ಉಪಲಬ್ಧವಾಗಿರುವ ಲಜ್ಜಾಗೌರಿಯ ಅನೇಕ ವಿಗ್ರಹಗಳು ಕಮಲ(ತಾವರೆ) ದೊಂದಿಗೂ ಸಾಹಚರ್ಯಹೊಂದಿರುವುದನ್ನು ಪ್ರಾರಂಭದಲ್ಲಿಯೇ ಚರ್ಚಿಸಲಾಗಿದೆ. ಕಮಲ ಮತ್ತು ಲಕ್ಷ್ಮಿಯರ (ಕಮಲಾ) ಸಂಬಂಧವು ಚಿರಂತನವಾದುದು. ಸುವರ್ಣ ದಿನಗಳ ಹಾಗೂ ರಜತ ರಾತ್ರಿಯ ಶರದ್ ಋತುವಿನ ಸೊಗಸಿನಲ್ಲಿ ಈ ಚಿರಂತನ ಸಂಬಂಧ ರಹಸ್ಯವು ತಂತಾನೆ ಮನಃಸ್ಫುರಿತವಗುತ್ತದೆ. ಈ ಕಾಲದಲ್ಲಿ ಹೊಲಗದ್ದೆಗಳೆಲ್ಲ ಹೂವುಗಳಿಂದಲೂ ಮತ್ತು ಸರೋವರಗಳೆಲ್ಲ ತಾವರೆ (ಕಮಲ)ಗಳಿಂದಲೂ ನಿತ್ಯವೂ ರಂಜಿಸುತ್ತಿರುವೆ. ಸಮೃದ್ಧ ವರ್ಷ ಧಾರೆಯಿಂದಾಗಿ ಪುಷ್ಟಿಗೊಂಡ ಧಾನ್ಯಲಕ್ಷ್ಮಯು ಬಂಗಾರದ ಹೆಜ್ಜೆಗಳನ್ನಿಡುತ್ತಾ ಮನೆಗೆ ಬರುವಾಗ್ಗೆ, ಜಲತರಂಗಗಳ ಮೇಲೆ ಓಲಾಡುತ್ತಿರುವ ಕಮಲಶ್ರೀಯೂ ಸಜ್ಜಾಗಿರುತ್ತಾಳೆ ಅವಳ ಸತ್ಕಾರಕ್ಕಾಗಿ. ಎಂತಲೇ ಸಂಸ್ಕೃತದ ಒಬ್ಬ ಕವಿಯು ಕಮಲಭೂಷಿತ ಶರದೃತುವಿನ ಚಿತ್ರಣವನ್ನು ನೀಡಿರುವುದು ‘ಕಮಲೆ’ – ಯ – ಕಮನೀಯ ಸ್ತ್ರೀರೂಪದಲ್ಲಿ. ಅವನು ಹೇಳಿರುವುದಿಂತಿದೆ, ‘ಯಾರ ಕಾಂತಿ ರಕ್ತ ಕಮಲದಂತೆ ಆರಕ್ತವಾಗಿರುವುದೋ, ಯಾರ ನೇತ್ರ ಅರಳಿದ ನೀಲ ಕಮಲದಂತೆ ನೀಲಮಯವಾಗಿರುವುದೋ ಹಾಗೂ ಯಾರ ನಗು ಕಮಲದ ವಿಕಸನದಂತೆ ಮೋಹಕವೂ – ಮಧುರವೂ ಆಗಿರುವುದೋ, ಆ ಲಾವಣ್ಯವತಿಯಂತೆ ಈ ಶರದೃತುವೂನಿಮ್ಮ ಪ್ರಸನ್ನತೆಯನ್ನು ವೃದ್ಧಿಗೊಳಿಸಲಿ!’

ಸೌಭಾಗ್ಯ ಸಂಪನ್ನಳೂ, ಸುಚರಿತಳೂ ಹಾಗೂ ಪ್ರಜಾವತಿ (ಸಂತಾನದಾತ್ರಿ)ಯೂ ಆದ ಸ್ತ್ರೀಯನ್ನು ಲಕ್ಷ್ಮೀಯ ರೂಪದಲ್ಲಿಯೇ ಕಾಣುತ್ತಲಿದ್ದೇವೆ ನಾವು. ಅಂಥವಳನ್ನು ಸಂಬೋಧಿಸುವುದು ಕೂಡಾ ‘ಲಕ್ಷ್ಮಿ’ ಎಂಬುದಾಗಿಯೇ. ಅಲ್ಲದೆ ಸ್ತ್ರೀಯು ಮಾತೆಯಾಗಿ ನಮಗೆ ಪೂಜನೀಯಳಾಗಿರುವುದರಿಂದ ಅವಳನ್ನು ಮಹಾಮಾತಾಮಹಿಯ ಪ್ರತಿನಿಧಿಯಾಗಿಯೇ ನಾವು ಗೌರವಿಸುತ್ತಾ ಬಂದಿದ್ದೇವೆ. ಬರೆಹಗಳಲ್ಲಿ ಭೂಮಿ ಮತ್ತು ಸ್ತ್ರೀ ಇಬ್ಬರನ್ನೂ ಏಕರೂಪವಾಗಿ ಚಿತ್ರಿಸಲಾಗಿದೆ; ಅವರಿಬ್ಬರೂ ಲಕ್ಷ್ಮಿಯರೇ ಆಗಿದ್ದಾರೆ. ಇವರು ದೇವೀ ತತ್ತ್ವದ ಪುರಾತನ ಮೂರ್ತಿಯರೂ ಹೌದು. ಅವರ ಪ್ರತಿಮೆಯನ್ನು ನಾವು ಪೂಜಿಸುತ್ತಿರುವುದು ಸ್ತ್ರೀಯ ರೂಪದಿಂದಲೇ. ಜೊತೆಗೆ ಅವರ ಪ್ರತೀಕಗಳೆಲ್ಲ ಕಮಲದ ರೂಪವೇ! ಅಂದರೆ ಭೂಮಿ, ಸ್ತ್ರೀ ಮತ್ತು ಕಮಲ ಇವುಗಳೆಲ್ಲವೂ ಏಕಾತ್ಮಕಗೊಂಡಿರುವುವು.

