ಷಟ್ಪದಿಗಳನ್ನು ಕಾವ್ಯದಲ್ಲಿ ಪ್ರಥಮ ಬಾರಿಗೆ ಬಳಸಿದವನೇನಲ್ಲ ಕುಮಾರವ್ಯಾಸ. ಅಷ್ಟೇ ಅಲ್ಲ ವಿಷಮಗಣಯುಕ್ತವಾದ ಭಾಮಿನಿ ಷಟ್ಪದಿ ಕೂಡ ಪ್ರಥಮವಾಗಿ ಕನ್ನಡದಲ್ಲಿ ಈತನಿಂದೇನೂ ಬಳಕೆಯಾಗಲಿಲ್ಲ, ಕಾವ್ಯದಲ್ಲಿದನ್ನು ಪ್ರಥಮವಾಗಿ ಬಳಸಿದವನು ಭೀಮಕವಿ. ಈತ ‘ಬಸವ ಪುರಾಣ’ವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿದ, ಅದು ಒಂದು ರೀತಿಯಲ್ಲಿ ತೆಲುಗಿನ ದ್ವಿಪದ ಕಾವ್ಯದ ಅನುವಾದ ರೂಪವಾಗಿ.

ಆದರೆ ಕುಮಾರವ್ಯಾಸ ಭಾಮಿನಿ ಷಟ್ಪದಿ ಬರೆಯುವ ವೇಳೆಗೆ ಕನ್ನಡದಲ್ಲಿ ಆಗಲೇ ಷಟ್ಪದಿ ತನ್ನ ಝೇಂಕಾರ ಮಾಡಿತ್ತು. ರಾಘವಾಂಕನಂತು ತನ್ನ ನಾಟಕೀಯ ಪ್ರತಿಭೆಗೆ ತಕ್ಕುದೆನ್ನುವಂತೆ ಷಟ್ಪದಿಗಳಲ್ಲಿ ಹೆಚ್ಚು ವಿಸ್ತಾರ ಪಡೆದಿರುವ ವಾರ್ಧಕ ಷಟ್ಪದಿಯನ್ನು ಬಳಸಿ ಯಶಸ್ವಿಯಾಗಿದ್ದನು. ಅಷ್ಟೇ ಅಲ್ಲ ಆತ ಷಟ್ಪದಿ ಒಂದರಲ್ಲಿ ಕೆಲವು ಪ್ರಯೋಗಗಳನ್ನು ನಡೆಸಿದಂತಿತ್ತು. ಆತ ಬರೆದ ಮೀಸಲು ಕವಿತೆಯಾದ ವೀರೇಶ ಚರಿತೆಯಲ್ಲಿ – ಆತ ಅದನ್ನು ಉದ್ದಂಡ ಷಟ್ಪದಿಯೆಂದು ಕರೆದಿದ್ದ.

ವಚನ ಸಾಹಿತ್ಯದ ಮುಕ್ತಾಭಿವ್ಯಕ್ತಿಯ ಸಾಧ್ಯತೆಗಳು, ಹರಿಹರನ ರಘಟಾ ಪ್ರಬಂಧಗಳಲ್ಲಿ ಪ್ರಾಪ್ತವಾದ ಕಥನಕ್ಕೆ ಯೋಗ್ಯವಾದ ದ್ವಿಪದ ಜಾತಿ, ರಾಘವಾಂಕನ ಷಟ್ಪದಿಯ ನಾಟಕೀಯತೆ ಇವುಗಳನ್ನು ಗಮನಿಸಿದ ಪ್ರತಿಭೆ ಕುಮಾರವ್ಯಾಸನದು. ಆತ ಭೀಮಕವಿ ಆಯ್ದುಕೊಂಡ ಭಾಮಿನಿಯನ್ನೇ ತಾನೂ ಪ್ರೀತಿಸಿದ.

ವಿಷಮಗಣ ಯೋಜನೆಯ ಭಾಮಿನಿಗೆ ವಾರ್ಧಕದ ವಿಸ್ತಾರವಿಲ್ಲ; ಇತ್ತ ಶರಷಟ್ಪದಿಯ ಇಕ್ಕಟ್ಟೂ ಇಲ್ಲ; ಜೊತೆಗೆ ಇಲ್ಲಿನ ವಿಷಮಗಣ ಯೋಜನೆ ಒಂದು ಕಡೆಗೆ ವಾರ್ಧಕ ಷಟ್ಪದಿಯ ಪಂಚ ಮಾತ್ರಾಗಣದ ಯೋಜನೆಗೂ ಎಡೆಮಾಡುತ್ತಲೇ ತನ್ನತನವನ್ನು ಉಳಿಸಿಕೊಳ್ಳುವ ಸಾಧ್ಯತೆಗಳೂ ಅವನ್ನು ಆಕರ್ಷಿಸಿರಬೇಕು. ಆದ್ದರಿಂದಲೇ ಆತ ಕುಣಿಸಿ ನಗನೇ ಕುಮಾರವ್ಯಾಸನುಳಿದವರ ಎಂದು ಹೆಮ್ಮೆಪಟ್ಟು ಕೊಂಡಿರಬೇಕು. ಈತ ಈ ಹೆಮ್ಮೆ ಪಟ್ಟಿರುವುದೇನೋ ನಿಜವೇ. ಆದರೆ ಅದರ ಆಳದಲ್ಲಿರುವುದು ತೀವ್ರವಾದ ವಿನಯ, “ವೀರ ನಾರಾಯಣೆ ಕವಿ ಲಿಪಿಕಾರ ಕುಮಾರವ್ಯಾಸ” ಎಂದು ಹೇಳುವುದರ ಮೂಲಕ.

ಭಾರತದ ೧೮ ಪರ್ವಗಳಲ್ಲಿ ಮೊದಲ ಹತ್ತು ಪರ್ವಗಳನ್ನು ಮಾತ್ರ ಕನ್ನಡಿಸಿದ್ದಾನೆ. ಆತ ತನ್ನನ್ನು ‘ಕುಮಾರವ್ಯಾಸ’ ಎಂದೇ ಕರೆದುಕೊಂಡಿದ್ದಾನೆ. ಇಡೀ ಕಾವ್ಯವನ್ನು ಜಾಲಾಡಿದರು ಆತನ ನಿಜ ನಾಮಧೇಯವೇನೆಂಬುದು ತಿಳಿಯುವುದಿಲ್ಲ. ಗದುಗಿನ ನಾರಣಪ್ಪ ಅದನ್ನು ಬರೆದವನೆಂಬುದು ಒಂದು ಐತಿಹ್ಯವಾಗಿದೆಯೇ ಹೊರತು ಸಂಗತಿಯಲ್ಲ ಅನ್ನಿಸುತ್ತದೆ, ಇರಲಿ.

ಕನ್ನಡದಲ್ಲಿ ಭಾಮಿನಿ ಷಟ್ಪದಿ ಕುಮಾರವ್ಯಾಸನ ಹೆಸರನ್ನು ಹೇಳಿಯೇ ಬದುಕಬೇಕು ಅನ್ನಿಸುತ್ತದೆ. ರಗಳೆಗೆ ಹರಿಹರ ಹೇಗೋ ಭಾಮಿನಿ ಷಟ್ಪದಿಗೆ ಕುಮಾರವ್ಯಾಸ ಹಾಗೆ ಎನ್ನಬೇಕು. ಈ ಮಾತನ್ನಾಡುವಾಗ ಚಾಮರಸನ ಪ್ರತಿಭೆಯನ್ನು ಅಲಕ್ಷಿಸಿದಂತೆ ಖಂಡಿತ ಅಲ್ಲ.

