ಸಂಯುಕ್ತ ಕುಂಭದ ರಹಸ್ಯ

ಕುಂಭವು ಮಾತೃ ಗರ್ಭಾಶಯದ ಪ್ರತೀಕವಾಗಿರುವುದರಿಂದ, ಮೃತ ವ್ಯಕ್ತಿಯನ್ನು ಪುನಃ ಅದರಲ್ಲಿ ಸಂಸ್ಥಾಪಿತಗೊಳಿಸುವ ಹಿಂದಿರುವ ಧೋರಣೆ ಏನೆಂಬುದು ಈಗ ಸ್ಪಷ್ಟವಾಗಿದೆ. ಆದರೆ ಚಿಕ್ಕ ಮಕ್ಕಳ ಶವ ಸಂಸ್ಕಾರದಲ್ಲಿ ಚೊಂಬಿನಾಕಾರದ ಎರಡು ಕುಂಭಗಳನ್ನು ಪರಸ್ಪರ ಅಭಿಮುಖವಾಗಿ ಇಟ್ಟು, ಅದರಲ್ಲಿ ಮಕ್ಕಳ ಶವವನ್ನು ಗರ್ಭಸ್ಥಿತಿಯಲ್ಲಿನಂತೆ (ಗರ್ಭಾಶಯದಲ್ಲಿ ಮಕ್ಕಳು ಇರುವ ಹಾಗೆಯೇ ಶರೀರವನ್ನು ಚಿಕ್ಕದಾಗಿ ಮುದುಡಿ) ಇಡುವುದರ ಹಿನ್ನೆಲೆ ಏನೆಂಬುದು ಮಾತ್ರ ಸ್ಪಷ್ಟವಾಗಿಲ್ಲ. ಕುಂಭವು ಗರ್ಭಾಶಯವೆಂದು ಒಮ್ಮೆ ಸ್ಪಷ್ಟವಾದರೆ, ಕುಂಭದ ಅನೇಕತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶವವನ್ನು ಒಳಗೆ ಇಡುವಷ್ಟು ದೊಡ್ಡದಾದ ಕುಂಭಗಳನ್ನು ಬಳಸುತ್ತಿದ್ದರು ಎಂದು ಹೇಳಿದರಷ್ಟೆ ಸಾಕಾಗಬಹುದು. ಆದರೆ ಇದಕ್ಕೆ ಬದಲಾಗಿ ದೊಡ್ಡವರಿಗೆ ಅಲ್ಲದಿದ್ದರೂ, ಚಿಕ್ಕ ಮಕ್ಕಳ ಶವಸಂಸ್ಕಾರದಲ್ಲಿ ಒಂದಕ್ಕೆ ಬದಲಾಗಿ ಚಿಕ್ಕ ಗಾತ್ರದ ಎರಡು ಕುಂಭಗಳನ್ನು ಬಳಸುತ್ತಿರುವುದಕ್ಕೆ ಏನಾದರೂ ವಿಶೇಷ ಅರ್ಥವಿರಲೇಬೇಕು. ‘ಮಿತಃ ಸಮ್ಮುಖ’ ಅವಸ್ಥೆಯಲ್ಲಿ ಎರಡು ಕುಂಭಗಳನ್ನು ಇಡುವುದಾದರೂ ಏತಕ್ಕೆ? ಎಂಬುದೇ ನಮ್ಮ ಮನಸ್ಸಿನಲ್ಲಿ ಏಳುವ ಮುಖ್ಯ ವಿಚಾರ.

ಆಶ್ಚರ್ಯವೆಂದರೆ ಕುಂಭದ ಪ್ರತೀಕಾತ್ಮಕತೆಯನ್ನು ವೈದಿಕ ವಾಙ್ಮಯ ಮುಖೇನ ನಮಗೆ ಹೇಗೆ ಸ್ಪಷ್ಟಪಡಿಸಲು ಸಾಧ್ಯವೋ, ಗರ್ಭಸಂಪನ್ನ ಸಂಯುಕ್ತ ಕುಂಭಗಳನ್ನು ಸಹ ಹಾಗೆಯೇ ಸ್ಪಷ್ಟಪಡಿಸುವುದಕ್ಕೂ ಬರುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಉತ್ಖನನದಲ್ಲಿ ದೊರೆತ ಮಕ್ಕಳ ಸಂಸ್ಕಾರದ ಅವಶೇಷಗಳನ್ನು ಸ್ಪಷ್ಟವಾಗಿ ವರ್ಣಿಸಲು ಮುಂದಣ ವೈದಿಕ ಋಚೆಯಂತಹ ಸಮರ್ಥ ಶಬ್ದಗಳು ಅನ್ಯತ್ರ ಎಲ್ಲೂ ಲಭಿಸುವುದಿಲ್ಲ:

ದ್ಯೌರ್ಮ ಪಿತಾ ಜನಿತಾ ನಾಭಿರತ್ರ,
ಬಂಧುರ್ಮ ಮಾತಾ ಪೃಥಿವೀ ಮಹೀಯಮ್ |
ಉತ್ತಾನಯೋಶ್ಚಂವೋsರ್ಯೋನಿರತ್ನರತ್ರಾ
ಪಿತಾ ದುಹಿಂತುರ್ಗರ್ಭಮಾಧಾತ್ ||
(ಋಗ್ವೇದ, ೧.೧೬೪.೩೩)

ಅಸ್ಯವಾಮಿಯ ಸೂಕ್ತದಲ್ಲಿನ ಈ ಋಚೆಯು ಸಂಯುಕ್ತ ಕುಂಭದ ಪ್ರತೀಕಾತ್ಮಕತೆಯನ್ನು ಪೂರ್ಣವಾಗಿ ಅನಾವರಣಗೊಳಿಸುವಂಥದ್ದಾಗಿದೆ. ಇಲ್ಲಿನ ಮಂತ್ರದ್ರಷ್ಟ ಋಷಿಯ ಭಾವ: “ದ್ಯೌನೇ ನನ್ನ ಪಿತನಾಗಿದ್ದಾನೆ; ಜನಕನಾಗಿದ್ದಾನೆ. ಅವನಿಗೆ ನನ್ನೊಡನೆ ಸಂಬಂಧವಿದೆ. ಈ ಮಹಾಪೃಥ್ವಿಯು ನನ್ನ ನಿಕಟತಮ ಸಂಬಂಧದ್ದಾಗಿದ್ದು, ನನ್ನ ಮಾತೆಯೆನಿಸಿರುವಳು. ಎರಡು ‘ಮಿತಃ ಸಮ್ಮುಖ’ ಚೊಂಬುಗಳ ನಡುವೆ ಈ ಪಿತರುಗಳ ಯೋನಿ ಇದೆ, ಪಿತನು ತನ್ನ ದುಹಿತೆ (ಮಗಳು)ಯ ಗರ್ಭಾಶಯದಲ್ಲಿ ಬೀಜವನ್ನು ಸಂಸ್ಕರಣಗೊಳಿಸಿದ್ದಾನೆ.”

