ನವೋದಯ ಕಾಲದ ಛಂದಸ್ಸನ್ನು ಕುರಿತು ಚಿಂತಿಸುವಾಗ ಮತ್ತೆ ಮತ್ತೆ ನಮ್ಮ ಗಮನ ಸೆಳೆಯುವ ಅಂಶ, ನಮ್ಮ ಕವಿಗಳು ಪರಂಪರೆಯಲ್ಲಿ ಬೇರೂರಿ ಹೊಸ ಹೊಸ ಬೆಳಕುಗಳತ್ತ ಕೈ ಚಾಚುತ್ತ ನಡೆದಿರುವುದು.

ಕನ್ನಡ ಕಾವ್ಯದ ಆರಂಭ ಕಾಲದಲ್ಲಿಯೇ ಕವಿರಾಜ ಮಾರ್ಗಕಾರ ಒಂದು ಮಾತನ್ನು ಹೇಳಿದ್ದ : ಕುರಿತೋದದೆಯುಂ ಕಾವ್ಯಪರಿಣತಮತಿಗಳ್‌ ಎಂದು. ಇದೇನು ಉಡಾಫೆಯ ಮಾತಲ್ಲ ಎನ್ನುವುದು ಎಲ್ಲರಿಗೂ ವೇದ್ಯವಾದದ್ದೇ ಎಂಬುದು ನನ್ನ ಭಾವನೆ. ಏಕೆಂದರೆ, ಅಂದಿನ ಜನಪದ ಸಾಹಿತ್ಯ ಸೃಷ್ಟಿಯನ್ನು ಗಮನಸಿದರೆ ಇದು ಸ್ವಯಂ ವೇದ್ಯ.

ಅಕ್ಷರ ವೃತ್ತಗಳನ್ನು ಕನ್ನಡ ಬಾಷೆಯ ಜಾಯಮಾನಕ್ಕೆ ಒಗ್ಗಿಸುವ ಕಾರ್ಯ ಶಾಸನ ಕವಿಗಳಿಂದ ಹಿಡಿದು ಪಂಪಾದಿಗಳವರೆಗೆ ಒಂದು ಹಂತದಲ್ಲಿ ಯಶಸ್ಸು ಪಡೆದಿದ್ದಿತು. ಹರಿಹರನಂಥವರಲ್ಲಿ ಅದು ಪಡೆದ ಬಳುಕು ಅಂಟುಭಾಷೆಯಾದ ಕನ್ನಡದ ಸತ್ವಕ್ಕೆ ತಗುವಂತಾದದ್ದು ಗಮನಾರ್ಹ. ಮುಂದೆ ಬಹುಶಃ ವಚನಕಾರರ ಪ್ರಭಾವದಿಂದಾಗಿಯೇ ದೇಸಿ ವೃತ್ತಗಳಾದ ಷಟ್ಪದಿ, ಸಾಂಗತ್ಯ, ತ್ರಿಪದಿ ಮೊದಲಾದ ಛಂದಸ್ಸುಗಳು ಪಡೆದ ಸಿದ್ಧಿಯೇನೆಂಬುದನ್ನು ಗಮನಿಸಬೇಕಾದರೆ ಪ್ರಾತಿನಿಧಿಕವಾಗಿ ಕುಮಾರವ್ಯಾಸನ ಭಾಮಿನಿ ಷಟ್ಪದಿಯ ಸಿದ್ಧಿಯನ್ನು ನೋಡಬೇಕು. ನಾಟಕೀಯ ಸತ್ವದಿಂದ ರಾಘವಾಂಕನಿಂದ ಕಸಿಗೊಂಡಂತಿದ್ದ ವಾರ್ಧಕ ಷಟ್ಪದಿ ನಾದಲೋಲ ಲಕ್ಷ್ಮೀಶನಲ್ಲಿ ಪಡೆದ ಸಿದ್ಧಿ ಇನ್ನೊಂದೇ ರೀತಿಯದು. ಬಹುಶಃ ಅದಕ್ಕೆ ಕೀರ್ತನ ಸಾಹಿತ್ಯದ ಸಿದ್ಧಿಗಳ ಸತ್ವವೂ ಜಿನುಗಿ ಸೇರಿರಬಹುದು.

ಸಾಂಗತ್ಯವಂತು ರತ್ನಾಕರನಲ್ಲಿ ಮಹಾಕಾವ್ಯದ ಅಭಿವ್ಯಕ್ತಿಗೂ ತಗುವಂಥ ಪ್ರಯತ್ನ ನಡೆಸಿದ್ದು ಐತಿಹಾಸಿಕವಾದದ್ದು. ನಂಜುಂಡಕವಿ, ಕನಕದಾಸ ಮೊದಲಾದವರ ಸಾಧನೆಗಳಾದರೂ ಗಮನಾರ್ಹವಾದುವೇ.

ಈ ಹಿನ್ನೆಲೆಯಲ್ಲಿ ನೋಡಿದರೆ ಇಪ್ಪತ್ತನೇ ಶತಮಾನದ ಆರಂಭ ಕಾಲದಲ್ಲಿ ನಡೆದ ನವೋದಯ ಚಳುವಳಿಯಲ್ಲಿ ಕನ್ನಡ ಕವಿಗಳು ತೋರಿದ ಪ್ರತಿಭಾತಸತ್ವ ಅಸಾಧರಣವೆಂದೇ ಹೇಳಬೇಕು.

ಇಂಥ ಅಸಾಧಾರಣ ಸಾಧನೆಯನ್ನು ಕುರಿತು ನಡೆದಿರುವ ಚರ್ಚೆಗಳು ಕೆಲವೇ ಆದರೂ ಅವುಗಳ ಮಹತ್ವ ಕಡಿಮೆಯಾದದ್ದಲ್ಲ.

ಒಂದರ್ಥದಲ್ಲಿ ನವ್ಯ ಕಾವ್ಯದ ಛಂದಸ್ಸಿನ ಸಿದ್ಧಿಗಳನ್ನು ಗಮನಿಸುವಾಗ ಅವುಗಳಿಗೆಲ್ಲ ಬೆನ್ನೆಲುಬಾಗಿ ನಿಂತಿದ್ದವುಗಳು ಎಂದರೆ ನವೋದಯ ಛಂದಸ್ಸಿನ ಸಿದ್ಧಿಗಳು. ಆದರೆ ಈ ಸಿದ್ಧಿಗಳು ಮಂತ್ರಕ್ಕುದುರಿದ ಮಾವಿನ ಕಾಯಿಗಳಲ್ಲ. ಪ್ರತಿಭಾವಂತರಾದ ಕವಿಗಳ ಬಹುರೀತಿಯ ಪ್ರಯೋಗಗಳ ಫಲವಾಗಿ ಮೂಡಿದಂಥವು.

ಈವರೆಗೆ ಸಂಸ್ಕೃತ ಪ್ರಾಕೃತ ಛಂದಸ್ಸುಗಳ ಪರಂಪರೆ ಕನ್ನಡ ಛಂದಸ್ಸಿಗೆ ವಿಶೇಷವಾದ ರೀತಿಯಲ್ಲಿ ಕಸುವನ್ನು ನೀಡುತ್ತಿದ್ದು, ಈಗದಕ್ಕೆ ಮತ್ತೊಂದು ಪರಂಪರೆಯ ಕಸುವಿನ ಅನುಭವ ಕೂಡ ಆಯಿತು – ಅದೇ ಇಂಗ್ಲಿಷ್‌ ಕಾವ್ಯದ ಪ್ರಭಾವ.

