ಮೂರು ಮಾತ್ರೆಗಳ ನಾಲ್ಕು ಗಣಗಳು ಮೊದಲ ಸಾಲಿನಲ್ಲಿದ್ದು ಎರಡನೇ ಸಾಲಿನಲ್ಲಿ ನಾಲ್ಕು ಮತ್ತು ಮೂರು ಮಾತ್ರೆಗಳಿರುವ ವಿನ್ಯಾಸಗಳೂ ಇವೆ. ಉದಾಹರಣೆಗೆ ಗಮನಿಸಿ:

ನನ್ನ ನಿನ್ನ ನಡುವೆ ಹೇಗೆ ೩, ೩, ೩, ೩
ತೊಡಕಿದು ಬಂತು? ೪, ೩

ಇಲ್ಲಿಯ ವಿನ್ಯಾಸದಲ್ಲಿ ಎರಡನೆಯ ಸಾಲಿನ ಗಣಗಳು ಭಿನ್ನವಾದರೂ ಲಯದಲ್ಲಿ ಹಾಗೇ ಅರ್ಥದಲ್ಲಿ ವೈವಿಧ್ಯಕ್ಕೆ ಕಾರಣವಾಗಿವೆ. ಇಂಥ ವಿಭಿನ್ನ ವಿನ್ಯಾಸಗಳ ಸಾಧ್ಯತೆಯನ್ನು ನಿರ್ಧರಿಸುವುದು ಲಯದ ಮೇಲಿನ ಪ್ರಭುತ್ವ ಹಾಗೂ ಪ್ರಾತಿಭ ಸತ್ವ ಅಷ್ಟೇ. ಉತ್ಸಾಹ ರಗಳೆ ಎಂಬ ಛಂದವನ್ನು ಪಂಪನೂ ಬಳಸಿದ್ದಾನೆ, ಹರಿಹರನೂ ಬಳಸಿದ್ದಾನೆ. ಅವುಗಳ ಒಂದೊಂದು ಉದಾಹರಣೆಯನ್ನು ಇಲ್ಲಿ ಗಮನಿಸಬಹುದು.

ನನೆಯ ಕೊನೆಯ ತಳಿರ ಮುಗುಳವನಲತಾನಿಕುಂಜದಿಂ
ಪ್ರಸೂನರಜದಪುಂಜದಿಂ

ಇಲ್ಲಿ ಮೂರು ಮಾತ್ರೆಗಳ ಹನ್ನೊಂದು ಗಣಗಳೂ ಮತ್ತೆ ಕೊನೆಗೆ ಒಂದು ಗುರುವೂ ಇದೆ. ಇದರ ಜೊತೆಗೆ ಇದರ ಒಳರಚನೆ ಕೂಡ ವಿಭಿನ್ನ – ಪಂಪ ಮೂರು ಮಾತ್ರೆಗಳ ಎಂಟು ಗಣಗಳು ಮತ್ತು ಮೂರು ಮಾತ್ರೆಗಳ ಮೂರು ಗಣಗಳು, ಮೇಲೆ ಒಂದು ಗುರು ಎಂಬಂತೆಯೂ ಓದಬಹುದಾದ ಸಾಧ್ಯತೆಯನ್ನು ಕಂಡಂತಿದೆ. ಅದಕ್ಕೆ ಕಾರಣ ಅಪಭ್ರಂಶದ ರಘಟ – ಛಂದಸ್ಸನ್ನು ಆತ ಪಳಗಿಸುತ್ತಿರುವುದು, ಕನ್ನಡದ ಜಾಯಮಾನಕ್ಕೆ. ಆದರೆ ಹರಿಹರನ ಉತ್ಸಾಹ ರಗಳೆ ವಿನ್ಯಾಸ ಪಂಪನಿಗಿಂತ ಭಿನ್ನವಾಗಿರುವುದು ಹೀಗೆ:

ಇಂತು ಮಾಡಿದಯ್ಯಯೆನ್ನ ತಂದೆ ಭವಿಗಳಲ್ಲಿ ಕೂಡಿ
ಕಂತುವೈರಿ ನಿಮಗೆ ಭಕ್ತಿ ಮಾಡಲಿಲ್ಲದಂತೆ ಮಾಡಿ

ಇಲ್ಲೆಲ್ಲ ಉತ್ಸಾಹ ರಗಳೆಯು ಆದಿ ಮತ್ತು ಅಂತ್ಯಪ್ರಾಸವನ್ನೊಳಗೊಂಡು ಮೂರು ಮೂರು ಮಾತ್ರೆಗಳ ಎಂಟು ಗಣಗಳಿಂದ ಯೋಜಿತವಾಗಿದ್ದು ಪಾದದ ಕೊನೆಯ ಗಣವೇ ಯತಿಸ್ಥಾನವಾಗಿರುವುದನ್ನು (ಸಾಮಾನ್ಯವಾಗಿ) ಗಮನಿಸಬಹುದು. ಇದೇ ರಗಳೆ ಹೊಸಗನ್ನಡಕ್ಕೆ ಬಂದಾಗ ಶ್ರೀಯವರಲ್ಲಿ ಬಳಕೆಯಾದ ರೀತಿಯನ್ನು ಗಮನಸಿ:

ಹಿಡಿದು ಮಂಜು ಬೀಳುತ್ತಿತ್ತು ಚುಕ್ಕಿ ಕಣ್ಣು ಮಿಟುಕುತ್ತಿತ್ತು;
ಕುಡಿಯೊ ಕಂದ, ಕುಡಿಯೊಎಂದು ನುಡಿವ ಮಾತು ಕಿವಿಗೆ ಬಿತ್ತು

ಇಲ್ಲಿಯೂ ಮೂರು ಮಾತ್ರೆಗಳ ಎಂಟು ಗಣಗಳೇ ಇದ್ದು ಪಾದದ ಕೊನೆಯ ಗಣವೇ ಯತಿಸ್ಥಾನವಾಗಿದೆ. ಇಲ್ಲಿ ಆದಿಪ್ರಾಸವೂ ಇದೆ; ಅಂತ್ಯಪ್ರಾಸ ಇರಬಹುದು; ಇಲ್ಲದಿರಬಹುದು.

ಇದೇ ರೀತಿಯ ವಿನ್ಯಾಸ ಕುವೆಂಪು ಅವರ ‘ಶ್ರೀಸ್ವಾತಂತ್ರ್ಯೋತ್ಸವ ಮಹಾ ಪ್ರಗಾಥ’ದ ಒಂದು ಖಂಡದಲ್ಲಿ ಬಳಕೆಯಾಗಿರುವುದು ಹೀಗೆ:

ಏಳುತಾಯಿ ಬಾಳುತಾಯಿ ಜಗತ್sಲ್ಯಾಣಿ:
ಯುಗಯುಗಾಯು ಜಗವನಾಳು, ಧರ್ಮಚಕ್ರಪಾಣಿ

ಇಲ್ಲಿಯ ವಿನ್ಯಾಸವೂ ಪ್ರತಿ ಪಂಕ್ತಿಯಲ್ಲಿ ಮೂರು ಮಾತ್ರೆಗಳ ಎಂಟು ಗಣಗಳೇ ಆಗಿದ್ದರೂ ಮೊದಲ ಸಾಲಿನ ಆರು ಗಣಗಳಾದ ಮೇಲೆ ‘ಕs’ ಪ್ಲುತವಾಗಿ ದೀರ್ಘೀಕರಣಗೊಂಡು ಮೂರು ಮಾತ್ರೆಗಳ ಗಣವಾಗಿದೆ. ಅಂತ್ಯಪ್ರಾಸವಿದೆ; ಆದರೆ ಆದಿಪ್ರಾಸ ಇಲ್ಲ.

