆ.

ಪೃಥ್ವಿಗೆ ಅನ್ನ (ಆಹಾರ ಪದಾರ್ಥಗಳು)ವನ್ನು ಗರ್ಭದಲ್ಲಿ ಹೊರುವ ಸಾಮರ್ಥ್ಯ ಬರುವುದು ಈ ‘ಅಂಬುವಾಚಿ‘ಯ ಅನಂತರವೇ. ಎಂತಲೇ ‘ಅಂಬುವಾಚಿ‘ಯನ್ನು ಕುರಿತಂತೆ ಕೃಷಿ ಜೀವನದಲ್ಲಿ ವಿಶೇಷ ಮಹತ್ವವಿದೆ. ಕೇವಲ ಕೃಷಿ ಸಂಬಂಧಿ ಜನಪದ ಆಚರಣೆಗಳಲ್ಲಿ ಮಾತ್ರವಲ್ಲ, ಕೃಷಿ ಶಾಸ್ತ್ರೀಯ ಗ್ರಂಥಗಳಲ್ಲಿಯೂ ‘ಅಂಬುವಾಚಿ’ ವಿಷಯದ ಸಂಕೇತಕ್ಕೆ ಒಂದು ಖಚಿತ ಸ್ಥಾನವು ಪ್ರಾಪ್ತವಾಗಿದೆ:[2]

ದ್ಯೌಃ ಪುಮಾನ್ ಧರಣೀ ನಾರೀ ಬೀಜಮ್ಮಭೋ ನಿವಶ್ಚ್ಯುತಮ್ |
ಧುಧಾತ್ರೀಬೀಜಸಂಯೋಗಾದ್ ಧಾನ್ಯಾದೀನಾಂ ತು ಸಂಭವಃ ||
ಅನ್ನಂ ಹಿ ಜಗದಾಧಾರಂ ಸರ್ವಮನ್ನೇ ಪ್ರತಿಷ್ಠಿತಮ್ |
ಮೂಲಮಾಪೋ ಹಿ ಅನ್ನಸ್ಯ ತಸ್ಮಾದಾಪೋ ಹಿ ಜೀವನಮ್ ||

[ದ್ಯೌ ಎಂದರೆ ಪುರುಷ, ಧರಣಿ ಎಂದರೆ ನಾರಿ. ಧ್ಯೌನಿಂದ ಬಿದ್ದ ಪರ್ಜನ್ಯ ಜಲವೇ ಬೀಜ. ದ್ಯೌ, ಧರಣಿ ಮತ್ತು ಬೀಜ ಇವುಗಳ ಸಂಯೋಗದಿಂದಲೇ ವನಸ್ಪತಿಗಳೆಲ್ಲವೂ ಜನ್ಮತಾಳುತ್ತವೆ. ಅನ್ನವೇ ಜಗತ್ತಿಗೆಲ್ಲ ಆಧಾರ; ಸರ್ವ ಜೀವವಿಶ್ವವು ಬದುಕಿರುವುದು ಅನ್ನದಿಂದಲೇ. ಜಲವು ಅದಕ್ಕೆ ಮೂಲವಾಗಿರುವುದರಿಂದ ಜಲವನ್ನು ‘ಜೀವನ’ ಎಂಬ ಸಂಕೇತಾರ್ಥದಲ್ಲಿಯೂ ಹೇಳಲಾಗಿದೆ.]

ಕೃಷಿ ಶಾಸ್ತ್ರೀಯ ಗ್ರಂಥಗಳ ಉಪಕ್ರಮವು ಸಾಮಾನ್ಯವಾಗಿ ಈ ಶಬ್ದದಲ್ಲಿಯೇ ಇದೆ. ‘ವೃಷ್ಟಿ ಮೂಲಾ ಕೃಷಿಃ ಸರ್ವಾ ವೃಷ್ಟಿಮೂಲಂ ಚ ಜೀವನಂ |’[3] ಎಂಬ ವಿಚಾರವನ್ನು ಭಾರತೀಯ ಕೃಷಿ ಶಾಸ್ತ್ರಗಳಲ್ಲಿ ಸತತವಾಗಿ ಹೇಳಿಕೊಂಡು ಬರಲಾಗಿದೆ. ಕೃಷಿ ಸಂಬಂಧವಾದ ಜ್ಞಾನ ಮತ್ತು ವಿಧಿವಿಧಾನಗಳಿಗೆ ಅನನ್ಯ ಸಾಧಾರಣವಾದ ಮಹತ್ವವೂ ಬಂದಿರುವುದು ಇದರಿಂದಾಗಿಯೇ. ಎಂತಲೇ ಸ್ವಾಭಾವಿಕವೊ ಎಂಬಂತೇ ವರ್ಷ (ಮಳೆ)ದ ಆರಂಭ ಕಾಲದಲ್ಲಿ ಆಂತರ್ಯದಲ್ಲಿ ಒದ್ದೆಗೊಂಡ ಧರಣಿಯ ರೂಪವನ್ನು ರಜಸ್ವಲಾವಸ್ಥೆಯ ಧೋರಣೆಯಿಂದ ಸ್ವೀಕರಿಸುವುದು. ಮೃಗದ ಧಾರೆಯಲ್ಲಿ ಟೊಳ್ಳುಗೊಂಡ ಭೂಮಿ, ಆರ್ದ್ರಾ ಮಳೆಯ ಪ್ರಾರಂಭದಲ್ಲಿ ಆಂತರ್ಯದಲ್ಲಿ ಪೂರ್ಣವಾಗಿ ‘ಆರ್ದ್ರ‘ಗೊಳ್ಳುತ್ತದೆ. ಆನಂತರವೇ ಅದಕ್ಕೆ ನವ ಸೃಷ್ಟಿಯನ್ನು ಗರ್ಭದಲ್ಲಿ ಹೊರುವುದಕ್ಕೆ ಸಾಮರ್ಥ್ಯವು ಸಾಧ್ಯವಾಗುವುದು. ಧರಣಿಯ ಈ ಗರ್ಭಧಾರಣ ಸಾಮರ್ಥ್ಯವು ‘ಆರ್ದ್ರತೆ‘ಯ ‘ಅಂಬುವಾಚಿ’ ಎಂಬ ಸಂಜ್ಞೆಯಿಂದಲೂ ಅಭಿವ್ಯಕ್ತವಾಗಿದೆ. ‘ಕೃಷಿ ಪರಾಶರ‘ದಲ್ಲಿ (ರಚನಾ ಕಾಲ: ಸುಮಾರು ಕ್ರಿ.ಶ. ೬ರಿಂದ ೮ ನೆಯ ಶತಮಾನ) ಪೃಥ್ವಿಯ ರಜಸ್ವಲಾವಸ್ಥೆಯ ಕಾಲವನ್ನು ಮತ್ತು ಆ ಕಾಲದಲ್ಲಿನ ವರ್ಜ್ಯ ಕ್ರಿಯೆಯನ್ನು ಈ ಕೆಳಗಿನಂತೆ ಹೇಳಲಾಗಿದೆ.[4]

