ಜಲ ಮತ್ತು ಕಮಲ

ಕಮಲವು ಜಲದೊಳಗಿಂದ ಜನುಮವಡೆದಿರುವಂಥ ಪುಷ್ಟ. ಎಂತಲೇ ಅದಕ್ಕೆ ಜಲಜ, ವಾರಿಜ, ಅಬ್ಜ ಇತ್ಯಾದಿ ಜಲಸಂಬಂಧಿಯಾದ ಹೆಸರುಗಳಿವೆ. ಅಲ್ಲದೆ ವೈದಿಕ ಪ್ರತೀಕಗಳಲ್ಲಿ ಜಲ ಮತ್ತು ಕಮಲಗಳನ್ನು ಪರಿಗಣಿಸಿರುವುದು ಕೂಡಾ ಏಕರೂಪದಲ್ಲಿಯೇ. ಜಲವೇ ಸೃಷ್ಟಿಗೆ ಆದಿ ಕಾರಣ ಮತ್ತು ಜಲ – ಕಮಲದ ಏಕತ್ವದಿಂದ ಕಮಲವು ಸಕಲ ಸೃಷ್ಟಿಗೂ ತವರೆನಿಸಿದೆ ಎಂಬುದಾಗಿ ವೈದಿಕ ಋಷಿಗಳು ಹಾಗೂ ವೇದಾರ್ಥಗಳನ್ನು ಉಪಬೃಂಹಣಗೊಳಿಸಿದ ಪುರಾಣಕಾರರು ಮತ್ತೆ ಮತ್ತೆ ಹೇಳಿದ್ದಾರೆ. ಅಗ್ನಿಯ ಜನ್ಮಸ್ಥಾನವೂ ಕಮಲವೇ ಎಂಬುದಾಗಿದೆ ವೈದಿಕ ಋಷಿಯೊಬ್ಬನ ಅಭಿಪ್ರಾಯ:

ತ್ವಮಾಗ್ನೇ ಪುಷ್ಕರಾದ್ ಅಧ್ಯಥರ್ವಾಂ ನಿರಮಂಥತ |
ಮೂರ್ಧ್ನೋ ವಿಶ್ವಸ್ಯ ವಾಘತಃ ||(..೧೬.೧೩)

(ಹೇ ಅಗ್ನೇ, ವಿಶ್ವದ ಆದಿಕಾರಣವಾಗಿರುವ ಜಲದೊಳಗಿಂದ – ಕಮಲದೊಳಗಿಂದ – ಮಂಥನ ಮಾಡಿ ನಿನ್ನನ್ನು ಹೊರಗಡೆಗೆ ತೆಗೆದವನು ಪ್ರಜಾಪತಿ.)

ಈ ಋಚೆಯ ಸ್ಪಷ್ಟೀಕರಣವಾಗಿ ಶತಪಥ ಬ್ರಾಹ್ಮಣದಲ್ಲಿ (೬.೪.೨.೨) ‘ಆಪೋ ವೈ ಪುಷ್ಕರಮ್’ ಎಂದು ಹೇಳುವ ಮೂಲಕ ಜಲ – ಕಮಲದ ಏಕತ್ವವನ್ನೂ ಘೋಷಿಸಲಾಗಿದೆ. ಅಗ್ನಿ ಅರ್ಥಾತ್ ವಿಶ್ವಚೇತನ ಹುಟ್ಟಿದುದು ಜಲದೊಳಗಿಂದ ಮತ್ತು ಕಮಲದಿಂದ. ಈ ವಿಚಾರವು ಜಲತತ್ತ್ವದ ಆದ್ಯತೆಯ ದ್ಯೋತಕವೇ ಸರಿ.

ಸಲಿಲಂ ಸರ್ವಂ ಆ ಇದಮ್ | (.೧೦.೧೨೯.)

ಅಥವಾ –

ಇದಮಗ್ರೇ ಸಲಿಲಮಾಸೀತ್ (ತೈ.ಸಂ.....)
(ಆರಂಭ ಕಾಲದಲ್ಲಿ ಸರ್ವವೂ ಚಂಚಲಮಯವಾದ ಜಲವಾಗಿತ್ತು.)

ಜಲತತ್ತ್ವದ ಆದ್ಯತೆಯ ಜಯಜಯಕಾರವು ಹೀಗೆ ವೈದಿಕ ವಾಙ್ಮಯಗಳಲ್ಲಿ ಮತ್ತೆ ಮತ್ತೆ ಮೂಡಿ ಬಂದಿದೆ. ಆರಂಬಕ್ಕೆ ಸರ್ವವೂ ಚಂಚಲ ಜಲವಾಗಿತ್ತು; ‘ಸಲಿಲ’ (chaotic water) ವಾಗಿತ್ತು ಹಾಗೂ ಅದರಿಂದ ಅದರ ಪ್ರತೀಕವಾದ ಪುಷ್ಕರದಿಂದ ವಿಶ್ವಚೇತನವೊಂದರ ಉದಯವಾಯಿತು. ಈ ಸಮಗ್ರ ಪ್ರಕ್ರಿಯೆಯನ್ನು ತೈತ್ತರೀಯ ಸಂಹಿತೆಯು ಈ ಕೆಳಗಿನಂತೆ ಸ್ಪಷ್ಟವಾಗಿ ಹೇಳಿದೆ:

ಇದಮಗ್ರೇ ಸಲಿಲಮಾಸೀತ್ |
ಸ ಪ್ರಜಾಪತಿಃ ಪುಷ್ಕರಪರ್ಣೇ
ವಾತೋಭೂತೋ ಲೇಲಾಯತ್ |
ಸ ಪ್ರತಿಷ್ಠಾಂ ನಾವಿಂದತ |
ಸ ಏತದಪಾಂ ಕುಲ್ಯಾಂ ಅಪಶ್ಯತ್ |
ತಸ್ಮನ್ನಗ್ನಿಮಚಿನುತ |
ತತೋ ವೈ ಸ ಪ್ರತ್ಯತಿಷ್ಠತ್ | (ತೈ.ಸಂ....)

[ಪ್ರಾರಂಭದಲ್ಲಿ ಎಲ್ಲವೂ ‘ಸಲಿಲ‘ – ಚಂಚಲ ಜಲ – ವಾಗಿತ್ತು; ಆಗ ಪ್ರಜಾಪತಿಯು ಪುಷ್ಕರಪರ್ಣದ ಮೇಲೆ ಓಲಾಡುತ್ತಿದ್ದನು. ಅದಕ್ಕೆ ಸ್ಥಿರತೆಯನ್ನು ತಂದು ಕೊಡುವುದಕ್ಕೆ ಆಗಲಿಲ್ಲ ಅವನಿಂದ. ಹಾಗಾಗಿ ಆತ ಜಲದ ಗರ್ಭದಲ್ಲಿ ಇಣುಕು ಹಾಕಿ ಅಲ್ಲಿದ್ದ ಅಗ್ನಿಯನ್ನು ಶಮನ ಗೊಳಿಸಿದ. ಅನಂತರ ಈ ಪೃಥ್ವಿ ಮತ್ತು ಸೃಷ್ಟಿಯು ಉದ್ಭವಗೊಂಡು ಪ್ರಜಾಪತಿಗೆ ‘ಪ್ರತಿಷ್ಠೆ‘ಯು ಲಭ್ಯವಾಯಿತು.]