ಲಕ್ಷ್ಮಿಯ ಈ ಅಸಾಧಾರಣ ಮಹತ್ವವನ್ನು ಅರಿತ ಕವಿ ಮನಸ್ಸಿಗೆ ಅದು ಒಂದು ಸ್ಪರ್ಧೆಯಂತೆ ಕಾಣುತ್ತದೆ. ಎಂತಲೇ ಅತ್ಯಂತ ಕೌತುಕವಾಗಿ ಉದ್ಗರಿಸಿದ್ದಾನೆ ಆತ – –

ಲಕ್ಷ್ಮೀಃ ಸ್ವಯಂ ನಿವಸತಿ ತ್ವಯಿ ಲೋಕಧಾತ್ರೀ
ಮಿತ್ರೇಣ ಚಾಪಿ ವಿಹಿತೋsಸ್ತಿ ದೃಢೋsನುರಾಗಃ |
ವಂದೀವ ಗಾಯತಿ ಗುಣಾಂಸ್ತವ ಚಂಚರೀಕಃ
ಕಂ ಪುಂಡರೀಕ! ತವ ಸಾಮ್ಯಮುರೀಕರೋತಿ? ||

[ಪ್ರತ್ಯಕ್ಷತಃ ಲೋಕಧಾತ್ರಿಯಾದ ಲಕ್ಷ್ಮಿಯೇ ನಿನ್ನಲ್ಲಿ ನೆಲೆಗೊಂಡಿರುವಳು; ವಿಶ್ವದ ಮಿತ್ರ ನಾಗಿರುವ ಸೂರ್ಯನೂ ಸಹ ನಿನ್ನ ವಿಷಯವಾಗಿ ದೃಢವಾಗಿಯೇ ಅನುರಾಗವನ್ನು ಹೊಂದಿದ್ದಾನೆ; ಭ್ರಮರವು ನಿನ್ನ ಗುಣಗಳ ಪವಾಡವನ್ನು ಸ್ತುತಿಸುವಂತೆ ಗಾಯನ ಮಾಡುತ್ತಲಿದೆ. ಹೇ ಲಕ್ಷ್ಮೀ, ನಿನ್ನ ಭಾಗ್ಯವನಾರು ಸರಿಗಟ್ಟಬಲ್ಲರು?]

ಪೃಥ್ವಿಯ ಪ್ರತೀಕವಾಗಿರುವ ಕಮಲವು ಸೂರ್ಯನ ವಿಶೇಷ ಅನುರಾಗದ ವಿಷಯವೂ ಆಗಿರುವುದು ಅತ್ಯಂತ ಸ್ವಾಭಾವಿಕವೇ. ಕಾರಣ ಸೂರ್ಯನು ದ್ಯುಲೋಕಕ್ಕೆ (ಆಕಾಶ, ಸ್ವರ್ಗ) ಪ್ರತಿನಿಧಿ. ಅದಕ್ಕಿಂತಲೂ ಹೆಚ್ಚಾಗಿ, ಆತ ಸಾಕ್ಷತ್ ಪುರುಷ (ದ್ಯೌ)ನಾಗಿರುವನು. ದ್ಯಾವಾ – ಪೃಥ್ವಿಯ ಯುಗಳಕ್ಕೆ ಆತನೇ ಪರಮ ಪುರುಷ. ಆ ಪರಮ ಪುರುಷನಿಗೆ ಪ್ರೇಯಸಿಯಾಗಿರುವ ಕಮಲರೂಪೀ ಪೃಥ್ವಿಯು ಆತನ ದರ್ಶನದಿಂದ ಶತದಳಗಳಾಗಿ ಅರಳುವುದರಲ್ಲಿ ಆಶ್ಚರ್ಯ ಪಡುವಂತಹದ್ದೇನೂ ಇಲ್ಲ. ಆ ಪರಮ ಪುರುಷನ ‘ಕರ’ ಸ್ಪರ್ಶವಾಗುತ್ತಿದ್ದಂತೆಯೇ ಈಕೆಯ ಅವಯವದಲ್ಲಿನ ಮೊಗ್ಗುಗಳೆಲ್ಲವೂ ಅರಳುತ್ತವೆ. ಹೀಗೆ ದ್ಯಾವಾ – ಪೃಥ್ವಿಯರ ಮಧುರ ಮಿಲನದಿಂದ ವಿಶ್ವದ ಗರ್ಭವನ್ನು ರೂಪುಗೊಳಿಸುವುದಾಗಿದೆ ವಿಧಿಯ ಯೋಜನೆ. ಸೂರ್ಯನಂತೆಯೇ ಚಂದ್ರನೂ ದ್ಯುಲೋಕದವನೇ ಆಗಿರುವುದರಿಂದ ಚಂದ್ರ – ಸೂರ್ಯರ ಪ್ರಕಾಶ ಸಂಪರ್ಕದಿಂದ ಅರಳುವ ಕಮಲ ಜಾತಿಯು ಸಹಜವಾಗಿಯೇ ಪೃಥ್ವಿಯ ಪ್ರತಿನಿಧಿಯೆನಿಸಿರುವುದು. ಪೃಥ್ವಿ ಮತ್ತು ಸ್ತ್ರೀ ಇವುಗಳೆರಡೂ ‘ಮಾತೆ’ಯ ಸೃಜನಶೀಲ ಸಾಮರ್ಥ್ಯದ ಸಮರ್ಥ ಪ್ರತೀಕಗಳೇ ಆಗಿವೆ.

