ಲಯ ಎಂಬ ಶಬ್ಧವು ಸಮಾಸಪದವಾಗಿ ರಾಮಾಯಣಾದಿ[1] ಕಾವುಗಳಲ್ಲಿ ಬಳಕೆಯಾಗಿದೆ. ಲಯಗ್ರಾಹಿ, ಲಯೋತ್ತರ ಎಂಬ ವಿಭಿನ್ನ ಛಂದೋರೂಪ ಜಾತಿಗಳಲ್ಲಿಯೂ ಈ ಪದ ಬಳಕೆಯಾಗಿದೆ.

ಆದರೆ ಕನ್ನಡದಲ್ಲಿ ಇದನ್ನು ಛಂದಸ್ಸಿನ ಪಾರಿಭಾಷಿಕ ಪದವಾಗಿ ಮೊದಲು ಬಳಸಿದವರು ಕನ್ನಡ ಕಣ್ವರೆನಿಸಿದ ಬಿ. ಎಂ. ಶ್ರೀಕಂಠಯ್ಯನವರೆಂದೇ ಹೇಳಬೇಕು.[2]

ಇದನ್ನು ಕುರಿತು ಕನ್ನಡದಲ್ಲಿ ಮೊದಲು ವಿಶ್ಲೇಷಣೆ ನಡೆಸಿದವರು ಪ್ರೊ || ತೀ. ನಂ. ಶ್ರೀ. ಅವರೆಂದೇ ಹೇಳಬೇಕು. ‘ಹೊಸ ಛಂದಸ್ಸಿನ ಲಯಗಳು ‘ಎಂಬ ಲೇಖನದಲ್ಲಿ’ …. ತಾಳಗಳು ಬೀಳುವಾಗ ಒಂದಕ್ಕೊಂದಕ್ಕೆ ನಡುವೆ ಒಂದೇ ಸಮನಾದ ಕಾಲದ ಅಂತರವಿರುತ್ತದೆಂಬುದು ಅನುಭವದ ವಿಷಯ. ಹೀಗೆ ನಿಯತವಾದ ಕಾಲ ಅಂತರದಲ್ಲಿ ತಾಳಗಳು ಆವರ್ತನೆಯಾಗುವುದಕ್ಕೆ ಲಯ (Rhythm) ಎಂದು ಹೆಸರು’[3] ಎಂದ ವಿಶ್ಲೇಷಿಸಿದರು.

ಅಂದರೆ ಇಂಗ್ಲೀಷಿನ Rhythm ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಬಳಕೆಯಾದ ಪದ ಲಯ ಎನ್ನಬಹುದು.

ಹೋಗು, ಚಲಿಸು ಎಂಬರ್ಥದ ಲಯ್‌ ಧಾತುವಿನಿಂದ ಲಯ ಶಬ್ದವು ನಿಷ್ಪನ್ನವಾಗುತ್ತದೆಂದು ಕೆ.ಜಿ. ನಾರಾಯಣ ಪ್ರಸಾದ್‌ ಅವರು ಹೇಳುತ್ತಾರೆ.

ಈ ಪದದ ವಿಶ್ಲೇಷಣೆ ಮಾಡುತ್ತ ಸೇಡಿಯಾಪು ಕೃಷ್ಣಭಟ್ಟರು ಲಯ ಎಂಬ ಶಬ್ದವು ಶ್ಲೇಷಣೆ ಎಂದರೆ ಒಂದರೊಡನೆ ಇನ್ನೊಂದು ಕೂಡುವುದು, ಸೇರಿಕೊಳ್ಳುವುದು ಎಂಬರ್ಥದ ‘ಲೀ’ (= ಲೀನವಾಗು) ಎಂಬ ಧಾತುವಿನಿಂದ ನಿಷ್ಪನ್ನವಾದುದೆನ್ನುತ್ತಾರೆ.[4]

ಛಂದಸ್ಸಿಗೆ ಸಂಬಂಧಿಸಿದಂತೆ ಗಮನಿಸಿದಾಗ ಲಯವೆಂಬುದನ್ನು ನಿಯತಗತಿ ಎಂಬ ವಿಶಾಲಾರ್ಥದಲ್ಲಿ ಸ್ವೀಕರಿಸಬೇಕಾಗುತ್ತದೆ.[5]

ಇಂಗ್ಲೀಷಿನಲ್ಲಿ Rhythm is perceived in a sequence of events when they recur so regularly, equal to one another or symmetrical…. P. 128.

Babette Deutsch, Poetry Hand book. London, 1958

ಇದನ್ನು I . A. Richards ವಿವರಿಸುವುದು ಹೀಗೆ: Rhythm and its specialized form, metre, depend upon repetition, and ex -pectancy. p. 103.

ಕನ್ನಡದಲ್ಲಿ ಲಯವನ್ನು ವಿಶ್ಲೇಷಿಸುವಾಗ ತೀ. ನಂ. ಶ್ರೀ. ಯವರು ವಿವರಿಸಿದುದು ಹೀಗೆ:

“‘ಲಯ’ ದ ಅರ್ಥವನ್ನು ಇನ್ನಷ್ಟು ಹಿಗ್ಗಲಿಸಿ, ಸದೃಶ ಕ್ರಿಯೆಗಳ ಪರಂಪರೆಯಲ್ಲಿ ನಿಯಮಬದ್ಧತೆ ಗೋಚರವಾದಗಲೆಲ್ಲ ಅದು ನಿಷ್ಪನ್ನವಾಗುವುದೆಂದು ಹೇಳಬಹುದು. ಈ ದೃಷ್ಟಿಯಿಂದ ನೋಡಿದರೆ. ಮಾನವನ ಜೀವನಕ್ಕೇ ಲಯವು ಮೂಲಸೂತ್ರ. ಮಾನವನ ಹೆಜ್ಜೆಗಳಲ್ಲಿ ಒಂದಕ್ಕೊಂದಕ್ಕೆ ಒಂದೇ ಅಂತರವಿರುತ್ತದೆ; ಅವನ ನಾಡಿಗಳಲ್ಲಿ ಸುತ್ತುವ ರಕ್ತವು ಹೃದಯದಿಂದ ಅಳತೆ ಮಾಡಿದ ಹಾಗೆ ಬಿಟ್ಟು ಬಿಟ್ಟು ಉಕ್ಕುತ್ತದೆ; ಅವನು ಬಿಡುವ ಉಸಿರು ನಿಮಿಷಕ್ಕೆ ಇಷ್ಟು ಸಲ ಎಂಬಂತೆ ನಿಯಮದಿಂದ ಆಡುತ್ತದೆ. ಮಾನವನನ್ನಷ್ಟೇ ಏಕೆ. ಸಮಸ್ತ ವಿಶ್ವವನ್ನೇ ಲಯ ಪಡೆಯುತ್ತದೆ.”[6] ಮುಂದುವರಿದು “ನರ್ತನದ ಲಯಕ್ಕೆ ಹೊಂದಿಕೊಂಡು ಪದ್ಯ ಮೊದಲು ಉದಿಸಿತೆಂದು ಸಂಶೋಧಕರ ಅಭಿಪ್ರಾಯ ಪದ್ಯದ ಸ್ಪಷ್ಟವಾದ ಲಯವೇ ಅದನ್ನು ಗದ್ಯದಿಂದ ಬೇರ್ಪಡಿಸತಕ್ಕದು” ಎಂದು ವಿವರಿಸುತ್ತಾರೆ.

ಇಷ್ಟು ವಿವರಣೆಯಿಂದ ಗದ್ಯದಿಂದ ಪದ್ಯ ಭಿನ್ನವಾಗುವುದು ಅದರ ಲಯದದಿಂದ ಎಂಬುದು ಸ್ಪಷ್ಟವಾದಂತೆ ‘ಲಯ’ ವೆಂಬುದು ನಿಯತವಾದ ಕಾಲದ ಅಂತರದಲ್ಲಿ ಆವರ್ತನೆಯಾಗುವ ತಾಲಗಳು ಎಂಬುದೂ ವಿದಿತವಾಗುತ್ತದೆ.

ಲಯ ಎಂಬ ಶಬ್ಧ ಛಂದಸ್ಸಿನ ಲಾಕ್ಷಣಿಕ ಆರ್ಥದಲ್ಲಿ ಮೊದಲು ಬಳಕೆಯಾದದ್ದು ಬಿ. ಎಂ. ಶ್ರೀ. ಅವರಲ್ಲೇ ಆದರೂ ಅದರ ವಿಶ್ಲೇಷಣೆಯ ಯತ್ನ ಪ್ರಥಮವಾಗಿ ನಡೆಸಿದ್ದು ತೀ. ನಂ. ಶ್ರೀ. ಅವರಲ್ಲಿ ಹೀಗೆ ಲಯವನ್ನು ವಿಶ್ಲೇಷಿಸುವಾಗ ಉದ್ದೇಶಪೂರ್ವಕ ಎಂಬಂತೆ ಸಂಸ್ಕೃತದ ಆಕರ- ಆಧಾರಗಳನ್ನು ಅವರು ಬಳಸಿಲ್ಲ ಭರತನ ನಾಟ್ಯಸೂತ್ರದಲ್ಲಿ ಬರುವ ‘ಲಯ’ ಶಬ್ಧದ ವಿಚೇಚನೆಗಳೂ ಹೋಗಿಲ್ಲ. ಆದರೆ ಕನ್ನಡದಲ್ಲಿ ತೀ. ನಂ. ಶ್ರೀ. ಅವರಾದ ಮೇಲೆ ಶಿ. ಶಿ. ಬಸವನಾಳರು, ಡಾ. ಡಿ ಎಸ್. ಕರ್ಕಿ ಮೊದಲಾದವರು ಲಯ ಶಬ್ಧವನ್ನೇ ಇಂಗ್ಲೀಷಿನ Rhythm ಶಬ್ಧಕ್ಕೆ ಸಮಾನಾರ್ಥಕ ಪದವಾಗಿ ಬಳಸಿ ವಿವರಿಸಲು ಯತ್ನಿಸಿರುವುದುಂಟು.