ಮಾತ್ರಾಗಣಬದ್ಧವಾಗಿದ್ದು ೩, ೪ ಮಾತ್ರೆಗಳ ವಿಷಮಗಣಗಳಿಂದ ಕೂಡಿದ ಭಾಮಿನಿ ಷಟ್ಪದಿ – ಆ ಪದ್ಯಜಾತಿಯಂತೆಯೇ ಆರು ಸಾಲುಗಳ ಪದ್ಯ ಘಟಕ. ಮೊದಲ ಸಾಲಿನಲ್ಲಿ ೧೪ ಮಾತ್ರೆಗಳು (೩+೪+೩+೪) ಎರಡನೇ ಸಾಲಿನಲ್ಲೂ ೧೪ ಮಾತ್ರೆಗಳು, ಮೂರನೆಯ ಸಾಲಿನಲ್ಲಿ ಅದರ ಒಂದುವರೆಯಷ್ಟು ಕೊನೆಗೆ ಯತಿ ಕಾರಣವಾಗಿ ಒಂದು ಗುರು ಅಂದರೆ (೨೧ ಮಾತ್ರೆಗಳು + ೨ ಗುರು) ೨೩ ಮಾತ್ರೆಗಳಿಂದ ಕೂಡಿರುತ್ತದೆ. ಮುಂದಿನ ಮೂರು ಸಾಲುಗಳ ರಚನೆಯು ಮೊದಲ ಭಾಗದಂತೆಯೇ ಇರುತ್ತದೆ. ಒಟ್ಟು ೧೦೨ ಮಾತ್ರೆಗಳ ವಿನ್ಯಾಸವುಳ್ಳ ಭಾಮಿನಿ ಷಟ್ಪದಿಯನ್ನು ಕುಮಾರವ್ಯಾಸ ಬಳಸಿಕೊಂಡಿರುವ ರೀತಿಯನ್ನು ಪರಿಶೀಲಿಸಬಹುದು.

ನಿಯಮಿತವಾದ ಬಂಧ ಎಂಥ ದೊಡ್ಡ ಪ್ರತಿಭೆಯೇ ಆದರೂ ತೊಡಕಾಗುತ್ತದೆ. ಏಕೆಂದರೆ ಬಂಧ ಒಂದರ್ಥದಲ್ಲಿ ಬಂಧನವೂ ಹೌದು; ಇನ್ನೊಂದರ್ಥದಲ್ಲಿ ಅದು ಅರ್ಥವನ್ನು ಸಂಯೋಜಿಸುವ ಧಾರಣಶಕ್ತಿಯೂ ಹೌದು. ಅದನ್ನು ನಿರ್ಣಯಿಸುವುದು ಅಭಿವ್ಯಕ್ತಿ ಅಷ್ಟೇ, ಬಹುಶಃ ಈ ಕಾರಣದಿಂದಾಗಿಯೇ ಎಲ್ಲ ನಿಯಮಗಳ ಮಿತಿಗಳನ್ನು ಮೀರಿರುವ ಯತ್ನವಾಗಿ ವೈದಿಕ ಛಂದಸ್ಸು, ಲೌಕಿಕದ ಶ್ಲೋಕಗಳಾಗುವ ವರೆಗೂ ನಡೆದದ್ದು. ಪಂಪನಂಥವರು ಈ ತೊಡಕನ್ನು ಮೀರುವುದಕ್ಕಾಗಿ ಭಿನ್ನಭಿನ್ನ ವೃತ್ತ ಜಾತಿಗಳನ್ನು, ಕಂದಪದ್ಯ ಜಾತಿಯನ್ನು, ಅಕ್ಕರ ರಗಳೆಗಳ ಬಂಧಗಳನ್ನು ಬಳಸಿಕೊಂಡರು.

ಕುಮಾರವ್ಯಾಸನಂಥ ನಾರಣೀಯ ಪ್ರತಿಭೆಗೂ ಭಾಮಿನಿ ಷಟ್ಪದಿ ಇಕ್ಕಟ್ಟನ್ನು ಉಂಟುಮಾಡಿದೆಯೆನ್ನುವುದು ಗಂಭೀರವಾದ ವಿಷಯ. ಉದಾಹರಣೆಗೆ ಈ ಎರಡು ಪ್ರಯೋಗಗಳನ್ನು ಗಮನಿಸಿ:

. ಕಾವುದಾನತ ಜನವ ಗದುಗಿನ ವೀರನಾರಾಯಣ – ಪದ್ಯ ೧, ಸಂಧಿ ೧, ಆದಿಪರ್ವ
. …. ರಾಮ ರಕ್ಷಿಸುವೊಲಿದು ಗದುಗಿನ ವೀರನರಯಣ – ಪದ್ಯ ೮, ಸಂಧಿ ೧, ಆದಿಪರ್ವ

ಈ ಎರಡೂ ಪಂಕ್ತಿಗಳಲ್ಲಿ ಛಂದಸ್ಸಿನ ನಿಯಮಕ್ಕಾಗಿ ನಾರಾಯಣನ ಕಾಲನ್ನೇ ಮುರಿದು ನರಯಣನೇ; ನಾರಾಯಣ ಎಂದಾಗಿಸಿಬಿಟ್ಟಿದ್ದಾನೆ. ದ್ರೌಪದಿಯನ್ನು ದುರುಪದಿಯನ್ನುವುದು ಇಂಥ ಇಕ್ಕಟ್ಟಿನಿಂದಾಗಿಯೇ. ಪದ ಒಂದು ಸರಸ್ವತಿಯ ಪಾದಚಿಹ್ನೆ. ಪದವನ್ನು ಮುರಿಯುವುದು ದೇಹವನ್ನು ಅನಗತ್ಯವಾದ ಕಡೆ ಬಾಗಿಸಿದಂತೆ ಅಥವಾ ಮುರಿದಂತೆ ಎಂದರೂ ‘ನಿಯಮ’ವೆನ್ನುವುದು ಅಂಥ ಅಪವಾದಕ್ಕೆ ಕಾರಣವಾಗಿ ಬಿಡುತ್ತದೆ.

ದೊಡ್ಡ ಕವಿಗೆ ಎಲ್ಲ ಕಡೆಯೂ ಹೀಗೆ ಅಂಕಿತನಾಮ ತೊಡಕಾಗುತ್ತದೆ ಎನ್ನುವಂತಿಲ್ಲ. ಅದು ಪರ್ಯಾಯ ಪದಗಳನ್ನು ರೂಪಿಸಿ ಅನೇಕ ವೇಳೆ ಇಂಥ ಇಕ್ಕಟ್ಟಿನಿಂದ ಪಾರಾಗಿಬಿಡುತ್ತದೆ, ಎಷ್ಟಾದರೂ ‘ಅಪೂರ್ವ ವಸ್ತು ನಿರ್ಮಾಣ ಕ್ಷಮಾ’ ಅಲ್ಲವೆ, ಅದು!

ಯಶಸ್ಸಿಗಾಗಿ ಪರಾಶರನ ಪುತ್ರನಾದ ವ್ಯಾಸನನ್ನು ‘ಪರಾಶರೀವ್ರತಿಪ’ ಎಂದು ಬಿಡುತ್ತಾನೆ; ಬಲರಾಮನನ್ನು ರೌಹಿಣೇಯ ಎನ್ನುತ್ತಾನೆ – ಅಷ್ಟೇ ಅಲ್ಲ ಸರಸ್ವತಿಯ ಸ್ತೋತ್ರ ಮಾಡುವಲ್ಲಿ ಶಾರದೆಯನ್ನಾತ ಪೌರಾಣದಾಗಮಸಿದ್ಧಿದಾಕಿಯಾಗಿಸುತ್ತಾನೆ.

