ಸ್ಥಳೀಯ (ಕ್ಷೇತ್ರ) ದೇವತೆಗಳ ಅನುಷಂಗದಿಂದ ಕ್ಷೇತ್ರಪಾಲಕ ದೇವತೆಗಳ ಜೀವನ ರಹಸ್ಯವನ್ನು ಸ್ಪಷ್ಟರೂಪದಲ್ಲಿ ವಿವರಿಸುವುದಕ್ಕೂ ಸಾಧ್ಯವಿದೆ. ಜೋಗುಳಾಂಬೆಯ ಚರಿತ್ರೆಯನ್ನು ಕುರಿತ ಚಿಂತನೆಯಲ್ಲಿ ಈ ಕುರಿತು ಅತ್ಯಂತ ಆತ್ಮ ವಿಶ್ವಾಸದಿಂದ ಹೇಳಿರುವುದನ್ನು ಗಮನಿಸಲಾಗಿದೆ. ಆ ಹಿನ್ನಲೆಯಲ್ಲಿಯೇ ಜೋತಿಬಾ ಎಂಬ ಲೋಕಪ್ರಸಿದ್ಧ ದೇವತೆಯ ಕಥೆ – ಗಾಥೆಗಳು, ಕ್ಷೇತ್ರ ಸ್ಥಾನಗಳು, ಮೂರ್ತಿ ವೈಶಿಷ್ಟ್ಯಗಳು ಹಾಗೂ ಉಪಾಸನಾ ಸಾಹತ್ಯವನ್ನು ಪರಿವೀಕ್ಷಣೆ ಮಾಡಬಹುದು. ಈ ಪರಿವೀಕ್ಷಣೆಯ ನಿಷ್ಕರ್ಷವು ಒಟ್ಟಾರೆ ಮಹಾರಾಷ್ಟ್ರದಲ್ಲಿನ ಕ್ಷೇತ್ರಪಾಲಕ ವರ್ಗದ ದೇವತಾ ಸಮೂಹದ ಮೇಲೆಯೂ ಪ್ರಕಾಶವನ್ನು ಬೀರುತ್ತದೆ ಎಂಬುದು ನನ್ನ ವಿಶ್ವಾಸ.

ಕೊಲ್ಹಾಪುರಕ್ಕೆ ಹತ್ತಿರದ ವಾಡಿ ರತ್ನಾಗಿರಿ ಜೋತಿಬಾನ ಗುಡ್ಡದಲ್ಲಿಇರುವ ಜೋತಿಬಾ ಎಂಬ ದೇವರು ಮಹಾರಾಷ್ಟ್ರದ ನಾನಾ ಜಾತಿ, ಪಂಗಡಗಳಿಗೆಲ್ಲ ಕುಲದೇವರು. ಖಂಡೋಬಾನ ಹಾಗೆಯೇ ಈ ದೇವರೂ ಲೋಕಾಭಿಮುಖವಾಗಿರುವುದರಿಂದ ಇದಕ್ಕೆ ಸಾರ್ವತ್ರಿಕ ಕೀರ್ತಿ ಬಂದಿದೆ. ಮಹಾರಾಷ್ಟ್ರದ ಹಳ್ಳಿಗಳಲ್ಲಿ ಮುಖ್ಯ ಕ್ಷೇತ್ರಪಾಲಕ ದೇವತೆಯೆನಿಸಿರುವ ಭೈರವನೊಂದಿಗೆ ಜೋತಿಬಾ, ಖಂಡೋಬಾರಿಗೆ ಪ್ರಾಣಾತ್ಮಕ ಸಂಬಂಧವುಂಟು. ಎಂತಲೇ ಇವೂ ಕ್ಷೇತ್ರಪಾಲಕ ದೇವತೆಗಳ ಶ್ರೇಣಿಯಲ್ಲಿಯೇ ಬರುವುವಾಗಿವೆ. ಮರಾಠ ಜನಾಂಗದವರಿಗೆ ಪ್ರಿಯವಾದ ಪುರುಷ ದೇವತೆಗಳ ಪೈಕಿ ವಿಠೋಬಾನನ್ನು ವಿಷ್ಣುರೂಪಿಯಾಗಿ ಚಿರಸ್ಥಾಯಿಗೊಳಿಸಲಾಗಿದೆ. ಅತ್ಯಂತ ಜನಪ್ರಿಯ ದೇವತೆಯಾದ ವೆಂಕಟೇಶನು ಆಂಧ್ರಪ್ರದೇಶದಲ್ಲಿದ್ದರೂ, ಅನೇಕ ಮಹಾರಾಷ್ಟ್ರೀಯರ ಕುಲದೇವನಾಗಿದ್ದಾನೆ. (ಬಹುಶಃ ಇವರು ಆಂಧ್ರ – ಕರ್ನಾಟಕದಿಂದ ಇಲ್ಲಿಗೆ ಬಂದು ನೆಲೆಸಿದವರಾಗಿರಬೇಕು) ವಿಠಲನಂತೆಯೇ ಈತನೂ ವಿಷ್ಣು ರೂಪತ್ವ ಪಡೆದು ‘ಬಾಲಾಜಿ‘ಯಾಗಿದ್ದಾನೆ. ವಿಠಲನಂತೂ ಬಾಲಕೃಷ್ಣನ ಲೀಲೆಗಳ ಬಿತ್ತರಕ. ವೆಂಕಟೇಶನ ಪತ್ನಿ ಪದ್ಮಾವತಿಯು ಕೋಪಗೊಂಡು ಬೆಟ್ಟದಿಂದ ಕೆಳಗೆ ಬಂದು ನೆಲೆಸಿದ್ದಾಳೆ (ಕೊಲ್ಹಾಪುರ),ವಿಠಲನ ಪತ್ನಿ ರಖುಮಾಯಿಯೂ ಸಹ ಕೋಪಗೊಂಡು ಪಂಢರಾಪುರದ ಬೇರೊಂದು ಮಂದಿರದಲ್ಲಿದ್ದಾಳೆ. (ಕುರುಬರ ಕಥೆಯನುಸಾರ ವಿಠಲನ ಪತ್ನಿ ‘ಪದುಬಾಯಿ’ ಅಂದರೆ ‘ಪದ್ಮಾವತಿ‘). ಹೀಗೆ ಅನೇಕ ವಿಚಾರಗಳಲ್ಲಿ ಸಮರೂಪಿಯಾಗಿರುವ ಈ ಇಬ್ಬರು ದೇವತೆಗಳೂ ವಿಷ್ಣು ರೂಪವನ್ನು ಪಡೆದುಕೊಂಡಿದ್ದಾರೆ. ಆದರೆ ಖಂಡೋಬಾ ಮತ್ತು ಜೋತಿಬಾರನ್ನು ಶಿವರೂಪಗೊಳಿಸುವ ಪ್ರಯತ್ನ ನಡೆದಿದೆಯಾದರೂ ಅವರ ಮೂಲ ಸ್ವಭಾವ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಮಹಾತ್ಮೆಯ ಕಥೆಗಳಿಂದ ಅವರನ್ನು ಶೀವಾವತಾರಗೊಳಿಸುವುದಕ್ಕೆ ಬಹಳೇ ಪ್ರಯತ್ನ ನಡೆದಿದೆಯಾದರೂ, ಮೂರ್ತಿ ಸ್ವರೂಪ ಹಾಗೂ ಉಪಾಸನೆಯಂಥ ಮುಖ್ಯ ವಿಚಾರಗಳಲ್ಲಿ ‘ಸ್ವತ್ವ’ ಹಾಗೆಯೇ ಉಳಿದುಕೊಂಡಿರುವುದು ಗಮನಾರ್ಹ. ತಮ್ಮ ‘ಸ್ವತ್ವ‘ವನ್ನು ಕಾಪಾಡಿಕೊಂಡು ತಮ್ಮ ಅಂತರಂಗವನ್ನು ಸರ್ವಸ್ವೀ ಪ್ರಕಟಗೊಳಿಸುವವರಾಗಿದ್ದಾರೆ ಈ ಇಬ್ಬರೂ ದೇವತೆಗಳು. ಈ ಹಿನ್ನೆಲೆಯಲ್ಲಿ ‘ಸ್ವತ್ವ‘ವನ್ನು ಬಿಟ್ಟಿರುವ ಪೂರ್ವನಿರ್ದಿಷ್ಟ (ವಿಠೋಬಾ ಮತ್ತು ವೆಂಕೋಬಾ) ದೇವರುಗಳ ಮೂಲರೂಪವನ್ನು ಶೋಧಿಸುವುದಕ್ಕೂ ಸಾಧ್ಯ ಎಂಬುದನ್ನು ನಿರಾಕರಿಸುವಂತಿಲ್ಲ.)

ಜೋತಿಬಾನ ವಿಚಾರದಲ್ಲಿ ಇನ್ನೂ ಒಂದು ಸಾಧ್ಯತೆಯುಂಟು. ಅದೆಂದರೆ ಅವನಿಗಿರುವ ‘ರವಳನಾಥ’ ಎಂಬ ಹೆಸರು. ಗೋಮಾಂತ ಹಾಗೂ ದಕ್ಷಿಣ ಕೊಂಕಣ ಭಾಗದಲ್ಲಿನ ಪ್ರಸಿದ್ಧ ದೇವರೇ ರವಳನಾಥ. ನಮ್ಮ ಕಡೆಯ ಭೈರವನ ಹಾಗೆಯೇ ಆ ಕಡೆ ರವಳನಾಥನೂ ಹಳ್ಳಿ ಹಳ್ಳಿಗಳಲ್ಲೆಲ್ಲ ವ್ಯಾಪಿಸಿರುವ ದೇವರಾಗಿದ್ದಾನೆ. ಅಲ್ಲಿನ ಜನರು ಭಜಿಸುತ್ತಿರುವ ಪ್ರಕಾರ ಆತ ‘ಕ್ಷೇತ್ರಪಾಲಕ ದೇವ’. ಜೋತಿಬಾ ಹಾಗೂ ರವಳನಾಥ ಎಂಬ ಹೆಸರುಗಳ ಸಹಾಯದಿಂದ ಜೋತಿಬಾನ ಸ್ವರೂಪವನ್ನು ಅರಿಯುವುದು ಸುಲಭ.

