ಇಲ್ಲಿ ಮೊದಲ ಗಣ ಹಾಗೂ ಎರಡನೆ ಗಣ ಎರಡೂ ಏಳೇಳು ಮಾತ್ರೆಗಳವಾಗಿದ್ದು ಕೊನೆಯ ಲಘುವನ್ನು ದೀರ್ಘೀಕರಣಗೊಳಿಸುವುದರಿಂದ ಎಂಟು ಮಾತ್ರೆಗಳ ಗಣಗಳಾಗುವುದೇ ಅಲ್ಲದೆ ಈ ಎಂಟೆಂಟು ಮಾತ್ರೆಗಳ ರಚನೆಗಳು ಒಂದೊಂದು ಭಿನ್ನ ಪಂಕ್ತಿಯಂತೆಯೂ ರೂಪಿತವಾಗುವ ಸಾಧ್ಯತೆಯಿಂದ ಕೂಡಿರುವುದು ಇಲ್ಲಿನ ರಚನೆಯ ವೈಶಿಷ್ಟ್ಯ.

ಆನಂದಮಯ ೬+೧
ಜಗ ಹೃದಯ ೨ ೨ ೩+೧
ಏತಕೆ ಭಯ ಮಾಣೊ ೪ ೨ ೩+೧

ಎಂದೂ ಇದನ್ನು ಆನಂದಿಸುವುದೂ ಸಾಧ್ಯ. ಈ ಉದಾಹರಣೆ ಗಮನಿಸಿ:

ಇಂತಹ ಸುಂದರ ಪ್ರಾತಃಕಾಲದಿ ೪ ೪ ೮
ಜೀವಿಸುವುದಕಿಂತಲು ಬೇರೆಯ ಗುರಿ ೧೦ ೪ ೨
ಜೀವಕೆ ಬೇಕಿಲ್ಲ. ೪ ೪ + ಗುರು
ಚಿರಸೌಂದರ್ಯದ ಸಂಪದವಿದ್ದರೆ ೨ ೬ ೮
ಧರ್ಮಕೆ ಚ್ಯುತಿಯಿಲ್ಲ, ೪ ೪ + ಗುರು
ಮತಿಯಿಲ್ಲ. ೪ + ಗುರು

ಇಲ್ಲಿನ ಸಾಲುಗಳಲ್ಲಿ ಗಣಗಳ ಸಂಖ್ಯೆ ಏರಿಳಿತವಾಗಿ ಲಯದಲ್ಲಿ ವೈವಿಧ್ಯಕ್ಕೆ ಕಾರಣವಾಗಿದೆ. ಮೊದಲೆರಡು ಸಾಲುಗಳಲ್ಲಿ ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿವೆ. ಎರಡನೆ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಎರಡು ಗಣಗಳು ಮೇಲೊಂದು ಗುರು ಇದೆ. ನಾಲ್ಕನೆ ಸಾಲಿನಲ್ಲಿ ಮತ್ತೆ ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿದ್ದರೆ, ಮುಂದಿನ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಎರಡು ಗಣಗಳು ಮೇಲೊಂದು ಗುರು. ಅದರ ಮುಂದಿನ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಒಂದೇ ಗಣ ಮತ್ತೆ ಮೇಲೊಂದು ಗುರು. ನಾಲ್ಕು ಮಾತ್ರೆಗಳ ನಾಲ್ಕು ಗಣಗಳ ಸಾಲು ಮತ್ತು ಮುಂದಿನ ನಾಲ್ಕು ಮಾತ್ರೆಗಳ ಮೂರು ಗಣಗಳು ಮೇಲೊಂದು ಗುರುವಿರುವ ವಿನ್ಯಾಸವನ್ನು ಒಂದೇ ಪಂಕ್ತಿಯಾಗಿ ವಿಸ್ತರಿಸುವ ಕ್ರಮವೂ ಇಲ್ಲಿದೆ.

ತೆರೆತೆರೆಯಾಗಿಹ ನೊರೆ ನೊರೆ ಕಡಲೆನೆ ೮ ೨ ೨ ೪
ನೋಡುವ ಕಣ್ಣೋಡುವ ವರೆಗೆ ೪ + ಗುರು

ಇಲ್ಲಿ ಒಟ್ಟು ಏಳು ಗಣಗಳೂ ಮೇಲೊಂದು ಗುರುವೂ ಒಂದೇ ವಿನ್ಯಾಸದಲ್ಲಿದೆ. ಇನ್ನೊಂದು ವಿನ್ಯಾಸ ಒಂದು ಪಂಕ್ತಿಯಲ್ಲಿ ನಾಲ್ಕು ಮಾತ್ರೆಗಳ ಮೂರೇ ಗಣಗಳಿವೆ.

ಅಂತರತಮ ನೀಗುರು ೬ ೨ ೨
ಹೇ ಆತ್ಮತಮೋಹಾರಿ ೨ ೯+೧

ಪಲ್ಲವಿಯಂತಿರುವ ಈ ಎರಡು ಸಾಲುಗಳು ನಾಲ್ಕು ಬಾರಿ ಬಂದಿವೆ. ಮೊದಲ ಸಾಲಿನಲ್ಲಿ ಹತ್ತೇ ಮಾತ್ರೆಗಳಿವೆ. ಅವುಗಳ ವಿನ್ಯಾಸ = ಆರು ಮಾತ್ರೆಗಳು (ಅಂತರತಮ = – ⋃⋃⋃⋃) ಎರಡು ಮಾತ್ರೆಗಳು (ನೀ = –) ಮತ್ತೆ ಎರಡು ಮಾತ್ರಗಳು (ಗುರು) ಕೂಡಿ ಆಗಿದೆ. ಇಲ್ಲಿ ‘ಗುರು’ವನ್ನು ಯತಿಸ್ಥಾನವಾಗಿ ನಾಲ್ಕು ಮಾತ್ರೆಗಳ ಘಟಕವಾಗಿ ಗಮನಸಿಬಹುದಲ್ಲವೆ ಅನ್ನಿಸಬಹುದು. ಆ ಸಾಧ್ಯತೆಯಿದ್ದರೂ, ಈ ಗುರುವಂತೆ ಹನ್ನೆರಡು ಮಾತ್ರೆಗಳ ಘಟಕವಾಗಿ ಲಯಕ್ಕೂ ಅರ್ಥಕ್ಕೂ ಯಾವ ಬಾಧೆಯೂ ಆಗಿಲ್ಲ. ಇದನ್ನು ಹನ್ನೆರಡು ಮಾತ್ರೆ ಎಂದು ಗಮನಿಸುವುದು ಸರಿಯೇ ಎಂಬ ಪ್ರಶ್ನೆ ಮೂಡಿದರೆ ಕುವೆಂಪು ಅವರ ಇನ್ನೊಂದು ಪದ್ಯ – ‘ತೇನವಿನಾ’ ಇದೆ. ಅದರ ಮೊದಲ ಸಾಲು ಹೀಗಿದೆ:

ತೇನವಿನಾ ತೇನವಿನಾ

ಪಲ್ಲವಿಯಂತಿರುವ ಇಲ್ಲಿನ ವಿನ್ಯಾಸ ಮೂರು, (ತೇನ = – ⋃) ಮೂರು, (ವಿನಾ = ⋃ –), ಮೂರು (ತೇನ = – ⋃) ಮೂರು (ವಿನಾ = ⋃ –) ಮಾತ್ರೆಗಳ ಘಟಕವಾಗಿದ್ದರೂ ಒಟ್ಟಾರೆ ಉಚ್ಚರಿಸುವಾಗ ಹನ್ನೆರಡು ಮಾತ್ರೆಗಳ ಒಂದೇ ಘಟಕವಾಗಿರುವಂತೆ ಭಾಸವಾಗುತ್ತದೆ. ಮೊದಲ ಮೂರು ಮಾತ್ರೆಗಳೊಂದಿಗೆ ಮುಂದಿನ ಮೂರು ಮಾತ್ರೆಗಳೂ ಬೆಸೆದುಕೊಂಡಂತಾಗಿ ಒಟ್ಟು ಆರು ಮಾತ್ರೆಗಳ ಎರಡು ಘಟಕಗಳಾಗಿಯೂ ಇಲ್ಲಿನ ರಚನೆ ಆಕರ್ಷಕವಾಗಿದೆ. ಈ ರಚನೆಯ ನಾಲ್ಕನೆಯ ಸಾಲು ಹೀಗಿದೆ:

ಮೂಢ ಮನಾ, ಹೇ ಮೂಢ ಮನಾ

ಇಲ್ಲಿಯೂ ಆರು ಮಾತ್ರೆಗಳು (ಮೂಢಮನಾ = – ⋃⋃ –) ಎರಡು ಮಾತ್ರೆಗಳು (ಹೇ = –) ಮತ್ತೆ ಆರು ಮಾತ್ರೆಗಳು (ಮೂಢ ಮನಾ = – ⋃⋃ –) ಒಟ್ಟಾರೆ ಇಲ್ಲಿಯೂ ಹದಿನಾಲ್ಕು ಮಾತ್ರೆಗಳಾಗಿ – ನಾಲ್ಕು ಮಾತ್ರೆಗಳ ಮೂರು ಗಣಗಳು ಮೇಲೊಂದು ಗುರು ಆಗಿ ವಿಂಗಡಣೆಗೊಳ್ಳುತ್ತದೆ.

ಇನ್ನೊಂದು ರೀತಿಯ ವಿನ್ಯಾಸ ಇಲ್ಲಿದೆ.

ಆಳುವ ಕಡಲೊಳೂ ತೇಲಿಬರುತಲಿದೆ ೪ ೪ ೩ ೫
ನಗೆಯ ಹಾಯಿ ದೋಣಿ. ೩ ೩ ೩+೧

ಇಲ್ಲಿಯ ಗಣವಿನ್ಯಾಸ ಮೊದಲ ಸಾಲಿನಲ್ಲಿ ಹದಿನಾರೇ ಮಾತ್ರೆಗಳಿದ್ದರೂ ಇಲ್ಲಿಯ ಗಣಗಳು ಮೂರು (ಆಳುವ = ⋃⋃⋃) ಐದು (ಕಡಲೊಳೂ = ⋃⋃⋃ –) ಮೂರು (ತೇಲಿ = – ⋃) ಐದು (ಬರುತಲಿದೆ = ⋃⋃⋃⋃⋃) ಮಾತ್ರೆಗಳ ಗಣಗಳು. ಎರಡನೆ ಸಾಲಿನಲ್ಲಿ ಮೂರು ಮಾತ್ರೆಗಳ ಮೂರು ಗಣಗಳು. ಇಲ್ಲಿ ಬರುವ ಮೂರು ಮಾತ್ರೆಗಳು ಮತ್ತು ಐದು ಮಾತ್ರೆಗಳ ವಿನ್ಯಾಸದಲ್ಲಿ ಭಿನ್ನತೆಯಿರುವುದುಂಟು.

ಎಂಬಲ್ಲಿ ಮೂರು, ಮೂರು, ಎರಡು, ಮೂರು, ಐದು ಮಾತ್ರೆಗಳ ವಿನ್ಯಾಸವಿದೆ. ಮತ್ತೆ –

ಇದು ಬಾಳು ನೋಡು; ಇದು ತಿಳಿದೆನೆಂದರೂ ೨ ೩ ೩ ೩ ೫

ಎಂಬಲ್ಲಿ, ಎರಡು (ಇದು = ⋃⋃) ಮೂರು (ಬಾಳು = – ⋃) ಮೂರು (ನೋಡು = – ⋃) ಎರಡು (ಇದು = ⋃⋃) ಎರಡು, ಎಂಟು (ತಿಳಿದೆನೆಂದರೂ = – ⋃⋃⋃ – ⋃ –) ಮಾತ್ರೆಗಳ ವಿನ್ಯಾಸವಿದೆ.

ನಾಲ್ಕು ಮಾತ್ರೆಗಳ ಗಣವಿನ್ಯಾಸದಲ್ಲಿ ಇಲ್ಲಿ ಹಲವು ಭಿನ್ನ ವಿನ್ಯಾಸಗಳನ್ನು ನೋಡಬಹುದು. ಇದೇ ರೀತಿಯ ವಿನ್ಯಾಸ ಇನ್ನೊಂದು ವಿಶೇಷತೆ ಪಡೆಯುವುದು ‘ನೆನೆ ನೆನೆ ಆ ದಿನವ’ ಎಂಬ ಅಡಿಗರ ಕವಿತೆಯಲ್ಲಿ.

ಭಾರತ ಭೂಮಿಯ ಬೀರಸಿರಿಯ ಹಿಂ ೪ ೪ ೩+೩ ೨
ದಿಲ್ಲದ ವೈಭವದ ೪ ೪ + ಗುರು

ಎಂಬಲ್ಲಿ ಮೊದಲ ಸಾಲಿನಲ್ಲಿ ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿವೆ (ಭಾರತ = – ⋃⋃), (ಭೂಮಿಯ = – ⋃⋃), ಬೀರಸಿರಿಯ ಹಿಂ – ಮೂರು ಮೂರು ಮತ್ತೆ ಎರಡು ಮಾತ್ರೆಗಳ ಗಣಗಳಿವೆ. ಆದರೆ ಎರಡನೆ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಎರಡು ಗಣಗಳು ಮೇಲೊಂದು ಗುರುವಿದೆ. (ದಿಲ್ಲದ = – ⋃⋃; ವೈಭವವ = ⋃⋃ –) ಮುಂದೆ ಇಲ್ಲಿನ ಛಂದಸ್ಸು ನಾಲ್ಕು ಮಾತ್ರೆಗಳ ಗಣಗಳ ಸ್ಥಾನದಲ್ಲಿ ಎರಡು, ಮೂರು (ಐದು ಎಂದೂ ಗಮನಿಸಬಹುದು) ಮೂರು, ಎರಡು ಮೂರು, ಮೂರು, ಎರಡು ಮೂರು ಮೂರು ಮಾತ್ರೆಗಳ ಹೊಸ ವಿನ್ಯಾಸವನ್ನೇ ಪಡೆದು ಬಿಡುತ್ತದೆ.