ಶ್ರೀ ಸೂಕ್ತದಲ್ಲಿನ ಪದ್ಮ

ಪೃಥ್ವಿ ಮತ್ತು ಕಮಲ ಇವುಗಳ ಅನುಬಂಧದ ಅಧಿಕ ಉತ್ಕಟ ಸ್ವರೂಪವು ಋಗ್ವೇದದ ಖಿಲಸೂಕ್ತವಾಗಿರುವ ಶ್ರೀ ಸೂಕ್ತದಲ್ಲಿ ಸಿಗುತ್ತದೆ.[1] ಶ್ರೀಸೂಕ್ತದಲ್ಲಿನ ‘ಶ್ರೀ’ ಎಂಬುಉ ಭೂದೇವಿಯ ಸೂಚಕವೇ ಆಗರುವುದೆಂದು ನಿಃಶಂಕೆಯಿಂದ ಒಪ್ಪಿಕೊಳ್ಳುವುದಕ್ಕೆ ಅದರಲ್ಲಿಯೇ ಇದೆ ಆಧಾರ. ಆಕೆ ‘ಕರ್ದಮದಿಂದಾಗಿ ಪ್ರಜಾವತಿ’ (‘ಕೆಸರಿನಿಂದ ಪ್ರಜಾಭೂತ‘, ೧೧) ಯಾಗುವಳು. ಜಲದಿಂದಾಗಿ ಆಕೆಗೆ ‘ಸ್ನಿಗ್ಧತೆ’ ಪ್ರಾಪ್ತವಾಗುವುದು, (‘ಅಪಃ ಸೃಜಂತು ಸ್ನಿಗ್ಧಾನಿ‘, ೧೨). ಈ ‘ಸ್ನಿಗ್ಧತೆ’ ಯನ್ನು ‘ಚಿಕ್ಲೀತ’ ( = ಚಿಖಲ್‌(ಕೆಸರು), Moisture, Slime) ಎಂದು ಕರೆಯಲಾಗಿದೆ. ‘ಕರ್ದಮ’ ಮತ್ತು ‘ಮಣ್ಣು’ (ಚಿಖ್ಲೀತ್‌) ಇವು ಶ್ರೀಯ ವಿಶೇಷವಾಗಿರುವ ಮೇಲ್ಮಖಗಳು. ಮಳೆಯ ಕಾರಣದಿಂದಲೋ ಅಥವಾ ಜಲ ಸಂಪರ್ಕದಿಂದಾಗಿಯೋ ಒದ್ದೆಗೊಂಡ ಅವು ಬೀಜ ಧಾರಣ ಸಾಮರ್ಥ್ಯವುಳ್ಳುವುಗಳಾಗಿ ಭೂಮಿಯ ವಿಶೇಷ ಅಂಶಗಳೆನಿಸಿವೆ. ಈ ಅರ್ಥದಲ್ಲಿಯೇ ಎರಡು ಋಚೆಗಳಲ್ಲಿ (೧೩ – ೧೪) ಭೂಮಿಗೆ ‘ಆರ್ದ್ರಾ’ ಎಂಬ ವಿಶೇಷಣಗಳನ್ನು ಬಳಸಲಾಗಿರುವುದು. ‘ಹಸ್ತಿನಾದ ಪ್ರಬೋಧಿನೀ’ (೩) ಎಂಬ ಭೂಮಿಯನ್ನು ಕುರಿತ ವಿಶೇಷಣವು ಅವಳ ‘ಗಜಲಕ್ಷ್ಮಿ’ ಸ್ವರೂಪವನ್ನು ನೆನಪಿಗೆ ತರುವುದಾಗಿದೆ. ಗಜವು ಮೇಘ ಸ್ವರೂಪಿಯಾಗಿದ್ದು, ಅದರ ಕಾರಣವಾಗಿ ಪುಷ್ಪವತಿಯಾಗುವವಳು ಧರಿತ್ರಿಯೇ ಎಂಬುದಂತೂ ಸುಸ್ಪಷ್ಟ. ಭಾರತದಲ್ಲಿ ಧರಿತ್ರಿಯನ್ನು ಪ್ರಮುಖವಾಗಿ ಅನ್ನದಾಯಕವಾದ ಬೆಳೆಗಳನ್ನು ಬೆಳೆಯುವಳು ಎಂದು ನೋಡುವುದರಿಂದ ಋಷಿಗಳು ಇದಕ್ಕೆ ಸಂಬಂಧಿಸಿದಂತೆ ‘ಕರೀಕ್ಷಿಣಿ’ (ಒಕ್ಕಲಿಗ = ಸಗಣಿ ಗೊಬ್ಬರ ಯುಕ್ತ) ಎಂಬ ವಿಶೇಷಣವನ್ನು ಬಳಸಿದ್ದಾರೆ (ಋಚೆ.೯). ‘ಹಿರಣ್ಯವರ್ಣ‘, ‘ಜ್ವಲಂತೀ‘, ‘ಹಿರಣ್ಯ ಪ್ರಕಾರಾ‘, ‘ಗಂಧದ್ವಾರಾ’ ಎಂಬಿತ್ಯಾದಿ ವಿಶೇಷಣಗಳಿಂದಲೂ ಸೂಕ್ತ ದ್ರಷ್ಟಾರಾದ ಋಷಿಗಳು ಪೂರ್ಣವಾಗಿ ಮಿರುಗುತ್ತ ಸುವಾಸನೆ ಚೆಲ್ಲುವಂತಹ ಹೊಲಗಳಿಂದ ಯುಕ್ತವಾದ ಭುಮಿಯ ಸ್ಥೂಲ ಚಿತ್ರಣವನ್ನು ನಮ್ಮ ಕಣ್ಣೆದುರು ಬಿಂಬಿಸಿದ್ದಾರೆ. ಧನ ಧಾನ್ಯಗಳು ಹಾಗೂ ರಾಸುಗಳನ್ನು ಪುಷ್ಟಿಗೊಳಿಸುವ ಈ ಅನ್ನದಾತಳೆನಿಸಿದ ಭೂಮಿಯು ಶ್ರೀಸೂಕ್ತದಲ್ಲಿ ನಾನಾ ಬಗೆಗಳಲ್ಲಿ ಹಾಗೂ ನಾನಾ ರೂಪಗಳಲ್ಲಿ ಪ್ರಕಟಗೊಂಡಿದ್ದಾಳೆ. ಭೂಮಿಯನ್ನು ‘ಲಕ್ಷ್ಮಿ’ (ಋಚೆ ೧) ಎನ್ನಲಾಗಿರುವಂತೆಯೇ ‘ಅಲಕ್ಷ್ಮಿ’ಯನ್ನು ದೂರ ಮಾಡುವವಳೂ ಹೌದು ಎಂದೂ ಹೇಳಲಾಗಿದೆ. ಅಂದರೆ ಸಕಲ ಸೃಷ್ಟಿ ಹಾಗೂ ಸಮೃದ್ಧತೆಯ ಗರ್ಭದಾಯಿನಿ ಭೂದೇವಿ.

