ಛಂದಸ್ಸು ಎಂಬ ಪದಕ್ಕೆ ವಿ.ಎಸ್‌. ಆಪ್ಟೆಯವರು ಕೊಡುವ ಅರ್ಥಗಳು ಹೀಗಿವೆ: 1. Wish, desire, fancy… 2. Free will, free or wilful conduct, 3. Meaning, Intention, 4. Fraud, trick, deceit, 5. The vedas, the sacred text of the vedic hymes, 6. A metre, 7. Metrical science, Prosody.

ಆಪ್ಟೆಯವರು ನೀಡಿರುವ ಅರ್ಥಗಳಲ್ಲಿ ಆರು ಮತ್ತು ಏಳನೆಯ ಅರ್ಥಗಳು ನಮ್ಮ ದೃಷ್ಟಿಯಿಂದ ಹೆಚ್ಚು ಗಮನಾರ್ಹ. ಆರನೆಯ ಅರ್ಥ ಒಂದು ಛಂದಸ್ಸು ಎಂದಿದ್ದರೆ ಏಳನೆಯ ಅರ್ಥ ಅದನ್ನೊಂದು ಶಾಸ್ತ್ರ – ಪದ್ಯದ ಲಯವಿನ್ಯಾಸಕ್ಕೆ ಸಂಬಂಧಿಸಿದುದು ಎನ್ನುತ್ತದೆ. ವಾಸ್ತವವಾಗಿ ಛಂದಸ್ಸು ಶಬ್ದದ ಧಾತು ‘ಛದ್‌’ ಎಂದಿದ್ದು ಅದರ ಅರ್ಥದ ಏಳು ಛಾಯೆಗಳನ್ನು ಈಗಾಗಲೆ ಗಮನಸಿಸಿದ್ದೇವೆ. ‘ಛದ್‌’ ಧಾತುವಿನ ಅರ್ಥವನ್ನು ಆಪ್ಟೆಯವರು ಹೀಗೆ ಹೇಳಿದ್ದಾರೆ.

  1. to cover, cover over, veil 2. to spread anything (as a over), cover oneself 3. to hide, conceal, eclipse, (Keep secret).

ಮುಚ್ಚುವುದು, ಹೊದಿಸುವುದು, ಮುಚ್ಚಕೊಳ್ಳುವುದು – ಇವು ಪ್ರಧಾನ ಅರ್ಥಗಳಾಗಿದ್ದು ಭಾಷೆಗೆ ಸಂಬಂಧಿಸಿದಂತೆ ಆಲೋಚನೆಗಳನ್ನು ಅಥವಾ / ಮತ್ತು ಭಾವನೆಗಳನ್ನು ಹೊದಿಸುವುದು ಅಥವಾ ಹೊದ್ದುಕೊಳ್ಳುವುದು ಎಂದು ಅರ್ಥವಾಗುತ್ತದೆ. ಅಂದರೆ ಭಾಷೆ ಪ್ರಕಟಗೊಳ್ಳುವ ಸಾಧನ ಛಂದಸ್ಸಾಗುತ್ತದೆ.

