ಛಂದಸ್ಸು ಎಂಬ ಪದದ ಬಳಕೆಯು ಅನೇಕ ವಿಧವಾಗಿದೆ. ಸದ್ಯಕ್ಕೆ ಈ ಮಾತಿನ ಅರ್ಥವನ್ನು ಎರಡು ಬಗೆಯಾಗಿ ಗುರುತಿಸಿಕೊಂಡರೆ ಸಾಕು.

ಒಂದನೆಯ ಅರ್ಥ, ಛಂದಸ್ಸು ಪದ್ಯದ ನಿಯಮವನ್ನು ಕುರಿತದ್ದು ಎಂದು, ಇದೇ ಸಾಮಾನ್ಯವಾಗಿ ಬಳಕೆಯಲಿರುವ -ವ್ಯಾಪಕವಾದ – ಅರ್ಥ, ಈ ಕಾವುದ ಛಂದಸ್ಸು ಚೆನ್ನಾಗಿದೆ ಎನ್ನುವಾಗ ಈ ಪದ್ಯದ ಲಯ ಚೆನ್ನಾಗಿದೆ; ಇದರಿಂದ ಭಾವ ಪುಷ್ಟಿ ಉಂಟಾಗಿದೆ ಎಂದೇ ಅರ್ಥ.

ಎರಡನೆಯ ಅರ್ಥ, ಪದ್ಯದ ಲಯಕ್ಕೆ ಸಂಬಂಧಿಸಿದಂತೆ ಇರುವ ಭಿನ್ನ ಭಿನ್ನ ಪ್ರಕಾರಗಳಿಗೆ ಸಂಬಂಧಿಸಿದ್ದು; ರಗಳೆಯ ಛಂದಸ್ಸು, ಸ್ಕಂದ ಛಂದಸ್ಸು, ಅನುಷ್ಟುಭ್ ಛಂದಸ್ಸು ಎನ್ನುವಾಗಲೆಲ್ಲ ಇದೇ ಅರ್ಥ. ಈ ಒಂದೊಂದು ಛಂದಸ್ಸಿಗೂ ನಿಯಮಗಳಿರುವುದು ಎಲ್ಲರಿಗೂ ತಿಳಿದ ವಿಷಯವೇ, ಛಂದಶ್ಯಾಸ್ತ್ರವು ಇಂಥ ಛಂದಸ್ಸುಗಳನ್ನು ಇಂಥ ಛಂದಸ್ಸುಗಳ ನಿಯಮಗಳನ್ನು ವಿವರವಾಗಿಯೇ ತಿಳಿಸುವ ಶಾಸ್ತ್ರ.

ಆದರೆ ಛಂದಶ್ಯಾಸ್ತ್ರವನ್ನು ನೋಡಿದರೆ ಒಂದೊಂದು ಛಂದಸ್ಸಿಗೆ ಮೊದಲ ಹೇಳಿದ ನಿಯಮಕ್ಕೂ ಇರುವ ಪ್ರಯೋಗಗಳಿಗೂ ಸಾಕಾದಷ್ಟು ಭಿನ್ನತೆ ಕಂಡು ಬರುವ ವಿಷಯ ಅಪರಿಚಿತವಾದದ್ದೇನೂ ಅಲ್ಲ. ಅಷ್ಟೇ ಅಲ್ಲ, ಇದೇ ಒಂದು ನಿಯಮವೋ ಎಂಬ ಹಾಗೆ ‘ಮೂಲ ನಿಯಮ’ಗಳ ‘ಉಲ್ಲಂಘನೆ’ ಯು ಸಾಕಾದಷ್ಟು ನಡೆದಿರುವುದೂ ಸುವ್ಯಕ್ತ. ಇಂಥ ‘ಉಲ್ಲಂಘನೆ’ ಯು ನಿಯಮಗಳನ್ನು ಅರಿಯದ ಅಜ್ಞೆತೆಯ ಕಾರಣದಿಂದ ಅಥವಾ ನಿಯಮಗಳನ್ನು ಪಾಲಿಸಲು ಸಾಮರ್ಥ್ಯವಿಲ್ಲದ ಅದಕ್ಷತೆಯಿಂದ ಮೂಡಿ ಬಂದಿದ್ದು ಛಂದಸ್ಸಿನ ಅವನತಿಯ ಗುರುತಾಗಿದೆಯೊ ಅಥವಾ ಭಾವಾಭಿವ್ಯಕ್ತಿಗೆ ತೊಡಕಾಗಿದ್ದ ಮೂಲನಿಯಮದ ಬಂಧನಗಳನ್ನಷ್ಟೆ ಕಿತ್ತು ಯಶಸ್ವಿಯಾದ ಪ್ರತಿಭೆಯ ಸ್ವಾತಂತ್ರ್ಯದ ಕಹಳೆಯಾಗಿದೆಯೋ ಪರೀಕ್ಷಿಸಬೇಕು. ಆಗ ಛಂದಸ್ಸಿನ ನಿಯಮ – ಸ್ವಾತಂತ್ರ್ಯಗಳ ವಿಚಾರ ಸ್ಪಷ್ಟವಾಗುತ್ತದೆ. ಅದಕ್ಕಾಗಿ ಒಂದು ಸಂಪ್ರದಾಯ ಛಂದಸ್ಸನ್ನೂ ಅದರ ಭಿನ್ನರೂಪಗಳನ್ನೂ ಕಂದ ಪದ್ಯವನ್ನೂ ಉದಾಹರಣೆಯಾಗಿಟ್ಟುಕೊಂಡು ನೋಡೋಣ

ಸಂಸ್ಕೃತದ ಆರ್ಯಾವೃತ್ತವು ಅರ್ಯಾಗೀತಿಯಾಗಿ, ಪ್ರಾಕೃತದಲ್ಲಿ ಸ್ಕಂದಕ ಆಗಿ ಕನ್ನಡದಲ್ಲಿ[2] ಕಂದಕವಾಗಿ ಬಳಕೆಯಾಗಿದೆ.

ಅರ್ಯಾ ವೃತ್ತ

ದೂರಂ ಮುಕ್ತಾ ಲತಯಾ
ಬಿಸತಯಾ ವಿಪ್ರಲೋಭ್ಯಮಾನೋ ಮೇ
ಹಂಸ ಇವ ದರ್ಶೀತಾಶೋ
ಮಾನಸ ಜನ್ಮಾತ್ವ ಯಾನೀತಃ

ಕಂದಪದ್ಯ

ಎನಗಾಸೆದೋರಿ ಬಿಸಸಿತ
ಮೆನಿಸುವ ನಿಜತಾರಹಾರಲತೆಯಿದಿಂ ಹಂ
ಸನವೊಲ್ ಮಾನಸ ಸಂಭವ
ಮೆನಿಪ ಮದೀಯಾಭಿಮಾನಮಂ ಕಟ್ಟುಯ್ದೌ

ಮೇಲಿರುವ ಆರ್ಯಾವೃತ್ತದ ಕಂದದ ಅನುವಾದ ಕವಿ ನಾಗವರ್ಮನೇ ಮಾಡಿದ್ದು. ಅರ್ಯಾ ಮತ್ತು ಕಂದಗಳ ಲಕ್ಷಣಗಳಲ್ಲಿ ಎಷ್ಟು ಭಿನ್ನತೆಗಳಿವೆ ನೋಡಿರಿ.