ಜ್ಯೇಷ್ಟಾಂತೇ ತ್ರಿದಿನಂ ಸಾರ್ಧಮಾಷಾಢಾದೌ ತಥೈವ ಚ |
ವಪನಂ ಸರ್ವಸಸ್ಯಾನಾಂ ಫಲಾರ್ಥೀ ಕೃಷಕಸ್ತ್ಯಜೇತೇ ||೧೭೪ ||
ವೃಷಾಂತೇ ಮಿಥುನಾದೌ ಚ ತ್ರೀಣ್ಯಹಾನಿ ರಜಸ್ವಲಾ |
ಬೀಜಂ ನ ವಾಪಯೇತ್ ತತ್ರ ಜನಃ ಪಾಪಾದ್ವಿನಶ್ಯತೀ ||೧೭೫ ||

ಹಾಗೆಯೇ –

ಮೃಗಶಿರಸಿ ನಿವೃತ್ತೇ ರೌದ್ರಪಾದೇsಂಬುವಾಚೀ |
ಭವತಿ ಋತುಮತೀ ಕ್ಷಮಾ ವರ್ಜಯೇತ್ ತ್ರೀಣ್ಯಹಾನಿ ||
ಯದಿ ವಪತಿ ಕೃಷಾಣಃ ಕ್ಷೇತ್ರಮಾಸಾಧ್ಯ ಬೀಜಂ |
ನ ಭವತಿ ಫಲಭಾಗೀ ದಾರುಣಶ್ವಾತ್ರ ಕಾಲಃ ||೧೭೬ ||

[ಯಾವನೇ ಬೆಳೆ ಬೆಳೆಯುವ ಕೃಷಿಕನು ಜೇಷ್ಠ ಮಾಸದ ಕೊನೆ ಹಾಗೂ ಆಷಾಢ ಮಾಸದ ಆರಂಭ ಕಾಲದ ಮೂರವರೆ ದಿನಗಳ ಕಾಲ ಯಾವುದೇ ಧಾನ್ಯವನ್ನು ಬಿತ್ತುವ ಕ್ರಿಯೆಯು ವರ್ಜ್ಯ ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಕಾರಣ ಈ ಕಾಲದಲ್ಲಿ ಪೃಥ್ವಿಯು ರಜಸ್ವಲಾವಸ್ಥೆಯಲ್ಲಿರುತ್ತದೆ. ಎಂತಲ ಆಗ್ಗೆ ಬೀಜವಪನ ಕಾರ್ಯವನ್ನು ಮಾಡಲೇಬಾರದು. ಈ ನಿಷೇಧವನ್ನು ಮುರಿಯುವ ಮನುಷ್ಯ ಪಾಪಾಚರಣೆಯಿಂದ ನಾಶವಾಗುವನು. ಮೃಗದ ಕೊನೆ ಹಾಗೂ ಆರ್ದ್ರದ ಆರಂಭ ಈ ಕಾಲದಲ್ಲಿ ಪೃಥ್ವಿಯು ರಜಸ್ವಾಲಾವಸ್ಥೆಯಲ್ಲಿರುತ್ತಾಳೆ. ಈ ಅವಸ್ಥೆಯನ್ನು ಹೆಸರಿಸಿರುವುದು ‘ಅಂಬುವಾಚಿ’ ಎಂಬುದಾಗಿ. ಈ ಮೂರು ದಿನಗಳು ಬೀಜ ಬಿತ್ತನೆಗೆ ವರ್ಜ್ಯವಾದುವು. ಒಂದೊಮ್ಮೆ ರೈತನು ಈ ಕಾಲದಲ್ಲಿ ಜಮೀನಿನಲ್ಲಿ ಬೀಜವನ್ನು ಬಿತ್ತಿದ್ದೇ ಆದರೆ, ಅವನು ಬೆಳೆಯನ್ನು ಕಾಣಲಾರ. ಹಾಗಾಗಿಯೇ ಈ ಬೀಜ ಬಿತ್ತನೆಯ ನಿಷೇಧವನ್ನು ಬಹಳ ಕಾಳಜಿಯಿಂದಲೇ ಪಾಲಿಸಬೇಕಾಗುತ್ತದೆ.]

ಸ್ತ್ರೀ ಮತ್ತು ಪೃಥ್ವಿಯನ್ನು ಸಮಾವಸ್ಥೆಯಲ್ಲಿ ದೃಷ್ಟಿಸಿದಾಗ, ‘ಅಂಬುವಾಚಿ’ ಕಾಲದ ಬೀಜ ಬಿತ್ತನೆಯ ನಿಷೇಧದ ಅರಿವು ಸ್ಪಷ್ಟವಾಗಿ ಮೂಡುತ್ತದೆ. ಪುರುಷನಿಗೆ ರಜಸ್ವಲಾವಸ್ಥೆಯ ಸ್ತ್ರೀಯೊಂದಿಗೆ ಸಂಬಂಧ ಹೇಗೆ ನಿಷಿದ್ಧವೋ ಹಾಗೆಯೇ, ‘ಅಂಬುವಾಚಿ’ ಕಾಲದಲ್ಲಿ ಪೃಥ್ವಿಯಲ್ಲಿ ನೇಗಿಲು ಉಳುವುದು ಹಾಗೂ ಆ ಹಿಂದಣ ಬೀಜ ಬಿತ್ತುವಿಕೆಯ ಕಾರ್ಯವನ್ನು ವರ್ಜ್ಯವೆಂದು ಮಾನ್ಯಮಾಡಲಾಗಿದೆ.

