ಜೋತಿಬಾ ಮತ್ತು ನಾಥ ಸಂಪ್ರದಾಯ

ಜೋತಿಬಾನ ಉಪಾಸನಾ ಸಾಹಿತ್ಯದಲ್ಲಿ ಅನೇಕ ಬಾರಿ ಅವನ ವರ್ಣನೆಯು ಶೃಂಗಿಕಂಥಾ(ಕೌದಿ) – ಝೋಳಿ (ಜೋಳಿಗೆ) ಎಂಬ ನಾಥ ಪಂಥೀಯ ಪರಿವೇಶದಲ್ಲಿ ಬಂದಿದೆ. ಆದಿಲಶಾಹಿಗಳ ಕಾಲದಲ್ಲಿ ಅವನ ಉಪಾಸಕರು ನಾಥ ಪಂಥದ ಗೋಸಾವಿಗಳಾಗಿದ್ದರು ಎಂಬ ಉಲ್ಲೇಕವಿದೆ. ಅವನ ಈಗಿನ ಮೂರ್ತಿಯನ್ನು ರೂಪಿಸಿದಾತ ಕೂಡ ಒಬ್ಬ ನಾಥ ಪಂಥೀಯ ಸಾಧುವೆಂಬುದು ಪಾರಂಪರಿಕವಾಗಿ ಪ್ರಚಲಿತದಲ್ಲಿರುವ ನಂಬಿಕೆ. ಈ ಬಗೆಯ ಧೋರಣೆಗೆ ಪೋಷಕವಾದ ಅಂಶಗಳು ನರಹರಿ ಅಂಗಪೂರಕರರ ‘ಕೇದಾರ ವಿಜಯ’ ಕೃತಿಯಲ್ಲಿ ಲಭಿಸುತ್ತವೆ.

ನನ್ನ ಅಭಿಪ್ರಾಯದಲ್ಲಿ ಜೋತಿಬಾ ಮತ್ತು ನಾಥ ಸಂಪ್ರದಾಯದ ಸಂಬಮದ ಬೆಸೆದಿರುವುದು ಜೋತಿಬಾನ ಕ್ಷೇತ್ರಪಾಲಕ ಸ್ವರೂಪದಿಂದಾಗಿಯೇ. ಮಹಾರಾಷ್ಟ್ರದ ಪ್ರಸಿದ್ಧ ಕ್ಷೇತ್ರಪಾಲಕ ದೇವರಾದ ಭೈರವನು ನಾಥ ಸಂಪ್ರದಾಯದ ಅನುಯಾಯಿಗಳಾದ ಗೋಸಾವಿಗಳ ಭಕ್ತಿ ವಿಷಯವಾಗಿರುವುದೂ ಇದಕ್ಕೆ ಕಾರಣ. ಒಂದು ಕಾಲದಲ್ಲಿ ಪಾಶುಪತರಾಗಿದ್ದ ಹಾಗೂ ಶಿವ – ಭೈರವಾದಿ ಮಂದಿರಗಳ ಪೂಜೆ – ಅರ್ಚನೆಯಾದಿ ವ್ಯವಸ್ಥೆಯಲ್ಲಿ ತೊಡಗಿಕೊಂಡಿದ್ದ ಗೋಸಾವಿ (ಭರಟಕ)ಗಳು ಮುಂದೆ, ಪಾಶುಪಥವು ನಾಥ ಸಂಪ್ರದಾಯದಲ್ಲಿ ಸೇರಿಹೋದ ಮೇಲೆ ನಾಥ ಸಂಪ್ರದಾಯಿಗಳಾದರು. ಸ್ವಾಭಾವಿಕವಾಗಿಯೇ ಅವರ ದೇವರುಗಳು ಅವರ ಶ್ರದ್ಧಗೆ ಅನುರೂಪವಾದವು.[1] ಗೋಸಾವಿಗಳ ಉಪಾಸನಾ ವಿಷಯವಾದ ಭೈರವನ ವರ್ಣನೆಯನ್ನು ನಾಥ ಪಂಥದ ಸ್ವರೂಪದಲ್ಲಿಯೇ ಮಾಡಿರುವುದು ಗಮನಾರ್ಹ. ಜೋತಿಬಾನ ಒಬ್ಬ ಭಕ್ತನಾದ ಭುಜಂಗನಾಥನು ಸಹ ಗೋಸಾವಿಯೇ ಆಗಿದ್ದ. ಜೋತಿಬಾನ ಉಪಾಸನೆಯಲ್ಲಿ ಅವನಿಗೆ ಇದ್ದ ಸ್ಥಾನ ವಿಶೇಷ ಶ್ರೇಷ್ಠದ್ದು. ಇಂದಿಗೂ ಆ ಪರಂಪರೆಯಲ್ಲಿನ ಕೀರ್ತನಕಾರನಾದ ಪಾಂಡು ರಂಗ ಬುವಾನು ಚೈತ್ರ ಉತ್ಸವದಲ್ಲಿ ಹದಿನೈದು ದಿನಗಳ ಪರ್ಯಂತ ಅವನ ಗೀತೆಗಳನ್ನು ಹಾಡುತ್ತಾನೆಂಬುದು ಗಮನೀಯ.

ಭೈರವ, ಮರಾಡಿ, ನಾಥ ಸಂಪ್ರದಾಯ ಮತ್ತು ಜೋತಿಬಾ ಇವರುಗಳ ಸಂಬಂಧದ ಈ ರಹಸ್ಯವನ್ನು ಅರಿತ ಮೇಲೆ ಆಗುವ ಇಂಗಿತವಿದು. ಜೋತಿಬಾನು ಸಹ ಈ ಭೈರವ ಕುಲದಲ್‌ಇನ ಒಬ್ಬ ದೇವನೇ ಅವನು ಒಬ್ಬ ಕ್ಷೇತ್ರಪಾಲಕ ದೇವ – ಎಂಬುದರಲ್ಲಿ ಕೊಂಚವೂ ಅನುಮಾನ ಉಂಟಾಗುವುದಿಲ್ಲ. ಇಲ್ಲಿಂದ ಮುಂದೆ ಜೋತಿಬಾನ ಸರ್ವ ವಿಚಾರ ಮತ್ತು ಆತನ ಕ್ಷೇತ್ರಪಾಲಕ ಸ್ವರೂಪದ ಅರಿವನ್ನೇ ಮುಖ್ಯವಾಗಿಟ್ಟುಕೊಳ್ಳಲಾಗಿದೆ.

ಜೋತಿಬಾ ಮತ್ತು ಜ್ಯೋತಿರ್ಲಿಂಗ

ಈ ದೇವರ ಅತ್ಯಂತ ಜನಪ್ರಿಯವಾದ ಹೆಸರೇ ‘ಜೋತಿಬಾ’. ಈ ಹೆಸರಿನಲ್ಲಿರುವ ‘ಬಾ’ ಎಂಬ ಉತ್ತರ ಪದವು ವಿಠೋಬಾ, ಖಂಡೋಬಾ, ಬೀರೋಬಾ, ಚೇಡೋಬಾ – ಎಂಬಿತ್ಯಾದಿ ಹೆಸರುಗಳಲ್ಲಿನ ಹಾಗೆಯೇ ಆದರಾರ್ಥಕ ಪದವೆಂಬುದು ಸ್ಪಷ್ಟ. ಈ ಉತ್ತರ ಪದವನ್ನು ಬಿಟ್ಟರೆ ಈ ದೇವರ ಹೆಸರಿನ ಮೂಲರೂಪ ಅಥವಾ ಮೂಲರೂಪದ (ಉತ್ತರ ಪದವನ್ನು ಹಚ್ಚುವಾಗಿನ ರೂಪ) ಪರಿವರ್ತನೆಯು ಉಳಿಯುತ್ತದೆ. ಅಂದರೆ ‘ಜೋತಿಬಾ’ ಎಂಬ ಹೆಸರಿನಲ್ಲಿನ ‘ಬಾ’ ಎಂಬ ಉತ್ತರ ಪದವನ್ನು ತೆಗೆದಾಗ ಉಳಿಯುವ ‘ಜೋತಿ’ ಎಂಬುದು ಈ ದೇವರು ಹೆಸರಿನ ಮೂಲರೂಪವಾಗಿರಬಹುದು. ಅಥವಾ ‘ಬೀರೋಬಾ‘ದಲ್ಲಿನ ‘ಬೀರ’ ಎಂಬ ಮೂಲರೂಪ. ‘ಚೇಡೋಬಾ‘ದಲ್ಲಿನ ‘ಚೇಡಾ’ ಎಂಬ ಮೂಲರೂಪ, ‘ಕೋಂಡಿಬಾ‘ದಲ್ಲಿನ ‘ಕೋಂಡಾ’ ಎಂಬ ಮೂಲರೂಪ ಇರುವಂತೆ ‘ಜೋತಿಬಾ‘ದಲ್ಲಿಯೂ ‘ಜೋತ’ ಎಂಬ ಮೂಲರೂಪ ಇದ್ದಿರಬಹುದು.