ಇಲ್ಲಿ ‘ಸಲಿಲ‘ವು ಆದಿತತ್ತ್ವದ ಅಸ್ಥಿರತೆಯ ಮತ್ತು ‘ಪುಷ್ಕರ’ ಹಾಗೂ ‘ಪುಷ್ಕರಪರ್ಣ‘ವು ಅದರ ಸ್ಥಿರತೆಯ ದ್ಯೋತಕವಾಗಿರುವುದು ಸುಷ್ಪಷ್ಟ.

ತೈತ್ತರೀಯ ಸಂಹಿತೆಯಲ್ಲಿ ಬಂದಿರುವ ಸೃಷ್ಟಿಯ ಉತ್ತಪತ್ತಿಯ ಈ ದಿವ್ಯಕಥೆ (Myth)ಯು ತೈತ್ತರೀಯ ಅರಣ್ಯಕದಲ್ಲಿ ಕೊಂಚ ಭಿನ್ನ ರೂಪದಿಂದ ಅತರಿಸಿದೆ:

ಆಪೋ ವಾ ಆಸನ್ ಸಲಿಲಮೇವ |
ಸ ಪ್ರಜಾಪತಿರೇಕಃ ಪುಷ್ಕರಪರ್ಣೇ ಸಮಭವತ್ |
ಇದಂ ಸೃಜೇಯಮ್ಇತಿ | (ತೈ...೨೩.)

[ಪ್ರಾರಂಭದಲ್ಲಿ ಸರ್ವವೂ ಚಂಚಲಮಯ ಜಲವಾಗಿತ್ತು. ಅಗ ಪ್ರಜಾಪತಿಯೊಬ್ಬನೇ ಅವತರಿಸಿದ್ದನು ಪುಷ್ಕರಪರ್ಣವೂ ಮೇಲೆ. ಅವನ ಅಂತರ್ಮನದಲ್ಲಿ ಒಂದು ಭಾವ ಉದ್ಭವವಾಯಿತು, ‘ನಾನು ಈ ವಿಶ್ವವನ್ನು ನಿರ್ಮಾನ ಮಾಡಬಲ್ಲೆನೆ.‘]

ಋಗ್ವೇದ, ತೈತ್ತರೀಯ ಸಂಹಿತೆ ಮತ್ತು ತೈತ್ತರೀಯ ಆರಣ್ಯಕಗಳಲ್ಲಿ ಕೊಂಚ ವ್ಯತ್ಯಾಸದೊಡನೆ ಹೇಳಲಾಗಿರುವ ಜಲ ಮತ್ತು ಕಮಲದ ಆದ್ಯತೆಯ ಮಹಿಮೆಯು ಶತಪಥ ಮತ್ತು ತೈತ್ತರೀಯ ಬ್ರಾಹ್ಮಣಗಳಲ್ಲಿ ವರಾಹ ಕಥೆಯ ರೂಪದಲ್ಲಿ ಬಂದಿರುವುದು. ಪ್ರಜಾಪತಿಯು ವರಾಹ ರೂಪದಲ್ಲಿ ಪೃಥ್ವಿಯನ್ನು ಆದಿ ಜಲದಿಂದ ಮೇಲೆತ್ತಿ ಹೊರಗೆ ತಂದನು. ಆ ಕಾರಣದಿಂದ ಸೃಷ್ಟಿಯ ಉತ್ಪತ್ತಿಯ ಕಥೆಯಲ್ಲಿ ಆತ ಅವಳಿಗೆ ಪ್ರಭುವಾದ ಎಂಬುದಾಗಿ ಹೇಳಲಾಗಿದೆ ಶತಪಥ ಬ್ರಾಹ್ಮಣ (೧೪.೧.೨.೧೧)ದಲ್ಲಿ. ತೈತ್ತರೀಯ ಬ್ರಾಹ್ಮಣವು ಅದನ್ನು ಈ ಕೆಳಗಣ ಶಬ್ದಗಳಲ್ಲಿ ಹೇಳಿದೆ:

ಆಪೋ ವಾ ಇದಮಗ್ರೇ ಸಲಿಲಮಾಸೀತ್ |
ತೇನ ಪ್ರಜಾಪತಿರಶ್ರಾಮ್ಯತ್ | ‘ಕಥಮಿದಂ ಸ್ಯಾದ್ಇತಿ |
ಸೋ ಪಶ್ಯತ್ ಪುಷ್ಕರಪರ್ಣಂ ತಿಷ್ಠತ್ |
ಸೋsಮನ್ಯತ್ಅಸ್ತಿ ವೈ ತದ್ಯಸ್ಮಿನ್ ಇದಮಧಿತಿಷ್ಠತೀತಿ |
ಸ ವರಹೋ ರೂಪಂ ಕೃತ್ವೋಪನ್ಯಮಜ್ಜತ್ |
ಸ ಪೃಥಿವೀಂ ಅಧ ಆರ್ಚ್ಛತ್ |
ತಸ್ಯ ಉಪಹತ್ಯೋದಮಜ್ಜತ್ |
ತತ್ ಪುಷ್ಕರಪಣೋsಪ್ರಯಯತ್ | (ತೈ.ಬ್ರಾ....)

[ಪ್ರಾರಂಭದಲ್ಲಿ ಚಂಚಲಮಯವಾಗಿ ಹೋಗಿತ್ತು ಸರ್ವಜಲವೂ. ಆ ಕಾರಣ ಪ್ರಜಾಪತಿಗೆ ಬೇಸರವುಂಟಾಯಿತು. ‘ಇದು ಹೇಗೆ ಆಗಬಹುದು?’ ಎಂಬ ಪ್ರಶ್ನೆ ಹುಟ್ಟಿ ಕೊಂಡಿತು ಅವನಲ್ಲಿ ಜಲದ ಮೇಲೆ ಸ್ಥಿರವಾಗಿದ್ದ ಪುಷ್ಕರಪರ್ಣವನ್ನು ನೋಡಿದ ಆತ, ‘ಯಾವುದರ ಆಧಾರದ ಮೇಲೆ ಹೀಗೆ ಇದು ಸ್ಥಿರವಾಗಿದೆ, ಇದಕ್ಕೆ ಏನಾದರೂ ಕಾರಣ ಇರಲೇಬೇಕು’ ಎಂಬುದಾಗಿ ಯೋಚಿಸಲಾರಂಭಿಸಿದ. ಕೊನೆಗೆ ವರಾಹರೂಪ ಧರಿಸಿಕೊಂಡ ಅವನು ಆ ಪುಷ್ಕರಪರ್ಣದ ಪಕ್ಕದಿಂದ ಮುಳುಗಿ ಅವಲೋಕಿಸಿದಾಗ, ಜಲದ ಕೆಳಗೆ ಪೃಥ್ವಿಯಿರುವುದು ಕಂಡಿತು. ಅದನ್ನು ಮೇಲೆತ್ತಿ ತಂದ ಆತ ಪುಷ್ಕರಪರ್ಣದ ಮೇಲೆ ಇಟ್ಟನು.]