ಎರಡರಲ್ಲೂ ಪಙ್ಕ್ತಿಗಳೇನೋ ನಾಲ್ಕೆ. ಒಂದನೆಯ ಹಾಗೂ ಮೂರನೆಯ ಪಾದಗಳು ಕಂದದಲ್ಲೂ ಆರ್ಯದಲ್ಲೂ ಒಂದೇ ರೀತಿ.[3] ಅದರೆ ಎರಡನೆಯ ಹಾಗೂ ನಾಲ್ಕನೆಯ ಪಾದಗಳಲ್ಲಿ ತುಂಬ ಭಿನ್ನತೆಯಿದೆ. ಆರ್ಯಾವೃತ್ತದ ಎರಡನೆಯ ಪಾದದಲ್ಲಿ ನಾಲ್ಕು ಮಾತ್ರೆಯ ನಾಲ್ಕು ಗಣಗಳು ಕೊನೆಗೆ ಒಂದು ಗುರುವಿದೆ: ಕಂದದಲ್ಲಿ[4] ನಾಲ್ಕು ಮಾತ್ರೆಯ ಐದು ಗಣಗಳಿವೆ. ಕೊನೆಯ ಗಣದ ಕೊನೆಯ ಮಾತ್ರ ಇಲ್ಲೂ ಗುರುವಾಗಿರುತ್ತದೆ. ಆರ್ಯಾವೃತ್ತದ ನಾಲ್ಕನೆಯ ಪಾದದಲ್ಲಿ ನಾಲ್ಕು ಮಾತ್ರೆಯ ಎರಡು ಗಣಗಳು ಮುಂದೆ ಒಂದು ಲಘು (ಇದು ಯತಿಸ್ಥಾನ) ಮತ್ತೆ ನಾಲ್ಕು ಮಾತ್ರೆಯ ಒಂದು ಗಣ ಮೇಲೆ ಒಂದು ಗುರು. ಕಂದದಲ್ಲಿ ಹಾಗಿಲ್ಲ. ನಾಲ್ಕು ಮಾತ್ರೆಯ ಐದು ಗಣಗಳೇ ಇಲ್ಲೂ ಇರುತ್ತವೆ. ಎರಡನೆಯ ಮತ್ತು ನಾಲ್ಕನೆಯ ಪಾದಗಳ ಅಂತ್ಯಗಣವು ಗುರುವಿನಿಂದಲೇ ಮುಗಿಯಬೇಕು. ವಿಷಮ ಸ್ಥಾನಗಳಲ್ಲಿ (⋃ – ⋃) ಬರಬಾರದು. ಅದರೆ ಆರನೆಯ ಗಣವು (ಎರಡನೆಯ ಮತ್ತು ನಾಲ್ಕನೆಯ ಸಾಲಿನ ಮೂರನೆಯ ಗಣವು) ⋃ ⋃ ⋃ ⋃ ಅಥವಾ ⋃ – ⋃ ಆಗಿಯೇ ಇರಬೇಕು. ಅರ್ಯೆಯಲ್ಲೂ ಎರಡನೆಯ ಪಾದದ ಮೂರನೆಯ ಗಣ ⋃ ⋃ ⋃ ⋃ ಅಥವಾ ⋃ – ⋃ ಆಗಿಯೇ ಇರಬೇಕು. ನಾಲ್ಕನೆಯ ಪಾದದ ಮೂರನೆಯ ಗಣಸ್ಥಾನದಲ್ಲಿ ಕೇವಲ ಲಘುವೊಂದೇ ಉಳಿದು ಯತಿ ಸ್ಥಾನವಾಗುತ್ತದೆ. ಹೀಗಾಗಿ ಆರ್ಯೆಯಲ್ಲಿ ಯತಿ ನಿಯತವಾಗಿ ಎರಡನೆಯ ಹಾಗೂ ನಾಲ್ಕನೆಯ ಪಾದಗಳ ಎರಡು ಗಣಗಳಾದ ಮೇಲೆ ಬರುವ ಲಘುವಿನ ಮೇಲೆ ಬೀಳಬೇಕು. ಕನ್ನಡದಲ್ಲಿ ಲಘುವೇನೂ ಉಳಿದಿದೆ. ಆದರೆ ಯತಿ? ಯತಿವಿಲಂಘನದಿಂದರಿದಲ್ತೆ ಕನ್ನಡಂ![5] ಸಂಸ್ಕೃತದಲ್ಲಿಲ್ಲದ ಆದಿಪ್ರಾಸ ಕಂದದಲ್ಲಿ ಉಂಟು. (ಇದನ್ನು ಮಾತ್ರ ವಿಕಾಸದ ಚಿಹ್ನೆಯೆಂದು ಪಟ್ಟು ಹಿಡಿದು ಕೂರಲು ಸಾಧ್ಯವಿಲ್ಲ.)

ಮೇಲಿನ ಸ್ಥೂಲ ವಿವರಣೆಯಿಂದ ಆರ್ಯಾವೃತ್ತ ಮತ್ತು ಕಂದಗಳಿಗೆ ಎಷ್ಟು ಭಿನ್ನತೆಗಳಿವೆ ಎಂಬುದನ್ನು ಕಂಡಂತಾಯಿತು. ಕಂದವಾದದ್ದೇನೊ ಆರ್ಯೆಯಿಂದ. ಆದರೆ ಆರ್ಯೆಯ ನಿಯಮಗಳು ಕಂದದಲ್ಲುಳಿದಿಲ್ಲ, ಹಾಗೆ ಹಾಗೆಯೇ ಮಾತ್ರೆಗಳ ಲೆಕ್ಕದಲ್ಲಿ, ಯತಿಯ ವಿಚಾರದಲ್ಲಿ ತುಂಬ ವ್ಯತ್ಯಾಸವೇ ಕಾಣುತ್ತವೆ. ಆದರೆ ಮಾತ್ರೆಗಳ ಲೆಕ್ಕದಲ್ಲಿ ಭಿನ್ನತೆಯಾದ್ದರಿಂದಾಗಲಿ, ‘ನಿಯತ ಯತಿ’ಯು ಉಳಿದಿಲ್ಲದ್ದರಿಂದಾಗಲಿ ಕಂದವು, ಆರ್ಯಾವೃತ್ತವು ಹಾಳಾದ ಛಂದಸ್ಸಿನ ರೂಪವಾಗಿಲ್ಲ; ಜನ್ನ ಮೊದಲಾದ ಕವಿಗಳ ಕೈಯಲ್ಲಿ ಅದು ಕನ್ನಡದ ಕಂದನೆಂಬಂತೆ ಮೈತಾಳಿ ಆರ್ಯಾವೃತ್ತದ ವಿಕಾಸದ ರೂಪಿನ ಗುರುತಾಗಿದೆ ಎಂದೇ ಅನುಭವವೇದ್ಯವಾಗುತ್ತದೆ. ಈ ಕೆಲವು ಕಂದದ ಉದಾಹರಣೆಗಳನ್ನು ನೋಡಿ:

ಕರುಣಿಸು ದೈವಮೆ
ಪಾಲಿಸು ಹರಾದ್ರಿ
ರಕ್ಷಿಸೆಲೆ ರಾತ್ರಿ
ಶರಣಾಗು ಸರೋವರಮೆ
ವನದೇವಿಯರಿರಾ
ನೆಱೆದೆಲ್ಲರುಮೆನಗೆ ಪುರುಷಭಿಕ್ಷೆಯನಿಕ್ಕಿಂ ||[6] ೪.೯೫

ತಾಂ ಗಡ
ಶೂರಂ ಗಡ
ಕಪ್ಪಂಗೊಡೆನಾಂ ಗಡ
ಕನಲ್ದು ಬರ್ಪಂ ಗಡ
ಯುದ್ಧಂ ಗಡ
ಗೆಲ್ವಂ ಗಡ
ಬಳಿಕಂ ಗೆಲದೇಕಿರ್ಪನಿರ್ಪನಮಮ ಸಮರ್ಥಂ[7]

ಮೇಲಿನ ಎರಡು ಪದ್ಯಗಳನ್ನು ಓದುವಾಗ (ಕಂದವನ್ನು ಬರೆದಿರುವ ರೀತಿ ಯತಿಸೂಚಕವಾಗಿಯೂ ಇದೆ.) ಕಂದದಲ್ಲಿ ಎರಡನೆಯ ಹಾಗೂ ನಾಲ್ಕನೆಯ ಪಾದಗಳ ಮೂರನೆಯ ಗಣದ ಮೊದಲ ಲಘುವೇ ಯತಿಸ್ಥಾನ ಎಂಬ ನಿಯಮ ಉಳಿದಿಲ್ಲ. ಮೇಲಿನಂತೆ ಬರೆದಿದ್ದರಿಂದಾಗಲಿ, ಯತಿ ನಿಯತಸ್ಥಾನದಲ್ಲಿ ಬಂದಿಲ್ಲ ಎಂಬ ಕಾರಣದಿಂದಾಗಲಿ ಅವುಗಳ ಕಾವ್ಯತ್ವಕ್ಕೆ ಕುಂದು ಬಂದಿಲ್ಲ: ಕಳೆಯೇರಿದೆ. ಅದೂ ಅಲ್ಲದೆ ಇವು ಕಂದ ಎಂಬ ಕಾರಣಕ್ಕಾಗಿಯಲ್ಲ ಸುಂದರವಾಗಿರುವುದು; ಕವಿ ಹೇಳ ಬಯಸಿದ ಭಾವ ಚೆನ್ನಾಗಿ ಪ್ರಕಟವಾಗಿದೆ ಎಂಬ ಕಾರಣಕ್ಕಾಗಿ. ಇನ್ನೊಂದು ಕಂದ ಪದ್ಯವನ್ನು ನಾವು ಗಮನಿಸೋಣ.

