‘ಲಯವೂ ಅದರ ಪರಿವಾರವೂ’ – ಕೃತಿಯನ್ನು ನಿಮ್ಮ ಮುಂದಿಡುವುದಕ್ಕೆ ಪ್ರಧಾನವಾಗಿ ಕಾರಣರಾದವರು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು.

ಹಿಂದೆ ‘ದೇವಗಂಗೆ’ – ಅಭಿನಂದನ ಗ್ರಂಥಕ್ಕಾಗಿ ‘ಛಂದಸ್ಸು ಅದರ ನಿಯಮ ಹಾಗೂ ಸ್ವಾತಂತ್ರ್ಯ’ ಲೇಖನವನ್ನು ಬರೆದಿದ್ದೆ. ಕರ್ನಾಟಕ ವಿಶ್ವವಿದ್ಯಾಲಯ ಹೈದರಾಬಾದಿನಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣಕ್ಕೆ ‘ಲಕ್ಷ್ಮೀಶ ಕವಿಯ ಸಾಧನೆ ಛಂದಸ್ಸಿನಲ್ಲಿ’ ಎಂಬ ಪ್ರಬಂಧ ರಚಿಸಿದ್ದೆ. ಬೆಂಗಳೂರು ವಿಶ್ವವಿದ್ಯಾಲಯ ಏರ್ಪಡಿಸಿದ್ದ ‘ಹೊಸಗನ್ನಡ ಕಾವ್ಯದ ಎರಡು ಮಾರ್ಗಗಳು’ ಎಂಬ ವಿಚಾರ ಸಂಕೀರಣದಲ್ಲಿ ಮಂಡಿಸಿದ್ದ ಪ್ರಬಂಧ ‘ನವ್ಯಕಾವ್ಯದಲ್ಲಿ ಛಂದಸ್ಸು’, ಬೆಂಗಳೂರು ವಿಶ್ವವಿದ್ಯಾಲಯ ಈಗೆರಡು ವರ್ಷಗಳಗೆ ಮುನ್ನ ಏರ್ಪಡಿಸಿದ್ದ ವಿಚಾರ ಸಂಕೀರಣದಲ್ಲಿ ಸಾದರಪಡಿಸಿದ ಪ್ರಬಂಧ – ‘ಕುಮಾರವ್ಯಾಸನ ಸಾಧನೆ- ಭಾಮಿನಿ ಷಟ್ಪದಿಯಲ್ಲಿ’.

ಈ ಲೇಖನಗಳು ಎಲ್ಲೆಲ್ಲಿಯೊ ಚದುರಿಹೋಗಿದ್ದವು. ಅವುಗಳನ್ನು ಸಂಗ್ರಹಿಸುವಲ್ಲಿ ನೆರವಾದವರು ಪ್ರೊ. ವೀರಣ್ಣ ರಾಜೂರ, ಪ್ರೊ. ಕಿ.ರಂ. ನಾಗರಾಜ ಮತ್ತು ಅದರಂಗಿ ರುದ್ರೇಶ್‌ ಇವರಿಗೆ ನಾನು ಕೃತಜ್ಞ.

ಇದರ ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯ ಏರ್ಪಡಿಸಿದ್ದ ವಿಶೇಷೋಪನ್ಯಾಸದಲ್ಲಿ ಮತ್ತೆ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ವಿಶೇಷೋಪನ್ಯಾಸದಲ್ಲಿ ‘ಲಯ ಒಂದು ವಿವೇಚನೆ’ ಎಂದು ಮಾತನಾಡಿದ್ದೆ. ಆದರೆ ಛಂದಸ್ಸಿಗೆ ಸಂಬಂಧಿಸಿದಂತೆಯೆ ಗ್ರಂಥವೊಂದನ್ನು ಪ್ರಕಟಿಸುವ ಯೋಜನೆ-ಯೋಚನೆ ಬಂದದ್ದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಪ್ರೀತಿ, ಅಭಿಮಾನಗಳನ್ನು ಒಟ್ಟೊಟ್ಟಿಗೆ ಬಳಸಿ ಒತ್ತಾಯ ತಂದಾಗ.

