ಭಾಸ್ಕರರಾವ್ ಜಾಧವ ಅವರ ಜೋತಿಬಾನಿರ್ವಚನ

ಜೋತಿಬಾನು ಮಹಾರಾಷ್ಟ್ರದಲ್ಲಿ ಒಟ್ಟು ಸಮುದಾಯ ದೇವರೆನಿಸಿರುವುದರಿಂದ ಅಲ್ಲಿನ ಸಾಮಾಜಿಕ ವಿಚಾರಗಳನ್ನು ಆಧರಿಸಿ ಈ ದೇವರೆಡೆ ಲಕ್ಷಿಸುವುದು ಸ್ವಾಭಾವಿಕವೇ. ಈ ದೃಷ್ಟಿಯು ಮುಖ್ಯವಾಗಿ ಯುಗಾನುಕೂಲ ಅರ್ಥಕ್ಕಾಗಿಯೋ ಇಲ್ಲವೆ ದೇವತೆಗಳನ್ನು ನಿಷೇಧಿಸುವುದಕ್ಕೋ ಆಗಿರಬಹುದು. ಈ ಕಾಲದಲ್ಲಿ ಅಧ್ಯಯನಕಾರರ ಮನಸ್ಸು ಕೇವಲ ವಸ್ತುನಿಷ್ಠತೆಯನ್ನಷ್ಟೇ ನೆಮ್ಮುವುದು ಅನುಕೂಲಕರವಾದುದೇನು ಅಲ್ಲ.

ಕೊಲ್ಹಾಪುರ ನಿವಾಸಿ ಶ್ರೀಭಾಸ್ಕರರಾವ್ ಜಾಧವ ಅವರು ಸಾಮಾಜಿಕ ಎಚ್ಚರವನ್ನು ಉದ್ದೇಶವಾಗಿಟ್ಟುಕೊಂಡು ಪರಂಪರೆಯನ್ನು ಅಭ್ಯಸಿಸುವುದಕ್ಕೆ ಬಹಳ ಪ್ರಯತ್ನ ಮಾಡಿದ್ದರು. ‘ಮರಾಠೇ ಆಣಿ ತ್ಯಾಂಚೀ ಭಾಷಾ’ (ಮರಾಠರು ಮತ್ತು ಅವರ ಭಾಷೆ) ಎಂಬ ತಮ್ಮ ಕಿರುಕೃತಿಯಲ್ಲಿ ಜೋತಿಬಾನ ಮೂಲೋದಯದ ಸಂಬಂಧವಾಗಿ ಕೆಲವಾರು ವಿಚಾರಗಳನ್ನು ಮಂಡಿಸಿದ್ದಾರೆ. ಅವರ ಪ್ರಕಾರ: “ಜೋತಿಬಾ ಅಥವಾ ಜೋತಬಾ ಎಂಬ ಹೆಸರಿನ ಮುಖ್ಯ ಭಾಗ ಜೋತ. ಮರಾಠರಲ್ಲಿ ಬಹಳಷ್ಟು ಜಾತಿಗಳವರಿಗೆ ಕುಲದೇವನಾಗಿದ್ದಾನೆ ಈತ. ಅವರಲ್ಲಿ ಪ್ರಮುಖವಾದ ಎರಡು ಮನೆತನಗಳೆಂದರೆ ಶಿಂಧೆ ಮತ್ತು ಚವ್ಹಾಣ. ಶಿಂಧೆಯವರ ಉಪನಾಮ, ಅವರ ಕುಲಸ್ವಾಮಿಯಾದ ಜೋತ ಮತ್ತು ಅವರ ದೇವಕ (ಮಂಗಲಾಚರಣೆಯ ಸಂಕೇತ)ವಾದ ಸಮುದ್ರವೇಲ – ಈ ಮೂರನ್ನು ಒಟ್ಟಾಗಿ ನೋಡಬೇಕಾದ್ದು ಅವಶ್ಯ. ಹತ್ತನೆಯ ಶತಮಾನದ ಶಾಸನಗಳಲ್ಲಿಯೇ ಕಾಣಿಸುತ್ತದೆ ಶಿಂಧೆ ಎಂಬ ಹೆಸರು. ಆ ಕಾಲದ ಕವಿಗಳು ಸಿಂಧೂ ನದಿಯೊಂದಿಗೆ ಶಿಂಧೆ ಹೆಸರಿನ ಸಂಬಂಧವನ್ನು ಕಲ್ಪಿಸಿದ್ದಾರೆ. ಕರ‍್ಹಾಡಾ – ಶಿಂಧೆಯರ ಕೋರಿ ಬರೆಹದಲ್ಲಿ ಈ ವಿಚಾರವನ್ನು ಕಾಣಬಹುದು. ಶಿಂಧೆ ಎಂಬ ಹೆಸರು ಬಂದಿರುವುದು ಸಿಂಧ್ ಪ್ರಾಂತ್ಯದಿಂದಾಗಿ ಎಂಬುದಾಗಿದೆ ಅವರ ಅಭಿಪ್ರಾಯ. ಅವರ ಕುಲದೇವರು ಜೋತ. ಇಂದಿಗೂ ಸಿಂಧ್ ಪ್ರಾಂತ್ಯದಲ್ಲಿನ ದೇವಾಲಯಗಳೆಲ್ಲ’ ಜೋತ;ಗಳೇ ಆಗಿವೆ. ‘ಚಾಂಗ ಭಲಾ’ ಎಂಬುದು ಜೋತಿಬಾನ ಜಾತ್ರೆಯಂದು ಮಡುವ ಉದ್ಘೋಷಣೆ. ಸಿಂಧ್ ಪ್ರಾಂತ್ಯದಲ್ಲಿ ‘ಚಾಂಗಭಲಾ’ ಎಂಬ ಶಬ್ದಕ್ಕೆ ‘ಹೇಗೆ ಏನು?‘, ‘ಚೆನ್ನಾಗಿರುವಿರಲ್ಲಾ?‘ – ಎಂಬರ್ಥವಿದೆ. ಯಾವುದೇ ಜಾತಿ, ಧರ್ಮಕ್ಕೆ ಸೇರಿದವರಾಗಿದ್ದರೂ ಸರಿಯೇ ಇಬ್ಬರು ಸಿಂಧಿಯರು ಪರಸ್ಪರ ಎದುರಾದಾಗ ಒಬ್ಬರನ್ನೊಬ್ಬರು ಹಾರೈಸುವುದು ‘ಚಾಂಗಭಲಾ’ ಎಂಬುದಾಗಿ. ಕವಿಗಳ ಸಾಂಪ್ರದಾಯಿಕ ತಿಳಿವಳಿಕೆಗೆ ಈ ಹಿನ್ನೆಲೆ ಒಂದು ಬಲವನ್ನು ತರುವಂಥದ್ದಾಗಿದೆ. ದೇವಕವಾದ ಸಮುದ್ರವೇಲವು ಒಂದು ವನಸ್ಪತಿಯ ಹೆಸರಿನಂತಿದ್ದು, ಸಮುದ್ರದ ಏರಿಕೆಯ (ಭರ್ತಿ) ಸೀಮೆಯನ್ನು ತೋರಿಸುವ ಮಾಪಕವೂ ಹೌದು. ಶಿಂಧೆಯರು ಮಹಾರಾಷ್ಟ್ರಕ್ಕೆ ಬಂದ ಮೇಲೆ ಇತರೆ ಮರಾಠಿಗರಂತೆ ಅವರು ದೇವಕವನ್ನು ಸ್ವೀಕರಿಸಲು ಮುಂದಾದಾಗ, ತಮಗೆ ವನಸ್ಪತಿಯೊಂದಿಗೆ ಉಂಟಾದ ಪ್ರಥಮ ಸಂಬಂಧದ ಎಲೆಯನ್ನೇ ಇಟ್ಟುಕೊಂಡರು. ಈ ಹಿನ್ನೆಲೆಯಿಂದ ತಿಳಿದುಬರುವ ಮುಖ್ಯ ಅಂಶವೆಂದರೆ ಶಿಂಧೆಯರು ಮಹಾರಾಷ್ಟ್ರದ ರತ್ನಾಗಿರಿಗೆ ಬಂದುದು ಜಲಮಾರ್ಗದಿಂದಲೇ. ಜೋತಿಬಾನ ಬೆಟ್ಟವು ರತ್ನಾಗಿರಿ ಬಂದರಿಗೆ ಪೂರ್ವದಲ್ಲಿ ಎಪ್ಪತ್ತು – ಎಪ್ಪತ್ತೈದು ಮೈಲಿ ಅಂತರದಲ್ಲಿದೆ. ಈ ಬೆಟ್ಟಕ್ಕೆ ಅವರು ಹೆಸರಿಸಿದ್ದು ಪೂರ್ವ ಪರಿಚಿತವಾದ ರತ್ನಾಗಿರಿ ಎಂಬುದಾಗಿಯೇ. ಇವರು ಕರ‍್ಹಾಡ ಪ್ರಾಂತ್ಯವನ್ನು ತಮ್ಮ ರಾಜ್ಯವನ್ನಾಗಿಸಿಕೊಂಡಿದ್ದರು ಎಂಬುದು ಗಮನೀಯ ಅಂಶ. ಈ ಪ್ರಾಂತ್ಯ ಪ್ರಸ್ತುತ ಬೆಟ್ಟಕ್ಕೆ ಬಹಳ ದೂರವಾಗಿಲ್ಲ.[1]

ಭಾಸ್ಕರರಾವ್ ಅವರ ವಿವೇಚನೆಯ ಸಾರವನ್ನು ಹೀಗೆ ಗ್ರಹಿಸಬಹುದು:

೧. ಶಿಂಧೆ ಮನೆತನದವರ ಕುಲದೇವರು ಜೋತಿಬಾ.