ನಾವಲ್ಲ ತೊತ್ತು, ನಿನಗಲ್ಲ ತುತ್ತು, ನಮ್ಮಾರೆ ನುಡಿ, ವಿಚಾರ

ಎಂಬ ಸಾಲಿನಲ್ಲಿ ಮೇಲೆ ಉದ್ಧರಿಸಿದ ಸಾಲಿನ ಅನಂತರ ಬರುವ ಪಂಕ್ತಿಯನ್ನು ಗಮನಿಸಿ:

ಸಿರಿಪಾರಿಜಾತ ವರಪಾರಿಜಾತ
ತಾರಾಕುಸುಮದಿಂದೆ

ಇಲ್ಲಿ ೨, ೩, ೩, ೨, ೩, ೩ ಮಾತ್ರೆಗಳ ವಿನ್ಯಾಸ ಮೊದಲ ಸಾಲಿನಲ್ಲಿದ್ದರೆ, ಮುಂದಿನ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಗಣ ಮತ್ತೆ ಮೂರು ಮಾತ್ರೆಗಳ ಎರಡು ಗಣಗಳ ಬಂದು ಛಂದೋಭಂಗವಾದಂತಿದೆ ಎಂಬ ಭ್ರಮೆ ಸಾಧ್ಯ. ಆದರೆ ಕವಿಪ್ರತಿಭೆ ಇಂಥ ಭ್ರಮೆಗಳ ಮಧ್ಯೆಯೇ ತನ್ನ ಚೆಲ್ಲಾಟವಾಡುವುದು – ಪದ್ಯವನ್ನು ಅರ್ಥ ತುಂಬುವಂತೆ ಓದಿದರೆ ಇಲ್ಲಿ ತಾರಾ ಎಂಬ ಮೇಲುನೋಟಕ್ಕೆ ಎರಡು ಗುರುಗಳ (ತಾರಾ = – –) ಎಂಬ ಪದವು ರಾ ಎಂಬಕ್ಷರವು ಪ್ಲುತಗೊಂಡು ಇಲ್ಲಿನ ಗಣವಿನ್ಯಾಸ ೨, ೩, ೩, ೩ – ಎರಡು ಮಾತ್ರೆಗಳ ಗಣ ಮತ್ತು ಮೂರು ಮಾತ್ರೆಗಳ ಮೂರು ಗಣಗಳಾಗಿ ವಿನ್ಯಾಸಗೊಂಡು ಬಿಡುತ್ತದೆ. ಈ ಛಂದಸ್ಸಿನ ಕೆಲವು ಉದಾಹರಣೆಗಳನ್ನು ಗಮನಿಸಬಹುದು.

ಶ್ರೀ ವಿಶ್ವದಲ್ಲಿ ಯಜಮಾನನಾಗಿ ಜೀವಾತ್ಮ ನಾನು ಬಂದೆ ೨ ೬ ೮ ೫ ೩ ೩ = ೨೭
ಇಗೊ ಚಿತ್ತದಲ್ಲಿ ಪುರುಷಾತ್ಮನಾಗಿ ಚೈತ್ಯಾಗ್ನಿ ಹೊತ್ತಿತಂದೆ ೨ ೬ ೮ ೫ ೩ ೩ = ೨೭
ಇದೊ ಭಿನ್ನಕಿರಣ, ಇಗೊ ನನ್ನ ಹರಣ, ಅಗೊ, ನಿನ್ನ ಚರಣಕಾಗಿ ೨ ೬ ೨ ೩ ೩ ೨ ೩ ೬ = ೨೭
ಎಲೆ ತಂದೆ, ಬಂತು ಎದೆಗೊದಗಿ ನಿಂತ ತಾಯ್ಸೆರಗ ಸೇರಲಾಗಿ ೨ ೩ ೩ ೫ ೩ ೫ ೬ = ೨೭
ಶಿವಾಯ ನಮಃ ಓಂ ಶಿವಾಯ ನಮಃ ದಿಮಡಿ ನುಡಿಯುತಿತ್ತು ೭ (೪ + ೩) ೨ ೪ ೩ ೩ ೬ = ೨೫
ಏಕನಾದವೂ ಶಿವಾಯ ನಮಃ ಓಂ ಶ್ರುತಿಯ ನುಡಿಯುತಿತ್ತು ೮ ೪ ೩ ೨ ೩ ೬ = ೨೬
ಕಂಠದಲ್ಲಿ ನೆಲೆಗೊಂಡು ಇತ್ತು ಕನ್ನಡದ ತಾಯಿ ಬೇರು ೬ ೫ ೩ ೫ ೩ ೩ = ೨೬
ಬಯಲು ಸೀಮೆಯಲಿ ಉರುಳುತಿತ್ತು ಪ್ರಭುದೇವರೊಂದು ತೇರು ೩ ೫ ೬ ೮ ೩ = ೨೫

ಇದೇ ಲಯ ಕೆ. ಎಸ್‌. ನ. ಅವರಲ್ಲಿ ಹೇಗಿದೆಯೆಂಬುದಕ್ಕೆ ಈ ಕೆಲವು ಸಾಲುಗಳನ್ನು ಗಮನಿಸಬಹುದು:

ಈಗಿಲ್ಲ ಸೋನೆ; ಮುಂದೆಲ್ಲೊ ವಾಗಿ; ಹಗಲಾಯ್ತು ಧವಳ ಕಾಂತಿ ೫ ೩ ೫ ೩ ೫ ೩ ೩ = ೨೭
ದೀರ್ಘ ರಾತ್ರಿಗಳ ನೀಲಗಗನತಲ ಶರಚ್ಛಿದ್ರಕಾಂತಿ ೩ ೫ ೩ ೩ ೨ ೩ ೩ ೩ = ೨೫
ಪಾತಾಳದಲ್ಲಿ ಬಂಗಾರ ಜಿಂಕೆ ಬಾಯಾರಿ ಬಾಡುತಿಹುದು ೮ ೫ ೩ ೫ ೬ = ೨೭
ಹೆಸರಿರದ ಬಳ್ಳಿ ಮುದಿಗಾಳಿಗೆಂದು ಹಣ್ಣೆಲೆಯ ಹಾಸುತಿಹುದು ೫ ೩ ೮ ೫ ೬ = ೨೭
ಯಾರು ಹೇಳಿದರು ಎರಡು ತಿಂಗಳಿಗೆ ಇಟ್ಟ ಹೆಸರಿದೆಂದು ೩ ೫ ೩ ೫ ೩ ೬ = ೨೬

ಇಲ್ಲಿಯ ವಿನ್ಯಾಸಗಳಲ್ಲಿಯ ಭಿನ್ನತೆ ಗಮನಿಸಿ; ಮೊದಲ ಸಾಲಿನಲ್ಲಿ ಐದು ಮಾತ್ರೆಗಳು ಮತ್ತು ಮೂರು ಮಾತ್ರೆಗಳ ಮೊದಲೆರಡು ಗಣಗಳಲ್ಲಿದ್ದರೆ (ಈಗಿಲ್ಲ ಸೋನೆ = – – ⋃, – ⋃) ಮುಂದಿನ ಸಾಲಿನ ಎರಡು ಗಣಗಳ ವಿನ್ಯಾಸ ಮೂರು ಮಾತ್ರೆಗಳ ಮತ್ತು ಐದು ಮಾತ್ರೆಗಳ ಗಣವಾಗಿವೆ (ದೀರ್ಘ = – ⋃; ರಾತ್ರೆಗಳ = – ⋃⋃⋃).

ಅನಂತರ ಇರುವ ಇನ್ನೊಂದು ಭಿನ್ನತೆ ಮೊದಲ ಸಾಲಿನಲ್ಲಿ ಕೊನೆಯ ವಿನ್ಯಾಸ ಹೀಗಿದೆ – ಐದು ಮಾತ್ರೆಗಳು (ಹಗಲಾಯ್ತು = ⋃⋃ – ⋃) ಮೂರು ಮಾತ್ರೆಗಳು (ಧವಳ = ⋃⋃⋃) ಮೂರು ಮಾತ್ರೆಗಳು (ಕಾಂತಿ = – ⋃). ಆದರೆ ಕೊನೆಯ ಸಾಲು ಗಮನಿಸಿ, ಅಲ್ಲಿಯ ಕೊನೆಗೆ ಮೂರು ಮಾತ್ರೆಗಳ ಮೂರು ಗಣಗಳಿವೆ – ಪೀಠವೆಂಬಂತೆ ಎರಡು ಮಾತ್ರೆಗಳ ಗಣ ಇಲ್ಲ. ಈ ಲಯದಲ್ಲಿ ಮತ್ತೊಂದು ವಿವಿಧತೆ ಗಮನಿಸಿ:

ಎಂದೊಂದು ಜೀವ ತಾಯಾಗಿ ಬಂದು
ಭೂಮಿಯನೆ ಅಪ್ಪಿದಂತೆ
ಬುದ್ಧ ನಕ್ಕನಂತೆ.