ಆಶ್ಚರ್ಯವೆಂದರೆ ‘ಛಂದೋಗತಿ’ ಎಂಬ ಪ್ರೌಢ ಗ್ರಂಥವನ್ನು ರಚಿಸಿದ ಸೇಡಿಯಾಪು ಕೃಷ್ಣಭಟ್ಟರು Rhythm ಶಬ್ಧಕ್ಕೆ ಪರ್ಯಾಯವಾಗಿ ಛಂದೋಗತಿ ಎಂಬ ಪಾರಿಭಾಷಿಕ ಶಬ್ಧವನ್ನು ರೂಪಿಸಿದರು. ಅಷ್ಟೇ ಅಲ್ಲ ಅವರು ಈ ಗ್ರಂಥದಲ್ಲಿ Rhythm ಶಬ್ಧದ ಮೂಲ ಮತ್ತು ಅರ್ಥಗಳನ್ನು ‘ಲಯ’ ಶಬ್ಧದ ಮೂಲ ಅರ್ಥಗಳನ್ನು ಸುದೀರ್ಘವಾಗಿ ವಿಶ್ಲೇಷಿಸಿದರು. ‘ Rhythm ‘ ಶಬ್ಧಕ್ಕಾಗಿ ಅವರು ವಿಶ್ವಕೋಶದಲ್ಲಿ ಮಂಡಿತವಾದ ಅಭಿಪ್ರಾಯಗಳನ್ನೂ ‘ಲಯ’ ಶಬ್ಧಕ್ಕಾಗಿ ಅವರು ಸಂಸ್ಕೃತೋಲ್ಲೇಖನಗಳನ್ನೂ ನೀಡಿ ಸಾಕಷ್ಟು ವಿವರಿಸುವ ಯತ್ನ ಮಾಡಿದ್ದರು.[7]

ಮೊನಿಯರ್‌ ವಿಲಿಯಮ್ಸ್‌ನ ನಿಘಂಟಿನಲ್ಲಿ ಲಯವನ್ನು ಕುರಿತು ಹೀಗೆ ಹೇಳಲಾಗಿದೆ: Act of sticking or clinging to; to become attached to anyone; Lying down, covering, melting, dessolution, disappearance or obsorption in, to disappear, be dessolved or obsorbed.

ಲಯಮ್- To conceal or hide oneself, exinction, distrution death, to be destoryed. Rest, repose.

ಆದರೆ ಸೇಡಿಯಾಪು ಕೃಷ್ಣಭಟ್ಟರು ಇದರ ಜೊತೆಗೆ ಅಮರಕೋಶ ಮತ್ತು ಭಾನೋಜಿಯ ವಿಶ್ಲೇಷಣೆಗಳ ಮೊರೆ ಹೋಗುತ್ತಾರೆ. ಭರತನ ನಾಟ್ಯಶಾಸ್ತ್ರವನ್ನು ಅವಲಂಬಿಸುತ್ತಾರೆ, ‘ಲಯ’ ಶಬ್ಧದ ವಿವೇಚನೆ ಮಾಡುವುದಕ್ಕೆ.

ಸೇಡಿಯಾಪು ಕೃಷ್ಣಭಟ್ಟರು ಸಂಸ್ಕೃತ ಲಕ್ಷಣ ಗ್ರಂಥಗಳನ್ನು ಹಾಗೆಯೇ ಇಂಗ್ಲಿಷಿನ ವಿಶ್ವಕೋಶದ ಅಭಿಪ್ರಾಯ ಹಾಗೂ ಮತ್ತಿತರ ವಿದ್ವಾಂಸರ ಆಬಿಪ್ರಾಯಗಳನ್ನು ವಿಶ್ಲೇಷಿಸಿರುವುದನ್ನು ಸಂಗ್ರಹವಾಗಿ ಪರಿಶೀಲಿಸಬಹುದು.

ಛಂದೋಕ್ಷರಪದಾನಾಂ ಹಿ ಸಮತ್ವಂ ಯತ್ಪ್ರಕೀರ್ತಿತಂ
ಕಲಾಕಲಾಂತರಕೃತಂ, ಲಯೋ ನಾಮ ಸಂಜ್ಞಿತಃ

ಭರತನ ನಾಟ್ಯಶಾಸ್ತ್ರದ ಈ ಶ್ಲೋಕದ ತಾತ್ಪರ್ಯವನ್ನು ಸೇಡಿಯಾಪು ಕೃಷ್ಣಭಟ್ಟರು ಹೀಗೆ ಕೊಟ್ಟಿದ್ದಾರೆ:

“ಒಂದು ಛಂದೋಬಂಧದ (ಬೇರೆ ಬೇರೆ) ಅಕ್ಷರ ಪುಂಜಗಳಲ್ಲಿ ಅವುಗಳ ಮಾತ್ರಾ ಕಾಲಾವಕಾಶಾದಿಂದಾಗಿ ಉಂಟಾಗುವ ಸಮತ್ವಕ್ಕೆ ‘ಲಯ’ವೆಂದು ಹೆಸರು ಕೊಡಲಾಗಿದೆ. ಅರ್ಥಾತ್‌, ಪದ್ಯದ ಅವಯವಗಳ (= ಛಂದಃ ಖಂಡಗಳ) ಮಾತ್ರಾ ಸಮತೆ (= ಉಚ್ಚಾರ ಕಾಲದ ಸಮತೆ) ಯೇ ಲಯ”. ಪು. ೨೧

ಮುಂದುವರೆದು “ಮಾತ್ರಾ ಸಮತೆ ಎಂದರೂ ಉಚ್ಚಾರ ಕಾಲಾವಕಾಶದ ಸಮತೆ ಎಂದರೂ ಅರ್ಥ ಒಂದೇ” (ಪು.೨೨) ಎಂದು ಖಚಿತವಾಗಿ ಹೇಳುತ್ತಾರೆ.

ಮುಂದುವರೆದು ಅವರು “ಪರಮಾರ್ಥತಃ ‘ಲಯ’ ಎಂಬುದು ಧ್ವನಿಗಳು ಸಮಕಾಲದಲ್ಲಿ ನಿಲ್ಲುವ ಸಂದರ್ಭಗಳಲ್ಲಿ ನಮಗೆ ಉಂಟಾಗುವ ಒಂದು ಅನುಭವ ವಿಶೇಷ. ಈ ಅನುಭವಕ್ಕೆ ಧ್ವನಿಗಳ ಕಾಲ ಸಮತ್ವವು (= ಮಾತ್ರಾ ಸಮತ್ವ) ಕಾರಣವಾಗಿರುವುದರಿಂದ, ಈ ‘ಸಮತ್ವ’ ವೇ ಲಯವೆಂದು ಸಂಜ್ಞಿತವಾಗಿದೆ (ಪು.೨೬) ಎನ್ನುತ್ತಾರೆ.

ಮುಂದೆ ಸಂಗೀತರತ್ನಕಾರದ ‘ಕ್ರಿಯಾನಂತರ ವಿಶ್ರಾಂತಿಃ ಲಯ ಇತ್ಯಭಿಧೀಯತೇ’ ಎಂಬ ಲಕ್ಷಣ ವಾಕ್ಯವನ್ನು ಉಲ್ಲೇಖಿಸಿ ” ಒಂದು ಕ್ರಿಯೆಯ ಅನಂತರ ಇನ್ನೊಂದು ಕ್ರಿಯೆಯಾಗುವವರೆಗಿನ ವಿರಾಮಕ್ಕೆ ಲಯವೆಂದು ಹೆಸರು” ಎಂದು ತಾತ್ಪರ್ಯ ನೀಡುತ್ತಾರೆ.

ಅಷ್ಟೇ ಅಲ್ಲ ಭರತೋಕ್ತವಾದ ‘ತತಃ ಕಾಲಕೃತಃ ಲಯ ಇತ್ಯಭಿಸಂಜ್ಞಿತಃ’ ಎಂಬ ವ್ಯಾಖ್ಯೆ ವಸ್ತುತಃ ಅಬಿನ್ನವೆಂದು ಹೇಳಿ ಭರತ್ತೋಕ್ತ ಲಕ್ಷಣ ಗೀತಾದಿ ನಾದಖಂಡ ಮತ್ತು ತಾಳಕ್ರಿಯೆಗಳೆರಡಕ್ಕೂ ಅನ್ವಯಿಸುತ್ತದೆ. ಕ್ರಿಯಾನಂತರ ವಿಶ್ರಾಂತಿಃ ಎಂಬುದು ಕೇವಲ ತಾಳಕ್ರಿಯೆಯನ್ನನುಲಕ್ಷಿಸಿ ರೂಪಿತವಾದುದಾಗಿದೆ ಎನ್ನುತ್ತಾರೆ. ಈ ಎಲ್ಲ ವಿವವರಣೆಗಳ ಅನಂತರ ‘ಲಯ’ ಎಂಬ ವಿಷಯಕ್ಕೆ ಛಂದೋ ವಿಚಾರಕ್ಕೆ ಅನ್ವಯಿಸುವಷ್ಟನ್ನೇ ಸಂಗ್ರಹಿಸಿ ಹೇಳುವುದಾದರೆ ಅದು ಹೀಗೆ ಎಂದು ವಿವರಿಸುತ್ತಾರೆ:

“ಲಯವೆಂದರೆ, ಹಿಂದೆಯೇ ಹೇಳಿರುವಂತೆ, ಕ್ರಿಯಾಕಾಲ ಖಂಡಗಳ ಅನ್ಯೋನ್ಯ ಸಮತ್ವ. ಈ ಸಮತ್ವವೇ ತಾಳದ ಆಧಾರ; ಆದುದರಿಂದ, ಅದು ತಾಳದ ಅವಿಭಾಜ್ಯ ಅಂಗ. ಯಾವುದಾದರೊಂದು ರಚನೆಯ ಅವಯವಗಳೊಳಗೆ ಅನ್ಯೋನ್ಯ ಕಾಲ ಸಮತ್ವವಿಲ್ಲದಿದ್ದರೆ, ‘ಲಯ’ ವಿಲ್ಲದಿದ್ದರೆ ಅಲ್ಲಿ ತಾಳವಿಲ್ಲ. ಸಮತಾಳಕ್ಕೆ ಒಳಪಡದಿರುವ ರಚನೆಗಳಲ್ಲಿ ಲಯವಿಲ್ಲ. ಆದುದರಿಂದ ಲಯಾನ್ವಿತವಾದ ಛಂದೋರಚನೆ ಎಂದರೂ ತಾಳಬದ್ಧವಾದ ಛಂದೋರಚನೆ ಎಂದರೂ ಅರ್ಥ ಬೇರಾಗುವಂತಿಲ್ಲ”. ಪು. ೩೧

