ಈ ಒಂದು ವಿನ್ಯಾಸವೇ ಎಷ್ಟೊಂದು ವಿಭಿನ್ನ ರೀತಿಗಳಲ್ಲಿ ವೈವಿಧ್ಯ ಪಡೆಯುತ್ತ ಹೋಗುತ್ತದೆಂಬುದನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ.

. ೫+೫+೫+೫
೫+೫+೫+ಗುರು ಇನ್ನೊಂದು ವಿನ್ಯಾಸ
. ೫ ೫ ೫ ೫
೫ ೫ ಗುರು ಒಂದು ವಿನ್ಯಾಸ
. ೫+೫+೫+೫
೫+ಗುರು ಮತ್ತೊಂದು ವಿನ್ಯಾಸ
. ೫+೫
೫+೫ ಮತ್ತು ೩ ಮಾತ್ರೆಗಳು

ಹೀಗೆ ಮೇಲುನೋಟಕ್ಕೆ ಹಲವು ವಿನ್ಯಾಸಗಳಾಗುತ್ತವೆ. ಈಗ ಇಂಥ ರಚನೆಗಳನ್ನು ಗಮನಿಸಬಹುದು.

.        – ⋃      ⋃⋃⋃⋃            – ⋃      – – ⋃   – ⋃⋃⋃
ಹತ್ತು     ವರುಷದ            ಹಿಂದೆ    ಮುತ್ತೂರ           ತೇರಿನಲಿ
– – ⋃   ⋃⋃⋃⋃⋃         – – ⋃ + ಗು
ಅತ್ತಿತ್ತ    ಸುಳಿದವರು        ನೀವಲ್ಲವೆ?

ಇಲ್ಲಿ ೫ ಮಾತ್ರೆಗಳ ನಾಲ್ಕು ಗಣಗಳು ಮೊದಲ ಸಾಲಿನಲ್ಲಿ ಅನಂತರ ಎರಡನೆ ಸಾಲಿನಲ್ಲಿ ಐದು ಮಾತ್ರೆಗಳ ಮೂರು ಗಣಗಳು ಮೇಲೊಂದು ಗುರುವಿದೆ. ಮೊದಲ ಸಾಲಿನಲ್ಲಿ, ಐದು ಮಾತ್ರೆಯ ಎರಡು ಗಣಗಳ ಬದಲು ಮೂರು (ಹತ್ತು = – ⋃) ನಾಲ್ಕು (ವರುಷದ = ⋃⋃⋃⋃) ಮತ್ತು ಮೂರು (ಹಿಂದೆ = – ⋃) ಮಾತ್ರೆಗಳ ಎರಡು ಗಣಗಳಿವೆ. ಮುಂದಿನೆರಡು ಗಣಗಳೂ ಐದೈದು (ಮುತ್ತೂರು = – – ⋃) (ತೇರಿನಲಿ = – ⋃⋃⋃) ಮಾತ್ರೆಗಳ ಗಣಗಳಾಗಿವೆ. ಎರಡನೆಯ ಸಾಲಿನಲ್ಲಿ ಐದೈದು ಮಾತ್ರೆಗಳ ಮೂರು ಗಣಗಳು (ಅತ್ತಿತ್ತ = – – ⋃ + ಸುಳಿದವರು = ⋃⋃⋃⋃⋃ + ನೀವಲ್ಲಿ = – – ⋃) ಮತ್ತೆ ಒಂದು ಗುರು (ವೇ = –) ಬಂದಿವೆ. ಇಲ್ಲಿ ಮೊದಲ ಗಣದಲ್ಲಿ ಮೊದಲೆರಡು ಗುರು ಮೇಲೊಂದು ಲಘುವಿದ್ದರೆ ಎರಡನೆಯ ಗಣ ಸರ್ವ ಲಘುಗಳ ಗಣವಾಗಿದೆ. ಮೂರನೆಯ ಗಣ ಮಾತ್ರ ಮೊದಲ ಗಣದ ರೀತಿಯೇ (ಮೊದಲೆರಡು ಗುರು ಮತ್ತೆ ಒಂದು ಲಘು) ಇದೆ. ಕೊನೆಗೆ ಗುರುವಿದೆ.

, ಯಾರು ಬರೆದರು ಧರ್ಮಕರ್ಮಗಳ ಶಾಸ್ತ್ರವನು?
ಕಟ್ಟು ಕಥೆ ಇನ್ನು ಸಾಕು.

ಇಲ್ಲಿ ಮೊದಲ ಸಾಲಿನಲ್ಲಿ ಐದು ಮಾತ್ರೆಗಳ ನಾಲ್ಕು ಗಣಗಳಿದ್ದರೆ ಎರಡನೆಯ ಸಾಲಿನಲ್ಲಿ ಐದು ಮಾತ್ರೆಗಳ ಎರಡೇ ಗಣಗಳು ಮತ್ತು ಒಂದು ಗುರುವಿದೆ.

ಮೊದಲ ಸಾಲಿನಲ್ಲಿ ಮೂರು (ಯಾರು = – ⋃) ನಾಲ್ಕು (ಬರೆದರು = ⋃⋃⋃⋃) ಮತ್ತು ಮೂರು (ಧರ್ಮ = – ⋃) ಮಾತ್ರೆಗಳ ಎರಡು ಗಣಗಳ ಅನಂತರ ಐದೈದು ಮಾತ್ರೆಗಳ (ಕರ್ಮಗಳ = ⋃⋃⋃ + ಶಾಸ್ತ್ರವನು = ⋃⋃⋃) ಎರಡು ಗಣಗಳಿದ್ದರೆ ಎರಡನೆಯ ಸಾಲಿನಲ್ಲಿ ಐದು ಮಾತ್ರೆಗಳು (ಕಟ್ಟುಕಥೆ = – ⋃⋃⋃) ಮೂರು ಮಾತ್ರೆಗಳ (ಇನ್ನು + ಸಾಕು) ಎರಡು ಗಣಗಳಿದ್ದು ಅವುಗಳು ೫ ಮಾತ್ರೆಗಳು ಮತ್ತು ಮೇಲೊಂದು ಗುರುವಾಗುತ್ತವೆ.

. ನಡೆದಿದ್ದ ಹಾಗೆಯೇ ಮಾತುಕತೆ ಇಬ್ಬರಲು
ಬೆಳಗಾಯಿತು

ಇಲ್ಲಿ ಮೊದಲ ಸಾಲಿನಲ್ಲಿ ನಾಲ್ಕು ಗಣಗಳು ಇವೆ (ಐದು ಮಾತ್ರೆಗಳಿಂದ ಕೂಡಿದವು). ಮೊದಲ ಗಣ (ನಡೆದಿದ್ದ = ⋃⋃ – ⋃) ಎಂದಿದ್ದರೆ ಎರಡನೆಯ ಗಣ ಗುರು ಲಘು ಗುರುವಿನಿಂದ (ಹಾಗೆಯೇ = – ⋃ –) ಕೂಡಿದೆ. ಮೂರನೆ ಗಣ ಮತ್ತು ನಾಲ್ಕನೆ ಗಣಗಳು ಮತ್ತೆ ಐದು ಮಾತ್ರೆಗಳಾಗಿವೆ (ಮಾತುಕತೆ = – ⋃⋃⋃); (ಇಬ್ಬರಲು = – ⋃⋃⋃) ಎರಡನೆ ಸಾಲಿನಲ್ಲಿ ಐದು ಮಾತ್ರೆಯ ಒಂದು ಗಣ ಮೇಲೊಂದು ಗುರುವಿದೆ. (ಬೆಳಗಾಯಿತು = ⋃ ⋃ – ⋃ + –) ಇಲ್ಲಿ ಗಮನಿಸಿದ ಮೂರು ಉದಾಹರಣೆಗಳಲ್ಲಿ ಎರಡನೆ ಸಾಲುಗಳ ಮೂರು ಐದು ಮಾತ್ರೆಗಳ ಗಣ ಮೇಲೊಂದು ಗುರು; ಅನಂತರ ಎರಡು ಐದು ಮಾತ್ರೆಗಳ ಗಣ ಒಂದು ಗುರು ಮತ್ತೆ ಐದು ಮಾತ್ರೆಗಳ ಒಂದು ಗಣ ಮೇಲೊಂದು ಗುರು ಹೀಗೆ ಗಣಗಳ ಸಂಖ್ಯೆಯಲ್ಲಿ (ಎರಡನೆ ಸಾಲಿನಲ್ಲಿ) ಒಂದೊಂದೇ ಗಣ ಕಡಿಮೆಯಾಗುವುದನ್ನು ಕಂಡಿದ್ದೇವೆ.