ವ್ಯಕ್ತಿ ತನ್ನ ಭಾವನೆಗಳನ್ನು ಅಥವಾ ಯೋಚನೆಗಳನ್ನು ಅಥವಾ ಭಾವನೆಗಳು ಮತ್ತು ಆಲೋಚನೆಗಳನ್ನು ಪ್ರಕಟಪಡಿಸುವ ಸಾಧನ ಛಂದಸ್ಸು. ಹಾಗೆ ನೋಡಿದರೆ ಪ್ರತಿಯೊಂದು ಭಾಷೆಯೂ ಭಾಷೆಯನ್ನಾಡುವ ಜನರ ಛಂದಸ್ಸಾಗುತ್ತದೆ. ಬಹುಶಃ ಇದೇ ಅರ್ಥದಲ್ಲಿಯೆ ಇರಬೇಕು ಛಂದೋಭಾಗ್‌ ವಾಙ್ಮಯಂ ಸರ್ವಂ; ನ ಕಿಂಚಿಚ್ಧಂದಸಾ ವಿನಾ (ವಾಙ್ಮಯವೆಲ್ಲವೂ ಛಂದೋಮಯವಾದುದೇ; ಹಾಗೆ ಛಂದಸ್ಸಿಲ್ಲದುದು ಏನೇನೂ ಇಲ್ಲ) ಎಂಬ ಮಾತು ಹುಟ್ಟಿಕೊಂಡಿದೆ. ಇದೇ ಅರ್ಥವನ್ನೊಳಗೊಂಡದ್ದು – ಛಂದೋ ಹೀನಃ ನ ಶಬ್ದೋsಸ್ತಿ (ಛಂದಸ್ಸಿಲ್ಲದ ಶಬ್ದವೇ ಇಲ್ಲ) ಎಂಬ ಉಕ್ತಿ. ಶಬ್ದ ಮತ್ತು ಛಂದಸ್ಸಿನ ಅವಿನಾಭಾವ ಭಾಷೆ ಮತ್ತು ಅಭಿವ್ಯಕ್ತಿಗೆ ಸಂಬಂದಿಸಿದುದು.

ಭಾಷೆಯ ಅಭಿವ್ಯಕ್ತಿ ರೀತಿಯೇ ಛಂದಸ್ಸು. ಇದು ಗದ್ಯರೂಪವಾಗಿರಬಹುದು; ಅಥವಾ ಪದ್ಯ ರೂಪವಾಗಿರಬಹುದು.

ಭಾಷೆಯೆನ್ನುವುದೇ ಆಲೋಚನೆ ಅಥವಾ / ಮತ್ತು ಭಾವನೆಗಳಿಗೆ (ಅನುಭವಗಳಿಗೆ) ಆಕಾರವನ್ನು ಕೊಡುವುದು ಛಂದಸ್ಸು ಎಂದಾದರೂ ಛಂದಸ್ಸು ಎಂಬ ಪದವನ್ನು ಒಂದು ಭಾಷೆಯ ಲಯವಿನ್ಯಾಸಗಳನ್ನು ಕುರಿತ ಶಾಸ್ತ್ರಕ್ಕೆ ಬಳಸುತ್ತೇವೆ; ಅನಂತರ ಅಂಥ ವಿಧವಿಧವಾದ ಲಯವಿನ್ಯಾಸಗಳನ್ನು ಕುರಿತು ಛಂದಸ್ಸು ಎಂಬ ಶಬ್ದವನ್ನು ಬಳಸುತ್ತೇವೆ. ಇದನ್ನೆ ಬಿ.ಎಂ.ಶ್ರೀ. ಅವರು ಪದ್ಯಗಳ ನಿಯಮವನ್ನು ಛಂದಶಾಸ್ತ್ರವು ತಿಳಿಸುವುದು ಎಂದಿದ್ದಾರೆ. ಉದಾಹರಣೆಗೆ ಲೌಕಿಕ ಛಂದಸ್ಸು, ವೈದಿಕ ಛಂದಸ್ಸು, ಅಕ್ಷರಗಣ ಛಂದಸ್ಸು, ಮಾತ್ರಾಕ್ಷರಗಣ ಛಂದಸ್ಸು, ಅಂಶಗಣ ಛಂದಸ್ಸು, ಮಾತ್ರಾ ಛಂದಸ್ಸು ಎಂದು ಮುಂತಾಗಿ ಹೇಳುವುದುಂಟು.

‘ಛದ್‌’[1] ಧಾತುವು ಹೊದಿಸುವುದು ಅಥವಾ ಹೊದ್ದುಕೊಳ್ಳುವುದು ಎಂಬ ಎರಡೂ ಅರ್ಥಗಳಲ್ಲಿ ಬಳಕೆಯಾಗುವುದರಿಂದ ಇಲ್ಲಿ ಒಂದು ಸೂಕ್ಷ್ಮವಿರುವುದನ್ನು ಗಮನಿಸಬಹುದು.

