ಮತ್ತೆ ಮುಂದಿನ ಪದ್ಯದಲ್ಲಿ ಒಂದು, ಎರಡು ಮತ್ತು ಮೂರು ಸಾಲುಗಳನ್ನು ಒಟ್ಟಾಗಿಯೂ ಗಮನಿಸಬಹುದು; ಬೇರೆ ಬೇರೆಯಾಗಿಯೂ ಗಮನಿಸಬಹುದು – ಅರ್ಥಯತಿ ದೃಷ್ಟಿಯಿಂದ, ಇಲ್ಲಿನ ಮಾತ್ರೆಗಳ ವಿನ್ಯಾಸ

ಮೊದಲ ಸಾಲಿನಲ್ಲಿ ಐದು ಮಾತ್ರೆಗಳು (⋃⋃⋃⋃⋃)
ಎರಡನೆ ಸಾಲಿನಲ್ಲಿ ಎಂಟು ಮಾತ್ರೆಗಳು (⋃⋃⋃⋃ – ⋃⋃)
ಮೂರನೆ ಸಾಲಿನಲ್ಲಿ ನಾಲ್ಕು ಮಾತ್ರೆಗಳು (⋃⋃ –)
ನಾಲ್ಕನೆ ಸಾಲಿನಲ್ಲಿ ಆರು ಮಾತ್ರೆಗಳು (– ⋃ – ⋃)
ಐದನೆ ಸಾಲಿನಲ್ಲಿ ಹತ್ತು ಮಾತ್ರೆಗಳು (– ⋃⋃ – – ⋃⋃)
ಆರನೆ ಸಾಲಿನಲ್ಲಿ ನಾಲ್ಕು ಮಾತ್ರೆಗಳು (⋃⋃ –)
ಏಳನೆ ಸಾಲಿನಲ್ಲಿ ಏಳು ಮಾತ್ರೆಗಳು (– ⋃ – – )
ಎಂಟನೆ ಸಾಲಿನಲ್ಲಿ ಆರು ಮಾತ್ರೆಗಳು (⋃⋃⋃ ⋃⋃⋃)
ಒಂಬತ್ತನೆ ಸಾಲಿನಲ್ಲಿ ಹತ್ತುಮಾತ್ರೆಗಳು ( – ⋃⋃⋃⋃ – ⋃⋃)
ಹತ್ತನೆಯ ಸಾಲಿನಲ್ಲಿ ನಾಲ್ಕು ಮಾತ್ರೆಗಳು (– –)

(ಕೊನೆಯ ಮೂರು ಸಾಲುಗಳನ್ನು ಒಂದಾಗಿಯೂ ಗ್ರಹಿಸಬಹುದು.)

ಕಂದ ಪದ್ಯ ಇಲ್ಲಿ ಪೂರ್ಣ ಮಾತ್ರಾ ವೃತ್ತವಾಗಿ ಬಳಕೆಯಾಗಿರುವುದೇ ಅಲ್ಲವೆ ಚತುರ್ಮಾತ್ರಾ ಗಣ ವ್ಯವಸ್ಥೆಯಲ್ಲಿಯೇ ಅರ್ಥಾನುಸಾರವಾಗಿ ಭಿನ್ನ ಭಿನ್ನ ಗಣಗಳ ಲಯವನ್ನು ಒಳಗೊಂಡು ವಿಶಿಷ್ಟ ವಾಗಿರುವುದನ್ನು ಗಮನಿಸಬಹುದು.

ಮಾತ್ರಾಕ್ಷರ ವೃತ್ತಗಳು ಕನ್ನಡದಲ್ಲಿ ಮಾತ್ರಾ ವೃತ್ತಗಳೇ ಆಗಿರುವುದು ಕನ್ನಡ ಪ್ರತಿಭೆಯ ಜೀರ್ಣಶಕ್ತಿಯನ್ನು ಸೋಪಜ್ಞೆತೆಯನ್ನೂ ಸೂಚಿಸುತ್ತದೆ.

ಇನ್ನು ಅಂಶಗಣಗಳನ್ನು ಪರಿಶೀಲಿಸಬಹುದು.

ಅಂಶಗಣವು ಛಂದಸ್ಸಿನ ದೃಷ್ಟಿಯಿಂದ ಮಾತ್ರವಲ್ಲದೆ ಸಂಸ್ಕೃತಿ ದೃಷ್ಟಿಯಿಂದಲೂ ಹೆಚ್ಚು ದೆಶೀಯವಾದುದು. ಒಂದರ್ಥದಲ್ಲಿ ಇದು ದ್ರಾವಿಡ ಛಂದಸ್ಸಿನ ವೈಶಿಷ್ಟ್ಯವೆಂದೂ ಹೇಳಬಹುದು.

‘ಮಲೆಯಾಳದಲ್ಲಿಯೂ, ಕೊಡಗು, ತುಳು ಮುಂತಾದ ಸಾಹಿತ್ಯಕ್ಕೇರದ ಭಾಷೆಗಳ ಹಾಡುಗಳಲ್ಲಿಯೂ ದ್ರಾವಿಡ ದೇಶಗಳ ಎಲ್ಲಾ ಜನಪದ ಸಾಹಿತ್ಯಗಳಲ್ಲಿಯೂ, ಹೆಂಗಸರ ಹಾಡುಗಳಲ್ಲಿಯೂ, ಲಾವಣಿಗಳಲ್ಲಿಯೂ ಈ ಛಂದಸ್ಸಿನ ತಳಹದಿಯನ್ನೂ ರೂಪಾಂತರಗಳನ್ನೂ ಗುರುತಿಸಬಹುದು’ (ಪು.೧೧೭) ಎಂಬ ಕೈಪಿಡಿಕಾರರ ಮಾತು ಮಹತ್ವದ್ದು.

ಛಂದೋಂಬುಧಿಯನ್ನು ಬರೆದ ನಾಗವರ್ಮನೂ ತನ್ನ ಗ್ರಂಥದ ಐದನೆಯ ಆಧಿಕಾರದಲ್ಲಿ ‘ಕರ್ನಾಟಕ ವಿಷಯ ವೃತ್ತ ಜಾತಿ ಪ್ರಕರಣ’ದಲ್ಲಿ ಸ್ವಲ್ಪ ಮಾತ್ರವೇ ಇದರ ಪ್ರಸ್ತಾಪ ಮಾಡಿದ್ದಾನೆ.

ಅಂಶಗಣ ರಚನೆ ಬಗ್ಗೆ ಅವನು ಹೇಳಿರುವುದು ಹೀಗೆ:

ಎರಡುಂ ಮೂಱುಂ ನಾಲ್ಕುಂ
ಗುರುವಿಂ ಪ್ರಸ್ತರಿಸಲಂಬುನಿಧಿಗಣ ಧರಣೀಃ
ಶ್ವರಗಣಮೊಗೆವುಮವರ್ಕಂ
ಸರಸಿಜಭವ ವಿಷ್ಣು ರುದ್ರಸಂಜ್ಞೆಗಳಕ್ಕುಂ.