ಆದರೆ ಮಾತ್ರೆಗಳ ಲೆಕ್ಕಾಚಾರ ಎಷ್ಟೋ ವೇಳೆ ತರುವ ತೊಡಕು ಒಂದು ಅಥವಾ ಎರಡು ರೀತಿಯದಲ್ಲ. ಮೊದಲ ರೀತಿಯ ತೊಡಕನ್ನು ಗಮನಿಸೋಣ.

. ಅರಸುಗಳಿಗದು ವೀರ ದ್ವಿಜರಿಗೆ
. ೧೯, ಸಂ. , ಆದಿಪರ್ವ

. ಕೀಲು ಕಳಚಿತು ದ್ರುಪದ ತನುಜೆಯ ನಾಲಿಯಲಿ ನುಂಗಿದನು
. ೧೩, ಸಂ. , ವಿರಾಟಪರ್ವ

. ನಿಂದು ನೋಡಿದ ದ್ರೌಪದಿಯ ಮೊಗ ದಂದವನು
. , ಸಂ. , ವಿರಾಟಪರ್ವ

. ನಾವು ಕಡುಗೆವು ಕ್ಷತ್ರಜಾತಿಯ ಜೀವನವಲೇ ಕಷ್ಟವಿದು
. ೩೨, ಸಂ. , ಆದಿಪರ್ವ

. ರಾವಣಾಸುರ ಮಥನ ಶ್ರವಣ ಸುಧಾ ಧಾವಿನೂತನ ಕಥನ
. , ಸಂ. , ಆದಿಪರ್ವ

. ಗುರುವೆನಲು ರಚಿಸಿದನು ಕುಮಾರವ್ಯಾಸ ಭಾರತವ

ಇಂಥ ಉದಾಹರಣೆಗಳಲ್ಲಿ ಅರ್ಥ ಯತಿಸ್ಥಾನದಿಂದಾಗಿ ಮಾತ್ರೆಗಳ ಲೆಕ್ಕದಿಂದ ಕವಿ ಪಾರಾಗುವುದನ್ನು ಗಮನಿಸಬಹುದು.

ಮೊದಲನೆಯ ಉದಾಹರಣೆಯಲ್ಲಿ ಅರಸುಗಳಿಗಿದು ವೀರ ಎಂಬಲ್ಲಿ ಅರ್ಥದ ನಿಲುವು ಪ್ರಾಪ್ತವಾಗುವುದರಿಂದ ದ್ವಿಜರಿಗೆ ಎಂಬ ಪದದಲ್ಲಿರುವ ‘ದ್ವಿ’ ಎಂಬ ಒತ್ತಕ್ಷರದ ಪ್ರಭಾವ ‘ವೀರ’ದ ಮೇಲೆ ಬೀಳದಿರುವುದನ್ನು ಗಮನಿಸಬಹುದು. (ಅನುಬಂಧ – ೧ ನೋಡಿ, ‘ಯತಿ’ ವಿಚಾರಕ್ಕೆ)

ಎರಡನೆಯ ಉದಾಹರಣೆಯೂ ಹೀಗೆಯೇ ಕೀಲುಕಳಚಿತು ಎಂಬಲ್ಲಿಗೆ ವಾಕ್ಯಾರ್ಥ ನಿಲ್ಲುತ್ತದೆ – ದ್ರುಪದ ತನುಜೆಯನಾಲಿಯಲಿ ನುಂಗಿದನು ಎಂಬುದು ಮತ್ತೊಂದು ವಾಕ್ಯಾರ್ಥವಾಗಿ ‘ದ್ರು’ ಎಂಬ ಒತ್ತಕ್ಷರದ ಪ್ರಭಾವ ಕಳಚಿತು ಶಬ್ದ ಕೊನೆಯ ಅಕ್ಷರದ ಮೇಲೆ ಆಗುವುದಿಲ್ಲ.

ಮೂರನೆಯ ಉದಾಹರಣೆಯೂ ಇಂಥದ್ದೇ. ಕೀಚಕ ದ್ರೌಪದಿಯ ಸೌಂದರ್ಯಕ್ಕೆ ಮರುಳಾದ ಚಿತ್ರವನ್ನೊಳಗೊಂಡಿದೆ. ಕೀಚಕನಿಂದು ನೋಡಿದ ಎನ್ನುವಾಗ ಆ ಸೌಂದರ್ಯ ಆತನನ್ನು ನಿಲ್ಲಿಸಿದೆ – ಸೌಂದರ್ಯ ನಿರೀಕ್ಷಣೆಗಾಗಿಯೇ. ಹೀಗೆ ನಿರೀಕ್ಷಿಸಿದ್ದು ಆತ ದ್ರೌಪದಿಯ ಮೊಗದಂದವನು. ಇಲ್ಲಿಯೂ ಅಷ್ಟೇ, ದ್ರೌ ಎಂಬ ಪದದ ಒತ್ತಕ್ಷರದ ಪ್ರಭಾವ ಅದರ ಹಿಂದಿನ ಅಕ್ಷರ ನೋಡಿದ ಎಂಬ ಪದದ ‘ದ’ ಮೇಲೆ ಬೀಳುವುದಿಲ್ಲ.

ಇದೇ ರೀತಿಯಲ್ಲೇ ಇದೆ, ನಾಲ್ಕನೆಯ ಉದಾಹರಣೆಯ ಕ್ಷತ್ರಜಾತಿಯ ಜೀವನ ಕಷ್ಟ ಎಂಬ ಅಭಿವ್ಯಕ್ತಿ. ಇಲ್ಲಿ ‘ಕ್ಷ’ ಎಂಬ ಒತ್ತಕ್ಷರದ ಪ್ರಭಾವ ಕಡುಗೆವು ಶಬ್ದದ ‘ವು’ ಅಕ್ಷರ ಮೇಲಾಗುವುದಿಲ್ಲ.

ದೊಡ್ಡ ಕವಿ ಅರ್ಥ ಯತಿಯನ್ನು ಬಳಸಿಕೊಳ್ಳುವುದರಿಂದ ಛಂದಸ್ಸಿನ ಮಾತ್ರೆಗಳ ಯಾಂತ್ರಿಕ ಲೆಕ್ಕಾಚಾರವನ್ನು ಗೆಲ್ಲುವ ರೀತಿ ಮೇಲಿನಂಥ ಉದಾಹರಣೆಗಳು ಸೂಚಿಸುತ್ತವೆ.

[1]

ಆದರೆ ನಿಯಮ ಅತಿಯಾದರೆ ಅದು ಬಂಧನವೂ ಆಗುತ್ತದೆ. ಅಷ್ಟೇ ಅಲ್ಲ ತೊಡಕೂ ಆಗುತ್ತದೆ. ಉದಾಹರಣೆಗೆ ಈ ಕೆಲವು ಉಕ್ತಿಗಳನ್ನು ಗಮನಿಸಿ!

. ಅಳಲಶ್ರವ ಮಾಡಿದೆ ನದೀಸುತ
. ೧೫, ಸಂ. , ಆದಿಪರ್ವ

. ಪದದ ಪ್ರೌಢಿಯ ನವರಸಂಗಳ
. ೧೪, ಸಂ. , ಆದಿಪರ್ವ

ಮೊದಲ ಉದಾಹರಣೆಯಲ್ಲಿ ಅಳಲಶ್ರವ ಮಾಡಿದೆ ಎಂದಾಗ ‘ಲ’ ಎಂಬ ಲಘುವಿನ ಮೇಲೆ ‘ಶ್ರವ’ ಶಬ್ದದ ಒತ್ತಕ್ಷರದ ಪ್ರಭಾವ ಬಿದ್ದು ಗುರುವಾಗಿ ಆ ಗಣ ನಾಲ್ಕು ಮಾತ್ರೆಯಾಗಿ ಬಿಡುತ್ತದೆ. ದೊಡ್ಡಕವಿ ಕುವೆಂಪು ಹೇಳುವಂತೆ ವ್ಯಾಕರಣ – ಮೇಕೆಂಬೆಯೇನ್‌ ಮರೆವುದಕೆ ಕಲ್ತು ಎಂಬಂತೆ ಛಂದಸ್ಸಿನ ನಿಯಮವೂ ಅಷ್ಟೇ ಅರ್ಥಕ್ಕಾಗಿ ಅಲ್ಲವೆ ಎಂದು ತೇಲಿಸಬೇಕಾಗುತ್ತದೆ.