ಈ ಪ್ರಭಾವ ಕನ್ನಡದ ಸೋಪಜ್ಞತೆಯ ಮೇಲೆ ಸವಾರಿ ಮಾಡಿತೆ? ಅಥವಾ ಕನ್ನಡದ ಪ್ರತಿಭೆ ಈ ಇಂಗ್ಲಿಷ್‌ನ ಪ್ರಭಾವದ ಮೇಲೆ ತಾನೇ ಸವಾರಿ ಮಾಡಿತೆ? ಎಂಬ ಪ್ರಶ್ನೆ ಎದುರಾದರೆ ತಟ್ಟನೆ ಉತ್ತರಿಸುವುದು ಕಷ್ಟ. ಏಕೆಂದರೆ ಹೊಸ ರೀತಿಯ ಮುಕ್ತವಾಗುತ್ತಿರುವುದೆನ್ನಲಾದ ಛಂದಸ್ಸಿನ ರೀತಿಗಳನ್ನು ಗಮನಿಸಿದರೆ ತನ್ನತನವನ್ನು ಕಳೆದುಕೊಳ್ಳದ ಕನ್ನಡದ ಪ್ರತಿಭೆ ನಮ್ಮ ಮೆಚ್ಚುಗೆಗೆ ಪಾತ್ರವಾಗುತ್ತದೆ ಎನ್ನಬಹುದೇನೋ. ಒಮ್ಮೆ ಸಂಸ್ಕೃತ ಪ್ರಾಕೃತ ಲಯಗಳಿಂದ ಸಮೃದ್ಧವಾಗುತ್ತಿದ್ದ ಕನ್ನಡದ ಜೀರ್ಣಶಕ್ತಿ ಅನನ್ಯವಾದದ್ದು.

ಈಗ ಈ ಪ್ರಯತ್ನಗಳು ಹೇಗೆ ನಡೆದವು ಎಂಬುದರ ಒಂದು ಸಂಕ್ಷಿಪ್ತ ಚಿತ್ರವನ್ನು ಗಮನಿಸಬಹುದು.

ಕನ್ನಡದಲ್ಲಿ ಈಗಾಗಲೆ ತತ್ವಪದಗಳಿದ್ದುವು, ಜನಪದ ಗೀತೆಗಳಿದ್ದುವು. ಅವುಗಳ ಧಾಟಿ (ಛಂದಸ್ಸು)ಗಳು ಸಾಕಷ್ಟು ಸತ್ವಯುತವಾಗಿಯೂ ಇದ್ದವೇನೋ ನಿಜ. ಆದರೆ ಹೊಸಗನ್ನಡ ಕವಿತೆಯ ರಚನೆಗೆ ಮುಂದಾದ ಕವಿಗಳ ಗಮನ ತತ್ವಪದಗಳು, ಜಾನಪದ ಗಿತೆಗಳಿಗಿಂತ ಹೆಚ್ಚಾಗಿ ಇಂಗ್ಲಿಷಿನಲ್ಲಿ ಆರಂಭವಾಗಿದ್ದ ಹೊಸ ಕವಿತೆಗಳ ಕಡೆಗೇ ಇದ್ದಂತೆ ಭಾಸವಾಗುವುದು ನಿಜ.

ಒಂದರ್ಥದಲ್ಲಿ ಕವಿತೆ ಮತ್ತು ಅದರ ಅಭಿವ್ಯಕ್ತಿಗೆ ಕಾರಣವಾದ ಲಯಗಳು ಎರಡೂ ಇಂಗ್ಲಿಷ್‌ ಕಾವ್ಯದ ಪ್ರಭಾವದಿಂದ ಹೊಸ ಸತ್ವವನ್ನು ಪಡೆದವೆಂದೇ ಹೇಳಬೇಕು. ಏಕೆಂದರೆ, ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿದ್ದ ಮುದ್ದಣ “ಪದ್ಯಂ ವಧ್ಯಂ; ಗದ್ಯಂ ಹೃದ್ಯಂ; ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು” ಎಂದು ಹೇಳಿದ್ದು ತಾನು ಓದಿದ್ದ ಕಾದಂಬರಿಗಳ ಪ್ರಭಾವದಿಂದ. ಆ ಕಾದಂಬರಿಗಳಾದರೂ ಇಂಗ್ಲಿಷಿನ ಪ್ರಭಾವ ದಿಂದಲೇ ಕನ್ನಡಕ್ಕಿಳಿದಿದ್ದವು.

ಆ ಕಾಲದ ಕಾವ್ಯವನ್ನು ಮತ್ತು ಅದನ್ನು ಅಭಿವ್ಯಕ್ತಿಸುವ ಛಂದಸ್ಸುಗಳ ಪ್ರಯೋಗಗಳನ್ನು ಗಮನಿಸಿದರೆ ಕನ್ನಡದ ನವೋದಯದ ಕಾವ್ಯದ ಹೆಜ್ಜೆ ಗುರುತುಗಳು ಕಂಡುಬರುತ್ತವೆ.

ಅಂಥ ಸಂದರ್ಭಗಳಲ್ಲಿ ಕುವೆಂಪು ಅವರು ೧೯೨೩-೨೪ರ ಹೊತ್ತಿಗಾಗಲೆ ನೆನಪಿನ ದೋಣಿಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು

[1] ನೋಡಿದರೆ ಆಶ್ಚರ್ಯವಾಗುತ್ತದೆ. ಆ ಕಾಲದಲ್ಲಿ ನಡೆದ ಪ್ರಯತ್ನಗಳನ್ನು ಗಮನಸಿದರೆ ನವೋದಯ ಕಾಲದ ಕಾವ್ಯದ ಅಂಬೆಗಾಲಿನ ಗುರುತುಗಳು ಸಾಕಷ್ಟು ದೊರಕುತ್ತವೆ. ಅವುಗಳನ್ನು ಗಮನಿಸಬೇಕೆಂದರೆ ರಾ. ಯ. ಧಾರವಾಡಕರ ಹೊಸಗನ್ನಡ ಸಾಹಿತ್ಯದ ಉದಯ ಕಾಲ ಎಂಬ ಸಂಪ್ರಬಂಧವನ್ನಾಗಲಿ ಅಥವಾ ಡಾ. ಶ್ರೀನಿವಾಸ ಹಾವನೂರರ ಹೊಸಗನ್ನಡದ ಅರುಣೋದಯ ಎಂಬ ಸಂಪ್ರಬಂಧವನ್ನಾಗಲಿ ಅಥವಾ ಎಸ್‌. ಅನಂತ ನಾರಾಯಣ ಅವರ ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್‌ ಕಾವ್ಯದ ಪ್ರಭಾವ ಎಂಬ ಮಹಾಪ್ರಬಂಧವನ್ನಾಗಲಿ ಅಥವಾ ಪ್ರೊ. ಜಿ. ಎಸ್‌. ಸಿದ್ಧಲಿಂಗಯ್ಯನವರ ಹೊಸಗನ್ನಡ ಕಾವ್ಯ ಎಂಬ ಕೃತಿಯನ್ನಾಗಲಿ ನೋಡಬಹುದು.

