ಮೊದಲ ಸಾಲಿನಲ್ಲಿ ಏಳು ಮಾತ್ರೆಗಳಿವೆ ೩, ೪ ಮಾತ್ರೆಗಳು. ಎರಡನೆಯ ಸಾಲಿನಲ್ಲಿ ಏಳು ಮಾತ್ರೆಗಳಿವೆ, ೩, ೪ ಮಾತ್ರೆಗಳು. ಅದರೆ ಮೊದಲ ಸಾಲಿನಲ್ಲಿ ಗುರು ಲಘು, ಗುರು ಲಘು ಲಘು ಮಾತ್ರೆಗಳಿದ್ದರೆ, ಎರಡನೆ ಸಾಲಿನಲ್ಲಿ ಏಳೂ ಲಘುಗಳೇ (⋃⋃⋃⋃ ⋃⋃⋃) ಮೂರನೆಯ ಸಾಲು ಮತ್ತು ನಾಲ್ಕನೆಯ ಸಾಲುಗಳನ್ನು ಒಟ್ಟಾಗಿಯೇ ಗಮನಿಸಬಹುದು – ೫, ೬+೫+೪ ಮಾತ್ರೆಗಳ ಒಟ್ಟು ಇಪ್ಪತ್ತು ಮಾತ್ರೆಗಳ ನಾಲ್ಕು ಗಣಗಳಿವೆ. (ಅರ್ಥಕ್ಕಾಗಿ ಪದವನ್ನು ಬಿಡಿಸಿ ಬರೆಯಲಾಗಿದೆ. ಮೇಲಿನ ಪದ್ಯದ ಸಾಲಿನಂತೆ ಇಲ್ಲಿಯೂ ಮೂರು ನಾಲ್ಕನೆಯ ಸಾಲುಗಳನ್ನು ಬಿಡಿಸಿ ಬರೆದಿದೆ.)

ಮುಂದಿನ ಸಾಲಿನಲ್ಲಿ ಎದ್ದ ಭೀಮನ ಪ್ರತಿಕ್ರಿಯೆಯಿದೆ. ಅದು ಬೆರಗನ್ನು ಹುಟ್ಟಿಸಿದೆ ಭಿಮನಿಗೆ. ಏಕೆಂದರೆ ಈಗ ಪಾಂಚಾಲನಂದನೆಯೇ ಪ್ರತ್ಯಕ್ಷವಾಗಿಬಿಟ್ಟಿದ್ದಾಳೆ. ೫, ೫, ೫ ಮಾತ್ರೆಗಳ ಮೂರು ಗಣಗಳು ಈ ವಿಸ್ಮಯವನ್ನು ಧ್ವನಿಸುತ್ತವೆ. ಮುಂದಿನ ಸಾಲು ಇನ್ನಷ್ಟು ಕುತೂಹಲಕರ. ಏಕೆಂದ್ರೆ ಅವರೆಲ್ಲ ಈಗ ಅಜ್ಞಾತವಾಸಾವಧಿಯಲ್ಲಿದ್ದಾರೆ. ಯಾರಿಗೂ ಸುಳಿವು ಹತ್ತಬಾರದು. ಅದಕ್ಕಾಗಿಯೇ ಆತ ಪಿಸುಮಾತಿನಲ್ಲಿ ಕೇಳುತ್ತಾನೆ. ೫, ೫ ಮಾತ್ರೆಗಳ ಎರಡು ಗಣಗಳಿವೆ ಇಲ್ಲಿ. ರಾಣಿಯವರ ಆಗಮನಕ್ಕೆ ಕಾರಣ ಏನು ಎಂಬದೇ ಅವನ ಪ್ರಶ್ನೆ. ಆದರೆ ಅವಳ ಮುಖವನ್ನು ಸರಿಯಾಗಿ ಗಮನಿದಾಗ ಅರಿವಾಗುತ್ತದೆ – ಅಲ್ಲಿ ತಲ್ಲಣವಿದೆ ಎನ್ನುವುದು.

ಆದುದರಿಂದಲೇ ೪, ೫, ೭ ಮಾತ್ರೆಗಳ ಗಣಗಳ ಅಭಿವ್ಯಕ್ತಿಯಲ್ಲಿ ನಿನ್ನ ಮುಖದಲ್ಲಿ ತಲ್ಲಣವೇಳಲು ಕಾರಣವೇನು ಎನ್ನುತ್ತಾನೆ. ಮುಂದಿನ ಸಾಲು ಇನ್ನೂ ಬಿಕ್ಕಟ್ಟಿನದು. ಈ ರೀತಿಯ ಏಕಾಂತ ಅಪಾಯಕರ. ಅದರಿಂದ ತಡಮಾಡದೆ ಹೇಳು, ಕತ್ತಲಲ್ಲಿ ಲತಾಂಗಿಯಾದ ನೀನು ಬಂದದ್ದು ಏಕೆ ಎಂದು ಪ್ರಶ್ನಿಸುತ್ತಾನೆ. ೫+೩+೪+೩, ೫+೬ ಮಾತ್ರೆಗಳ ಗಣಗಳನ್ನು ಸಂಯೋಜಿಸಿ.

ಇಲ್ಲಿಯ ಗಣ ವಿನ್ಯಾಸಗಳ ವೈವಿಧ್ಯ ಗಣಗಳ ವಿಶ್ಲೇಷಣೆಗಾಗಿ ಅಥವಾ ಮಾತ್ರೆಗಳ ವಿಂಗಡಣೆಗಾಗಿ ಅಲ್ಲ: ಆರ್ಥಪುಷ್ಟಿಗಾಗಿ ಎಂಬುದನ್ನು ಮರೆಯಬಾರದು.

ಈ ಕೆಲವು ಪುಟ್ಟ ಸಂದರ್ಭಗಳನ್ನು ಗಮನಿಸಿ:

. ಎನ್ನು –⋃
ಮತ್ತೊಮ್ಮೆನ್ನು – – – ⋃
ತನ್ನಣೆನ್ನು – – –⋃
ಗೆಲವೇ ನಮಗೆ ⋃⋃ –, ⋃⋃⋃
ನಿಂದರೆ ನಿನ್ನ ಸಮ್ಮುಖದಲಿ ಮಹಾದೇವಹುದು ಬಳಿಕ ಉಂಟೆ – ⋃⋃, –⋃, –⋃⋃⋃⋃, ⋃ – – ⋃⋃⋃, ⋃⋃ – ⋃ ೪, ೩, ೬, ೮, ೫