ಖಂಡೋಬಾ, ಜೋತಿಬಾ ಮತ್ತು ರವಳನಾಥ – ಈ ಮೂವರೂ ಕ್ಷೇತ್ರಪಾಲಕ ದೇವರುಗಳಾಗಿಯೇ ತಮ್ಮ ಸಾಮ್ಯ ಸ್ವಭಾವವನ್ನು ಪ್ರಕಟಗೊಳಿಸುತ್ತಿದ್ದಾರೆ. ಇವರುಗಳಲ್ಲಿ ಜೋತಿಬಾನ ವಿಷಯವಾಗಿ ಚರ್ಚಿಸುವಲ್ಲಿ ಅನುಷಂಗಿಕವಾಗಿ ಖಂಡೋಬಾ, ರವಳನಾಥರೇ ಮೊದಲಾದ ಕ್ಷೇತ್ರಪಾಲಕ ದೇವತೆಗಳ ವಿಚಾರಗಳನ್ನು ನೆರವಿಗೆ ತೆಗೆದುಕೊಳ್ಳುತ್ತೇನೆ. ಇದನ್ನೇ ಬೇರೊಂದು ಶಬ್ದಗಳಲ್ಲಿ ಹೇಳಬಹುದಾದರೆ, ಜೋತಿಬಾನನ್ನು ಮುಖ್ಯವಾಗಿಟ್ಟುಕೊಂಡು ಮಹಾರಾಷ್ಟ್ರದಲ್ಲಿನ ಇತರೆ ಕ್ಷೇತ್ರಪಾಲಕ ದೇವತೆಗಳನ್ನು ಶೋಧಿಸುವ ಪ್ರಯತ್ನವು ನನ್ನದು.

ಜೋತಿಬಾನ ಕಥಾಮಹಾತ್ಮೆ

ಜೋತಿಬಾನ ಮಹಾತ್ಮೆಯನ್ನು ಕುರಿತಂತೆ ಇರುವ ಸಂಸ್ಕೃತ ಭಾಷಾ ಕೃತಿ ‘ಕೇದಾರ ಮಹಾತ್ಮ್ಯಾ’. ಆದರೆ ಇದು ನನಗೆ ಲಭ್ಯವಾಗಲಿಲ್ಲ. ಹರಿ ಅಂಗಾಪೂರಕರ ಎಂಬ ಜ್ಯೋತಿಬಾನ ಭಕ್ತನೊಬ್ಬ ಶಕ. ೧೭೦೦(ಕ್ರಿ.ಶ.೧೭೭೯)ರಲ್ಲಿ ರಚಿಸಿದ ಮೂವತ್ತಾರು ಅಧ್ಯಾಯಗಳ ‘ಕೇದಾರ ವಿಜಯ’ ಎಂಬ ಓವೀಬದ್ಧ ಕೃತಿಯು ಮೂರು ಬಾರಿ ಮುದ್ರಣ ಕಂಡಿದೆ.[1] ಭವಿಷ್ಯೋತ್ತರ ಪುರಾಣದಲ್ಲಿನ ಕೇದಾರ ಖಂಡವನ್ನು ಆಧರಿಸಿ ಈ ಗ್ರಂಥವನ್ನು ರಚಿಸಿರುವುದಾಗಿ ಹೇಳಿದ್ದಾನೆ ಆ ಲೇಖಕ. ಅದರ ಪ್ರಕಾರ ಸಂಸ್ಕೃತದ ‘ಕೇದಾರ ಮಾಹಾತ್ಮ್ಯ’ ಕೃತಿಯೂ ಭವಿಷ್ಯೋತ್ತರ ಪುರಾಣದಲ್ಲಿನ ಕೇದಾರಖಂಡ ಕಥೆಯನ್ನೇ ಹೇಳುವುದಾಗಿರಬೇಕು. ಹರಿ ಅಂಗಾಪೂರಕರನು ಮೂಲ ಕಥೆಯನ್ನು ಮರಾಠಿಯಲ್ಲಿ ಹೇಳುವಾಗ ಇದನ್ನು ಬಹಳವಾಗಿ ಅವಲಂಬಿಸಿರಬಹುದು. ಹಾಗಾಗಿ ಅವನ ಈ ಕೃತಿಯ ಮೂಲಕವೇ ಮಾಹಾತ್ಮ್ಯ ಕಥೆಯ ಸ್ವರೂಪವನ್ನು ಅರಿಯುವುದು ಸಾಧ್ಯ.

ಈ ‘ಮಾಹಾತ್ಮ್ಯ’ ಕೃತಿಯೇ ಅಲ್ಲದೆ ಕವಚ, ಸಹಸ್ರನಾಮ ಸ್ತೋತ್ರ, ಅಷ್ಟಕಗಳು, ಅನ್ಯ ಸ್ತೋತ್ರಗಳು ಇತ್ಯಾದಿ ಉಪಾಸನಾ ಸಾಹಿತ್ಯವು ಸಂಸ್ಕೃದಲ್ಲಿ ರಚಿಸಲ್ಪಟ್ಟಿದೆ. ಐವತ್ತು ವರ್ಷಗಳ ಹಿಂದೆ ಸಾತಾರಾದ ಶ್ರೀಸಖಾರಾಮಶಾಸ್ತ್ರಿ ಬಾಪುಶಾಸ್ತ್ರಿ ಭಾಗವತ ಎಂಬುವವರು ರಚಿಸಿದ ಸಂಸ್ಕೃತ ಕೃತಿ ‘ಶ್ರೀಕೇದಾರಲಿಂಗಮಾನಸ ಪೂಜಾಸ್ತೋತ್ರಮ್‌‘, ಶಕ. ೧೮೫೭ರಲ್ಲಿ ಮರಾಠಿಗೆ ಭಾಷಾಂತರಗೊಂಡು ಪ್ರಕಟವಾಯಿತು.[2]ಮರಾಠಿಯಲ್ಲಿ ಈ ಮೇಲೆ ಹೇಳಿದ ‘ಕೇದಾರ ವಿಜಯ’ ಎಂಬ ಓವೀಬದ್ಧ ಕೃತಿಯೇ ಅಲ್ಲದೆ ಅನೇಕ ಸ್ತೋತ್ರಗಳು, ಅಷ್ಟಕಗಳು, ಪದ್ಯಗಳು, ಅಭಂಗಗಳು, ಆರತಿ ಭಜನೆಗಳೇ ಮೊದಲಾದ ಉಪಾಸನಾ ಸಾಹಿತ್ಯವು ವಿಪುಲವಾಗಿ ರಚನೆಗೊಂಡಿರುವುದುಂಟು. ಶ್ರೀಗಣೇಶ ತಾತ್ಯಾಶಾಸ್ತ್ರೀ ಸಾಗಾವಕರ ಎಂಬುವವರು ರಚಿಸಿದ ಮೂವತ್ತೆರಡು ಗೇಯ ಪದ್ಯಗಳ ‘ಶ್ರೀಕೇದಾರ – ಪದ – ರತ್ನಮಾಲಾ’ ಎಂಬ ಕೃತಿಯು ಶಕ. ೧೮೧೮ (ಕ್ರಿ.ಶ. ೧೮೯೬)ರಲ್ಲಿ ಕೊಲ್ಹಾಪುರದಿಂದ ಪ್ರಕಟವಾಗಿದೆ.[3]ಸ್ತ್ರೀಯರಿಂದ ರಚಿತವಾದ ಸ್ಫುಟ (ಬಿಡಿ) ಓವಿಗಳು ಜನಪದ ಸಾಹಿತ್ಯದಲ್ಲಿ ಲಭ್ಯವಾಗುತ್ತವೆ. ‘ನಾಥ ಭುಜಂಗ’ ಎಂಬ ಕಾವ್ಯ ನಾಮದಿಂದ ಬರೆಯುತ್ತಿದ್ದ ಭುಜಂಗನಾಥ ಎಂಬ ಗೋಸಾವಿಯು ಜೋತಿಬಾನಿಗೆ ಪರಮಭಕ್ತ. ಅವನು ಜೋತಿಬಾನ ‘ಕೀರ್ತನಾಖ್ಯಾನ’ ಮತ್ತು ಜೋತಿಬಾ ಭಕ್ತಿಪರವಾದ ಅನೇಕ ಮಧುರ ಗೀತೆಗಳನ್ನು ರಚಿಸಿರುವವನೆನ್ನಲಾಗಿದೆ. ಆದರೆ ಅವು ಪೂರ್ಣವಾಗಿ ಲಭ್ಯವಾಗಲಿಲ್ಲ ನನಗೆ. ಒಟ್ಟಾರೆ ಸಂಸ್ಕೃತ, ಮರಾಠಿ ಉಪಾಸನಾ ಸಾಹಿತ್ಯಗಳಲ್ಲೆಲ್ಲ ಆವತರಿಸಿದ್ದಾನೆ ಜೋತಿಬಾ.