ಹಿರಣ್ಯಾಕ್ಷನು ಭೂದೇವಿಯನ್ನು ಸಮುದ್ರದಲ್ಲಿ ಮುಳುಗಿಸಿಟ್ಟಾಗ, ಪೃಥ್ವಿಯ ಉದ್ಧಾರಕ್ಕಾಗಿ ವರಾಹ ಅವತಾರವನ್ನು ಎತ್ತಿದವನು ವಿಷ್ಣು. ವರಾಹನು ಸಮುದ್ರದಲ್ಲಿ ಮುಳುಗಿ ಹಿರಣ್ಯಾಕ್ಷನನ್ನು ವಧಿಸಿ, ತನ್ನ ದಂತಾಗ್ರದ ಮೇಲೆ ಪೃಥ್ವಿಯನ್ನಿಟ್ಟುಕೊಂಡು ಸಮುದ್ರದಿಂದ ಮೇಲಕ್ಕೆ ತಂದ ಕಥೆ ಇದೆ. ಮುಂದೆ ಬಂದ ಪುರಾಣ ವಾಙ್ಮಯದಲ್ಲಿನ ಈ ಕಥೆಯು ಮೂಲತಃ ವೈದಿಕ ಸೃಷ್ಟಿಯುತ್ಪತ್ತಿ ಕಥೆಯಿಂದಲೇ ವಿಕಸಿತಗೊಂಡುದಾಗಿರುವುದೆಂದು ಮತ್ತೆ ಹೇಳಬೇಕಾಗಿಲ್ಲ.

ವಿಶ್ವಸೃಷ್ಟಿಯ ಜಲದ (Procreative Waters) ಪ್ರತೀಕವೇ ಕಮಲವೆಂಬ ಕಲ್ಪನೆ ವೈದಿಕ ವಾಙ್ಮಯದಲ್ಲಿ ಪೂರ್ಣತಃ ಖಚಿತವಾಗಿರುವಂತಹದ್ದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಅಲ್ಲದೆ ‘ಜಲ‘ವೆಂಬ ಆದಿತತ್ತ್ವದ ಸೃಜನಶೀಲ ರೂಪವೆನಿಸಿದೆ ‘ಕಮಲ’. ಕಮಲಕ್ಕೆ ಸಂಬಂಧಿಸಿದ ಈ ಭಾವವು ವೈದಿಕ ಋಷಿಗಳ ಮನಃಕೋಶದಲ್ಲಿ ಶತದಳಗಳಾಗಿ ಅರಳಿದೆಯೆಂದು ಹೇಳಿದಲ್ಲಿ ಅತಿಶಯೋಕ್ತಿ ಎನಿಸುವುದಿಲ್ಲ. ವೈದಿಕ ಋಷಿಗಳ ದೃಷ್ಟಿಯಲ್ಲಿ ಈ ಕಮಲವೇ ಸಕಲ ಸೃಷ್ಟಿಗೂ ತವರು.

ವಿಷ್ಣುವಿನ ನಾಭಿಕಮಲ

ಸೃಷ್ಟಿಯ ಉತ್ಪತ್ತಿಯನ್ನು ಕುರಿತ ವೈದಿಕ ಪರಿಕಲ್ಪನೆಗಳು ಪುರಾಣದಲ್ಲಿ ಅಧಿಕ ಪ್ರಗಲ್ಭವೂ, ಕಾವ್ಯಾತ್ಮಕವೂ ಆದ ರೂಪವನ್ನು ಪಡೆದಿವೆ. ಪರಮಾತ್ಮನಾದ ವಿಷ್ಣುವು ಈ ಅನಂತ ಜಲ ರಾಶಿಯಲ್ಲಿ ಸಾನಂದವಾಗಿ ಕ್ರೀಡಿಸುತ್ತಿದ್ದ. ಆತನು ತನ್ನ ನಾಭಿಯಿಂದ ಒಂದು ಸಹಸ್ರದಳದ ಸುವರ್ಣ ಕಮಲವನ್ನು ಸೃಷ್ಟಿಸಿದ, ಸೂರ್ಯನಂತೆ ಅನುಪಮ ಕಾಂತಿಯುಕ್ತವಾಗಿತ್ತು ಅದು. ಶರತ್ಕಾಲದ ಸೂರ್ಯನಂತೆ ಸುಂದರವಾಗಿದ್ದ ಈ ಕಮಲವು ಅಗ್ನಿಜ್ವಾಲೆಯಂತೆ ದೈದೀಪ್ಯ ಮಾನವೂ ಆಗಿ ಹೊಳೆಯುತ್ತಿತ್ತು. ಅಸಂಖ್ಯ ಯೋಜನೆಗಳಷ್ಟು ವಿಸ್ತೃತವಾಗಿದ್ದ ಆ ವಿರಾಟ್ ಸುವರ್ಣ ಕಮಲದಲ್ಲಿ ವಿಶ್ವಸೃಷ್ಟಿಕರ್ತನಾದ ಚತುರ್ಮುಖ ಬ್ರಹ್ಮನು ಉದಯಿಸಿದ. ಯಾವ ವಿರಾಟ್ ಕಮಲದಿಂದ ಬ್ರಹ್ಮನು ಹುಟ್ಟಿದನೋ ಅದನ್ನು ಪುರಾಣವಿದರು ಪೃಥ್ವಿಯ ಉತ್ತಮ ರೂಪವೆಂದು ಹೇಳಿರುವರು. ಈ ಪದ್ಮಾಕಾರ ಪೃಥ್ವಿ ಮಂಡಲದ ನಾಲ್ಕೂ ಬದಿಗಳಲ್ಲಿ ಚತಃ ಸಮುದ್ರವಿದೆ. ಈ ಪ್ರಕಾರದಲ್ಲಿ ನಾರಾಯಣನ ಒಂದು ಸಾಮಾನ್ಯ ಇಚ್ಛೆಯಿಂದಲೇ ಪುಷ್ಕರಾಕಾರವೂ ಕಮಲಾಕಾರವೂ ಆದ ಪೃಥ್ವಿಯು ಹುಟ್ಟಿದುದು. ಹಾಗಾಗಿಯೇ ಅವಳ ಉತ್ಪತ್ತಿಯ ವೃತ್ತಾಂತವನ್ನು ಸಾಂಕೇತಿಕವಾಗಿ ‘ಪುಷ್ಕರ’ ಎಂಬುದಾಗಿ ಕರೆದಿರುವುದು. ಪೃಥ್ವಿಯ ಈ ಪದ್ಮರೂಪತ್ವ ಮತ್ತು ಸೃಷ್ಟಿಯ ಪದ್ಮೋತ್ಭವತ್ವವನ್ನು ಅರಿತಿರುವುದರಿಂದಲೇ ಮಹರ್ಷಿಗಳು ಯಜ್ಞದಲ್ಲಿ ಪದ್ಮದ ವಿಧಾನವನ್ನು ರೂಪಿಸಿಕೊಂಡಿದ್ದಾರೆ. (ಮತ್ಸ್ಯ, ೧೬೮.೧೫ – ೧೬;೧೬೯.೧ – ೧೮.)