ಋಷಿಯ ಈ ಭಾವನೆಯ ಅಭಿವ್ಯಕ್ತಿಯಲ್ಲಿನ ಪಿತ – ದುಹಿತಾ – ಸಂಬಂಧದ ಸ್ಪಷ್ಟೀಕರಣ ಈ ಮೊದಲೇ ಬಂದಿರುವುದು. ಪ್ರಜಾಪತಿಯು ‘ಬಹುಧಾ’ ಆಗುವುದಕ್ಕಾಗಿ ಶತರೂಪ ಮಾನಸಿ ಕನ್ಯೆಯನ್ನು ತನ್ನಿಂದ ‘ದುಹಿತಾ’ (ದೂರ ಸ್ಮಿತಾ) ಗೊಳಿಸಿದ. ಅನಂತರ ಅವಳಲ್ಲಿ ಬೀಜಾವಪನ ಮಾಡಿ ಸೃಷ್ಟಿಯನ್ನು ನೆಲೆಗೊಳಿಸಿದನು. ಇದು ಪಿತಾ – ದುಹಿತಾ – ಸಂಬಂಧದದ ಇಲ್ಲವೆ ಪ್ರಜಾಪತಿಯ ‘ಕನ್ಯಾಗಮನ‘ದ ಅರ್ಥ. ಗರ್ಭಾಶಯ ಸಂಬಂಧ – ಯೋನಿ ವಿಷಯದ ಬಗ್ಗೆ ನಮಗಿಲ್ಲಿ ಯಾವ ವ್ಯಾಪಕವಾದ ಧೋರಣೆ ಕಂಡು ಬರುತ್ತಿದೆಯೋ, ಅದೇ ಮಕ್ಕಳ ಶವ ಸಂಸ್ಕಾರದ ವಿಶೇಷ ಸ್ವರೂಪದ ಮೇಲೆಯೂ ಬೆಳಕು ಬೀರುವಂತಹದ್ದಾಗಿದೆ. ಇಲ್ಲಿ ದ್ಯೌಪಿತನೆನಿಸಿದ್ದರೆ, ಪೃಥ್ವಿಯು ಮಾತೆಯಾಗಿದ್ದಾಳೆ. ಈ ಉಭಯತೆಯಿಂದ ಉಂಟಾದ ಎರಡು ‘ಮಿಥಃ ಸಮ್ಮುಖ’ ಚೊಂಬಿನಂತಹ ಸಂಯುಕ್ತ ಗರ್ಭಾಶಯದ (common womb) ಗರ್ಭ ಸಂಬಂಧೀ ಮಹತ್ವದ ವಿಷಯವಾಗಿಯೇ ಪ್ರಸ್ತುತ ಋಚೆಯಲ್ಲಿ ಹೇಳಿರುವುದು. ‘ಉತ್ತಾನ ಯೋಶ್ಚಂವೋsರ್ಯೋನಿ’ (Inver ted Bowld forming a common womb) ಎಂಬ ಋಚೆಯಲ್ಲಿನ ಶಬ್ದಗಳು, ಉತ್ಖನನಿತ ಅವಶೇಷಗಳಲ್ಲಿನ ಮಕ್ಕಳ ನಿಕ್ಷೇಪ ಕುಂಭಗಳಿಗೆ (Burial pots) ಅತ್ಯಂತ ತಂತೋ ತಂತಾಗಿ ಸರಿಹೊಂದುತ್ತವೆ.

ಈ ಎರಡು ‘ಉತ್ತಾನ ಚಮೂ‘ಗಳಿಗೆ ಕಾರಣವಾದ ಸಂಯುಕ್ತ ಗರ್ಭಾಶಯದ ಸಂದರ್ಭದಲ್ಲಿ ಡಾ. ವಾಸುದೇವಶರಣ ಅಗ್ರವಾಲರ ವಿಶಿಷ್ಟವಾದ ಅನುಭಾವಮಯ ಭಾಷ್ಯವನ್ನು ಮೂಲದಂತೆಯೇ ಉದ್ಧೃತಗೊಳಿಸಬಹುದು ಎನಿಸುತ್ತದೆ:

”The Earth and the Heaven are both described as ‘Uttan Chamu’ ….The real purport is that these are the two Bowls turned to each other and therefore forming a single cavity. The one is recumbent against the other, as is exactly the position of the Two parents in the act of congress.”[1] ಈ ಹಿನ್ನೆಲೆಯಲ್ಲಿ ಮುಂದೆ ಪುರಾತತ್ವ ಕ್ಷೇತ್ರದಲ್ಲಿ ಈ ಸಂಯುಕ್ತ ನಿಕ್ಷೇಪ ಕುಂಭಗಳಿಗೆ ‘ಉತ್ತಾನ ಚಮೂ’ (inverted Bowls) ಎಂಬ ಹೆಸರು ರೂಢಿಗೆ ಬಂದಿರಬಹುದು ಎನ್ನುವುದಕ್ಕೆ ಅಡ್ಡಿಯಿಲ್ಲ. ಮಿಥುನ ಕ್ರಿಯೆಯಲ್ಲಿ ದ್ಯಾವಾ – ಪೃಥ್ವಿಯರಿಬ್ಬರಿಗೂ ‘ಉತ್ತಾನ’ ಎಂಬ ವಿಶೇಷಣ ಬಳಕೆಯ ಸಾರ್ಥಕತೆಯನ್ನು ಡಾ. ಅಗ್ರವಾಲ ಅವರ ಅಭಿಪ್ರಾಯದಲ್ಲಿ ಹೀಗೆ ಹೇಳಬಹುದು. ಮೇಲಿನಿಂದ (ಶಿರೋಮೂಲ ದೃಷ್ಟಿ) ನೋಡುತ್ತಿರುವಾಗ ಮಾತೆ ಉತ್ತಾನಳಾಗಿರುವಂತೆ ಕಂಡರೆ, ಕೆಳಗಿನಿಂದ (ಪಾದ ಮೂಲ ದೃಷ್ಟಿ) ನೋಡುತ್ತಿರುವಾಗ ಪಿತನು ‘ಉತ್ತಾನ‘ನಾಗಿ ಕಾಣುವನು.[2]

ದ್ಯಾವಾ – ಪೃಥ್ವಿಯ ಮಿಥುನ ಕ್ರಿಯೆಯಲ್ಲಿನ ‘ಮಿಥಃ ಸಮ್ಮುಖ’ ಅವಸ್ಥೆಯಿಂದಲೇ ಸೃಷ್ಟಿಗೆ ಗರ್ಭವು ಸಂಭಾವ್ಯವಾಗುವುದರಿಂದ ಗರ್ಭಾಶಯದ – ಗರ್ಭಧಾರಕ ಇಂದ್ರಿಯ – ಪೂರ್ಣ ಸ್ವರೂಪವು ಎರಡು ಮಿಥಃ ಸಮ್ಮುಖ ಕುಂಭಗಳ ಹೊರತಾಗಿ ಸ್ಪಷ್ಟವಾಗುವುದಿಲ್ಲ. ಇದು ಈ ವಿಶಿಷ್ಟ ಧೋರಣೆಯ ರಹಸ್ಯವಾಗಿದೆ. ಮಾತೃ ಗರ್ಭಾಶಯದಲ್ಲಿ ಪುನಃ ಗರ್ಭರೂಪ ಪಡೆಯುವುದು ಎಂಬ ಭಾವನೆಯಿಂದಲೇ ಮಕ್ಕಳ ಶವವನ್ನು ಕುಂಭದಲ್ಲಿ ಇಡುವುದರಿಂದ, ಗರ್ಭ ಸ್ವರೂಪವು ಪೃಥ್ವಿಯೊಂದಿಗೆ ಸಂಲಗ್ನಗೊಳ್ಳುವುದಕ್ಕೆ ದ್ಯೌನ ಉಪಸ್ಥಿತಿಯು ಅತ್ಯಂತ ಆವಶ್ಯಕವಾದುದು.

