ಲಯವನ್ನು ವಿಶ್ಲೇಷಿಸುವಾಗ ಪ್ರಧಾನವಾದ ಮೂರು ಅಂಶಗಳನ್ನು ಗಮನಿಸಿದ್ದೇವೆ.

ಒಂದು, ಆದು ಅಂತರ ಅಥವಾ ಕಾಲ ಅಥವಾ ತಾಳವಾಗಿರುವುದು.

ಎರಡನೆಯದು ಆ ಅಂತರ ಅವರ್ತನಗೊಳ್ಳುವುದು.

ಮೂರನೆಯದು ಇದು ಪದ್ಯದ ಒಂದು ಅರ್ಥ ಘಟಕವಾಗಿರುವುದು.

ಈ ಆವರ್ತನಗೊಳ್ಳುವ ಕಾಲ – ಅಥವಾ ಅಂತರ – ಇದು ಎರಡು ತಾಳಗಳ ಮಧ್ಯೆ ಬರುವ ಕಾಲ – ಇದನ್ನು ಮಾಪನ ಮಾಡಲೆಂದೇ ಗಣಗಳನ್ನು ರೂಪಿಸಿ ಕೊಂಡಂತಿದೆ.

ಈ ಗಣಗಳು ಕನ್ನಡದಲ್ಲಿ ಪ್ರಧಾನವಾಗಿ ನಾಲ್ಕು

ಒಂದನೆಯದು ಅಕ್ಷರಣ

ಎರಡನೆಯದು ಮಾತ್ರಾಕ್ಷರ ಗಣ

ಮೂರನೆಯದು ಅಂಶಗಣ.

ನಾಲ್ಕನೆಯದು ಮಾತ್ರಾಗಣ.

ಈ ಮಧ್ಯೆ ಪ್ರಾಕೃತದಿಂದ ಅಥವಾ ಅಪಭ್ರಂಶದಿಂದ ಕನ್ನಡಕ್ಕೆ ಬಂದ ಮಾತ್ರಾಕ್ಷರ ಗಣವೆಂಬುದೊಂದು ಇದ್ದರೂ ಅದು ಮಾತ್ರಾಗಣ ಛಂದಸ್ಸಿನಲ್ಲಿ ಉಳಿದಿರುವ ಅಕ್ಷರಗಣದ ಛಾಯೆಯನ್ನು ಸೂಚಿಸುತ್ತದೆ ಅಷ್ಟೆ. ಉದಾಹರಣೆಗೆ ಕಂದ ಪದ್ಯವನ್ನೇ ಗಮನಿಸಬಹುದು. ಅದು ಚತುರ್ಮಾತ್ರಾ ಗಣನಿಬದ್ದವಾಗಿದ್ದರೂ ಅದರಲ್ಲಿ ವಿಷಮ ಸ್ಥಾನಗಳಲ್ಲಿ ಜಗಣ (⋃ – ⋃) ಬರಬಾರದೆನ್ನುವ ನಿಯಮ ಹಾಗೆಯೇ ಆರನೆಯದು ಮತ್ತು ಹನ್ನೆರಡನೆಯದು ಜಗಣ (⋃ – ⋃) ಆಗಲಿ ಅಥವಾ ಸರ್ವ ಲಘು ಗಣ ( ⋃⋃⋃⋃) ಆಗಲಿ ಆಗಿರಬೇಕೆಂಬ ನಿಯಮ ಇದೆ.

ಸಂಸ್ಕೃತ ಛಂದಸ್ಸು ವಿಶೇಷತಃ ಅಕ್ಷರ ಗಣಯುಕ್ತವಾದದ್ದು.

ವಾಸ್ತವವಾಗಿ ಸಂಸ್ಕೃತದಲ್ಲಿ ಗಣಗಳ ಯೋಚನೆ ರೂಪುಗೊಳ್ಳುವಾಗ ಎರಡು ಅಕ್ಷರಗಳ ಗಣ, ಮೂರು ಅಕ್ಷರಗಳ ಗಣ ಹಾಗೂ ನಾಲ್ಕು ಅಕ್ಷರಗಳ ಗಣಗಳ ಬಳಕೆಯಾಗಿದ್ದರೂ ಎರಡು ಅಕ್ಷರಗಳ ಗಣಗಳು ಕೇವಲ ಆರಂಭ ಕಾಲವಾದವು.

‘ರತ್ನಮಂಜೂಷ’ ಎರಡು ಅಕ್ಷರಗಳಿಗೆ ಒಂದು ಗಣವೆಂದು ಕಲ್ಪಿಸಿದೆ.

ಶಬ್ಧಸ್ಮೃತಿಯಲ್ಲಿ ಇದಕ್ಕೆ ಉದಾಹರಣೆಯಾಗಿ-

ಇದ್ಧಂ| ಶುದ್ಧಂ|| ಸಿದ್ಧಂ ಬುದ್ಧಂ – ಎನ್ನಲಾಗಿದೆ.

ಇದನು ಎರಡನೆಯ ಅತ್ಯುಕ್ತೆ ಛಂದಸ್ಸಿನ ದ್ವಿಪದ ಎನ್ನಲಾಗಿದೆ. ಆದರೆ ವೈಧಿಕ ಛಂದಸ್ಸಿನಲ್ಲಿ ನಾಲ್ಕಕ್ಷರಗಳಿಗೆ ಮತ್ತು ಮೂರು ಅಕ್ಷರಗಳಿಗೆ ಗಣ ವಿನ್ಯಾಸಗೊಂಡಿರುವಿದುಂಟು-

ಗಾಯತ್ರಿ ಛಂದ ಮೂರು ಸಾಲಿನವಾದರೆ, ಅನುಷ್ಟಬ್‌ ನಾಲ್ಕು ಸಾಲಿನದಾಗಿದ್ದು, ಇಲ್ಲಿ ನಾಲ್ಕಕ್ಷರಗಳಿಗೆ ಒಂದು ಗಣದಂತೆ ಯೋಚಿಸಲಾಗಿದೆ.