ಪುರಾಣಗಳು ಈ ಬಗೆಯಲ್ಲಿ ಸೃಷ್ಟಿಯ ಉತ್ಪತ್ತಿಕಾರಕವಾದ ಕಮಲವನ್ನು ಜಲಶಾಯಿಯಾದ ವಿಷ್ಣುವಿನ ನಾಭಿಯೊಂದಿಗೆ ಸಂಬಂಧ ಕಲ್ಪಿಸಿವೆ. ಇದರಿಂದ ವಿಷ್ಣುವಿನ ರೂಪ ಹಾಗೂ ಉಪಾಸನೆಯಲ್ಲಿ ಕಮಲ ಮತ್ತು ಕಮಲಾ (ಲಕ್ಷ್ಮಿ ಮತ್ತು ಪೃಥ್ವಿ) ಇವುಗಳ ದೃಢ ಸಂಬಂಧವು ಪ್ರಾಪ್ತವಾಯಿತು.

ಲೀಲಾಕಮಲ

‘ಲೀಲಾಕಮಲ‘ವೂ ಕಮಲದ ಪ್ರತೀಕ ಸಮೃದ್ಧವೇ ಆಗಿದೆ. ಕೈಯೊಳಗಣ ಲೀಲಾಕಮಲದಿಂದ ಭಕ್ತನ ಪೂಜೆ ಮಾಡುವವ ಭಗವಂತ (ಜ್ಞಾ.೧೨.೨೨೧), ಈ ಸರ್ವಸೃಷ್ಟಿಯೂ ಅವನ ಲೀಲೆಯಷ್ಟೆ’, ಎಂಬುದನ್ನು ಸೂಚಿಸುತ್ತಿದೆ ಲೀಲಾಕಮಲ. ನಮ್ಮ ದೇವತಾ ಸಮೂಹದದಲ್ಲಿ ಕೈಯಲ್ಲಿ ಲೀಲಾಕಮಲವನ್ನು ಧಾರಣೆ ಮಾಡಿಕೊಂಡಿರುವ ಅನೇಕ ದೇವತೆಗಳಿದ್ದಾರೆ. ಹಾಗೆಯೇ ಸಂಸ್ಕೃತ ಸಾಹಿತ್ಯದಲ್ಲಿ ಇಂಥ ಅನೇಕ ನಾಯಿಕೆಯರೂ ಚಿತ್ರಿತರಾಗಿರುವರು. ‘ಹಸ್ತೇ ಲೀಲಾಕಮಲಮಲಕೇ ಬಾಲಕುಂದಾನುವಿದ್ದಮ್’ ಪುಷ್ಪಾಲಂಕೃತ ಯಕ್ಷಿಣಿಯು ಹೀಗೆ ನಮಗೆ ಭೇಟಿಯಾಗುತ್ತಾಳೆ. ಅಂತೆಯೇ ತನ್ನ ಕೈಯಲ್ಲಿನ ಲೀಲಾಕಮಲದಿಂದ ಪ್ರಿಯನನ್ನು ಥಳಿಸಿದ ಪರಾಂಗನೆಯೊಬ್ಬಳು ಅವನ ಕಣ್ದುಂಬುವ ಪ್ರಣಯಿನಿಯಾಗಿಯೂ ಭೇಟಿಯಾಗುವುದುಂಟು. ಸಮ್ರಾಟನ ಕೈಯಲ್ಲಿ ಶೋಭಾಯಮಾನವಾಗಿ ಕಾಣುವ ಲೀಲಾಕಮಲದ ಪ್ರತೀಕ ವೈಭವವನ್ನು ಯಶಸ್ತಿಲಕ ಚಂಪೂವಿನ ಕರ್ತೃವು ಸ್ಪಷ್ಟಪಡಿಸಿರುವ ರೀತಿ ಗಮನಿಸುವಂತಹದ್ದು:

ಶ್ರೀಲೀಲಾಕಮಲ ತವಾವನಿಪತೇ ಸಾಮ್ರಾಜ್ಯಚಿಹೂನಂ ಮಹತ್
ಕೀರ್ತ್ಯುತ್ಪತ್ತಿಕೇತನಂ ಕ್ಷಿತಿವಧೂವಿಶ್ರಾಮಧಾಮಸ್ವಯಮ್ |
ಲಕ್ಷ್ಮೀವಿಭ್ರದರ್ಪಿಣಂ ಕುಲಗೃಹಂ ರಾಜ್ಯಾಧಿದೇವ್ಯಾಃ ಪುನಃ |
ಕ್ರೀಡಾಸ್ಥಾನಮಿದಂ ವಿಭಾತಿ ಭವನಂ ವಾಗ್ದೇವತಾಯಾ ಇವ ||
[‘ಯಶಸ್ತಿಲಕ ಚಂಪೂ‘, ಕಾವ್ಯಮಾಲಾ ಆವೃತ್ತಿ, ೨.೨೪೩ – ೨೫೪]

[ಹೇ ಭೂಪತಿ! ನಿನ್ನ ಹಸ್ತಗಳಲ್ಲಿನ ಈ ಲೀಲಾಕಮಲವು ಮಹಾನ್ ಸಾಮ್ರಾಜ್ಯ ಚಿಹ್ನವೇ ಹೌದು; ಅಂತೆ ಕೀರ್ತಿಯ ಉತ್ಪತ್ತಿ ಸ್ಥಾನವೂ ಆಗಿದೆ; ಪೃಥ್ವಿರೂಪಳಾದ ರಾಣೀಯ ಸಾಕ್ಷಾತ್‌ ವಿಶ್ರಾಮಧಾಮವೂ ಆಗಿದೆ; ಲಕ್ಷ್ಮಿಯ ಲೀಲೆಗಳಿಂದ ತುಂಬಿದ ಅದು ಅವಳಿಗೆ ತವರು ಮನೆ; ರಾಜ್ಯದ ಅಧಿಷ್ಠಾತ್ರಿ ದೇವಿಯ ಕ್ರೀಡಾಸ್ಥಾನ; ಅಲ್ಲದೆ ವಾಗ್ದೇವತೆಯ ಭವನವೂ ಆಗಿದೆ!] ಕಮಲದ ಪ್ರತೀಕ ಸಾಮರ್ಥ್ಯವು ಇಲ್ಲಿ ಸಹಸ್ರ ದಳವಾಗಿ ಅರಳಿರುವುದು ಸ್ಪಷ್ಟವಾಗಿಯೇ ಕಂಡುಬರುತ್ತದೆ.