ಮೃದು ಭಾವನೆಗಳ ಕೋಲಾಹಲ

ಈವರೆಗಿನ ವಿವೇಚನೆಯಲ್ಲಿ ನಮಗೆ ಖಚಿತವಾಗಿ ಪ್ರತೀತವಾಗುವುದೇನೆಂದರೆ, ಭಾರತದಲ್ಲಿನ ತಾಮ್ರ ಪಾಷಾಣ ಯುಗದ ಸಂಸ್ಕೃತಿಯ ಹಲವಾರು ಅವಶೇಷಗಳು ಮಹಾರಾಷ್ಟ್ರದಲ್ಲಿ – ನೇವಾಸೆ, ಚಾಂಡೋಲಿ, ದಾಯಮಾಬಾದ್ ಇತ್ಯಾದಿ – ನಡೆಸಿದ ಉತ್ಖನನಗಳಲ್ಲಿ ಉಪಲಬ್ಧವಾಗಿವೆ. ಅವುಗಳಲ್ಲಿನ ಕುಂಭ ನಿಕ್ಷೇಪಗಳ ಪ್ರತೀಕಾತ್ಮಕತೆಯನ್ನು ಸಂಪೂರ್ಣವಾಗಿ ಬಿಡಿಸುವಲ್ಲಿ ವೈದಿಕ ಋಚೆಗಳು ಹಾಗೂ ಪ್ರದೀರ್ಘ ಪರಂಪರೆಯಲ್ಲಿ ಉಳಿದುಕೊಂಡು ಬಂದಿರುವ ವಿಧಿ ವಿಧಾನಗಳೇ ಸಹಾಯಕವಾಗಿರುವುದು.

ಈ ಕುಂಭ ನಿಕ್ಷೇಪ ವಿಧಿಯಲ್ಲಿ ಮೃದುವಾದ ಮಾನವೀಯ ಭಾವನೆಗಳ ಕಲ್ಲೋಲಗಳೇ ಕಂಡುಬರುತ್ತವೆ. ಜನನ ಹಾಗೂ ಮರಣ ಈ ಘಟನಾ ವಿಷಯಗಳ ಬಗ್ಗೆ ಪ್ರಾಚೀನರ ಉತ್ಕಟ – ಗಂಭೀರ ಪ್ರತಿಕ್ರಿಯೆಗಳು, ಪುನರ್‌ ಜನನ ಸಂಬಂಧದಲ್ಲಿನ ವಿಶ್ವಾಸ, ನಿಸರ್ಗ ಕ್ರಮದೊಂದಿಗೆ ಅವರು ರೂಢಿಸಿಕೊಂಡಿರುವ ದೃಢತೆ ಹಾಗೂ ಈ ದೃಢತೆಯಿಂದಲೇ ಮೃತ ವ್ಯಕ್ತಿಗೆ ಅತ್ಯಂತ ಕೋಮಲಮಯ ದಕ್ಷತೆಯಿಂದ ಮಾತೃ ಗರ್ಭಾಶಯದಲ್ಲಿ ಪುನಃ ಸ್ಥಾಪಿತಗೊಳಿಸುವ ಕ್ರಿಯೆ – ಈ ಎಲ್ಲವು ಉಭಯ ವಿಧದ [ವಾಙ್ಮಯ ಮತ್ತು ಪುರಾತತ್ವ] ಸಾಧನಗಳ ಸಹಯೋಗದಿಂದ ಸಾಕ್ಷೀಬದ್ಧವಾಗಿ ಅರಿವಾಗುತ್ತದೆ ನಮಗೆ. ಈ ಅರಿವು ಜ್ಞಾನ ಸಮಗ್ರತೆಯ ಬೋಧವನ್ನು ನಮಗೆ ಉಂಟುಮಾಡಿ ಕೊಡುವುದರೊಂದಿಗೆ ಹೊಸ ಹೊಸ ಶೋಧಗಳ ಹಾದಿಯ ಮೇಲೆಯೂ ಬೆಳಕನ್ನು ಚೆಲ್ಲುವಂತಹದ್ದಾಗಿದೆ.

ಮಯಲಾಪುರದ ಕಲ್ಪಕಾಂಬಾ

ಪ್ರಸ್ತುತ ಕುಂಭ ನಿಕ್ಷೇಪದೊಂದಿಗೆ ದೂರದ ಸಂಬಂಧ ಹೊಂದಿರುವ ಒಬ್ಬ ದೇವಿಯ (ಭೂದೇವಿ) ಉಪಾಸನೆಯ ವಿಚಾರವನ್ನು ವಿಶ್ಲೇಷಿಸುವುದು ಅವಶ್ಯ. ಈ ದೇವಿಯ ಚಾರಿತ್ರಿಕ ರಹಸ್ಯವನ್ನು ಬಿಡಿಸುವುದೂ ಕೂಡ ಒಂದು ಅತ್ಯಂತ ಉದ್ಭೋದಕವಾದ ವಿಚಾರವೇ. ಮನುಷ್ಯ ಬದುಕಿನಲ್ಲಿ ಹೇಗೆ ನಾನಾ ಪರಿವರ್ತನೆಗಳು ಸಂಭವಿಸುತ್ತವೆಯೋ, ಏರುಪೇರುಗಳು ಉಂಟಾಗುತ್ತವೆಯೋ ಹಾಗೆಯೇ ದೇವತೆಗಳ ಚರಿತ್ರೆಯಲ್ಲಿನ ಇಂಥ ಅದ್ಭುತ ಪರಿವರ್ತನೆಗಳು ವಾಚಕರಿಗೆ ಕಂಡು ಬರುವುದು ಸಹಜ. ಅವು ಭಕ್ತರ ವಿಸ್ಮೃತಿಯಲ್ಲಿ ಬಂದುದು ಎಂದು; ಅಂತೆಯೇ ಯಾವ ಯಾವ ದೇವತೆಗಳನ್ನು ಲೌಕಿಕ ರೂಪದಿಂದ ಮತ್ತೆ ಉನ್ನತಗೊಳಿಸುವುದಕ್ಕಾಗಿ ಧರ್ಮ ಧುರೀಣರು ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿಕೊಂಡಿದ್ದಾರೆ – ಈ ಮುಂತಾದ ವಿಚಾರಗಳು ಗಮನೀಯ. ಇತ್ತೀಚೆಗೆ ನನಗೆ ಈ ಸತ್ಯದ ವಿಚಾರವಾಗಿ ಮಯಲಾಪುರ Mylapur)ದ ಶ್ರೀ ಕಲ್ಪಕಾಂಬೆಯ ಉತ್ಕಟವಾದ ಕಥಾನಕವೊಂದು ಬಹಳ ವಿಶೇಷವಾಗಿ ಗಮನಕ್ಕೆ ಬಂದಿತು.