ಜೋತಿಬಾನ ಕ್ಷೇತ್ರಪಾಲಕತ್ವ ಎಷ್ಟೊಂದು ಸ್ಪಷ್ಟವಾಗಿದೆಯೆಂದರೆ, ಅವನ ಹೆಸರನ್ನು ‘ಜ್ಯೋತಿ‘ಯೊಂದಿಗೆ ಸಂಬಂಧ ಕಲ್ಪಿಸುವುದು ಅಷ್ಟೊಂದು ಸುಸಂಗತವೆನಿಸುವುದಿಲ್ಲ. ಅದೇ ‘ಜೋತ‘ದೊಂದಿಗೆ ಜೋಡಿಸುವುದು ಯೋಗ್ಯವೆನಿಸುತ್ತದೆ. ‘ಜೋತ‘ದಿಂದಲೇ ‘ಜೋತ್ಯಾ’ ಎಂಬ ಶಬ್ದವು ರೂಪಗೊಂಡಿದ್ದು, ಅದರ ಅರ್ಥ ‘ನೇಗಿಲು, ಬೇಸಾಯ ಹೊಡೆಯುವ ಮನುಷ್ಯ, ನೇಗಿಲು ಹಿಡಿವ ಆಳು, ರೈತ’ ಎಂಬುದಾಗಿದೆ. ಜೋತಿಬಾನ ಉಪಾಸಕರಲ್ಲಿ ಹೇಗ ‘ಜೋತಿಬಾ’ ಎಂಬ ವ್ಯಕ್ತಿನಾಮ ಇಡುವ ರೂಢಿಯು ಇರುವುದೋ, ಹಾಗೆಯೇ ‘ಜೋತ್ಯಾಜೀ’ ಎಂಬ ಹೆಸರಿಡುವ ಪದ್ಧತಿಯೂ ಉಂಟು. ‘ಜೋತಿಬಾ‘ನ ಉಪಾಸನಾ ಪರಂಪರೆಯಲ್ಲಿ ಕಾಣುವ ‘ಜೋತ್ಯಾಜೀ’ ಎಂಬ ವ್ಯಕ್ತಿ ನಾಮದಿಂದ ಸ್ಪಷ್ಟವಾಗಿ ಸೂಚಿತವಾಗುವುದೇನೆಂದೆರೆ, ‘ಜೋತಿಬಾ’ ಎಂಬ ದೇವರ ನಾಮದಲ್ಲಿನ ಮೂಲರೂಪ ‘ಜ್ಯೋತಿ‘ಯೊಂದಿಗೆ ಸಂಬಂಧಿಸಿದೆ, ‘ಜೋತ’ (ನೇಗಿಲು) ಎಂಬುದರೊಂದಿಗೆ ಸಂಬದ್ಧವಾಗಿರುವುದು.

ಯೋಕ್ತ್ರಮ್ > ಜೋಕ್ಖ > ಜೋಖಡ.
ಯೋಕ್ತ್ರಮ್‌ > ಜೋತ್ತ > ಜೋತ

ಸಮಕಾಲೀನ ಮರಾಠಿಯಲ್ಲಿ ‘ಜೋತ‘ದಿಂದ ರೂಪಗೊಂಡಿರುವ ‘ಜೋತಣೆ’ ಎಂಬ ಕ್ರಿಯಾಪದವನ್ನು ಗಾಡಿ ಮತ್ತು ನೇಗಿಲಿಗೆ ಎತ್ತನ್ನು ಹೂಡುವುದಕ್ಕಾಗಿ ಬಳಸುವ ‘ನೊಗ’ (ಭಾರ) ಎಂಬರ್ಥದಲ್ಲಿ ಬಳಸಲಾಗುತ್ತದೆ. ಹಾಗಾಗಿ ‘ನಾಂಗರ್‘(ನೇಗಿಲು) ಎಂಬರ್ಥದ ‘ಜೋತ’ ಶಬ್ದವನ್ನು ‘ಯೋಕ್ತ್ರ‘ದಿಂದ ವ್ಯುತ್ಪತ್ತಿಗೊಳಿಸಿದ್ದಲ್ಲಿ ತಪ್ಪಾಗುವುದಿಲ್ಲ.

ಪ್ರಸ್ತುತ ನಮಗೆ ಮುಖ್ಯವಾಗಿರುವುದು ‘ಜೋತ’ ಶಬ್ದದ ವ್ಯುತ್ಪತ್ತಿಗಿಂತಲೂ ಅದರ ಅರ್ಥ. ಅದರ ಒಂದು ಅರ್ಥ ನಿರ್ದಿಷ್ಟವಾಗಿ ‘ನೇಗಿಲು’ ಎಂಬುದಾಗಿದೆ. ‘ಜೋತ’ ಶಬ್ದದ ಈ ಅರ್ಥವು ಜೋತಿಬಾನ ಕ್ಷೇತ್ರಪಾಲಕತ್ವದ ಅಥವಾ ಕ್ಷೇತ್ರಪತಿತ್ವದ ಸಾಕ್ಷಾತ್ ನಿದರ್ಶನವಾಗುತ್ತದೆ ಎಂಬುದನ್ನು ಮತ್ತೆ ಸ್ಪಷ್ಟಪಡಿಸಬೇಕಾದ ಅಗತ್ಯವಿಲ್ಲ. ‘ಜ್ಯೋತಿರ್ಲಿಂಗ’ ಎಂಬ ಈ ದೇವರ ಒಂದು ಹೆಸರು ಸ್ಪಷ್ಟವಾಗಿಯೇ ‘ಜೋತ‘ದ ಇಲ್ಲವೆ ‘ಜೋತಲಿಂಗ’ದ ಧ್ವನಿ ಸಾಮ್ಯತೆಯಿಂದ ಸಾಧಿಸಿದ ಕೃತ್ರಿಮ ಸಂಸ್ಕೃತೀಕರಣವಾಗಿದೆ. ಶಿವೋಪಾಸನೆಯ ಕ್ಷೇತ್ರದಲ್ಲಿನ ಜ್ಯೋತಿರ್ಲಿಂಗ – ಕಲ್ಪನೆಯ ಪ್ರತಿಷ್ಠಿತ ಸ್ವರೂಪ – ದೊಂದಿಗೆ ಅದಕ್ಕೆ ಯಾವ ಸಂಬಂಧವೂ ಇಲ್ಲ.