‘ಕೇದಾರ ವಿಜಯ‘ದಲ್ಲಿ ಜೋತಿಬಾ ಮಹಾತ್ಮೆಯ ಕಥೆ ಸ್ಥೂಲವಾಗಿ ಹೀಗಿದೆ:

ಪೌಗಂಡ ಮುನಿ ಹಾಗೂ ಅವನ ಪತ್ನಿ ವಿಮಲಾಂಬುಜ ಎಂಬಿಬ್ಬರು ಪುತ್ರ ಪ್ರಾಪ್ತಿಗಾಗಿ ಬದರಿ – ಕೇದಾರ ಕ್ಷೇತ್ರದಲ್ಲಿ ತಪಸ್ಸು ಕೈಗೊಂಡಿದ್ದರು. ಆ ತಪೋಫಲವಾಗಿ ಬಂದಾತನೇ ಪ್ರಸಿದ್ಧನಾದ ‘ಕೇದರ ರವಳೇಶ್ವರ’. ಹಿಮಾಲಯದಲ್ಲಿನ ಕೇದಾರನಾಥನ ಅವತಾರವೇ ಅವನಾಗಿದ್ದರಿಂದ ಆತನಿಗೆ ಕೇದಾರ, ಕೇದಾರನಾಥ, ಕೇದಾರೇಶ್ವರ ಅಥವಾ ಕೇದರಾಲಿಂಗ ಎಂಬ ಹೆಸರುಗಳು ಬಂದವು. ಕೇದಾರಲಿಂಗವು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವುದರಿಂದ ಕೇದಾರಲಿಂಗವನ್ನು ‘ಜ್ಯೋತಿರ್ಲಿಂಗ’ ಎಂಬುದಾಗಿಯೂ ಕರೆಯಲಾಗುತ್ತಿತ್ತು. ಈ ‘ಜ್ಯೋತಿರ್ಲಿಂಗ’ ದಿಂದಲೇ ರೂಢಿಗೆ ಬಂದುದಾಗಿದೆ ‘ಜ್ಯೋತಿಬಾ’ ಎಂಬ ಹೆಸರು.

‘ರವಳೇಶ್ವರ’ ಎಂಬ ಅವನ ಮತ್ತೊಂದು ಹೆಸರಿಗೆ ಕಾರಣ, ಆತ ಜಮದಗ್ನಿಯ ‘ರವಾಗ್ನಿ‘ಯ ಅರ್ಥಾತ್ ‘ಕ್ರೋಧಾಗ್ನಿ‘ಯ ಅವತಾರ. ರೇಣುಕೆಯ ವಧೆಯ ನಂತರ ಜಮದಗ್ನಿಯು ತ್ಯಜಿಸಿದ ಕ್ರೋಧವನ್ನು ಪರಶುರಾಮ, ನವನಾಥರೊಂದಿಗೆ ಸಮುದ್ರ, ಅರಣ್ಯ ಹಾಗೂ ಅನ್ಯ ಜಗತ್ತುಗಳೆಲ್ಲ ಹಂಚಿಕೊಂಡಿದ್ದವು. ಇವುಗಳಲ್ಲಿ ನವನಾಥನ ಕಡೆಗೆ ಬಂದ ಕ್ರೋಧವು ಏಕರೂಪ ಪಡೆದುಕೊಂಡಿತು. ಅದನ್ನು ಸ್ವೀಕರಿಸಿ ಅವತರಿಸಿದವನೇ ಕೇದಾರನಾಥ. ಎಂತಲೇ ಅವನಿಗೆ ‘ರವಳೇಶ್ವರ’ ಎಂಬ ಹೆಸರು ಉಂಟಾಯಿತು –

ನವ ರವಾಗ್ನಿಯ ಅವತಾರ | ಧರಿಸಿದ ತ್ರಿಗುಣದಿಂದ ಸಗುಣಾಕಾರ |
ಅದರಿಂದಲಿ ಬಂದಿತು ನಾಮವು | ಆಗಮೊತ್ತರಂಗಳೊಳು ರವಳೇಶ್ವರ ||

ಹೀಗೆ ಪ್ರಕಟಗೊಂಡ ಈ ‘ಹಿಮಕೇದಾರ’ ಮಹಾಲಕ್ಷ್ಮಿಯ ಆಗ್ರಹದಿಂದ ದಕ್ಷಿಣಕ್ಕೆ ಬಂದನು. ಎಂತಲೇ ಅವನಿಗೆ ‘ದಕ್ಷಿಣ ಕೇದಾರ’ ಎಂಬ ಹೆಸರು ಬಂದದ್ದು. ಕೊಲ್ಹಾಸುರನ ಉಪದ್ರವದಿಂದ ಬಹಿಷ್ಕೃತಳಾದ ಲಕ್ಷ್ಮಿಯನ್ನು ಪುನಃ ಅಲ್ಲಿಯೇ ಪ್ರತಿಷ್ಠಾಪಿಸುವ ಕಾರ್ಯಭಾರ ಹೊತ್ತವನಾಗಿದ್ದಾನೆ ದಕ್ಷಿಣ ಕೇದಾರ. ಕೊಲ್ಹಾಸುರನ ಬೆಂಬಲಕ್ಕಿದ್ದವರೆಂದರೆ ರತ್ನಾಸುರ, ರಕ್ತಭೋಜ, ಮಹಿಷಾಸುರಾದಿ ದೈತ್ಯರು. ಇತ್ತ ಕೇದಾರನಾಥನ ಸಹಾಯಕ್ಕೆ ಸಿದ್ಧ, ಭೈರವ ಮತ್ತು ಮಾತೃಕೆಯರ ಪ್ರಚಂಡ ಮೇಳವೇ ಇತ್ತು. ಜೊತೆಗೆ ಚರ್ಪಟಾಂಬಾ (ಚೋಪಡಾಯಿ), ಮಹಾಲಕ್ಷ್ಮಿ ಮತ್ತು ಯಮಾಯಿಂಥ ಶಕ್ತಿಯರೂ ಸೇರಿಕೊಂಡಿದ್ದರು. ಕೇದಾರನಾಥ ಅರ್ಥಾತ್ ರವಳೇಶ್ವರನು ಅಶ್ವಾರೂಢನಾಗಿ ತನ್ನ ಸೇನೆಯೊಂದಿಗೆ ರತ್ನಾಸುರದಿ ದೈತ್ಯರನ್ನೆಲ್ಲ ಧ್ವಂಸ ಮಾಡಿಬಿಟ್ಟ. ರತ್ನಾಸುರನು ಬಿದ್ದ ಪರ್ವತವೇ ‘ರತ್ನಾಗಿರಿ’ ಎಂಬುದು. ಕೊಲ್ಹಾಸುರನು ಬಿದ್ದ ಮಾಡಿಬಿಟ್ಟ. ರತ್ನಾಸುರನು ಬಿದ್ದ ಪರ್ವತವೇ ‘ರತ್ನಾಗಿರಿ’ ಎಂಬುದು. ಕೊಲ್ಹಾಸುರನು ಬಿದ್ದ ಸ್ಥಾನ ‘ಕೊಲ್ಹಾಪುರ‘ವೆಂದು ಹೆಸರಾಯಿತು. ಮಹಾಲಕ್ಷ್ಮಿಯು ಕರವೀರ ಅಥವಾ ಕೊಲ್ಹಾಪುರದಲ್ಲಿ ಪುನಃ ನೆಲೆಸಿದಳು. ಮಹಾಲಕ್ಷ್ಮಿಯ ಒತ್ತಾಯಿದಿಂದಾಗಿ ಕೇದಾರನಾಥನು ರತ್ನಾಗಿರಿಯ ಮೇಲೆ ಖಾಯಮ್ಮಾಗಿಯೇ ಬೀಡುಬಿಟ್ಟ.

ಮೂಲಕಥೆಯಲ್ಲಿ ಯುದ್ಧದ ವರ್ಣನೆಯು ಕೂಲಂಕಷವಾಗಿ ಬಂದಿದೆ. ‘ರತ್ನಾಗಿರಿ’ ಮತ್ತು ‘ಕೊಲ್ಹಾಪುರ‘ದಂತಹ ಸ್ಥಳನಾಮಗಳ ಸೃಷ್ಟೀಕರಣ ಕಥೆಯಂತೆಯೇ ಇಲ್ಲಿ ಈ ಪರಿಸರದಲ್ಲಿನ ಅನೇಕ ಸ್ಥಳನಾಮಗಳ ಸ್ಪಷ್ಟೀಕರಣವೂ ಉಂಟು. ಈ ಕಥಾ ಬೀಜದ ಸ್ವರೂಪದಿಂದ ನಮಗೆ ತಿಳಿದುಬರುವುದೇನೆಂದರೆ –

೧. ಕೇದರನಾಥ ಮತ್ತು ರವಲೇಶ್ವರ ಇವು ಈ ದೇವರ ಎರಡು ಪ್ರಖ್ಯಾತ ಹೆಸರುಗಳು.

೨. ಮಾಹಾತ್ಮ್ಯಾಕಾರರು ಆತನಿಗೆ ಹಿಮಾಲಯದಲ್ಲಿನ ಕೇದಾರನಾಥ ಎಂಬುದಾಗಿ ಕರೆದು ಜ್ಯೋತಿರ್ಲಿಂಗದೊಂದಿಗೆ ಸಂಬಂಧವನ್ನು ಕಲ್ಪಿಸಿದ್ದಾರೆ.
೩. ಹಾಗೆಯೇ ಅವನ ರವಳೇಶ್ವರ ಎಂಬ ಹೆಸರಿನ ರಹಸ್ಯವನ್ನು ಹೇಳುವ ಉದ್ದೇಶದಿಂದ ಜಮದಗ್ನಿಯೊಂದಿಗೂ ಸಂಬಂಧವನ್ನು ಬೆಸೆಯಲಾಗಿದೆ.
೪. ಕೊಲ್ಹಾಪುರಕ್ಕೆ ಹತ್ತಿರದ ‘ರತ್ನಾಗಿರಿ’ ಎಂಬ ಹೆಸರಿನ ಬೆಟ್ಟವೇ ಈ ದೇವರ ಪ್ರಮುಖ ತಾಣ.