ಕಾಮಾಖ್ಯ ಪೀಠದಲ್ಲಿಅಂಬುವಾಚಿಉತ್ಸವ

ಕಾಮರೂಪದಲ್ಲಿ ಕಾಮಾಖ್ಯಾ ಪೀಠವು ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲೊಂದು. ಸತಿಯ ಯೋನಿಯು ಸೋರಿ ಬಿತ್ತು, ಎಂಬುದಾಗಿ ಈ ಪೀಠದ ನಿರ್ಮಿತಿಯ ಬಗ್ಗೆ ಕಥೆಯನ್ನು ಹೇಳುತ್ತಾರೆ. ಅಂದರೆ ಇಲ್ಲಿನ ದೇವಿಯು ಯೋನಿರೂಪಿಯಾಗಿರುವಳು. ಈ ಅರ್ಥದಲ್ಲಿಯೇ ಭೂಮಿಯ ರಜೋದರ್ಶನ ಈ ‘ಅಂಬುವಾಚಿ’ ಉತ್ಸವವು ಈ ಪೀಠದಲ್ಲಿ ಎಲ್ಲಕ್ಕಿಂತ ಹೆಚ್ಚು ಶ್ರದ್ದೆ ಹಾಗೂ ಉತ್ಸಾಹಗಳಿಂದ ಆಚರಿಸಲಾಗುತ್ತಿರುವುದು. ಯೋನಿರೂಪಿ ಕಾಮಾಖ್ಯಾ ದೇವಿ ಅಂದರೆ ಭೂದೇವಿ ಎಂದು ಹೇಳುವುದು ಕೂಡ ಈ ಅರ್ಥದಲ್ಲಿಯೇ. ಮೃಗಶಿರ ನಕ್ಷ ತ್ರದ ಚತುರ್ಥಪಾದ ಮತ್ತು ಆರ್ದ್ರಾ ನಕ್ಷತ್ರದ ಪ್ರಥಮ ಪಾದದಲ್ಲಿನ ಗಾಳಿ ಮಿಶ್ರಿತ ಮಳೆಗಾಲದಲ್ಲಿ ಕಾಮಾಖ್ಯಾದೇವಿಯು ರಜಸ್ವಲೆಯಾಗುತ್ತಾಳೆ ಎಂಬುದು ಸಾಮಾನ್ಯ ನಂಬಿಕೆ. ಪ್ರತಿ ವರ್ಷವೂ ಆಷಾಢ ಶುಕ್ಲ ೬ ಅಥವಾ ೭ ರಿಂದ ೧೦ ಅಥವಾ ೧೧ ರವರೆಗೆ ಅಂಬುವಾಚಿಯ ಕಾಲ (ಸುಮಾರು ೮೪ ಸಾಸ) ಬರುವುದು ಸಾಮಾನ್ಯ. ಮೂರು ದಿನಗಳ ಕಾಲ ರಜಸ್ವಲೆಯಾಗಿದ್ದ ಕಾಮಾಖ್ಯೆಯನ್ನು ದರ್ಶನ ಮಾಡುವುದಕ್ಕೆ ನಿರ್ಬಂಧವಿರುವುದರಿಂದ ಮಂದಿರದ ದ್ವಾರವನ್ನು ಪೂರ್ಣವಾಗಿ ಮುಚ್ಚಿರುತ್ತಾರೆ. ನಾಲ್ಕನೆಯ ದಿನ ಯಾತ್ರಿಕರಿಗೆ ಸ್ನಾನ ಪೂಜಾದಿಗಳ ನಂತರ ದೇವಿಯ ದರ್ಶನ ಲಭಿಸುತ್ತದೆ. ಈ ಹೊತ್ತಿನಲ್ಲಿ ಎಲ್ಲಾ ಯಾತ್ರಿಕರಿಗೂ ರಕ್ತಮಯವಾದ ವಸ್ತ್ರದ ತುಂಡೊಂದನ್ನು ಪ್ರಸಾದ ರೂಪವಾಗಿ ನೀಡುವುದು ಒಂದು ರೂಢಿ. ಈ ರಕ್ತಮಯ ವಸ್ತ್ರವು ಪ್ರಾಪ್ತವಾದರೆ ತಮ್ಮ ಅಭೀಷ್ಟಗಳೆಲ್ಲ ಫಲಿಸುತ್ತವೆಂಬುದು ಭಕ್ತರಲ್ಲಿರುವ ದೃಢವಾದ ನಂಬಿಕೆ.[5] ‘ಕುಬ್ಜಿಕಾ ತಂತ್ರಾಂಶ‘ದಲ್ಲಿ (ಸಪ್ತಮ ಅಧ್ಯಾಯ) ಈ ವಸ್ತ್ರದ ಮಹಿಮೆಯನ್ನು ಹೀಗೆ ಬಣ್ಣಿಸಲಾಗಿದೆ:[6]

ಕಾಮಾಖ್ಯಾವಸ್ತ್ರಮಾದಾಯ ಜಪಪೂಜಾಂ ಸಮಾಚರೇತ್ |
ಪೂರ್ಣಕಾಮೋ ಲಭೇದ್ ದೇವೀಂ ಸತ್ಯಂ ನ ಸಂಶಯಃ ||

[ಕಾಮಾಖ್ಯೆಯ ವಸ್ತ್ರವನ್ನು ಪಡೆದು, ಯಾರು ಅದನ್ನು ಜಪಪೂರ್ವಕವಾಗಿ ಪೂಜಿಸುತ್ತಾರೋ ಅಂಥವರ ಎಲ್ಲಾ ಮನೋಭಿಲಾಷೆಗಳು ಪೂರ್ಣವಾಗುತ್ತವೆ. ಮಾತ್ರವಲ್ಲ ಅವರಿಗೆ ದೇವಿಯು ಪ್ರಾಪ್ತಳಾಗುತ್ತಾಳೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.]

ಕಾಮಾಖ್ಯಾ ಪೀಠದಲ್ಲಿ ನಡೆಯುವ ಉತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಯಾತ್ರಿಕರು ಜಮಾಯಿಸುತ್ತಾರೆ. ನಾನಾ ಬಗೆಯ ಅಂಗಡಿ ಮುಂಗಂಟುಗಳು ಸೇರುತ್ತವೆ. ವಾದ್ಯಗಳ ಧ್ವನಿಯಿಂದ ಸರ್ವ ವಾತಾವರಣವೂ ತುಂಬಿ ಹೋಗಿರುವುದು ವಿಶೇಷ. ಬಂಗಾಳ ಮತ್ತು ಬಿಹಾರಗಳಿಂದ ಬಹುದೊಡ್ಡ ಪ್ರಮಾಣದಲ್ಲಿ ಮಾವಿನ ಆಯಾತವಾಗುತ್ತದೆ. ಅಂತೆಯೇ ಹೂವುಗಳು ರಾಶಿ ರಾಶಿಯಾಗಿ ಬಂದು ದೊಡ್ಡ ದೊಡ್ಡ ಹಾರಗಳು ಸಿದ್ಧವಾಗಿ ಮಾರಾಟಕ್ಕಿರುತ್ತವೆ. ತರುಣಿ ಕುಮಾರಿಯರು ಜೋಗಿತಿಯರಾಗಿ ಭಕ್ತರಲ್ಲಿ ಬೇಡುತ್ತಾ ತಿರುಗಾಡುತ್ತಿರುತ್ತಾರೆ. ಈ ಯಾತ್ರಿಕರಲ್ಲಿ ಅಧಿಕಾಂಶ ಬಂಗಾಳಿಗಳೇ.

ಕಾಮರೂಪ ಜಿಲ್ಲೆಯಲ್ಲಿ ‘ಅಂಬುವಾಚಿ’ಯ ಉತ್ಸವವನ್ನು ‘ಅಮತಿ’ ಎಂಬ ಹೆಸರಿನಿಂದ ಕರೆಯುತ್ತಿದ್ದರೆ, ಪೂರ್ವದ ಜಿಲ್ಲೆಗಳಲ್ಲಿನ ಜನರಲ್ಲಿ ಅದಕ್ಕಿರುವ ಹೆಸರು ‘ಸಾತ’. ಶ್ರೀ ಜೋಗೇಶದಾಸರ ಅಭಿಪ್ರಾಯದಂತೆ ‘ಆಮತಿ‘ಯು ‘ಅಂಬುವಾಚಿ‘ಯ ಅಪಭ್ರಂಶರೂಪವಾಗಿದ್ದು, ಅಂಬುವಾಚಿಯು ಪ್ರಾರಂಭವಾಗುವುದು ಸಾಮಾನ್ಯವಾಗಿ ಆಷಾಢ ಶುಕ್ಲಸಪ್ತಮಿಯಂದು. ಇದಕ್ಕೆ ‘ಸಾತ್’ ಎಂಬ ಹೆಸರು ಬಂದಿರುವುದು ಈ ಕಾರಣಕ್ಕಾಗಿಯೇ.[7] ಮಹಾ ರಾಷ್ಟ್ರದಲ್ಲಿ ನೈವೇದ್ಯದ ಅರ್ಪಣೆಗೆ ಮುನ್ನ ಸಾತ್‌ ಎಂಬ ಹೆಸರಿನ ವಿಧಿಯೊಂದನ್ನು ಆಚರಿಸುವುದು ರೂಢಿ. ಇದು ‘ಶಾಂತ’ (ಶಾಂತಿ) ಸಂಸ್ಥಾಪನೆಯ ವಿಧಿ ಎಂಬುದು ಸುಸ್ಪಷ್ಟ.[8] ಅಂಬುವಾಚಿಯ ಕಾಲದಲ್ಲಿಯೇ ಅಸ್ಸಾಂನ ಕೆಲವಾರು ಪ್ರದೇಶಗಳಲ್ಲಿ ಒಂದು ಮಡಕೆಯಲ್ಲಿ ಬೀಜ ಧಾನ್ಯಗಳನ್ನು ನೀರಿನಲ್ಲಿ ಹಾಕಿಡುತ್ತಾರೆ. ಅಂಬುವಾಚಿಯ ಉತ್ಸವ ಮುಗಿದ ಮೇಲೆ ಬೀಜಾಂಕುರವಾಗಿದ್ದ ಆ ಘಟವನ್ನು ನದಿಯ ಪ್ರವಾಹದಲ್ಲಿ ತೇಲಿ ಬಿಡುವುದು ರೂಢಿ.[9]