ಲಾಂಗಲ, ಲಿಂಗ, ಲಾಂಗೂಲ ಮತ್ತು ಲಗುಲ

‘ಜೋತಿಬಾ’ ಎಂಬ ಹೆಸರು ಜೋತ(ನೇಗಿಲು)ದ ಸಂಬಂಧಿಯಾಗಿದೆ. ಈ ಸತ್ಯವು ಸಿದ್ಧವಾದ ಮೇಲೆ ಜೋತಿಬಾನ ಕ್ಷೇತ್ರಪಾಲಕತ್ವವನ್ನು ಊಹಿಸುವುದು ಸುಲಭವಾಯಿತು. ನಾಂಗರ (<ಲಾಂಗಲ – ನೇಗಿಲು)ವು ನಿಷಾದ (ಬುಡಕಟ್ಟು) ವಂಶದವರ ದೇಣಿಗೆ ಎಂಬುದನ್ನು ಬಾಷಾ ಶಾಸ್ತ್ರಜ್ಞರು ಸಪ್ರಮಾಣವಾಗಿಯೇ ಸಿದ್ಧಪಡಿಸಿ ತೋರಿಸಿದ್ದಾರೆ. ಸುನೀತಿಕುಮಾರ ಚಟರ್ಜಿ ಎಂಬುವರು ಆಸ್ಟ್ರಿಕ – ವಂಶೀಯರ ಸಾಂಸ್ಕೃತಿಕ ದೇಣಿಗೆಯನ್ನು ಪರಾಮರ್ಶಿಸುವಾಗ್ಗೆ ಹೇಳಿರುವ ಮಾತುಗಳಿಂತಿವೆ – “ಭಾರತಕೀ ಆಸ್ಟ್ರಿಕ ಭಾಷೀ ಉಪಜಾತಿಯಾ, ದಕ್ಷಿಣ ಏಷಿಯಾಯೀಕೆ ವಿಭಾಗ ಕೋಲ, ಖಾಸೀ, ತಥಾ ಮೋನ – ಖ್ಮೇರ ಆದಿ, ಏಕಾಧಿತ ಸಮೂಹೋಂಸೆ ಆಯೀ ಪ್ರತೀತ ಹೋತೀ ಹೈ | ವೇ ಸಂಸ್ಕೃತೀಕೆ ನೂತನ ಪ್ರಸ್ತರ – ಯಗಮೇ ಥೀ ಔರ್ ಸ್ವಭಾವತಃ ಭಾರತಮೇ ಅನೇಕೇ ಪಶ್ಚಾತ್ ಉನ್ಹೋನೆ ತಾಂಬೇ ಏವಂ ಲೋಹೇಕಾ ಉಪಯೋಗ ಕರನಾ ಸೀಖಾ | ಉನ್ಹೋನೆ ಏಕ್ ಆದಿಮ ಪ್ರಕಾರಕೀ ಕೃಷಿ ಪ್ರಣಾಲೀ ವಿಕಸಿತ ಕೀ, ಜಿಸ್‌ಮೇ ಏಕ್ ಖೋದನೇಕೀ ಲಕಡಿಕಾ (ಲಗೂ, ಲಂಗೂ, ಲಿಂಗೂ – ಏಕ್‌ ಪ್ರಾಚೀನ ಶಬ್ದ ಲಕ್ ಕೇ ವಿಭಿನ್ನ ರೂಪ) ಪಹಾಡೀ ಜಮೀನಕೋ ಜೋತನೇಕೇ ಲಿಯೇ ಉಪಯೋಗ ಹೋತಾ ಥಾ | ಪಹಾಡೋಂಕೆ ಉಪರಕೀ ಸಮತಲ ಭೂಮಿಪರ್ ತಥಾ ಮೈದಾನೋಮೇ ಚಾವಲಕೀ ಖೇತೀಕಾ ಪ್ರಾರಂಭ ಅಧಿಕಾಂಶತಃ ಉನ್ಹೀನೆ ಕಿಯಾ |”[2] ಸುನೀತಿಕುಮಾರರು ಸ್ಪಷ್ಟಪಡಿಸಿರುವಂತೆ, ಆಸ್ಟ್ರೀಕ್ ವಂಶೀಯ ಜನರು ವಿಶಿಷ್ಟ ಪ್ರಕಾರದ ಕೋಲಿನಿಂದ ಜಮೀನನ್ನು ಉತ್ತು ಬೀಜವನ್ನು ಬಿತ್ತುತ್ತಿದ್ದರು. ಈ ಕ್ಷೇತ್ರ ಸಂಯೋಗಿ ಕೋಲಿನ ಸಂಕೇತವಾಗಿ ಅವರು ‘ಲಕ್’ ಎಂಬ ಪ್ರಾಚೀನ ಆಸ್ಟ್ರಿಕ್ ಶಬ್ದವನ್ನು ಉಲ್ಲೇಖಿಸಿದ್ದಾರೆ. ಆ ಶಬ್ದದಿಂದ ರೂಪುಗೊಂಡ ಲಗ್, ಲಂಗ್, ಲಿಂಗ್ ಎಂಬ ರೂಪಗಳನ್ನುಉಲ್ಲೇಖಿಸಲಾಗಿದೆ. ಸಂಸ್ಕೃತದಲ್ಲಿ ಕೋಲಿಗೆ ಲಕುಟ, ಲಗುಡ ಎಂಬ ಶಬ್ದಗಳಿದ್ದು ಅವು ಆಸ್ಟ್ರೀಕ್‌ನ ‘ಲಕ್‘ನೊಂದಿಗೆ ಸಂಬಂಧಿಸಿದುವುಗಳಾಗಿವೆ. ಬೀಜವಪನ(ಬಿತ್ತುವಿಕೆ)ಕ್ಕಾಗಿ ಜಮೀನನ್ನು ಉಳುಮೆ ಮಾಡುವಂತಹ ಈ ಕೋಲು (Digging stic) ನಾಂಗರ (<ಲಾಂಗಲ – ನೇಗಿಲು)ದ ಉತ್ಕ್ರಾಂತಿಗೆ ಕಾರಣವಾಯಿತು. ಲಗುಲ (ಬೀಜವಪನಕ್ಕಾಗಿ ಭೂಮಿಯನ್ನು ಉಳುವ ಕೋಲು), ಲಾಂಗಲ (ನಾಂಗರ – ನೇಗಿಲು), ಲಾಂಗುಲ (ಪಶುವಿನ ಬಾಲ) ಮತ್ತು ಲಿಂಗ (ನರರ ಜನನೇಂದ್ರಿಯ) ಈ ಎಲ್ಲ ಶಬ್ದಗಳು ಪರಸ್ಪರ ಸಹೋದರ ಸಂಬಂಧಿಗಳಾಗಿದ್ದು, ಅವೆಲ್ಲವೂ ಬಹುತೇಕ ಪ್ರತ್ಯಕ್ಷಾಪ್ರತ್ಯಕ್ಷವಾಗಿ ‘ಕ್ಷೇತ್ರದಲ್ಲಿ ಬೀಜವಪನ’ ಮಾಡುವ ಕ್ರಿಯೆಗೆ ಸಂಬಂಧಿಸಿದುವಾಗಿವೆ. ಈ ಸಂದರ್ಭದಲ್ಲಿ ಪ್ರಸಿದ್ಧ ಭಾಷಾಶಾಸ್ತ್ರಜ್ಞರ ಸಂಶೋಧನೆಯನ್ನು ಆಧರಿಸಿ ಲಾಂಗಲ, ಲಾಂಗೂಲ ಮತ್ತು ಲಿಂಗ ಇವುಗಳ ಮೂಲದ ಬಗ್ಗೆ ಹಾಗೂ ಅರ್ಥಸಾಮ್ಯತೆಯ ಬಗ್ಗೆ ಶ್ರೀಶಿವಶೇಖರ ಮಿಶ್ರ ಎಂಬುವವರು ವಿವೇಚಿಸಿದದಾರೆ. ಮೋನ – ಖ್ಮೇರ ಮತ್ತು ಅನಾಮಾಇಟ ಭಾಷೆಗಳಲ್ಲಿ ಈ ಶಬ್ದಗಳ ಮೂಲ ಸ್ವರೂಪವೇನಿತ್ತು ಎಂಬುದನ್ನು ಗುರುತಿಸಿದ ಶ್ರೀಮಿಶ್ರ ಅವರು ಹೀಗೆ ಹೇಳುತ್ತಾರೆ: “ಲಾಂಗೂಲಮ್ ಶಬ್ದಕಾ ಭಾರತೀಯ ಆರ್ಯಮೇ ಕೋಈ ಶಬ್ದ ಸಾಧನ ನಹೀ ಹೈ |..ಅತಃ ಹಮೇ ಯಹೀ ಮಾನನಾ ಪಡೇಗಾ ಕೀ ಲಾಂಗೂಲಮ್ ಶಬ್ದ ವೈದಿಕ್ ಕಾಲಸೇ ಪೂರ್ವಕೀ ಆರ್ಯೇತರ ಜಾತಿಯೋಂಸೇ ಗ್ರಹಣ ಕಿಯಾಗಯಾ ಹೈ |…‘ಹಲ‘ಕೇ ಅತಿರಿಕ್ತ ಸಂಸ್ಕೃತಕಾ ‘ಲಾಂಗೂಲಮ್’ ಶಬ್ದ ‘ಲಿಂಗ’ ಕಾ ನಾಮ್ ಭೀ ರಖತಾ ಹೈ | ಇಸೇಕೇ ವಿಪರೀತ, ವಿಶೇಷತಃ ಸೂತ್ರೋ ತಥಾ ಮಹಾಭಾರತಮೇ ಲಾಂಗೂಲ ರೂಪ ಮಿಲತಾ ಹೈ, ಜೋ ‘ಲಿಂಗ’ ತಥಾ (ಪಶುಕೀ) ‘ಪೂಂಭ’ ದೋನೋ ಅರ್ಥೋಮೆ ಮಾಯಾ ಜಾತ ಹೈ | ಯದಿ ಲಾಂಗಲ – ಲಾಂಗೂಲಕೀ ಸಮತಾ ಅಧಿಕೃತ ಹೈ, ತೋ ಶಬ್ದಕಾ ವಿಕಾಸ ಸರಲತಾಸೆ ಸ್ಪಷ್ಟ ಹೋ ಜಾಯಗಾ | ‘ಲಿಂಗ’ ಸೇ ಬಿನಾ ಕಠಿನಾ ಈ ಸೇ ‘ಹಲ’ ತಥಾ ‘ಪೂಂಭ’ ಕಾ ಅರ್ಥ ಪ್ರಾಪ್ತ ಹೋ ಸಕತಾ ಹೈ | ಭೋಗಕೀ ಕ್ರಿಯಾ ತಥಾ ಹಲಚಲಾನೇಕೀ ರೀತಿಮೇ (ಜಿಸಕೇ ದ್ವರ ಬೀಜ ಡಾಲನೇಕೇ ಲಿಯೇ ಭೂಮಿ ಕೋದೀ ಜಾತೀ ಹೈ) ಸ್ಪಷ್ಟ ಸಾದೃಶ್ಯ ಹೈ |….”