ಭೂಮಿರೂಪೀ ಶ್ರೀಯನ್ನು ಋಷಿವರ್ಯರು ಕಮಲದೊಂದಿಗೆ ಸಂಬಂಧ ಕಲ್ಪಿಸುವಲ್ಲಿ ಋಗ್ವೇದದ ವಿಚಾರಗಳನ್ನು ಅನುಸರಿಸಿದ್ದಾರೆ. ಋಗ್ವೇದದಲ್ಲಿ ಸೃಷ್ಟಿಯ ಉತ್ಪತ್ತಿ ಕಥೆಯ ಸಂದರ್ಭದಲ್ಲಿನ ಪೃಥ್ವಿ ಮತ್ತು ಕಮಲ ಇವುಗಳ ಅನುಬಂಧದ ಚಿತ್ರಣವನ್ನು ನಾವು ಮುಂದೆ ನೋಡಬಹುದು. ಶ್ರೀಸೂಕ್ತ ದ್ರಷ್ಟಾರನಾದ ಋಷಿಯು ಆಕೆ(ಭೂಮಿ)ಯನ್ನು ಕಂಡಿರುವುದು ಕಮಲಾಸನದ ಮೇಲೆ ಸ್ಥಿರಗೊಂಡಿರುವ ಅವಸ್ಥೆಯಲ್ಲಿ (‘ಪದ್ಮೇಸ್ಥಿತಾ,೪); ಅವನ ಪಾಲಿಗೆ ಆಕೆಯು ಸಾಕ್ಷಾತ್ ಕಮಲವೇಲ (‘ಪದ್ಮಿನಿ‘,೫)ಳೇ; ಅವಳ ಕಂಠದಲ್ಲಿ ಕಮಲದ ಮಾಲೆಯು ಶೋಭಿಸುತ್ತಿದೆ (‘ಪದಮ್ಮಾಲಿನೀ‘, ೧೧, ೧೪) ಎಂಬುದು ಅವನ ಉವಾಚ. ಶ್ರೀಸೂಕ್ತದಲ್ಲಿನ ಭೂಮಿ – ಕಮಲದ ನಡುವಣ ಈ ಸಂಬಂಧವು ನಂತರ ಇದರಲ್ಲಿ ಸೇರಿಸಿದ್ದೆನ್ನಲಾಗಿರುವ ಲಕ್ಷ್ಮಿ ಸೂಕ್ತದಲ್ಲಿ (ಲಕ್ಷ್ಮಿ – ಸ್ವರೂಪ ಪೂರ್ಣತಃ ಪರಿಣತಿಗೊಂಡ ಮೇಲೆ) ಇನ್ನೂ ಪ್ರಕರ್ಷಣ ರೂಪದಲ್ಲಿ ಕಾಣಿಸಿಕೊಂಡಿದೆ:

ಪದ್ಮಾನನೇ ಪದ್ಮಊರು ಪದ್ಮಾಕ್ಷೀ ಪದ್ಮಸಂಭವೇ |
ತನ್ಮೇ ಭಜಸಿ ಪದ್ಮಾಕ್ಷೀ, ಯೇನ ಸೌಖ್ಯಂ ಲಭಾಮ್ಯಹಂ || ||

ಪದ್ಮಾನನೇ ಪದ್ಮಿನಿ ಪದ್ಮಪತ್ರೇ, ಪದ್ಮಪ್ರಿಯೇ ಪದ್ಮಾದಲಾಯತಾಕ್ಷೀ |
ವಿಶ್ವಪ್ರಿಯೇ ವಿಶ್ವಮಾನೋನುಕೂಲೇ ತ್ವಪಾದಪದ್ಮಂ ಮಯಿ ಸನ್ನಿಧತ್ಸ್ವ || ||

ಸರಸಿಜನಿಲಯೇ ಸರೋಜಹಸ್ತೇ ಧವಲತರಾಂಶುಕಗಂಧಮಾಲ್ಯಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನಭೂತಿಂಕರೀ ಪ್ರಸೀದ ಮಹ್ಯಮ್ || ||