ಕ್ಷೇತ್ರ ಪರಿಚಯ

ಜೋತಿಬಾನ ಪ್ರಮುಖ ಕ್ಷೇತ್ರವಿರುವುದು ಕೊಲ್ಹಾಪುರಕ್ಕೆ ಸಮೀಪದ ‘ರತ್ನಾಗಿರಿ’ ಎಂಬ ಬೆಟ್ಟದ ಮೇಲೆ. ಇದು ‘ವಾಡಿ ರತ್ನಾಗಿರಿ’ ಅಥವಾ ‘ಜೋತಿಬಾನ ಬೆಟ್ಟ’ ಎಂದೇ ಪ್ರಸಿದ್ಧವಾಗಿದೆ. ಪನ್ಹಾಳಗಡ – ಪಾವನಗಡಾದಿ ದುರ್ಗಗಳಿಂದ ಭವ್ಯವಾಗಿರುವ ಸಹ್ಯಾದ್ರಿ ಪರ್ವತದ ಸೀಳು ದಾರಿಯಲ್ಲಿ ಕೊಲ್ಹಾಪುರದಿಂದ ವಾಯುವ್ಯಕ್ಕೆ ಹನ್ನೆರಡು ಮೈಲಿ ಅಂತರದಲ್ಲಿದೆ. ಸಮುದ್ರ ತಟದಿಂದ ೩೧೦೦ ಅಡಿ ಎತ್ತರದಲ್ಲಿದೆ ಈ ಪ್ರದೇಶ. ಬೆಟ್ಟದ ಮೇಲೆ ಎರಡು ಮೈಲುಗಳಷ್ಟು ವಿಶಾಲವಾದ ಪರಿಧಿ ಇದೆ. ಜೋತಿಬಾನ ಪೂರ್ವಭಾಗಕ್ಕೆ ಎರಡು ಮೈಲುಗಳ ಅಂತರದಲ್ಲಿ ಕ್ರಿ.ಪೂ. ಎರಡನೆಯ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಪೋಹಾಳ ಎಂಬ ಬೌದ್ಧ ಗುಹೆಯುಂಟು.

ರತ್ನಾಗಿರಿಯ ಮೇಲೆ ಕೇದಾರಲಿಂಗ(ಜೋತಿಬಾ), ಕೇದಾರೇಶ್ವರ ಮತ್ತು ಚರ್ಪಟಾಂಬಾ (ಚೋಪಡಾಯಿ ದೇವಿ) ಎಂಬ ಮೂರು ಮುಖ್ಯ ದೇವರುಗಳ ಘಟಕವಿದೆ. ಇಲ್ಲಿರುವ ಪುರಾತನ ಕೇದಾರಲಿಂಗ ಮಂದಿರವನ್ನು ಕ್ರಿ.ಶ.೧೭೩೦ರಲ್ಲಿ ರಾಣೋಜಿರಾವ್ ಶಿಂಧೆ ಎಂಬಾತ ಕಟ್ಟಿಸಿದನು. ಕ್ರಿ.ಶ. ೧೮೦೮ರಲ್ಲಿ ಕೇದಾರೇಶ್ವರನ ಮಂದಿರವನ್ನು ಕಟ್ಟಿಸಿದವನು ದೌಲತರಾವ್ ಶಿಂಧೆ. ಚೋಪಡಾಯಿ ಎಂಬ ಇಲ್ಲಿನ ದೇವಿಯ ಮಂದಿರವನ್ನು ಪ್ರೀತಿರಾವ್ ಚವ್ಹಾಣ್ ಹಿಮ್ಮತ್ ಬಹಾದ್ದೂರ್ ಎಂಬಾತನು ಕ್ರಿ.ಶ. ೧೭೫೦ರಲ್ಲಿ ಕಟ್ಟಿಸಿದನು. ದೇವಾಲಯದ ಪ್ರಕಾರವು ಇರುವುದು ಪೂರ್ವ ಪಶ್ಚಿಮವಾಗಿ ೨೩೪ ಮತ್ತು ದಕ್ಷಿಣೋತ್ತರವಾಗಿ ೨೭೦ ಅಡಿಗಳು. ಎಲ್ಲಾ ಕಡೆಗಳಲ್ಲೂ ಪಡಸಾಲೆಗಳಿವೆ. ಈ ಪ್ರಕಾರದಲ್ಲಿ ಪ್ರವೇಶಕ್ಕಾಗಿ ಮೂರು ಮಹಾದ್ವಾರಗಳಿವೆ. ಪಶ್ಚಿಮ ದ್ವಾರದ ಉತ್ತರ ಭಾಗಕ್ಕೆ ಇರುವ ಗೋಡೆಯಲ್ಲಿ ಸಂಸ್ಕೃತ ಭಾಷೆಯಲ್ಲಿ ಬರೆದಿರುವ ಮೂವತ್ತೆರಡು ಸಾಲುಗಳ ಒಂದು ಶಿಲಾಶಾಸನವಿದೆ. ನಾಲ್ಕನೆಯ ಪ್ರಸಿದ್ಧ ಮಂದಿರವು ರಾಮೇಶ್ವರದ್ದಾಗಿದ್ದು, ಕ್ರಿ.ಶ.೧೭೮೦ರಲ್ಲಿ ಮಾಲಾಜಿ ನಿಕಮ್ ಪನ್ಹಾಳಕರ ಎಂಬಾತ ಕಟ್ಟಿಸಿದನು. ಜೋತಿಬಾನಿಗೆ ಉತ್ತರಕ್ಕೆ ಎರಡು ಫರ್ಲಾಂಗು ದೂರದಲ್ಲಿರುವುದು. ಯಮಾಯಿಯ ದೇವಾಲಯ ಶಿಂಧೆ ಮನೆತನದವರೇ ಇದನ್ನೂ ಕಟ್ಟಿಸಿದ್ದು. ಜೋತಿಬಾನ ದಕ್ಷಿಣ ದ್ವಾರಕ್ಕೆ ಹತ್ತಿರದಲ್ಲಿ ಇಪ್ಪತ್ತೈದು – ಮೂವತ್ತು ಅಡಿಗಳಷ್ಟು ಎತ್ತರದ ಕಟ್ಟೆಯೊಂದಿದೆ.ಈ ಕಟ್ಟೆಯ ಮೇಲಿರುವ ಐದು ಅಡಿ ಎತ್ತರದ ಷಟ್ಕೋನ ಸ್ತಂಭದ ಮೇಲೆ ಏಳನೆಯ ಪಾಟೀಲನಿಗೆ ದೊಡ್ಡ ಸನ್ಮಾನ ಮಾಡಿದ ಉಲ್ಲೇಖವಿರುವುದು.

ಇವುಗಳೇ ಅಲ್ಲದೆ ಬೆಟ್ಟದ ಮೇಲೆ ಮುಖ್ಯ ದೇವಾಲಯದ ಆವರಣದಾಚೆಗೆ ಪೂರ್ವದಲ್ಲಿ ಷಷ್ಟಿ (ಸಟವಾಯಿ) ದೇವಿಯ ತಾಣವೂ, ಪಶ್ಚಿಮಕ್ಕೆ ದತ್ತಾತ್ರೇಯ ಮತ್ತು ರಾಮಲಿಂಗರ ತಾಣಗಳು ಬರುತ್ತವೆ. ಹಾಗೆಯೇ ಇತರೆಡೆ ತುಕಾಯಿ, ಮಂಗಳಾಯಿ, ಮಹಿಷ ಮರ್ದಿನಿ, ಬಾಲ ಭೈರವ, ಕಾಲ ಭೈರವ, ತೋರಣ ಭೈರವ ಇತ್ಯಾದಿ ದೇವತೆಗಳು ಪ್ರತಿಷ್ಥಿತಗೊಂಡಿವೆ. ಬೆಟ್ಟದ ಮೇಲೆ ಜಮದಗ್ನಿ ತೀರ್ಥದಂತಹ ಅನೇಕ ತೀರ್ಥಗಳೂ ಇರುವುದು ವಿಶೇಷ.

ಪರಿವಾರ ದೇವತೆಗಳ ಮಹತ್ವ

ಜೋತಿಬಾನ ಸಾನ್ನಿಧ್ಯದಲ್ಲಿ ಮೆರೆಯುತ್ತಿರುವ ಅನ್ಯ ದೇವತೆಗಳ ವಿಚಾರವನ್ನು ಯಾರೂ ಜೋತಿಬಾನ ಸ್ವರೂಪ ಬೋಧೆಗೆ ಉಪಕಾರವಾದುವೆಂದು ತಿಳಿದಂತಿಲ್ಲ. ಚೈತ್ರ ಪೌರ್ಣಮಿಯಂದು ಅವನು ವಿವಾಹದ ಉದ್ದೇಶದಿಂದ ಯಾರ ಬಾಗಿಲಿಗೆ ಮೆರವಣಿಗೆಯಲ್ಲಿ ಬರುತ್ತಾನೋ ಆ ಯಮಾಯಿಗೆ – ಜೋತಿಬಾನ ಜೀವನ ಸಂದರ್ಭದಲ್ಲಿ ಇರುವ ಮಹತ್ವವೆಂಥದು ಎಂಬುದನ್ನು ಮುಂದೆ ವಿವರಿಸಲಾಗುವುದು. ಸಟವಾಯಿ(ಷಷ್ಟಿ)ಯು ದಕ್ಷಿಣದಲ್ಲಿ ಕ್ಷೇತ್ರಪಾಲಕ ದೇವರುಗಳ ಧ್ಯೇಯ ಬಿಂದುವೆನಿಸಿರುವ ಸ್ಕಂದನ ಪತ್ನಿಯಾಗಿದ್ದು, ಪ್ರಸೂತಿಯ ಮೇಲೆ ಅಧಿರಾಜ್ಯ ಹೊಂದಿರುವ ದೇವಿಯೆಂಬುದಾಗಿಯೂ ಸರ್ವ ಪರಿಚಿತಳಾಗಿದ್ದಾಳೆ. ರಾಮಲಿಂಗದ ತಾಣವು ಇಂಥ ಮಹತ್ವವನ್ನುಳ್ಳುದೇ ಹೌದು. ರಾಮಲಿಂಗ ಎಂಬ ಹೆಸರಿನ ದೇವರು ಎಲ್ಲೆಲ್ಲಿ ತಾಣವು ಇಂಥ ಮಹತ್ವವನ್ನುಳ್ಳುದೇ ಹೌದು. ರಾಮಲಿಂಗ ಎಂಬ ಹೆಸರಿನ ದೇವರು ಎಲ್ಲೆಲ್ಲಿ ಸಿಗುತ್ತದೆಯೋ ಅಲ್ಲೆಲ್ಲ ಬಿಡದೆ ಬರುತ್ತದೆ ರೇಣುಕಾ – ಪರಶುರಾಮ – ದತ್ತಾತ್ರೇಯರ ಈ ಮಾಹೂರ ಕ್ಷೇತ್ರದ ಕಥಾಚಕ್ರ. ಅಂದರೆ ರಾಮಲಿಂಗ ಹಾಗೂ ಪರಶುರಾಮರಲ್ಲಿ ಏಕತ್ವ ಗೃಹೀತವಾಗಿರುವುದು ಸುಸ್ಪಷ್ಟ. ಕೇದಾರಲಿಂಗ ಮತ್ತು ರಾಮಲಿಂಗ ಈ ಉಭಯ ನಾಮಗಳಲ್ಲಿನ ‘ಲಿಂಗ‘ – ಎಂಬ ಪದದ ಸಾಧಾರಣತ್ವವನ್ನು ಚರ್ಚಿಸುವ ಅವಶ್ಯಕತೆಯು ಕಾಣುತ್ತದೆ.