ಇನ್ನೊಂದು ರೀತಿಯ ಗಣವಿನ್ಯಾಸ ಮೂರು ಮಾತ್ರೆಗಳ ಗಣದಲ್ಲಿ ಪೈಗಳವರ ಕವಿತೆಯಲ್ಲಿ ಹೀಗೆ ಬಂದಿದೆ.

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮ ಜಾತೆಯೆ
ನಮ್ಮ ತಪ್ಪನೆನಿತೊ ತಾಳ್ವೆ
ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ
ನಿನ್ನ ಕರೆಯಲಮ್ಮೆವು
ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು.

ಇಲ್ಲಿ ಮೊದಲನೆ ಸಾಲು ಎರಡನೆ ಸಾಲು ಹಾಗೂ ಏಳನೇ ಸಾಲು – ಇಷ್ಟರಲ್ಲಿ ಮೂರು ಮಾತ್ರೆಗಳ ಏಳು ಗಣಗಳು ಮತ್ತು ಒಂದು ಗುರುವಿದೆ. ಆಶ್ಚರ್ಯವೆಂದರೆ ಇಲ್ಲಿಯ ಒಂದೊಂದು ಸಾಲು ‘ರಸವೆ ಜನನ ವಿರಸ ಮರಣ ಸಮರಸವೇ ಜೀವನ’ ಎಂಬ ಮೂರು ಸಾಲಿನಲ್ಲಿ ವಿನ್ಯಾಸಗೊಂಡಿರುವ ಗಣವಿನ್ಯಾಸದಂತೆಯೇ ಇವೆ. ಅಂದರೆ ಮೂರು ಸಾಲಿನ ವಿನ್ಯಾಸವನ್ನು ಒಂದೇ ಸಾಲಿನಲ್ಲಿ ಇಲ್ಲಿ ಕಾಣಬಹುದು.

ಇದಾದ ಮೇಲೆ ಹತ್ತು ಖಂಡಗಳಿರುವ ಮಂಜೇಶ್ವರದ ಗೋವಿಂದ ಪೈಗಳವರ ಕವಿತೆಯಲ್ಲಿ ವಿನ್ಯಾಸ ಇಲ್ಲಿ ವಿಭಿನ್ನ. ಮೊದಲ ಎರಡು ಸಾಲುಗಳು ಮತ್ತು ಏಳನೇ ಸಾಲಿನ ವಿನ್ಯಾಸ ಒಂದೇ ರೀತಿಯದು. ಆದರೆ ಎರಡು ಸಾಲುಗಳಾದ ಮೇಲೆ ಬರುವ ನಾಲ್ಕು ಸಾಲುಗಳ ವಿನ್ಯಾಸವೂ ಒಂದೇ ರೀತಿ. ಆದರೆ, ಇಲ್ಲಿಯ ಮೂರು ಮಾತ್ರೆಗಳ ಗಣಗಳ ಸಂಯೋಜನೆಯಲ್ಲಿ ವಿವಿಧತೆಯಿದೆ. ನಾಲ್ಕು ಮಾತ್ರೆಗಳು ಮತ್ತು ಎರಡು ಮಾತ್ರೆಗಳ ಗಣಗಳಿಂದ ಕೂಡಿದ ಮೂರು ಮಾತ್ರೆಗಳ ಎರಡು ಗಣಗಳಾಗಿಸುವ ವಿನ್ಯಾಸ (‘ನುಡಿ ಕನ್ನಡ’) ಹನ್ನೆರಡು ಮಾತ್ರೆಗಳ ವಿನ್ಯಾಸ ‘ನಂದನಂದನನಿಲ್ಲಿಂದ’ ಮೂರು ಮತ್ತು ಆರು ಮಾತ್ರೆಗಳ ವಿನ್ಯಾಸ ಹೊಸತು ಕಿನ್ನರಿಯಲಿ (⋃⋃⋃ – ⋃⋃⋃⋃) ಎರಡು ಮಾತ್ರೆ ಮತ್ತು ಹತ್ತು ಮಾತ್ರೆಗಳ (ಹೊಸ ಸುಗಂಧಗೊಸಗೆಯಿಂದ = ⋃⋃⋃ – ⋃⋃⋃⋃ – ⋃) ಹೀಗೆ ಗಣವಿಪರ್ಯಯವಾಗಿರುವುದನ್ನು ಗಮನಿಸಬಹುದು.

ಮೂರು ಮಾತ್ರೆಗಳ ಗಣವಿನ್ಯಾಸದಲ್ಲಿ ಸಾಲು ಸಾಲುಗಳಲ್ಲಿ ಗಣಗಳ ಸಂಖ್ಯೆ ವಿಭಿನ್ನವಾಗುತ್ತ ವಿವಿಧತೆ ಪಡೆಯುವ ಒಂದು ಕ್ರಮದ ಉದಾಹರಣೆ ಗಮನಸಿ:

ಅನಂತದಿಂ ⋃ – ⋃ –
ದಿಗಂತದಿಂ ⋃ – ⋃ –
ಅನಂತತಾ ದಿಗಂತದಿಂ ⋃ – ⋃ – ⋃ – ⋃ –
ನೋಡೆನೋಡೆ ಮೂಡಿತೊಂದು – ⋃ – ⋃ – ⋃ – ⋃
ಮೋಡ ಗೋಪುರ – ⋃, – ⋃⋃
ಗಿರಿಯ ಬಿತ್ತರ ⋃⋃⋃ – ⋃⋃
ಶಿಖರದೆತ್ತ ⋃⋃⋃ – ⋃⋃
ಅನುಭವಿಸುವ ರಸಋಷಿಮತಿಗತಿಮಹತ್ತರ ⋃⋃⋃⋃⋃⋃⋃⋃⋃⋃⋃⋃⋃⋃⋃ – ⋃ –

ಐದು ಪದ್ಯ ಖಂಡಗಳಿರುವ ಈ ಪದ್ಯದಲ್ಲಿ ಖಂಡ ಖಂಡಗಳ ಪದವಿನ್ಯಾಸ ಗಣವಿನ್ಯಾಸಗಳಲ್ಲಿ ಭಿನ್ನತೆಯಿರುವುದೇ ಅಲ್ಲದೆ – ಇಲ್ಲಿಯ ಎಂಟೂ ಸಾಲುಗಳ ಗಣ ವಿನ್ಯಾಸವೂ ವಿಶೇಷವಾಗಿರುವುದು ಗಮನಾರ್ಹ.

