ಛಂದಸ್ಸನ್ನು ಕುರಿತು ಚಿಂತಿಸುವಾಗ ನಾವು ಪದ್ಯವನ್ನಷ್ಟೇ ಗಮನದಲ್ಲಿರಿಸಿ ಕೊಳ್ಳಬೇಕಲ್ಲವೆ!

ಛಂದಶ್ಯಾಸ್ತ್ರವನ್ನು ಪರಿಶೀಲಿಸಿದಾಗ ಸಹಜವಾಗಿಯೇ ಕನ್ನಡ ಸಂಸ್ಕೃತದಿಂದಲೇ ತನ್ನ ಚಿಂತನೆಯನ್ನು ಆರಂಭಿಸಬೇಕಾದುದು ಅಗತ್ಯವಾಗಿದೆ. ಇದಕ್ಕೆ ಕಾರಣ ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧ; ಶಾಸ್ತ್ರಗಳು ಸಂಸ್ಕೃತದಿಂದ ಪಡೆದ ಪ್ರೇರಣೆ ಹಾಗೂ ಸ್ಫೂರ್ತಿಗಳು. ಕನ್ನಡ ಛಂದಸ್ಸಿನ ಬಗೆಗೆ ಚಿಂತನೆ ನಡೆಸಿದ ಕವಿರಾಜಮಾರ್ಗಕಾರ ಹಾಗೂ ನಾಗವರ್ಮ ಮೊದಲಾದವರು ಸಂಸ್ಕೃತ ಛಂದಸ್ಸಿನ ಇತಿಹಾಸದಿಂದಲೇ ಕನ್ನಡ ಛಂದಸ್ಸಿನ ಇತಿಹಾಸವನ್ನು ಆರಂಭ ಮಾಡುವುದು ಇದೇ ಕಾರಣಕಾಗಿಯೇ. ಇದರ ಅರ್ಥ ಕನ್ನಡ ಛಂದಸ್ಸು ಇರಲಿಲ್ಲ. ಸಂಸ್ಕೃತ ಛಂದಸ್ಸಿನ ಹಿನ್ನೆಲೆಯಲ್ಲಿ ಕನ್ನಡ ಛಂದಸ್ಸು ಕಾಂತಿಗೊಂಡ ಬಗೆಯನ್ನು ಅಷ್ಟಿಷ್ಟಾದರೂ ಅವರು ಗಮನಿಸಿದುದರ ಸೂಚನೆಯನ್ನು ಯತಿ ಮತ್ತು ಗಣಗಳನ್ನು ಕುರಿತ ನಿರೂಪಣೆಯಲ್ಲಿ ಗಮನಿಸಬಹುದಾಗಿದೆ. ನಾಗವರ್ಮ ಅಯಾವೃತ್ತ ಮತ್ತು ಕಂದವೃತ್ತಗಳ ಲಕ್ಷಣಗಳನ್ನು ಹೇಳುವಾಗ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ.

ಕನ್ನಡ ಛಂದಸ್ಸಿನ ವಿವಿಧ ಸ್ವರೂಪಗಳನ್ನು ಏಳೆ, ಚಿತ್ರಲತಿಕೆ, ತ್ರಿಪದಿ, ಅಕ್ಕರ ಮೊದಲಾದ ಛಂದಸ್ಸುಗಳನ್ನು ನಿರೂಪಿಸುವಾಗ ಆತ ಖಚಿತವಾಗಿಯೆ ಕನ್ನಡ ವೃತ್ತಗಳ ವೈಶಿಷ್ಟ್ಯಗಳನ್ನು ಗುರುತಿಸುವುದನ್ನು ಕಾಣಬಹುದು. ಇಷ್ಟೆಲ್ಲ ಛಂದಸ್ಸಿನ ರಹಸ್ಯವನ್ನು ಅರಿಯುವ ಸೂಕ್ಷ್ಮ ಸಂವೇದನೆಯುಳ್ಳ ನಾಗವರ್ಮ ಜಾನಪದ ಛಂದಸ್ಸುಗಳನ್ನು – ಕೋಲಾಟದ ಪದಗಳು, ಕೊರವಂಜಿ ಗೀತೆಗಳು, ಲಾವಣಿಗಳು, ಓವನಿಗೆಗಳನ್ನು ಮೊದಲಾದವುಗಳ – ಲಕ್ಷಣಗಳನ್ನು ಗುರುತಿಸಲು ಯತ್ನಿಸದಿರುವುದು ವಿಸ್ಮಯಕಾವಾದ ಅಂಶವಾಗಿದೆ.

[1]

. ಯತಿರ್ವಿಚ್ಛೇದಃ ಪಿಗಲಃ ಛಂದಶಾಸ್ತ್ರ ೬-೧
. ನಿಯತಃ ಪದವಿಚ್ಛೇದೋ ಯತಿರಿತ್ಯಭಿದೀಯತೇ ಭರತ ನಾಟ್ಯಶಾಸ್ತ್ರ ೧೫-೯೦
. ಯತಿಃ ಪದಚ್ಛೇದಃ ಜಾನಾಶ್ರಯೀ ಛಂದೋವಿಚಿತಿ ೧-೪೦
. ಯತಿರ್ವಿಚ್ಛೇದ ಸಂಜ್ಞಿತಾ ಕೇದಾರಭಟ್ಟ ವೃತ್ತರತ್ನಕಾರ ೧-೧೧
. ವಿರಾಮೋ ಯತಿಃ ಜಯದೇವ ಜಯದೇವಚ್ಛಂದಸ್‍ ೧-೯
. ವಾಗ್ವಿರಾಮೋ ಯತಿಃ ಸ್ಯಾತ್ಸಂಸ್ಥಾಪ್ಯತೇ ಶ್ರುತಿಸುಂದರಮ್ ಪಾದಾನ್ತೇ ಸೂಚಿತಸ್ಥಾನೇ ಯುಕ್ತ್ವಾದಾನ್ತೇ ವಿಶೇಷತಃ ಜಯಕೀರ್ತಿ: ಛಂದೋನುಶಾಸನ ೧-೧೦
. ಶ್ರವ್ಯೋ ವಿರಾಮೋ ಯತಿಃ ಹೇಮಚಂದ್ರ ಛಂದೋನುಶಾಸನ ೧-೧೫
. ಯತಿರ್ಜಿಹ್ವೇಷ್ಟ ವಿಶ್ರಾಮಸ್ಥಾನಂ ಗಂಗಾದಾಸ -ಛಂದೋಮಂಜರಿ ೧-೧೨

ಪಿಗಲನ ಛಂದಾಶಾಸ್ತ್ರಕ್ಕೆ ವ್ಯಾಖ್ಯಾನ ಬರೆಯುವ ಭಟ್ಟ ಹಲಾಯುಧ ಯತಿಯು ಸರ್ವತ್ರ ಪಾದಾಂತ್ಯದಲ್ಲಿ ಬರುತ್ತದೆ; ಶ್ಲೋಕಾರ್ಧದಲ್ಲಿ ವಿಶೇಷ ಮತ್ತೆ ಪದ ಮಧ್ಯದಲ್ಲಿಯೂ ಕೆಲವೊಮ್ಮೆ ಬರುವುದುಂಟು ಎನ್ನುತ್ತಾನೆ.