೨. ಶಿಂಧೆ ಜನರು ಸಿಂಧ್ ಪ್ರಾಂತ್ಯದಿಂದ ಸಮುದ್ರ ಮಾರ್ಗವಾಗಿ ಹೊರಟು ರತ್ನಾಗಿರಿಗೆ ಬಂದು, ಅಲ್ಲಿಂದ ಜೋತಿಬಾನ ಬೆಟ್ಟದೆಡೆ ನಡೆದರು. ಎಂತಲೇ ಈ ಬೆಟ್ಟಕ್ಕೆ ಅವರಿಟ್ಟ ಹೆಸರು ರತ್ನಾಗಿರಿ.

೩. ‘ಜೋತಿಬಾ’ ಎಂಬ ಹೆಸರಿನ ಮೂಲ ಶಬ್ದ ‘ಜೋತ’. ಶಿಂಧೆಯರ ಮೂಲ ಭೂಮಿಯಾದ ಸಿಂಧ್ ಪ್ರಾಂತ್ಯದಲ್ಲಿನ ಪ್ರಾಚೀನ ದೇವರು – ‘ಜೋತ‘(ಜೋತಿ)

೪. ಜೋತಿಬಾನ ಉಪಾಸನೆಯಲ್ಲಿ ಹೇಳುವ ‘ಚಾಂಗಭಲಾ’ ಎಂಬ ಘೋಷಣೆಯೂ ಸಿಂಧ್ ಭಾಷೆಯಿಂದಲೇ ಬಂದುದಾಗಿದೆ.

೫. ‘ಜೋತ‘ದ ಅಂದರೆ ಜ್ಯೋತಿಯ ಜಾಗೆಯಲ್ಲಿ ವಿಶಿಷ್ಟ ಮೂರ್ತಿಯೊಂದು ಪ್ರತಿಷ್ಠಾಪನೆಗೊಂಡಿತು ಕಾಲಾಂತರದಲ್ಲಿ.

“ಸಿಂಧ್ ಪ್ರಾಂತ್ಯದಲ್ಲಿನ ಪ್ರಾಚೀನ ದೇವಾಲಯಗಳೆಲ್ಲ ‘ಜೋತ‘ದುವಾಗಿದ್ದವು. ಅಲ್ಲಿ ಯಾವುದೇ ಮೂರ್ತಿಯೂ ಇಲ್ಲ. ಬದಲಾಗಿ ಅಹೋರಾತ್ರಿ ಉರಿಯುತ್ತಿರುತ್ತದೆ ಒಂದು ದೀಪ. ಅವರ ಮುಖ್ಯ ದೇವರು ಜೋತ. ಕೊಲ್ಹಾಪುರ ಪ್ರಾಂತ್ಯದಲ್ಲಿಯೂ ಇಂತಹ ದೇವಾಲಯಗಳಿದ್ದವು. ರಾಮಲಿಂಗ ಬೆಟ್ಟದ ಮೇಲಿನ ಇಂಥ ದೇವಾಲಯವನ್ನು ನಾನೇ ಸ್ವತಃ ನೋಡಿದ್ದೇನೆ. ಅಲ್ಲಿದ್ದುದು ಕೇವಲ ಒಂದು ದೀಪವಷ್ಟೇ. ಯಾವುದೇ ದಿಕ್ಕಿನಿಂದ ಗಾಳಿ ಬೀಸಿದರೂ ಸರಿಯೇ ದೀಪಕ್ಕೆ ತಾಗದಿರುವಂತಹ ವ್ಯವಸ್ಥೆಯಿರುತ್ತಿತ್ತು. ಇತ್ತೀಚಿನ ಹತ್ತು – ಹನ್ನೆರಡು ವರ್ಷಗಳಿಂದ ಆ ದೀಪವನ್ನು ಯಾರೂ ಉರಿಸುತ್ತಿರಲ್ಲವೆಂಬುದನ್ನು ನಾನು ಕೇಳಿದ್ದೇನೆ. ಸಿಂಧ್ ಪ್ರಾಂತ್ಯದಲ್ಲಿನ ಪ್ರತಿಯೊಂದು ಪ್ರತಿಷ್ಠಿತ ಹಿಂದೂ ವಸತಿಯಿರುವ ಊರಿನಲ್ಲಿಯೂ ಬಹುತೇಕ ಇರುವುದು ಜೋತದ ದೇವಾಲಯಗಳೇ. ಒಂದು ದೀಪವು ಅಖಂಡವಾಗಿ ಅಹೋರಾತ್ರಿ ಉರಿಯುತ್ತಿರುವುದು. ಈ ದೀಪಕ್ಕೆ ಬೇಕಾದ ಎಣ್ಣೆಯನ್ನು ಒದಗಿಸುವುದು ಹಾಗೂ ಅದರ ಜವಾಬ್ದಾರಿಯ ವ್ಯವಸ್ಥೆಯನ್ನು ಮಾಡುತ್ತಾ ಬಂದಿದೆ ಆ ಊರಿನ ಹಿಂದೂ ಸಂಘಟನೆ (ಪಂಚಾಯಿತಿ.)”.[2]

ಹೀಗೆ ಸಿಂಧ್ ಪ್ರಾಂತ್ಯದಲ್ಲಿ ಜ್ಯೋತಿಯ ಉಪಾಸನಾ – ಸಂಪ್ರದಾಯವನ್ನು ಆಚರಿಸುತ್ತಿದ್ದ ಶಿಂಧೆಯರು, ತಾವು ಬರುವಾಗ್ಗೆ ಆ ದೇವರನ್ನೂ ತಮ್ಮೊಡನೆ ತಂದರು ಎಂಬುದು ಶ್ರೀ ಜಾಧವ ಅವರ ನಿಷ್ಕರ್ಷೆ. “ಇಂದಿಗೂ ಶಿಂಧೆ ವಂಶದವರ ಕುಲಸ್ವಾಮಿ ಜೋತಿಬಾನೆ; ಗ್ವಾಲೇರಕರ ವಾಡೀ ರತ್ನಾಗಿರಿಯವರು ಪ್ರತಿ ವರ್ಷವೂ ಈ ದೇವರಿಗಾಗಿ ಬಹಳ ಹಣ ಖರ್ಚು ಮಾಡುತ್ತಾರೆ. ಅಲ್ಲದೆ ಗ್ವಾಲೇರಿಯಲ್ಲಿಯೂ ಸಹ ಒಂದು ದೊಡ್ಡದಾದ ದೇವಾಲಯವನ್ನು ಕಟ್ಟಿಸಿದ್ದಾರೆ,” ಎಂಬ ವರ್ತಮಾನ ಸಾಕ್ಷ್ಯವನ್ನು ನೀಡಿರುತ್ತಾರೆ. ಅಲ್ಲದೆ ‘ಜ್ಯೋತಿಯೇ ಲಿಂಗ ಅಂದರೆ ಅದರ ರೂಪವುಳ್ಳ ದೇವತೆ’. ಈ ಶಬ್ದಗಳಿಂದಲೇ ‘ಜ್ಯೋತಿರ್ಲಿಂಗ’ ಎಂಬ ವ್ಯುತ್ಪತ್ತಿಯನ್ನು ಕಟ್ಟಿಕೊಟ್ಟಿದ್ದಾರೆ ಶ್ರೀ ಭಾಸ್ಕರರಾವ.

ಚವ್ಹಾಣರ ಕುಲದೇವತೆ ಜ್ವಾಲಾಮುಖಿ ಎಂಬ ವಿಚಾರವನ್ನು ದಾಖಲಿಸಿದ ಭಾಸ್ಕರರಾವ್ ಅವರು ಜ್ವಾಲಾ ಎಂಬುದನ್ನು ಕೂಡ ಜೋತದ ಆಧಾರದಿಂದಲೇ ಜೋತಿಬಾನದೊಂದಿಗೆ ಸಂಬಂಧ ಕಲ್ಪಿಸಿರುವುದು ಗಮನೀಯ. ಕಾಂಗಡ ನದಿಯ ತಟದಲ್ಲಿರುವ ಜ್ವಾಲಾಮುಖಿಯ ಉಪಾಸಕ ಚವ್ಹಾಣ್‌ನು ‘ಹಿಮಾಲಯದಿಂದ ಕೆಳಗೆ ಬರುವಾಗ್ಗೆ ‘ಜ್ವಾಲಾಮುಖಿಯ ಪ್ರತಿನಿಧಿಯಾಗಿ ಜ್ಯೋತ – ದೀಪವನ್ನು ತನ್ನೊಂದಿಗೆ ತಂದು ಉಳಿಸಿ ಕೊಂಡಿದ್ದಾನೆ,’ ಎಂಬ ನಿರ್ಣಯಕ್ಕೆ ಬರುತ್ತಾರೆ.