. ೧೬೧೮, ದ್ರೋಣಪರ್ವ

. ಎಲೆಲೆ ⋃⋃⋃
ದೊರೆ ಸಿಕ್ಕಿದನು ⋃⋃, – ⋃⋃⋃ ೨, ೫
ಕರೆ ⋃⋃
ಪಡಿತಳಿಸಹೇಳೋ ⋃⋃⋃⋃⋃ – – ೯(೨+೭)
ಸ್ವಾಮಿ ದ್ರೋಹರು – – – ⋃⋃
ದಳದಲಿದ್ದವರೆತ್ತ ಹೋದರು ನಾಯಕಿತ್ತಿಯರು ⋃⋃⋃ – ⋃⋃ – ⋃, – ⋃⋃, – ⋃ – ⋃⋃ – ೨, ೩೧೦, ೪, ೯

, ೫೨, , ದ್ರೋಣಪರ್ವ

. ಅರಸ ಫಡ ಹೋಗದಿರು ⋃⋃⋃ ⋃⋃ – ⋃⋃⋃ ೨+೨, ೫
ಸಾಮದ ಸರಸ ಕೊಳ್ಳರು – ⋃⋃ ⋃⋃⋃ – ⋃⋃ ೪, ೩+೪
ಬಿಲ್ಲ ಹಿಡಿ ಹಿಡಿ –⋃ ⋃⋃⋃⋃ ೩, ೨+೨
ಹರನ ಮರೆವೊಗು ⋃⋃⋃ ⋃⋃⋃⋃ ೩, ೪
ನಿನ್ನ ಹಿಡಿವೆನು ಹೋಗು ಹೋಗೆನುತ – ⋃ ⋃⋃⋃⋃ –⋃ – ⋃⋃⋃ ೩, ೪, ೩, ೬
ಸರಳ ಮುಷ್ಟಿಯ ⋃⋃⋃ – ⋃⋃ ೩, ೪
ಕೆನ್ನೆಯೋರೆಯ – ⋃ – ⋃⋃ ೩, ೪
ಗುರು ಛಡಾಳಿಸೆ ⋃⋃ ⋃ – ⋃⋃ ೨, ೫
ಧನುವನೊದರಿಸಿ ⋃⋃⋃⋃⋃⋃⋃
ಧರಣಿಪತಿ ಹಳಸಿದನು ⋃⋃⋃⋃⋃ ⋃⋃⋃⋃⋃ ೫, ೫
ಹೂಳಿದನಂಬಿನಲಿ ರಥವ – ⋃⋃ –⋃⋃⋃⋃⋃⋃ ೪, ೫, ೩+೧ = ೪

. ೬೧, ಸಂ. , ದ್ರೋಣಪರ್ವ

. ಎಲೆಲೆ ⋃⋃⋃
ಕವಿ ಕವಿ ⋃⋃ ⋃⋃ ೨+೨
ಬೆರಸು ⋃⋃⋃
ಬೆರಸಿಟ್ಟಳಿಸು ⋃⋃ – ⋃⋃⋃ ೨, ೫
ತಿವಿ ತಿವಿ ⋃⋃ ⋃⋃ ೨+೨
ಭಲರೆ ⋃⋃⋃ ೪+೩
ಭಲರತಿ ಬಲರೆ ⋃⋃⋃⋃⋃⋃⋃
ಹಿಂಚದಿರಿನ್ನು – ⋃⋃ – ⋃
ಹೊಯ್ ಹೊಯ್ ಚೂಣಿಗರನೆನುತ  – – – ⋃⋃⋃⋃⋃⋃ ೨+೨+೫+೪

. , ಭೀಷ್ಮ ೧೨

. ಕಲಿಗಳ್ಳೆ ಸಾವಿರ ⋃⋃⋃ – –⋃⋃
ತುರಂಗಮವೆರಡು ಸಾವಿರ ⋃ – ⋃⋃⋃⋃⋃ –⋃⋃ ೮+೪
ಎಂಟು ಸಾವಿರ ವರವರೂ ಥದಥಟ್ಟು – ⋃ – ⋃⋃ ⋃⋃ – ⋃⋃⋃ – ⋃ ೩, ೪, ೨+೮
ಮುರಿದುದು ಲಕ್ಷಪಾಯದಶ ⋃⋃⋃⋃ –⋃ –⋃⋃⋃ ೪, ೩, ೫ = ೧೨
ಅರಸುಗಳು ಮೂನೂರು ⋃⋃⋃⋃⋃ – –⋃ ೫, ೪ = ೧೦
ಪುನರಪಿ ⋃⋃⋃⋃
ಕರಿ ⋃⋃
ತುರಗ ⋃⋃⋃
ರಥ ⋃⋃
ಮತ್ತೆ – ⋃
ಮುವ್ವತ್ತೆರಡು ಸಾವಿರವಳಿದುದರಿ ಪಾಂಚಾಲ ಸೇನೆಯಲಿ. – ⋃⋃⋃ – ⋃⋃⋃⋃⋃⋃⋃ – ⋃ – ⋃⋃ ೭, ೪+೫, ೫

. ೨೦, ೧೮, ದ್ರೋಣಪರ್ವ

. ಆರೊಡನೆ ಕಾದುವೆನು – ⋃⋃⋃ – ⋃⋃⋃ ೫, ೫ = ೧೦
ಕೆಲಬರು ಹಾರುವರು ⋃⋃⋃⋃ – ⋃⋃⋃ ೪, ೫(-೯)
ಕೆಲರಂತಕನ ನೆರೆಯೂರವರು ⋃⋃ – ⋃⋃⋃ ⋃⋃ – ⋃⋃⋃ ೭, ೨+೫ = ೧೪
ಕೆಲರಧಮ ಕುಲದಲ್ಲಿ ಸಂದು ಬಂದವರು ⋃⋃⋃⋃⋃ ⋃⋃⋃⋃–⋃ –⋃⋃⋃ ೫+೪, ೩೬
ವೀರರೆಂಬವರಿವರು – ⋃ – ⋃⋃⋃⋃⋃ (೧೦)
ಮೇಲಿನ್ನಾರ ಹೆಸರುಂಟವರೊಳೆಂದು –⋃, ⋃⋃ – ⋃⋃⋃ – ⋃ ೭+೨+೮ = ೧೭
ಕುಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳಿದಿರಿನಲಿ ⋃ – ⋃⋃⋃ – ⋃⋃⋃ ⋃⋃⋃⋃ – ⋃⋃⋃⋃⋃ ೪+೭+೪+೯ = ೨೪

. ೨೦, , ವಿರಾಟಪರ್ವ

ಮೊದಲ ಉದಾಹರಣೆ ದ್ರೋಣಪರ್ವದ ಒಂದರ್ಧ ಷಟ್ಟದಿಯಷ್ಟೆ. ತನ್ನನ್ನು ಹಾರುವನೆಂದು ಹೀಯಾಳಿಸಿದುದಕ್ಕೆ ಉತ್ತರವಾಗಿದೆ ದ್ರೋಣನ ಮಾತು. ಅದೇ ರೀತಿಯ ವ್ಯಂಗ್ಯ ಇಲ್ಲಿನ ಪುನರುಕ್ತಿಗಳಲ್ಲಿ ಅಭಿನಯಗೊಂಡಿದೆ.