ಗಾಯತ್ರಿ-

ಅಗ್ನಿಮೀಳೇ ಪುರೋಹಿತಂ
ಯಜ್ಞಸ್ಸದೇವಮೃತ್ವಿಜಂ
ಹೋತಾರಂ ರತ್ನಧಾತಮಂ

ಅನುಷ್ಟುಪ್ –

ಆತೂನ ಇಂದ್ರಕೌಶಿಕ
ಮಂದಸಾನಃ ಸುತಂ ಪಿಖ
ನವ್ಯಮಾಯಃ ಒರಸೂತಿರಕ
ಕೃಧೀ ಸಹಸ್ರಸಾಮೃಷಿಮ್

ಆದರೆ ತ್ರಿಷ್ಟುಪ್‍ ಛಂದದಲ್ಲಿ ಹನ್ನೊಂದು ಅಕ್ಷರಗಳ ನಾಲ್ಕು ಪಾದಗಳಿದ್ದು ಅಲ್ಲಿಯ ಗಣಗಳನ್ನು ನಾಲ್ಕು ಮತ್ತು ಮೂರು ಮತ್ತು ನಾಲ್ಕು ಅಕ್ಷರಗಳ ಗಣಗಳೆಂದು ಗುರುತಿಸಲಾಗುತ್ತದೆ. ಗಾಯತ್ರಿ ಛಂದ ಹಾಗೂ ಅನುಷ್ಟಪ್‌ ಛಂದಗಳಲ್ಲಿನ ವ್ಯತ್ಯಾಸ ಒಂದರಲ್ಲಿ ಮೂರು ಸಾಲು ಮತ್ತೊಂದರಲ್ಲಿ ನಾಲ್ಕು ಸಾಲು ಗಳು ಇರುವುದು ಆದರೆ ಇಲ್ಲಿಯ ಪ್ರತಿ ಪಂಕ್ತಿಯ ಕೊನೆಗೂ ದ್ವಿಲಗವಿದ್ದೇ ಇರಬೇಕು.

[1]

ತ್ರಿಷ್ಟುಪ್‌ ಛಂದದಲ್ಲಿ ಗಣಗಳ ಕ್ರಮದಲ್ಲಿ ಮತ್ತು ಪಾದಾಂತ್ಯದ ದ್ವಿಲಗ (⋃ – ⋃ – ) ರಚನೆಯಲ್ಲಿ ಭಿನ್ನತೆಯಿದೆ. ಇಲ್ಲಿ ಗಣವಿನ್ಯಾಸ ನಾಲ್ಕು ಅಕ್ಷರ – ಮೂರು ಅಕ್ಷರ ಮತ್ತು ನಾಲ್ಕು ಅಕ್ಷರಗಳ ಕ್ರಮದಲ್ಲಿ ಇರುವುದು.

ಬೃಹಸ್ಪತಿಂ ಪ್ರಥಮಂ ಜಾಯಮಾನಃ
ಮಹಾಜ್ಯೋತಿಷಃ ಪರಮೋರ್ವಿಮನ್
ಸಪ್ತಾಸಿ ಆಸ್ತೆ ವಿಜಾತೋರವೇಣ
ವಿಸಪ್ತರಶ್ಮಿ ರಥಮತ್ತಮಾಸಿ

ಇಲ್ಲಿ ಪ್ರತಿಪಾದದ ನಾಲ್ಕು ಅಥವಾ ಐದನೆ ಅಕ್ಷರದ ಮೇಲೆ ಯತಿ ಬರಬೇಕು. ಈವರೆಗೆ ಗಮನಿಸಿದ ಮೂರು ಉದಾಹರಣೆಗಳಲ್ಲಿ ಮೊದಲ ಎರಡು ಛಂದಸ್ಸುಗಳಲ್ಲಿ ಅಂದರೆ ಗಾಯತ್ರಿ ಮತ್ತು ಅನುಷ್ಟಪ್‌ ಛಂದಸ್ಸುಗಳಲ್ಲಿ ನಾಲ್ಕು ಅಕ್ಷರಗಳಿಗೆ ಒಂದು ಗಣ ಎಂಬ ಕ್ರಮವಿದ್ದರೆ ತ್ರಿಷ್ಟುಪ್‌ ಛಂದಸ್ಸಿನಲ್ಲಿ ನಾಲ್ಕು ಅಕ್ಷರಗಳ ಗಣ, ಮೂರು ಅಕ್ಷರಗಳ ಗಣ ಮತ್ತು ನಾಲ್ಕು ಅಕ್ಷರಗಳ ಗಣ ಪ್ರತಿ ಪಂಕ್ತಿಯಲ್ಲಿ ಬಂದಿರುವುದಿದೆ.

ಅಂದರೆ ಇಲಿ ಅಕ್ಷರ ಗಣಗಳನ್ನು ಗುರುತಿಸುವಾಗ ಎರಡು ಅಕ್ಷರಗಳ ಗಣವೂ ಆರಂಭದಲ್ಲಿ ಕ್ವಚಿತ್ತಾಗಿ ಇದ್ದುದ್ದಾದರೂ ಪ್ರಧಾನವಾಗಿದ್ದುದ್ದು, ವಿಶೇಷವಾಗಿ ನಾಲ್ಕು ಅಕ್ಷರಗಳ ಗಣ ಮತ್ತು ಮೂರು ಅಕ್ಷರಗಳ ಗಣಗಳೇ. ಆದರೆ ಸಂಸ್ಕೃತದ ಲೌಕಿಕ ಛಂದಸ್ಸಿನಲ್ಲಿ ಗಣಗಳನ್ನು ಗುರುತಿಸುವಾಗ ಮೂರು ಅಕ್ಷರಗಳಿಗೆ ಒಂದು ಗಣವನ್ನು ಗುರುತಿಸುವ ಕ್ರಮವೇ ರೂಢಿಗೆ ಬಂದಿರುವುದು.

‘ಗಣವೆಂದರೆ ಕೆಲವು ನಿಯಮಗಳಿಗನುಸಾರವಾಗಿ ವಿಂಗಡಿಸಿದ ಅಕ್ಷರಗಳ ಗುಂಪು’ ಎಂಬ ಕನ್ನಡದ ಕೈಪಿಡಿ (ಪು. ೬೯) ಯ ವ್ಯಾಖ್ಯಾನ ಅಕ್ಷರ ಗಣಗಳಿಗೆ ಮಾತ್ರ ಅನ್ವಯ ವಾಗುವಂಥದ್ದು. ಅಲ್ಲದೆ ಲೌಕಿಕ ಛಂದಸ್ಸನ್ನು ಗಮನಿಸುವಾಗ ಅಲ್ಲೆಲ್ಲ ಪ್ರಚುರ ವಾಗಿರುವುದು ಮೂರು ಅಕ್ಷರಗಳಿಂದ ವಿನ್ಯಾಸಗೊಳ್ಳುವ ಎಂಟು ಗಣಗಳೇ ಎಂಬುದು ಗಮನಾರ್ಹ. ಅವುಗಳನ್ನು ಕ್ರಮವಾಗಿ ಯಗಣ, ಮಗಣ, ತಗಣ, ರಗಣ, ಜಗಣ, ಭಗಣ, ನಗಣ ಮತ್ತು ಸಗಣಗಳೆಂದು ಕರೆಯಲಾಗಿದೆ.