ಮನುಷ್ಯನಿಗೆ ಉಡುಪು ಹೇಗೋ ಕಾವ್ಯಕ್ಕೆ ಛಂದಸ್ಸು ಹಾಗೆ ಎನ್ನಬಹುದು. ಈ ಛಂದಸ್ಸು ಗದ್ಯಕ್ಕೂ ಹಾಗೆಯೇ ಪದ್ಯಕ್ಕೂ ಅನ್ವಯವಾಗುವಂಥದ್ದು. ಏಕೆಂದರೆ ಪದ್ಯದಂತೆಯೇ ಗದ್ಯವೂ ಕವಿಪ್ರತಿಭೆಯ ಒರೆಗಲ್ಲು. ಇದೇ ಅರ್ಥದಲ್ಲಿ ಬಾಣಭಟ್ಟ ಹೇಳಿದ್ದು – “ಗದ್ಯಮ್‌ ಕವೀನಾಂ ನಿಕಷಂ ವದನ್ತಿ. ವಚನಗಳನ್ನು” ಓದುವಾಗ ಕೂಡ ನಮಗೆ ಗದ್ಯ ಮತ್ತು ಪದ್ಯಗಳೆರಡರ ಲಯಗಳು ಗಮನಕ್ಕೆ ಬರುತ್ತವೆ.

ಗದ್ಯವಾಗಲಿ ಅಥವಾ ಪದ್ಯವಾಗಲಿ ಅದು ಅನುಭವ ಅಥವಾ ಆಲೋಚನೆ ಧರಿಸುವ ಅಥವಾ ಅನುಭವ ಅಥವಾ ಮತ್ತು ಆಲೋಚನೆಗೆ ಧರಿಸಿದ ಉಡುಪು ಆಗಿ ಛಂದಸ್ಸು ನಿಲುತ್ತದೆ. ಹೀಗೆ ಗದ್ಯ ಪದ್ಯಗಳನ್ನು ವಿಂಗಡಿಸುವ ಯತ್ನ ಮಾಡುವಾಗ ಪ್ರಧಾನವಾಗಿ ನಮ್ಮ ಗಮನ ಸೆಳೆಯುವ ಅಂಶವೆಂದರೆ ಗದ್ಯಕ್ಕಿಂತ ಹೆಚ್ಚಾಗಿ ಪದ್ಯದಲ್ಲಿ ಆವರ್ತನಗೊಳ್ಳುವ ಲಯವಿರುತ್ತದೆ. ಈ ಸೂಕ್ಷ್ಮನ್ನು ಗಮನಿಸಿಯೇ ಛಂದಸ್ಸು ಪದ್ಯಗಳ ನಿಯಮವನ್ನು ತಿಳಿಸುತ್ತದೆ ಎಂದದ್ದು. ಈ ಲಯವೆಂಬುದು ಅರ್ಥಾನುಸಾರಿಯೂ ಆಗಿದ್ದು ಸಾಮಾನ್ಯವಾಗಿ ಆಡುವ ಭಾಷೆಯ ಗದ್ಯಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಇಂಥ ಸಂದರ್ಭಗಳನ್ನು ಕುರಿತು ಹೇಳುವಾಗ Poetry sings prose talks ಎಂದೋ Poetry dance prose walks ಎಂದೋ ಹೇಳುವುದೂ ಉಂಟು. ಅಂದರೆ ಪದ್ಯದಲ್ಲಿ ಗದ್ಯಕ್ಕಿಂತ ಭಿನ್ನವಾದ ಒಂದು ರಮಣೀಯತೆಯಿರುವುದು ಪದ್ಯಕ್ಕಿಂತ ಭಿನ್ನವಾದ ವೈಚಾರಿಕತೆ ಗದ್ಯದ್ದಲ್ಲಿ ಇರುವುದು ಗಮನಾರ್ಹ. ಈ ಆರ್ಥದಲ್ಲಿಯೇ ಭಾಷೆಯ ಸತ್ವವನ್ನು ಉಳಿಸಿಕೊಳ್ಳಬೇಕಾದರೆ ಗದ್ಯದಿಂದ ಪದ್ಯವೂ ಪದ್ಯದಿಂದ ಗದ್ಯವೂ ನಿರಂತರವಾಗಿ ಕಸಿಗೊಳ್ಳಬೇಕಾಗುತ್ತದೆ ಎಂದು ಹೇಳುವುದುಂಟು. ಏಕೆಂದರೆ ಪದ್ಯದಲ್ಲಿರುವ ಕಲ್ಪಕತೆಯ ಅಂಶ (ಗದ್ಯದಲ್ಲಿಲ್ಲ ಎಂದಲ್ಲ!). ಅದನ್ನು ಬರೀ ಗಾಳಿಯಾಗಿಸಿ ಬಿಡಬಹುದು. ಹಾಗೆಯೇ ಗದ್ಯವು ತನ್ನ ವೈಚಾರಿಕತೆಯ ಭಾರದಿಂದ ದುರವ ಗಾಹಿಯಾಗಿ ಬಿಡಬಹುದು. ಆದ್ದರಿಂದಲೆ ಪದ್ಯದ ರೋಮಾಂಚಕತೆ ಮತ್ತು ಗದ್ಯದ ವೈಚಾರಿಕತೆಗಳು ಪೂರಕವಾದಗಲೇ ಭಾಷೆ ಶಕ್ತಿಯುತವೂ ಜೀವಂತವೂ ಆಗುವುದು. ಛಂದಸ್ಸು ಈ ನೆಲೆಯಲ್ಲಿಯೂ ಭಾಷೆಯ ಶಕ್ತಿಯನ್ನು ಧಾರಣ ಮಾಡುವ ಸತ್ವ ಉಳಿಸಿಕೊಳ್ಳಬೇಕಾಗುತ್ತದೆ.