ಎರಡನೆಯ ಉದಾಹರಣೆಯಲ್ಲಿ ಪದದ ಪ್ರೌಢಿಯ ಎಂದಲ್ಲಿಯೂ ಅಷ್ಟೇ ಪದದ ಶಬ್ದದ (‘ದ’) ಲಘುವಿನ ಮೇಲೆ ಪ್ರೌಢಿಯ ಎಂಬ ಶಬ್ದದ ಪ್ರೌ ಎಂಬ ಸಂಯುಕ್ತಾಕ್ಷರದ ಪ್ರಭಾವವಾಗಿ ಮೊದಲ ಗಣ ಮೂರು ಮಾತ್ರೆಯದಾಗದೆ ನಾಲ್ಕು ಮಾತ್ರೆಯದಾಗಿ ಬಿಡುತ್ತದೆ – ತೇಲಿಸಿ ಉಚ್ಚರಿಸಬಹುದಲ್ಲವೆ ಶಿಥಿಲದ್ವಿತ್ವದ ಹಾಗೆಯೇ ಎಂದರೂ ‘ತೇಲಿ’ಸುವುದು ನಿಯಮದ ಪಾಲನೆಯಲ್ಲ ಅಲ್ಲವೆ? ಇದಾದ ಮೇಲೆ ನೇರವಾಗಿ ಶಿಥಿಲದ್ವಿತ್ವ ಬಳಸುವ ಕ್ರಮವನ್ನು ಗಮನಿಸಬಹುದು.

ಹಂಸಾ
ವಳಿಯ ಸುಭಟರ ಜಡಿವ ಕೊಳರ್ವ[2]ಕ್ಕಿಗಳ ಪಡಿಯರರ
. ೩೮, ಸಂ. , ಗದಾರ್ಪ

ಕನ್ನಡ ಕವಿಗಳು ಶಿಥಿಲದ್ವಿತ್ವೋಚ್ಚಾರಣೆಯಿಂದ – ಒಂದು ವ್ಯಾಕರಣದ ನಿಯಮವನ್ನಿಟ್ಟುಕೊಂಡು – ಮಾತ್ರೆಗಳ ಲೆಕ್ಕಾಚಾರದಿಂದ ಪಾರಾಗಲು ಯತ್ನಿಸುವುದನ್ನು ಗಮನಿಸಬಹುದು.

ಈವರೆಗೆ ನಾವು ಗಮನಿಸುವುದು – ನಿಯಮಗಳು ಹೇಗೆ ತೊಡಕಾಗುತ್ತವೆ; ಅವುಗಳನ್ನು ಗೆಲ್ಲಲು ಕವಿ ಹೇಗೆ ಯತ್ನಿಸುತ್ತಾನೆ ಎಂಬುದನ್ನು ನೋಡಿದೆವು. ಆದರೆ ದೊಡ್ಡ ಕವಿಯಲ್ಲಿ ಇಂಥ ಅಂಶಗಳು ಬಹಳ ಕಡಿಮೆಯಿರುತ್ತವೆ. ಏಕೆಂದರೆ ಛಂದಸ್ಸು ಎನ್ನುವುದು ಹೊರಗಿನಿಂದ ತಂದ ಶರೀರವಲ್ಲ. ಅದು ಕವಿಯ ಅನುಭವಕ್ಕಿರುವ ರೂಪಧಾರಣಾಸಾಮರ್ಥ್ಯ ಕೂಡ ಆಗುತ್ತದೆ ಎಂಬುದನ್ನು ಮರೆಯಲಾಗದು.

ಭಾಮಿನಿ ಷಟ್ಪದಿ ಅನುಕ್ರಮವಾಗಿ ೩, ೪, ೩, ೪ ಮಾತ್ರೆಗಳ ಗಣಗಳಿಂದಾದುದಲ್ಲವೆ?

ಆ ರೀತಿಯ ಮೂರು ನಾಲ್ಕು ಮೂರು ನಾಲ್ಕು ಮಾತ್ರೆಗಳ ಗಣ ವಿನ್ಯಾಸದಲ್ಲಿ ಕುಮಾರವ್ಯಾಸ ಮೂಡಿಸುವ ವೈವಿಧ್ಯಗಳಿಗೆ ಮೂರು ಉದಾಹರಣೆಗಳನ್ನು ಗಮನಿಸೋಣ.

. ಬಿಗಿದ ಮೋನದ ಬೀತ ಹರುಷದ
ಹೊಗೆವ ಮೋರೆಯ ಹೊತ್ತುವೆದೆಗಳ
ದುಗುಡದೊಗ್ಗಿನ ನಮ್ಮ ಮೋಹರ ತೆಗೆದುದೀಚೆಯಲಿ
, ಶಲ್ಯಪರ್ವ

. ಹಿರಿಯನಾಗಲಿ ಸುಜನನಾಗಲಿ
ಗುರುವನಾಗಲಿ ಅರ್ಥವುಳ್ಳನ
ಚರಣ ಸೇವಾಪರರು ಜಗದಲಿ ವರ್ತಮಾನವಿದು
೨೬, ಭೀಷ್ಮಪರ್ವ

. ಒಂದು ಮುಖದಲಿ ಜಗವ ಹೂಡುವ
ಮೊಂದು ಮುಖದಲಿ ಜಗವ ಸಲಹುವ
ನೊಂದು ಮುಖದಲಿ ಬೇಳುವನು ನಯನ್ನಾಗ್ನಿಯಲಿ ಜಗವ
೩೨,ಭೀಷ್ಮಪರ್ವ

. ಕಾವನಾತನೆ ಕೊಲುವತಾನೆ
ಸಾವೆನಾತನ ಕೈಯ ಬಾಯಲಿ
ನೀವು ಪಾಂಡವರೊಡನೆ ಸುಖದಲಿ ರಾಜ್ಯವಾಳುವುದು
೨೨, ಉದ್ಯೋಗಪರ್ವ