[ಹೇ ಕಮಲಮುಖಿ, ಆರ ತೊಡೆಗಳು ಕಮಲದಂತೆ ಕೋಮಲವಾಗಿರುವುವೋ, ಅಂತಹ ಕಮಲ ನಯನ ಕಮಲಜೆ! ಯಾವುದರಿಂದ ಎನಗೆ ಸೌಖ್ಯ ಲಭಿಸುವುದೋ ಅಂತಹುವನ್ನು ಏನಾದರೂ ನೀಡೆನಗೆ. ಹೇ ಕಮಲ ಮುಖಿ ಕಮಲೆ, ಹೇ ಕಲಮ ಪತ್ರಾರೂಢೇ, ಕಮಲಪ್ರಿಯೆ, ಹೇ ಕಮಲದಳ ನಯನೆ, ವಿಶ್ವಪ್ರಿಯೆ, ವಿಶ್ವಪ್ರಿಯ ದೇವತೆಯೇ, ನಿನ್ನ ಚರಣ ಕಮಲಗಳನ್ನು ಇಡುವುದು ಎನ್ನೋಳು. ಹೇ ಕಮಲವಾಸಿನಿ, ಕಮಲಧಾರಿಣಿ, ನೀನಹೆ ಶುಭ್ರ, ನಯನ ಮನೋಹರವಹ ವಸ್ತ್ರಭೂಷಿತೆಯು ಅಂತೆ ಗಂಧ – ಮಾಲೆಗಳಿಂದ ಶೋಭಾಯಮಾನಳಾಗಿಯೂ, ಹೇ ಭಗವತಿ, ಹರಿವಲ್ಲಭೆ, ಸರ್ವ ತ್ರಿಭುವನಂಗಳನು ವೈಭವ ಸಂಪನ್ನಗೊಳಿಸುವಾಕೆಯಾಗಿರುವ ನೀನು ಪ್ರಸನ್ನಳಾಗು ಎನ್ನ ಮೇಲೆ.]

ಮುಂದೆ ಪುರಾಣಗಳ ಕಾಲದಲ್ಲಿ ಈ ಭೂಮಿರೂಪೀ ಶ್ರೀದೇವಿಯು ಲಕ್ಷ್ಮಿ ಮತ್ತು ಭೂದೇವಿ ಎಂಬೆರಡು ಭಿನ್ನರೂಪಗಳಿಂದ ವಿಷ್ಣು ಪುರಾಣದಲ್ಲಿ ಚಿತ್ರಿತಳಾಗಿರುವುದನ್ನು ಕಾಣಬಹುದು. ಆದರೂ ಆಕೆ ಭೂಮಿಯೇ ಆಗಿದ್ದು, ಕಮಲದೊಡನೆ ಅವಳಿಗೆ ಇರುವ ಸಂಬಂಧವು ದೃಢವಾದುದು. ಅಲ್ಲದೆ ಆಕೆ ಕಮಲರೂಪೀ ಲಕ್ಷ್ಮಿಯೂ ಆಗಿರುವಳು. ಕಮಲವು ಹೇಗೆ ಸ್ವತಂತ್ರವಾಗಿ ಸೃಷ್ಟಿಶೀಲವೂ, ಸಮೃದ್ಧಿಯ ಪ್ರತೀಕವೂ ಆಗಿರುವುದೋ ಹಾಗೆಯೇ ಅದು ಲಕ್ಷ್ಮಿಯ ರೂಪವನ್ನೂ ಒಳಗೊಂಡಿದೆ.

ಸೃಷ್ಟಿ ಮತ್ತು ಸಮೃದ್ಧಿ

ಕಮಲದ ಮೇಲೆ ವಿರಾಜಮಾನಳಾಗಿರುವ ಮತ್ತು ಕೈಯಲ್ಲಿಯೂ ಕಮಲವನ್ನು ಹಿಡಿದಿರುವ ಲಕ್ಷ್ಮೀಯು ನಮ್ಮ ಪರಂಪರೆಯನುಸಾರ ಸಮೃದ್ಧಿಯ ದೇವತೆ. ದೀಪಾವಳಿಯಲ್ಲಿ ಆಕೆಯ ಪೂಜೆಯನ್ನು ನಾವು ನವನಿಧಿಗಳ ಸ್ವಾಮಿಯಾಗಿರುವ ಕುಬೇರನೊಂದಿಗೆ ಮಾಡುತ್ತೇವೆ. ಅದು ಆಕೆ ಕುಬೇರನ ಸಹಧರ್ಮಿಣಿ ಎಂಬ ಭಾವನೆಯಿಂದ. ಧನವಂತರಾದ ಕುಬೇರ ಮತ್ತು ಲಕ್ಷ್ಮಿಯರ ಸಮೃದ್ಧಿದಾಯಕ ಯುಗುಳವೇ ದೀಪಾವಳಿಯ ಹಬ್ಬದಲ್ಲಿ ಪ್ರಮುಖ ಪೂಜಾ ವಿಷಯ. ದೀಪಾವಳಿಗೆ ಇದ್ದ ಪ್ರಾಚೀನ ಹೆಸರು ‘ಯಕ್ಷರಾತ್ರಿ‘; ಈ ಮೂಲಕ ದೀಪಾವಳಿಯಲ್ಲಿ ಕುಬೇರನ ಸ್ಥಾನ ಎಂತಹದ್ದೆಂಬುದು ಸ್ಪಷ್ಟವಾಗುತ್ತದೆ. ಕಾರಣ ಕುಬೇರ ಯಕ್ಷರಿಗೆಲ್ಲ ಅಧಿಪತಿಯಾಗಿದ್ದು, ‘ಯಕ್ಷರಾಜ’ ಎನಿಸಿಕೊಂಡಿದ್ದಾನೆ. ಅವನ ಐಶ್ವರ್ಯ ಶಕ್ತಿ ಎಂದರೆ ಲಕ್ಷ್ಮಿ. ಅವನ ಅಧಿಪತ್ಯದಲ್ಲಿನ ನವನಿಧಿಗಳಲ್ಲಿ ಪ್ರಮುಖವಾದ ಒಂದು ನಿಧಿಯೆಂದರೆ, ‘ಮಹಾಪದ್ಮ’. ಈ ಹಿನ್ನೆಲೆಯಲ್ಲಿಯೇ ಕುಬೇರ ಮತ್ತು ಪದ್ಮಜ – ಲಕ್ಷ್ಮಿಯರ ಅಭೇದ ಸಂಬಂಧವನ್ನು ದೀಪಾವಳಿಯ ಪೂಜೆ ಮೂಲಕ ಜತನಗೊಳಿಸಿಕೊಂಡು ಬರಲಾಗಿದೆ.