ವೈದಿಕ ಛಂದಸ್ಸನ್ನು ಕಂಡು ವೇಲಣಕಾರರು ಹೇಳಿರುವ ಮಾತುಗಳನ್ನು ಗಮನಿಸಿ:

All these vedic metres are based on the Svara Sangita or the music of voice-modulation. Where the time element plays no important role in prodution of the metrical music. ಇಲ್ಲಿ ಕಾಲದ ಗಂಟೆ ಅಷ್ಟು ಮುಕ್ಯವಾಗುವುದಿಲ್ಲ. ಇಲ್ಲಿ ‘ಯತಿ’ ಎನ್ನುವುದು ವಿಶೇಷತಃ ಉಸಿರ್ದಾಣವಾಗಿಯೇ ಇರುವುದು.

ಈ ಹಿನ್ನೆಲೆಯಲ್ಲಿ ನೋಡಿದಾಗ ಶ್ಲೋಕ ಛಂದಸ್ಸಿನ ಕೊನೆಯಲ್ಲಿ ನಿಯತವಾಗಿ ಬರುವ ದ್ವಿಲಗ ರಚನೆಯ ಸಾಮಾನ್ಯವಾಗಿ ಯತಿ ಸ್ಥಾನನಿರ್ದೇಶನ ಮಾಡುವಂಥದ್ದೂ ಆಗಿರುತ್ತದೆ.

ಉದಾಹರಣೆಗೆ ಯತಿ ಈ ಸಾಲುಗಳನ್ನು ಗಮನಿಸಿ:

ಕೂಜನ್ತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್||

ಮೇಲಿನ ಎರಡು ಸಾಲುಗಳ ಕೊನೆಗೆ ⋃ – ⋃ – ರಚನೆಯಿದೆ; ಆಶ್ಚರ್ಯವೆಂದರೆ ಈ ದ್ವಿಲಗ ರಚನೆಯ ಹಿಂದೆ ಪ್ರತಿಭೆ ಸಾಧಿಸುವ ವೈವಿಧ್ಯವನ್ನು ಗಮನಿಸಬೇಕು. ವಾಸ್ತವವಾಗಿ ಮೊದಲ ಸಾಲನ್ನು ಉಚ್ಚರಿಸುವಾಗ ‘ಮಧುರಂ ಮಧುರಾಕ್ಷರಂ’ ಎಂಬಲ್ಲಿ (⋃⋃ –) ಮಧುರಂ ಮಧುರಾಕ್ಷರಂ (⋃⋃ – ⋃ –) ಎಂಬ ರಚನೆಗಳಲ್ಲಿ ದ್ವಿಲಗೋಚ್ಚಾರಣೆಯೇ ಪ್ರಧಾನವಾಗಿದೆ ಎಂದರೆ ಖಂಡಿತ ಇಲ್ಲ. ಅಲ್ಲಿ ಯತಿ ಮಧುರಂ ಎಂಬಲ್ಲಿ ಒಮ್ಮೆ ಮಧುರಾಕ್ಷರಂ ಎಂಬಲ್ಲಿ ಒಮ್ಮೆ ಬರುತ್ತದೆ. ಅಂದರೆ ಶ್ಲೋಕ ಛಂದಸ್ಸಿನ ಕೊನೆಯ ದ್ವಿಲಗ ನಿಯಮದೊಳಗೇ ಕವಿ ಸಾಧಿಸುವ ವಿವಿಧತೆ ಆಸಾಧಾರಣ.

ಎರಡನೆಯ ಸಾಲಿಗೆ ಬಂದರೆ ಅಲ್ಲಿಯೂ ಕೊನೆಗೆ ಯತಿಸ್ಥಾನ ಬರುವುದು ವಂದೇ ವಾಲ್ಮೀಕಿ ಕೋಕಿಲಂ ಎಂಬಲ್ಲಿ.

ಇಲ್ಲಿಯೂ ಕೊನೆಗೆ ದ್ವಿಲಗ (⋃ – ⋃ – ) ರಚನೆಯೇ (ಕಿ ಕೋಕಿಲಂ ⋃ – ⋃ – ) ಇದೆ, ಆದರೆ ಅದು ಯಾಂತ್ರಿಕವಾಗಿಲ್ಲ.

ವಂದೇ (– –) ವಾಲ್ಮೀಕಿ (– – ⋃) ಕೋಕಿಲಂ (– ⋃ –) ವಿನ್ಯಾಸವನ್ನು ಪಡೆದಿದೆ.

ಇಷ್ಟೆಲ್ಲವನ್ನು ವಿವರಿಸುವ ಉದ್ದೇಶ ಯತಿಯನ್ನು ಪದ ವಿಚ್ಛೇದಿಸುವ ಅಥವಾ ವಾಗ್ವಿರಾಮವನ್ನು ಸೂಚಿಸುವ ಸಂಜ್ಞೆಯಾಗಿ ಛಂದಶಾಸ್ತ್ರದಲ್ಲಿ ಬಳಸಲಾಗುತ್ತಿದೆ ಎಂಬುದನ್ನು ಸೂಚಿಸವುದು.

ಹಾಗಾದರೆ ಈ ಯತಿ ಎಲ್ಲಿ ಬರಬೇಕು ಎಂಬ ಪ್ರಶ್ನೆಗೆ ಸಂಸ್ಕೃತದ ಲಾಕ್ಷಣಿಕರಲ್ಲಿ ಜಯ ಕೀರ್ತಿಯು ಪಾದದ ಅಂತ್ಯದಲ್ಲಿ ಮತ್ತೆ ಎರಡು ಮತ್ತು ನಾಲ್ಕನೆಯ ಪಾದಗಳ ಅಂತ್ಯದಲ್ಲಿ (ವಿಶೇಷವಾಗಿ); ಅನಂತರ ಛಂದಶಾಸ್ತ್ರಜ್ಞರು ಸೂಚಿಸುವ ಕಡೆಗಳಲ್ಲಿ ಎನ್ನುತ್ತಾನೆ.

ಪಾದಾಂತ್ಯಲ್ಲಿ ಎಂಬುದು, ಮತ್ತೆ ಎರಡು ಮತ್ತು ನಾಲ್ಕನೆಯ ಪಾದಗಳ ಅಂತ್ಯದಲ್ಲಿ ಎಂಬಂಶಗಳು ವಿಶೇಷತಃ ಶ್ಲೋಕ ಛಂದಸ್ಸಿಗೆ ಅನ್ವಯವಾಗುವಂಥವು. ಇನ್ನು ಶಾಸ್ತ್ರಜ್ಞರು ಸೂಚಿಸಿದ ಕಡೆಗಳಲ್ಲಿಯೂ ಯತಿಯ ಬರಬಹುದೆಂಬುದು ವಿವಿಧ ರೀತಿಯ ಛಂದಸ್ಸು (ಚಂಪಕ ಮಾಲಾವೃತ್ತ, ಉತ್ಪಲ ಮಾಲಾವೃತ್ತ ಇತ್ಯಾದಿ)ಗಳ ರಚನೆಗಳಿಗೆ ಸಂಬಂಧಿಸಿದ ಅಂಶವೆಂದು ಗ್ರಹಿಸಬಹುದು. ಏಕೆಂದರೆ ವೈದಿಕ ಮಂತ್ರ ಪಠನದಲ್ಲಿ ಕೇವಲ ಸೌಲಭ್ಯಕ್ಕಾಗಿ ಅಲ್ಲಲ್ಲಿ ನಿಲ್ಲಿಸಿ ಉಸಿರಾಡಲು ಅವಕಾಶ ಮಾಡಿಕೊಳ್ಳುತ್ತಿದ್ದರು. ಲೌಕಿಕ ವೃತ್ತಗಳು ಬಳಕೆಯಾಗತೊಡಗಿದಾಗಲೂ ಸೌಲಭ್ಯಕ್ಕಾಗಿ ಬಳಕೆಯಾಗುವಂತೆ ಹೀಗೆ ನಿಲ್ಲಿಸುವ ಕ್ರಮವನ್ನು ಯತಿ ಎಂದುಕೊಂಡಂತಿದೆ. ಈ ಹಂತದಲ್ಲಿ ಯತಿ ವಿರಾಮ ಸ್ಥಾನವಾಗಿ ತೋರಿದೆ. ಇದರಿಂದಾಗಿ ಯತಿಯನ್ನು ‘ವಿಚ್ಛೇದ ಸಂಜ್ಞಿತಾ’ ಎಂದೂ ‘ಪಾದ ವಿಚ್ಛೇದಕ ಸ್ಥಾನ’ ಎಂದೂ ‘ಶ್ರುತಿ ಸುಂದರ’ ಎಂದೂ ಭಾವಿಸಿ ಇದನ್ನೊಂದು ನಿಯಮವಾಗಿ ಮಾಡಿದರು. ಆಗ ಇಂಥಿಂಥ ಪದ್ಯಗಳಲ್ಲಿ ಇಂಥಿಂಥ ಕಡೆಯೇ ಯತಿ ಇರಬೇಕೆಂಬ ನಿಯಮವನ್ನು ಮಾಡಿದರು. ಹೀಗೆ ಚಿಂತಿಸುವಾಗ ಯತಿಯು ಸಾಲಿನ ರಚನೆಯ ಅಂಗಮಾತ್ರವಾಗುತ್ತದೆ. ಆಗ ಅಲ್ಲಿ ಅದು ಅರ್ಥ ಕಾರಣ ಅಗುತ್ತದೆಯೊ ಇಲ್ಲವೊ ಎಂಬುದರತ್ತ ಅಷ್ಟು ಗಮನವಿರುವಂತೆ ತೋರುವುದಿಲ್ಲ.