ಈವರೆಗೆ ಮಂಡಿತವಾದ ಸೇಡಿಯಾಪು ಕೃಷ್ಣಭಟ್ಟರ ವಿಚಾರಗಳನ್ನು ಪರಿಶೀಲಿಸಿದರೆ ಅವರು ಲಯ ಶಬ್ಧದ ಅರ್ಥದ ವಿಶ್ಲೇಷಣೆಗೆ ಬಳಸಿಕೊಂಡಿರುವುದು ಕೇವಲ ಸಂಸ್ಕೃತಾಧಾರಗಳನ್ನು ಮಾತ್ರ. ನಾಟ್ಯಶಾಸ್ತ್ರ, ಸಂಗೀತ ರತ್ನಾಕರಗಳನ್ನೇ ಅಲ್ಲದೆ ಅವರು ತಮ್ಮ ವಾದಪುಷ್ಟಿಗಾಗಿ ದಂಡಿಯ ಕಾವ್ಯಾದರ್ಶ ಮತ್ತಿತರ ಕೃತಿಗಳನ್ನು ಅವಲಂಬಿಸಿಸುತ್ತಾರೆ. ೧೯೨೭ರ ವೇಳೆಗಾಗಲೆ ಬಿ. ಎಂ. ಶ್ರೀ. ಯವರು ‘ಲಯ’ ಶಬ್ಧವನ್ನು ಛಂದಸ್ಸಿಗೆ ಸಂಬಂಧಿಸಿದಂತೆ ಬಳಸಿದ್ದರು. ಅನಂತರ ೧೯೩೧ರಲ್ಲಿ ಡಾ. ದ.ರಾ. ಬೇಂದ್ರೆಯವರು ನಾದಲೋಲ ಲಕ್ಷ್ಮೀಶ ಎಂಬ ತಮ್ಮ ಪ್ರಬಂಧದಲ್ಲಿ ‘ತಾಳಲಯ’ ಎಂಬ ಪದಗಳನ್ನು ಬಳಸಿದ್ದರು. ‘ಹೊಸಗನ್ನಡ ಛಂದಸ್ಸಿನ ಲಯಗಳು’ ಎಂಬ ಪ್ರಬಂಧದಲ್ಲಿ ತೀ. ನಂ. ಶ್ರೀ. ಅವರು ಲಯವನ್ನು ಕುರಿತು ವಿಶ್ಲೇಷಿಸುವ ಯತ್ನವನ್ನು ಮಾಡಿದ್ದರು. ಡಾ. ಡಿ. ಎಸ್. ಕರ್ಕಿಯವರು ‘ಕನ್ನಡ ಛಂದೋವಿಕಾಸ’ ಎಂಬ ತಮ್ಮ ಸಂಪ್ರಬಂಧದಲ್ಲಿಯೂ ಲಯವನ್ನು ಕುರಿತು ವಿಶ್ಲೇಷಿಸಿದ್ದರು. ಜೊತೆಗೆ ಬಸವಣ್ಣನವರ ಷಟ್ಸ್ಥಲ ವಚನಗಳನ್ನು ಸಂಪಾದಿಸಿದ ಡಾ. ಶಿ. ಶಿ. ಬಸವನಾಳರೂ ‘ಲಯ’ ಶಬ್ಧದ ವಿವೇಚನೆ ನಡೆಸಿದ್ದರು.

ಈ ಯಾವ ವಿವರಗಳತ್ತಲೂ ಸೇಡಿಯಾಪು ಕೃಷ್ಣಭಟ್ಟರು ಕಣ್ಣಾಡಿಸಿಲ್ಲ, ಅಷ್ಟೇ ಅಲ್ಲ – “ಆದರೆ ‘ರಿಧಮ್‌’ ಎಂದರೇನು, ಅದರ ಮೂಲಾರ್ಥವೇನು, ಪ್ರಯೋಗವಶಾತ್‌ ಅದಕ್ಕೆ ಬಂದಿರುವ ಅರ್ಥ ವಿಶೇಷಗಳೇನು ಎಂಬುದನ್ನಾಗಲಿ, ‘ರಿಧಮ್‌’ ಮತ್ತು ‘ಲಯ’ ಎಂಬವುಗಳ ಮೂಲ ಕಲ್ಪನೆಗಳಲ್ಲಿ ಸಾಮ್ಯವೇನಿದೆ, ಎಷ್ಟಿದೆ ಎಂಬುದನ್ನಾಗಲಿ; ‘ರಿಧಮ್‌’ ಎಂಬುದರ ಅರ್ಥವನ್ನು ಪೂರ್ಣವಾಗಿ ಹೇಳಬಲ್ಲ ಸಂಜ್ಞೆಯೊಂದು ನಮ್ಮ ಶಾಸ್ತ್ರರೂಢಿಗಳಲ್ಲಿ ಎಲ್ಲಿಯಾದರೂ ಇದೆಯೋ ಇಲ್ಲವೋ ಎಂಬುದನ್ನಾಗಲಿ ಪರಾಮರ್ಶಿಸಿ ತಿಳಿಸುವ ಪ್ರಯತ್ನವನ್ನು – ‘ರಿಧಮ್‌’ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಅರ್ಥದಲ್ಲಿ ‘ಲಯ’ ಎಂಬ ಪದವನ್ನು ಬಳಸುತ್ತಿರುವ ವಿದ್ವನ್ಮಹನೀಯರಲ್ಲಿ ಯಾರೊಬ್ಬರೂ ಈವರೆಗೆ ಮಾಡಿಲ್ಲ. ಮಾಡಿದರೆ ಅದು ನನ್ನ ಗೋಚರಕ್ಕೆ ಬಂದಿಲ್ಲ” (ಪು.೪೩-೪೪) ಎಂದು ಹೇಳಿದ್ದಾರೆ. ಇದಕ್ಕೆ ಮುನ್ನುಡಿ ಬರೆದ ಡಾ. ಶ್ರೀನಿವಾಸ ಹಾವನೂರು ಅವರು ಈ ಬಗ್ಗೆ ಹೇಳಿರುವುದು ಹೀಗೆ: “ಇನ್ನೊಂದು ಎದ್ದು ಕಾಣುವ ಸಂಗತಿಯೆಂದರೆ, ಇದುವರೆಗೆ ಕನ್ನಡದಲ್ಲಿ ಛಂದಃಶಾಸ್ತ್ರ ವಿವೇಚನೆ ಮಾಡಿದ ಆಧುನಿಕರು ಯಾರನ್ನೂ ಸೇಡಿಯಾಪು ಅವರು ಉಲ್ಲೇಖಿಸಿಲ್ಲ ಅಥವಾ ಆಧರಿಸಲು ಹೋಗಿಲ್ಲ. ಅವರಿಗೆ ಅದರ ಅಗತ್ಯವಾದರೂ, ಎಲ್ಲಿದೆ?” (ಪು. ೯, ಮುನ್ನುಡಿ) ಎಂದಿದ್ದಾರೆ.

ಈಗ ಲಯವನ್ನು ಕುರಿತು ಸೇಡಿಯಾಪು ಅವರು ಮಂಡಿಸಿದ ಸಿದ್ಧಾಂತ ಗಮನಿಸೋಣ:

“ಮಾತ್ರಸಮತೆ ಎಂದರೂ ಉಚ್ಚಾರ ಕಾಲಾವಕಾಶದ ಸಮತೆ ಎಂದರೂ ಆರ್ಥ ಒಂದೇ” (ಪು.೩೭).

ಈ ಮಾತ್ರಸಮತೆ ಹಾಗೂ ಉಚ್ಚಾರ ಕಾಲಾವಕಾಶದ ಸಮತೆಗಳು ಒಂದೇ ಎನ್ನುವಾಗ ಸೇಡಿಯಾಪು ಅವರ ಮನಸ್ಸಿನಲ್ಲಿರುವುದು ಅಕ್ಷರ ವೃತ್ತಗಳು ಅಥವಾ ಅದಕ್ಕಿಂತ ಮೂಲವಾಗಿ ವೈದಿಕ ಛಂದಸ್ಸು ಎಂಬುದನ್ನು ನಾವು ಮರೆಯದಿರುವುದು ಒಳ್ಳೆಯದು. ‘ನಾಗರ್ಮನು ನಿರೂಪಿಸಿದ ಸಮವೃತ್ತ ಗಳೊಳಗೇ ನೂರಕ್ಕಿಂತ ಹೆಚ್ಚು ವೃತ್ತಗಳಲ್ಲಿ ಪಾದಾವಯವಗಳಲ್ಲಿ ಮಾತ್ರ ಸಮತೆಯನ್ನು ಕಾಣಬಹುದಾಗಿದೆ’ (ಪು.೩೫) ಎಂದು ಹೇಳಿರುವುದನ್ನು ಗಮನಿಸಬೇಕು. ಇಲ್ಲಿ ಪ್ರಧಾನವಾದ ಎರಡು ವಿಷಯಗಳಿವೆ – ಒಂದನೆಯದು ಇದು ಸಮಪಾದ ವೃತ್ತಗಳಿಗೆ ಅನ್ವಯವಾಗುವಂಥದ್ದು. ಎರಡನೆಯದು ನೂರಕ್ಕಿಂತ ಹೆಚ್ಚು ವೃತ್ತಗಳಲ್ಲಿ ಪಾದಾವಯವಗಳಲ್ಲಿ ಸಮತೆಯಿದೆ ಎಂದರೆ ಉಳಿದೆಡೆಗಳಲ್ಲಿ ಇಲ್ಲ ಎಂದೇ ಅರ್ಥವಲ್ಲವೆ? ಇರಲಿ.

ಈಗ ಮುಖ್ಯ ವಿಷಯಕ್ಕೆ ಬರೋಣ. ಮಾತ್ರಾಸಮತೆಯೂ ಉಚ್ಚಾರ ಕಾಲಾವಕಾಶದ ಸಮತೆಯೂ ಒಂದೇ ಎಂಬ ಮಾತು ಮಾತ್ರಾವೃತ್ತಗಳಿಗೆ ಅನ್ವಯವೇ ಆಗುವುದಿಲ್ಲ.