“ಕದಾಚಿತ್ ಯಹ ಬಾತ್ ವಿಚಿತ್ರ ಪ್ರತೀತ ಹೋ ಕಿ ಭಾರತೀಯ – ಆರ್ಯನೇ ಆಗ್ನೇಯ ದೇಶೀ ಭಾಷವೋಂಸೇ ಇತನೇ ಶಬ್ದ ಗ್ರಹಣ ಕಿಯೇ ಹೈ | ವಿಭಿನ್ನ ಪರಿಸ್ಥಿತಿಯೋಂಕೆ ಕಾರಣ್ ಯಹ ಪರಿಣಾಮ ಹುಆ ಹೈ | ಕುಛ್ ಆಗ್ನೇಯ ದೇಶೀ ಜಾತಿಯಾಂ ಆಜ್ ಭೀ ಖೇತ್ ಜೋತನೇಕೆ ಲಿಯೆ ‘ಹಲ್’ ಕಾ ಪ್ರಯೋಗ ನಹೀ ಕರತೀ ಹೈ, ವರನ್ ಏಕ್ ಸಾಧಾರಣ ನೋಕದಾರ ಛಡಿಕಾ ಪ್ರಯೋಗ ಕರತೀ ಹೈ. ಜೀಸಕೇ ವೇ ಛಿದ್ರ ಬನಾನೇಕಾ ಕಾಂ ಲೇತೀ ಹೈ, ಜಿಸ್‌ಮೇ ಬೀಜ ರಖ್ ದೇತೀ ಹೈ | ವಹಾಂ ಲಿಂಗ ತಥಾ ಖೇತಿ ಕರನೇಕೇ ಯಂತ್ರಮೇ ಸಾದೃಶ್ಯ ಇತನಾ ಸ್ಪಷ್ಟ ಹೈ ಕೀ ಜಿತನಾ ಸಂಭವ ಹೋಸಕತಾ ಹೈ | ಪ್ರೊಫೆಸರ್ – ಯುಗಲ್ ಹ್ಯೂಬರ್ಟ್‌ ತಥಾ ಮಾಸನೇ ಯಹ ಸಂಕೇತ ಕಿಯಾ ಹೈ ಕಿ ಪಪುವಾದ್ವೀಪ ತಥಾ ಸಾಗರದ್ವೀಪ ಮೇ ಖೇತಿ ಕರನೇಕಿ ಛಡೀ ಪ್ರಾಯಃ ಲಿಂಗಾಕಾರ ಹೋತೀ ಹೈ | ಕುಛ್ ಸಾಗರದ್ವೀಪಿ ಭಾಷಾವೋಮೇ ಏಕ್ ಹೀ ಶಬ್ದ ‘ಲಿಂಗ’ ತಥಾ ‘ಖೋದನೇಕೀ ಛಡೀ’ ಕಾ ನಾಮ ಹೋತಾ ಹೈ | ಸಂಭವ ಹೈ ಕಿ ಭಾರತಕೇ ಆದಿಮ ನಿವಾಸೀ ಸಬಸೇ ಪೂರ್ವ ಇಸ್ ಛಡೀಕಾ ಪ್ರಯೋಗ ಜಾನತೇ ಹೋಂ | ಔರ್ ‘ಹಲ್‘ಕೇ ಆವಿಷ್ಕಾರ್‌ಕೇ ಪಶ್ಚಾತ್ ಭೀ ಮಿಟ್ಟಿ ಖೋದನೇವಾಲೆ ಯಂತ್ರಕೇ ನಾಮ್‌ಮೇ ಪರಿವರ್ತನ್ ನಹೀ ಹುಆ |…

“ದೂಸರೀ ಓರ್, ಲಿಂಗ – ಉಪಾಸನಾಯೇಂ, ಜಿನ್‌ಕಾ ಮಹತ್ವ ಹಮ್ ಹಿಂದ್ ಚೀನ್‌ಕೇ ಪ್ರಾಚೀನ ಧರ್ಮೋಮೇ ಪಾತೇ ಹೈ, ಸಾಧಾರಣತಯಾ ಭಾರತೀಯ ಶೈವ ಮತಸೇ ಗೃಹೀತ ಸಮಝೀ ಜಾತೀ ಹೈ | ಅಧಿಕ ಸಂಭವ ಪೈಕಿ ಆರ್ಯೋನೆ ಭಾರತಕೇ ಆದಿಮ ನಿವಾಸಿಯೋಂಸೇ ಲಿಂಗಕೀ ಉಪಾಸನಾ ತಥಾ ಮೂರ್ತಿ ಕಾ ನಾಮಗ್ರಹಣ್ ಕಿಯಾ ಹೋ | ಯೇ ಪ್ರಚಲಿತ ರೀತಿಯಾಂ, ಜಿನಸೇ ಬ್ರಾಹ್ಮಣ ಲೋಕ್ ಘೃಣಾ ಕರತೇ ಥೇ, ಪ್ರಾಚೀನ ಕಾಲಮೇಂ ಅಧಿಕ ಪ್ರಸಿದ್ಧ ನ ಥೀ | ಯದಿ ಹಮ್ ಅಚ್ಛೀ ತರಹ ಸಮಝನೇಕಾ ಪ್ರಯತ್ನ ಕರೇ, ತೋ ಸಂಭವತಃ ಜಾನ್ ಸಕತೇ ಹೈ ಕಿ ಲಿಂಗ ಕೇ ಪರಿವಾರಕೇ ಇತನೇ ಆರ್ಯೇತರ ಶಬ್ದೋಂಕಾ ಪ್ರವೇಶ ವಿಜೇತಾವೋಂಕೀ ಭಾಷಾಮೇ ಕ್ಯೋಂ ಹೋ ಗಯಾ ಹೈ |”[3]

ವಿಸ್ತಾರದ ದೋಷವನ್ನು ಪರಿಗಣಿಸಿಯೂ ಈ ಪ್ರದೀರ್ಘ ಉದ್ಧರಣೆಯನ್ನು ಉದ್ಧೃತಗೊಳಿಸುವುದರ ಉದ್ದೇಶವನ್ನು ವಾಚಕರಿಗೆ ಹೇಳಬೇಕಾದ ಅಗತ್ಯ ಕಾಣುವುದಿಲ್ಲ. ಲಾಂಗಲ, ಲಿಂಗ ಮತ್ತು ಲಗುಲ ಈ ಶಬ್ದಗಳ ಏಕ ಮೂಲತ್ವ ಮತ್ತು ಏಕಾರ್ಥವನ್ನು ಸ್ಪಷ್ಟಗೊಳಿಸುವುದಕ್ಕಾಗಿ ಅಧಿಕೃತ ಭಾಷಾ ವಿಶಾರದರು ನೀಡಿರುವ ನಿರ್ಣಾಯಕ ಚರ್ಚೆಯನ್ನು ಗಮನಿಸುವುದು ಅವಶ್ಯಕ. ಈ ಚರ್ಚೆಯ ಹಿನ್ನೆಲೆಯಲ್ಲಿ ‘ಜೋತಿಬಾ’ ಎಂಬ ದೇವನಾಮದಲ್ಲಿನ ಲಿಂಗಾರ್ಥಕ ‘ಜೋತ’ ಎಂಬ ಶಬ್ದದ ಮಹತ್ವವು ಅನನ್ಯ ಸಾಧಾರಣವಾದುದು. ‘ಜೋತಿಬಾ’ ಎಂಬ ಹೆಸರೇ ಆ ದೇವರ ಕ್ಷೇತ್ರಪತಿತ್ವವನ್ನು ಸಾಕ್ಷಾತ್ತಾಗಿ ಸಿದ್ಧಪಡಿಸುವಂತಹದ್ದಾಗಿದೆ.