ಮೊದಲ ಎರಡು ಸಾಲುಗಳಲ್ಲಿ ದ್ವಿಲಗ ಲಯದ (⋃ – ⋃ –) ಎರಡೆರಡು ಮೂರು ಮಾತ್ರೆಗಳ ಗಣವಿದ್ದು ಲಯವನ್ನು ನಿರ್ವಹಿಸುತ್ತಿದ್ದರೆ ಮೂರನೆಯ ಸಾಲಿನಲ್ಲಿ ಮೂರು ಮಾತ್ರೆಗಳ ನಾಲ್ಕು ಗಣಗಳಿವೆ. ಐದು, ಆರು ಮತ್ತು ಏಳನೆಯ ಸಾಲುಗಳ ಗಣವಿನ್ಯಾಸ ಒಂದೇ ರೀತಿಯದು.

ಮೂರು ಮಾತ್ರೆಗಳ ಗಣ ಮತ್ತೆ ಮೂರು ಮಾತ್ರೆಗಳು ಮೇಲೊಂದು ಗುರು. ಎಂಟನೆಯ ಸಾಲಿನಲ್ಲಿ ಆರು ಮಾತ್ರೆಗಳ ಗಣ ಮತ್ತು ಹದಿಮೂರು ಮಾತ್ರೆಗಳ ಗಣವಿದೆ. ಆದರೆ ಇಲ್ಲಿಯ ಮೂರು ಮಾತ್ರೆಗಳ ಗಣವಿನ್ಯಾಸವೂ ವಿಶಿಷ್ಟ. ಆರು ಮಾತ್ರೆಗಳು (⋃⋃⋃⋃⋃⋃) ನಾಲ್ಕು ಮಾತ್ರೆಗಳು (⋃⋃⋃⋃) + ಎರಡು ಮಾತ್ರೆಗಳು ಮತ್ತು ಎರಡು ಮಾತ್ರೆಗಳು ಮತ್ತು ಎರಡು ಮಾತ್ರೆಗಳು ಮತ್ತು ಆರು ಮಾತ್ರೆಗಳು ಆಗಿ ವಿಭಿನ್ನವಾಗಿದೆ. ಕೊನೆಯ ಗಣವನ್ನು ಒಟ್ಟಾಗಿ ಹನ್ನೆರಡು ಮಾತ್ರೆಗಳು ಮತ್ತು ಗುರುವಾಗಿಯೂ ಉಚ್ಚರಿಸುವ ಸಾಧ್ಯತೆಯೂ ಇದೆ.

ಒಟ್ಟಿನಲ್ಲಿ ಲಯವೈವಿಧ್ಯಕ್ಕೆ ಮೂರು ಮಾತ್ರೆಗಳ ಗಣವಿನ್ಯಾಸಗಳ ಕೆಲವು ಮಾದರಿಗಳನ್ನು ಗಮನಿಸಿದೆವು.

ಇಲ್ಲಿ ಇನ್ನೂ ಒಂದು ವಿಶಿಷ್ಟ ಮಾದರಿಯಿದೆ. ಬಹುಶಃ ಗೇಯಛಂದಸ್ಸಿನಿಂದ ಪ್ರೇರಿತವಾದದ್ದು; ಮೂರು ಮಾತ್ರೆಗಳ ಮೂರೇ ಗಣಗಳ ಸಾಲುಗಳಿಂದ ವಿನ್ಯಾಸಗೊಂಡದ್ದು. ಇದನ್ನು ಗಮನಿಸಿ,

ಪಾತರಗಿತ್ತಿ ಪಕ್ಕ – ⋃⋃ – ⋃ – ⋃
ನೋಡಿದೇನೆ ಅಕ್ಕ            – ⋃ – ⋃ – ⋃
………..
ಇನ್ನು ಎಲ್ಲಿಗೋಟ             – ⋃ – ⋃ – ⋃
ನಂದನದ ತೋಟ            – ⋃⋃⋃ – ⋃

ಇಲ್ಲಿಯ ಛಂದಸ್ಸು ಮೂರು ಮಾತ್ರೆಗಳ ಗಣಗಳಿಂದಲೇ ಯೋಜಿತವಾಗಿ ನಮಗರಿವಿಲ್ಲದಂತೆ ಗೇಯಛಂದವಾಗಿ ರೂಪಾಂತರ ಪಡೆದುಕೊಳ್ಳುತ್ತಿದೆ. ಮಾತ್ರಾಗಣದಿಂದ ಅಂಶಗಣದತ್ತ ಒಲೆಯುವ ಇದರ ಲಯವಿನ್ಯಾಸದ್ದೇ ಒಂದು ವಿಶಿಷ್ಟ ಬೆಡಗು. ಇಂಥವೇ ಇನ್ನೂ ಹಲವು ವಿನ್ಯಾಸಗಳಿವೆ.

ನೂರು ಮರ
ನೂರು ಸ್ವರ
ಒಂದೊಂದೂ ಅತಿಮಧುರ
ಬಂಧವಿರದೆ ಬಂಧುರ
ಸ್ವಚ್ಛಂದ ಸುಂದರ

ಇಲ್ಲಿ ಮೊದಲೆರಡು ಸಾಲುಗಳಲ್ಲಿ ಮೂರು ಮಾತ್ರೆಗಳ ಎರಡು ಗಣಗಳಿವೆ. ಆದರೆ ಎರಡೂ ಸಾಲುಗಳ ಕೊನೆಯ ಎರಡು ಗಣಗಳೂ ದೀರ್ಘಿಕರಣಗೊಂಡಿವೆ. ಮೂರನೆಯ ಸಾಲಿನಲ್ಲಿ ಮೂರು ಮಾತ್ರೆಗಳ ನಾಲ್ಕು ಗಣಗಳಿದ್ದು; ಮೊದಲ ಗಣ ವಿನ್ಯಾಸ ಆರು ಮಾತ್ರೆಗಳು (– – – ಒಂದೊಂದು) ಎರಡನೆಯ ಆರು ಮಾತ್ರೆಗಳ ಗಣ ಕೂಡ ಕೊನೆಗೆ ದೀರ್ಘೀಕರಣಗೊಂಡು ಆರು ಮಾತ್ರೆಗಳದಾಗಿದೆ. ಅತಿಮಧುರ (⋃⋃ + ⋃⋃ –) ಮುಂದೆ ಬರುವ ನಾಲ್ಕನೆಯ ಸಾಲು ಮೂರು ಮಾತ್ರೆಗಳ ನಾಲ್ಕು ಗಣಗಳೂ ಆಗಬಹುದು, ‘ರ’ ಅಕ್ಷರ ‘ಪುತ’ಗೊಳ್ಳುವ ಕಾರಣದಿಂದ ಅಥವಾ ಮೂರು ಮಾತ್ರೆಗಳ ಮೂರು ಗಣಗಳು ಅನಂತರ ಯತಿಸ್ಥಾನದ ಗುರುವಾಗಿಯೂ ಇರಬಹುದು. ಕೊನೆಯ ಸಾಲು ಮತ್ತೆ ದೀರ್ಘೀಕರಣದ ಕಾರಣ ಆರು ಮಾತ್ರೆಗಳ ಗಣ (ಸ್ವಚ್ಛಂದ) (– – –) ಮತ್ತು ಸುಂದರ ಎಂಬ ನಾಲ್ಕು ಮಾತ್ರೆಗಳ ಒಂದು ಗಣ ಮತ್ತು ಯತಿಸ್ಥಾನ ವಾಗುವ ಗುರುವಿನಿಂದ ಕೂಡಿ ಆಗಿರಬಹುದು. ಇಲ್ಲವೆ ಸುಂದರ ಎಂಬಲ್ಲಿ ‘ರ’ ಪ್ಲುತಗೊಂಡು ಅದೂ ಒಂದು ಮೂರು ಮಾತ್ರೆಯ ಗಣ ಆಗಬಹುದು.