ಮೊದಲ ಸಾಲಿನಲ್ಲಿ ಮೂರೇ ಮಾತ್ರೆಗಳಿವೆ.

ಎರಡು ಮತ್ತು ಮೂರನೇ ಸಾಲುಗಳಲ್ಲಿ ಏಳೇಳು ಮಾತ್ರೆಗಳಿದ್ದರೂ ಎರಡನೆ ಸಾಲಿನಲ್ಲಿ ಮತ್ತಿನ್ನೊಮ್ಮೆ ಎಂದವನು, ಮೂರನೆಯ ಸಾಲಿನಲ್ಲಿ ತನ್ನಾಣೆನ್ನು ಎಂದು ಆಣಿಯಿಡುತ್ತಿದ್ದಾನೆ. ನಾಲ್ಕನೆಯ ಸಾಲು ನಾಲ್ಕು ಮತ್ತು ಮೂರು ಮಾತ್ರೆಗಳ ಗಣಗಳಿಂದ ಕೂಡಿ ಪ್ರಶ್ನಾರ್ಥಕವಾಗಿ ಮತ್ತಷ್ಟು ವ್ಯಂಗ್ಯವನ್ನು ಒಳಗೊಂಡಿದೆ, ನಿಮ್ಮಂಥವರ ಎದುರು ನಮಗೆ ಜಯ ಸಾಧ್ಯವೇ ಸಂದೇಹವನ್ನು ಸೂಚಿಸುತ್ತಲೇ ವ್ಯಂಗ್ಯವನ್ನು ಇನ್ನಷ್ಟು ತೀಕ್ಷ್ಣವಾಗಿಸುತ್ತದೆ. ಮುಂದಿನ ಸಾಲಿನಲ್ಲಿ ೪, ೩, ೭, ೮, ೫ ಮಾತ್ರೆಗಳ ಗಣಗಳಿಂದ ಯೋಜಿತವಾಗಿ ವ್ಯಂಗ್ಯವನ್ನು ಇನ್ನಷ್ಟು ಮೊನಚುಗೊಳಿಸುತ್ತದೆ, ಮಹಾದೇವನನ್ನೂ ಸಾಕ್ಷಿಗೆಳೆದು.

ಎರಡನೆಯ ಉದಾಹರಣೆ ಕೂಡ ದ್ರೋಣಪರ್ವದ್ದೇ. ಅರ್ಧ ಷಟ್ಟದಿ ಮಾತ್ರ ಬಳಕೆಯಾಗಿದೆ. ದ್ರೋಣನ ಶೌರ್ಯಕ್ಕೆ ಧರ್ಮರಾಯನೇ ಸೆರೆಯಾಗುವ ಸಂದರ್ಭದಲ್ಲಿ ಪಾಂಡವ ಸೈನ್ಯ ಹುಯಿಲಿಟ್ಟ ಪ್ರಸಂಗವನ್ನು ಚಿತ್ರಿಸುತ್ತದೆ.

ಧರ್ಮರಾಯನೇ ಸೆರೆಯಾದರೆ ಪಾಂಡವ ಸೈನ್ಯದ ಗತಿ ಏನಾಗಬೇಕು? ಆ ಭಯಭೀತಿಗಳು ಇಲ್ಲಿಯ ಮಾತುಗಳಲ್ಲಿ ಮಡುಗಟ್ಟಿವೆ.

ಮೊದಲ ಸಾಲು ಮೂರು ಮಾತ್ರೆಗಳಿಂದ (ಮೂರು ಲಘುಗಳೇ) ಕೂಡಿ ಗಾಬರಿಯನ್ನು ಅಭಿವ್ಯಂಜಿಸುವ ಉದ್ಗಾರವಾಚಿಯಾಗಿದೆ.

ಎರಡನೆಯ ಸಾಲು ಏಳು ಮಾತ್ರೆಗಳಿಂದ ಕೂಡಿ ಭಯಕ್ಕೆ ಕಾರಣವಾದ ದೊರೆ ಸೆರೆಯಾದುದನು ಧ್ವನಿಸುತ್ತದೆ.

ಮುಂದಿನ ಸಾಲು ದಿಗ್ಭ್ರಮೆಯನ್ನು ಸೂಚಿಸುತ್ತ ನೆರವಿಗಾಗಿ ಹಾತೊರೆಯುವ ಗತಿಗೆಟ್ಟ ಸ್ಥಿತಿಯನ್ನು ಸೂಚಿಸುತ್ತದೆ, ಎರಡೇ ಮಾತ್ರೆಗಳ ಗಣವಾಗಿ.

ಮುಂದಿನ ಸಾಲು ಧಾಳಿಗೆ ಸಿದ್ಧವಾಗಿ ಎನ್ನುವ ಕರೆಯನ್ನೀಯುತ್ತದೆ, ೫+೪ ಮಾತ್ರೆಗಳ ಗಣಗಳಿಂದ ಕೂಡಿ.

ಅದರ ಮುಂದಿನ ಸಾಲು ದಳದಲ್ಲಿದ್ದು ನೆರವಿಗೆ ಬಾರದ ಸ್ವಾಮಿದ್ರೋಹವನ್ನು ಕುರಿತಿದೆ (೭, ೧೧, ೪), ಈ ಏಳು ಮಾತ್ರೆಗಳು, ಹನ್ನೊಂದು ಮಾತ್ರೆಗಳು ಮತ್ತು ನಾಲ್ಕು ಮಾತ್ರೆಗಳ ಗಣಗಳಿಂದ ಕೂಡಿ.

ಕೊನೆ ಸಾಲು ಇದೇ ವ್ಯಂಗ್ಯವನ್ನು ಮುಂದುವರಿಸಿದೆ. ಸ್ವಾಮಿದ್ರೋಹಿಗಳಾದ ಶೂರರನ್ನು ನಾಯಕಿತ್ತಿಯರು ಎಂದು ಹೀಯಾಳಿಸುತ್ತ – ಇಲ್ಲಿ ಮೂರು ಮಾತ್ರೆಗಳ, ನಾಲ್ಕು ಮಾತ್ರೆಗಳ ಮತ್ತು ಒಂಬತ್ತು ಮಾತ್ರೆಗಳ ಗಣಗಳನ್ನು ಒಳಗೊಂಡಿದೆ.

ಮೂರನೆಯ ಉದಾಹರಣೆಯ ಮೊದಲು ಅರ್ಧ ಪದ್ಯ ಎದುರಾದ ದೊರೆಯ ಮೇಲೆ ಆಕ್ರಮಣಕ್ಕೆ ಸಿದ್ಧನಾದ ದ್ರೋಣಾಚಾರ್ಯರ ಆರ್ಭಟವನ್ನೂ ಎರಡನೆಯ ಅರ್ಧ ಭಾಗ ಬಾಣವನ್ನು ಹೂಡಿ ನಿಂತ ಬಿಲ್ಲನ್ನು ಹಿಡಿದಿರುವ ದ್ರೋಣರ ಧೀರ ಭಂಗಿಯನ್ನು, ಇನ್ನುಳಿದ ಭಾಗ ದೊರೆ ಮತ್ತು ದ್ರೋಣರ ಕಾಳಗದ ವಿವವರಗಳನ್ನು ಒಳಗೊಂಡಿದೆ.