ಇಂಥ ಸಂದಿಗ್ಧತೆಯನ್ನು ಕುರಿತೇ ಯತಿಯು ಇರಬೇಕು; ಇರಬಾರದು ಎಂಬ ಎರಡು ಚಿಂತನೆಗಳು ಹುಟ್ಟಿಕೊಂಡಿದ್ದು. ಜಯಕೀರ್ತಿ ಇಂಥ ಸಂದಿಗ್ಧವನ್ನು ಗಮನಿಸಿಯೇ ಹೇಳಿದ್ದು ಹೀಗೆ:

ವಾಂಛಂತಿ ಯತಿಂ ಪಿಂಗಲವಸಿಷ್ಠ ಕೌಂಡಿನ್ಯ ಕಪಿಲ ಕಂಬಲ ಮುನಯಃ
ನೇಚ್ಛಂತಿ ಭರತಕೋಹಲ ಮಾಣ್ಡವ್ಯಾಶ್ವತರಸೈತವಾದ್ಯಾಃ ಕೇಚಿತ್ ೧೩

ಅಂದರೆ ಪಿಗಲ ವಸಿಷ್ಠ ಕೌಂಡಿನ್ಯ ಕಪಿಲ ಕಂಬಲ ಮುನಿಗಳು ‘ಯತಿ’ ಯನ್ನು ಬಯಸುತ್ತಾರೆ. ಅದರೆ ಭರತ ಕೋಹಲ ಮಾಂಡವ್ಯ ಅಶ್ವತರ ಸೈತವ ಮೊದಲಾದವರು ಇಚ್ಛಿಸುತ್ತಿಲ್ಲ.

ಇದೇ ಆಬಿಪ್ರಾಯವನ್ನು ನಾಗವರ್ಮ ಕೂಡ ಸೂಚಿಸಿರುವುದು ಹೀಗಿದೆ:

ಯತಿಯೆಂಬುದು ಗಣನಿಯಮ
ಪ್ರತೀತಮೆಂದರೆಬರೊಲ್ವರಂತದನೆ ಕೆಲರ್
ಶ್ರುತಿಸುಭಗಂ ಸ್ವಚ್ಛಂದಂ
ಯತಿಯೆಂದಾ ಕಪಿಲ ಪಿಂಗಳಾದಿಗಳೊಲ್ಲರ್

ಈ ರೀತಿಯ ಭಿನ್ನಾಭಿಪ್ರಾಯದ ಹಿಂದೆ ಛಂದಸ್ಸಿನ ನಿಯಮವನ್ನು ಮುರಿಯುವ ಹಾಗೂ ಕಾವ್ಯದ ಸ್ವಾರಸ್ಯವನ್ನು ಹೆಚ್ಚಿಸುವ ಹವಣಿದ್ದಂತಿದೆ.

ಯತಿಯು ದೀರ್ಘವೃತ್ತಗಳಲ್ಲಿ ವಿರಾಮ ಸ್ಥಳವನ್ನು ನಿರ್ದೆಶಿಸುವುದಕ್ಕಾಗಿ ಆರಂಭವಾಯಿತಾದರೂ ಈ ವಿರಾಮ ಸ್ಥಾನವು ಇಂಥ ಕಡೆಯೇ ಬರಬೇಕು ಎಂದು ನಿಯಮ ಮಾಡುವುದು ಕಾವ್ಯಾರ್ಥಕ್ಕೆ ಹಾಗೂ ಕಾವ್ಯಾರ್ಥ ಕಾರಣವಾದ ರಚನೆಗೆ ಬಾಧಕ ಎಂಬುದನ್ನು ಲಾಕ್ಷಣಿಕರು ಬಹುಬೇಗ ಅರ್ಥಮಾಡಿಕೊಂಡಂತೆ ಕಾಣುತ್ತದೆ.

ಕನ್ನಡದಲ್ಲಿ ಈ ಯತಿಯನ್ನು ಕುರಿತು ನಡೆದ ಚಿಂತನೆಯ ಇತಿಹಾಸವನ್ನು ಒಮ್ಮೆ ಗಮನಿಸಬಹುದು.

ಕವಿರಾಜಮಾರ್ಗಕಾದ ಯತಿಯನ್ನು ಕುರಿತು ಹೇಳಿರುವುದು ಹೀಗೆದೆ:

ಯತಿಯೆಂಬುದುಸಿರ್ವ ತಾಣಂ
ಕೃತಾಸ್ಪದಂ ವೃತ್ತಜಾತಿ ಪದಪದ್ಧತಿಯೊಳ್
ಸಂತತಂ ಛಂದೋವಿದಿತ
ಪ್ರತೀತ ಶಾಸ್ತ್ರೋಕ್ತ ಮಾರ್ಗದಿಂದಱೆವುದದಂ ೭೧

ದೋಸಮನೆ ಗುಣದವೋಲು
ದ್ಭಾಸಿಸಿ ಕನ್ನಡದೊಳೊಲ್ದು ಪೂರ್ವಾಚಾರ್ಯರ್
ದೇಸಿಯನೆ ನಿಱೆಸಿ ಖಂಡ
ಪ್ರಾಸಮನತಿಶಯಮಿದೆಂದು ಯತಿಯಂ ಮಿಕ್ಕರ್೭೫

ಮೊದಲ ಪದ್ಯದಲ್ಲಿ ವೃತ್ತಜಾತಿಗಳ ಪದಪದ್ಧತಿಯಲ್ಲಿ ಯತಿ ಎನ್ನುವುದು ಉಸಿರ್ವತಾಣ. ಅಂದರೆ ಪದ್ಯವನ್ನು ಓದುವಾಗ ಉಸಿರನ್ನು ನಿಲ್ಲಿಸಬೇಕಾಗುವ ವಿಶ್ರಾಮ ಸ್ಥಾನ – ಅಂದರೆ ಸಂಸ್ಕೃತ ವೃತ್ತಗಳನ್ನು ಓದುವಾಗ ಪ್ರತಿಪಾದದಲ್ಲಿಯೂ ಒಂದು ನಿಯತವಾದ ಸ್ಥಾನದಲ್ಲಿ ನಿಲ್ಲಿಸಿ ಉಸಿರನ್ನು ಮತ್ತೆ ಪಡೆದುಕೊಂಡು ಅದನ್ನು ಮುಂದುವರೆಸಬೇಕಾಗುತ್ತದೆ.