ವಿತತ ಯಶಂಗಾ ವಿಪ್ರಂ
ಗೆ ತತ್ಪ್ರಿಯಂ ಸಂಭವಂ ದ್ವಿಜನ್ಮಂಗೆ ಗುಣಾ
ಜ್ನಿತೆ ಸತಿ ಸಜ್ಜನಿಕೆಗರುಂ
ಧತಿಗೆ ಮಿಗಿಲ್ಕೊಂಡಿನಬ್ಬೆಯೆಂಬಳ್ಪೆಸರಿಂ[8]

ನಾಗವರ್ಮನ ಛಂದೋಂಬುಧಿಯ ಈ ಕಂದ ಸಾಂಪ್ರದಾಯಿಕ ನಿಯಮಗಳ ದೃಷ್ಟಿಯಿಂದ ಸಮರ್ಪಕವಾಗಿಯೇ ಇದೆ. ಆದರೆ ಮೇಲಿನ ಎರಡು ಉದಾಹರಣೆಗಳಲ್ಲಿನ ಸೊಗಸು ಇದಕ್ಕಿಲ್ಲ. ವಿಚಾರ ಮಾಡಿದರೆ ತಿಳಿಯುತ್ತದೆ, ಮೇಲಿನೆರಡು ಕಂದಗಳೂ ಯಶಸ್ವಿಯಾಗಿರುವುದು ಭಾವಪುಷ್ಟಿ ಆ ಲಯದಲ್ಲಿ ಉಂಟಾಗಿರುವುದರಿಂದ ಎಂದು. ಛಂದೋಂಬುಧಿಯ ಕಂದ ಗದ್ಯವಾಗಿಯೇ ಇದ್ದರೂ ಬಾಧಕವೇನೂ ಆಗುತ್ತ ಇರಲಿಲ್ಲ. ಇದರಿಂದ ಇನ್ನೊಂದು ವಿಷಯ ಸ್ಪಷ್ಟವಾದ ಹಾಗಾಯಿತು; ಕೇವಲ ನಿಯಮ ಪಾಲನೆಯೇ ಛಂದಸ್ಸಿನ ಜೀವಾಳವಲ್ಲ; ಸಾರ್ಥಕವಾಗಿ ಭಾವಪುಷ್ಟಿಯಾಗುವ ಹಾಗೆ ಮೈತಾಳುವುದೇ ಛಂದಸ್ಸಿನ ರಹಸ್ಯ. ನಾಗವರ್ಮನ ಕಾದಂಬರಿಯ ‘ಕರುಣಿಸು ದೈವಮೆ….’ ಎಂಬ ಕಂದದೊಡನೆ ಸ್ಪಲ್ಪ ಹೆಚ್ಚು ಕಡಿಮೆ ಸಮಾನಭಾವದ ಮಹಾದೇವಿಯಕ್ಕನ ವಚನವನ್ನು ಹೋಲಿಸೋಣ.

ಚಿಲಿ ಮಿಲಿ ಎಂದೋದುವ ಗಿಳಿಗಳಿರಾ ನೀವು ಕಾಣಿರೆ, ನೀವು ಕಾಣಿರೆ,
ಸರವೆತ್ತಿ ಪಾಡುವ ಕೋಗಿಲೆಗಳಿರಾ ನೀವು ಕಾಣಿರೆ, ನೀವು ಕಾಣಿರೆ,
ಎರಗಿ ಬಂದಾಡುವ ದುಂಬಿಗಳಿರಾ ನೀವು ಕಾಣಿರೆ, ನೀವು ಕಾಣಿರೆ,
ಕೊಳನ ತಡಿಯೊಳಾಡುವ ಹಂಸಗಳಿರಾ ನೀವು ಕಾಣಿರೆ, ನೀವು ಕಾಣಿರೆ,
ಗಿರಿಗಹ್ವರಗಳೊಳಗಾಡುವ ನವಿಲುಗಳಿರಾ ನೀವು ಕಾಣಿರೆ, ನೀವು ಕಾಣಿರೆ,
ಚೆನ್ನಮಲ್ಲಿಕಾರ್ಜುನೆಲ್ಲಿರ್ದಿಹನೆಂದು ನೀವು ಹೇಳಿರೆ, ನೀವು ಹೇಳಿರೆ?

ಈ ವಚನದ ಲಯವು ಅದ್ಭುತವಾಗಿದೆ. ಈ ವಚನದೊಂದಿಗೆ ಹೋಲಿಸಿದಾಗ ಪ್ರತಿಭಾವಂತ ಕವಿಯಾದ ನಾಗವರ್ಮನ ಅದ್ಭುತ ಕಂದದ ನಾಲ್ಕನೆಯ ಸಾಲಿನ ಸೊಗಸು ರವೆಯಷ್ಟು ಕಡಿಮೆ ಆಗಿ ಕಾಣುತ್ತದೆ. (ಈ ಮಾತನ್ನು ಹೇಳುವಾಗ ನಾಗವರ್ಮನ ಕಲಾವಂತಿಕೆಗೆ ಗೌರವ ಸೂಚಿಸುವ ಅಥವಾ ಆರ್ಯಾವೃತ್ತವನ್ನು ಕಂದಪದ್ಯವಾಗಿ ಬಳಸಿ ವೈವಿಧ್ಯ ತುಂಬಿದ ಕವಿಪ್ರತಿಭೆಯನ್ನು ಅಲ್ಲಗಳೆವ ಮೌಢ್ಯ ನಮ್ಮದಾಗಬಾರದು.)

ಛಂದಸ್ಸಿನ ನಿಯಮ ಇದ್ದಂತೆ ಉಳಿದಿಲ್ಲ ಎಂದುದನ್ನು ಇನ್ನೂ ಸ್ಪಷ್ಟತರವಾಗಿ ಕಾಣಬೇಕಾದರೆ ಆಂಶಗಣದ ಪಿರಿಯಕ್ಕರ ಛಂದಸ್ಸನ್ನೂ ಗಮನಿಸೋಣ. ನಾಗವರ್ಮನು ಛಂದೋಂಬುಧಿಯಲ್ಲಿ ಅದರ ಲಕ್ಷಣವನ್ನು ಹೀಗೆ ಹೇಳುತ್ತಾನೆ:

ಮೊದಲೊಳಜಗಣಂ ಕುಂದದೆ ಬರ್ಕತ್ತಮಯ್ದುಗನಂಗಳೆ ವಿಷ್ಣುವಕ್ಕುಂ
ತುದಿಯೊಳೇ ೞೆಂಬ ತಾಣದೊಳೆಲ್ಲಿಯುಂ ಕಂದರ್ಪರಿಪುಗಣಂ ನೆಲಸಿ ನಿಲ್ಕೆ
ಪದದೊಳೆರಡೆಂಬ ಸಂಖ್ಯೆಯೊಳಾಱಱೊಳಜಗನಂ ಸಮವಾಯಮಪ್ಪೊಡಕ್ಕುಂ
ಸದಮಳೇಂದುನಿಭಾನನೆ ನಾಕಿಗನಿಷ್ಟದಿನಿಂತಿದು ಪಿರಿಯಕ್ಕರಂ[9]

ಇದು ಅಂಶಗಣದ ನಾಲ್ಕು ಸಾಲಿನ ಪದ್ಯ. ಒಂದು ಸಾಲಿನಲ್ಲಿ ಏಳುಗಣ ಇರಬೇಕು. ಮೊದಲ ಗಣ ಬ್ರಹ್ಮವಾಗಿರಬೇಕು. ಏಳನೆಯ ಗಣ ರುದ್ರಗಣವಾಗಿರಬೇಕು. ಮಿಕ್ಕ ಐದು ವಿಷ್ಣುಗಣಗಳು (ಮೂರನೆಯ ಸಾಲು, ಲಕ್ಷಣ ಪದ್ಯದಲ್ಲಿ ಪಾಠಾಂತರದಿಂದ ಕೂಡಿ ಸ್ವಲ್ಪ ಅಸ್ಪಷ್ಟವಾಗುತ್ತದೆ.) ಎರಡು ಮತ್ತು ಆರನೆಯ ಗಣಗಳಲ್ಲೂ ಬ್ರಹ್ಮಗಣ ಬರಬಹುದು.