ಅಜ್ಞಾತ ಛಾಂದಸಿಗನೊಬ್ಬನು ಇದನ್ನು ನೆನಪಿಟ್ಟುಕೊಳ್ಳಲು ಅನುಕೂಲವಾಗುವಂತೆ ಯೋಜಿಸಿದ ಉಕ್ತಿ: ಯಮಾತಾರಾಕಭಾನಸಲಗಂ.

ಹೀಗೇ ಮೂರಕ್ಷರಗಳಿಗೆ ಒಂದು ಗಣ ಎಂದು ಯೋಚಿಸುವುದರ ಹಿಂದೆ ಇದ್ದ ಕಾರಣಗಳನ್ನು ಹುಡುಕುವ ಯತ್ನಗಳಂತು ನಡೆದಿವೆ.

ಪಿಂಗಳನ ಕಾಲದಿಂದ ಮೂರಕ್ಷರಗಳಿಗೆ ಒಂದು ಗಣವನ್ನು ಗುರಿತಿಸುವ ರೂಢಿಯಿದ್ದಂತೆ ತೋರುತ್ತದೆ. ಮೂರಕ್ಷರಗಳ ಗಣದಲ್ಲಿಯೇ ಎಂಟು ವಿಭನ್ನ ವಿನ್ಯಾಸಗಳಾಗುತ್ತವೆ. ಇನ್ನು ನಾಲ್ಕು ಅಕ್ಷರಗಳಿಗೆ ಗಣವನ್ನು ಯೋಜಿಸುವುದಾದರೆ ಅವುಗಳ ಸಂಖ್ಯೆ ಇಪ್ಪತ್ತನಾಲ್ಕನ್ನು ಮೀರುವುದಿರಲಿ ಅವುಗಳ ಗುರು ಲಘುಗಳ ವಿನ್ಯಾಸ ಕ್ರಮವನ್ನು ನೆನಪಿಡುವುದೂ ಕಷ್ಟವೇ.

ಮೂರು ಅಕ್ಷರಗಳ ಘಟಕವಾಗಿ ಗಣವನ್ನು ರೂಪಿಸುವಾಗ ಎಂಟು ಬಗೆಯಾಗಿ ಅದು ವಿನ್ಯಾಸಗೊಳ್ಳುವುದನ್ನು ಪಿಂಗಳನ ಛಂದಶಾಸ್ತ್ರಕ್ಕೆ ವೃತ್ತಿ ಬರೆದ ಹಲಾಯುಧ ಅಷ್ಟಗಣಾಧಿ ದೇವತೆಗಳನ್ನು ಹೆಸರಿಸಿ ಅದಕೊಂದು ದೈವಿಕಾಧಾರವನ್ನು ಒದಗಿಸಲು ಯತ್ನಿಸಿದ್ದು ಈ ಉಕ್ತಿಯಲ್ಲಿ ಗೋಚರವಾಗುತ್ತದೆ.

ಮಯರಸತಜಭನಸಂಜ್ಞಾಶ್ಚಂದಸ್ಯಷ್ಟೋ
ಗಣಾಸ್ತ್ರಿವರ್ಣೋಃ ಸ್ಯುಃ ಭೂಮ್ಯಾಂಬುವಹ್ನಿ
ವಾಯುವ್ಯೋಮಾರ್ಕ ಸಧಾಂಶುನಾಕದೇವಾಸ್ತೇ.

ಆಶ್ಚರ್ಯದ ವಿಷಯವೆಂದರೆ ಈ ಎಂಟು ರೀತಿಯ ಮೂರಕ್ಷರದ ಗಣಗಳ ವಿನ್ಯಾಸದ ತನಗೆ ತಾನೆ ಅರ್ಥವನ್ನು ಗ್ರಹಿಸುದಕ್ಕಾಗಲಿ ಅಥವಾ ಲಯದಲ್ಲಿ ಗುರುತಿಸುವುದಕ್ಕಾಗಲಿ ನೆರವಾಗದಿರುವುದರಿಂದ ಈ ಗಣಗಳ ಸ್ವರೂಪವು ಛಂದಶಾಸ್ತ್ರದ ವಿವಿಧ ಛಂದಸ್ಸುಗಳನ್ನು ಆರಿಯುವುದಕ್ಕೆ ಮಾತ್ರ ಸಹಾಯವಾಗುತ್ತದೆನ್ನಬಹುದು.

ಈ ಬಗ್ಗೆ ಛಂದಶಾಸ್ತ್ರ ತಜ್ಞರೆಂದು ಖ್ಯಾತರಾದ ವೇಲಣಕರ್‌ ಅವರೇ ಈ ಪದ್ಧತಿಯಿಂದ ಪ್ರಸ್ತಾರ ಹಾಗೂ ವೃತ್ತಲಕ್ಷಣ ನಿರೂಪಣೆಗೆ ಅನುಕೂಲ ಎಂದುದಲ್ಲದೆ ವೃತ್ತದ ನೈಜ ಸಂಗೀತದಿಂದ (ಚಲನೆಯಿಂದ) ಈ ಗಣರಚನೆ ಹೊರಗುಳಿಯುತ್ತದೆ ಎಂದಿದ್ದಾರೆ. ಕನ್ನಡ ಕೈಪಿಡಿಕಾರರೂ ಇದೇ ಅಭಿಪ್ರಾಯವುಳ್ಳವರೇ ಆಗಿದ್ದರು.

ಈ. ಸಿತಾರಾಮಯ್ಯನವರ ಅಭಿಪ್ರಾಯವೂ ಇದೇ ಆಗಿದೆ. ಆದರೆ ಅಕ್ಷರ ಗಣಗಳನ್ನು ವಿಶ್ಲೇಷಿಸುವಾಗ ಮೂಲ ಛಂದಶಾಸ್ತ್ರಜ್ಞನಲ್ಲಿ ಇದ್ದ ಒಳನೋಟವನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ.