ಮೊದಲ ಸಾಲು ಮೂರು, ಎರಡು ಮತ್ತು ಐದು ಮಾತ್ರೆಗಳನ್ನೊಳಗೊಂಡು ಹತ್ತು ಮಾತ್ರೆಗಳ ಗಣಗಳಿಂದ ಯೋಜಿತವಾಗಿದೆ. ಎರಡನೆಯ ಸಾಲು ನಾಲ್ಕು ಮೂರು ನಾಲ್ಕು ಮಾತ್ರಾಗಣಗಳಿಂದ ಕೂಡಿ ಹನ್ನೊಂದು ಮಾತ್ರೆಗಳ ಮೊತ್ತವಾದರೂ ಮೊದಲ ಸಾಲಿನ ಗುರು ಲಘು ವಿನ್ಯಾಸಕ್ಕೂ ಎರಡನೇ ಸಾಲಿನ ಗುರು ಲಘು ವಿನ್ಯಾಸಕ್ಕೂ ಭಿನ್ನತೆಯಿದ್ದು ವೈವಿಧ್ಯಕ್ಕೆ ಕಾರಣವಾಗಿದೆ.

ಮೂರು ಮತ್ತು ನಾಲ್ಕನೆಯ ಸಾಲುಗಳು ಮತ್ತೆ ಮೂರು ನಾಲ್ಕು ಮಾತ್ರೆಗಳ ಎರಡು ಗಣಗಳಿಂದ ಕೂಡಿದ್ದರೂ ಒಂದು ಸಾಲಿನಲ್ಲಿರುವಂತೆ ಇನ್ನೊಂದು ಸಾಲಿಲ್ಲ – ಗುರು ಲಘು ವಿನ್ಯಾಸದಲ್ಲಿ ಐದನೆಯ ಸಾಲಿನಲ್ಲಿ ಮೂರು ನಾಲ್ಕು ಮೂರು ನಾಲ್ಕು ಮಾತ್ರೆಗಳ ಗಣಗಳು ಮತ್ತು ಕೊನೆಯಲ್ಲೊಂದು ಗುರುವಿನಿಂದ ಕೂಡಿದ್ದು ಹದಿನಾರು ಮಾತ್ರೆಗಳ ಘಟಕವಾಗಿದೆ.

ಆರನೆಯ ಮತ್ತು ಎಳನೆಯ ಸಾಲುಗಳಲ್ಲಿ ಮತ್ತೆ ೩ ಮತ್ತು ೪ ಮಾತ್ರೆಗಳ ಗಣಗಳೇ ಇದ್ದರೂ ಮೊದಲ ಮೂರು ಮಾತ್ರೆಗಳ ಗಣದ ಗುರು ಲಘು ವಿನ್ಯಾಸ ಬೇರೆ ಬೇರೆಯೇ ಆಗಿದೆ.

ಎಂಟನೆಯ ಸಾಲಿನಲ್ಲಿಯೂ ಒಂಬತ್ತನೇ ಸಾಲಿನಲ್ಲೂ ಮತ್ತೆ ಏಳೇ ಮಾತ್ರೆಗಳಿವೆ. ಆದರೆ, ಇಲ್ಲಿಯ ಸಂಯೋಜನೆ ಎರಡು ಮತ್ತು ಐದು ಮಾತ್ರೆಗಳ ಗಣಗಳು ಹಾಗೂ ಮೂರು ಮತ್ತು ನಾಲ್ಕು ಮಾತ್ರೆಗಳ ವಿನ್ಯಾಸವಾಗಿದೆ.

ಹತ್ತನೆಯ ಸಾಲಿನಲ್ಲಿ ಮತ್ತೆ ಐದು ಮಾತ್ರೆಗಳ ಎರಡು ಗಣಗಳಿವೆ. ಹನ್ನೊಂದನೆಯ ಸಾಲು ನಾಲ್ಕು ಐದು ಮಾತ್ರೆಗಳ ಗಣಗಳಿಂದ ಯೋಜಿತವಾಗಿದೆ.

ನಾಲ್ಕನೆಯ ಉದಾಹರಣೆ ಎದುರಾಳಿಯ ಮೇಲೆ ಧಾಳಿಯೆತ್ತಿ ಹೊರಡಿಸಲು ಹುರಿದುಂಬಿಸುವ ಹುರುಪಿನಿಂದ ಕೂಡಿದ್ದು ಅರ್ಧ ಷಟ್ಟದಿಯೇ ಅರ್ಥಾನುಸಾರಿಯಾಗಿ ಅಂದರೆ ಅರ್ಥಯತಿಯನ್ನೊಳಗೊಂಡು ಒಂಬತ್ತು ಸಾಲುಗಳಷ್ಟು ವಿಸ್ತಾರವನ್ನು ಪಡೆದಿದೆ.

ಮೊದಲನೆಯ ಸಾಲಿನಲ್ಲಿ ಉತ್ಸಾಹವುಕ್ಕಿಸುವ ಸಂಬೋಧನೆಯ ಮೂರು ಮಾತ್ರೆಗಳ ಗಣವಿದೆ. ಎರಡನೇ ಸಾಲಿನಲ್ಲಿ ಎರಡೆರಡು ಲಘುಗಳ ದ್ವಿರುಕ್ತಿಯ ನಾಲ್ಕು ಮಾತ್ರೆಗಳ ಗಣವಿದೆ. ಮೂರನೆಯ ಸಾಲಿನಲ್ಲಿ ಮಾತ್ರೆ ಮೂರು ಲಘುಗಳನ್ನು ಒಳಗೊಂಡ ಮೂರು ಮಾತ್ರೆಗಳ ಗಣವಿದೆ. ನಾಲ್ಕನೆಯ ಸಾಲಿನಲ್ಲಿ ಎರಡು ಮತ್ತು ಐದು ಮಾತ್ರೆಗಳ ನ್ನೊಳಗೊಂಡ ಏಳು ಮಾತ್ರೆಗಳ ಗಣವಿದೆ. ಐದನೆಯ ಸಾಲಿನಲ್ಲಿ ಮತ್ತೆ ನಾಲ್ಕು ಲಘುಗಳ ಒಂದು (ನಾಲ್ಕು ಮಾತ್ರೆಗಳ) ಗಣವಿದೆ. ಅರನೆಯ ಸಾಲಿನಲ್ಲಿ ಮತ್ತೆ ಮೂರು ಲಘುಗಳ ಮೂರು ಮಾತ್ರೆಯ ಗಣವಿದೆ. ಏಳನೆಯ ಸಾಲಿನಲ್ಲಿ ಏಳು ಮಾತ್ರೆಗಳ ಒಂದೇ ಗಣವಿದೆ. ಎಂಟನೆಯ ಸಾಲಿನಲ್ಲಿ ಮತ್ತೆ ಏಳು ಮಾತ್ರೆಗಳ ಗಣವೇ ಇದ್ದರೂ ಹಿಂದಿನ ಸಾಲಿನ ಲಘು ಗುರು ವಿನ್ಯಾಸಕ್ಕೂ ಇಲ್ಲಿನ ಗುರು ಲಘು ವಿನ್ಯಾಸಕ್ಕೂ ಪೂರ್ಣ ಭಿನ್ನತೆಯಿದೆ. ಒಂಬತ್ತನೆಯ ಸಾಲಿನಲ್ಲಿ ಎರಡು ಎರಡು ಐದು ಮತ್ತು ನಾಲ್ಕು ಮಾತ್ರೆಗಳ ಅಂದರೆ ೧೩ ಮಾತ್ರೆಗಳ ಘಟಕವಿದೆ.