ಛಂದಸ್ಸಿನಲ್ಲಿರುವ ಈ ನಮ್ಯತೆ (flexibility) ಕವಿಯ ಪ್ರತಿಭೆಯ ಸತ್ವದ ಕಾರಣದಿಂದ ಸಾಧ್ಯವಾಗುತ್ತದೆಯೇ ಹೊರತು ಕುಕವಿಗಳಲ್ಲಿ ನಡೆಯುವ ಹಾಸ್ಯಾಸ್ಪದ ಮಾತ್ರಾಗಣತಿಯ ವ್ಯವಹಾರ ಆಗುವುದಿಲ್ಲ.

ಈ ಮೂರು ಮಾತ್ರೆಗಳ ಗಣವಿನ್ಯಾಸಗಳಲ್ಲಿ ಕೆಲವನ್ನು ಗಮನಿಸಿದಾಗ ಪಾದ ಸಂಖ್ಯೆಗಳನ್ನು ಪಾದಪಾದಗಳ ಗಣಸಂಖ್ಯೆಗಳನ್ನು ಆ ಗಣಗಳಲ್ಲಿ ವಿವಿಧತೆ ತರುವುದಕ್ಕಾಗಿ ಪ್ರತಿಭೆ ರೂಪಿಸುವ ಗಣಪರಿವೃತ್ತಿಗಳನ್ನೂ ಗಮನಸಿದರೆ ಬೆರಗಾಗುತ್ತದೆ.

ಆಶ್ಚರ್ಯವೆಂದರೆ ಮೂರು ಮಾತ್ರೆಗಳ ಗಣವಿನ್ಯಾಸದಲ್ಲಿಯೆ ಆರು ಮಾತ್ರೆಗಳ ನಿಯೋಗ ಕೂಡ ಸಾಧ್ಯವಾದುದನ್ನು ‘ದಿಗುತಟದಲ್ಲಿ’ ಎಂಬಂಥ ಪ್ರಯೋಗಗಳಲ್ಲಿ ಗಮನಸಿದ್ದೆವು. ಈ ಆರು ಮಾತ್ರೆಗಳ ವಿನ್ಯಾಸದಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸುವ ಪ್ರಯೋಗಗಳು ಬಹಳಷ್ಟು ನಡೆದಿವೆ. ಇವುಗಳಲ್ಲಿ ಕೆಲವನ್ನು ಗಮನಿಸಬಹುದು.

ಕದ್ದಿಂಗಳು, ಕಗ್ಗತ್ತಲು – – ⋃⋃, – – ⋃⋃ ೬, ೬
ಕಾರ್ಗಾಲದ ರಾತ್ರಿ – – ⋃⋃ – ⋃ ೬, ೩+೧
[1]ಸಿಡಿಲ್ಮಿಂಚಿಗೆ ನಡುಗುತ್ತಿದೆ
⋃ – – ⋃, ⋃⋃, ⋃⋃ – ⋃⋃ ೬, ೬
ಪರ್ವತವನಧಾತ್ರಿ. – ⋃⋃⋃⋃ – ⋃ ೪, ೨+೩+೧
ತುದಿಯಿಲ್ಲದೆ ತೊದಲಿಲ್ಲದೆ ⋃⋃ – ⋃⋃ ⋃⋃ – ⋃⋃ ೬, ೬
ಹಿಡಿದಂಬರವನು ತಬ್ಬಿದೆ ⋃⋃ – ⋃⋃⋃⋃, – ⋃⋃ ೨+೬, ೪
ಕಾದಂಬಿನಿ ರಾಶಿ – – ⋃ ⋃ – ⋃ ೬+೩+೧
ನಿರ್ದಯ ಕಠಿನಾಘಾತದಿ – ⋃⋃⋃⋃ – – ⋃⋃ ೪+೮
ಕುಂಭಿನಿಯನು ಅಪ್ಪಳಿಸಿದೆ – ⋃⋃⋃⋃ – ⋃⋃⋃⋃ ೬+೬
ಘೀಳಿಟ್ಟುರೆ ಭೋರೆನ್ನುತೆ – – ⋃⋃ – – ⋃⋃ ೬, ೬
ಬಿರುಗಾಳಿಯ ಬೀಸಿ ⋃⋃ – ⋃⋃ – ⋃ ೬+೩+೧

ಮೇಲಿನ ಉದಾಹರಣೆ ‘ವರ್ಷಭೈರವ’ ಕವನದ ಭಾಗವಾದರೆ, ಮುಂದಿನದು ‘ಹಸಿರು’ ಕವಿತೆಯ ಭಾಗ.

ಸು ರಾ ಸ; ಸು ರು ಮು ಗಿ ಲು ೨+೪, ೩, ೩
ರು ದ್ದೆ ಯಾ ಲು[2] ೩, ೫, ೩+೧
⋃,
ರಿ ಲೆ, ಸು ರು ಣಿ ವೆ ೪, ೨, ೩, ೩
ಸು ರು ಸಂ ಜೆ ಯೀ ಬಿ ಸಿ ಲೂ ೩, ೫, ೪
ಹೊ ಹೂ ವಿ ಕಂ ಪು ಸಿ ರು ೨, ೪, ೩, ೩
ರಿ ತಂ ಪೂ ಸು ರು! ೩, ೪, ೩+೧
ಕ್ಕಿ ಕೊ ಲಿಂ ಪು ಸು ರು ೪+೫+೩
ಸು ರು ಸು ರಿ ಳೆ ಯು ಸಿ ರೂ. ೩, ೮

ಇಲ್ಲಿ ಆರು ಮಾತ್ರೆಗಳ ಗಣಗಳ ವಿನ್ಯಾಸವೇ ಇದ್ದರೂ ಆರು ಮಾತ್ರೆಗಳ ಗಣದಿಂದ ಮೂರು ಮೂರು ಮಾತ್ರೆಗಳ ಗಣಗಳಿಗೆ ಮತ್ತೆ ಆರು ಮಾತ್ರೆಗಳ ಎರಡು ಗಣಗಳಿಗೆ ಬದಲಾಗಿ ‘ಗಣ ಪರಿವೃತ್ತಿ’ ಎನ್ನಿ; ಬೇಕಾದರೆ, ನಾಲ್ಕು ಮಾತ್ರೆಗಳ ಮೂರು ಗಣಗಳನ್ನು ಯೋಜಿಸಲಾಗಿದೆ ಎನ್ನಿ.