ಜೋತಿಬಾನ ವಿಷಯ ವಿವೇಚನೆಯನ್ನು ಅಂತಿಮವಾಗಿ ಸಿದ್ಧಾಂತ ರೂಪದಲ್ಲಿ ಭಾಸ್ಕರ ರಾವ್ ಹೇಳಿರುವುದು ಹೀಗೆ:

“ಜ್ಯೋತ ಎಂಬುದು ಆರ್ಯರ ದೇವರು. ಅದರ ಮೂಲಸ್ಥಾನ ಹಿಮಾಲಯದಲ್ಲಿನ ಜ್ವಾಲಾಮುಖಿ. ಅದರ ಪ್ರತಿನಿಧಿಯಾಗಿ ದೀಪಜ್ಯೋತವು ಪ್ರಥಮವಾಗಿ ಸಿಂಧ್ ಪ್ರಾಂತ್ಯಕ್ಕೆ, ನಂತರ ಸಿಂಧ್ ಜನರೊಂದಿಗೆ ಮಹಾರಾಷ್ಟ್ರದಲ್ಲಿ ಬಂದಿತು. ಪ್ರಪ್ರಥಮವಾಗಿ ಇದು ಸಂಸ್ಥಾಪಿತವಾಗಿದ್ದು ದೀಪದ ರೂಪದಲ್ಲಿಯೇ. ಮುಂದೆ ಮೂರ್ತಿ ಪೂಜೆಯ ಭರಾಟೆ ಉಂಟಾದ ಮೇಲೆ ಮೂರ್ತಿಯನ್ನು ಕೂರಿಸಲಾಯಿತು ಇದರ ಜಾಗದಲ್ಲಿ. ಮೂಲ ದೇವರಾದ ಜ್ಯೋತ, ಅಂದರೆ ನಂದಾದೀಪಕ್ಕೆ ಇದರಿಂದ ಗೌಣಸ್ಥಾನ ಪ್ರಾಪ್ತವಾಯಿತು.”.[3]

ಭಾಸ್ಕರರಾವ್ ಅವರ ಈ ವಿವೇಚನೆಯನ್ನು ಬಹಳ ವಿಸ್ತೃಥವಾಗಿಯೇ ಉದ್ಧೃತಗೊಳಿಸುವುದಕ್ಕೆ ಕಾರಣವಿದೆ. ಜೋತಿಬಾನ ಸ್ವರೂಪವನ್ನು ವೇದ್ಯವಾಗಿಸಿಕೊಳ್ಳುವಲ್ಲಿ ಉಲ್ಲೇಖನೀಯ ಪೂರ್ವ ಪ್ರಯತ್ನವಾಗಿ ಈ ವಿವೇಚನೆಗೆ ಬಹಳ ಮಹತ್ವವುಂಟು. ಅವರ ವಿವೇಚನೆಯನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿದಾಗ ಕಂಡು ಬರುವ ಅಂಶಗಳಿವು –

೧. ಮಂದಿರಗಳಲ್ಲಿ ಅಖಂಡವಾಗಿ ಉರಿಯುವ ನಂದಾದೀಪವು ಕೇವಲ ಜೋತಿಬಾನ ಮಂದಿರಕ್ಕಷ್ಟೇ ಸೀಮೀತವಲ್ಲ. ಮಹಾರಾಷ್ಟ್ರದ ಬಹುತೇಕ ಗ್ರಾಮದೇವತೆಗಳು, ಕುಲ ದೇವತೆಗಳ ಮಂದಿರಗಳಲ್ಲಿ, ಹಾಗೆಯೇ ವಿಶಿಷ್ಟ ಕಾಲಾವಧಿಯವರೆಗೆ (ಉದಾ. ನವರಾತ್ರಿ ಇತ್ಯಾದಿ) ಮನೆಗಳಲ್ಲಿನ ಪೂಜಾ ಕೊಠಡಿಗಳಲ್ಲಿ ದೀಪಗಳನ್ನು ಉರಿಸುವುದು ಸಾಮಾನ್ಯ. ನಂದಾದೀಪದ ವಿಷಯದಲ್ಲಿ ಪುರುಷ ಹಾಗೂ ಸ್ತ್ರೀದೇವತೆಗಳು ಎಂಬ ಭೇದವೇನೂ ಕಾಣುವುದಿಲ್ಲ. ಹಾಗಾಗಿ ನಂದಾದೀಪವು ಕೇವಲ ಜೋತಿಬಾನದ್ದೇ ವ್ಯವಚ್ಛೇದಕ ಉಪಾಸನಾ ವೈಶಿಷ್ಟ್ಯವೇನಲ್ಲ. ಆ ಕಾರಣ ಯಾವುದರ ಮೂಲಕ ಅದರ ಮೂಲರೂಪದ ಬೋಧೆಯನ್ನು ಮಾಡಬೇಕೆಂಬ ಪ್ರಶ್ನೆ ಏಳುತ್ತದೆ.

೨. ಜೋತಿಬಾನ ಬಗೆಗಿರುವ ಪಾರಂಪರಿಕ ಚರಿತ್ರೆ, ಅವನ ದೇವತಾ ಪರಿವಾರ, ಉಪಾಸನಾ ವಿಶೇಷಗಳನ್ನು ಪರಿವೀಕ್ಷಿಸಿದಾಗ ಆತ ಸಂಪೂರ್ಣವಾಗಿ ಕ್ಷೇತ್ರಪಾಲಕ ದೇವರಾಗಿದ್ದಾನೆ. ಮಹಾರಾಷ್ಟ್ರದ ಭೈರವ, ಖಂಡೋಬಾ, ರವಳನಾಥ, ದಕ್ಷಿಣ ಭಾರತದಲ್ಲಿನ ಅಯ್ಯಪ್ಪನ್, ಮುರುಗ ಇತ್ಯಾದಿ ಕ್ಷೇತ್ರಪಾಲಕ ದೇವರುಗಳಿಗೆ ಸಮನಾಗಿರುವಂತೆ ಕಂಡು ಬರುತ್ತಿರುವುದು ಅವನ ಒಂದು ವಿಶೇಷ. ಅಂದರೆ ಜೋತಿಬಾ ಎಂಬ ಹೆಸರಿನ ಬಗ್ಗೆಯಾಗಲಿ ಅಥವಾ ರೂಪದ ಬಗ್ಗೆಯಾಗಲಿ ಮಾಡುವ ವಿಚಾರವು ಕ್ಷೇತ್ರಪಾಲಕ ದೇವರುಗಳ ಸಂದರ್ಭದಲ್ಲಿಯೇ ಇಟ್ಟು ನೋಡುವುದು ಅತ್ಯಂತ ಸೂಕ್ತ. ಇದನ್ನುಳಿದು ಅನ್ಯ ಮಾರ್ಗವೇ ಇಲ್ಲ.