ಅಂದರೆ ನಿಯತವಾದ ಸ್ಥಾನದಲ್ಲಿ ಸಂಸ್ಕೃತ ವೃತ್ತಗಳಲ್ಲಿ ಬರುತ್ತದೆಂಬ ಮಾತಾಗಿದೆ. ಇಲ್ಲಿ ಕವಿರಾಜ ಮಾರ್ಗಕಾರ ರೂಢಿಯಲ್ಲಿರುವ ಸಂಸ್ಕೃತದ ಲಾಕ್ಷಣಿಕರ ಅಭಿಪ್ರಾಯವನ್ನು ಸೂಚಿಸುತ್ತಿರುವಂತಿದೆ.

ಆದರೆ ಕನ್ನಡಕ್ಕೆ ಬಂದರೆ ಪೂರ್ವಾಚಾರ್ಯರು ದೇಸಿಯನೆ ನಿಱೆಸಿ ಖಂಡಪ್ರಾಸ ಮನತಿಶಯಮಿದೆಂದು ಯತಿಯಂ ಮಿಕ್ಕರ್‌ ಎನ್ನುತ್ತಾನೆ. ಅಂದರೆ ಕನ್ನಡಿಗರು ಸಂಸ್ಕೃತದ ‘ಯತಿ’ ಯ ಮಿತಿಯನ್ನು ಅಥವಾ ನಿಯಮವನ್ನು ದಾಟಿದವರು – ಖಂಡಪ್ರಾಸವನ್ನು ಉಳಿಸಿಕೊಂಡು ಎಂದು. ಇಲ್ಲಿ ಖಂಡಪ್ರಾಸವೆಂದರೆ ಆದಿಪ್ರಾಸವೇ ಹೊರತು ಬೇರೆನೂ ಅಲ್ಲ ಎಂದು ಮುಳಿಯ ತಿಮ್ಮಪ್ಪಯ್ಯನವರು ಹೇಳಿರುವರಾದರೂ ವಾಸ್ತವವಾಗಿ ಇದು ತ್ರಿಪದಿಯಲ್ಲಿ ಬರುವ ಖಂಡಪ್ರಾಸವಾಗಿದೆ ಎಂದು ತೋರುತ್ತದೆ.

ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ ಎಂಬಲ್ಲಿ ಬರುವ ‘ಹೆಜ್ಜೇನ’ ಎಂಬುದು ಖಂಡಪ್ರಾಸವಾದರೆ ಸಂಸ್ಕೃತದಲ್ಲಿರುವ ನಿಯತವಾದ ಸ್ಥಾನದಲ್ಲಿ ಯತಿ ಬರಬೇಕೆಂಬುದನ್ನು ಮೀರಿದ್ದಾರೆ ಎಂದೇ ಹೇಳಬೇಕಾಗಿದೆ. ಕವಿರಾಜ ಮಾರ್ಗಕಾರ ದೇಸೀವೃತ್ತದ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಿದ್ದರೆ – ಕೇಶಿರಾಜ ತನ್ನ ಶಬ್ಧಮಣಿ ದರ್ಪಣದಲ್ಲಿ ಬಹುದೊಡ್ಡ – ಅಂದರೆ ಕ್ರಾಂತಿಕಾರಕವಾದ ಅಂಶವೊಂದನ್ನು ಹೇಳುತ್ತಾನೆ – ಕನ್ನಡದ ವಿಶಿಷ್ಟತೆಯನ್ನು ಹೇಳುವ ಹಲವಾರು ಅಂಶಗಳಲ್ಲಿ ಯತಿ ವಿಲಂಗನವೂ ಒಂದು ಎಂದು. ಅದನ್ನು ಆತ ‘ಯತಿ’ ವಿಲಂಗನದಿಂದಱೆದಲ್ತೆ ಕನ್ನಡಂ” ಎನ್ನುತ್ತಾನೆ. ವಾಸ್ತವವಾಗಿ ಈ ಮಾತು ರೂಢಿಯಲ್ಲಿರುವ ಇನ್ನೊಂದು ಗಾದೆ ಇನ್ನಷ್ಟು ವಿಶದ ಪಡಿಸುತ್ತದೆ-

ಕನ್ನಡಕ್ಕೆ ಯತಿಯಿಲ್ಲ; ಕೋಣಕ್ಕೆ ಮನೆಯಿಲ್ಲಎಂಬಲ್ಲಿ,

ನಿಜವಾಗಿ ನಿಯತವಾದ ಸ್ಥಾನದಲ್ಲಿ ‘ಯತಿ’ = ಉಸಿರ್ದಾಣ ಬರುತ್ತದೆಂಬ ಸಂಸ್ಕೃತದ ನಿಯಮ ಕನ್ನಡದ ಕವಿತೆಗಳಿಗೆ ಅನ್ವಯವಾಗುವುದಿಲ್ಲ ಉದಾಹರಣೆಗೆ ಮಾತ್ರಾಕ್ಷರ ವೃತ್ತವಾದ ಕಂದ ಪದ್ಯವನ್ನೇ ಗಮನಿಸಬಹುದು.

ಇಲ್ಲಿ ಯತಿಯೆಂಬುದು ಆರನೆಯ ಗಣದ ಮೊದಲಕ್ಷರದ ಸ್ಥಾನದಲ್ಲಿ ಬರಬೇಕೆಂಬುದು ನಿಯಮ, ಆ ನಿಯಮಕ್ಕೆ ಮೊದಲ ಅಕ್ಷೇಪ ಹುಟ್ಟಿದ್ದು ಆರನೆಯ ಗಣ ಜಗಣವಾಗಿರಬೇಕಾಗಿದ್ದುದು ಸರ್ವಲಘುಗಳ ಗಣವೂ ಆಗುವ ಸಾಧ್ಯತೆ ಪಡೆದಾಗ. ಅನಂತರದ ಬೆಳವಣಿಗೆ ಎಂದರೆ ಕಂದಪದ್ಯದ ವಿನ್ಯಾಸವೇ ಕನ್ನಡದ್ದೇ ಎನ್ನಬಹುದಾದಷ್ಟು ವಿಶಿಷ್ಟವಾದದ್ದು. ಉದಾಹರಣೆಗೆ ವೃತ್ತ ಕಂದಗಳ ವಿಶ್ಲೇಷಣೆ ನಡೆದಿರುವ ಭಾಗಗಳನ್ನು ಗಮನಿಸಬಹುದು. ಸದ್ಯಕ್ಕೆ ಪಂಪನ ಈ ಪದ್ಯ ಗಮನಿಸಿ:

ಕದಲೀಗರ್ಭ ಶ್ಯಾಮಂ
ಮೃದು ಕುಟಿಲ ಶಿರೋರುಹಂ ಸರೋರುಹವದನಂ
ಮೃದು ಮಧ್ಯಮ ತನು
ಹಿತಮಿತಮೃದು ವಚನಂ
ಲಲಿತಮಧುರ ಸುಂದರ ವೇಷಂ

ಇಡೀ ಕಂದಪದ್ಯ ಐದು ವಿಭಿನ್ನ ವಾಕ್ಯಗಳಾಗಿ ರೂಪಿತವಾಗಿರುವಂತೆ ಒಂದೊಂದು ವಾಕ್ಯದ ಕೊನೆಗೆ ಯತಿ ಅರ್ಥಾನುಸಾರಿಯಾಗಿ ಬಂದಿರುವುದು ಗೊತ್ತಾಗುತ್ತದೆ.