ತಮಿಳುನಾಡಿನ ರಾಜಧಾನಿ ಮದ್ರಾಸ್ (ಚೆನ್ನೈ)ನ ಒಂದು ಮುಖ್ಯ ಉಪನಗರವೇ ಮಯಲಾಪುರ. ಅಲ್ಲಿರುವ ಪ್ರಸಿದ್ಧ ಶ್ರೀರಾಮಕೃಷ್ಣಾಶ್ರಮದಿಂದಾಗಿಯೂ ಧರ್ಮ ಪ್ರವೃತ್ತಿಯುಳ್ಳ ಜನರಿಗೆಲ್ಲ ಮಯಲಾಪುರದ ಹೆಸರು ಬಹಳ ಚಿರಪರಿಚಿತ. ಇಂದು ಇದೊಂದು ಉಪನಗರವಾಗಿದೆಯಾದರೂ, ಪೂರ್ವದಲ್ಲಿ ಇದೊಂದು ಸ್ವತಂತ್ರವಾದ ಪ್ರಖ್ಯಾತ ನಗರವಾಗಿತ್ತೆಂಬುದು ಗಮನೀಯ. ಕ್ರಿ.ಪೂ.ದಿಂದಲೇ ಇದೊಂದು ಸಾಂಸ್ಕೃತಿಕ, ವಾಣಿಜ್ಯಿಕ ಹಾಗೂ ಶಿವಶಕ್ತಿಯರ ಲೀಲಾ ಸ್ಥಳವೆನಿಸಿ ಧಾರ್ಮಿಕವಾಗಿಯೂ ಪ್ರಮುಖವಾದ ನಗರವಾಗಿತ್ತೆಂಬ ಉಲ್ಲೇಖಗಳಿವೆ. ಮಹರ್ಷಿ ತಿರುವಳ್ಳುವರ್‌ ಹಾಗೂ ಪುರಾತನ ಆಳ್ವಾರರುಗಳಲ್ಲಿನ ಸಂತ ಪೆರಿಯಾಳ್ವಾರ್‌ ಇವರುಗಳಿಗೆ ಇದೇ ಜನ್ಮಭೂಮಿ. ಜ್ಞಾನಸಂಬಂಧ ಎಂಬ ಹೆಸರಿನ ಪ್ರಖ್ಯಾತ ಶೈವ ಸಂತನೊಬ್ಬ, ಸರ್ಪದಂಶ (ಕಡಿತ)ದಿಂದಾಗಿ ಮರಣ ಹೊಂದಿದ್ದ ಪೂಂಪಾವೈ ಎಂಬ ಹೆಸರಿನ ಹೆಣ್ಣು ಮಗಳೊಬ್ಬಳಿಗೆ ಇಲ್ಲಿನ ಶಿವ ಮಂದಿರದಲ್ಲಿಯೇ ಪುನರ್‌ಜನ್ಮ ನೀಡಿದ್ದನೆಂಬ ಕಥೆಯೊಂದು ಪ್ರಸಿದ್ಧವಾಗಿದೆ.

ಈ ಮಯಲಾಪುರದ ಅಧಿಷ್ಠಾತ್ರಿ ದೇವಿಯೇ ಶ್ರೀ ಕಲ್ಪಾಕಾಂಬಾ ಅಥವಾ ಶ್ರೀ ಕಲ್ಪಕವಲ್ಲಿ. ಆಕೆಯ ಸಹಚರವೇ ಶ್ರೀ ಕಪಾಲೀಶ್ವರ. ಇವರಿಬ್ಬರನ್ನು ‘ಜಗತ್ತಿನ ಪಿತರು‘ಗಳೆಂದು ಹೇಳಲಾಗುವುದು. ಇವರಿಬ್ಬರ ಮಂದಿರವು ಮಯಲಾಪುರದ ಮಧ್ಯ ಭಾಗದಲ್ಲಿದ್ದು, ಹತ್ತಿರದಲ್ಲಿಯೇ ಒಂದು ಸರೋವರವಿದೆ. ಇವರಿಬ್ಬರ ಹಳೆಯ ಮಂದಿರವು ಸಾಗರ ತಟದಲ್ಲಿತ್ತು; ನಿತ್ಯವೂ ಕಪಾಲೀಶ್ವರನ ಚರಣ ಸ್ಪರ್ಶಕ್ಕಾಗಿ ಸಾಗರದ ಅಲೆಗಳು ಹಾತೊರೆಯುತ್ತಿದ್ದವು. ಆದರೆ ಮುಂದೆ ಆ ಮಂದಿರವು ನಾಶವಾಯಿತು ಇಲ್ಲವೆ ನಾಶ ಮಾಡಲಾಯಿತು. ಇಂದು ಆ ಸ್ಥಳದಲ್ಲಿ ‘ಬಿಶಪನ ವಾಡೆ‘ಯೊಂದಿದೆ. ಈಗಿನ ಮಂದಿರಗಳು ಬಹಳ ಹಿಂದಿನವುಗಳೇನಲ್ಲ ಆದರೆ ಕಪಾಲೀಶ್ವರ ಮತ್ತು ಕಲ್ಪಕಾಂಬರ ಜೋಡಿಯು ಮಾತ್ರ ಯುಗಯುಗಗಳ ಇತಿಹಾಸವನ್ನು ಹೇಳುವುದರ ಮೂಲಕ ಮಯಲಾಪುರದ ಪ್ರಸಿದ್ಧಿಗೆ ಕಾರಣವಾಗಿದೆ. ಮಯಲಾಪುರ ನಗರದ ಉತ್ಕರ್ಷಾಪಕರ್ಷ ಹಾಗೂ ಅಲ್ಲಿನ ದೇವೀ ಮಂದಿರದ ಬದಲಾವಣೆಯ ವಿಚಾರವನ್ನು ಈ ಸಂದರ್ಭದಲ್ಲಿ ನನಗೆ ಹೇಳಬೇಕು ಎನಿಸುವುದಿಲ್ಲ. ಮಯಲಾಪುರವೆಂಬ ಸ್ಥಳ ಹಾಗೂ ಕಲ್ಪಕಾಂಬಾ ಮತ್ತು ಕಪಾಲೀಶ್ವರರೆಂದು ಈ ಅಧಿರಾಜ್ಯದಲ್ಲಿ ಮೆರೆವ ದೇವತೆಗಳ ಹೆಸರು ಹಾಗೂ ಅವುಗಳ ಸಂಬಂಧದ ರಹಸ್ಯವನ್ನು ಅರಿಯುವುದಷ್ಟೇ ನನಗೆ ಇಲ್ಲಿ ಮುಖ್ಯವೆನಿಸುತ್ತದೆ.