ನವೋದಯದ ಛಂದಸ್ಸನ್ನು ಕುರಿತು ಅಧ್ಯಯನ ಮಾಡಬಯಸುವವರಿಗೆ ತೀ. ನಂ. ಶ್ರೀ. ಅವರ ಸಮಾಲೊಕನದಲ್ಲಿರುವ ಲೇಖನಗಳು ತುಂಬ ಉಪಯುಕ್ತವಾಗಿವೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಕೊಂಡು ಅಧ್ಯಯನ ನಿರತರಾದ ನಮಗೆ ಮಹತ್ವದ ಒಳನೋಟ ದೊರಕುವುದು ಶ್ರೀಯವರ ಕೈಪಿಡಿಯಲ್ಲಿ. ‘ಕನ್ನಡ ಛಂದಸ್ಸು’ ಭಾಗದಲ್ಲಿ ಅವರು ಹೇಳಿದ್ದು ಹೀಗೆ : “೧೯ನೆಯ ಶತಮಾನದ ಅಂತ್ಯಭಾಗದಲ್ಲಿ ಇಂಗ್ಲಿಷ್‌ ಸಾಹಿತ್ಯದ ಅನುಭವವುಳ್ಳವರು ಈ ಪೂರ್ವದ ತಳಹದಿಯ ಮೇಲೂ, ನಾಗವರ್ಮನು ಕಾಣದ, ೮೦೦ ವರ್ಷಗಳ ಹೊಸ ಹಾಡು ಕಟ್ಟುಗಳ ದಾರಿ ತೋರಿಕೆಯ ಮೇಲೂ, ಇಂಗ್ಲಿಷ್‌ ಛಂದಸ್ಸಿನ ಸ್ವಾತಂತ್ರ್ಯ, ವೈವಿಧ್ಯ ಸೌಂದರ್ಯಗಳ ಪ್ರೇರಣೆಯ ಮೇಲೂ, ಅವಲಂಬಿಸಿ ಹೊಸ ರೀತಿಯ ಪದ್ಯಗಳನ್ನೂ, ಪಾದಗಳ ವಿನ್ಯಾಸಗಳನ್ನೂ, ಪ್ರಾಸದ ನಿರಾಕರಣ ಮತ್ತು ಹೊಸ ಬಗೆಯ ವಿನಿಯೋಗವನ್ನೂ, ನಾಲ್ಕು ಆರು ಪಾದಗಳನ್ನೂ ಮೀರಿ ಎಷ್ಟು ದೂರ ಬೇಕಾದರೆ ಅಷ್ಟು ದೂರ ಓಡಬಲ್ಲ ಪದ್ಯರಚನೆಯನ್ನೂ, ಸರಳ ರಗಳೆಯನ್ನೂ ಪ್ರಯೋಗಿಸುತ್ತಾ ಇದ್ದಾರೆ. ಇವು ಹೊಸದೊಂದು ಆಕ್ಷೇಪಿಸುತ್ತಿದ್ದವರು ಕೂಡ ಇವೂ ಹಳದೇ ಎಂದು ಒಪ್ಪುವ ಕಾಲವೂ ಬಂದಿದೆ.” (ಪು. ೧೧೭-೧೧೮, ಕನ್ನಡ ಕೈಪಿಡಿ)

ಈ ಹೇಳಿಕೆಯಲ್ಲಿರುವ ಅಂಶಗಳನ್ನು ಮುಖ್ಯವಾಗಿ ಹೀಗೆ ಪಟ್ಟಿ ಮಾಡಬಹುದು.

) ಇಂಗ್ಲಿಷ್‌ ಕಾವ್ಯದ ಪ್ರೇರಣೆ ಕನ್ನಡದ ಮೇಲೆ ಆಗಿದೆ; ಆದರೆ ಕನ್ನಡದ ಸತ್ವಕ್ಕೆ ಯಾವುದೇ ಊನವಾಗಿಲ್ಲ.
) ಹಾಗೆ ದೊರೆತ ಪ್ರೇರಣೆಯಿಂದ ನಾಗವರ್ಮನಿಗೆ ಕಾಣದಿದ್ದ ಕನ್ನಡದ ಅನೇಕ ರೀತಿಯ ಹೊಸ ಹಾಡುಗಳು ಹಾಗೂ ಲಯಗಳು ದಾರಿ ತೋರಿವೆ.
) ಇದರ ಪ್ರಭಾವದಿಂದಾಗಿ ಹೊಸ ರೀತಿಯ ಪದ್ಯಗಳು (ಛಂದೋರೂಪಗಳು) ಮೈತಾಳಿವೆ.
) ಅವುಗಳ ಪಾದಗಳ ವಿನ್ಯಾಸ ಬಹುರೂಪಗಳಲ್ಲಿದೆ; ಪಾದಗಳ ಸಂಖ್ಯೆಗೆ ಮಿತಿ ಅನುಭವವೇ ಹೊರತು, ನಿಯಮ ಅಲ್ಲ.
) ಆದಿಪ್ರಾಸವನ್ನು ಬಿಟ್ಟುಕೊಟ್ಟು ಸೊಗಸೆನಿಸುವಲ್ಲಿ ಅಂತ್ಯಪ್ರಾಸವನ್ನು ಬಳಸಿಕೊಳ್ಳಲಾಗುತ್ತಿದೆ.
) ಈ ರೀತಿಯ ಹೊಸ ಛಂದೋರೂಪಗಳನ್ನು ಪಡೆದ ಪದ್ಯಗಳು ಬಂದಾಗ ಅವುಗಳನ್ನು ಕುರಿತು ಆಕ್ಷೇಪಿಸುತ್ತಿದ್ದರೂ ಈಗ ಇವುಗಳನ್ನು ಇವುಗಳ ಸತ್ಯದ ದೃಷ್ಟಿಯಿಂದ ಒಪ್ಪಿಕೊಳ್ಳುತ್ತಲೇ ಇದ್ದಾರೆ.

ಈಗ ಕೊನೆಯ ಅಂದರೆ ನಾಲ್ಕನೆಯ ಅಂಶದಿಂದಲೇ ನಮ್ಮ ಚಿಂತನೆಯನ್ನು ಆರಂಭಿಸಬಹುದು.

ಇಂಗ್ಲಿಷ್‌ ಗೀತೆಗಳು ಬಂದಾಗ ಆ ಗೀತೆಗಳಿಗೆ ಮುನ್ನುಡಿ ರೂಪವಾದ ಪದ್ಯ – ಕಾಣಿಕೆಯಲ್ಲಿ ಬರುವ ಪದ್ಯಭಾಗ ಹೀಗಿದೆ :

ಇವಳ ಸೊಬಗನವಳು ತೊಟ್ಟು
ನೋಡಬಯಸಿದೆ;
ಅವಳ ತೊಡಿಗೆಯಿವಳಿಗಿಟ್ಟು
ಹಾಡ ಬಯಸಿದೆ.
ಪು.

ಪಂಪಭಾರತವನ್ನು ಸಂಪಾದಿಸಿದ ಕನ್ನಡ ಶ್ರೇಷ್ಠ ವಿದ್ವಾಂಸರಲ್ಲೊಬ್ಬರಾಗಿದ್ದ ಪ್ರೊ. ಬೆಳ್ಳಾವೆ ವೆಂಕಟನಾರಣಪ್ಪನವರು ಇದನ್ನು ಲೇವಡಿ ಮಾಡಿದ್ದು ಹೀಗೆ :

