ಒರಿಸ್ಸಾದಲ್ಲಿನ ರಜ ಉತ್ಸವ

ಅಸ್ಸಾಂ ಮತ್ತು ಬಂಗಾಳ ಪ್ರಾಂತ್ಯಗಳಲ್ಲಿ ಅಂಬುವಾಚಿ ಉತ್ಸವ ನಡೆಯುವಂತೆಯೇ ಒರಿಸ್ಸಾದಲ್ಲಿಯೂ ‘ರಜ ಉತ್ಸವ’ ನಡೆಯುತ್ತದೆ.[1] ಒರಿಸ್ಸಾದ ಅತ್ಯಂತ ಜನಪ್ರಿಯ ಉತ್ಸವಗಳಲ್ಲಿ ಒಂದಾಗಿ ಹೇಳಲಾಗಿದೆ ಇದನ್ನು. ಜೇಷ್ಠ ಮಾಸದ ಕೊನೆಯ ದಿನ ಹಾಗೂ ಆಷಾಢದ ಮೊದಲೆರಡು ದಿನಗಳು ಹೀಗೆ ಒಟ್ಟು ಮೂರು ದಿನಗಳ ಕಾಲವನ್ನು ಪೃಥ್ವಿಯ ರಜಸ್ವಲಾವಸ್ಥೆಯ ದಿನವೆಂದು ನಂಬುತ್ತಾರೆ ಇಲ್ಲಿ:

ವೃಷಾಂತೇ ಮಿಥುನವಸ್ಥಾದೌ ತದ್ದ್ವಿತೀಯೇ ದಿನತ್ರಯಂ |
ರಜಸ್ವಲಾ ಸ್ಯಾತ್ಪೃಥಿವೀ ಕೃಷಿಕರ್ಮ ವಿಗರ್ಹಿತಮ್ ||

[ವೃಷ ಎಂದರೆ ಜೇಷ್ಠ ಮಾಸದ ಕೊನೆಯ ದಿನ, ಮಿಥುನ ಎಂದರೆ ಆಷಾಢ ಮಾಸದ ಮೊದಲನೆಯ ಹಾಗೂ ಎರಡನೆಯ ದಿನ. ಈ ಮೂರು ದಿನಗಳಲ್ಲಿ ಪೃಥ್ವಿ ರಜಸ್ವಲೆಯಾಗಿರುತ್ತದೆ ಹಾಗಾಗಿ ಈ ಕಾಲದಲ್ಲಿ ಕರಷಿಕಾರ್ಯವು ವರ್ಜ್ಯವೆಂದು ಮಾನ್ಯ ಮಾಡಲಾಗಿದೆ.]

ಪೃಥ್ವಿಯ ರಜಸ್ವಲಾವಸ್ಥೆಯ ಈ ಮೂರು ದಿನಗಳ ಪೈಕಿ ಮೊದಲನೆಯ ದಿನಕ್ಕೆ ‘ಪಹೀಲಾ ರಜ’, ಎರಡನೆಯ ದಿನಕ್ಕೆ ‘ಭುಈ ನಅಣ’ ಮತ್ತು ಮೂರನೆಯ ದಿನಕ್ಕೆ ‘ರಾಕುರಾಣಿ ಗಾಧು ಆಂ’ ಎಂದು ಹೆಸರಿಸಿದ್ದಾರೆ. ಈ ಮೂರು ದಿನಗಳ ಉತ್ಸವವನ್ನು ‘ರಜ ಉತ್ಸವ’ ಎಂದು ಸಾಂಕೇತಿಕವಾಗಿ ಹೇಳಲಾಗಿದೆ. ಈ ಮೂರು ದಿನಗಳಲ್ಲಿ ಉತ್ಕಲ ವಾಸಿಗಳಾದ ಈ ಜನರು ನೇಗಿಲು ಹಿಡಿಯುವುದು, ಬಿತ್ತುವುದು, ಜಮೀನು ಅಗೆಯುವುದು ಹಾಗೂ ಕುಟ್ಟುವುದು, ಬೀಸುವುದು ಇತ್ಯಾದಿ ಕ್ರಿಯೆಗಳನ್ನು ಮಾಡುವುದಿಲ್ಲ:

ಹಲಾನಾಂ ವಾಹನಂ ಚೈವ ಬೀಜಾನಾಂ ವಪನಂ ತಥಾ |
ತಾವದೇವ ನ ಕುರ್ವಂತಿ ಯಾವತ್ ಪೃಥ್ವೀ ರಜಸ್ವಲಾ ||
ಪೃಥ್ವೀ ರಜಸ್ವಲಾ ಯಾವತಂ ಖನನಂ ಛೇದನಂ ತ್ಯಜೇತ್ |

[ಎಲ್ಲಿಯವರೆಗೆ ಪೃಥ್ವಿ ರಜಸ್ವಲೆಯಾಗಿರುತ್ತಾಳೋ ಅಲ್ಲಿಯವರೆಗೆ ನೇಗಿಲಿನಿಂದ ಉಳುವುದು, ಬೀಜಗಳನ್ನು ಬಿತ್ತುವುದು ಇಂಥ ಕೆಲಸಗಳಿಂದ ದೂರವಾಗಿರು. ಅದರಂತೆಯೇ ಈ ಕಾಲದಲ್ಲಿ ಕೆತ್ತುವುದು ಮತ್ತು ಕಡಿಯುವಂತಹ ಕ್ರಿಯೆಯನ್ನೂ ಮಾಡುವುದು ಸಲ್ಲ.]