ಉದಾಹರಣೆಗೆ ಮೂರು ಮಾತ್ರೆಯ ಒಂದು ಗಣದ ಕೆಲವು ಭಿನ್ನ ರೀತಿಗಳನ್ನು ಗಮನಿಸೋಣ:

ಸರಲ -ಇಲ್ಲಿ ಮೂರು ಲಘುಗಳಿವೆ (⋃⋃⋃)
ದಂಷ್ಟ್ರ – ಮೂರು ಮಾತ್ರೆಗಳೇ ಇಲ್ಲಿರುವುವು; ಇಲ್ಲಿ ಲಘು; ( – ⋃)
ಆಳು ಮೂರು ಮಾತ್ರೆಗಳು ( – ⋃ ಗುರು ಲಘು)
ಏಳು ಮೂರು ಮಾತ್ರೆಗಳು ( – ⋃ ಗುರು ಲಘು)
ಬೀಳು ಮೂರು ಮಾತ್ರೆಗಳು ( – ⋃ ಗುರು ಲಘು)
ಬಂದೆ ಮೂರು ಮಾತ್ರೆಗಳು ( – ⋃ ಗುರು ಲಘು)
ತಂದೆ ಮೂರು ಮಾತ್ರೆಗಳು ( – ⋃ ಗುರು ಲಘು)
ನೊಂದೆ ಮೂರು ಮಾತ್ರೆಗಳು ( – ⋃ ಗುರು ಲಘು)
ಬೆಂದೆ ಮೂರು ಮಾತ್ರೆಗಳು ( – ⋃ ಗುರು ಲಘು)
ಅಂದೆ ಮೂರು ಮಾತ್ರೆಗಳು ( – ⋃ ಗುರು ಲಘು)

ಸರಳ ಪದಕ್ಕಿಂತ ದಂಷ್ಟ್ರ ಪದದ ಉಚ್ಚಾರ ಕಾಲಾವಕಾಶ ಹೆಚ್ಚಿನದು. ಏಕೆಂದರೆ ಅಲ್ಲಿ ಅನುಸ್ವಾರದಿಂದ ಗುರುವಾಗಿರುವ ಮೊದಲ ಅಕ್ಷರ ಮುಂದಿನ ಮೂರು ವ್ಯಂಜನಗಳಿಂದ ಕೂಡಿದ ಸಂಯುಕ್ತಾಕ್ಷರದ ಹಿಂದಿನಕ್ಷರವಾಗಿಯೂ ಗುರುತರವಾಗಿಸಿಕೊಂಡಿದೆ. (ಅನುಸ್ವಾರವೆನ್ನುವ ಬದಲು ದ ಮುಂದೆ ಮ್‌, ಷ್‌, ಟ್‌, ರ್‌ ಎಂಬ ನಾಲ್ಕು ವುಂಜನಗಳಿಂದಲೂ ಕೂಡಿದೆ ಎಂದೂ ಗ್ರಹಿಸಬಹುದು.)

ಮಾತ್ರೆಗಳ ಲೆಕ್ಕದಲ್ಲಿ ಇಲ್ಲಿಯೂ ಮೂರೇ ಮಾತ್ರೆಗಳಿದ್ದರೂ ಉಚ್ಚಾರ ಕಾಲಾವಕಾಶ ಬೀನ್ನವಾಗಿದೆ.

ಮುಂದೆ ಮೂರು, ನಾಲ್ಕು ಮತ್ತು ಐದನೆಯ ಉದಾಹರಣೆಗಳಲ್ಲಿ ಗುರು ಲಘುಗಳು ವಿನ್ಯಾಸದ ಮೂರು ಮಾತ್ರೆಗಳ ಗಣಗಳೇ ಇದ್ದರೂ ಉಚ್ಚಾರಣೆಗಳಲ್ಲಿ ಭಿನ್ನವಾಗಿದೆ-

ಆಳು ಎಂಬಲ್ಲಿ ವಿಸ್ತಾರವಿದ್ದರೆ →
ಏಳು ಎಂಬಲ್ಲಿ ಎತ್ತರವಿದೆ ↑
ಬೀಳು ಎಂಬಲ್ಲಿ ಆಳವಿದೆ ↓

ಅಂದರೆ ಉಚ್ಚಾರ ಕಾಲ ಇಲ್ಲೆಲ್ಲಾ ಬಿನ್ನವಾಗಿರುವುದು ವೇದ್ಯ. (ಅಂದರೆ ಏರಿಳಿತಗಳಿಂದ ಕೂಡಿದೆ.) ಮುಂದಿನ ಐದು ಉದಾಹರಣೆಗಳನ್ನು ಗಮನಿಸಿ ಇವುಗಳೆಲ್ಲ ಮೂರು ಮೂರು ಮಾತ್ರೆಗಳ ಗಣಗಳ ಪದಗಳೇ ಆದರೂ ಇಲ್ಲಿ ‘ಬಂದೆ’ ಎಂಬ ಪದದ ವಿಸ್ತಾರ ‘ಆಳು’ ಪದದ ವಿಸ್ತಾರಕ್ಕಿಂತ ಭಿನ್ನ. ಹಾಗೆಯೇ ತಿಂದೆ ಎಂಬ ಪದದ ಆಳು ಬೀಳು ಪದಕ್ಕಿಂತ ಭಿನ್ನ.

ನೊಂದೆ ಎಂಬ ಪದದ ಎತ್ತರ ಬೆಂದೆ ಪದದ ಎತ್ತರಕ್ಕಿಂತ ಭಿನ್ನ:

ಏಕೆಂದರೆ ಬೆಂದೆ ಎಂಬಲ್ಲಿ ಔಷ್ಠ್ಯದ ಎತ್ತರದ ಸ್ವರದೊಂದಿಗೆ ಬಿಂದು ಸೇರಿದೆ. ಆದರೆ ನೊಂದೆ ಎಂಬಲ್ಲಿ ಎತ್ತರದ ಜೊತೆಗೆ ವೃತ್ತಾಕಾರವಾಗಿರುವ ಸ್ವರದೊಂದಿಗೆ (ಮೇಲ್ತುದಿಯನ್ನು ವೃತ್ತರೂಪದಲ್ಲಿ ಎತ್ತರಿಸಿದ) ಬಿಂದುವಿದೆ.

ಅಂದೆ ಎಂಬ ಪದದ ಮೊದಲಕ್ಷರ ದೀರ್ಘವಾಗಿ ಗುರುವಾಗಿದ್ದರೂ ಅದರೊಡನೆ ಬಿಂದು ಸೇರಿ (ಅಥವಾ ನ್‌ ಎಂಬ ವ್ಯಂಜನ ಸೇರಿ) ಮತ್ತಷ್ಟು ಹೆಚ್ಚು ಕಾಲ ಪಡೆದು ಬಿಡುತ್ತದೆ. ಅಂದರೆ, ಇಲ್ಲಿ ನಾವು ಮಾತ್ರೆಗಳ ಉಚ್ಚಾರಣೆಯ ಕಾಲ ಎಂದು ಏನನ್ನು ಹೇಳುತ್ತೇವೆಯೋ ಅದು ಕೇವಲ ಕಾಲ ಮಾತ್ರ ಆಗಿದ್ದರೆ ಅದಕ್ಕೆ ಆಳ, ಅಗಲ ಮತ್ತು ಎತ್ತರಗಳು ಇವೆ. ಜೊತೆಗೆ ಸರಳ ಮತ್ತು ಪರುಷಾಕ್ಷರಗಳ ಅನಂತ ರೀತಿಯ ಭಿನ್ನ ಸಂಯೋಜನೆಗಳ ಅವಕಾಶ ಬೇರೆ ಇದೆ. ಇದರ ಜೊತೆಗೆ ಈ ‘ಕಾಲ’ ಎನ್ನುವುದು ಕೇವಲ ಉಚ್ಚಾರಣಾ ಕಾಲ ಮಾತ್ರ ಆಗಿರದೆ ‘ಅರ್ಥ ಕಾರಣ’ ಕೂಡ ಆಗಿರುವ ಕಾಲವಾಗಿದೆ. ಎಂಬುದನ್ನು ಗಮನಿಸಿದರೆ ಸೇಡಿಯಾಪು ಅವರು ‘ಲಯ’ ಶಬ್ಧದ ವಿಶ್ಲೇಷಣೆಗೆ ಭರತ ಮೊದಲಾದವರನ್ನು ಉಲ್ಲೇಖಿಸಿದಂತೆಯೇ ಸಂಸ್ಕೃತದ ಅಕ್ಷರ ವೃತ್ತಗಳನ್ನು ಅದರಲ್ಲಿಯೂ ಸಮಪಾದ ವೃತ್ತಗಳನ್ನು ಮಾತ್ರ ಗಮನದಲ್ಲಿ ಇರಿಸಿ ಕೊಂಡಿರುವುದು ವೇದ್ಯವಾಗುತ್ತದೆ ಎಚ್‌.ಡಿ. ವೇಲಣಕರ್‌ ಅವರೇ ವೈದಿಕ ಛಂದಸ್ಸನ್ನು ಕುರಿತು ಹೇಳಿದ ಮಾತು ಹೀಗಿದೆ: “All these vedic metres are based on the svara sangita or the music of voice modulation, where the time element plays no important role in the production of metrical music.ಇದನ್ನು ಗಮನಿಸಿಯೇ ಅಕ್ಷರ ಬಂಧಗಳ ಲಯವನ್ನು ಅಕ್ಷರ ಲಯವೆಂದೂ ವರ್ಣವೃತ್ತಗಳ ಲಯವನ್ನು ವರ್ಣಲಯವೆಂದೂ ಕರೆಯಬಹುದು. ಈ ಜಾಡನ್ನು ಹಿಡಿದು “ಅಕ್ಷರ ಲಯದಲ್ಲಿ ಕಾಲಮಾನದ ಗಣನೆಯಿಲ್ಲ: ಅಕ್ಷರಗಳ ಸಂಖ್ಯೆ ಮತ್ತು ಹೊಂದಾಣಿಕೆ ಅಲ್ಲಿ ಮುಖ್ಯ” (ಪು. ೧೬೪) ಎಂದು ಕೆ. ಜಿ. ನಾರಾಯಣ ಪ್ರಸಾದ್‌ ಹೇಳುತ್ತಾರೆ.