ಕುಬೇರ – ಲಕ್ಷ್ಮಿಯರ ಈ ಸಂಬಂಧ ಮತ್ತು ಅವರ ಸಮೃದ್ಧಿದಾಯಕ ಸಾಮರ್ಥ್ಯವು ಲಕ್ಷ್ಮಿಯ ಸೃಜನಶೀಲತೆಯೊಂದಿಗೆ ಇದೆ. ಸಮೃದ್ಧಿ ಎಂಬುದು ಸೃಜನಶೀಲತೆಯ ಪರಿಣತ ರೂಪವೇ. ಪ್ರಾಚೀನರ ದೃಷ್ಟಿಯಲ್ಲಿ ಉಚಿತ ಕಾಲದಲ್ಲಿ ಹಾಗೂ ಉಚಿತ ಪ್ರಮಾಣದಲ್ಲಿ ಜಲ ವೃಷ್ಟಿಯಾಗುವುದು ಅವಸ್ಯ. ಭೂಮಿಯು ವೃಕ್ಷರಾಜಿಗಳಿಂದಲೂ, ನಾನಾ ಬಗೆಯ ಧಾನ್ಯಗಳಿಂದಲೂ ತುಂಬಿರುತ್ತದೆ ಎಂಬುದೇ ಸಮೃದ್ಧಿಗಿರುವ ಅರ್ಥ. ಆ ಕಾರಣಕ್ಕಾಗಿಯೇ ಅವರಿಗೆ ಧಾನ್ಯಗಳಿಂದ ತುಂಬಿದ ಕಣಜ (ಗೂಡು) ಹಾಗೂ ರಾಸುಗಳಿಂದ ತುಂಬಿದ ಕೊಟ್ಟಿಗೆಗಳ ಬಗ್ಗೆ ಅಪರಿಮಿತವಾದ ಕೌತುಕ. ಸಮೃದ್ಧ ಬೆಳೆಗಳಿಂದ ತುಂಬಿದ ಹೊಲ ಗದ್ದೆಗಳು ಮತ್ತು ದನಗಳ ಹಿಂಡನ್ನು ಅವರು ಸದಾ ಅಪೇಕ್ಷಿಸುತ್ತಿದ್ದರು. ಲಕ್ಷ್ಮಿಯೊಂದಿಗೆ ನಿಕಟ ಸಂಬಂಧ ಹೊಂದಿರುವಂಥ ಕಮಲವು ಸೃಷ್ಟಿಯೊಂದಿಗೆ ಸಮೃದ್ಧಿಯ ಪ್ರತೀಕವಾಗಿಯೂ ಆಗಿ ಏಕೆ ಮಾನ್ಯವಾಯಿತು ಎಂಬುದರ ಕಲ್ಪನೆ ಈ ಮೂಲಕ ಮೂಡುತ್ತದೆ.

ವಿರಾಟ ಪೃಥ್ವೀಪದ್ಮ

ವೈದಿಕ ಪರಂಪರೆಯಲ್ಲಿ ಪೃಥ್ವಿಯು ಕೇವಲ ವಿಶ್ವಚಕ್ರದಲ್ಲಿನ ಒಂದು ಘಟಕವಲ್ಲ ಬದಲಾಗಿ ಸಕಲ ವಿಶ್ವದ ಜನನಿ, ಈ ದೃಷ್ಟಿಯಿಂದಲೇ ಆಕೆಯನ್ನು ‘ಮಹೀ’ (The Great) ಎಂದು ಕರೆಯಲಾಗಿರುವುದು. ಶ್ರೀಸೂಕ್ತದಲ್ಲಿ ಈ ಆದಿಜನನಿ ಮಹಿಯು ‘ಪದ್ಮ‘ಳಾಗಿ ಹೇಗೆ ಚಿತ್ರಣಗೊಂಡಿದ್ದಾಳೆ ಎಂಬುದನ್ನು ಈಗಾಗಲೇ ಗಮನಿಸಲಾಗಿದೆ. ಪೃಥ್ವಿಯ ಈ ಪದ್ಮ ರೂಪವನ್ನು ಪುರಾಣಕಾರರು ಅತ್ಯಂತ ಗೌರವಯುತವಾದ ಶಬ್ದಗಳಲ್ಲಿ ವರ್ಣಿಸಿದ್ದಾರೆ. ವಾಯು ಪುರಾಣದಲ್ಲಿ ಬಂದಿರುವ ‘ಪೃಥ್ವೀಪದ್ಮ‘ದ ವಿರಾಟ ಕಲ್ಪನೆಯನ್ನು ಈ ಸಂದರ್ಭದಲ್ಲಿ ವಿವರಿಸುವುದು ಉಚಿತವೆನಿಸುತ್ತದೆ:

ಅವ್ಯಕ್ತಾಪೃಥಿವೀಪದ್ಮಂ ಮೇರುಪರ್ವತಕರ್ಣಿಕಮ್ |
ಚತುಷ್ಪಥಂ ಸಮುತ್ಪ ನ್ನಂ ವ್ಯಕ್ತಂ ಪಂಚಗುಣಂ ಮಹತ್ ||
(ವಾಯು.೩೪.೩೭)

[ಅವ್ಯಕ್ತದಿಂದ ಪೃಥ್ವೀಪದ್ಮವು ಉತ್ಪನ್ನವಾಯಿತು. ಮೇರು ಪರ್ವತವು ಈ ಪದ್ಮಕ್ಕೆ ಕಾರ್ಣಿಕ ಅಂದರೆ ಬೀಜ ವೃಕ್ಷ. ನಾಲ್ಕು ದೆಸೆಗಳ ರೂಪದ ದಳಗಳಿಂದಲೂ, ಪಂಚ ಗುಣಗಳಿಂದಲೂ ಯುಕ್ತವಾದುದಾಗಿದೆ ಈ ವಿರಾಟ ಪದ್ಮ.]