ಲಕ್ಷ್ಯ ಲಕ್ಷಣ ಸಮನ್ವಿತವಾದ ಈ ಪದ್ಯದ ಮೂರನೆಯ ಸಾಲಿಗಿರುವ ಪಾಠಾಂತರ ಈ ಛಂದಸ್ಸಿನ ‘ನಿಯಮ’ದಲ್ಲಿ ಬಳುಕು (flexibility) ಹೇಗಾಗಿದೆ ಎಂಬುದನ್ನು ತಾನೇ ಸೂಚಿಸುತ್ತದೆ. ಅದಿರಲಿ, ಪಿರಿಯಕ್ಕರದ ಉದಾಹರಣೆಗಳನ್ನು ಒಮ್ಮೆ ಗಮನಿಸಿ. ಬ್ರಹ್ಮಗಣವು, ಮೊದಲಲ್ಲೇ ಏನು ಎರಡನೆಯ ಗಣಸ್ಥಾನದಿಂದ ಹಿಡಿದು ಆರನೆಯ ಗಣಸ್ಥಾನದವರೆಗೆ ಎಲ್ಲಾ ಸ್ಥಾನಗಳಲ್ಲೂ ವಿಷ್ಣುಗಣದ ಬದಲಿಗೆ ಬಂದಿದೆ. ಕೆಲವೆಡೆ ಮೊದಲ ಬ್ರಹ್ಮಗಣಕ್ಕೆ ಬದಲು ವಿಷ್ಣುಗಣವೂ ಬಳಕೆಯಾಗಿದೆ. ಈ ಛಂದಸ್ಸಿನ ವಿಚಾರವನ್ನು ಕೂಲಂಕಷವಾಗಿ ಗಮನಿಸಿದ ಕೀರ್ತಿಶೇಷ ಪ್ರೊ. ಬಿ.ಎಂ.ಶ್ರೀ. ಅವರು ಪಿರಿಯಕ್ಕರದ ಅನೇಕ ಉದಾಹರಣೆಗಳನ್ನು ಕನ್ನಡ ಕೈಪಿಡಿಯ ತಮ್ಮ ಕನ್ನಡ ಛಂದಸ್ಸಿನ ಚರಿತ್ರೆ[10] ಎಂಬ ಭಾಗದಲ್ಲಿ ವಿಪುಲವಾಗಿಯೇ ಕೊಟ್ಟು ಅದರ ಲಕ್ಷಣವನ್ನು ಹೀಗೆ ಸೂಚಿಸಿದ್ದಾರೆ, ಕಾವ್ಯ-ಪ್ರಯೋಗಗಳ ಆಧಾರದಿಂದ.

“ನಾಲ್ಕು ಪಾದ : ಪ್ರತಿಪಾದದಲ್ಲಿಯೂ ಏಳು ಗಣ : ಮೊದಲು ಬ್ರಹ್ಮ, ಆಮೇಲೆ ಐದು ವಿಷ್ಣು : ಕೊನೆಯಲ್ಲಿ ಒಂದು ರುದ್ರ : ವಿಷ್ಣುವಿಗೆ ಬದಲಾಗಿ ಹಾಡಿಗೆ ಹೊಂದಿ ಬ್ರಹ್ಮ ಬರಬಹುದು; ಮೊದಲನೆಯ ಬ್ರಹ್ಮಕ್ಕೆ ಅಪೂರ್ವವಾಗಿ ವಿಷ್ಣು ಬರಬಹುದು : ಕೊನೆಯ ರುದ್ರ ನಿತ್ಯ.”

ನಾಗವರ್ಮನ ಲಕ್ಷಣವನ್ನು ಬಿ.ಎಂ.ಶ್ರೀ. ಅವರ ಲಕ್ಷಣದೊಂದಿಗೆ ಇಟ್ಟು ನೋಡಿದಾಗ ಪಿರಿಯಕ್ಕರ ಛಂದಸ್ಸಿನ ನಿಯಮದಲ್ಲಿ ಬೇಕಾದಷ್ಟು ವ್ಯತ್ಯಾಸವಾಗಿರುವುದು ಕಾಣುತ್ತದೆ. ಈ ವ್ಯತ್ಯಾಸವು ಪಿರಿಯಕ್ಕರ ಪಡೆದ ವೈವಿಧ್ಯವನ್ನೂ, ಸೊಗಸನ್ನೂ ಸೂಚಿಸುತ್ತಿದೆ. ಹೀಗಾಗಿ, ಇಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬುದಕ್ಕಿಂತ ಕಟ್ಟುನಿಟ್ಟಾದ ತೊಡಕಿನ ನಿಯಮದಿಂದ ಅಕ್ಕರವು ಬಿಡುಗಡೆ ಪಡೆದಿದೆ ಎನ್ನಬಹುದು. ಈ ಕೆಲವು ಉದಾಹರಣೆ ಗಮನಿಸಿ:

ಬ್ರ      ವಿ       ವಿ     ಬ್ರ     ವಿ       ವಿ        ರು
೧)  ಭೋಗ  ಭೂಮಿಜಂ  ಶ್ರೀಧರ  ದೇವಂ  ಸುವಿಧಿ  ನರಾಧಿಪನ  ಚ್ಯುತೇಂದ್ರಂ

ಬ್ರ     ವಿ      ವಿ       ವಿ       ವಿ         ವಿ        ವಿ
೨)  ಪಟ್ಟದಾ  ನೆಯ  ನಾನೆಗಳ್‌  ಗೆಲೆವರೆ  ಕುದುರೆಗಳ್‌  ಕುದುರೆಯಂ  ಕೀೞ್ಮೂಡೆ

ಬ್ರ   ವಿ     ವಿ      ಬ್ರ     ಬ್ರ       ವಿ       ವಿ      ರು
೩)  ಪಿರಿ  ಯ  ಮರಂಗಳೆ  ಮಾಡ  ಮಾಗೆ  ಪೊಳೆವೆಳದಳಿ  ರ್ಗಳೆ  ಸೆಜ್ಜೆಯಾಗೆ

ಬ್ರ      ವಿ       ವಿ     ಬ್ರ      ವಿ        ವಿ       ರು
೪)  ಪಿಱಿಯ  ಮಡುಗಳೆ  ಮಜ್ಜನ  ಮಾಗೆ  ಪೊಸನಾರೆ  ದೇವಾಂಗ  ವಸ್ತ್ರಮಾಗೆ

ಒಂದನೆಯ ಉದಾಹರಣೆಯಲ್ಲಿ ನಾಲ್ಕನೆಯ ಗಣ – ವಿಷ್ಣುವಿಗೆ ಬದಲಾಗಿ ಬ್ರಹ್ಮ ಬಂದಿದೆ.

ಎರಡನೆಯ ಉದಾಹರಣೆಯಲ್ಲಿ ಏಳನೆಯ ಗಣ – ರುದ್ರಕ್ಕೆ ಬದಲಾಗಿ ವಿಷ್ಣುವೇ ಬಂದಿದೆ. ಇದನ್ನು ಕೀಱುಮಾಡೆ ಎಂದುಚ್ಚರಿಸಿ ರುದ್ರಗಣವಾಗಿಸಬಹುದೆಂಬುದು ಶ್ರೀಯವರ ವಾದ. ಅಂಶಗಣದ ಮೂಲದ್ರವ್ಯ ನಮ್ಯತೆ (ಬಳಕು) ಅಲ್ಲವೆ? ಗೇಯತೆಗಾಗಿ ಹಾಗೆ ಮಾಡುವುದರಿಂದ ಛಂದಸ್ಸಿನ ನಿಯಮ ಉಳಿಸಿದಂತೆಯೂ ಆಯಿತು; ಬಳುಕನ್ನು ತಂದಂತೆಯೂ ಆಯಿತು. ಆದರೆ ಮೂರನೆಯ ಉದಾಹರಣೆಯಲ್ಲಿ ಮೊದಲ ಗಣವೇ ವಿಷ್ಣುವಾಗಿದೆ (ಪಿರಿಯಾ ಮ) ಎಂಬಲ್ಲಿ ಇದನ್ನು ಬ್ರಹ್ಮಗಣವೆಂದು ಸಾಧಿಸಬಹುದು. ಆದರೆ ಎರಡನೆಯ ವಿಷ್ಣುಗಣ ಮಾತ್ರ ಪುರಾಕೃತ ಶಬ್ಧದಂತೆ ‘ಮರಂಗಳೆ’ ಎನ್ನುವುದು ಕನ್ನಡದ ಅಂಶಗಣದ ಜಾಯಮಾನಕ್ಕೆ ಒಗ್ಗದು.

ಮತ್ತೆ ಇಲ್ಲಿ ಮೂರು ಮತ್ತು ನಾಲ್ಕನೆ ಗಣಗಳೆರಡೂ ಬ್ರಹ್ಮಗಣಗಳಾಗಿವೆ (ವಿಷ್ಣು ವಿಗೆ ಬದಲಾಗಿ)

ನಾಲ್ಕನೆಯ ಉದಾಹರಣೆಯಲ್ಲಿ ಮತ್ತೆ ನಾಲ್ಕನೆಯ ಗಣ ಬ್ರಹ್ಮವಾಗಿದೆ, ವಿಷ್ಣುವಿಗೆ ಬದಲಾಗಿ. ಇಲ್ಲೆಲ್ಲ ಗೋಚರಿಸುವುದು ಕವಿಪ್ರತಿಭೆ ಅರ್ಥಪೂರ್ಣವಾಗಿ ಬ್ರಹ್ಮಕ್ಕೆ ಬದಲು ವಿಷ್ಣು; ರುದ್ರಕ್ಕೆ ಬದಲು ವಿಷ್ಣು ಹೀಗೆ ಗಣಗಳನ್ನು ತಂದು ಬಳುಕು ತಂದಿರುವುದು ಗಮನಾರ್ಹ.