ಮೊದಲ ಉದಾಹರಣೆ ಶಲ್ಯಪರ್ವದ್ದು. ಯುದ್ಧದಲ್ಲಿ ಪರಾಭವಗೊಂಡ ಸೈನಿಕರ ದೀನಸ್ಥಿತಿಯನ್ನು ಅಭಿನಯಿಸುತ್ತದೆ: ಮೌನ ಹೆಪ್ಪುಗಟ್ಟಿದೆ; ಹರ್ಷ ಇಲ್ಲವಾಗಿದೆ, ಮೋರೆಗಳು ಹೊಗೆ ಕಪ್ಪಾಗಿವೆ, ನಿರಾಶೆ ದುಃಖ ಅಪಮಾನಗಳಿಂದ ಎದೆಗಳನ್ನು ದುಃಖವೊತ್ತುತ್ತಿದೆ. ಇಂಥ ದುಃಖದ ಹೊರೆಯನ್ನು ಹೊತ್ತ ನಮ್ಮ ಸೈನ್ಯ ಇತ್ತ ಬಂದಿದೆ ಎಂಬ ದಾರುಣ ವಾರ್ತೆಯನ್ನು ಸಂಜಯ ಬಿತ್ತರಿಸುತ್ತಿದ್ದಾನೆ. ಇಲ್ಲಿಯ ಮೂರು ಮತ್ತು ನಾಲ್ಕು ಮಾತ್ರೆಗಳ ಗಣಗಳ ಸಂಯೋಜನೆ ಸೋತು ಸುಣ್ಣವಾಗಿ ರಣರಂಗದಲ್ಲಿ ಕಾಲೆಳೆದು ಚಲಿಸುತ್ತಿರುವ ಸೈನಿಕರ ದಾರುಣ ಸ್ಥಿತಿಯನ್ನು ಅಭಿವ್ಯಕ್ತಿಸುತ್ತದೆ. ಎರಡನೆಯ ಉದಾಹರಣೆಯೂ ಮೂರು ಮತ್ತು ನಾಲ್ಕು ಮಾತ್ರೆಗಳ ಗಣಗಳ ಸಂಯೋಜನೆಯದೇ; ಆದರೆ ಇಲ್ಲಿ ಮೂರು ಮತ್ತು ನಾಲ್ಕು ಮಾತ್ರೆಗಳ ಗಣಗಳು ಒಟ್ಟೊಟ್ಟಾಗಿ ೭ ಮಾತ್ರೆಗಳ ಎರಡು ಗಣಗಳಾಗಿವೆ ಮೊದಲ ಸಾಲಿನಲ್ಲಿ ಎರಡನೆಯ ಸಾಲಿನ ರಚನೆಯೂ ಹೀಗೆಯೇ, ಮೂರನೆಯ ಪಂಕ್ತಿಯ ಗಣವಿನ್ಯಾಸ ಮಾತ್ರ ಸ್ಪಲ್ಪ ಭಿನ್ನವಾಗಿ ೩, ೪, ೩, ೪, ೩, ೪, ೪.

ಮೊದಲ ಗಣ ಏಳು ಮಾತ್ರೆಗಳದು; ಎರಡನೆಯದೂ ಅಷ್ಟೆ. ಆದರೆ ಮೂರನೆಯ ಪಂಕ್ತಿಯಲ್ಲಿ ಮಾತ್ರ ಮೂರು ಮತ್ತು ಏಳು ಮಾತ್ರೆಗಳು (೪+೩) ನಾಲ್ಕು ಮಾತ್ರೆ ಮತ್ತು ಒಂಬತ್ತು ಮಾತ್ರೆಗಳ (೩+೪+ಗುರು) ಗಣಗಳಾಗಿ ವೈವಿಧ್ಯ ಪಡೆದಿದೆ.

ಹಿಂದಿನ ಉದಾಹರಣೆ ಕರುಣಾಜನಕ ಸ್ಥಿತಿಯ ಚಲನೆಯ ನಿಧಾನಗತಿಯನ್ನು ವಿಚಾರಿಸಿದರೆ ಇಲ್ಲಿರುವ ಗಣ ಸಂಯೋಜನೆ ಭೀಷ್ಮನ ಬಳಿಗೆ ಧರ್ಮರಾಯ ತನಗೆ ಗೆಲುವಿನ ಭಾಗ್ಯ ದೊರೆಯುವಲ್ಲಿ ನೀವು ಅಡ್ದಿಯಾಗಿದ್ದೀರಲ್ಲ ಎಂದು ಅಧೀರನಾದಾಗ ಭೀಷ್ಮರು ಅವನನ್ನು ಸಂತೈಸುತ್ತಲೇ ತನ್ನ ಹಂಗಿನ ಇಕ್ಕಟ್ಟಿನ ಸ್ಥಿತಿಯನ್ನು ಸೂಚಿಸುತ್ತದೆ.

ಮೂರನೆಯ ಉದಾಹರಣೆ ಮತ್ತೆ ಮೂರು ಮತ್ತು ನಾಲ್ಕು ಮಾತ್ರೆಗಳ (ಎರಡೆರಡು ಒಟ್ಟು ಹದಿನಾಲ್ಕು ಮಾತ್ರೆಗಳು) ಗಣಗಳಾಗಿದ್ದರೂ ಇಲ್ಲಿನ ಗಣಯೋಜನೆ ಭಿನ್ನವಾಗಿದೆ. ಮೊದಲ ಸಾಲಿನ ಹದಿನಾಲ್ಕು ಮಾತ್ರೆಗಳ (ಮೂರು ಮಾತ್ರೆ ಗಣ + ನಾಲ್ಕು ಮಾತ್ರೆಗಳು ಮತ್ತೆ ೩ ಮಾತ್ರೆ ಗಣ ನಾಲ್ಕು ಮಾತ್ರೆ) ಗಣಗಳ ಜೊತೆಗೆ ಮುಂದಿನ ಸಾಲಿನ ಗಣಗಳು ಬೆಸೆದುಕೊಂಡಿವೆ, ಶ್ರೀಕೃಷ್ಣನ ಶಕ್ತಿಯ ಅನಂತ ಮುಖಗಳನ್ನು ಅನಾವರಣ ಮಾಡುತ್ತ. ಕವಿಗೆ ಮತ್ತು ನಾಲ್ಕು ಮಾತ್ರೆ ಮತ್ತೆ ಮೂರು ಮತ್ತು ನಾಲ್ಕು ಮಾತ್ರೆ ಗಣಗಳನ್ನು ಯೋಜಿಸುವುದೇನೂ ಕಷ್ಟವಾಗಿರಲಿಲ್ಲ. ಎರಡನೆಯ ಸಾಲಿನ ‘ನೊಂದು’ ಬದಲು ಒಂದು ಎಂದು ಬಳಸಿದ್ದರೆ ಸಾಕಾಗಿತ್ತು: ಹಾಗೆಯೇ ಮೂರನೆಯ ಸಾಲಿನ ರಚನೆಯು ಸಾಧ್ಯವಿತ್ತು. ಆದರೆ ಇಷ್ಟೆಲ್ಲ ಕ್ರಿಯೆಗಳನ್ನು ತನ್ನ ವಿವಿಧ ಮುಖ (ಕ್ರಮ) ಗಳ ಮೂಲಕ ನಡೆಸುವಾತನಾದ ಆತನ ಹಣೆಗಣ್ಣು ತನ್ನ ಉರಿಯಿಂದ ಜಗತ್ತನ್ನು ತೋರಿಸುವಂತೆಯೇ ವಿನಾಶವನ್ನು ಮಾಡಬಲ್ಲದೆಂಬುದನ್ನು ಧ್ವನಿಸುತ್ತದೆ. ಈ ವಿಷಮ ಗಣಗಳ ಯೋಜನೆಯಲ್ಲಿ ಮೂರೂ ಉದಾಹರಣೆಗಳಲ್ಲೂ ಇರುವ ಭಿನ್ನತೆ ಭಾವಾನುಸಾರಿಯಾದ ಅಭಿವ್ಯಕ್ತಿಗೆ ಕಾರಣವಾದ ವೈವಿಧ್ಯವಾಗಿರುವುದು ಗಮನಾರ್ಹ. ಭೀಷ್ಮ ತನ್ನಲ್ಲಿಗೆ ಶ್ರೀ ಕೃಷ್ಣ ಸಮೇತರಾಗಿ ಬಂದಿದ್ದ ಪಾಂಡವರಿಗೆ ಕೃಷ್ಣನ ಹಿರಿಮೆಯನ್ನು ಮನಗಾಣಿಸಿ ನೆಮ್ಮದಿ ತಂದ ಬಗೆಯಿದೆ ಇಲ್ಲಿ.