ಉಪಾಸಕ ಮತ್ತು ಉಪಾಸನಾ

ಮಹಾರಾಷ್ಟ್ರದಲ್ಲಿನ ಎಲ್ಲಾ ಜಾತಿ – ಪಂಗಡಗಳ ಜನರು ಜೋತಿಬಾನ ಉಪಸಾಸಕರಾಗಿದ್ದಾರೆ. ಮುಸ್ಲಮಾನ ಮತ್ತು ಜೈನ ಧರ್ಮೀಯರು ಇದರಲ್ಲಿ ಸೇರಿರುವುದು ವಿಶೇಷ.ಅನೇಕ ಮನೆತನಗಳಿಗೆಲ್ಲ – ಜೋತಿಬಾನೇ ಕುಲದೇವತೆ. ಗ್ವಾಲಿಯರ್‌ನ ಶಿಂಧೆ ಮತ್ತು ಕೊಲ್ಹಾಪುರದ ಹಿಮ್ಮತ್ ಬಹಾದ್ದೂರ ಚವ್ಹಾಣ್ – ಈ ಎರಡು ಶ್ರೀಮಂತ ಮನೆತನಗಳವರಿಗಂತೂ ಜೋತಿಬಾನಲ್ಲಿ ವಿಶೇಷ ಭಕ್ತಿ. ಜೋತಿಬಾನ ವೈಭವ ಅನೇಕ ಬಗೆಯಲ್ಲಿ ವಿಸ್ತರಿಸಿರುವುದು ಅವರಿಂದಲೇ. ಅಲ್ಲದೆ, ಕೊಲ್ಹಾಪುರದ ರಾಜ ಮನೆತನವು ತನ್ನ ಮುದ್ರೆಯಲ್ಲಿ ಜೋತಿಬಾನ ಹೆಸರನ್ನು ಅತ್ಯಂತ ಅಭಿಮಾನ ಪೂರ್ವಕವಾಗಿಯೇ ಹಾಕಿಕೊಂಡಿದೆ –

ಶ್ರೀಜನೋದ್ಧಾರಾವತಾರಸ್ಯ ರತ್ನಶೈಲನಿವಾಸನೇ |
ರಾಜಾರವಲನಾಥಸ್ಯ ಭದ್ರಾಮುದ್ರಾ ವಿರಾಜತೇ ||

ಎಂಬುದಾಗಿದೆ ಅವರ ಮುದ್ರಾ ಉಲ್ಲೇಖ. ಶಿಂಧೆ ಮತ್ತು ಚವ್ಹಾಣ ಮನೆತನದವರು ಈ ದೇವರ ಉಪಾಸನೆಯು ಸಾತತ್ಯವಾಗಿ ನಡೆದುಕೊಂಡು ಹೋಗುವುದಕ್ಕಾಗಿ ಅನೇಕ ಊರುಗಳಲ್ಲಿ ನೂರಾರು ಎಕರೆ ಜಮೀನಿನ ಉತ್ಪನ್ನವನ್ನು ದೇವಾಲಯಕ್ಕೆ ಬರುವಂತೆ ಏರ್ಪಾಡನ್ನೂ ಸಹ ಮಾಡಿದ್ದಾರೆನ.

ಜೋತಿಬಾನ ಪೂಜಾರಿ ಗುರವ(ಹೂಗಾರ). ಅನ್ಯ ಸೇವಕ ವರ್ಗಗಳಲ್ಲಿ ಬರುವವರೆಂದರೆ ಕಾರಕೂನ, ನಾಯಿಕ, ಶಿಪಾಯಿ, ಹೂಗಾರ, ಮಡಿವಾಳ, ಜಾಡಮಾಲಿ, ಕುದುರೆ ಚಾಕರರು, ಸಮೆ(ದೀಪ)ಗಾರರು, ವಾದ್ಯಗಾರರು, ಕಾರ್ಮಿಕರು(ಕೆರೆ,ಬಾವಿ), ಅರ್ಚಕ, ಹೂವಾಡಿಗರು, ನೇಪಾಥ್ಯಾಧಿಕಾರಿಗಳು, ಅಂಗರಕ್ಷಕರು, ಮೀನುಗಾರರು, ನೀರಗಂಟಿಗಳು, ಎಲೆಗಾರರು, ದೋಲಿ, ಕರ್ಣೇಕರಿ, ಸೈನಿಕ, ಆಯಗಾರ, ಶಿಂಧೆ, ಅಗಸ, ಅಕ್ಕಸಾಲಿಯೇ ಮೊದಲಾದವರು. ಚೈತ್ರ ಉತ್ಸವದ ಸಮಯದಲ್ಲಿ ಪರಾಂಡೆಕರಬುವಾ ಎಂಬ ನಾಥಭುಜಂಗರು ರಚಿಸಿದ ಕೀರ್ತನೆ, ಆಖ್ಯಾನಗಳು ಮತ್ತು ಭಕ್ತಿಗೀತೆಗಳನ್ನು ಹದಿನೈದು ದಿನಗಳ ಕಾಲ ಸತತವಾಗಿ ಗಾಯನ ಮಾಡಲಾಗುತ್ತದೆ.

ಈ ದೇವರಿಗೆ ಯಾತ್ರೆ(ವಾರಿ) ಹೋಗುವ ವ್ರತವನ್ನು ಅನೇಕರು ಕೈಗೊಳ್ಳುವುದುಂಟು. ಖಂಡೋಬಾನ ರೀತಿಯಲ್ಲೆಯೇ ಇಲ್ಲಿಯೂ ದೊಡ್ಡ ವಾಡಿಕೆಯು ಇದೆಯೆಂಬುದು ವಿಶಾಲ ಸ್ಥಳ, ಶಿಲಾಶಾಸನ ಮತ್ತು ಕಾಗದ ಪತ್ರಗಳ ಪುರಾವೆಯಿಂದ ವೇದ್ಯವಾಗುತ್ತದೆ. ಖಂಡೋಬಾನ ಉಪಾಸನೆಯಲ್ಲಿ ಭಂಡಾರ(ಅರಿಷಿಣ) ಮತ್ತು ಕೊಬ್ಬರಿಗೆ ಹೆಚ್ಚಿನ ಮಹತ್ವ. ಅಂತೆಯೇ ಇಲ್ಲಿ ಭಂಡಾರದೊಂದಿಗೆ ಗುಲಾಬಿ ಕುಂಕುಮ (ಗುಲಾಲ್), ಉತ್ತುತ್ತಿ ಮತ್ತು ಕೊಬ್ಬರಿಗೆ ವಿಶೇಷ ಮಹತ್ವ. ಜೋತಿಬಾನಿಗೆ ಹೆಚ್ಚು ಪ್ರಯವಾದುದೆಂದರೆ ದವಣ.

ನಿತ್ಯ ಪೂಜಾರ್ಚನೆಯ ಹೊರತಾಗಿ ಇಲ್ಲಿ ರವಿವಾರ ಮತ್ತು ಪೌರ್ಣಮಿಯ ತಿಥಿಗಳಿಗೆ ವಿಶೇಷ ಮಹತ್ವವುಂಟು. ಜೋತಿಬಾನ ವಿಶೇಷ ದರ್ಶನ ಪಡೆಯುವುದಕ್ಕಾಗಿ ಈ ಎರಡು ದಿನಗಳಲ್ಲಿ ಇಂದಿಗೂ ಅತ್ಯಧೀಕ ಸಂಖ್ಯೆಯಲ್ಲಿ ಬರುತ್ತಾರೆ ಜನತೆ. ಚೈತ್ರ ಪೌರ್ಣಮಿಯು ಜಾತ್ರೆಯ ದಿನವಾಗಿದ್ದು, ಭಕ್ತರು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಬರುತ್ತಾರೆ. ಅಲ್ಲದೆ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ. ಹದಿನೈದು – ಇಪ್ಪತ್ತು ಸಾವಿರ ರೂಪಾಯಿಗಳಿಗೂ ಹೆಚ್ಚು ಯಾತ್ರಾಕರವರೇ ಜಮಾವಣೆಯಾಗುವುದುಂಟು. ಇತ್ತ ‘ಚಾಂಗಭಲಾ’ ಎಂಬು ಕೂಗು ಬೆಟ್ಟದಾದ್ಯಂತ ಪ್ರತಿಧ್ವನಿಸುತ್ತಿದ್ದರೆ, ಅತ್ತ ಗುಲಾಲು – ಕೊಬ್ಬರಿಯು ಅಪರಿಮಿತವಾಗಿ ಚೆಲ್ಲುತ್ತಿರುತ್ತದೆ. ಅಂಗಡಿಗಳು, ನಾಟಕಗಳು, ತಮಾಶಾಗಳು ಅತೀವವಾಗಿ ವಿಜೃಂಭಿಸುತ್ತಿರುತ್ತವೆ.