ಈ ಉತ್ಸವದ ಕಾಲದಲ್ಲಿ ಒರಿಸ್ಸಾದಾದ್ಯಂತ ಸಾರ್ವತ್ರಿಕ ರಜೆ ಘೋಷಿತವಾಗಿರುತ್ತದೆ. ಇದರ ಆರಂಭಕ್ಕೆ ಮುನ್ನವೇ ಭರ್ಜರಿ ತಯಾರಿ ನಡೆಸಿರುತ್ತಾರೆ ಇಲ್ಲಿನ ಜನ. ಜನಪದ ನರ್ತಕರ ವೃಂದವು ತಂತಮ್ಮ ವಾದ್ಯಸಮೂಹಗಳೊಂದಿಗೆ ಸಿದ್ಧರಾಗುತ್ತಾರೆ. ‘ಪಾಲಾ’ ಎಂಬ ಹೆಸರಿನ ಪ್ರಖ್ಯಾತ ಒರಿಯಾ ಜನಪದೀಯ ನೃತ್ಯ ವಾದ್ಯವು ಈ ಕಾಲದಲ್ಲಿ ಇಡೀ ಒರಿಸ್ಸಾದ ಊರೂರುಗಳಲ್ಲೆಲ್ಲ ಕಣ್ಸೆಳೆಯುತ್ತಿರುತ್ತದೆ. ಮೃದಂಗ, ಕರತಾಲ, ತಬಲ, ಪಖವಾಜ (ಮದ್ದಲೆ), ಬಾಂಸರಿ (ಕೊಳಲು) ಹಾಗೂ ಬಿಗುಲ – ಈ ವಾದ್ಯಗಳ ನಿರಂತರವಾದ ದನಿಗಳಿಂದ ತುಂಬು ನಿನಾದಗೊಳ್ಳುತ್ತಿರುತ್ತದೆ ಸಕಲ ಉತ್ಕಲ ಪ್ರದೇಶ. ಜೊತೆಗೆ ಜನಪದ ನಾಟ್ಯಗಳೂ ಸಾದರಗೊಳ್ಳುತ್ತಿರುತ್ತವೆ. ಇಡೀ ವರ್ಷದ ದುಃಖ ದುಮ್ಮಾನಗಳನ್ನೆಲ್ಲ ಮರೆತು ರಂಗುರಂಗಾಗಿ ಸಂಭ್ರಮಿಸುತ್ತಾರೆ ಈ ಉತ್ಸವದಲ್ಲಿ ಎಲ್ಲ ಉತ್ಕಲ ವಾಸಿಗಳು.

ವಿಶೇಷವಾಗಿ ಕುಮಾರಿಯರು ಮತ್ತು ನವವಧುಗಳು ‘ಪಹಿಲಾರಜ’ (ಮೊದಲ ರಜಸ್ವಲೆ)ದ ಬೆಳಗಿನಲ್ಲೇ ಸ್ನಾನ ಮಾಡಿ ಸ್ವಚ್ಛ ವಸ್ತ್ರವನ್ನು ಧರಿಸುತ್ತಾರೆ. ಚಪ್ಪಲಿ ಇಲ್ಲವೆ ಖಡಾವಿಗೆ (ಕಟ್ಟಿಗೆಯ ಪಾದತ್ರಾಣ)ಯನ್ನು ಮೆಟ್ಟಿಕೊಂಡಿದ್ದು, ಯಾವುದೇ ಗೃಹಕೃತ್ಯಗಳಿಂದ ದೂರವಾಗಿ ಇರುವರು. ಅಂದರೆ ಈ ಮೂರು ದಿನಗಳಲ್ಲಿ ಸ್ತ್ರೀಯರು ಬರಿಗಾಲಿನಿಂದ ಭೂಮಿಯನ್ನು ಸ್ಪರ್ಶಿಸುವುದಿಲ್ಲ. ಅಲ್ಲದೆ ಈ ಕಾಲದಲ್ಲಿ ಅವರು ಉಪವಾಸವಿದ್ದು ಬರಿಯ ಹಣ್ಣುಗಳನ್ನಷ್ಟೆ ಸೇವಿಸುತ್ತಿರುತ್ತಾರೆ. ಮತ್ತೊಂದು ಗಮನೀಯ ಸಂಗತಿಯೆಂದರೆ ಈ ಅವಧಿಯಲ್ಲಿ ಅವರಿಗೆ ಸ್ನಾನವೂ ನಿಷಿದ್ಧ. ಬೀದಿ ಬೀದಿಗಳಲ್ಲಿನ ಸ್ತ್ರೀಯರುಗಳೆಲ್ಲ ಒಂದೆಡೆ ಸೇರಿ ಬಹುತೇಕ ಒಂದೇ ಆಸನದ ಮೇಲೆ ಕುಳಿತೋ ಇಲ್ಲವೆ ಜೋಕಾಲಿಯಲ್ಲಿ ತೂಗಾಡುತ್ತಲೋ ಕತೆ ಹಾಗೂ ಹಾಡಿನಲ್ಲಿ ಕಾಲಕಳೆವುದು ರೂಢಿ. ಒಮ್ಮೆ ಹಾಸಿದ ಆಸನಗಳು ಮೂರು ದಿನಗಳವರೆಗೂ ಹಾಗೆಯೇ ಇರುತವೆ, ಗುಡಿಸುವ ಕಾರ್ಯಕ್ಕೂ ತೊಡಗುವುದಿಲ್ಲ. ಆಸನದಿಂದ ಎದ್ದು ಹೋಗುವ ಕಾಲಕ್ಕೆ ಯಾರೇ ಸ್ತ್ರೀಯು ಪಾದರಕ್ಷೆಗಳನ್ನು ತೊಡುವುದು ಆವಶ್ಯಕ.

ಉತ್ಸವ ಕಾಲದಲ್ಲಿ ನವವಧುಗಳಿಗೆ ತವರು ಮನೆಯಿಂದ ಉಡುಗೊರೆಯು ಬರುವುದು ರೂಢಿ. ಹೊಸ ಸೀರೆಗಳು, ಸಿಂಧೂರ ಮತ್ತು ಬಳೆಗಳೆಲ್ಲ ಸೇರಿರುತ್ತವೆ ಅದರಲ್ಲಿ. ಕುಮಾರಿಯಾಗಿದ್ದರೂಸಹ ಅವರವರ ತಂದೆ ತಾಯಿಗಳು ಹೊಸ ಸೀರೆಯನ್ನು ತರುತ್ತಾರೆ ಅವರಿಗೆ. ರಜ ಉತ್ಸವವು ಹೀಗೆ ಒರಿಸ್ಸಾದಲ್ಲಿ ಸರ್ವಾಧಿಕ್ಯವಾದ ಲೋಕೋತ್ಸವವೆಂದು ಪ್ರಸಿದ್ಧವಾಗಿದೆ.