ಇವಳ ಲಂಗವವನಿಗಿಟ್ಟು
ಇವನ ಚಡ್ಡಿ ಅವಳಿಗಿಟ್ಟು
ಹಾಡ ಬಯಸಿದೆ.
ಪು. ೫೧

ಶ್ರೀಯವರು ಸಾಪೋಕ್ಷೀಸನ ಏಜಾಕ್ಸ್‌ ನಾಟಕ ಪರಕಾಯ ಪ್ರವೇಶ ರೂಪವಾದ ‘ಅಶ್ವತ್ಥಾಮನ್‌’ ನಾಟಕ ಬರೆದಿದ್ದವರು. ಇಂಗ್ಲಿಷಿನ ಕವಿಗಳ ಪದ್ಯಗಳನ್ನು ಕನ್ನಡಕ್ಕೆ ಅನುವಾದಿಸಿದವರು. ಅವರು ಇಂಗ್ಲಿಷ್‌ ಗೀತೆಗಳಿಗೆ ಕಾವ್ಯರೂಪದ ಮುನ್ನುಡಿಯಾಗಿ ಕಾಣಿಕೆ ಕವನವನ್ನು ಬರೆದಿದ್ದರು. ಆ ಕವಿತೆಯಲ್ಲಿ ಅವರು ಒತ್ತು ನೀಡಿದ್ದುದು ಮಾತ್ರ ಭಾಷೆಯ ಸಂಪತ್ತಿನ ಮೇಲೆ; ಅದರ ಸಂಸ್ಕೃತಿಯ ಸತ್ವದ ಮೇಲೆ, ಆದರೂ ಆ ಕವಿತೆಗಳು ಬಂದಾಗ ಆರಂಭದ ಪ್ರತಿಕ್ರಿಯೆಗಳ ಪ್ರತಿನಿಧಿ ರೂಪವಾಗಿ ಕಾಣುತ್ತದೆ. ವೆಂಕಟನಾರಣಪ್ಪನವರ ಪದ್ಯದ ಸಾಲುಗಳು, ಮೂರನೆಯ ಅಂಶದ (ಅ) ವಿಭಾಗದ ಆದಿಪ್ರಾಸ ನಿರಾಕರಣೆಯ ಪ್ರಯತ್ನಗಳನ್ನು ಸಂಕ್ಷೇಪವಾಗಿ ಸಂಗ್ರಹಿಸಬಹುದು.

ಕನ್ನಡದಲ್ಲಿ ಆದಿಪ್ರಾಸವೆಂಬುದು ಒಂದು ಪರಂಪರೆ ಎಂಬಂತೆ ಬಂದದ್ದಂತು ನಿಜ. ಹಾಗೆ ನೋಡಿದರೆ ಸಂಸ್ಕೃತದ ಅಕ್ಷರ ವೃತ್ತಗಳನ್ನು ಕನ್ನಡ ಕಾವ್ಯದ ಅಭಿವ್ಯಕ್ತಿಗೆ ಅತ್ಯಂತ ಸಹಜವೆಂಬಂತೆ, ಮಾತ್ರಾವೃತ್ತಗಳೆಂಬಂತೆ ಬಳಸಿದ ಕನ್ನಡ ಕವಿಗಳು ಸಂಸ್ಕೃತದ ವೃತ್ತಗಳಲ್ಲಲ್ಲದ ಆದಿಪ್ರಾಸಕ್ಕಂತೂ ಜೋತೇಬಿದ್ದಿದ್ದರು.

ಆದಿಪ್ರಾಸವೆಂಬುದು ಸಂಸ್ಕೃತ ವೃತ್ತಗಳೇ ಅಲ್ಲದೆ ಕಂದ ಪದ್ಯಗಳಲ್ಲೂ ಅನಂತರ ರಗಳೆಗಳಲ್ಲೂ ಬಂದುದಷ್ಟೇ ಅಲ್ಲ; ಕನ್ನಡದ ದೇಸೀ ಛಂದಸ್ಸುಗಳಾದ ಷಟ್ಪದಿಗಳಲ್ಲಿ – ಭೋಗಷಟ್ಪದಿ, ಭಾಮಿನಿ ಷಟ್ಪದಿ, ಶರಷಟ್ಪದಿ, ಪರಿವರ್ಧಿನಿ ಷಟ್ಪದಿ, ಕುಸಮ ಷಟ್ಪದಿ, ಮತ್ತು ವಾರ್ಧಕ ಷಟ್ಪದಿಯಲ್ಲಿ – ಅಕ್ಕರಗಳಲ್ಲಿ ಸಾಂಗತ್ಯಾದಿ ಸೀಸ ಪದ್ಯಗಳಲ್ಲಿ ಕೂಡ ಆದಿಪ್ರಾಸ ಕನ್ನಡದ ಒಂದು ಪರಂಪರೆಯೇನೋ ಎಂಬ ರೀತಿಯಲ್ಲಿದ್ದುಬಿಟ್ಟಿತು.

ಈ ಆದಿಪ್ರಾಸದ ಪರಂಪರೆ ಎಷ್ಟು ಗಟ್ಟಿಯಾಗಿ ರೂಢಿಯಾಗಿ ಬಿಟ್ಟಿದ್ದಿತೆಂದರೆ ಆದಿಪ್ರಾಸವನ್ನು ಬಿಡುವ ವಿಷಯದಲ್ಲಿ ತೀವ್ರವಾದ ವಿರೋಧಕ್ಕೆ ಒಳಗಾಗುವಂತೆ ಕೂಡ ಇದ್ದಂತಿದೆ. ಉದಾಹರಣೆಗೆ ಈ ಪದ್ಯವನ್ನು ಗಮನಿಸಿ:

ಪ್ರಾಸಮನಿಡುವುದೆ ನಿನಗಾ
ಯಾಸಮದಪ್ಪೊಡೆ ಬಿಡುವುದು ಪದ್ಯರಚನೆಯಂ
ಸಾಸಮಿದಲ್ಲವೆ ಲೋಕದೊ
ಳಾಲಿಸುವುದು ಮದುವೆಯಂ ನಪುಂಸಕನುಂ ಪೇಳ್

ಪ್ರಾಸವಿಲ್ಲದೆ ಬರೆಯುವುದು ಒಂದರ್ಥದಲ್ಲಿ ನಪುಂಸಕನಾದವನು ಮದುವೆಯಾಗ ಬಯಸುವ ಸಾಮರ್ಥ್ಯದಂತೆ ಎಂಬ ಲೇವಡಿ ಮಾತು ಸ್ವಲ್ಪ ಉಗ್ರವೆಂಬಂತೆ ನಮಗೆ ಕಾಣಬಹುದು. ಆದರೆ, ಪ್ರಥಮವಾಗಿ ಇಂಗ್ಲಿಷಿನ ಕೆಲ ಪದ್ಯಗಳನ್ನು ‘ಆಂಗ್ಲ ಕವಿತಾವಳಿ’ಯಾಗಿ ಅನುವಾದಿಸಿಕೊಟ್ಟ ಹಟ್ಟಂಗಡಿ ನಾರಾಯಣ ರಾಯರು ಹೇಳಿದ್ದು – “ಕನ್ನಡದಲ್ಲಿ ಚರಣದ ಎರಡನೆಯ ಅಕ್ಷರವು ಪ್ರಾಸಕ್ಕೆ ಯುಕ್ತವೆಂದು ಪ್ರಾಚೀನ ಕವಿಗಳು ನಿರ್ಧರಿಸಿದ್ದು ತಪ್ಪೆಂದು ನಾನು ಸರ್ವಥಾ ಉಸುರಲಾರೆ. ಆದರೆ, ಈ ಪ್ರಾಸಕ್ಕೆ ಬದಲಾಗಿ ಅಂತ್ಯಪ್ರಾಸವನ್ನು ಆಚರಿಸಿದರೆ ಇಂಪಾಗಲಾರದೆಂದೂ ವಾದಿಸಲಾರೆ, ಕೊಡಗರ ಹಾಡುಗಳಲ್ಲಿ ಅಂತ್ಯಪ್ರಾಸವೇ ಪ್ರಧಾನ. ಪ್ರಾಚೀನ ದ್ರಾವಿಡರ ಪದ್ಧತಿ ಹೀಗರಬಹುದಾಗಿತ್ತು. ನಾನೊಂದು ಸಾವಿರ ಚರಣಗಳನ್ನು ರಚಿಸಬಹುದು. ಇದುವರೆಗೆ ಪ್ರಾಸ ಮುಂಡನಕ್ಕೆ ನನ್ನ ಕಿವಿ ಲಗ್ಗಲಿಲ್ಲ.”