ಸಂಸ್ಕೃತ ವೃತ್ತಗಳನ್ನು ಅಳೆಯುವುದು ಹೇಗೆ ಎಂಬ ಪ್ರಶ್ನೆ ಅವರನ್ನು ಕಾಡಿದೆ. ಅಲ್ಲದೆ ಭರತಾದಿಗಳು ಲಯದ ಕಲ್ಪನೆಯನ್ನು ಮಾಡುವಾಗ ‘ಕ್ರಿಯಾಕಾಲ ಖಂಡಗಳ ಅನ್ಯೋನ್ಯ ಸಮತ್ವ’ ವೆಂಬ ಮಾತನ್ನು ಆಡಿದ್ದರು. ಕ್ರಿಯಾ ಕಾಲ ಖಂಡಗಳು ಅಂದರೆ ಅಂತರಗಳು ಅನೋನ್ಯವಾಗಿ ಸಮವಾಗಿರಬೇಕೆಂದುಕೊಂಡಾಗ ಇಂಥ ಕಾಲ ಖಂಡಗಳನ್ನು ಆಳೆಯುವುದು ಹೇಗೆ ಎನ್ನುವ ಸಮಸ್ಯೆ ಸಹಜವಾಗಿಯೇ ಮೂಡಿದೆ. ಹೀಗೆ ಎದುರಾದ ಸಮಸ್ಯೆಯನ್ನು ಅವರು ಬಗೆಹರಿಸಿಕೊಳ್ಳ ಬಯಸಿದರು ಎನ್ನುವುದಕ್ಕಿಂತ ಇಂಥ ಕಾಲ ಖಂಡವನ್ನು ಮಾಪನ ಮಾಡುವುದು ಹೇಗೆ ಎಂಬುದಕ್ಕಾಗಿ ಆಂದಿನ ಪದ್ಯಖಂಡಗಳಾದ ಅವು ಅನುಷ್ಟಪ್‌ ಛಂದಸ್ಸಾಗಲಿ, ತ್ರಿಷ್ಟಪ್‌ ಛಂದಸ್ಸಾಗಲಿ ಅಥವಾ ಗಾಯತ್ರಿ ಛಂದಾಸ್ಸಾಗಲಿ ಅವುಗಳನ್ನು ಪಾರಂಪರಿಕವಾಗಿ ಗುರುತಿಸುವಾಗ ಎರಡು ಮಾನದಂಡಗಳು ಇದ್ದಂತೆ ತೋರಿದವು. ಒಂದನೆಯದು ಎಷ್ಟು ಅಕ್ಷರಗಳಿವೆಯೆಂದು. ಎರಡನೆಯದು ಎಷ್ಟು ಪಾದಗಳಿವೆಯೆಂಬುದು. ಹೀಗೆ ನೋಡಿದಾಗ ಆರಂಭದಲ್ಲಿ ಗಾಯತ್ರಿ ಛಂದಾಸ್ಸಿನಲ್ಲಿ ಅವರು ಪ್ರತಿ ಪಂಕ್ತಿಯಲ್ಲಿ ಎಂಟು ಅಕ್ಷರಗಳಿರುವುದನ್ನು ಮುಂದೆ ಅದು ಮೂರು ಸಾಲುಗಳಿಂದ ನಾಲ್ಕು ಸಾಲುಗಳಿಗೆ ವಿಸ್ತಾರಗೊಂಡುದನ್ನು ಗಮನಿಸಿದ್ದರೂ ಜೊತೆ ಜೊತೆಗೆ ಹನ್ನೊಂದು ಅಕ್ಷರಗಳಿರುವ ತ್ರಿಷ್ಟಪ್‌ ಛಂದಸ್ಸನ್ನು ಗಮನಿಸಿದ್ದರು. ಇವುಗಳಿಗೆಲ್ಲ ಆರಂಭದಲ್ಲಿ ಎರಡಕ್ಷರಗಳ ಗಣವಿನ್ಯಾಸದ ಅತ್ಯುಕ್ತೆ ಛಂದಸ್ಸನ್ನೂ ಗಮನಿಸಿದ್ದರು.

ಇವುಗಳನ್ನು ಮಾಪನ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ ಎರಡು ಅಕ್ಷರಗಳ ಗಣವನ್ನು ರೂಪಿಸುಬಹುದು ಎಂದರೆ ಅವುಗಳಿಗಿರುವ ಸಾಧ್ಯತೆ ಎಷ್ಟು ಎಂದರೆ ಅದು ಸೀಮಿತವಾದುದು:

⋃ ⋃ ಎರಡು ಲಘುಗಳು
⋃ – ಒಂದು ಲಘು ಒಂದು ಗುರು
– ⋃ ಒಂದು ಗುರು ಒಂದು ಲಘು
– – ಎರಡೂ ಗುರುಗಳು

ಅಂದರೆ ಈ ವಿನ್ಯಾಸದಲ್ಲಿ ಕೇವಲ ನಾಲ್ಕು ಬಗೆಯಿದ್ದು ಅಕ್ಷರ ವೃತ್ತಗಳನ್ನು ಮಾಪನ ಮಾಡಲು ಅಗತ್ಯವಾದ ‘ಮಾನ’ ಆಧಾರ ಸಾಲದು ಅನ್ನಿಸಿದೆ.

ಅನಂತರದಲ್ಲಿ ನಾಲ್ಕು ಅಕ್ಷರಗಳ ಗಣಗಳ ಅವರು ಗಮನಿಸಿಲ್ಲವೆಂಬಂತೆ ತೋರುವುದಿಲ್ಲ ಆದರೆ ಮೂರು ಅಕ್ಷರಗಳ ಗಣಗಳ ವಿನ್ಯಾಸವನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿದಂತಿದೆ.

ಅಕ್ಷರ ಛಂದಸ್ಸುಗಳನ್ನು ಮಾಪನ ಮಾಡಲು ಈ ಮೂರು ಅಕ್ಷರಗಳ ಎಂಟು ವಿನ್ಯಾಸಗಳು ಸಾಕು ಅನ್ನಿಸಿರುವುದು ನಿಜವಾಗಿಯೂ ಒಂದು ಪ್ರಾತಿಭ ಶೋಧವೇ ಸರಿ.[2]

ಏಕೆಂದರೆ ಈ ಎಂಟು ವಿನ್ಯಾಸಗಳನ್ನು ನೋಡಿ-

⋃ ⋃ ⋃ ನಗಣ ಸುರಭಿ
⋃⋃ – ಸಗಣ ಅಪಗಂ
⋃ – ⋃ ಜಗಣ ವಿಮಾನ
– ⋃⋃ ಸಾಭಗಣ ಭಾರವಿ
– – ⋃ ತಗಣ ತಾರಾಜ
– – – ಮಗಣ ಮರಾಜಂ
⋃ – – ಯಗಣ ವಿಪನ್ನಂ
– ⋃ – ರಗಣ ಅದ್ಭುತಂ

ಇಲ್ಲಿ ಗಣಗಳ ವಿನ್ಯಾಸವನ್ನು ಗುರುತಿಸಿದ ಅವರಿಗೆ ಮೂರು ಅಕ್ಷರಗಳಿಂದ ವಿನ್ಯಾಸಗೊಳ್ಳುವ ಗಣಗಳು ಎಲ್ಲ ರೀತಿಯ ಅಕ್ಷರ ಗಣಗಳ ವಿನ್ಯಾಸಗಳ ಮೂಲಧಾರವಾಗಿವೆ ಎಂದು ಹೊಳೆದುದು ಮಹತ್ವದ ವಿಷಯವೇ ಆಗಿದೆ.