ತಾಂತ್ರಿಕರರಜೋ ಮಹಿಮಾ

ಸೃಷ್ಟಿಕ್ರಿಯಾ ಸಂಬದ್ಧವಾಗಿರುವುದರಿಂದಲೇ ಲೋಕಧರ್ಮದಲ್ಲಿ ಹೆಚ್ಚು ಪ್ರತಿಷ್ಠೆ ಪಡೆದಿರುವುದು ಈ ರಜೋದ್ರವ್ಯ. ಇದರ ಮಹಿಮೆಯು ಸ್ತ್ರೀ ಪ್ರಧಾನವಾದ ತಂತ್ರ ಸಂಪ್ರದಾಯದಲ್ಲಿ ಅತಿಶಯವಾಗಿ ಬೆಳೆದಿರುವುದೂ ಈ ಕಾರಣಕ್ಕಾಗಿಯೇ. ವಾಮಾಚಾರ ತಾಂತ್ರಿಕರಿಗಂತೂ ರಜಸ್ವಲೆಯಾಗಿರುವಂಥ ಯೋನಿಯ ಪೂಜೆಯು ಸರ್ವಾಧಿಕ್ಯವಾಗಿ ಮಹತ್ವವಾದುದು. ‘ಭಗಮಾಲಿನೀ ರಜಸ್ವಲಾಸ್ತೋತ್ರಾ‘ದಲ್ಲಿ ರಜೋಯುಕ್ತ ಯೋನಿಪೂಜೆಯ ಮಹಿಮೆಯನ್ನು ಅತ್ಯಂತ ಉತ್ಕಟವಾದ ಶ್ರದ್ಧೆಯಿಂದ ಬಣ್ಣಿಸಲಾಗಿದೆ:[2]

ಋತುವತ್ಯಾ ಭಗಂ ಪಶ್ಯನ್ಜಪತೇ ಯದಿ ಸಾಧಕಃ |
ಕೇವಲಂ ಗುಪ್ತಭಾವೇನ ಸ ತು ವಿದ್ಯಾನಿಧಿರ್ಭವೇತ್ || ||
ರಜಸ್ವಲಾಮುಖಂ ದೃಷ್ಟೂವಾ ಸರ್ವಪಾಪೈಃ ಪ್ರಮುಚ್ಯತೇ |
ಸಂಭಾಷಣಂ ಚ ಕುರುತೇ ರಾಜಸೂಯಾಧಿಕಂ ಫಲಮ್ || ||
ತಸ್ಯಾಃ ಸ್ಮರಣಮಾತ್ರೇಣ ಲಭೇನ್ಮುಕ್ತಿಂ ಚತುರ್ವಿಧಾಮ್ |
ತಸ್ಯಾ ಲೋಕನಮಾತ್ರೇಣ ತ್ರೈಲೋಕ್ಯೋಚ್ಚಾಟನೇ ಕ್ಷಮಃ ||೧೦ ||
ಶ್ರದ್ಧಯಾ ಪೂಜಯೇತ್ ತಸ್ಯಾ ಭಂಗ ಚ ರಜಸಾನ್ವಿತಮ್ |
ಸ್ನಾನಸಂಧ್ಯಾವಿಶುದ್ಧಾತ್ಮಾ ನ್ಯಾಸಧ್ಯಾನಪರಾಯಣಃ ||೧೧ ||

[ಒಂದೊಮ್ಮೆ ಸಾಧಕರು ಋತುಮತಿಯಾದ ಸ್ತ್ರೀಯ ಯೋನಿಯೆಡೆ ದೃಷ್ಟಿಸುತ್ತಾ ಗುಪ್ತ ಭಾವದಿಂದ ಜಪ ಮಾಡಿದರೂ ಸಾಕು, ಆತ ವಿದ್ಯಾನಿಧಿಯಾಗುತ್ತಾನೆ. ರಜಸ್ವಲೆಯ ಮುಖ ದರ್ಶನವಷ್ಟರಿಂದಲೇ ಸಾಧಕನು ಸಕಲ ಪಾಪಗಳಿಂದ ಮುಕ್ತನಾಗುವನು. ಇನ್ನು ಅವಳ ಜೊತೆಗೆ ಸಂಭಾಷಣೆ ನಡೆಸಿದರೆ ರಾಜಸೂಯಯಾಗಕ್ಕಿಂತಲೂ ಅಧಿಕವಾದ ಲಾಭಪ್ರಾಪ್ತಿಯು ಲಭ್ಯವಾಗುತ್ತದೆ ಅವನಿಗೆ. ಕೇವಲ ಅವಳ ಸ್ಮರಣೆಯಿಂದಲೇ ಚತುರ್ವಿಧ ಮುಕ್ತಿಯು ಲಭ್ಯ. ಇನ್ನು ಅವಳ ಅವಲೋಕನ ಮಾಡಿದರಂತೂ ತ್ರೈಲೋಕಗಳನ್ನೇ ಉಚ್ಛಾಟಿಸುವಷ್ಟು ಸಾಮರ್ಥ್ಯ ಪ್ರಾಪ್ತವಾಗುತ್ತದೆ. ಎಂತಲೇ ಸಾಧಕರು ಸ್ನಾನ – ಸಂಧ್ಯಾವಂದನೆಗಳಿಂದ ಶುದ್ಧರಾಗಿ, ನ್ಯಾಸ – ಧ್ಯಾನ – ಪರಾಯಣರಾಗಿ ರಜಸ್ವಲೆಯಾದ ಸ್ತ್ರೀಯ ರಜೋಯುಕ್ತ ಯೋನಿಯನ್ನು ಪೂಜಿಸುತ್ತಾರೆ.]