ಅಕ್ಷರ ಲಯವನ್ನು ಕುರಿತ ವಿಶ್ಲೇಷಣೆ ಸೇಡಿಯಾಪು ಕೃಷ್ಣಭಟ್ಟರದು, ಅದು ಮಾತ್ರಾಲಯಕ್ಕೆ ಅಥವಾ ಅಂಶ ಲಯಕ್ಕೆ ಹೊರತಕ್ಕದ್ದಲ್ಲ ಅಲ್ಲವೆ?

ಮುಂದುವರಿದು ಸೇಡಿಯಾಪು ಕೃಷ್ಣಭಟ್ಟರು ‘ಲಯ’ ಶಬ್ಧದ ಅರ್ಥವನ್ನು ಕುರಿತು ನಡೆಸಿದ ಜಿಜ್ಞಾಸೆಯನ್ನು ಗಮನಿಸಬಹುದು.

ಮೊದಲನೆಯಾದಾಗಿ ಅವರು ಲಯ ಶಬ್ಧ ಧಾತುವಿಗಿಂತ ಹೊರಡುವ ಅರ್ಥದತ್ತ ನಮ್ಮ ಗಮನ ಸೆಳೆಯುತ್ತಾರೆ ಆಪ್ಟೆಯವರ ನಿಘಂಟಿನಲ್ಲಿ ಲಯ ಎಂಬುದಕ್ಕೆ A Pause in music ಎಂಬರ್ಥದ ಕಡೆ ನಮ್ಮ ಗಮನ ಸೆಳೆಯುತ್ತಾರೆ.

ಅನಂತರ ಲೀಜ್‌ (= ಲೀ) ಶ್ಲೇಷಣೆ ಎಂಬ ಧಾತುವಿನ ನಿಷ್ಪತ್ತಿಯನ್ನು ಹೇಳಿ ಒಂದರೊಡನೆ ಇನ್ನೊಂದು ಕೂಡುವುದು; ಸೇರಿಕೊಳ್ಳುವುದು ಎಂದು ಅಮರಸಿಂಹನು ಲಯದ ಬಗೆಗೆ ಹೇಳಿದ ನಿರ್ವಚನ ಹಾಗೂ ಭಾನುಜಿ ದೀಕ್ಷಿತ ಅದಕ್ಕೆ ಮಾಡಿರುವ ವ್ಯಾಖ್ಯಾನದ ತಾತ್ಪರ್ಯ ನೀಡುತ್ತಾರೆ. ಎಂದರೆ ಲೀಜ್‌ (= ಲೀ) ಶ್ಲೇಷಣೆ ಎಂಬ ಧಾತುವಿನ ನಿಷ್ಪನ್ನವಾದ ‘ಲಯ’ದ ಅರ್ಥ ಒಂದರೊಡನೆ ಇನ್ನೊಂದು ಕೂಡುವುದು, ಸೇರಿಕೊಳ್ಳುವುದು ಎಂದು ನಿರೂಪಿಸುತ್ತಾರೆ. ಇಲ್ಲಿ ‘….ಅರ್ಥಾತ್‌ ತಾಳಕ್ರಿಯೆಯ ಅಳತೆಗೊಳಗಾಗುವ ಗೀತವಾದ್ಯ ನೃತ್ಯಗಳ ಕಾಲಗಳ ಎಂದರೆ ಕಾಲಖಂಡಗಳ ಅನ್ಯೋನ್ಯ ಸಮತ್ವಕ್ಕೆ ‘ಲಯ’ ಎಂದು ಹೆಸರು”[8] ಎಂದು ಹೇಳುತ್ತಾರೆ.

ಮುಂದುವರೆದು ಕ್ರಿಯಾನಂತರ ‘ವಿಶ್ರಾಂತಿಃ ಲಯ ಇತ್ಯಭಿಸಂಜ್ಞಿತಂ’ ಎಂಬ ಸಂಗೀತ ರತ್ನಾಕರದ ಮಾತು ತತಃಕಾಲ ಕೃತಃ ಲಯ ಇತ್ಯಭಿ ಸಂಜ್ಞಿತಂ ಎಂಬ ನಾಟ್ಯಶಾಸ್ತ್ರದ ಮಾತು ಎರಡೂ ಒಂದೇ ವಿಷಯವನ್ನು ಹೇಳುತ್ತವೆಂದು ಸಂಗೀತ ರತ್ನಾಕರದ ಮಾತು ಕೇವಲ ತಾಳಕ್ರಿಯೆಗಳನ್ನು ಅನುಲಕ್ಷಿಸಿದ್ದೆಂದು ಸೂಚಿಸುತ್ತಾರೆ.

ಇಲ್ಲೆಲ್ಲ ಸಂಗೀತದ ‘ಲಯ’ ಕ್ಕೂ ಕಾವ್ಯದ ಲಯಕ್ಕೂ ಇರುವ ಸೂಕ್ಷ್ಮ ಭಿನ್ನಾಂಶಗಳತ್ತ ನಮ್ಮ ಗಮನವನ್ನು ಸೆಳೆಯುತ್ತಾರೆ.

“Rhythm ಎಂಬ ಪದದೊಳಗೆ ‘ಲಯ’ ಕೂಡ ಸೇರಬಹುದು. ಆದರೆ ಲಯವು Rhythm ಗೆ ಪರ್ಯಾಯವಾಗಲಾರದು. Rhythmನಲ್ಲಿ ಸಮ ವಿಷಯ ಎಂಬ (ಖಚಿತವಾದ) ಕಾಲವಿವಕ್ಷೆಯಿಲ್ಲದೆ ಪ್ರಯುಕ್ತವಾಗುವ ಗತ್ಯರ್ಥ ಶಬ್ಧವಾಗಿರುವುದರಿಂದ ಅದು ಸಮಗತಿಯನ್ನು ಸೂಚಿಸುವ ಸಂದರ್ಭಗಳಲ್ಲಿ ಮಾತ್ರ ‘ಲಯ’ ವನ್ನೂ ಒಳಗೊಳ್ಳುವುದು. ಆದರೆ ‘ಲಯ’ ಎಂಬುದು ಸಮಗತಿಯ ಅಂಶ ಮಾತ್ರವಾಗಿರುವುದರಿಂದ, ಗತ್ಯರ್ಥಕವಾದ Rhythmನ್ನು ಅದು ಒಳಗೊಳ್ಳಲಾರದು” ಎನ್ನುತ್ತಾರೆ.

Rhythmಗೆ ಲಯ ಸಂವಾದಿ ಪದವಲ್ಲ ಎನ್ನುವಾಗ ಆಪ್ಟೆ ಅವರು ತಮ್ಮ ಕೋಶದಲ್ಲಿ ಲಯ ಎಂಬುದಕ್ಕೆ Aqausein music ಎಂದು ಸೂಚಿಸುವ ಅರ್ಥದ ಕಡೆಗೆ ನಮ್ಮ ಗಮನ ಸೆಳೆಯುತ್ತಾರೆ. ಅನಂತರ ಲಯ ಎಂದರೆ ಅವಸಾನ, ಮುಗಿಯುವಿಕೆ ಎಂಬರ್ಥಗಳನ್ನು ನಮ್ಮ ಮುಂದಿಡುತ್ತಾರೆ. ‘ಲೀ’ ಧಾತುವಿನಿಂದ ನಿಷ್ಪನ್ನವಾಗುವ ‘ಲಯ’ ಎಂಬ ‘ಕ್ರಿಯಾಕಾಲಗಳ ಪರಸ್ಪರ ಸಮತ್ವ’ ಅರ್ಥಾತ್‌ ಐಕ್ಯ (ಏಕೆ = ಸಮ) ಎಂಬ ಅರ್ಥಕ್ಕೆ ಈ ಶಬ್ಧದ ಸಂಶ್ಲೇಷಣ (ಒಂದಕ್ಕೊಂದು ಕೂಡುವಿಕೆ, ಒಂದು ಮತ್ತೊಂದರಲ್ಲಿ ಲೀನವಾಗುವಿಕೆ) ಎಂಬರ್ಥವೇ ಮೂಲವಾಗಿದೆ ಎನ್ನುತ್ತಾರೆ.

ಇದರ ಮುಂದುವರಿಕೆಯಾಗಿ ‘ಲಯ’ ಎಂದರೆ ವಸ್ತುತಃ ಒಂದು ಬಗೆಯ ನಿಲುಗಡೆ ಎಂಬುದನ್ನು ಹಿಂದೆಯೇ ತಿಳಿದಿದ್ದೇವೆ. Rhythm ಎಂದರೆ “ಒಂದು ಬಗೆಯ ಗತಿ” ಎಂಬುದನ್ನು ಕಂಡುಕೊಂಡಿದ್ದೇವೆ. “ನಿಲುಗಡೆ” ಯೂ “ಗತಿ” ಯೂ ಪರಸ್ಪರ ವಿರೋಧಿಗಳು; ನಿಲುಗಡೆ ಎಂದರೆ ಗತಿಯ ಅವಸಾನ; ನಿಲುಗಡೆಯ ಅವಸಾನವೇ ಗತಿಯ ಆರಂಭ. ತಥ್ಯವು ಹೀಗಿರುವಾಗ Rhythm ಎಂಬ ಅರ್ಥದಲ್ಲಿ ‘ಲಯ’ ಎಂದು ಹೇಳಿದರೆ movement ಎಂಬ ಅರ್ಥದಲ್ಲಿ pause ಎಂದು ಹೇಳಿದರೆ ಹೇಗೋ ಹಾಗಾಗುತ್ತದೆ”[9] ಎಂದು ತೀರ್ಮಾನಿಸಿ ಬಿಡುತ್ತಾರೆ.