ಚೈತ್ರ ಪೌರ್ಣಮಿಯ ಉತ್ಸವದಲ್ಲಿ ಮುಖ್ಯ ಅಂಗವೆಂದರೆ ವಿವಾಹ ನಿಮಿತ್ತ ಯಮಾಯಿಯಲ್ಲಿಗೆ ಜೋತಿಬಾನ ಮೆರವಣಿಗೆ ಹೋಗುವ ಸಂಪ್ರದಾಯ. ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಪಲ್ಲಕ್ಕಿಯನ್ನು ಅಲಂಕಾರಗೊಳಿಸಿ, ಅದರಲ್ಲಿ ದೇವರ ಉತ್ಸವ ಮೂರ್ತಿಯನ್ನು ಕೂರಿಸುತ್ತಾರೆ. ವಾದ್ಯಂಏಳ ಹಾಗೂ ಅಧಿಕಾರ ದಂಡಗಳೊಂದಿಗೆ (ನಂದಿಕೋಲಿನ ರೀತಿಯಲ್ಲಿರುತ್ತವೆ ಇವು) ಪಲ್ಲಕ್ಕಿಯನ್ನು ಹೊತ್ತು ಅತ್ಯಂತ ಆಡಂಬರದಿಂದ ನಡೆಯುತ್ತಾರೆ ಭಕ್ತಜನ. ಯಥೇಚ್ಛವಾಗಿ ಗುಲಾಲು – ಕೊಬ್ಬರಿಯನ್ನು ಚೆಲ್ಲಾಡುತ್ತಾ ‘ಚಾಂಗಭಲಾ’ ಎಂಬ ಘೋಷಣೆ ಹಾಕುತ್ತಾ ಯಮಾಯಿಯ ಮಂದಿರದೆದುರಿನ ಕಟ್ಟೆಯ ಮೇಲಿಳಿಸುತ್ತಾರೆ ಹೊತ್ತ ಪಲ್ಲಕ್ಕಿಯನ್ನು. ಜೋತಿಬಾ ತನ್ನನ್ನು ವಿವಾಹವಾಗಲು ಬಂದಿದಾನೆಂದು ತಿಳಿದೊಡನೆ ಯಮಾಯಿಯು ತತ್ಕಾಲ ತನ್ನ ಮಂದಿರದ ದ್ವಾರವನ್ನು ಮುಚ್ಚಿಕೊಳ್ಳುತ್ತಾಳೆ. (ಅರ್ಥಾತ್ ಯಮಾಯಿಯ ಇಚ್ಛಾನುಸಾರ ಪೂಜಾರಿಯು ಮುಚ್ಚುತ್ತಾನೆ ಬಾಗಿಲನ್ನು.) ನಂತರ ದೇವಿಯ ಎದುರು ಕಟಾರಿ ಕಿರುಗುತ್ತಿಯನ್ನಿಟ್ಟು ಲಗ್ನವನ್ನು ನಿಶ್ಚಯಿಸುವ ವಿಧಿಯನ್ನು ಜರುಗಿಸಲಾಗುತ್ತದೆ.

ಈ ಮುಖ್ಯ ಉತ್ಸವವೇ ಅಲ್ಲದೆ ಯುಗಾದಿ (ಗುಡಿಪಾಡವಾ), ದಸಾರ ಮತ್ತು ಕಾರ್ತೀಕ, ಪುಷ್ಯ ಮತ್ತು ಮಾಘ ಪೌರ್ಣಮಿಗಳ ದಿನಗಳಲ್ಲೆಲ್ಲ ಇಲ್ಲಿ ಒಂದು ಚಿಕ್ಕ ಉತ್ಸವವೇರ್ಪಡುತ್ತದೆ. ವಿಶೇಷವೆಂದರೆ ಶ್ರಾವಣ ಶುಕ್ಲ ಪಂಚಮಿಯ ಅಂದರೆ ನಾಗಪಂಚಮಿಯ ಉತ್ಸವವೂ ಈ ಉತ್ಸವ ಕ್ರಮಣಿಕೆಯಲ್ಲಿ ಸಮಾವಿಷ್ಟವಾಗಿರುವುದು.

ಜೋತಿಬಾನ ಕ್ಷೇತ್ರ, ಕ್ಷೇತ್ರಸ್ಥ ದೇವತೆಗಳ ಪರಿವಾರ ಮತ್ತು ಅಲ್ಲಿನ ಉತ್ಸವ – ಮಹೋತ್ಸವಗಳ ಈ ಸ್ಥೂಲ ಪರಿಚಯದಿಂದ ನಮಗೆ ಕೆಲವಾರು ವೈಶಿಷ್ಟ್ಯಗಳು ಕಂಡು ಬರುತ್ತವೆ. ಮಾಹಾತ್ಮ್ಯ ಕಥೆಗಳಲ್ಲಿ ಈ ದೇವರನ್ನು ಹಿಮಾಲಯದ ಕೇದಾರ(ಶಿವ)ನೊಂದಿಗೆ ಸಂಬಂಧ ಕಲ್ಪಿಸಲಾಗಿದೆ. ಆದರೆ ಪ್ರತ್ಯಕ್ಷ ವೀಕ್ಷೆಯಲ್ಲಿ ಅವನ ಲೌಕಿಕ ಸ್ವರೂಪ ಹಾಗೆಯೇ ಉಳಿದು ಕೊಂಡಿರುವುದು ಗಮನೀಯ. ಆತ ಖಂಡೋಬಾನಂತೆಯೇ ಶುದ್ಧ ಕ್ಷೇತ್ರಪಾಲಕ ದೇವನಾಗಿದ್ದಾನೆ. ಯಮಾಯಿಯೆಂಬ ಜನಪದ ದೇವೀಯೇ ಅವನ ಪತ್ನಿ. ಅವನ ಅತ್ಯಂತ ಭಯಾನಕ ಉಪಾಸನಾ ಕ್ರಮವೊಂದು ಅವಶೇಷ ರೂಪದಲ್ಲಿಯಾದರೂ ಸರಿಯೇ, ಜನಪದ ಧರ್ಮವನ್ನು ಪ್ರಚುರಪಡಿಸುತ್ತಲಿದೆ.

ನಾಮ ಮತ್ತು ರೂಪ

ಜೋತಿಬಾನ ಮಾಹಾತ್ಮ ಕಥೆಯೊಂದಿಗೆ, ಅವನ ಕ್ಷೇತ್ರ ಮತ್ತು ಕ್ಷೇತ್ರಸ್ಥ ನಿತ್ಯ ನೈಮಿತ್ತಿಕ ಉಪಾಸನೆಯ ವಿಚಾರವನ್ನು ಸ್ಥೂಲವಾಗಿ ಗಮನಿಸಲಾಯಿತು. ಈ ಎಲ್ಲದರಿಂದ ಮೂಡಿ ಬರುವ ಅವನ ಸ್ವರೂಪವು ಅವನ ನಾಮ, ರೂಪದೊಂದಿಗೆ ಎಷ್ಟರ ಮಟ್ಟಿಗೆ ಸರಿಹೊಂದುತ್ತದೆ ಎಂಬುದರ ಪರಿಶೀಲನೆಯು ಅಗತ್ಯ. ನಾಮದ ವಿಚಾರಕ್ಕೆ ಮುನ್ನ ಅವನ ರೂಪದರ್ಶನವನ್ನು ತೆಗೆದುಕೊಳ್ಳಬಹುದು. ‘ಸ್ತವರಾಜ‘, ‘ಕವಚ’ ಮತ್ತು ‘ಸಹಸ್ರನಾಮ ಸ್ತೋತ್ರ’ ಎಂಬ ಉಪಾಸನಾ ಪರ ಮೂರು ಕೃತಿಗಳ ಆರಂಭದಲ್ಲಿ ‘ಜೋತಿಬಾ’ ದೇವರ ‘ಸ್ವರೂಪ’ (ಧ್ಯಾನ)ವು ವರ್ಣಿತವಾಗಿದೆ. ರವಳನಾಥ ಸ್ತವರಾಜಾ‘ದಲ್ಲಿ ಜೋತಿಬಾನನ್ನು ಕುರಿತ ವರ್ಣನೆ ಹೀಗಿದೆ:

ಖಡ್ಗಶೂಲಡಮರುಪಾತ್ರದಧಾನಂ
ರತ್ನಭೂಧರಮಣಿಂ ರಣಾದೀಕ್ಷಿತಮ್ |
ತುರಗವಾಹನಮಯಂ ಹತದೈತ್ಯಂ
ತಂ ನಮಾಮಿ ಸತತಂ ಕುಲದೈವತಮ್ ||

[ಖಡ್ಗ, ತ್ರಿಶೂಲ, ಡಮರು ಮತ್ತು ಪಾನಪಾತ್ರ ಈ ಆಯುಧಗಳನ್ನು ನಾಲ್ಕು ಕೈಗಳಲ್ಲಿ ಧಾರಣ ಮಾಡಿಕೊಂಡವನು. ರತ್ನಾಗಿರಿಗೆ ಭೂಷಣಪ್ರಾಯನಾಗಿರುವನು. ಯುದ್ಧ ದೀಕ್ಷೆ ತೊಟ್ಟು ಅಶ್ವಾರೂಢನಾಗಿರುವವನು ಮತ್ತು ದೈತ್ಯರನ್ನು ನಾಶಗೈದ ಕುಲದೇವನನ್ನು ನಾನು ನಮಿಪೆನು.]

ಇಲ್ಲಿನ ಆಯುಧಗಳು ಮತ್ತು ವಾಹನಗಳೆರಡರ ವಿವರಗಳು ಜೋತಿಬಾನನ್ನು ಭೈರವನೊಂದಿಗೆ ಸಂಪೂರ್ಣವಾಗಿ ಸಮೀಕರಿಸುವಂತಹವಾಗಿವೆ. ಅಲ್ಲದೆ ಅವನನ್ನು ವಂದಿಸುತ್ತಿರುವುದು ಕೂಡ ‘ಕುಲದೈವತ’ ಎಂಬುದಾಗಿಯೇ.