ಶಿಂಧೆ ಕುಲ ಮತ್ತು ಜೋತಿಬಾ

ಭಾಸ್ಕರರಾವ್ ಅವರು ಶಿಂಧೆ ಕುಲಕ್ಕೆ ಹೆಚ್ಚು ಮಹತ್ವ ನೀಡಿ ಜೋತಿಬಾನ ಶೋಧ ಮಾಡಿರುವ ಪ್ರಯತ್ನವನ್ನು ಈಗಾಗಲೇ ಗಮನಿಸಿದ್ದೇವೆ. ಗ್ವಾಲ್ಹೇರ್‌ನ ಶಿಂಧೆಯರ ಜೋತಿಬಾನ ಮೇಲಣ ಭಕ್ತಿಯು ಅಸಾಧಾರಣವಾದುದು. ವಾಡಿ – ರತ್ನಾಗಿರಿಯಲ್ಲಿನ ಜೋತಿಬಾನ ತಾಣದ ವ್ಯವಸ್ಥೆ, ಅಲ್ಲಿನ ಮಂದಿರ ಮತ್ತು ತೀರ್ಥಗಳ ನಿರ್ಮಾನವು ಶಿಂಧೆಯರ ಜೋತಿಬಾನ ಮೇಲಣ ಭಕ್ತಿಯ ಪ್ರತೀಕಗಳು. ಜೋತಿಬಾನ ಇಂದಿನ ಮಂದಿರ ಮತ್ತು ಜಮದಗ್ನಿ ತೀರ್ಥಗಳನ್ನು ಕಟ್ಟಿದವರು ರಾಣೋಜಿರಾವ್ ಶಿಂಧೆಯವರಾದರೆ, ಕೇದಾರೇಶ್ವರನ ಇಂದಿನ ಮಂದಿರವನ್ನು ಕಟ್ಟಿಸಿದಾತ ದೌಲತರಾವ್ ಶಿಂಧೆ. ಜೋತಿಬಾನ ನಿತ್ಯನೈಮಿತ್ತಿಕ ಉಪಾಸನೆಗೆಂದು ಅತ್ಯಂತ ಹೆಚ್ಚು ಉತ್ಪನ್ನ ವ್ಯವಸ್ಥೆಯನ್ನು ಶಿಂಧೆಯವರು ಮಾಡಿರುತ್ತಾರೆ. ಶಿಂಧೆಯರು ಹೊಂದಿರುವ ಈ ಜ್ಯೋತಿಬಾ ಭಕ್ತಿಯ ರಹಸ್ಯವಾದರೂ ಎಂಥದು? ಶಿಂಧೆ ಎಂಬ ಉಪನಾಮ(ಅಡ್ಡ ಹೆಸರು), ಸಿಂಧ್ ಪ್ರಾಂತ್ಯ ಮತ್ತು ಅಲ್ಲಿನ ‘ಜೋತ’ (ಜ್ಯೋತ) ಎಂಬ ದೇವರ ಸಂಬಂಧ ಮೂಲದಿಂದಾಗಿಯೇ ಶಿಂಧೆಯರು ಜೋತಿಬಾನಿಗೆ ಭಕ್ತರಾಗಿರಬಹುದೇ? ಈ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು ಶಿಂಧೆ ಕುಲದವರ ಪೂರ್ವೇತಿಹಾಸವನ್ನು ಕೊಂಚ ನೋಡುವುದು ಅವಶ್ಯ.

“ವಾಡಿ ರತ್ನಾಗಿರಿಯ ಪರಿಸರದ ಕುಂತಲ ಪ್ರದೇಶವನ್ನು ಕ್ರಿ.ಶ.ಎಂಟು, ಒಂಬತ್ತನೆಯ ಶತಮಾನದಲ್ಲಿ ಸಿಂಧ್ ಉಪನಾಮಕ ಸಾಮಂತರು ಆಳಿದ್ದರು. ಈ ವಿಚಾರವು ಶಿಲಾ ಶಾಸನದ ಬರೆಹದಲ್ಲಿ ಉಕ್ತವಾಗಿದೆ. ಕರ್ನಾಟಕದಲ್ಲಿನ ವನವಾಸಿ ಸಂತಲಿಗೆ ಎಂಬ ಭಾಗದಲ್ಲಿ ರಾಜ್ಯಭಾರ ಮಾಡಿದ್ದ ಈಶ್ವರ ಎಂಬ ಸಿಂಧ್ ವಂಶೀಯ ಸಾಮಂತ(ಕ್ರಿ.ಶ೧೧೬೫ – ೧೧೭೩) ನು ತನ್ನನ್ನು ಬಣ್ಣಿಸಿಕೊಂಡಿರುವುದು ಕರಹಾಟಪುರವರಾಧೀಶ್ವರ ಎಂಬುದಾಗಿ ಇದರರ್ಥ ಈ ಕಾಲದಲ್ಲಿ ಈತ ಇಲ್ಲಿ ರಾಜ್ಯಭಾರ ಮಾಡುತ್ತಿದ್ದ ಎಂದಲ್ಲ. ಬದಲಾಗಿ ಈತನ ಪೂರ್ವಜರು ಒಂದು ಕಾಲಕ್ಕೆ ಕರಹಾಟ ಎಂಬಲ್ಲಿ ರಾಜ್ಯಭಾರ ನಡೆಸಿದ್ದರು ಎಂದು ಅರ್ಥೈಸಿಕೊಳ್ಳಬೇಕು.”[4]

ಮತ್ತೊಂದು ಅಪೂರ್ಣ ತಾಮ್ರಪಟದಲ್ಲಿ ಭೀಮನ ಪೌತ್ರನು ಮತ್ತು ಮುಂಚಿನ ಪುತ್ರನೂ ಆಗಿದ್ದ ಆದಿತ್ಯವರ್ಮಾ ಎಂಬೊಬ್ಬ ಸಿಂಧ್ ವಂಶೀಯ ರಾಜನು ಜುನ್ನಿ ನಗರದಲ್ಲಿ (ಇಂದಿನ ಜುನ್ನರ್, ಮಹಾರಾಷ್ಟ್ರ) ನೆಲೆಸಿದ್ದನು. ನವಶಿವ ಎಂಬೊಬ್ಬ ಬ್ರಾಹ್ಮಣನಿಗೆ ೬ನೆಯ ಮಾರ್ಚ್‌ ೯೬೫ರಂದು ಇಂದ್ರಾಯಣಿ ನದಿಯ ತಟದಲ್ಲಿನ ಕಿನ್ಹಯಿ ಎಂಬ ಊರನ್ನು ಆತ ದಾನವಾಗಿ ಕೊಟ್ಟಿದ್ದನೆಂಬ ಉಲ್ಲೇಖವಿದೆ. ಆದಿತ್ಯವರ್ಮಾ ತನ್ನನ್ನು ಸ್ವತಃ ಮಹಾ ಸಾಮಂತನೆಂದು ಕರೆದುಕೊಂಡಿದ್ದಾನೆ. ಅವನು ತನ್ನ ಇಬ್ಬರು ಪೂರ್ವಜರನ್ನು ಕುರಿತು ಉಲ್ಲೇಖಿಸಿರುವುದರಿಂದ ಈ ಮನೆತನವು ಎಂಟು – ಒಂಬತ್ತನೆಯ ಶತಮಾನದಿಂದಲೇ ಕರ‍್ಹಾಡ – ಕೊಲ್ಹಾಪುರ ಭಾಗದಲ್ಲಿ ರಾಜ್ಯಭಾರ ನಡೆಸಿರಬೇಕು ಎಂಬುದಾಗಿ ಊಹಿಸಿದ್ದಾರೆ ಡಾ.ವಿ.ವಿ. ಮಿರಾಶೀಯವರು. ಕೊಲ್ಹಾಪುರ ಮಹಾಲಕ್ಷ್ಮಿ ಮಂದಿರವು ಶಿಲಾಹಾರ ಪೂರ್ವಕಾಲೀನವಾಗಿರುವುದರಿಂದ ಅದೂಕೂಡ ಈ ಸಿಂಧ್ ವಂಶೀಯ ಸಾಮಂತ ರಾಜರಿಂದ ಕಟ್ಟಲ್ಪಟ್ಟುದಾಗಿರಬೇಕೆಂಬುದು ಅವರ ಊಹೆ.[5]

ಶಿಂಧೆ ಕುಲ ಮತ್ತು ವಾಡಿ – ರತ್ನಾಗಿರಿಯ ಜೋತಿಬಾನ ಸಂಬಂಧ ಇಂದಿಗೂ ಅತ್ಯಂತ ಪ್ರಾಣಾತ್ಮಕವಾಗಿರುವುದು ಅದರ ಇತಿಹಾಸವು ಕುಂತಲಾಧಿಪತಿ ಸಿಂಧ್ ವಂಶೀಯ ಸಾಮಂತನ ಕಾಲದಿಂದಲೇ ಆರಂಭವಾಗಿರಬೇಕು ಎಂದು ಹೇಳಿದರೆ ಇತಿಹಾಸ ಕ್ರಮದಲ್ಲಿ ಯಾವ ವಿಸಂಗತಿಯು ತಲೆದೋರುವುದಿಲ್ಲ. ಸಿಂಧ್ ವಂಶೀಯ ರಾಜಪುರುಷರೆಲ್ಲ ಸ್ವತಃ ತಮ್ಮನ್ನು ‘ಫಣೀಂದ್ರ ವಂಶೀಯ’ (ನಾಗವಂಶದಲ್ಲಿ ಜನಿಸಿದ) ಎಂದು ಕರೆದುಕೊಂಡಿದ್ದಾರೆ. ಶಿಂಧೆ ಮನೆತನವು ನಾಗನಿಗೆ ಮೂಲ ಪುರುಷನ’ ಪ್ರತಿಷ್ಠೆ ನೀಡಿರುವುದಲ್ಲದೆ, ಅದನ್ನು ಅತ್ಯಂತ ಪೂಜನೀಯವಾಗಿಯೂ ಒಪ್ಪಿಕೊಂಡಿದೆ. ಶಿಂಧೆಯರ ಪ್ರಮುಖ ರಾಜಚಿಹ್ನೆಯೇ ನಾಗ. ಈ ಮೂಲಕ ನನಗೆ ಸಾಧಾರವಾಗಿ ಕಾಣುವುದೇನೆಂದರೆ, ಸಿಂಧ್ – ಶಿಂಧೆ ಮನೆತನದಲ್ಲಿ ನಾಗ ಸಂಬಂಧವಾಗಿರುವ ಪೂಜ್ಯತಾ ಭಾವವೇ ಅವರ ಮನೆತನದ ಜೋತಿಬಾನ ಭಕ್ತಿಯ ರಹಸ್ಯವಾಗಿ ಅಡಗಿಕೊಂಡಿರಬೇಕು. ಈ ರಹಸ್ಯವನ್ನು ಅನಾವರಣಗೊಳಿಸುವುದಕ್ಕೆ ಜೋತಿಬಾ ಮತ್ತು ನಾಗ ಇವರುಗಳ ಸಂಬಂಧ ಸ್ವರೂಪವೆಂಥದು ಎಂಬುದನ್ನು ಶೋಧಿಸುವದು ಅವಶ್ಯಕ.

