ಆದರೆ ಕುವೆಂಪು ಅವರಲ್ಲಿ ಸಾಮಾನ್ಯವಾಗಿ ಹತ್ತೊಂಬತ್ತು ಮಾತ್ರೆಗಳ ಊನ ಪಾದಗಳು ಹಾಗೂ ಇಪ್ಪತ್ತು ಮುರು ಮಾತ್ರೆಗಳ ಅಧಿಕ ಮಾತ್ರೆಯ ಪಂಕ್ತಿಗಳು ಇದ್ದು ಈ ರೀತಿಯ ಮಾತ್ರಾ ಸಂಖ್ಯೆಗಳಲ್ಲಿ ವಿಭಿನ್ನತೆಯನ್ನು ತಂದು ಸರ್ವ ಛಂದೋ ಸಮನ್ವಯಕ್ಕೆ ನಡೆಸಿದ ಯತ್ನಗಳನ್ನು ಗಮನಿಸಬಹುದು.

ಇಪ್ಪತ್ತು ನಾಲ್ಕು ಮಾತ್ರೆಗಳ ಸಾಲುಗಳು ಕೇವಲ ಕೆಲವು.

. ಓಂ ನಮೋ, ಓಂ ನಮಃ! ಓಂ ಶಾಂತಿಶ್ಯಾಂತಿಃ
ಪು. ೮೮೫
. ನಾಮ ಲಕ್ಷ್ಯಕೆ ಲಕ್ಷಣಂ ತಾನೆನಲ್
ಕೋಸಲದೊಳಾ …..
ಪು. ೩೮ (೬೯೯೭೦೦)

ಮೊದಲ ಉದಾಹರಣೆಯಲ್ಲಿ ಇಪ್ಪತ್ತು ಮಾತ್ರೆಗಳಿವೆ. ಆದರೆ ಎಂಟನೆಯ ಉದಾಹರಣೆಯಲ್ಲಿ – ಇಲ್ಲಿ ಎರಡು ಸಾಲುಗಳ ಮಾತ್ರೆಗಳ ಮೊತ್ತ ೩ + ೪ + ೫ + ೫ = ೧೭ ಮತ್ತು ೭ = ೨೪, ವಾಕ್ಯಯತಿಯನ್ನಿವರು ಬಳಸಿಕೊಂಡದ್ದರಿಂದ ಲಯದಲ್ಲಿ ಪ್ರಾಪ್ತವಾದ ವೈವಿಧ್ಯ ಬಹುಮುಖವಾದುದು.

ಒಂದನೆಯದು – ಐದು ಮಾತ್ರೆಗಳ ಗಣಗಳ ಏಕತಾನತೆಯಿಂದ ಬಿಡುಗಡೆಯಾದುದು – ಎರಡನೆಯದು ಭಿನ್ನ ಛಂದೋಲಯಗಳನ್ನು ಕಾವ್ಯದಲ್ಲಿ ಸಾಧಿಸಿ ಅಭಿವ್ಯಕ್ತಿ ಶಕ್ತಿಯನ್ನು ಹೆಚ್ಚಿಸಿಕೊಂಡದ್ದು – ಉದಾಹರಣೆಗೆ ಈ ಕೆಲವನ್ನು ಗಮನಿಸಿಬಹುದು.

ಇಪ್ಪತ್ತು ಮಾತ್ರೆಗಳ ಒಂದು ಸಾಲು ನಾಲ್ಕು ಪಾದಗಳಾಗಿ ಲಯದಲ್ಲಿ ವೈವಿಧ್ಯಕ್ಕೆ ಕಾರಣವಾಗುವ ಉದಾಹರಣೆಗೆ ಇಲ್ಲಿ :

ತಥಾಸ್ತು!”
ಸೀತೆ ವಶವಪ್ಪಂತೆ!”
ತಥಾಸ್ತು!”
ನೀಂ ತಾಯ್ದಿಟಂ! …..”
ಪು. ೭೮೧

ಮೊದಲ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಗಣ (ತಥಾಸ್ತು = ⋃ – ⋃) ಎರಡನೆ ಸಾಲಿನಲ್ಲಿ ಮೂರು (ಸೀತೆ = – ⋃) ಮತ್ತು ಏಳು ಮಾತ್ರೆಗಳು (ವಶವಪ್ಪಂತೆ = ⋃⋃ – ⋃) ಮೂರನೆಯ ಸಾಲಿನಲ್ಲಿ ಮತ್ತೆ ನಾಲ್ಕು (ತಥಾಸ್ತು = ⋃ – ⋃) ಮಾತ್ರೆಗಳ ಗಣಗಳು ನಾಲ್ಕನೆಯ ಸಾಲಿನಲ್ಲಿ ವಾಕ್ಯ ಅಪೂರ್ಣವಾಗಿದೆ ಎಂಬುದು ಬೇರೆ ಮಾತು. ಮತ್ತೆ ಎರಡು (ನೀಂ = –) ಎರಡು (ತಾಯ್‌ = –) ಮೂರು (ದಿಟಂ = ⋃ –) ಮಾತ್ರೆಗಳ ಗಣಗಳು ಬಂದಿವೆ.

ಅಂದರೆ ಒಂದೇ ಸಾಲಿನ ಘಟಕವಾಗಿದ್ದ ರಗಳೆ ಪಾದಕ್ಕೆ ಇಲ್ಲಿ ವಿಭಿನ್ನತೆ ಒದಗಿದ್ದು, ನಾಟಕೀಯತೆಗೆ ಹೇಗೋ ಹಾಗೆಯೇ ಐದು ಮಾತ್ರೆಗಳ ಗಣಗಳ ವಿಭಿನ್ನ ವಿನ್ಯಾಸಗಳಿಗೂ ಕಾರಣವಾಗಿದೆ.

ಇಂಥದೇ ಹಲವು ಪ್ರಯೋಗಗಳಿವೆ. ಅವುಗಳಲ್ಲಿ ಇನ್ನೊಂದು ಪು. ೭೮೦ರಲ್ಲಿ ಹೀಗಿದೆ:

ನಾನೆ ಶಿವೆ!
ಕಾಣದೇನಯ್‌?”
ಅದೆಂತು?”
ಕಣ್ಣಂತೆ ಕಾಣ್ಕೆಯಯ್‌?”

ಇಲ್ಲಿ ಮೊದಲ ಸಾಲಿನಲ್ಲಿ ಮೂರು ಮತ್ತು ಎರಡು ಮಾತ್ರೆಗಳ (ನಾನೆ ಶಿವೆ = – ⋃, ⋃⋃) ಗಣವಿದೆ. ಆದರೆ ಅಲ್ಲಿಗೆ ವಾಕ್ಯ ಮುಗಿಯದೆ ಮುಂದಿನ ಸಾಲಿಗೂ ವಾಕ್ಯಾರ್ಥ ಹರಿದಿದೆ – ಲಯವೂ -. ಇಲ್ಲಿ ಮತ್ತೆ ಎರಡನೆಯ ಸಾಲಿನಲ್ಲಿ ಏಳು ಮಾತ್ರೆಗಳ (ಕಾಣದೇನಯ್‌ = – ⋃ – –) ಗಣವಿದೆ.

ಮುಂದಿನ ಸಾಲಿನಲ್ಲಿ ನಾಲ್ಕು (ಅದೆಂತು = ⋃ – ⋃) ಮಾತ್ರೆಗಳ ಗಣವಿದೆ. ನಾಲ್ಕನೆ ಸಾಲಿನಲ್ಲಿ ಐದು ಮಾತ್ರೆಗಳ ಎರಡು ಗಣಗಳಿವೆ (ಕಣ್ಣಂತೆ ಕಾಣ್ಕೆಯಯ್‌ = – – ⋃, – ⋃ –) ಇಲ್ಲಿಯೂ (ನಾಲ್ಕು ಸಾಲುಗಳಿವೆ) ೭೮೧ನೇ ಪುಟದಲ್ಲಿ ಇದ್ದಂತೆ. ಆದರೆ ೭೮೦ನೆ ಪುಟದ ಮೊದಲ ಸಾಲಿನ ಭಾಗ ಮುಂದಿನ ಸಾಲಿಗೂ ಚಾಚಿಕೊಳ್ಳುತ್ತದೆ. ೭೮೧ನೆ ಪುಟದಲ್ಲಿ ಈ ಕ್ರಮ ನಾಲ್ಕನೆ ಪಾದದಲ್ಲಿದೆ – ಅಂದರೆ ಒಂದು ಪಾದದ ಮಾತ್ರೆಗಳ ಮೊತ್ತವನ್ನು ನಾಲ್ಕು ಪಾದಗಳಿಗೆ ಹಂಚುವಾಗಲೂ ವಿಭಿನ್ನ ರೀತಿಗಳಿರುವುದು ಗಮನಾರ್ಹ. ಇದನ್ನೆ I.A. Richards ನಂಥ ವಿಮರ್ಶಕರು “Surprisal” – ವಿಸ್ಮಯಕಾರಕವಾದುದು ಎಂದು ಹೆಸರಿಸಿರುವುದು. ಇನ್ನು ಐದು ಮಾತ್ರೆಗಳ ಗಣವಿನ್ಯಾಸದಲ್ಲಿ ವಿಭಿನ್ನ ಲಯಗಳನ್ನು ಸಾಧಿಸುವ ಕೆಲವು ಉದಾಹರಣೆಗಳನ್ನು ಮಾತ್ರ ಗಮನಿಸಬಹುದು.

