ಜೋತಿಬಾ ದೇವರನ್ನು ಕುರಿತ ಸಂಶೋಧನ ಬರೆಹದಲ್ಲಿ ಅವನಿಗೆ ಸಮರೂಪನಾಗಿರುವ ಸುಬ್ರಹ್ಮಣ್ಯ ದೇವರನ್ನು ಕುರಿತು ಉಲ್ಲೇಖಿಸಲಾಗಿತ್ತು. ದಕ್ಷಿಣದಲ್ಲಿ ಜನಪ್ರಿಯ ದೇವರಾಗಿರುವವನು ಈತ. ಸುಬ್ರಹ್ಮಣ್ಯವೆಂಬುದು ಸ್ಕಂದನ ಮತ್ತೊಂದು ಹೆಸರು. ಭಾರತೀಯ ದೇವತಾ ಮಂಡಲದಲ್ಲಿ ಸ್ಕಂದನ ಸ್ಥಾನ ವಿಶೇಷವಾದುದು; ಅವನ ಜನ್ಮಕಥೆಯು ಅದ್ಭುತಗಳಿಂದ ತುಂಬಿದುದು; ಅವನ ಚರಿತ್ರೆಯು ವೀರತ್ವ ಭರಿತವಾಗಿ ಬೆಳಗುತ್ತಿದೆ ಹಾಗೂ ಅವನ ಉಪಾಸನಾ – ಪರಂಪರೆಯು ಹಲವಾರು ಗೂಢತೆಗಳಿಂದ ತುಂಬಿ ಗಂಭೀರವಾದುದಾಗಿದೆ. ಅಥರ್ವಣ ವೇದದ ಪರಿಶಿಷ್ಟದಲ್ಲಿ ಅವನನ್ನು ‘ಧೂರ್ತ’ ಎನ್ನಲಾಗಿದೆ; ಚೋರರು ಅವನನ್ನು ‘ತಮ್ಮ’ ದೇವರೆಂದು ಒಪ್ಪಿಕೊಂಡಿದ್ದಾರೆ; ನವಜಾತ ಶಿಶುಗಳನ್ನೆಲ್ಲ ಬಾಧಿಸುವ ಬಾಲಗ್ರಹಗಳಿಗೆಲ್ಲ ಆತನೇ ‘ಸ್ವಾಮಿ’. ಅಗ್ನಿಯು ಆತನ ಗರ್ಭವನ್ನು ಉದರದಲ್ಲಿ ಹೊತ್ತ ಪುರಾಣ ಕಥೆಯು ಸರ್ವರೂಢವಾಗಿದೆ. ಹಾಗೆಯೇ, ಅವನ ‘ಕುಮಾರ’ ಎಂಬ ಹೆಸರೂ ಸಹ ಅಗ್ನಿ ವಾಚಕವೇ. ಶಿವ – ಶಕ್ತಿಯರ ಜೇಷ್ಠ ಪುತ್ರನಾಗಿದ್ದರೂ ಆತನಿಗೆ ಶಿವನಿಗಿಂತಲೂ ಶಕ್ತಿಯೊಂದಿಗೆ ಪ್ರಾಣಾತ್ಮಕವಾದ ಗಟ್ಟಿ ಸಂಬಂಧವಿರುದು. ಮಾತೃಕೆಯರ ಸಮೂಹದಲ್ಲಿ ಅವನ ಉಪಸ್ಥಿತಿ ಇಲ್ಲದಿರುವುದಂತೂ ಸಾಧ್ಯವಿಲ್ಲ. ಬಾಲಜನ್ಮದ ಕ್ಷಣದಿಂದಲೇ ಪ್ರಭುತ್ವ ಮೆರೆದ ಷಷ್ಠಿಯೇ ಅವನ ಪತ್ನಿ. ಕುಕ್ಕಟ ಅಥವಾ ಮಯೂರವೇ ಅವನ ವಾಹನ. ಶಕ್ತಿ ಅವನ ಪ್ರಮುಖ ಆಯುಧ. ಆರು ಜನ ಕೃತ್ತಿಕೆಯರೊಂದಿಗೆ ಅವನ ಜನನ ಸಂಬಂಧವನ್ನು ಕಲ್ಪಿಸಿರುವುದುಂಟು. ಆ ಕಾರಣವಾಗಿಯೇ ಆತನಿಗೆ ‘ಕಾರ್ತಿಕೇಯ’ ಮತ್ತು ‘ಷಣ್ಮುಖ’ ಎಂಬ ಹೆಸರುಗಳು ಬಂದುವು. ಜಗತ್ತಿನ ಪುರಾಣ ಕಥೆಗಳಲ್ಲಿನ ‘ಬಾಲದೇವ’ (Child Gods) ರುಗಳಲ್ಲೆಲ್ಲ ಸ್ಕಂದ – ಕಾರ್ತಿಕೇಯನ ಮಹಿಮೆಯು ಅಪಾರ.

ಸ್ಕಂದ ಮತ್ತು ಕ್ಷೇತ್ರಪಾಲ ದೇವ

ಸ್ಕಂದ ಕಾರ್ತಿಕೇಯನ ದೇವತಾ ಶಾಸ್ತ್ರೀಯ ರಹಸ್ಯದ ಅನಾವರಣ ಒಂದು ಗಂಭೀರ ವಿಷಯವೇ ಸರಿ. ಈ ಮೂಲಕ ಭಾರತೀಯ ದೈವ ಜಗತ್ತಿನ ಹಲವಾರು ರಹಸ್ಯಗಳು ತಂತಾನೆ ಅನಾವರಣಗೊಳಿಸುವುದಕ್ಕೆ ಸಾಧ್ಯವಿದೆ. ಆದರೆ ಇಲ್ಲಿ ನನಗೆ ಮುಖ್ಯವಾದುದು ಆ ಮಹಾ – ರಹಸ್ಯದ ಒಂದು ಲಘುತಮ ಅಂಶವನ್ನು ಕುರಿತಂತಹ ವಿಚಾರ ಮಾತ್ರ. ಅದೂ ಕೂಡ ಅಪ್ರತ್ಯಕ್ಷವಾದ ಸ್ವರೂಪದಲ್ಲಿ.

ದಕ್ಷಿಣ ಭಾರತದಲ್ಲಿ ಇಂದಿಗೂ ಸ್ಕಂದೋಪಾಸನೆಯು ಅಧಿಕವಾಗಿಯೇ ನಡೆಯುತ್ತಿದೆ. ಅನೇಕ ಕಡೆ ಅವನ ಪ್ರಸಿದ್ಧ ಯಾತ್ರಾಸ್ಥಳಗಳೂ ಇವೆ; ಅವನ ಸ್ವತಂತ್ರ ಮಂದಿರಗಳೇ ಅಲ್ಲದೆ, ಶಿವಮಂದಿರದಲ್ಲಿನ ಪರಿವಾರ ದೇವತೆಗಳಲ್ಲಿಯೂ ಅವನಿಗೆ ಒಂದು ನಿಶ್ಚಿತ ನೆಲೆಯು ಇರುವುದು. ದೇವಸೇನಾ ಮತ್ತು ವಲ್ಲಿ ಎಂಬ ಹೆಸರಿನ ಅವನ ಪತ್ನಿಯರನ್ನೂ ಅವನ ಜೊತೆಗೆ ಪ್ರತಿಷ್ಠಾಪಿಸಲಾಗಿರುತ್ತದೆ.

ದಕ್ಷಿಣ ಭಾರತದಲ್ಲಿ ಪ್ರಭಾವಯುತವಾಗಿರುವ ಈ ಸ್ಕಂದೋಪಾಸನೆಯ ಸ್ವರೂಪದ ಬಗ್ಗೆ ಮತ್ತೆ ಮತ್ತೆ ವೀಕ್ಷಣೆ ಮಾಡಿದಾಗ, ಒಂದು ಮಹತ್ವದ ವಿಶಿಷ್ಟ ಅಂಶವು ನಮ್ಮ ಗಮನಕ್ಕೆ ಬರುತ್ತದೆ. ಅದೆಂದರೆ ದಕ್ಷಿಣ ಭಾರತದಲ್ಲಿ ಬಹಳ ಪೂರ್ವದಿಂದಲೇ ಅಯ್ಯಪ್ಪನ್, ಶಾಸ್ತಾ, ಮುರುಗನ್ ಇತ್ಯಾದಿ ಹೆಸರುಗಳಿಂದ ಮೆರೆಯುತ್ತಿದ್ದ ಪ್ರಮುಖ ಕ್ಷೇತ್ರಪಾಲಕ ದೇವರುಗಳಿವಯೋ ಅವೆಲ್ಲ ಕಾಲಾಂತರದಲ್ಲಿ ಸ್ಕಂದೋಪಾಸನೆಯಲ್ಲಿ ಅಂತಿಮ ರೂಪು ಪಡೆದುವು ಎಂಬುದು. ಈ ದೇವರುಗಳಿಗೂ ಕೊಂಚ ಸ್ಕಂದರೂಪು ನೀಡಿರಬಹುದು, ಸ್ಕಂದ ಚರಿತ್ರೆಯನ್ನು ಪ್ರಸ್ಥಾಪಿಸಿರಬಹುದು, ಸ್ಕಂದನಾಮವನ್ನೇ ಬಳಸುತ್ತಲೂ ಇರಬಹುದು. ಆದರೆ ಇಂದಿಗೂ ಅವರ ಮೂಲ ರೂಪ, ಮೂಲಕಥೆ – ಗಾಥೆಗಳು ಮತ್ತು ಮೂಲ ಹೆಸರುಗಳಲ್ಲಿ ಯಕ್ಕಿಂಚಿತ್ತಾದರೂ ವಿಸ್ಮೃತಿ ಆವರಿಸಿಲ್ಲ ದಕಷಿಣೀಯರ ಜನಮಾನಸದಲ್ಲಿ. ಅದಕ್ಕಿಂತಲೂ ಹೆಚ್ಚಾಗಿ ಆ ದೇವರುಗಳ ಉಪಾಸನೆ ಮತ್ತು ಸಂಕೀರ್ತನೆಗಳಿಗಾಗಿ ರೂಪುಗೊಂಡಿರುವ ವಾಙ್ಮಯ ಸ್ವರೂಪ ಅತ್ಯಂತ ಗಮನೀಯ. ಅದರಲ್ಲಿ ಮೂಲದ ಕ್ಷೇತ್ರಪಾಲಕ ದೇವರು ಮತ್ತು ಅವರನ್ನು ಹೊಸ ರೂಪದಲ್ಲಿ ಪ್ರತಿಷ್ಠಿತಗೊಳಿಸಿರುವಲ್ಲಿ ಸ್ಕಂದ – ಕಾರ್ತಿಕೇಯರ ಪ್ರಕೃತಿ ವಿಶೇಷಗಳು, ಕಥೆ – ಗಾಥೆಗಳು ಮತ್ತು ನಾಮವು ಸಂಗಮವಾಗಿವೆ. ಮಹಾರಾಷ್ಟ್ರದ ಪ್ರಸಿದ್ಧ ದೇವರಾದ ಖಂಡೋಬಾನೊಂದಿಗೆ ಸ್ಕಂದ – ಭೈರವರ ಸಂಬಂಧವನ್ನು ಕಲ್ಪಿಸಲಾಗಿದೆ. ಸ್ಕಂದಷಷ್ಟಿಯಂದೇ ಖಂಡೋಬಾನ ಕುಲಧರ್ಮದ ದಿನವೂ ಆಗಿದೆ ಮಹಾರಾಷ್ಟ್ರದಲ್ಲಿ. ಕ್ಷೇತ್ರಪಾಲಕ ದೇವರುಗಳು ಸ್ಕಂದನ ರೂಪದಲ್ಲಿ ಪ್ರತಿಷ್ಠಿತವಾಗಬೇಕು ಎಂಬಂಥ ವಸ್ತುಸ್ಥಿತಿಯು ಸ್ಕಂದನ ಮೂಲ ಸ್ವರೂಪದ ಮೇಲೆ ನಿಃಸಂಶಯವಾಗಿಯೂ ಪ್ರಕಾಶನ ಬೀರುವಂಥದೇ ಆಗಿದೆ.