ಜೋತಿಬಾನ ನಾಗರೂಪತ್ವ

ಜೋತಿಬಾನ ಇಂದಿನ ರೂಪ ಆಶ್ವಾರೂಢವಾಗಿರುವುದಾದರೂ, ಅದರ ಉಪವಾಹನವಾಗಿ ಶೇಷನಿಗೆ ಸ್ಥಾನವದೆ. ಉಪಾಸನಾ ಸಾಹಿತ್ಯದಲ್ಲಿಯೂ ಈ ವಾಹನದ ಬಗ್ಗೆ ದ್ವಿವಿಧತೆಯು ಕಂಡು ಬರುತ್ತಿರುವುದುಂಟು. ಬಾಲಕೃಷ್ಣನೆಂಬೊಬ್ಬ ಭಕ್ತನು ತನ್ನ ‘ಜ್ಯೋತಿರ್ಲಿಂಗ ಸ್ತೋತ್ರಾ’ ಎಂಬ ಕೃತಿಯಲ್ಲಿ ಅಶ್ವಾರೂಢನಾಗಿರುವ ಈ ದೇವನಾದರೂ ಯಾರು? ಎಂದಿರುವನು. ಜೊತೆಗೆ ‘ಭುಜಂಗಾವರೀ ಆಸನ ನಾಥಜೀಚೇ’ (ಭುಜಂಗದ ಮೇಲೆ ಆಸನಗೊಂಡಿರುವ ನಾಥ) ಎಂಬ ವರ್ಣನೆಯು ಬಂದಿದೆ. ಸಂಸ್ಕೃತ ಸ್ತೋತ್ರ ವಾಙ್ಮಯದಲ್ಲಿಯೂ ಈ ಎರಡೂ ವಾಹನಗಳ (ವಾಜಿ ಮತ್ತು ಪನ್ನಗ) ಉಲ್ಲೇಖವಿರುವುದಾದರೂ, ಶೇಷನ ಪ್ರತಿಷ್ಠೆ ಇರುವುದು ಭಿನ್ನ ಪ್ರಕಾರದಲ್ಲಿ. ‘ರವಳನಾಥಸ್ತವರಾಜಾ‘ದಲ್ಲಿನ ಜೋತಿಬಾನ ವರ್ಣನೆ:

ಶೇಷಸ್ಥಂ ಕರುಣಾಸಿಂಧು ಕಾರುಣ್ಯಂ ಕವಿತಾಪ್ರದಮ್ |
ದೈತ್ಯಘ್ನಂ ವಸುದಂ ವಿಪ್ರಂ ವಂದೇ ವೈಂವಿಮರ್ದನಮ್ ||

ಕುಂಡಲೀನಂ ವಿರೂಪಿನಂ ಶುಭಂ ಯಜ್ಞೋಪವೀತಿನಮ್ |
ನೃಪರಾರಾವಸಂಯುಕ್ತಂ ವಂದೇ ಪನ್ನಗವಾಹನಮ್ ||

ಇಲ್ಲಿ ‘ಶೇಷಸ್ಥ’ ಮತ್ತು ‘ಪನ್ನಗ ವಾಹನ’ ಎಂಬುವೆರಡು ನಾಮಗಳಿರುವುವು ಜೋತಿಬಾನಿಗೆ. ಅವನ ವಾಹನ ಶೇಷನಾಗ. ಅಲ್ಲದೆ ‘ಕುಂಡಲಿನ್’ ಎಂಬ ಅವನ ಹೆಸರು ಅವನ ನಾಗ ರೂಪತ್ವವನ್ನು ಜಾಹೀರುಗೊಳಿಸುವುದಾಗಿದೆ. ‘ಕೇದಾರ ಕವಚಾ’ ಕೃತಿಯಲ್ಲಿ ಜೋತಿಬಾನನ್ನು ‘ವಾಜೀವಾಹನ’ (ಅಶ್ವವಾಹನ) ಎಂದು ಹೇಳಿರುವುದರ ಜೊತೆಗೆ, ಅವನನ್ನು ಶೇಷನಾಗದೊಂದಿಗೆ ಪೂರ್ಣ ಏಕತ್ವವನ್ನು ತೋರ್ಪಡಿಸುವ ನಾಮಗಳನ್ನು ಬಳಸಿರುವುದನ್ನು ಕಾಣಬಹುದು:

ಪಶ್ಚಿಮೇ ಪನ್ನಗೇಶಶ್ಚ ವಾಯವ್ಯಾಂ ದೈತ್ಯನಾಶಕಃ |
ಉತ್ತರೇ ಉತ್ತರೇಶಶ್ಚ ಈಶಾನ್ಯಾಂ ಈಶ ಏವ ಚ ||

ಕುಂಡಲೀನಃ ಕಪೋತಾ ಚ ನಾಸಿಕಾಂ ವಿಘ್ನನಾಶನಃ |
ಓಷ್ಠದ್ವಯಂ ಉಮಾನಾಥೋ ದಂತಯೋರ್ಧರಣೀಧರಃ ||

ಇಲ್ಲಿ ಪನ್ನಗೇಶ (ಸರ್ಪಗಳ ರಾಜ), ಕುಂಡಲಿನ್ (ಸರ್ಪ ಮತ್ತು ಹಾಕಿದವ) ಮತ್ತು ಧರಣೀಧರ (ಪೃಥ್ವಿಯನ್ನು ಪುಸ್ತಕದ ಮೇಲೆ ಹೊತ್ತಿರುವ ಶೇಷನಾಗ) ಎಂಬ ಜೋತಿಬಾನ ಮೂರೂ ಹೆಸರುಗಳು ನಾಗರೂಪತ್ವವನ್ನು ಗೃಹೀತಗೊಳಿಸಿಕೊಂಡು ಬಳಸಿರುವುವಾಗಿವೆ. ಜೋತಿ ಬಾನ ವಾರ್ಷಿಕ ಉತ್ಸವಗಳಲ್ಲಿ ನಾಗರಪಂಚಮಿಯ ಉತ್ಸವವೂ ಒಂದುಂಟು. ಮೊದಲಿಗೆ ಅ – ಮಾನವ ರೂಪದಲ್ಲಿ ಪೂಜಿಸಲ್ಪಡುತಿದ್ದ ಈ ದೇವರು ಮುಂದೆ ಮಾನವ ರೂಪವನ್ನು ಪಡೆದುಕೊಂಡ ಮೇಲೆ ಮೂಲದ ಅವನ ಅಮಾನವ ರೂಪವು ‘ವಾಹನ’ವಾಗಿ ಮಾರ್ಪಡುತ್ತದೆ. ಈ ಸತ್ಯವು ಭಾರತೀಯ ದೇವತಾ ಮಂಡಲವನ್ನು ಅಧ್ಯಯನ ಮಾಡಿದವರಿಗೆ ತಿಳಿದಿರುವಂಥದೇ. ವೃಷಭರೂಪಿ ಶಿವ ಮುಂದೆ ವೃಷಭ ವಾಹನನಾದ; ಗರುಡ (ಸುಪರ್ಣ) ರೂಪಿ ವಿಷ್ಣು ಮುಂದೆ ಗರುಡ ವಾಹನನೆನಿಸಿದಂತಹ ಸುಪರಿಚಿತ ಉದಾಹರಣೆಗಳು ನಮ್ಮ ಕಣ್ಣೆದುರಿಗಿವೆ.