ಎರಡು ಗುರು, ಮೂರು ಗುರು ಮತ್ತು ನಾಲ್ಕು ಗುರುಗಳನ್ನು ಬೇರೆ ಬೇರೆಯಾಗಿ ಗುಂಪು ಮಾಡಿ ಗುರುವಿನ ಸ್ಥಾನದಲ್ಲಿ ಲಘುವನ್ನು ಇಡುತ್ತ ಪ್ರಸ್ತಾರ ಹಾಕಿದರೆ ನಾಲ್ಕು ಗಣಗಳು, ಎಂಟು ಗಣಗಳು ಮತ್ತು ಹದಿನಾರು ಗಣಗಳು ಸಾಧ್ಯವಾಗುತ್ತವೆ. ಅವುಗಳನ್ನು ಬ್ರಹ್ಮ, ವಿಷ್ಣು ಮತ್ತು ರುದ್ರ ಎಂಬ ಸಂಜ್ಞೆಗಳಿಂದ ಗುರುತಿಸುತ್ತಾರೆ ಎನ್ನುವ ನಾಗವರ್ಮ ಬ್ರಹ್ಮ, ವಿಷ್ಣು ಮತ್ತು ರುದ್ರ ಗಣಗಳ ವಿವರವಿತ್ತಿರುವುದು ಹೀಗಿದೆ:

ಬ್ರಹ್ಮಗಣ:

. ಬ್ರಹ್ಮಂ – –
. ದ್ರುಹಿಣಂ ⋃ ⋃ –
. ಧಾತೃ – ⋃
. ಸುರಪ ⋃ ⋃ ⋃

ವಿಷ್ಣುಗಣ:

. ಗೋವಿದಂ  – – –
. ಜಲಜಾಕ್ಷಂ ⋃ ⋃ – –
. ಮಾಧವಂ – ⋃ –
. ಸ್ಮರಪಿತಂ ⋃ ⋃ ⋃ –
. ಕಂಸಾರಿ – – ⋃
. ನರಕಾರಿ ⋃ ⋃ – ⋃
. ಶ್ರೀಪತಿ – ⋃ ⋃
. ಮರರಿಪು ⋃ ⋃ ⋃ ⋃

 

ರುದ್ರಗಣ:

೦೧. ಗಂಗಾಧೀಶಂ – – – –
೦೨. ಗಿರಿಜಾನಾಥಂ ⋃ ⋃ – – –
೦೩. ನೀಲಕಂಠಂ – ⋃ – –
೦೪. ವೃಷಭಲಕ್ಷ್ಯಂ ⋃ ⋃ ⋃ – –
೦೫. ಕಾಮಾಂತಕಂ – – ⋃ –
೦೬. ಪ್ರಮಥಾಧಿಪಂ ⋃ ⋃ – ⋃ –
೦೭. ಶೂಲಧರಂ –⋃ ⋃ –
೦೮. ಪುರಮಥನಂ ⋃ ⋃ ⋃ ⋃ –
೦೯. ಕಂದರ್ಪಾರಿ – – – ⋃
೧೦. ಮದನಧ್ವಂಸಿ ⋃ ⋃ – – ⋃
೧೧. ಚಂದ್ರಮೌಳಿ – ⋃ – ⋃
೧೨. ಭುಜಗಧಾರಿ ⋃ ⋃ ⋃ – ⋃
೧೩. ಭೂತಾಗ್ರಣಿ – – ⋃ ⋃
೧೪. ತ್ರಿಜಗದ್ಗುರು ⋃ ⋃ – – ⋃ ⋃
೧೫. ಕಾಮರಿಪು – ⋃ ⋃ ⋃
೧೬. ಮದನರಿಪು  ⋃ ⋃ ⋃ ⋃ ⋃

ನಾಗರ್ಮನು ಬ್ರಹ್ಮ, ವಿಷ್ಣು, ಮತ್ತು ರುದ್ರಗಣಗಳನ್ನೂ ಕ್ರಮವಾಗಿ ಅವುಗಳ ನಾಲ್ಕು, ಎಂಟು ಮತ್ತು ಹದಿನಾರು ಬಗೆಯ ಗುರುಲಘು ವಿನ್ಯಾಸಗಳನ್ನೂ ಹೇಳಿದ.

ಆದರೆ ನಮಗೆದುರಾಗುವ ಪ್ರಶ್ನೆ ಇಲ್ಲಿ ಮೂಲ ಘಟಕಗಳಾವುವು ಎನ್ನುವುದು. ಅಕ್ಷರಗಣ ಛಂದಸ್ಸಿನಲ್ಲಿ ಅಕ್ಷರಗಳು ಮೂಲ ಘಟಕಗಳು. ಅವುಗಳಲ್ಲಿ ಮೂರು ಅಕ್ಷರಗಳಿಗೆ ಒಂದು ಗಣವೆಂದೂ ಅಂಥ ಎಂಟು ಗಣಗಳ ಸಾಧ್ಯತೆಯನ್ನು ಗಮನಿಸಿದ್ದೇವೆ.

ಮಾತ್ರಾಕ್ಷರ ಛಂದಸ್ಸಿನಲ್ಲಿ ಮಾತ್ರಾ ಗಣಗಳಿದ್ದರೂ ಅವುಗಳೊಳಗೆ ಕೆಲವು ನಿರ್ದಿಷ್ಟ ರೀತಿಯ ಅಕ್ಷರಗಳಿರುವುದೆಂಬುದನ್ನು ಗಮನಿಸಿದ್ದೇವೆ.

ಈಗ ಈ ಬ್ರಹ್ಮ, ವಿಷ್ಣು, ಮತ್ತು ರುದ್ರಗಣಗಳ ಮೂಲ ಘಟಕ ಯಾವುದು ಎಂಬುದನ್ನು ಚರ್ಚಿಸುವಾಗ ಮೊದಲ ಬಾರಿಗೆ ‘ಅಂಶಗಣ’ ಎಂಬ ಅಂಶವನ್ನು ನಿರೂಪಿಸಿದವರು ಆಚಾರ್ಯ ಬಿ. ಎಂ. ಶ್ರೀ. ಅವರೆಂದೇ ಬಹು ವಿದ್ವಾಂಸರ ಅಭಿಪ್ರಾಯ. ಅದಕ್ಕೆ ಕಾರಣ ದ್ರಾವಿಡ ಛಂದಸ್ಸನ್ನು ಕುರಿತು ಹೇಳುವಾಗ ಕನ್ನಡದ ಛಂದಸ್ಸನ್ನು ಲಕ್ಷಣಗಳನ್ನು ಗಮನಿಸುವಾಗ ತಮಿಳಿನ ಛಂದಸ್ಸುಗಳೊಡನೆ ಹೋಲಿಸಿ ನೋಡಬೇಕು ಎಂದದ್ದು. ಅಲ್ಲದೆ ಕನ್ನಡ ಛಂದಸ್ಸನ್ನು ಕುರಿತ ಅವರ ದೃಷ್ಟಿ ಎಷ್ಟೊಂದು ಸೋಪಜ್ಞವಾಗಿದೆ. ಹಾಗೂ ಒಳನೋಟಗಳಿಂದ ಕೂಡಿದೆ ಎಂದರೆ ನಾಗವರ್ಮ ತನ್ನ ಛಂದೋಂಬುದಿಯಲ್ಲಿ ಅಲ್ಪ ಭಾಗವನ್ನು ಮಾತ್ರ ಕನ್ನಡ ಛಂದಸ್ಸಿಗೆ ವಿನಿಯೋಗಿಸಿದ್ದಾನೆ ಎನ್ನುತ್ತಾರೆ. ಮುಂದುವರೆದು ನಾಗವರ್ಮ ಕನ್ನಡದವೆನ್ನುವ ತ್ರಿಪದಿ, ಅಕ್ಷರ, ರಗಳೆ ಮತ್ತು ಷಟ್ಟದಿಗಳನ್ನು ಕುರಿತು ಹೇಳುವಾಗ ಇದಕ್ಕೆ ಸಾಂಗತ್ಯವನ್ನು ಸೇರಿಸಬೇಕು ಎನ್ನುತ್ತಾರೆ.ಅದಕ್ಕಿಂತ ಮುಖ್ಯವಾದದ್ದು ಅವರಿಗೆ ಕನ್ನಡ ಕವಿಗಳಲ್ಲಿ ಬಳಕೆಯಾಗಿದ್ದ ವಿವಿಧ ರೀತಿಯ ರಗಳೆಯ ವಿನ್ಯಾಸಗಳನ್ನು ಉದಾಹರಿಸಿ ಅದರ ಮೂಲ ಯಾವುದಿರಬಹುದು ಎಂಬುದರ ಬಗ್ಗೆ ಅವರು ಹೇಳುವ ಈ ಮಾತುಗಳನ್ನು ಗಮನಿಸಿ:

“ರಗಳೆ ಸಂಸ್ಕೃತಕ್ಕೆ (ಪ್ರಾಕೃತಕ್ಕೆ ) ಸೇರಬೇಕೋ, ಅಂಶಗಣದ ಕರ್ನಾಟಕ ವಿಷಯ ಜಾತಿಯೋ ಸಂಶಯ ಉಳಿಯುತದೆ” (ಪು. ೧೪೧, ಕನ್ನಡ ಕೈಪಿಡಿ) ಎನ್ನುತ್ತಾರೆ. ೧೯೨೭ರ ವೇಳೆಗೆ ಇಂಗ್ಲಿಷಿನಲ್ಲಿ Rhythm ಎನ್ನುವ ಪದಕ್ಕೆ ಪರ್ಯಾಯವಾಗಿ ಲಯ ಎಂಬ ಪದವನ್ನು ಮೊದಲು ಬಳಸಿದವರೂ ಅವರೇ, ಅಷ್ಟೇ ಅಲ್ಲ ೧೯೭೬ರಲ್ಲಿ ಅಂಶಗಣದ ಇತಿಹಾಸದ ಬಗ್ಗೆ ಎಂ. ಎಂ. ಕಲಬುರ್ಗಿಯವರು ರುದ್ರಗಣದ ಅಸ್ತಿತ್ವವನ್ನೇ ಅಳಿಸಿಹಾಕಿ ಅಂಶಗಣಗಳಲ್ಲಿ ಬ್ರಹ್ಮ ಮತ್ತು ವಿಷ್ಣು ಗಣಗಳಷ್ಟೇ ಎಂದು ವಾದಿಸಿರುವ ಅಂಶಕ್ಕೆ ಸಂಬಂಧಿಸಿದಂತೆ ಶ್ರೀ ಯವರು ೧೯೨೪ರಲ್ಲೇ ರುದ್ರಗಣದ ಬಗ್ಗೆ ಕೊಟ್ಟಿರುವ ಸೂಚನೆ ಗಮನಿಸಿ:

“ರುದ್ರಗಣ ಬ್ರಹ್ಮ + ವಿಷ್ಣುವಾಗಿ (೩+೪) ಒಡೆದು ನಿಜಸ್ವರೂಪದಲ್ಲಿ ಕಣ್ಮರೆಯಾಯಿತು; ಪಾದಗಳ ಕೊನೆಯಲ್ಲಿ ವಿಷ್ಣು + ಗುರು ಆಯಿತು”. (ಪು. ೧೨೦, ಕನ್ನಡ ಕೈಪಿಡಿ)

ಈ ಎಲ್ಲ ಒಳ ನೋಟಗಳನ್ನು ದ್ರಾವಿಡ ಛಂದಸ್ಸಿನ ಬಗೆಗೆ ನೀಡಿದ ಶ್ರೀ ಯವರು ಕನ್ನಡ ಛಂದಸ್ಸನ್ನು ಕುರಿತು ಬರೆಯುವಾಗ ದ್ರಾವಿಡ ಎಂಬುದನ್ನು ಅನ್ವೇಷಿಸುವ ಯತ್ನ ಮಾಡಿದ್ದಾರೆ. ತಮಿಳು ಛಂದಸ್ಸು ಭಾಗದಲ್ಲಿ ಬ್ರಹ್ಮ, ವಿಷ್ಣು, ಮತ್ತು ರುದ್ರಗಣಗಳನ್ನು ಕುರಿತು ವಿಶ್ಲೇಷಿಸುವಾಗ “ಇನ್ನು ತಮಿಳು ಛಂದಸ್ಸಿನಿಂದ ಕೆಲವು ಉದಾಹರಣೆಗಳನ್ನು ಕೊಟ್ಟು ಈ ಕನ್ನಡ ಛಂದಸ್ಸಿನ ಚರಿತ್ರೆಯನ್ನು ಮುಗಿಸಬಹುದು. ಏಕೆಂದರೆ ಪುರಾತನ ತಮಿಳು ಛಂದಸ್ಸಿನ ಕನ್ನಡ ಛಂದಸ್ಸಿನ ಹಿಂದಿನ ಹೆಜ್ಜೆ ಕಾಣಬರುವುದು” (ಪು. ೧೫೪, ಕನ್ನಡ ಕೈಪಿಡಿ) ಎನ್ನುತ್ತಾರೆ.

ಅವರು ತಮಿಳು ಛಂದಸ್ಸಿನ ಕೆಲವು ಪ್ರಮುಖ ಮಾದರಿಗಳನ್ನು ಕೊಟ್ಟಿದ್ದಾರೆ.

ತಮಿಳಿನಲ್ಲಿರುವ ಅಶೈಶೀರ್‌ ಎನ್ನುವುದು ಕನ್ನಡದಲ್ಲಿ ಅಂಶಗಣ ಆಗುವುದು. ತಮಿಳಿನಲ್ಲಿ ಆಶೈ ಎಂದರೆ ಆಂಶ; ಶೀರ್‌ ಎಂದರೆ ಗಣ. ಈ ಹಿನ್ನೆಲೆಯಲ್ಲಿ ದ್ರಾವಿಡದ ಬ್ರಹ್ಮ ವಿಷ್ಣು ಮತ್ತು ರುದ್ರಗಣಗಳ ಮೂಲ ಮಾನವನ್ನು ‘ಅಂಶ’ ಎಂದು ಇಟ್ಟುಕೊಳ್ಳಬಹುದು. ಮಾತ್ರಾಗಣ ಛಂದಸ್ಸಿನಲ್ಲಿ ಮಾತ್ರೆಗಳು (ಗುರು ಲಘು ಫ್ಲುತ) ಮೂಲ ಮಾನವಾದರೆ; ಅಕ್ಷರಗಣ ಛಂದಸ್ಸಿನಲ್ಲಿ ಅಕ್ಷರಗಳು ಮೂಲ ಮಾನವಾಗುತ್ತವೆ. ಆದರೆ ಅಂಶ ಛಂದಸ್ಸಿನಲ್ಲಿ ಅಂಶಗಳು ಮೂಲ ಮಾನವಾಗುತ್ತವೆ.

ಅಕ್ಷರ ಗಣಕ್ಕಿಂತ ಅಂಶಗಣದ ಮೂಲ ಹೇಗೆ ಭಿನ್ನ ಎಂಬುದನ್ನು ಪರಿಶೀಲಿಸಬಹುದು.