ಏಕೆಂದರೆ ನಾಲ್ಕು ಅಕ್ಷರಗಳಿಗೆ ಒಂದು ಗಣವೆಂದು ಯೋಜಿಸಿದ್ದೇ ಆಗಿದ್ದಲ್ಲಿ ಅದರಿಂದ ವಿನ್ಯಾಸಗೊಳ್ಳುವ ಹದಿನಾರು ಗಣಗಳ ವಿನ್ಯಾಸವನ್ನೇ ಆಗಲಿ, ಐದಕ್ಷರಗಳಿಗೆ ಒಂದು ಗಣವೆಂದು ಹೊರಟಿದ್ದರೆ ಅವುಗಳಿಂದ ವಿನ್ಯಾಸಗೊಳ್ಳುತ್ತಿದ್ದ ನೂರಕ್ಕೂ ಹೆಚ್ಚಿನ ವಿನ್ಯಾಸಗಳನ್ನಾಗಲಿ ನೆನಪಿಡುವುದಾದರೂ ಹೇಗೆ?

ವಾಸ್ತವವಾಗಿ ನಾಲ್ಕು ಅಕ್ಷರಗಳಿಂದ ವಿನ್ಯಾಸಗೊಳ್ಳುವ ಗಣಗಳಲ್ಲಿರುವ ಮೂಲ ಅಂಶಗಳನ್ನು ಗಮನಿಸಿದರೆ ಅವುಗಳೆಲ್ಲ ಮೂರು ಅಕ್ಷರಗಳಿಂದ ವಿನ್ಯಾಸಗೊಳ್ಳುವ ಗಣಗಳಿಗೆ ಹಿಂದೊಂದು ಗುರು ಅಥವಾ ಲಘು ಇಲ್ಲವೆ ಒಂದೊಂದು ಲಘು ಅಥವಾ ಗುರುವನ್ನಿಡುವ ವಿನ್ಯಾಸಗಳಾಗಿ ಮಾತ್ರ ಉಳಿಯುತ್ತವೆ. ಅಂದರೆ ಮೂರು ಅಕ್ಷರಗಳ ಗಣ ವಿನ್ಯಾಸಗಳ ಒಳಗೇ ಸಪ್ತಸ್ವರಗಳ ವಿನ್ಯಾಸಗಳನ್ನು ಹೇಗೆ ರೂಪಿಸಬಹುದೋ ಹಾಗೆಯೇ ಮೂರು ಅಕ್ಷರಗಳ ಗಣ ವಿನ್ಯಾಸದಿಂದ ಎಲ್ಲ ಅಕ್ಷರ ಗಣಗಳ ವಿನ್ಯಾಸಗಳನ್ನೂ ಮಾಪನ ಮಾಡಬಹುದಾದದ್ದು ಅಸಾಮಾನ್ಯವಾದ ಸಂಗತಿ. ಲಯಕ್ಕೆ ‘ಕಾಲ’ ಎನ್ನುವುದು – ಅಂಥ ಕಾಲ ಸಮತ್ವದಿಂದ ರಚನೆ ಕೂಡಿರಬೇಕು ಎನ್ನುವುದು ಅಥವಾ ಕಾಲದ ಆವರ್ತನೆಯಾಗಬೇಕು ಎನ್ನುವುದು ಎಷ್ಟು ಮಹತ್ವದ್ದೋ ಮೂರು ಅಕ್ಷರಗಳನ್ನೇ ಮೂಲಾಧಾರವಾಗಿ ಇಟ್ಟುಕೊಳ್ಳಬೇಕು ಎಂಬುದೂ ಅಷ್ಟೇ ಮಹತ್ವದ್ದು. ಅಕ್ಷರ ಛಂದಸ್ಸು ಎಂದರೆ ಏನು? ಅಕ್ಷರಗಳನ್ನು ಮೂಲಮಾಪನವಾಗಿ ಇಟ್ಟುಕೊಂಡದ್ದು ಎಂದೇ ಅಲ್ಲವೇ? ಇಂಥ ಅಕ್ಷರ ಗಣಗಳನ್ನು ರೂಪಿಸಲು ಮೂರು ಅಕ್ಷರಗಳನ್ನು ಒಂದು ಮಾನದಂಡವಾಗಿಟ್ಟುಕೊಂಡದ್ದು.

ಅಕ್ಷರಗಳ ಗಣಗಳ ಇನ್ನೂ ಹೆಚ್ಚಿನ ರಹಸ್ಯ ಗುರು ಮತ್ತು ಲಘುಗಳೆಂಬ ಮಾತ್ರೆಗಳ ಬಹುಗುಣಿತ ಸಾಧ್ಯವಾದ ಸಂಯೋಜನೆಗಳಲ್ಲಿಯೂ ಜೊತೆ ಜೊತೆಗೇ ಸರಳ ಮತ್ತು ಪರುಷಾಕ್ಷರಗಾಳ ವಿಭಿನ್ನ ಸಂರಚನೆಯಲ್ಲಿಯೂ ಇರುವುದುಂಟು ಒಂದು ಅಕ್ಷರವೃತ್ತ ಜಾತಿಯ ಉದಾಹರಣೆಗಳನ್ನು ಗಮನಿಸಬಹುದು-

ಚಾಗದ  – ⋃⋃
ಭೋಗದ+  – ⋃⋃
ಅಕ್ಕರದ  – ⋃⋃⋃
ಗೇಯದ  – ⋃ ⋃
ಗೊಟ್ಟಿಯ+ – ⋃ ⋃
ಅಲಂಪಿನಿಂಪುಗಳ್ಗೆ+ ⋃ – ⋃ – ⋃ – ⋃
ಆಗರಮಾದ  – ⋃ ⋃ – ⋃
ಮಾನಿಸರೆ  – ⋃ ⋃ ⋃
ಮಾನಿಸರ್‌  – ⋃ –
ಅಂತು+  – ⋃
ಅವರಾಗಿ  ⋃ ⋃ – ⋃
ಪುಟ್ಟಲ್‌  – –
ಏನಾಗಿಯುಮ್‌+  – – ⋃ –
ಏನೊ ತೀರ್ದಪುದೆ?  – ⋃ – ⋃ ⋃ ⋃
ತೀರದೊಡಂ – ⋃ ⋃ –
ಮರಿದುಂಬಿಯಾಗಿ  ⋃ ⋃ – ⋃ – ⋃
ಮೇಣ್  –
ಕೋಗಿಲೆಯಾಗಿ  – ⋃ ⋃ – ⋃
ಪುಟ್ಟುವುದು  – ⋃ ⋃ ⋃
ನಂದನದೊಳ್  – ⋃ ⋃ –
ಬನವಾಸಿದೇಶದೊಳ್  ⋃ ⋃ – ⋃ – ⋃ –