ಇಂಗ್ಲಿಷ್‌ ಗೀತಗಳನ್ನು ‘ಸಂಭಾವನಾ’ ಗ್ರಂಥದಲ್ಲಿ ವಿಮರ್ಶಿಸಿದ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ದ.ರಾ. ಬೇಂದ್ರೆಯವರು ಪ್ರಾಸವನ್ನು ಕುರಿತು ೧೯೪೧ರಲ್ಲಿ ಹೇಳಿದ್ದು ಹೀಗಿದೆ : “ಗದ್ಯವು ವೃತ್ತ ಸಂಧಿಯಾಗುವುದು ಹೇಗೆ ಅದಕ್ಕೆ ಕೊರತೆಯೋ ಹಾಗೆಯೇ ಭಾವೋದ್ರೇಕದ ಪದ್ಯಗಳಲ್ಲಿ ಉಚಿತ ಪ್ರಾಸವಿಲ್ಲದಿರುವುದು ಒಂದು ಕುಂದು.” ಅತ್ಯುತ್ತಮವಾದ ಪದ್ಯಗಳನ್ನು ಬರೆದ ಪಂಜೆ ಮಂಗೇಶರಾಯರಾಗಲಿ, ಇಂಗ್ಲಿಷಿನ ಕೆಲವು ಪದ್ಯಗಳನ್ನು ಸೊಗಸಾಗಿ ಅನುವಾದಿಸಿದ ಎಸ್‌. ಜಿ. ನರಸಿಂಹಾಚಾರ್ಯರಾಗಲಿ ಅತ್ಯತ್ತಮವಾದ ರಚನೆಗಳನ್ನೇ ಮಾಡಿದ್ದಾರೆ. ಆಗತಾನೆ ನಾಡಿಗೆ ಬಂದ ಉಗಿಬಂಡಿಯನ್ನು ಕುರಿತು ಸೊಗಸಾದ ಕವಿತೆ ಬರೆದಿದ್ದಾರೆ. ಆದರೆ ಅಲ್ಲೆಲ್ಲ ಆದಿಪ್ರಾಸವೇ ಇದೆ.

ಈ ವಿಷಯದಲ್ಲಿ ಆದಿಪ್ರಾಸವನ್ನು ತ್ಯಜಿಸುವ ತೀರ್ಮಾನವನ್ನು ಮೊದಲಿಗೆ ತೆಗೆದಕೊಂಡವರು ಮಂಜೇಶ್ವರದ ಗೋವಿಂದ ಪೈಗಳು. ಅವರು ಹೇಳಿದ್ದು ಹೀಗೆ : “೧೯೧೧ನೆಯ ಏಪ್ರಿಲ್‌ ತಿಂಗಳಲ್ಲಿ ನಾನು ಸುಮಾರು ಒಂದು ತಿಂಗಳು ಬರೋಡಾ ರಾಜ್ಯದ ನವಸಾರಿ ಎಂಬಲ್ಲಿದ್ದೆ. ಆಗ್ಗೆ ಒಂದು ಮುಂಜಾನೆ ಮಾಳಿಗೆಯಲ್ಲಿ ಶತಪಥಗೈಯುತ್ತಿದ್ದಾಗ ಹಠಾತ್ತಾಗಿ, ಆಗೋದು ಹೋಗೋದು ದೇವರ ಇಚ್ಛೆ, ಹೂಡೋದು ಬಿತ್ತೋದು ನನ್ನ ಇಚ್ಛೆ. ಇನ್ನು ಮೀನಮೇಷ ನೋಡದೆ ಪ್ರಾಸವನೀಗಲೇ ತೊರೆದುಬಿಡುವೇ ನಿಶ್ಚಯಂ ಎಂದಾಯಿತು.”

“ಮರದ ಹಣ್ಣು ಮರದ ಬುಡದಾಗೆ ಬಂತು.” ಹಾಗೆ ಹೇಳಿದಂತೆ ಪ್ರಾಸವಿಲ್ಲದೆ ರಚಿಸಿದ ‘ಹೊಲೆಯನು ಯಾರು’ ಎಂಬ ಕವಿತೆ ಸ್ವದೇಶಾಭಿಮಾನಿ ಪತ್ರಿಕೆಯಲ್ಲಿ ಪ್ರಕಟವೂ ಆಗಿಬಿಟ್ಟಿತು. ಇದರಿಂದಾದ ಕೋಲಾಹಲ ಮಾತ್ರ ಅಷ್ಟಿಷ್ಟಲ್ಲ. “ಈ ಪ್ರಾಸತ್ಯಾಗದಿಂದ ಕನ್ನಡ ನಾಡಿಗಾಗುವ ಪ್ರಯೋಜನವೇನೂ ತಿಳಿದುಬರುವುದಿಲ್ಲ. ಕರ್ನಾಟಕ ಮಧುಸೂಧನರ ಇಷ್ಟ. ಉಪ್ಪಿಲ್ಲದ ಸಾರನ್ನು ಬಡಿಸಬೇಕೆಂದಿದ್ದರೆ ಬಡಿಸಲಿ. ಕರ್ಣಾಟಕ ದೇಶದಲ್ಲಿ ಪ್ರಾಸವಿಲ್ಲದ ಪದ್ಯಗಳು, ತ್ರಾಸಿಲ್ಲದೆ ಹಾರಾಡುವುದಾದರೆ – ತ್ರಾಸು ಹಾಕಿ ಪದ್ಯಗಳನ್ನೇಕೆ ನಿರ್ಮಿಸಬಾರದೆಂದು ಇದೂ ಒಂದು ಪ್ರಶ್ನೆ.”

ಇಂಥ ಗೊಂದಲಗಳ ಮಧ್ಯೆ ಆದಿಪ್ರಾಸವನ್ನು ಕೈಬಿಡಲಾಗಿ ಗೋವಿಂದ ಪೈಗಳ ಈ ಕ್ರಮವನ್ನು ಕನ್ನಡ ವಾಮನ, ವಿದ್ವಾಂಸರಾದ ಮ. ಪ್ರ. ಪೂಜಾರ ಮೊದಲಾದವರು ೧೯೧೩ ಮತ್ತು ೧೯೧೯ರಲ್ಲಿ ಒಪ್ಪಿ ಅಂಗೀಕಾರ ಮುದ್ರೆ ನೀಡಿದ್ದು ಒಂದು ಐತಿಹಾಸಿಕ ಸಂಗತಿ.

ಆದಿಪ್ರಾಸದ ವಿಷಯಕ್ಕೆ ಸಂಬಂಧಿಸಿದಂತೆ ಈ ಕೆಲವು ಹಳಗನ್ನಡ ಮತ್ತು ನಡುಗನ್ನಡದ ಪ್ರಯೋಗಗಳನ್ನು ಗಮನಿಸಬಹುದು – ಇಲ್ಲಿ ಉದಾಹರಿಸಿರುವ ಎರಡು ಕಂದಪದ್ಯಗಳನ್ನು ಹಾಗೂ ಎರಡು ವೃತ್ತಗಳನ್ನು ಅರ್ಥಾನುಸಾರಿಯಾಗಿ ಉದ್ಧರಿಸಲಾಗಿದೆ.