‘ಕೇದಾರ ಕವಚಾ’ ಕೃತಿಯ ಆರಂಭದಲ್ಲಿ ಜೋತಿಬಾನನ್ನು ಕುರಿತ ವರ್ಣನೆ ಹೀಗಿದೆ:

ಕೇಯೂರಾದಿವಿಭೂಷಿತೈಃ ಕರತಲೈಃ ರತ್ನಾಂಕಿತೈಃ ಸುಂದರಮ್ |
ನಾನಾಹಾರವಿಚಿತ್ರಪನ್ನಗಯುತೈರ್ಹೇಮಾಂಬರೈರ್ಮಂಡಿತಮ್ ||
ಹಸ್ತಾಬ್ಯಾಂ ಧೃತಖಡ್ಗ ಪಾತ್ರಡಮರಶೂಲಂ ಸದಾ ಬಿಭ್ರತಮ್ |
ವಾಜೀವಾಹನ ದೈತ್ಯದರ್ಪದಲನಂ ಕೇದಾರಮೀಶಂ ಭಜೇ ||

[ಕೇಯೂರಾದಿ(ತೋಳಬಂದಿ) ರತ್ನಮಯ ಅಲಂಕಾರ, ನಾನಾ ಬಗೆಯ ಸರ್ಪಯುಕ್ತ ಹಾರ ಮತ್ತು ಸುವರ್ಣ ವಸ್ತ್ರಗಳಿಂದ ಶೋಭಿಸುವವನು; ಕೈಯಲ್ಲಿ ಖಡ್ಗ, ಪಾನಪಾತ್ರ, ಡಮರು ಮತ್ತು ತ್ರಿಶೂಲವನ್ನು ಧಾರಣ ಮಾಡಿಕೊಂಡಿರುವವನು ಮತ್ತು ಅಶ್ವಾರೂಢನಾಗಿ ದೈತ್ಯರ ಗರ್ವಹರಣ ಮಾಡುವಂತಹ ಕೇದಾರನನ್ನು ಕುರಿತು ನಾನು ಭಜಿಸುವೆನು.]

ಆಶಯದ ದೃಷ್ಟಿಯಿಂದ ನೋಡಿದಾಗ ಈ ಶ್ಲೋಕವು ‘ಸ್ತವರಾಜ‘ದಲ್ಲಿನ ಶ್ಲೋಕದೊಂದಿಗೆ ಸಂಪೂರ್ಣ ಸಾಮ್ಯವುಳ್ಳುದಾಗಿದೆ.

ಸಹಸ್ರನಾಮ ಸ್ತೋತ್ರದಲ್ಲಿನ ವರ್ಣನೆಯು ಆಯುಧಗಳ ವಿಷಯದಲ್ಲಿ ಮೇಲಣ ಶ್ಲೋಕಗಳೊಂದಿಗೆ ಸಾಮ್ಯ ಹೊಂದಿರುವುದಾದರೂ, ವಾಹನದ ವಿಚಾರದಿಂದ ಭಿನ್ನವಾಗಿದೆ:

ದ್ಯಾಯೇದ್ ದೇವಂ ಪರೇಶಂ ತ್ರಿಗುಣಗುಣಮಯಂ ಜೋತಿರೂಪಂ ಸ್ವರೂಪಮ್ |
ವಾಮೇ ಪಾತ್ರಂ ತ್ರಿಶೂಲಂ ಡಮರುಕಸಹಿತಂ ಖಡ್ಗ ದಕ್ಷೇ ವಿರಾಜಮ್ ||
ಶೇಷರೂಢಂ ಕೃಪಾಲುಂ ಕಮಲಪದಯುಗಂ ಭಕ್ತಕಾರುಣ್ಯಗಮ್ಯಮ್ |
ಸರ್ವಾಂಗೇ ಲಿಂಗಭೂಷಂ, ಉಪವಿತಸಹಿತಂ ನಾಥಮಾರ್ಗಾಧಿಪತ್ಯಂ ||

ಎಡಭಾಗದ ಎರಡು ಕೈಗಳಲ್ಲಿ ಪಾನಪಾತ್ರೆ ಮತ್ತು ತ್ರಿಶೂಲ, ಬಲಭಾಗದ ಎರಡು ಕೈಗಳಲ್ಲಿ ಡಮರು ಮತ್ತು ಖಡ್ಗಗಳು ಯಾರಲ್ಲಿ ಶೋಭಿಸುತ್ತಿರುವುವೋ ಮತ್ತು ಯಾರು ಶೇಷ(ಸರ್ಪ)ದ ಮೇಲೆ ಆರೂಢನಾಗಿರುವನೋ ಆ ಲಿಂಗಭೂಷಿತ ಜೋತಿರೂಪ ಕೃಪಾಳು ದೇವನಿಗೆ ಈ ಭಕ್ತನು ವಂದಿಸುತ್ತಿದ್ದಾನೆ. ಅವನ ಪ್ರಕಾರ ಈ ದೇವನು ನಾಥಪಂಥದ ಅಧಿಪತಿ.

ಸಹಸ್ರನಾಮ ಕರ್ತನ ಅಭಿಪ್ರಾಯದಂತೆ ಜೋತಿಬಾನ ವಾಹನ ಶೇಷ. ವಾಹನ ಭಿನ್ನತೆಯ ವಿಷಯವನ್ನು ಬಿಟ್ಟರೆ ಮೂರು ಸ್ವರೂಪ ವರ್ಣನೆಗಳಲ್ಲಿ ಜೋತಿಬಾ ಭೈರವ ಸ್ವರೂಪಿ ಎಂಬುದು ಸೂಚಿತವಾಗಿರುವುದು ಗಮನೀಯ. ಅಂದರೆ ಉಪಸನಾ ಪರಂಪರೆಯು ಜೋತಿಬಾನನ್ನೂ ಕ್ಷೇತ್ರಪಾಲಕ ಶ್ರೇಣಿಯ ದೇವರು ಎಂಬುದನ್ನು ಒಪ್ಪಿಕೊಂಡಿದ್ದು, ಆ ಧೋರಣೆಯಿಂದಲೇ ಅವನನ್ನು ಭೈರವನೊಂದಿಗೆ ಏಕತ್ವಗೊಳಿಸಿರುವುದು ಸುಸ್ಪಷ್ಟ.

ಜೋತಿಬಾನಿಗಿರುವ ‘ಕೇದಾರಲಿಂಗ’ ಎಂಬ ಹೆಸರು ಅವನ ಲಿಂಗರೂಪದ ದ್ಯೋತಕ. ಕೇದರನಾಥ ಮತ್ತು ಕೇದಾರೇಶ್ವರ ಎಂಬ ಪೂರ್ಣ ಹೆಸರುಗಳಲ್ಲಿನ ‘ಕೇದಾರ’ ಎಂಬ ಸಂಕ್ಷಿಪ್ತ ರೂಪವೇ ಹೆಚ್ಚು ಪರಿಚಿತ. ಆದರೆ ಉಪಾಸನಾ ಸಾಹಿತ್ಯದಲ್ಲಿ ಸರ್ವಾಧಿಕ್ಯವಾಗಿರುವ ಪ್ರತಿಷ್ಠಿತ ಹೆಸರು ‘ಕೇದಾರಲಿಂಗ‘ವೇ ಎಂಬುದನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ್ದು ಅವಶ್ಯ.

ಜನಪದರಲ್ಲಿ ಹಾಗೂ ಉಪಾಸನಾ ಸಾಹಿತ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಕಾಣುವ ಜೋತಿಬಾನ ಪರ್ಯಾಯ ನಾಮವು ‘ರವಳನಾಥ’ ಅಥವಾ ‘ರವಳೇಶ್ವರ’. ದಕ್ಷಿಣ ಕೊಂಕಣ ಮತ್ತು ಗೋಮಾಂತಕ ಪ್ರದೇಶಗಳಲ್ಲಿ ರವಳನಾಥ ಸ್ವತಂತ್ರ ಘನತೆಯುಳ್ಳ ಕ್ಷೇತ್ರಪಾಲಕ ದೇವರು. ಶ್ರೀ ಪು. ರಾ. ಬೆಹರೆಯವರು ಅವನನ್ನು ಬಣ್ಣಿಸಿರುವುದು ಹೀಗೆ:

“ಈ ಮೂರ್ತಿ ನಿಂತಿರುವುದಾಗಿದ್ದು, ಅದರ ಎಡಗಾಲನ್ನು ಕೊಂಚ ಬಾಗಿಸಿ ಮುಂದೆ ಮಾಡಲಾಗಿದೆ. ರವಳನಾಥನು ಚತುರ್ಭುಜವುಳ್ಳವನು. ಮುಂಭಾಗದ ಬಲಗೈಯಲ್ಲಿ ಖಡ್ಗ (ತಲ್ವಾರ್) ಮತ್ತು ಎಡಗೈಯಲ್ಲಿ ಅಮೃತ ಪಾತ್ರೆಗಳಿವೆ. ಹಿಂದಿನ ಬಲಗೈಯಲ್ಲಿ ತ್ರಿಶೂಲ ಹಾಗೂ ಎಡಗೈಯಲ್ಲಿ ಡಮರುಗಳಿವೆ. ಮೂರ್ತಿಯ ದೃಷ್ಟಿ ಸರಳವೂ, ನೇರವೂ ಆಗಿದೆ. ತಲೆಗೆ ಮುಕುಟವಿದ್ದು, ಧೋತರ (ಪಂಚೆ) ಉಟ್ಟಿದೆ. ಇತರೆ ಮಾಲೆಗಳೊಂದಿಗೆ ನರರುಂಡ ಮಾಲೆಯು ಇರುವುದು ಇಲ್ಲಿನ ಮುಖ್ಯ ವಿಶೇಷ. ಬೃಹತ್ ಗಾತ್ರದ ಮೀಸೆಯನ್ನು ಹೊಂದಿರುವನು ಈತ. ಈ ಭಾಗಗಳಲ್ಲಿ ಈ ಮೂರ್ತಿಗೆ ಅಂಟಿಸಿರುವುದು ಬೆಳ್ಳಿಯ ಕಣ್ಣುಗಳು. ರವಳನಾಥ ಮೂರ್ತಿಯ ಕಣ್ಣುಗಳೂ ಬೆಳ್ಳಿಯವೇ.

