ಗುರು ಲಘುಗಳ ವಿಶ್ಲೇಷಣೆ ಒಂದು ರೀತಿಯಲ್ಲಿ ‘ಲಯ’ಕ್ಕೆ ಅಡಿಪಾಯವಾಗಿರುವ ಭಾಷೆಯ ಮೂಲಭೂತವಾದ ‘ಧ್ವನಿಮಾ’ಗಳನ್ನು ಕುರಿತ ವಿಶ್ಲೇಷಣೆಯೇ ಆಗಿಬಿಡುತ್ತದೆ. ಲಯದ ವಿಶ್ಲೇಷಣೆ ನಡೆಸುವಾಗ ಅದನ್ನು ಭಾಷೆಯ ಒಂದು ಅರ್ಥಪೂರ್ಣ ಕಾಲ ಘಟಕವಾಗಿ ಗಮನಿಸುತ್ತೇವೆ ಅಲ್ಲವೆ? ಆದ್ದರಿಂದಲೇ ಲಯವನ್ನು ಕುರಿತು ಮಾತನಾಡುವಾಗ ಆವರ್ತನಗೊಳ್ಳುವ ಕಾಲಮಾನವನ್ನು ಮೂಲವಾಗಿ ಗಮನಿಸುತ್ತೇವೆ. ಅಂದರೆ ಉತ್ಸಾಹ ಲಯ, ಮಂದಾನಿಲ ಲಯ ಹಾಗೂ ಲಲಿತ ಲಯಗಳೆಂದು ವ್ಯವಹರಿಸುತ್ತೇವೆ. ಇವುಗಳ ಮಾತ್ರೆಗಳ ಸಂಖ್ಯೆ ಅನುಕ್ರಮವಾಗಿ ಮೂರು, ನಾಲ್ಕು ಮತ್ತು ಐದು ಮಾತ್ರೆಗಳ ಕಾಲವೆಂದರೂ ಈ ಮೂರು, ನಾಲ್ಕು ಮತ್ತು ಐದು ಮಾತ್ರೆಗಳ ಕಾಲವನ್ನು ಅಳೆಯಲು ಮೂಲ ಸಾಧನ ಗುರು ಮತ್ತು ಲಘುಗಳು ಎಂದೇ ಹೇಳಬೇಕು.

ಲಯದಲ್ಲಿ ಮೂರು ಮಾತ್ರೆಗಳ ಗಣದ ಮಾನವು ಅನಂತ ಸಾಧ್ಯತೆಗಳನ್ನು ಹೇಗೆ ಪಡೆಯುತ್ತದೆಂಬುದನ್ನು ಉತ್ಸಾಹ ಲಯ ವಿಶ್ಲೇಷಣೆಯಲ್ಲಿ ಸ್ಥೂಲವಾಗಿ ಗಮನಿಸಿದ್ದೇವೆ; ಹಾಗೆಯೇ ನಾಲ್ಕು ಮತ್ತು ಐದು ಮಾತ್ರೆಗಳ ಗಣ ವಿನ್ಯಾಸಗಳಲ್ಲಿಯೂ ಸಾಕಾದಷ್ಟು ಗಮನಹರಿಸಿದ್ದೇವೆ.

ಈಗ ಈ ಗುರು ಮತ್ತು ಲಘುಗಳು ಮಹತ್ವದ ಅಂಶಗಳತ್ತ ಸ್ಪಲ್ಪ ಗಮನಹರಿಸ ಬಹುದೆಂದು ತೋರುತ್ತದೆ. ಲಘುವನ್ನು ಏಕಮಾತ್ರಕವೆಂದೂ ಗುರುವನ್ನು ದ್ವಿಮಾತ್ರಕ ಎಂದೂ ಸಾಮಾನ್ಯವಾಗಿ ಗಮನಿಸಲಾಗುತ್ತದೆ. ಆದರೆ ಎರಡು ಮಾತ್ರೆಗಳ ಕಾಲವೆನ್ನುವುದು ಗುರುವಾಗುವ ಅಕ್ಷರವನ್ನನುಸರಿಸಿ ಎರಡಕ್ಕಿಂತಲೂ ಹೆಚ್ಚು ಕಾಲವನ್ನೇ ಒಳಗೊಳ್ಳಬಹುದು.

ಗುರು ಲಘುಗಳನ್ನು ಗುರುತಿಸುವ ಚಿಹ್ನೆಗಳ ಬಗೆಗೂ ಸಾಕಷ್ಟು ಚಿಂತನೆ ನಡೆದಿರುವುದನ್ನು ಸ್ಥೂಲವಾಗಿ ಗಮನಿಸಬಹುದು.

ಈಗ ಗುರುವಿಗೆ ಬಳಸುವ ಚಿಹ್ನೆ –

ಲಘುವಿಗೆ ಬಳಸುವ ಚಿಹ್ನೆ ⋃

ಆಶ್ಚರ್ಯದ ವಿಷಯವೆಂದರೆ ಮೊದಲು ಗುರುವಿಗೆ ಬಳಸುತ್ತಿದ್ದ ಚಿಹ್ನೆ ⋃. ಆಗ ಲಘುವಿಗೆ ಬಳಸುತ್ತಿದ್ದ ಚಿಹ್ನೆ –, ಇದರ ಇತಿಹಾಸ ಸಾಕಷ್ಟು ಗೊಂದಲಕ್ಕೆ ಕಾರಣವಾಗುವಂಥದ್ದು ಎನ್ನಬೇಕು. ಏಕೆಂದರೆ ಸಂಸ್ಕೃತದಲ್ಲಿ ಕೆಲವು ಕಡೆ (ಜಯದೇವ ಚ್ಛಂದಸ್‌ನಲ್ಲಿ) ಗುರುವಿಗೆ ಬಳಸುತ್ತಿದ್ದ ಚಿಹ್ನೆ = v ಆದರೆ ಲಘುವಿಗೆ ಬಳಸುತ್ತಿದ್ದ ಚಿಹ್ನೆ | ಕವಿದರ್ಪಣಕಾರ ಗುರುವಿಗೆ ಬಳಸಿದ ಚಿಹ್ನೆಗೆ ಗ ಮತ್ತು ಲಘುವಿಗೆ ಬಳಸಿದ್ದು – S. ಸದ್ಯಕ್ಕೆ ಕನ್ನಡದಲ್ಲೀಗ ಬಳಸುತ್ತಿದ್ದ ಚಿಹ್ನೆಗಳು ಗುರುವಿಗೆ = –; ಲಘುವಿಗೆ = ⋃, ಈ ಗುರು ಲಘುಗಳು ಎಷ್ಟು ಮಹತ್ವದ ಮೂಲಭೂತ ಅಂಶಗಳು ಎಂದರೆ ಅಕ್ಷರ ಗುಣ ಛಂದಸ್ಸೇ ಆಗಲಿ; ಅಂಶಗಣ ಛಂದಸ್ಸೇ ಆಗಲಿ ಅಥವಾ ಮಾತ್ರಾಗಣ ಛಂದಸ್ಸೇ ಆಗಲಿ – ಅವುಗಳ ಸಂಯೋಜನೆಗಳ ಮೂಲಧಾತುಗಳು ಈ ಗುರು ಮತ್ತು ಲಘುಗಳೇ.

ಛಂದಸ್ಸುಗಳಲ್ಲಿ ಸಾಧ್ಯವಾಗುವ ಎಲ್ಲ ರೀತಿಯ ವೈವಿಧ್ಯಗಳಿಗೂ ಮೂಲ ಧಾತುವಾಗಿರುವ ಈ ಗುರು ಮತ್ತು ಲಘುಗಳ ಸಾಧ್ಯತೆಗಳು ನಮ್ಯವಾದವು ಎಂಬುದನ್ನು ಮರೆಯಲು ಸಾಧ್ಯವಿಲ್ಲ.