ಅಶ್ಚರ್ಯವೆಂದರೆ ಷಟ್ಟದಿಯ ಅರ್ಧ ಭಾಗ ಕೇವಲ ಮೂರು ಪಾದಗಳಿದ್ದರೆ ಅದರ ವಿನ್ಯಾಸವನ್ನು ಕವಿಯಲ್ಲಿ ಒಂಬತ್ತು ಸಾಲುಗಳವರೆಗೂ ವಿಸ್ತರಿಸಿದ್ದಾನೆ, ಅನುಕರಣ ಶಬ್ಧಗಳು ಹಾಗೂ ಉದ್ರೇಕಿಸುವ ಮಾತುಗಳನ್ನು ತುಂಬಿ. ಈ ಪದ್ಯಭಾಗ ಯುದ್ಧದ ಆರ್ಭಟದಿಂದ ತುಂಬಿಕೊಳ್ಳುವುದನ್ನು ಗಮನಿಸಬಹುದು.

ಐದನೆಯ ಉದಾಹರಣೆ ಸೈನ್ಯಾಧಿಕಾರಿಗಳಾದ ದ್ರೋಣಾಚಾರ್ಯರ ಶೌರ್ಯದ ಕಾರಣವಾಗಿ ನಾಶವಾದ ಪಾಂಚಾಲ ಸೇನೆಯ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತದೆ.

ಮೊದನೆಯ ಸಾಲು ಒಂಬತ್ತು ಮಾತ್ರೆಗಳ ಗಣವಾಗಿದ್ದು ಸತ್ತ ಶೂರರ ಸಂಖ್ಯೆಯನ್ನು ತಿಳಿಸುತ್ತದೆ. ಎರಡನೆಯ ಸಾಲು ಹನ್ನೆರಡು ಮಾತ್ರೆಗಳ ಗಣವಾಗಿದ್ದು ನಾಶವಾದ ಕುದುರೆಗಳ ಸಂಖ್ಯೆ ಹೇಳುತ್ತದೆ. ಮೂರನೆಯ ಸಾಲು ಮೂರು, ನಾಲ್ಕು, ಎರಡು ಮತ್ತು ಎಂಟು ಮಾತ್ರೆಗಳ ಗಣಗಳಿಂದ ಕೂಡಿ ನಾಶವಾದ ರಥಗಳ ಮೊತ್ತವನ್ನು ಸೂಚಿಸುತ್ತದೆ. ನಾಲ್ಕನೆಯ ಸಾಲು ಮೂರು ಮತ್ತು ಐದು ಮಾತ್ರೆಗಳ ಗಣಗಳಿಂದ ಯೋಜಿತವಾಗಿ ನಾಶವಾದ ಒಂದು ಲಕ್ಷ ಕಾಲಾಳುಗಳ ಲೆಕ್ಕವಾಗುತ್ತದೆ. ಐದನೆಯ ಸಾಲು ಐದು ಮಾತ್ರೆಗಳ ಎರಡು ಗಣಗಳಿಂದ (ಮೊದಲಗಣ ಸರ್ವ ಲಘುವಾದರೆ ಎರಡನೆಯದು ಎರಡು ಗುರುಗಳಾದ ಮೇಲೆ ಬರುವ ಲಘುವಿನಿಂದ) ವಿನ್ಯಾಸವಾಗಿ ಸತ್ತ ರಾಜರುಗಳ ಸಂಖ್ಯೆ ತಿಳಿಸುತ್ತದೆ. ಆರನೆಯ ಸಾಲು ಕೇವಲ ನಾಲ್ಕು ಲಘುಗಳಿಂದ ಕೂಡಿದ ನಾಲ್ಕು ಮಾತ್ರೆಗಳ ಗಣವಾಗಿ ಮತ್ತೆ ಇನ್ನೇನಿದೆಯೆಂಬುದರತ್ತ ಕುತೂಹಲ ಕೆರಳಿಸಲು ಮತ್ತೆ ಎಂಬರ್ಥದಲ್ಲಿ ಬಳಕೆಯಾಗಿದೆ. ಏಳನೆಯ ಸಾಲು ಎರಡು ಲಘುಗಳ ಎರಡು ಮಾತ್ರೆಗಳ ಗಣವಾಗಿ ಅನೆಗಳನ್ನು ಎಂಟನೆಯ ಸಾಲು ಮೂರು ಲಘುಗಳ ಮೂರು ಮಾತ್ರೆಗಳ ಗಣವಾಗಿ ಕುದುರೆಗಳನ್ನು ಒಂಬತ್ತನೆಯ ಸಾಲು ಎರಡು ಲಘುಗಳ ಎರಡು ಮಾತ್ರೆಗಳ ಗಣವಾಗಿ ರಥಗಳನ್ನು ಮತ್ತೆ ಹತ್ತನೆಯ ಸಾಲು ಸಮುಚ್ಚಯವಾಚಿಯಾದ ‘ಮತ್ತೆ’ ಶಬ್ಧದಿಂದ ಮೂರು ಮಾತ್ರೆಗಳ ಗಣವಿನ್ಯಾಸವನ್ನು , ಕೊನೆಯ ಸಾಲು ಪಾಂಚಾಲ ಸೇನೆಯ ಮುವ್ವತ್ತು ಸಾವಿರ ನಾಶವಾದ್ದುದನ್ನು ೭, ೪, ೫, ೫, ೫, ಮಾತ್ರೆಗಳ ಗಣಗಳಿಂದ ಕೂಡಿ ರೂಪಿತವಾಗಿರುವುದನ್ನು ಗಮನಿಸಬಹುದು.