ಸುವಿಖ್ಯಾತ ಅಸ್ಸಾಮಿ ಪಂಡಿತ ಶ್ರೀ ಬಾಣಿಕಾಂತ ಕಾಕತಿಯವರು ಹೀಗೆ ಹೇಳಿದ್ದಾರೆ. ಕಾಮಾಖ್ಯೆಯ ರಜಸ್ವಲಾವಸ್ಥೆಯ ಈ ವಾರ್ಷಿಕ ಸಮಾರಂಭವೇನೋ ನಡೆಯುತ್ತದೆ. ಆದರೆ ಕಾಮಾಖ್ಯಾ ದೇವಿಯು ಸ್ತ್ರೀಯರಂತೆ ಪ್ರತಿ ತಿಂಗಳೂ ರಜಸ್ವಲೆಯಾಗುತ್ತಾಳೆ ಎಂಬುದು ಅಲ್ಲಿನ ಜನರ ನಂಬಿಕೆ.[10] ಕಾಮಾಖ್ಯ ಪೀಠದಲ್ಲಿನ ಅಂಬುವಾಚಿಯ ಉತ್ಸವವು ಕಾಮಾಖ್ಯಾ ದೇವಿಯ ಉಪಾಸನೆಗೆ ಸಂಬಂಧಿಸಿರುವುದೇನೋ ನಿಜ. ಆದರೆ ಅದರ ಮೂಲ ಕೃಷಿ ಸಂಬಂಧದ ಸ್ವರೂಪವು ಇಂದಿಗೂ ಉಳಿದುಕೊಂಡು ಬಂದಿರುವುದು ಒಂದು ವಿಶೇಷ.

ಕಾಶ್ಮೀರದಲ್ಲಿನ ರಾಜ್ಞೀಸ್ನಾಪನ

ಕಾಶ್ಮೀರ ಪ್ರದೇಶದಲ್ಲಿ ‘ರಾಜ್ಞೀಸ್ನಾಪನ’ ಎಂಬ ಹೆಸರಿನಲ್ಲಿ ವ್ರತವೊಂದು ಆಚರಿಸಲ್ಪಡುತ್ತಿತ್ತು. ‘ರಾಜ್ಞೀಸ್ನಾಪನ’ ಎಂಬುದಕ್ಕೆ ಅರ್ಥ ‘ರಾಣಿಯ ಸ್ನಾನ’. ಈ ವ್ರತದಲ್ಲಿ ಹೇಳಲಾಗಿರುವ ರಾಣಿಯೆಂದರೆ ಸೂರ್ಯನ ಪತ್ನಿಯಾದ ಪೃಥ್ವಿ. ಮಹಾರಾಷ್ಟ್ರ – ಮಾಲವ ಗುಜರಾತ್‌ಗಳಲ್ಲಿ ರಾಣೂಬಾಯಿ, ರನೂಬಾಯಿ, ರಾಂದಲದೇವಿ ಎಂಬ ಹೆಸರುಗಳಿಂದ ಪ್ರಸಿದ್ಧವಾಗಿರುವುದು ಇದೆ.[11] ಚೈತ್ರ ಕೃಷ್ಣಪಂಚಮಿಯಿಂದ ಅಷ್ಟಮಿಯವರೆಗೆ ನಾಲ್ಕು ದಿನಗಳ ಕಾಲವೇ ಈ ವ್ರತದ ಕಾಲಾವಧಿಯೆಂದು ಬ್ರಹ್ಮಪುರಾಣವನ್ನು ಆಧರಿಸಿ ‘ಕೃತ್ಯ ರತ್ನಾಕರ‘ದಲ್ಲಿ ಹೇಳಲಾಗಿದೆ.[12] ಈ ವ್ರತಕಾಲದ ಮೊದಲ ಮೂರು ದಿನಗಳಲ್ಲಿ ಭೂಮಿಯು ರಜಸ್ವಲೆಯಾಗಿರುತ್ತಾಳೆ. ನಾಲ್ಕನೆಯ ದಿನ ಆಕೆ ಶುದ್ಧಳಾಗುತ್ತಾಳೆ ಎಂಬುದು ಕಾಶ್ಮೀರಿ ಜನರಲ್ಲಿನ ನಂಬಿಕೆ. ಕಾಶ್ಮೀರದ ಸಾಂಸ್ಕೃತಿಕ ಪರಂಪರೆಯನ್ನು ವಿಸ್ತೃತವಾಗಿ ವರ್ಣಿಸುವ ‘ನೀಲಮತ ಪುರಾಣ‘ದಲ್ಲಿ ರಾಜ್ಞೀಸ್ನಾಪನ ವ್ರತದ ಕಾಲ ಫಾಲ್ಗುಣ ಕೃಷ್ಣಪಂಚಮಿಯಿಂದ ಅಷ್ಟಮಿಯೆಂದು ಹೇಳಲಾಗಿದೆ. ಅಲ್ಲದೆ ಈ ವ್ರತದ ಬಗೆಗಿನ ವಿಸ್ತೃತ ವಿವರಗಳೂ ಇವೆ.[13]