ಅಕ್ಷರಗಣಗಳಲ್ಲಿ ಒಂದೊಂದು ಅಕ್ಷರವೂ ಮೂಲಮಾನವಾಗಿ ಮೂರು ಮೂರು ಅಕ್ಷರಗಳಿಗೆ ಒಂದು ಗಣವಾಗುವುದು ಉಂಟಷ್ಟೆ; ಅಂಶಗಣದಲ್ಲಿ ಹಾಗಲ್ಲ; ಇಲ್ಲಿಯ ಅಂಶವೂ ಅಕ್ಷರದ ರೀತಿಯಲ್ಲಿಯೇ ಇದ್ದರೂ ಅಕ್ಷರಗಣದ ಯೋಜನೆಗಿಂತ ಇದು ಭಿನ್ನ.

ಮೊದಲನೆಯದಾಗಿ ಇಲ್ಲಿಯೂ ಅಕ್ಷರವೇ ಮೂಲ ಮಾನವಾಗಿದ್ದರೂ ಮೊದಲ ಅಂಶ ಎರಡು ಲಘು ಅಥವಾ ಒಂದು ಗುರು ಆಗಲೇಬೇಕು. ಅನಂತರ ಒಂದೊಂದು ಅಕ್ಷರವೂ ಗುರು ಅಥವಾ ಲಘು ಆಗಿ ಇರಬಹುದು. ಉದಾಹರಣೆಗೆ ಈ ಕೆಲವನ್ನು ಗಮನಿಸಿ ಎರಡು ಅಂಶಗಣ ಬ್ರಹ್ಮಗಣಕ್ಕೆ ಸಂಬಂಧಿಸಿದಂತೆ.

ಸರಲ ⋃ ⋃ ⋃
ಸಾಲ – ⋃
ತರಲಂ ⋃ ⋃ –
ಸಾಲಂ – –

ಈ ರೀತಿಯ ನಾಲ್ಕು ರೀತಿಗಳಲ್ಲಿ ಎರಡು ಅಂಶಗಳ ಬ್ರಹ್ಮಗಣ ಇರಬಹುದು ಎನ್ನುವ ಈ ಕಲ್ಪನೆ ಕನ್ನಡಕ್ಕೆ ವಿಶಿಷ್ಟವಾದುದು. ಏಕೆಂದರೆ ಇಲ್ಲಿ ಮೊದಲ ಅಂಶವಾಗ ಬೇಕಾದರೆ ಅದು ಗುರುವಾಗಿರಬೇಕು; ಇಲ್ಲವೆ ಎರಡು ಲಘುಗಳಿಂದ ಕೂಡಿರಬೇಕು.

ಈ ರೂಢಿಯು ತಮಿಳಿನಲ್ಲಿ ಪೂರಾ ಭಿನ್ನವಾಗಿರುವುದು. ಅಲ್ಲಿ ಮೂಲ ಅಂಶ ಗುರುವಾಗಿರಬಹುದು; ಅಥವಾ ಲಘವೂ ಆಗಿರಬಹುದು. ಇದನ್ನು ತಮಿಳಿನಲ್ಲಿ ನೇರಶೈ ಮತ್ತು ನಿರೈಯಶೈ ಎಂದು ಎರಡು ರೀತಿಗಳಲ್ಲಿರುವುದು. ಉದಾಹರಣೆಗೆ –

ನಿರೈಯಶೈಗೆ

[1]

ಅಣಿ ⋃ ⋃
ನಿಲಾ ⋃ –
ಕಲಮ್‌ ⋃ –
ಪಡಾಮ್‌ ⋃ –

ನೇರಶೈಗೆ

ಆನ್‌
ಚೊಲ್‌
ವಾನ್‌

ತಮಿಳಿನಲ್ಲಿ ನಿರೈಯಶೈ – ಕ್ರಮದಲ್ಲಿ ಪದಾದಿಯ ಒಂದು ಲಘುವೇ ಒಂದು ಅಂಶವಾಗುವ ಕೆಲವು ಉದಾಹರಣೆಗಳಿವೆ. ಆದರೆ ಕನ್ನಡದಲ್ಲಿ ಮಾತ್ರ ಹಾಗಿಲ್ಲ.[2]

ಅಂದರೆ ಕನ್ನಡದ ಪದಗಳ ಉಚ್ಚಾರಣೆಯಲ್ಲಿ ಮಾತ್ರ ಅಲ್ಲ ಪದ ರಚನೆಗಳಲ್ಲಿ ಆರಂಭದ ಅಕ್ಷರ ಲಘುವಿದ್ದು ಮುಂದಿನಕ್ಷರ ಗುರುವಾಗಿರುವ ದೇಶ್ಯ ಪದಗಳಿಲ್ಲ. ಬಹುಶಃ ಮಲರ್‌ ಕುರುಳ್ ಎಂಬಂಥ ವ್ಯಂಜನಾಂತ ಪದಗಳು ಸ್ವರಾಂತಗಳಾದುದು ಇದೇ ಕಾರಣದಿಂದ ಇರಬಹುದು.

ಅಂಶಗಣದ ಮೊದಲ ಅಂಶವನ್ನು ಅತ್ಯಂತ ಅರ್ಥಪೂರ್ಣವಾಗಿ ಮೂಲಾಂಶವೆಂದು ಶ್ರೀಯವರು ಕರೆದಿದ್ದಾರೆ. ಇದು ಗುರು ಅಥವಾ ಎರಡು ಲಘುಗಳಿಂದಾಗಿ ಆಗುತ್ತದೆ. ಮುಂದಿನ ಅಂಶ ಅದು ಲಘು ಅಥವಾ ಗುರು ಎಂಬ ನಿಯಮವೇನೂ ಇಲ್ಲ. ಸಂದರ್ಭಕೆ ತಕ್ಕಂತೆ (ಲಯಕ್ಕೆ ಅನುಕೂಲವಾಗುವಂತೆ) ಗುರುವನ್ನು ಲಘುವಾಗಿಯೂ, ಲಘುವನ್ನು ಗುರುವಾಗಿಯೂ ಅನುಕ್ರಮವಾಗಿ ಹ್ರಸ್ವಗೊಳಿಸಿ ಅಥವಾ ದೀರ್ಘವಾಗಿ ಎಳೆದು ಉಚ್ಚರಿಸಬೇಕಾಗುತ್ತದೆ. ಅಂದರೆ ಇಲ್ಲಿ ಎರಡು ಮತ್ತು ಮೂರನೆಯ ಅಂಶಗಳ ಗುರುಗಳು ಅಥವಾ ಲಘುಗಳು ನಮ್ಮ (flexible) ಆಗಿಬಿಡುತ್ತವೆ. ಇದಕ್ಕೆ ಕಾರಣ ಮೂಲತಃ ಇದು ಗೇಯ ಛಂದಸ್ಸಾಗಿರುವುದು

ಅದರೆ ಅಕ್ಷರ ಗಣಗಳು ಮಾತ್ರಾಗಣಗಾಳಾದಂತೆ ಅಂಶಗಣಗಳು, ಮಾತ್ರಾ ಗಣಗಳಾಗಿ ಪರಿವರ್ತಿತವಾಗುತ್ತ ಹೋದುದನ್ನು ತ್ರಿಪದಿಯ ಇತಿಹಾಸವನ್ನು ನೋಡಿದವರೆಲ್ಲ ಬಲ್ಲರು. (ಈ ವಿಷಯವನ್ನು ಶ್ರೀಯವರೇ ಪ್ರಸ್ತಾಪಿಸಿಬಿಟ್ಟಿದ್ದಾರೆ.)