ದಕ್ಷಿಣದಲ್ಲಿನ ಜನಪ್ರಿಯ ಹೆಸರು: ಸುಬ್ರಹ್ಮಣ್ಯ

ದಕ್ಷಿಣ ಭಾರತದಲ್ಲಿ ‘ಸುಬ್ರಹ್ಮಣ್ಯ’ ಎಂಬ ಸ್ಕಂದನಾಮವು ಅತ್ಯಂತ ಜನಪ್ರಿಯವಾದುದು. ದಾಕ್ಷಿಣಾತ್ಯ ವಾಙಮಯ ಹಾಗೂ ಲೋಕ ವ್ಯವಹಾರದಲ್ಲಿ ಈ ಹೆಸರಿಗೆ ಬಹಳೇ ಗೌರವವಿದೆ. ಈ ದೇವರ ಹೆಸರನ್ನು ವ್ಯಕ್ತಿಗಳಿಗೆ ಇಡುವ ರೂಢಿಯು ವ್ಯಾಪಕವಾಗಿರುವುದರಿಂದ ವ್ಯಕ್ತಿನಾಮಗಳಾಗಿ ಈ ಹೆಸರು ಬಹು ದೊಡ್ಡ ಪ್ರಮಾಣದಲ್ಲಿಯೇ ಬಳಕೆಯಾಗುತ್ತಲಿದೆ. ಸುಬ್ರಹ್ಮಣ್ಯ, ಬಾಲಸುಬ್ರಹ್ಮಣ್ಯ, ಸುಬ್ಬರಾವ್, ಸುಬ್ಬರಾಯ, ಸುಬ್ಬಲಕ್ಷ್ಮಿ ಇತ್ಯಾದಿ ಹೆಸರುಗಳು ದಕ್ಷಿಣದಲ್ಲಿ ಬಹಳವಾಗಿಯೇ ಕಂಡು ಬರುತ್ತವೆ. ಮಹಾರಾಷ್ಟ್ರದಲ್ಲಿ ಖಂಡೋಬಾನ ಉಪಾಸನೆಯ ಪ್ರಭಾವದಿಂದಾಗಿ ಹೇಗೆ ಖಂಡೇರಾಯ, ಮ್ಹಾಳಸಾಕಾಂತ, ಹೈಬತಿ(ಹಯಪತಿ), ಮಹಿಪತಿ, ಮೈಲಾರ, ಮಾಲೋಜಿ – ಇತ್ಯಾದಿ ಹೆಸರುಗಳು ಬಹಳವಾಗಿ ಕಾಣುವ ರೀತಿಯದ್ದಾಗಿದೆಯೋ ಇದೂ ಸಹ ಅದೇ ರೀತಿಯದ್ದು.

ಸ್ಕಂದನ ಈ ಹೆಸರು ಬಾಹ್ಯವಾಗಿ ಬಹಳ ಪ್ರತಿಷ್ಠಿತವಾಗಿರುವುದಾದರೂ, ಅಷ್ಟು ಸರಳವಾದುದಂತೂ ಅಲ್ಲ. ಆ ಹೆಸರೇ ದೇವತಾ ವಿಷಯವಾಗಿ ಹೆಚ್ಚು ಕುತೂಹಲವನ್ನು ತರುವಂಥದ್ದಾಗಿದೆ. ‘ಬ್ರಹ್ಮಣ್ಯ’ ಎಂಬುದರ ಅರ್ಥ ಪವಿತ್ರ. (ಈ ಸಂಸ್ಕೃತ ಶಬ್ದಕ್ಕೆ ಪವಿತ್ರ ಅರಳೀಮರ, ಮುಂಜತೃಣ, ವಿಷ್ಣು, ಶನಿ ಎಂದು ಮುಂತಾದ ಅರ್ಥಗಳಿವೆ.) ಸುಬ್ರಹ್ಮಣ್ಯ ಎಂದರೆ ಅತ್ಯಂತ ಪವಿತ್ರವೆಂದರ್ಥ. ಆದರೆ ಸ್ಕಂದನಿಗೆ ಈ ವಿಸೆಷಣಾತ್ಮಕ ಹೆಸರನ್ನು ನಿಶ್ಚಿತವಾಗಿ ಬಳಸಿದುದೇಕೆ, ಇದರ ರಹಸ್ಯವೇನು? ಏಕೆಂದರೆ ಇದು ಸರ್ವಸಾಧಾರಣ ರೂಪದ ವಿಶೇಷಣವಾಗಿದ್ದು, ಯಾವುದೇ ದೇವರಿಗಾದರೂ ಹೊಂದುವಂಥದಾಗಿದೆ.

ಸುಬ್ರಹ್ಮಣ್ಯನ ಪ್ರತೀಕ

‘ಯಾತ್ರಾ ಕಲ್ಪಕತಾ’ ಎಂಬ ಪ್ರಾಚೀನ ಪ್ರವಾಸ ವರ್ಣನ ಕೃತಿಯನ್ನು ಅಭ್ಯಾಸ ಮಾಡುತ್ತಿದ್ದಾಗ ಹೆಚ್ಚಾಗಿ ತುಡಿಯಲಾರಂಭಿಸಿದ್ದೆಂದರೆ, ಸುಬ್ರಹ್ಮಣ್ಯನ ಬಗೆಗಿನ ಗೂಢತೆ. ಈ ಕೃತಿಯಲ್ಲಿ ಸರದಾರ ರಘುನಾಥರಾವ್ ವಿಂಚೂರಕರ ಎಂಬುವವರು ಕ್ರಿ.ಶ. ೧೮೮೧ರಿಂದ ೧೮೮೩ರ ಕಾಲದಲ್ಲಿ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೈಗೊಂಡ ಯಾತ್ರೆಯ ವಿವರಗಳಿವೆ. ಅದನ್ನು ಬರೆದವರು ಶ್ರೀಗೌರೀಶಂಕರಶಾಸ್ತ್ರಿ ಅನಂತಶಾಸ್ತ್ರಿ. ಸ.ರಘುನಾಥರಾವ್ ಅವರು ತಮ್ಮ ಯಾತ್ರಾ ಪರಿಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸುಬ್ರಹ್ಮಣ್ಯವೆಂಬ ಕ್ಷೇತ್ರಕ್ಕೂ ಹೋಗಿದ್ದರು. ಶ್ರೀಗೌರಿಶಂಕರ ಶಾಸ್ತ್ರೀಯವರು ಆ ಯಾತ್ರೆಯ ವರ್ಣನೆಯಲ್ಲಿ ನೀಡಿರುವ ಈ ವಿವರಗಳು ಅತ್ಯಂತ ಮಹತ್ವದ್ದಾಗಿವೆ:[1] ದೊಡ್ಡ ರಸ್ತೆಯನ್ನು ಬಿಟ್ಟು ಸುಬ್ರಹ್ಮಣ್ಯದೆಡೆಗೆ ನಡೆಯತೊಡಗಿದಾಗ, ಅವರಿಗೆ ಎದುರಾದುದು ಬಹಳ ದಟ್ಟವಾದ ಕಾಡು. ಕೊಂಚವಾದರೂ ಸೂರ್ಯಕಿರಣಗಳು ಬೀಳದಂತಹ ರಸ್ತೆಯಲ್ಲಿ… ನಡೆದರೆ ಸಿಗುತ್ತದೆ ಸುಬ್ರಹ್ಮಣ್ಯವೆಂಬ ಕ್ಷೇತ್ರ. ಅಲ್ಲಿನ ಪುರಾತನ ಮಂದಿರದಲ್ಲಿ ಇರುವುದು ಆಳೆತ್ತರಕ್ಕಿರುವ ಒಂದು ಹುತ್ತ. ಅದನ್ನು ಪೂಜಿಸುವ ಬ್ರಾಹ್ಮಣನು ಅಲ್ಲಿಂದ ಒಂದು ಮೈಲು ದೂರದಲ್ಲಿರು ಒಂದು ಹಳ್ಳಲಿಯಲ್ಲಿದ್ದು, ದಿನವೂ ಬಂದುಹೋಗುತ್ತಾನೆ. ಮಂದಿರಕ್ಕೆ ಸಮೀಪದಲ್ಲಿಯೇ ಒಂದುಚಿಕ್ಕ ನದಿಯು ಹರಿಯುತ್ತದೆ. ಆ ನದಿಯ ಸುತ್ತಮುತ್ತ ಹಾಗೂ ದೇವಾಲಯದ ಹತ್ತಿರದಲ್ಲೆಲ್ಲ ದೊಡ್ಡದೊಡ್ಡ ಸರ್ಪಗಳಿವೆಯೆಂದು ಹೇಳಿದ್ದರು ಅಲ್ಲಿನ ಜನ. ಅಲ್ಲಿಯೇ ಬೀಡು ಬಿಟ್ಟಿದ್ದ ಸ. ರಘುನಾಥರಾವ್ ಮತ್ತು ಅವರೊಂದಿಗೆ ಬಂದವರಿಗೆ ಬಹಳ ದೊಡ್ಡದಾದ ಹಾವೊಂದು ಕಾಣಿಸಿತ್ತು. ಆದರೆ ಅದರಿಂದ ಯಾರಿಗೂ ಉಪ ದ್ರವವಾಗಲಿಲ್ಲ…