ತಸ್ಯಾಮೇವ ತು ಪಂಚಮ್ಯಾಂ ಕಶ್ಮೀರಾ ತು ರಜಸ್ವಲಾ |
ಯಸ್ಮಾದ್ ಭವತಿ ಕರ್ತವ್ಯಾ ತಸ್ಯಾಃ ಪೂಜಾ ತತೋ ದ್ವಿಜ ||೫೪೯ ||
ರಮ್ಯಾ ಶೈಲಮಯೀ ಕಾರ್ಯಾ ಕಶ್ಮೀರಾ ತಾಂ ಚ ಪೂಜಯೇತ್ |
ಅಭ್ಯಂಗವಸ್ತ್ರದಾನೇನ ನೈವೇದ್ಯಂ ಚ ನಿವೇದಯೇತ್ ||೫೫೦ ||
ಪುಷ್ಪ ಧೂಪಾದ್ಯಲಂಕಾರಂನ ನ ದಾತವ್ಯಂ ದಿನತ್ರಯಮ್ |
ನೈವೇದ್ಯೇ ಗೋರಸಂ ಸರ್ವಂ ವರ್ಜ್ಯನೀಯಂ ದ್ವಿಜೋತ್ತಮ ||೫೫೧ |
ಸ್ತ್ರೀಭಿಸ್ತು ಪೂಜಾ ಕರ್ತವ್ಯಾ ಮಾನೂಷ್ಯೇರ್ನ ಕಥಂಚಿನ |
ಸ್ನಾಪ್ಯಾ ಸ್ತ್ರೀಭಿರ್ಭವೇದ್ ದೇವೀ ಕೃಷ್ಣಪಕ್ಷಾಷ್ಟಮೀಂ ತು ತಾಮ್ ||೫೫೨ ||
ಅನಂತರಂ ದ್ವಿಜೈಃ ಸ್ನಾಪ್ಯಾ ಸರ್ವೌಷಧಿಯುತೈರ್ಘಟೈಃ |
ತತೋ ಗಂಧೈಸ್ತತೋ ಬೀಜೈಸ್ತತೋ ರತ್ನೈಸ್ತತಃ ಫಲೈಃ ||೫೫೩ ||
ಸ್ನಾಪಯಿತ್ವಾ ಚ ತಾಂ ದೇವೀಂ ಗಂಧೈರ್ಮಾಲ್ಯೈಶ್ಚ ಪೂಜಯೇತ್ |
ವಸ್ತ್ರಾಲಂಕರಣೈಶ್ಚಾನನ್ನೈರ್ವಿಶೇಷ್ಯೆರ್ಗೋರಸೋದ್ಭವೈಃ ||೫೫೪ ||
ಭೋಜನಂ ಪ್ರೇಷಣೀಯಂ ಚ ತಥಾ ಮಿತ್ರಗೃಹೇ ದ್ವಿಜ |
ತಂತ್ರೀವಾದ್ಯಂ ಸುಮಧುರಂ ಶ್ರೋತವ್ಯಂ ಸ್ವಾಶಿತೈಃ ಸುಖಮ್ ||೫೫೮ ||
ತತಃ ಪ್ರಭೃತಿ ಕಶ್ಮೀರಾ ಋತುಸ್ನಾತಾ ದ್ವಿಜೋತ್ತಮ |
ಗರ್ಭಂ ಗೃಹ್ಯಾತ್ಮತಃ ಕಾರ್ಯಂ ಕೃಷ್ಯಾರಂಭಂ ತತಃ ಪರಮ್ ||೫೫೯ ||

[ಹೇ ದ್ವಿಜ, ಫಾಲ್ಗುಣ ಕೃಷ್ಣಪಂಚಮಿಯಿಂದ ಪೃಥ್ವಿಯು – ಕಶ್ಮೀರ ಭೂಮಿ – ರಜಸ್ವಲೆಯಾಗುತ್ತಾಳೆ. ಹಾಗಾಗಿ ಆನಂತರವೇ ಅವಳ ಪೂಜೆ ಮಾಡಬೇಕಾದ್ದು ಆವಶ್ಯಕ. ಕಶ್ಮೀರ ಭೂಮಿಯ ಶಿಲಾಮೂರ್ತಿಯೊಂದನ್ನು ನಿರ್ಮಿಸಿ, ಅದನ್ನು ಅಭ್ಯಂಗ – ವಸ್ತ್ರಾದಿಗಳಿಂದ ಪೂಜಿಸಿ ನೈವೇದ್ಯವನ್ನು ಸಮರ್ಪಿಸಬೇಕು. ಅಂದರೆ ಈ ಪೂಜೆಯನ್ನು ಮೂರು ದಿನಗಳ ನಂತರದಲ್ಲಿ, ಫಾಲ್ಗುಣ ಕೃಷ್ಣಾಷ್ಟಮಿಯಂದು ಕೇವಲ ಸ್ತ್ರೀಯರಷ್ಟೆ ಮಾಡುವಂಥದು. ಮೊದಲ ಮೂರು ದಿನಗಳಲ್ಲಿ ದೇವಿಗೆ ಸ್ನಾನ, ಪುಷ್ಪ, ಧೂಪ, ಅಲಂಕಾರ, ನೈವೇದ್ಯ, ಗೋರಸದಾನ (ಹಾಲು, ಮೊಸರಿನ ಅಭಿಷೇಕ) ಇತ್ಯಾದಿ ಉಪಚಾರಗಳನ್ನೆಲ್ಲ ಪೂರ್ಣವಾಗಿ ವರ್ಜ್ಯವೆಂದು ಮಾನ್ಯ ಮಾಡಲಾಗಿದೆ. ಅಷ್ಟಮಿಯ ದಿನದಂದು ಪ್ರಥಮವಾಗಿ ಮುತ್ತೈದೆ (ಸುವಾಸಿನಿ)ಯರು ದೇವಿಗೆ ಸ್ನಾನ ಮಾಡಿಸಿ ಪೂಜಿಸಬೇಕು. ಆನಂತರ ಬ್ರಾಹ್ಮಣರು ಸರ್ವೌಷಾಧಾದಿಯುಕ್ತವಾದ ಮಡಕೆಗಳಿಂದ ಅವಳಿಗೆ ಅಭ್ಯಂಜನ ಮಾಡಿಸಿ, ಗಂಧ – ಮಾಲ್ಯದಿಗಳಿಂದಲೂ, ಧಾನ್ಯ – ಫಲಾದಿಗಳಿಂದಲೂ, ವಸ್ತ್ರಾಲಂಕಾರದಿಂದಲೂ, ರತ್ನಗಳಿಂದಲೂ ಪೂಜಿಸುವುದು ರೂಢಿ. ಆಗ್ಗೆ ಅವಳಿಗೆ ಗೋರಸೋದ್ಭವದ ಅನ್ನ ವಿಶೇಷವುಳ್ಳ ನೈವೇದ್ಯದ ಸಮರ್ಪಣೆಯಾಗುತ್ತದೆ. ತದನಂತರದಲ್ಲಿ ಇಷ್ಟಮಿತ್ರರ ಮನೆಗೆ ಭೋಜನದ ಪದಾರ್ಥಗಳನ್ನು ಕಳುಹಿಸಲಾಗುವುದು. ಭೋಜನೋತ್ತರದಲ್ಲಿ ಸುಮಧುರವಾಗಿ ತಂತೀವಾದ್ಯಗಳನ್ನು ನುಡಿಸುವ ಕಾರ್ಯಕ್ರಮವಿರುತ್ತದೆ. ಹೇ ದ್ವಿಜನೇ, ಈ ರೀತಿಯಲ್ಲಿ ಋತುಸ್ನಾತಳಾದ ಕಶ್ಮೀರಾ ಭೂಮಿಯು ನಂತರ ಗರ್ಭಧಾರಣೆ ಮಾಡುತ್ತಾಳೆ. ಎಂತಲೇ ಈ ಎಲ್ಲವೂ ಮುಗಿದ ಮೇಲೆ ಕೃಷಿಕರ್ಮಕ್ಕೆ ಆರಂಭವನ್ನು ಮಾಡಬೇಕು.]