ಕೇದಾರ, ಕೇದಾರನಾಥ, ಕೇದಾರಲಿಂಗ

ಜೋತಿಬಾನನ್ನು ‘ಕೇದಾರ’ ಎಂಬ ಸಂಕ್ಷಿಪ್ತ ಹೆಸರಿನಲ್ಲಿ ಅನೇಕ ಬಾರಿ ಸಂಬೋಧಿಸುತ್ತಿರುವುದುಂಟು. ಉಪಾಸಕರಿಗೆ ಮಾತ್ರ ಇದು ಅಭಿಪ್ರೇತವಾಗುವುದು ‘ಕೇದಾರನಾಥ’, ‘ಕೇದಾರೇಶ್ವರ’ ಅಥವಾ ‘ಕೇದಾರಲಿಂಗ’ ಎಂಬುದಾಗಿ. ಈ ಹೆಸರಿನ ಉಚ್ಚಾರವನ್ನು ‘ದಕ್ಷಿಣ ಕೇದಾರ’ ಅಥವಾ ‘ದಕ್ಷಿಣಪತಿ ಕೇದಾರ’ ಎಂಬ ದಿಶಾ ವಿಶೇಷದೊಂದಿಗೆ ನಿತ್ಯ ಹೇಳಲಾಗುತ್ತದೆ. ಹೀಗೆ ಹೇಳುವಾಗ ಭಕ್ತರ ದೃಷ್ಟಿಯೆದುರು ಒಬ್ಬ ‘ಉತ್ತರಪತಿ ಕೇದಾರನಾಥ’ ನಿರುತ್ತಾನೆ. ಹಿಮಾಲಯದಲ್ಲಿ ವಿರಾಜ ಮಾನನಾಗಿರುವವನು ಆತ. ದೈತ್ಯ ವಧೆಯ ನಿಮಿತ್ತವಾಗಿ ದಕ್ಷಿಣದಲ್ಲಿ ಆತ ಅವತರಿಸಿ. ಭಕ್ತರ ಇಚ್ಛಾನುಸಾರ ಇಲ್ಲಿಯೇ ನೆಲೆಸಿದ ಎಂಬುದಾಗಿ ಅವನ ಅವತಾರ ಕಥೆಯಿರುವುದನ್ನು ವಿವರಿಸಲಾಗಿದೆ ಈಗಾಗಲೇ. ಇದು ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. ಹಿಮಾಲಯದಲ್ಲಿನ ಕೇದಾರನಾಥ. ಜೋತಿಬಾನ ‘ಜೋತಿಬಾ’ ಎಂಬ ಮರಾಠಿ ಅಥವಾ ‘ಜ್ಯೋತಿರ್ಲಿಂಗ’ ಎಂಬ ಸಂಸ್ಕೃತ ಹೆಸರನ್ನು ಆ ಹಿಮಾಲಯಸ್ಥ ಕೇದಾರನಾಥನ ಅನುಷಂಗತೆಯಿಂದ ಸ್ಪಷ್ಟಗೊಳಿಸುವ ಮೋಹ ಕೇವಲ ಭಕ್ತರಿಗಷ್ಟೆ ಅಲ್ಲ, ಅಧ್ಯಯಯನಕಾರರಲ್ಲೂ ಬರುವುದು ಸಹಜ. ‘ಜ್ಯೋತಿರ್ಲಿಂಗ’ ಎಂಬುದು ‘ಜ್ಯೋತಿ‘ಯ ಸಂಬದ್ಧವಾಗಿರದೆ, ‘ಜೋತ’ (ನೇಗಿಲು) ಎಂಬುದರೊಂದಿಗೆ ಸಂಬಂಧಿಸಿದ್ದಾಗಿದೆ ಎಂಬುದು ಈಗಾಗಲೇ ಚರ್ಚಿಸಲಾಗಿರುವ ಸಂಗತಿ. ‘ಜೋತಲಿಂಗ’ (ಲಾಂಗಲ+ಲಿಂಗ) ಎಂಬ ಶಬ್ದವು ಅನುವಾದಿತ ಸಮಾಸ ಪದದಂತಿದ್ದು ಅದರಲ್ಲಿನ ಲಾಂಗಲ ಮತ್ತು ಲಿಂಗ ಇವುಗಳ ಏಕಾರ್ಥಕತ್ವದ ಧೋರಣೆಯು ಸ್ಥಾಪಿತವಾದುದೇ ಹೌದು. ಇದು ಜೋತಿಬಾನ ಕ್ಷೇತ್ರಪಾಲಕತ್ವ ಮತ್ತು ಕ್ಷೇತ್ರಪತಿತ್ವಕ್ಕೆ ಸಂಪೂರ್ಣ ಸಂವಾದಿಯಾದುದಾಗಿದೆ.

ಜೋತಿಬಾನ ಕ್ಷೇತ್ರಪತಿ, ಕ್ಷೇತ್ರಪಾಲಕತ್ವದ ಸ್ವರೂಪವನ್ನು ಸದಾ ದೃಷ್ಟಿಯಲ್ಲಿಟ್ಟುಕೊಂಡೇ ಅವನಿಗೆ ಸಂಬಂಧಿಸಿದ ಕಥೆ – ಗಾಥೆಗಳು, ನಾಮ – ರೂಪಗಳು ಮತ್ತು ಉಪಾಸನಾ – ವಿಶೇಷಗಳನ್ನು ವಿಶ್ಲೇಷಿಸುವುದು ಅವಶ್ಯ. ಈ ಸೂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಕೇದಾರಲಿಂಗ’ ಅಥವಾ ‘ಕೇದಾರನಾಥ’ ಎಂಬ ಜೋತಿಬಾನ ಹೆಸರನ್ನು ಕುರಿತು ವಿಚಾರ ಚರ್ಚೆಗೆ ತೊಡಗಿದರೆ, ಅವನ ರಹಸ್ಯ ನಮ್ಮೆದುರು ತಂತಾನೆ ಬಿಚ್ಚಿಕೊಳ್ಳುತ್ತದೆ.

ಕೇದಾರಲಿಂಗ ಅಥವಾ ಕೇದಾರನಾಥ ಎಂಬ ಹೆಸರುಗಳಲ್ಲಿನ ‘ಲಿಂಗ’ ಮತ್ತು ‘ನಾಥ’ ಎಂಬ ಉತ್ತರ ಪದಗಳು ಜೋತಿಬಾನ ಕ್ಷೇತ್ರಪತಿತ್ವದೊಂದಿಗೆ ಪುರುಷ ತತ್ತ್ವವಾಗಿ ಇರುವುದು ಅವನ ಪ್ರತಿಷ್ಠೆಗೆ ಸಂಬಂಧಿಸಿದ್ದೇ ಆಗಿದೆ. ಅರ್ಥಾತ್ ಈ ‘ಲಿಂಗ’ ವು ವಿಶ್ವಸೃಷ್ಟಿಯ ಮಹಾ ಯೋನಿಯೊಂದಿಗೆ ಸಂಬಂಧ ಹೊಂದಿರುವಂಥದು. ಅದು ನಿರ್ದೇಶಿತವಾಗುತ್ತಿರುವುದು ‘ಕೇದಾರ’ ಎಂಬ ಪದದಿಂದ; ಇಲ್ಲವೆ ಜೋತಿಬಾನು ಯಾರ ‘ನಾಥ’ (ಅರ್ಥಾತ್ ಪತಿ) ನಾಗಿರುವನೋ, ಆ ಕ್ಷೇತ್ರ ‘ಕೇದಾರ’ ಎಂಬ ಪದದಿಂದ ನಿರ್ದಿಷ್ಟವಾಗಿರಬೇಕು. ಕ್ರಮಾನುಗತವಾದ ಈ ಅನುಮಾನವು ಸಹಜವಾಗಿಯೇ ಸತ್ಯವನ್ನು ಪ್ರತಿಷ್ಠಾಪಿಸುವುದು. ಎಲ್ಲ ಸಂಸ್ಕೃತಿ ಕೋಶಕಾರರೂ ‘ಕೇದಾರ’ ಎಂಬ ಶಬ್ದವು ‘ಕ್ಷೇತ್ರ’ ವಾಚಕವಾದುದೆಂದು ನಿಃಸಂದಿಗ್ಧವಾಗಿ ದೃಢಿಕರಿಸಿದ್ದಾರೆ. ಮಾತ್ರವಲ್ಲ, ‘ಕೃಷಿ ಪರಾಶರಾ‘ದಂಥ ಕೃಷಿ ಸಂಬಂಧವಾದ ಪ್ರಾಚೀನ ಕೃತಿಯಲ್ಲಿಯೂ ‘ಕ್ಷೇತ್ರ‘ಕ್ಕೆ ಸರ್ವತ್ರ ‘ಕೇದಾರ’ ಎಂಬ ಸಂಕೇತವನ್ನೇ ಬಳಸಿರುವುದನ್ನು ಕಾಣಬಹುದು.[4]