ಲಘುವನ್ನು ಗುರುತಿಸಿವಾಗ ಆಗಲಿ ಗುರುವನ್ನು ಗುರುತಿಸುವಾಗ ಆಗಲಿ ಗುರು ಅಥವಾ ಲಘುಗಳನ್ನು ಪ್ರತ್ಯೇಕವಾಗಿಡುವುದು ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಗುರು ಲಘುಗಳು ಭಾಷೆಯಲ್ಲಿ ಇರುವುದಾದ ಕಾರಣ ಆ, ಈ, ಏ, ಎಂಬಂಥ ಅಪರೂಪದ ಶಬ್ಧಗಳನ್ನು ಬಿಟ್ಟರೆ ಗುರು ಅಥವಾ ಲಘುವಿನ ಹಿಂದೆ ಅಥವಾ ಮುಂದೆ ಅನ್ಯ ಗುರು ಅಥವಾ ಲಘುಗಳು ಇದ್ದೇ ಇರುತ್ತವೆ. ಉದಾಹರಣೆಗೆ ಲಘುವಿನ ಕೆಲವು ಉದಾಹರಣೆಗಳನ್ನು ಗಮನಿಸಬಹುದು. ಅ, ಇ, ಉ, ಋ, ಎ, ಒ

[1], ಕ, ಚ, ಗ, ಘ, ಙ, ಚ, ಛ, ಜ, ಝ, ಞ, ಟ, ಠ, ಡ, ಢ, ಣ, ತ, ಥ, ದ, ಧ, ನ, ಪ, ಫ, ಬ, ಭ, ಮ, ಯ, ರ, ಲ, ವ, ಶ, ಷ, ಸ, ಹ.[2] ಮೊದಲ ಆರು ಸ್ವರಗಳು ಅನಂತರ ಇಪ್ಪತ್ತೈದು ವರ್ಗೀಯ ವ್ಯಂಜನಗಳು, ಅನಂತರ ಎಂಟು ಅವರ್ಗೀಯ ವ್ಯಂಜನಗಳು, ಇಷ್ಟು ಅಕ್ಷರಗಳೇ ಅಲ್ಲದೆ ವರ್ಗೀಯ ಹಾಗೂ ಅವರ್ಗೀಯ ವ್ಯಂಜನಗಳಿಗೆ ಆರು ಸ್ವರಗಳು ಸೇರಿಕೊಂಡು ಭಿನ್ನ ರೂಪಗಳು ಸಾಧ್ಯ.

ಉದಾಹರಣೆಗೆ – ಕ, ಕಿ, ಕು, ಕೆ, ಕೊ, ಕೃ. ಇದೇ ರೀತಿ ಉಳಿದ ವ್ಯಂಜನಗಳಿಗೂ ಈ ಆರು ಸ್ವರಗಳು ಸೇರಿದ ರೂಪಗಳು ಸಾಧ್ಯ. ಹಾಗೆಯೇ ಅವರ್ಗೀಯ ವ್ಯಂಜನಗಳಿಗೂ ಈ ಸಾಧ್ಯತೆಗಳಿವೆ ಅಲ್ಲಿಗೆ ಆರು ಸ್ವರಗಳಾದ ಮೇಲೆ ಇಪ್ಪತ್ತೈದು ವರ್ಗೀಯ ವ್ಯಂಜನಗಳು ಮತ್ತು ಎಂಟು ಅವರ್ಗೀಯ ವ್ಯಂಜನಗಳಿಗೂ ಈ ಆರು ಸ್ವರಗಳು ಸೇರಿ ಒಟ್ಟು ಅನುಕ್ರಮವಾಗಿ ನೂರ ಐವತ್ತು ಮತ್ತು ನಲತ್ತೆಂಟು ಸಾಧ್ಯತೆಗಳು ಇವೆ. ಇಷ್ಟೇ ಅಲ್ಲದೆ ಈ ವ್ಯಂಜನಗಳಲ್ಲಿ ಸರಳ ಮತ್ತು ಪರುಷಾಕ್ಷರಗಳು ಎಂಬ ವರ್ಗೀಯ ವ್ಯಂಜನಗಳ ವಿಭಿನ್ನ ಸಂಯೋಜನೆಗಳು ಸಾಧ್ಯ; ಜೊತೆಜೊತೆಗೆ ಸ್ವರವು ಇಳಿಜಾರನ್ನೂ, ಸ್ವರವು ಎತ್ತರವನ್ನು ಹಾಗೂ ವೃತ್ತತ್ವವನ್ನು ಸೂಚಿಸುವುದಲ್ಲದೆ ಸ್ವರವು ಉದ್ದವನ್ನು ಸೂಚಿಸಿ ಇವುಗಳ ವಿವಿಧ ಸಂಯೋಜನೆಗಳಿಂದ ‘ಲಘು’ ವಿನ ವಿಶ್ವರೂಪವೇ ನಮ್ಮ ಎದುರು ಸುಳಿಯುತ್ತದೆ. ಇದಕ್ಕೆ ಮತ್ತಷ್ಟು ವಿವಿಧತೆ ತಂದುಕೊಡುವ ವಿನ್ಯಾಸ ಎಂದರೆ ವೈದೃಷ್ಯ ರೂಪಗಳ ಬಳಕೆಯಿಂದ ಮತ್ತಷ್ಟು ಹೊಸ ರಚನೆಗಳ ಸಾಧ್ಯತೆ ಪಡೆದುಕೊಳ್ಳಲು ಸಾಧ್ಯವಾಗುವುದು. ಉದಾಹರಣೆಗೆ ಈ ಕೆಲಸವನ್ನು ಗಮನಿಸಿ:

೧. ದಲದಲದಲ ಅರಳ್ವುದೆನ್ನ ಶಿರಃ ಕಮಲ ಕುಟ್ಮಲ

೨. ಅಗಲಅಗಲ ಅಗಲವಾಗಿ
ಗಗನಗಗನಗಗನವಾಗಿ

೩. ಶಿವಶಿವಶಿವಶಿವ ಎನುತ್ತ
ಹರಹರಹರ ಎನುತ್ತ

೪. ಢಮಢಮಢಮ ಡೋಲು ಬಡಿ
ಧಿಮಿಧಿಮಿಧಿಮಿ ಎಂದು ಕುಣಿ
ಜಯ ಜಯ ಜಯ ಎಂದು ಮಣಿ
ಧಗ ಧಗ ಧಗ ಹೊತ್ತಿದುದು
ಭುಗಿಲೆನ್ನುತ ಮುತ್ತಿದುದು

೫. ರಸಋಷಿಮತಿಗತಿ ಮಹತ್ತರ

ಮೇಲೆ ಸೂಚಿಸಿರುವ ಐದು ಉದಾಹರಣೆಗಳಲ್ಲಿ ಒಂದು, ಮೂರು, ನಾಲ್ಕು ಮತ್ತು ಐದನೆಯವುಗಳಲ್ಲಿ ಆರಂಭದಲ್ಲಿ ಸ್ಪಲ್ಪಮಟ್ಟಿಗೆ ಎರಡೇ ಮಾತ್ರೆಗಳ ಗಣವಿನ್ಯಾಸವೇ ಇದೆಯಾದರೂ ಒಂದು ಸಾಲಿನ ರಚನೆಯಂತೆ ಇನ್ನೊಂದು ಸಾಲು ಇಲ್ಲ. ಉದಾಹರಣೆಗೆ ಮೊದಲ ಸಾಲಿನ ಮೊದಲ ಆರು ಮಾತ್ರೆಗಳು; ಎರಡೆರಡು ಮಾತ್ರೆಗಳ (ದಲ ದಲ ದಲ = ⋃⋃⋃⋃⋃⋃) ವಿನ್ಯಾಸ ಪಡೆದಿವೆ.

ಮುಂದೆ ಉದಾಹರಣೆಯ ಮೂರು ಸಾಲಿನಲ್ಲಿ ಎರಡು ಮಾತ್ರೆಗಳ ನಾಲ್ಕು ಗಣಗಳು ಅದೇರೀತಿ ಎರಡನೆ ಸಾಲಿನಲ್ಲಿಯೂ ಎರಡೆರಡು ಮಾತ್ರೆಗಳ ನಾಲ್ಕು ಗಣಗಳು ಇವೆ.

ಅಂದರೆ ಮೊದಲ ಉದಾಹರಣೆಯಲ್ಲಿ ಮೂರು ಮಾತ್ರೆಗಳ ಗಣಗಳ ಬದಲು ಎರಡು ಮಾತ್ರೆಗಳ ಮೂರು ಗಣಗಳು ಇವೆ.

ಆದರೆ ಮೂರನೆಯ ಉದಾಹರಣೆಯಲ್ಲಿ ಹಾಗಿಲ್ಲ. ಇಲ್ಲಿ ಎರಡೆರಡು ಮಾತ್ರೆಗಳ ನಾಲ್ಕು ಗಣಗಳು ಮೊದಲ ಸಾಲಿನಲ್ಲಿ ಮತ್ತೆ ಅದೇ ರೀತಿ ಎರಡೆರಡು ಮಾತ್ರೆಗಳ ನಾಲ್ಕು ಗಣಗಳು ಎರಡನೆ ಸಾಲಿನಲ್ಲಿ ಇವೆ.