ಕಾಶ್ಮೀರದಲ್ಲಿನ ಈ ರಾಜ್ಞೀಸ್ನಾಪನ ವ್ರತದಲ್ಲಿನ ರಾಜ್ಞಿಯು ಸೂರ್ಯ ಪತ್ನಿಯಾದ ಪೃಥ್ವಿಯೇ ಎಂಬುದು ಅಲ್ಲಿನವರ ದೃಢವಾದ ನಂಬಿಕೆ. ಎಂತಲೇ ಇಲ್ಲಿ ದ್ಯಾವಾ – ಪೃಥ್ವಿಯರ ಆದಿ ಮಿಥುನದ ಸಂಕೇತವು ಬಹಳ ಸ್ಪಷ್ಟವಾಗಿಯೇ ವ್ಯಕ್ತವಾಗಿದೆ.

ಕೇರಳದಲ್ಲಿನತ್ರಿಪ್ಪುಖರಟ್ಟುಮತ್ತುಉಛಾರಲ

ಬ್ರೀಫ್ ಎಂಬಾತನು ತನ್ನ ‘ದಿ ಮದರ್ಸ್’ ಎಂಬ ಕೃತಿಯಲ್ಲಿನ ‘ನಿಷೇಧ’ (Tabus) ಎಂಬ ಪ್ರಕರಣದಲ್ಲಿ ರಜೋ ವಿಷಯಕ ಸಂಕೇತಗಳ ಬಗ್ಗೆ ವಿವರಿಸಿದ್ದಾನೆ. ಭಾರತದಲ್ಲಿನ ರಜ ಉತ್ಸವಗಳ ಬಗ್ಗೆ ಅಲ್ಲಿ ಹೀಗೆ ಹೇಳಲಾಗಿದೆ:[14]

“It is not unlikely that on her ‘evil day’ the Goddess was thought to be actually menstruating. The notion that goddesses are subject to the infirmities of mortal women is common in India today. Thus in Bengal it is believed that at the first burst of rain Mother Earth prepared herself for being fertilized by menstruating. During that time there is an entire cessation from – all ploughing, sowing and other farm work. he menstruating of the Earth Goddess is thus observed by Bengali as Sabbath. In Travancore there is an important ceremony known as ‘trippukharattu’ or purification ceremony, in connection with the menstruation of the Goddess, which is believed to take place about eight or ten times a year, in which a cloth wrapped around the mortal image of the Goddess is found to be discoloured with red spots and is subsequently in demand as a holy relic. Another menstruating Goddess is found at Chunganpur”.

ಸ್ತ್ರೀ ಹಾಗೂ ಪೃಥ್ವಿಯ ದೇಹಧರ್ಮ ಮ್ತು ತದಾನುಷಂಗಿಕವಾದ ಸೃಷ್ಟಿ – ಪ್ರಕ್ರಿಯೆ ಸಮಾನವಾದುದು ಎಂಬ ಧೋರಣೆ ಪ್ರಚಲಿತವಾಗಿರುವ ಪೂರ್ವ ಭಾರತದ ‘ಅಂಬುವಾಚಿ’ ಉತ್ಸವದ ಬಗ್ಗೆ ಬ್ರೀಫ್‌ನು ಬಹಳ ಸ್ಪಷ್ಟವಾಗಿಯೇ ಹೇಳಿದ್ದಾನೆ. ಹಾಗೆಯೇ ಆತ ದಕ್ಷಿಣ ಭಾರತದ ಕೇರಳದಲ್ಲಿಯೂ ಅದರಂಥದದ್ದೇ ಒಂದು ಸ್ವರೂಪವು ಕಾಣಸಿಗುವುದಾಗಿ ಸ್ಪಷ್ಟವಾಗಿ ಗುರುತಿಸಿದ್ದಾನೆ. ವಿಶೇಷವೆಂದರೆ ಕಾಮಾಖ್ಯ ಕ್ಷೇತ್ರದಲ್ಲಿಯ ‘ಅಂಬುವಾಚಿ’ ಉತ್ಸವದಲ್ಲಿ ಹೇಗೆ ದೇವಿಯ ರಜೋರಂಜಿತ ವಸ್ತ್ರವನ್ನು ಪ್ರಸಾದವಾಗಿ ಪವಿತ್ರ ಭಾವನೆಯಿಂದ ಸ್ವೀಕರಿಸಲಾಗುವುದೋ ಹಾಗೆಯೇ ಇಲ್ಲಿನ ತಿರುವಾಂಕೂರಿನ ‘ತ್ರಿಪ್ಪುಖರಟ್ಟು’ ಉತ್ಸವದಲ್ಲಿಯೂ ಪ್ರಸಾದ ರೂಪವಾಗಿ ಸ್ವೀಕರಿಸುತ್ತಾರೆ ಭಕ್ತಜನ. ಬ್ರೀಫನು ನೀಡಿರುವ ಈ ಮಾಹಿತಿಯು ಅತ್ಯಂತ ಮಹತ್ವವಾಗುವುದು ಈ ಕಾರಣದಿಂದಲೇ.

ಶ್ರೀ ಪದ್ಮನಾಭ ಮೆನನ್ ಅವರು ತಮ್ಮ ಕೇರಳದ ಇತಿಹಾಸ ಕೃತಿಯಲ್ಲಿ ‘ಉಛಾರಲ’ ಎಂಬ ಉತ್ಸವವನ್ನು ಕುರಿತು ಪ್ರಸ್ತಾಪಿಸಿದ್ದಾರೆ:[15] ಕೇರಳದಲ್ಲಿ ಭಗವತಿಯ ಈ ರಜೋದರ್ಶನ ಉತ್ಸವವು ಸುಗ್ಗಿ ಕಾಲಾನಂತರ ಅಂದರೆ ಮಕರಮ್ (ಜನವರಿ – ಫೆಬ್ರುವರಿ) ತಿಂಗಳ ಕೊನೆಯಲ್ಲಿ ನಡೆಯುತ್ತದೆ. ಉತ್ಸವದ ಮೊದಲ ದಿನ ಎಲ್ಲಾ ಧಾನ್ಯಾಗಾರಗಳ ಬಾಗಿಲುಗಳಿಗೆ ಕೋಲು ಮತ್ತು ಪೊರಕೆಗಳನ್ನು ಇಟ್ಟು ಬಾಗಿಲುಗಳನ್ನು ಭದ್ರಪಡಿಸುತ್ತಾರೆ. ಈ ಉತ್ಸವದ ಕಾಲದಲ್ಲಿ ಮೂರು ದಿನಗಳವರೆಗೂ ಅದನ್ನು ತೆರೆಯುವುದಿಲ್ಲ. ಧಾನ್ಯಗಳನ್ನು ಮಾರುವುದಾಗಲೀ, ಮನೆ – ಅಂಗಳ – ತೋಟಗಳನ್ನು ಗುಡಿಸುವುದಾಗಲೀ, ನೀರು ಸಿಂಪಡಿಸುವುದಾಗಲೀ ಮಾಡುವುದಿಲ್ಲ. ಅಲ್ಲದೆ ಬೇಸಾಯದ (ಹೊಲ) ಉಪಕರಣಗಳನ್ನು ಯಾರೂ ಮುಟ್ಟುವುದಿಲ್ಲ. ನಾಲ್ಕನೆಯ ದಿನದಂದು ಭಗವತಿಯನ್ನು ಶುದ್ಧಗೊಳಿಸಿದ ನಂತರವೇ ಈ ಧಾನ್ಯಾಗಾರಗಳನ್ನು ತೆರೆಯುವುದು. ಆನಂತರ ಒಂದು ಬುಟ್ಟಿಯ ತುಂಬ ಎಲೆಗಳನ್ನು ಒಯ್ದು ಗೊಬ್ಬರದಲ್ಲಿ ಮಿಶ್ರಣ ಮಾಡಿ ಹೊಲಕ್ಕೆ ಹಾಕುತ್ತಾರೆ. ವಲ್ಲುವನಾಡು ತಾಲೂಕಿನ ಚೇರಪ್ಪಾಶ್ಶೇರಿ ಹಾಗೂ ಶೋರನೂರು ಇತ್ಯಾದಿ ಭಾಗಗಳಲ್ಲಿ ಈ ಉತ್ಸವ ವಿಶೇಷವಾಗಿ ಪ್ರಸಿದ್ಧವಾಗಿದೆ.