ಈ ಪಿರಿಯಕ್ಕರದಲ್ಲಿ ಉಂಟಾದ ಸ್ವಾತಂತ್ರ್ಯ ಹೇಗೆ ಆ ಛಂದಸ್ಸಿನ ವಿಕಾಸದ ಗುರುತಾಯಿತು ಎಂದು ಹಳಗನ್ನಡ, ನಡುಗನ್ನಡ ಕಾವ್ಯಗಳಲ್ಲಷ್ಟೇ ನೋಡಿದರೆ ಆಗಲಿಲ್ಲ. ಹೊಸಗನ್ನಡ ಕವಿ ಶ್ರೀ ದ. ರಾ. ಬೇಂದ್ರೆ ಅವರು ಪಿರಿಯಕ್ಕರ ಛಂದಸ್ಸು ಹೇಗೆ ಹೊಸ ಒಂದು ರೂಪವನ್ನೆ ತಮ್ಮ ಕೈಯಲ್ಲಿ ಪಡೆದಿದೆ ಎಂಬುದನ್ನು ಸಖಿಗೀತ ಎಂಬ ದೀರ್ಘ ಕವನದಲ್ಲಿ ಹೀಗೆ ಹೇಳಿದ್ದಾರೆ:

ಅಕ್ಕರ ಛಂದವು ಸಾಂಗತ್ಯಸಂಸ್ಕಾರ
ಹೊಂದಿಲ್ಲಿ ಬಂದಿದೆ ಹೊಸಹೊಸದು[11]

ಕವಿಗಳ ಕೈಯಲ್ಲಿ ಹೇಗೆ ವಿಕಾಸವಾಗುತ್ತ ನಿಯಮ ಬಂಧನಗಳನ್ನು ಕಳಚಿ ಕೊಳ್ಳುತ್ತ ಹೋಗುತ್ತದೆ ಹೋಗಿದೆ ಎಂಬುದನ್ನು ಇದರಿಂದ ಇನ್ನಷ್ಟು ಸ್ಪಷ್ಪತರವಾಗಿ ತಿಳಿದಂತಾಯಿತು. ಕವಿ ಛಂದಸ್ಸಿನ ನಿಯಮಗಳನ್ನು ಆಷ್ಟಿಷ್ಟು ಕಡಿಮೆ ಮಾಡಲು ಯತ್ನಿಸುವುದು, ನಿಯಮಗಳನ್ನು ಪಾಲಿಸುವುದು ಶ್ರಮವಾಗುತ್ತದೆ ಎಂಬ ಕಾರಣಕ್ಕಾಗಿ ಅಲ್ಲ. ನಿಯಮಗಳು ಎಂಥ ಪ್ರತಿಭೆಗಾದರೂ ತೊಡಕೇ ಆಗುತ್ತವೆಯಾದ್ದರಿಂದ. ಒಂದೆರಡು ಉದಾಹರಣೆಗಳನ್ನು ನೋಡೋಣ. ಭಾಮಿನಿ ಷಟ್ಟದಿಯಲ್ಲಿಯೇ ತನ್ನ ಪ್ರತಿಭೆಯ ವಿರಾಡ್ರೂಪದರ್ಶನ ಮಾಡಿಸುವ ಗದುಗಿನ ನಾರಣಪ್ಪನ ದೈತ್ಯಪ್ರತಿಭೆ ಕೂಡ ತನ್ನ ಪ್ರಾರ್ಥನಾ ಪದ್ಯದ ಕೊನೆಯ ಪಾದದಲ್ಲೇ ‘ಕಾವುದಾನತ ಜಗವ ಗದುಗಿನ ವೀರನಾರಯಣ’ ಎಂದು ಬಳಸಿರುವುದನ್ನು ಗಮನಿಸಿ, ಛಂದಸ್ಸಿನ ನಿಯಮ ನಾರಾಯಣ ಪದದ ಕೈಕಾಲು ಮುರಿದು ನರಯಣನೆ, ನಾರಯಣ ಎಂದೆಲ್ಲ ಆಗುವಂತೆ ಮಾಡಿದೆ. ಸಂಸ್ಕೃತದ ಅಮರುಶತಕದ ಈ ವೃತ್ತವನ್ನು ಗಮನಿಸಿ-

ಕಾಂತೇ ತಲ್ಪಮುಪಾಗತೇ ವಿಗಲಿತಾ ನೀವೀ ಸ್ವಯಂ ಬಂಧನಾತ್
ವಾಸೋ ವಿಶ್ಲಥಮೇಖಲಾಗುಣ ಧೃತಂ ಕಿಂಚಿನ್ನಿತಂಬೇ ಸ್ಥಿತಂ
ಏತಾವತ್ಸಖಿ ವೇದ್ಮಿ ಸಾಂಪ್ರತಮಹಂ ತಸ್ಯಾಂಗ ಸಂಗೇ ಪುನಃ
ಕೋsಯಂ ಕಾಸ್ಮಿರತಂ ನುವಾ ಕಥಮಿತಿ ಸ್ವಲ್ಪೋsಪಿ ಮೇ ನಸ್ಮೃತಿಃ |[12]

ಪದ್ಯದ ತಿರುಳಿನ ಭಾಗ ‘ಏತಾವತ್ಸಖಿ ವೇದ್ಮಿ ಸಾಂಪ್ರತಮಹಂ’ ಎಂಬಲ್ಲಿಗೆ ನಿಲ್ಲಬೇಕು. ಅದು ಅದ್ಭುತವಾದ ಅಂತ್ಯ. ಅಲ್ಲಿಂದ ಮುಂದಕ್ಕೆ ಭಾವ ಆವಿಶ್ರಾಂತವಾಗಿ ಧ್ವನಿತವಾಗುತ್ತ ಹೋಗುತ್ತದೆ. ‘ಸಖಿ ನನಗೀಗ ನೆನಪಿರುವುದು ಇಷ್ಟೇ’ ಎಂದವಳ ಬಾಯಿಂದಲೇ ಕವಿ ಮುಂದೆ “ನನ್ನ ಇನಿಯನ ಅಂಗಸಂಗವಾದ ಮರುಕ್ಷಣವೆ ಅವನು ಯಾರು? ನಾನು ಮಾರು? ರತಿಸುಖ ಯಾವ ಬಗೆಯದು? ಇವು ಯಾವುವೂ ನನಗೆ ಸ್ಪಲ್ಪವೂ ನೆನಪಿಲ್ಲ”[13] ಎಂದು ಹೇಳಿಸುವುದು ಪದ್ಯದ ಮೊದಲ ಅರ್ಧದ ಅರ್ಥವನ್ನು ನೀರು ಜೊಳ್ಳಾಗಿ ಮಾಡಿಬಿಡುತ್ತದೆ. ಬಹುಶಃ ಕವಿ ಎರಡೂವರೆ ಸಾಲಿಗೇ ಭಾವ ಮುಗಿದರೂ ವೃತ್ತವನ್ನು ಮುಗಿಸಲು ರಸ್ತೆಯ ಹಳ್ಳಕ್ಕೆ ಜಲ್ಲಿ ತುಂಬಿದ ಹಾಗೆ ಈ ಒಂದೂವರೆ ಸಾಲಿನ ಭಾಗವನ್ನು ತುಂಬಿರಬೇಕು.

ಇಷ್ಟನ್ನು ಗಮನಿಸಿದ ಮೇಲೆ ನಾವು ಛಂದಸ್ಸಿನ ವಿಷಯವಾಗಿ ಹೀಗೆ ಹೇಳಬಹುದು:

) ಕಟ್ಟುನಿಟ್ಟಾದ ಛಂದಸ್ಸಿನ ನಿಯಮದಲ್ಲಿ ಶಿಥಿಲತೆ ತೋರಿ ವೈವಿಧ್ಯ ಮೂಡುತ್ತಿದೆ.[14]

) ಛಂದಸ್ಸು ಇರುವುದು[15] ಭಾವಾಭಿವ್ಯಕ್ತಿಗಾಗಿ ಭಾವವು ಸಮುಚಿತವಾಗಿ ಅಭಿವ್ಯಕ್ತವಾಗುವ ದೃಷ್ಟಿಯಿಂದಷ್ಟೇ ಆ ಛಂದಸ್ಸಿನ ನಿಯಮಗಳಿಗೆ ಗೌರವ.