ಮೇಲಿನ ಎರಡು ಸಾಲುಗಳಲ್ಲಿ ಮೊದಲನೆ ಸಾಲು ೩, ೫ ಅಥವಾ ೫, ೩ ಮಾತ್ರೆಗಳ ಗಣಗಳಿಂದ ಕೂಡಿ ಕೊನೆಗೆ ೫, ೩, ೩ ಮಾತ್ರೆಗಳ ಗಣಗಳಿಂದ ಕೂಡಿವೆ. ಸ್ವಾರಸ್ಯವೆಂದರೆ ಈ ಪಂಕ್ತಿಗಳ ಮೂರು ಮಾತ್ರೆಗಳ ಮೂರು ಗಣಗಳು ಯತಿಸ್ಥಾನವಾಗಿ ಸೊಗಸು ತರುವುದು.

ಈ ಛಂದಸ್ಸನ್ನು ಗಮನಿಸಿದರೆ ಆಶ್ಚರ್ಯವಾಗುವುದು. ಏಕೆಂದರೆ ನಾಲ್ಕು ಮಾತ್ರೆಗಳ ಲಯ ಅಂದರೆ ಮಂದಾನಿಲ ಲಯದಿಂದ ಆರಂಭವಾಗುವ ಈ ಛಂದಸ್ಸಿನ ಓಟ ತನ್ನದೇ ಆದ ಒಂದು ಗೇಯತೆಯನ್ನು ಪ್ರಾಪ್ತಿಗೊಳಿಸಿಕೊಳ್ಳುವತ್ತ ಸಾಗುತ್ತದೆ.

ಹೀಗೆ ಬೆಳೆಯುವ ಈ ಛಂದಸ್ಸಿನಲ್ಲಿ ಎರಡು ಮತ್ತು ಮೂರು ಅಥವಾ ಐದು ಮಾತ್ರೆಗಳ ಗಣ (ಇಗೊ ಚಿತ್ರ = ⋃⋃ – ⋃) ಅಥವಾ ಪಾತಾಳ (– – ⋃) ಅನಂತರ ಮತ್ತೆ ಐದು ಮೂರು ಅಥವಾ ಮೂರು ಐದು ಮಾತ್ರೆಗಳ ಗಣ (ಬಂಗಾರ ಜಿಂಕೆ = – – ⋃ ,– ⋃) (ಎರಡು ತಿಂಗಳಿಗೆ = ⋃⋃⋃ – ⋃⋃⋃) ಅನಂತರ ಮತ್ತೆಯೂ ಮೂರು ಐದು ಅಥವಾ ಐದು ಮೂರು ಮಾತ್ರೆಗಳ ಗಣಗಳು (ಈ ಐದು ಮಾತ್ರೆಗಳ ಗಣ ಮತ್ತೆ ಎರಡು ಮಾತ್ರೆಗಳು ಮತ್ತು ಮೂರು ಮಾತ್ರೆಗಳ ಯೋಜನೆ ಪಡೆದಿರಬಹುದು ಅಥವಾ ಮೂರು ಮಾತ್ರೆಗಳು ಮತ್ತು ಎರಡು ಮಾತ್ರೆಗಳ ರಚನೆಗಳಾಗಿಯೂ ಇರಬಹುದು. (ಮಾಗಿ ಹಗಲಾಯ್ತು = – ⋃, ⋃⋃ – ⋃), ( ಗಗನತಲ ಶರತ್‌ + = ⋃⋃ ⋃⋃⋃, ⋃ –) ಕೊನೆಗೆ ಮೂರು ಮಾತ್ರೆಗಳ ಎರಡು ಗಣಗಳು ಅಥವಾ ಆರು ಮಾತ್ರೆಗಳ ಒಂದು ಗಣ (ತಾಯಿ ಬೇರು = – ⋃, – ⋃) (ಹರಸುತಿಹುದು = ⋃⋃⋃⋃⋃⋃).

ಮೇಲಿನ ವಿನ್ಯಾಸಗಳನ್ನು ಗಮನಿಸಿದರೆ ಮೂರು ಮತ್ತು ಐದು ಮಾತ್ರೆಗಳ ಅಥವಾ ಐದು ಮತ್ತು ಮೂರು ಮಾತ್ರೆಗಳ ಗಣ ವಿಪರ್ಯಯದಿಂದ ನಾಲ್ಕು ಮಾತ್ರೆಗಳ ಗಣ ಯೋಜನೆ ಮುಂದುವರೆದಿದೆ ಎಂದು ಗಮನಿಸಬಾರದೇಕೆ ಅನ್ನಿಸುತ್ತಿದೆ. ಆದರೆ ಮುಂದೆ ಐದು ಮಾತ್ರೆಗಳು, ಮೂರು ಮಾತ್ರೆಗಳು ಮತ್ತೆ ಮೂರು ಮಾತ್ರೆಗಳ ಗಣ ವಿನ್ಯಾಸ ವಿಭಿನ್ನ ಯೋಜನೆಗಳನ್ನು ಪಡೆದು ನಾಲ್ಕು ಮಾತ್ರೆಗಳ ಗಣ ವಿನ್ಯಾಸದಿಂದ ಭಿನ್ನವಾದಂತೆಯೂ ಭಾಸವಾಗುತ್ತದೆ. ಆದ್ದರಿಂದಲೇ ಇಲ್ಲಿಯ ಪ್ರತಿ ಸಾಲಿನಲ್ಲಿ ಮಾತ್ರೆಗಳ ಸಂಖ್ಯೆ ಇಪ್ಪತ್ತೈದರಿಂದ ಇಪ್ಪತ್ತೇಳರ ವರೆಗೆ ಏರುತ್ತ ಇಳಿಯುತ್ತ ಹೋಗಿ ಗೇಯತೆಯ ಕಡೆಗೆ ಹೆಚ್ಚು ವಾಲುತ್ತದೆ. ಆದ್ದರಿಂದಲೇ ಇರಬೇಕು ನಾರಾಯಣ ಪ್ರಸಾದರು ಹೊಸಗನ್ನಡ ಕವಿತೆಯ ಛಂದಸ್ಸಿನ ಕೃತಿಯಲ್ಲಿ ಇದನ್ನು ಇಂಥ ನಮ್ಯತೆ ಪಡೆದ ಛಂದವನ್ನು ವಿಷ್ಣು ಬ್ರಹ್ಮ ವಿಷ್ಣು ಬ್ರಹ್ಮ ವಿಷ್ಣು ರುದ್ರಗಣಗಳಿಂದ ಆಗಿರಬಹುದೆಂದು ಊಹಿಸುತ್ತಾರೆ. ಈ ಛಂದಸ್ಸಿನಲ್ಲಿ ಪಡೆದ ಪುಟ್ಟ ಪ್ರಯೋಗ ಅದು. ಈ ಪದ್ಯದ ಮೊದಲ ಸಾಲಿನ ನಿಯಂತ್ರಕ ಲಯವಾದ ಮೂರು ಮಾತ್ರೆಗಳ ಮೂರು ಗಣಗಳ ವಿನ್ಯಾಸವನ್ನು ಆರ್ಥ ಪುಷ್ಟಿಗಾಗಿ ಪುನಾರಚಿಸುವ ಪ್ರಯೋಗ – ಕೆ. ಎಸ್‌. ನ. ಅವರ ಕವಿತೆಯಲ್ಲಿದೆ. ಇಂಥ ವಿನ್ಯಾಸಗಳನ್ನು ಗೋವಿಂದ ಪೈ ಅವರ ‘ಕನ್ನಡಿಗರ ತಾಯಿ’ ಪಂಜೆಯವರ ‘ಹುತ್ತುರಿ ಹಾಡು’ ಮೊದಲಾದ ಕವಿತೆಗಳಲ್ಲೂ ಕಾಣಬಹುದು.