ಅಂದರೆ ಕನ್ನಡಕ್ಕೆ ಸಂಸ್ಕೃತದ ‘ನಿಯತ’ ಸ್ಥಾನದ ಯತಿ ಇಲ್ಲ – ಸಂಸ್ಕೃತದ ಅಕ್ಷರವೃತ್ತಗಳನ್ನು ಕನ್ನಡದಲ್ಲಿ ಬಳಸುವಾಗಲೂ ಇದು ಮಾರ್ಯಾದಿತವಾಗಿಲ್ಲ. ಮಾತ್ರಾಕ್ಷರ ವೃತ್ತಗಳಾದ ಕಂದ ಮತ್ತು ರಘಟ ಛಂದಸ್ಸುಗಳಲ್ಲಿಯೂ ಇದು ಮಾನ್ಯವಾಗಿಲ್ಲ.

ತ್ರಿಪದಿ, ಚೌಪದಿ, ಷಟ್ಟದಿ ಮೊದಲಾದ ದೇಸೀವೃತಗಳಲ್ಲಿಯೂ ಇದು ಮಾನ್ಯವಾಗಿಲ್ಲ. ಉದಾಹರಣೆಗೆ ಸಮಪಾದ ವೃತ್ತವಾದ ಸ್ರಗ್ಧರೆಯಲ್ಲಿ ಪ್ರತಿಪಂಕ್ತಿಯಲ್ಲಿ ಇಪ್ಪತೊಂದು ಅಕ್ಷರಗಳಿದ್ದು ಏಳೇಳು ಅಕ್ಷರಗಳಿಗೆ ಒಮ್ಮೆ ಯತಿಯಿರಬೇಕೆಂದು ನಿರ್ದೇಶಿಸಿದರೂ ಹಾಗೆ ಆಗದಾಗ ಯತಿ ಭಂಗವೆಂದು ಹೇಳಿದರು. ಯತಿಯ ಒಂದು ರೀತಿಯಿದು. ಜಯಕೀರ್ತಿ ಇದನ್ನು “ಪಾದಾನ್ತೇ, ಸೂಚಿತಸ್ಥಾನೇ ಯುಕ್ಪಾದಾಂತೇ ವಿಶೇಷತಃ” ಎಂದುಬಿಟ್ಟನು. ಆದರೆ ಕನ್ನಡದ ಸ್ರಗ್ಧರೆ ಹೇಗೆ ಎಂಬುದನ್ನು ಗಮನಿಸಬೇಕು.

ಮುವತ್ತಾಱುಂ ಗುಣಂಗಳ್
ತಮಗೆ + ಅಮರ್ದಿರೆ
ಸಂದ + ಐದುಮಾಚಾರಗಳಂ
ತಿರ್ದಿ
ಕಾರುಣ್ಯದಿಂದಂ
ಸಾವದ್ಯಂ ಸಾರದಂತಾಗಿ + ಇರೆ
ನಿಯಮಿಸುವ ಆಚಾರ್ಯರ್+
ಇನ್+ ಎಮ್ಮನ್+
ಏನೋದಾವಂ ತಳ್ತು
ಅೞ್ವದಂತೆ +
ಓವರಿಸಿ ಕೆಳೆಗೆ ಸಂಸಾರಕಾಂತಾರದಿಂದಂ.

ಹನ್ನೆರಡು ಅಲ್ಪಯತಿಗಳ ಅನಂತರ (ಯತಿಸ್ಥಾನದಂತೆ ಸಾಲುಗಳನ್ನು ಬರೆಯಲಾಗಿದೆ) ಪೂರ್ಣಯತಿ ಬಂದಿದೆ. ಸ್ವಾರಸ್ಯವೆಂದರೆ ಅರ್ಥಕ್ಕಾಗಿ ಮೊದಲೆರಡು ಸಾಲುಗಳೂ ಒಂದಾಗಬಹುದು; ಹಾಗೆಯೇ ನಾಲ್ಕು ಮತ್ತು ಐದನೆಯ ಸಾಲುಗಳು ಒಂದಾಗಬಹುದು. ಕೊನೆಯ ಐದು ಸಾಲುಗಳನ್ನು ಒಂದೇ ಘಟಕವಾಗಿ ಗಮನಿಸುವ ಸಾಧ್ಯತೆಯೂ ಇದೆ, ಅರ್ಥದ ದೃಷ್ಟಿಯಿಂದ.

ಕನ್ನಡದಲ್ಲಿ ಯತಿ ಎಂಬುದನ್ನು ಸಂಸ್ಕೃತಕ್ಕಿಂತ ಭಿನ್ನವಾದ ರೀತಿಯಲ್ಲಿ ಬಳಸಲಾಗುತ್ತದೆ. ಕನ್ನಡ ಕೈಪಿಡಿಯಲ್ಲಿ ಅದು ಹೀಗಿದೆ: ಯತಿಯೆಂದರೆ ಪದ್ಯಗಳನ್ನು ಓದುವಾಗ ಅರ್ಥಸ್ಪೂರ್ತಿ ಕೆಡದಂತೆ ಪದ್ಯಪಾದದ ನಿಯತವಾದ ಒಂದೊದೆಡೆಯಲ್ಲಿ ನಿಲ್ಲಿಸುವುದು. ಹಾಗೆ ನಿಲ್ಲಿಸುವುದು ಪದದ ಮಧ್ಯದಲ್ಲಿಯಾದರೆ ಅರ್ಥಸ್ಪೂರ್ತಿ ಕೆಡುವುದರಿಂದ ಪದದ ಕೊನೆಯಲ್ಲಿಯೇ ನಿಲ್ಲಿಸಬೇಕು. (ಪು. ೭೫).

ಆದ್ದರಿಂದಲೇ ಕನ್ನಡದಲ್ಲಿಯ ಯತಿ ಸ್ಥಾನವನ್ನು ನಿರ್ದೇಶಿಸುವುದು ಅರ್ಥ; ಉಸಿರನ್ನು ನಿಲ್ಲಿಸಿಕೊಳ್ಳುವ ವಿರಾಮ ಸ್ಥಳ ಅಲ್ಲ. ಹೀಗೆ ಅರ್ಥಾನುಸಾರಿಯಾದ ಯತಿ ವೈವಿಧ್ಯದಿಂದಲೂ ಕೂಡಿರಬಹುದು.

ಉದಾಹರಣೆಗೆ ಈ ಪದ್ಯವನ್ನೆ ಗಮನಿಸಿ:

ನವನಿಧಿ ಬಾರ
ಪುಣ್ಯನಿಧಿ ಬಾರ
ಮಹಾನಿಧಿ ಬಾರ
ಭಕ್ತರುತ್ಸವನಿಧಿ ಬಾರ
ಭಾಗ್ಯನಿಧಿ ಬಾರ
ಸುಧಾಕರ ಕಾಂತಿಯುದ್ಭವ ನಿಧಿ ಬಾರ
ಸತ್ಯನಿಧಿ ಬಾರ
ಸತ್ಯಸಂಭವನಿಧಿ ಬಾರ
ತತ್ವನಿಧಿ ಬಾರ +
ಎಲೆ ಬಾರ +
ಎಲೆ ಹಂಪೆಯಾಳ್ದನೇ.