ಒಂದು ಬಹಳ ಚಿಕ್ಕ ಹಳ್ಳಿ ಸುಬ್ರಹ್ಮಣ್ಯ… ಸುಬ್ರಹ್ಮಣ್ಯ ದೇವರ ಮಂದಿರವಿರುವುದು ಇಲ್ಲಿ. ಹತ್ತಿರದಲ್ಲೇ ಕಾಣುತ್ತದೆ ಕುಮಾರಾದ್ರಿ ಪರ್ವತ. ಅಲ್ಲಿ ಹುಟ್ಟುವ ಕುಮಾರಧಾರಾ ನದಿಯು ಈ ದೇವಾಲಯಕ್ಕೆ ಸಮ್ಮುಖವಾಗಿ ಹರಿಯುತ್ತದೆ. ಮುಖ್ಯ ಸ್ಥಾನವಲ್ಲದೆ ಆದಿ ಸುಬ್ರಹ್ಮಣ್ಯ ಎಂಬ ಮತ್ತೊಂದು ಸ್ಥಾನವೂ ಉಂಟು. ಆ ಮಂದಿರದಲ್ಲಿ ಒಂದು ಹುತ್ತ (ವಲ್ಮೀಕ)ವಷ್ಟೇ ಇದ್ದು, ಅದನ್ನೇ ಪೂಜಿಸುತ್ತಾರೆ ಜನ.

ದೇವನ (ಮುಖ್ಯ) ಮಂದಿರ ಬಹಳ ದೊಡ್ಡದು. ಮುಖ್ಯ ಗರ್ಭಗುಡಿಯಲ್ಲಿ ಸುಬ್ರಹ್ಮಣ್ಯ ದೇವರ ದರ್ಶನವನ್ನು ಪಡೆಯುವುದು ಜನರಿಗೆ ಒಂದು ಮುಖ್ಯ ವಿಷಯವೇ. ಅಲ್ಲಿಗೆ ಹೋದರೆ ದೂರದಿಂದಲೇ ಬಂಗಾರದಿಂದ ಪೂರ್ಣವಾಗಿ ಅಲಂಕೃತಗೊಂಡಿರುವ ದೇವರ ವೇದಿಕೆಯ ಮೇಲೆ ಒಂದು ಬಂಗಾರದ ನಾಗ ಮತ್ತು ಮಯೂರದ ಮೇಲೆ ಕುಳಿತಿರುವ ಆರು ಮುಖಗಳುಳ್ಳ ಸುಬ್ರಹ್ಮಣ್ಯನ ದರ್ಶನವಾಗುವುದು. ಇದಲ್ಲದೆ ಮತ್ತೇನು ಕಾಣವುದಿಲ್ಲ. ದೇವರ ಪೀಠದ ಹಿಂದೆ, ಮುಂದೆ ಮತ್ತು ಅಕ್ಕಪಕ್ಕಗಳಲ್ಲಿ ಏನಿದೆ ಎಂಬುದರ ಬಗ್ಗೆ ಪೂಜಾರಿಯು ಏನನ್ನು ಹೇಳುವುದಿಲ್ಲ. ಇದಕ್ಕೆ ಏನೋ ಕಾರಣವಿದ್ದೀತು ಇರಲಿ.

ಈ ಬಗ್ಗೆ ಅಲ್ಲಿ ಇಲ್ಲಿ ಕೇಳಿಬಂದುದೆಂದರೆ, ಪೂರ್ವದಲ್ಲಿ ಮಂದಿರದೊಳಗೆ ಮುಖ್ಯ ದೇವತೆಯಾಗಿ ಇದ್ದುದು ಹುತ್ತ, ಮುಂದುಗಡೆ ಸ್ವಯಂಭುವಾದ ಸುಬ್ರಹ್ಮಣ್ಯನ ಮೂರ್ತಿಯಿತ್ತು. ಈ ಪ್ರದೇಶವು ಟಿಪ್ಪುಸುಲ್ತಾನನ ಆಡಳಿತಕ್ಕೆ ಒಳಗಾದಾಗ, ಮುಸಲ್ಮಾನ ಜನರು ಜಬರದಸ್ತಿಯಿಂದ ಇಲ್ಲಿನ ಮೂರ್ತಿಯನ್ನು ಒಡೆದು ಹಾಕಿದರಲ್ಲದೆ, ಹುತ್ತವನ್ನು ನೆಲಮಟ್ಟ ಕೆತ್ತಿ ಹಾಕಿದರು. ಈ ನಂತರ ಉಂಟಾದ ವಿದ್ಯಮಾನವೆಂದರೆ, ಭಕ್ತಜನರೇ ಇಲ್ಲಿ ಈ ಮೂರ್ತಿಯನ್ನು ಸ್ಥಾಪಿಸಿ ಪೂಜಿಸಲಾರಂಭಿಸಿದ್ದು. ಈ ನಿಜವಿಚಾರ ಇತರರಿಗೆ ತಿಳಿದುಬಿಟ್ಟರೆ, ಯಾತ್ರಿಕರ ಆಸ್ತಿಕತೆಯಲ್ಲಿ ಊನತೆಯುಂಟಾಗಬಹುದು ಎಂಬ ಉದ್ದೇಶವೇ ಈ ವಿಚಾರವನ್ನು ಹೇಳದಿರುವುದಕ್ಕೆ ಕಾರಣವೆಂದೆನಿಸುತ್ತದೆ.”

ಶ್ರೀಗೌರಿಶಂಕರ ಶಾಸ್ತ್ರೀಯವರ ವರ್ಣನೆಯಿಂದ ಸ್ಪಷ್ಟವಾಗುವುದೇನೆಂದರೆ, ಸುಬ್ರಹ್ಮಣ್ಯ ಕ್ಷೇತ್ರದ ಹತ್ತಿರವಿರುವ ಅರಣ್ಯದಲ್ಲಿನ ಮಂದಿರದಲ್ಲಿ – ಆದಿ ಸುಬ್ರಹ್ಮಣ್ಯ ಮಂದಿರದಲ್ಲಿ – ಮತ್ತು ಈಗಿನ ಸುಬ್ರಹ್ಮಣ್ಯ ಮಂದಿರದಲ್ಲಿ ‘ಮುಖ್ಯದೇವತೆ‘ಯಾಗಿ ಪೂಜಿಸುತ್ತಿದ್ದುದು ಹುತ್ತವನ್ನಷ್ಟೆ. ‘ಕಲ್ಯಾಣ’ ಮಾಸಿಕದ ‘ತೀರ್ಥಾಂಕ‘ದಲ್ಲಿನ ವರ್ಣನಾನುಸಾರ ಸುಬ್ರಹ್ಮಣ್ಯ ಮಂದಿರದಲ್ಲಿನ ಆಸನದ ಮೇಲ್ಭಾಗದಲ್ಲಿ ಮಯೂರ ವಾಹನನಾದ ಷಡಾನನನ (ಕಾರ್ತಿಕೇಯ) ಮೂರ್ತಿ, ಮಧ್ಯಭಾಗದಲ್ಲಿ ಸರ್ಪರಾಜ ವಾಸುಕಿಯ ಮೂರ್ತಿ ಮತ್ತು ಕೆಳಭಾಗದಲ್ಲಿ ಶೇಷನ ಮೂರ್ತಿಯೂ ಇವೆ.[2] ಅಂದರೆ ಇಲ್ಲಿನ ಮುಖ್ಯ ಪೂಜಾ ವಿಷಯಗಳೆಂದರೆ ಹುತ್ತ ಮತ್ತು ನಾಗ ಈ ಪ್ರತೀಕಗಳ ಪೂಜೆಯನ್ನೇ ಇಲ್ಲಿ ‘ಸುಬ್ರಹ್ಮಣ್ಯ’ ಎಂಬ ಹೆಸರಿನಿಂದ ಮಾಡಲಾಗುತ್ತಿರುವುದು. ಅಲ್ಲದೆ ಇದು ಕಾರ್ತಿಕೇಯನ ಒಂದು ಹೆಸರೂ ಆಗಿದೆ ಎಂಬುದು ಭಕ್ತರೊಳಗಣ ದೃಢವಾಗಿರುವ ನಂಬಿಕೆ.