ಈ ಪೃಥ್ವೀಪದ್ಮದ ವರ್ಣನೆಯ ಓಘದಲ್ಲಿ ಪ್ರಸ್ತುತ ಪುರಾಣವು ‘ಪದ್ಮಾಕಾರಾ ಸಮುತ್ಪನ್ನಾ ಪೃಥಿವೀ ಸಘನದ್ರುಮಾ’ (೩೪.೪೪) ಎಂಬುದಾಗಿ ಹೇಳಿರುವುದಲ್ಲದೆ, ‘ಸನಾತನ ಲೋಕಪದ್ಮ’ ಎಂಬ ಸಂಕೇತದಿಂದಲೂ ಅದನ್ನು ನಿರ್ದೇಶಿಸಿದೆ (೩೪.೪೧, ೪೫). ಈ ಸನಾತನ ಲೋಕಪದ್ಮದ ಬೀಜ ಸೃಷ್ಟಿಯು ಸತ್ಯಮೂಲವಾದುದಾಗಿದ್ದು, ಅದರೊಳಗಿಂದಲೇ ಸಕಲ ದೇವಾಧಿದೇವತೆಗಳು ನಿರ್ಮಾನಗೊಂಡರು ಎಂಬುದಾಗಿಯೂ ಹೇಳಲಾಗಿದೆ, ಅದರ ಅಪಾರವಾದ ಮಹಿಮೆಯನ್ನು ಹಿನ್ನೆಲೆಯಾಗಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ.

ಪದಪಾತ್ರೆಯಲ್ಲಿ ಭೂಮಿಯ ದೋಹನ

ಪೃಥ್ವಿಯೇ ಒಂದು ಮಹಾನ್ ಕಮಲ, ಈ ಧೋರಣೆಯಿಂದಲೇ ಪೃಥ್ವಿಯನ್ನು ಪುರಾಣಗಳಲ್ಲಿ ಮಹಾಧೇನುವೆಂದು ಹೇಳಿರುವುದು. ಈ ಧೇನುವಿನ ದೋಹನ(ಹಾಲು ಕರೆದುಕೋ) ಮಾಡಿದ್ದಾರೆ, ದೇವ, ದಾನವ, ಯಕ್ಷ, ಗಂಧರ್ವ, ಕಿನ್ನರ, ನಾಗ ಮುಂತಾದವರೆಲ್ಲ ತಂತಮ್ಮ ಆದ್ಯತಾನುಸಾರ. ಪುರಾಣಗಳು ಬಹುರತ್ನಳೆನಿಸಿದ ವಸುಂಧರೆಯಿಂದ ತಮಗೆ ಏನೆಲ್ಲ ಬೇಕೋ ಅದನ್ನು ಪ್ರಾಪ್ತಿ ಮಾಡಿಕೊಂಡಿರುವುದನ್ನು ಅಮೂಲಾಗ್ರವಾಗಿ ಬಣ್ಣಿಸಿವೆ. ಪೃಥ್ವಿಯ ದೋಹನಕ್ಕೆ ಗಂಧರ್ವರು ತೊಡಗಿದ್ದಾಗ ದೋಗ್ಧನಾಗಿದ್ದವನು ನಾಟ್ಯಶಾಸ್ತ್ರ ಪಾರಂಗತವೆನಿಸಿದ ವರರುಚಿ ಎಂಬ ಗಂಧರ್ವ, ವತ್ಸ (ಕರು)ನಾಗಿದ್ದವನು ಚೈತ್ರರಥನೆಂಬ ಗಂಧರ್ವ, ದೋಹನಕ್ಕೆ ಬಳಸಲ್ಪಟ್ಟುದು ಪದ್ಮಪಾತ್ರೆ!’ ಎಂಬ ವರ್ಣನೆ ಪದ್ಮ ಪುರಾಣದಲ್ಲಿದೆ (೧೦.೨೪). ವಾಯು ಪುರಾಣದಲ್ಲಿಯೂ ಕಿಂಚಿತ್ ನಾಮಭೇದದ ಮೂಲಕ ಹೇಳಿರುವುದು ಇದನ್ನೇ:

ಪದ್ಮಪಾತ್ರೇ ಪುನರ್ದುಗ್ಧಾ ಗಂಧರ್ವೈರಪ್ಸರೋಗಣೈಃ |
ವತ್ಸಂ ಚಿತ್ರರಥಂ ಕೃತ್ವಾ ಶುಚೀನ್ ಗಂಧಾಸ್ತಥೈವ ಚ ||
ತೇಷಾಂ ವಿಶ್ವಾವಸುಸ್ತ್ವಾಸೀದ್ದೋಗ್ಧಾ ಪುತ್ರೋ ಮುನೆಃ ಶುಚಿಃ |
ಗಂಧರ್ವರಾಜೋsತಿಬಲೋ ಮಹಾತ್ಮಾ ಸೂರ್ಯಸಂನಿಬಃ ||
(ವಾಯು.೬೨.೧೯೧ – ೧೯೨)

[ಯಾವಾಗ ಗಂಧರ್ವ – ಅಪ್ಸರರು ಪೃಥ್ವಿಯ ದೋಹನ ಮಾಡಲು ತೊಡಗಿದರೋ, ಆಗ ವಿಶ್ವಾವಸು ಎಂಬ ಹೆಸರಿನ ಸೂರ್ಯಸದೃಶ ಬಲಶಾಲಿ ಗಂಧರ್ವ ರಾಜನು ಇದಕ್ಕೆ ದೋಗ್ಧನಾಗಿದ್ದ; ಚಿತ್ರರಥನನ್ನು ವತ್ಸನನ್ನಾಗಿಸಿ ಪದ್ಮಪಾತ್ರೆಯಲ್ಲಿ ಶುದ್ಧ ಸುಗಂಧದ ದೋಹನ ಮಾಡಲಾಯಿತು.]