ಈ ಐದು ಮಾತ್ರೆಗಳ ನಾಲ್ಕು ಗಣಗಳ ಮೊದಲ ಸಾಲಿನಲ್ಲಿರುವ ಕ್ರಮ ಕಂಡಿದ್ದೆವು. ಇನ್ನು ಐದು ಮಾತ್ರೆಗಳ ನಾಲ್ಕು ಗಣಗಳ ಬದಲು ಎರಡೇ ಗಣಗಳು ಮೊದಲ ಸಾಲಿನಲ್ಲಿದ್ದು ಎರಡನೆಯ ಸಾಲಿನಲ್ಲಿ ಐದು ಮಾತ್ರೆಗಳ ಒಂದು ಗಣ ಮೇಲೊಂದು ಗುರು ಇರುವ ವಿನ್ಯಾಸವಿದೆ.

ಐದು ಮಾತ್ರೆಗಳ ಎರಡು ಗಣಗಳಿರುವ ಮೊದಲ ಸಾಲಿಗೆ ಎರಡನೆ ಸಾಲಿನಲ್ಲಿ ಐದು ಮಾತ್ರೆಗಳ ಒಂದು ಗಣ ಹಾಗೂ ಗುರುವಿರುವ ವಿನ್ಯಾಸದ ಬದಲಿಗೆ ಮೂರು ಮಾತ್ರೆಗಳ ಎರಡು ಗಣಗನ್ನು ಯೋಜಿಸುವ ಕ್ರಮವೂ ಇದ್ದು, ಈ ಎರಡು ಗಣಗಳು ಮತ್ತೆ ಐದು ಮಾತ್ರೆಗಳ ಒಂದು ಗಣ ಮೇಲೊಂದು ಗುರುವಾಗುವ ವಿನ್ಯಾಸವನ್ನು ಪಡೆಯುತ್ತವೆ. ಉದಾಹರಣೆಗೆ –

ಅಂಗಡಿಯ ಮೇಲೊಂದು = – ⋃ ⋃ ⋃ – – ⋃
ಅಂಗಡಿಯಿದೆ = – ⋃ ⋃ ⋃ –

ಅನುವಾಗು ನಾಶಕ್ಕೆ = ⋃ ⋃– ⋃ – – ⋃
ಪ್ರಳಯವನು ಜಪಿಸು = ⋃ ⋃ ⋃ ⋃ ⋃ ⋃ ⋃ ⋃ + ಗುರು

ಸೀಳದೆಯೆ ಸಾಗುವೆಯೊ = – ⋃ ⋃ ⋃ – ⋃ ⋃ ⋃
ಶಿವನೆ ಬಲ್ಲ = ⋃ ⋃ ⋃ – ⋃ + ಗುರು

ಈವರೆಗೆ ಐದು ಮಾತ್ರೆಗಳ ನಾಲ್ಕು ಗಣಗಳು ಹಾಗೂ ಎರಡು ಗಣಗಳಿರುವ ಒಂದು ರಚನೆಯಲ್ಲಿ ಎರಡನೆಯ ಸಾಲಿನಲ್ಲಿ ಐದು ಮಾತ್ರೆಗಳ ಮೂರು ಗಣಗಳು; ಮೇಲೊಂದು ಗುರು, ಐದು ಮಾತ್ರೆಗಳ ಎರಡು ಗಣಗಳು ಮೇಲೊಂದು ಗುರು ಮತ್ತೆ ಐದು ಮಾತ್ರೆಗಳ ಒಂದು ಗಣ ಮೇಲೊಂದು ಗುರುವಿನಿಂದ ವಿನ್ಯಾಸಗಳಿಂದ ಐದು ಮಾತ್ರೆಗಳ ಗಣಗಳ ರಚನೆಗಳಲ್ಲಿ ಪಾದ ಸಂಖ್ಯೆಗಳನ್ನು ಗಣಗಳ ಸಂಖ್ಯೆಗಳನ್ನು ಲಯದ ವೈವಿಧ್ಯಕ್ಕಾಗಿ ಹೆಚ್ಚು ಕಡಿಮೆ ಮಾಡಿಕೊಳ್ಳುವ ಒಂದು ಕ್ರಮವನ್ನು ಗಮನಿಸಲಾಯಿತು. ಇನ್ನು ಈ ಐದು ಮಾತ್ರೆಗಳ ಗುರುಗಳ ವಿನ್ಯಾಸದಲ್ಲಿ ಕಂಡುಬರುವ ವೈವಿಧ್ಯ ಬಹುಮುಖವಾದುದು. ಲಕ್ಷ್ಮೀಶ ಕವಿಯದು ವಾರ್ಧಕ ಷಟ್ಪದಿಯಲ್ಲಿ ಮಾಡಿಕೊಂಡಿರುವ ಗಣವಿನ್ಯಾಸಗಳನ್ನು ಕುರಿತ ಪ್ರಬಂಧದಲ್ಲಿ ಇವುಗಳ ವೈವಿಧ್ಯದ ಒಂದು ಸ್ಥೂಲ ಚಿತ್ರವನ್ನು ಗಮನಿಸಬಹುದು.

ಈ ಐದು ಮಾತ್ರೆಗಳ ಲಲಿತ ಲಯವನ್ನು ಕಥನಕ್ಕೆ ಬಳಸಿಕೊಳ್ಳುವಾಗ ಇದನ್ನು ಕವಿತೆಗೆ ರಗಳೆಯಾಗಿ ಮೊದಲಿಗೆ ಬಳಕೆ ತಂದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರು. ಹರಿಹರ ಬಳಸಿದ ಲಲಿತ ರಗಳೆಯ ಆದಿ ಮತ್ತು ಅಂತ್ಯಪ್ರಾಸಗಳನ್ನು ಬಿಟ್ಟು ಕಥನ ಕವಿತೆಗಳಿಗೆ ಮಾಸ್ತಿಯವರು ಬಳಸಿದ್ದು ಇದನ್ನು ‘ಸರಳ ರಗಳೆ ‘ ಎಂದವರು ವೆಂಕಣ್ಣಯ್ಯನವರು. ಇದನ್ನೇ ಮಂಜೇಶ್ವರದ ಗೋವಿಂದ ಪೈ ಅವರು ‘ಬೋಳರಗಳೆ ‘ ಎಂದು ಕರೆದದ್ದುಂಟು.

ಗೊಲ್ಗೊಥ ಹಾಗೂ ವೈಶಾಖಿ ಎಂಬ ಕಥನ ಕವನಗಳಲ್ಲಿ ಅದನ್ನು ಅವರು ಬಳಸಿದುದೇ ಅಲ್ಲದೆ ಒಂದು ಸಾಲಿಗೆ ಇಪ್ಪತ್ತು ಮಾತ್ರೆಗಳೆಂಬ ನಿಯಮದಿಂದ ಬಿಡುಗಡೆಗೊಳಿಸಿ ಒಂದು ಅಥವಾ ಎರಡು ಮಾತ್ರೆಗಳು ಕಡಿಮೆಯಾಗುವಂತೆಯೂ ಬಳಸಿದರು.

ಇಪ್ಪತ್ತು ಮಾತ್ರೆಗಳ ಸಾಲನ್ನು ಅರ್ಥಾನುಸಾರವಾಗಿ ಒಡೆದು ಭಿನ್ನ ರಚನೆಗಳಿಗೆ ಅವಕಾಶ ಮಾಡಿಕೊಂಡದ್ದುಂಟು. ಉದಾಹರಣೆಗೆ ಈ ಕೆಲವು ಪ್ರಯೋಗಗಳನ್ನು ಗಮನಿಸಿ:

. “…… ಎಷ್ಟೋ ಹೊತ್ತಿಂತು
ನೋಡುತ್ತಿದ್ದವಳು ಕೊನೆಯಲ್ಲಿ ತನ್ನ ಕೈಯಿಂದ
ನನ್ನ ಗಲ್ಲವನು ಸೋಕಿದಳು.
ಅಷ್ಟೇ ನನಗೆ
ಈಗ ನೆನವಿಹುದು. ಗಲ್ಲವ ಬೆರಳು ಸೋಂಕಿತು.”

. “…… ಇರವೆ ನಡೆಯುವ ಶಬ್ದ ತಿಳಿಯುವುದು ಕಿವಿಗೆ
ಎಂದು ಹೇಳಿದರು.
ಆಚೆಯ ಬೇಸಗೆಗೆ ಮತ್ತೆ
ನಾನು ಸಾಧುಗಳ ಬಳಿ ಸಾರಿದೆನು.
ವರ್ಷ ……

. “…… ನಮ್ಮ ಲಕ್ಷ್ಮಮ್ಮ
ಅಂಥದೇ ಹೆಣ್ಣು, ಬರಿ ಲಕ್ಷ್ಮಮ್ಮನಲ್ಲ; ಇದು
ವೀರಲಕ್ಷ್ಮಮ್ಮಎಂದರು.
ಇದೇ ನನ್ನ ಕಥೆ.

ಮಾಸ್ತಿಯವರ ನವರಾತ್ರಿಯಿಂದ ಎತ್ತಿಕೊಂಡ ಮೂರು ಉದಾಹರಣೆಗಳು ಮೇಲಿನವು.