ನಾಲ್ಕು ಮಾತ್ರೆಗಳ ಮಂದಾನಿಲ ಲಯದಿಂದ ರೂಪಿತವಾಗುವ ಲಯಗಳು ಕವಿಪ್ರತಿಭೆಯ ಸಾಮರ್ಥ್ಯಕ್ಕೆ ತಕ್ಕಂತೆ ಗುಣಿತಗೊಳ್ಳುತ್ತಲೇ ಹೋಗುತ್ತವೆ ಅಲ್ಲವೆ? ಈ ನಾಲ್ಕು ಮಾತ್ರೆಯ ಲಯ ಅಂಶಗಣದ ವಿಷ್ಣುವಿನಿಂದ ವಿನ್ಯಾಸಗೊಂಡಿದೆಯೆ ಅಥವಾ ಶರಷಟ್ಟದಿಯ ಮೊದಲ ಅರ್ಧದ ವಿನ್ಯಾಸದಿಂದ ರೂಪು ಪಡೆದುಕೊಳ್ಳುತ್ತ ಹೋಯಿತೆ ಎಂಬ ಪ್ರಶ್ನೆಗೆ ಉತ್ತರಿಸಲು ಸಾಕಷ್ಟು ಆಧಾರಗಳು ಸಾಲವು ಎಂದೇ ಹೇಳಬೇಕಾಗುತ್ತದೆಯೇನೋ?

ಪಂಪಭಾರತದ ರಗಳೆ ಮತ್ತು ಜನಪದದ ಅರ್ಜುನ ಜೋಗಿಯ ಹಾಡುಗಳ ಲಯಗಳ ಅನ್ವೇಷಣೆ ಇದಕ್ಕೆ ನೆರವಾಗಬಹುದೇನೋ.

ಚೋಳ ಕನ್ಯೆಯರು ಕವಿತೆಯಲ್ಲಿ ಶ್ರೀಯವರು ಮೊದಲ ಸಾಲಿನಲ್ಲಿ ‘ಏಳು ಮಗಳುದಿರು ಚೋಳರಾಯನಿಗೆ’ ಎಂದು ಮೂರು ಮತ್ತು ಐದು ಮಾತ್ರೆಗಳ ವಿನ್ಯಾಸವನ್ನು ತಂದಿದ್ದಾರೆ. ಆದರೆ ಎರಡನೆ ಸಾಲಿನಲ್ಲಿ ಮಾತ್ರ ಓಟ ಭಿನ್ನವಾಗುತ್ತದೆ.

‘ಒಬ್ಬ ತಾಯ ಸಿರಿ ಮಕ್ಕಳು’ ಎಂಬ ಪ್ರಯೋಗದಲ್ಲಿ ಅಂದರೆ ಇಲ್ಲಿ ಮೂರು ಮೂರು ಮತ್ತು ಎರಡು ಮಾತ್ರೆಗಳು ಅನಂತರ ನಾಲ್ಕು ಮಾತ್ರೆಗಳ ಗಣವಿದೆ.

ಈ ಪದ್ಯದ ಎಲ್ಲ ಭಾಗಗಳಲ್ಲಿಯೂ ಎರಡನೆಯ ಸಾಲು ಮೂರು ಮಾತ್ರೆಗಳು, ಐದು ಮಾತ್ರೆಗಳು ಮತ್ತು ನಾಲ್ಕು ಮಾತ್ರೆಗಳ ಗಣಗಳಿಂದಲೇ ಕೂಡಿವೆ. ಆಶ್ಚರ್ಯವೆಂದರೆ ಪಂಪ ಬಳಸುವ ರಗಳೆಯ ಆರಂಭದಲ್ಲಿಯೂ “ಅಲ್ಲಿ ಸೊಗಯಿಸುವ ಕಲ್ಪತರುಗಳಿಂ ಕಲ್ಪತರುಗಳನೆ ಪೋಲ್ವ ಮರಗಳಿಂ” ಎಂಬಲ್ಲಿ ಇದ್ದು ಮೂರು ಮತ್ತು ಐದು ಮಾತ್ರೆಗಳ ಸಂಯೋಜನೆಯಿಂದ ನಾಲ್ಕು ಮಾತ್ರೆಗಳು ಹುಟ್ಟುವ ರೀತಿಯಿದೆ. ಆಶ್ಚರ್ಯವೆಂದರೆ ಎರಡನೆಯ ಸಾಲಿನಲ್ಲಿ ನಾಲ್ಕು ಮಾತ್ರೆಯ ಮೂರು ಗಣಗಳ ವಿನ್ಯಾಸ ಕೂಡ ಇದೆ.

ಇಷ್ಟನ್ನು ಗಮನಿಸಿದರೆ ನಾಲ್ಕು ಮಾತ್ರೆಗಳ ಗಣವಿನ್ಯಾಸದ ಮುಂದುವರೆದ ಛಂದೋರೂಪವಾಗಿ ಮೂರು ಐದು ಅಥವಾ ಐದು ಮೂರು ಮಾತ್ರೆಗಳ ಗಣಗಳು ಇರುವ ಮೊದಲ ಸಾಲಿನ ಒಂದು ಕ್ರಮವೂ ಮೊದಲ ಸಾಲಿನ ವೈವಿಧ್ಯ ಉಳಿಸಿಕೊಂಡು ಎರಡನೆ ಸಾಲಿನಲ್ಲಿ ಮೂರು ಮಾತ್ರೆಗಳ ಮೂರು ಗಣಗಳು ಅಥವಾ ಎರಡು ಮಾತ್ರೆಯ ಗಣವಾದ ಮೇಲೆ ಮೂರು ಮಾತ್ರೆಗಳ ಮೂರು ಗಣಗಳ ಇನ್ನೊಂದು ಕ್ರಮವೂ ಇವೆ. ಮುಂದೆ ಇದೇ ಲಯವೆ ಗಂಗಾವತರಣದಲ್ಲಿ ಬರುವ ಹಾಗೂ ಹೆಚ್ಚು ವ್ಯಾಪಕವಾದ

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಭುದ್ಧ ಶುದ್ಧ ನೀರೇ

ಎಂಬ ತೀರ ಭಿನ್ನವೇ ಎನ್ನುವಂಥ ಲಯವಿನ್ಯಾಸವಾಗಿ ಕೆ. ಎಸ್‌. ನ. ಹಾಗೂ ಬೇಂದ್ರೆಯವರಲ್ಲಿ ಅತಿ ಪ್ರಚುರಗೊಳ್ಳುವುದನ್ನು ಕಾಣಬಹುದು.