ಇಲ್ಲಿ ಎದುರಾಗುವ ಮುಖ್ಯ ಪ್ರಶ್ನಯೆಂದರೆ, ಸುಬ್ರಹ್ಮಣ್ಯ ಎಂಬುದು ಕಾರ್ತಿಕೇಯನ ಒಂದು ಹೆಸರು. ಹಾಗಿರುವಾಗ ಅವನನ್ನು ಹುತ್ತ ಮತ್ತು ನಾಗನ ರೂಪದಲ್ಲಿ ಪೂಜಿಸುತ್ತಿರುವುದಾದರೂ ಏಕೆ? ಸುಬ್ರಹ್ಮಣ್ಯ, ಹುತ್ತ, ನಾಗ – ಇವರುಗಳ ಸಂಬಂಧವಾದರೂ ಎಂಥದು? ಈ ಪ್ರಶ್ನೆಗಳಿಗೆ ಶ್ರದ್ಧಾಕ್ಷೇತ್ರದಲ್ಲಿಯೇ ತೀರಾ ಸಹಜವೆಂಬಂತೆ ಉತ್ತರವನ್ನು ನೀಡಲಾಗಿದೆ. ಅಲ್ಲದೆ ಇಂಥ ಪ್ರಶ್ನೆಗಳು ಉದ್ಭವಿಸುವುದೆಲ್ಲ ಪ್ರಥಮ ದರ್ಶನದಲ್ಲಿಯೇ. ಅವುಗಳಿಗೆ ಉತ್ತರಿಸುವುದಕ್ಕಾಗಿಯೇ ಕಲ್ಪಿತ ‘ಸೃಷ್ಟೀಕರಣ ಕಥೆ’ [Explanatory Tales] ಗಳನ್ನು ರಚಿಸುವ ಪ್ರವೃತ್ತಿ ಉಪಾಸನಾ ಕ್ಷೇತ್ರದಲ್ಲಿ ಸಾರ್ವತ್ರಿಕವಾಗಿ ಕಂಡು ಬರುವ ಸಮಾನ ವಿಷಯ.

ಸುಬ್ರಹ್ಮಣ್ಯನ ಪಾರಂಪರಿಕ ವ್ಯುತ್ಪತ್ತಿ

‘ಸುಬ್ರಹ್ಮಣ್ಯ’ ಎಂಬ ಹೆಸರನ್ನು ಸು+ಬ್ರಹ್ಮಣ್ಯ ಎಂಬ ನಿರುಕ್ತಿಯಿಂದ (ವ್ಯುತ್ಪತ್ತಿ) ವಿಭಜಿಸಬಹುದಾಗಿದೆ. ಮಾಯೆಗೆ ಅತೀತನಾದ, ಮಾಯಾ ಪಟಲವನ್ನು ದೂರಮಾಡುವ ಶುದ್ಧ ತೇಜೋರೂಪ ಬ್ರಹ್ಮನೇ ‘ಸುಬ್ರಹ್ಮಣ್ಯ’ ಎಂಬುದು ಅವನ ಆರಾಧಕರಲ್ಲಿರುವ ನಂಬಿಕೆ. ಉಪಾಸನೆಯ ಸಮುನ್ನತ (ವಿಶೇಷ) ರೂಪದಲ್ಲಿಯೂ ಇದೇ ವಿಶ್ವಾಸವನ್ನು ದೃಢಗೊಳಿಸುವ ಅವಶ್ಯಕತೆ ಇದೆ. ಅದಕ್ಕಾಗಿ ಅದರ ಮೂಲರೂಪ ಮತ್ತು ಉಪಾಸನೆಯಲ್ಲಿನ ಪ್ರಾಥಮಿಕ ಸ್ಥೂಲ ಧೋರಣೆಗಳನ್ನು ಉದ್ದೇಶಪೂರ್ವಕವಾಗಿ ಮರೆಯುವುದು ಅಗತ್ಯ.

ಸುಬ್ರಹ್ಮಣ್ಯನ ಮಂದಿರ ಮತ್ತು ಅದರ ಪರಿಸರದಲ್ಲಿ ನಾಗರುಗಳಿಗೆ (ಸರ್ಪ) ಇರುವ ಪ್ರಾಧಾನ್ಯತೆಯನ್ನು ಸ್ಪಷ್ಟೀಕರಣಗೊಳಿಸುವ ಒಂದು ಕಥೆಯು ಪರಚಲಿತದಲ್ಲಿದೆ.[3]ಬಹಳ ಕಾಲದ ಹಿಂದೆ ವಾಸುಕಿ ಮತ್ತು ಗರುಡರಲ್ಲಿ ಘನಘೋರವಾದ ಯುದ್ಧವು ನಡೆದಿತ್ತು. ವಾಸುಕಿಗೆ ಆ ಯುದ್ಧದಲ್ಲಿ ಮರ್ಮಸ್ಥಾನಕ್ಕೆ ಪೆಟ್ಟುಬಿದ್ದು, ತನ್ನನ್ನು ಯಾರಾದರೂ ಕಾಪಾಡಿರಿ ಎಂದು ಆಕ್ರಮದನ ಮಾಡಲಾರಂಭಿಸಿದ. ಅದನ್ನು ಕೇಳಿದ ನಾರದ ಮುನಿಯು ಅಲ್ಲಿಗೆ ಬಂದು, ಗರುಡನಿಗೆ ಸಹೋದರರುಗಳಲ್ಲಿಯೇ ಪರಸ್ಪರ ಇಂತಹ ಸಂಘರ್ಷವಾಗುವುದು ಉಚಿತವಲ್ಲವೆಂದು ತಿಳಿವಳಿಕೆ ಹೇಳಿದನು. ನಾರದ ಮುನಿಯ ಮಾತಿಗೆ ಗರುಡನು ಆ ಕ್ಷಣದಲ್ಲಿ ಸುಮ್ಮನಾದನಾದರೂ, ಅಲ್ಲಿಂದ ಹೋಗುವಾಗ್ಗೆ “ಈಗ ನಿನ್ನನ್ನು ನಾನು ಬಿಟ್ಟಿದ್ದೇನೆ, ಮುಂದೆಂದಾರೂ ಸಿಕ್ಕಾಗ ನಿನ್ನನ್ನು ವಧಿಸದೆ ಬಿಡಲಾರೆ” ಎಂದು ಧಮಕೀ (ಎಚ್ಚರಿಕೆ) ಕೊಟ್ಟೇ ಹೋದನು. ಅದರಿಂದ ಭಯ ಪೀಡಿತನಾದ ವಾಸುಕಿಯು ನಾರದನಲ್ಲಿ ಪುನಃ ಪ್ರಾರ್ಥಿಸುತ್ತಾ ಕೇಳಿದ, ‘ನನಗೀಗ ಸುರಕ್ಷಿತವಾದ ಸ್ಥಲವೆಲ್ಲಿ’ ಎನ್ನಲು ಕುಮಾರಾದ್ರಿಯ ಹತ್ತಿರದ ಗುಹೆಯಲ್ಲಿ ಕುಳಿತು ತಪಸ್ಸು ಮಾಡಿ ಶಿವನನ್ನು ಒಲಿಸಿಕೋ ಎಂದು ಬೋಧಿಸಿದ ನಾರದ ಮುನಿಯು. ಅದರಂತೆ ಗುಹೆಗೆ ಬಂದ ವಾಸುಕಿಯು ತಪಸ್ಸು ಮಾಡಲಾರಂಭಿಸಿದ. ಅದಕ್ಕೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಲು ಅವನಲ್ಲಿ ‘ತನಗೆ ಗರುಡನಿಂದ ಆವೂದೂ ತೊಂದರೆಯಾಗದಂತೆ, ಅಭಯ ನೀಡು ಎಂದು ಪ್ರಾರ್ಥಿಸಿದ. ಆಗ್ಗೆ ಶಿವನು ಅವನಿಗೆ ಹೇಳಿದ ಮಾತುಗಳಿವು – ”ತಾರಕನ ವಧೆಯ ನಂತರ ಕಾರ್ತಿಕೇಯನು ಈ ಜಾಗಕ್ಕೆ ವಿಶ್ರಾಂತಿಗೆಂದು ಬರುತ್ತಾನೆ. ಅವನಲ್ಲಿ ನೀನು ಶರಣು ಹೋದರೆ, ಆತ ನಿನ್ನನ್ನು ರಕ್ಷಿಸುತ್ತಾನೆ.” ತಾರಕಾಸುರನನ್ನು ಸಂಹರಿಸಿದ ಕಾರ್ತಿಕೇಯನು ಕುಮಾರಾದ್ರಿ ಪರ್ವತಕ್ಕೆ ಬಂದಾಗ, ವಾಸುಕಿಯು ತನ್ನೆಲ್ಲ ವೃತ್ತಾಂತವನ್ನು ಅವನಿಗೆ ತಿಳಿಸಿ, ಅಭಯದ ವರದಾನ ಬೇಡಲು, ವಾಸುಕಿಗೆ ಅವನಿಚ್ಛೆಯಂತೆ ಅಭಯವನ್ನು ಕೊಟ್ಟನು ಕಾರ್ತಿಕೇಯ. ಆ ಕ್ಷಣದಿಂದಲೇ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗ ಮತ್ತು ಸರ್ಪಗಳು ಗರುಡ ಭಯದಿಂದ ಮುಕ್ತವಾಗಿ ಮೆರೆಯಲಾರಂಭಿಸಿದವು.