ತಮಿಳುನಾಡಿನ ಸಾಂಸ್ಕೃತಿಕ ಇತಿಹಾಸ ತಜ್ಞರು ಹಾಗೂ ಆ ಪ್ರದೇಶದಲ್ಲಿನ ದೇವತೆಗಳ ಸಂಶೋಧಕರು ಈ ಕುರಿತು ನೀಡಿದ ಮಾಹಿತಿಗಳು ನನಗೆ ತೃಪ್ತಿಯನ್ನು ನೀಡಲಿಲ್ಲ. ಆರ್.ಕೆ. ದಾಸ್ ಅವರು ಬರೆದು ಭಾರತೀಯ ವಿದ್ಯಾಭವನದಿಂದ ಪ್ರಕಟವಾಗಿರುವ ‘ತಮಿಳುನಾಡಿನ ದೇವಾಲಯಗಳು’ (Temples of Tamilnad – 1964) ಹಾಗೂ ‘ಕಾಮಕೋಟಿ ವಾಣಿ’ ಎಂಬ ಪತ್ರಿಕೆಯ ೧೯೭೩ರ ಜನವರಿ ಅಂಕಣದಲ್ಲಿ ‘ಯಾತ್ರಿಕ’ ಎಂಬ ಉಪನಾಮದಿಂದ ಬರೆದ ‘ಮಯಲಾಪುರದ ಕಪಲೀಶ್ವರ ಮಂದಿರ’ (The Kapaliswara Temple of Mylapore) ಎಂಬ ಲೇಖನ ಈ ದಿಶೆಯಲ್ಲಿ ಮುಖ್ಯ ಸಾಧನಗಳಾಗಿವೆ. ಈ ಎರಡೂ ಆಕರಗಳಲ್ಲಿ ಮಯಲಾಪುರದ ಸ್ಥಳ ಪುರಾಣ, ಕಲ್ಪಕಾಂಬೆಯ ಅವತರಣ ಹಾಗೂ ಕಪಾಲೀಶ್ವರನ ಸ್ಥಾಪನೆಯ ಕಥೆಗಳೆಲ್ಲ ಬಹಳ ವಿವರಣಾತ್ಮಕವಾಗಿ ಬಂದಿವೆ.

ಬ್ರಹ್ಮದೇವನು ಒಮ್ಮೆ ಶಿವ – ಪಾರ್ವತಿಯರನ್ನು ಕಾಣಲೆಂದು ಕೈಲಾಸಕ್ಕೆ ಹೋಗಿದ್ದನು. ಆದರೆ ಆತ ಶಿವನಿಗೆ ತಕ್ಕುದಾದ ಕಾಣಿಕೆ ತಂದಿರಲಿಲ್ಲ. ಅದರಿಂದ ಕುಪಿತನಾದ ಶಿವನು ತನ್ನ ತ್ರಿಶೂಲದಿಂದ ಆತನ ತಲೆಯೊಂದನ್ನು ಕತ್ತರಿಸಿದ. ಈ ಆಘಾತದಿಂದ ವಿಹ್ವಲಗೊಂಡ ಬ್ರಹ್ಮದೇವನು ಶಿವನನ್ನು ಪ್ರಸನ್ನಗೊಳಿಸುವುದರೊಂದಿಗೆ ತನ್ನ ಪಾಪ ಪರಿಮಾರ್ಜನೆಯ ಉದ್ದೇಶದಿಂದ ಮಯಲಾಪುರಕ್ಕೆ ಬಂದು ತಪಸ್ಸಿಗೆ ಕುಳಿತನು. ಅವನ ತಪಸ್ಸಿಗೆ ಪ್ರಸನ್ನನಾದ ಶಿವನು ಬ್ರಹ್ಮನಿಗೆ ದರ್ಶನ ಕೊಟ್ಟ. ಸಂತಸಗೊಂಡ ಬ್ರಹ್ಮನು ಅಲ್ಲಿ ಒಂದು ಶಿವಲಿಂಗವನ್ನು ಸ್ಥಾಪಿಸಿದ. ಬ್ರಹ್ಮನ ಒಂದು ಕಪಾಲವನ್ನು ಕೈಯಲ್ಲಿ ಹಿಡಿದುಕೊಂಡೇ ಶಿವನು ಪ್ರತ್ಯಕ್ಷನಾದ್ದರಿಂದ ಶಿವನಿಗೆ ‘ಕಪಾಲೀಶ್ವರ’ ಎಂಬ ಹೆಸರು ಬಂದಿತೆಂಬುದು ಸ್ಥಳ ಪುರಾಣದಲ್ಲಿನ ಉಲ್ಲೇಖ. ಇಲ್ಲಿನ ಶಿವನ ಸ್ಥಾನದ ಪುರಾತನತೆ, ಶಿವಭಕ್ತಿ ಕ್ಷೇತ್ರದಲ್ಲಿನ ಲೋಕಪ್ರಿಯತೆ ಹಾಗೂ ‘ಕಪಾಲೀಶ್ವರ’ ಎಂಬ ಹೆಸರು ಇವುಗಳನ್ನು ಆಧರಿಸಿದಂತೆ ಸ್ಥಳೀಯ ವಿದ್ವಾಂಸರು ಇದು ಕಾಪಾಲಿಕ ಶೈವರ ಮುಖ್ಯ ಶಿವಸ್ಥಾನವೆಂದು ಊಹಿಸಿದ್ದಾರೆ.