ಚಂಪಕ ಮಾಲಾವೃತ್ತದ ಮೇಲಿನ ಪದ್ಯದಲ್ಲಿ ಯತಿ ಹನ್ನೊಂದು ಬಾರಿ ಬಂದಿದೆ. ಯತಿಯನ್ನು ಆಧರಿಸಿಯೇ ಬರೆಯಲಾಗಿದೆ. ಇಲ್ಲಿಯ ಇನ್ನೂ ಒಂದು ಸ್ವಾರಸ್ಯವೆಂದರೆ ಇಲ್ಲಿ ಇಪ್ಪತ್ತಮೂರು ಯತಿಗಳಾಗುವ ಸಾಧ್ಯತೆಯೂ ಇದೆ. ಆಗ ಇದನ್ನು ಕೆಳಗೆ ಕಂಡಂತೆ ಬರೆಯಬಹುದು –

ನವ ನಿಧಿ
ಬಾರ
ಪುಣ್ಯ ನಿಧಿ
ಬಾರ
ಮಹಾ ನಿಧಿ
ಬಾರ
ಭಕ್ತರುತ್ಸವ ನಿಧಿ
ಬಾರ
ಭಾಗ್ಯ ನಿಧಿ
ಬಾರ
ಸುಧಾಕರ ಕಾಯ
ಕಾಂತಿಯುದ್ಭವ ನಿಧಿ
ಬಾರ
ಸತ್ವ ನಿಧಿ
ಬಾರ
ಸತ್ಯಸಂಭವ ನಿಧಿ
ಬಾರ
ತತ್ವ ನಿಧಿ
ಬಾರ
ಎಲೆ ಬಾರ +
ಎಲೆ ಹಂಪೆಯಾಳ್ದನೇ.

ಎಂದೂ ಇದನ್ನು ಅರ್ಥಾನುಸಾರಿಯಾಗಿ ಓದಬಹುದು. ಈ ರೀತಿ ಓದುವಾಗ ಮೊದಲ ಪದ ಸಂಬೋಧನ ಗೊಳ್ಳುವಂಥದ್ದು – ಎರಡನೆಯ ಪದ ಕರೆಯುವಂಥ ಆಹ್ವಾನ ನೀಡುವಂಥದ್ದು.

ಈಗ ಇಲ್ಲಿಯ ಯತಿಗಳನ್ನು ಕುರಿತು ಇನ್ನಷ್ಟು ವಿಚಾರ ಮಾಡಬಹುದು. ನವನಿಧಿ ಬಾರ ಎನ್ನುತ್ತಿದ್ದಂತೆ ಬರುವ ಯತಿಯನ್ನು ಮತ್ತೆ ಮುಂದಿನ ಯತಿಗಳನ್ನು ಅಲ್ಪಯತಿಗಳೆಂದೂ ಕೊನೆಯಲ್ಲಿ ಬರುವ ಯತಿಯನ್ನು ಅರ್ಥ ಕೊನೆಯಾಗುವುದನ್ನು ಸೂಚಿಸುವುದರಿಂದ ಪೂರ್ಣಯತಿ ಎಂದೂ ಕರೆಯಬಹುದು.

ಅಂದರೆ ಅರ್ಥದ ನಿಲುಗಡೆಯನ್ನು ಸೂಚಿಸುವುದು – ಅರ್ಥಯತಿ; ಇದರಲ್ಲಿ ವಾಕ್ಯಾರ್ಥ ಪೂರ್ಣವಾಗುವಾಗ ಬರುವ ಅಂತಿಮ ಯತಿಯನ್ನು ಪೂರ್ಣ ಯತಿಯೆಂದೂ, ಈ ಪೂರ್ಣ ಯತಿಯ ಮೊದಲು ಬರುವ ಯತಿಗಳನ್ನು ಅಲ್ಪಯತಿಗಳೆಂದೂ ಕರೆಯಬಹುದು. ಈಗ ಯತಿಯೆಂಬುದು ಅರ್ಥವಿರಾಮ ಸ್ಥಾನವಾಗುತ್ತದೆಯೇ ಹೊರತು ಉಸಿರ ವಿರಾಮದ ಲಕ್ಷಣವಾಗುವುದಿಲ್ಲ.

ಆದ್ದರಿಂದಲೇ ಕನ್ನಡ ಕವಿಗಳು ಈ ಅಲ್ಪಯತಿ, ಪೂರ್ಣ ಯತಿಗಳ ಬಳಕೆ ಯಿಂದಾಗಿ ಸಂಸ್ಕೃತ ವೃತ್ತಗಳಲ್ಲಿ ಬರುವ ‘ನಿಯತಿ’ ಯತಿಯನ್ನು ಮೀರಿ ಅರ್ಥಪೂರ್ಣವಾಗಿ ಯತಿಯನ್ನು ಬಳಸಿದರು ಎನ್ನಬಹುದು.

To check, curb, restrain, control, subdue, stop ಎಂಬರ್ಥಗಳಿರುವ ಯಮ್‌ ಧಾತುವಿನಿಂದ ನಿಷ್ಪನ್ನವಾದ ‘ಯತಿ’ ಶಬ್ದವು ಛಂದಸ್ಸಿನಲ್ಲಿ ಕಾವ್ಯವಾಚನದ ಸೌಲಭ್ಯಗಳಲ್ಲಿ ಒಂದಾಗಿದ್ದು ಇದೊಂದು ನಿಯಮವಾಗಿಯೂ ನಿಂತದ್ದು; ಅನಂತರ ಈ ನಿಯಮದ ಮಿತಿಯನ್ನು ಅರಿತು ಅರ್ಥ ನಿರ್ದೇಶಿಸುವಲ್ಲಿ ನಿಲುಗಡೆ ಮಾಡುವ ರೀತಿಯನ್ನು ಸೂಚಿಸುವ ಪದವಾಗಿ ಬೆಳೆದದ್ದು ಇದರ ಇತಿಹಾಸ ಎನ್ನಬಹುದು.

ಉದಾಹರಣೆಗೆ ರತ್ನಾಕರಾಧೀಶ್ವರ ಶತಕದ ಈ ಪದ್ಯವನ್ನು ಗಮನಿಸಿ. ವೃತ್ತ ರೀತಿಯಲ್ಲಿ ಬರೆದರೆ ಹೀಗಿರುತ್ತದೆ – ಇದು ಮತ್ತೇಭ ವಿಕ್ರೀಡಿತ

ಬಿಸಿಲಿಂ ಕಂದದ ಬೆಂಕಿಯಿಂ ಸುಡದ ನೀರಿಂ ನಾಂದದುಗ್ರಾಸಿ ಭೇ
ದಿಸಲುಂ ಬಾರದ ಚಿನ್ಮಯಂ ಮಱೆದು ತನ್ನೊಳ್ಪಂ ಪರಧ್ಯಾನದಿಂ
ಪಸಿವಿಂದಂ ಬಹುಬಾಧೆಯಿಂ ರುಜೆಗಳಿಂ ಕೇಡಾಗುವೀ ಮೆಯ್ಗೆ ಸಂ
ದಿಸಿದಂ ತನ್ನನೆ ಚಿಂತಿಸಲ್ಸುಖಿಯಲಾ ರತ್ನಾಕರಾಧೀಶ್ವರಾ.