ಉತ್ಪಲಮಾಲೆಯ ಇನ್ನೊಂದು ಪದ್ಯ –

ನೆತ್ತಮನ್‌ + ಆಡಿ  – ⋃ – ⋃ – ⋃
ಸೋಲ್ತೊಡೆ  – ⋃ ⋃
ಸೋಲಮನ್‌ +  – ⋃ –
ಈವುದೆಂದು  – ⋃ – ⋃
ಕಾಡುತ್ತಿರೆ  – – ⋃ ⋃
ಲಂಬಣಂ ಪರಿಯೆ  – ⋃ – ⋃ ⋃ ⋃
ಮುತ್ತಿನ ಕೇಡನೆ  – ⋃ ⋃ – ⋃ ⋃
ನೋಡಿ  – ⋃
ನೋಡಿ  – ⋃
ಬಳ್ಕುತ್ತಿರೆ +  – – ⋃ ⋃
ಏವಮಿಲ್ಲದೆ +  – ⋃ – ⋃ ⋃
ಇವನಾಯ್ವುದೊ  ⋃ ⋃ – ⋃ ⋃
ಪೇಳಿಮ್+  – –
ಎಂಬ  – ⋃
ನೃಪೋತ್ತಮನಂ  ⋃ – ⋃ ⋃ –
ಬಿಸುಟ್ಟು  ⋃ – ⋃
ಇದರೆ  ⋃ ⋃ ⋃
ನಿಮ್ಮೊಳೆ  – ⋃ ⋃
ಪೊಕ್ಕೊಡೆ +  – ⋃ ⋃
ಆಂ  –
ಖೇಡನಲ್ಲೆನೇ  – ⋃ – ⋃ –

ಮೇಲಿನ ಎರಡೂ ಪದ್ಯಗಳು ಉತ್ಪಲಮಾಲಾ ವೃತ್ತಗಳೇ, ಇಲ್ಲಿಯ ವೈಶಿಷ್ಟ್ಯವೆಂದರೆ ಪ್ರತಿ ಪಂಕ್ತಿಯ ರಚನೆಯೂ ಇಪ್ಪತ್ತು ಅಕ್ಷರಗಳಿಂದ ಕೂಡಿರುವುದೇ ಅಲ್ಲದೆ ಪ್ರತಿ ಪಂಕ್ತಿಯಲ್ಲೂ ಕ್ರಮವಾಗಿ ಭಗಣ, ರಗಣ, ನಗಣ, ಭಗಣ, ಭಗಣ, ರಗಣ, ಅನಂತರ ಒಂದು ಲಘು ಮತ್ತು ಒಂದು ಗುರು ಇರಲೇಬೇಕು.

ಇದು ಅಕ್ಷರಗಳ ಗಣಗಳೀಂದಲೇ ರಚಿತವಾದದ್ದು. ಆದರೆ ಆರ್ಥಾನುಸಾರಿ ಬರೆದಿರುವ ಸಾಲುಗಳನ್ನು ಗಮನಿಸಿ. ಇಲ್ಲೆಲ್ಲೂ ಮೂರಕ್ಷರಗಳಿಗೇ ಒಂದು ಗಣ ಎಂಬ ಮಿತಿಯುಂಟಾಗಿಲ್ಲ; ಇದಕ್ಕೆ ಕಾರಣ ಕವಿ ಮೂರು ಅಕ್ಷರಗಳ ಗಣಗಳ ಗುರು ಲಘುಗಳು ಮತ್ತು ಸರಳಾಕ್ಷರ ಪರುಷಾಕ್ಷರಗಳ ವಿವಿಧ ಯೋಜನೆಗಳಿಂದ ಅಕ್ಷರ ಗಣಗಳ ಮಿತಿಯನ್ನು ಗೆದ್ದುಕೊಂಡಿದ್ದಾನೆ; ಅಷ್ಟೇ ಅಲ್ಲ ಒಂದೇ ವೃತ್ತ ಜಾತಿ ಹೇಗೆ ಭಿನ್ನಭಿನ್ನ ಅನುಭವಗಳಿಗೆ ಸೂಕ್ತವಾದ ಅಭಿವ್ಯಕ್ತಿಯಾಗಬಹುದು ಎಂಬುದನ್ನು ಸೂಚಿಸುವಂತೆ ರಚಿಸಿದ್ದಾನೆ.

ನಿಜ, ನಿಯಮಗಳು ಇರುವುದು ಬಂಧನಕ್ಕಾಗಿ ಅಲ್ಲ; ಶಕ್ತಿಯನ್ನು ಸಂಚಯಿಸಿ ಕೊಳ್ಳುವುದಕ್ಕಾಗಿ; ದೊಡ್ಡ ಕವಿ ಹೀಗೆ ಸಂಚಯಿಸಿ ಕೊಂಡ ಶಕ್ತಿಯಿಂದ ಅಭಿವ್ಯಕ್ತಿಯನ್ನು ಸತ್ವಯುತವಾಗಿ ಮಾಡಿಕೊಳ್ಳುತ್ತಾನೆ. ಅಕ್ಷರಗಣಗಳು ಕವಿ ಪ್ರತಿಭೆಗೆ ಮಿತಿಯಾಗದೆ ಹೋದುದು ಪ್ರತಿಭೆಯ ಅಪೂರ್ವ ನಿರ್ಮಾಣ ಶಕ್ತಿ ಸಾಮರ್ಥ್ಯಕ್ಕೆ ಕಾರಣವಾಗಿದೆ.