ಕಪಾಲೀಶ್ವರನ ಅವತರಣ ಕಥೆಯನುಸಾರವೇ ಸ್ಥಳ ಪುರಾಣಗಳು ಇಲ್ಲಿನ ಅಧಿಷ್ಠಾತ್ರಿ ದೇವಿ ಕಲ್ಪಕಾಂಬೆಯ ಅವತರಣವಾದುದು ಹೇಗೆ ಎಂಬುದನ್ನೂ ಹೇಳಿವೆ: ಒಮ್ಮೆ ಶಿವ – ಪಾರ್ವತಿಯರು ಏಕಾಂತದಲ್ಲಿದ್ದಾಗ ಸುಂದರವಾದ ಮಯೂರವೊಂದು ತನ್ನ ಬಹುರಂಗಿನ ಗರಿಗಳನ್ನೆಲ್ಲ ಹರವಿ ನೃತ್ಯ ಮಾಡುತ್ತಿದ್ದುದನ್ನು ಪಾರ್ವತಿಯು ನೋಡಿದಳು. ಆ ಮಯೂರದ ಮೋಹಕ ರೂಪ ಹಾಗೂ ಮನೋಹರ ನೃತ್ಯವನ್ನು ತದೇಕ ಚಿತ್ತಳಾಗಿ ನೋಡುತ್ತಿದ್ದ ಆಕೆ ಕ್ಷಣಕಾಲ ಶಿವನನ್ನು ದುರ್ಲಕ್ಷಿಸಿದಳು. ಇದರಿಂದ ಕೋಪಗೊಂಡ ಶಿವನು “ಯಾವ ಕಾರಣದಿಂದ ಮಯೂರಕ್ಕೆ ಆಕರ್ಷಿತಳಾಗಿ ನನ್ನನ್ನು ದುರ್ಲಕ್ಷಿಸಿದೆಯೋ, ಆ ಕಾರಣಕ್ಕಾಗಿಯೇ ನೀನು ಮಯೂರಳಾಗಿ ಜನುಮವೆತ್ತುವೆ!” ಎಂಬುದಾಗಿ ಶಾಪವನ್ನು ಕೊಟ್ಟುಬಿಟ್ಟನು ಅವಳಿಗೆ. ಈ ಶಾಪದ ಪರಿಣಾಮವಾಗಿ ಪಾರ್ವತಿಯು ಮಯೂರಿಯಾಗಿ ಹುಟ್ಟಿ, ಇಂದು ಮಯಲಾಪುರವೆಂದು ಪ್ರಸಿದ್ಧವಾಗಿರುವ ಪ್ರದೇಶದ ಅರಣ್ಯದಲ್ಲಿ ಬಂದು ನೆಲೆಸಿದಳು. ತನ್ನ (ಶಿವನ) ಪ್ರಾಪ್ತಿಗಾಗಿಯೇ ಆ ರೂಪದಲ್ಲಿ ತಪಸ್ಸು ಮಾಡುತ್ತಿದ್ದ ಆಕೆಯ ತಪೋನಿಷ್ಠೆಯನ್ನು ಮೆಚ್ಚಿದ ಶಿವನೂ ಮಯೂರ ರೂಪವನ್ನು ಎತ್ತಿಯೇ ಪ್ರತ್ಯಕ್ಷನಾದನು. ದೇವಿ ಇಲ್ಲಿ ಮಯೂರ ರೂಪದಲ್ಲಿ ನೆಲೆಸಿದ್ದಳು ಎಂಬ ಕಾರಣದಿಂದಾಗಿಯೇ ಈ ಸ್ಥಳಕ್ಕೆ ‘ಮಯೂರಪುರ’ (ಮಯಿಲಾಪುರ) ವೆಂಬುದಾಗಿ ಹೆಸರಿನ ವ್ಯುತ್ಪತ್ತಿ ಕಥೆಯಿದು. (ಕಾಂಚಿಯ ಮಹಾ ವಿದ್ವಾಂಸರು ‘ಪ್ರತಿವಾದಿ ಭಯಂಕರ’ರೂ ಆದ ಶ್ರೀ ಅನ್ನಂಗರಚಾರಿ ಸ್ವಾಮಿಯವರ ಅಭಿಪ್ರಾಯದಂತೆ ಮಯಲಾಪುರದ ಮೂಲರೂಪ ‘ಮಹಿಲಾಪುರಿ’. ಆದರೆ ಸ್ಥಳ ಪುರಾಣ ಹಾಗೂ ದೇವೀ ರೂಪದ ವ್ಯುತ್ಪತ್ತಿಗೆ ಇದು ಸಂಗತವಾಗದ್ದರಿಂದ ಒಪ್ಪಲಾಗುವುದಿಲ್ಲ.)

ನಗರದ ಹೆಸರು ಮಯೂರಪುರ, ಅದರ ಅಧಿಷ್ಠಾತ್ರಿ ದೇವಿ ಮಯೂರ ರೂಪಿಣಿ. ಇನ್ನು ಅವಳ ಸಹಚರನೂ ಅವಳನ್ನು ಭೇಟಿಯಾಗಲು ಬಂದುದು ಮಯೂರ ರೂಪದಲ್ಲೇ. ಈ ಎಲ್ಲವನ್ನು ಗಮನಿಸಿದಾಗ ಮಯಲಾಪುರದ ಅಧಿಷ್ಠಾತ್ರಿ ದೇವಿ ‘ಕಲ್ಪಕಾಂಬಾ’ ಎಂಬ ಹೆಸರು ಹಾಗೂ ಅವಳ ಸಹಚರ ‘ಕಪಾಲೀಶ್ವರ’ ಎಂಬುದೆರಡೂ ಸುಸಂಗತವಾದುವೆನಿಸುವುದಿಲ್ಲ. ಕೆಲವಾರು ಕಾರಣಗಳ ಹಿನ್ನೆಲೆಯಲ್ಲಿ ನನಗನಿಸುವುದೇನೆಂದರೆ, ಶಿವ – ಶಕ್ತಿಯರಿಗೆ ವಿಸಂಗತವಾದ ಈ ಎರಡೂ ಹೆಸರುಗಳು ಮೂಲದ ಸುಸಂಗತ ಹೆಸರಿನಿಂದ ಸಹೇತುಕವಾಗಿ ಇಲ್ಲವೆ ಅಜ್ಞಾನದಿಂದ ರೂಪುಗೊಂಡಿರುವ ಪರಿವರ್ತನಗಳಿದ್ದಿರಬೇಕು.

ಸಂಸ್ಕೃತ ಭಾಷೆಯಲ್ಲಿ ‘ಕಲಾಪ’ ಎಂಬ ಶಬ್ದವು ಮಯೂರ ಪೃಚ್ಛವಾಚಕ. ಈ ನೆಲೆಯಿಂದ ‘ಕಲಾಪಕಾ’ ಎಂದರೆ ಮಯೂರಿ ಮತ್ತು ‘ಕಲಾಪಿ’ ಎಂದರೆ ಮಯೂರ ಎಂಬ ಶಬ್ದಗಳನ್ನು ರೂಪಿಸಲಾಗಿದೆ. ‘ಕಲ್ಪಕಾಂಬಾ’ ಎಂದರೆ ಮಯೂರಿ ರೂಪಿಣಿ ಜಗನ್ಮಾತಾ; ಹಾಗೂ ‘ಕಲಾಪೀಶ್ವರ’ ಎಂದರೆ ಮಯೂರ ರೂಪಿ ಶಿವ. ಕಲಾಪಕಾಂಬಾ ಎಂಬುದರಿಂದಲೇ ಕಲ್ಪಕಾಂಬಾ (ಎರಡನೆಯ ಅಕ್ಷರದಲ್ಲಿನ ಸ್ವರವನ್ನು ಲೋಪಗೊಳಿಸಿ) ಎಂಬ ಪರಿವರ್ತನ ರೂಪವುಂಟಾಗಿದೆ. ಕಲಾಪೀಶ್ವರ ಎಂಬುದೇ ವರ್ಣ ವಿಪರ್ಯಯದಿಂದ ಕಪಾಲೀಶ್ವರ ಎಂಬ ಚಿರಪರಿಚಿತ ರೂಢ ನಾಮವೊಂದು ಶಿವನಿಗೆ ಬಂದಿತೆನ್ನಲಾಗಿದೆ. ಈ ಮೇಲೆ ಹೇಳಿದ ಸ್ಥಳ ಪುರಾಣದ ಕಥೆಯ ಹಿನ್ನೆಲೆಯಲ್ಲಿ ನಾನು ಪರಿವರ್ತನೆಯ ಈ ರಹಸ್ಯ ಸಹಜವಾಗಿಯೇ ಅನಾವರಣಗೊಳ್ಳುವುದು. ಒಮ್ಮೆ ಕಲಾಪೀಶ್ವರದಿಂದ ಕಪಾಲೀಶ್ವರ ಎಂಬ ಪರಿವರ್ತನೆ ಉಂಟಾದ ಮೇಲೆ (ಅಥವಾ ಉಂಟು ಮಾಡಿದ ಮೇಲೆ) ಬದಲು ನಾಮವನ್ನು ಕುರಿತಂತೆ ಸ್ಪಷ್ಟೀಕರಣ ಕಥೆಯೊಂದು (Explanatory Tale) ರೂಪಿಸುವ ಪ್ರವೃತ್ತಿಯುಂಟಾಗುವುದು ಸ್ವಾಭಾವಿಕವೇ.