ಭಾಮಿನಿಯ ವಿಷಮಗಣ ಸಂಯೋಜನೆಗಳ ಗಣವಿನ್ಯಾಸ ಸಾಕಷ್ಟು ಕಡೆಗಿದೆ – ಕೆಲವು ಉದಾಹರಣೆಗಳನ್ನು ಗಮನಿಸಬಹುದು.

. ತಾಯಿ ಕಂದನ ಕೈಯನಾನುತ ನಡೆಯಿಪಂತೆ
ಪು. ೧೫೪ಸಾ.
. ತೆರೆ ಪರಂಪರೆ: ಮೊರೆ ಪರಂಪರೆ: ಪರಂಪರೆಯ
ಬೆಳ್ನೊರೆನೊರೆಯ ಪೊರೆಯ ಸಾಗರದ ನಾಗರನ
ಭೋರ್ಗರೆವ ಭೋಗಕುಲ ಬಲಮವ್ವಳಿಸಿದುದು
ನಿರಂತರಂ ತಟಗತ ಅಶೋಕವನ ವಂಕಿಮ
ಶಿಲಾವೇಲೆಯಿಂ,
ಪು. ೩೪೫ಸಾ೧೫

ಮೊದಲ ಸಾಲಿನ ರಚನೆ ಇಪ್ಪತ್ತು ಮಾತ್ರೆಗಳದು. ಆದರೆ ಗಣವಿನ್ಯಾಸದಲ್ಲಿ ಅಲ್ಲಿ ಮೂರು (ತಾಯಿ = – ⋃) ನಾಲ್ಕು (ಕಂದನ = – ⋃⋃) ಏಳು ಮಾತ್ರೆಗಳ ಮೂರು ಮತ್ತು ನಾಲ್ಕು ಮಾತ್ರೆಗಳ ಒಂದು ಘಟಕವಾಗಿ (ಕೈಯನಾನುತ = ⋃ – ⋃⋃) ಬಂದು ಕೊನೆಗೆ ಆರು ಮಾತ್ರೆಗಳ (ನಡೆಯಿಪಂತೆ = ⋃⋃⋃ – ⋃) ಗಣಗಳು ವಿನ್ಯಾಸಗೊಂಡಿವೆ. ಒಟ್ಟು ಇಪ್ಪತ್ತು ಮಾತ್ರೆಗಳ ಒಂದು ಪಂಕ್ತಿಯಲ್ಲಿ ಮೊದಲ ಮೂರು ಗಣಗಳು ಮೂರು ಮಾತ್ರೆ, ನಾಲ್ಕು ಮಾತ್ರೆ, ಮೂರು ಮಾತ್ರೆ, ನಾಲ್ಕು ಮಾತ್ರೆ ಇವುಗಳ ಗಣಗಳಾಗಿಯೂ ಕೊನೆಯದು ಆರು ಮಾತ್ರೆಗಳ ಗಣಗಳಾಗಿಯೂ ವಿನ್ಯಾಸೊಗೊಂಡಿದೆ.

ಎರಡನೆಯ ಉದಾಹರಣೆಯ ಮೊದಲ ಸಾಲಿನಲ್ಲಿ ಕವಿ ಎರಡು ಮಾತ್ರೆಗಳ ಒಂದು ಪದವನ್ನು ಐದು ಮಾತ್ರೆಗಳ ಪದದೊಂದಿಗೆ ಬೆಸೆದು ಮೊದಲ ಎರಡು ಗಣಗಳನ್ನು ಮೂರು ಮತ್ತು ನಾಲ್ಕು ಮಾತ್ರೆಗಳ ಗಣಗಳಾಗಿಸಿದ್ದಾನೆ. ಇನ್ನುಳಿದ ಆರು ಮಾತ್ರೆಗಳ (ಪರಂಪರೆಯ = ⋃ – ⋃⋃⋃) ಗಣ ಮುಂದಿನ ಸಾಲಿನ ನಾಲ್ಕು ಮಾತ್ರೆಗಳು, ಮೂರು ಮಾತ್ರೆಗಳು, ಮೂರು ಮಾತ್ರೆಗಳು ಈ ಗಣಗಳಿಂದ ರೂಪಿಸಿ ಕೊನೆಗೆ ಐದು ಮಾತ್ರೆಗಳ ಎರಡು ಗಣಗಳನ್ನು ತಂದು ವೈವಿಧ್ಯವನ್ನು ಸಾಧಿಸಿರುವುದನ್ನು ಗಮನಿಸಬಹುದು.

ಅಂದರೆ ಬಾಮಿನಿ ಷಟ್ಪದಿಯ ಲಯದ ಛಾಯೆ ಇಲ್ಲಿ ಭಾಸವಾಗಬಹುದು. ಅನಂತರ ಸಂಸ್ಕೃತ ಛಂದಸ್ಸಿನ ಓಟವನ್ನು ಗುರುತಿಸಬಹುದೆನ್ನಬಹುದಾದ ಈ ಸಾಲುಗಳನ್ನು ಗಮನಿಸಿ!

ಪುರುಷೋತ್ತಮನೆ ನಮೋ, ಪುನರ್ನ್‌‌ಮೋ ಮುಹರ್ನ್ಮೋ
ಓಂ ಸ್ವಯಂಪ್ರಭು ನಮೋ! ಓಂ ಋತಪ್ರಭು ನಮೋ!
ಓಂ ನಮೋ ಸರ್ವಲೋಕಸ್ವಾಮಿ ನಮೋ ನಮಃ
………
ಹೃದಯಂ ಚತುರ್ಮುಖಂ, ಜಿಹ್ವೆಯೆ ಸರಸ್ವತೀ;
ಸ್ಥೈರ್ಯಮೀವಸುಧಾತಲಂ, ಜಗಮೆ ತಾಂ ಶರೀರಂ;
ನಿನ್ನಿಚ್ಛೆ ವಿಧಿ; ಕೋಪಮಗ್ನಿ; ಲಕ್ಷ್ಮಿಯೆ ಸೀತೆ!
………
ಪು. ೮೫೫, ಸಾ. ೫೫೧೫೫೬

ಶ್ಲೋಕ ಛಂದಸ್ಸಿನ ಓಟವನ್ನು ಇಲ್ಲಿ ಕಾಣಬಹುದು –

ಮತ್ತೆ ಈ ಐದು ಮಾತ್ರೆಗಳ ಗಣಗಳನ್ನು ಉಂಡುಂಡೆಯಾಗಿ ಐದಯದು ಮಾತ್ರೆಗಳ ಗಣಗಳಾಗಿಯೇ ಬಳಸಿಯೂ ಅರ್ಥಪುಷ್ಟಿಗೆ ಕಾರಣವಾಗುವ ರಚನೆಗಳನ್ನು ಗಮನಿಸಬಹುದು.