ಹಸುರು ಕವಿತೆಯಲ್ಲಿ ಉದ್ಧರಿಸಿರುವ ಮೊದಲ ಸಾಲಿನಲ್ಲೇ ಮೊದಲ ಗಣ ಆರು ಮಾತ್ರೆಗಳದು (ಹಸುರಾಗಸ = ⋃⋃ – ⋃⋃) ಮುಂದಿನ ಗಣಗಳು – ಮೂರು ಮಾತ್ರೆಗಳ ಎರಡು ಗಣಗಳು (ಹಸುರು ಮುಗಿಲು = ⋃⋃⋃ – ⋃⋃⋃).

ಮುಂದಿನ ಸಾಲಿನಲ್ಲಿ ಮೂರು ಮಾತ್ರೆಗಳು (ಹಸುರು = ⋃⋃⋃) ಐದು ಮಾತ್ರೆಗಳು (ಗದ್ದೆಯಾ = – ⋃ –) ಸೇರಿ ಎಂಟು ಮಾತ್ರೆಗಳಾಗುತ್ತವೆ. ಮುಂದಿನ ನಾಲ್ಕು ಮಾತ್ರೆಗಳ ಗಣ ಬಯಲು (⋃⋃ –) (ಯತಿಸ್ಥಾನವಾದುದರಿಂದ ‘ಉ’ ದೀರ್ಘವಾಗಿದೆ) ಒಟ್ಟು ಹನ್ನೆರಡು ಮಾತ್ರೆಗಳಾಗುತ್ತವೆ. ಮತ್ತೆ ಮುಂದಿನ ಪದ್ಯ ಖಂಡದಲ್ಲಿಯೂ ಅಷ್ಟೆ – ಮೊದಲ ಸಾಲಿನ ಮೊದಲ ಗಣ ಆರು ಮಾತ್ರೆಗಳದು (⋃⋃ – ⋃⋃) ಮುಂದಿನೆರಡು ಗಣಗಳು ಮೂರು ಮೂರು ಮಾತ್ರೆಗಳವು.

ಎರಡನೆಯ ಸಾಲಿನಲ್ಲಿ ನಾಲ್ಕು ಮಾತ್ರೆಗಳ (ಎಲರಿನ = ⋃⋃⋃⋃ ತಂಪೂ = – – + ಹಸುರು = ⋃⋃ –) ಮೂರು ಗಣಗಳಿವೆ. ಪಾದಾಂತ್ಯದಲ್ಲಿ ಯತಿ ಬರುವುದರಿಂದ ಅದು ಗುರುವಾಗಿದೆ.

ಮುಂದಿನ ಸಾಲಿನ ಗಣವಿನ್ಯಾಸ ಮತ್ತಷ್ಟು ಭಿನ್ನ. ಇಲ್ಲಿ ಮೊದಲಿಗೆ ನಾಲ್ಕು ಮತ್ತು ಐದು ಮಾತ್ರೆಗಳ ಗಣಗಳಾದ ಮೇಲೆ (ಹಕ್ಕಿಯ = – ⋃⋃ + ಕೊರಳಿಂಪು ⋃⋃ – ⋃) ನಾಲ್ಕು ಮಾತ್ರೆಗಳ ಗಣ, ಐದು ಮಾತ್ರೆಗಳ ಗಣ (ಹಸರು = ⋃⋃ –) ಬಂದು ಮಾತ್ರೆಗಳ ಗಣವಿನ್ಯಾಸದಲ್ಲಿಯೂ ವೈವಿಧ್ಯವನ್ನು ಪಡೆಯುವುದನ್ನು ಗಮನಿಸಬಹುದು.

ಈ ಆರು ಮಾತ್ರೆಗಳ ಗಣವಿನ್ಯಾಸದಲ್ಲಿ ನಾಲ್ಕು ಮಾತ್ರೆಗಳ ಮೂರು ಗಣಗಳು, ಮೂರು ಮಾತ್ರೆಗಳು ಐದು ಮಾತ್ರೆಗಳು ಮತ್ತು ನಾಲ್ಕು ಮಾತ್ರೆಗಳು ಎಂಟು ಮಾತ್ರೆಗಳು ಮತ್ತು ನಾಲ್ಕು ಮಾತ್ರೆಗಳು; ಎರಡು ಎರಡು ಎರಡು ಮತ್ತು ಆರು ಮಾತ್ರೆಗಳು; ನಾಲ್ಕು ಮತ್ತು ಎಂಟು ಮಾತ್ರೆಗಳು – ಹೀಗೆ ವಿವಿಧವಾದ ವಿನ್ಯಾಸಗಳು; ಆಗುವುದನ್ನು ಗಮನಿಸಬಹುದು. ‘ಚಿಕುಹೂ’ ಕವಿತೆಯ ಸಾಲುಗಳು – ಇವು.

) ನಾಲ್ಕು ಮಾತ್ರೆಗಳ ಮೂರು ಗಣಗಳು –
⋃         ⋃         –                      ⋃         ⋃         –                      ⋃         ⋃         –
ಚಿ         ಕು         ವೂ                   ಚಿ         ಕು         ವೂ                   ಚಿ         ಕು         ವೂ       ೪ ೪ ೪
) ಮೂರು, ಐದು ಮತ್ತು ನಾಲ್ಕು ಮಾತ್ರೆಗಳ ಗಣಗಳು –
–          ⋃                     ⋃         ⋃         ⋃         –                      ⋃         ⋃         ⋃         ⋃
ಎ         ನ್ನ                     ಕಿ          ವಿ         ಯೊ      ಳೀ                    ಸ         ವಿ         ದ         ನಿ         ೩ ೫ ೪
) ಎಂಟುಮಾತ್ರೆಗಳು ಮತ್ತು ನಾಲ್ಕು ಮಾತ್ರೆಗಳ ಗಣಗಳು –
⋃         ⋃         ⋃         ⋃         –          ⋃         ⋃                     –          ⋃         ⋃
ದಿ         ನ         ಮ        ರೆ          ತ         ಪ್ಸ         ರೆ                      ಎ         ಚ್ಚ         ರೆ          ೮ ೪
) ಎರಡು, ಎರಡು ಎರಡು ಮತ್ತು ಆರು ಮಾತ್ರೆಗಳ ಗಣಗಳು –
–                      ⋃         ⋃                     ⋃         ⋃                     –          ⋃         ⋃         ⋃         ⋃
ಈ                    ದ         ನಿ                     ಬ         ರೆ                      ಲಾ       ಲಿ         ಸು        ತಿ         ದೆ         ೨ ೨ ೨ ೬
) ನಾಲ್ಕು ಮತ್ತು ಎಂಟು ಮಾತ್ರೆಗಳ ಗಣಗಳು –
⋃         ⋃         ⋃         ⋃                     ⋃         ⋃         ⋃         ⋃         ⋃         ⋃         ⋃         ⋃
ಪ         ಯ        ಣ         ಕೆ                      ಸ         ಡ         ಗ          ರ          ಗೊ       ಳು        ತಿ         ದೆ         ೪ ೮

ಮೇಲೆ ಕಾಣಸಿರುವುದು ಕೇವಲ ವೈವಿಧ್ಯದ ಕೆಲವು ಉದಾಹರಣೆಗಳನ್ನು ಮಾತ್ರ ಇವುಗಳ ವಿಭಿನ್ನ ವಿನ್ಯಾಸ ಯಾವಾಗಲೂ ಕವಿಗಳಿಗೆ ಒಂದು ಆಹ್ವಾನವೇ ಅಲ್ಲವೆ?