ಆರನೆಯ ಉದಾಹರಣೆ ಒಂದರ್ಥದಲ್ಲಿ ಉತ್ತರ ಕುಮಾರನ ವ್ಯಕ್ತಚಿಂತನೆಯ ರೂಪವಾಗಿ ಅವನ ಪೌರುಷವನ್ನು ಲೇವಡಿ ಮಾಡುವುದನ್ನು ಗಮನಿಸಬಹುದು. ಪದ್ಯದ ಮೊದಲ ಸಾಲು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ ರೀತಿಯಲ್ಲಿದೆ, ಐದು ಮಾತ್ರೆಗಳ ಎರಡು ಗಣಗಳಿಂದ ಕೂಡಿ.

ಮುಂದಿನ ಐದು ಸಾಲುಗಳಲ್ಲಿ ತಾನೇ ಹಾಕಿಕೊಂಡ ಪ್ರಶ್ನೆಗೆ ಉತ್ತರಗಳನ್ನು ಹುಡುಕುವ ಪ್ರಯತ್ನದಲ್ಲಿ ಲೇವಡಿಗೆ ಸಿದ್ದವಾಗಿರುದನ್ನು ಗಮನಿಸಬಹುದು. ಸಾಲದುದಕ್ಕೆ ಕೊನೆಯ ಸಾಲು ಈ ಲೇವಡಿಗೆ ಕಿರೀಟವಿಟ್ಟಂತ್ತಿದ್ದು ಈ ಎಲ್ಲ ಶೌರ್ಯದ ಘೋಷಣೆ ನಡೆದದ್ದು ಅಂತಃಪುರದ ಒಳಗಿರುವ ಹೆಣ್ಣುಗಳ ಮುಂದೆಂಬುದನ್ನು ತಿಳಿಸಿ ಹಾಸ್ಯದ ಶಿಖರಕ್ಕೇರಿಸುತ್ತದೆ.

ಎರಡನೆಯ ಸಾಲಿನಲ್ಲಿ ನಾಲ್ಕು ಮತ್ತು ಐದು ಮಾತ್ರೆಗಳ ಗಣಗಳಿಂದ ದ್ರೋಣ ಆಶ್ವತ್ಥಾಮರ ಲೇವಡಿ ಮಾಡುತ್ತದೆ.

ಮೂರನೆಯ ಸಾಲಿನಲ್ಲಿ ಏಳು ಮಾತ್ರೆಗಳ (೨+೫) ಮತ್ತು ಏಳು ಮಾತ್ರೆಗಳ ಎರಡು ಗಣಗಳಿದ್ದು ವೃದ್ಧರಾದ ಭೀಷ್ಮಾದಿಗಳನ್ನು ಕುರಿತ ವಿಡಂಬನೆಯಿದೆ.

ನಾಲ್ಕನೆಯ ಸಾಲಿನಲ್ಲಿ ಐದು, ನಾಲ್ಕು, ಮೂರು ಮತ್ತು ಆರು ಮಾತ್ರೆಗಳ (ಪದ್ಯಾರ್ಧಂತ ವಾದ್ದರಿಂದ ಗುರುವಾಗಿದೆ ಕೊನೆಯ ಅಕ್ಷರ.) ಗಣಗಳಿಂದ ಕೂಡಿದ್ದು ಕರ್ಣಾದಿಗಳನ್ನು ಕುರಿತ ಅವಹೇಳನವಿದೆ.

ಐದನೆಯ ಸಲು (ಮೂರು + ನಾಲ್ಕು + ಮೂರು) ಹತ್ತು ಮಾತ್ರೆಗಳ ಗಣವಾಗಿದ್ದು ಈವರೆಗೆ ಸೂಚಿಸಿದವರೆಲ್ಲರನ್ನು ಸಾಮೂಹಿಕವಾಗಿ ಮೂದಲೆಗೆ ಗುರಿ ಮಾಡುತ್ತದೆ. ಆರನೆಯ ಸಾಲು ಏಳು ಮತ್ತು ಹತ್ತು ಮಾತ್ರೆಗಳ (೨ + ೫ + ೩ + ೧೦) ಗಣಗಳಿಂದ ಕೂಡಿ ತನ್ನ ತೀರ್ಮಾನಕ್ಕೆ ಕಾರಣವಾದುದೆನ್ನಲ್ಲ ಪುನರುಚ್ಚರಿಸುವಂತಾಗುತ್ತದೆ. ಕೊನೆಯ ಸಾಲು ೪+೭+೪+೯ ಮಾತ್ರೆಗಳ ಗಣಗಳಿಂದ ಕೂಡಿದ್ದು ಅವನು ಅಬ್ಬರ ಮಾಡಲು ಉತ್ತರ ಕುಮಾರನಿಗೆ ಅವಕಾಶ ಮಾಡಿಕೊಟ್ಟ ಅಂತಃಪುರದ ಸ್ತ್ರೀಯರೆದುರೆದುರೇ ನಡೆದ ಘಟನೆಯನ್ನು ಚಿತ್ರಮಯವಾಗಿಸುತ್ತದೆ.

ಮೇಲೆ ಕೊಟ್ಟಿರುವ ಉದಾಹರಣೆಗಳಲ್ಲಿ ಷಟ್ಟದಿ ಅಥವಾ ಷಟ್ಟದಿಯ ಭಾಗಗಳನ್ನು ಷಟ್ಟದಿಯ ರೀತಿಯಲ್ಲಿ ಉಲ್ಲೇಖಿಸದೆ ಕುಮಾರವ್ಯಾಸನ ಪ್ರತಿಭೆ ಕ್ರಿಯಾಶೀಲವಾಗಿ ಮೂಡಿಸುವ ಅರ್ಥಯತಿಗಳನ್ನು ಆಧಾರವಾಗಿ ಮಾಡಿಕೊಂಡು ಬರೆಯಾಲಾಗಿದೆ. ಹೀಗೆ ಬರೆಯುವಾಗ ಅರ್ಥಯತಿ ಕೂಡ ವಿಭಿನ್ನ ರೀತಿಯದು ಎಂದೇ ಹೇಳಬೇಕು. ಒಂದು ವಾಕ್ಯದ ಅರ್ಥ ಮುಕ್ತಾಯಕ್ಕೆ ಬರದ ವಾಕ್ಯದ ಪುಟ್ಟ ಘಟಕವಾಗಿದ್ದಾಗ ಅಂಥದ್ದನ್ನು ಅಲ್ಪಯತಿ ಎಂದೂ ವಾಕ್ಯಾರ್ಥ ಪೂರ್ಣವಾದಾಗ ಅದನ್ನು ಪೂರ್ಣಯತಿಯೆಂದೂ ಗ್ರಹಿಸಬೇಕು.

