ಪಂಪ ರನ್ನರಂಥ ಹಳಗನ್ನಡ ಕವಿಗಳು ಸಂಸ್ಕೃತದ ಅಕ್ಷರಗಣ ಛಂದಸ್ಸುಗಳನ್ನೆ ವಿಶೇಷವಾಗಿ ಬಳಸಿಕೊಂಡಿದ್ದರೂ ಅವುಗಳಲ್ಲಿ ಅವರು ಸಾಧಿಸಿದ ಅಭಿವ್ಯಕ್ತಿ ಅಪೂರ್ವವಾದದು. ಉದಾಹರಣೆಗೆ ಎರಡು ವೃತ್ತಗಳನ್ನು ಪರಿಶೀಲಿಸಬಹುದು.

+                         +               +
.        ಚಾಗದ, ಭೋಗದ, ಅಕ್ಕರದ, ಗೇಯದ, ಗೊಟ್ಟಿಯ, ಅಲಂಪಿನ, ಇಂಪುಗ
+                      +      +             +
ಳ್ಗೆ, ಆಗರವಾದ, ಮಾನಿಸರೆ ಮಾನಿಸರ್‌. ಅಂತು, ಅವರಾಗಿ, ಪುಟ್ಟಲ್‌, ಏ
ನಾಗಿಯುಮೇನೊ, ತೀರ್ದಪುದೆ? ತೀರದೊಡಂ, ಮಱೆದುಂಬಿಯಾಗಿ, ಮೇಣ್‌,
ಕೋಗಿಲೆಯಾಗಿ, ಪುಟ್ಟುವುದು, ನಂದನದೊಳ್, ಮನವಾಸಿದೇಶದೊಳ್.

                   +                         +              +
.        ನೆತ್ತಮನ್‌ ಆಡಿ, ಬಾನುಮತಿ ಸೋಲ್ತಡೆ, ಸೋಲಮನ್‌ ಈವುದು,
+
ಎಂದು ಕಾಡುತ್ತ ಇರೆ, ಲಂಬಂಣ ಪಱೆಯೆ, ಮುತ್ತಿನ ಕೇಡನೆ, ನೋಡಿ, ನೋಡಿ
+        +           +               +
ಬಳ್ಕುತ್ತೆ ಇರೆ, ಏವಮ್‌ ಇಲ್ಲದೆ, ಇವನ್‌ ಆಯ್ವುದೊ, ತಪ್ಪದೆ ಪೇೞೆಂ, ಎಂಬ,
ಭೂಪೋತ್ತಮನಂ, ಬಿಸುಟ್ಟು, ಇರದೆ, ನಿಮ್ಮೊಳೆ ಪೊಕ್ಕೊಡೆ, ಬೇಡನಲ್ಲನೇ?

ಇವೆರಡೂ ಉತ್ಪಲಮಾಲಾವೃತ್ತಗಳು . ಮೂರು ಅಕ್ಷರಗಳ ಮಾನದಿಂದ ಆಗಿರುವ ಅಕ್ಷರಗಣಗಳಿಂದ ಕೂಡಿದವು ಇವು. ನಾಲ್ಕು ಸಾಲುಗಳಿಂದ ಈ ಸಮಪಾದ ವೃತ್ತದ ಮೊದಲಿನ ಸಾಲುಗಳ ವಿನ್ಯಾಸ (ಪ್ರಸ್ತಾರ) ಹೀಗಿದೆ:

ಭ    ರ    ನ    ಭ      ಭ   ರ  ಲಘು, ಗುರು
– ⋃⋃   | – ⋃ – | ⋃⋃⋃ | – ⋃⋃ | – | ⋃⋃ – ⋃ – | ⋃ –