ನಾಗ : ಜೋತಿಬಾ ಮತ್ತು ಅನ್ಯ ಕ್ಷೇತ್ರಪಾಲಕ

ಜೋತಿಬಾನ ಈ ನಾಗರೂಪತ್ವವು ಅವನ ಕ್ಷೇತ್ರಪಾಲಕತ್ವ ಶ್ರೇಣಿಯ ಅನನ್ಯಸಾಧಾರಣ ವೈಶಿಷ್ಟ್ಯವೇ ಸರಿ. ಭಾರತೀಯ ಪರಂಪರೆಯಲ್ಲಿ ನಾಗ ಒಬ್ಬ ಕ್ಷೇತ್ರ ಪತಿಯೂ, ಕ್ಷೇತ್ರಪಾಲಕನೂ ಆಗಿರುವನು. ಹುತ್ತವು ಭೂಮಿಯ (ಹೆಣ್ಣಿನ) ಸೃಜನೇಂದ್ರಿಯ ಪ್ರತೀಕವಾಗಿದ್ದರೆ, ನಾಗನು ಪುರುಷತತ್ತ್ವಕ್ಕೆ ಪ್ರತೀಕ. ಆತನನ್ನು ಉಪಾಸಿಸುತ್ತಿರುವುದು ಸಂತಾನದಾತ ದೇವನೆಂಬುದಾಗಿಯೇ. ದಕ್ಷಿಣ ಭಾರತದ ಅನೇಕ ಜಾತಿ – ಪಂಗಡಗಳ ವಿವಾಹ ಸಂದರ್ಭದಲ್ಲಿ ವಧು ಮತ್ತು ವಿವಾಹಿತ ಸ್ತ್ರೀಯರು ನಾಗನನ್ನು ಪೂಜಿಸುವುದು ಒಂದು ಸಂಪ್ರದಾಯ. ಕೆಲವೆಡೆ ವಿವಾಹ ಸಂದರ್ಭದಲ್ಲಿ ವಿವಾಹಿತ ಸ್ತ್ರೀಯರು ಹುತ್ತವನ್ನು ಪೂಜಿಸಿ, ಅದರ ಮಣ್ಣನ್ನು ಪ್ರಸಾದವಾಗಿ ತರುತ್ತಾರೆ. ಸಂತಾನ – ಪ್ರಾಪ್ತಿಯ ಅಪೇಕ್ಷೆಯುಳ್ಳ ಸ್ತ್ರೀಯರು ನಾಗ ಇಲ್ಲವೆ ನಾಗಯುಗಲ ಮೂರ್ತಿಯನ್ನು ಪೂಜಿಸುವುದುಂಟು. ಅಲ್ಲದೆ ದೇವರಲ್ಲಿ ಕೇಳಿಕೊಂಡುದನ್ನು (ವ್ರತ) ಪೂರೈಸುವಂತೆ ಬೇಡಿ ಹೊಸ ನಾಗಮೂರ್ತಿಯನ್ನು (ನಾಗಕಲೆ = ನಾಗಶಿಲೆ) ಮಾಡಿಸಿ ಯಾವುದಾದರೊಂದು ದೇವಾಲಯದ ಪ್ರಾಂಗಣದಲ್ಲಿಯೇ ಇಲ್ಲವೆ ಮರದಡಿಯಲ್ಲೋ ಪ್ರತಿಷ್ಠಾಪಿಸುತ್ತಾರೆ.

ನಾಗನ ಈ ಸಂತಾನದಾಯಿತ್ವ ಸಾಮರ್ಥ್ಯವು ಭಾರತೀಯ ಜನ ಮನಸ್ಸಿನ ಅನೇಕ ಧೋರಣೆಗಳಿಂದ ವ್ಯಕ್ತವಾಗಿರುವುದು. ದಕ್ಷಿಣದಲ್ಲಿನ ಬಹುತೇಕ ಎಲ್ಲ ಪ್ರಮುಖ ಕ್ಷೇತ್ರಪಾಲಕ ದೇವರುಗಳೂ ತಮ್ಮ ನಾಗರೂಪತ್ವವನ್ನು ಉಳಿಸಿಕೊಂಡಿರುವುದೇ ಆಗಿವೆ. ದಕ್ಷಿಣದಲ್ಲಿನ ಅತ್ಯಂತ ಜನಪ್ರಿಯ ಪ್ರಭಾವೀ ಕ್ಷೇತ್ರಪಾಲಕ ದೇವನಾದ ಮುರುಗನು ತನ್ನ ಭಕ್ತರಿಗೆ ದರ್ಶನವೀಯುವುದು ನಾಗರೂಪದಿಂದಲೇ ಎಂಬುದು ಭಕ್ತರ ಸಾರ್ವತ್ರಿಕ ನಂಬಿಕೆ. ನಾಗದರ್ಶನವಾದಾಗ ತಮಗೆ ಮುರುಗ ಕಾಣಿಸಿಕೊಂಡನೆಂದು ಭಕ್ತರು ಆನಂದಪಡುವುದುಂಟು. ಮುರುಗನಂತೆಯೇ ಕಾರ್ತಿಕೇಯನೊಂದಿಗೆ ಏಕತ್ವವನ್ನು ಸಾಧಿಸಿದ ಸುಬ್ರಹ್ಮಣ್ಯನು ಪೂಜಿಸಲ್ಪಡುವುದು ಸಹ ಹುತ್ತ ಮತ್ತು ಅದರಲ್ಲಿರುವ ನಾಗನ ರೂಪವಾಗಿಯೇ. ಅವನ ಅನೇಕ ಪ್ರಖ್ಯಾತ ಮಂದಿರಗಳಲ್ಲಿ ಇಂದಿಗೂ ಕಾರ್ತಿಕೇಯ ಮೂರ್ತಿಯಂತೆಯೇ ಭವ್ಯವಾದ ಹತುತ ಹಾಗೂ ನಾಗಪ್ರತಿಮೆ ಇವೇ ಪೂಜಾ ವಿಷಯಗಳಾಗಿರುವುದು ಗಮನೀಯ. ಸುಬ್ಬರಾಯ ಎಂಬ ಸುಬ್ರಹ್ಮಣ್ಯನ ಲೌಕಿಕ ಹೆಸರು ‘ನಾಗರಾಜ’ ಎಂಬರ್ಥದ್ದೇ ಆಗಿದೆ.[6]

ಇನ್ನು ನಮ್ಮ ಕಡೆ ಭೈರವ ಮತ್ತು ನಾಗಸರ್ಪದ ಸಹಚರ್ಯವು ಸರ್ವತ್ರ ರೂಢಿಯಲ್ಲಿರುವಂಥ ವಿಚಾರ. ಭೈರವನು ಸರ್ಪರೂಪಿ, ಸರ್ಪಾಲಂಕೃತ ಹಾಗೂ ಆ ಕಾರಣವೇ ಸರ್ಪವಿಷ ಹಾರಿಯೂ ಆಗಿರುವನು ಎಂಬುದು ನಮ್ಮ ಗ್ರಾಮೀಣ ಬದುಕಿನಲ್ಲಿರುವ ದೃಢವಾದ ನಂಬಿಕೆ. ಆ ನಂಬಿಕೆ ರವಳನಾಥನು ವಿಷಯದಲ್ಲಿಯೂ ಸತ್ಯ. ರವಳನಾಥನ ಮತ್ತೊಂದು ವಾಹನವು ಶೇಷ ಎಂಬುದಂತೂ ಈಗಾಗಲೇ ವಿವರಿಸಲ್ಪಟ್ಟಿರುವ ಸಂಗತಿ. ಅವನ ಸರ್ಪವಿಷಹಾರಕ ಅಂಶವನ್ನು ಗಮನಿಸಿದಾಗ ಸರ್ಪ ಮತ್ತು ಅವನ ನಡುವೆ ದೃಢ ಸಂಬಂಧವೊಂದು ಸಿದ್ಧವಾಗುತ್ತದೆ. ಮಹಾರಾಷ್ಟ್ರದ ಖಂಡೋಬಾನನ್ನು ಸಹ ಸುಬ್ರಹ್ಮಣ್ಯನಂತೆಯೇ ಕಾರ್ತಿಕೇಯನೊಂದಿಗೆ ಸಂಬಂಧ ಜೋಡಿಸುವ ವಿಚಾರ ನಡೆದಿದೆ. ಜೇಜೂರಿಯಲ್ಲಿ ಇರುವ ಖಂಡೋಬಾನನ್ನು ದೇವಿಯ ಭಂಡಾರದಿಂದ ನೀರಿನ ಗಡಿಗೆಯ ಅಂಚಿನಲ್ಲಿ ಹುತ್ತದ ಪ್ರತೀಕವಾಗಿ ಪೂಜಿಸುತ್ತಾರೆ. ‘ಆದಿಮೈಲಾರ’ ಎಂಬ ಮೂಲ ರೂಪದ ಬಗ್ಗೆ ನನ್ನ ಅಭಿಪ್ರಾಯವೆಂದರೆ, ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿನ ಮಣ್ಮೈಲಾರವು (ಮಣ್ಣು ಮೈಲಾರ) ವಸ್ತುತಃ ಹುತ್ತಿನ ರೂಪದ್ದೇ ಹೌದು. ನಾಗ ಮತ್ತು ನೇಗಿಲಿನ ಏಕತ್ವದ ಪುರಾವೆಗಳೂ ನಮ್ಮ ಪರಂಪರೆಯಲ್ಲಿವೆ. ಆದಿಶೇಷನ ಅವತಾರವೆಂದು ತಿಳಿಯಲಾಗಿರುವ ಬಲರಾಮ ‘ಹಲ – ಧರ‘ನಾಗಿರುವುದು ವಿಶೇಷ ವಿಚಾರವೇ. ಕಾಶ್ಮೀರದಲ್ಲಿ ಶೇಷನ ಸಾಂಕೇತಿಕ ಚಿಹ್ನೆಯು ಸಹ ನೇಗಿಲೇ ಆಗಿದೆ.[7]

ಕ್ಷೇತ್ರ ಮತ್ತು ಕ್ಷೇತ್ರಪತಿ, ಕ್ಷೇತ್ರಪಾಲಕರ ಉಪಾಸನೆಗಾಗಿ ದಕ್ಷಿಣ ಭಾರತದಲ್ಲಿ ಅನುಕ್ರಮವಾಗಿ ಹುತ್ತ ಮತ್ತು ನಾಗಗಳ ಪ್ರತೀಕಗಳನ್ನೇ ಬಳಸಲಾಗಿದೆ. ಇವು ಸ್ತ್ರೀ – ಪುರುಷ ತತ್ತ್ವಗಳ ಪ್ರತೀಕಗಳಾಗಿವೆ ಎಂಬುದು ದೃಗ್ಗೋಚರ. ಜನಪದ ಧಾರ್ಮಿಕ ವಿಶ್ವದಲ್ಲಿನ ಈ ‘ಜಗತಃ ಪಿತರೌ’ ನಮ್ಮ ದೇವತಾ ಸಮೂಹದ ಸ್ವರೂಪವನ್ನು ಅನಾವರಣಗೊಳಿಸುವಲ್ಲಿ ಬಹಳೇ ಪ್ರಯೋಜನಕಾರಿ ಎಂಬುದರಲ್ಲಿ ಸಂಶಯವಿಲ್ಲ.