ಈ ನಾಲ್ಕು ಮಾತ್ರೆಗಳ ಗಣದ ರಚನೆಯಲ್ಲಿ ಹಲವಾರು ವಿನ್ಯಾಸಗಳನ್ನು ಕುವೆಂಪು ಅವರ ‘ಅತಿಥಿ’ ಕವನದಲ್ಲಿ ಕಾಣಬಹುದು. ಈ ಪದ್ಯದ ಮುಖ್ಯ ಪಂಕ್ತಿಗಳನ್ನು ಗಮನಿಸಿ:

. ತೆರೆದಿದೆ ಮನೆ, , ಬಾ, ಅತಿಥಿ ೪ ೨ ೨ ೨ ೩ + ೧
ಹೊಸ ಬೆಳಕಿನ ಹೊಸ ಗಾಳಿಯ ಹೊಸ ಬಾಳನು ತಾ ಅತಿಥಿ ೨ ೪ ೨ ೪ ೨ ೪ ೨ ೩ + ೧
ಎಲ್ಲಾ ಇದೆ ಇಲ್ಲಿ ೪ ೨ ೩ + ೧
………..
. ಆವ ರೂಪದೊಳು ಬಂದರು ಸರಿಯೆ ೩ ೫ ೪ ೩ + ೧
ಬಾ ಅತಿಥಿ ೨ ೩ + ೧
ಆವ ವೇಷದಲಿ ನಿಂದರು ಸರಿಯೆ ೩ ೫ ೪ ೩ + ೧
ನೀನತಿಥಿ! ೪ + ಗುರು
………..
. ಸುಸ್ವಾಗತ ನಿನಗತಿಥಿ ೬ ೫ + ೧
ಕಡಲಾಗಿ ೪ + ಗುರು
ಬಾನಾಗಿ ೪ + ಗುರು
ಗಿರಿಯಾಗಿ ೪ + ಗುರು
ಕಾನಾಗಿ ೪ + ಗುರು
ಚಿರನವ ಚೇತನ ಝರಿಯಾಗಿ; ೪ ೪ ೪ + ಗುರು
ಬೇಸರವನು ಕೊಚ್ಚುತೆ ಬಾ ಅತಿಥಿ. ೬ ೪ ೨ ೩ + ೧

ನಾಲ್ಕು ಮಾತ್ರೆಗಳ ಗಣವಿನ್ಯಾಸದಲ್ಲಿ ಮುಕ್ತ ಛಂದಸ್ಸಿನ ಬಳುಕನ್ನು ತರುವ ಯತ್ನ ಇಲ್ಲಿನದಾಗಿದೆ.

ಮೊದಲ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಮೂರು ಗಣ ಮತ್ತೆ ಒಂದು ಗುರುವಿದೆ. ಇದನ್ನು ನಾಲ್ಕು ಮಾತ್ರೆಗಳ ಗಣ (ತೆರೆದಿದೆ = ⋃⋃⋃⋃), ಎರಡು ಮಾತ್ರೆಗಳ ಗಣ (ಮನೆ = ⋃⋃), ಮತ್ತೆ ಎರಡು ಮಾತ್ರೆಗಳ ಗಣ (ಓ = –) ಮತ್ತೆ ಎರಡು ಮಾತ್ರೆಗಳ ಗಣ (ಬಾ = –) ಅನಂತರ ಮೂರು ಮಾತ್ರೆಗಳ ಗಣ (ಅತಿಥಿ = ⋃⋃⋃) ಎಂದೂ ಓ ಮತ್ತು ಬಾ ಎಂಬೆರಡು ಗುರುಗಳನ್ನು ಒಂದೊಂದು ಗಣವಾಗಿ (ನಾಲ್ಕು ಮಾತ್ರೆಗಳಷ್ಟು ದೀರ್ಘವಾಗಬಹುದೆ?) ಉಚ್ಚರಿಸಲು ಸಾಧ್ಯ. ಅಂದರೆ ಪಾದವೊಂದರಲ್ಲಿ ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿಗಿಂತ ಭಿನ್ನವಾದಂತೆ – ಮುಂದಿನ ಸಾಲಿನಲ್ಲಿ ಆರು ಮಾತ್ರೆಗಳ (ಹೊಸ ಬೆಳಕಿನ = ⋃⋃⋃⋃⋃⋃), (ಹೊಸ ಗಾಳಿಯ = ⋃⋃–⋃⋃), (ಹೊಸ ಬಾಳನು = ⋃⋃–⋃⋃) ಮೂರು ಗಣಗಳು ಅನಂತರ ಎರಡು ಮಾತ್ರೆಗಳ ಗಣ (ಬಾ = –) ಮುಂದೆ ಮೂರು ಮಾತ್ರೆಗಳ ಗಣ (ಅತಿಥಿ = ⋃⋃⋃) ಯೋಜಿತವಾಗಿವೆ.

ಮುಂದಿನ ಸಾಲು ಹ್ರಸ್ವಗೊಂಡರೆ ಎಲ್ಲಾ ಇದೆ ಇಲ್ಲಿ – ಎಂಬಲ್ಲಿ ನಾಲ್ಕು ಮಾತ್ರೆಗಳ ಎರಡು ಗಣಗಳು ಮೇಲೊಂದು ಗುರುವಿದೆ. – –, ⋃⋃–⋃;

ಮುಂದಿನ ಘಟಕದಲ್ಲಿ ಮೊದಲೆರಡು ಗಣಗಳು ಮೂರು ಮತ್ತು ಐದು ಮಾತ್ರೆಗಳವಾಗಿವೆ. ಮುಂದಿನ ಎರಡು ಗಣಗಳು ನಾಲ್ಕು ಮಾತ್ರೆಗಳವು ಬಂದರು = –⋃⋃; ಸರಿಯೆ = ⋃⋃– ಇಲ್ಲಿ ಕೊನೆಯಕ್ಷರ ದೀರ್ಘೀಕರಣಗೊಂಡಿದೆ.

ಮುಂದಿನ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಒಂದೇ ಗಣ ಮೇಲೊಂದು ಗುರುವಿದೆ.

–⋃⋃⋃; (ಬಾ ಅತಿಥಿ)

ಮೊಂದಿನೆರಡು ಸಾಲುಗಳ ವಿನ್ಯಾಸವೂ ಮೇಲಿನ ಎರಡು ಸಾಲುಗಳಂತೆಯೇ ಇದೆ.

ಮುಂದೆ ಉದ್ಧರಿಸಿರುವ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಎರಡು ಗುಣಗಳು ಮೇಲೊಂದು ಗುರುವಿದೆ. ಮುಂದಂತೂ ಗೇಯತೆಯನ್ನು ಒಳಗೊಳ್ಳುವಂತೆ ನಾಲ್ಕು ಮಾತ್ರೆಗಳ ಒಂದು ಗಣ ಮತ್ತೆ ಯತಿಸ್ಥಾನವಾಗುವ ಗುರುವಿದ್ದು ನಾಲ್ಕು ಸಾಲುಗಳ ವಿನ್ಯಾಸವಿದ್ದರೂ ಒಳರಚನೆಯಲ್ಲಿ ಮೊದಲ ಸಾಲಿನಲ್ಲಿ ಮೊದಲೆರಡು ಲಘುವಿದ್ದರೆ, ಅದೇ ಕ್ರಮ ಮೂರನ್ನು ಸಾಲಿನಲ್ಲೂ ಇದೆ. ಎರಡನೆಯ ಸಾಲಿನಂತೆಯೇ ನಾಲ್ಕನೆಯ ಸಾಲಿನ ರಚನೆ ಕೂಡ ಇದೆ.

ಮುಂದಿನ ಸಾಲು ನಾಲ್ಕು ಮಾತ್ರೆಗಳ ಮೂರು ಗಣಗಳು ಮೇಲೊಂದು ಗುರುವನ್ನು ಒಳಗೊಂಡಿದೆ. ನಾಲ್ಕು ಮಾತ್ರೆಗಳ ಗಣವಿನ್ಯಾಸದಲ್ಲಿ ಗೇಯತೆಗಯನ್ನು ತರುವುದಕ್ಕಾಗಿ ಒಮ್ಮೆ ಇನ್ನೊಮ್ಮೆ ವೈವಿಧ್ಯ ತರುವುದಕ್ಕಾಗಿ ಒಂದೊಂದು ಸಾಲಿನಲ್ಲೂ ಗಣಗಳ ಸಂಖ್ಯೆಯನ್ನು ಏರಿಳಿತಗೊಳಿಸಿರುವುದು ಗಮನಾರ್ಹ. ನಾಲ್ಕು ಮಾತ್ರೆಗಳ ಗಣವಿನ್ಯಾಸದಲ್ಲಿ ಆಡುಭಾಷೆಯನ್ನು ಬಳಸಿಕೊಂಡ ರತ್ನನ ಪದಗಳ ಎರಡು ಉದಾಹರಣೆ ಗಮನಿಸಬಹುದು.