ನಾಲ್ಕನೆಯ ಉದಾಹರಣೆಯಲ್ಲಿರುವುದು ಮತ್ತೆ ವಿಷಮಗಣಗಳ ಯೋಜನೆ. ದುರ್ಯೋಧನನ ಮಾತಿನಲ್ಲಿರುವ ವಿವೇಕವನ್ನೂ ಅಸಹಾಯಕತೆಯನ್ನೂ ಧ್ವನಿಸುತ್ತದೆ; ಛಲದಂಕಮಲ್ಲನಾದ ದುರ್ಯೋಧನನು ಎದುರಿಸುತ್ತಿರುವ ಶತ್ರುಗಳು ಯಾರೆಂಬುದನ್ನು ಖಚಿತವಾಗಿ ಬಲ್ಲ. ಆತನಿಗೆ ಅಂತರಂಗದಲ್ಲಿ ಅರಿವಿದೆ, ತಾನೆದುರಿಸುತ್ತಿರುವುದು ಪಾಂಡವರನ್ನಲ್ಲ; ಅವರನ್ನು ರಕ್ಷಿಸುತ್ತಿರುವ ಕೃಷ್ಣನನ್ನು ಎಂಬುದು. ಆದ್ದರಿಂದಲೇ ಆತನಿಗೆ ಮುಂದಾಗುವುದರ ಬಗೆಗೆ ವಿಷಾದವೂ ಇದೆ. ಆದರೆ ಅದು ಅನಿವಾರ್ಯ ಎಂಬುದನ್ನು ಧೀರನಾದ ಆತ ಬಲ್ಲ. ಆದ್ದರಿಂದಲೆ ನಮಗೆ ಬುದ್ಧಿ ಹೇಳಲು ಬಂದ ತಂದೆಗೆ ಈ ಮಾತನ್ನು ಹೇಳುತ್ತಿದ್ದಾನೆ. ಈ ಮಾತುಗಳಲ್ಲಿ ಕೃಷ್ಣನ ಸಾಮರ್ಥ್ಯದ ಅರಿವಿನ ಜೊತೆಗೇ ತನ್ನ ಸಾವಿನ ಇಂಗಿತವೂ ಇದೆ. ಆದ್ದರಿಂದಲೇ ಅಸಹನೀಯವಾದ ಯಾತನೆಯನ್ನೆಲ್ಲ ನುಂಗಿ ನೀವು ಪಾಂಡವರೊದನೆ ರಾಜ್ಯವಾಳಿರಿ ಎನ್ನುತ್ತಿದ್ದಾನೆ. ಇಲ್ಲಿಯ ಎಲ್ಲವೂ ಮೂರು ಮತ್ತು ನಾಲ್ಕು ಮಾತ್ರೆಗಳ ವಿಷಮಗಣಗಳಿಂದ ಯೋಜಿತವಾಗಿದ್ದು, ಆತನ ಮನಸ್ಸಿನ ತುಮುಲವನ್ನೂ ತುಮುಲದ ಹಿನ್ನೆಲೆಗೆ ಇರುವ ತನ್ನ ಹಟಮಾರಿತನದ ಪರಿಣಾಮವನ್ನೂ ಸಮರ್ಪಕವಾಗಿ ಬಿಂಬಿಸುತ್ತದೆ. ಮೂರು ಮತ್ತು ನಾಲ್ಕು ಮಾತ್ರೆಗಳ ಗಣಗಳ ಯೋಜನೆಯಲ್ಲಿ ಅರ್ಥಕ್ಕೆ ತಕ್ಕಂತೆ ವಿವಿಧ ವಿನ್ಯಾಸಗಳು ರೂಪುಗೊಳ್ಳುವ ಒಂದು ಚಿತ್ರ ಇಲ್ಲಿ ನಮಗೆ ಲಭ್ಯ. ಇದರ ಜೊತೆಗೆ ಇನ್ನೊಂದು ಉದಾಹರಣೆಯನ್ನು ಗಮನಿಸಬಹುದು, ಭೀಷ್ಮಪರ್ವದಿಂದ:

ತೊಗಲು ಸಡಿಲಿದ ಗಲ್ಲ ಬತ್ತಿದ
ಹೆಗಲು ನರುಕಿದ ನರೆತ ಮೀಸೆಯ
ಜಗುಳ್ದ ಹಲುಗಳ ಹಾಯಿದೆಲುಗಳ ನೆಗ್ಗಿದವಯವದ
ಅಗಿಯಲಲುಗುವ ತಲೆಯ ಮುಪ್ಪಿನ
ಮುಗುದನೀತನ ಕಾದ ಹೇಳಿದು
ನಗೆಯ ಸುರಿದೈ ರಾಯ ಕಟಕದೊಳೆಂದನಾ ಕರ್ಣ.
೩೫, ಭೀಷ್ಮಪರ್ವ

ಈ ಮೇಲಿನ ಪದ್ಯದ ಮೂರು ಮತ್ತು ನಾಲ್ಕು ಮಾತ್ರೆಗಳ ಗಣಗಳ ಯೋಜನೆಯು ಲೇವಡಿಗಾಗಿ ಬಳಕೆಯಾಗಿದೆ. ಭೀಷ್ಮನಿಗೆ ಸೈನ್ಯಾಧಿಪತಿಯ ಪಟ್ಟವನ್ನು ಕಟ್ಟಿದಾಗ ಮುದುಕರಾಗಿದ್ದ ಭೀಷ್ಮರನ್ನು ಕರ್ಣ ತನ್ನ ದೊರೆಯೆದುರಿಗೆ ಟೀಕಿಸುತ್ತಿದ್ದಾನೆ. ಇಂಥ ಮುದಿಯನನ್ನು ಸೈನ್ಯ ಮುನ್ನಡೆಸಲು ಯೋಚಿಸಿದ್ದು ಸೈನಿಕರಿಗೆಲ್ಲ ನಗೆಯುಕ್ಕಿಸುವ ಹಾಸ್ಯಸ್ಪದ ಸಂಗತಿಯಾಗಿದೆ ಎಂದು ಕರ್ಣ ಮೂದಲಿಸುತ್ತಿದ್ದಾನೆ. ಮೂರು ಮತ್ತು ನಾಲ್ಕು ಮಾತ್ರೆಗಳ ಗಣಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬಳಸುವಾಗಲೂ ಎಷ್ಟೊಂದು ರೀತಿಯ ವಿವಿಧತೆಯನ್ನು ಕುಮಾರವ್ಯಾಸ ಸಾಧಿಸುತ್ತಿದ್ದಾನೆಂಬುದನ್ನು ಇಲ್ಲಿಯೂ ಗಮನಿಸಬಹುದು.

ನೂರ ಎರಡು ಮಾತ್ರೆಗಳ ಭಾಮಿನಿ ಷಟ್ಟದಿಯನ್ನೇ ಅಖಂಡವಾಗಿ ಒಂದೇ ಅರ್ಥ ಘಟಕದಂತೆ ಬಳಸುವ ಎರಡು ರೀತಿಯ ಉದಾಹರಣೆಗಳನ್ನು ಗಮನಿಸಬಹುದು. ಅರ್ಥಾನುಸಾರಿಯಾಯೇ ಉಲ್ಲೇಖಿಸಲಾಗಿದೆ:

. ಹರನ ದುರ್ಗದಲ್ಲಿರಲಿ ೩, ೪+೩
ಮೇಣ್‌ + ಆ ೨+೨
ಹರಿಯ ಕಡಲೊಳಗಿರಲಿ ೩, ೪+೩
ಬ್ರಹ್ಮನ ಕರಕಮಂಡಲದೊಳಗೆ ಹುದುಗಲಿ ೪, ೨+೮, ೪
ರವಿಯ ಮರೆಹೊಗಲಿ ೩, ೫
ಉರಗ ಭುವನದೊಳಿರಲಿ ೩, ೪+೩
ಮೇಣ್‌
ಸಾಗರವ ಮುಳುಗಲಿ ೫, ೪
ನಾಳೆ ಪಡುವಣ ತರುಣಿ ತೊಲಗದ ಮುನ್ನ ಕೊಲುವೆನು ವೈರಿ ಸೈಂಧವನ ೩, ೪, ೩, ೪, ೩, ೪, ೩, ೪, +ಗು