ಮೂರು ಮಾತ್ರೆಗಳ ಉತ್ಸಾಹ ಲಯದಿಂದ ಆರು ಮಾತ್ರೆಗಳಿಗೆ ವಿಸ್ತಾರಗೊಳ್ಳುವುದು; ಮತ್ತೆ ಮೂರು ಮಾತ್ರೆಗಳ ಗಣಗಳಲ್ಲಿಯೇ ವಿವಿಧ ವಿನ್ಯಾಸ ಪಡೆಯುವುದು ಇಲ್ಲಿ ಮುಖ್ಯವಾಗಿದೆ.

ಈ ಮೂರು ಮಾತ್ರೆಗಳ ಗಣವಿನ್ಯಾಸದ ಛಂದಸ್ಸು ಎಲ್ಲಿಂದ ಬಂದಿತು? ಮೂಲತಃ ಇದು ಅಪಭ್ರಂಶದ ರಗಳೆಯಿಂದ ಬಂದಿತೆ? ಅಥವಾ ಅಂಶಗಣಗಳು ಮಾತ್ರಾಗಣಗಳಾದಾಗ ಬ್ರಹ್ಮಗಣಗಳಾದ ಮೂರು ಮಾತ್ರೆಗಳಿಂದ ಬಂದಿತೆ? ಅಥವಾ ಭೋಗ ಷಟ್ಪದಿಯಿಂದ ಬಂದಿತೆ? ಎಂಬ ಜಿಜ್ಞಾಸೆಗಳಿಗೊಳಗಾದಾಗ ನಮಗೆ ದೊರಕುವ ಉತ್ತರ – ಕನ್ನಡದ ಪ್ರತಿಭೆ ಈ ಮೂರು ಮಾತ್ರೆಗಳ ಗಣವಿನ್ಯಾಸದಲ್ಲಿ ಸಾಧಿಸುತ್ತ ಬಂದಿರುವುದು ಅಸಾಧಾರಣವಾದುದು ಎಂಬುದು. ನವೋದಯದ ಕವಿಗಳು ಹಳೆಯ ಛಂದೋರೂಪಗಳನ್ನು ತಮ್ಮ ಅನುಭವಗಳ ಅಭಿವ್ಯಕ್ತಿಗಾಗಿ ಬಳಸಿಕೊಂಡ ರೀತಿ ಅಭಿಮಾನಪಡುವಂಥದ್ದು. ಆದ್ದರಿಂದಲೇ ಆ ಪ್ರತಿಭೆ ಅಂಶಗಣದ ಬೇರನ್ನು, ಷಟ್ಪದಿಯ ಬೇರನ್ನು ಜೊತೆಗೆ ರಗಳೆಯ ಧಾತುವನ್ನು ಅರಗಿಸಿಕೊಂಡೇ ಬೆಳೆದದ್ದು.

ನವೋದಯ ಕವಿಗಳ ಈ ಸಾಧನೆಯ ಜೊತೆಗೇ ನಮಗೆ ಅರಿವಾಗಬೇಕಾದದ್ದು ಅವರ ಪ್ರಯೋಗಶೀಲತೆಯ ವಿಶಿಷ್ಟತೆಗಳು. ಗುರುವನ್ನು ಲಘವಾಗಿಸಿ ಉಚ್ಚರಿಸುವ ಲಘ್ವೀಕರಣ, ಅರ್ಥಕ್ಕಾಗಿ ಹಾಗೂ ಲಯಕ್ಕಾಗಿ ಲಘುವನ್ನು ದೀರ್ಘವಾಗಿಸುವ ದೀರ್ಘೀಕರಣ, ಆರಂಭದ ವರ್ಣವನ್ನು ಛಂದಸ್ಸಿನ ಮಾನಕ್ಕೆ ತರದಂತೆ ಬಳಸಲಾಗುವ ಅನಾಹುತ ಅಥವಾ ಹುಸಿ, ಪದ್ಯದ ಕೊನೆಗೆ ಬರುವ ಯತಿಯನ್ನು ಮುಡಿಯಾಗಿಸುವ ಮತ್ತೆ ಇಂಥ ಮುಡಿಯಲ್ಲೇ ವಿಶಿಷ್ಟ ರೀತಿಯ ಪ್ರಯೋಗವಾಗುವ ಪದ್ಮಗಣ, ಪಾದ ಮಧ್ಯದಲ್ಲೇ ಅಂತ್ಯಯತಿ ಅಂದರೆ ಅರ್ಥಯತಿ ಪ್ರಾಪ್ತವಾಗುವಾಗುವ ಮೌನ, ಲಯ ವೈವಿಧ್ಯದ ಮೂಲಾಧಾರವಾಗಿ ಸತ್ವಶಾಲಿಯಾದ ತಂತ್ರ ಗಣಪರಿವೃತ್ತಿ – ಇವುಗಳನ್ನು ಕೊನೆಗೆ ವಿಶದವಾಗಿ ಪರಿಚಯ ಮಾಡಕೊಳ್ಳಬಹುದು. ಈ ಎಲ್ಲವುಗಳ ಪ್ರಯೋಗಗಳಲ್ಲಿ ವ್ಯಕ್ತವಾಗುವುದು ಪ್ರತಿಭೆಯ ಆಟ.

ಇನ್ನು ಚತುರ್ಮಾತ್ರಾಗಣಗಳ ಬಗೆಗೆ ಸ್ಥೂಲವಾಗಿ ಅರಿಯಬಹುದು. ಆರಂಭ ಕಾಲದಲ್ಲಿ ಚತುರ್ಮಾತ್ರಾ ಗಣಗಳನ್ನು ಹಟ್ಟಂಗಡಿ ನಾರಾಯಣರಾಯರು ಬಳಸಿದ್ದರೂ, ಅಲ್ಲಿ ಇನ್ನೂ ಆದಿಪ್ರಾಸವಿದ್ದಿತು. ಉದಾಹರಣೆಗೆ ಈ ನಾಲ್ಕು ಸಾಲುಗಳನ್ನು ಗಮನಸಿಸಬಹುದು.

ವಾರದಿ ನದಿಗಳಲೆದ್ದು ಕುಸುಮಗಳ |
ಆರಿದ ಬಾಯಿಗೆ ಹೊಸ ಮಳೆಗರೆಯುವೆ ||
ನಡುಹಗಲಲಿ ತೂಕಡಿಸುವ ಕುಡಿಗಳು
ಒಡಲಿನ ಹೊದಕೆಗೆ ನೆಳಲನು ಕವಿಸುವೆ.