ಸುಬ್ರಹ್ಮಣ್ಯ ಎಂದರೆ ನಾಗರಾಜ

ವಾಸುಕಿಯ ಸಂರಕ್ಷಣಾ ವರದಾನವನ್ನು ಸುಬ್ರಹ್ಮಣ್ಯನು ಸ್ವತಃ ನೀಡಿದುದರಿಂದಾಗಿಯೇ ಸುಬ್ರಹ್ಮಣ್ಯ ಮಂದಿರ ಹಾಗೂ ಆ ಪರಿಸರದಲ್ಲಿ ಸರ್ಪ ಮತ್ತು ಸರ್ಪಮೂರ್ತಿಗಳ ಪ್ರಾಧಾನ್ಯ ಕಂಡು ಬರುವುದು. ಶ್ರದ್ಧೆಯ ಪಾತಳಿಯಿಂದಲೇನೋ ಈ ಸ್ಪಷ್ಟೀಕರಣ ಸರಿಯಾಗಿರುವುದಾದರೂ, ಈ ಕುರಿತು ವಿಚಾರ ಮಾಡಿದಾಗ ಹೆಚ್ಚು ವಿಸಂಗತಿಗಳು ಕಂಡುಬರುತ್ತವೆ. ಕಾರಣ ಇಲ್ಲಿನ ಮಂದಿರದಲ್ಲಿ ನಾಗನನ್ನು ಶರಣಾರ್ಥಿಯ ಗೌಣಭಾವದಿಂದ ಪೂಜಿಸುತ್ತಿಲ್ಲ. ಬದಲಾಗಿ ಪ್ರತ್ಯಕ್ಷ ಸುಬ್ರಹ್ಮಣ್ಯನನ್ನೇ ನಾಗ(ಸರ್ಪ) ಎಂಬುದಾಗಿ ಪೂಜಿಸಲಾಗುತ್ತಿದೆ.

ಸುಬ್ರಹ್ಮಣ್ಯ ನಾಗನ ರೂಪದಲ್ಲಿ ಪೂಜಿಸಲ್ಪಡುತ್ತಿದ್ದಾನೆಂದು ವಸ್ತುಸ್ಥಿತಿಯೇ ‘ಸುಬ್ರಹ್ಮಣ್ಯ’ವೆಂಬ ಹೆಸರಿನ ಅನಾವರಣಕ್ಕೆ ಉಪಯೋಗಕರವಾಗುವುದು. ಕೇವಲ ಸ್ಕಂದನಿಗೆ ಮಾತ್ರ ಬಳಸುವ ಈ ಹೆಸರು ಸಂಸ್ಕೃತದ್ದೆನಿಸಹಬುದಾದರೂ, ಅದು ಕೃತಿಮ ರೂಪವೆಂದು ತಿಳಿಯದೆ ಈ ಕೃತಿಮ ಸಂಸ್ಕೃತ ಹೆಸರಿನ ರಹಸ್ಯವನ್ನು ಒಂದು ಮುಖ್ಯವಾದ ಪ್ರಬಂಧದಲ್ಲಿ ಚರ್ಚಿಸಿದ್ದಾರೆ. ೧೩ನೆಯ ಮೇ ೧೮೬೯ರಂದು ರಾಯಲ್ ಏಶಿಯಾಟಿಕ್ ಸೊಸೈಟಿ, ಮುಂಬಯಿ ಶಾಖೆಯಲ್ಲಿ ಅವರು ಮಂಡಿಸಿದ್ದ `Serpent worship in Western India’ ಎಂಬ ಪ್ರಬಂಧದಲ್ಲಿ ಪಶ್ಚಿಮ ಭಾರತದಲ್ಲಿನ ನಾಗೋಪಾಸನೆಯ ಸ್ವರೂಪ ಮತ್ತು ಉಪಾಸನಾ ಪರಂಪರೆಯ ಕೆಲವಾರು ವೈಶಿಷ್ಟ್ಯಗಳನ್ನು ಮಹತ್ವಪೂರ್ಣವಾಗಿ ಮಂಡಿಸಿದ್ದಾರೆ. ಅವರ ಪ್ರಕಾರ ‘ಸುಬ್ರಹ್ಮಣ್ಯ’ ಎಂಬ ಹೆಸರಿನ ಸ್ಪಷ್ಟೀಕರಣ ಹೀಗಿದೆ:[4] Subbar (ಸುಬ್ಬರ್) and Mani (ಮಣಿ) would form a combination, sygnifying the chief or Jewel of Serpents. Subbaraya or Subbaraja means the Soverien Serpent.” ರಾ.ಬ. ಮಂಡಲೀಕ ಅವರ ಈ ಸ್ಪಷ್ಟೀಕರಣದಿಂದ ತಿಳಿಯುವುದೇನೆಂದರೆ, ‘ಸುಬ್ರಹ್ಮಣ್ಯ’ ಎಂಬ ಸ್ಕಂದ ನಾಮವನ್ನು ‘ಸುಬ್ಬರ ಮಣಿ’ ಎಂಬ ಮಣಿ ಪ್ರವಾಳ ಶೈಲಿಯ ತಮಿಳು ಶಬ್ದದ ಧ್ವನಿ ಸಾಮ್ಯತೆಯಿಂದ ಸಾಧಿಸಿದುದಾಗಿದೆ. ಇದೊಂದು ಕೃತ್ರಿಮ ಸಂಸ್ಕೃತೀಕರಣವಾದ ರೂಪ. ಸುಬ್ಬರಾಜ, ಸುಬ್ಬರಾವ್, ಸುಬ್ಬಲಕ್ಷ್ಮಿ (ಶುಭರಾಯ, ಶುಭಲಕ್ಷ್ಮಿ) ಇತ್ಯಾದಿ ದಕ್ಷಿಣೀ ಹೆಸರುಗಳಲ್ಲಿನ ‘ಸುಬ್ಬ’ ಎಂಬ ಅಂಶವು ನಾಗಾರ್ಥಕವಾದುದು ಎಂಬುದರಲ್ಲಿ ಸಂಶಯವಿಲ್ಲ ‘ಸುಬ್ರಹ್ಮಣ್ಯಮ್’ ರೀತಿಯಲ್ಲಿಯೇ ದಕ್ಷಿಣ ಭಾರತದಲ್ಲಿ ವಿಶೇಷವಾಗಿರುವ ‘ನಾಗರಾಜನ್’ ಎಂಬ ಹೆಸರನ್ನು ಗಮನಿಸುವುದು ಅವಶ್ಯ.

ರಾವ್ ಬಹಾದ್ದೂರ ಮಂಡಲೀಕ ಅವರು ‘ಸುಬ್ರಹ್ಮಣ್ಯ‘ನ ಈ ನಾಗರಹಸ್ಯವನ್ನು ಪೂರ್ಣ ಶೋಧನೆಯಿಂದಲೇ ಬಿಡಿಸಿದ್ದಾರೆ. ದಾಕ್ಷಿಣಾತ್ಯ ಪಂಡಿತರ ವಿಚಾರಗಳೇ ಮಂಡಲೀಕರ ಸ್ಪಷ್ಟೀಕರಣಕ್ಕೆ ಪ್ರಮುಖ ಸಾಕ್ಷ್ಯಗಳಾಗಿರುವುದು ಸುಸ್ಪಷ್ಟ. `Dravidian India’ ಎಂಬ ಕೃತಿಯ ಕರ್ತೃ ಟಿ. ಆರ್. ಶೇಷಯ್ಯಂಗಾರ್ ಅವರು ಈ ವಿಷಯವಾಗಿ ಹೇಳಿರುವುದೇನೆಂದರೆ,[5] There Exists a close connection between the worship of subramanya and that of the serpent. The common name Subba or Subbaraya Found amoung the Telugu, Canarese and Tamil People is explained to be both a contraction of Subramanya and a Syanonym for serpent. The sixth day of Lunar month (Shashthi) is held as pecliarly sacred to Subramanya as to the serpent God. His riding on a peacock, his marriage with the forest maid valliyammanm. and the fact that his most famous temples are on hill tops show that he is connected with the ancient tree – and – serpent worship.”

ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿರುವ ‘ಸುಬ್ಬ’ ಎಂಬ ಹೆಸರು ನಾಗಾರ್ಥಕವಾಗಿದೆ. ಅಲ್ಲದೆ ಸ್ಕಂದಷಷ್ಠಿಯನ್ನು ನಾಗಷಷ್ಠಿ ಎಂಬುದಾಗಿಯೂ ಕರೆಯುವುದುಂಟೆಂಬ ವಿಚಾರವನ್ನೂ ಸಹ ನಿದರ್ಶನಗೊಳಿಸಿದ್ದಾರೆ ಧೈರ್ಯವಾಗಿ ಅವರು ಹೇಳಿಲ್ಲದಿರಬಹುದು. ಆದರೆ ಅವುಗಳ ಜೀವಾತ್ಮಕ ಸಂಬಂಧದ ಅನೇಕ ಅಂಶಗಳನ್ನು ಅವರು ದಾಖಲಿಸಿರುವುದು ಗಮನೀಯ.