ಇಲ್ಲಿನ ಮತ್ತೊಂದು ಸೂಕ್ಷ್ಮವಾದ ಅಂಶ ಆಲೋಚನೆ ಅಥವಾ ಮತ್ತು ಭಾವನೆಗಳನ್ನು ಹೊದ್ದುಕೊಳ್ಳುವುದು ಮತ್ತು ಆಲೋಚನೆ ಅಥವಾ ಮತ್ತು ಭಾವನೆಗಳಿಗೆ ಹೊದಿಸುವುದು ಎಂಬ ಎರಡು ಸೂಕ್ಷ ರೀತಿಗಳಲ್ಲಿ ಎರಡು ಪ್ರಧಾನ ಆಶಯಗಳಿರುವಂತಿದೆ.

ಹೊದ್ದುಕೊಳ್ಳುವುದು ಎಂಬ ಪದವು ಸ್ಫೂರ್ತಿವಾದವನ್ನೂ ಹೊದಿಸುವುದು ಎಂಬುದು ಪ್ರಜ್ಞಾಪೂರ್ಣ ಯತ್ನವನ್ನೂ ಧ್ವನಿಸುತ್ತದೆಂದು ಭಾವಿಸುವುದಾದರೆ ಕಾವ್ಯ ಮೀಮಾಂಸೆಯ ಒಂದು ಸೂಕ್ಷ್ಮ ವಲಯವನ್ನು ಪ್ರವೇಶಿಸಲು ನೆರವಾಗುತ್ತದೆ.