ಕೃಷಾಣಸಾರಕೇದಾರವೃಷನೀರದಸಂಚಯಾಃ |
ಸರ್ವೇ ತೇ ವಂಧ್ಯತಾಂ ಯಾಂತಿ ಬೀಜೇ ವಂಧ್ಯತ್ವಮಾಗತೇ ||

ನ ಫಲಿಂತ ದೃಢಾಃ ಸರ್ವೇ ಬೀಜಾಃ ಕೇದಾರಸಂಸ್ಥಿತಾಃ ||

ತತೋ ಮಾರ್ಗೇ ತು ಸಂಪ್ರಾಪ್ತೇ ಕೇದಾರೇ ಶುಭವಾಸರೇ |
ಧಾನ್ಯಸ್ಯ ಲವನಂ ಕುರ್ಯಾತ್ ಸಾರ್ದ್ಧಮುಷ್ಟಿದ್ವಯಂ ಶುಚಿಃ ||
(ಕೃಷಿ ಪರಾಶರ, ೧೬೬,೧೮೪,೨೦೬)

‘ಕೇದಾರ’ ಎಂಬ ಶಬ್ದಕ್ಕೆ ‘ಕ್ಷೇತ್ರ’ ಎಂಬ ಅರ್ಥವೇ ಇರುವುದರಿಂದ ‘ಕೇದಾರಲಿಂಗ’ ಅಥವಾ ‘ಕೇದಾರನಾಥ’ ಎಂಬ ಹೆಸರುಗಳಿಂದಲೂ ಕ್ಷೇತ್ರಪತಿ ಎಂಬುದೆ ವೇದ್ಯವಾಗುತ್ತದೆ. ಅದಲ್ಲದೆ ‘ಜೋತ‘ – ಸ್ವರೂಪಿ (ಲಾಂಗಲ ಸ್ವರೂಪಿ) ಜೋತಿಬಾನಿಗೆ ‘ಕೇದಾರ’ ಎಂದು ಹೇಳುತ್ತಿರುವುದು ಕೂಡ ಪೂರ್ಣತಃ ಕ್ಷೇತ್ರದ ನಾಥ ಎಂಬರ್ಥದಿಂದಲೇ.

‘ಕೇದಾರ ಕವಚಾ‘ದಲ್ಲಿ ‘ಭಾಲಂಮೇ ರಕ್ಷಾ ಭಗವಾನ್, ಭ್ರೂಮಧ್ಯೆ ಮೇದಿನೀ ಪತಿಃ |’ (ಶ್ಲೋಕ.೫) ಜೋತಿಬಾನನ್ನು ‘ಮೇದಿನಿಪತಿ’ ಯೆಂಬ ಅರ್ಥದಲ್ಲಿ ವಿಶ್ಲೇಷಿಸಲಾಗಿದೆ. ಜೋತಿ ಬಾನು ಪೃಥ್ವಿಯ ಪತಿ; ಆತನೇ ಅವಳ ಉದರದಲ್ಲಿ ಬೀಜವಪನ ಮಾಡಿ ಅವಳನ್ನು ಸೃಷ್ಟಿ ಗರ್ಭಳನ್ನಾಗಿಸುತ್ತಾನೆ. ಈ ಸಂಗತಿಯು ಅವನನ್ನು ಕುರಿತ ಉಪಾಸನಾ ಸಾಹಿತ್ಯದಲ್ಲಿ ಮತ್ತೆ ಮತ್ತೆ ಬರುತ್ತದೆ – ಒಂದೇ ಸತ್ಯವನ್ನು ಪುಷ್ಟಿಗೊಳಿಸುವ ಬೇರೆ ಬೇರೆ ಸ್ವರೂಪಗಳಲ್ಲಿ.

ರೇಣುಕಾನಾಥ ಜಮದಗ್ನಿ

‘ಕೇದಾರ ಕವಚಾ’ ಮತ್ತು ‘ರವಳನಾಥಸ್ತವರಾಜ’ ಎಂಬ ಸ್ತೋತ್ರಗ್ರಂಥಗಳಲ್ಲಿ ಜೋತಿಬಾನನ್ನು ಜಮದಗ್ನಿ, ಏಕವೀರಾಪತಿ ಹಾಗೂ ರೇಣುಕಾನಾಥ ಎಂಬ ಹೆಸರುಗಳಿಂದ ಉಲ್ಲೇಕಿಸಲಾಗಿದೆ:

ದೇವಂ ದಕ್ಷಿಣಕೇದಾರಂ ರತ್ನಾಚಲನಿವಾಸಿನಮ್ |
ಜಮದಗ್ನಿಮಹಂ ವಂದೇ ರವಲೇಶಮಭೀಷ್ಟಢಮ್ ||

ಏಕವೀರಾಪತಿಂ ಸೌಮ್ಯಂ ಜ್ಯೋತಿರ್ಲಿಂಗ ಪರಂತಪಮ್ |
ರವಲಾಖ್ಯಂ ಮಹಾಭಾಗಂ ವಂದೇ ಭಕ್ತಾರ್ತಿನಾಶನಮ್ ||

ತ್ರಿಶೂಲಂ ಡಮರುಂ ಖಡ್ಗಂ ಪಾತ್ರ ಚ ಕರಪಂಕಜೈಃ |
ವಿಭ್ರಮಣಂ ರೇಣುಕಾನಾಥಂ ವಂದೇ ತಂ ರವಲೇಶ್ವರಮ್ ||
(ರವಲನಾಥಸ್ತೋತ್ರರಾಜಃ)

ಶಿಖಾಯಾಂ ರೇಣುಕಾನಾಥೋ ಮಸ್ತಕೇ ಭಾಲಲೋಚನಃ |
ಭಾಲಂ ಮೇ ರಕ್ಷ ಭಗವನ್ ಭ್ರೂಮಧ್ಯೇ ಮೇದಿನೀಪತಿಃ ||
(ಕೇದಾರಕವಚಮ್)