[1]

ಮೇಲೆ ಕೊಟ್ಟಿರುವ ಉದಾಹರಣೆಗಳಷ್ಟೇ ಶ್ರೇಷ್ಠವೆಂದು ತಿಳಿಯಬೇಕಾಗಿಲ್ಲ. ಪ್ರಾಸಂಗಿಕವಾಗಿ ಭಿನ್ನ ಭಿನ್ನ ಅನುಭವಗಳ ಅಭಿವ್ಯಕ್ತಿಯಾಗಿ ಕುಮಾರವ್ಯಾಸನ ಕಾವ್ಯದ ಕೆಲವು ಉದಾಹರಣೆಗಳನ್ನು ಇಲ್ಲಿ ಎತ್ತಿಕೊಳ್ಳಲಾಗಿದೆ. ಹೀಗೆ ಎತ್ತಿಕೊಂಡ ಉದಾಹರಣೆಗಳನ್ನು ಎಲ್ಲ ವಿವರಗಳನ್ನು ಗಮನಿಸಿದಾಗ ಮುಖ್ಯವಾಗಿ ಗ್ರಹಿಸಬೇಕಾದ ಅಂಶಗಳು ಹೀಗಿವೆ:

) ಷಟ್ಟದಿ ಆರು ಸಾಲಿನ ಪದ್ಯವಾದರೂ ಕುಮಾರವ್ಯಾಸ ಅದನ್ನು ಅರ್ಥಾನುಸಾರಿಯಾಗಿ ಮಾಡುವುದಕ್ಕಾಗಿ ಹತ್ತು ಹನ್ನೊಂದು, ಹನ್ನೆರಡು, ಹದಿಮೂರು, ಹದಿನಾಲ್ಕು ಹೀಗೆ ಹದಿನೆಂಟು ಘಟಕಗಳಾಗಿ ವಿಂಗಡಿಸುತ್ತಾನೆ –

) ಷಟ್ಟದಿ ಇಡಿಯಾಗಿ ಒಂದು ವಾಕ್ಯ ಘಟಕವಾಗಿ ರೂಪುಗೊಳ್ಳುವುದರಿಂದ ಪ್ರಾರಂಭವಾಗಿ ಕೇವಲ ಎರಡು ಅಥವಾ ಮೂರು ಮಾತ್ರೆಯ ಘಟಕ ಒಂದು ಘಟಕ ವಾಗುವಂತೆ ರೂಪಿಸುತ್ತಾನೆ.

) ಭಾಮಿನಿ ಷಟ್ಟದಿ ೩, ೪ ಮಾತ್ರೆಗಳ ವಿಷಮಗಣಗಳಿಂದ ಸಂಯೋಜಿತವಾದ ಛಂದಸ್ಸಾದರೂ ಆ ರೀತಿಯ ಮೂರು ಮತ್ತು ನಾಲ್ಕು ಮಾತ್ರೆಗಳ ಗಣಗಳ ವಿನ್ಯಾಸದಲ್ಲಿಯೇ ಆಪಾರವಾದ ವೈವಿಧ್ಯವನ್ನು ಮೂಡಿಸುತ್ತಾನೆ (ಇಲ್ಲಿ ಕೇವಲ ಮೂರು ಬಗೆಯ ಉದಾಹರಣೆಗಳನ್ನಷ್ಟು ನೀಡಲಾಗಿದೆ.)

) ಪ್ರಧಾನವಾಗಿ ಈ ಷಟ್ಪದಿ ೩, ೪ ಮಾತ್ರೆಗಳ ವಿಷಮಗಣಗಳ ವಿನ್ಯಾಸದಲ್ಲಿ ಇದ್ದರೂ ಅಭಿವ್ಯಕ್ತಿಗಾಗಿ ಈತ ಎರಡು ಮಾತ್ರೆಗಳ ಗಣದಿಂದ ಹಿಡಿದು ಇಪ್ಪತ್ತಾರು ಮಾತ್ರೆಗಳ ಗಣಗಳ ಘಟಕಗಳವರೆಗೆ ವ್ಯಾಪಿಸಿಕೊಳ್ಳುವಂತೆ ವೈವಿಧ್ಯಕ್ಕೆ ಅವಕಾಶ ಮಾಡಿಕೊಳ್ಳುತ್ತಾನೆ.

ವಾಸ್ತವವಾಗಿ ಛಂದಸ್ಸು ಅರ್ಥದ ಅಭಿವ್ಯಕ್ತಿಗಾಗಿ ಇರಬೇಕು. ಇಲ್ಲದಿದ್ದರೆ ಅದು ನಿಯಮಗಳ ಸಂಕೋಲೆಯಾಗಿಬಿಡುತ್ತದೆ. ಆದರೆ ಕುಮಾರವ್ಯಾಸ ಆ ನಿಯಮಗಳ ಒಳಗೇ ಸಾಧಿಸುವ ವೈವಿಧ್ಯ ಆತನ ಭಾಮಿನೀ ಷಟ್ಪದಿಯನ್ನು ಮಹಾಛಂದಸ್ಸಿನ ಮೂಲ ಮಾತೃಕೆಯಾಗಿಬಿಡುವಂತೆ ಮಾಡಿಬಿಟ್ಟಿದೆ. ಇದಕ್ಕೆ ಮುಖ್ಯ ಕಾರಣ ಮಾತ್ರೆಗಳ ಯಾಂತ್ರಿಕ ಲೆಕ್ಕ ಹಾಕುವ ಬದಲು ಅರ್ಥ ಕಾರಣವಾಗುವಂತೆ ಈ ವಿಷಮಗಣಗಳನ್ನು ಯೋಜಿಸುವ ತಂತ್ರ. ಗಣಗಳನ್ನು ಹೀಗೆ ವೈವಿಧ್ಯಮಯಗೊಳಿಸುವ ಕವಿಯ ತಂತ್ರದ ಬಗೆಗೆ ತೀ. ನಂ. ಶ್ರೀಯವರು ಬಹಳ ಅಮೂಲ್ಯವಾದ ಒಂದು ಪರಿಕಲ್ಪನೆಯನ್ನು ನೀಡಿದ್ದು ಅದನ್ನು ಅವರು ‘ಗಣಪರಿವೃತ್ತಿ’ ಎಂದು ಅರ್ಥಪೂರ್ಣವಾಗಿ ಕರೆದಿದ್ದಾರೆ. ಈ ಗಣಪರಿವೃತ್ತಿ ಎನ್ನುವುದು ಎಷ್ಟು ವೈವಿಧ್ಯಮಯ ಆಗಬಹುದು ಎಂದರೆ ಆದಿಶೇಷನ ನಾಲಗೆ ಕೂಡ ಅದನ್ನು ವರ್ಣಿಸಲಾರದು.