ಆಶ್ಚರ್ಯವೆಂದರೆ ಮೊದಲ ಉದಾಹರಣೆಯಲ್ಲಿ ಬರುವ ದಲ ದಲ ದಲ ದಲ ಎಂಬ ವಿನ್ಯಾಸಕ್ಕೂ ಮೂರನೆಯ ಉದಾಹರಣೆಯಲ್ಲಿ ಬರುವ ಮೊದಲ ಸಾಲಿನ ಶಿವ ಶಿವ ಶಿವ ಶಿವ ಎಂಬ ವಿನ್ಯಾಸಕ್ಕೂ ಎರಡನೆಯ ಸಾಲಿನಲ್ಲಿ ಬರುವ ಹರ ಹರ ಹರ ಎಂಬ ವಿನ್ಯಾಸಕ್ಕೂ ಮಾತ್ರೆ ಹಾಗೂ ಗಣಗಳಲ್ಲಿ ವ್ಯತ್ಯಾಸಗಳಾಗಿವೆ. ಅಂದರೆ ಮೊದಲ ಉದಾಹರಣೆಯ ಮೊದಲಲ್ಲಿ ಆರು ಲಘುಗಳಿವೆ.

ಮೂರನೆ ಉದಾಹರಣೆಯ ಮೊದಲ ಸಾಲಿನ ಮೊದಲಲ್ಲಿ ಎಂಟು ಲಘುಗಳಿವೆ. ಎರಡನೆಯ ಸಾಲಿನಲ್ಲಿ ಎಂಟು ಲಘುಗಳಿವೆ. ಇದಲ್ಲದೆ ದಲ ದಲ ದಲ ಎಂಬ ಶಬ್ಧಗಳ ದನಿಗೂ ಹರ ಹರ ಹರ ಹರ ಎಂಬ ಶಬ್ಧಗಳ ಧ್ವನಿಗೂ ಇದೇ ಅರ್ಥದ ಶಿವ ಶಿವ ಶಿವ ಶಿವ ಎಂಬ ಧ್ವನಿಗೂ ಇರುವ ವ್ಯತ್ಯಾಸ ತಟ್ಟನೆ ಕಿವಿಗೆ ವೇದ್ಯವಾಗುತ್ತದೆ. ಅಂದರೆ ಮಾತ್ರೆಗಳ ಗಣವಿನ್ಯಾಸವೇ ಅಲ್ಲದೆ ಅಂಥ ಅಭಿವ್ಯಕ್ತಿಗಳ ‘ನಾದ’ದಲ್ಲಿಯೂ ವೈವಿಧ್ಯ ಬಂದಿರುವುದು ವೇದ್ಯ.

ಇನ್ನು ನಾಲ್ಕನೆಯ ಉದಾಹರಣೆಗಳನ್ನು ಮೊದಲ ನಾಲ್ಕು ಸಾಲುಗಳ ಗಣ ವಿನ್ಯಾಸ ಒಂದು ರೀತಿಯಿದೆ; ಅಂದರೆ

ಮೊದಲ ಸಾಲಿನಲ್ಲಿ ಎರಡು ಮಾತ್ರೆಗಳ ಮೂರು ಗಣ, ಆರಂಭದಲ್ಲಿ
ಎರಡನೆಯ ಸಾಲಿನಲ್ಲಿ ಎರಡು ಮಾತ್ರೆಗಳ ಮೂರು ಗಣ, ಆರಂಭದಲ್ಲಿ
ಮೂರನೆಯ ಸಾಲಿನಲ್ಲಿ ಎರಡು ಮಾತ್ರೆಗಳ ಮೂರು ಗಣ, ಆರಂಭದಲ್ಲಿ
ನಾಲ್ಕನೆ ಸಾಲಿನಲ್ಲಿ ಎರಡು ಮಾತ್ರೆಗಳ ಮೂರು ಗಣ, ಆರಂಭದಲ್ಲಿ

ಆರಂಭದಲ್ಲಿ ಪ್ರತಿಯೊಂದು ಸಾಲಿನ ಆರಂಭದ ಎರಡೆರಡು ಮಾತ್ರೆಗಳ ಗಣಗಳಿಂದ ಕೂಡಿದ ಶಬ್ಧಗಳ ‘ನಾದ’ ವಿವಿಧವಾಗಿದೆ, ಅರ್ಥ ಕೂಡಾ.

ಡಮ ಡಮ ಡಮ ಎಂಬುದಕ್ಕಿಂತ ಧಿಮಿ ಧಿಮಿ ಧಿಮಿ ಹಾಗೆಯೇ ಜಯ ಜಯ ಜಯ ಜಯ ಮತ್ತು ಧನ ಧನ ಧನ ಎಂಬುವು ಅರ್ಥಾನುಸಾರಿಯಾಗಿಯೇ ಭಿನ್ನ ‘ನಾದ’ ವಿವಿಧತೆಯಿಂದ ಕೂಡಿದೆ. ಇನ್ನು ಕೊನೆಯ ಸಾಲು ‘ಭುಗಿಲೆನ್ನುತ’ ಎಂಬುದು ಆರಂಭದಲ್ಲಿ ಎರಡು ಮತ್ತು ನಾಲ್ಕು ಮಾತ್ರೆಗಳ ಎರಡು ಗಣಗಳಿಂದ ಕೂಡಿದ್ದು ಮೊದಲ ಎರಡು ಮಾತ್ರೆಗಳು ಲಘುಗಳಿಂದ ಆದುವು. ಐದನೆಯ ಉದಾಹರಣೆಯಲ್ಲಿ ಬರುವ ಮೊದಲ ನಾಲ್ಕು ಗಣಗಳು ಎರಡೆರಡು ಮಾತ್ರೆಗಳಿಂದಾದುವು (ರಸ ಋಷಿಮತಿ ಗತಿ = ⋃⋃ ⋃⋃ ⋃⋃ ⋃⋃).

ಇನ್ನು ಎರಡನೆಯ ಉದಾಹರಣೆ ಗಮನಿಸೋಣ. ಇಲ್ಲಿಯೂ ಮೊದಲ ಮೂರು ಗಣಗಳು ಮೂರು ಮೂರು ಮಾತ್ರೆಗಳ ಗಣಗಳಾಗಿದ್ದು ಎಲ್ಲವೂ ಲಘುಗಳಿಂದಲೇ ಕೂಡಿವೆ. ಆದರೆ ಅಗಲ ಅಗಲವಾಗಿ ಎಂಬಲ್ಲಿ ಬರುವ ಪದ ಮಧ್ಯದ ‘ಗ’ ಮೋಡದ ವಿಸ್ತಾರಕ್ಕೆ ಸೂಚನೆ ನೀಡುವ ಶಬ್ಧವಾಗಿದ್ದರೆ ಮುಂದಿನ ಸಾಲಿನ ಗಗನ ಎಂಬಲ್ಲಿನ ಪ್ರತಿ ಪದದ ಮೊದಲೆರಡು ‘ಗಗ’ ಗಳಿಂದ ಕೂಡಿದ ಗಗನ ಪದ ಮೋಡವೇ ಆಕಾಶವಾಗಿ ಬಿಡುವ ಸಾಧ್ಯತೆಯನ್ನು ಧ್ವನಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತದೆ.

ಅಂದರೆ ‘ಲಘು’ ತಾನು ಇನ್ನೊಂದು ಅಥವಾ ಎರಡು ಲಘುವಿನೊಂದಿಗೆ ಸೇರಿ ಲಯವಿನ್ಯಾಸದಲ್ಲಿ ವೈವಿಧ್ಯ ತರುವುದೇ ಅಲ್ಲದೆ ಲಘುವನ್ನೊಳಗೊಂಡ ಪದದಲ್ಲಿರುವ ‘ನಾದ’ದ ಶಕ್ತಿಯನ್ನು ಬಳಸಿಕೊಂಡು ವಿವಿಧತೆಗೆ ಕಾರಣವಾಗುವುದನ್ನು ಮನಗಾಣಬಹುದು.