ಸ್ಫೂರ್ತಿವಾದದ ಕವಿ ಪಂಥದವರು ಕವಿತೆಯನ್ನು ಕುರಿತು ಹೇಳುವಾಗ ಅದು ಉಕ್ಕುಕ್ಕಿ ಬರುವ ಶಕ್ತಿಯುತವಾದ ಭಾವನೆ (ಅನುಭವ) ಗಳನ್ನು ಶಮಸ್ಥಿತಿಯಲ್ಲಿ ಪುನರ್ಮನನ ಮಾಡಿ ಕ್ರೋಢಿಕರಿಸುವ ರೀತಿ ಎಂದು ಹೇಳಿದರೆ, ಪ್ರಜ್ಞಾಪೂರ್ಣವಾದವರು ಅನುಭವಗಳಿಗೆ ಸೂಕ್ತವಾದ ವಸ್ತು ಪ್ರತಿರೂಪಗಳನ್ನು (objective correlatives) ಹುಡುಕಿ ದೊರಕಿಸುವುದು ಅಥವಾ ಅನುಭವಗಳಿಗೆ ಸೂಕ್ತವಾದ ಸಮೀಕರಣಗಳ ಅಭಿವ್ಯಕ್ತಿಯನ್ನು ಸಾಧಿಸುವುದು ಎಂದು ಹೇಳುವುದುಂಟು.

ಈ ಅರ್ಥದಲ್ಲಿ ಛಂದಸ್ಸನ್ನು ಕುರಿತು ಮಾತನಾಡುವಾಗ ಅದು ಕವಿಯ ಅನುಭವದ ರೂಪಧಾರಣಾ ಸಾಮರ್ಥ್ಯದ ಅಭಿವ್ಯಕ್ತಿ ಆಗುತ್ತದೆ. ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅನುಭವಕ್ಕೆ ಸೂಕ್ತವಾದ ರೂಪ (ಆಕಾರ) ವನ್ನು ನೀಡುವ ಸಾಮರ್ಥ್ಯವಾಗಿ ಬಿಡುತ್ತದೆ.

ಈ ಅರ್ಥದಲ್ಲಿಯೇ ಛಂದಸ್ಸಿನ ಜೀವಾಳವಾದ ಲಯವನ್ನು ಕುರಿತು ಚಿಂತಿಸಬೇಕಾಗುತ್ತದೆ. ಏಕೆಂದರೆ ಈ ಲಯ ಎನ್ನುವುದು ಕೇವಲ ಅವರ್ತನಗೊಳ್ಳುವ ಕಾಲ ಮಾತ್ರವಾಗಿರದೆ ಅರ್ಥ ಕಾರಣವಾದ ಘಟಕವೂ ಆಗಿದ್ದು ಒಂದು ಹೊಸ ಲಯವೆಂದರೆ ಹೊಸ ಅರ್ಥವೆಂದೇ ತೋರುತ್ತದೆ. ಆದರೆ ಈ ಲಯವನ್ನು ಹುಡಕಬೇಕಾದರೆ ಮೊದಲು ಅರ್ಥವನ್ನು ಗ್ರಹಿಸಬೇಕಾಗುತ್ತದೆ. ಅನಂತರ ಅಂಥ ಕಾಲವನ್ನು ಒಳಗೊಳ್ಳುವ ಗುರು ಲಘು ಪ್ಲುತಗಳನ್ನು ಅವುಗಳ ವ್ಯವಸ್ಥೆಗೆ ಕಾರಣವಾಗುವ ಅಕ್ಷರಗಣ, ಮಾತ್ರಾಗಣ, ಮಾತ್ರಾಕ್ಷರಗಣ ಹಾಗೂ ಅಂಶಗಳ ಸಂಯೋಜನೆಗಳ ವಿವಿಧ ರೂಪಗಳನ್ನು ಗಮನಿಸಬೇಕಾಗುತ್ತದೆ.