ಈ ಮೂರು ಉದಾಹರಣೆಗಳನ್ನು ಗಮನಿಸಿ:

. ಮುಳುಗಿದರ್‌; ಮೂಡಿದರ್; ಸರಸಕ್ಕೆ ಕಾದಿದರ್‌‍;
ಬಯಸಿ ನಿಡು ನೋಡಿದರ್‌; ಬೆನ್ನಟ್ಟುತೋಡಿದರ್‌;
ಸುಖಖನಿಯ ತೋಡಿದರ್‌; ನೀರಾಟವಾಡಿದರ್‌;
ಪಾದುಕಾಕಿರೀಟಿ
ಪು. ೧೬೬, ಸಾ. ೬೯೭೧

. ಆರಸಿದರು ಸೀತೆಯಂ; ಆರಸಿದರವನಿಜಾತೆಯಂ;
ಆರಸಿದರಸುರನೊಯ್ದ ರಾಮ ಸಂಪ್ರೀತೆಯಂ
ಜಾನಕಿಯನರಸಿದರ್‌; ಮೈಥಿಲಿಯನರಸಿದರ್
…………
ಸೋವಿದರ್
ದೂರಮಂ; ಸೋವಿದರ್ನಿಕಟಮಂ; ಸೋವಿದರ್
ಗೂಢಮಂ; ಸೋವಿದರ್ಪ್ರಕಟಮಂ; ಸೋವಿದರ್
ಸರ್ವಮಂ ಮರಗೊಳ್ ಪೊದೆಗಳೊಳ್, ಕಲ್ಗಲೊಳ್
ಪುಲ್ಗಲೊಳ್, ಪಳುಬೆಳೆದ ಪಳ್ಳದೊಳ್……..
ಮಹೇಂದ್ರಾಚಲಂ.
ಪು. ೩೭೯೪೮೦ ಸಾಲು ೯೫೯೫೧೦+೧೦೭

. ಕಾಡಿನೊಳ್, ಕಣಿವೆಯೊಳ್, ಪಳುವಿನೊಳ್, ಪಸಲೆಯೊಳ್,
ಬಿಲಗಳೊಳ್, ಗುಹೆಗಳೊಳ್, ಭೂಮಿಯೊಳ್ ವ್ಯೋಮದೊಳ್
ಸುಗ್ರೀವಾಜ್ಞೆ.
ಪು. ೩೭೪, ಸಾ. ೫೫೪೪೫೪೫

ಈ ಮೂರು ಉದಾಹರಣೆಗಳಲ್ಲಿರುವುದು – ವಿಶೇಷವಾಗಿ ಐದೈದು ಮಾತ್ರೆಗಳ ಗಣಗಳೇ . ಆದರೆ ಮೊದಲ ಉದಾಹರಣೆ ಸೀತಾರಾಮರ ಜಲಕೇಳಿಯ ವಿನೋದದ ಚಿತ್ರವನ್ನು ನೀಡುತ್ತದೆ.

ಇಲ್ಲಿ ಮೊದಲ ಸಾಲು ಐದು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿದ್ದರೆ, ಎರಡನೆಯ ಸಾಲು ಮೂರು ಮತ್ತು ಏಳು ಮಾತ್ರೆಗಳ ಗಣಗಳಿಂದಾದ ಐದು ಮಾತ್ರೆಯ ಎರಡು ಗಣಗಳಾಗಿವೆ. ಮುಂದೆ ಐದು ಮಾತ್ರೆಯ ಎರಡು ಗಣಗಳಿವೆ ಅದೇ ಸಾಲಿನಲ್ಲಿ ಮೂರನೆಯ ಸಾಲಿನಲ್ಲಿ ಮತ್ತೆ ಐದೈದು ಮಾತ್ರೆಗಳ ಗಣಗಳೇ ಇದ್ದರೂ ಮೊದಲ ಎರಡು ಪ್ರತ್ಯೇಕ ಗಣಗಳಿಗೆ ಬದಲಾಗಿ ಒಟ್ಟಾಗಿ ಹತ್ತು ಮಾತ್ರೆಗಳ ಲೆಕ್ಕಕ್ಕೆ ಬರುವ ಎರಡು ಗಣಗಳಿವೆ .

ಇವೆಲ್ಲ ಈ ಐದು ಮಾತ್ರೆಗಳ ಲಯ ಉಲ್ಲಾಸದ ಚಿತ್ರಕ್ಕೆ ಮೀಸಲಾಗಿದೆ. ಎರಡನೆಯ ಉದಾಹರಣೆ ಸೀತಾನ್ವೇಷಣೆಗಾಗಿ ಕಪಿಸೈನ್ಯ ಹುಡುಕಾಟದಲ್ಲಿ ತೊಡಗಿದ ಕಾತರದ ಚಿತ್ರಗಳನ್ನು ಒಳಗೊಂಡಿದೆ – ಎಲ್ಲೆಲ್ಲಿ ಸೀತೆಯನ್ನು ಅವರು ಆರಸಿದರು ಎಂಬ ವಿವರ ಇಲ್ಲಿನದು.

ಮೊದಲ ಸಾಲಿನ ಮೊದಲ ಎರಡು ಗಣಗಳು ಐದೈದು (ಆರಸಿದರು = ⋃⋃⋃⋃⋃; ಸೀತೆಯಂ = – ⋃ –) ಮಾತ್ರೆಗಳವು. ಮೊದಲಿನದು ಸರ್ವ ಲಘು ಗಣವಾಗಿದ್ದರೆ, ಎರಡನೆಯದು ವಿಭಿನ್ನ – ಅಂದರೆ ಗುರುಲಘು ಗುರುವಿನಿಂದಾದ ಗಣ, ಮುಂದಿನದು ಹನ್ನೆರಡು ಮಾತ್ರೆಗಳ ಗಣ (ಆರಸಿದವನಿಜಾತೆಯಂ = ⋃⋃⋃⋃⋃⋃⋃ – ⋃ –) ಇಲ್ಲಿಯೂ ಮೊದಲ ಎರಡು ಗಣಗಳಂತೆ ಮೊದಲ ಗಣ ಸರ್ವ ಲಘುಗಳದು, ಎರಡನೆಯದು ಗುರುಲಘು ಗುರುವಿನಿಂದ ಆದ ಗಣ- ಇಲ್ಲಿ ಇನ್ನೂ ಒಂದು ವ್ಯತ್ಯಾಸವಿದೆ. ಇಪ್ಪತ್ತು ಮಾತ್ರೆಗಳ ಸಾಲಿನ ಮಿತಿಯನ್ನು ದಾಟಿದ ಉಪಕ್ರಮ ಇಲ್ಲಿದ್ದು ಸರಳ ರಗಳೆಗೂ ಇನ್ನಷ್ಟು ವಿಸ್ತಾರ ದೊರಕಿಸುವ ಯತ್ನವಿದೆ.

ಎರಡನೆಯ ಸಾಲಿನಲ್ಲಿ ಮೊದಲ ಐದು ಮಾತ್ರೆಗಳ ಎರಡು ಗಣಗಳೂ ಒಂದರೊಡನೊಂದು ಕೂಡಿಕೊಂಡಿದೆ. ಅನಂತರದ ಎರಡು ಗಣಗಳು ಮೂರು (ರಾಮ = – ⋃ ) ಮತ್ತು ಏಳು (ಸಂಪ್ರೀತೆಯಂ = – – ⋃ –) ಮಾತ್ರೆಗಳ ಗಣಗಳಿಂದ ಕೂಡಿದೆ.

ಮುಂದಿನ ಸಾಲಿನಲ್ಲಿ ಐದು ಮಾತ್ರೆಗಳ ಎರಡು ಗಣಗಳು ಮೊದಲಿಗೆ (ಜಾನಕಿಯರಸಿದರ್‌ = – ⋃⋃⋃⋃⋃⋃ –) ಅನಂತರ ಮತ್ತೆ ಐದು ಮಾತ್ರೆಗಳ ಎರಡು ಗಣಗಳು (ಮೈಥಿಲಿಯನರಸಿದರ್ = – ⋃⋃⋃⋃⋃⋃ –) ಅಶ್ಚರ್ಯವೆಂದರೆ ಮೊದಲೆರಡು ಗಣಗಳ ಗುರುಲಘುವಿನ್ಯಾಸವೇ ಮುಂದಿನೆರಡು ಗಣಗಳಲ್ಲೂ ಇದ್ದರೂ ಏರಿಳತಗಳಲ್ಲಿ ಆರಂಭದಲ್ಲೇ ಭಿನ್ನತೆಯಿದೆ. ‘ಜಾ’ ಎಂಬ ದೀರ್ಘ ವಿಸ್ತಾರವನ್ನು ಪಡೆದಿದ್ದರೆ ಮೈ ಎಂಬಲ್ಲಿನ ಗುಣಿತಾಕ್ಷರ ಎತ್ತರ ಮತ್ತು ಅರ್ಧವೃತ್ತ ಸ್ವರದಿಂದ ಭಿನ್ನವಾಗಿದೆ.