ಎರಡೇ ಪದಗಳ ಗಣಗಳಾದಾಗ ಒಳಗೆ ಢಗೆ, ನಗೆ ಹೊರಗೆ ಎಂದು ಅದು ೩, ೪, ೩ ಮಾತ್ರಗಳ ವಿಂಗಡಣೆಯನ್ನು ಮೂರು ಲಘು, ಎರಡು ಲಘು, ಎರಡು ಲಘು, ಮೂರು ಲಘು ಹೀಗೆ ವಿಂಗಡಣೆಗೊಳ್ಳುವ ಅವಕಾಶ ಪಡೆಯುತ್ತದೆ. ಅಷ್ಟೇ ಅಲ್ಲ ಹಿಂದಾಗಲೇ ಈ ಪದ್ಯದ ಉದಾಹರಣೆ ಮಾಡಿರುವುದರಿಂದ ಕವಿ ಸಾಧಿಸುವ ಅಭಿವ್ಯಕ್ತಿಯ ಶಕ್ತಿಯನ್ನು ಗಮನಿಸಬಹುದು.

ಇಲ್ಲಿ ಗಣಪರಿವೃತ್ತಿ ಎಂದರೆ ಕೇವಲ ಎರಡು ಗಣಗಳ ಪರಿವೃತ್ತಿ ಅಲ್ಲ; ಎರಡು ಮೂರು ಗಣಗಳು, ಎರಡು ಮೂರು ಮತ್ತು ನಾಲ್ಕು ಗಣಗಳು, ಎರಡು ಮೂರು ನಾಲ್ಕು ಮತ್ತು ಐದು ಗಣಗಳು ಹೀಗೇ ಈ ಪರಿವೃತ್ತಿ ಪದ್ಯದ ತುಂಬೆಲ್ಲ ವ್ಯಾಪಿಸಿ ಪದ್ಯಕ್ಕೆ ಒಂದು ಬಂಧಶಕ್ತಿಯನ್ನು ಆ ಮೂಲಕ ಅರ್ಥಶಕ್ತಿಯನ್ನು ತಂದುಕೊಡುತ್ತದೆ.

ಕುಮಾರವ್ಯಾಸ ಇಂಥ ಒಂದು ಸಿದ್ಧಿಯನ್ನು ಷಟ್ಪದಿ ರಚನೆಯಲ್ಲಿ ತೋರಿದ್ದರಿಂದಲೇ – ಕಾವ್ಯಾಭಿವ್ಯಕ್ತಿಯಲ್ಲಿ ಸಾಧಿಸಿದ್ದರಿಂದಲೇ ಕುಮಾರವ್ಯಾಸನ ಷಟ್ಪದಿ ನಿಯಮಗಳ ಪಾಲನೆಯನ್ನು ಕುರಿತ ಕುವೆಂಪು ಅವರು ಆಗಾಗ ಹೇಳುತ್ತಿದ್ದ ಮಾತನ್ನು ಧಾರಾಳವಾಗಿ ಇಲ್ಲಿ ಉಲ್ಲೇಖಿಸಬಹುದು.

ಆತನ ನಿಯಮ ಪಾಲನೆಯ ಕಟ್ಟುಪಾಡು ಹೇಗೆಂದರೆ ಅದು ಜೈಲಿನೊಳಗೆ ಬಂಧಿತನಾದ ಖೈದಿ ನಿಯಮಗಳನ್ನು ಪಾಲಿಸಿದಂತೆ ಅಲ್ಲ; ಜೈಲಿನ ಅಧಿಕಾರಿ ತನ್ನ ಕರ್ತವ್ಯ ನಿರ್ವಹಣೆಗೆ ಬಳಸುವ ಶಕ್ತಿಯಿದ್ದಂತೆ.

ಇಷ್ಟಾದರೂ ನಿಯಮಗಳು ನಿಯಮಗಳೇ ಆಗಿ ಉಳಿದಾಗ ಅವು ಬಂಧನವಾಗದೆ ಇರಬಲ್ಲವೆ? ಅನೇಕ ಕಡೆಗಳಲ್ಲಿ ಕುಮಾರವ್ಯಾಸ ಕೂಡ ತನ್ನ ಷಟ್ಪದಿ ರಚನಾಕೌಶಲದಲ್ಲಿ ಅಸಮರ್ಥನಾಗಿರುವುದುಂಟು. ಈಗಾಗಲೆ ಹಿಂದಿನ ವಿಶ್ಲೇಷಣೆಗಳಲ್ಲಿ ಒಂದೆರಡು ಅಂಥ ಉದಾಹರಣೆಗಳನ್ನು ಹೇಳಲಾಗಿದೆ. ಈ ಕೆಲವು ಉದಾಹರಣೆಗಳನ್ನು ಗಮನಿಸಿ:

. ಕಾಲದಲಿ ಪರಿಪಕ್ವವಾದ ವಿ
ಶಾಲಿತ ಸ್ಥಾವರದ ಜಂಗಮ
ಜಾಲವನು ಕಾಲ್ನಾಗಿ ಕವಿಕವಿದಟ್ಟಿ ಸುಡುವಂತೆ
.೪೩, ಸಂ., ವಿ. ಪರ್ವ

. ಪದದ ಪ್ರೌಢಿಯ ನವರಸಂಗಳ
ವುದಿತವೆನುವಭಿಧಾನ ಭಾವವ
ಬೆದಕಲಾಗದು ಎಲ್ಲ ಪ್ರೌಢರುಮೀ ಕಥಾಂತರಕೆ
. ೧೪, ಸಂ. , ಆದಿಪರ್ವ

. ಮಹಾವಜ್ರಾಯತ ಪ್ರೋ
ದ್ದಾಮದಾಯಸಭೀಮತನು ನಿ
ರ್ನಾಮವೆನೆ ನುಗ್ಗಾಗಿ ಬಿದ್ದುದು ನೃಪನ ತೆಕ್ಕೆಯಲಿ.
. ೩೯, ಸಂ. ೧೧, ಗದಾಪರ್ವ

ಇಂಥ ಹಲ ಕೆಲವು ಉದಾಹರಣೆಗಳಿವೆ – ಕವಿತೆಯ ಪ್ರತಿಭೆಯ ಕುದುರೆ ಮುಗ್ಗರಿಸಿರುವುದನ್ನು ಸೂಚಿಸುತ್ತ. ಆದರೆ ಇಂಥ ದುರ್ಬಲ ಅಭಿವ್ಯಕ್ತಿಗಳ ಬಳಕೆ ಕಡಿಮೆ ಈತನಲ್ಲಿ. ಇಂಥ ಮುಗ್ಗರಿಸುವುದನ್ನು ಕುರಿತೇ ಪ್ರತಿಭೆಯ ಬಗ್ಗೆ ಹೇಳುವ ಮಾತೊಂದಿದೆ – Even Homer nodes ಎಂದು. ಆದರೆ ಮಹಾಪ್ರತಿಭಾವಂತರು ಕಾವ್ಯರಚನಾವಸರದಲ್ಲಿ ಒಮ್ಮೊಮ್ಮೆ ಮುಗ್ಗರಿಸುವುದು ಅಪರೂಪ. ಹೀಗಾಗಿಯೇ ಅವರ ಕಾವ್ಯಗಳು ಲೋಕಮಾನ್ಯವಾಗುವುದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಪುಟ ೬೩-೭೪ ನೋಡಿ