ಮೇಲಿನ ಉದಾಹರಣೆಯಲ್ಲಿ ಮೊದಲ ಸಾಲಿನಲ್ಲಿಯೆ ಗಣವಿನ್ಯಾಸದಲ್ಲಿ ವಿಶಿಷ್ಟತೆಯಿದೆ. ಮೊದಲ ಗಣ ನಾಲ್ಕು ಮಾತ್ರೆಗಳದು (ವಾರದಿ = – ⋃⋃) ಮುಂದಿನ ಗಣ ಏಳು ಮಾತ್ರೆಗಳದು ನದಿಗಳಲೆದ್ದು = ⋃⋃⋃⋃ – ⋃) ಮುಂದಿನ ಗಣ ಐದು ಮಾತ್ರೆಗಳದು (ಕುಸುಮಗಳ = ⋃⋃⋃⋃⋃) ಪಂಕ್ತಿಗೆ ಒಟ್ಟು ಇಪ್ಪತ್ತು ಮಾತ್ರಗಳ ಘಟಕವಾಗಿದ್ದರೂ ಅಲ್ಲಿ ಗಣಗಳು ಭಿನ್ನವಾಗಿವೆ, ನಾಲ್ಕು ಮಾತ್ರೆಗಳು, ಏಳು ಮಾತ್ರೆಗಳು ಮತ್ತು ಐದು ಮಾತ್ರೆಗಳು ಆಗಿ. ಎರಡನೇ ಸಾಲಿನಲ್ಲಿ ನಾಲ್ಕು ನಾಲ್ಕು ಮತ್ತು ಎಂಟು ಮಾತ್ರೆಗಳ ಗಣಗಳಿವೆ (ಆರಿದ = – ⋃⋃; ಬಾಯಿಗೆ = – ⋃⋃; ಹೊಸ ಮಳೆಗರೆಯುವೆ = ⋃⋃⋃⋃⋃⋃⋃⋃) ಮೂರನೆ ಸಾಲಿನ ವಿನ್ಯಾಸ ಇನ್ನಷ್ಟು ಭಿನ್ನ. ಆರು ಮಾತ್ರೆಗಳು (ನಡುಹಗಲಲಿ = ⋃⋃⋃⋃⋃⋃) ಆರು ಮಾತ್ರೆಗಳು (ತೂಕಡಿಸುವ = – ⋃⋃⋃⋃) ಮತ್ತು ನಾಲ್ಕು ಮಾತ್ರೆಗಳು (ಕುಡಿಗಳು = ⋃⋃⋃⋃) ನಾಲ್ಕನೆ ಸಾಲು ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿಂದ ಕೂಡಿದೆ.

ಆದಿಪ್ರಾಸವನ್ನು ಬಿಡದ ಆರಂಭ ಕಾಲದಲ್ಲಿ ಕೂಡ ಗಣವಿನ್ಯಾಸದಲ್ಲಿ ಒಂದಿಷ್ಟು ವೈವಿಧ್ಯವನ್ನು ಕವಿಗಳು ಆರಂಭ ಕಾಲದಲ್ಲಿಯೇ ಸಾಧಿಸಿದ್ದರು.

ನವೋದಯ ಕಾಲದ ನಾಲ್ಕು ಮಾತ್ರೆಗಳ ವಿಭಿನ್ನ ವಿನ್ಯಾಸಗಳನ್ನು ಗುರುತಿಸಲು ಕೆಲವು ಉದಾಹರಣೆಗಳನ್ನು ನೋಡಬಹುದು. ಎರಡು ಮಾದರಿಗಳು ಹೀಗಿವೆ:

. ಪಡುವಣ ತೀರದ ೪ ೪
ಕನ್ನಡ ನಾಡಿನ ೪ ೪
ಕಾರ್ಗಾಲದ ವೈಭವವೇನು? ೬ ೭+೧
ಚೆಲ್ಲಿದರನಿತೂ
ತೀರದ ನೀರಿನ ೪ ೪
ಜಡದೇಹದ ಕರ್ಮುಗಿಲೇನು? ೬ ೪ + ೧

 

. ಚಿನ್ನದ ನಾಡಿದು ೪ ೪
ಮೈಸೂರು ೪ + ಗುರು
ಗಂಧದ ಗುಡಿಯಿದು ೪ ೪
ಮೈಸೂರು ೪ + ಗುರು

ಈ ಎರಡು ಮಾದರಿಗಳನ್ನು ಗಮನಿಸಿದಾಗ ಗಣಗಳ ಸಂಖ್ಯೆಗಳನ್ನು ಹೆಚ್ಚು ಕಡಿಮೆ ಮಾಡಿ ವಿವಿಧತೆಯನ್ನು ತಂದಿರುವುದು ಗಮನಕ್ಕೆ ಬರುತ್ತದೆ.

ವಾಸ್ತವವಾಗಿ ಮೊದಲ ಮಾದರಿಯ ಮೂರನೆಯ ಸಾಲನ್ನೇ ಎರಡು ಸಾಲು ಮಾಡಿದರೆ, ಎರಡನೆಯ ಮಾದರಿ (ಮೊದಲ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಎರಡು ಗಣ) ಮುಂದಿನ ಸಾಲಿನಲ್ಲಿ ನಾಲ್ಕು ಮಾತ್ರೆಯ ಒಂದು ಗಣ ಮತ್ತು ಗುರುವಿದೆ. ಅಂದರೆ : ಎರಡನೆಯ ಮಾದರಿಯ ವಿಸ್ತೃತ ರೂಪದಂತೆ ಮೊದಲ ಮಾದರಿ ಕಾಣಿಸುತ್ತದೆ. ಇಲ್ಲಿ ಮೊದಲ ಪಾದ ಮತ್ತು ಎರಡನೆಯ ಪಾದಗಳಲ್ಲಿ ನಾಲ್ಕು ಮಾತ್ರೆಗಳ ಎರಡೆರಡು ಗಣಗಳಿವೆ. ಮೂರನೆಯ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಮೂರು ಗಣಗಳು ಮೇಲೊಂದು ಗುರುವಿದೆ. ಯತಿಸ್ಥಾನವಾಗಿ.

ಒಂದು ರೀತಿಯಲ್ಲಿ ಹಟ್ಟಂಗಡಿ ನಾರಾಯಣರಾಯರ ಪ್ರಯೋಗದಲ್ಲಿರುವ ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿರುವ ಸಾಲಿನಂತೆ ಪಾದ ಸಂಖ್ಯೆ ಹೆಚ್ಚುತ್ತ ಹೋಗುವ ರಚನೆ ಪಂಜೆಮಂಗೇಶರಾಯರ ‘ತೆಂಕಣ ಗಾಳಿಯಾಟ’ ಪದ್ಯದಲ್ಲಿದೆ.

ಈ ಕೆಲವು ಸಾಲುಗಳನ್ನು ಗಮನಿಸಿ!