ಇಲ್ಲಿ ಹುಟ್ಟಿಕೊಳ್ಳುವ ಮೊದಲ ತೊಡಕು ‘ಲಯ’ ಶಬ್ಧದ ಎರಡನೆಯ ಅರ್ಥವನ್ನು ಅಂದರೆ ‘ಅವಸಾನ’ ಎಂಬುದನ್ನು ಮಾತ್ರ ಅವಲಂಬಿಸಿರುವುದು. ಎರಡನೆಯ ತೊಡಕು ಲಯ ಎಂದರೆ ಈಗಾಗಲೇ ಅವರು ‘ಲಯವೆಂದರೆ, ಹಿಂದೆಯೇ ಹೇಳಿರುವಂತೆ ಕ್ರಿಯಾಕಾಲ ಖಂಡಗಳ ಅನ್ಯೋನ್ಯ ಸಮತ್ವವೇ ತಾಳದ ಆರಂಭ; ಆದುದರಿಂದ ಅದು ತಾಳದ ಅವಿಭಾಜ್ಯ ಅಂಗ. ಯಾವುದಾದರೊಂದು ರಚನೆಯ ಅವಯವಗಳೊಳಗೆ ಅನ್ಯೋನ್ಯ ಕಾಲ ಸಮತ್ವವಿಲ್ಲದಿದ್ದರೆ ಆರ್ಥಾತ್‌ ಲಯವಿಲ್ಲದಿದ್ದರೆ ಅಲ್ಲಿ ತಾಳವಿಲ್ಲ ಸಮತಾಳಕ್ಕೆ ಒಳಪಡದಿರುವ ರಚನೆಗಳಲ್ಲಿ ಲಯವಿಲ್ಲ. ಆದುದರಿಂದ ಲಯಾನ್ವಿತವಾದ ಛಂದೋರಚನೆ ಎಂದರೂ ತಾಳಬದ್ಧವಾದ ಛಂದೋರಚನೆ ಎಂದರೂ ಅರ್ಥ ಬೇರಾಗುವುದಿಲ್ಲ (ಪು. ೩೧) ಎಂದು ಹೇಳಿರುವುದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವಾಗುತ್ತದೆ.[10] ಜೊತೆಗೆ ಸೇಡಿಯಾಪು ಕೃಷ್ಣಭಟ್ಟರು ಮೋನಿಯಾರ್‌ ವಿಲಿಯಮ್ಸ್‌ನ English -Sankrit Dictionary ಎಂಬ ಕೋಶದಲ್ಲಿ rthythm ಎಂಬ ಪದಕ್ಕೆ ‘ಲಯ’ ಎಂದೂ; ‘ತಾಲ’ ಎಂದೂ ನಿರ್ವಿಶೇಷವಾಗಿ ಅರ್ಥ ಕೊಡಲಾಗಿದೆ” ಎಂದು (ಪು. ೫೦ ರ ಅಡಿ ಟಿಪ್ಪಣಿ) ಹೇಳಿ ಅಂತಹ ಮಹಾಪಂಡಿತನು ಹೇಳಿದುದರಲ್ಲಿ ಶಂಕಿಸಬಹುದಾದುದೇನೂ ಇರಲಾರದೆಂದು ಭಾವಿಸಿರುವುದು ಸಹಜವೇ ಸೈ ಎಂದು ಸೂಚಿಸುವಾಗ ಆತನದೇ ಆದ Monier william’ s sankrit English Dictionary ಯಲ್ಲಿ Rhythm ಶಬ್ಧಕ್ಕೆ ತಾಲ ಎಂಬ ಅರ್ಥವನ್ನು ಬರೆಯಲಿಲ್ಲ ಎಂದು ತಮ್ಮ ತರ್ಕವನ್ನು ಮುಂದುವರೆಸಿ metre ಮತ್ತು melody ಪದಗಳಿಗೆ ಅನುಕ್ರಮವಾಗಿ ವೇದ ಮತ್ತು ತಾಲ ಎಂದು ಅಲ್ಲಿ ಅರ್ಥ ಬರೆದಿರುವುದನ್ನು ಟೀಕಿಸುತ್ತಾರೆ.

ಸೇಡಿಯಾಪು ಕೃಷ್ಣಭಟ್ಟರಿಗೆ ‘ಲಯ’ ಎಂಬ ಶಬ್ಧ Rhythm ಶಬ್ಧಕ್ಕೆ ಸಂವಾದಿ ಯಾದುದಲ್ಲ ಎಂದೆನಿಸಿದೆ. ಆದ್ದರಿಂದಲೇ ಅವರು ‘ಲಯ’ ಶಬ್ಧಕ್ಕೆ ಪರ್ಯಾಯವಾಗಿ ‘ಛಂದೋಗತಿ’ ಯೆಂಬ ಸಮಾಸ ಪದವನ್ನು ಸೂಚಿಸಿದ್ದಾರೆ. ಆಷ್ಟೇ ಅಲ್ಲ ಛಂದಸ್ಸನ್ನು ಕುರಿತು ಅವರು ಬರೆದ ಗ್ರಂಥಕ್ಕೆ ‘ಛಂದೋಗತಿ’ ಯೆಂದೇ ಶೀರ್ಷೀಕೆ ನೀಡಿದ್ದಾರೆ.

ಆಶ್ಚರ್ಯವೆಂದರೆ ಛಂದೋಗತಿ ಗ್ರಂಥದ ಹಲವಾರು ಕಡೆ ಲಯ ಶಬ್ಧದ ಬಳಕೆಯಾಗಿದೆ. ಸಕಲ ಭಾಷೆಗಳ (ದೈವಿಕವಲ್ಲದ) ಜಾನಪದ ಗೀತೆಗಳೆಲ್ಲವೂ ಸಮತಾಳ ಬದ್ಧವಾಗಿಯೇ (= ಲಯಾನ್ವಿತವಾಗಿಯೇ) ಇರುತ್ತವೆ. ‘ತಾಳಪ್ರಜ್ಞೆ = ಲಯಪ್ರಜ್ಞೆ) ಇಂಥ ವಿಶ್ಲೇಷಣೆಗಳೂ ಅಲ್ಲಿವೆ ಸಕಲ ಭಾಷೆಗಳ ಲಯಾನ್ವಿತ ಛಂದೋಬಂಧ (ಪು. ೨೦೦ ಅಡಿಟಿಪ್ಪಣಿ).

‘ಕುಣಿತಕ್ಕ ತಾಳವೇ ತಾಯಿ; ತಾಳಕ್ಕೆ ಲಯವೇ ತಾಯಿ’ (ಪು.೨೦೨ ಅಡಿಟಿಪ್ಪಣಿ) ‘ಓವಿಯು ಸಹಜ ಸ್ವರೂಪದ ಲಯಾನ್ವಿತವೇ ಆದ, ಎಂದರೆ ತಾಳಬದ್ಧವಾದ ಛಂದೋಬಂಧವೆಂಬುದರಲ್ಲಿ ವಿದ್ವಾಂಸರೊಳಗೆ ಮತ ಬೇಧವಿಲ್ಲ. ಪು.೨೦೮ ಅಡಿಟಿಪ್ಪಣಿ.

ಇಷ್ಟಾದರೂ ಸೇಡಿಯಾಪು ಕೃಷ್ಣಭಟ್ಟರನ್ನು ಉಳಿದು ಬೇರೆಯವರು ಎಲ್ಲರೂ ‘ಲಯ’ ಶಬ್ಧವನ್ನು Rhythm ಎಂಬುದಕ್ಕೆ ಪರ್ಯಾಯವಾಗಿ ಬಳಸುತ್ತಿರುವುದು ಗಮನಾರ್ಹ. ಕ್ರಿಯಾಶೀಲ ಖಂಡಗಳ ಸಮತ್ವವನ್ನು ಲಯವೆಂದು ಭರತಾದಿಗಳೇ ಹೇಳಿಲ್ಲವೇ? ಕಾವ್ಯದ ಅರ್ಥವನ್ನು ನಿರ್ವಹಿಸುವ ಈ ಕ್ರಿಯಾ ಕಾಲಖಂಡಗಳು ಪದ್ಯದಲ್ಲಿ ಆವರ್ತನಗೊಳ್ಳುತ್ತವೆಂಬುದಕ್ಕೆ ಪರ್ಯಾಯವಾಗಿ ಅಂಥ ಕಾಲಖಂಡಗಳ ಸಮತ್ವವೆಂದು ಗ್ರಹಿಸಿರುವುದು ಸಾಮಾನ್ಯವಾದ ಸಂಗತಿಯಲ್ಲ. ಅಜ್ಜನ ಹೆಗಲ ಮೇಲೆ ನಿಂತ ಆತನ ಮೊಮ್ಮಗ ಅಜ್ಜನಿಗಿಂತ ಹೆಚ್ಚು ದೂರ ನೋಡಬಲ್ಲನಲ್ಲವೆ? ಅದಕ್ಕೆ ಕಾರಣ ಎತ್ತರವಾಗಿ ಇರುವ ಅಜ್ಜನ ಹೆಗಲಿನ ಮೇಲೆ ಇರುವುದು! ಹಿಂದಿನವರ ತಿಳುವಳಿಕೆಯನ್ನು ಮುಂದುವರಿಸುವ ಕ್ರಿಯೆ ನಡೆಯುವುದು ಹೀಗಲ್ಲವೆ? ಏಕೆಂದರೆ ಅರಿವೆನ್ನುವುದು ವ್ಯಾಪಕವಾಗುತ್ತಲೇ ಹೋಗುವುದಲ್ಲವೆ?[11]

ಲಯ ಶಬ್ಧದ ಧಾತು ‘ಲೀ’ ಇರುವುದು ನಿಜ. ಆದರೆ ಕನ್ನಡದಲ್ಲಿ ಸಂಸ್ಕೃತ ಶಬ್ಧಗಳನ್ನು ಬಳಸಿಕೊಳ್ಳುವಾಗ ಸಾಕಷ್ಟು ಅರ್ಥವ್ಯತ್ಯಾಸ ಮಾಡಿಕೊಂಡಿರುವ ಪರಂಪರೆಯೇ ಇದೆ.

ಉದಾಹರಣೆಗೆ ಶಿಕ್ಷಾ ಮತ್ತು ಸಮಾಚಾರ ಎಂಬ ಎರಡು ಪದಗಳನ್ನೇ ಗಮನಿಸಬಹುದು. ಮೂಲದಲ್ಲಿ ಕಲಿಸುವಿಕೆ; ಒಳ್ಳೆಯ ನಡವಳಿಕೆ ಎಂಬರ್ಥಗಳಿವೆ, ಅನುಕ್ರಮವಾಗಿ . ಈ ಎರಡೂ ಪದಗಳು ಈಗ ಕನ್ನಡದಲ್ಲಿ ದಂಡನೆ ಹಾಗೂ ಸುದ್ದಿ (News) ಎಂಬರ್ಥದಲ್ಲಿ (ಅನುಕ್ರಮವಾಗಿ) ಬಳಕೆಯಾಗುತ್ತಿಲಿವೆ? ಹೀಗೇಯೇ ‘ಲಯ’ ಶಬ್ಧ ಕೂಡ ಛಂದಸ್ಸಿನ ಪ್ರವಹಣವನ್ನು – ಓಟವನ್ನು ಗುರುತಿಸುವ ಇಂಗ್ಲೀಷಿನ Rhythm ಪದಕ್ಕೆ ಇಂದು ಪರ್ಯಾಯವಾಗಿ ಬಳಕೆಯಾಗುತ್ತಿದೆ.