ಗೇಯತೆಯೇ ಪ್ರಧಾನವಾದ ಅಂಶಗಣ ಬಂಧಗಳಲ್ಲಿ ಇಂದಿಗೂ ಗೇಯ ರೂಪದಲ್ಲೇ ಉಳಿದಿರುವ ಛಂದಸ್ಸು ಎಂದರೆ ಸಾಂಗತ್ಯವೆನ್ನಬೇಕು. ಅಂಬಿಕಾತನಯದತ್ತರ ‘ಸಖೀಗೀತ’ ಸಾಂಗತ್ಯದ ಹೊಸರೂಪವೇ ಆಗಿದೆ. (ಅಕ್ಕರ ಛಂದವು ಸಾಂಗತ್ಯ ಸಂಸ್ಕಾರ ಪಡೆದಿಲ್ಲಿ ಬಂದಿದೆ ಹೊಸ ಹೊಸತು) ಅಂಶಗಣದ ಗೇಯತೆಯನ್ನು ಮತ್ತು ಗಣ ವಿನ್ಯಾಸವನ್ನು ಗಮನಿಸಲು ಎರಡೂ ತ್ರಿಪದಿಗಳನ್ನು ಮತ್ತು ಎರಡು ಸಾಂಗತ್ಯಗಳನ್ನು ಗಮನಿಸಬಹುದು.

ಬಾದಮಿಯ ಶಾಸನದಲ್ಲಿ ಬರುವ ಎರಡು ತ್ರಿಪದಿಯನ್ನು

ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾದವನೀತನ್ಪೆಱನಲ್ಲ

ತ್ರಿಪದಿಯ ಲಕ್ಷಣದಂತೆ ಮೊದಲ ಸಾಲಿನಲ್ಲಿ ನಾಲ್ಕು ವಿಷ್ಣು ಗಣಗಳು ಇರಬೇಕು. ಆದರೆ ಮೊದಲ ಸಾಲಿನಲ್ಲಿ ಸಾಧುಗೆ (– ⋃ ⋃) ವಿಷ್ಣುಗಣ; ಸಾಧು (⋃ –) ಬ್ರಹ್ಮಗಣ, ಮಾಧುರ್ಯಂಗೆ (– – – ⋃) ರುದ್ರಗಣ, ಮಾಧ್ಯರ್ಯಂ (– – –) ವಿಷ್ಣು ಗಣಗಳಾಗಿವೆ. ಇಲ್ಲಿ ಸಾಧುಗೆ ಸಾಧುಮಾ| ಎಂಬಲ್ಲಿಗೆ ನಿಲ್ಲಿಸಿ ಎರಡು ವಿಷ್ಣು ಗಣ ಮಾಡಬಹುದಾದರೂ ಪದ ಒಡೆದು ಹೋಗುತ್ತದೆ.

ಆರ್ಥಯತಿ ದೃಷ್ಟಿಯಿಂದ ಸಾಧುವೆ ಸಾಧು ಎಂಬಲ್ಲಿ ಅಲ್ಪಯತಿ ಬರುತ್ತದೆ; ಮಾಧುರ್ಯಂಗೆ ಮಾಧ್ಯರ್ಯಂ ಎಂಬಲ್ಲಿ ಮತ್ತೊಂದು ಅಲ್ಪಯತಿ, ಬಾಧಿಪ್ಪ ಕಲಿಗೆ ಎಂಬಲ್ಲಿ ಮತ್ತೊಂದು ಅಲ್ಪಯತಿ ಕಲಿಯುಗ ವಿಪರೀತನ್‌ ಎಂಬುದನ್ನು ಮತ್ತೆ ಅಲ್ಪಯತಿಯಾಗಿಯೂ ಅಥವಾ ಪೂರ್ಣಯತಿಯಾಗಿಯೂ ಗುರುತಿಸಬಹುದು; ಮಾದವನೀತನ್‌ ಪೆಱನಲ್ಲ ಎಂಬಲ್ಲಿಯಂತೂ ಪೂರ್ಣಯತಿಯೇ ಬರುತ್ತದೆ. ಇನ್ನೊಂದು ತ್ರಿಪದಿ ಶಿಕಾರಿಪುರದ ಶಾಸನದ್ದು ಗಮನಿಸಿ: ಅರ್ಥಾನುಸಾರಿಯಾಗಿಯೇ ಪಂಕ್ತಿಗಳನ್ನು ಬೇರೆ ಬೇರೆ ಬರೆಯಲಾಗಿದೆ.

ಮುಕ್ತಿಶ್ರೀಸತಿಗನುರಕ್ತಂ – – – ⋃ ⋃ ⋃ ⋃ – –
ಸಂಸಾರವಿರಕ್ತಂ – – ⋃ ⋃ – –
ನಿರ್ವಿಷಯ ನಿರಪೇಕ್ಷಂ – ⋃ ⋃ ⋃ ⋃ ⋃ – –
ಶುಚಿಜೀವನ್ಮುಕ್ತಂ ⋃ ⋃ – – – –
ನಿರ್ವಾಣಿ – – ⋃
ಗುಣಗಳ್ಳಂ ⋃ ⋃ – –

ಇಡೀ ತ್ರಿಪದಿ ತನ್ನ ಸಹಜ ಗೇಯತೆಯಿಂದ ಭಿನ್ನಗೊಳ್ಳುತ್ತದೆ. ಶಾಸನ ಕವಿ ತ್ರಿಪದಿಯ ಗೇಯಲಯಕ್ಕೆ ಹೊಸತೊಂದು ಆಯಾಮವನ್ನೇ ಇಲ್ಲಿ ತೆರೆದಿದ್ದಾರೆ ಎನ್ನಬೇಕು. ಐದು ಮತ್ತು ಅರನೆಯ ಸಾಲುಗಳನ್ನು ಒಂದಾಗಿ ಕೂಡಿಸಿಯೂ ಓದಬಹುದು. ಅಂದರೆ ಗೇಯ ಛಂದಸ್ಸಿನಲ್ಲಿ ವಿಭಿನ್ನ ಲಯಗಳನ್ನು ಸಾಧಿಸುವ ಯತ್ನ ಹನ್ನೊಂದನೆಯ (ಸು. ಕ್ರಿ. ಶ. ೧೦೭೧) ಶತಮಾನದಲ್ಲೇ ನಡೆದಿದೆ.

ಸರ್ವಜ್ಞನ ಕಾಲಕ್ಕಂತೂ ತ್ರಿಪದಿ ಪೂರ್ಣವಾಗಿ ಮಾತ್ರಾಛಂದವಾಗಿಯೇ ರೂಪುಗೊಳ್ಳುವುದನ್ನು ನೋಡುತ್ತೇವೆ.

ತ್ರಿಪದಿ ತನ್ನ ಗೇಯ ರೂಪವನ್ನು ಉಳಿಸಿಕೊಳ್ಳಲಿಕ್ಕಾಗಿಯೇ ನಾಲ್ಕು ಸಾಲುಗಳಾದದ್ದು ಜನಪದ ಗೀತೆಗಳಲ್ಲಿ ವಿಶೇಷವಾಗಿ ಕಾಣುವ ಒಂದು ವಿಶೇಷವೆಂದೇ ಹೇಳಬೇಕು. ಆದರೂ ತ್ರಿಪದಿಯ ಬ್ರಹ್ಮಗಣವನ್ನು ಇನ್ನೂ ಉಳಿಸಿರುವುದು ಅದರ ಜಾನಪದ ಪದಸ್ಮೃತಿಗೆ ಉದಾಹರಣೆಯಾಗಿದೆ ಎನ್ನಬಹುದೇನೋ.