ಅಂದರೆ ‘ಲಘು’ ಲಘುವಾಗಿಯೇ ಉಳಿಯದೆ ತನ್ನಲ್ಲಿರುವ ಅನಂತ ಸಾಧ್ಯತೆಗಳನ್ನು ಗಣವಿನ್ಯಾಸದಲ್ಲಿ (ಎರಡು ಮಾತ್ರೆ ಮತ್ತು ನಾಲ್ಕು ಮಾತ್ರೆ: ಎರಡೆರಡು ಮಾತ್ರೆಗಳ ಮೂರು ಗಣಗಳು; ಎರಡೆರಡು ಮಾತ್ರೆಗಳ ನಾಲ್ಕು ಗಣಗಳು ಮತ್ತು ನಾಲ್ಕು ಮಾತ್ರೆಗಳ ಒಂದು ಗಣ ಮೊದಲಾದವು) ಹಾಗೂ ಲಘುವನ್ನೊಳಗೊಂಡ ಪದಗಳ ‘ನಾದ’ ದ ಬಳಕೆಯನ್ನು ವಿಭಿನ್ನ ರೀತಿಗಳಲ್ಲಿ ಸಾಧಿಸಿ ಗಣವಿನ್ಯಾಸದಲ್ಲಿ ವಿಶೇಷ ರೀತಿಯ ವಿಸ್ಮಯಕಾರಕ ಪರಿಣಾಮಗಳಿಗೆ ಕಾರಣವಾಗುವುದು. ಇಂಥ ಕೆಲವು ಉದಾಹರಣೆಗಳನ್ನು ಕಂಡಂತಾಯಿತು. ಅಂದರೆ ‘ಲಘು’ವು ಗಣವಿನ್ಯಾಸಗಳಲ್ಲಿ ಹಾಗೂ ‘ನಾದ’ ವೈವಿಧ್ಯದಿಂದ ಫಲಿತವಾಗುವ ಸಾಧ್ಯೆತೆಗಳು ಇಲ್ಲಿ ಇವೆ.[3]

ಇಷ್ಟು ಸಾಲದೆಂಬಂತೆ ಈ ‘ಲಘು’ ತನ್ನ ಹಿಂದೆ ಬರುವ ಪದದ ಅಕ್ಷರಕ್ಕೆ ‘ಗುರುತ್ವ’ವನ್ನು ನೀಡುವ ಸತ್ವವನ್ನು ಪಡೆಯುವುದು ಇದರ ವೈಶಿಷ್ಟ್ಯ.

ತ್ರ, ಕ್ಕ, ತ್ಸ್ನ, ರ್ತ್ಯ, ಪ್ಪ, ಟ್ಟೆ ಇಂಥವನ್ನು ಗಮನಿಸಬಹುದು.

ತತ್ರ ಎಂಬ ಪದದಲ್ಲಿ
ಪಕ್ಕ ಎಂಬ ಪದದಲ್ಲಿ
ಕೃತ್ಸ್ನ
ಮರ್ತ್ಯ ಎಂಬ ಪದದಲ್ಲಿ
ಅಪ್ಪ ಎಂಬ ಪದದಲ್ಲಿ
ಹೊಟ್ಟೆ ಎಂಬ ಪದದಲ್ಲಿ

ಹೀಗೆ ಇನ್ನು ಅನೇಕ ಪದಗಳಲ್ಲಿರುವ ಲಘು ತಾನು ಲಘುವಾದರೂ ತನ್ನ ಹಿಂದಿನ ಅಕ್ಷರಗಳನ್ನು ಗುರುವಾಗಿಸುವ ಪ್ರಭಾವಶಾಲಿ ಎಂಬುದನ್ನು ಮರೆಯಲಾಗದು

ಇನ್ನು ಗುರುವಿನ ವಿಷಯವನ್ನು ಪ್ರಸ್ತಾಪಿಸಬಹುದು.

ಲಘುವಿಗೆ ಒಂದು ಮಾತ್ರೆಯ ಕಾಲವನ್ನು ಹೇಳಿದರೆ ಗುರುವಿಗೆ ಎರಡು ಮಾತ್ರೆಗಳ ಕಾಲವನ್ನು ಛಂದಸ್‌ ಶಾಸ್ತ್ರಜ್ಞರು ಹೇಳುವರು. ‘ಗುರು’ ಎಂದರೆ ಮಹತ್ತರವಾದದ್ದು ಎಂಬ ಅರ್ಥವಿರುವುದು ನಿಜ. ಛಂದಸ್ಸಿನ ವಿಷಯದಲ್ಲಿಯೂ ಈ ‘ಗುರು’ ಸಾಕಷ್ಟು ಮಹತ್ವವನ್ನೇ ಪಡೆದಿದೆ. ಗುರುವಾಗುವ ಸಾಧ್ಯತೆಗಳು ಕೇವಲ ಎರಡು ಮೂರುಗಳಲ್ಲ; ಬಹುಮುಖವಾದುವು.

ಮೊದಲನೆಯದಾಗಿ ದೀರ್ಘಸ್ವರ ಅಥವಾ ದೀರ್ಘಾಕ್ಷರ.

ಆ – ; ಈ ↓, ಊ; ಏ↑; ಓ, ಐ, ಔ; ವಾಸ್ತವವಾಗಿ ಈ ಸ್ವರಗಳು ದೀರ್ಘವಾಗಿರುವುದಷ್ಟೇ ಅಲ್ಲದೇ ಮೊದಲ ಸ್ವರ ವಿಸ್ತಾರವನ್ನು, ಎರಡನೆಯ ಸ್ವರ ಆಳವನ್ನು, ಮೂರನೆ ಸ್ವರ ಉದ್ದವನ್ನು (ಮುಂಚಲನೆಯನ್ನು), ನಾಲ್ಕನೆ ಸ್ವರ ಎತ್ತರವನ್ನು ಐದನೆಯ ಸ್ವರ ಎತ್ತರದ ವಿಸ್ತಾರವನ್ನು ಒಳಗೊಂಡು ಬಹುಗುಣಿತಗೊಳ್ಳುವ ಸಾಧ್ಯತೆಗಳನ್ನು ಅನಾವರಣ ಮಾಡುವುದು ಗಮಾನರ್ಹ.

೨) ವ್ಯಂಜನದಿಂದ ಅಥವಾ ವ್ಯಂಜನಗಳಿಂದ ಕೂಡಿದ ದೀರ್ಘಸ್ವರ.

ಕಾ, ಕೀ, ಕೂ, ಕೇ, ಕೋ, ಕೌ, ಕೈ,

ಹೀಗೆಯೇ ಮಿಕ್ಕ ವರ್ಗೀಯ ಮತ್ತು ಅವರ್ಗೀಯ ವ್ಯಂಜನ ರೂಪಗಳನ್ನು ಸಾಧಿಸಬಹುದು (ಮುವತ್ತೆರಡು ಅಕ್ಷರಗಳಿಗೆ.) ಇವುಗಳ ವಿವಿಧ ಸಂಯೋಜನೆಗಳಿಂದ ಸಾಧ್ಯವಾಗುವ ಪದಗಳ ಸಂಖ್ಯೆಯೂ ಅಗಣಿತ. ಉದಾಹರಣೆಗೆ,

ಕಾಯೌ; ಕೇಳೌ; ತಾಳೈ, ಕೂನೈ; ಈ ವ್ಯಂಜನ ಅಥವಾ ವ್ಯಂಜನಗಳಿಂದ ಕೂಡಿದ ದೀರ್ಘರೂಪಗಳು ಅಥವಾ ಗುಣಿತಾಕ್ಷರಗಳಾದ ಐ ಮತ್ತು ಔ ಗಳಿಂದ ಸಾಧಿತವಾಗುವ ರೂಪಗಳೇ ಅಲ್ಲದೆ ವ್ಯಂಜನದಿಂದ ಕೂಡಿದ ದೀರ್ಘ ಅಕ್ಷರದ ಮುಂದೆ ವ್ಯಂಜನವೊಂದು ಬಂದಾಗಲೂ ಒಂದೇ ಗುರುವಾಗುತ್ತದೆ – ಉದಾಹರಣೆಗೆ ಕೇಳ್, ಕೂಳ್, ಕೋಳ್, ತಾನ್, ಮೊದಲಾದ ರೂಪಗಳನ್ನು ಗಮನಿಸಬಹುದು.

ಕೇಳ್ ಎಂಬಂಥ ಉದಾಹರಣೆಗಳಲ್ಲಿ (ಮೇಲೆ ಕಾಣಿಸಿದ) ‘ಕೇ’ ಎಂಬುದು ತನ್ನ ದೀರ್ಘತ್ವದಿಂದ ಗುರುವಾಗಿದ್ದರೂ ಅದರ ಮುಂದಿನ ವ್ಯಂಜನವೂ ಸೇರಿ ಗುರುವೇ ಆಗಿ ಉಳಿಯುತ್ತದೆ.

ಇದನ್ನು ಛಂದಶಾಸ್ತ್ರಕಾರರು ಹೇಳುವುದು ಹೀಗೆ: “ಒಂದು ಅಕ್ಷರವು ಗುರುವಾಗಲು ಹಲವು ಕಾರಣಗಳಿದ್ದರೂ ಆ ಅಕ್ಷರವನ್ನು ಒಂದು ಗುರುವೆಂದು ಪರಿಗಣಿಸಬೇಕು” (ಪು. ೬೯, ಕ. ಕೈಪಿಡಿ) ಇದಕ್ಕೆ ಇನ್ನೊಂದು ಉದಾಹರಣೆ, ಕ್ರೌಂಚ ಎಂಬ ಪದ – ಇಲ್ಲಿ ಕ್ರೌಂ ಎಂಬುದು ಗುರುವಾಗಿದೆ.