ಮಾತ್ರಾಕ್ಷರ ಗಣಗಳ ವಿಷಯಕ್ಕೆ ಬಂದರೆ ಈ ಗಣಬಂಧ ಅಷ್ಟೊಂದು ಬಿಗಿಯಾಗಿಲ್ಲದಿರುವುದು ಮನವರಿಕೆಯಾಗುತ್ತದೆ. ಅದಕ್ಕೆ ಕಾರಣ ಈ ಜಾತಿಯ ಗಣಗಳು ವಿಶೇಷವಾಗಿ ಚತುರ್ಮಾತ್ರಾ ಗಣಗಳಾಗಿರುವುದು ಜೊತೆಗೆ ಕೆಲವು ನಿರ್ದಿಷ್ಟ ಜಾಗಗಳಲ್ಲಿ ಅಕ್ಷರಗಣವಾಗಿರುವ ಜಗಣ (⋃ – ⋃) ಬರಲೇಬೇಕೆಂಬ ಅಥವಾ ಬರಬಾರದೆಂಬ ನಿಯಮಗಳನ್ನು ಒಳಗೊಂಡಿರುವುದು; ವಾಸ್ತವವಾಗಿ ಅಪಭ್ರಂಶದ (ಹಾಗೆಯೇ ಪ್ರಾಕೃತ) ಪಜ್ಝಟಿಕಾ ವೃತ್ತದಲ್ಲಿ ದ್ವಿಪಾದವಾಗಿರುವ ಆ ವೃತ್ತದಲ್ಲಿ ಪ್ರತಿಪಂಕ್ತಿಯ ಕೊನೆಯಲ್ಲಿ ಜಗಣ ಅಥವಾ ಸರ್ವಲಘು (⋃ ⋃ ⋃ ⋃) ಗಣ ಬರಬೇಕೆಂಬ ನಿಯಮ ಇರುವುದು. ಹಾಗೆಯೇ ಕಂದಪದ್ಯದಲ್ಲಿ ಪೂರ್ವಾರ್ಧದ ಎಂಟು ಗಣಗಳು ಮತ್ತು ಉತ್ತರಾರ್ಧದ ಎಂಟು ಗಣಗಳಲ್ಲಿ ಎಲ್ಲಿಯೂ ವಿಷಮ ಸ್ಥಾನಗಳಲ್ಲಿ ಜಗಣ ಬರಬಾರದೆಂಬ ನಿಯಮವಿರುವುದು. ಹಾಗೆಯೇ ಆರನೆಯ ಗಣವು ಜಗಣವಾಗಲಿ ಅಥವಾ ಸರ್ವ ಲಘುಗಣವಾಗಿ ಆಗಲಿ ಇರಬೇಕೆನ್ನುವುದು.

ಪಜ್ಝಟಿಕೆ ವೃತ್ತಕ್ಕೆ ಸಂಬಂಧಿಸಿದಂತೆ ಹರಿಹರ ಅದನ್ನು ಮಂದಾನಿಲ ವೃತ್ತವಾಗಿ ಬಳಸಿಕೊಂಡಿರುವುದಲ್ಲದೆ ಅಂತ್ಯಪ್ರಾಸದ ಜೊತೆಗೆ ಆದಿಪ್ರಾಸವನ್ನು ಸೇರಿಸಿರುವುದಿದೆ. ಅದಕ್ಕಿಂತ ಮುಖ್ಯವಾದದ್ದು ದ್ವಿಪದ ಮಿತಿಯನ್ನು ಮೀರಿರುವುದೇ ಅಲ್ಲದೆ ಪಾದಾಂತ್ಯದ ಜಗಣ ನಿಯಮವನ್ನು ಮುರಿದು ಮಾತ್ರಾಕ್ಷರ ಛಂದವನ್ನು ಪೂರ್ಣವಾಗಿ ಮಾತ್ರಾ ವೃತ್ತವಾಗಿಯೇ ಮಾಡಿಕೊಂಡಿರುವುದು. (ಪ್ರಾಸದಲ್ಲಿ ಮಾತ್ರ ಮೂಲ ದ್ವಿಪದದ ಚಿಹ್ನೆಯನ್ನು ಕಾಣಬಹುದು.)

ಒಂದು ಪದಂ ಪಾತಾಳವನೆತ್ತಲು
ಒಂದು ಪದಂ ಬ್ರಹ್ಮಾಂಡವೆತ್ತಲು
ಜಡೆಗಳ್ಬೆಂಬಳಿವಿಡಿದಾಡುತ್ತಿರೆ
ಮುಡಿಯೊಳ್ಸುರನದಿ ತುಳ್ಕಾಡುತ್ತಿರೆ
………………………………………
ಧಿಂಧಿಮಿ ಧಿಂ ಧಿಮಿ ಧಿಂದಿಮಿ ಎನುತಂ
ಧುಮುಧುಮು ತತ್ಥೊಂತತ್ಥೊಂಗೆನುತಂ
ಚಮಕಂ ತರನ ಕತ ಕನಕ ಎನುತಂ
ಝೆಂಝೆಂ ಖಿಱ್ಜಟ ನಟಖಿಱ್ಜೆನುತಂ
ತಂದ್ರಂ ದಿಕ್ಕಟ ದಿಕ್ಕಟ ಎನುತಂ
…………………………………..

ಇನ್ನು ಕಂದ ಪದ್ಯದ ವಿಷಯಕ್ಕೆ ಬಂದರೆ ಅದರ ಲಯವಿನ್ಯಾಸವೇ ಬೇರೆಯಾಗಿ ಬಿಡುವುದನ್ನು ಗಮನಿಸಬಹುದು. ಈ ಎರಡು ಉದಾಹರಣೆಗಳನ್ನು ಗಮನಿಸಿ: (ಲಯಾನುಸಾರಿ ಬರೆಯಲಾಗಿದೆ)

ಪಱೆದಲೆ
ಕುೞೆನೊಸಲ್ +
ಅೞೆಗಣ್ +
ಒಱೆವಾಯ್
ಹಪ್ಪಳಿಕೆ ಮೂಗು
ಮುರುದ ಕಿವಿ
ಬಿಬ್ಬಿಱೆವಲ್
ಕುಸಿಗೊರಲ್+
ಇೞೆದೆರ್ದೆ
ಪೊಱಂಟ ಬೆನ್
ಬಾತ ಬಸಿಱ್
ಅಡಂಗಿದ ಜಘನಂ.
ಪ. ೨೦. ಅವತಾರ ಎರಡು ಯಶೋಧರ ಚರಿತೆ

ಮುದುಗರಡಿಯ
ಮುದುದೊವಲಂದದ
ಕರಿಯಂ
ತಾಳಕಾಯ
ಮೋಳಿಗೆಯೊಂದಂದದ
ಮುರುಡನ್ +
ಅಷ್ಟವಂಕಂ
ಮೊದಲೊಣಗಿದ
ಕೂನಗೊರಡಿನಂದದ
ಕೊಂಕಂ.
ಪ. ೨೨, ಅವತಾರ ಎರಡು ಯಶೋಧರ ಚರಿತೆ