ಇದನ್ನೇ ಅರ್ಥಯತಿಯನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಅದರ ರಚನೆ ಹೇಗಾಗುತ್ತದೆ, ಗಮನಿಸಿ:

ಬಿಸಿಲಿಂ ಕಂದದ
ಬೆಂಕಿಯಿಂ ಸುಡದ
ನೀರಿಂ ನಾಂದದ +
ಉಗ್ರಾಸಿ ಭೇದಿಸಲುಂ ಬಾರದ
ಚಿನ್ಮಯಂ
ಮಱೆದು ತನ್ನೊಳ್ಪಂ
ಪರಧ್ಯಾನದಿಂ
ಪಸಿವಿಂದಂ
ಬಹುಬಾಧೆಯಿಂ
ರುಜೆಗಳಿಂ ಕೇಡಾಗುವ +
ಮೆಯ್ಗೆ
ಸಂದಿಸಿದಂ
ತನ್ನನೆ ಚಿಂತಿಸಲ್
ಸುಖಿಯಲಾ
ರತ್ನಾಕರಾಧೀಶ್ವರಾ.

ಇಲ್ಲಿ ಪ್ರತಿ ಪಂಕ್ತಿಯಲ್ಲಿ ಅಲ್ಪಯತಿಯೂ ಅಂತ್ಯದಲ್ಲಿ ಪೂರ್ಣಯತಿಯೂ ಬಂದು ಇಲ್ಲೆಲ್ಲ ಅರ್ಥ ಕಾರಣವಾಗಿದೆ – ಯತಿ. ಒಂದರ್ಥದಲ್ಲಿ ಈ ಅರ್ಥ ಕಾರಣವಾದ ಯತಿ ಲಯವನ್ನು ನಿಯಂತ್ರಿಸಿದೆಯೆ ಎಂದರೆ ಇಲ್ಲವೆನ್ನಲಾಗದು – ಏಕೆಂದರೆ ಯತಿ ಮತ್ತು ಲಯ ಎರಡೂ ಅರ್ಥ (ಭಾವ) ಕಾರಣವಾದವುಗಳೇ ಅಲ್ಲವೆ!

ಕನ್ನಡದಲ್ಲಿ ಅದರಲ್ಲಿಯೂ ಹಳಗನ್ನಡ ನಡುಗನ್ನಡ ರಚನೆಗಳಲ್ಲಿ ಅಲ್ಪ ವಿರಾಮ, ಪೂರ್ಣ ವಿರಾಮ, ಪ್ರಶ್ನಾರ್ಥಕ, ಅಶ್ಚರ್ಯಸೂಚಕ ಚಿಹ್ನೆಗಳಿಲ್ಲವೆಂಬುದನ್ನು ಅವುಗಳ ಕಾರ್ಯವನ್ನು ಅರ್ಥಯತಿಯೂ ಮಾಡುತ್ತಿದ್ದಿತೆಂಬುದನ್ನು ಮರೆಯಲು ಸಾದ್ಯವಿಲ್ಲ. E. P.ರೈಸ್‌ ಈ ಬಗ್ಗೆ ಹೇಳಿದ್ದು ಹೀಗಿದೆ: One of the beauties of Kanarese is that all the pause and intonations, which in English are represented punctuation, are expressed by vernacular idiom itself; so that no well- construted kanarese sentence requies any marks of punction whatsoever.[2] ಇದು ಕೇವಲ ಕನ್ನಡಕ್ಕೆ ಸೀಮಿತವಾದ ಕ್ರಮವೆಂದೇನೂ ಭಾವಿಸಬೇಕಾಗಿಲ್ಲ. ಸಂಸ್ಕೃತ ಶ್ಲೋಕದಲ್ಲೂ ಇಂಥ ಕ್ರಮವಿರುವುದನ್ನು ಗಮನಿಸಬಹುದು. ಉದಾಹರಣೆಗೆ ವಾಲ್ಮೀಕಿ ರಾಮಾಯಣದ ಕಿಷ್ಕಿಂಧಾ ಕಾಂಡದ ಮೂವತ್ತನೇ ಸರ್ಗದ ನಲವತ್ತೊಂಬತ್ತನೆಯ ಶ್ಲೋಕ ಗಮನಿಸಿ:

ಸುಪ್ತೈಕ ಹಂಸಂ
ಕುಮುದೈರುಪೇತಂ
ಮಹಾಹ್ರದಸ್ಥಂ
ಸಲಿಲಂ ವಿಭಾತಿ
ಘನೈರ್ವಿ ಮುಕ್ತಂ
ನಿಶಿಪೂರ್ಣ ಚಂದ್ರಂ
ತಾರಾಗಣಾಕೀರ್ಣಮ್‌+
ಇವ ಅಂತರಿಕ್ಷಮ್||

ಮೊದಲ ನಾಲ್ಕು ಸಾಲುಗಳು ಸೇರಿ ಶ್ಲೋಕದ ಪೂರ್ವಾರ್ಧವಾಗುತ್ತದೆ. ಆದರೆ ಅಲ್ಪಯತಿಗಳು ಹಂಸಂ, ಕುಮುದೈರುಪೇತಂ, ಮಹಾಹ್ರದಸ್ಥಂ ಎಂಬಲ್ಲಿ ಒಂದು ಸಲಿಲಂ ವಿಭಾತಿ ಎಂಬಲ್ಲಿ ಪೂರ್ಣಯತಿಯಾಗುತ್ತದೆ.

ಅದೇ ರೀತಿ ಘನೈರ್ವಿಮುಕ್ತಂ, ನಿಶಿಪೂರ್ಣಚಂದ್ರಂ, ತಾರಾಗಣಾಕೀರ್ಣಮಿವ ಅಂತರಿಕ್ಷಂ ಎಂಬಲ್ಲಿ ಅಲ್ಪಯತಿ ಪೂರ್ಣಯತಿಗಳು ಬರುತ್ತವೆ. ಇಲ್ಲೇ ಯತಿ ಉಸಿರ್ದಾಣವಾಗಿಲ್ಲ- ಶ್ರುತಿ ಸುಂದರವೂ, ವಾಗ್ವಿರಾಮ ಕಾರಣವೂ ಆಗಿ ಅರ್ಥಪುಷ್ಟಿಯನ್ನು ನೀಡುತ್ತದೆ.

ಕೆವೆಂಪು ರಾಮಾಯಣ ದರ್ಶನಂ ಕಾವ್ಯದ ಈ ಕೆಲವು ಉದಾಹರಣೆಗಳನ್ನು ಗಮನಿಸಬಹುದು.

. ದೇಶಕೋಸಲಮಿಹುದು ಧನಧಾನ್ಯ ಜನತುಂಬಿ
ಸರಯೂನದಿಯ ಮೇಲೆ
ಕವಿಕ್ರತುದರ್ಶನಂ ೧೫೬೧೫೭

. ಆ ವಚನ ವಿದ್ಯುತ್‌ ಪ್ರಭಾ
ಲಹರಿ, ಕೇಳ್ವರ ಮೈಯ್ಗೆ, ಮಿಂಚುವರಿದುದು, ರೋಮ
ರೋಮಂ ನಿಮಿರಿ ಪುಲಕಮಂ ಕೈದುಗೊಳ್ವಂತೆ
ಇರ್ದುದು ಮಹೇಂದ್ರಾಚಲಂ ೫೩೧೫೩೩

. ತೆರೆಪರಂಪರೆ, ಮೊರೆಪರಂಪರೆ, ಪರಂಪರೆಯ
ಬೆಳ್ನೊರೆನೊರೆಯ ಪೊರೆಯ ಸಾಗರನ ನಾಗರನ
ಭೋರ್ಗರೆವ ಭೋಗಕುಲ ಬಲ ವವ್ವಳಿಸಿದುದು
ನಿರಂತರಂ, ತಟಗತ ಅಶೋಕವನ ವಂಕಿಮ ಶಿಲಾವೇಲೆಯಂ

ಮೇಲಿನ ಮೂರು ಭಾಗಗಳನ್ನು ಯತಿಯ ಆಧಾರದ ಮೇಲೆ ಹೀಗೆ ಬರೆಯಬಹುದು.