ಆದರೆ ಇಲ್ಲಿ ಕ್ + ರ್ + ಔ + ಮ್ ಅಂದರೆ ಎರಡು ವ್ಯಂಜನಗಳ ಅನಂತರ ಗುಣಿತಾಕ್ಷರ ‘ಔ’ಕಾರ ಸೇರಿದೆ. ಸಾಲದಕ್ಕೆ ಒಂದು (ಅಥವಾ ಮ್‌) ವ್ಯಂಜನ ಕೂಡ ಸೇರಿದೆ.

ಇನ್ನೂ ಕೆಲವು ಉದಾಹರಣೆ ಗಮನಿಸಬಹುದು:

ದಂಷ್ಟ್ರ – ದ + ಮ್‌ + ಷ್‌ + ಟ್‌ + ರ್‌ + ಅ
ಕಾರ್ತ್ಸ್ನ್ಯ – ಕ್ + ಆ + ರ್ + ತ್ + ಸ್ + ನ್ + ಯ್ + ಅ

ಮೊದಲ ಪದದಲ್ಲಿ ‘ದ’ ಮುಂದೆ ನಾಲ್ಕು ವ್ಯಂಜನಗಳಿದ್ದರೆ ಕಾರ್ತ್ಸ್ನ್ಯ ಪದದ ಕ್ + ಮುಂದೆ ಆ + ರ್ + ತ್ + ಸ್ + ನ್ + ಯ್ + ಅ ಐದು ವ್ಯಂಜನಗಳಿವೆ.

ಗುರುವಿನಲ್ಲಿ ಕೇವಲ ದೀರ್ಘ ಮಾತ್ರ ಇರದೆ ಅದರೊಂದಿಗೆ ಮೂರು, ನಾಲ್ಕು ಮತ್ತು ಐದು ವ್ಯಂಜನಗಳಿರುವುದೂ ಸಾಧ್ಯ.

ಇಂಥ ಕಡೆ ‘ಗುರು’ವಿನ ಉಚ್ಚಾರಣ ಕಾಲದಲ್ಲಿ ಹೆಚ್ಚು ಹೆಚ್ಚು ಅವಕಾಶವಾಗುವುದು. ಇದರಿಂದ ಕಡೆ ಉಚ್ಚಾರಣೆಯ ಕಾಲದಲ್ಲಿ ಸಾಕಷ್ಟು ಭಿನ್ನತೆ-ವೈವಿಧ್ಯ ಕಾರಣಾವಾಗುವಂಥದ್ದು ಸಾಧ್ಯ.

ಗುರುವಿನ ಬಳಕೆಯಲ್ಲಿ ಸಾಧ್ಯವಾಗುವ ವೈವಿಧ್ಯಕ್ಕೆ ಕೂಡ ಕಾರಣವಾಗುತ್ತದಲ್ಲವೆ? ಅಂದರೆ ಗುರುವಾಗಲು ಇರುವ ಸಾಧ್ಯತೆಗಳು ಬಹಳ ಎನ್ನಬೇಕು.

ಈಗ, ಗುರು ಬರುವ ವಿಶೇಷ ಸಂದರ್ಭಗಳನ್ನು ಹೀಗೆ ಸಂಗ್ರಹಿಸಬಹುದು:

) ಅನುಸ್ವಾರದ ಹಿಂದಿನ ಅಕ್ಷರ ಹ್ರಸ್ವವಾಗಿದ್ದಾಗ
) ವಿಸರ್ಗದ ಹಿಂದಿನ ಅಕ್ಷರ ಹ್ರಸ್ವವಾಗಿದ್ದಾಗ
) ಪ್ಲುತಯುಕ್ತವಾದ ಹ್ರಸ್ವಸ್ವರ ಬಂದಾಗ
) ದ್ವಿತ್ವಾಕ್ಷರದ ಹಿಂದೆ ಹ್ರಸ್ವಸ್ವರ ಬಂದಾಗ
) ಸಂಯುಕ್ತಾಕ್ಷರದ ಹಿಂದೆ ಹ್ರಸ್ವಸ್ವರ ಬಂದಾಗ
) ಪದ್ಯ ಭಾಗದ ಕೊನೆಯಲ್ಲಿ ಹ್ರಸ್ವಸ್ವರ ಬಂದಾಗ
) ವಿಕಲ್ಪವಾಗಿ ವ್ಯಂಜನದ ಹಿಂದಿನ ಹ್ರಸ್ವಾಕ್ಷರವಾದಾಗ
ಪು.೧೫೨-೧೫೩
ಕನ್ನಡ ಛಂದಸ್ಸಿನ ಚರಿತ್ರೆ, ಸಂಪುಟ -೧

ಆಶ್ಚರ್ಯವೆಂದರೆ ೧, ೨, ೩, ೪, ೫, ೭ ನೆ ಸಂಖ್ಯೆಯ ಉದಾಹರಣೆಗಳಲ್ಲಿ ಅಂಥ ಅಕ್ಷರಗಳ ಹಿಂದಿನ ಹ್ರಸ್ವ ಗುರುವಾಗುತ್ತದೆಂದು ಮಾತ್ರ ಹೇಳಿದೆ, ಒಂದು ಪಕ್ಷ ಅಂಥ ಹಿಂದಿನ ಅಕ್ಷರ ಗುರುವಾಗಿದ್ದಾಗಲೂ ಅದರ ಗುರುತ್ವಕ್ಕೇನೂ ಬಾಧೆಯಾಗದು.

ಅಂದರೆ ಗುರುವಿನ ಉಚ್ಚರಣಾ ಕಾಲ ಎರಡು ಮಾತ್ರೆಗಳೀಂದ ನಾಲ್ಕು ಮಾತ್ರೆಗಳ ವರೆಗೂ ವ್ಯಾಪಿಸಿಕೊಳ್ಳುವಂಥದ್ದಾಗಿದೆ. ಎಂದಾಗ ಇಂಥ ಗುರು ಮತ್ತು ಲಘುಗಳ ವಿಭಿನ್ನ ರೀತಿಯ ಸಂಯೋಜನೆಗಳಿಂದ ವಿಸ್ಮಯಕಾರಕವಾದ ರೀತಿಯಲ್ಲಿ ಗಣಗಳನ್ನು ವಿನ್ಯಾಸಗೊಳಿಸುವುದಲ್ಲದೆ – ಗಣಗಳಲ್ಲಿ ವೈವಿಧ್ಯವನ್ನು ತರಬಹುದು. ಇದರ ರಹಸ್ಯವನ್ನು ತಿಳಿದೇ ಕವಿಗಳು ಮೂರು ಮಾತ್ರೆಗಳ ಲಯ, ನಾಲ್ಕು ಮಾತ್ರೆಗಳ ಲಯ ಮತ್ತು ಐದು ಮಾತ್ರೆಗಳ ಲಯಗಳಲ್ಲಿ ವಿಶೇಷ ರೀತಿಯ ವೈವಿಧ್ಯಗಳನ್ನು ಸಾಧಿಸಲು ಹೊರಡುವುದು. ಅಂದರೆ ಗಣ ಪರಿವೃತ್ತಿಯಿಂದ ಸಾಧಿತವಾಗುವ ವೈವಿಧ್ಯಕ್ಕೆ ಈ ರೀತಿಯ ‘ಗುರು’ವಾಗುವ ವೀಶೇಷ ಸಂದರ್ಭಗಳು ಮತ್ತಷ್ಟು ಮೆರಗು ನೀಡುತ್ತವೆ; ಇದರೊಟ್ಟಿಗೆ ದೀರ್ಘಗಳಲ್ಲಿನ ಆಳ, ಎತ್ತರ ಮತ್ತು ವಿಸ್ತಾರಗಳೂ ಸೇರಿರುತ್ತವೆ, ಅಲ್ಲವೆ?