ಒಂದನೆಯ ಉದಾಹರಣೆಯ ಅಪೂರ್ಣ ಪಂಕ್ತಿಯಲ್ಲಿ ಮೂರು (ಎಷ್ಟೊ = – ⋃) ಮತ್ತು ಐದು ಮಾತ್ರೆಗಳ (ಹೊತ್ತಿಂತು = – – ⋃) ಎರಡು ಗಣಗಳಿವೆ. ಎರಡನೆಯ ಸಾಲಿನಲ್ಲಿ ಮೊದಲ ಗಣ ಎಂಟು ಮಾತ್ರೆಗಳಿಂದ ಕೂಡಿದ್ದು (ನೋಡುತ್ತಿದ್ದವಳು = – ⋃ – ⋃⋃⋃) ಮುಂದಿನ ಗಣ ನಾಲ್ಕು (ಕೊನೆಯಲಿ = ⋃⋃⋃⋃) ಮಾತ್ರೆಗಳದು; ಮುಂದಿನ ಗಣ ಮೂರು (ತನ್ನ = – ⋃) ಮಾತ್ರೆಗಳದು; ಅದರ ಮುಂದಿನ ಗಣ ಐದು (ಕೈಯಿಂದ = – – ⋃) ಮಾತ್ರೆಗಳದು. ಈ ಸಾಲಿನ ಮಾತ್ರೆಗಳ ಲೆಕ್ಕ ಹತ್ತೊಂಬತ್ತು ಮಾತ್ರ. ಅಂದರೆ ಇಪ್ಪತ್ತು ಮಾತ್ರೆಗಳ ನಿಯಮವನ್ನು ಮುರಿಯಲಾಗಿದೆ. ಮುಂದಿನ ಸಾಲು ಒಂದು ಘಟಕವಾಗಿದ್ದರೂ ಇಪ್ಪತ್ತು ಮಾತ್ರೆಗಳ ಘಟಕವಾಗಲು ಮುಂದಿನ ಸಾಲಿನ ಅಗತ್ಯತೆ ಕೂಡ ಅನಿವಾರ್ಯ. ಇಲ್ಲಿರುವುದು ಮೂರು ಮಾತ್ರೆಗಳ (ಎಷ್ಟೊ = – ⋃) ಮತ್ತು ಐದು ಮಾತ್ರೆಗಳ (ಗಲ್ಲವನು = – ⋃⋃⋃) ಗಣಗಳು ಮುಂದಿನ ಗಣ ಮತ್ತೆ ಐದು (ಸೋಕಿದಳು = – ⋃⋃⋃) ಮಾತ್ರೆಗಳ ಗಣವಾಗಿ ಒಟ್ಟು ಈ ಸಾಲಿನಲ್ಲಿ ಹದಿಮೂರು ಮಾತ್ರೆಗಳಾಗಿವೆ.

ಮುಂದಿನ ಸಾಲು ಆರಂಭವಾಗುವುದೇ ಏಳು ಮಾತ್ರೆಗಳ ಗಣಗಳಿಂದ. ಅವುಗಳು ನಾಲ್ಕು ಮಾತ್ರೆಗಳ (ಅಷ್ಟೇ = – –) ಮತ್ತು ಮೂರು ಮಾತ್ರೆಗಳ (ನನಗೆ = ⋃⋃⋃) ಗಣಗಳಿಂದ ಕೂಡಿ ಒಟ್ಟು ಏಳು ಮಾತ್ರೆಗಳಾಗುವುವು. ಹಿಂದಿನ ಮಹಾವಾಕ್ಯ (para)ದ ಹದಿಮೂರು ಮಾತ್ರೆಗಳು ಮುಂದಿನ ಸಾಲಿನ ಏಳು ಮಾತ್ರೆಗಳು ಸೇರಿ ಇಪ್ಪತ್ತು ಮಾತ್ರೆಗಳ ಒಂದು ಪಂಕ್ತಿಯಾಗುವ ವೈಚಿತ್ರ್ಯ ಇಲ್ಲಿದೆ. ಅಂದರೆ ಇಪ್ಪತ್ತು ಮಾತ್ರೆಗಳ ಸಾಲನ್ನು ಅರ್ಥಪೂರ್ಣವಾಗಿ ಭಿನ್ನಗೊಳಿಸಿ ಹದಿಮೂರು ಮಾತ್ರೆಗಳ ಹಾಗೂ ಏಳು ಮಾತ್ರೆಗಳ ವಿನ್ಯಾಸವಾಗಿಸಿರುವುದು ಇಲ್ಲಿ ವೇದ್ಯ. ಅಲ್ಲದೆ ಈ ಏಳು ಮಾತ್ರೆಗಳ ಸಾಲಿನ ವಿನ್ಯಾಸವಾದ ಮೇಲೆ ಮತ್ತೆ ಒಂದು ಪಂಕ್ತಿಯಿದ್ದು ಅಲ್ಲಿ ಗಣವಿನ್ಯಾಸ ಮೂರು (ಈಗ = – ⋃) ಮತ್ತು ಐದು (ನೆನಪಿಹುದು = ⋃⋃⋃⋃⋃) ಮಾತ್ರೆಗಳ ಗಣಗಳಾದ ಮೇಲೆ ವಾಕ್ಯ ಮುಗಿಯುತ್ತದೆ; ಮುಂದೆ ನಾಲ್ಕು (ಗಲ್ಲವ = – ⋃⋃) ಮೂರು (ಬೆರಳು = ⋃⋃⋃) ಮತ್ತು ನಾಲ್ಕು ಮಾತ್ರೆಗಳ (ಸೋಂಕಿತ = – ⋃⋃) ಗಣಗಳಿವೆ. ಮತ್ತೆ ಇಲ್ಲಿಯ ಪಂಕ್ತಿಯಲ್ಲಿಯೂ ಹತ್ತೊಂಬತ್ತು ಮಾತ್ರೆಗಳೇ ಇವೆ. ಮುಕ್ತ ಛಂದಸ್ಸಿಗೆ ಹೊರಳುವ ಮೊದಲೇ ನವೋದಯ ಕಾಲಕ್ಕಾಗಲೆ ಮಾತ್ರೆಗಳ ಲೆಕ್ಕಾಚಾರವನ್ನು ಅತಿಮುಖ್ಯವಾಗಿ ಗಮನಿಸದೆ ಅರ್ಥದ ಕಡೆಗೆ ಕವಿತೆಯಲ್ಲಿ ಗಮನಹರಿಸಿರುವುದು ವೇದ್ಯ.

ಮೂರನೆಯ ಉದಾಹರಣೆಯಲ್ಲಿನ ವಿನ್ಯಾಸ ಮೊದಲ ಸಾಲು ಅಪೂರ್ಣವಾದುದು ಅಲ್ಲ, ನಮ್ಮ ಲಕ್ಷ್ಮಮ್ಮ ಎಂಬ ಮೂರು ಮಾತ್ರೆಗಳ (ನಮ್ಮ = – ⋃) ಮತ್ತು ಐದು ಮಾತ್ರೆಗಳ (ಲಕ್ಷ್ಮಮ್ಮ = – – ⋃) ಗಣಗಳಿದ್ದು ಎಂಟು ಮಾತ್ರೆಗಳಿವೆ.

ಮುಂದಿನ ಸಾಲಿನಲ್ಲಿ ಐದು ಮಾತ್ರೆ (ಅಂಥದೇ = – ⋃ –) ಮೂರು ಮಾತ್ರೆ (ಹೆಣ್ಣು = – ⋃)ಗಳ ಗಣಗಳಿದ್ದು ವಾಕ್ಯ ಮುಗಿದಿದೆ. ಮುಂದೆ ಎರಡು (ಬರಿ = ⋃⋃) ಮತ್ತು ಎಂಟು ಮಾತ್ರೆಗಳ (ಲಕ್ಷ್ಮಮ್ಮ = – – ⋃) ಗಣವಿದೆ. ವಾಕ್ಯ ಅಲ್ಲಿಯೂ ಮುಗಿಯದಂತೆಯೇ ಇದೆ; ಮುಂದೆ ಎರಡು (ಇದು = ⋃⋃) ಮಾತ್ರೆಗಳ ಗಣವಿದೆ. ಇಲ್ಲಿ ಎಂಟು ಮಾತ್ರೆಗಳಿಗೂ ಒಂಬತ್ತು ಮಾತ್ರೆಗಳ ಗಣ ಮತ್ತು ಎರಡು ಮಾತ್ರೆಗಳ ಗಣ ಯೋಜಿತವಾಗಿದ್ದು ಒಟ್ಟು ಇಪ್ಪತ್ತು ಮಾತ್ರೆಗಳ ಪಂಕ್ತಿಯಾದರೂ ಇಲ್ಲಿನ ವಾಕ್ಯಗಳು ಮುರಿಮುರಿಯಾಗಿದ್ದು ವಾಕ್ಯರಚನೆ ಹಾಗೂ ಲಯ ಎರಡರಲ್ಲೂ ವೈವಿಧ್ಯವಿದೆ.