ಸುಬ್ರಹ್ಮಣ್ಯನ ಪೂಜೆಯನ್ನು ಮಾಡುತ್ತಿರುವುದು ನಾಗರೂಪದಲ್ಲಿ; ‘ಸುಬ್ರಹ್ಮಣ್ಯ’ ಎಂಬ ಹೆಸರೇ ನಾಗವಾಚಕ ಮತ್ತು ಸುಬ್ರಹ್ಮಣ್ಯ ನಾಗರ ಪೂಜೋತ್ಸವದ ದಿನ(ಷಷ್ಠಿ)ವೂ ಸಹ ಒಂದೇ ಆಗಿದೆ. ಈ ಮೂರು ಅಂಶಗಳು ಅತ್ಯಂತ ಮಹತ್ವವಾದುವು – ಸಂಶಯ ಮೂಲವಾದುವುಗಳೂ ಹೌದು. ಈ ಮೂರೂ ಅಂಶಗಳ ಹಿನ್ನೆಲೆಯಿಂದ ಊಹಿಸುವುದಾದರೆ, ದಕ್ಷಿಣದಲ್ಲಿ ಸ್ಕಂದನಿಗೆ ಇರುವ ಈ ಹೆಸರು ಯಾವ ಅರ್ಥದಲ್ಲಿ ನಾಗವಾಚಕ ಮತ್ತು ಈ ಹೆಸರಿನಿಂದ ಅನೇಕ ಕಡೆಗಳಲ್ಲಿ ಪೂಜಿಸಲ್ಪಡುತ್ತಿರುವ ಅವನ ಪ್ರತೀಕಗಳೆಲ್ಲ ನಾಗರೂಪದವುಗಳೇ? ಈ ಅರ್ಥದಲ್ಲಿ ಸ್ಕಂದರೂಪ ಹೊಂದಿರುವ ದಕ್ಷಿಣದ ಮೂಲ ಕ್ಷೇತ್ರಪಾಲಕ ದೇವ ನಾಗರೂಪಿಯೇ ಆಗಿರಬಹುದೇ? ಇದು ಎಲ್ಲರ ಮನಸ್ಸಿನಲ್ಲಿ ಸಹಜವಾಗಿಯೇ ಬರುವ ಅನುಮಾನವಾಗಿದ್ದರೂ ಸತ್ಯಕ್ಕೆ ಸಂವಾದಿಯಾದ ಶೋಧಗಳನ್ನು ಪ್ರೇರೇಪಿಸುವುದೂ ಆಗಿದೆ. ತೀರಾ ಇತ್ತೀಚೆಗೆ ಶ್ರೀಮತಿ ರತ್ನ ನವರತ್ನಮ್ ಅವರ ದಕ್ಷಿಣದಲ್ಲಿನ ಸ್ಕಂದೋಪಾಸನೆಯನ್ನು ಕುರಿತ ‘Karttikeya’ ಎಂಬ ಕೃತಿಯು ಭಾರತೀಯ ವಿದ್ಯಾಭವನದ ವತಿಯಿಂದ ಪ್ರಕಟವಾಯಿತು. ಅದರಲ್ಲಿ ಹೇಳಿರುವಂತೆ:[6]There is a popular belif that Muruga manifests himself in the form of Serpents to exhibit his grace to his devotees. Paripadal refers to a fearful sight of a five – headed serpent and its tender yong one which frightened the young devotees at the temple of Tirupparakundaram. It is interesting to note that this fearful sight was later discovered to be a water – flower nestilng of the hill – pool. Anyhow the Imaginary fear suggests the existence of belief in five – headed serpents in the abodes of Muruga.”

ಸ್ಕಂದರೂಪವನ್ನು ಪಡೆದಿರುವ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕ್ಷೇತ್ರಪಾಲಕ ದೇವರಾದ ಮುರುಗನು ತನ್ನ ಭಕ್ತರ ಮೇಲೆ ಕೃಪೆದೋರಿ ದರ್ಶನ ನೀಡುವುದು ನಾಗರೂಪದಲ್ಲಿಯೇ. ದಕ್ಷಿಣ ಭಾಗದ ಭಕ್ತರ ಈ ಸಾರ್ವತ್ರಿಕ ನಂಬಿಕೆಯನ್ನು ಶ್ರೀಮತಿ ನವರತ್ನಮ್ ಅವರು ಸ್ಪಷ್ಟವಾಗಿಯೇ ಹೇಳಿದ್ದಾರೆ. ಮೂರುಗನು ಐದು ಹೆಡೆಯುಳ್ಳ ನಾಗನ ರೂಪದಲ್ಲಿ ತಿರುಪ್ಪರಕುಂದರಮ್‌ನಲ್ಲಿನ ದೇವಾಲಯದಲ್ಲಿ ದರ್ಶನ ಕೊಟ್ಟಿದ್ದನೆಂಬ ಒಂದು ಸಂಗತಿಯನ್ನು ದಾಖಲಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಇಂದಿಗೂ ಜನಸಾಮಾನ್ಯರು ಸರ್ಪ(ನಾಗ)ದ ದರ್ಶನವಾದರೆ, ತಮಗೆ ಮುರುಗನೇ ಕಾಣಿಸಿದನೆಂದು ಸಂತೋಷಪಡುತ್ತಾರೆ. (The appearance of a serpent is even today considered by the common folk as betokening the presence of Murugan) ಶ್ರೀ ಕೆ.ಆರ್. ವೆಂಕಟರಮಣ ಅವರು ತಮ್ಮ ಕೃತಿಯಲ್ಲಿ ದಾಖಲಿಸಿರುವ ವಿಚಾರವಿದು.[7]

ಬಂಗಳಾದಲ್ಲಿ ವೈದ್ಯ ಜಾತಿಯ ಜನರು ನಾಗದೇವನ ಪ್ರಸನ್ನತೆಗಾಗಿ ‘ನಾಗಮಂಡಲ’ ನೃತ್ಯ ಮಾಡುವುದುಂಟು. ಆ ಸಮಯದಲ್ಲಿ ಮಂಟಪದಲ್ಲಿ ರಂಗೋಲಿಯಿಂದ ಮಹಾಶೇಷವೊಂದನ್ನು ಬಿಡಿಸುತ್ತಾರೆ. ಅರು ಹೆಸರಿಸುವಂತೆ ಅದು ‘ಶುಭರಾಯ’ (ಸುಬ್ರಹ್ಮಣ್ಯ).

ಈ ಹಿನ್ನೆಲೆಯಲ್ಲಿ ನಿರ್ವವಾದವಾಗಿ ಸ್ಪಷ್ಟವಾಗುವುದೇನೆಂದರೆ, ದಕ್ಷಿಣ ಭಾರತದಲ್ಲಿನ ಅನೇಕ ಕಡೆ ಹುತ್ತದ ಸಾನ್ನಿಧ್ಯದೊಂದಿಗೆ ನಾಗರೂಪದಲ್ಲಿ ಪೂಜಿಸಲ್ಪಡುತ್ತಿರುವ ‘ಸುಬ್ರಹ್ಮಣ್ಯ’ ಮೂಲತಃ ನಾಗದೇವನೇ ಆಗಿರುವನು. ಅವನನ್ನು ಇಂದು ‘ಸ್ಕಂದ ಕಾರ್ತಿಕೇಯ’ ಎಂದು ಒಪ್ಪಿಕೊಳ್ಳಲಾಗಿದೆ. ಅಲ್ಲದೆ ಅವನ ‘ಸುಬ್ರಹ್ಮಣ್ಯ’ ಎಂಬ ಹೆಸರೂ ಸಹ ನಾಗವಾಚಕವೇ. ದಕ್ಷಿಣದಲ್ಲಿ ಸ್ಕಂದರೂಪ ಪಡೆದ ಪ್ರಖ್ಯಾತ ಕ್ಷೇತ್ರಪಾಲಕ ದೇವರಾದ ‘ಮುರುಗನ್‘ನನ್ನು ಸಹ ಸ್ಥಳೀಯರು ಭಕ್ತಿಯಿಂದ ಪೂಜಿಸುತ್ತಿರುವುದು ನಾಗರೂಪದಿಂದಲೇ. ಮುರುಗ – ಸುಬ್ರಹ್ಮಣ್ಯ – ನಾಗರ ಈ ಅನುಬಂಧವು ಕ್ಷೇತ್ರಪಾಲಕ ದೇವತೆಗಳ ಬಗ್ಗೆ ವಿಶೇಷ ವಿಚಾರಗಳನ್ನು ಉಳ್ಳುದಾಗಿದೆ.

ಕ್ಷೇತ್ರಪಾಲಕ ದೇವರು ಮತ್ತು ನಾಗ

ಈ ಸಂಬಂಧ ಸ್ವರೂಪವು ಕೇವಲ ಸ್ಕಂದರೂಪು ಪಡೆದಿರುವ ಮುರುಗನ್‌ನಿಗೆ ಸೀಮಿತವಲ್ಲ. ಬದಲಾಗಿ ದಕ್ಷಿಣದ ಅಷ್ಟೆ ಏಕೆ ಸಂಪೂರ್ಣ ಭಾರತದ ಕ್ಷೇತ್ರಪಾಲ ದೇವರುಗಳ ಸ್ವರೂಪ ಮತ್ತು ಉಪಾಸನೆಯಲ್ಲಿಯೂ ಕಂಡುಬರುವಂಥದೇ ಹೌದು. ಉದಾಹರಣೆಗೆ ಭಾರತಾದ್ಯಂತ ಇರುವ ಭೈರವ, ನಾಗ ಮತ್ತು ಸರ್ಪಗಳ ಸಂಬಂಧವು ಎಲ್ಲರಿಗೂ ಜ್ಞಾತವಾಗಿರುವಂಥದೇ. ಭೈರವನ ಗರ್ಭಗುಡಿಗಳಲ್ಲೆಲ್ಲ ಸರ್ಪದ ನಿವಾಸಗಳೂ ಇರುತ್ತವೆ. ಭೈರವನು ನಾಗ ಅಥವಾ ಸರ್ಪದ ರೂಪದಲ್ಲಿ ದರ್ಶನ ನೀಡುತ್ತಾನೆ. ಸರ್ಪರೂಪಿಯಾದ ಈ ಭೈರವ ಭಕ್ತರಿಗೆ ಅಭಯ ನೀಡುವನೇ ಅಲ್ಲದೆ, ಸರ್ಪಕಡಿತದಿಂದ ಪೀಡಿತರಾಗಿ ತನಗೆ ಶರಣು ಬಂದು ಚರಣಕ್ಕೆ ಬಿದ್ದ ಭಕ್ತರನ್ನು ಅದರ ವಿಷಬಾಧೆಯಿಂದಲೂ ಮುಕ್ತಗೊಳಿಸುವವನಾಗಿದ್ದಾನೆಂಬ ದೃಢನಂಬಿಕೆಯೂ ಉಂಟು ಭಕ್ತ ಜನರಲ್ಲಿ. ಇಂಥದೇ ಕಥೆಯು ಮಹಾರಾಷ್ಟ್ರದಲ್ಲಿನ ಜೋತಿಬಾ ಮತ್ತು ಕೊಂಕಣ ಗೋಮಾಂತಕದಲ್ಲಿನ ರವಳನಾಥರುಗಳ ವಿಷಯವಾಗಿಯೂ ಇರುವುದನ್ನು ಹಿಂದಿನ ಅಧ್ಯಾಯದಲ್ಲಿಯೇ ವಿವರಿಸಲಾಗಿದೆ. ಈ ಎರಡೂ ಕ್ಷೇತ್ರಪಾಲಕ ದೇವರುಗಳನ್ನು ಒಪ್ಪಲಾಗಿರುವುದು ಸರ್ಪ ರೂಪದಲ್ಲಿ. ಸರ್ಪಭೂಷಣ ಯುಕ್ತರಾಗಿದ್ದರೂ ಸರ್ಪದ ವಿಷಬಾಧೆಯಿಂದ ಮುಕ್ತಿ ನೀಡುವವರೂ ಹಭದು. ಜೋತಿಬಾನನ್ನು ಕುರಿತ ಸ್ತೋತ್ರದಲ್ಲಿ ಆತನನ್ನು ಪನ್ನಗೇಶ, ಧರಣೀಧರ, ಕುಂಡಲಿನ್ ಇತ್ಯಾದಿ ನಾಗವಾಚಕ ಹೆಸರುಗಳು ಬರುತ್ತವೆ. ಭೈರವ, ಜೋತಿಬಾ, ರವಳನಾಥ, ಮುರುಗ – ಈ ಕ್ಷೇತ್ರಪಾಲಕ ದೇವರುಗಳನ್ನು ನಾಗರೂಪಗಳವರೆಂದು ಒಪ್ಪಿಕೊಳ್ಳಲಾಗಿದೆ. ಈ ಸತ್ಯವು ಒಟ್ಟಾರೆ ಭಾರತೀಯ ದೈವಮಂಡಲ ರಹಸ್ಯದ ಅನಾವರಣಕ್ಕೆ ಬಹಳ ಉಪಯುಕ್ತವಾದುದು.