ಸಾಂಗತ್ಯ : ಕರ್ನಾಟಕ ವಿಷಯ ಜಾತಿಯನ್ನು ಕುರಿತು ಹೇಳುವಾಗ ನಾಗರ್ವರ್ಮ ಮದನವತಿ, ಅಕ್ಕರ, ತ್ರಿಪದಿ, ಗೀತಿಕೆ, ಏಳೆ, ಚೌಪದಿ, ಉತ್ಸಾಹ, ಷಟ್ಟದಿ, ಅಕ್ಕರಿಕೆ ಮತ್ತು ಛಂದೋವಸಂತಗಳನ್ನು ವಿವರಿಸುತ್ತಾನೆ. ಜಯಕೀರ್ತಿ ತನ್ನ ಛಂದೋನುಶಾಸನದಲ್ಲಿ ಉತ್ಸಾಹವನ್ನು ಕೈಬಿಡುತ್ತಾನೆ. ಆಶ್ಚರ್ಯವೆಂದರೆ ಇಬ್ಬರಲ್ಲಿಯೂ ಸಾಂಗ್ಯತದ ಉಲ್ಲೇಖ ಇಲ್ಲದಿರುವುದು.

ಬಹುಶಃ ಹದಿಮೂರನೇ ಶತಮಾನದವರೆಗೆ ಸಾಂಗತ್ಯದ ಬಳಕೆಯಾಗಿರುವ ಉದಾಹರಣೆಗಳಿಲ್ಲದ್ದು ಇದಕ್ಕೆ ಒಂದು ಕಾರಣ ಇರಬಹುದು. ಇನ್ನೊಂದು ಮುಖ್ಯಕಾರಣ ಸಾಂಗತ್ಯವನ್ನು ಕುರಿತು ಬಿ. ಎಂ. ಶ್ರೀ. ಅವರ ಈ ವಿವರಣೆ:

ಗೀತಿಕೆಯ ಎರಡು ಪಾದಗಳ ಅಥವಾ ಪಿರಿಯಕ್ಕರದ ಎರಡು ಪಾದಗಳ ರೂಪಾಂತರವೇ ಸಾಂಗತ್ಯವಾಗಿ ತೋರುವುದು.(ಪು.೧೩೨, ಕನ್ನಡ ಕೈಪಿಡಿ) ಶ್ರೀಯವರ ಹೇಳಿಕೆಯನ್ನು ಗಮನಿಸಿದರೆ, ಏಳೆ ಮತ್ತು ತ್ರಿಪದಿಗಳನ್ನು ಒಂದೇ ಎಂದೂ ಹೇಳಬೇಕಾಗಬಹುದು. ಅದಕ್ಕೆ ಕಾರಣ ಏಳು ಅಂಶಗಣಗಳಿಂದ ಕೂಡಿದ ದ್ವಿಪದ ರೂಪದ ಏಳೆ (ರುದ್ರಗಣ, ವಿಷ್ಣುಗಣ, ವಿಷ್ಣು ಒಂದನೆ ಸಾಲಿನಲ್ಲಿ, ಎರಡನೆ ಸಾಲಿನಲ್ಲಿ ವಿಷ್ಣುಗಣ ಬ್ರಹ್ಮಗಣ ಮತ್ತು ವಿಷ್ಣುಗಣ) ಮೂರು ಸಾಲಾಗಿ ವಿಸ್ತಾರಗೊಂಡು ತ್ರಿಪದಿಯಾಗುವುದು – ಅಲ್ಲಿಂದ ಮುಂದೆ ವಿಷ್ಣುವಿಗೆ ಬದಲಾಗಿ ಕೊನೆಯ ಅಂಶಗಣ ರುದ್ರವಾದರೆ ಚಿತ್ರ ಅನ್ನಿಸಿಕೊಳ್ಳುವುದು – ಈ ವಿವವರಗಳನ್ನು ಗಮನಿಸಿದರೆ ಕವಿ ಪ್ರತಿಭೆ ಎಷ್ಟೆಲ್ಲ ರೀತಿಯಲ್ಲಿ ಛಂದೋ ವೈವಿಧ್ಯವನ್ನು ಸಾಧಿಸುತ್ತ ನಡೆದಿದೆ ಎಂಬುದು ಗೋಚರ ವಾದೀತು. ಸಾಂಗತ್ಯ ಛಂದಸ್ಸಿನ ಲಕ್ಷಣ ಹೀಗೆಂದು ಹೇಳಬಹುದು:

ವಿಷ್ಣು ವಿಷ್ಣು ವಿಷ್ಣು ವಿಷ್ಣು
ವಿಷ್ಣು ವಿಷ್ಣು ಬ್ರಹ್ಮ
ವಿಷ್ಣು ವಿಷ್ಣು ವಿಷ್ಣು ವಿಷ್ಣು
ವಿಷ್ಣು ವಿಷ್ಣು ಬ್ರಹ್ಮ

ಚೌಪದಿ ರೂಪದಲ್ಲಿರುವ ಸಾಂಗತ್ಯವನ್ನು ಪೂರ್ವಾರ್ಧ ಮತ್ತು ಉತ್ತರಾರ್ಧ ಎಂದು ಎರಡು ಭಾಗ ಮಾಡಬಹುದು.

ವಿ       ವಿ            ವಿ  ವಿ
ಪರಮ  ಪರಂಜ್ಯೋತಿ ಕೋಟಿ  ಚಂದ್ರಾದಿತ್ಯ
ವಿ        ವಿ
ಕಿರಣ  ಸುಜ್ಞಾನ ಪ್ರಕಾಶ
ವಿ        ವಿ      ವಿ       ವಿ
ಸುರರ  ಮಕುಟಮಣಿ  ರಂಜಿತ  ಚರಣಾಬ್ಜ
ವಿ      ವಿ       ವಿ
ಶರಣಾಗು  ಪ್ರಥಮ  ಜಿನೇಶ

ಆದರೆ ಅರ್ಥಯತಿ ದೃಷ್ಟಿಯಿಂದ ಇಲ್ಲೇ ಸಾಕಷ್ಟು ವೈವಿಧ್ಯವಿರುವುದು ಸ್ಪಷ್ಟ. ಆಗ

ಪರಮ
ಪರಂಜ್ಯೋತಿ
ಕೋಟಿ ಚಂದ್ರಾದಿತ್ಯ
ಕಿರಣ
ಸುಜ್ಞಾನ ಪ್ರಕಾಶ

ಎಂದು ಮೊದಲ ಅರ್ಧದ ಪ್ರಸ್ತಾರ ಹಾಕಬಹುದು. ಅಂದರೆ ಬ್ರಹ್ಮ , ವಿಷ್ಣು, ಬ್ರಹ್ಮ ಮತ್ತು ರುದ್ರ, ಬ್ರಹ್ಮ, ವಿಷ್ಣು + ಬ್ರಹ್ಮ ಎಂದಾಗುತ್ತದೆ. ಕೋಟಿ ಚಂದ್ರಾದಿತ್ಯ ಎನ್ನುವುದನ್ನು ಕೋಟಿ, ಚಂದ್ರಾದಿತ್ಯ ಎಂದು ಎರಡು ಪ್ರತ್ಯೇಕ ಗಣಗಳಾಗಿಯೂ ಗಮನಿಸಬಹುದು. ಹಾಗೆಯೇ ಸುಜ್ಞಾನ ಪ್ರಕಾಶ ಎಂಬುದನ್ನು ಮಾಡಬಹುದು, ಇರಲಿ.