ತಾಂತ್ರಿಕರು ಹೇಳಿರುವ ಈ ವಿಲಕ್ಷಣ ಸ್ವರೂಪದ ರಜೋ ಮಹಿಮೆಯು ಶಂಕರಾಚಾರ್ಯರ ‘ತ್ರಿಪುರ ಸುಂದರಿ ಸ್ತೋತ್ರ’ ಕೃತಿಯಲ್ಲಿಯೂ ಉಲ್ಲೇಖವಾಗಿರುವುದನ್ನು ನಾವು ಕಾಣಬಹುದಾಗಿದೆ. ಆಚಾರ್ಯರು – ‘ಸ್ಮರೇತ್ ತ್ರಿಪುರ ಸುಂದರೀಂ ರುಧಿರಬಿಂದು ನೀಲಾಂಬರಮ್ |’ ಎಂದು ಪುರಸ್ಕರಿಸಿದ್ದಾರೆ ತ್ರಿಪುರ ಸುಂದರಿಯ ಸ್ಮರಣೆಯನ್ನು. ಯಾರ ವಸ್ತ್ರವು ರಜಸ್ರವದಿಂದ ನೀಲಲೋಹಿತವಾಗಿರುವುದೋ, ಅಂಥ ತ್ರಿಪುರ ಸುಂದರಿ ಆಚಾರ್ಯರ ಸ್ಮರಣೆಯ ವಿಷಯವಾಗಿದ್ದಾಳೆ. ಈ ತಥ್ಯವು ಪ್ರಸ್ತುತ ಸಂದರ್ಭದಲ್ಲಿ ಚಿಂತನಾರ್ಹವಾದುದು. ಎಲ್ಲಾ ವಾಮಾಚಾರಿ ತಾಂತ್ರಿಕರು ರಜೋ ಮಹಿಮೆಯನ್ನು ಇಂಥ ವಿಚಿತ್ರವಾದ ಸ್ವರೂಪದಲ್ಲಿಯೇ ಹಾಡಿಹೊಗಳಿದ್ದಾರೆ. ಅವರಿಗೆ ಪ್ರಿಯವಾದ ದೇವೀ ಭಾಗವತ, ಆ ಪೂರ್ವದ ಶ್ರೀಸೂಕ್ತ, ಅದಕ್ಕಿಂತಲೂ ಪೂರ್ವದ ಋಗ್ವೇದದಲ್ಲಿನಸ್ಯವಾಮೀಯ ಸೂಕ್ತದಲ್ಲಿಯೂ ರಜದ ಮಹತ್ವವನ್ನು ಕುರಿತು ತೀರಾ ಆರೋಗ್ಯಕರ ದೃಷ್ಟಿಯಿಂದಲೇ ಹೇಳಲಾಗಿದೆ. ಸೃಷ್ಟಿ ರಹಸ್ಯದ ವಿಚಾರವನ್ನು ಅತ್ಯಂತ ಸ್ಪಷ್ಟವಾದ ಶಬ್ದಗಳಲ್ಲಿ ವರ್ಣಿಸಲಾಗಿದೆ ಇಲ್ಲಿ. ವೇದಗಳಿಂದ ಹಿಡಿದು ದೇವೀ ಭಾಗವತದವರೆಗಿನ ವಾಙ್ಮಯ ಪರಂಪರೆಯಲ್ಲಿ ಪ್ರಾತಿನಿಧಿಕ ಸ್ವರೂಪವಾಗಿಯೇ ಪ್ರಕಟಗೊಂಡಿರುವ ಈ ರಜೋ ಮಹಿಮೆಯನ್ನು ಗಮನಿಸುವುದು ಅವಶ್ಯ.

ಪೃಥ್ವಿಯರತಿಕಲಾ ಮೂರ್ತಿ

‘ಅಂಬುವಾಚಿ‘ಯ ವಿಷಯವನ್ನು ಕುರಿತಂತಹ ಉಲ್ಲೇಖವು ದೇವೀ ಭಾಗವತದಲ್ಲಿನ ಪೃಥ್ವಿವ್ಯುಪಾಖ್ಯಾನದಲ್ಲಿ (ಸ್ಕಂದ – ೯, ಅಧ್ಯಾಯ – ೯, ೧೦) ಬರುತ್ತದೆ. ವಾರಾಹ ಕಲ್ಪದಲ್ಲಿ ವರಾಹ ಅವತಾರಿಯಾದ ವಿಷ್ಣುವು ಹಿರಣ್ಯಾಕ್ಷನನ್ನು ಕೊಂದು ಪೃಥ್ವಿಯನ್ನು ರಸಾತಳದಿಂದ ಮೇಲಕ್ಕೆ ತರುವನು. ಆನಂತರದಲ್ಲಿ ಆತ ಸರೋವರದಲ್ಲಿ ಕಮಲ ಪತ್ರವನ್ನು ಇಟ್ಟಿರುವಂತೆಯೇ ಆಕೆಯನ್ನೂ ನೀರಿನಲ್ಲಿ ಪ್ರತಿಷ್ಠಾಪಿಸುತ್ತಾನೆ. ಆನಂತರದಲ್ಲಿ ಬ್ರಹ್ಮನು ಅವಳ ಮೇಲೆಯೇ ಮನೋಹರವಾದ ವಿಶ್ವವನ್ನು ನಿರ್ಮಿಸುತ್ತಾನೆ. ತನ್ನನ್ನು ರಸಾತಳದಿಂದ ಪಾರು ಮಾಡಿದ ವರಾಹನನ್ನು ನೋಡಿದ ಪೃಥ್ವಿಯು ‘ಸಕಾಮ‘ಳಾಗುತ್ತಾಳೆ. ಅವಳ ಆ ಅವಸ್ಥೆಯನ್ನು ನೋಡಿದ ಸೂರ್ಯ ಕೋಟಿ ಸಮಪ್ರಭನಾದ ವರಾಹರೂಪಿ ‘ಕಾಮುಕ’ ಹರಿಯು ಅವಳ ಸಂಪೂರ್ಣ ‘ರತಿಕಲಾ’ ಮೂರ್ತಿಯನ್ನು ನಿರ್ಮಿಸಿದ. ಆನಂತರ ಒಂದು ದಿವ್ಯವರ್ಷ ಪರ್ಯಂತ ಅಹರ್ನಿಶಿಯಾಗಿ ರತಿಕ್ರೀಡೆ ನಡೆಸುತ್ತಾನೆ ಅವಳೊಂದಿಗೆ:

ದೃಷ್ಟೂವಾ ತದಧಿದೇವೀಂ ಚ ಸಕಾಮಾಂ ಕಾಮುಕೋ ಹರಿಃ |
ವರಾಹರೂಪೀ ಭಗವಾನ್ ಕೋಟಿಸೂರ್ಯಸಮಪ್ರಭಃ ||
ಕೃತ್ವಾ ರತಿಕಲಾಂ ಸರ್ವಾಂ ಮೂರ್ತಿ ಚ ಸುಮನೋಹರಾಮ್ |
ಕ್ರೀಡಾಂ ಚಕಾರ ರಹಸಿ ದಿವ್ಯವರ್ಷಮಹರ್ನಿಶಮ್ ||
[ದೇ.ಭಾ.೯.೯. ೨೯ – ೩೦]