ಮುಂದಿನ ಉದಾಹರಣೆಗಳಲ್ಲಿ ಎರಡೆರಡು ಐದು ಮಾತ್ರೆಗಳ ಗಣಗಳು ಬಿಡಿ ಬಿಡಿಯಾಗಿದ್ದರೂ ಒಟ್ಟೊಟ್ಟಿಗೆ ಉಚ್ಛಾರಣೆಗೊಳ್ಳುತವೆ, ಅರ್ಥ ದೃಷ್ಟಿಯಿಂದ. ಅಷ್ಟೇ ಅಲ್ಲ, ಪಾದದಿಂದ ಪಾದಕ್ಕೆ ಓಟ ಹರಿವಿಗೆಡೆದಂತೆ ನಡೆಯುವುದೇ ಅಲ್ಲದೆ ಮುಂದೆ ಮರಗೊಳ್ ಪೊದೆಗಳೊಳ್, ಕಲ್ಗಲೊಳ್, ಪುಲ್ಗಲೊಳ್, ಪಳುವದೊಳ್, ಪಳ್ಳದೊಳ್ ಎಂಬಲ್ಲಿ ಐದೈದು ಮಾತ್ರೆಗಳ ಗಣ ವಿನ್ಯಾಸ ಮೊದಲೆರಡು ಗಣಗಳಲ್ಲಿ ಒಂದು ವಿನ್ಯಾಸ ಮುಂದಿನೆರಡು ಗಣಗಳಲ್ಲಿ ಮತ್ತೊಂದು ವಿನ್ಯಾಸ – ಹೀಗೆ ವಿವಿಧತೆ ಪಡೆದುಕೊಳ್ಳುತ್ತ ಹೋಗುತ್ತದೆ.

ಮೂರನೆಯ ಉದಾಹರಣೆಗಳಲ್ಲಿಯೂ ಐದೈದು ಮಾತ್ರೆಗಳ ಗಣಗಳ ವಿನ್ಯಾಸವೇ ಇದ್ದರೂ ಇಲ್ಲಿನ ಅಭಿವ್ಯಕ್ತಿ ಅಂಜನೇಯನ ಸಾಮರ್ಥ್ಯವನ್ನು ಸೂಚಿಸುವ ಮೆಚ್ಚುಗೆಯ ದನಿಯದಾಗಿದ್ದು ವಿಶಿಷ್ಟವಾಗಿದೆ. ಅಂಜನೇಯ ಸತ್ವ ಎಂಥದ್ದು ಎಂದರೆ ಅದು (ಕಾಡಿನೊಳ್ = – ⋃ –) (ಕಣಿವೆಯೊಳ್ = ⋃⋃⋃ – ) (ಪಳುವಿನೊಳ್ = ⋃⋃⋃ –) (ಪಸಲೆಯೊಳ್ = ⋃⋃⋃ –) (ಬಿಲಗಳೊಳ್‌ = ⋃⋃⋃ –) (ಗುಹೆಗಳೊಳ್ = ⋃⋃⋃ –) (ಭೂಮಿಯೊಳ್ = – ⋃ –) (ವ್ಯೋಮದೊಳ್ = – ⋃ –); ಹೀಗೆ ಎಲ್ಲೆಡೆಯೂ ವ್ಯಾಪಿಸಿಕೊಳ್ಳುವ ವಾಯುಪುತ್ರನ ಸರ್ವವ್ಯಾಪಕವಾಗುವ ಗುಣವನ್ನು ಅಭಿನಯಿಸುತ್ತದೆ.

ಮೇಲಿನ ಮೂರು ಉದಾಹರಣೆಗಳಲ್ಲಿ ಐದೈದು ಮಾತ್ರೆಗಳ ಗಣ ವಿನ್ಯಾಸದಲ್ಲಿ ಹೇಗೆ ವಿವಿಧತೆ ಸಾಧ್ಯವಾಗುತ್ತದೆಂಬುದನ್ನು ಗಮನಿಸಿದಾಗ ಐದೈದು ಮಾತ್ರೆಗಳ ಗಣ ವಿನ್ಯಾಸದಲ್ಲೂ ಹೇಗೆ ವಿಭಿನ್ನ ಭಾವಗಳ ಅಭಿವ್ಯಕ್ತಿಗೆ ತಗುವಂಥ ರಚನೆಗಳು ಸಾಧ್ಯ ಎಂಬುದನ್ನು ಗಮನಿಸಿದಂತಾಯಿತು. ಒಟ್ಟಿನಲ್ಲಿ ಕುವೆಂಪು ಅವರು ‘ಸರ್ವ ಛಂದೋ ಸಮನ್ಯಯವನ್ನು ‘ಶ್ರೀ ರಾಮಾಯಾಣ ದರ್ಶನಂ’ ನಲ್ಲಿ ಕಾಣಬಹುದು ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಗಮನಿಸಿದಂತಾಯಿತು. ಇದರ ಜೊತೆಗೆ ಸರಳ ರಗಳೆಯ ಇಪ್ಪತ್ತು ಮಾತ್ರೆಗಳ ಘಟಕದ ಸಾಲವನ್ನು ಹದಿನೆಂಟು ಮಾತ್ರೆಗಳಿಂದ ಇಪ್ಪತ್ತ ಮೂರು (ನಾಲ್ಕೆಡೆ ಮಾತ್ರ ಇಪ್ಪತ್ತು ನಾಲ್ಕು) ಮಾತ್ರೆಗಳ ಘಟಕಗಳಾಗಿ ಬಳಸಿದ್ದು; ಅನಂತರ ಅರ್ಥಯತಿಯ ಕಾರಣವಾಗಿ ವಾಕ್ಯಯತಿಯು ಮೂರು ನಾಲ್ಕು ಸಾಲುಗಳ ಹರಿವನ್ನುಳ್ಳ ಒಂದೇ ಘಟಕವಾಗಿಸಿದ್ದು; ಜೊತೆಗೆ ಪಾದದ ಆದಿ, ಮಧ್ಯ ಮತ್ತು ಅಂತ್ಯ ಹೀಗೆ ಅರ್ಥಾನುಸಾರಿಯಾಗಿ ವಾಕ್ಯಯತಿ ಒಂದು ಇಪ್ಪತ್ತು ಮಾತ್ರೆಗಳ ಸಾಲು ಎಂಬ ನಿಯಮಕ್ಕೆ ಭಂಗ ತಂದರು ಎಂಬುದಕ್ಕಿಂತ ಇಪ್ಪತ್ತು ಮಾತ್ರೆಗಳ ಮಿತಿಯನ್ನು ಹೇಗೆ ಗೆದ್ದರು ಎಂಬುದನ್ನು ಗಮನಿಸಿದಾಗ ಐದು ಮಾತ್ರೆಗಳ ಗಣ ವಿನ್ಯಾಸದ ವಿವಿಧ ಮುಖಗಳನ್ನು ಗಮನಿಸಿದಂತಾಯಿತು. ಈ ಐದು ಮಾತ್ರೆಗಳ ಗಣಗಳ ರೂಪ ಇಪ್ಪತ್ತು ಮಾತ್ರೆಗಳ ಒಂದು ಪಂಕ್ತಿಯಲ್ಲಿ, ಕೆಲವೊಮ್ಮೆ ಹಲವಾರು ಪಂಕ್ತಿಗಳಲ್ಲಿ (ವಾಕ್ಯ ಮುಗಿಯುವವರೆಗೆ) ಹರಿವನ್ನು ಪಡೆದಾಗ ಐದು ಮಾತ್ರೆಗಳ ಗಣ ವಿನ್ಯಾಸ ಎರಡು + ಮೂರು; ಮೂರು ಮತ್ತು ಎರಡು – ನಾಲ್ಕು ಮತ್ತು ಒಂದು; ಐದು; ಎರಡು ಎರಡು ಒಂದು – ಹೀಗೆ ವಿಭಿನ್ನ ರೀತಿಯದಾಗುವುದು ಒಂದು ರೀತಿಯಾದಾದರೆ ಎರಡು ಮತ್ತು ಎಂಟು; ಮೂರು ಮತ್ತು ಏಳು; ನಾಲ್ಕು ಮತ್ತು ಆರು; ಹತ್ತು ಹೀಗೆ ವಿಭಿನ್ನ ಮಾತ್ರಾಗಣ ಸಂಯೋಜನೆಗಳಿಂದ ವೈವಿಧ್ಯ ಪಡೆಯುವ ಸಾಧ್ಯತೆಗಳು ಅನಂತ. ಅವುಗಳಲ್ಲಿ ಕೆಲವನ್ನಷ್ಟೇ ಇಲ್ಲಿ ಸೂಚಿಸುವ ಯತ್ನ ನಡೆಸಲಾಗಿದೆ.