ಜೋತಿಬಾನನ್ನು ಏಕವೀರಾ ಅಥವಾ ರೇಣುಕೆಯ ಪತಿ ಎಂಬುದಾಗಿ ಒಪ್ಪಿ ಜಮದಗ್ನಿಯೊಂದಿಗೆ ಅವನ ಏಕರೂಪತೆಯನ್ನು ಉದ್ಘೋಷಿತಗೊಳಿಸುವ ಈ ಉಪಾಸನಾ – ಸಾಹಿತ್ಯದಲ್ಲಿನ ಉಲ್ಲೇಖ ಚಿಂತನಾರ್ಹವಾದುದು. ಜೋತಿಬಾನ ಕಥೆ – ಗಾಥೆಗಳನ್ನು ಪರಿಚಯ ಮಾಡಿ ಕೊಳ್ಳುವಾಗ ನಮಗೀಗಾಗಲೇ ತಿಳಿದಿರುವುದೇನೆಂದರೆ, ರತ್ನಾಗಿರಿಯ ಮೇಲೆ ಜೋತಿಬಾ ಮತ್ತು ಯಮಾಯಿಯರ ವಿವಾಹ ಉತ್ಸವದ ತಯಾರಿ ಪ್ರತಿವರ್ಷವೂ ನಡೆಯುತ್ತದೆ ಎಂಬುದು; ಜೋತಿಬಾನ ಪಲ್ಲಕ್ಕಿಯು ವಿವಾಹ ನಿಮಿತ್ತ ಯಮಾಯಿಯ ಮಂದಿರಕ್ಕೆ ಬರುತ್ತದೆ; ಆದರೆ ಯಮಾಯಿಯು ತನ್ನ ಬಾಗಿಲನ್ನು ಭದ್ರಪಡಿಸಿಕೊಂಡು ವಿವಾಹ ವಿಧಿಯನ್ನು ನಿರಾಕರಿಸುತ್ತಾಲೆ. ವಿವಾಹವಿಧಿ ನಿರಾಕರಣೆಯ ವಿಚಾರವನ್ನು ಬದಿಗಿಟ್ಟು, ಕಥೆಯನ್ನು ಮಾತ್ರ ನೋಡಬಹುದು ನಾವು. ಈ ಕಥೆಯಲ್ಲಿ ಯಮಾಯಿಯು ಜೋತಿಬಾನ ನಿಯತ ಪತ್ನಿ ಎಂಬ ಕಲ್ಪನೆಯು ಅನುಸ್ಯೂತ(ನಿರಂತರ)ವಾಗಿದೆ. ಯಮಾಯಿ ಅಥವಾ ಯಲ್ಲಮ್ಮಾ ಈ ದೇವಿಯದ್ದೇ ಏಕವೀರ ಮತ್ತು ರೇಣುಕಾ ಎಂಬ ಪರ್ಯಾಯ ನಾಮಗಳು.ಇದಕ್ಕೆ ದೇವಿಯ ಕಥೆ – ಗಾಥೆಗಳಲ್ಲಿ ಮತ್ತು ಉಪಾಸನಾ ಸಾಹಿತ್ಯದಲ್ಲಿಯೂ ಅನೇಕ ಪುರಾವೆಗಳಿವೆ. ಆಂಧ್ರಪ್ರದೇಶದಲ್ಲಿ ಅವಳನ್ನು ಪೂಜಿಸುವುದು ಹುತ್ತದ ರೂಪದಲ್ಲಿ. ಹುತ್ತವು ಪೃಥ್ವಿಯ ಯೋನಿ ಅಥವಾ ಗರ್ಭಾಶಯದ ಪ್ರತೀಕ. ‘ಪೋಟ್ಟು’ ಎಂಬ ದಕ್ಷಿಣ ಭಾರತೀಯ ಭಾಷೆಗಳಲ್ಲಿನ ಶಬ್ದಕ್ಕೆ ‘ಹೊಟ್ಟೆ’ ಮತ್ತು ‘ಹುತ್ತ’ ಎಂಬ ಎರಡು ಅರ್ಥಗಳಿವೆ. ‘ರೇಣುಕಾ’ ಎಂಬ ಹೆಸರು (ರೇಣು+ಕಾ) ರೇಣುಮಯಿ ಎಂಬ ಅರ್ಥದಿಂದ ಹುತ್ತದ ಸೂಚಕವೇ ಆಗಿದೆ. ಅಂದರೆ ಯಮಾಯಿ, ಯಲ್ಲಮ್ಮಾ, ಏಕವೀರಾ, ರೇಣುಕಾ – ಇತ್ಯಾದಿ ಹೆಸರುಗಳಿಂದ ದಕ್ಷಿಣ ಭಾರತದಲ್ಲಿ ಉಪಾಸನಾ ದೇವತೆಯಾಗಿರುವ ಈ ದೇವಿ ಭೂದೇವಿಯೇ ಹೌದು. ಎಂತಲೇ ಜಮದಗ್ನಿ, ಏಕವೀರಾಪತಿ ಮತ್ತು ರೇನುಕಾನಾಥ ಎಂಬ ಜೋತಿಬಾನ ಹೆಸರುಗಳು ಅವನ ‘ಮೇದಿನೀಪತಿ’ ಎಂಬ ಹೆಸರಿಗೆ ಪೂರ್ಣ ಸಂವಾದಿಗಳಾಗಿದ್ದು, ಅವನ ಕ್ಷೇತ್ರಪತಿತ್ವವನ್ನು ಸ್ಪಷ್ಟಗೊಳಿಸುವುವೇ ಆಗಿವೆ.[5] ಮಾಧವ ಎಂಬ ಮರಾಠಿ ಭಕ್ತನೊಬ್ಬ ರಚಿಸಿದ ಜ್ಯೋತಿರ್ಲಿಂಗಾಷ್ಟಕಾದಲ್ಲಿ ಜೋತಿಬಾನನ್ನು ‘ಜಮದಗ್ನಿ – ಅವತಾರ’ ಎಂದು ಹೇಳಿರುವನು:

ಯಾರಹರೊ ಜಮದಗ್ನಿಅವತಾರ ಉದಾರ ಕ್ರೂರಾಂ |
ಯಾರ ಭಯವು ಸದಾ ಅಸುರರಿಗೆ ಇಹುದೊ ತ್ರಿಭುವನದೊಳು ||
ದಾಸರನು ರಕ್ಷಿಸುತ ಸದಾ ನೀಡಿಹುದೊ ಮುಕುತಿ ಪಾದಂಗಳಲಿ |
ಶ್ರೀ ಜ್ಯೋತಿರ್ಲಿಂಗ ಸ್ಮರತಾಂ ಭವದುಃಖ ನಾಶೀ ||

ಜೋತಿಬಾಯಮಾಯಿಯರ ವಿವಾಹ ಕಥೆ

ಜೋತಿಬಾ ಮತ್ತು ಯಮಾಯಿಯರ ವಿವಾಹ ಧಾರ್ಮಿಕ ವಿಧಿಯು ಪ್ರತಿ ವರ್ಷದಲ್ಲಿ ಚೈತ್ರ ಪೌರ್ಣಮಿಯಂದು ರತ್ನಾಗಿರಿಯ ಮೇಲೆ ಜರುಗತ್ತದೆ. ಜೋತಿಬಾನ ಪಲ್ಲಕ್ಕಿಯು ವೈಭವಯುತವಾಗಿ ಯಮಾಯಿಯ ಮಂದಿರಕ್ಕೆ ಬಂದೊಡನೆ ಆ ಮಂದಿರದ ಬಾಗಿಲು ಮುಚ್ಚಿ ಕೊಳ್ಳುವುದು. ನಂತರ ಅವಳೆದುರು ಕಟಾರಿ(ಕಿರುಗತ್ತಿ)ಯೊಂದನ್ನು ಇಟ್ಟು ಅದರೊಂದಿಗೇ ಜರುಗಿಸಲಾಗುತ್ತದೆ ಅವಳ ವಿವಾಹವನ್ನು.

ಯಮಾಯಿಯು ಜೋತಿಬಾನನ್ನು ವಿವಾಹವಾಗಲು ನಿರಾಕರಿಸುವ ಕಥೆಯನ್ನು ಸ್ಪಷ್ಟೀಕರಿಸುವ ಅನೇಕ ಪ್ರಯತ್ನಗಳು ನಡೆದಿವೆ ಪ್ರಾಚೀನ ಹಾಗೂ ನವೀನ ವಿದ್ವಾಂಸರಲ್ಲಿ. ಇವರಲ್ಲಿ ಅನೇಕರಿಗೆ ಜೋತಿಬಾ ಮತ್ತು ಯಮಾಯಿಯರ ಸಂಬಂಧವೇ ಅಮಾನ್ಯ. ಜೊತೆಗೆ ಆತ ಮದುವೆಗೆಂದು ಯಮಾಯಿಯ ಬಳಿಗೆ ಹೋಗುವ ಪಾರಂಪರಿಕ ವಿಚಾರವೂ ಒಪ್ಪಿತವಲ್ಲ. ಮರಾಠಿ ಸ್ತ್ರೀಯರ ಕಲ್ಪನಾ ವಿಶ್ವದಲ್ಲಿ ಯಮಾಯಿಯು ಮಾಡಿದ ನಿಷೇಧದ ಸೂಚಕ – ಒಂದು ಓವಿ ಹೀಗಿದೆ:

ಚೈತ್ರ ಮಾಸದಲಿ | ಜೋತಿಬಾ ದೇವನು ಹೊರಟು ಬಂದ |
ಬೆನ್ನೊಳು ಬಂದ ತಂಗಿಯನು | ಮದುವೆ ಆಗಲೆಂದು ||

ಈ ಪ್ರಕಾರ ಯಮಾಯಿ ಜೋತಿಬಾನಿಗೆ ಸೋದರಿ. ಈ ನಿಷಿದ್ಧ ಸಂಬಂಧದ (Prohibited relation) ಬಗ್ಗೆ ವಿಚಾರ ಮಾಡದೆ ಅವಳೊಂದಿಗೆ ಲಗ್ನವಾಗಲೆಂದು ಹೋದನು. ಎಂತಲೇ ಅವಳು ನಿಷಿದ್ಧ ಭಾವದಿಂದ ಬಾಗಿಲನ್ನು ಹಾಕಿಕೊಂಡಳು ಎಂಬ ಸ್ವರ ಈ ಓವಿಯಲ್ಲಿ ಪ್ರಕಟಗೊಂಡಿದೆ.