) ಮನೆ ನಿನಗೆ
ನಂದೋಪಾಲನ ಮನೆ
ತುಱುಗಾರ್ತಿ ನಿನಗೆ ಮನೆವೆಂಡತಿ
ಪಚ್ಚನೆ ಪಸಿಯ ಗೋವನೈ
ಕರಮನೆಯದೆ
ನಿನ್ನಳವಿಗಳವನಱೆಯದೆ ನೆಗೞ್ದೈ

) ನೋಡುವ ಕಣ್ಗಳ ಸಿರಿ
ಮಾತಾಡುವ ಬಾಯ್ಗಳ ರಸಾಯನಂ
ಸಂತಸದಿಂ ಕೂಡುವ ತೋಳ್ಗಳ ಪುಣ್ಯಂ
ನಾಡಾಡಿಯೆ ರೂಪು ಕುವರ ವಿದ್ಯಾಧರನಾ.

ಮೊದಲ ಕಂದ ಪಂಪನದು. ಪ್ರಾಸಸ್ಥಾನವನ್ನು ಪದದ ಕೆಳಗೆ ಗೆರೆಯೆಳೆದು ಸೂಚಿಸಲಾಗಿದೆ. ಪ್ರಾಸಕ್ಕಾಗಿ ಪದಗಳು ಒಡೆದಿವೆ; ಎರಡನೆಯದು ಜನ್ನನದು, ಇಲ್ಲಿ ‘ಡ’ ಕಾರ ಪ್ರಾಸವನ್ನು ಅದರ ಕೆಳಗೆ ಗೆರೆಯೆಳೆದು ಸೂಚಿಸಲಾಗಿದೆ. ನಾಲ್ಕನೆಯ ಸಾಲಿನಲ್ಲಿ ಮಾತ್ರ ಪದ ಒಡೆಯದೆ ಪ್ರಾಸಸ್ಥಾನವುಳಿದಿದೆ. ಇನ್ನುಳಿದ ಎರಡು ವೃತ್ತಗಳೂ ಪಂಪನವು. ಇವುಗಳನ್ನೂ ಅರ್ಥಾನುಸಾರಿಯಾಗಿಯೇ ಉದ್ಧರಿಸಲಾಗಿದ್ದು ಪ್ರಾಸಾಕ್ಷರಗಳನ್ನು ಅದರ ಕೆಳಗೆ ಗೆರೆಯೆಳೆದು ಸೂಚಿಸಲಾಗಿದೆ.

) ಸುರತರುನಂದನಂಗಳಿರ
ರತ್ನಪಿನದ್ಧ ಕುಟ್ಟಿಮಾಂತರ ಸುರತಾಲಯಂಗಳಿರ
ಚಾರವಿಲೋಲಕಟಾಕ್ಷಪಾತ ಸೌಂದರಪರಿವಾರದೇವಿಯರಿರ
ಕಡುಕಯ್ದು ಕೃತಾಂತನ್+ ಇಂತು
ನಿರ್ನೆರಮ್+ ಎಳೆದುಯೈ
ಬಾರಿಸದೆ
ಕೆಮ್ಮನೆ +
ಉಪೇಕ್ಷಿಸಿ ನೋಡುತಿರ್ಪಿರೇ

) ನೆಲಸುಗೆ
ನಿನ್ನವಕ್ಷದೊಳೆ
ನಿಶ್ಚಳಮ್+
ಭಟಖಡ್ಗ ಮಂದಲೋತ್ಪಲವನ ವಿಭ್ರಮಭ್ರಮರಿಯಪ್ಪ
ಮನೋಹರಿ ರಾಜ್ಯಲಕ್ಷ್ಮಿ
ಭೂವಲಯಮನ್+ ಅಯ್ಯನಿತ್ತುದುಮನ್+ ಆಂ
ನಿನಗಿತ್ತೆನ್+ ಇದೇವುದಣ್ಣ
ನೀನ್ಒಲಿದ ಲತಾಂಗಿಗಂ ಧರೆಗಮ್+
ಆಟಿಸಿದಂದು ನೆಗೞ್ತೆಮಾಸದೇ

ಈ ನಾಲ್ಕೂ ಉದಾಹರಣೆಗಳಲ್ಲಿ ಪ್ರಾಸ ಪದ್ಯದ ಪಂಕ್ತಿಯನ್ನು ಅಳೆಯುವಲ್ಲಿ ಮತ್ತೆ ಛಂದಸ್ಸನ್ನು ಅರಿಯುವಲ್ಲಿ ನೆರವಾಗಬಹುದಾಗಿದೆಯಲ್ಲದೆ ಅರ್ಥದ ಅಥವಾ ಲಯದ ದೃಷ್ಟಿಯಿಂದ ಮುಖ್ಯವಾಗದಿರುವುದನ್ನು ಗಮನಿಸಬಹುದು. ತ್ರಿಪದಿ ಹಾಗೂ ಸಾಂಗತ್ಯಗಳಲ್ಲೂ ಹೀಗೆಯೇ ಎಂದು ಹೇಳುವುದು ಕಷ್ಟವಾಗುತ್ತದೆ. ಅವು ಗೇಯ ಛಂದಸ್ಸುಗಳು; ಹಾಗಾಗಿ ತಾಳ ಹಾಗೂ ಒಳಪ್ರಾಸಗಳನ್ನು ಹೆಚ್ಚು ಸಹಜವೆನ್ನುವಂತೆ ಒಳಗೊಳ್ಳುತ್ತವೆಯೇನೋ. ಷಟ್ಪದಿಗಳಲ್ಲಿ ಕೂಡ ಪ್ರಾಸ ಸ್ಥಾನ ವೃತ್ತಕಂದಗಳಲ್ಲಿ ಆಗಿರುವಂತೆಯೇ ಕೇವಲ ಪಾದ ಹಾಗೂ ಛಂದಸ್ಸುಗಳನ್ನು ಗುರುತಿಸಲು ನೆರವಾಗಬಹುದು. ಉದಾಹರಣೆಗೆ ಕುಮಾರವ್ಯಾಸನ ಒಂದು ಷಟ್ಪದಿಯನ್ನೆ (ಭಾಮಿನಿ) ಗಮನಿಸಬಹುದು.

ಆರೊಡನೆ ಕಾದುವೆನು
ಕೆಲಬರು ಹಾರುವರು
ಕೆಲರಂತಕನನೆರೆಯೂರವರು
ಕೆಲರಧಮಕುಲದಲಿ ಸಂದು ಬಂದವರು
ವೀರರೆಂಬವರಿವರು
ಮೇಲಿನ್ನಾರ ಹೆಸರುಂಟವರೊಳು + ಎಂದು
ಕುಮಾರನೆಣಗೊಬ್ಬನಲಿ
ನುಡಿದನು
ಹೆಂಗಳಿದಿರಿನಲಿ.

ಇಲ್ಲಿಯೂ ಪ್ರಾಸಸ್ಥಾನ ‘ರ’ ಇದ್ದು ಲಯವನ್ನಾಗಲಿ ಅರ್ಥವನ್ನಾಗಲಿ ನಿದೇಶಿಸುತ್ತಿಲ್ಲ ಇಂಥ ಆದಿಪ್ರಾಸವನ್ನು ಕವಿರಾಜಮಾರ್ಗಕಾರ ಆರು ಪ್ರಕಾರಗಳಾಗಿ ವಿಂಗಡಿಸುವುದೂ ಉಂಟು.