ಮುಂದಿನ ಸಾಲು ಮತ್ತೆ ಮೂರು ಮತ್ತು ಐದು ಮಾತ್ರೆಗಳ ಗಣಗಳಿಂದ ಕೂಡಿ ಒಟ್ಟು ಎಂಟು ಮಾತ್ರೆಗಳಾಗಿವೆ. ಮುಂದಿನ ಗಣ ನಾಲ್ಕು ಮಾತ್ರೆಗಳದಾಗಿ ಒಟ್ಟು ಈ ಪಂಕ್ತಿಯಲ್ಲಿ ಹನ್ನೆರಡು ಮಾತ್ರೆಗಳ ಮೂರು ಭಿನ್ನ ಭಿನ್ನ ಮಾತ್ರೆಗಳ ಗಣಗಳಿವೆ. (೩+೫+೪). ಇದಕ್ಕೆ ಪೂರಕವಾದ ಇನ್ನರ್ಧ ವಾಕ್ಯದಲ್ಲಿ ಮೂರು (ಇದೇ = ⋃ –) ಮತ್ತು ಐದು ಮಾತ್ರೆಗಳ (ನನ್ನ ಕಥೆ) ಎರಡು ಗಣಗಳಿವೆ. ಮತ್ತೆ ಈ ಸಾಲುಗಳಿಂದ ೧೨ ಮತ್ತು ೮ ಮಾತ್ರೆಗಳ ವಿನ್ಯಾಸ ಒಟ್ಟು ಇಪ್ಪತ್ತು ಮಾತ್ರೆಗಳಾಗುವುದೇ ಅಲ್ಲದೆ ಇಪ್ಪತ್ತು ಮಾತ್ರೆಗಳ ಸಾಲನ್ನು ಎರಡು ಘಟಕಗಳಾಗಿ ಒಡೆದಿದೆ. ಇದರಿಂದ ಗಣಗಳ ವಿನ್ಯಾಸದಲ್ಲೂ ವೈವಿಧ್ಯ ಬಂದಿದೆ.

ಎರಡನೆಯ ಉದಾಹರಣೆಯ ವಿನ್ಯಾಸ ಇಪ್ಪತ್ತು ಮಾತ್ರೆಗಳದು. ಇಲ್ಲಿ ಮೂರು (ಇರುವೆ = ⋃⋃⋃) ನಾಲ್ಕು (ನಡೆಯುವ = ⋃⋃⋃⋃) ಮೂರು (ಶಬ್ದ = – ⋃) ಮಾತ್ರೆಗಳ ಗಣಗಳಾದ ಮೇಲೆ ಐದು ಮಾತ್ರೆಗಳ ಗಣ (ತಿಳಿಯುವುದು = ⋃⋃⋃⋃⋃) ಮತ್ತೆ ಎರಡು (ಆ = –) ಮತ್ತು ಮೂರು (ಕಿವಿಗೆ = ⋃⋃⋃) ಮಾತ್ರೆಗಳ ಗಣಗಳಿದ್ದು ಐದು ಮಾತ್ರೆಗಳ ನಾಲ್ಕು ಗಣಗಳಿಗೆ ಬದಲಾಗಿ ಮೂರು, ನಾಲ್ಕು, ಮೂರು, ಐದು, ಎರಡು ಮತ್ತು ಮೂರು ಮಾತ್ರೆಗಳ ಗಣಗಳಿಂದ ವಿನ್ಯಾಸಗೊಂಡಿದ್ದು ತೀನಂಶ್ರೀ ಅರು ಹೇಳುವ ಗಣಪರಿವೃತ್ತಿ ವಿಧಾನದಿಂದ ವೈವಿಧ್ಯ ಪಡೆದಿದೆ.

ಮುಂದಿನ ಸಾಲು ವಾಕ್ಯಾರ್ಥವಾಗಿ ಮುಗಿದು ಅಲ್ಲಿ ಮೂರು (ಎಂದು = – ⋃) ಮತ್ತು ಐದು (ಹೇಳಿದರು = – ⋃⋃⋃) ಮಾತ್ರೆಗಳ ಎರಡು ಗಣಗಳಿದ್ದು ಎಂಟು ಮಾತ್ರೆಗಳ ಘಟಕವಾಗಿದೆ.

ಮುಂದಿನ ಸಾಲಿನಲ್ಲಿ ನಾಲ್ಕು (ಆಚೆಯ = – ⋃⋃) ಐದು (ಬೇಸಗೆಗೆ = – ⋃⋃⋃) ಮತ್ತೆ ಮೂರು (ಮತ್ತೆ = – ⋃) ಮಾತ್ರೆಗಳ ಗಣಗಳಿವೆ. ಒಟ್ಟು ಇಲ್ಲಿನ ಮಾತ್ರೆಗಳ ಮೊತ್ತ ಹನ್ನೆರಡು ಮಾತ್ರೆಗಳು. ಇಲ್ಲಿಯೂ ಎಂಟು ಮಾತ್ರೆಗಳ ಒಂದು ತುಂಡು ಸಾಲು ಮತ್ತೊಂದು ಹನ್ನೆರಡು ಮಾತ್ರೆಗಳ ತುಂಡು ಸಾಲು ಸೇರಿ ಇಪ್ಪತ್ತು ಮಾತ್ರೆಗಳ ಘಟಕವಾಗುತ್ತದೆ.

ಮುಂದಿನ ಸಾಲು ಇಪ್ಪತ್ತು ಮಾತ್ರೆಗಳ ಘಟಕವಾಗಿದ್ದು ಮೂರು (ನಾನು = – ⋃) ಐದು (ಸಾಧುಗಳ = – ⋃⋃) ಎರಡು (ಬಳಿ = ⋃⋃) ಐದು (ಸಾರಿದೆನು = – ⋃⋃⋃) ಮಾತ್ರೆಗಳ ಮತ್ತೆ ಎರಡು (ಆ = –) ಮೂರು (ವರ್ಷ = – ⋃) ಮಾತ್ರೆಗಳ ವಿಭಿನ್ನ ಗಣಗಳಿಂದ ಯೋಜಿತವಾಗಿದೆ.

ವಾಕ್ಯಗಳು ಚುಟುಕಾಗಿರುವುದು ಯತಿಸ್ಥಾನಗಳಾಗಿ ಗಣವಿನ್ಯಾಸದ ವೈವಿಧ್ಯಕ್ಕೆ ಕಾರಣವಾಗುವುದು ಗಮನಾರ್ಹ.

ಮೊದಲ ಉದಾಹರಣೆಯಲ್ಲಿ ಹದಿನಾರು ಮಾತ್ರೆಗಳಾದ ಮೇಲೆ ಅಲ್ಪ ಯತಿಯೂ ಕೊನೆಯಲಿ ಎಂಬಲ್ಲಿ ಮತ್ತೊಂದು ನಾಲ್ಕು ಮಾತ್ರೆಗಳ ಗಣವಾದ ಮೇಲೆ ಮತ್ತೊಂದು ಅಲ್ಪಯತಿಯೂ ಬಂದು ಮುಂದೆ ೩+೫; ೩+೫+೫ ಅಂದರೆ ಎಂಟು ಮಾತ್ರೆಗಳು, ಎಂಟು ಮಾತ್ರೆಗಳು ಮತ್ತೆ ಐದು ಮಾತ್ರೆಗಳಾದ ಮೇಲೆ ಪೂರ್ಣ ಯತಿಯು ಬರುತ್ತದೆ. ಐದು ಮಾತ್ರೆಗಳ ಗಣವಿನ್ಯಾಸದಲ್ಲಿ ಎಷ್ಟೊಂದು ವಿಭಿನ್ನ ಗಣಸಂಯೋಜನೆಗಳಿವೆ ಎಂಬ ಅಂಶ ಛಂದಸ್ಸಿನ ಬೆಡಗಿಗೆ ಕಾರಣವಲ್ಲವೆ? ಮುಂದಿನ ಚುಟಕಾದ ಪಂಕ್ತಿಯಿಂದ ಆರಂಭವಾಗುವ ಲಯವಿನ್ಯಾಸ ಗಮನಿಸಬೇಕು. ಈ ಚುಟುಕು ಸಾಲಿನಲ್ಲಿರುವುದು ಏಳೇ ಮಾತ್ರೆಗಳು. (ನಾಲ್ಕು ಮಾತ್ರೆಗಳ ಮತ್ತು ಮೂರು ಮಾತ್ರೆಗಳ ಗಣ) ಅದು ಮುಂದುವರೆದು ಎಂಟು ಮಾತ್ರೆಗಳ ಗಣವಾದ ಮೇಲೆ ಯತಿ ಬರುತ್ತದೆ. ಮುಂದೆ ಮತ್ತೆ ನಾಲ್ಕು ಮೂರು ನಾಲ್ಕು ಮಾತ್ರೆಗಳ ಗಣಗಳಾದ ಮೇಲೆ ಯತಿ ಬರುತ್ತದೆ.