ಕುವೆಂಪು ಅವರು ಸೂಚಿಸುವ ‘ಸರ್ವಛಂದೋಸಮನ್ವಯ’ ದ ಮಾತನ್ನು ಪಂಪಾದಿ ಕವಿಗಳೂ ಅನ್ವಯಿಸಬಹುದಲ್ಲದೆ ಎಂಬ ಪ್ರಶ್ನೆ ಏಳಬಹುದು. ಉದಾಹರಣೆಗೆ ಪಂಪ ತನ್ನ ಅಭಿವ್ಯಕ್ತಿ ಶಕ್ತಿಯನ್ನು ವೃದ್ಧಿಗೊಳಿಸಿಕೊಳ್ಳುವುದಕ್ಕಾಗಿ ಗದ್ಯ ಮತ್ತು ಪದ್ಯಗಳು ಮಿಶ್ರಣಗೊಂಡ ಚಂಪೂ ಪದ್ಧತಿಯನ್ನು ಬಳಸಿದುದೇ ಅಲ್ಲದೆ ಪದ್ಯಭಾಗದಲ್ಲಿ ವಿವಿಧ ಬಗೆಯ ಅಕ್ಷರ ವೃತ್ತಗಳನ್ನು, ರಗಳೆಯ ಕೆಲವು ಪ್ರಕಾರಗಳನ್ನು ಹಾಗೆಯೇ ಅಕ್ಕರ ಛಂದದ ಕೆಲವು ರೂಪಗಳನ್ನು ಬಳಸಿಕೊಂಡಿರುವುದು ನಿಜ. ಅದರೆ ಅಲ್ಲೆಲ್ಲ ತನ್ನ ಅಭಿವ್ಯಕ್ತಿಗಾಗಿ ಭಿನ್ನ ಭಿನ್ನ ಛಂದೋರೂಪಗಳನ್ನು ಆತ ಬಳಸಿಕೊಂಡ.

ಸಂಸ್ಕೃತದ ಅಕ್ಷರ ವೃತ್ತಗಳನ್ನು ಮಾತ್ರಾವೃತ್ತಗಳಾಗಿ ರೂಪಿಸುವ ಸಾಧನೆ ಕೂಡ ಮಾಡಿದ. ಸಂಸ್ಕೃತದ ಆರ್ಯವೃತ್ತ – ಪ್ರಾಕೃತದ ಸ್ಕಂದಕ ಛಂದದಿಂದ (ಮಾತ್ರಾಕ್ಷರ ಛಂದವಾಗಿದ್ದ ಆ ವೃತ್ತವನ್ನು) ಮಾತ್ರಾವೃತ್ತವಾಗಿ ರೂಪಿಸಿ ಕನ್ನಡಪರ ‘ಕಂದ’ ಆಗುವಂತೆ ಕಂದವನ್ನು ರೂಪಿಸಿದ ರೀತಿಯೂ ಅನ್ಯಾದೃಶ. ಆದರೆ ಪಂಪನ ‘ಸರ್ವಛಂದೋ ಸಮನ್ವಯ’ವು ವಿವಿಧ ಛಂದಸ್ಸುಗಳನ್ನು ಕಾವ್ಯಾಭಿವ್ಯಕ್ತಿಗೆ ಬಳಸಿಕೊಂಡ ವಿಭಿನ್ನ ಛಂದೋರೂಪಗಳಾಗಿದ್ದದ್ದು ಮಾತ್ರ ನಿಜ. ಆದರೆ ಆತನಿಗೆ ಛಂದಸ್ಸು ಎಷ್ಟೋ ವೇಳೆ ತೊಡಕಾಗಿದೆ, ಅದಕ್ಕೆ ಒಂದು ಉದಾಹರಣೆ ಪಂಪಭಾರತದ್ದು.

ಮೃಗಯಾವ್ಯಾಜದಿನೊಮ್ಮೆ ಶಂತನು ತೊೞಲ್ತರ್ಪಂ ಪಳಂಚಲ್ಕೆ
ತ್ಮೃಗಶಾಬಾಕ್ಷಿಯ ಕಂಪುತಟ್ಟಿ ಮಧುಪಂಬೋಲ್ಸೋಲು, ಕಂಡೊಲ್ದು
ಲ್ಮೆಗೆ ದಿಬ್ಯಂಬಿಡಿವಂತೆವೋಲ್ಪಿಡಿದು ನೀಂ ಬಾ ಪೋಪಮೆಂದಂಗೆ ಮೆ
ಲ್ಲಗೆ ತಕ್ಕನ್ಯಕೆನಾಣ್ಚೆಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ
ಎಂಬುದುಂ

ಮೇಲಿನ ಪದ್ಯದಲ್ಲಿ ಪಂಪನ ಹಿತಮಿತೋಕ್ತಿ ಶಕ್ತಿಯೂ ಸಂಭಾಷಣಾ ಚಾತುರ್ಯವೂ ಅನ್ಯಾದೃಶವಾಗಿಯೂ ಬಂದಿದೆಯಾದರೂ ಆ ವೃತ್ತದಲ್ಲಿ ವಾಕ್ಯ ಕೊನೆಗೊಳ್ಳದೆ ಅಪೂರ್ಣವಾಗಿ ಮುಂದೆ ‘ಎಂಬುದುಂ’ ಎಂಬ ವಚನ ಭಾಗದಿಂದ ಪೂರ್ಣವಾಗಿದೆ ಎಂದರೆ ಛಂದಸ್ಸು ಎಂಥ ತೊಡಕಾಗಿದೆ ಪಂಪನಂಥ ದೊಡ್ಡ ಕವಿಗೂ ಎಂಬುದು ವೇದ್ಯ.

ಈ ಬಗೆಯ ತೊಂದರೆಯನ್ನು ಇನ್ನೂ ಹಲವಾರು ಶಕ್ತ ಕವಿಗಳು ಅನುಭವಿಸಿದ್ದಾರೆ. ಜನ್ನನ ‘ಯಶೋಧರ ಚರಿತ್ರೆ’ಯಲ್ಲಿ ಇಂಥ ಒಂದು ಉದಾಹರಣೆಯನ್ನು ಮಾತ್ರ ಇಲ್ಲಿ ನಿದರ್ಶನವಾಗಿ ಕೊಡಲಾಗಿದೆ.

ಬೇಡಿದ ಕಾಡೊಳ್ಮೞೆಯಾ
ಯ್ತೀಡಾಡುವಮಿದಱ ಪೊಱೆಯನೆನಗಂ ನಿನಗಂ
ಮೂಡುವ ಮುೞುಗುವ ದಂದುಗ
ಮಾಡಿದ ಹೊಲನುಂಡಮರ್ದು ಕಂಡ ವಿಚಾರಂ
ಇಂತಿಂತೊರ್ವನೊರ್ವರ್
ಸಂತೈಸುತ್ತುಂ ನೃಪೇಂದ್ರ ತನುಜಾತರ್ನಿ
ಶ್ಚಿಂತಂ ಪೊಕ್ಕರ್ಪಾಸಿದ ಕೃ
ತಾಂತನ ಬಾಣಸುವೊಲಿರ್ದ ಮಾರಿಯ ಮನೆಯಂ.

ಚಂಡಕರ್ಮನು ಅಭಯರುಚಿ ಅಭಯಮತಿಯರನ್ನು ಸೆರೆಹಿಡಿದು ಬಲಿಕೊಡಲು ಮಾರಿಗುಡಿಗೆ ಕರೆದಯ್ಯುವಾಗ ಅಣ್ಣ ತಂಗಿಯರಲ್ಲಿ ನಡೆದ ಮಾತುಕತೆಯ ಸಂದರ್ಭ ಮೇಲಿನದು. ಒಂದು ಕಂದಪದ್ಯದಲ್ಲಿ ವಾಕ್ಯ ಪೂರ್ಣವಾಗಿದ್ದರಿಂದ ಇನ್ನೊಂದು ಕಂದಪದ್ಯಕ್ಕೂ ಪದ್ಯ ವ್ಯಾಪಿಸಿದ ರೀತಿ ಇಲ್ಲಿದೆ. ಅಂದರೆ: ಸಮರ್ಥ ಕವಿಗಳಿಗೂ ಅಂದಿನ ವೃತ್ತ ಕಂದಪದ್ಯಗಳ ಲಕ್ಷಣಗಳು ಮಿತಿಯನ್ನು ಹಾಕಿದ್ದು, ಅದನ್ನು ಗೆಲ್ಲಲಾಗದೆ ವಚನದಿಂದಲೋ ಅಥವಾ ಮತ್ತೊಂದು ಪದ್ಯದ ಬಳಕೆಯಿಂದಲೋ ಅಂಥ ತೊಡಕನ್ನು ದಾಟಿಕೊಳ್ಳಬೇಕಾದ ಅನಿವಾರ್ಯವನ್ನು ಛಂದೋನಿಯಮಗಳು ತಂದಿದ್ದವು.