ಇಲ್ಲಿ ಉಲ್ಲೇಖಿಸರುವ ಪೃಥ್ವಿಯ ‘ಸರ್ವಾ ರತಿಕಲಾಮೂರ್ತಿ‘ಯು ಸುಸ್ಪಷ್ಟವಾಗಿ ರತ್ಯುತ್ಸುಕ ಅವಸ್ಥೆಯಲ್ಲಿರುವ ಭೂಮಿಯ ಯೋನಿರೂಪದ ಮೂರ್ತಿ [Nude squatting Earth – Goddess]ಯೇ ಆಗಿದ್ದಾಳೆ.[3] ಪುರಾಣಕಾರರು ಭೂದೇವಿಯ ಇಂಥ ಸ್ವರೂಪದ ಮೂರ್ತಿ (‘ಲಜ್ಜಾಗೌರಿ‘ – ಮೂರ್ತಿ)ಯು ಪ್ರತ್ಯಕ್ಷ ಪೂಜಾ ವಿಷಯವಾಗಿದ್ದುದನ್ನು ನೋಡಿಯೇ, ಆ ಮೂರ್ತಿಯ ‘ಅಂಥ’ ರೂಪದ ಸ್ಪಷ್ಟೀಕರಣಕ್ಕಾಗಿ ಈ ಭೂ – ವರಾಹ – ಸಂಭೋಗದ ಕಥೆಯನ್ನು ರಚಿಸಿರುವಂತೆ ಕಾಣುತ್ತದೆ. ವರಾಹ ರೂಪಿಯಾದ ಹರಿಯು ಪೃಥ್ವಿಯ ಸಂಪೂರ್ಣ ರತಿಕಲಾ ಮೂರ್ತಿಯೊಂದಿಗೆ ದೀರ್ಘಕಾಲ ಸಂಭೋಗ ನಡೆಸಿದ ಮೇಲೆ, ರತಿ ಕ್ಲಾಂತತೆಯು ಶಮನವಾಗಲು ತೃಪ್ತಿಯಿಂದ ಅವಳ ಧ್ಯಾನ ಮಾಡಿ, ಪೂಜಿಸಿ, ಪ್ರಸನ್ನಿತವಾಗಿ ಹೀಗೆ ಹೇಳುತ್ತಾನೆ:

ಸರ್ವಧಾರಾ ಭವ ಶುಭೇ ಸರ್ವೈಃ ಸಂಪೂಜಿತಾ ಸುಖಮ್ |
ಮುನಿಭರ್ಮನುಭದೇವೈಃ ಸಿದ್ಧೈಶ್ಚ ದಾನವಾದಿಭಿಃ ||
ಅಂಬುವಾಚೀತ್ಯಾಗದಿನೇ ಗೃಹಾರಂಭೇ ಪ್ರವೇಶನೇ |
ವಾಪೀತಡಾಗಾರಂಭೇ ಚ ಗೃಹೇಂ ಚ ಕೃಷಿಕರ್ಮಣಿ ||
ತವ ಪೂಜಾಂ ಕರಿಷ್ಯಂತಿ ಮದವರೇಣ ಸುರಾದಯಃ |
ಮೂಢಾ ಯೇ ನ ಕರಿಷ್ಯಂತಿ ಯಾಸ್ಯಂತಿ ನರಕಂ ಚ ತೇ ||
[ದೇ. ಭಾ. ೯.೯. ೩೫ – ೩೭]

[ಹೇ ಶುಭೇ, ನೀನು ಸರ್ವರಿಗೂ ಆಧಾರಳಾಗಿರುವಿ. ಮುನಿ, ಮು, ದೇವ, ಸಿದ್ಧ, ದಾನವಾದಿಗಳೆಲ್ಲರಿಂದ ಪೂಜಿಸಲ್ಪಡುತ್ತಿರುವೆ ನೀನು. ‘ಅಂಬುವಾಚಿ‘ಯ ಕಾಲ ಮುಗಿದ ನಂತರದ ದಿವಸ ಗೃಹಾರಂಭ, ಗೃಹಪ್ರವೇಶ ಪ್ರಸಂಗ, ಬಾವಿ ತೋಡುವಿಕೆ – ಉತ್ಖನನ, ಗೃಹಕೃತ್ಯ ಪ್ರಸಂಗ ಹಾಗೂ ಕೃಷಿಕರ್ಮ ಪ್ರಸಂಗಗಳಲ್ಲಿ ನ್ನನ ವರದಿಂದಾಗಿ ದೇವಾದಿಕರು ನಿನಗೆ ಪೂಜೆ ಸಲ್ಲಿಸುವರು. ಯಾವ ಮೂಢ ಜನರು ನಿನ್ನನ್ನು ಪೂಜಿಸುವುದಿಲ್ಲವೋ ಅವರು ನರಕಕ್ಕೆ ಹೋಗದಿರಲಾರರು.]

ಭೂದೇವಿಗೆ ವರಾಹ ರೂಪಿಯಾದ ಹರಿಯು ಈ ವರವನ್ನು ದಯಪಾಲಿಸಿದ ಮೇಲೆ ಪ್ರಥಮವಾಗಿ ವರಾಹ, ನಂತರ ಬ್ರಹ್ಮದೇವ, ಕೊನೆಗೆ ಇತರರೆಲ್ಲರೂ ಅವಳನ್ನು ಪೂಜಿಸಿ ಕಣ್ವಾ ಶಖೋಕ್ತ ಸ್ತೋತ್ರಗಳಿಂದ ಅವಳ ಸ್ತವನಗೈದರು. ಈ ಸ್ತವನದಲ್ಲಿ ಪೃಥ್ವಿಯನ್ನು ಕುರಿತಂತೆ ‘ಸರ್ವ ಸಸ್ಯಾಲಯ, ಸರ್ವ ಸಸ್ಯಾಢ್ಯಾ, ಸರ್ವ ಸಸ್ಯದಾ, ಸರ್ವ ಸಸ್ಯಹರ ಹಾಗೂ ಸರ್ವ ಸಸ್ಯಾತ್ಮಿಕಾ’ ಎಂಬೆಲ್ಲ ವಿಶೇಷಣಗಳನ್ನು ಬಳಸಿದ್ದಾರೆ.