ಮೂರ್ತಿಯ ಎರಡೂ ಬದಿಗಳಲ್ಲಿ ಚವರಿಯನ್ನು ಹಿಡಿದು ಬೀಸುತ್ತಿರುವ ಪರಿಚಾರಕರ ಎರಡು ಮೂರ್ತಿಗಳನ್ನು ಕೆತ್ತಲಾಗಿದೆ. ಕೆಲವೆಡೆ ಇಂತಹ ನಾಲ್ಕು ಮೂರ್ತಿಗಳಿರುವುದೂ ಉಂಟು. ಕೆಲಭಾಗಗಳಲ್ಲಿ ಮೂರ್ತಿಯ ಬಲಭಾಗಕ್ಕೆ ಕುದುರೆಯೊಂದು ಇರುತ್ತದೆ.

“ಓಟವಣೆ, ಚಂದಗಡಗಳಲ್ಲೆಲ್ಲ ರವಳನಾಥನು ವಿಷಭಾಧೆಯಿಂದ ಮುಕ್ತಗೊಳಿಸುವವ ದೇವನೆಂದು ಪ್ರಸಿದ್ಧನಾಗಿದ್ದಾನೆ.” – ಈ ಮಾಹಿತಿಯೊಂದಿಗೆ ಶ್ರೀ ಬೆಹರೆಯವರು ರವಳನಾಥನ ಚರಿತ್ರೆಯ ಮತ್ತೊಂದು ವಿಶೇಷವನ್ನು ಹೀಗೆ ದಾಖಲಿಸಿದ್ದಾರೆ – “ಚೈತ್ರ ಪೌರ್ಣಮಿಗೆ ಜೋತಿಬಾನು ಲಗ್ನ ಮಾಡಿಕೊಳ್ಳಲೆಂದು ಯಮಾಯಿಯೆಡೆಗೆ ಹೋಗುತ್ತಾನೆ, ಅದರಂತೆಯೇ ರವಳನಾಥನ ತರಂಗ (A wave) ಮತ್ತು ಪಾವಣಾಯಿಯರ ತರಂಗಗಳ ವಿಷಯವೂ ನಡೆಯುತ್ತದೆ. ಈ ಎರಡೂ ತರಂಗಗಳ ಮದುವೆ ನಿಶ್ಚಯಗೊಳಿಸುವ ವಿಧಿಯನ್ನು ‘ಶಿವಲಗ್ನ’ ಎಂದು ಕರೆಯುತ್ತಾರೆ.”[4]

ವೆಂಗುರ್ಲೆ ಎಂಬ ಊರಿನಲ್ಲಿ ರವಳನಾಥ ಮತ್ತು ಸಾಂತೇರಿಯರ ವಿವಾಹದ ವಾರ್ಷಿಕ ವಿಧಿಯು ನಡೆಯುವ ಸಂಗತಿಯನ್ನು ನಾನು ಅಲ್ಲಿನ ಸ್ಥಳೀಯರೊಬ್ಬರಿಂದ ಕೇಳಿ ತಿಳಿದಿದ್ದೇನೆ. ಜೋತಿಬಾ ಮತ್ತು ರವಳನಾಥರ ವಿವಾಹ ಸಂಪ್ರದಾಯದ ಸಮಾಣ ವಿಚಾರದಿಂದ ಶ್ರೀ ಬೆಹರೆ ಅವರಿಗೆ ಯಮಾಯಿ – ಪಾವಣಾಯಿಯರಲ್ಲೂ ಏಕತ್ವದ ಸಾಧ್ಯತೆಯೊಂದು ಕಾಣುತ್ತದೆ. ಆದರೆ ಇವರ ಪ್ರಕಾರ ಸಾಂತೇರಿಯು ಬೇರೆ. ಇಲ್ಲಿನ ಒಂದು ಸತ್ಯ ಸಂಗತಿಯೆಂದರೆ ಯಮಾಯಿ ಮತ್ತು ಸಾತೇರಿಯರಿಬ್ಬರೂ ಭೂದೇವಿಯರೇ ಎಂಬುದು. ಅವರ ಪೂಜಾಪ್ರತೀಕಗಳ ಏಕ ರೂಪತೆಯನ್ನು ಮುಂದೆ ನೋಡಬಹುದಾಗಿದೆ.

ಜೋತಿಬಾನ ಮೂರ್ತಿಸ್ವರೂಪವು ಆತನ ಪರಿಣಿತ ನೆಲೆಯದ್ದು. ಅವನ ಕ್ಷೇತ್ರಪಾಲ ಕತ್ವವನ್ನು ಮನಸ್ಸಿನಲ್ಲಿಟ್ಟುಕೊಂಡು ಪೂರ್ವ ಪ್ರತಿಷ್ಠಿತ ‘ಕ್ಷೇತ್ರಪಾಲಕ ಭೈರವನೊಂದಿಗೆ ಆತನ ಏಕತ್ವವನ್ನು ಪ್ರಸ್ಥಾಪಿತಗೊಳಿಸುವ ಪ್ರಯತ್ನದಿಂದಾಗಿ ಅವನಿಗೆ ಲಭ್ಯವಾಗಿರುವುದು ಈ ಮೂರ್ತಿ ಸ್ವರೂಪ. ಮೂಲತಃ ಆತ ಕೇವಲ ಲಿಂಗರೂಪಿ. ಖಂಡೋಬಾನನ್ನು ಸಹ ಮೊದಲು ಪೂಜಿಸುತ್ತಿದ್ದುದು ಲಿಂಗದ ರೂಪದಲ್ಲಿಐಏ. ಅವನ ಮೂರ್ತಿ ಸ್ವರೂಪವು ನಂತರದಲ್ಲಿ ಸಿದ್ಧಗೊಂಡದ್ದು ಹೀಗೆಯೇ. ಖಂಡೋಬಾನ ಮೂರ್ತಿಯು ಸಿದ್ಧಗೊಂಡ ಮೇಲೆಯೂ ಅವನ ಮೂಲಲಿಂಗ ರೂಪವೇ ಜೇಜೂರಿಯಂತಹ ಪ್ರಖ್ಯಾತ ಕ್ಷೇತ್ರದಲ್ಲಿ ಪೂಜಿಸಲ್ಪಡುತ್ತಿರುವುದು. ಹಾಗೆಯೇ ರತ್ನಾಗಿರಿಯ ಮೇಲಣ ಜೋತಿಬಾನ ಮಂದಿರದಲ್ಲಿನ ಮೂರ್ತಿಯ ಸಾನ್ನಿಧ್ಯದಲ್ಲಿ ಅವನ ಮೂಲದ ಲಿಂಗರೂಪವನ್ನು ಇಂದಿಗೂ ಪೂಜಿಸಲಾಗುತ್ತಿದೆ.

ವಿವಕ್ಷಿತ (ಇಚ್ಛಿತ) ಹೆಸರುಗಳಾವುವೂ ಇಲ್ಲದಂತಹ ಲಿಂಗ ದೇವರು ಕೊಂಕಣ ಪ್ರದೇಶದ ಊರೂರುಗಳಲ್ಲಿ ಇರುವುದನ್ನು ಸ್ವತಃ ನಾನೇ ನೋಡಿದ್ದೇನೆ. ಈ ಲಿಂಗಗಳಿಗೆ ಪಾಣಿಬಟ್ಟಲು (ಶಾಳುಂಕಾ) ಇರುವುದಿಲ್ಲ. ಒರಳು ಕಲ್ಲಿನಂತಹ ಹೆಚ್ಚು ಕಡಿಮೆ ಎತ್ತರದ ಒರಟು ಕಲ್ಲನ್ನು ‘ಲಿಂಗ‘ವಾಗಿ ಪೂಜಿಸುತ್ತಾರೆ. ಚಕ್ರಧರನ ಭ್ರಮಣದ ವರ್ಣನೆಯಲ್ಲಿ ‘ಲೀಲಾಚರಿತ್ರ’ ಕಾರರು ಯಾವುದನ್ನು ‘ಲಿಂಗ ದೇವಾಲಯ’ ಎಂದು ಉಲ್ಲೇಖಿಸಿರುವರೋ ಅವು ಶಿವ ಮಂದಿರಗಳಲ್ಲ. ಬದಲಾಗಿ ಇಂಥ ಲಿಂಗರೂಪಿ ದೇವರ ಲಂಬಾಕಾರ(ಆಯತ)ಗಳೇ ಆಗಿದ್ದಿರ ಬೇಕು ಎಂದೆನಿಸುತ್ತದೆ.

 

[1]ಶ್ರೀಕೇದಾರ ವಿಜಯ: ಪ್ರಕಾಶಕ ಶಿವಾಜಿರಾವ್ ಆಬಾಜಿರಾವ್ ಸಾವಂತ್, ಶ್ರೀರಾಮತತ್ತ್ವ ಪ್ರಕಾಶನ, ಬೆಳಗಾಂವ್, ಮೂರನೆಯ ಆವೃತ್ತಿ, ಶಕ.೧೮೯೩.

[2]ಶ್ರೀಕೇದಾರಲಿಂಗಮಾನಸಪೂಜಾಸ್ತೋತ್ರಮ್ (ಮರಾಠಿ ಭಾಷಾಂತರದೊಂದಿಗೆ): ಸಖಾರಾಮಶಾಸ್ತ್ರಿ ಬಾಪೂಶಾಸ್ತ್ರಿ ಭಾಗವತ, ಸಾತಾರಾ, ಶಕ.೧೮೫೭.

[3]ಶ್ರೀಕೇದಾರಪದರತ್ನಮಾಲಾ:ಗಣೇಶ್ ತಾತ್ಯಾಶಾಸ್ತ್ರೀ ಸಾಗಾಂವಕರ, ಕೊಲ್ಹಾಪುರ, ೧೮೯೬.

[4]ಶ್ರೀರವಳನಾಥ ಆಣಿ ಕೊಂಕಣಾತೀಲ ದೇವಸ್ಕಿ: ಪು.ರಾ.ಬೆಹರೆ, ಬೋರಿವಿಲಿ, ೧೯೫೫, ಪುಟ.೧೭ – ೨೦.