) ಭಾವವು ಸಹಜವಾಗಿ ಪ್ರಕಟವಾಗಲು ಇಂಥ ಛಂದಸ್ಸೇ ಆಗಬೇಕು ಎಂಬ ಹಟದ ನಿಯಮ ಯಾವುದೂ ಇಲ್ಲ. ವೃತ್ತದಲ್ಲಾಗಲಿ, ಕಂದಾದಲ್ಲಾಗಲಿ, ಷಟ್ಟದಿಯಲ್ಲಾಗಲಿ ಅಥವಾ ವಚನದಲ್ಲಾಗಲಿ ಭಾವವು ಸಮುಚಿತವಾಗಿ ಅಭಿವ್ಯಕ್ತ ಆದರೆ ಸಾಕು.

ಈ ಅಭಿಪ್ರಾಯಗಳನ್ನು ಸೋದಾಹರಣವಾಗಿ ಪರೀಕ್ಷಿಸೋಣ. ನಾಗವರ್ಮನ ‘ಕರುಣಿಸುದೈವಮೆ…..’[16]  ಎಂಬ ಪದ್ಯವನ್ನೂ ಮಹಾದೇವಿಯಕ್ಕನ “ಚಿಲಿಮಿಲಿ ಎಂದೋದುವ ಗಿಳಿಗಳಿರಾ….”[17] ಎಂಬ ವಚನವನ್ನೂ ಪಂಪಕವಿಯ ಆದಿಪುರಾಣದ ಈ ಪದ್ಯದೊಡನೆ ಹೋಲಿಸಿ:

ಸುರತರುನಂದನಂಗಳಿರ ರತ್ನ ಪಿನದ್ಧವಿಮಾನ ಕುಟ್ಟಿಮಾಂ
ತರ ಸುರತಾಲಯಂಗಳ ಚಾರುವಿಲೋಲ ಕಟಾಕ್ಷಪಾತ ಸೌಂ
ದರ ಪರಿವಾರ ದೇವಿಯರಿರಾ ಕಡುಕೆಯ್ದು ಕೃತಾಂತನಿಂತು ನಿ
ರ್ನೆರಮೆಱೆದುಯ್ಯೆ ಬಾರಿಸದೆ ಕೆಮ್ಮನುಪೇಕ್ಷಿಸಿ ನೋಡುತಿರ್ಪರೇ[18]

ಯಾರಾದರೂ ಈ ಮೂರು ಉದಾಹರಣೆಗಳನ್ನೂ ಗಮನಿಸಿ ‘ಪಂಪ ನೀನು ವಚನದಲ್ಲೇಕೆ ಬರೆಯಲಿಲ್ಲ? ನಾಗವರ್ಮ, ನೀನು ವೃತ್ತದಲ್ಲೇಕೆ ಬರೆಯಲಿಲ್ಲ? ಮಹಾದೇವಿಯಕ್ಕ ನೀನು ಕಂದದಲ್ಲೋ ವೃತ್ತದಲ್ಲೋ ಯಾಕೆ ಬರೆಯಲಿಲ್ಲ?’ ಎಂದು ಕುತರ್ಕ ಮಾಡಲು ಹೋಗುವುದಿಲ್ಲ; ವೃತ್ತದಲ್ಲಿ ಬರೆದಿರಲಿ, ಕಂದದಲ್ಲಿ ಬರೆದಿರಲಿ ಅಥವಾ ಇನ್ನಾವುದೇ ಛಂದಸ್ಸಿನಲ್ಲಿ ಬರೆದಿರಲಿ ಬಳಸಿರುವ ಛಂದಸ್ಸು ವ್ಯಕ್ತವಾಗಬೇಕಾದ ಭಾವವನ್ನು ಚೆನ್ನಾಗಿ ವ್ಯಕ್ತಗೊಳಿಸಿದೆಯೆ ಅಥವಾ ಇಲ್ಲವೆ ಎಂಬುದಷ್ಟನ್ನೆ ಸಹೃದಯ ಗಮನಿಸುತ್ತಾನೆ. ಭಾವ ಬರೆದ ರೀತಿಯಲ್ಲಿ ಪುಷ್ಟವಾಗಿದ್ದರೆ ತೀರಿತು. ವೃತ್ತದಲ್ಲಿ ಬರೆದದ್ದರಿಂದ ಉತ್ತಮ; ಕಂದದಲ್ಲಿ ಬರೆದದ್ದರಿಂದ ಮಧ್ಯಮ; ವಚನದಲ್ಲಿ ಬರೆದದ್ದರಿಂದ ಅಧಮ ಎಂದು ಹೇಳಲಿಕ್ಕೆ ಸಾಧವೆ? ಕೇವಲ[19] ಚಂದಸ್ಸು ಬಳಸುವುದರಿಂದಷ್ಟೇ ಯಾರೂ ಪ್ರತಿಭೆಯ ದೃಷ್ಟಿಯಲ್ಲಿ ಮೇಲಾದವರು ಅಥವಾ ಕೀಳಾದವರು ಆಗಲಾರರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಾಂಪ್ರದಾಯಿಕ ಛಂದಸ್ಸು ಅಥವಾ ಅದರ ನಿಯಮ ಪಂಪನಂಥವರಿಗೂ ಹೇಗೆ ತೊಡಕಾಗುತ್ತದೆ ಎಂಬುದಕ್ಕೆ ಈ ಕೆಳಗಿನ ಪದ್ಯ ನೋಡಿ.

ಒಡಲೊಳೆಜೀವಮಿರ್ದು ಗಡ ಸಂಚಿಸುತಿರ್ಪುದು ಪುಣ್ಯ ಪಾಪಮಂ
ಗಡ ಬಱೆಕತ್ತ ಬೇಱೆ ಪೆಱತೊಂದೊಡಲೊಳ್ ಗಡ ತಾನೆ ನಿಂದೊಡಂ
ಬಡುವುದು ಧರ್ಮ ಕರ್ಮ ಫಲಮಂ ಗಡ ಸತ್ತನೆ ಮತ್ತೆ ಪುಟ್ಟುವಂ
ಗಡ ಪುಸಿಕಾಣ ಡಂಬಮಿದು ಖೇಚರ ನೀನಿದನೆಂತು ನಂಬಿದೋ?[20]

ಈ ಪದ್ಯದಲ್ಲಿ ಬರುವ ‘ಗಡ’ದ ಬಳಕೆಯನ್ನು ಷಡಕ್ಷರಿಯ ಪದ್ಯದಲ್ಲಿ ಬರುವ ‘ಗಡ’ದ ಬಳಕೆಯೊಂದಿಗೆ ಹೋಲಿಸಿ, ಛಂದಸ್ಸಿನ ನಿಯಮ ಹೇಗೆ ಒಂದೇ ವಾಕ್ಯದ ಅರ್ಥದಲ್ಲಿ ಮತ್ತು ಕೊನೆಯಲ್ಲಿ ‘ಗಡ’ ವನ್ನು ಎರಡು ಬಾರಿ ಬಳಸುವಂತೆ ಮಾಡಿ ಪಂಪನ ವಾಗ್ಗುಂಫನಕ್ಕೂ ತೊಡರುಗಾಲು ಹಾಕಿದೆ ಎಂಬುದನ್ನು ಗಮನಿಸಿ.