ಕಮಲಶೀರ್ಷಾ ಲಜ್ಜಾಗೌರಿ

‘ಚರಾಚರಗಳ ಯೋನಿ’ ಯಾದ ಭೂದೇವಿಯನ್ನು ಯಥಾರ್ಥವಾಗಿಯೇ ಪುರಾಣಕಾರರು ವರ್ಣಿಸಿದ್ದಾರೆ. ಅಂತೆಯೇ ಅವಳ ಪ್ರಸವಾವಸ್ಥೆಯ – ವಿಶ್ವಕ್ಕೇ ಜನುಮ ನೀಡುವ ಅವಸ್ಥೆಯಲ್ಲಿನ – ಅನೇಕ ಮೂರ್ತಿಗಳು ಬೇರೆಬೇರೆ ಸ್ಥಳಗಳಲ್ಲಿ ಉಪಲಬ್ಧವಾಗಿವೆ. ಮಹಾರಾಷ್ಟ್ರದಲ್ಲಿ ನೇವಾಸೇ, ತೇರ, ಜಯರಾಮ ಸ್ವಾಮಿಯ ವಡಗಾಂವ್, ಮಾಹೂರಝರಿ ಇತ್ಯಾದಿ; ಕರ್ನಾಟಕದಲ್ಲಿ ಮಹಾಕೂಟ, ಸಿದ್ಧನಕೋಟೆ(ಕೊಳ್ಳ) ಇತ್ಯಾದಿ; ಆಂಧ್ರದಲ್ಲಿ ಆಲಂಪುರ, ಸಂಗಮೇಶ್ವರ ಇತ್ಯಾದಿ; ಹಾಗೆಯೇ ಉತ್ತರ ಭಾರತದ ಭೀಟಾ – ಈ ಸ್ಥಳಗಳಲ್ಲೆಲ್ಲ ಇಂಥ ಮೂರ್ತಿಗಳು ಲಭ್ಯವಾಗಿವೆ. ಇವುಗಳಲ್ಲಿ ಕೆಲವು ಉತ್ಖನನದಲ್ಲಿ ದೊರೆತುವುಗಳಾದರೆ, ಮತ್ತೆ ಕೆಲವು ಈಗಲೂ ಮಂದಿರಗಳಲ್ಲಿ ಪೂಜಾ ವಿಗ್ರಹಗಳಾಗಿವೆ. ಮಹಾಕೂಟ ಮತ್ತು ಆಲಂಕಪುರಗಳಂತೂ ಈ ದೇವಿಯ ಪ್ರಸಿದ್ಧ ಉಪಾಸನಾ ಕೇಂದ್ರಗಳೇ ಆಗಿದ್ದವು. ಸ್ತ್ರೀಯರು ಸಂತಾನ ಪ್ರಾಪ್ತಿಗೋಸ್ಕರ ಈ ದೇವತೆಯನ್ನು ಉಪಾಸನೆ ಮಾಡುತ್ತಿದ್ದರು ಎಂಬ ಬಗ್ಗೆ ಈ ಒಂದು ಸ್ಪಷ್ಟ ಕಲ್ಪನೆಯು ಸಾಧ್ಯವಾಗಿದೆ.

ಈ ದೇವಿಯನ್ನು ಕೆಲವು ಸ್ಥಳಗಳಲ್ಲಿ ಜೋಗುಳಾಂಬಾ, ಎಲ್ಲಮ್ಮ, ರೇಣುಕಾ ಎಂಬುದುದಾಗಿಯೂ, ಕೆಲವೆಡೆ ‘ಲಜ್ಜಾಗೌರಿ’ ಎಂಬುದಾಗಿಯೂ ಕರೆದಿರುತ್ತಾರೆ. ಲಜ್ಜಾಗೌರಿ ಎಂಬುದು ಲಂಜಾ, ಲಂಜಿಕಾ(ನಗ್ನ) ಎಂಬುದರ ಸಂಸ್ಕೃತೀಕರಣವಾದ ರೂಪ. ಈ ಬಗೆಯಲ್ಲಿ ರೂಪ ದರ್ಶಕವಾದ ಹೆಸರೊಂದು ಬಂದಿರುವುದಕ್ಕೆ ಕಾರಣ, ಈ ದೇವಿಯ ಮೂರ್ತಿ ಪ್ರಸವಾವಸ್ಥೆಯಲ್ಲಿರುವ ನಗ್ನ ಸ್ತ್ರೀಯೊಬ್ಬಳ ಸೊಂಟದವರೆಗಿನ ಇಲ್ಲವೆ ಸ್ಕಂದಗಳವರೆಗಿನ ಸ್ವರೂಪದಲ್ಲಿ ಇರುವುದು. ಸ್ಕಂದದವರೆಗೆ ಇರುವ ಮೂರ್ತಿಗಳು ಉಪಲಬ್ಧವಾಗಿರುವುದರಲ್ಲಿ ಮೂರ್ತಿಯ ಶಿರದ ಭಾಗದಲ್ಲಿ ಒಂದು ಕಮಲದ ಹೂವನ್ನು ಇಡಲಾಗಿರುತ್ತದೆ. ಜೊತೆಗೆ ಎರಡೂ ಕೈಗಳಲ್ಲಿಯೂ ಕಮಲಗಳನ್ನು ಕಾಣಬಹುದಾಗಿದೆ. ಕೆಲವು ಮೂರ್ತಿಗಳ ಪೃಷ್ಠ ಭಾಗದ ನಾಲ್ಕೂ ಬದಿಗಳನ್ನು ನಾಲ್ಕು ಕಮಲಗಳನ್ನು ಕೆತ್ತಲಾಗಿರುತ್ತದೆ. ಈ ‘ಕಮಲಶೀರ್ಷಾ’ ಲಜ್ಜಾಗೌರಿಯ ಮೂರ್ತಿಗಳು ಕಮಲ ಮತ್ತು ಪೃಥ್ವಿ ಏಕಾತ್ಮಕ ಶಕ್ತಿಯನ್ನು ಪ್ರಕಟಪಡಿಸುವುವಾಗಿವೆ.