ನಾಲ್ಕು ಸಾಲುಗಳಲ್ಲಿಯೂ ಗುರು ಲಘುಗಳ ಸ್ಥಾನ ಹೀಗೆಯೇ ಇರಬೇಕೆನ್ನುವ ನಿಯಮದಿಂದ ಕೂಡಿದ ಉಪ್ಪಲೆಮಾಲೆ ಛಂದಸ್ಸನ್ನೇ ಎರಡು ಕಡೆಯೂ ಬಳಸಿದ್ದಾನೆ, ಪಂಪ, ಇದರ ಲಕ್ಷಣಗಳನ್ನು ಗುರುತಿಸುವಾಗ- ಪ್ರಸ್ತಾಪ ಹಾಕುವಾಗ -ಅನುಸರಿಸುವ ಕ್ರಮ ಏನೇ ಇರಲಿ, ಪದ್ಯವನ್ನೋದುವಾಗಂತೂ ಮೂರು ಮೂರು ಅಕ್ಷರಗಳಿಗೊಂದು ಗಣವಿರುವಂತೆಯೇ ಬಿಡಿಸಿ ಓದುವುದಿಲ್ಲ. ಮೊದಲ ಪದ್ಯದ ಮೊದಲ ಸಾಲಿನಲ್ಲಿ ಏಳು ಅಲ್ಪಯತಿಗಳೂ, ಎರಡನೆಯ ಸಾಲಿನ ಮೂರನೆಯ ಅಲ್ಪಯತಿಯಾದ ಮೇಲೆ ವಾಕ್ಯಯತಿಯೂ ಬರುತ್ತವೆ. (ಯತಿ ಎಂಬುದು ಉಸಿರುದಾಣವಲ್ಲ; ಅರ್ಧ ವಿರಾಮ ಸ್ಥಾನ. ವಾಕ್ಯಯತಿ ಅಥವಾ ಪೂರ್ಣಯತಿ ಎಂದರೆ ವಾಕ್ಯಾರ್ಥ ಮುಗಿದಾಗ ಬರುವ ವಿರಾಮ. ಅಲ್ಪಯತಿಯೆಂದರೆ ವಾಕ್ಯದ ಅರ್ಥದ ನಡುವಿನ ಅರ್ಥ ವಿರಾಮ ಸ್ಥಾನಗಳು). ಎರಡನೆಯ ಸಾಲಿನಿಂದ ಆರಂಭವಾದ ವಾಕ್ಯದಲ್ಲಿ ಮೂರು ಅಲ್ಪಯತಿಗಳಿಂದ ಮುಂದುವರಿದ ವಾಕ್ಯ ಮುಂದಿನ ಸಾಲಿನ ಎರಡು ಅಲ್ಪಯತಿಗಳಾದ ಮೇಲೆ ನಿಲುಗಡೆಗೆ ಬರುತ್ತದೆ. ಮತ್ತೆ ಮೂರನೆಯ ಸಾಲಿನಲ್ಲಿ ಮೂರು ಅಲ್ಪ ಯತಿಗಳಿದ್ದು ನಾಲ್ಕನೆಯ ಸಾಲಿನಲ್ಲಿರುವ ಐದು ಅಲ್ಪಯತಿಗಳಾದ ಮೇಲೆ ವಾಕ್ಯ ಯತಿ ಬರುತ್ತದೆ. ಅರ್ಥಕ್ಕೆ ತಕ್ಕಂತೆ ಪದ್ಯದಲ್ಲಿ ಯತಿ ಬಂದು ಲಯ ಅರ್ಥಾನುಸಾರಿಯಾಗುತ್ತದೆ. ನಾಲ್ಕು ಸಾಲುಗಳ ನಿಯಮ; ಒಂದೇ ಸಾಲಿನಲ್ಲಿ ಗಣ ವಿನ್ಯಾಸ ಹೀಗೇ ಇರಬೇಕಾದ ನಿಯಮಗಳು ಹಿನ್ನೆಲೆಗೆ ಪೂರ್ಣವಾಗಿ ಸರಿದು ಬಿಡುತ್ತವೆ. ಅಂದರೆ ಕವಿ ಛಂದಸ್ಸನ್ನು ತನ್ನ ಅರ್ಥಕ್ಕೆ ತಕ್ಕಂತೆ ತೀಡಿಕೊಂಡಿದ್ದಾನೆ.