ನಾಗ: ಕ್ಷೇತ್ರಪತಿ ಮತ್ತು ಕ್ಷೇತ್ರಪಾಲಕ

ಕ್ಷೇತ್ರಪಾಲಕ ದೇವರಿಗೆ ನಾಗನೊಂದಿಗೆ ಸಾಹಚರ್ಯವುಂಟಾಗಿರುವುದರ ಮೂಲ ರಹಸ್ಯವೆಂದರೆ, ನಾಗನೇ ಕ್ಷೇತ್ರಪತಿಯೂ ಕ್ಷೇತ್ರಪಾಲಕನೂ ಆಗಿರುವುದು. ಹುತ್ತವು ಭೂಮಿಯ ಸೃಜನೇಂದ್ರಿಯದ ಪ್ರತೀಕ. ಈ ಪ್ರಾಧಾನ್ಯತೆಯಿಂದಾಗಿಯೇ ಅವನನ್ನು ಸಂತಾನದಾತನಾಗಿಯೂ ಉಪಾಸಿಸುತ್ತಿರುವುದು. ಯಾವ್ಯಾವ ಸುಬ್ರಹ್ಮಣ್ಯನ ಕ್ಷೇತ್ರಗಳಲ್ಲಿ ಅವನನ್ನು ಹುತ್ತದ ಸಾನ್ನಿಧ್ಯದಲ್ಲಿ ನಾಗರೂಪವಾಗಿ ಪೂಜಿಸಲಾಗುತ್ತಿರುವುದೋ ಅಲ್ಲೆಲ್ಲ ಸಂತಾನ ಪ್ರಾಪ್ತಿಗಾಗಿ ಭಕ್ತರು ವ್ರತಾಚರಣೆಯನ್ನು ಸಹ ಕೈಗೊಳ್ಳುವುದುಂಟು. ವಿಶೇಷವೆಂದರೆ, ಈ ಕ್ಷೇತ್ರಗಳಲ್ಲಿ ಸ್ಕಂದ ಷಷ್ಠಿ (ಸುಬ್ರಹ್ಮಣ್ಯ ಷಷ್ಠಿ – ನಾಗಷಷ್ಠಿ – ಚಂಪಾ ಷಷ್ಠಿ)ಹ ಉತ್ಸವದಂದು ಪೂಜಾರಿಯು ಕೈಗೆ ಚರ್ಮದ ಚೀಲವೊಂದನ್ನು ಧರಿಸಿ ಹುತ್ತದಲ್ಲಿ ಕೈಹಾಕಿ ಮುಷ್ಠಿ ತುಂಬಾ ಮಣ್ಣು ತೆಗೆಯುವನು. ಇದನ್ನು ‘ಮೂಲ ಮೃತ್ತಿಕಾ’ ಎಂದು ಕರೆಯುವರು. ಹುತ್ತದೊಳಗಿನ ‘ಮೂಲ ಮೃತ್ತಿಕೆ’ಯನ್ನು ಪೂಜಾರಿ ಪ್ರಸಾದ ರೂಪದಲ್ಲಿ ನೀಡುತ್ತಾನೆ ಅಲ್ಲಿ ಸೇರಿದ್ದ ಭಕ್ತಜನರಿಗೆಲ್ಲ.[8]   ಈ ಪ್ರಸಾದ ಸಂತಾನದಾಯಕವೆಂಬುದು ಜನರ ನಂಬಿಕೆ. ‘ಮಹಾಪುರಷ’ನ ಸಮರ್ಥ ಬೀಜದ್ರವ್ಯದಿಂದ ಕೂಡಿದ ಈ ‘ಮೂಲಕ ಮೃತ್ತಿಕಾ’ ವನ್ನು ಸಂತಾನದಾತ್ರಿಯೆಂದು ತಿಳಿದಿರುವುದು ಹುತ್ತ ಮತ್ತು ನಾಗಗಳ ಪ್ರತೀಕಾತ್ಮಕ ಕತೆಯ ವಿಷಯದಲ್ಲಿ ಅತ್ಯಂತ ಮಹತ್ವದ್ದೆನಿಸುತ್ತದೆ.

ನಾಗನ ಸಂತಾನದಾತೃತ್ವ ಸಂಬಂಧವಾದ ಈ ಧೋರಣೆಯು ನಮ್ಮ ಧಾರ್ಮಿಕ ಬದುಕಿನಲ್ಲಿ ದೃಢ ಮೂಲವಾದುವಾಗಿದೆ. ಈ ಸಂಬಂಧವಾಗಿ ಹಲವಾರು ಕಥೆ – ಗಾಥೆಗಳು ಭಾರತಾದ್ಯಂತ ರೂಢಿಯಲ್ಲಿರುವುದು ಮುಖ್ಯವಾಗಿ ಕಾಣುವ ಅಂಶ. ದಕ್ಷಿಣ ಭಾರತದ ಅನೇಕ ಜಾತಿ – ಪಂಗಡಗಳ ವಿವಾಹ ಸಂದರ್ಭದಲ್ಲಿ ವಧು ಮತ್ತು ವಿವಾಹಿತ ಸ್ತ್ರೀಯರು ನಾಗಪೂಜೆಯನ್ನು ಮಾಡುವುದು ಒಂದು ಸಂಪ್ರದಾಯ. ಕೆಲವೆಡೆ ವಿವಾಹಿತ ಸ್ತ್ರೀಯರು ಹುತ್ತವನ್ನು ಪೂಜಿಸಿ, ಅದರ ಮಣ್ಣನ್ನು ‘ಪ್ರಸಾದ’ವೆಂದು ಮನೆಗೆ ತರುವುದು ರೂಢಿ. ಸಂತಾನಪೇಕ್ಷಿತ ಸ್ತ್ರೀಯರು ನಾಗ ಇಲ್ಲವೆ ನಾಗಯುಗಲ ಮೂರ್ತಿಯನ್ನು ಪೂಜಿಸುವರು ಮತ್ತು ವ್ರತಾಚರಣೆಯ ನಿಮಿತ್ತವಾಗಿ ಹೊಸದಾದ ನಾಗಮೂರ್ತಿ (ನಾಗಕಳ = ನಾಗಶಿಲಾ)ಯನ್ನು ಯಾವುದಾದರೊಂದು ದೇವಾಲಯದ ಆವರಣದಲ್ಲಿಯೋ ಅಥವಾ ಮರದ ಕೆಳಗಡೆಗೋ ಪ್ರತಿಷ್ಠಾಪನೆಯನ್ನೂ ಮಾಡುವರು. ಇದು ನಮಗೆ ಹಲವಾರು ಎಡೆಗಳಲ್ಲಿ ಕಾಣುವ ಸಂಗತಿಯೇ. ನನ್ನ ಗೆಳೆಯ ಶ್ರೀಮೋರಿಶ್ವರ ವಾಳಿಂಬೆಯವರು ತಮ್ಮ ತಾಯಿಯವರಿಂದ ಕೇಳಿದ್ದ ನಾಗಸಂಬಂಧದ ಒಂದು ವಿಚಾರವನ್ನು ಇಲ್ಲಿ ಉಲ್ಲೇಕಿಸುವುದು ಅವಶ್ಯವೆನಿಸುತ್ತದೆ ನನಗೆ: ಗರ್ಭಿಣಿ ಸ್ತ್ರೀ ಮತ್ತು ನಾಗರಲ್ಲಿ ಪರಸ್ಪರ ದೃಷ್ಟಿಯುಂಟಾದರೆ, ನಾಗನ ದೃಷ್ಟಿಯು ಕಳೆದು ಹೋಗುತ್ತದೆ. ಮುಂದೆ ಆಕೆ ಪ್ರಸೂತಳಾದ ಮೇಲೆ ಆಕೆಯ ಬಚ್ಚಲು ಮನೆಯ ಗಂಧವನ್ನು ಮೂಸಿದಾಗಲೇ ಅದಕ್ಕೆ ಮತ್ತೆ ದೃಷ್ಟಿ ಬರುತ್ತದೆ ಎಂಬ ತಿಳಿವಳಿಕೆಯೊಂದುಂಟು. ಗರ್ಭಿಣಿಯಾಗಿರುವ ಸ್ತ್ರೀ ಯೊಡನೆ ಪುರುಷನು ಸಂಬಂಧವನ್ನು ಇಟ್ಟುಕೊಳ್ಳಬಾರದು ಎಂಬ ‘ನಿಷೇಧ‘ದಿಂದ ಹುಟ್ಟಿದುದಾಗಿರಬಹುದು ಈ ನಂಬಿಕೆ. ಪುರುಷರೆಲ್ಲ ನಾಗನ ಪ್ರತಿನಿಧಿಗಳು ಮತ್ತು ನಾಗ ಪುರುಷ ತತ್ತ್ವದ ಪ್ರತೀಕವೆಂಬುದು ಈ ನಂಬಿಕೆಯ ಹಿಂದಿರುವ ಅರ್ಥ.