ಎರಡನೆಯ ಉದಾಹರಣೆಯ ಲಯ ವಿನ್ಯಾಸ (ಇಪ್ಪತ್ತು ಮಾತ್ರೆಗಳಿಂದ ಕೂಡಿದ್ದರೂ) ಮೂರು, ನಾಲ್ಕು, ಮೂರು ಮಾತ್ರೆಗಳ ಮೂರು ಗಣಗಳಾದ ಮೇಲೆ ಐದು ಮಾತ್ರೆಗಳ ಒಂದು ಗಣ ಮತ್ತೆ ಎರಡು ಮಾತ್ರೆಗಳ ಮತ್ತು ಮೂರು ಮಾತ್ರೆಗಳ ಒಂದು ಗಣದಿಂದ ಕೂಡಿದೆ. ಸ್ವಾರಸ್ಯವೆಂದರೆ ಈ ಉಕ್ತಿ ಉಲ್ಲೇಖಗೊಂಡದ್ದು – ಆದ್ದರಿಂದ ಎಂದು ಹೇಳಿದರು ಎಂಬ ಮೂರು ಮತ್ತು ಐದು ಮಾತ್ರೆಗಳ ಗಣಗಳಿದ್ದು ಯತಿಸ್ಥಾನ ಬಂದು, ವಾಕ್ಯಾರ್ಥವೂ ನಿಲುಗಡೆಗೆ ಬರುತ್ತದೆ.

ಇಲ್ಲಿನ ಅರ್ಧಕ್ಕಿಂತ ಕಡಿಮೆಯಾದ ಸಾಲಿನ ವಿನ್ಯಾಸದೊಂದಿಗೆ ಸರಳ ರಗಳೆಯ ಲೆಕ್ಕಾಚಾರಕ್ಕಾಗಿ ಮುಂದಿನ ಅರ್ಧಕ್ಕಿಂತ ಹೆಚ್ಚಾಗಿರುವ ಸಾಲು ಸೇರಿಕೊಂಡರೂ ಛಂದಸ್ಸಿನ ದೃಷ್ಟಿಯಿಂದ ಮತ್ತು ಅದಕ್ಕೆ ಕಾರಣವಾದ ಅರ್ಥದ ದೃಷ್ಟಿಯಿಂದ ಇನ್ನಷ್ಟು ಭಿನ್ನವಾಗುತ್ತದೆ. ನಾಲ್ಕು ಮಾತ್ರೆಗಳು, ಐದು ಮಾತ್ರೆಗಳು ಮತ್ತು ಮೂರು ಮಾತ್ರೆಗಳ ಗಣಗಳಿದ್ದು ಇವುಗಳೆಲ್ಲ ಮೂರು, ಐದು, ಎರಡು ಮತ್ತು ಐದು ಮಾತ್ರೆಗಳ ಗಣಗಳೊಂದಿಗೆ ಕೂಡಿ ವಾಕ್ಯ ಮುಗಿದು ಯತಿ ಬರುತ್ತದೆ – ಮುಂದೆ ಮತ್ತೆ ಐದು ಮಾತ್ರೆಯ ಒಂದು ಗಣ ಬಂದು ಇದಕ್ಕೆ ಪೂರಕ ಯತಿ ಆಗುತ್ತದೆ. ಅಂದರೆ ಕಥನಕ್ಕೆ ಬಳಕೆಯಾಗುವ ಸರಳ ರಗಳೆಯಲ್ಲಿ ಐದು ಮಾತ್ರೆಗಳ ಗಣಗಳ ನಿಯಮ ನಿಯಂತ್ರಕವಾಗಿದ್ದರೂ ಆ ನಿಯಮಗಳ ಒಳಗೇ ವಿವಿಧ ಗಣವಿನ್ಯಾಸಗಳಿಂದ ಸರಳ ರಗಳೆಯ ಲಯ ವೈವಿಧ್ಯವನ್ನು ಪಡೆದುಕೊಳ್ಳುವುದಾಗಿ ಮೂರನೆಯ ಉದಾಹರಣೆ ಕೂಡ ಇದಕ್ಕೆ ಭಿನ್ನವಲ್ಲ.

ಇಲ್ಲಿಯೂ ಹಿಂದಿನ ಸಾಲಿನ ಎಂಟು ಮಾತ್ರೆಗಳ ಘಟಕ ಮುಂದಿನ ಸಾಲಿನ ಎಂಟು ಮಾತ್ರೆಗಳ ಗಣದಿಂದ ಕೂಡಿ ಯತಿಸ್ಥಾನ ಆಗುತ್ತದೆ. ಇಲ್ಲಿಯೂ ಇನ್ನೊಂದು ಸ್ವಾರಸ್ಯ ಮೊದಲು ಒಂದು ಎಂಟು ಮಾತ್ರೆಗಳ ಗಣ ಮೂರು ಮತ್ತು ಐದು ಮಾತ್ರೆಗಳುಳ್ಳ ಪದ(ಗಣ)ಗಳಿಂದ ಕೂಡಿದ್ದರೆ ಇಲ್ಲಿಯ ಎಂಟು ಮಾತ್ರೆಗಳ ಗಣ ಐದು ಮತ್ತು ಮೂರು ಮಾತ್ರೆಗಳ ಗಣ(ಪದ)ಗಳಿಂದ ಕೂಡಿ ಲಯದ ವೈವಿಧ್ಯ ಸಾಧಿಸುತ್ತದೆ. ಮುಂದೆ ಇದೇ ಸಾಲಿನಲ್ಲಿ ಮತ್ತೊಮ್ಮೆ ಯತಿ (ವಾಕ್ಯದ ನಿಲುಗಡೆ ಸ್ಥಾನ) ಬರುತ್ತದೆ. ಎರಡು ಐದು ಮತ್ತು ಮೂರು ಮಾತ್ರೆಗಳ ಗಣ (ಪದ)ಗಳಿಂದ ಕೂಡಿ, ಮತ್ತೆ ಆ ಸಾಲಿನಲ್ಲಿ ಎರಡು ಯತಿಗಳು ಬಂದುದಲ್ಲದೆ ಉಳಿದ ಎರಡು ಮಾತ್ರೆಗಳ ಈ ಸಾಲಿನ ಗಣ ಮೂರು ಮತ್ತು ಐದು ಮಾತ್ರೆಗಳ ಗಣ(ಪದ)ದಿಂದ ಕೂಡಿ ಮತ್ತೆ ಕೊನೆಗೆ ನಾಲ್ಕು ಮಾತ್ರೆಗಳ ಗಣದಿಂದ ಮತ್ತೆ ನಿಲುಗಡೆಗೆ ಬರುತ್ತದೆ – ಅಂದರೆ ಮತ್ತೊಂದು ಯತಿಸ್ಥಾನ ಬರುತ್ತದೆ.

ಮೇಲಿನ ಮೂರೂ ರಚನೆಗಳಲ್ಲಿ ಪಾದಗಳ ಮಧ್ಯದಲ್ಲೆ ವಾಕ್ಯಗಳು ಮುಗಿದು ಯತಿಸ್ಥಾನಗಳು ಬಂದು, ಲಯದ ವೈವಿಧ್ಯಕ್ಕೆ ಕಾರಣವಾಗಿರುವುದನ್ನು ಗಮನಿಸಬಹುದು. ಸರಳ ರಗಳೆಯನ್ನು ಮೊದಲು ಕಥನಕ್ಕೆ ಬಳಸಿದವರು ಮಾಸ್ತಿಯವರೇ ಆದರೂ ನಾಟಕಗಳಲ್ಲಿ ಇದನ್ನು ಮೊದಲು ಬಳಕೆಗೆ ತಂದರು ಕುವೆಂಪು ಅವರೇ. ಈ ಸರಳ ರಗಳೆ ಕನ್ನಡದಲ್ಲಿ ಇಂಗ್ಲಿಷಿನ Blank Verseಗೆ ಸಮಾನವಾಗಿದೆಯೆಂಬುದೇ ಅಲ್ಲದೆ ಕುವೆಂಪು ಅವರು ಇದನ್ನು ಮಹಾಛಂದಸ್ಸಿನ ಮಟ್ಟಕ್ಕೆ ಏರಿಸಿದೆ ಎನ್ನುತ್ತಾರೆ.