ಲಯವನ್ನು ಕುರಿತ ಪ್ರಬಂಧ ರಚನೆಯಿಂದ ಒಂದು ಕತೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ವಚನಕಾರರ ಬಗೆಗೆ ಮಾತಾಡುತ್ತ ವಚನಗಳ ಲಯವನ್ನು ಕುರಿತು ಮಾತನಾಡಿದ್ದೆ. ಆ ಬಗ್ಗೆ ಅಂದಿನ ಅಕಾಡೆಮಿ ಅಧ್ಯಕ್ಷರ ಮೆಚ್ಚುಗೆಯೂ ದೊರೆಯಿತು. ಪ್ರಬಂಧವನ್ನು ಬರೆದು ಮುಗಿಸುಬೇಕೆನ್ನುವಷ್ಟರಲ್ಲಿ ಚಿತ್ರದುರ್ಗದಲ್ಲಿ ಹೊಸದಾಗಿ ಆರಂಭವಾದ ಸರ್ಕಾರಿ ಕಲಾಕಾಲೇಜಿನ ಪ್ರಾಚಾರ್ಯನಾಗಿ ನೇಮಕಗೊಂಡೆ. ಕಾಲೇಜಿನ ಜವಾಬ್ದಾರಿಯ ಜೊತೆಗೆ ನನ್ನ ಅಂದಿನ ಗೃಹಿಣಿ ಶ್ರೀಮತಿ ಟಿ. ಆರ್‌. ಲಲಿತಳ ಅರೋಗ್ಯ ಹದೆಗೆಟ್ಟು ಬರೆವಣಿಗೆ ಮೂಲೆ ಗುಂಪಾಯಿತು. ಇಷ್ಟರಲ್ಲಿ ಸೇಡಿಯಾಪು ಕೃಷ್ಣಭಟ್ಟರ ‘ಛಂದೋಗತಿ’ ಪ್ರಕಟವಾಯಿತು.

ಅಲ್ಲಿಯ ವಿವರಗಳನ್ನು ಅಧಿಕೃತವಾಗಿ ವಿಶ್ಲೇಷಿಸುವವರೆಗೆ ಬರೆಯಬಾರದೆಂದುಕೊಂಡೆ. ಈ ಮಧ್ಯೆ ಶೂನ್ಯ ಸಂಪಾದನೆಗಳು ಮತ್ತು ವಚನ ಸಾಹಿತ್ಯವನ್ನು ಕುರಿತ ಚಿಂತನೆ ಹಾಗೂ ಪ್ರಕಟಣೆಗಳಲ್ಲಿ ಕಾಲ ಹೋದದ್ದೇ ತಿಳಿಯಲಿಲ್ಲ.

ಹೀಗಿರುವಾಗ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಅವರ ಪ್ರೀತಿಯ ಒತ್ತಾಯವಾಯಿತು. ಅವರಾದರೋ ಪ್ರೀತಿ ಮತ್ತು ಅಭಿಮಾನಗಳನ್ನು ಒಟ್ಟೊಟ್ಟಾಗಿಯೇ ಬಳಸಿ ಒತ್ತಡ ಹೇರಿದರು. ಆ ಕಾರಣವಾಗಿಯೇ ಲಯ, ಲಘು, ಗುರು, ಯತಿ, ಗಣ- ಮೊದಲಾದುವುಗಳನ್ನು ಕುರಿತು ಪ್ರತ್ಯೇಕವಾಗಿಯೇ ಬರೆದು ಈ ಕೃತಿಯನ್ನು ಸಿದ್ಧಪಡಿಸಲಾಯಿತು. ಅನುಬಂಧದಲ್ಲಿ ಕೆಲವು ಪ್ರಮುಖ ಆಕರ ಗ್ರಂಥಗಳ ಪಟ್ಟಿಯಿದೆ.

ಈ ಕೃತಿಯ ಕರಡನ್ನು ತಿದ್ದುವಲ್ಲಿ ನೆರವಾದ ಪ್ರೊ. ಅದರಂಗಿ ರುದ್ರೇಶ್‌ ಇತ್ತ ನೆರವನ್ನು – ಪ್ರೊ. ಮಲ್ಲೇಪುರಂ ಅವರೂ ಅಂತಿಮ ಕರಡನ್ನು ತಿದ್ದಿದ್ದಾರೆ – ಅವರ ನೆರವನ್ನು – ಡಿ.ಟಿ.ಪಿ. ಮಾಡಿದ ಶ್ರೀ ಎಂ. ಮಹೇಶ್‌ ಅವರನ್ನು – ಮುದ್ರಣ ಮಾಡಿದ ಸ್ನೇಹಾ ಪ್ರಿಂಟರ್ಸ್ ಅವರನ್ನು ಪ್ರಕಟಪಡಿಸುತ್ತಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಪ್ರೊ. ಬಿ.ಎ. ವಿವೇಕ ರೈ ಮತ್ತು ಈಗಿನ ಕುಲಪತಿ ಪ್ರೊ. ಎ. ಮುರಿಗೆಪ್ಪ ಇವರಿಬ್ಬರನ್ನು ಅತ್ಯಂತ ಪ್ರೀತಿಯಿಂದ ನೆನೆಯುತ್ತೇನೆ.

ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