ಅಂಶಗಣ ಛಂದಸ್ಸಿನ ವೈಶಿಷ್ಟ್ಯಗಳು ಪ್ರಧಾನವಾಗಿ ಎರಡು. ಒಂದು ಹ್ರಸ್ವ (ಲಘು) ವನ್ನು ದೀರ್ಘ (ಗುರು) ಆಗಿ ವಿಸ್ತಾರ ಮಾಡಬಹುದು. ಗುರುವನ್ನು ಲಘುವಾಗಿ ಸಂಕೋಚಗೊಳಿಸಬಹುದು. ಗೇಯತೆಗೆ ಭಂಗ ಬಾರದಂತೆ. ಎರಡು – ಬ್ರಹ್ಮಗಣದ ಬದಲು ವಿಷ್ಣು ಅಥವಾ ರುದ್ರ ಗಣಗಳು ಬರಹಹುದು. ಇಷ್ಟೆಲ್ಲ ನಮ್ಯತೆ ಸಾಧ್ಯವಾಗುವುದು ಈ ಛಂದಸ್ಸಿನ ಗೇಯತೆಯ ಸೊಗಸನ್ನು ವೃದ್ಧಿಗೊಳಿಸಿ ಕೊಳ್ಳುವುದಕ್ಕಾಗಿ.

ಆದ್ದರಿಂದಲೇ ಸಾಂಗತ್ಯ ಛಂದಸ್ಸಿನ ವಿಭಿನ್ನ ರಚನೆಗಳನ್ನು ಗಮನಿಸಿದರೆ ಈ ರೀತಿಯ ಗಣಗಳ ವಿಪರ್ಯಯ (ಒಂದರ ಬದಲು ಮತ್ತೊಂದು ಗಣ ಬರುವುದು) ವಿಶೇಷವಾಗಿ ಮೊದಲು ಮತ್ತು ಮೂರನೆಯ ಸಾಲುಗಳಲ್ಲಿ. ಏಕೆಂದರೆ ಅಲ್ಲಿ ಎರಡು ಮತ್ತು ನಾಲ್ಕನೆಯ ಸಾಲುಗಳಿಗಿಂತ ಹೆಚ್ಚು ವಿಸ್ತಾರ (ಅವಕಾಶ) ಇರುವುದರಿಂದ ಅಲ್ಲಿ ಗಣಗಳು ಬದಲಾಗುವ ಸಾಧ್ಯತೆಗಳು ಹೆಚ್ಚು ಎನ್ನಬಹುದು.

ಉದಾಹರಣೆಗೆ ಸಾಂಗತ್ಯ ಛಂದಸ್ಸಿನ ಮೇರುಕೃತಿ ಎಂದೇ ಖ್ಯಾತವಾಗಿರುವ ಭರತೇಶ ವೈಭವದ ಈ ಕೆಲವು ಉದಾಹರಣೆಗಳನ್ನು ಗಮನಿಸಬಹುದು.

. ಮುಂದಾದರಮೃತ ಸಮುದ್ರಕೆ ನಾನೊಬ್ಬನೆ
ಹಿಂದಾದೆನಕಟ ಹಾಯೆಂದ.
ಪು. ೨೨೪, . ೨೯

. ಮುಡಿವಾಳ ಮೊಲ್ಲೆ ಮಲ್ಲಿಗೆಯನಾನೆಯ ಮೇಲ
ಕಿಡುತುಬ್ಬಿ ಜಯಯೆಂದರೊಸೆದು
ಪು. ೨೧೮, . ೯೧

. ಎಡೆಯಾಡುತಿಹದೋಣಿ ದುಗ್ಗಿ ಕೊಪ್ಪಲು ದೊಡ್ಡ
ಹಡಗುಗಳಿಂದ ನೋಡಿದನು.
ಪು. ೨೩೩, . ೯೬

ಮೊದಲ ಉದಾಹರಣೆಯ ಸಾಲಿನ ಕೊನೆಯ ಗಣ ರುದ್ರವಾಗಿದೆ. ಎರಡನೆಯ ಉದಾಹರಣೆಯ ಲಯ ವಿನ್ಯಾಸವೇ ಭಿನ್ನವಾಗಿದೆ. ಮೊದಲ ಗಣ ವಿಷ್ಣು (ಮಡಿವಾಳ = ⋃ ⋃ – ⋃) ಎರಡನೆಯ ಗಣ ಬ್ರಹ್ಮ (ಮೊಲ್ಲೆ = – ⋃) ಮೂರನೆಯ ಗಣ ರುದ್ರ (ಮಲ್ಲಿಗೆಯ = – ⋃ ⋃ ⋃) ನಾಲ್ಕನೆಯ ಗಣ ವಿಷ್ಣು ಮತ್ತು ಬ್ರಹ್ಮಗಳನ್ನು (ಆರನೆಯ ಮೇಲ = – ⋃ ⋃ + – ⋃) ಪಡೆದಿದೆ. ಆದರೆ ಛಂದಸ್ಸಿಗಾಗಿ ಮಡಿವಾಳ, ಮೊಲ್ಲೆ ಮಲ್ಲಿಯ ನಾನೆಯ ಮೇಲೆ ಎಂದು ಓದಿ ನಾಲ್ಕು ವಿಷ್ಣು ಗಣಗಳಂತೆಯೂ ಓದಬಹುದು. ಆದರೆ ಪದಗಳನ್ನು ಅಲ್ಲಲ್ಲೆ ಒಡೆಯಬೇಕಾಗುತ್ತದೆ. ಪದಗಳ ಜೀವಸ್ವರಗಳನ್ನು ಭೇದಿಸಬೇಕಾಗುತ್ತದೆ.

ಮೂರನೆಯ ಉದಾಹರಣೆಯಲ್ಲಿ ಎಡೆಯಾಡುತಿಹದೋಣಿ, ಎರಡು ವಿಷ್ಣು ಗಣಗಳಾಗುತ್ತವೆ. ಮುಂದೆ ಬ್ರಹ್ಮಗಣ (ಮಗ್ಗಿ = – ⋃) ಮುಂದಿನದು ವಿಷ್ಣು ಮತ್ತು ಬ್ರಹ್ಮ ಗಣಗಳಾಗುತ್ತವೆ (ಕೊಪ್ಪಲು + ದೊಡ್ಡ = – ⋃ ⋃ –, – ⋃) ಅಂದರೆ ವಿಷ್ಣು ಗಣಗಳ ಕಡೆ ಬ್ರಹ್ಮ ಅಥವಾ ರುದ್ರಗಣಗಳು ಬುರುವುದುಂಟು.