. ದೇಶ ಕೋಸಲಮ್+
ಇಹದು
ಧನ
ಧಾನ್ಯ
ಜನ ತುಂಬಿ
ಸರಯೂ ನದಿಯ ಮೇಲೆ.

. ಚಚನ ವಿದ್ಯುತ್ಲಹರಿ
ಕೇಳ್ವರ ಮೆಯ್ಗೆ
ಮಿಂಚುವರಿದುದು
ರೋಮ ರೋಮಂ ನಿಂಬಿ
ಪುಲಕಮಂ ಕೈದುಗೊಳ್ವಂತೆ.

. ತೆರೆ ಪರಂಪರೆ
ನೊರೆ ಪರಂಪರೆ
ಪರಂಪರೆಯ
ಬೆಳ್ನೊರೆ ನೊರೆಯ +
ಪೊರೆಯ
ಸಾಗರನ +
ನಾಗರನ
ಭೋರ್ಗರೆವ
ಭೋಗಕುಲಬಲಮವ್ವಳಿಸಿದುದು
ನಿರಂತರಂ
ತಟಗತ +
ಅಶೋಕವನ ವಂಕಿಮ ಶಿಲಾವೇಲೆಯಂ.

ಈ ಮೂರೂ ಉದಾಹರಣೆಗಳಲ್ಲಿ , ಮೊದಲ ಉದಾಹರಣೆಯಲ್ಲಿ ಕೊನೆಯ ಸಾಲಿನ ಯತಿ – ಪೂರ್ಣಯತಿ ಪಾದಮಧ್ಯದಲ್ಲಿ ಬರುತ್ತದೆ.

ಎರಡನೆ ಉದಾಹರಣೆಯಲ್ಲಿ ಮೊದಲ ಸಾಲಿನ ಅಲ್ಪಯತಿ ಆರಂಭವಾಗುವುದು ಅರ್ಧ ಸಾಲಿನಿಂದ.

ಮೂರನೆಯ ಉದಾಹರಣೆಯಲ್ಲಿ ಪೂರ್ಣ ನಾಲ್ಕು ಸಾಲುಗಳಾದ ಮೇಲೆ ಅರ್ಧವಾಗಿರುವ ಐದನೆಯ ಸಾಲಿದೆ.

ಈ ಮೂರು ಉದಾಹರಣೆಗಳನ್ನು ಗಮನಿಸಿದಾಗ ‘ಪಾದ’ ಒಂದು ಘಟಕವಾಗಿಲ್ಲದಿರುವುದು, ಒಂದು ಪಾದವಾದ ಮೇಲೆ ಉಳಿದರ್ಧ ಸಾಲಿನಲ್ಲಿ ಯತಿ ಇಂದು ವಾಕ್ಯ ಪೂರ್ಣವಾಗಿರುವುದು ಮೊದಲ ಉದಾಹರಣೆಯಲ್ಲಿದೆ.

ಎರಡನೆಯ ಉದಾಹರಣೆಯಲ್ಲಿ ಎರಡೂವರೆ ಸಾಲುಗಳು ಒಂದು ಅರ್ಥಘಟಕವಾಗಿ ಯತಿ ಬಂದಿದೆ.

ಮೂರನೆಯ ಉದಾಹರಣೆಯಲ್ಲಿ ನಾನ್ಕೂವರೆ ಸಾಲುಗಳಾದ ಮೆಲೆ ಪೂರ್ಣ ಯತಿ ಬಂದಿದೆ. ಅಂದರೆ ಯತಿಸ್ಥಾನವು ಅರ್ಥದ ನಿಲುಗಡೆಯ ಸ್ಥಾನವೂ ಆಗಿ ‘ಲಯ’ ವನ್ನೂ ನಿಯಂತ್ರಿಸಿದಂತೆ ಭಾಸವಾಗುತ್ತದೆ. ಅದಕ್ಕೆ ಕಾರಣ ‘ಯತಿ’ ಆಗಲಿ ‘ಲಯ’ ಆಗಲಿ ಅರ್ಥಸ್ಫುಟತೆಗೆ ಕಾರಣವಾದ ಅಂಶವಾಗಿರುವುದೇ ಆಗಿದೆ. ‘ಯತಿ’ ಯನ್ನು ಬಿಟ್ಟು ‘ಲಯ’ವನ್ನು ಬಿಟ್ಟು ಅರ್ಥವನ್ನು ಗ್ರಹಿಸುವುದು ಕಷ್ಟವೆಂಬ ಸ್ಥಿತಿ ಇಲ್ಲಿನದು. ಅಂದರೆ ಕಾವ್ಯಾರ್ಥ ಸಿಧಿಗೆ ಇವು ಕಾರಣವಾದವು.

ಯತಿ ಇಲ್ಲಿ ಅರ್ಥಸ್ಫುಟತೆಗೆ ಕಾರಣವಾಗುವ ವಿರಾಮ ಸ್ಥಾನವಾಗುತ್ತದೆ. ಇದು ಉಸಿರಿನ ವಿರಾಮ ಅಲ್ಲ: ಅರ್ಥ ವಿರಾಮ – ಇದನ್ನು ಸಂಸ್ಕೃತದ ಕವಿಗಳೂ ಸಾಧಿಸಿದ್ದಾರೆ – ಕಟ್ಟುನಿಟ್ಟಾದ ಯತಿ ಸ್ಥಾನವನ್ನು ಮೀರುವ ಮೂಲಕ. ಹದಿಮೂರನೆಯ ಶತಮಾನದಲ್ಲಿ ಕೇಶಿರಾಜ ತನ್ನ ಶಬ್ಧಮಣಿದರ್ಪಣದಲ್ಲಿ ಕನ್ನಡದ ವೈಶಿಷ್ಟಗಳನ್ನು ಹೇಳುವಾಗ “ಯತಿವಿಲಂಘನದಿಂದರಿದಲ್ತೆ ಕನ್ನಡಂ” ಎಂದು ಘೋಷಿಸಿದ್ದು ; ಅಂದರೆ ಕನ್ನಡ, ಸಂಸ್ಕೃತದ ‘ಯತಿ’ ಯ ನಿಯಮವನ್ನು ಉಲ್ಲಂಘಿಸಿತು ಎಂದು ಹೇಳಿದ್ದು. ಸಂಸ್ಕೃತದ ಅಲಂಕಾರಿಕರಲ್ಲೂ ಯತಿಯನ್ನು ಇಚ್ಛಿಸಿದ ವಿದ್ವಾಂಸರ ಒಂದು ಪಡೆಯೇ ಇದೆ ಅವರೇ ಭರತಾದಿಗಳು.

[1] ಜಾನಪದೀಯವಾದುದು ಒಂದು ಗಟ್ಟಿಯಾದ ಪರಂಪರೆ ಎಂಬ ಭಾವನೆಯಿಲ್ಲದಿರುವುದು ಇದಕ್ಕೆ ಕಾರಣವಿರಬಹುದೆ?

[2] E. P. Rice: A History of Kanarese literature -(1921) P. 104.