ಮುಂದಿನ ಅಧ್ಯಾಯದಲ್ಲಿರುವುದು (೯, ೧೦) ಭೂಮಿದಾನ ಸಂಬಂಧವಾಗಿ ಹಾಗೂ ಭೂಮಿ ವಿಷಯಕ ವಿಧಿ ನಿಷೇಧಗಳ ಸಂಬಂಧದ ಚರ್ಚೆ. ಚರ್ಚೆಯ ಓಘದಲ್ಲಿ ಮಹರ್ಷಿ ನಾರದನು ಭಗವಂತನಿಗೆ ಪ್ರಶ್ನಿಸುವುದು ಹೀಗೆ:

ಅಂಬುವಾಚ್ಯಾಂ ಭೂಖನನೇ ವೀರ್ಯಸ್ಯ ತ್ಯಾಗ ಏವ ಚ |
ದೀಪಾದಿಸ್ಥಾಪನಾತ್ಪಾಪಂ ಶ್ರೋತುಮಿಚ್ಛಾಮಿ ಯತ್ನತಃ ||
[ದೇ.ಭಾ.೯, ೧೦.೨]

[ಭೂಮಿ ರಜಸ್ವಲೆಯಾಗಿರುವಾಗ ಅದನ್ನು ಅಗೆಯುವುದಾಗಲಿ, ಅದರ ಮೇಲೆ ವೀರ್ಯ ಸುರಿವುದನ್ನು ಮಾಡುವುದಾಗಲೀ ಇಲ್ಲವೆ ದೀಪಾದಿಕಗಳನ್ನು ಇಡುವಂಥ ಕಾರ್ಯದಲ್ಲಿ ತೊಡಗಿದ ಪಾತಕಿಯನ್ನು ನಾನು ಪ್ರಯತ್ನ ಪೂರ್ವಕವಾಗಿ ಅರಿಯುವುದು ನನ್ನ ಇಚ್ಛೆಯಾಗಿದೆ.]

ನಾರದನ ಈ ಪ್ರಶ್ನೆಗೆ ನೀಡಿದ ವಿಷ್ಣುವಿನ ಉತ್ತರದಲ್ಲಿ ‘ಅಂಬುವಾಚಿ’ ಸಂಬಂಧದ ವರ್ಜ್ಯ ಕ್ರಿಯೆಯ ವಿಚಾರವು ಇಂತಿದೆ:

ಅಂಬುವಾಚ್ಯಾಂ ಭೂಕರಣಂ ಯಃ ಕರೋತಿ ಚ ಮಾನವಃ |
ಸ ಯಾತಿ ಕೃಮಿದಂಶಂ ಚ ಸ್ಥಿತಿಸ್ತತ್ರ ಚತುರ್ಯುಗಂ ||
[ದೇ.ಭಾ.೯.೧೦.೧೪]

ದೇವೀ ಭಾಗವತದಲ್ಲಿನ ಪೃಥ್ವಿಯ ಮೂರ್ತಿ ಸಂಬಂಧವಾದ ಹಾಗೂ ಪೂಜಾ ವಿಷಯವಾದ ಈ ವಿಚಾರದಲ್ಲಿ ‘ಅಂಬುವಾಚಿ’ ಕಾಲ ವರ್ಜ್ಯ ಕ್ರಿಯೆಯ ಅಂಶಗಳು ಉಲ್ಲೇಖಗೊಂಡಿವೆ. ಇವು ಬಹಳೇ ಮಹತ್ವದವುಗಳಾಗಿವೆ. ವಿಶೇಷವಾಗಿ ಪೃಥ್ವಿಯ ರತ್ಯುತ್ಸುಕ ಅವಸ್ಥೆಯಲ್ಲಿನ ಪೂರ್ಣಯೋನಿ ರೂಪವಾದ ಮೂರ್ತಿಯನ್ನು [‘ಸರ್ವ ರತಿಕಲಾ ಮೂರ್ತಿ’.] ಪುರಾಣಕಾರರು ಉಲ್ಲೇಖಿಸಿರುವರೆಂದ ಮೇಲೆ ಅವರಿಗೆ ಭೂದೇವಿಯ ಈ ಸ್ವರೂಪದ ಮುರ್ತಿಗಳ ಬಗ್ಗೆ ತಿಳಿದಿತ್ತು ಎಂಬುದಂತೂ ಸುಸ್ಪಷ್ಟ. ‘ಲಜ್ಜಾಗೌರಿ’ ಎಂಬ ಸುಶೋಭಿತ ನಾಮ ಹೊಂದಿರುವ, ಲಂಜಿಕಾವಸ್ಥೆಯಲ್ಲಿನ [Nude squatting] ಭೂದೇವಿಯ ಅನೇಕ ಮೂರ್ತಿಗಳು ಉತ್ಖನನದಲ್ಲಿ ಲಭ್ಯವಾಗಿವೆ; ಅಂತೆಯೇ ಈ ಮೂರ್ತಿಗಳು ಅನೇಕ ಸ್ಥಳಗಳಲ್ಲಿ ಇಂದಿಗೂ ಜನಸಾಮಾನ್ಯರ ಉಪಾಸನೆಯ ವಿಷಯವೂ ಆಗಿರುವುದು ಗಮನೀಯ.[4] ಪುರಾಣಕಾರರು ಯೋನಿರೂಪದ ಮೂರ್ತಿಯ ಸಹಚರ್ಯದಿಂದಲೇ ನಿರ್ದೇಶಿಸಿರುತ್ತಾರೆ. ‘ಅಂಬುವಾಚಿ‘ಯನ್ನು. ಶಾಕ್ತ ತಾಂತ್ರಿಕರಿಗೆ ಅತ್ಯಂತ ಪ್ರಿಯವಾದ ಪುರಾಣಗಳ ಈ ಉಲ್ಲೇಖಗಳು ಒಂದು ದೃಷ್ಟಿಯಿಂದ ಅತ್ಯಂತ ಮಹತ್ವವಾದುವಾಗಿವೆ.