ಇಲ್ಲಿಯವರೆಗೆ ಹೇಳಿದುದರ ಸಾರಾಂಶ ಇಷ್ಟು: ಛಂದಸ್ಸಿನ ನಿಯಮ ಇದ್ದಂತೆ ಉಳಿದಿಲ್ಲ. ಇರುವ ನಿಯಮಗಳು ತೊಡರಾಗುತ್ತ ಬಂದಂತೆ ಸಮರ್ಥ ಕವಿಗಳು ನಿಯಮಗಳನ್ನು ಕಡಿಮೆ ಮಾಡಿಕೊಳ್ಳುತ್ತ ಬಂದಿದ್ದಾರೆ. ನಿಯಮಗಳನ್ನು ಉಲ್ಲಂಘಿಸುವ ಅಥವಾ ಮುರಿಯುವ ಹಟಕ್ಕಾಗಿ ಅಲ್ಲ ನಿಯಮಗಳನ್ನು ಕಡಿಮೆ ಮಾಡಿಕೊಂಡಿರುವುದು; ಆ ನಿಯಮಗಳನ್ನು ಪಾಲಿಸುವ ಶಕ್ತಿಯಿಲ್ಲದೆ ಇಲ್ಲವೆ ನಿಯಮಗಳ ಜ್ಞಾನವಿಲ್ಲದೆಯೂ ಹಾಗೆ ಮಾಡಿಲ್ಲ.[21] ಛಂದಸ್ಸಿನಲ್ಲಿ ಸೊಗಸನ್ನು ಹಾಗೂ ವೈವಿಧ್ಯವನ್ನು ತಂದು ಕೊಳ್ಳುವುದಕ್ಕೋಸ್ಕರ, ಭಾವಾಭಿವ್ಯಕ್ತಿಗೋಸ್ಕರ, ಸ್ವಾತಂತ್ರ್ಯ ವಹಿಸಿ ನಿಯಮಗಳನ್ನು ಸಡಿಲಿಸಿಕೊಂಡು ಬಂದರು. ಈ ಅರ್ಥದಲ್ಲಿ ಪ್ರತಿ ಛಂದಸ್ಸಿನ ಚರಿತ್ರೆಯೂ ಆ ಛಂದಸ್ಸು ಕಾಲಕಾಲಕ್ಕೆ ತನ್ನ ಸಾಂಪ್ರದಾಯಿಕ ಶುಷ್ಕ ನಿಯಮಗಳನ್ನು ಒಂದೊಂದಾಗಿ ಕಳೆದು ಕೊಳ್ಳುತ್ತ ವೈವಿಧ್ಯಕ್ಕೆ ಅವಕಾಶ ಮಾಡಿಕೊಂಡ ವಿಕಾಸದ ಕಥೆಯೇ ಆಗಿದೆ. ಈ ಹಿನ್ನಲೆಯಿಂದ ಹೊಸಗನ್ನಡ ಕಾವ್ಯದ ಲಯವನ್ನೂ, ‘ನವ್ಯಕಾವ್ಯ’ ದಲ್ಲಿ ಬರುವ ‘ಸ್ವಚ್ಛಂದ ಛಂದಸ್ಸ’ನ್ನೂ ಗಮನವಿಟ್ಟು ನೋಡಿದರೆ ಛಂದಸ್ಸಿನಲ್ಲಿ ಕಾಣುತ್ತಿರುವ ಸ್ವಾತಂತ್ರ್ಯ ಶಕ್ತಕವಿಯ ಕೈಯಲ್ಲಿ ಎಂಥ ಅದ್ಭುತ ವಿಕಾಸವನ್ನು ಹಾಗೂ ಸತ್ತ್ವವನ್ನು ಪಡೆಯುತ್ತಿದೆ ಎಂಬುದು ವೇದ್ಯವಾಗದಿರದು.

ಅನುಬಂಧ

ಅಲ್ಲಿ ಉದಾಹರಿಸಿರುವ ನಾಲ್ಕು ಕಂದಪದ್ಯಗಳನ್ನು ಗಮನಿಸಿದರೆ ಆಶ್ಚರ್ಯವೆನಿಸುವುದು. ಅವು ಕಂದಪದ್ಯದ ಲಕ್ಷಣಗಳಿಗೆ ಅನುಸಾರವಾಗಿಲ್ಲ ಎಂಬುದು. ಅವುಗಳಲ್ಲಿ ಕೊನೆಯ ಕಂದದ ಉದಾಹರಣೆಯನ್ನು ಬಿಟ್ಟರೆ ಉಳಿದ ಮೂರು ಕಂದಗಳಲ್ಲಿ ಕಂದಪದ್ಯದ ಲಕ್ಷಣ ಆಗಿರುವ ಮೊದಲಗಣದ ನಿಯಮದ ಉಲ್ಲಂಘನೆ ಮೊದಲ ಪದ್ಯದ ಮೊದಲ ಹಾಗೂ ಮೂರನೆಯ ಸಾಲಿನಲ್ಲಿ ಆಗಿದೆ. ಆದರೆ ಪದ್ಯದ ಓಟಕ್ಕೆ ಅರ್ಥಕ್ಕೆ ಅಲ್ಲಿ ಯಾವ ಭಾಧೆಯೂ ಆಗಿಲ್ಲ. ಗಮನಿಸಿ:

– ⋃ – – ⋃ – ⋃ ⋃
ಶ್ರೀ ವಿರೂಪಾಕ್ಷದೇವನಿ
ನಾ ವೀರಂ ಪುಟ್ಟಿ ವಿಬುಧನುತನಾದಂದೊ
ಳಾ ವಿರೂಪಾಕ್ಷ ನೃಪನಿಂ
ದೀ ವೀರಂ ಜನಿಸಿ ನುತನಾಗಿರ್ಪಂ

ಮೊದಲ ಸಾಲಿನ ಮೊದಲ ಗಣ ನಾಲ್ಕು ಮಾತ್ರೆಗಳಾಗುವುದಿಲ್ಲ – ಮೂರು + ಐದು ಮಾತ್ರೆಗಳ ಗಣವಾಗುತ್ತದೆ; ಮುಂದೆ ನಾಲ್ಕು ಮಾತ್ರೆಗಳ ಗಣವಿದ್ದು ಮೊದಲ ಪಂಕ್ತಿಯ ಗಣನೆಗೆ ಹನ್ನೆರಡೇ ಮಾತ್ರೆಗಳಾಗುತ್ತವೆ. ಮತ್ತೆ ಮೂರನೆಯ ಸಾಲು ಇದೇ ರೀತಿಯ ರಚನೆಯಿಂದ ( ಮೂರು + ಐದು ಮಾತ್ರೆಗಳು ಮತ್ತು ನಾಲ್ಕು ಮಾತ್ರೆಗಳು)

ಮೊದಲ ಮತ್ತು ಮೂರನೆ ಸಾಲಿನ ಗಣ ನಾಲ್ಕು ಮಾತ್ರೆಗಳದಾಗಿಲ್ಲವೆಂಬುದೊಂದೇ ಕೊರತೆ. ಎರಡನೆಯ ಕಂದ ನಿಘಂಟಿನದು. ಅದ್ದರಿಂದ ಅಲ್ಲಿ ಕಾವ್ಯದ ಸ್ವಾದವನ್ನು ಹುಡುಕುವ ಅಗತ್ಯ ಬೀಳುವುದಿಲ್ಲ. ಆದರೆ ನಾಲ್ಕನೇ ಕಂದ ಹೀಗಿದೆ:

⋃ ⋃ ⋃ – ⋃ ⋃⋃,– –
ತಿಮಿರಡಾಂಗಿದುದು ಚೇತ
ಸ್ತಿವಿರಾತ್ಮಧ್ಯಾನದಿಂದೆ ಭಜಕರ್ಗಾಗಳ್
ತವಿಪಂತೆ ವಿಶ್ವಪತಿಯು
ಪ್ಪವಡಿಸೆ ತಾವೆಯ್ದೆ ಪಾಡಿದರ್ಭಾವಕಿಯರ್‌.

ಇಲ್ಲಿಯೂ ಮೊದಲ ಸಾಲಿನ ಗಣವಿನ್ಯಾಸ ಬೇರೆಯೇ ಆಗುತ್ತದೆ. ಇಲ್ಲಿಯೂ ಮೊದಲ ಗಣ ಮೂರು ಮತ್ತು ಐದು (ತಿಮಿರ = ⋃ ⋃⋃ + ಡಂಗಿದುದು = – ⋃ ⋃⋃) ಮಾತ್ರೆಗಳ ಗಣಗಳಿಂದಾಗಿದೆ ಮುಂದೆ ನಾಲ್ಕು ಮಾತ್ರೆಗಳ ಗಣವಿದೆ. ಇಲ್ಲಿಯ ಗಮನಾರ್ಹ ಅಂಶವೆಂದರೆ, ತಿಮಿರಡಂಗಿದುದು ಎಂಬ ಅಪಪ್ರಯೋಗ. ತಿಮಿರವಡಂಗಿದುದು; ತಿಮಿರಮಡಂಗಿದುದು ಇಂಥ ರೀತಿಯಿರಬೇಕಿತ್ತು. ತಿಮಿರ +ಅಡಂಗಿದುದು ಎಂದಾಗ, ‘ವ’ ಕಾರಾಗಮ ಸಂಧಿಯಾಗುತ್ತದೆ. ಆದರೆ ‘ಆಗಮ’ ವಿಲ್ಲದ ಪ್ರಯೋಗ ಆಶುದ್ಧ ಪ್ರಯೋಗವಾಗುತ್ತದೆ. ಇಲ್ಲಿ ಛಂದಸ್ಸಿನ ಗಣದ ನಿಯಮದ ಉಲ್ಲಂಘನೆಯೇ ಅಲ್ಲದೆ ಸಂಧಿ ಪದದ ನಿಯಮದ ಉಲ್ಲಂಘನೆಕೂಡ ಆಗಿದೆ. ಬಹುಶಃ ಇಂಥಲ್ಲಿ ಇದು ದೋಷ ಎನ್ನಬಹುದೋ ಏನೋ. ಈ ಪದುಗಳನ್ನು ಕನ್ನಡ ಕೈಪಿಡಿ (ಪು. ೧೧೩-೧೧೪) ಯಿಂದ ಉದ್ಧರಿಸಲಾಗಿದೆ.