ಎರಡನೆಯ ಪದ್ಯದಲ್ಲಿ ಮತ್ತೆ ಯತಿಸ್ಥಾನಗಳು ಮೊದಲ ಪದ್ಯಕ್ಕಿಂತ ಭಿನವಾಗುತ್ತವೆ, ಅರ್ಹನುಸಾರಿಯಾಗಿ, ಎರಡನೆಯ ಪದ್ಯ ಇಡಿಯಾಗಿ ಒಂದೇ ವಾಕ್ಯವಾಗಿದೆ. ಒಂಬತ್ತು ಅಸಂಪೂರ್ಣ ಕ್ರಿಯಾಪದಗಳಿಂದ ಕೂಡಿದ್ದು ಪಂಪ ಸೂಚಿಸ ಬಯಸುವ ಕರ್ಣ ದುರ್ಯೋಧನರ ಮೈತ್ರಿಯನ್ನು ವಿಶದೀಕರಿಸುವ ಪಗಡೆಯಾಟದ ಸ್ಮೃತಿಯಿಂದ ಕೂಡಿದೆ ಸ್ಮೃತಿಮಾಲೆಯಂತೆ ಅಲ್ಪಯತಿಗಳಿಂದ ಕೂಡಿದ ಮುರಿಮುರಿಯಾದ ವಾಕ್ಯ ಖಂಡಗಳು ಬೆಳೆಯುತ್ತ ಹೋಗುವ ಕ್ರಮ ಪಂಪನ ಪ್ರತಿಭೆಗೆ ದ್ಯೋತಕವಾಗಿದೆ.

ನೆತ್ತನಾಡುವಾಗ ಭಾನುಮತಿ ಸೋತದ್ದು; ಪಣಕ್ಕಾಗಿ ಕಿತ್ತಾಡಿದ್ದು; ಆ ಸಂದರ್ಭದಲ್ಲಿ ಭಾನುಮತಿಯ ಕೊರಳ ಹಾರ ಕಿತ್ತುಹೋಗಿ ಅದರ ಮುತ್ತುಗಳು ನೆಲದಲ್ಲಿ ಚೆಲ್ಲಾಡಿದ್ದು; ಚೆಲ್ಲಾಪಿಲ್ಲಿಯಾದ ಮುತ್ತುಗಳನ್ನು ನೋಡಿ ಅವುಗಳ ಮೋಹದಿಂದ ಭಾನುಮತಿ ಬಗ್ಗಿ ಬಗ್ಗಿ ಒಂದೋಂದೇ ಮುತ್ತನಾಯ್ದುಕೊಳ್ಳತೊಡಗಿದ್ದು; ಇವೆಲ್ಲವನ್ನು ನೋಡುತ್ತಿದ್ದ ದುರ್ಯೋಧನ ಇದೆಂಥ ಲಜ್ಜೆಗೇಡಿತನ ಎಂದದ್ದು; ಈ ಎಲ್ಲ ಘಟನೆಗಳ ಸ್ಮೃತಿಮಾಲೆಯನ್ನು ಕರ್ಣ ನೆನಪು ಮಾಡಿಕೊಳ್ಳುತ್ತಾ ಇಂಥವನನ್ನು ನಾನು ಬಿಟ್ಟು ಹೇಗೆ ಬರಲಿ ಎನ್ನುವ ಕರ್ಣನ ಮನಸ್ಸಿನ ತೊಳಲಾಟ; ದುರ್ಯೋಧನ ಪರವಾದ ಅಭಿಮಾನ -ಇವುಗಳೆಲ್ಲ ಲಯದಲ್ಲಿ ಅಭಿನಯವಾಗಿವೆ. (ಈ ಸ್ಮೃತಿಗಳನ್ನು ಕರ್ಣನ ಮನಸ್ಸಿನಲ್ಲಿ ಆದಂತೆ ಚಿತ್ರಿಸದೆ ಕೃಷ್ಣನ ಎದುರಿನಲ್ಲಿ ನೆನಪು ಮಾಡಿಕೊಳ್ಳುತ್ತಿರುವಂತೆ ಚಿತ್ರಿಸಿರುವುದೂ ಅರ್ಥಪೂರ್ಣವಾಗಿದೆ.)