ಶ್ರೀಸೂಕ್ತದಲ್ಲಿನಆರ್ದ್ರಾಶ್ರೀ

ಪೃಥ್ವಿಯ ರಜಸ್ವಲಾವಸ್ಥೆಗೆ ಸಂಬಂಧಿಸಿದ ಈ ಜನಪದ ಆಚರಣೆಗಳು ಅತಿ ಪ್ರಾಚೀನವಾದುವು. ವೈದಿಕರ ‘ಶ್ರೀಸೂಕ್ತ‘ದಲ್ಲಿಯೂ ಅದರ ಸ್ಪಷ್ಟ ಪ್ರತಿಬಿಂಬ ಮೂಡಿ ಬಂದಿದೆ. ಶ್ರೀಸೂಕ್ತದಲ್ಲಿನ ಕ್ರಮಾಂಕ ೧೩ ಮತ್ತು ೧೪ ಈ ಎರಡು ಶ್ಲೋಕಗಳಲ್ಲಿ ಅವಳನ್ನು ಕರೆದಿರುವುದು ‘ಆರ್ದ್ರಾ’ ಎಂಬ ವಿಶೇಷಣದಿಂದಲೇ:

ಆರ್ದ್ರಾಂ ಪುಷ್ಕರಣೀಂ ಪುಷ್ಟಿಂ ಪಿಂಗಲಾಂ ಪದ್ಮಮಾಲಿನೀಮ್ |
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||
ಆರ್ದ್ರಾಂ ಯಷ್ಕರಣೀಂ ಯಷ್ಟಿಂ ಸುವರ್ಣಾಂ ಹೇಮಮಾಲಿನೀಮ್ |
ಸೂರ್ಯಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||

ಶ್ರೀ ಸೂಕ್ತದ ಈ ಸಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದರಲ್ಲಿನ ಶ್ರೀ ಎಂಬುದು ಋತುಚಕ್ರದ ಮುಖೇನ ಸೃಷ್ಟಿಕ್ರಿಯೆಗೆ ನಿರಂತರ ಚಾಲನೆ ನೀಡುವಂಥ ಪೃಥ್ವಿಯೇ ಆಗಿರುವುದಂತೂ ಖಚಿತ. ಶ್ರೀ ಜೆ.ಗೋಂಡಾ ಎಂಬುವವರು ಈ ಯಥಾರ್ಥದಲ್ಲಿಯೇ ಅದನ್ನು ‘ಕೃಷಿಕರ ಪಾಲಕ ದೇವತೆ’ [a Guardian deity of the farmer] ಎಂದಿರುವುದು.[5] ಪೃಥ್ವಿಯು ‘ಆರ್ದ್ರ’ಗೊಳ್ಳದೆ ಮಾತೆಯಾಗುವುದಕ್ಕೆ ಸಾಧ್ಯವಿಲ್ಲ; ಎಂತಲೇ ಈ ಸೂಕ್ತದಲ್ಲಿನ ಕ್ರಮಾಂಕ ೧೧ ಮತ್ತು ೧೨ ರಲ್ಲಿ ಅನುಕ್ರಮವಾಗಿ ಕರ್ದಮ (mud) ಮತ್ತು ಚಿಕ್ಲೀತ (Moisture) ಇವುಗಳನ್ನು ಕುರಿತಂತೆಯೇ “ನಿಮ್ಮಿಂದಾಗಿಯೇ ಶ್ರೀಯು ‘ಪ್ರಜಾಭೂತ‘ಳಾದಳು, ಮಾತೆಯಾದಳು” ಎಂದು ಗೌರವಪೂರ್ವಕವಾಗಿ ಹೇಳಲಾಗಿದೆ. ಋಗ್ವೇದದ ಒಂದು ಬಿಡಿ ಸೂಕ್ತದಲ್ಲಿ ಶ್ರೀಯನ್ನು ಪದ್ಮಸ್ಥಿತಾ, ಪದ್ಮವರ್ಣಾ, ಪದ್ಮಿನೀ, ಪದ್ಮಮಾಲಿನೀ – ಎಂಬಿತ್ಯಾದಿ ಪದ್ಮಕ್ಕೆ ಸಂಬಂಧಿಯಾದ ವಿಶೇಷಣಗಳೊಂದಿಗೆ ಸಂಭೋಧಿಸಲಾಗಿದೆ. ಅವಳ ಈ ಪದ್ಮ ಸಂಬಂಧವು ಕರ್ಮವು ಮತ್ತು ಚಿಕ್ಲೀತಗಳೊಂದಿಗಿನ ಸಂಬಂಧವನ್ನು ಹೇಳುವುದರೊಂದಿಗೆ – ಅದರ ಆರ್ದ್ರತೆಯ ದ್ಯೋತಕವಾಗಿದೆ, ಅದರ ಆರ್ದ್ರತೆಗೆ ಮಹತ್ವವನ್ನು ನೀಡುವುದೂ ಆಗಿದೆ. ಅಂಬುವಾಚಿಯ ಆರ್ದ್ರಾ ನಕ್ಷತ್ರ ಕಾಲದ ಸಂಬಂಧವನ್ನು ಇಲ್ಲಿ ಗಮನಿಸಬೇಕಾದ್ದು ಅವಶ್ಯ.

ಆಸ್ಯವಾಮೀಯ ಸೂಕ್ತದಲ್ಲಿನಬೀಭತ್ಸುಮತ್ತುಗರ್ಭರಸಮಾತಾ

ಋಗ್ವೇದದಲ್ಲಿನ ಅಸ್ಯವಾಮೀಯ ಸೂಕ್ತದಲ್ಲಿ ವಿಶ್ವಮಾತೃತ್ವದ ಈ ಅವಸ್ಥೆಯ ವಿಲಕ್ಷಣವನ್ನು ಪ್ರತ್ಯಯಕಾರಿ ಶಬ್ದಗಳಲ್ಲಿ ಉಚ್ಚರಿಸಲಾಗಿದೆ. ಈ ಸೂಕ್ತದಲ್ಲಿನ ಮುಂದಿನ ಋಚೆಯನ್ನು (೧. ೧೬೪.೮) ಈ ದೃಷ್ಟಿಯಿಂದ ಗಮನಿಸಬೇಕು:

ಮಾತಾ ಪಿತರಮೃತ ಆ ಬಭಾಜ ಧೀತ್ಯಗ್ರೇ ಮನಸಾ ಸಂ ಹಿ ಜಗ್ಮೇ |
ಸಾ ಭೀಭತ್ಸುರ್ಗರ್ಭರಸಾ ನಿವಿದ್ಧಾ ನಮಸ್ವಂತ ಇದುಪವಾಕಮೀಯುಃ ||

ಇದರ ಆಶಯವನ್ನು ಡಾ. ವಾಸುದೇವ ಶರಣ ಅಗ್ರವಾಲ ಅವರನ್ನು ಅನುಸರಿಸುತ್ತಾ, ಈ ಕೆಳಗಿನಂತೆ ಸ್ಪಷ್ಟೀಕರಿಸಬಹುದಾಗಿದೆ:[6]