ವ್ಯಾಘ್ರೇಶ್ವರಿಯ ನಾಮರಹಸ್ಯ

ದಕ್ಷಿಣ ಭಾರತದಲ್ಲಿರುವ ಒಂದು ಲಜ್ಜಾಗೌರಿಯ ಸ್ಥಾನವು ‘ವ್ಯಾಘ್ರೇಶ್ವರಿ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಅದು ದಕ್ಷಿಣ ರೈಲ್ವೆಯ ಮಚಲೀಪಟ್ಟಣಂ – ಬೇಝವಾಡ – ಹುಬ್ಬಳ್ಳಿ – ಈ ರೈಲು ಮಾರ್ಗದಲ್ಲಿ ಬರುವ ಹೊಸಕೋಟೆ ನಿಲ್ದಾಣದಿಂದ ಹದಿನೈದು ಮೈಲು ದೂರಕ್ಕೆ (ಮುನಿರಾಬಾದಿಗೆ ಸಮೀಪವಾಗಿರುವ ಹುಲಗಿ ಎಂಬ ಗ್ರಾಮ). ತುಂಗ – ಭದ್ರಾನದಿಯ ದಡದ ಮೇಲಿದೆ ಈ ತಾಣ. ನದಿಯ ಒಂದು ತೀರದ ಮೇಲೆ ದೇವಿಯ ಮಸ್ತಕವೂ, ಮತ್ತೊಂದು ಮೇಲಿದೆ ಈ ತಾಣ. ನದಿಯ ಒಂದು ತೀರದ ಮೇಲೆ ದೇವಿಯ ಮಸ್ತಕವೂ, ಮತ್ತೊಂದು ತೀರದ ಮೇಲೆ ಆಕೆಯ ದೇಹವೂ ಪೂಜಿಸಲ್ಪಡುತ್ತಿದೆ. ಸ್ಥಳೀಯರು ಕರೆಯುವಂತೆ ಈಕೆ ‘ಶ್ರೀರಾಮಚಂಡೀಶ್ವರಿ’ ಅಥವಾ ‘ಪರಶೂರಾಮನ ಮಾತೆ’. (ಇಂದು ಈ ದೇವತೆಯನ್ನು ಹುಲಿಗೆಮ್ಮ ಎಂದು ಕರೆಯುತ್ತಿದ್ದಾರೆ.) ಪರಶುರಾಮನು ತನ್ನ ತಾಯಿ ರೇಣುಕಾಳನ್ನು ತಂದೆಯ ಆಜ್ಞಾನುಸಾರ ಶಿರಚ್ಛೇದನ ಮಾಡಿದ. ಆ ಕಾರಣವೇ ಆಕೆಯ ಮಸ್ತಕ ಮತ್ತು ದೇಹ ಬೇರೆ ಬೇರೆ ಸ್ಥಳಗಳಲ್ಲಿ ಪೂಜಿಸಲ್ಪಡುತ್ತಿರುವುದು ಎಂಬುದಾಗಿ ಸ್ಥಳೀಯರ ಹೇಳುವ ಕಥೆ.[1]ಇದರ ವಿದಿತಾರ್ಥವೆಂದರೆ ದೇಹರೂಪವಾಗಿ ಪೂಜಿಸಲ್ಪಡುತ್ತಿರುವ ಈ ರೇಣುಕಾ ಮೂರ್ತಿಯು ಸೃಷ್ಟಿಶೀಲ ರೂಪದ ಉತ್ತಾನಪಾದ ಅದಿತಿಯ ಮೂರ್ತಿಯಾಗಿದ್ದಿರಬೇಕು. ಇಂಥ ಮೂರ್ತಿಯನ್ನು ರೇಣುಕಾ ಎಂದು ಕರೆಯುವುದು ಹಾಗೂ ಅವಳ ಶಿರೋಹೀನತೆಯ ಸ್ಪಷ್ಟೀಕರಣವಾಗಿ ಪರಶುರಾಮನ ಶಿರಚ್ಛೇದನ ಕಥೆಯನ್ನು ಹೇಳುವುದು ಅತ್ಯಂತ ಸ್ವಾಭಾವಿಕವೇ. ರೇಣುಕೆಯನ್ನು ಒಪ್ಪಿರುವುದು ಕೂಡ ಅದಿತಿಯ ಅವತಾರವೆಂಬುದಾಗಿಯೇ.

ಆದರೆ ಈ ದೇವಿಯ ಮೂರ್ತಿಗೆ ‘ವ್ಯಾಘ್ರೇಶ್ವರಿ’ ಎಂಬ ಹೆಸರುದುದೇಕೆ? ವ್ಯಾಘ್ರವನ್ನು ವಾಹನವಾಗಿ ಹೊಂದಿರುವ ಸಾಯುಧಳಾದ ದುರ್ಗೆಯಂತೂ ಇಲ್ಲಿ ಪೂಜಿಸಲ್ಪಡುತ್ತಿಲ್ಲ. ಬದಲಾಗಿ ಕೇವಲ ಸೃಜನೇಂದ್ರಿಯ ರೂಪದಲ್ಲಿರುವ ಮೂರ್ತಿಯನ್ನು ‘ವ್ಯಾಘ್ರೇಶ್ವರಿ’ ಎಂದು ಕರೆಯುತ್ತಿರುವುದಾದರೂ ಏಕೆ? ರೂಪ ಮತ್ತು ಹೆಸರಿನಲ್ಲಿ ಅಸಾಂಗತ್ಯವಿರುವುದಂತೂ ನಿಸ್ಸಂಶಯ. ಕೇವಲ ತಪ್ಪು ಕಲ್ಪನೆಯಿಂದ ಹೀಗೆ ಹೆಸರಿಸಲ್ಪಟ್ಟಿರಬಹುದೆಂದು ಹೇಳಬಹುದೇ? ಭಕ್ತರ ಅಜ್ಞಾನದಿಂದ ವಿಚಿತ್ರ ಮೂರ್ತಿಗೆ ವಿಚಿತ್ರ ಹೆಸರು ಕೊಡುವುದು ಅಥವಾ ವಿಚಿತ್ರವಾದ ಕಥೆಯಿಂದಲೇ ಅದರ ಸ್ಪಷ್ಟಕೀರಣ ಮಾಡುವುದು ಸ್ವಾಭಾವಿಕವಿರಬಹುದು. ಆದರೆ ಇಂಥ ವಿರುದ್ಧ ಸ್ಪಷ್ಟೀಕರಣ ಪ್ರಕ್ರಿಯೆಯ ಹಿಂದೆಯೂ ಮೂಲರೂಪದಲ್ಲಿ ಒಂದು ಆಧಾರವಿದ್ದೇ ಇರುತ್ತದೆ. ಉದಾಹರಣೆಗೆ ಲಕ್ಷ್ಮೀಯು ಶೇಷಶಾಯಿ ವಿಷ್ಣುವಿನ ಚರಣಸ್ಪರ್ಶ ಮಾಡುತಿರುವ ದೃಶ್ಯಕ್ಕೆ ಇರುವ ಒಂದು ವಿಚಿತ್ರವಾದ ಕಥೆ ಇದೆ. ಕೆಲವು ಜನಾಂಗಗಳಲ್ಲಿ ಹೇಳಲ್ಪಡುವ ಈ ಕಥೆ ನನಗೆ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಗಮನಕ್ಕೆ ಬಂತು.[2]ಅದು ಇಂತಿದೆ: ಉನ್ಮತ್ತನಾದ ವ್ಯಕ್ತಿಯೊಬ್ಬನು ಒಮ್ಮೆ ತನ್ನ ಪ್ರೀತಿಯ ತಂಗಿಯನ್ನು ಕಾಲಿನಿಂದ ಝಾಡಿಸಿ ಒದ್ದನು. ಈ ಅಪರಾಧದಿಂದ ಅವನ ಕಾಲಿಗೆ ಹುಳು ಬಿದ್ದವು. ಅಣ್ಣನ ಬಗ್ಗೆ ಅತೀವ ಪ್ರೀತಿಯನ್ನು ಹೊಂದಿದ ತಂಗಿಯು ತನಗಾದ ಅವಮಾನವನ್ನು ಲೆಕ್ಕಿಸದೆ ಅಣ್ಣನ ಸಂಕಷ್ಟದಿಂದ ವಿಹ್ವಲಗೊಂಡಳು. ಅವನ ಸ್ಥಿತಿಯನ್ನು ನೋಡಲಾಗದ ಆಕೆ ಸದಯಾಶೀಲ ಕರುಣೆಯಿಂದ ಅವರ ಕಾಲಿನಲ್ಲಿದ್ದ (ಬಿದ್ದಿದ್ದ) ಹುಳುಗಳನ್ನು ಒಂದೊದಾಗಿ ತೆಗೆಯುತ್ತಾ ಕುಳಿತಳು. ಈ ಪ್ರಸಂಗ ಚಿತ್ರಣವೇ ಶೇಷಶಾಯಿ ಮೂರ್ತಿಯಾಗಿದೆ ಎಂಬುದು ಈ ಜನರ ನಂಬಿಕೆ. ಈ ಬಗೆಯ ವಿಪರೀತ(ವಿರುದ್ಧ) ತಿಳಿವಳಿಕೆ ಅಜ್ಞಾನದಿಂದ ಉಂಟಾಗುವುದಕ್ಕೆ ಶೇಷಶಾಯಿ ಮೂರ್ತಿಯಲ್ಲಿಯೂ ಆಧಾರವಿರುವುದು ಸ್ಪಷ್ಟ. ಒಬ್ಬ ಪುರುಷ ಮಲಗಿದ್ದಾನೆ; ಒಬ್ಬ ಸ್ತ್ರೀ ಅವನ ಕಾಲ ಬಳಿಯಲ್ಲಿ ಕುಳಿತಿದ್ದಾಳೆ’ ಆ ಪುರುಷನ ಒಂದು ಕಾಲು ಅಲ್ಲಿ ಕುಳಿತ ಸ್ತ್ರೀಯ ಕೈಯಲ್ಲಿದೆ. ಈ ದೃಶ್ಯವೇ ಸಾಕು ಮೇಲಣ ಸ್ಪಷ್ಟೀಕರಣ ಕಥೆಯೊಂದು ಹುಟ್ಟಿಕೊಳ್ಳುವುದಕ್ಕೆ.