ಮೇಲು ನೋಟಕ್ಕೆ ಎರಡು ಪದ್ಯಗಳೂ ಉತ್ಪಲಮಾಲಾ ವೃತ್ತಗಳೇ. ಸಮಪಾದ ವೃತ್ತಗಳಾದ ಇವುಗಳ ಪ್ರತಿ ಸಾಲಿನ ಗುರು ಲಘು ವಿನ್ಯಾಸವೂ ಒಂದೇ ರೀತಿಯದೇ. ಸಾಲದುದಕ್ಕೆ ಅದಿಪ್ರಾಸ ಬೇರೆ. ಇಷ್ಟೆಲ್ಲಾ ನಿಯಮಗಳ ತೊಡಕುಗಳಿದ್ದರೂ ಭಾವಾಭಿವ್ಯಕ್ತಿ ಅದ್ಭುತವಾಗಿದೆ. ಸಂಸ್ಕೃತದ ವೃತ್ತಗಳು ಕನ್ನಡದ ಮುರಿಮುರಿಯಾದ ವಾಕ್ಯ ರಚನೆಗಳಿಗೆ ತಕ್ಕಂತೆ ಬಳಿಕಿವೆ. ಕವಿ ಸಂಸ್ಕೃತದ ಛಂದಸ್ಸನ್ನು ಬಳಸಿದ್ದರೂ ತನ್ನ ಭಾವಾಭಿವ್ಯಕ್ತಿಗೆ ಅದನ್ನು ತಿಕ್ಕಿ ತೀಡಿ ಬಡಿದು ತಿದ್ದಿ ಹದಮಾಡಿಕೊಂಡಿದ್ದಾನೆ. ವಾಸ್ತವವಾಗಿ ಕನ್ನಡ ಕವಿಗಳು ಕನ್ನಡಕ್ಕೊಗ್ಗುವ ವೃತ್ತಗಳನ್ನಷ್ಟೆ ಬಳಸಿಕೊಂಡಿದ್ದಾರೆ. ಶ್ಲೋಕ, ಜಗತಿ ಮೊದಲಾದ ಛಂದಸ್ಸುಗಳನ್ನೂ ಅವರು ಪ್ರಯತ್ನಿಸದೆ ಇಲ್ಲ.