೧. ಮಾತೃತತ್ವ ಮತ್ತು ಪಿತೃತತ್ವಗಳು ಈ ಋತದ ಪಾತಳಿಯ ಮೇಲೆಯೆ ವಿಭಕ್ತಗೊಂಡವು:

೨. ಮಾತೆಯು ತನ್ನ ಮನಸ್ಸು ಮತ್ತು ಬುದ್ಧಿಶಕ್ತಿಗಳಿಂದ ತನ್ನ ಪತಿಯನ್ನು ಆಯ್ಕೆ ಮಾಡಿಕೊಂಡಳು;

೩. ಗರ್ಭಧಾರಣೆಗಾಗಿ ಮಾತೆಯ ಗರ್ಭರಸದಿಂದ ಯುಕ್ತಳಾದಳು; ಹಾಗೂ ಅದಕ್ಕಾಗಿ ಆಕೆ ಪ್ರಥಮವಾಗಿ ಅಸ್ಪೃಶ್ಯಳೂ ನಂತರ ಸುಫಲಳೂ ಆದಳು;

೪. ಹೀಗೆ ಈ ಮಾತೆಯು ಸಾಕ್ಷಾತ್ ವಾಕ್ ಆಗಿರುವುದರಿಂದ ಸಕಲ ದೇವತೆಗಳು ಹಾಗೂ ಮಾನವರು ಅವಳನ್ನು ವಂದಿಸಲಾರಂಭಿಸಿದರು.

ಋಷಿಯ ಈ ಅಥವನ್ನು ಡಾ. ವಾಸುದೇವ ಶರಣ ಅಗ್ರವಾಲರು ಅತ್ಯಂತ ಸಮರ್ಥವಾಗಿ ತಮ್ಮ ಅಸ್ಯವಾಮೀಯ ಸೂಕ್ತದ ಭಾಷ್ಯದಲ್ಲಿ ಮಂಡಿಸಿದ್ದಾರೆ. ಅದನ್ನು ಮೂಲ ಸ್ವರೂಪದಲ್ಲಿಯೇ ನೋಡುವುದು ಅವಶ್ಯವಾದ್ದರಿಂದ ಇಲ್ಲಿ ಉದ್ಧೃತಗೊಳಿಸಿರುತ್ತೇನೆ.

“The meaning of the third part of the Stanza is a little obscure, but becomes clear by paying attention to Nature’s process of Motherhood made manifest in each female. In her period of puberty some secretions as menstrual flow appear, which make her ready for the babe to come in her womb. That is the first stage signigied by ‘ಗರ್ಭರಸ’. The Second stage of indicated by the word ‘ಬೀಭತ್ಸು’ (abhorrent). As soon as the woman has her period, she becomes abhorrent, that is ‘not worthy of being touched or seen’; it is same as ‘ಮಲವದ್‌ವಾಸಾ’ of later literature. Waters are spoken of as the mother, and unless those secretions become turbid, i.e. imbued with the principle of matter, which in later Language was said to be the ‘ರಜಸ್ವಲ’ form of the woman, she can neither concieve nor bring forth. The doctrine of the muddy waters is (cearly mentioned in the ‘ಋಗ್ವೇದ’ [ಬೀಭತ್ಸುನಾಂ ಅಪಾಂ ದಿವ್ಯಾನಾಂ ಋ. 10.124.9.].”

ವಿಶ್ವವನ್ನು ಸೃಷ್ಟಿಸುವ ಜಲ, ವಿಶ್ವ ಸೃಷ್ಟಿಯ ಗರ್ಭವನ್ನು ಹೊರುವ ಸಾಮರ್ಥ್ಯ ಬರುವುದಕ್ಕಾಗಿ ಮೊದಲು ‘ಪಂಕಿಲ’ (Muddy) ವಾಗಬೇಕಾಗುತ್ತದೆ; ರಜೋರಂಜಿತವಾಗಬೇಕಾಗುತ್ತದೆ. ಎಂತಲೇ ನಾವು ಮೊದಲ ಪೂರದಿಂದ ರಂಗಾದ ನದಿಯನ್ನು ರಜಸ್ವಲ ಎಂಬುದಾಗಿ ಕರೆಯುವುದು. ‘ಅಂಬುವಾಚಿ‘ಯಲ್ಲಿನ ವಿಧಿ ರಹಸ್ಯವು ಇಂಥ ವಿಶ್ವಸೃಷ್ಟಿಯ ಸಿದ್ಧಾಂತವನ್ನು ನಿರೂಪಿಸುವುದಾಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಶ್ರೀಗರ್ಭಕುಲಾರ್ಣವಾಂತರ್ಗತಂ ಭಗಮಾಲಿನೀ ರಜಸ್ವಲಾಸ್ತೋತ್ರಂ(ಹಸ್ತಪ್ರತಿ).

[2]ಶ್ರೀ ಕಾ.ವಾ.ಲೇಲೇ ಶಾಸ್ತ್ರಿಯವರ ಕೃತ್ವಾ ರತಿಕಲಾಂ ಸರ್ವಾಂಮುಂತಾದ ಶ್ಲೋಕಗಳ ಅನುವಾದ. ‘ಸರ್ವ ರತಿಕಲಾ ಕೇಲೀ ಮತ್ತು ಅದರ ಅತ್ಯಂತ ಮನೋಹರ ಮೂರ್ತಿಯನ್ನು ನಿರ್ಮಾಣ ಮಾಡಲಾಯಿತು‘, ಎಂದಿದ್ದಾರೆ. ಅದು ಮೂರ್ತಿ ನಿರ್ಮಿತಿಯ ಪೂರ್ವದಲ್ಲಿ ಅದರೊಂದಿಗೆ ರತಿಕ್ರೀಡೆ ನಡೆಸುವುದು ವಿಸಂಗತವೆನಿಸುವುದರಿಂದ ಇದು ಆಯತಾರ್ಥವೆನಿಸುತ್ತದೆ.

[3]ನೋಡಿ: ಪ್ರಸ್ತುತ ಕೃತಿಯಲ್ಲಿನ ‘ಲಜ್ಜಾಗೌರಿಎಂಬ ಮೊದಲ ಪ್ರಕರಣ.

[4] Aspects of Early Visnuism : J. Gonda, 1954, p.214.

[5] Vision in Long Darkness : V.S. Agrawala, Varanasi, 1963, p.41.

[6] Ibid, p.43.