ಇನ್ನು ಲಯ ಶಬ್ದಕ್ಕೆ ಮೂಲವಾಗಿರುವ ಇಂಗ್ಲಿಷಿನ Rhythm ಪದದ ವಿಶ್ಲೇಷಣೆಯತ್ತ ಗಮನಹರಿಸಬಹುದು.

ಮೂಲತಃ ಗ್ರೀಕ್‌ನ rhein ಎಂಬ (ಪ್ರವಹಣ) ಎಂಬರ್ಥದ ಧಾತುವಿನಿಂದ ನಿಷ್ಪನ್ನವಾದ rhythmos ಪದದಿಂದ ಜನ್ಯವಾದುದು rhythm ಎಂಬುದು.

ಈ ಪದದ ಅರ್ಥ ವಿಶ್ಲೇಷಣೆಯಲ್ಲಿಯೂ ಆರಂಭದ ದಿನಗಳಲ್ಲಿ ಸಾಕಷ್ಟು ಗೊಂದಲವಿರುವುದನ್ನು ಸೇಡಿಯಾಪು ಕೃಷ್ಣಭಟ್ಟರು ಗುರುತಿಸಿದ್ದಾರೆ – ಎನ್‌ಸೈಕ್ಲೋಪಿಡಿಯ ಬ್ರಿಟಾನಿಕದಲ್ಲಿರುವ ಟಿಪ್ಪಣಿಯನ್ನು ಆಧಾರವಾಗಿಟ್ಟುಕೊಂಡು –

೧೯೬೫ರ Encyclopaedia Britannicaದ ೧೯ನೇ ಸಂಪುಟ ಪು. ೨೭೨ ರಲ್ಲಿ ಈ ಹೇಳಿಕೆಯಿದೆ. Rhythm in verse: The line between rhythm and metre is hard to draw. Aristotle is very vague on the question. Seridas says the rhythm is the father of metre and Quintilian that rhythm is male and metre female… It would appear, however, that to the Greeks metre was with the measurement of poetic periods, and rhythm with their effective chanting or recitation; it cannot therefore be depended lergely on icturs or stress and the word is therefore often applied to prose as well as to verse. It is probable that in a quantitative language like Greek, this Stress (as it is in modern French) was far less strongly marked than in English : but it is a mistake to think it entirely absent, as conversely, it is a mistake to think that in English, though accent is, of course, predominent, quantity is unimportant. ಇಲ್ಲಿ ಬ್ರಿಟಾನಿಕ ವಿಶ್ವಕೋಶ Rhythm ಶಬ್ದದ ಮೂಲಕ ಗ್ರೀಕ್‌ನ Rhythmos ಎಂಬುದನ್ನು ಸೂಚಿಸಿ ಈ ಶಬ್ದದ ವಿಶ್ಲೇಷಣೆಗೆ ಗ್ರೀಕ್‌ ಬಗೆಗೆ ಮಾತ್ರ ಚಿಂತಿಸಿರುವುದರಿಂದಲೇ ಅರಿಸ್ಟಾಟಲ್‌ ಅಭಿಪ್ರಾಯ ಅಸ್ಪಷ್ಟವಾಗಿರುವುದು. ಆದರೆ ಮುಂದೆ ಇಂಗ್ಲಿಷ್‌ ಭಾಷೆಯ ವಿಶ್ಲೇಷಣೆ ಕೂಡ ಇದ್ದು ಅಲ್ಲಿಯೂ ಈ ಶಬ್ದ ವಿಶ್ಲೇಷಣೆ ಬಗೆಗೆ ಅಸ್ಪಷ್ಟತೆ ಸೂಚಿಸಿದೆ.

ಈ ಎರಡೂ ಅಭಿಪ್ರಾಯಗಳನ್ನು ಮನಗಂಡೇ ಸೇಡಿಯಾಪು ಹೀಗೆ ಹೇಳುತ್ತಾರೆ – “ಹೀಗೆ Rhythm ಎಂಬುದರ ಅರ್ಥವು ಅವ್ಯವಸ್ಥಿತವೂ ಆತ ಏವ ಅನಿರ್ವಚನೀಯವೂ ಆಗಿದೆ ಎಂದು Encylopaedia Brihanamica ದಂತಹ ಪ್ರಮಾಣ ಭೂತವಾದ ಮಹಾಗ್ರಂಥವು ಹೇಳುತ್ತದೆ.” ಆದರೆ ಇಂಥ ‘ಅನಿರ್ವಚನೀಯತೆ’ಗೆ ಕಾರಣ ಏನಿರಬಹುದು ಎಂಬ ಸೂಚನೆ ೧೯೬೮ರ Encylopaedia Brihanamicaದ ಪು. ೨೮೮ರಲ್ಲಿ ಹೀಗಿದೆ: Difficulties also arise from attempts to interpret the rhythm catural to one language in terms of another e.g. prosodists have tried to relate the rhythmic principals of the Gernamic languages (including English) to those of classic Greek and Latin and of Romanic language (P. 288).

೧೯೬೫ರ ಆವೃತ್ತಿಯಲ್ಲಿ ಗ್ರೀಕ್‌ ಮತ್ತು ಇಂಗ್ಲೀಷ್‌ ಭಾಷೆಗಳನ್ನು ಮೂಲ ಮಾನವಾಗಿಟ್ಟು Rhythm ಅನ್ನು ವಿಶ್ಲೇಷಿಸುವ ಯತ್ನವಿತ್ತು. ೧೯೬೮ರಲ್ಲಿ ಗ್ರೀಕ್‌, ಲ್ಯಾಟಿನ್‌ ಮತ್ತಿತರ ರೊಮಾನಿಕ್‌ ಭಾಷೆಗಳನ್ನು (ಇಂಗ್ಲಿಷ್‌ ಕೂಡ) ಗಮನದಲ್ಲಿ ಇರಿಸಿಕೊಂಡಿದ್ದಿತು.

[1] ಪಾದಬದ್ಧೋಕ್ಷರ ಸಮಃ ತಂತ್ರೀಲಯಸಮನ್ವಿತಃ ಶೋಕಾರ್ತಸ್ಯ ಪ್ರವೃತ್ತೋ ಮೇ ಶ್ಲೋಕೋ ಭವತು ನಾನ್ಯಥಾ, ಬಾಲಕಾಂಡ, ಸರ್ಗ -೩-೧೮

[2] ಪುಟ ೧೦೦. ಕನ್ನಡ ಕೈಪಿಡಿ ತೃತೀಯ ಮುದ್ರಣ, ೧೯೫೫. ಆದರೆ ಕನ್ನಡ ಛಂದಸ್ಸಿನ ಚರಿತ್ರೆಯ ಮೊದಲ ಸಂಪುಟದಲ್ಲಿ ಕೆ. ಜಿ. ನಾರಾಯಣ ಪ್ರಸಾದ್‌ ಅವರು ಲಯದ ಬಗ್ಗೆ ಹೇಳುವಾಗ ಕನ್ನಡದಲ್ಲಿ ಛಂದಸ್ಸಿಗೆ ಸಂಬಂಧಿಸಿದಂತೆ ‘ಲಯ’ ವೆಂಬ ಶಬ್ಧವನ್ನು ಈ ಅರ್ಥದಲ್ಲಿ ಬಳಕೆ ತಂದವರು ಅವರೇ (ತೀ. ನಂ. ಶ್ರೀ.) ಎಂದು ಪು. ೧೬೫ರಲ್ಲಿ ಹೇಳಿದ್ದಾರೆ.

[3] ಪು. ೩೯೯ ಸಂಭಾವನೆ.

[4] ಪು. ೧೮, ಛಂದೋಗತಿ – ಸೇಡಿಯಾಪು ಕೃಷ್ಣಭಟ್ಟ. ಮುಂದುವರಿದು ಅವರು ಲೀಜ್ (= ಲೀ) ಶ್ಲೇಷಣೆ ಎಂಬ ಧಾತುವಿನಿಂದ ಅದರ ನಿಷ್ಪತ್ತಿಯನ್ನು ಹೇಳುತ್ತಾರೆ.

[5] ಪು. ೧೬೪, ಕನ್ನಡ ಛಂದಸ್ಸಿನ ಚರಿತ್ರೆ.

[6] ಪು. ೩೯೯-೪೦೦, ಸಂಭಾವನೆ.

[7] ೧೯೮೫. ಛಂದೋಗತಿ -ಸೇಡಿಯಾಪು ಕೃಷ್ಣಭಟ್ಟ, ಪ್ರ: ಗೀತಾ ಬುಕ್‌ ಹೌಸ್‌, ಮೈಸೂರು.

[8] ಪು.೧೯. ಛಂದೋಗತಿ.

[9] ಭರತನ ಅಭಿಪ್ರಾಯದಂತೆ ಲಯವೆಂದರೆ ಕ್ರಿಯಾಕಾಲ ಖಂಡಗಳ ಅನ್ಯೋನ್ಯ ಸಮತ್ವವಾದರೆ ತೀರ ಇತ್ತೀಚಿನ ವಿಶ್ವಕೋಶದ ಆಭಿಪ್ರಾಯ ಹೀಗಿದೆ: Rhythm in poetry; the patterned recurrence. with in a range of regularity. of specific language features. usually features of sond. ಇವುಗಳೆರಡೂ ಹೆಚ್ಚು ಭಿನ್ನವಾಗದಿರುವುದು ಆಶ್ಚರ್ಯ. ಕ್ರಿ. ಪೂ. ದ ಭರತನಲ್ಲಿ ಕಂಡುಬರುವ ‘ಲಯ’ ವಿಶ್ಲೇಷಣೆ ಇಲ್ಲಿ ಇನ್ನಷ್ಟು ವಿಶದವಾಗಿದೆ, ೧೯೯೦ರ ವಿಶ್ವಕೋಶದಲ್ಲಿ ಕ್ರಿಯಾ ಕಾಲಖಂಡಗಳ ಅನ್ಯೋನ್ಯ ಸಮತ್ವ ಎಂಬುದು ಮಾದರಿಗೊಂಡ ಆವರ್ತನವಾಗಿರುವ ವಿಶೇಷ ಇಲ್ಲಿದೆ. ಆದರೆ ಈ ಆವರ್ತನ ಕೂಡ ಒಂದು ನಿಮಿತತೆಯ ಶ್ರೇಣಿಯಲ್ಲಿರುತ್ತದೆ ಎಂಬ ಅಂಶದ ಜೊತೆಗೆ ವಿಶ್ವಕೋಶದ ಇನ್ನೊಂದು ಸೂಕ್ಷ್ಮತೆ ಈ ವಿಶ್ಲೇಷಣೆ ಒಂದು ನಿರ್ದಿಷ್ಟ ಭಾಷೆಗೆ ಸಂಬಂಧಿದುದು ಎಂದದ್ದು. ಅಂದರೆ ‘ಲಯ’ದ ಪರಿಕಲ್ಪನೆ ಭಾಷೆಗೆ ಬದ್ಧವಾದದ್ದು. ಎಲ್ಲ ಭಾಷೆಗಳಿಗೂ ಅನ್ವಯವಾಗುವಂಥದ್ದಲ್ಲ.