ರವಳನಾಥ ಮತ್ತು ಸಾಂತೇರಿ

ಹುತ್ತ ಮತ್ತು ನಾಗ ಈ ಪ್ರತೀಕಗಳ ಸಂದರ್ಭದಲ್ಲಿ ಜೋತಿಬಾನ ‘ರವಳನಾಥ’ ಎಂಬ ಪರ್ಯಾಯ ನಾಮವನ್ನು ಗಮನಿಸುವುದು ಅವಶ್ಯ. ಕಾರಣ ಜೋತಿಬಾನ ಸಹಚಾರಿಣಿಯಾದ ಯಮಾಯಿಯು ಹೇಗೆ ‘ರೇಣುಮಯಿ – ಪೃಥ್ವಿ) ಆಗಿರುವಳೋ, ಹಾಗೆಯೇ ರವಳನಾಥನ ಸಹಚಾರಿಣಿಯಾದ ಸಾಂತೇರಿಯು ಗೋಮಾಂತಕ ದಕ್ಷಿಣ ಕೊಂಕಣ ಭಾಗದಲ್ಲಿ ‘ಭೂಮಿಕಾ’ (ಪೃಥ್ವಿ) ಎಂಬ ಮತ್ತೊಂದು ಹೆಸರಿನಿಂದ ಸುಪರಿಚಿತಳಾಗಿದ್ದಾಳೆ. ಆಂಧ್ರಪ್ರದೇಶದಲ್ಲಿ ರೇಣುಕೆ ಹತ್ತಿರ ರೂಪದಲ್ಲಿ ಪೂಜಿಸಲ್ಪಡುತ್ತಿರುವಂತೆಯೇ ಗೋಮಾಂತಕ – ದಕ್ಷಿಣ ಕೊಂಕಣ ಪ್ರದೇಶದಲ್ಲಿ ಸಾಂತೇರಿಯು ರೋಯಣ – ರವಣ ರೂಪದಲ್ಲಿ ಅರ್ಥಾತ್‌ ಹುತ್ತಿನ ರೂಪದಲ್ಲಿ ಪೂಜಿಸಲ್ಪಡುತ್ತಿದ್ದಾಳೆ. ಕೆಲವೆಡೆ ರವಳನಾಥನ ಪ್ರಮುಖ ವಾಹನವನ್ನು ‘ಆಮೆ’ ಎಂದು ನಂಬಿರುವುದೂ ಉಂಟು. ಆದರೆ ಬಹಳಷ್ಟು ಕಡೆಗಳಲ್ಲಿ ವ್ಯಕ್ತವಾಗಿರುವುದು ಅಶ್ವ ಮತ್ತು ಸರ್ಪಗಳು (ಜೋತಿಬಾನ ವಾಹನಗಳ ಸಮರೂಪತೆ) ಎಂಬುದಾಗಿಯೇ. ಕೇದಾರನಾಥ ಅಥವಾ ಕೇದಾರೇಶ್ವರ ಎಂಬ ಹೆಸರಿನಲ್ಲಿ ಹೇಗೆ ಪೂರ್ವಪದವು ಕ್ಷೇತ್ರವಾಚಕವಾಗಿರುವುದೋ, ಹಾಗೆಯೇ ರವಳನಾಥ ಅಥವಾ ರವಳೇಶ್ವರ ಎಂಬ ಹೆಸರಿನಲ್ಲಿನ ಪೂರ್ವಪದವೂ ಕ್ಷೇತ್ರ ಪ್ರತೀಕವೇ. ‘ಳ’ ಮತ್ತು ‘ಣ‘ಗಳ ಅಭೇದದಿಂದ ರೋಯಣ – ರವಣದಿಂದ ‘ರವಳ’ ಎಂಬ ಶಬ್ದ ವ್ಯುತ್ಪತ್ತಿಯಾಗಿದ್ದು, ಗೋಮಾಂತಕೀಯ ಮರಾಠಿಯಲ್ಲಿ ಅದಕ್ಕೆ ‘ಹುತ್ತ’ ಎಂಬರ್ಥ ಬರುವುದುಂಟು. ‘ರವಳ’ (<ರವಣ<ರೋಯಣ) ಎಂಬ ಪದವು ಸಾಂತೇರಿಯ ದ್ಯೋತಕವಾಗಿದ್ದು, ರವಳನಾಥ ಆಕೆಯ ಪತಿ (ನಾಥ)ಯಾಗಿದ್ದಾನೆ. ಕೇದಾರನಾಥ, ಕೇದಾರೇಶ್ವರ ಎಂಬ ಹೆಸರುಗಳಂತೆಯೇ ರವಳನಾಥ, ರವಳೇಶ್ವರ ಎಂಬ ಹೆಸರುಗಳು ಈ ದೇವನ ಕ್ಷೇತ್ರ ಪತಿತ್ವವನ್ನು ಸ್ಪಷ್ಟೀಕರಿಸುವುವಾಗಿವೆ. ಕ್ಷೇತ್ರದ ಹುತ್ತದ – ಪ್ರತೀಕದಿಂದಾಗಿ ಕ್ಷೇತ್ರಪತಿಗೆ ನಾಗ ರೂಪತ್ವವು ಸಹಜವಾಗಿಯೇ ಬರುತ್ತದೆ.

ಮಹಾರಾಷ್ಟ್ರದಲ್ಲಿನ ಪ್ರಧಾನ ಕ್ಷೇತ್ರಪಾಲಕ ದೇವರಾದ ಭೈರವನ ಪತ್ನಿ ಜೋಗೇಶ್ವರಿಯ ಬಗ್ಗೆಯೂ ಇಲ್ಲಿಯೇ ಚರ್ಚಿಸುವುದು ಅಗತ್ಯ. ಭೈರವ ಸ್ತುತಿಪರ ಮರಾಠ ವಾಙ್ಮಯದಲ್ಲಿ ಅವನನ್ನು ‘ಸ್ಕಂದ ಬಾಂಧವ’ ಎಂಬುದಾಗಿ ಕರೆದಿರುವಂತೆಯೇ, ‘ಶೇಷ ಜಾಧವ’ (ಶೇಷಕನ್ಯೆಯ ಪತಿ) ಎಂದೂ ಹೇಳಿರುವುದುಂಟು. ಜೋಗೇಶ್ವರಿಯ ಭಕ್ತಿಗೀತೆಗಳನ್ನು ಹಾಡುವಾಗ ಜನರು ಹೇಳುವುದು, ‘ಶೇಷಕನ್ಯಾ ಎನಿಸಿಕೊಂಡಿಹೆ; ನಿನ್ನ ಲೀಲೆಯೊ ಅಗಾಧ |’ ಎಂಬುದಾಗಿ. ಅಂದರೆ ಮರಾಠರ ಮನಸ್ಸಿನಲ್ಲಿ ಜೋಗೇಶ್ವರಿಯ ಪ್ರತಿಮೆ ಮೂಡಿರುವುದು ‘ಶೇಷಕನ್ಯಾ‘ಳ ರೂಪದಲ್ಲಿಯೇ. ಮಾತೃಶಕ್ತಿಯ ಚರಿತ್ರೆಯಲ್ಲಿ ಪರುಷ ತತ್ತ್ವು ಪಿತ, ಪತಿ, ಬಂಧು ಹಾಗೂ ಪುತ್ರ ಈ ಎಲ್ಲ ಸಂಬಂಧ ಮುಖೇನ ಬರುವುದನ್ನು ಈಗಾಗಲೇ ವಿವರಿಸಲಾಗಿದೆ. ಜೋಗೇಶ್ವರಿ ಶೇಷಕನ್ಯೆಯಾಗಿರುವಂತೆ, ಶೇಷಪತ್ನಿಯೂ ಆಗಿರುವುದು ಇಲ್ಲಿ ಗಮನೀಯ.