ಇವರೆಲ್ಲ ಕನ್ನಡ ಭಾಷೆಯ ಜಾಯಮಾನಕ್ಕೊಗ್ಗುವ ಛಂದಸ್ಸುಗಳನ್ನು ಮಾತ್ರೆವೇ ಬಳಸಿಕೊಂಡರು. ಲೆಕ್ಕಕ್ಕೆ ೧೩೪೨೧೭೭೨೬ ಸಂಖ್ಯೆಗೂ ಮೀರಿ ಛಂದಸ್ಸುಗಳಿದ್ದರೂ ಕನ್ನಡದಲ್ಲಿ ಹೊಸ ಬಳಕೆಗೆ ಬಂದ ಛಂದಸ್ಸುಗಳು ಉತ್ಪಲಮಾಲೆ, ಚಂಪಕಮಾಲೆ, ಸ್ರಗ್ಧರೆ, ಅತಿಸ್ರಗ್ಧರೆ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಮತ್ತು ಕಂದ ಜಾತಿಗಳು. ಆರು ವೃತ್ತಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೂರೇ ಎನ್ನಬಹುದು. ಏಕೆಂದರೆ ಮೊದಲ ಒಂದು ಗುರುವಿಗೆ ಬದಲಾಗಿ ಎರಡು ಲಘುಗಳನ್ನಿಟ್ಟರೆ ಉತ್ಪಲಮಾಲೆಯೇ ಚಂಪಕಮಾಲೆ ವೃತ್ತವಾಗುತ್ತದೆ; ಹೀಗೇಯೇ ಸ್ರಗ್ಧರೆಯ ಮೊದಲ ಒಂದು ಗುರುವಿಗೆ ಬದಲು ಎರಡು ಲಘು ಬಂದರೆ ಮಹಾಸ್ರಗ್ಧರೆ,ಶಾರ್ದೂಲ ವಿಕ್ರೀಡಿತ ಒಂದು ಗುರುವಿಗೆ ಬದಲು ಎರಡು ಲಘುಗಳನಿಟ್ಟರೆ ಮತ್ತೇಭವೀಕ್ರೀಡಿತವಾಗುತ್ತದೆ. ಈ ಮೂರು ಛಂದಸ್ಸುಗಳ ಓಟ ಮಿಕ್ಕ ಛಂದಸ್ಸುಗಳಿಗಿಂತ ಹೆಚ್ಚು ಮಾತ್ರಲಯಕ್ಕೆ ಹತ್ತಿರವೆಂಬುದರಿಂದ ಹೀಗಾಗಿದೆ ಎನ್ನಬಹುದೆಂದು ತೋರುತ್ತದೆ. ಸಂಸ್ಕೃತದ ಆರ್ಯಾವೃತ್ತ ಕನ್ನಡದ ‘ಕಂದ’ ಪದ್ಯವಾಗುವಾಗಲೂ ಮಾತ್ರಾಲಯಕ್ಕೆ ಬಂದಿತು. ಈ ಅಂಶಗಳನ್ನು ಕೇವಲ ಕವಿಪ್ರತಿಭೆ ಮಾತ್ರ ಗುರುತಿಸಿತು ಎಂದರೆ ನಮ್ಮ ಲಾಕ್ಷಣಿಕರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಕನ್ನಡದಲ್ಲಿ ಬಳಕೆಯಲ್ಲಿರುವ ವೃತ್ತಗಳಲ್ಲಿ ಮುಖ್ಯವಾದವುಗಳನ್ನು ಗುರುತಿಸುವಾಗ ‘ಇವಾಱುಂ ಖ್ಯಾತ ಕಾರ್ನಾಟಕಂ’ ಎನ್ನುವ ಮಾತು ಇದಕ್ಕೆ ಸಾಕ್ಷಿ.

ನಮ್ಮ ಛಂದಸ್ಸನ್ನು ಸೂಕ್ಷ್ಮವಾಗಿ ನೋಡಿದರೆ ಅಕ್ಷರಗಣ, ಮಾತ್ರಾಗಣ ಮತ್ತು ಅಂಶಗಣ ಇದ್ದರೂ, ಅಕ್ಷರಗಣಗಳೂ ಶುದ್ಧ ದ್ರಾವಿಡವಾದ ಅಂಶಗಣಗಳೂ ಮಾತ್ರಾಗಣಗಳಾಗುತ್ತ ಬಂದಿವೆ. ಇದಕ್ಕೆ ಕಾರಣ ಮಾತ್ರಾಗಣ ಛಂದಸ್ಸಿನಲ್ಲಿ ಲಯ ಪ್ರತೀತಿ ಸುಲ್ಲಭವಾದುದಿರಬೇಕು. ಕನ್ನಡ ಛಂದಸ್ಸು ನಿಂತ ನೀರಾಗಿಲ್ಲ ಸಂಸ್ಕೃತದ ಲಯಗಳಿಂದ, ಗೇಯ ಲಯಗಳಿಂದ ಕೂಡಿ ನಿಂತ ನೀರಾಗದೆ ಬೆಳೆಯುತ್ತ ಬಂದಿದೆ.