ಇಷ್ಟನ್ನು ಗಮನಿಸಿದರೆ ಭರತ ಲಯ ಶಬ್ಧವನ್ನು ಬಳಸಿದ ಅರ್ಥದಲ್ಲೇ ವಿಶ್ವಕೋಶ Rhythm ಶಬ್ಧವನ್ನು ಬಳಸಿರುವುದು ಆಶ್ಚರ್ಯವುಂಟು ಮಾಡುತ್ತದೆ. ಶ್ರೇಷ್ಠ ಚಿಂತಕರ ಆಲೋಚನೆಗಳೆಲ್ಲ ಹೀಗೆಯೇ ಕಾಲಾತೀತವೆನ್ನುವಂತಿರುವುದುಂಟು. ಇಷ್ಟಾದ ಮೇಲೆ Rhythm ಗೆ ಲಯ ಶಬ್ಧ ಸಂವಾದಿಯಲ್ಲ ಎನ್ನುವುದು ಹೇಗೆ?

[10] ಸ್ವಾರಸ್ಯವೆಂದರೆ ಲಯ ಶಬ್ಧ ಅರ್ಥವನ್ನು ಗ್ರಹಿಸುವಾಗ ಸೇಡಿಯಾಪು ಕೃಷ್ಣಭಟ್ಟರು ‘ಲೀ’ (ಲೀಜ್‌) ಧಾತುವನ್ನು ಆಶ್ರಯಿಸುತ್ತಾರೆ. ಅವರು ಲಯ ಎಂದರೆ ಗತಿ, ನಡೆ ಅಥವಾ ಪ್ರವಹಣ ಎಂಬರ್ಥದ ಕಡೆಗೆ ಗಮನಹರಿಸುವುದೇ ಇಲ್ಲ. ಜೊತೆಗೆ ಭರತ ಲಯವನ್ನು ಕುರಿತು ಹೇಳಿದ ಮಾತುಗಳಲ್ಲಿ ಕೂಡ ಅದು ಪ್ರಮಾಣ ಅಥವಾ ನಡೆ ಎಂಬ ಅರ್ಥವನ್ನೇ ಪಡೆಯುತ್ತದೆ ಅಲ್ಲವೆ! ಇಂಗ್ಲೀಷಿನ Rhythm ಶಬ್ಧದ ಅರ್ಥಕೂಡ ಪ್ರವಹಣ ಎಂದೇ ಅಲ್ಲವೆ! ಕನ್ನಡದ ಎಲ್ಲ ವಿದ್ವಾಂಸರೂ -ಶ್ರೀ ಸೇಡಿಯಾಪು ಕೃಷ್ಣಭಟ್ಟರನ್ನು ಉಳಿದು ಲಯ ಶಬ್ಧವನ್ನೆ ಬಳಸಿದ್ದು ಅದಕ್ಕೆ ಭರತನ ನಾಟ್ಯಶಾಸ್ತ್ರದ ಸೂತ್ರದಲ್ಲಿ

ಛಂದೋಕ್ಷರ ಪದಾನಾಂ ಹಿ ಸಮತ್ವಂ ಯತ್ಪ್ರಕೀರ್ತಿತಮ್
ಕಲಾಕಾಲಾಂತರ ಕೃತಂ, ಲಯೋ ನಾಮ ಸಂಜ್ಞಿತಃ

ಎಂದೇ ಇದೆ.

“ಒಂದೇ ಛಂದೋಬಂಧದ (ಬೇರೆ ಬೇರೆ) ಅಕ್ಷರ ಪುಂಜಗಳಲ್ಲಿ ಅವುಗಳ ಮಾತ್ರಾ ಕಾಲಾವಕಾಶದಿಂದಾಗಿ ಉಂಟಾಗುವ ಸಮತ್ವಕ್ಕೆ ಲಯವೆಂದು ಹೆಸರು ಕೊಡಲಾಗಿದೆ” ಎಂದು ಅದನ್ನು ಸೇಡಿಯಾಪು ಅವರೇ ವಿವರಿಸಿದ್ದಾರೆ.

ಪದರಚನೆಗಳ ಕಾಲ ಸಮತ್ವವು ಅನ್ಯೋನ್ಯವಾಗಿ ಇದ್ದಾಗ ಲಯ ಹೇಗಾಗುವುದೆಂಬುದು ಇದರಿಂದ ಗೊತ್ತಾಗುತ್ತದೆ. ಎರಡನೆಯದಾಗಿ ಸೇಡಿಯಾಪು ಕೃಷ್ಣಭಟ್ಟರು ವಿಶ್ವಕೋಶದ ಪು. ೧೯೬೫ ಮತ್ತು ೧೯೬೮ರಲ್ಲಿ ಬರುವ ಎರಡು ವಿಶ್ಲೇಷಣೆಯನ್ನು ಗಮನಕ್ಕೆ ತಂದು ಅಲ್ಲಿ ‘ಲಯ’ದ ಬಗ್ಗೆ ಗೊಂದಲದ ಬಗ್ಗೆ ಚರ್ಚಿಸುತ್ತಾರೆ. ಆಶ್ಚರ್ಯ ಎಂದರೆ ವಿಶ್ವಕೋಶ Encyclopadia Britannicaದ ೧೯೯೦ರ ಆವೃತ್ತಿಯಲ್ಲಿ ಈ ತೊಡಕುಗಳನ್ನು ನಿವಾರಿಸಿರುವುದರ ಕಡೆಗೆ ಅವರು ಗಮನಹರಿಸಲು ಸಾಧ್ಯವಾಗದೆ ಹೋಯಿತು, ಕಾಲದ ದೃಷ್ಟಿಯಿಂದ – ಇಲ್ಲೇ ನಾವು ಮರೆಯದೆ ನೆನಪು ಮಾಡಿಕೊಳ್ಳಬೇಕಾದುದು, ಮೋನಿಯರ್‌ ವಿಲಿಯಮ್ಸ್‌ನ ನಿಘಂಟಿನಲ್ಲಿ ಲಯ ಶಬ್ಢಕ್ಕೆ ಬರೆದಿರುವ ಆರ್ಥದ ಬಗ್ಗೆ ಅವರು ನಡೆಸುವ ಜಿಜ್ಞಾಸೆ, ಹಾಗೆಯೇ ಆಪ್ಟೆಯವರ ನಿಘಂಟಿನ ವಿಶ್ಲೇಷಣೆ. ಇಲ್ಲೆಲ್ಲ ಸೇಡಿಯಾಪು ಅವರು ‘ಲಯ’ ವನ್ನು ಕುರಿತು ತಾವು ರೂಪಿಸಿಕೊಂಡ ಸಿದ್ಧಾಂತಕ್ಕೆ ವಿರುದ್ಧವಾದ ಯಾವ ಅಂಶವನ್ನು ಸ್ವೀಕರಿಸಲು ಸಿದ್ಧವಿದ್ದಂತಿಲ್ಲ. ಉದಾಹರಣೆ ಮೋನಿಯರ್‌ ವಿಲಿಯಮ್ಸ್‌ ನಿಘಂಟಿನಲ್ಲಿ ಲಯವನ್ನು Rhythm ಗೆ ಪರ್ಯಾಯ ಪದವಾಗಿ ಹೇಳಿರುವುದನ್ನು ತಾವು ಒಪ್ಪದಿರುವುದಕ್ಕೆ ಆತ metre ಮತ್ತು melody ಪದಗಳಿಗೆ ಅನುಕ್ರಮವಾಗಿ ವೇದ ಮತ್ತು ತಾಳ ಎಂದು ಅರ್ಥ ಬರೆದಿರುವುದು ತಪ್ಪಲ್ಲವೆ ಅನ್ನುತ್ತ Rhythm ಗೆ ಲಯ ಪರ್ಯಾಯ ಶಬ್ಧ ಅಲ್ಲ ಎಂದುಬಿಡುತ್ತಾರೆ. ಅದಕ್ಕೆ ಪೋಷಕವಾಗಿ ಮೋನಿಯರ್‌ ವಿಲಿಯಮ್ಸ್‌ನ Sanskrit English Dictionary ಯಲ್ಲಿ Rhythm ಶಬ್ಧಕ್ಕೆ ತಾಳ ಅಥವಾ ಲಯ ಎಂಬ ಅರ್ಥವನ್ನು ಬರೆದಿರುವುದನ್ನು ನೆನಪು ಮಾಡುತ್ತಾರೆ.

ಕನ್ನಡದಲ್ಲಿ ಈವರೆಗೆ ‘ಲಯ’ದ ಬಗ್ಗೆ ನಡೆದಿದ್ದ ಚಿಂತನೆಗಳನ್ನು ಗಮನಿಸದಿದ್ದುದ್ದು ಬಹುಶಃ ಪ್ರಧಾನ ಕಾರಣವಗಿರಬೇಕು, ಅವರು ಲಯ ಶಬ್ಧಕ್ಕೆ ಪರ್ಯಾಯವಾಗಿ ಛಂದೋಗತಿ ಪದವನ್ನು ಬಳಸುವುದಕ್ಕೆ.

[11] ಪು. ೧೯೫ (ಅಡಿಟಿಪ್ಪಣಿ)