ಗಂಧವತಿ ಪೃಥ್ವಿಯಲ್ಲಿನ ಸುಗಂಧ – ದ್ರವ್ಯಗಳನ್ನು ದೋಹನ ಮಾಡುವುದಕ್ಕಾಗಿ ಗಂಧದ ಹುಚ್ಚಿನ ಗಂಧರ್ವರು ಯೋಜಿಸಿದರು. ಅದಕ್ಕಾಗಿ ಅವರ ಪದ್ಮಪಾತ್ರವನ್ನು ಕಲ್ಪಿಸುವಲ್ಲಿಯೂ ಪುರಾಣಗಳು ಉಚಿತವಾದ ಕಲ್ಪನೆಯನ್ನೇ ಪ್ರಕಟಿಸಿವೆ ಎಂಬುದರಲ್ಲಿ ಸಂಶಯವಿಲ್ಲ.

ಚರಾಚರಗಳ ಉತ್ಪತ್ತಿ ಸ್ಥಾನ

ವಾಯುಪುರಾಣವು ‘ಪೃಥ್ವೀದೋಹದ’ ದ ಉಪಸಂಹಾರದಲ್ಲಿ ಪೃಥ್ವಿಯ ಮಹಿಮೆಯನ್ನು ಕುರಿತು ಹೇಳಿರುವ ವಿಚಾರಗಳೂ ಇಲ್ಲಿ ಚಿಂತನೀಯವಾದುವು:

ಸೈಷಾ ಧಾತ್ರೀ ವಿಧಾತ್ರೀ ಚ ಧಾರಣೀ ಚ ವಸುಂಧರಾ |
ದುಗ್ಧಾ ಹಿತಾರ್ಥಂ ಲೋಕಾನಾಂ ಪೃಥುನಾ ಇತಿ ನಃ ಶ್ರುತಮ್ ||
ಚರಾಚರಸ್ಯ ಲೋಕಸ್ಯ ಪ್ರತಿಷ್ಠಾ ಯೋನಿರೇವ ಚ ||
(ವಾಯು. ೬೨.೧೯೭)

[ಸರ್ವವನ್ನು ನಿರ್ಮಾಣ ಮಾಡುವವಳು, ಸರ್ವರನ್ನು ಧಾರಣೆ ಮಾಡಿಕೊಂಡಿರುವವಳು ಆಕೆ. ಚರಾಚರಗಳಿಗೂ ಆಧಾರವಾಗಿರುವ (ಪ್ರತಿಷ್ಠಾ) ಮತ್ತು ಉತ್ಪತ್ತಿ ಸ್ಥಾನವಾಗಿರುವ (ಯೋನಿ) ವಸುಂಧರೆ ಪೃಥೆಯು ಲೋಕಹಿತಕ್ಕಾಗಿ ಹಾಲು ಕರೆದಳು ಎಂದು ನಾವು ಕೇಳಿದ್ದೇವೆ.]

ಇಲ್ಲಿ ಪುರಾಣಕಾರನು ಧಾತ್ರಿ – ವಿಧಾತ್ರಿ ವಸುಂಧರೆಯನ್ನು ಚರಾಚರಗಳ ‘ಪ್ರತಿಷ್ಠಾ’ ಮತ್ತು ‘ಯೋನಿ’ ಎಂದು ಕರೆದಿರುವುದು ಉಚಿತವಾಗಿದೆ. ‘ಪೃಥ್ವಿ’ ಯು ಈ ಬಗೆಯಲ್ಲಿ ಕೇವಲ ತನ್ನ ಪೃಥ್ವಿಗ್ರಹಕ್ಕಷ್ಟೇ ಸೀಮಿತವಾಗಿಲ್ಲ, ಸಕಲ ವಿಶ್ವಕ್ಕೂ ಮಾತೆಯಾಗಿರುವಳು ಎಂಬುದು ಗಮನೀಯ. ಎಂತಲೇ ಅದನ್ನು ‘ಚರಾಚರಸ್ಯ ಲೋಕಸ್ಯ ಯೋನಿಃ’ ಎಂಬುದಾಗಿ ಕರೆದಿದ್ದಾರೆ. ಪೃಥ್ವಿಯನ್ನು ಕಮಲರೂಪ (= ಪುಷ್ಕರಾಕಾರ)ಧಲ್ಲಿಯೂ ಒಪ್ಪಿಕೊಂಡಿರುವುದರಿಂದಲೇ ಕಮಲವನ್ನು ‘ಚರಾಚರಗಳ ಯೋನಿ’ (ವಿಶ್ವದ ಉತ್ಪತ್ತಿ ಸ್ಥಾನ) ಎಂದು ಗುರುತಿಸಿರುವುದು. ನಮ್ಮ ವಾಙ್ಮಯದಲ್ಲಿ ರೂಢವಾಗಿರುವ ‘ಯೋನಿ ಕಮಲ‘ದ ಪ್ರತೀಕ ಸಂಜ್ಞೆಯ ರಹಸ್ಯವಿರುದೂ ಈ ಪೃಥ್ವಿರೂಪದಲ್ಲಿಯೇ, ಅದರ ವಿಶ್ವಸೃಷ್ಟಿಯ ಸಾಮರ್ಥ್ಯವಿದ್ದರೂ ಇದರಲ್ಲೇ ಎಂಬುದನ್ನು ನಾವು ಗಮನಿಸಬೇಕು. ಕಮಲದ ಬಗೆಗಿನ ಈ ಕಲ್ಪನೆ ಕೇವಲ ಶಬ್ದಗಳಲ್ಲಿ ಮಾತ್ರವಲ್ಲ, ಶಿಲ್ಪಗಳಲ್ಲಿಯೂ ವ್ಯಕ್ತವಾಗಿರುವುದು ಗಮನಾರ್ಹ.

 

[1] Myths and Symbols in Indian Art and Civilization : H.Zimmer, New York, 1947, pp.90 – 93