ರಜೋದ್ರವ್ಯ ಮತ್ತು ಸರ್ಪದಂಶ

ಜಗತ್ತಿನ ಅನೇಕ ಜನಾಂಗಗಳಲ್ಲಿ ಸರ್ಪ ಮತ್ತು ರಜಸ್ರವಕ್ಕೆ ಸಂಬಂಧ ಕಲ್ಪಿಸಿರುವುದು ಸಾಮಾನ್ಯ ಸಂಗತಿ. ರಜಸ್ರವದೊಂದಿಗೆ ಚಂದ್ರನ ಸಂಬಂಧ ಕಲ್ಪಿಸಿರುವಂತೆಯೇ, ಸರ್ಪವನ್ನು ಕಾರಣೀಭೂತವಾಗಿ ಮಾನ್ಯ ಮಾಡಿರುವುದೂ ಅನೇಕ ಸಮಾಜಗಳಲ್ಲಿ ಕಾಣಸಿಗುವ ಸಾಮಾನ್ಯ ಅಂಶ. ಪ್ಯಾಪುಯನ್ ಜನರ ನಂಬಿಕೆಯಂತೆ ಸ್ತ್ರೀಯ ಜನನೇಂದ್ರಿಯವನ್ನು ಸರ್ಪವು ಕಚ್ಚುವುದರಿಂದ ರಜಸ್ರವ ಉಂಟಾಗುವುದು. ಈ ಅಂಶ ಅವರ ಕಾಷ್ಠ ಶಿಲ್ಪಗಳಲ್ಲಿ ಸೂಕ್ಷ್ಮವಾಗಿ ವ್ಯಕ್ತವಾಗಿರುವುದು ಅವುಗಳ ಪರಿಶೀಲನೆಯಿಂದ ತಿಳಿದುಬಂದಿದೆ. ಬ್ರೀಫನು ಸರ್ಪ ಮತ್ತು ರಜಸ್ರವಗಳ ಸಂಬಂಧವಾಗಿ ಅನೇಕ ಅಂಶಗಳನ್ನು ದಾಖಲಿಸಿದ್ದಾನಲ್ಲದೆ, ಅದಕ್ಕೆ ಇರುವ ಕಾರಣಗಳನ್ನು ಹೇಳಿದ್ದಾನೆ:[16] ”This notion has been thought to derive from the phalic shape of the animal, and that idea it undoubtedly present in those world wide beliefs.”

ಬಂಗಾಲದಲ್ಲಿ ‘ಅಂಬುವಾಚಿ’ ಉತ್ಸವದಲ್ಲಿನ ಒಂದು ಯಾವಾತ್ಮಕ ಕ್ರಿಯೆಯಲ್ಲಿ ರಜಸ್ರವ ಮತ್ತು ಸರ್ಪಗಳ ಸಂಬಂಧ ಭಿನ್ನವಾದುದಾಗಿದೆ. ‘ಅಂಬುವಾಚಿ‘ಯ ಕಾಲದಲ್ಲಿ (ಆಷಾಢ ಶುಕ್ಲ ಸಪ್ತಮಿಯಿಂದ ದಶಮಿ) ಬಂಗಾಲದ ಜನತೆ ಹಾಲಿನಲ್ಲಿ ಮಾವಿನ ರಸವನ್ನು ಬೆರೆಸಿ ಒಂದು ಬಗೆಯ ಪೇಯ ತಯಾರಿಸಿ ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ವರ್ಷ ಪೂರ್ತಿ ಸರ್ಪದಂಶ (ಕಡಿತ)ದ ಭಯವಿರುವುದಿಲ್ಲ ಎಂಬುದು ಅವರಲ್ಲಿನ ನಂಬಿಕೆ.[17] ‘ಅಂಬುವಾಚಿ‘ಯ ಕಾಲ, ಮಾವಿನರಸ ಮಿಶ್ರಿತ ಹಾಲಿನ ಪಾನ ಮತ್ತು ಸರ್ಪದಂಶ ಭಯದ ಮುಕ್ತತೆ ಇವುಗಳ ರಹಸ್ಯವಾದರೂ ಏನು? ಎಂಬ ಪ್ರಶ್ನೆ ಏಳುವುದು ಸ್ವಾಭಾವಿಕವೇ. ಇದಕ್ಕೆ ಬ್ರೀಫ್ ಹೇಳಿರುವ ಉತ್ತರವನ್ನು ಪರಿಶೀಲಿಸುವುದಕ್ಕೆ ಮುನ್ನ ಸರ್ಪ – ನಾಗಗಳ ಪ್ರತೀಕಾತ್ಮಕತೆಯನ್ನು ಅರ್ಥ ಮಾಡಿಕೊಳ್ಳಬೇಕಾದ್ದು ಅವಶ್ಯ: ನಾಗ, ಸರ್ಪ ಇವು ಪುರುಷೇಂದ್ರಿಯ ಅರ್ಥಾತ್ ಪುರುಷ ತತ್ತ್ವದ ಪ್ರತೀಕಗಳು. ಬ್ರೀಫನು ಈ ಮೇಲೆ ಹೇಳಿರುವ ವಿಧಾನದಲ್ಲಿಯೂ ಸರ್ಪದ ವಿಷಯವಾಗಿ ಪ್ರಕಟವಾಗಿರುವುದು ಇದೇ ಭಾವವೇ. ಸ್ತ್ರೀಯು ರಜಸ್ವಾಲಾವಸ್ಥೆಯಲ್ಲಿ ಇರುವಾಗ ಇಲ್ಲವೆ ಅವಳು ಗರ್ಭಿಣಿಯಾಗಿರುವಾಗ ಅವಳೊಡನೆ ಪುರುಷ ಸಂಬಂಧ ನಿಷಿದ್ಧತೆಯು ಇಲ್ಲಿ ಮಾನ್ಯ. ಗರ್ಭಿಣಿ ಸ್ತ್ರೀ ಮತ್ತು ನಾಗ ಇವರಲ್ಲಿ ಪರಸ್ಪರ ಕೇವಲ ದೃಷ್ಟಾದೃಷ್ಟಿಯಾದರೂ ಸಾಕು, ಈ ನಿಷೇಧ ಭಂಗದ ಅಪರಾಧಕ್ಕಾಗಿ ನಾಗದ ದೃಷ್ಟಿಯೇ ಇಲ್ಲವಾಗುತ್ತದೆ. ಅದರಿಂದ ನಾಗನಿಗೆ ಮುಕ್ತಿ ಬರುವುದು, ಆ ಸ್ತ್ರೀ ಪ್ರಸೂತಳಾದ ಮೇಲೆ ಅವಳ ಸ್ನಾನದ ನೀರನ್ನು ಸ್ಪರ್ಷಿಸಿದ ಮೇಲೆಯೇ. ಈ ಕಲ್ಪನೆ ಭಾರತಾದ್ಯಂತ ಇರುವಂಥದ್ದಾಗಿದೆ.[18] ನಾಗ – ಸರ್ಪ ಮತ್ತು ಪುರುಷ ಹಾಗೂ ಪೃಥ್ವಿ ಮತ್ತು ಸ್ತ್ರೀಯರಲ್ಲಿ ಸಾಧಿತವಾಗಿರುವ ಏಕರೂಪತೆಯನ್ನು ಗಮನಿಸಿದರೆ, ಸ್ತ್ರೀರೂಪಿ ಪೃಥ್ವಿಯ ರಜೋದ್ರವ್ಯದಲ್ಲಿಯೇ ಪುರುಷರೂಪಿ ನಾಗ ಅಥವಾ ಸರ್ಪದ ಸಂಪರ್ಕವನ್ನು ಕಳೆಯುವಂಥ ಸಾಮರ್ಥ್ಯವಿದೆ. ಈ ಮಾತು ಗರ್ಭಧಾರಣೆಯನ್ನುದೃಢಗೊಳಿಸುವುದು ತೀರಾ ಸ್ವಾಭಾವಿಕವೇ. ಹಾಲಿನಲ್ಲಿ ಮಾವಿನರಸವನ್ನು ಮಿಶ್ರಣ ಮಾಡಿದಂಥ ರಕ್ತವರ್ಣ ಪೇಯವನ್ನು ಕುಡಿಯುವುದೆಂದರೆ ಪ್ರತೀಕಾತ್ಮಕವಾಗಿ ರಜೋದ್ರವ್ಯವನ್ನೇ ಪಾನ ಮಾಡುವಂಥ ಕಲ್ಪನೆಯಾಗಿದೆ. ತನ್ನ ಗರ್ಭದಾನ ವಿಧಿಯಲ್ಲಿನ ಸ್ವರೂಪವನ್ನೇ ಕ್ರಿಯೆಯಾಗಿ ತುಲನೆ ಮಾಡಿದಾಗ ಈ ಕಲ್ಪನೆಯಲ್ಲಿನ ಯಾವತ್ಮಕ ಶ್ರದ್ಧೆಯು ತಿಳಿಯುತ್ತದೆ. ಯಾವ ರಜೋದ್ರವ್ಯ ಸಂಪರ್ಕ ನಿಷೇಧವನ್ನು (ಸ್ವತಃ ಪುರುಷರೂಪವಾಗಿರುವುದರಿಂದ) ಸರ್ಪ ಅಥವಾ ನಾಗವು ಅತ್ಯಂತ ನಿಷ್ಠೆಯಿಂದ ಪಾಲಿಸಬೇಕಾಗಿ ಬರುತ್ತದೆಯೋ ಅಂಥ ದ್ರವ್ಯದ ಪ್ರತೀಕವನ್ನೇ ಪ್ರಾಶನ ಮಾಡುವುದರಿಂದ ನಮಗೆ ಅದರ ದಂಶದ ಭಯವೇ ಇರುವುದಿಲ್ಲ ಎಂಬುದೇ ಈ ಕ್ರಿಯೆಯ ಹಿಂದಣ ಮಾನಸಿಕ ನೆಲೆಯಾಗಿರುವುದು.