ಮೇಲಿನ ಎರಡು ಕಂದಗಳಲ್ಲಿ ಅಷ್ಟಾವಕ್ರನ ವಿಕಾರರೂಪಿನ ವರ್ಣನೆಯಿದೆ. ಮೊದಲ ಪದ್ಯದಲ್ಲಿ ನಾಲ್ಕು ಮಾತ್ರೆಗಳ ಆದರೆ ಮೊದಲ ಗಣ ನಾಲ್ಕು ಮಾತ್ರೆಗಳು (⋃ ⋃ ⋃ ⋃), ಎರಡನೆಯ ಗಣ ಐದು ಮಾತ್ರೆಗಳು (⋃⋃⋃ –) ಮೂರನೆಯ ಗಣ ಮತ್ತು ನಾಲ್ಕನೆಯ ಗಣಗಳು ಮಾತ್ರಗಳವೇ (⋃⋃ – ; ⋃⋃ –) ಐದನೆಯ ಗಣ ಎಂಟು ಮಾತ್ರೆಗಳು (– ⋃⋃⋃ – ⋃) ಆರನೆಯ ಗಣ ಆರು ಮಾತ್ರೆಗಳು (⋃⋃⋃⋃⋃⋃) ಏಳನೆಯ ಗಣ ಆರು ಮಾತ್ರೆಗಳದೇ ಆಗಿದ್ದರೂ ಹಿಂದಿನ ಆರು ಮಾತ್ರೆಗಳ ಗಣ ವಿನ್ಯಾಸಕ್ಕಿಂತ ಭಿನ್ನ (– ⋃⋃ –), ಏಳನೆಯ ಗಣ ನಾಲ್ಕು ಮಾತ್ರೆಗಳ (⋃⋃⋃⋃) ಇಲ್ಲಿ ಶಿಥಿಲದ್ವಿತ್ವದ ಬಳಕೆಯಾಗಿದೆ. ಎಂಟನೆಯ ಗಣ ಆರು ಮಾತ್ರೆಗಳದ್ದು (⋃ – ⋃ –), ಒಂಭತ್ತನೆಯ ಗಣ ಮತ್ತೆ ಅರು ಮಾತ್ರೆಗಳದೇ, ಹತ್ತನೆಯ ಗಣ ಒಂಬತ್ತು ಮಾತ್ರೆಗಳದು. (⋃ – ,⋃⋃, ⋃⋃ –),

[1] ತತ್ಸುವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧೀಯೋಯೋ ನಃ ಪ್ರಚೋದಯಾತ್‌

ಇಲ್ಲಿ ಮೊದಲ ಸಾಲಿನಲ್ಲಿ ಏಳೇ ವರ್ಣಗಳಿರುವುದು. ಆದರೆ ಣ್ಯಂ ಎಂಬುದನ್ನು ಣಿಯಂ ಎಂದುಚ್ಚರಿಸಿ ಎಂಟಕ್ಷರ ಮಾಡುವುದು.

[2] ಸಪ್ತಸ್ವರಗಳಿಂದ (ಸರಿಗಮಪದನಿ) ಸಂಗೀತದ ಸಮಸ್ತ ರಾಗಗಳ ವಿವಿಧ ಸತ್ವಶಾಲೀ ಸಂಯೋಜನೆಗಳನ್ನು ಅಳೆಯಬಹುದಾದ ಸಾಧ್ಯತೆಯನ್ನು ಗುರುತಿಸಿದುದೂ ಅಂಥ ಒಂದು ಶೋಧವೇ. ಹಾಗೆಯೇ ವರ್ಣಮಾಲೆಯನ್ನು ಉಚ್ಚಾರಣ ಸ್ಥಾನಗಳ ಆಧಾರದಿಂದ ಸ್ವರಗಳು, ಮತ್ತು ವರ್ಗೀಯ ವ್ಯಂಜನಗಳು ಅವರ್ಗೀಯ ವ್ಯಂಜನಗಳು, ಅನುಸ್ವಾರ, ವಿಸರ್ಗಗಳು ಎಂದು ವಿಂಗಡಿಸಿರುವುದೂ ಇಂಥದೇ ಒಂದು ಮಹಾಶೋಧವೇ ಆಗಿದೆ ಎನ್ನಬಹುದು. ಕುತೂಹಲಕ್ಕಾಗಿ ಮೂರು ಅಕ್ಷರಗಳ ಹಾಗೂ ಅಕ್ಷರಗಳ ಗಣ ವಿನ್ಯಾಸಗಳನ್ನು ಹೋಲಿಸಿ ನೋಡಬಹುದು.

ಮೂರಕ್ಷರಗಳ ಗಣಗಳು ನಾಲ್ಕು ಅಕ್ಷರಗಳ ಗಣಗಳು
⋃⋃⋃ ⋃⋃⋃⋃
⋃⋃ – ⋃⋃ – ⋃
⋃ – ⋃ ⋃ – ⋃⋃
⋃ – – – ⋃⋃⋃
– – – – – – –
– – ⋃ – – – ⋃
– ⋃ – – – ⋃ –
– ⋃⋃ – ⋃ – –
⋃ – – –
⋃⋃ – –
– – ⋃⋃
⋃ – – ⋃
– ⋃⋃ –
⋃ – ⋃ –
– – ⋃ –

ಈ ಗಣವಿನ್ಯಾಸಗಳನ್ನು ಅಂದರೆ ಗುರು ಲಘು ಸಂಯೋಜನೆಗಳನ್ನು ಗಮನಿಸಿದರೆ ತಟ್ಟನೆ ಮನವರಿಕೆ ಆಗುತ್ತದೆ, ಮೂರಕ್ಷರಗಳ ಎಂಟು ಗಣಗಳೀಂದಲೇ ಹಿಂದೊಂದು ಮುಂದೊಂದು ಗುರು ಅಥವಾ ಲಘುವನ್ನು ಜೋಡಿಸುವುದರಿಂದ ಹದಿನಾರು ಗಣಗಳನ್ನು ಪಡೆಯಬಹುದುಎಂದು, ಅಂದರೆ ಈ ಹದಿನಾರರ ಮೂಲದಲ್ಲಿ ಎಂಟೇ ಗಣಗಳಿರುವುದನ್ನು ಅದು ಎಂಟು ಗಣಗಳನ್ನು ಮಾತ್ರ ಅಕ್ಷರಗಳಲ್ಲಿ ಗುರುತಿಸುವ ಕ್ರಮಕ್ಕೆ ಮನಸ್ಸು ಮಾಡಿದ್ದು ಒಂದು ಪ್ರಾತಿಭ ಶೋಧವೇ.

ಅನಂತರದ ಪ್ರತಿಭಾ ಶೋಧವೆಂದರೆ ಈ ಗುರು ಲಘುಗಳ ವಿನ್ಯಾಸದಲ್ಲಿ ಬಹುರೂಪಿಯಾಗಬಲ್ಲ ಗುರುಗಳನ್ನು ಸರಳಾಕ್ಷರ ಪರುಷಾಕ್ಷರಗಳ ಸಂಯೋಜನೆಗಳನ್ನೂ ಆ ಮೂಲಕವಾಗಿಯೇ ಲಯದಲ್ಲಿ ವಿಸ್ತಾರ ಆಳ ಮತ್ತು ಎತ್ತರಗಳನ್ನು ಒಳಗೊಳ್ಳುವಂತೆ ಮಾಡುವ ಸಾಧ್ಯತೆಗಳನ್ನೂ ಕವಿಗಳು ಕಾವ್ಯಗಳಲ್ಲಿ ಶೋಧಿಸಿ ಸಾಧಿಸಿದುದು ಎನ್ನಬೇಕು.