ಆ ನಿಯಮಗಳನ್ನು ಗೆಲ್ಲುವ ಪ್ರಯತ್ನವೇ ಹಳೆಯ ಛಂದಸ್ಸುಗಳನ್ನು ಮುರಿದು ಕಟ್ಟುವ ನವೋದಯದ ಕವಿಗಳ ಸಾಹಸವಾಗಿದ್ದುದು ಗಮನಾರ್ಹ. ಹರಿಹರನಂತು ರಗಳೆಯಂಥ ದ್ವಿಪದ ಜಾತಿಯ ಛಂದದಿಂದ ಇಂಥ ತೊಡಕನ್ನು ಗೆದ್ದುಕೊಳ್ಳುವ ಸಾಹಸ ಮಾಡಿದ್ದ. ಮುಂದದೇ ನವೋದಯ ಕವಿಗಳಿಗೆ ತಮ್ಮ ಸಾಹಸವನ್ನು ಮೆರೆಯುವ ಅವಕಾಶ ಮಾಡಿಕೊಟ್ಟಿತು ಎಂದು ಹೇಳಬಹುದೆ?

ಮುಂದೆ ದೇಸೀವೃತ್ತಗಳನ್ನು ಕನ್ನಡ ಕವಿಗಳು ಬಳಸಿಕೊಳ್ಳತೊಡಗಿದಾಗ ಹರಿಹರ ಪ್ರಾಕೃತದ ಮಾತ್ರಾಕ್ಷರ ಛಂದವಾಗಿದ್ದ ರಗಳೆಯನ್ನು ಮಾತ್ರಾವೃತ್ತವಾಗಿ ಬಳಸಿ ಅವುಗಳಲ್ಲಿ ವಿಶೇಷ ಪ್ರಯೋಗಗಳನ್ನು ಮಾಡಿದ್ದು ನಿಜ – ಆದಿ ಮತ್ತು ಅಂತ್ಯಪ್ರಾಸಗಳ ತೊಡಕಿನಿಂದ ಅವನು ಪಾರಾಗಲಿಲ್ಲವೆಂಬುದು ಅಷ್ಟೇ ಸತ್ಯ. ಕಥನಕ್ಕೆ ಮಂದಾನಿಲ ರಗಳೆಯನ್ನು ಹಾಗೂ ಲಲಿತ ರಗಳೆಯನ್ನು ಬಳಸಿಕೊಂಡಂತೆ ಒಂದೇ ಕೃತಿಯಲ್ಲಿ ಉತ್ಸಾಹ ರಗಳೆ ಹಾಗೂ ಲಲಿತ ರಗಳೆಗಳ ಮಿಶ್ರಣ ಮಾಡುವ ಪ್ರಯತ್ನವನ್ನು (ಮಹಾದೇವಿಯಕ್ಕನ ರಗಳೆ) ಮಾಡಿದ್ದುಂಟು. ಆತನಲ್ಲಿಯೇ ಮೊದಲಿಗೆ ಈ ರಗಳೆ ಛಂದಸ್ಸು ಕಥನದ ಗಾತ್ರಕ್ಕೆ ತಕ್ಕಂತೆ ಕಿರಿದಾಗುವ ಅಥವಾ ಹಿರಿದಾಗುವ ನಮ್ಯತೆಯನ್ನು ಪಡೆಯಿತು. ಆತ ವಿಭಿನ್ನ ರಗಳೆ ಛಂದಸ್ಸಗಳನ್ನು (ಉತ್ಸಾಹ, ಮಂದಾನಿಲ ಮತ್ತು ಲಲಿತ) ಬಳಸಿದನು. ಆದರೆ ಆತನ ಶಿಷ್ಯನಾದ ರಾಘವಾಂಕ ವಿಭಿನ್ನ ಛಂದೋರೂಪಗಳಿಗೆ ಕೈಹಾಕದೆ ಅಂಶಗಣ ಬದ್ಧವಾಗಿದ್ದ ಷಟ್ಪದಿವನ್ನು ಮಾತ್ರಾಗಣದ ಷಟ್ಪದಿಯಾಗಿ ರೂಪಿಸಿ ನಡೆಸಿದ ವಾರ್ಧಕ ಷಟ್ಪದಿಯ ಪ್ರಯೋಗಗಳು ಅವನನ್ನು ಷಟ್ಪದಿ ಪ್ರತಿಷ್ಠಾಪನಾಚಾರ್ಯವನನ್ನಾಗಿ ಮಾಡಿದ್ದಂತೂ ನಿಜ. ತನ್ನ ನಾಟಕೀಯ ಪ್ರತಿಭೆಗೆ ಉಚಿತವಾಗುವಂತೆ ಆತ ವಾರ್ಧಕ ಷಟ್ಪದಿಯನ್ನು ಪಳಗಿಸಿದ. ಆ ಷಟ್ಪದಿಯಲ್ಲಿ ಬಳಕೆಯಾಗುವ ಐದು ಮಾತ್ರೆಗಳ ಗಣಗಳಿಗೆ ಬದಲಾಗಿ ನಾಲ್ಕು ಮಾತ್ರೆಗಳ ಗಣಗಳನ್ನು ಬಳಸಿ ಉದ್ದಂಡ ಷಟ್ಪದಿ ಎಂಬ ಪ್ರಯೋಗವನ್ನೂ ಆತ ಮಾಡಿದ. ಆ ಖಂಡ ಕೃತಿ ಆ ಷಟ್ಪದಿಯ ನಿಯಮಗಳ ಒಳಗೇ ನಿರ್ವಹಣೆಗೊಂಡದ್ದು, ಮಾತ್ರಾಗಣಗಳಲ್ಲಿ ವೈವಿಧ್ಯ ಪ್ರಾಪ್ತವಾದರೂ ಮಾತ್ರೆಗಳ ಸಂಖ್ಯೆಯಲ್ಲಿ ಏರುಪೇರುಗಳಾಗದಂತೆ ಇರುವುದು ಗಮನಾರ್ಹ. (ಷಟ್ಪದಿ ಆರು ಸಾಲಿನ ಪದ್ಯವಾಗಿದ್ದು ಮೊದಲ ಮೂರು ಸಾಲು ಮತ್ತು ಅನಂತರದ ಮೂರು ಸಾಲುಗಳ ರಚನೆ ಒಂದೇ ರೀತಿಯದಾಗಿರುತ್ತದೆ. ಒಂದು ಅಥವಾ ಎರಡನೆ ಸಾಲಿನ ಒಂದುವರೆಯಷ್ಟು ಮೇಲೊಂದು ಗುರು ಮೂರನೆಯ ಸಾಲಿನಲ್ಲಿರುತ್ತದೆ.)

ಈ ಷಟ್ಪದಿಯ ವಿಷಮಗಣ ಸಂಯೋಜನೆಯ ಭಾಮಿನೀ ಷಟ್ಪದಿಯಲ್ಲಿ ಕುಮಾರ ವ್ಯಾಸ ಪಡೆದ ಸಿದ್ಧಿ ಆಶ್ಚರ್ಯಕರವೂ ಅಭೂತಪೂರ್ವವೂ ಆದುದು. ಕುಮಾರವ್ಯಾಸನ ಕರ್ನಾಟಕ ಭಾರತದಲ್ಲಿ ಮೊದಲ ಬಾರಿಗೆ ‘ಸರ್ವಛಂದೋಸಮನ್ವಯ’ದ ಕೆಲವು ಸಾಧ್ಯತೆಗಳು ಕಂಡುಬರುತ್ತವೆ.