ಇದನ್ನು ಕುರಿತು ಸಾಕಷ್ಟು ಚಿಂತನೆ ನಡೆದಿದೆ. ಅವುಗಳಲ್ಲಿ ಮುಖ್ಯವಾದವು –

) ಕುವೆಂಪು ಅವರು ಇದನ್ನು ಮಹಾಛಂದಸ್ಸು ಎಂದು ಕರೆದಿದ್ದಾರೆ. ‘ಮಹಾ ಛಂದಸ್ಸಿನ ಮೇರುಕೃತಿ ಮೇಣ್‌ ಜಗದ್ಭವ್ಯ ರಾಮಾಯಣಂ’ ಎಂಬ ಕಾವ್ಯೋಕ್ತಿಯಲ್ಲಿಯೇ ಅದು ಘೋಷಿತವಾಗಿದೆ. ಈ ಬಗ್ಗೆ ಅವರೊಡನೆ ಚರ್ಚಿಸಿದಾಗ ಕುವೆಂಪು ಅವರು ಮಹಾಛಂದಸ್ಸನ್ನು ‘ಸರ್ವಛಂದೋ ಸಮನ್ವಯ’ವೆಂದು ಕರೆಯುತ್ತಾರೆಂದು ಚಿದಾನಂದ ಮೂರ್ತಿಯವರು ಹೇಳುತ್ತಾರೆ. ಆದರೆ ಚಿದಾನಂತ ಮೂರ್ತಿಯವರ ಅಭಿಪ್ರಾಯಗಳು ಹೀಗಿವೆ: ೧) ಹಾಛಂದಸ್ಸು ಕುವೆಂಪು ಅವರು ಛಂದೋ ಪ್ರಪಂಚಕ್ಕೆ ಸಲ್ಲಿಸಿದ ಶಾಶ್ವತ ಕೊಡುಗೆ. (ಪು. ೩೧೪)

) ಮುಂದೆ ನಾವು ನೋಡುವಂತೆ ಐದು ಮಾತ್ರೆಗಳ ಗಣದ ಅಸ್ತಿಭಾರದ ಮೇಲೆ (ಸಮಾಧಿಯ?) ಮಹಾಛಂದಸ್ಸಿನ ಸೌಧ ನಿಂತಿರುವುದು (ಪು. ೨೯೬) ಮೇಲಿನ ಎರಡೂ ಅಭಿಪ್ರಾಯಗಳ ಜೊತೆಗೆ ಅವರು ಅಂತಿಮವಾಗಿ “ಮಹಾ ಛಂದಸ್ಸನ್ನು ಸರಳ ರಗಳೆ ಎಂದೇ ಯಾರಾದರೂ ವ್ಯವಹರಿಸಿದರೆ ನನ್ನ ಮಟ್ಟಿಗೆ ತಪ್ಪೇನೂ ಕಾಣದು” ಸರಳ ರಗಳೆ ಎಂದೇ ಯಾರಾದರೂ ವ್ಯವಹರಿಸಿದರೆ ನನ್ನ ಮಟ್ಟಿಗೆ ಪ್ಪೇನೂ ಕಾಣದು” (ಪು. ೨೯೪)[1] ಎಂದುಬಿಡುತ್ತಾರೆ.

ಕೃಷ್ಣಮೂರ್ತಿ ಕಿತ್ತೂರರು ಇದನ್ನು ‘ಸಂಕೀರ್ಣ ಸರಳ ರಗಳೆ’ ಎಂದರೆ ಕೀರ್ತಿನಾಥ ಕುರ್ತಕೋಟಿ ಅವರಂತೂ ‘ರಾಮಾಯಣ ದರ್ಶನ’ದ ಛಂದಸ್ಸು ಸರಳ ರಗಳೆಯೇ ಆಗಿದೆ ಎಂದು ಹೇಳುವುದೇ ಅಲ್ಲದೆ – “ಅದನ್ನು ‘ಮಹಾಛಂದಸ್ಸು’ ಎಂಬ ಬೇರೆ ಅಗ್ಗಳಿಕೆಯ ಹೆಸರಿನಿಂದ ಕರೆಯುವುದಂತೂ ಎಷ್ಟೂ ಸರಿಯಲ್ಲ” ಎನ್ನುತ್ತಾರೆ.

ಕನ್ನಡದ ಸರಳ ರಗಳೆಯ ಸಿದ್ಧಿಯ ಬಗೆಗೆ ಎಲ್ಲರೂ ಹೆಮ್ಮೆಗೊಳ್ಳುತ್ತಾರೆ. ಅದನ್ನು ಮಹಾಛಂದಸ್ಸು ಎನ್ನಬೇಕೊ, ಸಂಕೀರ್ಣ ಸರಳ ರಗಳೆ ಎನ್ನಬೇಕೊ ಅಥವಾ ಸರ್ವ ಛಂದೋ ಸಮನ್ವಯ ಎನ್ನಬೇಕೊ ಎಂಬ ಚರ್ಚೆಗೆ ಇಲ್ಲಿ ಅವಕಾಶವಿಲ್ಲ. ಆದರೆ ಲಲಿತ ರಗಳೆ, ಆದಿ ಮತ್ತು ಅಂತ್ಯಪ್ರಾಸಗಳನ್ನು ನೀಗಿಕೊಂಡು ಮಹಾಕಾವ್ಯದ ಅಭಿವ್ಯಕ್ತಿ ತಗುವಂಥ ಸತ್ವ ಪಡೆದ ರೀತಿಯನ್ನು ಸಂಕ್ಷೇಪವಾಗಿ ಗುರುತಿಸಬಹುದು:

) ಮೊದಲನೆಯದಾಗಿ ಇಪ್ಪತ್ತು ಮಾತ್ರೆಗಳ ಒಂದು ಸಾಲನ್ನು ಘಟಕವಾಗಿಸುವ ಯಾಂತ್ರಿಕತೆಯಿಂದಲೂ ಐದೈದು ಮಾತ್ರೆಗಳ ಗಣಗಳ ಏಕತಾನತೆಯಿಂದಲೂ ಬಿಡುಗಡೆ ಪಡೆದ ಸೊಗಸು.

) ಎರಡನೆಯದು ಒಂದು ಸಾಲು ಘಟಕವಾಗಿದೆ ಒಂದು ವಾಕ್ಯ ಘಟಕವಾಗಿ ಅರ್ಥಯತಿಯ ಪಾದದ ಆದಿ, ಮಧ್ಯ ಅಥವಾ ಅಂತ್ಯದಲ್ಲಿ ಅಥವಾ ಮುಂದುವರೆದು ಮುಂದಿನ ಸಾಲುಗಳಲ್ಲಿಯೂ ಪ್ರವಹಣಗೊಳ್ಳುವ ವೈವಿಧ್ಯ ಪಡೆದದ್ದು.

) ಮೂರನೆಯದಾಗಿ ಪದದ ಅಖಂಡತೆಗೆ ಬಾಧೆಯಾಗದಂತೆ ಒಂದು ಪಾದದಿಂದ ಇನ್ನೊಂದು ಪಾದಕ್ಕೆ ವಾಕ್ಯ ಮುಂದುವರೆದಾಗ ಪದದ ಅಖಂಡತೆಯನ್ನು ಉಳಿಸುವುದು.

) ನಾಲ್ಕನೆಯದಾಗಿ ಈ ಐದು ಮಾತ್ರೆಗಳ ಲಲಿತಲಯದಲ್ಲಿ ವಿವಿಧ ಛಂದೋವಿಲಾಸಗಳ ವೈಭವ (ಅರ್ಥ)ವನ್ನು ಸಮರ್ಥವಾಗಿ ನಿರೂಪಿಸುವುದು.

ಪ್ರಮುಖವಾಗಿ ಈ ನಾಲ್ಕು ಅಂಶಗಳಿಗೆ ಸಂಬಂಧಿಸಿದಂತೆ ಕೆಲವು ಉದಾಹರಣೆಗಳನ್ನು ಗಮನಿಸಬಹುದು.

ಉದಾಹರಣೆಗೆ ವಾಕ್ಯಯತಿಯ ಒಂದು ಸಾಲಿನಿಂದ ಮುಂದುವರೆದು ಮತ್ತೊಂದು ಸಾಲಿನಲ್ಲಿಯೂ ಪ್ರವಹಿಸುವಾಗ ಪದದ ಅಖಂಡತೆಗೆ ಭಂಗ ಬಾರದಂತಿರವುದಕ್ಕೆ ಕೆಲವು ಉದಾಹರಣೆಗಳನ್ನು ಗಮನಿಸಬಹುದು. ಮಾಸ್ತಿಯವರಂತೆ ಗೋವಿಂದ ಪೈಗಳೂ ಸರಳ ರಗಳೆಯನ್ನು ಕಥನಕ್ಕೆ ಬಳಸಿಕೊಂಡವರಲ್ಲಿ ಪ್ರಮುಖರು. ಆದರ, ಗೋವಿಂದ ಪೈಗಳ ಗೊಲ್ಗೊಥಾವನ್ನು ಗಮನಸಿದರೆ ಅಲ್ಲಿ ಸಾಲು ಒಂದು ಘಟಕವಾಗಿದೆ ಒಮ್ಮೆ ಅರ್ಧಪಂಕ್ತಿ ಘಟಕವಾಗುವುದುಂಟು; ಎರಡನೆಯ ಸಾಲಿಗೂ ವಾಕ್ಯ ಮುಂದುವರೆಯುವುದುಂಟು.

ಆದರ ಅವರ ಸರಳ ರಗಳೆಯ ಪ್ರಯೋಗದಲ್ಲಿ ಐದೈದು ಮಾತ್ರೆಗಳ ಗಣವೆಂಬ ಯಾಂತ್ರಿಕತೆಯನ್ನೇನೊ ಮಾಸ್ತಿಯವರ ಹಾಗೆಯೇ ಅವರೂ ಮೀರಿ ಸೊಗಸನ್ನು ತಂದಿದ್ದಾರೆ.