ಭೈರವ ದೇವನು ಕ್ಷೇತ್ರಪಾಲಕನಾದರೆ, ಜೋಗೇಶ್ವರಿ ಕ್ಷೇತ್ರಸ್ವರೂಪಿ. ಅವಳ ಹೆಸರು ‘ಯೋಗೇಶ್ವರಿ’ ಎಂಬ ಸಂಸ್ಕೃತ ಹೆಸರಿನಿಂದ ಬಂದುದಾಗಿದೆಯೆಂದು ಭಾವಿಸಿರುವುದು ಸ್ವಾಭಾವಿಕವೇ. ಆದರೆ ‘ಯೋಗೇಶ್ವರಿ’ ಎಂಬ ಹೆಸರು ಅವಳ ಕ್ಷೇತ್ರ ಸ್ವರೂಪಕ್ಕೆ ಕೊಂಚವೂ ಸರಿ ಹೊಂದುವಂಥವಲ್ಲ. ಯೋಗೇಶ್ವರಿ – ಜೋಗೇಶ್ವರಿ ಎಂಬ ಹೆಸರು ದಕ್ಷಿಣದ ‘ಜೋಗುಳಾಂಬಾ’ ಎಂಬುದರ ಸಂಸ್ಕೃತೀಕರಣವಾಗಿದೆ. ‘ಜೋಗುಳಾಂಬಾ’ ಸಂತಾನದಾತ್ರಿ ಮಾತೆ. ಈ ಹೆಸರು ಅವಳ ಮಾತೃರೂಪದ ದ್ಯೋತಕವಾಗಿರುವುದರಿಂದ, ಅವಳ ಕ್ಷೇತ್ರ ಸ್ವರೂಪಕ್ಕೂ ಸಂಪೂರ್ಣ ಸರಿಹೊಂದುತ್ತದೆ. ಜೋಗೇಶ್ವರಿಯ ಈ ಸ್ವರೂಪ ಬೋಧದಲ್ಲಿಯೇ ಇರುವುದಾಗಿದೆ ಭೈರವನ ಕ್ಷೇತ್ರಾಪಾಲಕ ಸ್ವರೂಪದ ಸಾರ್ಥಕತೆಯು. ಆಂಧ್ರಪ್ರದೇಶದ ಆಲಂಪುರದಲ್ಲಿ ಇರುವ ಯೋಗಿನಿ ಅಥವಾ ಯೋಗೇಶ್ವರಿಯು ಅಷ್ಟಾದಶ ಶಕ್ತಿಗಳಲ್ಲಿ ಒಬ್ಬಳು ಎನಿಸಿದ್ದಾಳೆ. ಆದರೆ ಸ್ಥಳೀಯ ಉಪಾಸಕರು ಅವಳನ್ನು ಗುರುತಿಸುತ್ತಿರುವುದು ಮಾತ್ರ ‘ಜೋಗುಳಾಂಬಾ’ ಎಂಬುದಾಗಿಯೇ.

ಕ್ಷೇತ್ರ ಮತ್ತು ಕ್ಷೇತ್ರಪಾಲ

ಈವರೆಗೆ ಜೋತಿಬಾನ ಹೆಸರು – ರೂಪ, ಅವನ ಉಪಾಸನಾ – ಸ್ವರೂಪ ಮತ್ತು ಅವನ ಬಗೆಗಿರುವ ಕಥೆ – ಗಾಥೆಗಳನ್ನು ಕುರಿತು ಮಾಡಿರುವ ಪರಿವೀಕ್ಷಣೆಯು ಅನೇಕ ದೃಷ್ಟಿಗಳಿಂದ ಉದ್ಬೋಧಕವೆನಿಸಿದೆ. ಜೋತಿಬಾನ ಸಂಶೋಧನೆಯ ನಿಮಿತ್ತವಾಗಿ ನನಗೆ ದಕ್ಷಿಣ ಭಾರತದಲ್ಲಿ ಮುರುಗನ್, ಅಯ್ಯಪ್ಪನ್, ಶಾಸ್ತಾ ಇತ್ಯಾದಿ ಹೆಸರುಗಳಿಂದ ಖ್ಯಾತವಾಗಿರುವ ಕ್ಷೇತ್ರಪಾಲಕ ದೇವರುಗಳು ಹಾಗೂ ಖಂಡೋಬಾ, ರವಳನಾಥ ಎಂಬ ಹೆಸರುಗಳಿಂದ ಮಹಾರಾಷ್ಟ್ರದಲ್ಲಿ ಪ್ರಸಿದ್ಧವಾಗಿರುವ ಕ್ಷೇತ್ರಪಾಲಕರುಗಳ ಸ್ವಭಾವ ಒಂದೇ ಆಗಿರುವುದು ಕಂಡುಬಂದಿತು. ಇದು ಶಿಪರಿವಾರದಲ್ಲಿನ ಸ್ಕಂದ ಅಥವಾ ಭೈರವನೊಂದಿಗೆ ತಾದಾತ್ಮ್ಯ ಸಾಧಿಸುವ ಪ್ರಯತ್ನವಾಗಿರಬಹುದು. ಆದರೆ ಈ ಕಾರಣಕ್ಕಾಗಿ ಅವರ ಕ್ಷೇತ್ರಪಾಲ ಅಥವಾ ಕ್ಷೇತ್ರಪತಿಯ ಭೂಮಿಕೆ (ಸ್ಥಾನ)ಗೆ ಯಾವ ಚ್ಯುತಿಯೂ ಬಂದಿಲ್ಲ. ಅವರ ಸಾಪೇಕ್ಷತೆಯಿಂದ ತಂತಾನೆ ಪ್ರಕಾಶನಕ್ಕೆ ಬರುವ ದೇವಿಯೂ ಸೇರಿಕೊಂಡಂತೆ ಈ ಕ್ಷೇತ್ರಗಳಿಗೆ ಪ್ರತಿನಿಧಿಯಾಗಿದ್ದಾರೆ – ಪೃಥ್ವಿಯ ಪ್ರತಿನಿಧಿಯಾಗಿದ್ದಾರೆ ಎಂಬುದೂ ಈ ಮೂಲಕ ಸ್ಪಷ್ಟವಾಯಿತು. ಅಂದರೆ ಕ್ಷೇತ್ರ ಮತ್ತು ಕ್ಷೇತ್ರಪತಿಯ ಪ್ರತೀಕಗಳಾಗಿ ಪೂಜಿಸುತ್ತಿರುವ ಈ ‘ಜಗತಾಚಿ ಪಿತರೆ’ ಯರು ವಿಶ್ವಸೃಷ್ಟಿಯ ಕಾರ್ಯವನ್ನು ನಿರಂತರವಾಗಿ ಸಾದರಪಡಿಸುತ್ತಲೇ ಬಂದಿದ್ದಾರೆ. ಎಂತಲೇ ಮಾನವ ಸಂಸ್ಕೃತಿಯ ಆರಂಭ ಕಾಲದಿಂದಲೂ ಅವರ ಸೃಜನಶೀಲ ಸಾಮರ್ಥ್ಯದ ಪೂಜೆಯು ಅತ್ಯಂತ ನಿಷ್ಠೆಯಿಂದ ನಡೆಯುತ್ತಾ ಬಂದಿದೆ ಎಂಬುದು ಗಮನೀಯ ಅಂಶ.

 

[1]ಮರಾಠೆ ಆಣಿ ತ್ಯಾಂಚೀ ಭಾಷಾ: ಭಾಸ್ಕರರಾವ್ ಜಾಧವ, ಕೊಲ್ಹಾಪುರ, ೧೯೩೨, ಪುಟ. ೪೩ – ೪೫.

[2]ಪೂರ್ವೋಕ್ತ, ಪುಟ.೪೫.

[3]ಪೂರ್ವೋಕ್ತ, ಪುಟ. ೪೭.

[4] ನವಭಾರತ‘: ವರ್ಷ:೨೭, ಅಂಕ:೫. ಫೆಬ್ರವರಿ ೧೯೭೪ (ಕೊಲ್ಹಾಪುರಚ್ಯಾ ಮಹಾಲಕ್ಷ್ಮೀಚೆ ದೇವಾಲಯ: ವಾ.ವಿ.ಮಿರಾಶಿ, ಪುಟ.೬೫ – ೭೧.

[5]ನೋಡಿ: ಪ್ರಸ್ತುತ ಕೃತಿಯಲ್ಲಿನ ಸುಬ್ರಹ್ಮಣ್ಯಎಂಬ ಪ್ರಕರಣ.

[6]ನಾಗಭೂಮಿ ಕಾಶ್ಮೀರ:ನಾ. ಗೋ. ತವಕರ, ಮುಂಬಯಿ, ೧೯೭೪, ಪುಟ.೧೯.

[7]ನೋಡಿ: ಪ್ರಸ್ತುತ ಕೃತಿಯಲ್ಲಿನ ಜೋಗುಳಾಂಬಾಎಂಬ ಪ್ರಕರಣ.