ಶಕ್ತಿಯ ಈ ಮಯೂರ ರೂಪ ಇಂದು ನಮಗೆ ಚಮತ್ಕಾರವೆನಿಸಬಹುದಾದರೂ ದಕ್ಷಿಣ – ದ್ರಾವಿಡ – ಸಂಸ್ಕೃತಿಯಲ್ಲಿ ಇದು ಪರಂಪರಾಗತವಾದುದು. ಪಿ.ಎಂಕಪ್ಪನ್ ನಾಯರ್ ಎಂಬ ದಾಕ್ಷಿಣಾತ್ಯ ವಿದ್ವಾಂಸರೊಬ್ಬರು ‘ಭಾರತದ ರಾಷ್ಟ್ರೀಯ ಪಕ್ಷಿ: ಮಯೂರ’ ಎಂಬ ವಿಷಯವನ್ನು ಕುರಿತಂತೆ ಕೊಲ್ಕತ್ತೆಯ ‘Folklore’ (November 1973) ಮಾಸಿಕದಲ್ಲಿ ಒಂದು ಲೇಖನ ಪ್ರಕಟಿಸಿದ್ದರು. ಅವರ ಪ್ರಕಾರ “ದ್ರಾವಿಡರ ದೃಷ್ಟಿಯಲ್ಲಿ ಮಯೂರ ಭೂದೇವಿಯ ಪ್ರತಿನಿಧಿ. ದಕ್ಷಿಣ ಭಾರತದಿಂದಲೇ ಜಗತ್ತಿನಾದ್ಯಂತ ಪಸರಿಸಿದ್ದೆನ್ನಲಾಗಿದೆ ಈ ಮಯೂರ ಪೂಜಾ ಸಂಪ್ರದಾಯ. ಭಾರತದಲ್ಲಿ ಆದಿಮ ಜಾತಿಯವರು ಮಯೂರವನ್ನು ಭೂಮಾತಾ ಸಂಬಂಧಿ ಎಂದೇ ಭಾವಿಸುತ್ತಾರೆ. ಗೊಂಡ ಆದಿವಾಸಿಗಳು ಭೂಮಾತೆ – ಭೂದೇವಿಯನ್ನು ಮಯೂರದ ರೂಪದಲ್ಲಿಯೇ ಪೂಜಿಸುವುದು.” ಶ್ರೀ ನಾಯರ್‌ ಅವರು ಹೇಳುವಂತೆ ಸಂಸ್ಕೃತದಲ್ಲಿನ ‘ಮಯೂರ’ ಶಬ್ದವು ಮೂಲತಃ ದ್ರಾವಿಡದ ‘ಮಯಿಲ’ ಶಬ್ದದ ಸಂಸ್ಕೃತೀಕರಣ ರೂಪ. ಈ ಅಂಶವನ್ನು ಗಮನಿಸಿದರೆಮಯೂರ ಮತ್ತು ಮಾತೃದೇವತೆಗಳ ಏಕತ್ವದ ಸಂಬಂಧವಾಗಿ ಪ್ರಾಚೀನರ ಧೋರಣೆಗಳು ಏನಾಗಿದ್ದವು ಎಂಬ ಕಲ್ಪನೆ ನಮಗೆ ಬರಬಹುದು.[3]

ಮಯೂರ ಮತ್ತು ಭೂಮಾತೆ

ಮಯೂರ ಮತ್ತು ಭೂಮಾತೆಯರ ಅಭಿನ್ನ – ಏಕತ್ವದ ಪ್ರಾಚೀನ ಧೋರಣೆಗಳ ಹಿನ್ನೆಲೆಯಲ್ಲಿ ಮತ್ತೊಂದು ಮಹತ್ವದ ಅನುಬಂಧವನ್ನು ಲಕ್ಷಿಸಬಹುದು: ಸಿಂಧೂ ಸಂಸ್ಕೃತಿಯ ಉತ್ಖನನದಿಂದ ಲಭ್ಯವಾಗಿರುವ ಅವಶೇಷಗಳಲ್ಲಿ ಅನೇಕ ಶವ – ನಿಕ್ಷೇಪ ಮೃತ್ಪಾತ್ರೆ (Burial Pots)ಗಳೂ ಇವೆ. ಅವುಗಳಲ್ಲಿ ಅನೇಕ ಪಾತ್ರೆಗಳ ಮೇಲೆ ಮಯೂರದ ಚಿತ್ರಗಳಿದ್ದು, ಮಯೂರದ ಉದರದಲ್ಲಿ ಚಿತ್ರಿಸಲಾಗಿದೆ ಮೃತ ವ್ಯಕ್ತಿಯನ್ನು. ಮೃತ ಜೀವಿಗಳನ್ನುತನ್ನ ಉದರದಲ್ಲಿ ಹಾಕಿಕೊಳ್ಳುವ ಮಯೂರಗಳ ಚಿತ್ರಣದಿಂದ ಅಂಕಿತಗೊಂಡಿರುವ ಈ ಶವ ನಿಕ್ಷೇಪ ಮೃತ್ಕುಂಭಗಳು ಮಯಲಾಪುರದ ಕಲಾಪಕಾಂಬೆಯ ಕಥನದ ಹಿನ್ನೆಲೆಯಲ್ಲಿ ನಮಗೆ ಬಹಳ ಮಹತ್ವದ ಅಂಶಗಳನ್ನು ಹೇಳುತ್ತವೆ.