[1] ವಿ. ಎಸ್. ಅಪ್ಟೆ ಅವರ ಸಂಸ್ಕೃತ -ಇಂಗ್ಲಿಷ್‌ ಅರ್ಥ ಕೋಶದ ಪುಟ ೪೪೧ ರಲ್ಲಿರುವ ಏಳು ಅರ್ಥಗಳನ್ನು ಗಮನಿಸಬಹುದು.

[2] ಸಂಸ್ಕೃತದಿಂದ ನೇರವಾಗಿ ಬಂದಿದೆಯೋ ಅಥವಾ ಪ್ರಾಕೃತದ ಮೂಲಕ ಬಂದಿದೆಯೋ ಎಂಬುದು ಗಮನಾರ್ಹ. ಸಂಸ್ಕೃತದ ಮೂಲಕವೇ ಬಂದಿರಬಹುದು ಎಂಬುದು ನನ್ನ ಗ್ರಹಿಕೆ

[3] ಕಂದವನ್ನು ಪೂರ್ವಾರ್ಧ ಮತ್ತು ಉತ್ತರಾರ್ಧ ಎಂದು ಎರಡು ಭಾಗ ಮಾಡಿ ಒಂದೊಂದು ಭಾಗದಲ್ಲಿ ನಾಲ್ಕು ಮಾತ್ರೆಯ ಎಂಟು ಗಣಗಳನ್ನು ಗುರುತಿಸಲಾಗುತ್ತದೆ.

[4] ಕಂದದಲ್ಲಿ ಬರುವ ಗಣಗಳನ್ನು ನಾಲ್ಕು ಮಾತ್ರೆಯ ಗಣಗಳು ಎಂದು ಕರೆದಿಲ್ಲ. ನಾಗವರ್ಮ ಛಂದೋಂಬುಧಿಯಲ್ಲಿ ಇವನ್ನು ಗಿರಿಶಂ (⋃ ⋃ –), ಧೂರ್ಜಟಿ (– ⋃ ⋃ ), ಶರ್ವಂ (– –) , ಪುರಾರಿ (⋃ – ⋃) ಮತ್ತು ಪುರಿಪು (⋃ ⋃ ⋃ ⋃) ಗಣಗಳು ಎಂದೇ ಕರೆಯುತ್ತಾನೆ.

[5] ಕೇಶಿರಾಜನ ಶಬ್ಧಮಣಿದರ್ಪಣದ ಕೊನೆಯ ವೃತ್ತ. ಛಂದೋಂಬುಧಿ: ಚತುರ್ಥಾಧಿಕಾರ, ಪದ್ಯ ೩.

[6] ಕರ್ನಾಟಕ ಕಾದಂಬರೀ ಸಂಗ್ರಹ, ೪-೯೫.

[7] ಸಂಕ್ಷಿಪ್ತ ರಾಜಶೇಖರ ವಿಳಾಸ – ಸಂಪಾದಕರು: ಟಿ. ಯನ್‌. ಚೆನ್ನಪ್ಪ, ಪುಟ ೨೬. ದ್ವಿತೀಯಾಶ್ವಾಸಂ, ಪದ್ಯ ೧೬.

[8] ಛಂದೋಂಬುಧಿ : ಪ್ರಥಮಾಧಿಕಾರ, ಪದ್ಯ ೧೬.

[9] ಛಂದೋಂಬುಧಿ: ೫-೪ರ ಪಾಠಾಂತರಗಳನ್ನು ಕೈಬಿಡಲಾಗಿದೆ. ಇಲ್ಲಿ ಬಳಸಿಕೊಂಡಿರುವ ಪ್ರತಿ ಶ್ರೀ ಎಚ್‌. ಎಸ್‌. ರಾಮಸ್ವಾಮಿ ಅಯ್ಯಂಗಾರ್‌ ಅವರು ಸಂಪಾದಿಸಿದ್ದು.

[10] ಕನ್ನಡ ಕೈಪಿಡಿ: ಸಂಫುಟ -೧, ಪು. ೧೨೬-೧೩೦.

[11] ಸಖೀಗೀತ. ೧೯೫೮ರ ಚತುರ್ಥಾವೃತ್ತಿ. ಪುಟ ೪೬ ಪಙ್ಕ್ತಿ ೯೩೭-೯೩೮

[12] ಅಮರುಶತಕ, ಪುಟ ೯೬.

[13] ಅದೇ ಪದ್ಯದ ಅನುವಾದ.

[14] ಇಲ್ಲಿಯವರೆಗೆ ಈ ವಿಚಾರವನ್ನು ನಿದರ್ಶನ ಸಹಿತವಾಗಿ ನೋಡಿ ಆಗಿದೆ. ಮಿಕ್ಕವನ್ನು ಮುಂದೆ ಪರೀಕ್ಷಿಸಲಾಗಿದೆ.

[15] ಛಂದೋಬದ್ಧವಾಗಿದ್ದರೆ ನೆನಪಿಡಲು ಅನುಕೂಲ ಎಂಬ ವಾದ ಕಾವ್ಯಕ್ಕೆ ಬೇಕಾದ ಛಂದಸ್ಸಿನ ವಿಚಾರ ಮಾಡುವಾಗ ತೀರ ಗೌಣವಾಗುತ್ತದೆ.

[16] ಹಿಂದೆಯೇ ಈ ಪದ್ಯದ ಪೂರ್ತಿಪಾಠ ಉದ್ಧರಿಸಲ್ಪಟ್ಟಿದೆ.

[17] ಹಿಂದೆ ಉದ್ಧರಿಸಲಾಗಿದೆ.

[18] ಆದಿಪುರಾಣ, ೩-೪

[19] “ಲೋಕೋಪಕಾರ” ದಂಥ ಶಾಸ್ತ್ರಗ್ರಂಥಗಳೂ ಛಂದೋಬದ್ಧವಾಗಿವೆ. ಆದರ ಹಿರಿಮೆ ಛಂದಸ್ಸಿಗಿಂತಲೂ ವಿಷಯ ನಿರೂಪಣೆ ಹಾಗೂ ವಿಷಯದ ಘನತೆಯನ್ನವಲಂಬಿಸುತ್ತದೆ. ಅಲ್ಲದೆ ಕವಿ ಪ್ರತಿಭೆ ತನ್ನ ಭಾವಕೆ ತಕ್ಕ ಛಂದಸ್ಸನ್ನೂ ಗುರುತಿಸಿಕೊಳ್ಳಬೇಕಾಗುತ್ತದೆ. ರತ್ನಾಕರನ ಸಾಂಗತ್ಯ ಈ ದೃಷ್ಟಿಯಿಂದ ವಿಚಾರಾರ್ಹವಾಗಿದೆ.

[20] ಆದಿಪುರಾಣ, ೨-೮

[21] ಹೀಗೆಂದರೆ ಇದರ ಅರ್ಥವು ನಿಯಮ ಭಂಗವಾದಲೆಲ್ಲ ಚೆಲುವಾಗಲೇಬೇಕು ಎಂಬ ಮೊಂಡುವಾದವಾಗುವುದಿಲ್ಲ: ಛಂದಸ್ಸಿನ ರಹಸ್ಯವನ್ನು ಅರಿಯುವಲ್ಲಿ ಅಸಮರ್ಥನೂ, ಅದನ್ನು ತತ್ತ್ವಯುತವಾಗಿ ಬಳಸುವಲ್ಲಿ ದುರ್ಬಲನೂ ಆದವನ ಕೈಯಲ್ಲಿ ಈ ನಿಯಮ ಭಂಗವು ಹಾಸ್ಯಾಸ್ಪದವಾಗಿರುವುದೂ ಉಂಟು. ಕನ್ನಡ ಕೈಪಿಡಿ ಸಂಪುಟ ೧ರ ೧೧೩ನೆಯ ಪುಟದಲ್ಲಿ ಕಂದಪದ್ಯಕ್ಕೆ ಕೆಲವು ಉದಾಹರಣೆಗಳನ್ನು ಅನುಬಂಧಲ್ಲಿ ಗಮನಿಸಿ.