ಆದರೆ ಹೊಸಪೇಟೆಯ ಬಳಿಯ ದೇವಿಯ ಹೆಸರು ವಿಚಿತ್ರವೇ, ಕಾರಣ ಇದು ಸೃಜನೇಂದ್ರಿಯ ರೂಪದ್ದು. ‘ವ್ಯಾಘ್ರೇಶ್ವರಿ’ ಎಂಬ ಹೆಸರು ಆಕೆಗೆ ಬರುವುದಕ್ಕೆ ಕಾರಣವಾಗುವಂತಹ ಯಾವುದೇ ಹುಲಿಯಾಗಲೀ, ಹುಲಿಯಂತೆ ಭಾಸವಾಗುವ ಶಿಲ್ಪವಾಗಲೀ ಅಲ್ಲಿ ಇಲ್ಲ. ಆದಾಗ್ಯೂ ಆಕೆಗೆ ‘ವ್ಯಾಘ್ರೇಶ್ವರಿ’ ಎಂಬ ಹೆಸರು ಪ್ರಾಪ್ತವಾದುದಾದರೂ ಏಕೆ? ಮತ್ತು ಹೇಗೆ? ಜನರ ಮನಸ್ಸು ವಿಚಿತ್ರ ವಿಚಿತ್ರವಾದುದರೆಡೆಗೆ ತುಡಿಯುತ್ತಿರುತ್ತದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಕಲ್ಪನಾ ಸ್ವರ್ಗದಲ್ಲಿ ವಿಹರಿಸುತ್ತಿದ್ದರೂ ಅದಕ್ಕೆ ಕೊಂಚವಾದರೂ ವಾಸ್ತವ ವಿಚಾರದ ಪಾತಳಿಯೊಂದು ಇದ್ದೇ ಇರುತ್ತದೆ.

ಅಲ್ಲದೆ ಲಜ್ಜಾಗೌರಿಯ ಈ ತಾಣವಿರುವುದು ಕನ್ನಡಭಾಷೆಯ ಪ್ರದೇಶದಲ್ಲಿ. ಕನ್ನಡ ಭಾಷೆಯಲ್ಲಿ ‘ವ್ಯಾಘ್ರ‘ದ ತದ್ಭವ ರೂಪ ‘ಬಗ್ಗ’ ಎಂದಾಗುತ್ತದೆ. ಆದರೆ ಕನ್ನಡದಲ್ಲಿ ‘ಬಗ್ಗ’ ಎಂಬುದು ಒಂದು ದೇಶ್ಯ ಶಬ್ದವಾಗಿದ್ದು, ಅದಕ್ಕಿರುವ ಅರ್ಥ ‘ಕಮಲ’. ಅಂದರೆ –

ಬಗ್ಗ (ವ್ಯಾಘ್ರ: ಸಂಸ್ಕೃತ) – ಹುಲಿ
ಬಗ್ಗ(ಕನ್ನಡ) – ಕಮಲ.

‘ಬಗ್ಗ’ ಶಬ್ದಕ್ಕಿರುವ ಈ ಎರಡು ಅರ್ಥಗಳು ಎದುರಾದಾಗ ನಮ್ಮ ಮನಸ್ಸಿನಲ್ಲಿ ಬರುವ ವಿಚಾರವೆಂದರೆ, ಲಜ್ಜಾಗೌರಿಯ ಮೂರ್ತಿಯ ಶಿರದ ಭಾಗದಲ್ಲಿ, ಸ್ತನಗಳ ಭಾಗದಲ್ಲಿ ಹಾಗೂ ಸಾನ್ನಿಧ್ಯದಲ್ಲಿ ಇರುವ ಕಮಲಗಳು. ಕಮಲಗಳೇ ಪ್ರಧಾನವಾಗಿರುವ ಅಂಶದ ಹಿನ್ನೆಲೆಯಿಂದ ಲಜ್ಜಾಗೌರಿ ಮೂರ್ತಿಗೆ ಯಥಾರ್ಥವಾಗಿ ‘ಕಮಲೇಶ್ವರಿ’ ಅಥವಾ ‘ಬಗ್ಗೇಶ್ವರಿ’ ಎಂದು ಕರೆದಿರಬಹುದಾಗಿದೆ. ಈ ‘ಬಗ್ಗೇಶ್ವರಿ’ ಎಂಬ ಹೆಸರೇ ಕ್ರಮೇಣ ಸಹಜವೆಂಬಂತೆ ‘ವ್ಯಾಘ್ರೇಶ್ವರಿ‘ಯಾಗಿ ಸಂಸ್ಕೃತೀಕರಣಗೊಂಡಿದ್ದಿರಬೇಕು. ಉದ್ದೇಶ ಪೂರ್ವಕವಾಗಿ ಅರ್ಥಾಂತರಗೊಳಿಸುವ ಸಂಸ್ಕೃತೀಕರಣಕ್ಕೆ ಈ ಕ್ಷೇತ್ರದ ಹೆಸರು ಬಹಳ ಒಳ್ಳೆಯ ನಿದರ್ಶನ.