ಅಂದಿದೊ ವಸಂತ ಪೂರ್ಣಮಿಯ ಭೃಗುವಾರದಾ
ನಡುಹಗಲ ಸಿರಿಹೊತ್ತು

ಇಲ್ಲಿ ಗಣವಿನ್ಯಾಸ ನಾಲ್ಕು (ಅಂದಿದೊ = – ⋃⋃) ಒಂಬ್ಬತ್ತು (ವಸಂತ ಪೂರ್ಣಿಮೆಯ = ⋃ – ⋃ – ⋃⋃⋃) ಏಳು (ಭೃಗುವಾರದಾ = ⋃⋃ – ⋃ –) ಮಾತ್ರೆಗಳ ಗಣಗಳಿಂದ ಕೂಡಿದೆ. ವಾಕ್ಯ ಪಾದಾಂತ್ಯದಲ್ಲಿ ಮುಗಿಯದೆ ಮುಂದಿನ ಸಾಲಿನ ಅರ್ಧ ಭಾಗದಲ್ಲಿ ಮುಗಿದಿದೆ. ಐದು ಮಾತ್ರೆಗಳ ಬದಲು ಗಣ ಪರಿವೃತ್ತಿಯಿಂದ ಭಿನ್ನ ಮಾತ್ರಾ ಗಣಗಳ ಯೋಜನೆಯಿಂದ ಈ ರಚನೆ ವಿವಿಧತೆ ಪಡೆದಿದೆ.

ಆದರೆ ಮುಂದಿನ ಸಾಲುಗಳಿಗೆ ಹೋದರೆ ಅಲ್ಲಿನ ಐದು ಸಾಲುಗಳಲ್ಲಿ – ಎರಡು ಸಾಲುಗಳ ಕೊನೆಗೆ ಪದದ ಅಖಂಡತೆಗೆ ಭಂಗ ಬಂದಿದೆ.

ನೋಡೊಂದೆ ಬರಮೋಡ ಬಾನಗಲ ಚಾಚಿ ನೋ
ಹನ ಕಾಲದಾ ಪ್ರಲಯಮೇಘವೆನೆ ಮೆಚ್ಚಿಹುದು ಇಳೆ
ಯಬ್ಬಸದೊಳೇದುತಿದೆ, ಮರಗಳಲಿ ಕದಲದೆಲೆ
ಹಕ್ಕಿಗಳ ಉಸುರಿಲ್ಲ …..

ಮೊದಲ ಸಾಲಿನಲ್ಲಿ ‘ನೋಹನ’ ಎಂಬ ಪದ ಒಡೆದಿದೆ. ಮೊದಲ ಸಾಲಿನ ಕೊನೆಗೆ ‘ನೋ’ ಮುಂದಿನ ಸಾಲಿನ ಆರಂಭಕ್ಕೆ ‘ಹನ’ ಎಂದಾಗಿದೆ. ಹಾಗೆಯೇ ಮೂರನೆಯ ಸಾಲಿನ ‘ಇಳೆಯುಬ್ಬಸದೊಳೇದುತಿದೆ’ ಎಂಬಲ್ಲಿಯೂ ಇಳೆ ಮತ್ತು ಉಬ್ಬಸ ಎಂಬೆರಡು ಪದಗಳು ಒಡೆದಿವೆ.

ಈ ಅಂಶವನ್ನು ಗಮನಿಸುವುದು ಪೈಯವರ ಪದ್ಯದಲ್ಲಿ ಕುಂದನ್ನು ಅನ್ವೇಷಿಸುವ ಉದ್ದೇಶದಿಂದ ಮಾತ್ರ ಅಲ್ಲ. ಸುಮಾರು ಇಪ್ಪತ್ತೆರಡು ಸಾವಿರ ಮುನ್ನೂರು ಸಾಲುಗಳಷ್ಟು ಸುದೀರ್ಘವಾಗಿ ಇರುವ ‘ರಾಮಾಯಣ ದರ್ಶನಂ’ನಲ್ಲಿ ಕೇವಲ ಮೂರು ನಾಲ್ಕು ಕಡೆಗಳಲ್ಲಷ್ಟೇ ಈ ರೀತಿಯ ಪದದ ಅಖಂಡತೆಗೆ ಭಂಗ ಬಂದಿದೆ ಅಂದರೆ ಆಶ್ಚರ್ಯವಾಗುತ್ತದೆ.

[2]ಪುಟ ೫೦೬ರಲ್ಲಿ ಮೊದಲ ಸಾಲು ಮತ್ತು ಎರಡನೆಯ ಸಾಲುಗಳನ್ನು ಗಮನಸಿ.

ಜನ ಚರಣ ಚಲದ್ಧೂಳಿದೂರಂ, ಮೃಗಖುರಾ
ಕ್ಷುಣ್ಣ ಶಾದ್ವಲ ಸುಂದರಂ …..

ಇಲ್ಲಿ ಅಕ್ಷುಣ್ಣ ಪದದ ಅಖಂಡತೆಗೆ ಭಂಗವಾಗಿದೆ.

ಪು. ೧೬೦ರಲ್ಲಿ

ಸೋಜಿಗಂಬಡುತಿರಲ್ತಮ್ಮೆಲೆಮನೆಗೆ ಮರಳ್ದ್
ಏರಿ ನಡೆದಡುಗೆ ತೊಡಗಿದಳು.

‘ಮರಳ್ದು’ ಪದದ ಅಖಂಡತೆಗೆ ಭಂಗ ಬಂದಿದೆ ಮರಳ್ದ್‌+ಏರಿ ಎಂದು ಪದವೊಡೆದು.

೪೪೨ನೇ ಪುಟದಲ್ಲಿ

….. ನಗೆವಾತದಂ ಬಿಟ್ಟು
ಕಳೆ!

ಎಂಬಲ್ಲಿಯೂ ಬಿಟ್ಟು ಕಳೆ ಎಂಬ ಪದದ ಅಖಂಡತೆಗೆ ಭಿನ್ನವಾಗಿದೆ. ಮತ್ತೆ ೫೬೬ನೇ ಪುಟದಲ್ಲಿ

…… ಉಘೇ
ಘೇ ಎನುತ್ತಿದೆ ಸಭೆ.

ಇಲ್ಲಿಯೂ ಉಘೇ ಉಘೇ ಎಂಬ ಘೋಷವಾಕ್ಯ ಉಘೇ-ಘೇ ಎಂದು ಇಲ್ಲಿ ಮೈತಾಳಿದೆ.

ಅಂದರೆ ಪಾದದಿಂದ ಪಾದಕ್ಕೆ ಗಣಗಳು ಹರಿದು ಪಂಕ್ತಿಗೆ ಇಪ್ಪತ್ತು ಮಾತ್ರೆಗಳಿರಬೇಕೆಂಬ ನಿಯಮದಿಂದ ಪಾರಾಗುವುದನ್ನು, ಹಾಗೆ ಮಾಡುವಾಗ ಪಾದದ ಕೊನೆಯ ಪದದ ಅಖಂಡತೆಗೆ ಭಂಗ ಬರದಿರುವ ರೀತಿಯ ಎಚ್ಚರವನ್ನು ‘ರಾಮಾಯಣ ದರ್ಶನಂ’ ಕಾವ್ಯದಲ್ಲಿ ಗಮನಿಸಬಹುದು. ಇಲ್ಲಿ ಇನ್ನೂ ಒಂದು ವಿಶಿಷ್ಟತೆ ಈ ಕಾವ್ಯದಲ್ಲಿದೆ. ಅದು ಪಾದಕ್ಕೆ ಇಪ್ಪತ್ತು ಮಾತ್ರೆಗಳಿರಬೇಕೆಂಬ ನಿಯಮದಿಂದ ಬಿಡುಗಡೆಗೊಂಡು ಬಿಡುತ್ತೆ. ಪು. ೩೨೫ರಲ್ಲಿ

……. ಪಿಂದಿಕ್ಕಿ
ಕೋಂಟೆ ಪೆರ್ಬಾಗಿಲಂ ಹೊರವಳಯದಡವಿಗೈ
ತರುತಿಂದ್ರಜಂ ಕಂಡನಾ ……

ಇಲ್ಲಿಯಂತೂ ಐತರುತ ಎಂಬ ಪದದ ಅಖಂಡತೆಗೆ ಭಂಗ ಬಂದಿದೆ.

ಅಂದರೆ ಇಲ್ಲಿ ಹದಿನೆಂಟೇ ಮಾತ್ರೆಗಳಿರುವ ಊನ ಪಾದ, ಹತ್ತೊಂಬತ್ತು ಮಾತ್ರೆಗಳಿರುವ ಊನ ಪಾದಗಳು ಕನಿಷ್ಠ ಮಾತ್ರಾಮಿತಿಯಾದರೆ ಇಪ್ಪತ್ತು ಮೂರು ಮಾತ್ರೆಗಳಿರುವ ಪಂಕ್ತಿಗಳೂ ಇವೆ. ಕೇವಲ ಮೂರು ಕಡೆ ಇಪ್ಪತ್ತು ನಾಲ್ಕು ಮಾತ್ರೆಗಳ ಪಂಕ್ತಿಗಳಿವೆ.