ಯಮಾಯಿ ಒಬ್ಬ ಮಾತೃಶಕ್ತಿ ದೆವಿಯಾಗಿದ್ದಾಳೆ; ಮಾತೃ ದೇವತೆಯ ಮೂಲ ಪ್ರಕೃತಿಯ ಅನುಸಾರ ಕುಮಾರಿಯೆನಿಸಿದ್ದಾಳೆ ಆಕೆ. ತನ್ನ ಇಚ್ಛಾ ಬಲದಿಂದ ಪುರುಷತತ್ತ್ವವು ಆಕೆಯನ್ನು ಸೃಷ್ಟಿ ಪ್ರಕ್ರಿಯೆಗಾಗಿ ಬಳಸಲು ಮುಂದಾದಾಗ, ಆಕೆಗದು ಇಷ್ಟವಿಲ್ಲ. ಸರ್ವತಂತ್ರ ಸ್ವತಂತ್ರಳು ಆಕೆ. ಪುರುಷನು ಅವಳ ಅಧಿಕಾರ ಕಕ್ಷೆಯಲ್ಲಿ ಪಿತ, ಪತಿ, ಬಂಧು ಇತ್ಯಾದಿ ಸಂಬಂಧಗಳಿಂದ ಬಂದು ಹೋಗುತ್ತಾನೆ. ಆದರೆ ಇದರಿಂದ ಅವಳ ಸ್ವಾತಂತ್ಯ್ರಕ್ಕೆ ಯತ್ಕಿಂಚಿತ್ತು ಬಾಧೆಯುಂಟಾಗುವುದಿಲ್ಲ.

ಸ್ತ್ರೀ ಮತ್ತು ಸ್ತ್ರೀದೇವತೆಗಳ ಈ ಅನನ್ಯ ಸಾಧಾರಣ ಪ್ರಭುತ್ವಕ್ಕೆ ಪುರುಷ ಮತ್ತು ಪುರುಷ ದೇವತೆಗಳಿಂದ ಒಂದು ಮಿತಿಯುಂಟು ಮಾಡುವುದು ಒಂದುಹಂತ. ಈ ದಿಶೆಯಲ್ಲಿ ಪ್ರಭುತ್ವ ಶಾಲಿ ಸ್ತ್ರೀದೇವಿಯರನ್ನು ಪುರುಷ ದೇವತೆಗಳ ಪರಿವಾರದಲ್ಲಿ ವಿವಾಹ ಬಂಧನದ ಮೂಲಕ ಪತ್ನಿಯ ಸ್ಥಾನಕ್ಕೆ ತರುವಂತಹ ವ್ಯಾಪಕ ಪ್ರಯತ್ನವೊಂದು ನಡೆದಂತೆ ಕಾಣುತ್ತದೆ. ಈ ಪುರುಷ (ಜಬರ್‌ದಸ್ತು) ಪ್ರಯೋಗವು ಈ ಕುಮಾರಿ ಮಾತೃ ದೇವಿಯರಿಗೆ ಪೂರ್ಣ ಒಪ್ಪಿಗೆಯಾದಂತಿಲ್ಲ. ಪರಳಿ ವೈಜನಾಥನೊಂದಿಗೆ ಮದುವೆ ಮಾಡಲೆಂದು ಹೊರಡಿಸಿದ್ದ ಯೋಗೀಶ್ವರಿಯು ಕೇಶ ಭೂಷಣವನ್ನು ನಿಮಿತ್ತ ಮಾಡಿಕೊಂಡು, ಆ ಕಡೆಯ ಮುಕ್ಕಾಮಿ (ಬೀಡು ಬಿಡುವಿಕೆ) ನಲ್ಲಿಯೇ ಅವಹೇಳನ ಮಾಡಿ ಬಿಡುತ್ತಾಳೆ ವಿವಾಹ ಮುಹೂರ್ತವನ್ನೇ. ನಂತರ ಆಕೆ ಆಂಬೆಯಲ್ಲಿಯೇ ನೆಲೆ ನಿಲ್ಲುತ್ತಾಳೆ ಸ್ವತಂತ್ರಳಾಗಿ. ಕೆಲವೆಡೆ ‘ಲಗ್ನದ ವಿಧಿ’ ಯಶಸ್ವಿಯಾಗಿ ಮುಗಿದ ಮೇಲಯೂ ಸಹ ದೇವಿಯರು ‘ಬೇರೆಡೆ’ ನೆಲೆಸಿರುವುದು (ಸಂಸ್ಥಾಪಿತವಾಗಿರುವುದು) ಗಮನಿಸಬೇಕಾದ ಮುಖ್ಯ ಅಂಶ. ಬೆಟ್ಟದ (ತಿರುಪತಿ) ವೆಂಕೋಬಾನ ಪತ್ನಿ ಪದ್ಮಾವತಿಯು ಗಂಡನ ಮೇಲೆ ಮುನಿಸಿಕೊಂಡು ಸ್ವತಂತ್ರವಾಗಿ ಮಂದಿರದಲ್ಲಿದ್ದಾಳೆ ಗಿರಿಯ ಕೆಳಗೆ. ಹಾಗೆಯೇ ಪಂಠರಪುರದ ವಿಠೋಬಾನ ಪತ್ನಿ ರುಕ್ಮಿಣಿಯು ಇಂದಿಗೂ ತನ್ನ ಮುನಿಸನ್ನು ಬಿಡಲು ಸಿದ್ಧಳಿಲ್ಲದೆ, ಬೇರೆಡೆಯೇ ನೆಲೆಸಿದ್ದಾಳೆ.

ಮದುವೆಗೆ ಮುಂಚೆಯೇ ಬಂಡೆದ್ದಿರುವ ಯಮಾಯಿ – ಯೋಗೇಶ್ವರಿಯರು ಮತ್ತು ಮದುವೆಯಾದ ಮೇಲೆ ಸೆಟೆದು ಬೇರೆಯಾಗಿರುವ ಪದ್ಮಾವತಿ – ರುಕ್ಮಿಣಿ (ಪದೂಬಾಯಿ – ರಖುಮಾಯಿ) ಯರುಗಳ ಕಥೆಯು ಮೂಲತಃ ಕುಮಾರಿ ಮಾತೃದೇವಿಯರು ತೋರುವ ಕ್ಷೀಣ ಉದ್ರಿಕ್ತತೆಯ ಸ್ವರೂಪವೇ ಹೌದು. ಈ ವಿಚಾರ ಅವರ ಪ್ರತಿಭಟನೆಯ ಕಥಾನಕದಿಂದ ಸುಷ್ಪಷ್ಟವಾಗಿ ಕಾಣುತ್ತದೆ. ಯಮಾಯಿಯ ವಿವಾಹ ನಿಷೇಧಕ್ಕೂ ಇದನ್ನೇ ಅನ್ವಯಿಸಿ ಅರ್ಥೈಸಬಹುದು.

 

[1]ಶ್ರೀನಾಮದೇವಏಕ್ ವಿಜಯಯಾತ್ರಾ:ರಾ.ಚಿಂ.ಢೇರೆ ಮತ್ತು ಅ.ಪು. ಕಾಮತ್, ಪುಣೆ, ೧೯೭೦, ಪುಟ. ೫೮ – ೫೯.

[2]ಭಾರತೀಯ ಆರ್ಯಭಾಷಾ ಔರ್ ಹಿಂದಿ: ಸುನೀತಿಕುಮಾರ ಚಟರ್ಜಿ, ದೆಹಲಿ,೧೯೫೭, ಪುಟ.೫೦.

[3]ಭಾರತೀಯ ಸಂಸ್ಕೃತಿಮೆ ಆಯೇತರಾಂಶ:ಶಿವಶೇಖರ ಮಿಶ್ರ ಲಖನೌ, ೧೯೫೨, ಪುಟ.೪೯ – ೫೩.

[4]ಕೃಷಿ ಪರಾಶರ: (ಸಂ) ಗಿರಿಜಾಪ್ರಸನ್ನ ಮಜುಮದಾರ ಮತ್ತು ಸುರೇಶಚಂದ್ರ ಬ್ಯಾನರ್ಜಿ, ಕೋಲ್ಕತ್ತಾ, ೧೯೬೦, ಪುಟ. ೨೯, ೪೧, ೪೫.

[5]ಶಕ್ತಿಪಿಠಾಂಚಾ ಶೋಧ:ರಾ.ಚಿಂ.ಢೇರೆ, ಕೊಲ್ಹಾಪುರ – ಪುಣೆ, ೧೯೭೩, ಪುಟ.೩೦ – ೩೬.