ನಾಗನ ಈ ಮಹಾಪುರಷತ್ವವು ಭಾರತಾದ್ಯಂತ ಪ್ರಾಚೀನ ಕಾಲದಿಂದಲೂ ಪೂಜಾ ವಿಷಯವಾಗಿರುವುದ; ಅದರಂತೆಯೇ ವಿದೇಶದಲ್ಲಿಯೂ ಈ ಸಂಬಂಧವಾಗಿ ವಿಶೇಷ ಶ್ರದ್ಧೆಯು ಇದ್ದುದು ತಿಳಿದುಬರುತ್ತದೆ. ಸ್ತ್ರೀಯರ ರಜಃಸ್ರಾವಕ್ಕೆ ಕಾರಣ ನಾಗನೇ ಎಂಬುದು ಒಂದು ವಿಶ್ವನಂಬಿಕೆ. ಇದನ್ನು ಉಲ್ಲೇಖಿಸುತ್ತಾ ರಾಬರ್ಟ್‌ ಬ್ರೀಫ್ ಅವರು ಹೇಳುತ್ತಾರೆ:[9] This notion has been thought to derive from the phallic shape of animal, and that idea is undoubtedly present in those worldwide beliefs. It was thought by the ancients, and is still believed by the European Peasantry, that during sexual conjuction the male serpent introduces its head into the mouth of the female, and that the latter gnaws and bites it off, thus becoming fecundated.” ನಾಗನ ಲಿಂಗ ಸದೃಶವಾದ ಆಕಾರದಿಂದಾಗಿಯೇ ಅದನ್ನು ಬ್ರೀಫ್ ಲಿಂಗರೂಪವಾಗಿ ಒಪ್ಪಿಕೊಂಡಿರುವುದು. ಮತ್ತು ಈ ವಿಚಾರ ಹಾಗೂ ಅದಕ್ಕೆ ಪೋಷಕವಾದ ಪ್ರಾಪಂಚಿಕ ನಂಬಿಕೆಯನ್ನು ಸಾದರಪಡಿಸಿರುವುದು ಕೂಡ. ಈ ಪುರಾವೆಯನ್ನು ನೋಡಿದಾಗ ಪುರುಷ ತತ್ತ್ವದ ಪ್ರತೀಕವಾಗಿ ನಾಗದೇವತೆಯ ಪ್ರತಿಷ್ಠೆಯು ಕೇವಲ ಭಾರತದಲ್ಲಷ್ಟೇ ಅಲ್ಲ ಭಾರತದಾಚೆಗಿನ ಮಾನವ ಸಮೂಹದಲ್ಲಿಯೂ ಇರುವುದು ನಿಃಸಂಶಯವಾಗಿ ನಮಗೆ ಖಾತ್ರಿಯಾಗುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ನಮಗೆ ನಾಗ ಸಂಬಂಧಿಯಾದ ಧೋರಣೆಗಳ ಸರ್ವವ್ಯಾಪಕ ಅಂಶಗಳನ್ನು ಹುಡುಕುವ ಅಗತ್ಯವಿಲ್ಲ. ಅವನ ಕ್ಷೇತ್ರಪತಿತ್ವ ಮತ್ತು ಕ್ಷೇತ್ರಪಾಲಕತ್ವವನ್ನು ಸಿದ್ಧ ಸ್ವರೂಪದಲ್ಲಿ ಕಟ್ಟಿಕೊಡುವಷ್ಟು ಅಂಶಗಳ ಶೋಧವೇ ಸಾಕು. ದಕ್ಷಿಣದಲ್ಲಿನ ಕ್ಷೇತ್ರಪಾಲಕ ದೇವರುಗಳನ್ನಷ್ಟೇ ಕುರಿತು ವಿಚಾರ ಮಾಡಿದರೂ ಸಾಕು ಅವುಗಳೆಲ್ಲ ನಾಗರೂಪವಾಗಿರುವ ಸಂಗತಿ ನಮಗೆ ಸ್ಪಷ್ಟವಾಗುತ್ತದೆ. ಜೊತೆಗೆ ದಕ್ಷಿಣದಲ್ಲಿನ ಎಲ್ಲಾ ಭೂದೇವತೆಗಳು ಮುಖ್ಯವಾಗಿ ನಾಗನ ಸಾಹಚರ್ಯವನ್ನು ಹೊಂದಿರುವುದು ತಿಳಿದುಬರುತ್ತದೆ. ಎಲ್ಲಮ್ಮ, ಮಾತಂಗಿ, ರೇಣುಕಾ, ಸಾಂತೇರಿ, ಭೂಮಿಕಾ ಇತ್ಯಾದಿ ಹೆಸರುಗಳಿಂದ ದಕ್ಷಿಣದಲ್ಲಿ ಪ್ರಖ್ಯಾತವಾಗಿರುವ ಭೂದೇವಿಯ ಉಪಾಸನೆಯಲ್ಲಿ ನಾಗಕ್ಕೆ – ನಾಗ ಚಿಹ್ನೆಗೆ – ಬಹಳೇ ವಿಶೇಷ ಮಹತ್ವವುಂಟು. ರೇಣುಕೆ ಅಥವಾ ಎಲ್ಲಮ್ಮ ದೇವತೆಗಳ ಉಪಾಸಕರ ಕೈಯಲ್ಲಿ ನಾಗಾಕಾರ(ನಾಗಫಣಿ) ಕೋಲೊಂದು ಇರುತ್ತದೆ. ದಕ್ಷಿಣ ಕೊಂಕಣ ಹಾಗೂ ಗೋಮಾಂತಕ ಪ್ರದೇಶಗಳಲ್ಲಿ ಹುತ್ತದ ರೂಪದಲ್ಲಿ ಪೂಜಿಸಲಾಗುತ್ತಿರುವ ಸಾಂತೇರಿ ಮಾತೆಯೊಡನೆ ನಾಗ ಮಾಹಾತ್ಮ್ಯೆಯು ಸೇರಿಕೊಂಡಿರುವುದು ಗಮನೀಯ. ಅಂತೆಯೇ ಮೂರ್ತಿರೂಪದಲ್ಲಿ ವಿರಾಜಮಾನಳಾಗಿರುವ ಭೂಮಿಕಾ ದೇವಿಯ ಕೈಯಲ್ಲಿರುವ ನಾಗನನ್ನೂ ಮರೆಯುವಂತಿಲ್ಲ. ಬದಾಮಿಯ ಬನಶಂಕರಿ ಅಥವಾ ಶಾಂಕಭರಿಯನ್ನು ಕುರಿತಂತೆ ‘ನಾಗಲಿಂಗ ಭಗಾಂಕಾಢ್ಯಮೌಲಿಃ |’ (ಯಾರ ಶಿರವು ನಾಗಲಿಂಗ ಮತ್ತು ಯೋನಿಯ ಚಿಹ್ನೆಗಳಿಂದ ಭೂಷಣಗೊಂಡಿರುವುದೋ ಅದು) ಎಂಬುದಾಗಿ ಸಹಸ್ರನಾಮಕಾರನಲ್ಲಿ ವರ್ಣೀತವಾಗಿರುವ ಒಂದು ಹೆಸರಿನತ್ತಲೂ ಲಕ್ಷ್ಯಹರಿಸಬೇಕು.

ಸುಬ್ರಹ್ಮಣ್ಯ ಕ್ಷೇತ್ರದಲ್ಲಿನ ಸುಬ್ರಹ್ಮಣ್ಯನ ನಾಮ ರೂಪ ರಹಸ್ಯವನ್ನು ಅರಿಯುವಲ್ಲಿ ಜಗತ್ತಿನ ಮಾತಾ – ಪಿತರುಗಳ ರಹಸ್ಯವೆ ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಈ ಗೂಢತೆಯಿಂದ ನಮ್ಮ ಮನಸ್ಸು ಇನ್ನೂ ಹೆಚ್ಚು ಗಂಭೀರವೇ ಆಗುವುದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಯಾತ್ರಾಕಲ್ಪಲತಾ: ಗೌರೀಶಂಕರಶಾಸ್ತ್ರಿ ಅನಂತಶಾಸ್ತ್ರಿ, ಪುಣೆ, ೧೮೮೪, ಪುಟ.೩೯, ೪೧, ೪೫.

[2]ಕಲ್ಯಾಣ – ತೀರ್ಥಾಂಕ: ವರ್ಷ ೩೧, ಸಂಖ್ಯೆ.೧, ಜನವರಿ, ೧೯೫೭, ಪುಟ. ೩೨೪.

[3]ಯಾತ್ರಾಕಲ್ಪಕತಾ: ಪುಟ. ೪೧ – ೪೩.

[4] Writings and Speeches of the late Hon. R.B.Vishwanath Narayan Mandlik: Ed.by. N.V.Mandlik, Mumbai, 1986, p.245.

[5] Dravidian India, Vol.I T.R. Sesha Iyengar, Madras, 1925,p.110.

[6] Karttikeya – The Devine Child: Ratna Navaratnam, Mumbai, 1973, p.143

[7] The Cultural Heritage of India, Vol.IV: Ed. by Haridas Bhattacharya, Kolkatta, 1956, (`Skanda Cult in South India’: K.R.Venkataraman) p.309.

[8] Writing and Speeches: p.245

[9] The Mothers: Robert Briffault, London, 1959, p.315.