ಗೋವಿಂದ ಪೈಗಳವರು ಸರಳ ರಗಳೆಯಲ್ಲಿ ಬಳಸುವಾಗ ಹತ್ತೊಂಬತ್ತು ಮಾತ್ರೆಗಳ ಪಂಕ್ತಿ ತಂದದ್ದುಂಟು ‘ರಾಮಾಯಣ ದರ್ಶನಂ’ನ ಅಪರೂಪಕ್ಕೆ ೭೯೨ನೇ ಪುಟದಲ್ಲಿ ಹದಿನಾರು ಮಾತ್ರೆಗಳ ಒಂದು ಪಾದವಿದೆ:

೩          ೫         ೨         ೨         ೨         ೨
“…. ಏಳು,          ರಣಚಂಡಿ,          ಏಳ್‌!    ಏಳ್‌!    ಏಳ್‌!    ಏಳ್‌!”

ಆದರೆ ಏಳ್‌ ಎಂಬ ಪದಗಳ ಅನಂತರ ಪ್ರಾಪ್ತವಾಗುವ ಮೌನದಿಂದ ನಾಲ್ಕು ಬಾರಿ ಬಳಕೆಯಾಗಿರುವ ‘ಏಳ್‌’ ಪದಕ್ಕೆ ಮೂರು ಮಾತ್ರೆಗಳ ಕಾಲ ಪ್ರಾಪ್ತವಾಗುತ್ತದೆ ಎಂದೂ ಗ್ರಹಿಸಬಹುದು – ಇನ್ನೊಂದು ರೀತಿಯಲ್ಲಿ ‘ಏಳ್‌’ ಪದಕ್ಕೆ ಪ್ರಾಪ್ತವಾಗುವ ಒಂದು ಗಣದ ಅಂದರೆ ಐದು ಮಾತ್ರೆಗಳ ಕಾಲವೂ ಪ್ರಾಪ್ತವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಮಾತನ್ನು ಹೇಳುವಾಗ ಮತ್ತೊಂದು ಉದಾಹರಣೆಯನ್ನು ಇಲ್ಲಿ ವಿಶ್ಲೇಷಿಸಬಹುದೆಂದು ತೋರುತ್ತದೆ. ಅದು ಇಂಗ್ಲಿಷ್‌ ಗೀತಗಳಲ್ಲಿ ಬರುವ ಕಾಳಗದ ಪದ. ಇದೊಂದು ಕೊಡಗಿನ ಹಾಡಿನಿಂದ ಪ್ರೇರಿತವಾದುದೆಂದು ಶ್ರೀಯವರೆ ಹೇಳಿದ್ದಾರೆ.

ಡಾ. ಕೆ. ಜಿ. ನಾರಾಯಣ ಪ್ರಸಾದ್‌ ಅವರು ಐದು ಮಾತ್ರೆಗಳ ಲಯ ಇಲ್ಲಿದೆ ಎಂದು ವಿಶ್ಲೇಷಿಸಿದ್ದಾರೆ (ಪು. ೪೪೯, ಕನ್ನಡ ಛಂದಸ್ಸಿನ ಚರಿತ್ರೆ ಎರಡನೆಯ ಸಂಪುಟ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೧೯೮೦). ಅದನ್ನು ತಪ್ಪೆಂದು ಸಾಧಿಸುವ ಯತ್ನ ಇಲ್ಲಿನದಲ್ಲ. ಅವರು ಕಾಳಗದ ಪದವನ್ನು ವಿಶ್ಲೇಷಿಸುವಾಗ ಅವುಗಳ ಲಯವನ್ನು ಐದು ಮಾತ್ರೆಗಳ ಗಣಗಳಾಗಿ ಗುರುತಿಸಿದ್ದಾರೆ.

ಕಣಿವೆಗಳ ಬೆಟ್ಟಗಳ
ಗಡಿಯಿಂದ ಬನ್ನಿ
ಕಣೆ ಬಿಲ್ಲು ಕುಡುಗೋಲು
ಕೊಡಲಿಗಳ ತನ್ನಿ
ಕೆಚ್ಚೆದೆಯ ಮಕ್ಕಳಿರ
ಮೈಜೋಡ ತೊಡಿರೊ
ಬಿಚ್ಚುಗತ್ತಿಯ ಝಳವ
ಕೈ ಝಾಡಿಸಿಡಿರೋ

ಅವರು ಇದಕ್ಕೆ ಪ್ರಸ್ತಾರ ಹಾಕಿರುವ ರೀತಿ:

೫ ೫
೫ ಪ
೫ ೫
೫ ಪ

ಕೊಡವರ ಕುಣಿತವೊಂದರಿಂದ ಪ್ರೇರಿತವಾದದ್ದೆಂಬ ಇಲ್ಲಿನ ಆರಂಭದ ಸಾಲುಗಳನ್ನು ಗಮನಿಸಿ:

ಕಾಳೆ ಹರೆ ಕೊಂಬುಗಳ
ಏಳಿ ಮೊಳಗಿ ಏಳಿ
ನಾಡುಗಳ ಕುಳಗಳನು
ಕೂಡಿ ಕೊಳ ಹೇಳಿ
ಬನ್ನಿರಣ್ಣ ಬನ್ನಿರಣ್ಣ
ಅದೊ ಕೂಗು, ಕೇಳಿ
ಮನ್ನೆಯರ ಬಂಟರಿರ
ಒದಗಿ ಏಳಿ ಏಳಿ!

ಇದು ಕುಣಿತದ ಹಾಡಲ್ಲವೆ!

ಇಲ್ಲಿ ಎರಡನೆಯ ಹಾಗೂ ಎಂಟನೆಯ ಸಾಲುಗಳನ್ನು ಮತ್ತೆ ಐದನೆಯ ಸಾಲನ್ನು ಗಮನಿಸಿ – ಇಲ್ಲಿ ಮೂರು ಮಾತ್ರೆಯ ಉತ್ಸಾಹ ಲಯ ಕವಿತೆಯನ್ನು ನಿಯಂತ್ರಿಸುವಂತೆ ಭಾಸವಾಗುತ್ತದೆ. ವಾಸ್ತವವಾಗಿ ಮೊದಲ ಸಾಲನ್ನೆ ನೋಡಿ – ಅಲ್ಲಿ ‘ಕಾಳೆ’ ಎಂಬಲ್ಲಿ ತಾಳ ಬೀಳುತ್ತದೆ. ‘ಹರೆ’ ಎಂಬುದು ದೀರ್ಘೀಕರಣಕ್ಕೊಳಗಾಗುವಂತಿದೆ. ಹಾಗೆಯೇ ಕೊಂಬುಗಳ ಎಂಬಲ್ಲಿ ‘ಗಳ’ ಎಂಬುದೂ ದೀರ್ಘೀಕರಣಕ್ಕೊಳಗಾದಾಗ ಮೂರು ಮಾತ್ರೆಯ ಲಯವೇ ಪದ್ಯವನ್ನು ನಿಯಂತ್ರಿಸುವಂತಿದೆ. ಕುಣಿತದ ವೇಗ ಹೆಚ್ಚಿದಂತೆ, ಕಾಡ ಸೀಳುತ ಗಾಳಿ ಬರುವಂತೆ ಬನ್ನಿ ಎಂಬಲ್ಲಿ ಓಡ ಕೊಚ್ಚುತ ಕಡಲು ಬರುವಂತೆ ಬನ್ನಿ ಎಂಬಲ್ಲಿ ಕುಣಿತದ ವೇಗ ಹೆಚ್ಚಿ ಲಯವೂ ಏರಿ ಮತ್ತೆ ಯಥಾಪ್ರಾಕಾರ ಉತ್ಸಾಹ ಲಯಕ್ಕೆ ಇಳಿಯುತ್ತದೆ ಅಲ್ಲವೆ? ಅಂದರೆ ಈ ಪದ್ಯದ ‘ಲಯ’ದ ನಮ್ಯತೆ ಪ್ರತಿಭೆಯ ಗೆಲವು; ಇಂಥಲ್ಲಿ ‘ಲಯ’ ಕೆಡುವುದಿಲ್ಲ. ಹೊಸ ಬಳುಕುಗಳನ್ನು ಪಡೆಯುತ್ತದಲ್ಲವೆ?

[1] ಛಂದೋತರಂಗ – ಡಾ. ಎಂ. ಚಿದಾನಂದಮೂರ್ತಿ – ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ೧೯೯೩.

[2] ಶ್ರೀ ರಾಮಾಯಣ ದರ್ಶನಂ – ಕನ್ನಡ ಅಧ್ಯಯನ ಸಂಸ್ಥೆ, ೧೯೭೧.