. ೩೫, ಸಂ. , ದ್ರೋಣಪರ್ವ

. ಬಸುರ ಬಗಿವೆನು ಕೀಚಕನ ೩, ೪, ೫
ನಸು ಮಿಸುಕಿದೊಡೆ ೨+೫
ವೈರಾತ ವಂಶದ ಹೆಸರ ತೊಡೆವೆನು ೫, ೪, ೩, ೪
ನಮ್ಮನರಿದೊಡೆ ೩, ೪+
ಕೌರವಜ್ರವ ಕುಸುರಿದರಿವೆನು ೫+೩, ೭
ಭಿಮ ಕಷ್ಟವನೆಸಗಿದನು ೩, ೯
ಹಾಯೆಂದರಾದೊಡೆ ೫+೪
ಮುಸುಡನಮರಾದ್ರಿಯಲಿ ತೇವೆನು ದೇವಸಂತತಿಯ ೧೦+೪+೩+೪+

ಗುರು ವಿರಾಟಪರ್ವ, . ೬೮, ಸಂ.

ಮೊದಲನೆಯ ಪದ್ಯ ತನ್ನ ಪ್ರೀತಿಯ ಪುತ್ರ ಅಭಿಮನ್ಯುವನ್ನು ಕಳೆದುಕೊಂಡ ಅರ್ಜುನ ಮಾಡುವ ಪ್ರತಿಜ್ಞೆಯ ಘೋಷವಾಗಿದ್ದು, ಎಂಟು ಅಲ್ಪಯತಿಗಳು ಮತ್ತೆ ಕೊನೆಗೆ ಸುದೀರ್ಘಾವಧಿಯ ಪೂರ್ಣಯತಿಯೊಂದಿಗೆ ಕೂಡಿ ಪ್ರತಿಜ್ಞೆಯ ಭೀಕರತೆಯನ್ನು ಧ್ವನಿಸುತ್ತದೆ. ಮೊದಲ ಸಾಲಿನಲ್ಲಿ ಹತ್ತು ಮಾತ್ರೆಗಳಿವೆ. ಎರಡನೆಯ ಸಾಲಿನಲ್ಲಿ ನಾಲ್ಕು ಮಾತ್ರೆಗಳು; ಇದನ್ನು ಮುಂದಿನ ವಾಕ್ಯ ಘಟಕದೊಡನೆ ಬೇಕಾದರೆ ಸೇರಿಸಬಹುದು, ಬಿಡಬಹುದು. ಮುಂದೆ ಹತ್ತು ಮಾತ್ರೆಗಳ ಘಟಕ (ಮೂರು ನಾಲ್ಕು ಮತ್ತು ಮೂರು ಮಾತ್ರೆಗಣಗಳಿಂದ ಕೂಡಿದೆ) ಅಲ್ಲಿಂದ ಮುಂದಿನ ಘಟಕದಲ್ಲಿ ಹದಿನೆಂಟು ಮಾತ್ರೆಗಳಿವೆ (ನಾಲ್ಕು ಮಾತ್ರೆ ಎರಡು ಮಾತ್ರೆ, ಎಂಟು ಮಾತ್ರೆ ಹಾಗೂ ನಾಲ್ಕು ಮಾತ್ರೆಗಳು ಘಟಕಗಳಿಂದ ಕೂಡಿ). ಮುಂದಿನದು ಎಂಟು ಮಾತ್ರೆಗಳ ಘಟಕವಾಗಿದೆ (ಮೂರು ಮತ್ತು ಐದು ಮಾತ್ರೆಗಳ ಘಟಕಗಳು). ಮುಂದಿನದು ಮತ್ತೆ ಹತ್ತು, ಮಾತ್ರೆಗಳ ಘಟಕ (ಮೂರು ನಾಲ್ಕು ಮತ್ತು ಮೂರು ಮಾತ್ರೆಗಳ ಗಣಗಳಿವೆ) ಮತ್ತೆ ನಾಲ್ಕು ಮಾತ್ರೆಗಳ ಘಟಕ; ಇದನ್ನು ಪ್ರತ್ಯೇಕವಾಗಿಡಬಹುದು ಅಥವಾ ಮುಂದಿನ ಘಟಕದೊಡನೆ ಸೇರಿಸಬಹುದು. ಮುಂದಿನದು ಒಂಬತ್ತು ಮಾತ್ರೆಗಳ ಘಟಕ (ಐದು ಮಾತ್ರೆಗಳು ಮತ್ತು ನಾಲ್ಕು ಮಾತ್ರೆಗಳಿಂದ ಕೂಡಿದೆ) ಕೊನೆಯ ಸಾಲು ಪ್ರತಿಜ್ಞಾ ಪೂರ್ಣದ ಆವೇಶವನ್ನೊಳಗೊಂಡು ಮೂವತ್ತುಮೂರು ಮಾತ್ರೆಗಳ ಒಂದೇ ಘಟಕವಾಗಿದೆ. (ಮೂರು ನಾಲ್ಕು, ಮೂರು ನಾಲ್ಕು, ಮೂರು ನಾಲ್ಕು ಮತ್ತು ಗುರುಗಳಿಂದ ಮಾತ್ರೆಗಳಿಂದ ಕೂಡಿ.)

ಒಂದೊಂದು ಸಾಲಿನ ಘಟಕಗಳು ಭಿನ್ನ ಭಿನ್ನವಾಗಿವೆ. ಒಂದು ಮೂರು ಮತ್ತು ಐದನೆಯ ಸಾಲುಗಳಲ್ಲಿ ಹತ್ತು ಮಾತ್ರೆಗಳ ಮೂರು ಗಣಗಳು (೩, ೪-೩) ಒಂದೇ ರೀತಿಯಂತೆ ತೋರಿದರೂ – ನಿಜವಾಗಿ ಹಾಗೆ ಇಲ್ಲ. ಮೊದಲ ಸಾಲಿನಲ್ಲಿ ಎರಡನೆಯ ಗಣ ಗುರುವಿನಿಂದ ಆರಂಭವಾಗುತ್ತದೆ. ಆದರೆ ಮೂರನೆ ಮತ್ತು ಅರನೆ ಸಾಲುಗಳು ಸರ್ವ ಲಘುಗಳಿಂದ ಕೂಡಿದೆ. ಆದರೆ ಐದನೆಯ ಸಾಲಿನ ವಿನ್ಯಾಸ ಬೇರೆಯಾಗಿದೆ, ಮೂರು ಮತ್ತು ಐದು ಮಾತ್ರೆಗಳ ಸರ್ವ ಲಘುಗಳ ಗಣಗಳಿಂದ ಕೂಡಿ ಎಂಟನೆಯ ಸಾಲು ಮತ್ತೆ ಐದು ಮತ್ತು ನಾಲ್ಕು ಮಾತ್ರೆಗಳ ಗಣಗಳಿಂದ ಕೂಡಿದೆ. ಕೊನೆಯ ಸಾಲಂತೂ ಮೂರು ನಾಲ್ಕು, ಮೂರು ನಾಲ್ಕು, ಮೂರು ನಾಲ್ಕು, ಮೂರು ನಾಲ್ಕು, ಮಾತ್ರೆಗಳು ಮತ್ತು ಗುರುವಿನ ಎರಡು ಮಾತ್ರೆಗಳ ಗಣಗಳಿಂದ ಕೂಡಿದ್ದು ಒಂದೇ ಉಸಿರಿಗೆ ಪ್ರತಿಜ್ಞೆಯನ್ನುಚ್ಚರಿಸುವ ದುಃಖಾತಿಶಯದಿಂದ ಕ್ರೋಧೋನ್ಮತ್ತವಾದ ಫಲ್ಗುಣನ ಆವೇಶಕ್ಕೆ ಸೂಕ್ತವಾಗಿದೆ.