ಯೆಂಡ ಯೆಂಡ್ತಿ, ಕನ್ನಡ ಪದಗೊಳ್
ಅಂದ್ರೆ ರತ್ನಂಗ್ಪ್ರಾಣ
ಬುಂಡೇನ್ಎತ್ತಿ ಕುಡದ್ಬುಟ್ಟಾಂದ್ರೆ
ತಕ್ಕೊ ಪದಗಳ್ಬಾಣ

ಇದು ಒಂದು ರೀತಿಯ ವಿನ್ಯಾಸ. ಇಲ್ಲಿ ಮೊದಲ ಗಣ ಮೂರು (ಯೆಂಡ = –⋃ ) ಮಾತ್ರೆಗಳ ಗಣದಂತಿದ್ದರೂ ಪದದ ಕೊನೆಯಕ್ಷರ ದೀರ್ಘೀಕರಣಗೊಂಡು ನಾಲ್ಕು ಮಾತ್ರೆಗಳ ಗಣ ಆಗುತ್ತದೆ – ಯೆಂಡ್ತಿ ಎಂಬ ಎರಡನೆಯ ಗಣವೂ ಅಷ್ಟೆ. ಎರಡನೆ ಸಾಲಿನಲ್ಲಿ ಮತ್ತೆ (ಅಂದ್ರೆ = – ⋃) ಮೊದಲ ಗಣದ ಕೊನೆಯ ವರ್ಣ ದೀರ್ಘೀಗೊಂಡು ನಾಲ್ಕು ಮಾತ್ರೆಗಳಾಗುತ್ತವೆ. ಮೂರನೆಯ ಸಾಲಿನಲ್ಲಿ ಮೊದಲ ಗಣ ನಾಲ್ಕು ಮಾತ್ರೆಗಳದು; ಎರಡನೆಯದು ಮತ್ತೆ ದೀರ್ಘೀಕರಣದ ಕಾರಣ (ಎತ್ತಿ = – –) ನಾಲ್ಕು ಮಾತ್ರೆಗಳ ಗಣವಾಗುತ್ತವೆ ಎಂದೂ ಉಚ್ಚರಿಸಬಹುದು – ಅನಂತರ ಕುಡದ್ಬುಟ್ಟಾಂದ್ರೆ (– – + – ⋃) ಮೂರು ಐದು ಮಾತ್ರೆಗಳ ಗಣಗಳು ಎಂದೂ ಇಲ್ಲಿನ ಕೊನೆಯಕ್ಷರ ದೀರ್ಘಗೊಂಡು ನಾಲ್ಕು ಮಾತ್ರೆಗಳಾಗುವುದೆಂದೂ ತಿಳಿಯಬಹುದು.

ಅಂದರೆ, ಗೇಯತೆಗಾಗಿ ಇಲ್ಲಿ ಮೂರು ಮಾತ್ರೆಗಳ ಗಣಗಳನ್ನು ನಾಲ್ಕು ಮಾತ್ರೆಗಳ ಗಣಗಳಾಗಿಸಿವೆಯೆಂದಂತೆಯೇ ಕುಡುಕನ ಭಾಷೆಯಲ್ಲಿರುವ ತೊದಲಿನಿಂದ ಈ ದೀರ್ಘತ್ವ ಪ್ರಾಪ್ತವಾಗುತ್ತದೆಂದು ಭಾವಿಸಿ ಇಲ್ಲಿನ ಅಭಿವ್ಯಕ್ತಿಗೆ ಕುಡುಕದ ಭಾಷೆಯ ಸಾಧ್ಯತೆ ಪ್ರಾಪ್ತವಾಗಿದೆ ಎಂದು ತಿಳಿಯಬಹುದೋ ಏನೋ! ಕವಿ ಪ್ರಯೋಗ ಇಥ ಸಾಧ್ಯತೆಗಳಿಗೆ ಅವಕಾಶ ಮಾಡಿಕೊಡುವುದು ಪ್ರತಿಭೆಯ ಪುಟ್ಟ ಆಟ!

ಉತ್ತರ ಕನ್ನಡದ ಜಾನಪದ ಭಾಷೆಗಿಳಿದಾಗ ಇದರ ಲಯದ ಸ್ವಾದವೇ ಬೇರೆಯಾಗಿ ಬೀಡುತ್ತದೆ-

ಟೊಂಕದ ಮೆಲೆ ಕೈ ಇಟಗೊಂಡು
ಬಿಂಕದಾಕಿ ಯಾರ ಈಕಿ
ಒಂಕೀ ತೋಳ ತೋಳರಸತಾಳ
ಸುಂಕದ ಕಟ್ಟುವಗ

ಇಲ್ಲಿನ ಓಟದ ಸೋಗಸೇ ಬೇರೆ ರೀತಿಯದು. ಮೊದಲ ಸಾಲಿನ ಎರಡನೆಯ ಗಣ ಮೇಲೆ (– ⋃+) ಮೂರು ಮಾತ್ರೆಗಳದಾದರೂ ನಾಲ್ಕು ಮಾತ್ರೆಗಳ ಕಾಲವನ್ನು ತುಂಬುತ್ತದೆ, ದೀರ್ಘಕರಣಗೊಂಡು – ಹಾಗೆಯೇ ಕೈಇಟಗೊಂಡು ಎಂಬಲ್ಲಿನ ಗೊಂಡು (– ⋃) ಮೂರು ಮಾತ್ರೆಗಳ ಗಣವೂ ನಾಲ್ಕು ಮಾತ್ರೆಗಳಾದಾಗಿ ಬಿಡುತ್ತದೆ, ಇದು ಗ್ರಾಮ್ಯಕ್ಕೆ ಮಾತ್ರ ಹೊಂದುವಂಥದ್ದು ಎನ್ನುವಂತಿಲ್ಲ – ಇಂಗ್ಲಿಷ್‌ ಗೀತಗಳಲ್ಲೇ ಇಂಥ ಪ್ರಯೋಗ ಅರ್ಥಪೂರ್ಣವಾಗಿ ಬಂದಿರುವುದನ್ನು ಗಮನಿಸಿ:

ಹೇಳೆಲೆ ಹಕ್ಕಿ ಚೆಲುವನು ಸಿಕ್ಕಿ ೪ ೩ ೪ ೩
ನನಗೆ ಮದುವೆಯೆಂದು  ೩ ೩ ೩ +೧

ಹಕ್ಕಿ, ಸಿಕ್ಕಿ ಎಂಬ ಪದಗಳ ಕೊನೆಯ ಸ್ವರ ದೀರ್ಘಕರಣಗೊಂಡು ನಾಲ್ಕು ಮಾತ್ರೆಗಳ ಗಣಗಳ ಸ್ಥಾನದಲ್ಲಿ ಮೂರು ಮಾತ್ರೆಗಳ ಗಣಗಳನ್ನರಿಸಿ ಅರ್ಥಕ್ಕೂ ಲಯಕ್ಕೂ ಭಂಗವಾಗಂಥ ಸಾಧನೆ- ಛಂದಸ್ಸಿನ ನಿಯಮವನ್ನು ಮುರಿದದ್ದು ಆಗಿದೆ; ವೈವಿಧ್ಯವನ್ನು ಸಾಧಿಸಿದುದೂ ಆಗಿದೆ ಅಲ್ಲವೆ? ಯೆಂಡ ಕುಡುಕನ ಭಾಷೆಯಲ್ಲಿ ಈ ನಾಲ್ಕು ಮಾತ್ರೆಗಳ ಗಣ ವಿನ್ಯಾಸದ ಒಯ್ಯಾರವನ್ನು ಗಮನಿಸಿ:

ಮಡಕೇರೀಲಿ ರತ್ನ ⋃⋃ – – ⋃ – ⋃
ಕಂಡ ಒಸಾಮತ್ನ – ⋃⋃ – – ⋃
ಮಡಕೇರಿಲಿ ಮಡಿಕೆಯೆಂಡ ⋃⋃ – ⋃⋃⋃⋃⋃ – ⋃
ಈರ್ದೀದ್ರ್ ಅಲ್ಲೀಗ್‌ ಓದ್ದೂ ದಂಡ – – – – – – – ⋃
ಅಂದಿ ರತ್ನ ಪಡಕಾನೆಗೆ – ⋃ – ⋃⋃⋃ – – ⋃
ಓಂಟಿ, ಬೆಟ್ಟದ ನೆತ್ತಿ ಮೇಗೆ – ⋃ – ⋃ ⋃ – ⋃ – ⋃
ಓಯ್ಯಿದ್ದಂಗೆ ನಿಂತ! – – – ⋃ – ⋃
ಕಲ್ಲಾಡಂಗೆ ಕುಂತ! – – – ⋃ – ⋃

ಮೊದಲ ಸಾಲಿನಲ್ಲಿ ಮೇಲುನೋಟಕ್ಕೆ ಏಳು ಮಾತ್ರೆಗಳು (ಮಡಕೇರೀಲಿ = ⋃⋃ – – ⋃) ಮತ್ತೆ ಮೂರು ಮಾತ್ರೆಗಳು (ರತ್ನ = – ⋃) ಇರುವ ಗಣಗಳು ಎಂಬಂತೆ ಭಾಸವಾದರೂ ಎಂಟು ಮತ್ತು ನಾಲ್ಕು ಮಾತ್ರೆಗಳಿಗೆ ಪರ್ಯಾಯವಾಗಿ ಬಂದು ಲಯ ಕೆಡದಂತಾಗಿದೆ. ಹಾಗೆಯೇ ಮುಂದಿನ ಸಾಲಿನಲ್ಲೂ ಮೂರು ಮಾತ್ರೆಗಳಂತೆ ಭಾಸವಾಗುವ (ಕಂಡ = – ⋃), (ಒಸಾ = ⋃ –), (ಮತ್ನ = – ⋃) ಗಣಗಳು ದೀರ್ಘೀಕರಣದಿಂದ ನಾಲ್ಕು ಮಾತ್ರೆಗಳಂತೆ ಆಗಿ ಲಯಭಂಗಗೊಳ್ಳದಂತಾಗಿದೆ. ಮುಂದಿನ ಸಾಲಿನಲ್ಲಿಯೂ ಇದೇ ದೀರ್ಘೀಕರಣ ಕ್ರಿಯೆ ನಡೆದು ನಾಲ್ಕು ಮಾತ್ರೆಗಳ ನಾಲ್ಕು ಗಣಗಳು ರೂಪುಗೊಳ್ಳುತ್ತವೆ. ಮುಂದಿನ ಸಾಲಿನಲ್ಲಿ ಕೊನೆಯ ಗಣವೇ ದೀರ್ಘೀಕರಣಕ್ಕೆ ಒಳಗಾಗುವುದು – ಮುಂದಿನ ಸಾಲಿನಲ್ಲೂ ಒಂದು, ಎರಡು ಮತ್ತು ನಾಲ್ಕನೇ ಗಣಗಳು ದೀರ್ಘೀಕರಣದಿಂದ ಲಯಾನ್ವಿತವಾಗುತ್ತವೆ.

ಅದರ ಮುಂದಿನ ಸಾಲೂ ಅಷ್ಟೇ. ಮೊದಲ ಮೂರನೆ ಮತ್ತು ನಾಲ್ಕನೆ ಗಣಗಳು ದೀರ್ಘೀಕರಣಗೊಳ್ಳುತ್ತವೆ. ಮುಂದಿನೆರಡು ಸಾಲುಗಳಲ್ಲಿ ನಾಲ್ಕು ಮಾತ್ರೆಗಳ ಎರಡು ಗಣಗಳು , ಮೇಲೆ ಒಂದು ಮುಡಿಯಾಗುವ ಗಣ ಬಂದಿವೆ.

ನ್ಯಾಷ್‌ ಕವಿಯ ಅನುವಾದಿತ ಕವನವಾದ ‘ವಸಂತ’ ದಲ್ಲಿ ಶ್ರೀಯವರು ನಾಲ್ಕು ಮಾತ್ರೆಗಳ ಗಣ ವಿನ್ಯಾಸದಲ್ಲಿ ತಂದಿರುವ ವೈವಿಧ್ಯ ರೋಮಂಚಕಾರಿಯಾದುದು. ಇಡೀ ಕವ್ನ ತನ್ನ ಲಯ ವಿನ್ಯಾಸದಲ್ಲಿ ತೋರುವ ಬೆಡಗು ಗಮನಾರ್ಹವಾದದ್ದು, ನಿಜವಾಗಿ ನೋಡಿದರೆ ಈ ಕವಿತೆ ನಿಧಾನವಾಗಿ ಅಂಶಗಣದತ್ತಲೂ ಒಲೆಯುವಂತೆ ತೋರುತ್ತದೆ. ಇದರ ಗೇಯತೆಯಂತು ವಸಂತದ ಕುಣಿತದಷ್ಟೇ ಉಲ್ಲಾಸಕರವಾದದ್ದು. ಉದಾಹರಣೆಗಾಗಿ ಕೇವಲ ಮೊದಲ ನಾಲ್ಕು ಸಾಲುಗಳನ್ನಷ್ಟೇ ವಿಶ್ಲೇಷಣೆಗೆ ತೆಗೆದು ಕೊಳ್ಳಲಾಗಿದೆ.

ವಸಂತ ಬಂದ ಋತುಗಳ ರಾಜ ತಾ ಬಂದ,
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ
ಕೂವೂ, ಜಗ್ಜಗ್‌, ಪುವ್ವೀ, ಟೂವಿಟ್ಟವೂ

ಇಲ್ಲಿಯ ವಿನ್ಯಾಸವನ್ನು ಹೀಗೂ ಲಯನುಸಾರಿಯಾಗಿ ಬರೆಯಹುದು. ಏಳು ಸಾಲುಗಳಾಗಿ,

ವಸಂತ ಬಂದ,
ಋತುಗಳ ರಾಜ ತಾ ಬಂದ
ಚಿಗುರನು ತಂದ
ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ
ಹಕ್ಕಿಗಳುಲಿಗಳೆ ಚೆಂದ
ಕೂವೂ, ಜಗ್ಜಗ್‌, ಪುವ್ವೀ, ಟೂವಿಟ್ಟವೂ !

ಇಲ್ಲಿರುವ ಕೊನೆಯ ಸಾಲಿನ ನಾಲ್ಕು ಮಾತ್ರೆಗಳು ನಾಲ್ಕು ಗಣಗಳಾದ ಮೇಲೆ ಒಂದು ಲಘು ಮತ್ತೆ ಯತಿಯಾಗುವ ಗುರುವಿನಿಂದ ಕೂಡೀ ಇಡೀ ಪದ್ಯದ ನಾಲ್ಕು ಮಾತ್ರೆಗಳ ಗಣ (ಮಂದಾನಿಲ ಲಯದ) ನಿಯಂತ್ರಣ ಮಾಡುತ್ತ ಹೋಗುತ್ತದೆ.