ಗುರು ಬರುವ ವಿಶೇಷ ಸಂದರ್ಭಗಳು ಏಳು ರೀತಿಗಳಿಗೆ ಉದಾಹರಣೆ ಕೊಡುವಾಗ ಅವರು ಹಿಂದಿನ ಅಕ್ಷರ ಹ್ರಸ್ವವಾಗಿದ್ದಾಗ ಎಂದಿದ್ದಾರೆ. ಅದು ಕೂಡ ದೀರ್ಘ ಅಥವಾ ಗುರುವೇ ಆಗಿದ್ದಾಗ ಗಮನಿಸಿದರೆ ಗುರುವಾಗುವ ರೀತಿಗಳು ಇನ್ನಷ್ಟು ಹೆಚ್ಚುತ್ತವೆ. ಉದಾಹರಣೆಗೆ ಹ್ರಸ್ವವಾಗಿದ್ದಾಗಿನ ಸಂದರ್ಭದ ಉದಾಹರಣೆಯನ್ನು ಮೊದಲಿಗೂ ಗುರುವೇ ಆಗಿರುವ ಸಂದರ್ಭದ ಉದಾಹರಣೆಗಳನ್ನು ಅವುಗಳ ಮುಂದಕ್ಕೂ ನೀಡಲಾಗಿದೆ. ಗಮನಿಸಿ:

ಹ್ರಸ್ವವಾಗಿದ್ದಾಗ ಗುರುವಾಗಿದ್ದಾಗ
. ಇಂದು  ನೋಂತು
. ದುಃಖ
. ಕುಕ್ಕುಕ್ಕೂ  ಅಕ್ಕಕ್ಕೂ
. ಕಚ್ಚು  ಪ್ರಾಂತ್ಯ
. ಆಕ್ರೂರ  ತಾಮ್ರ
. ಅಂತ್ಯಾಕ್ಷರ (ಷಟ್ಟದಿಗಳ ಮೂರು ಮತ್ತು ಆರನೆ ಸಾಲಿನ ಅಥವಾ ಕಲದ ಪದ್ಯದ ಪೂರ್ವರ್ಧ ಉತ್ತರಾರ್ಧದ) ಅಕ್ಷರ  ಹಿಮಾಲಯಾ
. ವ್ಯಂಜನದ ಹಿಂದಿನ ಅಕ್ಷರ ಕಲ್‌  ತಾಳ್‌

ಮೇಲೆ ಹ್ರಸ್ವವಾಗಿದ್ದಾಗಿನ ಏಳು ಸಂದರ್ಭಗಳಿಗೆ ಎರಡನೆಯ ಸಂದರ್ಭವನ್ನುಳಿದು ಉಳಿದಂತೆ ಗುರುವಾಗಿರುವ ಉದಾಹರಣೆಗಳನ್ನು ನೀಡಲಾಗಿದ್ದು – ಇಲ್ಲಿ ಹ್ರಸ್ವದ ಬದಲು ದೀರ್ಘವೆಂಬುದಷ್ಟನ್ನೆ ಹೇಳದೆ ಗುರುವೇ ಆಗಿರುವ ಬಹುರೂಪಗಳನ್ನು ಇನ್ನಷ್ಟು ಉದಾಹರಿಸಬಹುದು.

ಇದರಿಂದ ಸಿದ್ಧವಾಗುವ ಅಂಶ ಎಂದರೆ ಗುರುವಾಗುವ ಅಸಂಖ್ಯಾತ ಸಾಧ್ಯತೆಗಳು. ಹೀಗೆ ಗುರುವಾದಾಗ ಗುರುವಾದುದರ ಕಾಲವೂ ಎರಡು ಮಾತ್ರೆಗಳಿಗಿಂತ ಹೆಚ್ಚಾಗುತ್ತದೆ ಎಂಬುದನ್ನು ಹಿಂದಾಗಲೆ ದಂಷ್ಟ್ರ ಹಾಗೂ ಕಾರ್ತ್ಸ್ನ್ಯ ಪದಗಳಲ್ಲಿ ಗಮನಿಸಿದ್ದೇವೆ.

ಅಂದರೆ ಗುರುವಿನ ಕಾಲದಲ್ಲಿ ಪ್ರಾಪ್ತವಾಗುವ ಈ ‘ಅನನ್ಯ’ – ಕಾಲದ ‘ನಮ್ಯತೆ’ ಯಿಂದ ಕವಿಗಳು ಲಯದಲ್ಲಿ ವಿಶೇಷವಾದ ವಿಸ್ಮಯಕಾರಕ ಸಾಧನೆಗಳನ್ನು ಪಡೆಯಬಹುದಾದುದು ಗಮನಾರ್ಹ:

) ಒಂದು ಕಡೆ ಲಘು ಮತ್ತೆ ಅದರ ಉಚ್ಚಾರಣಾ ಸ್ಥಾನಗಳ ಭಿನ್ನತೆಯಿಂದಾಗುವ ಸಾಧ್ಯತೆ – (ಪ ಎಂಬುದು ಔಷ್ಟ್ಯವಾದರೆ ತ ಎಂಬುದು ದಂತವ್ಯ) ಅಲ್ಪಪ್ರಾಣ, ಮಹಾಪ್ರಾಣಾಕ್ಷರಗಳ ವಿಭಿನ್ನ ಸಂಯೋಜನೆಗಳು; ಒಂದು ರೀತಿಯಲ್ಲಿ ‘ಲಯ’ಕ್ಕೆ ನಮ್ಯತೆಯನ್ನು ಒದಗಿಸುತ್ತದೆ.

) ‘ಗುರು’ ತನ್ನಲ್ಲಿರುವ ‘ಅಸಂಖ್ಯಾತ’ ಸಾಧ್ಯತೆಗಳಿಂದ ಈ ನಮ್ಯತೆಯ ಅವಕಾಶಗಳನ್ನು ಗುಣಿತಗೊಳಿಸುತ್ತದೆ.

) ಗುರು ಮತ್ತು ಲಘುಗಳ ವಿಭಿನ್ನ ಸಂಯೋಜನೆಗಳಿಂದ ಈ ನಮ್ಯತೆಯ ಅವಕಾಶಗಳನ್ನು ಬಹುರೂಪವಾಗಿ ತೆರೆಯುತ್ತದೆ.

) ಇವುಗಳಿಗೆ ಪೂರಕವಾಗಿ ಭಾಷೆಯಲ್ಲಿರುವ ಪದಗಳ ವಿಸ್ತಾರ – (ದೀರ್ಘ), ಆಳ ↓; ಉದ್ದ →; ಎತ್ತರ ↑; ಇವುಗಳ ವಿಭಿನ್ನ ಸಂಯೋಜನೆಗಳಿಂದ ಮತ್ತಷ್ಟು ಲಯವಿನ್ಯಾಸಗಳ ಸಾಧ್ಯತೆ ಅಸಾಧಾರಣವಾದುದು.

ಉದಾಹರಣೆಗೆ ಕಂಸ, ಧ್ವಂಸ, ಹಂಸ ಎಂಬ ಮೂರು ಪದಗಳನ್ನೆ ಗಮನಿಸಿ ಕಂಸದ ‘ಕ’ ಉಚ್ಚಾರಣಾ ಸ್ಥಾನ ಹಂಸದ ‘ಹ’ದ ಉಚ್ಚಾರ ಸ್ಥಾನಕ್ಕಿಂತ ಭಿನ್ನ. ಧ್ವಂಸ ಎಂಬಲ್ಲಿ (ಧ್‌ + ವ್‌ + ಅ +) = ‘ಧ್ವ’ದ ಉಚ್ಚಾರಣಾ ಸ್ಥಾನದಲ್ಲಿ ಭಿನ್ನತೆಯಿರುವುದೇ ಅಲ್ಲದೆ ಧ್ವ ಎಂಬ ಉಚ್ಚಾರಣಾ ಸ್ಥಾನದ ಜೊತೆಗೆ ಅದರೊಂದಿಗಿರುವ ಅವರ್ಗೀಯ ವ್ಯಂಜನ ‘ವ’ದ ಉಚ್ಚಾರಣಾ ಸ್ಥಾನದ ಭಿನ್ನತೆಯೂ ಸೇರಿ ಲಯದಲ್ಲಿ ಹೊಸತವವೇ ಪ್ರಾಪ್ತವಾಗುತ್ತದೆ.

ಇವುಗಳೇ ಅಲ್ಲದೆ ಸಹ ಧ್ವನಿಮಾಗಳಾದ ತಂದೆ (ಕ್ರಿಯಾಪದವಾಗಿ ಇದರ ಅರ್ಥ ಬೇರೆ; ಕರ್ತೃ ಪದವಾದಾಗ ಬೇರೆ) ಎಂಬಂಥ ಪದಗಳು ಇದರ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಕ್ರಿಯಾಪದವಾಗಿ ಉಚ್ಚಾರಗೊಳ್ಳುವ ‘ಕಾಕು’ವಿಗೂ ನಾಮಪದವಾಗಿ ಉಚ್ಚಾರಗೊಳ್ಳುವ ‘ಕಾಕು’ವಿಗೂ ಇರುವ ಅಂತರ ಕೂಡ ಲಯದ ಸಾಧ್ಯತೆಯನ್ನು ಹೆಚ್ಚಿಸುತ್ತದಲ್ಲವೆ?