ಕರ್ಣಾಟ ಜಾತಿಯ ಛಂದಸ್ಸುಗಳಲ್ಲಿ ಹದಿಮೂರನೇ ಶತಮಾನದಲ್ಲಿ ಕಾಣಿಸಿಕೊಂಡ ಈ ಛಂದಸ್ಸು ಇಪ್ಪತ್ತನೆಯ ಶತಮಾನದಲ್ಲೂ ಗೇಯ ಛಂದಸ್ಸಾಗಿಯೇ ಉಳಿದಿರುವುದು, ಅಂಬಿಕಾತಯದತ್ತರು ತಮ್ಮ ಖಂಡಕಾವ್ಯ ಸಖೀಗೀತವನ್ನು ಈ ಛಂದಸ್ಸಿನಲ್ಲಿ ಗೇಯವಾಗಿಯೇ ಬಳಸಿರುವರು. ಈ ಬಗ್ಗೆ ಶ್ರೀಯವರು “ಗಣಗಳು ಮಾತ್ರಾಗಣಕ್ಕೆ ತಿರುಗಿಲ್ಲ” (ಪು. ೧೩೩, ಕನ್ನಡ ಕೈಪಿಡಿ) ಎಂಬ ಹೇಳಿಕೆಯನ್ನು ಇಂದಿಗೂ ಅನ್ವಯಿಸಬಹುದಾಗಿದೆ.

ಅಂಶಗಣ ಛಂದಸ್ಸಿಗೆ ಷಟ್ಟದಿ ಕೂಡ ಅಂಶಗಣ ಬದ್ಧವೇ ಆಗಿದ್ದು ಆಗ ಒಂದೇ ಆಗಿದ್ದ ಷಟ್ಟದಿ ಆರಾಗಿ ರೂಪುಗೊಂಡಿರುವುದನ್ನು , ಅಂಶಗಣಗಳು ಮಾತ್ರಾಗಣ ಗಳಾಗಿರುವುದನ್ನು ಅವುಗಳಲ್ಲಿ ವಾರ್ಧಕ ಷಟ್ಟದಿ ಮತ್ತು ಭಾಮಿನಿ ಷಟ್ಟದಿಗಳು ವಿಶೇಷವಾಗಿರುವುದನ್ನು ನೋಡಬಹುದು.

ಮಾತ್ರಾಗಣಗಳಿಗೆ ಬಂದರೆ ಅವುಗಳ ಮೂಲ ಅಂಶ ಮಾತ್ರೆಗಳೇ ಆಗಿದ್ದು ಮೂರು ಮಾತ್ರೆಗಳ ಗಣಗಳನ್ನು ಉತ್ಸಾಹ ಲಯವೆಂದೂ ನಾಲ್ಕು ಮಾತ್ರೆಗಳ ಗಣವನ್ನು ಮಂದಾನಿಲ ಲಯವೆಂದೂ ಐದು ಮಾತ್ರೆಗಳ ಗಣಗಳನ್ನು ಲಲಿತ ಲಯವೆಂದೂ ಗುರುತಿಸುವುದಿದೆ. ಮೂರು ಮಾತ್ರೆಗಳ ಎರಡು ಗಣಗಳ ಸಂಯೋಜನೆಯಿಂದ ಆರು ಮಾತ್ರೆಗಳ ಗಣಗಳನ್ನೂ ಮೂರು ಮತ್ತು ನಾಲ್ಕು ಮಾತ್ರೆಗಳ ಗಣಗಳ ಸಂಯೋಜನೆಯಿಂದ ವಿಷಮ ಲಯವನ್ನು ಸಾಧಿಸಬಹುದು. ನವೋದಯ ಕನ್ನಡ ಛಂದಸ್ಸನ್ನು ಕುರಿತ ವಿವೇಚನೆಯಲ್ಲಿ ಇದನ್ನೇ ಸವಿಸ್ತಾರವಾಗಿ ವಿವರಿಸುವುದರಿಂದ ಇಲ್ಲಿ ಅದನ್ನು ವಿಶ್ಲೇಷಿಸಿಲ್ಲ.

ಅಂಶ ಗಣಗಳಿಗೆ ಬ್ರಹ್ಮ, ವಿಷ್ಣು ಮತ್ತು ರುದ್ರ ಎಂದು ಹೆಸರಿಟ್ಟಿರುವುದರ ಹಿಂದಿರುವ ಆಶಯವನ್ನು ಗುರುತಿಸುವುದು ಇಂದು ಕಷ್ಟವಾಗಿದೆ. ಟಿ. ಎಸ್. ವೆಂಕಣ್ಣಯ್ಯನವರು ಬ್ರಹ್ಮನಿಗಿಂತಲು ವಿಷ್ಣುವೂ ವಿಷ್ಣುವಿಗಿಂತಲೂ ರುದ್ರನೂ ಅಧಿಕನೆಂಬ ಆಭಿಪ್ರಾಯ ಇರಬಹುದು ಎಂದಿದ್ದಾರೆ. ವೆಂಕಟಾಚಲ ಶಾಸ್ತ್ರಿಗಳು ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳ ಸೂಚನೆ ಈ ದೇವತೆಗಳ ಹೆಸರನ್ನಿಡುವುದರ ಹಿಂದಿರಬಹುದು ಎನ್ನುತ್ತಾರೆ.

ವೃತ್ತಗಳಿಗೆ ಮಾಲಿನೀ, ಮತ್ತೇಭವಿಕ್ರೀಡಿತ, ಶಾರ್ದೂಲ ವಿಕ್ರೀಡಿತ, ಸ್ರಗ್ಧರಾ, ಮಹಾಸ್ರಗ್ಧರಾ ಮುಂತಾದ ಹೆಸರುಗಳು ಇದ್ದ ಹಾಗೆಯೇ ಅಂಶಗಣಳಿಗೆ ಕೊಟ್ಟಿರುವ ಹೆಸರುಗಳು ಕೂಡ ಇವೆ ಎಂದುಕೊಳ್ಳುವುದು ಸೂಕ್ತವೇನೋ. ಏಕೆಂದರೆ ಬ್ರಹ್ಮಗಣಗಳನ್ನು ತೆಲುಗಿನಲ್ಲಿ ಸೂರ್ಯ ಗಣವೆಂದೂ ವಿಷ್ಣುಗಣವನ್ನು ಚಂದ್ರಗಣವೆಂದೂ ರುದ್ರಗಣವನ್ನು ಚಂದ್ರಗಣವೆಂದೂ ಹೆಸರಿಸಲಾಗಿದೆ. ತಮಿಳಿನಲ್ಲಿ ಇವುಗಳನ್ನು ಅನುಕ್ರಮವಾಗಿ ಇಯಱ್ ಚೀರ್, ವೆಣ್‌ಚೀರ್ ಮತ್ತು ಪೋದುಚ್ಚೀರ್ ಎಂದು ಕರೆದಿದ್ದಾರೆ. ರೂಡಿಯಲ್ಲಿ ಈಗ ಇವನ್ನು ಈರಶೈಶೀರ್, ಮೂರಶೈಶೀರ್ ಮತ್ತು ನಾಲಶೈಶೀರ್ ಎಂದೇ ಹೇಳಲಾಗುತ್ತಿದೆ.

[1] ಈ ಉದಾಹರಣೆಗಳು ಕನ್ನಡ ಕೈಪಿಡಿ (ಪು. ೧೫೪-೫) ಯಿಂದ ಎತ್ತಿಕೊಂಡವು

[2] ಬಾದಾಮಿಯು ಶಾಸನವೊಂದರಲ್ಲಿ ‘ಪುರಾಕೃತ….’ ಪದ ಬಳಕೆಯಲ್ಲಿ ಇಂಥ ಒಂದು ಪ್ರಯೋಗವೂ ಇದೆ.