ಮನುಷ್ಯ ಸಂಸ್ಕೃತಿಯ ಆದಿಮ ಕಾಲದಿಂದಲೂ ಜನ ಮನಸ್ಸಿನಲ್ಲಿ ಭೂಮಿ ಮತ್ತು ಮಾತೃ ದೇವತೆ ಇವುಗಳ ಏಕತ್ವವು ಅತ್ಯಂತ ಸ್ಥಿರವಾಗಿ ಬೇರೂರಿದೆ. ಈ ಸತ್ಯಾಂಶವು ಮಾನವ ಸಮಾಜದ ನಾನಾ ಕಥಾನಕಗಳಲ್ಲಿ, ಮಂತ್ರ – ತಂತ್ರಗಳಲ್ಲಿ ಹಾಗೂ ಆಚಾರ – ವಿಚಾರಗಳಲ್ಲಿ ಸಾರ್ವತ್ರಿಕವಾಗಿ ಕಂಡು ಬರುತ್ತವೆ. ಕುಂಭವು ಮಾತೆಯ ಹಾಗೂ ಭೂಮಾತೆಯ ಗರ್ಭಾಶಯ ಪ್ರತೀಕವೆಂಬುದು ಒಪ್ಪಿತ ಅಂಶ. ಶವವನ್ನು ಕುಂಭದಲ್ಲಿಟ್ಟು ಸಂಸ್ಕಾರ ಮಾಡುವ ಆಚರಣೆಯ ಹಿಂದೆ ಇರುವಂಥ ಮುಖ್ಯ ಭಾವನೆಯಲ್ಲಿ ಅಡಗಿಕೊಂಡಿರುವುದೇನೆಂದರೆ ಜೀವ ಎಲ್ಲಿಂದ (ಜನುಮವೆತ್ತಿ) ಬಂದಿತೋ, ಅಲ್ಲಿಗೇ ಮರಳಿ ಚಿರ ವಿಶ್ರಾಂತಿಯನ್ನು ಪಡೆಯುವುದು. ಆಚಾರ್ಯರ ಮಾತುಗಳಲ್ಲಿಯೇ ಇದನ್ನು ಹೇಳಬಹುದಾದರೆ, ‘ಪುನರಪಿ ಜನನೀಜಠರೇ ಶಯನಮ್’ (Back to Mothers womb) ಎಂಬುದಾಗಿ ಈ ನಿಕ್ಷೇಪ – ಕುಂಭದ ಬಗೆಗಿನ ಅಂಶಗಳನ್ನು ಬಣ್ಣಿಸಬಹುದು. ಶವವನ್ನು ಇಡುವ ಕುಂಭದ ಮೇಲೆ ಮಯೂರದ ಚಿತ್ರವನ್ನು ಬಿಡಿಸಿ, ಆ ಚಿತ್ರದ ಉದರದಲ್ಲಿ ಮೃತ ಜೀವವನ್ನು ತೋರಿಸುವುದರ ಅರ್ಥವೇನೆಂಬುದು ಕೂಡ ಈ ಹಿನ್ನೆಲೆಯಿಂದ ಸ್ಪಷ್ಟವಾಗಬಹುದು. ಮಯೂರವು ಮಹಾಮಾತೆಯ (The Great Mother Goddess) ಪ್ರತಿನಿಧಿಯಾಗಿರುವುದರಿಂದಲೇ ಮಯೂರ ರೂಪಿಣಿ ಮಹಾಮಾತೆಯಾದ ಕಲಾಪಕಾಂಬೆಯು ತನ್ನ ಮಗುವನ್ನು ಪುನಃ ತನ್ನ ಉದರದಲ್ಲಿ ಹಾಕಿಕೊಳ್ಳುತ್ತಾಳೆ. ಮಾತ್ರವಲ್ಲ ಅತ್ಯಂತ ವಾತ್ಸಲ್ಯದಿಂದ ಚಿರ ವಿಶ್ರಾಂತಿಗೆ ಅನುವು ಮಾಡಿದ್ದಾಳೆ ಎಂಬ ವಿಚಾರವು ಮೃತ್ಕುಂಭಗಳ ಉಪಲಬ್ಧತೆಯಿಂದ ಸ್ಪಷ್ಟವಾಗಿದೆ. ಸಮಕಾಲೀನ ಸಮಾಜ ಯಾವುದನ್ನು ನಿಸ್ಸಾರವಾದ (ಗೊಡ್ಡು ಪುರಾಣ, ಬುರುಡೆ ಪುರಾಣ) ಕಥನಗಳೆಂದು ಹೇಳುತ್ತಲಿದೆಯೋ ಅಂಥ ಕಥೆ – ಗಾಥೆಗಳ ದ್ವಾರವನ್ನು ಯುಗಯುಗಗಳ ಇತಿಹಾಸ ಹೇಗೆ ತೆರೆದಿಡುತ್ತಾ ಹೋಗುತ್ತಿರುತ್ತದೆ ಎಂಬುದರ ಉತ್ಕೃಷ್ಟ ನಮೂನೆಯಾಗಿದೆ ಮಯಲಾಪುರದ ಶ್ರೀ ಕಲಾಪಕಾಂಬೆಯ ಕಥಾನಕ.

ಮಯಲಾಪುರವೆಂಬ ವಿಶಿಷ್ಟ ಸ್ಥಳದಲ್ಲಿ ವಿರಾಜಮಾನರಾಗಿರುವ ‘ದೇವ – ದೇವಿ‘ಯರ ಸ್ವರೂಪವನ್ನು ಅರಿಯುವಲ್ಲಿ ಹಾಗೂ ಆ ‘ವಿಶಿಷ್ಟ’ ಸ್ಥಳದಲ್ಲಿನ ಸ್ವರೂಪ ವಿಶೇಷಗಳಿಂದ ಆ ಕುರಿತಂತೆ ಭಾರತವ್ಯಾಪಿ – ಮಾತ್ರವಲ್ಲ ವಿಶ್ವವ್ಯಾಪಿಯಾದ ಒಂದು ‘ಸಾಮಾನ್ಯ ದರ್ಶನ’ ಸಾಧ್ಯವಾಗುತ್ತದೆ. ಹೀಗೆ ಅನಾವರಣಗೊಂಡಿದೆ ನಮ್ಮೆದುರು ಕುಂಭ ಪ್ರತೀಕದ ಈ ಒಳಗುಟ್ಟು. ಕುಂಭ – ಪ್ರತೀಕದಿಂದ ಹಾಗೂ ಕುಂಭಗತ ನಿಕ್ಷೇಪದ ಆಚರಣೆಯಿಂದ ಆದಿಶಕ್ತಿಯ ಮಾತೃ ರೂಪದ ವಿರಾಟ್ ದರ್ಶನ ಸಾಧ್ಯವಾಗುತ್ತದೆ ಎಂಬುದಂತೂ ಈಗಾಗಲೇ ವಿವರಿಸಲ್ಪಟ್ಟಿರುವಂತಹ ವಿಚಾರವೇ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] V.S. Agrawala : p. 121 (pp. 119 – 122).

[2] V.S. Agrawala : pp. 121 – 122.

[3] The Peacock : P. Thankappan Nair, Calcutta, 1977, pp. 202 – 203, 261.