ನವೋದಯ ಛಂದಸ್ಸು ಆದಿಪ್ರಾಸದಿಂದ ಬಿಡುಗಡೆಗೊಂಡದ್ದಂತು ನಿಜ. ಆದರೆ ನವೋದಯ ಕವಿಗಳು ಪ್ರಾಸ ದ್ವೇಷಿಗಳೇನೂ ಅಲ್ಲ ಎಂಬುದಕ್ಕೆ ಅವರ ಕವಿತೆಗಳಲ್ಲಿ ಬಳಕೆಯಾಗುವ ಪ್ರಾಸವನ್ನು ಹೊಸ ಬಗೆಯಲ್ಲಿ ಬಳಸಿಕೊಂಡು ಛಂದಸ್ಸು ಹಾಗೂ ಕಾವ್ಯದ ಸೌಂದರ್ಯವನ್ನು ಹೆಚ್ಚಿಸಿಕೊಂಡದ್ದಂತೂ ನಿಜ. ಇದನ್ನೇ ಶ್ರೀಯವರು ಪ್ರಾಸದ ನಿರಾಕರಣೆ ಮತ್ತು ಹೊಸ ಬಗೆಯ ವಿನಿಯೋಗ ಎಂದದ್ದು.

ಈ ಕೆಲವು ಉದಾಹರಣೆಗಳನ್ನು ಗಮನಿಸಿ.

. ಅಡಿಯ ಗೆಜ್ಜೆ ನಡುಗೆ ಹೆಜ್ಜೆಯಿಡುತ ಸುಗ್ಗಿ ಬರುತಿದೆ.

. ಬುಗುರಿಯೀಯೆ ಶಬರಿಕಾಯೆ ರಾಮನಿಲ್ಲಿ ಬಂದನೆ
ಹೇಳೆಲೆ ಹಕ್ಕಿ ಚೆಲುವನು ಸಿಕ್ಕಿ ನನಗೆ ಮದುವೆಯೆಂದು

. ಹರನ ಜೆಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ

. ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಭುದ್ಧ ಶುದ್ಧ ನೀರೆ
ಸಿರಿಪಾರಿಜಾತ ಪರಪಾರಿಜಾತ
ತಾರಾಕುಸಮದಿಂದೆ

. ಏನು ಕೋಮಲ ಕಾಯ
ಹೊಳಪು ಹೊಸ ಪ್ರಾಯ

. ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ
ಇನಿಯರ ಬೇಟ; ಬನದಲಿ ಬೆಳದಿಂಗಳೂಟ.
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಟ.
ಮಲ್ಲಿಗೆ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು.

ಹೀಗೆ ಈ ಆರು ಉದಾಹರಣೆಗಳಲ್ಲಿ ನವೋದಯ ಕಾವ್ಯ ಆದಿಪ್ರಾಸವನ್ನು ಬಿಟ್ಟರೂ ಅದರ ವಿನಿಯೋಗವನ್ನು ಅನುಪ್ರಾಸ ಅಂತ್ಯಪ್ರಾಸಾದಿಗಳಲ್ಲಿ ಅದ್ಭುತವಾಗಿ ಬಳಸಿಕೊಂಡದ್ದು ನವೋದಯ ಕವಿಗಳ ಸಾಧನೆ ಎನ್ನಬೇಕು.

ಇನ್ನು ಪಾದಗಳ ವಿಷಯದಲ್ಲಿ ನವೋದಯ ಕವಿಗಳು ನಡೆಸಿದ ಪ್ರಯೋಗಗಳು ವಿಪುಲ ರೀತಿಯವಾಗಿದ್ದು ಕೆಲವನ್ನು ಮಾತ್ರ ಉದಾಹರಿಸಲು ಯತ್ನಿಸುತ್ತೇನೆ (ವಿಸ್ತಾರ ಭಯದಿಂದ)

ರಸವೆ ಜನನ
ವಿರಸ ಮರಣ
ಸಮರಸವೇ ಜೀವನ

ಒಂದರ್ಥದಲ್ಲಿ ಇದು ಕಾಣಿಕೆ ಕವನದಲ್ಲಿ ಬರುವ

ನಮ್ಮ ಕವಿಗಳೆಂಬ ಕೋಡು
ತಲೆಗದಾವುದು

ಪದ್ಯದ ಇನ್ನೊಂದು ರೂಪ. ಮೊದಲ ಉದಾಹರಣೆಯಲ್ಲಿ ಮೊದಲ ಎರಡು ಸಾಲುಗಳಲ್ಲಿ ಮೂರು ಮಾತ್ರೆಯ ಎರಡೆರಡು ಗಣಗಳಿದ್ದು ಮೂರನೆಯ ಸಾಲಿನಲ್ಲಿ ಮೂರು ಮಾತ್ರೆಗಳ ಮೂರು ಗಣಗಳು ಮತ್ತೆ ಕೊನೆಗೆ ಗುರು ಬಂದಿದ್ದರೆ ಶ್ರೀಯವರ ಪದ್ಯದಲ್ಲಿ ಒಂದೇ ಸಾಲಿನಲ್ಲಿ ಮೂರು ಪಾತ್ರೆಗಳ ನಾಲ್ಕು ಗಣಗಳು ಬಂದಿವೆ. ಅನಂತರ ಅಂಬಿಕಾತನಯದತ್ತರ ಪದ್ಯದ ಮೂರನೆಯ ಸಾಲಿನಲ್ಲಿ ಮೂರು ಮಾತ್ರೆಗಳ ಮೂರು ಗಣಗಳಾದ ಮೇಲೆ ಒಂದು ಗುರು ಒಂದು ‘ಮುಡಿ’ಯಾಗಿ ನಿಂತು ನಿಲುಗಡೆ ತಂದಿದ್ದರೆ ಶ್ರೀಯವರ ಪದ್ಯದಲ್ಲಿ ಮೂರು ಮಾತ್ರೆಗಳ ಎರಡು ಗಣಗಳಾದ ಮೇಲೆ ‘ಮುಡಿ’ಯಾಗಿ ಗುರು ಬಂದಿದೆ. ಗಣಗಳ ಸಂಖ್ಯೆಯಲ್ಲಿ ಒಂದು ಗಣ ಕಡಿಮೆಯಾಗಿದೆ. ಅನಂತರ ಶ್ರೀಯವರ ಕಾಣಿಕೆ ಪದ್ಯದ ವಿನ್ಯಾಸ ಕೂಡ ಭಿನ್ನ. ಆರು ಖಂಡಗಳಿರುವ ಈ ಪದ್ಯದ ವಿನ್ಯಾಸ ಒಂದೇ ರೀತಿಯದು.

ಮೊದಲು ಮೂರು ಸಾಲುಗಳಲ್ಲಿ ಮೂರು ಮಾತ್ರೆಗಳ ನಾಲ್ಕು ಗಣಗಳು ಅನಂತರ ನಾಲ್ಕನೆಯ ಸಾಲಿನಲ್ಲಿ ಮೂರು ಮಾತ್ರೆಗಳ ಎರಡು ಗಣಗಳಾದ ಮೇಲೆ ಒಂದು ಗುರು ಮುಡಿಯಾಗಿ ಯತಿಸ್ಥಾನವಾಗುತ್ತದೆ. ಇದೇ ಕ್ರಮವೇ ಎರಡು, ಮೂರು, ನಾಲ್ಕು, ಐದು ಮತ್ತು ಆರನೆಯ ಖಂಡಗಳಲ್ಲಿಯೂ ಇದೆ.