ಇನ್ನು ವ್ಯಂಜನಗಳ ಸಂಯೋಜನೆಯಲ್ಲಿ ಅದರಲ್ಲಿಯೂ ‘ದ್ವಿಲಗ’ ಲಯದಲ್ಲಿಯೇ (ಲ ಎಂಬುದನ್ನು ಲಘುವಿಗೂ ಗ ಎಂಬುದನ್ನು ಗುರುವಿಗೂ ಗುರುತಾಗಿ ಛಂದೋನುಶಾಸನದಲ್ಲಿ ಜಯಕೀರ್ತಿ ಹೇಳಿದ್ದಾನೆ.) ಕೆಲವು ವೈವಿಧ್ಯಗಳನ್ನು ಗಮನಿಸಿ:

೦೧. ಹಿಮಾಲಯಾ ⋃ – ⋃ –
೦೨. ಗರೀಯಸೀ ⋃ – ⋃ –
೦೩. ಮಹರ್ಷಯಃ ⋃ – ⋃ –
೦೪. ನಿಶಾಚರಃ ⋃ – ⋃ –
೦೫. ಇವಾಚಲೇ ⋃ – ⋃ –
೦೬. ಭುಜಂಗಮೈಃ ⋃ – ⋃ –
೦೭. ವಯಂ ಹತಾಃ ⋃ – ⋃ –
೦೮. ಪ್ರಿಯೈಃ ಸಹ ⋃ – ⋃ –
೦೯. ಬಲಾದ್ಭಲೀ ⋃ – ⋃ –
೧೦. ಮಹಾಧ್ಯುತಿಃ ⋃ – ⋃ –

ಮೊದಲ ಉದಾಹರಣೆಯಲ್ಲಿ ಹಿಮಾಲಯಾ ಪರ್ವತದ ಬೂಮಾಕಾರ – ವಿಸ್ತಾರ – ಅನುಭವಕ್ಕೆ ಬರುತ್ತದೆ. ಎರಡು ಸುದೀರ್ಘ ವಿಸ್ತಾರದ ಸ್ವರಗಳಿಂದ (ಆ + ಆ).

ಎರಡನೆ ಉದಾಹರಣೆಯಲ್ಲಿ ಮೊದಲಿನದರಂತೆ ವಿಸ್ತಾರವಿಲ್ಲ: ಇಳಿಜಾರಿದೆ – (ಈ – ಈ ಸ್ವರಗಳಿಂದ).

ಮೂರನೆ ಉದಾಹರಣೆಯಲ್ಲಿ ಆಳವೂ ಇಲ್ಲ; ಇಳಿಜಾರು ಇಲ್ಲ; ಆದರೆ ಅಂತ್ಯದಲ್ಲಿ ವಿಸರ್ಗವಿದೆ.

ನಾಳ್ಕನೆಯದರಲ್ಲಿ ಆರಂಭದ ವಿಸ್ತಾರ ಸೂಚಕ ದೀರ್ಘ (ಆ) ಎರಡನೆಯ ಅಕ್ಷರದಲ್ಲಿ ಕೊನೆಗೆ ವಿಸರ್ಗವಿದೆ.

ಐದನೆಯದರಲ್ಲಿ ಎರಡನೆಯ ವರ್ಣದ ವಿಸ್ತಾರದ ದೀರ್ಘ (-) ವಿದ್ದು ಕೊನೆಗೆ ಎತ್ತರದ ದೀರ್ಘ (ವ) ಇದೆ.

ಆರನೆ ಉದಾಹರಣೆ ಎರಡನೆಯ ವರ್ಣದ ಜೊತೆಗೆ ಬಿಂದುವಿದ್ದು ಅಂತ್ಯಾಕ್ಷರಮ ಕಂಠತಾಲವ್ಯ (ಐತ್ವ) ಜೊತೆಗೆ ವಿಸರ್ಗವನ್ನು ಪಡೆದಿದೆ.

ಏಳನೆಯ ಉದಾಹರಣೆ ಸಾವಿನ ಸೂತಕವನ್ನು ಧ್ವನಿಸುವ ಎರಡನೆ ಅಕ್ಷರದ ಜೊತೆಗಿರುವ ಅನುಸ್ವಾರದಿಂದ ಕೂಡಿದ್ದು ಕೊನೆಯಕ್ಷರ ವಿಸ್ತಾರದ ದೀರ್ಘವನ್ನೇ ಅಲ್ಲದೆ ವಿಸರ್ಗವನ್ನು ಒಳಗೊಂಡು ಮತ್ತಷ್ಟು ವಿಸ್ತಾರ ಪಡೆಯುತ್ತದೆ.

ಎಂಟನೆಯ ಉದಾಹರಣೆ ಎರಡನೆಯ ವರ್ಣ ಕಂಠತಾಲವ್ಯ (ಐತ್ವ) ಅಲ್ಲದೆ ವಿಸರ್ಗವನ್ನು ಪಡೆದು ಇಲ್ಲಿನ ಗುರು ಇನ್ನಷ್ಟು ದೀರ್ಘವಾಗುತ್ತದೆ. ಮುಂದಿನೆರಡು ಹ್ರಸ್ವಗಳ ಮೇಲೆ ಪ್ರಭಾವ ಬೀರುತ್ತದೆ.

ಒಂಬತ್ತನೆಯ ಉದಾಹರಣೆ ಎರಡನೆಯ ವರ್ಣ ವಿಸ್ತಾರದ ದೀರ್ಘ (ಆ) ಮತ್ತು ಮುಂದಿನಕ್ಷರದ ದ್ವಿತ್ತದ ಬಲದಿಂದ ಮತ್ತಷ್ಟು ದೀರ್ಘಗೊಳ್ಳುತ್ತದೆ. ಕೊನೆಯ- ದೀರ್ಘವು ಇಲ್ಲಿ ಇಳಿಜಾರನ್ನು ಪಡೆದು ವಿಸ್ತಾರ ಮತ್ತು ಆಳಗಳು ಲಯದಲ್ಲಿ ವೈವಿಧ್ಯ ತರುತ್ತವೆ ಹತ್ತನೆಯ ಉದಾಹರಣೆ ಎರಡನೆಯ ವರ್ಣ ವಿಸ್ತಾರ ದೀರ್ಘದಿಂದ ಗುರುವಾಗಿರುವುದಲ್ಲದೆ ಮುಂದಿನ ಸಂಯುಕ್ತಾಕ್ಷರದ ಪ್ರಭಾವದಿಂದ ಮತ್ತಷ್ಟು ಗುರುತ್ವ – ಭಾರ – ಪಡೆಯುತ್ತದೆ. ಇಲ್ಲಿಯೂ ಒಂಬತ್ತನೆಯ ಉದಾಹರಣೆಯಂತೆ ಇಳಿಜಾರಿನ (ಈ) ದೀರ್ಘವಿದ್ದರೆ ಇಲ್ಲಿ ಅದು ಇಳಿಜಾರಿನ ಜೊತೆಗೆ ವಿಸರ್ಗವನ್ನು ಪಡೆದು ಇನ್ನಷ್ಟು ಪರಿಣಾಮಕಾರಿಯಾಗುತ್ತದೆ.

ಮೇಲೆ ಗಮನಿಸಿದ ದ್ವಿಲಗ (⋃ – ⋃ – ) ರಚನೆಗಳ ಹತ್ತು ಉದಾಹರಣೆಗಳಲ್ಲಿ ಒಂದರ ದ್ವಿಲಗದಂತೆ ಮತ್ತೊಂದು ದ್ವಿಲಗ ಇಲ್ಲ ಎಂಬುದಕ್ಕಿಂತ, ದ್ವಿಲಗ ಯೋಜನೆಯಲ್ಲಿ ಕವಿ ಸಾಧಿಸುವ ವೈವಿಧ್ಯ ಗಮನಾರ್ಹವಾಗುತ್ತದೆ.

ಕೇವಲ ದ್ವಿಲಗ-ಲಯದಲ್ಲಿಯೇ ಕಂಡುಬರುವ ಕೆಲವು ವಿವಿಧ ರೂಪಗಳನ್ನು ಗಮನಿಸಿದ ಮೇಲೆ ಕೆಲವು ಸಮಾಸ ಘಟಿತ ರಚನೆಗಳನ್ನು ಗಮನಿಸಬಹುದು.