 

[1] Folklore of Assam: Jogesh Das, New Delhi, 1972, p. 90.

[2]ಮಹಾರಾಷ್ಟ್ರಸಾಹಿತ್ಯಪತ್ರಿಕಾ : ವರ್ಷ ೪, ಅಂಕ ೧ – ೨, ಮಾರ್ಚ್‌ – ಜೂನ್‌ ೧೯೩೧ (ಕೃ.ವಿ. ವಝೇ ಅವರ ಭಾರತೀಯ ಕೃಷಿ ಶಾಸ್ತ್ರ : ವೃಕ್ಷ ವಿದ್ಯಾಎಂಬ ಲೇಖನದ ಆರಂಭ ಉದ್ಧೃತ. ಈ ಅವತರಣಿಕೆಯ ಮೂಲಾಧಾರವನ್ನು ಈ ಲೇಖಕರು ನೀಡಿರುವುದಿಲ್ಲ.

[3]ಕೃಷಿಪರಾಶರ: (ಸಂ.) ಗಿರಿಜಾಪ್ರಸನ್ನ ಮುಜುಮದಾರ, ಸುರೇಶಚಂದ್ರ ಬ್ಯಾನರ್ಜಿ, ಕೊಲ್ಕತ್ತಾ ೧೯೬೦, ಶ್ಲೋಕ ಕ್ರಮಾಂಕ ೧೦ ಪುಟ – ೨.

[4]ಅದೇ : ಪುಟ – ೪೩

[5] Folklore of Assam : p. 90 – 92

[6]ಕಾಮರೂಪ ಕಾಮಾಖ್ಯಾ: ಧರಣೀಕಾಂತದೇವ ಶರ್ಮ, ಕಾಮಾಖ್ಯಾ, ೧೯೫೩, ಪುಟ ೭೯ ರಿಂದ ಉದ್ಧೃತ.

[7] Folklore of Assam : p. 91

[8] Myth and Reality : D.D. Kosambi, Bombay, 1972, p.95.

[9] Folklore of Assam : p. 91

[10] Mother Goddess Kamakhya : Banikant Kakati, Gauhati, 1948. p.45.

[11]ಪ್ರಾಚೀನ ಭಾರತೀಯ ಲೋಕಧರ್ಮ : ವಾಸುದೇವ ಶರಣ ಅಗ್ರವಾಲ, ವಾರಣಾಸಿ, ೧೯೬೪, ಪುಟ – ೧೧೬.

[12] History of Dharmashastra : Vol. V. Part I: P.V. Kane, Poona, p. 391.

[13] The Nilamata Purana : Vol II [Text with English Translation]; Robert Birfault, London, 1959, p.253.

[14] History of Kerala : part I: Padmanabha Menan, pp.99 – 100.

[15] The Mothers : p.315.

[16] The Quarterly Journal of the mythic society vol. XLIX, No.1. April 1958, p. 18. [`The serpent in Folk – Belief in Bengal’: by Asutosh Bhattacharya, pp.4 – 24.] [17]ನೋಡಿ : ಪ್ರಸ್ತುತ ಕೃತಿಯಲ್ಲಿನ ಸುಬ್ರಹ್ಮಣ್ಯಎಂಬ ಪ್ರಕರಣ.

[18] ಸಮನ್ವಯ[ಕೇಂದ್ರೀಯ ಹಿಂದಿ ಸಂಸ್ಥಾನ, ಆಗ್ರಾ], ವರ್ಷ ೧೪, ಅಂಕ ಕ್ರಮಾಂಕ ೧೪, ೧೯೭೨ – ೭೩, ಪುಟ ೧೧೦ – ೧೧೨. [‘ಉತ್ಕಲ್ಕಾ ರಜ ಉತ್ಸವ: ಕಾನ್ಹೂಚರಣ ಪಂಡಾ].