ಗುರು ಲಘು ಪ್ಲುತಗಳ ಜೊತೆಗೇ ಲಯಕ್ಕೆ ಸಂಬಂಧಿಸಿದಂತೆ ಅರ್ಥ ಸ್ಫುಟತೆಗೆ ಕಾರಣವಾಗುವ ಯತಿಯನ್ನು ಗಮನಿಸಬೇಕಾಗುತ್ತದೆ. ಜೊತೆಗೆ ಈ ಲಯಕ್ಕೆ ಬೆಡಗು ತರಬಹುದಾದ ಪ್ರಾಸಾನುಪ್ರಾಸ ಯಮಕಗಳನ್ನು ಗಮನಿಸಬೇಕಾಗುತ್ತದೆ.

ಛಂದಸ್ಸು ಎನ್ನುವುದು ಭಾಷೆಯ ಆಭಿವ್ಯಕ್ತಿ ಶಕ್ತಿ -ದೌರ್ಬಲ್ಯಗಳೆರಡನ್ನೂ ಒಳಗೊಂಡ ರಹಸ್ಯಗಳನ್ನು ತೆರೆದು ತೋರುವ ಒಂದು ಶಾಸ್ತ್ರವೆಂದೇ ಹೇಳಬೇಕು.

[1] ‘ಛದ್‌’ ಧಾತುವಿನಿಂದ ಛಂದಸ್ಸಿನ ಅರ್ಥವನ್ನು ಗಮನಿಸುವಾಗ ನಮಗೆ ಯಾಸ್ಕನ ಸೂತ್ರ ನೆರವಾಗುತ್ತದೆ. ಆತನ ನಿರುಕ್ತದಲ್ಲಿ, ಮಂತ್ರಾ ಮನಸಾತ್‌ ಛಂದಾಂಸಿ ಛಾದನಾತ್‌, ಸ್ತೋಮಃ ಸ್ತವನಾತ್‌ ಎಂದಿದ್ದು ಛಾದನ ಎಂಬ ಪದಕ್ಕೆ ಇಲ್ಲಿ ಮುಚ್ಚುವುದು – ಮರೆಮಾಡುವುದು, ಆಚ್ಛಾದನ ಎಂಬರ್ಥವಿದೆ. ಜನರು ವಿಧವಿಧವಾದ ಉಡುಪುಗಳಿಂದ ತಮ್ಮ ಮೈಯನ್ನು ಮುಚ್ಚಿಕೊಳ್ಳುವಂತೆ (ಮರೆಮಾಡಿಕೊಳ್ಳುವಂತೆ) ಛಂದಸ್ಸುಗಳು ಮಂತ್ರಾರ್ಥಗಳನ್ನು ಚೆಲುವಾಗಿ ಮುಚ್ಚುತ್ತವೆ ಎಂಬುದು ಯಾಸ್ಕನ ಅಭಿಪ್ರಾಯವಿದ್ದಂತಿದೆ. ಇದೇ ಅಭಿಪ್ರಾಯವೇ ಛಾಂದೋಗ್ಯೋಪನಿಷತ್ತಿನಲ್ಲಿಯೂ ಇರುವಂತಿದೆ – ಯದೇಭಿರಾಚ್ಛಾದಯಂ ಸ್ತಚ್ಛಂದಸಾಂ ಛಂದಸ್ತ್ವಮ್‌ ಎಂಬ ಉಕ್ತಿ ಇದನ್ನೇ ಸಮರ್ಥಿಸುವಂತಿದೆ.