ಸುಭಗತೆಯ ಉಪಮಾನ

ಈ ಅಪತ್ರಿಮ ಪುಷ್ಪವು ಭಾರತೀಯ ಪರಂಪರೆಯಲ್ಲಿ ಕೇವಲ ಸೃಷ್ಟಿಶೀಲ ಹಾಗೂ ಸಮೃದ್ಧಿಯಾಗಿ ಮಾತ್ರವಲ್ಲ ಸುಂದರತೆ, ಕೋಮಲತೆ, ಮೃದುತ್ವ, ಸುಖಸ್ಪರ್ಶ ಹಾಗೂ ಸುದೈವದ ಪ್ರತೀಕವೂ ಆಗಿದೆ.[3]ಸ್ತ್ರೀಯ ಸೌಂದರ್ಯ ವರ್ಣನೆಯಲ್ಲಿ ಮುಖಕಮಲ, ನೇತ್ರಕಮಲ ಎಂದು ಮುಂತಾದ ರೂಪಗಳು ಮತ್ತೆ ಮತ್ತೆ ಬಳಕೆಯಾಗುವುದುಂಟು. ಸೌಂದರ್ಯದ ಸುಸಂಗತ ಉಪಮಾನವಾಗಿ ಕಮಲವನ್ನು ಹೇಳುವರು. ನಾನಾ ದೇವಾನುದೇವತೆಗಳ ರೂಪವರ್ಣನೆಯಲ್ಲಿಯಂತೂ ಕಮಲದ ಉಪಮಾನವನ್ನು ಸಾತತ್ಯಪೂರ್ವಕವಾಗಿ ಬಳಸಿಕೊಂಡು ಬರಲಾಗಿದೆ. ದೇವತೆಗಳ ಮತ್ತು ದೇವ ಸದೃಶ ವ್ಯಕ್ತಿಗಳ ಚರಣದರ್ಶನ ಪಡೆಯುವುದು, ಅವರ ಚರಣಗಳಲ್ಲಿ ಲೀನವಾಗುವುದನ್ನು ಭಕ್ತಿಯ ಪ್ರಕರ್ಷತೆಯಾಗಿಯೂ ಮಾನ್ಯ. ಆ ಚರಣಗಳನ್ನು ‘ಚರಣಕಮಲ’ ಎಂಬುದಾಗಿ ಗೌರವಪೂರ್ವಕವಾಗಿ ಕರೆಯುವುದು ಸರ್ವೇಸಾಮಾನ್ಯ. ಅಲ್ಲಿ ಲೀನವಾಗಲಿಚ್ಛಿಸುವ ಭಕ್ತನು ‘ಚರಣಕಮಲ ವಿ.ಲಿಂದಾಯಮಾನ‘ನಾಗುವುದು ತನಗೆ ಧನ್ಯವೆಂದು ಭಾವಿಸುತ್ತಾನೆ. ಅನೇಕ ದೇವತೆಗಳು ಕೈಯಲ್ಲಿ ಕಮಲಧಾರಣ ಮಾಡಿದ್ದರೆ, ಕೆಲವು ಪೀಠಗಳೇ ಕಮಲ ರೂಪದವುಗಳಾಗಿರುವುವು. ಲಕ್ಷ್ಮಿಯು ಕಮಲ ಪೀಠದ ಮೇಲೆ ವಿರಾಜಮಾನಳಾಗಿರುವಂತೆಯೇ, ಬೌದ್ಧ ಶಿಲ್ಪಗಳಲ್ಲಿ ಭಗವಾನ್ ಬುದ್ಧನು ಕಮಲ ಪೀಠದ ಮೇಲೆ ಅಧಿಷ್ಠಿತನಾಗಿರುವುದು ಕಂಡು ಬರುತ್ತದೆ. ಅವಲೋಕಿತೇರ್ಶವರನೆಂಬ ಪ್ರಸಿದ್ಧ ಬೋಧಿಸತ್ವನಂತೂ ‘ಪದ್ಮಪಾಣಿ’ ಎಂಬ ಬಿರುದಿನಿಂದ ಕರೆಯಲ್ಪಟ್ಟಿದ್ದಾನೆ. ಅಜಂತಾದ ಗುಹೆಗಳಲ್ಲಿ ಅವನ ಚಿತ್ರವು ಪದ್ಮಗಳಿಂದಲೇ ಇಡಿಕಿರಿದಿರುವುದು ಕಂಡು ಬರುತ್ತದೆ.

ಕಮಲ ಪುಷ್ಪವು ಭಾರತೀಯ ಪರಂಪರೆಯಲ್ಲಿ ಹೀಗೆ ಅನೇಕ ಆತ್ಮಿಕ ವಿಶೇಷಗಳ ಸಘನ (ಸಮರ್ಥಶೀಲ) ಪ್ರತೀಕವಾಗಿದೆ. ಎಂತಲೇ ಅದನ್ನು ಸಮಗ್ರ ಭಾರತೀಯ ಸಂಸ್ಕೃತಿಯ ಪ್ರಧಾನ ಪ್ರತೀಕವಾಗಿ ಒಪ್ಪುವುದು ಅಗತ್ಯವೆಂದು ಹೇಳುತ್ತಿರುವುದರಲ್ಲಿ ಯಾವುದೇ ಅತಿಶಯೋಕ್ತಿಯೂ ಇಲ್ಲ.


 

[1] ಕಲ್ಯಾಣಿ, ತೀರ್ಥಾಂಕ: ೩೧ – ೧, ಜನವರಿ ೧೯೫೭, ಪುಟ ೩೦೮ – ೩೦೯.

[2]ಲಾತೂರ್ (ಜಿಲ್ಲಾ. ಉಸ್ಮಾನಾಬಾದ್‌)ನಲ್ಲಿಯ ಪುರಾತನ ಸಿದ್ಧೇಶ್ವರ ಮಂದಿರದ ಪರಿಸರದಲ್ಲಿರುವ ಶಿಥಿಲವಾದ ಶೇಷಶಾಯಿ ಮೂರ್ತಿಯ ವಿಷಯವಾಗಿ ಮತ್ತು ಹರಿಶ್ಚಂದ್ರಗಢದ ಹತ್ತಿರವಿರುವ ಖಿರೇಶ್ವರ ಎಂಬ ಊರಿನ ಹೊರಗೆ ಇರುವ ಪ್ರಾಚೀನ ನಾಗೇಶ್ವರ – ಮಂದಿರದ ಗರ್ಭಗೃಹದ್ವಾರದ ಹಣೆ ಭಾಗದಲ್ಲಿ ಇರುವ ಶೇಷಶಾಯಿ ಶಿಲ್ಪದ ಬಗ್ಗೆ – ಇಂಥ ಕಥೆಗಳು ಇರುವುದನ್ನು ನಾನು ಕೇಳಿದ್ದೇನೆ.

[3] Artibus Asiae: Vol.XIX, pp. 264 – 265.