ಅನಂತರ ಕುವೆಂಪು ಅವರ ‘ರಾಮಾಯಣ ದರ್ಶನ’ದಲ್ಲಿ ಸರ್ವ ಛಂದೋ ಸಮನ್ವಯದ ಅನೇಕ ಸಾಧ್ಯತೆಗಳಿವೆ. ಈ ಮಾತನ್ನು ಹೇಳುವುದಕ್ಕೆ ಕಾರಣ ಐದು ಮಾತ್ರೆಗಳ ಗಣದ ಛಂದಸ್ಸಿನ ವಿಶೇಷತೆಗಳನ್ನು ಗುರುತಿಸುವುದು. ಸರಳ ರಗಳೆಯ ಅಂದರೆ ಐದು ಮಾತ್ರೆಗಳ ಗಣಗಳ ಈ ಸಾಧ್ಯತೆಗಳು ಗುಣಿತಗೊಳ್ಳುವುದು – ಇಪ್ಪತ್ತು ಮಾತ್ರೆಗಳ ಒಂದು ಪಂಕ್ತಿಯ ಮಾತ್ರೆಗಳ ಸಂಖ್ಯೆಯನ್ನು ಅರ್ಥ ಪುಷ್ಟಿಗಾಗಿ ಹದಿನೆಂಟು ಮಾತ್ರೆಗಳಿಂದ ಹಿಡಿದು ಇಪ್ಪತ್ತುಮೂರು ಮಾತ್ರೆಗಳವರೆಗೆ ನಮ್ಯವಾಗಿಸುವುದು – ಈವರೆಗೆ ಬಂದ ಷಟ್ಪದಿಗಳ ಸಾಧ್ಯತೆಗಿಂತ ಹೆಚ್ಚಿನದನ್ನು ಸಾಧಿಸಲು ಸಹಕಾರಿಯಾಯಿತು. ಅಂದರೆ ಹಳೆಯ ಛಂದಸ್ಸುಗಳಲ್ಲಿ ನಿಯಮವಾಗುವಂತೆ ಬರುವ ಮಾತ್ರೆಗಳ ಸಂಖ್ಯೆಯನ್ನು ಹೆಚ್ಚು ಕಡಿಮೆಯಾದರೂ – ಆ ಲೆಕ್ಕಕ್ಕೆ ಅಷ್ಟು ಗಮನವೀಯದೆ – ಅರ್ಥಪುಷ್ಟಿಯತ್ತಲೇ ಹೊರಳುವುದು ಸರ್ವ ಛಂದೋ ಸಮನ್ಯಯದ ಸಾಧನೆಯಲ್ಲಿ ಒಂದು ಹೆಜ್ಜೆ ಮುಂದುವರಿಸಿದಂತೆ ಆಗುತ್ತದೆ.

ಸಮಾರೋಪ

ನವೋದಯದ ಕವಿಗಳು ಇಂಥ ಸರ್ವಛಂದೋಸಮನ್ವಯದ ಸಿದ್ಧಿಯತ್ತ ಹೊರಳುವಾಗ ಕಂಡುಕೊಂಡ ಅಥವಾ ಕವಿಪ್ರತಿಭೆ ಸಾಧಿಸಿದ ಕೆಲವು ವಿಶಿಷ್ಟತೆಗಳತ್ತಲೂ ಗಮನಹರಿಸಬಹುದೆಂದು ತೋರುತ್ತದೆ. ಇವುಗಳಲ್ಲಿ ಅತ್ಯಂತ ಮುಖ್ಯವಾದ ಗಣ ಪರಿವೃತ್ತಿ ಮತ್ತು ಗಣಪಲ್ಲಟಗಳನ್ನು ಕೊನೆಗೆ ಗಮನಿಸೋಣ – ಏಕೆಂದರೆ ಛಂದೋ ವೈವಿಧ್ಯಕ್ಕೆ ಅಥವಾ ಕವಿಯ ಅಭಿವ್ಯಕ್ತಿಗೆ ಶಕ್ತಿಗೆ ಹೆಚ್ಚಿನ ಸಾಧ್ಯತೆಗಳನ್ನು ತೆರೆದು ಕೊಡುವಂಥ ಅಂಶಗಳು ಇವು. ಆದ್ದರಿಂದ ವಿಸ್ತಾರವಾಗಿಯೇ ಇವುಗಳನ್ನು ಕೊನೆಗೆ ಪರಿಚಯ ಮಾಡಿಕೊಳ್ಳೋಣ. ಮೊದಲನೆಯದಾಗಿ ವಿಷಮ ಗಣದ ವಿಚಾರ ಗಮನಿಸಬಹುದು.

  1. I) ಪಾದದ ಆದಿಯಲ್ಲಿ ವಿಷಮಗಣ ಬರುವುದು ಕನ್ನಡದ ಜಾಯಮಾನಕ್ಕೆ ಒಗ್ಗದುದು. ಈ ಕಾರಣದಿಂದಾಗಿಯೇ ಅಂಶಗಣದ ಲೆಕ್ಕಾಚಾರ ಮಾಡುವಾಗ ಶ್ರೀಯವರು ಮೂಲಾಂಶವು ಯಾವಾಗಲೂ ಎರಡು ಲಘು ಅಥವಾ ಗುರುವಿನಿಂದ ಕೂಡಿರಬೇಕು ಎಂದದ್ದು. ತಮಿಳಿನಲ್ಲಾದರೆ ಇಂಥ ವಿಷಮ ಗಣ ಸಹಜ. ಇದಕ್ಕೆ ಕಾರಣ ಕನ್ನಡದಲ್ಲಿ ಸ್ವರಭಾರ ಮೊದಲ ಅಕ್ಷರದ ಮೇಲೆ ಬೀಳುವುದು ಬಹುಶಃ ಆ ಕಾರಣದಿಂದಲೇ. ಅಲರ್‌ ಮಲರ್‌, ಮರನ್‌ ಎಂಬ ವ್ಯಂಜನಾಂತ ಪದಗಳು ಸ್ವರಾಂತಗಳಾದದ್ದು ಎನ್ನಬಹುದೇನೋ.

ಆದರೆ ನವೋದಯ ಕವಿಗಳು ಈ ವಿಷಮ ಗಣವನ್ನು (⋃ – ⋃) ಎಷ್ಟು ಸಹಜವೆಂಬಂತೆ ಬಳಸಿದ್ದಾರೆ. ಗಮನಿಸಿ, ಪಾದ ಆದಿ, ಮಧ್ಯೆ ಮತ್ತು ಅಂತ್ಯಗಳಲ್ಲಿ.

. ಮಾತುಗಳಾಚೆಯ ವಿದೇಹಭಾವ
ಸದೇಹವಾಗಲು ತಪಿಸುತಿದೆ.

. ಅಶೋಕವನದಲಿ ವಿಶೋಕನಾಗಿ
ರಾಮನಾಮವನೆ ಜಪಿಸುತಿದೆ

. ಸೃಷ್ಟಿ ರಹಸ್ಯವ ಭೇದಿಸಿ ಬಿಡಲು

ವಿಷಮ ಗಣ ಪ್ರಯೋಗವನ್ನಂತು ನಾಲ್ಕು ಮಾತ್ರೆಗಳ ಗಣಗಳಲ್ಲಿ ನಿಷೇಧಿಸಿದ್ದುಂಟು, ವಿಷಮ ಸ್ಥಾನಗಳಲ್ಲಿ, ಅದಕ್ಕೆ ಕಾರಣಗಳು ಇಲ್ಲದಿಲ್ಲ. ಆದರೆ ನವೋದಯದ ಕವಿಗಳು ಈ ಜಗಣವನ್ನು ಒಂದು ಮತ್ತು ಮೂರನೆಯ ಸ್ಥಾನಗಳಲ್ಲಿ ತಂದುಕೊಂಡ ರೀತಿ ಮೆಚ್ಚುವಂಥದ್ದು! ನವೋದಯದ ಆರಂಭ ಕಾಲದಲ್ಲಿಯೇ ಪಂಜೆಮಂಗೇಶರಾಯರು ಅದನ್ನು ‘ತೆಂಕಣ ಗಾಳಿಯಾಟ’ ಕವನದಲ್ಲಿ ಅರ್ಥವತ್ತಾಗಿ ಬಳಸಿದ್ದುದು ಹೀಗೆ:

– ⋃ ⋃ ⋃⋃⋃⋃            ⋃ – ⋃ – ⋃ ⋃
ಬೊಬ್ಬುಳಿ           ತೆರೆಯನು          ದಡಕ್ಕೆ   ಹೊಮ್ಮಿಸಿ

ಮೇಲಿನ ಸಾಲಿನ ‘ದಡಕ್ಕೆ’ ಎಂಬ ಪದ ಜಗಣದ್ದಾಗಿರುವುದೇ ಅಲ್ಲದೆ ಅಲೆಯ ಚಲನೆಯನ್ನು ಧ್ವನಿಸುವಂತಿದೆ ಅಲ್ಲವೆ! ಇಂಥ ಹಲವಾರು ಪ್ರಯೋಗಗಳು ಹೀಗಿವೆ:

. ⋃ – ⋃
ವಸಂತ ವನದಲಿ ಕೂಗುವ ಕೋಗಿಲೆ ….
. ⋃ – ⋃
ಸುನೀಲ ಶ್ಯಾಮಲ ಜಲಧರ ಪಂಕ್ತಿಯ ….
. ⋃ – ⋃
ಅಮಂದ ಗಮನದಿ ಬರುತಿಹನು ….
. ⋃ – ⋃
ವಸಂತ ವನದಲಿ ಕೂಗುವ ಕೋಗಿಲೆ ….
. ⋃ – ⋃
ನಿದಾಘ ವ್ಯೋಮದಿ ಮೆಲ್ಲಗೆ ಮೆಲ್ಲಗೆ ….