ಆದರೆ ಮುಂದಿನ ಕೋಶಕಾರರು ಮೇಲಿನ ವ್ಯುತ್ಪತ್ತಿಯನ್ನು ವೈದಿಕ ಛಂಸ್ಸಿಗೆ ಸೀಮಿತಗೊಳಿಸುತ್ತಾರೆ. ಅವರ ದೃಷ್ಟಿಯಲ್ಲಿ ವೇದಾಗಮಗಳು ಅಪೌರುಷೇಯ; ಆದ್ದರಿಂದ ಮಂತ್ರಾರ್ಥಗಳನ್ನು ಛಂದಸ್ಸಿನಲ್ಲಿ ಮುಚ್ಚಿಡುವುದು ಅಪೌರುಷೇಯ ಎಂದು ಗ್ರಹಿಸುತ್ತಾರೆ. ಲೌಕಿಕ ಛಂದಸ್ಸು ಅವರ ಪಾಲಿಗೆ ಅಪೌರುಷೇಯ ಅಲ್ಲ; ಮಾನುಷ ಪ್ರಯತ್ನ. ಆದ್ದರಿಂದ ಛಂದಸ್ಸಿನ ಧಾತು ‘ಛದ್‌’ ಆಗದೆ ‘ಛದಿ’ ಎಂದು ವಾದಿಸುತ್ತಾರೆ.

‘ಚದಿ ಆಹ್ಲಾದೇ; ಚಂದೇರಾದೇಶಶ್ಚಛಃ; ಅಸುನ್‌ ಪ್ರತ್ಯಯಶ್ಚ’ – ಅಂದರೆ ಆಹ್ಲಾದಾರ್ಥವಾದ ಚದ್‌ ಧಾತುವಿನಿಂದ ನಿಷ್ಪನ್ನಗೊಂಡುದಕ್ಕೆ ಉಣಾದಿಸೂತ್ರವೊಂದರಿಂದ ಚಕಾರಕ್ಕೆ ಛಕಾರಾ ದೇಶವನ್ನು ಮತ್ತದಕ್ಕೆ ‘ಅಸುನ್‌’ ಪ್ರತ್ಯಯವನ್ನು ಹೇಳುವರು. ಈ ನಿಷ್ಪತ್ತಿಯನ್ನು ರೋಟ್‌ ಮ್ಯಾಕ್ಡೊನಲ್‌, ಕೀತ್‌ ಮೊದಲಾದವರು ಅಂಗೀಕರಿಸಿದ್ದಾರೆ. ಆದರೆ ಆಧುನಿಕ ಭಾಷಾಶಾಸ್ತ್ರಜ್ಞರು ಇದನ್ನು ಒಪ್ಪರು. ‘ಚದಿ’ ಧಾತುವಿಗೆ ಸಂವಾದಿಯಾದ ಪದಗಳು ಜ್ಞಾತಿ ಭಾಷೆಗಳಲ್ಲಿಲ್ಲ, ಆದರೆ ‘ಛದ್‌’ ಧಾತುವಿಗೆ ಜ್ಞಾತಿ ಪದಗಳಿವೆ.

ಆಶ್ಚರ್ಯದ ಸಂಗತಿಯೆಂದರೆ ೧೯೩೨ರಲ್ಲಿ ಶ್ರೀಯವರು ಸೆಂಟ್ರಲ್‌ ಕಾಲೇಜಿನ ಕರ್ಣಾಟಕ ಸಂಘದಲ್ಲಿ ಮಾಡಿದ ಭಾಷಣದ ಸಾರಾಂಶದಲ್ಲಿ “ಪಾಶ್ಚಾತ್ಯರು ಇದು (ಛಂದಸ್ಸು ಎಂಬ ಪದ) ಸ್ಕಂದ್‌ ಎಂಬ ಮೂಲಧಾತುವಿನಿಂದ ಬಂದಿರಬಹುದೆಂದು ಊಹಿಸಿರುತ್ತಾರೆ” ಎಂದಿರುವುದು. ಶ್ರೀ ಸಾಹಿತ್ಯ ವರ್ಣಮಾಲೆ, ಪು. ೧೯. ಸಂ. ಟಿ. ವಿ. ವೆಂಕಟಾಚಲಶಾಸ್ತ್ರೀ, ಪ್ರ. ಬಿ. ಎಂ. ಶ್ರೀ, ಪ್ರತಿಷ್ಠಾನ.