) ಶ್ವೇತಾತಪತ್ರಸ್ಥಗಿತದಶದಿಶಾಮಂಡಲಂ
) ಸಂಬ್ರಮದ್ಭ್ರಮನ್ನಿಳಿಂಪ ನಿರ್ಝರೀ
) ಧಗದ್ಧಗಲ್ಲಲಾಟಪಟ್ಟಪಾವಕೇ
) ಸುರರೋರಗಾಳಿಯೋ
) ನದಿನಗರನಗಾಳಿಯೋ

ಸಮಸ್ತ ಘಟಿತ ರಚನೆಗಳಲ್ಲಿ ಮೊದಲ ಮತ್ತು ಮೂರನೆ ಉದಾಹರಣೆಗಳಲ್ಲಿ ಸಮಾಸ ಘಟಿತ ರಚನೆಗಳಿದ್ದರೂ ಅವುಗಳ ಒಳರಚನೆಯಲ್ಲಿ ಭಿನ್ನತೆ ಇದೆ. ಮೊದಲ ಉದಾಹರಣೆ ಕೌರವ ಬಿಚ್ಚಿ ಕೆದರಿದ ದ್ರೌಪದಿಯ್ಯ ಮುಡಿಗೆ ಸಂಬಂಧಿಸಿದಂತೆ ಅದರ ವ್ಯಾಪ್ತಿಯನ್ನು ಸೂಚಿಸುತ್ತದೆ. ಮೂರನೆ ಉದಾಹರಣೆ ಶಿವನ ಹಣೆಗಣ್ಣಿನ ‘ಉರಿಯ’ ಚಿತ್ರವನ್ನು ಒಳಗೊಂಡಿದೆ. ಎರಡನೆ ಉದಾಹರಣೆ ಶಿವನ ಜಡೆಯಲ್ಲಿ ಸಂಬ್ರಮಿಸುತ್ತಲಿರುವ ನಿರ್ಝರ – ಗಂಗೆಯ ಮೋಹಕ ದೃಶ್ಯವನ್ನೊಳಗೊಂಡಿದೆ.

ನಾಲ್ಕು ಮತ್ತು ಐದನೆಯ ಉದಾಹರಣೆಗಳು ಕನ್ನಡ ತಾಯಿಯ ಸೊಗಸಿಗೆ ಸಂಬಂಧಿಸಿದುವು.

ಮೊದಲಿನದರಲ್ಲಿ ಕರ್ನಾಟಕದಲ್ಲಿ ನೆಲೆಸಿದ ಸುರರು – ನರರು ಉರಗಗಳು ಇವುಗಳ ಸಮುದಾಯವನ್ನು ಕುರಿತ ವಿಸ್ಮಯವಿದೆ. ಇಲ್ಲಿ ಎರಡನೆಯ ವರ್ಣದ ಔಷ್ಠ್ಯದ ದೀರ್ಘ ಮತ್ತೆ ಅಂತ್ಯದಲ್ಲೂ ಬಂದಿದೆ. ಆದರೆ ಮಧ್ಯೆ ಹಿಂದು ಮುಂದಿನ ಔಷ್ಠ್ಯಗಳ ದೀರ್ಘದ ಮಧ್ಯೆ ವಿಸ್ತಾರದ ದೀರ್ಘ ಬಂದು ಲಯದ ಬೆಡಗಿಗೆ ಕಾರಣವಾಗಿದೆ.

ಐದನೆಯ ಉದಾಹರಣೆಯಲ್ಲಿ ಮೊದಲ ಆರು ಹ್ರಸ್ವ- ಲಘುಗಳಿದ್ದು ತಟ್ಟನೆ ವಿಸ್ತಾರದ ದೀರ್ಘವೂ ಕೊನೆಗೆ ಮತ್ತೆ ಔಷ್ಠ್ಯದ ಎತ್ತರವೂ ಬಂದಿದೆ. ಲಯದಲ್ಲಿ ವಿವಿಧ ವಿನ್ಯಾಸಗಳು ಇಲ್ಲಿ ಸಾಧ್ಯವಾಗಿವೆ.

ಅಂದರೆ ಭಾಷೆಯಲ್ಲಿರುವ ಗುರು ಮತ್ತು ಲಘುಗಳು ಲಯ ಕಲ್ಪನೆಯ ಮೂಲದಲ್ಲಿರುವ ಸಾವಯವ ಅಂಶಗಳು ಎಂಬುದನ್ನು ಇವುಗಳ ಬಹುರೂಪದ ಸಂಯೋಜನೆಗಳ ಸಂರಚನೆಗಳಿಂದ ಕವಿಯಾದವನ್ನು ಕೇವಲ ‘ನಾದ’ (Sound) ಅಂಶವನ್ನೇ ಅಲ್ಲದೆ ‘ಅರ್ಥ’ದ ಅಂಶವನ್ನೂ ಬಳಸಿಕೊಂಡು ಹೊಸ ಲಯಗಳನ್ನು ಸಾಧಿಸಿ ಕವಿವರ್ಯ ಅನಿಸಿಕೊಳ್ಳುತ್ತಾನೆ.

ವಾಸ್ತವವಾಗಿ ಒಂದು ಭಾಷೆಯ ‘ಲಯ’ ಎಂಬುದು ಆ ಭಾಷೆಗೇ ವಿಶಿಷ್ಟವಾದ ಸತ್ಯವನ್ನುಳ್ಳದ್ದು. ಇದಕ್ಕೆ ಸರಳವಾದ ಒಂದು ಉದಾಹರಣೆಯೆಂದರೆ ಇಂಗ್ಲಿಷಿನ ವರ್ಡ್ಸ್ವರ್ತನ ಕವಿತೆಯ ಎರಡು ಸಾಲುಗಳನ್ನು ಉಲ್ಲೇಖಿಸಬಹುದು.

Shall I call thee a brid
or a wandring voice?

ಎರಡನೆಯ ಸಾಲನ್ನು ಕುವೆಂಪು ಅವರು ‘ಅಲೆವವಾಣಿಯಂದದಿ’ ಎಂದು ಅನುವಾದಿಸಿದ್ದಾರೆ. ಇಂಗ್ಲಿಷ್‌ ಭಾಷೆಯಲ್ಲಿರುವ ಅರ್ಥವೇನೂ ಲಭ್ಯವಾಯಿತು, ಅದರೆ ಮರಗಳ ಹಸುರಿನಲ್ಲಿ ಮರೆಯಾಗಿ ಹೋಗಿರುವ ಹಕ್ಕಿ ಹಾಡಿದಾಗ ಅದರ ವಾಣಿ ಕೇವಲ ಅಲೆಯುವ (wandering) ವಾಣಿ ಆಗಿಲ್ಲ – ಅದು ಮೋಹಕವಾಗಿಯೂ ಇದೆ. ಒಳಪ್ರಾಸವನ್ನು ಒಳಗೊಂಡು, ಕಣ್ಣಿಗೆ ಕಾಣದ ಕಿವಿಗೆ ಮಾತ್ರ ಲಭ್ಯವಾಗುವ ಒಂದು ಮಧುರತೆಯಾಗಿದೆ. ಅದು ಇಂಗ್ಲಿಷ್‌ ಭಾಷೆಗೆ ಸಾಧ್ಯವಾದ ಲಯ; ಅಂದರೆ ಒಂದು ಭಾಷೆಯ ಲಯ – ಅದರದೇ ಆದ ವಿಶಿಷ್ಟವಾದ ಅರ್ಥ ಮತ್ತು ಲಯ ಎರಡನ್ನೂ ಹೊಂದಿದ್ದು – ಇದರ ಮೂಲಧಾತುಗಳು ಗುರು ಲಘುಗಳು ಎಂಬುದು ಎಂಥ ಮಹತ್ತರ ವಿಷಯ!

[1] ಈ ಎಲ್ಲ ವರ್ಗೀಯ ಆವರ್ಗೀಯ ವ್ಯಂಜನಗಳನ್ನು ವರ್ಣ ಮಾಲೆಯಲ್ಲಿ ಸೂಚಿಸುವಂತೆ ಹ್ರಸ್ವಸ್ವರ (ಅ) ಸಮೇತವಾಗಿಯೇ ಉಲ್ಲೇಖಿಸಲಾಗಿದೆ.

[2] ಸಂಸ್ಕೃತದಲ್ಲಿ ಗುರುವನ್ನು ಗ ಎಂದೂ ಲಘುವನ್ನು ಲ ಎಂದೂ ಗುರುತಿಸುವ ರೂಢಿಯಿದೆ. ದ್ವಿಲಗ ಎಂದರೆ ⋃ – ⋃ – ಇರುವ ರಚನೆಯೆಂಬುದು ಪರಿಚಿತವಾದುದೇ ಅಲ್ಲವೇ?

[3] ಪುಟ ೧೮೯-೧೯೦ ಗುರು – (1) Heavy, weighty; (2) Great, large, long, extended; (3) Long…. (4) Important, great, moments; (5) Arduous, diffcult (to bea); (6) Great, excessive, voilnt, futence, teacher…. ಹೀಗೆ ಹದಿನಾಲ್ಕಕ್ಕೂ ಹೆಚ್ಚು ಅರ್ಥಗಳನ್ನು V.S. Apteತಮ್ಮ ನಿಘಂಟಿನಲ್ಲಿ ಹೇಳಿದ್ದಾರೆ.