ಮೇಲಿನ ಐದು ಉದಾಹರಣೆಗಳಲ್ಲಿಯೂ ಮೊದಲನೆಯ ಗಣವೇ ಜಗಣ (⋃ – ⋃) ಆಗಿದೆ. ಆಶ್ಚರ್ಯದ ಸಂಗತಿಯೆಂದರೆ ಎರಡು ಮತ್ತು ನಾಲ್ಕನೆಯ ಉದಾಹರಣೆಗಳಲ್ಲಿ ಈ ಜಗಣಗಳ ಕೊನೆಯ ಲಘುವಿನ ಮೇಲೆ ಮುಂದಿನ ಸಂಯುಕ್ತಾಕ್ಷರಗಳ ಪ್ರಭಾವ ಬೀಳುವುದೇ ಇಲ್ಲ –

⋃ – ⋃

ಮುಕ್ತಿ ರಾಹುವಿನಂತ ಛಾಯೆ ಎಂಬಲ್ಲಿ ಮತ್ತೆ ಮೂರನೆಯ ಗಣ ಜಗಣವೇ ಆಗಿದೆ.

  1. II) ನವೋದಯದ ಛಂದಸ್ಸಿನ ಮತ್ತೊಂದು ವಿಶೇಷವೆಂದರೆ ‘ಅನಾಗತ’ ಅಥವಾ ‘ಹುಸಿ’ಯನ್ನು ತಂದು ಛಂದಸ್ಸಿನ ಓಟಕ್ಕೆ ಬಾಧೆಯಾಗದಂತೆ ಮಾಡುವ ರೀತಿ.

ಅಂಬಿಕಾತನಯದತ್ತರ ಯುಗಾದಿ ಕವಿತೆಯನ್ನು ಗಮನಿಸಿ:

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ

ಇಲ್ಲಿ ಎರಡನೆಯ ಸಾಲಿನ ಮೊದಲ ಲಘು ಶಿಥಿಲ ದ್ವಿತ್ತದಲ್ಲಿ ಹೇಗೋ ಹಾಗೆ ಛಂದಸ್ಸಿನ ಮಾನಕ್ಕೆ ಸಿಗುವುದಿಲ್ಲ. ಆದರೆ ‘ಯು’ ಅಕ್ಷರವೇ ಇರದಿದ್ದರೆ ಅರ್ಥವೇ ಏರುಪೇರಾಗುತ್ತಿತ್ತು, ಅಲ್ಲವೆ! ಒಂದರ್ಥದಲ್ಲಿ ಗಣವಿನ್ಯಾಸಕ್ಕೆ ಮೂಲವಾದ ಮಾತ್ರೆಗಳ ಲೆಕ್ಕದಲ್ಲಿ ‘ಮಿತಿ’ಯನ್ನು ಮೀರಿದ ಸ್ವಾತಂತ್ರ್ಯದ ಕಹಳೆ ಇಂಥಲ್ಲಿದೆ ಎನ್ನಬಹುದು. ಉತ್ಸಾಹ ಲಯ, ಮಂದಾನಿಲ ಲಯ ಹಾಗೂ ಲಲಿತ ಲಯಗಳೆಲ್ಲದರಲ್ಲೂ ಇಂಥ ಸ್ವಾತಂತ್ರ್ಯವನ್ನು ನವೋದಯದ ಕವಿಗಳು ಸಾಧಿಸಿದ್ದುದು ಗಮನಾರ್ಹ.

. ನಾಥೆಯಿವಳಿನ್ನೊಬ್ಬ
ಳೀ ಜನ್ಮರೋಸಿ

. ರಾಠರಾಕೆ ಬಡಗಣ
ತೆಲುಗರೀಕೆ ಪಡುವಣ

. ಮರ್ಪಿತವಾಗಲಿ ಸ್ವಾತಂತ್ರ್ಯಂ

. ನೇಕವಾಗಿಯೂ ಏಕವಾಗಿಹಳು ನೋಡು ಭರತ ಮಾತೆ

. ರುಂಧತಿಯ ನೋಡೆಂದು ಆಗಸವ ತೋರಿದರು.

ಮೇಲಿನ ಐದೂ ಉದಾಹರಣೆಗಳನ್ನು ಪದಾದಿಯಲ್ಲಿ ಬರುವ

ಒಂದನೆ ಉದಾಹರಣೆಯ ‘ಅ’
ಎರಡನೆ ಉದಾಹರಣೆಯ ‘ಮ’
ಮೂರನೆ ಉದಾಹರಣೆಯ ‘ಸ’
ನಾಲ್ಕನೆ ಉದಾಹರಣೆಯ ‘ಅ’
ಐದನೆಯ ಉದಾಹರಣೆಯ ‘ಅ’

ಇವು ಇದ್ದು ಇಲ್ಲದಂತೆ ಭಾಸವಾಗುವ ಉಚ್ಚಾರಣೆಯನ್ನು ಒಳಗೊಂಡಿದ್ದು, ಇದಕ್ಕೆ ಈ ಅಕ್ಷರಗಳೆಲ್ಲವೂ ‘ಲಘ’ವಾಗಿರುವುದು – ಮುಂದಿನಕ್ಷರಗಳು ಗುರುವಾಗಿರುವುದು ಗಮನಾರ್ಹ. ಉಚ್ಚಾರಣೆಯ ದೃಷ್ಟಿಯಿಂದ ಈ ಅಕ್ಷರಗಳನ್ನು ತೇಲಿಬಿಡಬಹುದಾದರೂ ಅದಕ್ಕೆ ಕಾರಣ ಕನ್ನಡ ಭಾಷೆಯ ಸ್ವರಭಾರ ನಿಯಮವೆಂದೇ ಹೇಳಬೇಕು. ಏಕೆಂದರೆ ಪದಾದಿಯಲ್ಲಿ ಲಘು ಅನಂತರ ಗುರು ಬರುವ ಪದಗಳು ದೇಶ್ಯಗಳಲ್ಲಿ ಅಂಥ ಶಬ್ದಗಳು ಅನ್ಯದೇಶ್ಯಗಳು. ಒಂದರ್ಥದಲ್ಲಿ ಈ ‘ಅನಾಹತ’ದ ಸೌಲಭ್ಯದಿಂದ ಛಂದಸ್ಸಿನ ಮಾತ್ರಾಸಂಖ್ಯೆಗಳ ‘ಮಿತಿ’ಯಿಂದ ಮುಕ್ತವಾಗುವ ರಣಕಹಳೆಯನ್ನು ಕವಿಗಳು ಇಲ್ಲೆಲ್ಲ ಮೊಳಗಿಸಿದ್ದಾರೆ.

ಅಂದರೆ ನವೋದಯದ ಕವಿಗಳ ಪಂಪರನ್ನರಂತೆ, ಹರಿಹರ ರತ್ನಾಕರರಂತೆ ಕನ್ನಡದ ಜಾಯಮಾನಕ್ಕೆ ಒಗ್ಗುವ ರೀತಿಯನ್ನು ಶ್ರೀಯವರು ‘ಕನ್ನಡ ಕೈಪಿಡಿ’ ಭಾಗದಲ್ಲಿ ಹಾಗೂ ಇಂಗ್ಲಿಷ್‌ ಗೀತಗಳಲ್ಲಿ ಹೊಸಗನ್ನಡ ಕಾವ್ಯದ ಛಂದಸ್ಸಿನ ಬಗೆಗೆ ಸಾಧಿಸಿದ ಬಗೆಗಳನ್ನು ವಿಶದವಾಗಿಯೆ ಸೂಚಿಸಿದ್ದಾರೆ.

ನವೋದಯ ಛಂದಸ್ಸು ಒಂದು ರೀತಿಯಲ್ಲಿ ನವ್ಯಕಾವ್ಯದ ಛಂದಸ್ಸಿಗೆ ಭದ್ರಬುನಾದಿಯಾಗುವ ಹಾಗೆ ರೂಪುಗೊಂಡದ್ದು ಎಂಬುದನ್ನು ಮರೆಯಲಾಗದು.

ಅನೇಕ ರೀತಿಯ ಸಾಧನೆಗಳಿದ್ದರೂ ನವೋದಯ ಛಂದಸ್ಸಿನಲ್ಲಿ ಮಾತ್ರೆ ಹಾಗೂ ಗಣಗಳ ನಿಯಮ ಪಾಲನೆಯ ಸಂದರ್ಭಗಳಲ್ಲಿ ಅಲ್ಲಲ್ಲಿ ಶಿಥಿಲತೆ ಪ್ರಾಪ್ತವಾಗುತ್ತಿದ್ದುದು ಮಾತ್ರ ನಿಜ.