ಬರಲಿದೆ! ಅಹಹಾ! ದೂರದಿ ಬರಲಿದೆ
ಬುಸಗುಟ್ಟುವ ಪಾತಾಳದ ಹಾವೋ?
ಹಸಿವಿನ ಭೂತವು ಕೂಯುವ ಕೂವೊ?
ಹೊಸತಿದು ಕಾಲನ ಕೋಣನ ಓವೊ!
ಉಸಿರಿನ ಸುಯ್ಯೋ! ಸೂಸುಕರಿಸುತ,
ಬರುವುದು! ಬರಬರ ಭರದಲಿ ಬರುವುದು.

ಒಂದು ರೀತಿಯಲ್ಲಿ ಇದು ಹರಿಹರನ ಮಂದಾನಿಲ ರಗಳೆಯನ್ನು ನೆನಪಿಗೆ ತರುವುದು ವ್ಯತ್ಯಾಸವೆಂದರೆ ಇಲ್ಲಿ ಆದಿಪ್ರಾಸವಿದೆ; ಆದರೆ ಅಂತ್ಯಪ್ರಾಸವಿಲ್ಲ. ಹರಿಹರ ಮಂದಾನಿಲ ರಗಳೆಯನ್ನು (ನಾಲ್ಕು ಮಾತ್ರೆಗಳ ನಾಲ್ಕು ಗಣಗಳ ಸಾಲಿನಿಂದ ಕೂಡಿರುವುದು.) ಕಥನಕ್ಕೆ ಬಳಸಿದ್ದರೆ ಇಲ್ಲಿ ವರ್ಣನೆಗೆ ಮೀಸಲಾಗಿದೆ. ಇಲ್ಲಿನ ಪ್ರತಿ ಪಂಕ್ತಿಯಲ್ಲಿ ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿದ್ದರೆ – ನಾಲ್ಕು ಮಾತ್ರೆಗಳ ಎರಡೆರಡು ಗಣಗಳಿಂದ ಕೂಡಿದ ಇದೇ ರೀತಿಯ ರಚನೆಗಳು ಅಂಬಿಕಾತನಯದತ್ತರಲ್ಲಿವೆ:

ದೈವುಳ್ಳವರಿಗೆ – – ⋃⋃⋃⋃
ದಯವೇ ಇಲ್ಲ ⋃⋃ – – ⋃ ೪+೩+೧
ತಿತ್ತಿರಿ ತುಂಬಿದೆ – ⋃⋃ – ⋃⋃ ೪ ೪
ಕೂಳಿನ ಕೋಟೆ – ⋃⋃ – ⋃ ೪ ೩+೧
ಬಿಡುಗಣ್ಣವರಿಗೆ ⋃⋃ – ⋃⋃⋃⋃
ಕಾಣುವುದಿಲ್ಲ – ⋃⋃ – ⋃ ೭+೧
ಅಮೃತದ ತೇಗಿನ ⋃⋃⋃⋃ – ⋃⋃ ೪ ೪
ಮದವಂತಹುದು ⋃⋃ – ⋃⋃⋃ ೭+೧
ಹಸಿದವ ಬಲ್ಲ ⋃⋃⋃⋃ – – ೪ ೩+೧
ಹಸೆವೆಯ ಶೂಲ ⋃⋃⋃⋃ – ⋃ ೪ ೩+೧

ಇಲ್ಲಿಯ ರಚನೆ ಪ್ರತಿ ಪಂಕ್ತಿಗೆ ನಾಲ್ಕು ಮಾತ್ರೆಗಳ ಗಣಗಳಿದ್ದು ಕಥನದಂತೆ ಪಂಕ್ತಿಗಳ ಮಿತಿಯಿಲ್ಲದೆ ಮುಂದುವರಿಯುತ್ತದೆ. ಮೊದಲ ಸಾಲಿನಲ್ಲಿ ಐದು ಮಾತ್ರೆಗಳು ಮತ್ತು ಮೂರು ಮಾತ್ರೆಗಳ ಎರಡು ಗಣಗಳಿವೆ (ದೈವುಳ್ಳವರಿಗೆ = – – ⋃⋃⋃⋃) ಮುಂದಿನ ಪಂಕ್ತಿಯಲ್ಲಿ ಮತ್ತೆ ನಾಲ್ಕು ಮಾತ್ರೆಗಳ ಎರಡು ಗಣಗಳು. ಮೊದಲ ಗಣ ನಾಲ್ಕು ಮಾತ್ರೆಗಳು – ಎರಡನೆ ಗಣ ದೀರ್ಘೀಕರಣದಿಂದ ನಾಲ್ಕು ಮಾತ್ರೆಗಳಾಗುತ್ತವೆ. ‘ಕೂಳಿನ ಕೋಟೆ’, ‘ಕಾಣುವುದಿಲ್ಲ’, ‘ಹಸಿದವ ಬಲ್ಲ’, ‘ಹಸಿವೆಯ ಶೂಲ’ ಇಲ್ಲೆಲ್ಲ ಕೊನೆಯ ಲಘು ಗುರುವಾಗಿ ಬಿಡುತ್ತದೆ. ಇದು ಕಥನದ ಒಂದು ಮಾದರಿ. ಇನ್ನು ಈ ನಾಲ್ಕು ಮಾತ್ರೆಗಳ ಗಣವಿನ್ಯಾಸದ ಇನ್ನೊಂದು ರೀತಿ –

ಆನಂದಮಯ ಜಗ ಹೃದಯ – – ⋃⋃⋃ – ⋃⋃⋃⋃⋃ ೬ ೨ ೨ ೩+೧
ಏತಕೆ ಭಯ ಮಾಣೊ – ⋃⋃ – ⋃⋃ – ⋃ ೪ ೨ +೩+೧
ಸೂರ್ಯೋದಯ ಚಂದ್ರೋದಯ – – ⋃⋃ – – ⋃⋃ ೬ ೬
ದೇವರ ದಯೆ ಕಾಣೊ – ⋃⋃⋃⋃ – ⋃ ೪ ೨ ೩+೧

ಇಲ್ಲಿಯ ವಿನ್ಯಾಸ ನಾಲ್ಕು ಮಾತ್ರೆಗಳ ನಾಲ್ಕು ಗಣಗಳು ಮೊದಲ ಸಾಲಿನಲ್ಲಿ ಎರಡನೆ ಸಾಲಿನಲ್ಲಿ ನಾಲ್ಕು ಮಾತ್ರೆಗಳ ಎರಡು ಗಣಗಳು ಮೇಲೊಂದು ಗುರುವಿನಿಂದ ಕೂಡಿದೆ.

[1] ಸಿಡಿಲ್ಮಿಂಚಿಗೆ ಎಂಬಲ್ಲಿ ‘ಸಿ’ಯನ್ನು ಹುಸಿಯಾಗಿಸಬಹುದು, ಇಲ್ಲವೆ ‘ಲ್ಮಿ’ ಇದನ್ನು ಶಿಥಿಲ ದ್ವಿತ್ವವಾಗಿಸಬಹುದು.

[2] ‘ಲು’ ದೀರ್ಘೀಕರಣಕ್ಕೊಳಗಾಗಿದೆ.