ಮೇಲುನೋಟಕ್ಕೆ ಭಾಮಿನಿ ಷಟ್ಟದಿಯ ವಿಷಮಗಣಗಳ ವಿನ್ಯಾಸದಲ್ಲಿ ವಿಪುಲವಾದ ವೈವಿಧ್ಯವನ್ನು ಕವಿ ಸಾಧಿಸಿರುವುದನ್ನು ಗಮನಿಸಬಹುದು.

ಎರಡನೆಯ ಪದ್ಯವೂ ಭೀಮನ ಆವೇಶಭರಿತ ಕೋಪೋದ್ರೇಕವನ್ನು ಅಭಿವ್ಯಕ್ತಿಸುವಂಥದ್ದು. ಆದರೆ ಮೇಲಿನ ಪದ್ಯದ ಘಟಕಗಳಂತೆ ಇಲ್ಲಿಯ ಘಟಕಗಳಿಲ್ಲ. ಮೇಲಿನ ಪದ್ಯದಲ್ಲಿ ತಾನು ಕೊಲ್ಲಬೇಕೆಂದಿರುವವನು ಎಲ್ಲೆಲ್ಲಿ ಅಡಗಬಹುದೆಂಬ ಯೋಚನೆ ಮತ್ತೆ ಹಾಗೆ ಬಚ್ಚಿಟ್ಟುಕೊಂಡರೂ ಆತನನ್ನು ಉಳಿಸುವುದಿಲ್ಲವೆನ್ನುವಾ ಫಲ್ಗುಣನ ಕೋಪಕ್ಕೆ ಅಭಿವ್ಯಕ್ತಿ ಇದ್ದರೆ, ಇಲ್ಲಿ ಕ್ರೋಧೋನ್ಮತ್ತವಾದ ಭೀಮನ ಆಸ್ಫೋಟಕ ಕೋಪದ ಚಿತ್ರವಿದೆ.

ಮೊದಲ ಸಾಲಿನಲ್ಲಿ ಹನ್ನೆರಡು ಮಾತ್ರೆಗಳಿವೆ ( ಮೂರು, ನಾಲ್ಕು ಮತ್ತು ಐದು ಮಾತ್ರೆಗಳು) ಎರಡನೆ ಸಾಲಿನಲ್ಲಿ ಏಳು ಮಾತ್ರೆಗಳಿವೆ (ಎರಡು ಮತ್ತು ಐದು ಮಾತ್ರೆಗಳು) ಈ ಸಾಲವನ್ನು ಪ್ರತ್ಯೇಕವಾಗಿಯೂ ಉಚ್ಚರಿಸಬಹುದು, ಅಲ್ಪಯತಿಯೊಂದಿಗೆ; ಇಲ್ಲವೆ ಮುಂದಿನ ಸಾಲಿನ ಜೊತೆಗೂ ಉಚ್ಚರಿಸಬಹುದು. ಮುಂದಿನ ಸಾಲಿನಲ್ಲಿ ಹದಿನಾರು ಮಾತ್ರೆಗಳಿವೆ (ಐದು ಮಾತ್ರೆ, ನಾಲ್ಕು ಮಾತ್ರೆ, ಮೂರು ಮತ್ತು ನಾಲ್ಕು ಮಾತ್ರೆಗಳ ಘಟಕಗಳು). ಮತ್ತೆ ಮುಂದಿನ ಸಾಲಿನಲ್ಲಿ ಏಳು ಮಾತ್ರೆಗಳಿವೆ (ಎರಡನೆಯ ಸಾಲಿನಲ್ಲಿ ಇದ್ದಂತೆಯೇ. ಆದರೆ ಎರಡನೆಯ ಸಾಲಿನಲ್ಲಿ ಎಲ್ಲವೂ ಲಘುಗಳೇ. ಇಲ್ಲಿ ಮಾತ್ರ ಗುರು ಮತ್ತೆಲ್ಲ ಲಘುಗಳ ವಿನ್ಯಾಸವಿದೆ). ಮುಂದಿನ ಸಾಲಿನಲ್ಲಿ ಹದಿನೈದು ಮಾತ್ರೆಗಳಿವೆ (ಐದು, ಮೂರು, ಏಳು ಮಾತ್ರೆಗಳ ಘಟಕಗಳು). ಮುಂದಿನ ಸಾಲಿನಲ್ಲಿ ಹನ್ನೆರಡು ಮಾತ್ರೆಗಳಿವೆ (ಮೂರು ಮತ್ತು ಒಂಬತ್ತು ಘಟಕಗಳು). ಅದರ ಮುಂದಿನ ಸಾಲಿನಲ್ಲಿ ಒಂಬತ್ತು ಮಾತ್ರೆಗಳಿವೆ (ಐದು ಮತ್ತು ನಾಲ್ಕು ಮಾತ್ರೆ ಘಟಕಗಳು). ಹಿಂದಿನ ಸಾಲಿನೊಂದಿಗೇ ಇದನ್ನು ಉಚ್ಚರಿಸುವುದು ಸಾಧ್ಯ.

ಕೊನೆಯ ಸಾಲು ಇಪ್ಪತ್ತಮೂರು ಮಾತ್ರೆಗಳ ಅಖಂಡ ಘಟಕವಾಗಿದೆ (ಹತ್ತು ಮಾತ್ರೆ, ನಾಲ್ಕು ಮಾತ್ರೆ, ಮೂರು ಮಾತ್ರೆ, ನಾಲ್ಕು ಮಾತ್ರೆ ಮತ್ತು ಎರಡು ಮಾತ್ರೆಗಳ ಗುರುವಿನಿಂದ ಕೂಡಿ) ಒಂದೊಂದು ಸಾಲಿನ ಮಾತ್ರಾ ಪ್ರಮಾಣವು (ಎರಡು ಮತ್ತು ನಾಲ್ಕನೆಯ ಸಾಲುಗಳನ್ನು ಬಿಟ್ಟು) ಭಿನ್ನವಾಗಿದೆ. ಅಷ್ಟೇ ಅಲ್ಲ ಮೇಲಿನ ಪದ್ಯಕ್ಕೆ ಹೋಲಿಸಿದರೆ ಇಲ್ಲಿನ ಓಟ ಪೂರ್ಣ ಭಿನ್ನವಾಗಿದೆ, ಛಂದಸ್ಸನ್ನು ಅರ್ಧಾನುಸಾರಿಯಾಗಿ ಬಗ್ಗಿಸುವ ಕವಿಯ ಸಾಮರ್ಥ್ಯ ಅಭಿಮಾನಪಡುವಂಥದ್ದು.

[1] ಪಂಪನಂಥವರು ಈ ತೊಡಕನ್ನು ಮೀರುವುದಕ್ಕಾಗಿ ಭಿನ್ನ ಭಿನ್ನ ವೃತ್ತ ಜಾತಿಗಳನ್ನು, ಕಂದಪದ್ಯ ಜಾತಿಯನ್ನು ಅಕ್ಕರ ರಗಳೆ ಬಂಧಗಳನ್ನು ಬಳಸಿಕೊಂಡರು.

[2] ಯತಿಯನ್ನು ಕುರಿತ ಪ್ರತ್ಯೇಕ ವಿಶ್ಲೇಷಣೆ ಪ್ರಬಂಧದ ವಸ್ತು.</footnote>