ಇದೇ ಮೂರು ಮಾತ್ರೆಗಳ ವಿನ್ಯಾಸದಲ್ಲಿ ಇನ್ನೊಂದು ಬಗೆಯನ್ನು ‘ಮಾದ ಮಾದಿ’ ಕವಿತೆಯಲ್ಲಿ ನೋಡಬಹುದು. ನಾಲ್ಕು ಖಂಡಗಳಿರುವ ಈ ಪದ್ಯದ ವಿನ್ಯಾಸ ‘ಕಾಣಿಕೆ’ ಕವನಕ್ಕಿಂತ ಭಿನ್ನ:

ಬೇಟಕಾರ ಬಂದ ಮಾದ,
ಹಹ್ಹ! ಏನು ಬೇಟವೋ!
ಬೇಡಿ ಸತ್ತು ಸುಣ್ಣವಾದ,
ಹಹ್ಹ! ಏನು ಬೇಟವೋ!
ಮಾದಿ ಕತ್ತನೊಲೆದುದೇನು?
ಅತ್ತ, ಇತ್ತ, ಸಿಡಿದುದೇನು!
ಮಾದ, ಪಾಪ, ಮಿಡಿದುದೇನು!
ಹಹ್ಹ! ಏನು ಬೇಟವೋ!

ಇಲ್ಲಿನ ಒಂದು ಪದ್ಯದ ವಿನ್ಯಾಸ ಗಮನಸಿಬಹುದು. ಇಲ್ಲಿಯೂ ನಾಲ್ಕು ಪದ್ಯ ಖಂಡಗಳಿವೆ. ಆದರೆ ಇಲ್ಲಿಯ ಖಂಡಗಳ ವಿನ್ಯಾಸ ಒಂದೇ ರೀತಿಯದಾಗಿದ್ದು – ಪ್ರತಿ ಖಂಡದಲ್ಲೂ ಎಂಟು ಪಂಕ್ತಿಗಳಿವೆ.

ಒಂದು, ಮೂರು, ಐದು, ಆರು ಮತ್ತು ಏಳನೇ ಸಾಲುಗಳ ರಚನೆ ಒಂದೇ ರೀತಿಯದು. ಇಲ್ಲೆಲ್ಲ ಮೂರು ಮಾತ್ರೆಗಳ ನಾಲ್ಕು ಗಣಗಳು ಪ್ರತಿಸಾಲಿನಲ್ಲೂ ಇವೆ. ಆದರೆ ಎರಡು, ನಾಲ್ಕು ಮತ್ತು ಎಂಟನೆ ಸಾಲುಗಳ ರಚನೆ ಇನ್ನೊಂದು ರೀತಿ. ಇಲ್ಲಿ ಮೂರು ಮಾತ್ರೆಗಳು ಮೂರು ಗಣಗಳು ಮೇಲೆ ಒಂದು ಗುರು ಬಂದು ಅದು ಯತಿಸ್ಥಾನವಾಗುತ್ತದೆ.

ಅಂದರೆ ಈವರೆಗೆ ಗಮನಿಸಿದ ಎರಡು ಉದಾಹರಣೆಗಳಿಗಿಂತ ಭಿನ್ನವಾಗಿ ಇಲ್ಲಿ ಮೂರು ಮಾತ್ರೆಗಳ ಗಣಗಳ ವಿನ್ಯಾಸದಲ್ಲಿ ವೈವಿಧ್ಯ ಬಂದಿದೆ.

ಮೂರು ಮಾತ್ರೆಗಳ ನಾಲ್ಕು ಗಣಗಳ ವಿನ್ಯಾಸದ ಜೊತೆಗೆ ಮೂರು ಮಾತ್ರೆಗಳ ಎರಡು ಗಣಗಳನ್ನಿಟ್ಟು ಕೊನೆಯ ಗಣವೇ ‘ಮುಡಿ’ಯಾಗಿ ಯತ್ತಿಸ್ಥಾನವಾಗುವ ರಚನೆಗಳೂ ಇವೆ. ಉದಾಹರಣೆಗೆ ಕುವೆಂಪು ಅವರ ‘ಭಾದ್ರಪದದ ಸುಪ್ರಭಾತ’ ಕವಿತೆಯ ಈ ನಾಲ್ಕು ಸಾಲುಗಳನ್ನು ಗಮನಿಸಬಹುದು.

⋃⋃⋃⋃⋃⋃ ⋃⋃⋃ – ⋃
ದಿಗುತಟದಲಿ ತೆರೆಯುತ್ತಿತ್ತು
೬, ೩+೩
⋃ ⋃ ⋃ – ⋃
ಹಗಲಿನಕ್ಷಿ
೩+೩
ಮುಗಿಲಗರಿಯ ಕಾಯಿಸಿತ್ತು ೩+೩+೩+೩
ಗಗನಪಕ್ಷಿ ೩+೩

ಇಲ್ಲಿಯೂ ಒಂದು ಮತ್ತು ಮೂರನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ನಾಲ್ಕು ಗಣಗಳು, ಎರಡು ಮತ್ತು ನಾಲ್ಕನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಎರಡು ಗಣಗಳು ಇದ್ದು ಕೊನೆಯ ಗಣವೇ ‘ಮುಡಿ’ಯಾಗಿ ಯತಿಸ್ಥಾನವೂ ಆಗಿ ವೈವಿಧ್ಯ ಪಡೆದಿದೆ. ಇಲ್ಲಿ ಮೊದಲ ಸಾಲಿನ ವಿನ್ಯಾಸ ಹಾಗೂ ಮೂರನೆಯ ಸಾಲಿನ ವಿನ್ಯಾಸದಲ್ಲಿ ಕೂಡ ವೈವಿಧ್ಯವಿದೆ. ಮೊದಲ ಸಾಲಿನಲ್ಲಿ ಆರು ಮಾತ್ರೆಗಳ ಗಣ ಮೊದಲನೆಯದು – ಉಳಿದವು ಮೂರು ಮಾತ್ರೆಗಳ ಎರಡು ಗಣಗಳು. ಮೂರನೆಯ ಸಾಲು ಮೂರು ಮೂರು ಮಾತ್ರೆಗಳ ನಾಲ್ಕು ಗಣಗಳಿಂದ ವಿನ್ಯಾಸಗೊಂಡಿದೆ.

[1] “ಇಲ್ಲ, ಕನ್ನಡದಲ್ಲಿ ಇಂಗ್ಲಿಷಿನಲ್ಲಿ ಸಾಧ್ಯವಾಗುವಂತೆ, ಉದಾತ್ತ ಭಾವಗಳನ್ನು ಉನ್ನತ ಆಲೋಚನೆಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ಆ ಭಾಷೆಯ ಮಟ್ಟ ಬಹಳ ಕೀಳು, ಅಲ್ಲದೆ ಅದರಲ್ಲಿರುವ ಛಂದಸ್ಸು ಹಳೆಯ ಕಂದಾಚಾರದ ಛಂದಸ್ಸು, ವೃತ್ತಕಂದ ಇತ್ಯಾದಿ, ಇಂಗ್ಲಿಷಿನಲ್ಲಿರುವ ಛಂದೋ ವೈವಿಧ್ಯ ಇಲ್ಲವೆ ಇಲ್ಲ.” ಪು. ೨೬೫. ನೆನಪಿನ ದೋಣಿಯಲ್ಲಿ ೨-೭-೧೯೨೪. “ಮುಂದೆ ಕನ್ನಡದಲ್ಲಿ ನಾನು ಬರೆಯಲು ತೊಡಗಿದಾಗ ಈ ಇಂಗ್ಲಿಷ್‌ನ ಛಂದೋವೈವಿಧ್ಯಗಳಿಂದಲೇ ಸ್ಪೂರ್ತಿ ಪಡೆದದ್ದು” ಪು. ೨೦೮, ಅದೇ ೧೯-೯-೧೯೨೩.